ಅತೀವ ಸಂತಸ ಮತ್ತು ವಿಪರೀತ ವಿಷಾದ- ಇವೆರಡು ಭಾವಗಳು ಮನುಜನ ಅಂತರಂಗವನ್ನು ತೆರೆದಿಡುವ ಅತೀ ಮಹತ್ವದ ಹಂತಗಳು. ಈ ಎರಡು ಹಂತಗಳಲ್ಲಿ ಹರಿದುಬಂದವರ ವ್ಯಕ್ತಿತ್ವದೊಳಗಿರುವ ಸಕಲ ಸಂಗತಿಗಳೂ ಬಹಿರಂಗಗೊಳ್ಳುತ್ತವೆ. ಈ ಬಗೆಯ ಮನೋಭೂಮಿಕೆಯನ್ನು ಆಧಾರವಾಗಿಟ್ಟುಕೊಂಡು ಹೇಳುವುದಾದರೆ ಯುದ್ಧಾನಂತರದ ಕುರುಕ್ಷೇತ್ರ ಭೂಮಿ ದುರ್ಯೋಧನನ ವ್ಯಕ್ತಿತ್ವದ ಬಹುಮುಖತೆಯನ್ನು ಹೊರಗೆಡಹುವಲ್ಲಿ ಸಫಲವಾಗಿದೆ. ಅಶೃಗದಿಂದಾಗಿ ಬಿಳಿಯ ಬೆಳಕಿನ ಹಲವು ಬಣ್ಣಗಳು ವ್ಯಕ್ತಗೊಂಡಂತೆ, ದುರ್ಯೋಧನನ ಛಲದ ಪರ್ಯಾವಸಾನವನ್ನು ಸಾರುವ ಕುರುಭೂಮಿ ಛಲದ ಹೊರತಾಗಿ ಆತನಲ್ಲಿದ್ದ ಗುಣಸ್ವಭಾವಗಳನ್ನು ಮೂರ್ತಗೊಳಿಸುತ್ತದೆ.
ಡಾ. ವಿಶ್ವನಾಥ ನೇರಳಕಟ್ಟೆ ಬರಹ
ಬೆಳಕಿನ ವರ್ಣ ವಿಭಜನೆ ಎನ್ನುವುದು ಭೌತಶಾಸ್ತ್ರದಲ್ಲಿ ಕಂಡುಬರುವ ಒಂದು ಪ್ರಮುಖ ಪರಿಕಲ್ಪನೆಯಾಗಿದೆ. ಬೆಳಕಿಗೆ ಸಂಬಂಧಪಟ್ಟಂತೆ ವಕ್ರೀಭವನ, ವಿವರ್ತನೆ, ವ್ಯತೀಕರಣ, ಸಂಪೂರ್ಣ ಆಂತರಿಕ ಪ್ರತಿಫಲನ, ಚದುರುವಿಕೆ, ಧ್ರುವೀಕರಣ ಹೀಗೆ ಬೇರೆ ಬೇರೆ ರೀತಿಯ ಪರಿಕಲ್ಪನೆಗಳಿದ್ದು, ಇಂತಹ ಪರಿಕಲ್ಪನೆಗಳಲ್ಲಿ ವರ್ಣ ವಿಭಜನೆಯೂ ಒಂದಾಗಿದೆ. ಬಿಳಿಯ ಬೆಳಕು ಏಳು ಬಣ್ಣಗಳಿಂದ ಕೂಡಿದ್ದು, ಇದನ್ನು ಬೆಳಕಿನ ಸಂಯೋಜನೆ ಎನ್ನಲಾಗುತ್ತದೆ. ಇಂತಹ ಬಿಳಿಯ ಬೆಳಕನ್ನು ಅಶೃಗದ ಮೂಲಕ ಹಾಯಿಸಿದಾಗ ಅದು ವಿಭಿನ್ನ ಬಣ್ಣಗಳ ಘಟಕಗಳಾಗಿ ವಿಭಜನೆ ಹೊಂದುತ್ತದೆ. ಇದನ್ನು ಬೆಳಕಿನ ವರ್ಣ ವಿಭಜನೆ ಎನ್ನಲಾಗುತ್ತದೆ. ಅಂದರೆ, ಇಲ್ಲಿ ಬಿಳಿಯ ಬಣ್ಣದ ಬೆಳಕು ಹಲವು ಬಣ್ಣಗಳನ್ನು ಹೊಂದಬೇಕಾದರೆ ಮಾಧ್ಯಮವೊಂದರ ಸಹಾಯ ಬೇಕಾಗುತ್ತದೆ. ಅಂತಹ ಮಾಧ್ಯಮವಾಗಿ ಅಶೃಗ ಕಾರ್ಯಾಚರಿಸುತ್ತದೆ.
ದುರ್ಯೋಧನ ಅವನ ಇಡೀ ಬದುಕಿನುದ್ದಕ್ಕೂ ಒಂದು ಬಗೆಯ ವ್ಯಕ್ತಿತ್ವದವನಾಗಿ ಕಂಡುಬರುತ್ತಾನೆ. ಆದರೆ ಕುರುಕ್ಷೇತ್ರ ಯುದ್ಧದ ಕೊನೆಯ ಹಂತದಲ್ಲಿ ತನ್ನವರೆಲ್ಲರನ್ನೂ ಕಳೆದುಕೊಂಡ ಬಳಿಕ ಆತನ ವ್ಯಕ್ತಿತ್ವದ ಬಹುಮುಖೀ ಆಯಾಮಗಳು ಗೋಚರವಾಗತೊಡಗುತ್ತವೆ. ಬಿಳಿಯ ಬೆಳಕೊಂದು ಅಶೃಗದ ಮೂಲಕ ಹಾದುಹೋದಾಗ ಹಲವು ಬಣ್ಣಗಳಾಗಿ ವಿಭಜನೆ ಹೊಂದುವಂತೆ, ಅಭಿಮಾನಧನನಾದ ದುರ್ಯೋಧನನು ರಣರಂಗದ ಮೂಲಕ ಹಾದುಹೋದಾಗ ಆತನ ವ್ಯಕ್ತಿತ್ವದಲ್ಲಿದ್ದ ಹಲವು ಬಣ್ಣಗಳು ಮೂರ್ತಗೊಂಡಿವೆ. ಅಂದರೆ, ದುರ್ಯೋಧನನಲ್ಲಿದ್ದ ಛಲ ಬಿಳಿಯ ಬೆಳಕಿಗೆ ಸಂಕೇತವಾದರೆ, ಅವನ ಎದುರಿದ್ದ ರಣರಂಗ, ಅಲ್ಲಿಯ ಸಾವು ನೋವು ಎನ್ನುವುದು ಅಶೃಗದಂತಹ ಒಂದು ಮಾಧ್ಯಮ. ಅದರ ಮೂಲಕ ಹಾದುಹೋದಾಗ ದುರ್ಯೋಧನನಲ್ಲಿ ಮೂಡುವ ದುಃಖ, ನಿರಾಸೆ, ಪಶ್ಚಾತ್ತಾಪ ಮೊದಲಾದ ಭಾವಸಮೂಹ ವಿಭಿನ್ನ ಬಣ್ಣಗಳಿಗೆ ಸಂಕೇತವಾಗುತ್ತದೆ.
*****
ಯುದ್ಧರಂಗದಲ್ಲಿ ಸಂಜಯನ ಸಹಾಯ ಪಡೆದು ನಡೆದುಬರುತ್ತಿದ್ದ ದುರ್ಯೋಧನನಿಗೆ ಮೊದಲು ಎದುರಾಗುವುದು ದ್ರೋಣರ ಶವ. ಯುದ್ಧಕ್ಕೆ ಮೊದಲು ಹಾಗೂ ಯುದ್ಧದ ಸಂದರ್ಭದಲ್ಲಿ ದುರ್ಯೋಧನ ದ್ರೋಣರನ್ನು ಬೈದಿರುತ್ತಾನೆ. ದ್ರೋಣರು ಕುರುಕುಲದ ಸೇನಾಧಿಪತ್ಯವನ್ನು ವಹಿಸಿಕೊಂಡಿದ್ದಾಗ ಧರ್ಮರಾಯನನ್ನು ಸೆರೆಹಿಡಿಯುವುದಾಗಿ ಮಾತು ಕೊಟ್ಟು ಅದರಲ್ಲಿ ವಿಫಲರಾಗಿರುತ್ತಾರೆ. ಆಗ ದುರ್ಯೋಧನನು ಕರ್ಣ ಸೇನಾಧಿಪತಿಯಾಗಿದ್ದಿದ್ದರೆ ಇಂತಹ ಸ್ಥಿತಿ ಬರುತ್ತಿರಲಿಲ್ಲ ಎಂದು ಹೇಳಿ, ದ್ರೋಣರನ್ನು ಹೀಯಾಳಿಸಿರುತ್ತಾರೆ. ಹೀಗೆ ಅವಮಾನಿತರಾದ ದ್ರೋಣರು ಕೋಪಗೊಂಡು ಚಕ್ರವ್ಯೂಹ ರಚನೆಯನ್ನು ಮಾಡಿದ್ದರು.
ಆದರೆ ಈಗ ಯುದ್ಧದ ಕೊನೆಯ ಹಂತದಲ್ಲಿ, ದ್ರೋಣರು ಇಲ್ಲದಿರುವಾಗ ದುರ್ಯೋಧನ ಅವರ ಹೆಣದ ಎದುರು ನಿಂತು ಅವರನ್ನು ಶ್ಲಾಘಿಸುತ್ತಾನೆ. ಕೇವಲ ಅರ್ಜುನ ಮಾತ್ರವಲ್ಲ; ಸಾಕ್ಷಾತ್ ರುದ್ರನೇ ಎದುರು ನಿಂತರೂ ನಿಮ್ಮನ್ನು ಗೆಲ್ಲುವುದಕ್ಕೆ ಸಾಧ್ಯವಿಲ್ಲ ಎಂದು ಹೊಗಳುತ್ತಾನೆ. ಪಾಂಡವರ ವಿರುದ್ಧ ಬಾಣ ಪ್ರಯೋಗಿಸುವುದಕ್ಕೆ ಒಮ್ಮನವನ್ನು ಮಾಡುತ್ತಿಲ್ಲ ಎಂದು ಈ ಮೊದಲು ದ್ರೋಣರನ್ನು ಆಕ್ಷೇಪಿಸಿದ್ದವನು ಈಗ ದ್ರೋಣಾಚಾರ್ಯರು ತಮ್ಮ ಬತ್ತಳಿಕೆಯಲ್ಲಿದ್ದ ಬಾಣಗಳನ್ನೆಲ್ಲ ಶತ್ರು ಸೈನ್ಯದವರ ದೇಹದಲ್ಲಿ ನೆಲೆಗೊಳಿಸಿದರು ಎಂದು ಹೇಳುತ್ತಾನೆ. ಯುದ್ಧದ ಮೊದಲು ಮತ್ತು ಯುದ್ಧದ ಸಮಯದಲ್ಲಿ ದುರ್ಯೋಧನ ದ್ರೋಣರನ್ನು ಬೈದದ್ದಾಗಲೀ, ಹೊಗಳಿದ್ದಾಗಲೀ ಯುದ್ಧ ಗೆಲ್ಲುವ ಆತನ ಸ್ವಾರ್ಥವನ್ನು ಪ್ರತಿಬಿಂಬಿಸುತ್ತದೆ ಎಂದಾದರೆ, ದ್ರೋಣರ ಮರಣಾನಂತರ ಅವರಿಂದ ತನಗಿನ್ನೇನೂ ಉಪಯೋಗವಿಲ್ಲ ಎಂಬ ಅರಿವಾದ ಬಳಿಕವೂ ದುರ್ಯೋಧನ ಅವರನ್ನು ಹೊಗಳುವ ಸನ್ನಿವೇಶ ಅವನ ವ್ಯಕ್ತಿತ್ವದ ಇನ್ನೊಂದು ಆಯಾಮವನ್ನು ಅನಾವರಣಗೊಳಿಸುತ್ತದೆ. ದ್ರೋಣರ ಬಗ್ಗೆ ಆಂತರಂಗಿಕವಾಗಿ ಅವನಲ್ಲಿದ್ದ ಗೌರವದ ಜೊತೆಗೆ ಆತನ ನಿಸ್ವಾರ್ಥ ಮನೋಭಾವವೂ ಇಲ್ಲಿ ಪ್ರಕಟಗೊಂಡಿದೆ.

ದುರ್ಯೋಧನನ ವ್ಯಕ್ತಿತ್ವದ ಉನ್ನತಿಕೆಯ ನಿಜ ಪರಿಚಯವಾಗುವುದು ಅವನು ಅಭಿಮನ್ಯುವಿನ ಕಳೇಬರವನ್ನು ಕಾಣುತ್ತಾ, ಅಭಿಮನ್ಯುವಿನ ಸಾಹಸವನ್ನು ಮನದುಂಬಿ ಹೊಗಳುವ ಸಂದರ್ಭದಲ್ಲಿ. ನಿನಗೆ ಸರಿಸಮನಾದ ಶೂರರು ಯಾರೂ ಇಲ್ಲ ಎಂದು ಅಭಿಮನ್ಯುವನ್ನು ಹೊಗಳಿದ ಆತ, ನಿನ್ನಂ ಪೆತ್ತಳ್ ಮೊಲೆವೆತ್ತಳೆ ವೀರಜನನಿವೆಸರಂ ಪೆತ್ತಳ್ ಎಂದು ಹೇಳುವ ಮೂಲಕ ಅಭಿಮನ್ಯುವಿನ ತಾಯಿ ಸುಭದ್ರೆಯನ್ನು ವೀರಮಾತೆ ಎನ್ನುತ್ತಾನೆ. ನಿನ್ನಂತಹದ್ದೇ ಮರಣ ನನಗೂ ಬರಲಿ ಎಂದು ಅಭಿಮನ್ಯುವನ್ನು ಪ್ರಾರ್ಥಿಸುವಷ್ಟರಮಟ್ಟಿಗೆ ದುರ್ಯೋಧನ ಅಭಿಮನ್ಯುವಿನ ಸಾಮರ್ಥ್ಯಕ್ಕೆ ಮಾರುಹೋಗಿರುತ್ತಾನೆ. ಶತ್ರುವಿನ ಮಗ ಎಂಬ ಅರಿವಿದ್ದೂ ದುರ್ಯೋಧನ ಈ ರೀತಿಯಲ್ಲಿ ನಡೆದುಕೊಳ್ಳುವುದು ಅವನ ಮನೋಭಾವವನ್ನು ಪ್ರಕಟಪಡಿಸಿದೆ. ಸಾಹಸದ ಅಭಿವ್ಯಕ್ತಿಯಲ್ಲಿ ಭೇದವೆಣಿಸದ ಭಾವ ಅವನ ಅಂತರಂಗದಲ್ಲಿದ್ದುದು ಈ ಸಂದರ್ಭದಲ್ಲಿ ಬಹಿರಂಗಗೊಂಡಿದೆ.
*****
ಜೀವನದುದ್ದಕ್ಕೂ ಪಾಂಡವರ ವಿರುದ್ಧದ ಸೇಡಿಗಾಗಿ ಹಾತೊರೆಯುತ್ತಿದ್ದ, ಯುದ್ಧೋನ್ಮುಖಿಯಾಗಿದ್ದ ದುರ್ಯೋಧನನಿಗೆ ಯುದ್ಧದ ಕುರಿತಾಗಿ ವೈರಾಗ್ಯದ ಭಾವನೆ ಮೂಡುವುದು ತನ್ನ ಮಗ ಲಕ್ಷಣಕುಮಾರನ ಹೆಣವನ್ನು ಕಂಡಾಗ. ರನ್ನನ ‘ಗದಾಯುದ್ಧ’ ಕಾವ್ಯದ ‘ದುರ್ಯೋಧನ ವಿಲಾಪ’ ಕಾವ್ಯಭಾಗದಲ್ಲಿ ಬರುವ ಪದ್ಯ ದುರ್ಯೋಧನನ ಭಾವತೀವ್ರತೆಯನ್ನು ಬಹಳ ಚೆನ್ನಾಗಿ ಹೊರಗೆಡಹಿದೆ-
ಗಳಿತಶರಮಾಯ್ತು ಹಸ್ತಂ
ಗಳಿತರಣೋತ್ಸಾಹಮಾಯ್ತು ಹೃದಯಂ ನಯನಂ
ಗಳಿತಾಶ್ರುವಾಯ್ತು ಕೌರವ
ಕುಳತಿಲಕಂಗಾ ಕುಮಾರನಂ ಕಾಣಲೊಡಂ
ಮಗನ ಅಗಲಿಕೆಯ ದುಃಖ ದುರ್ಯೋಧನನಂತಹ ದುರ್ಯೋಧನನನ್ನೇ ಒಂದಷ್ಟು ಸಮಯದ ಮಟ್ಟಿಗೆ ರಣೋತ್ಸಾಹ ಇಲ್ಲದವನನ್ನಾಗಿಸಿತು. ದುರ್ಯೋಧನನ ಪೂರ್ಣ ಜೀವನದಲ್ಲಿ ಬೇರೆಲ್ಲಿಯೂ ಕಂಡುಬರದ ರಣವೈರಾಗ್ಯದ ಅಭಿವ್ಯಕ್ತಿ ಕಾಣಸಿಗುವುದು ಈ ಹಂತದಲ್ಲಿ ಮಾತ್ರ!
*****
ಶಲ್ಯ, ಸಿಂಧುರಾಜ, ಶಕುನಿ ಇವರ ಜೊತೆಗೆ ಇತರ ಕೆಲವು ರಾಜರುಗಳ ಶವವನ್ನು ಕಂಡಾಗ ದುರ್ಯೋಧನನಿಗೆ ಕುರುಕ್ಷೇತ್ರ ಯುದ್ಧಕ್ಕೆ, ಯುದ್ಧದ ಭೀಕರತೆಗೆ ತಾನೇ ಕಾರಣ ಎಂಬ ಭಾವ ಆವರಿಸುತ್ತದೆ. ಉನ್ನತಿಕೆಯಲ್ಲಿ ಕೈಲಾಸ ಪರ್ವತಕ್ಕೆ ಸಮಾನರಾದ ಶ್ರೇಷ್ಠ ವ್ಯಕ್ತಿಗಳು ತನ್ನ ಕಾರಣದಿಂದಾಗಿ ಪ್ರಾಣವನ್ನು ಕಳೆದುಕೊಂಡರು ಎಂದು ದುರ್ಯೋಧನ ಹಲುಬುವುದು ಆತನಲ್ಲಿ ನೆಲೆಗೊಂಡ ಪಶ್ಚಾತ್ತಾಪವನ್ನು ಸೂಚಿಸುತ್ತದೆ.
*****
ಕರ್ಣನ ಕುರಿತಾದ ದುರ್ಯೋಧನನ ಸ್ನೇಹವನ್ನು ಸ್ವಾರ್ಥದ ನೆಲೆಯಲ್ಲಿ ಗಮನಿಸಿಕೊಳ್ಳುವ ವಿಧಾನವೊಂದಿದೆ. ಪಾಂಡವರಲ್ಲಿ ಬಿಲ್ವಿದ್ಯಾ ಪರಿಣತನಾದ ಅರ್ಜುನನನ್ನು ಎದುರಿಸಲು ದುರ್ಯೋಧನನಿಗೆ ಕೌರವ ಪಾಳಯದಲ್ಲಿಯೂ ಅಂತಹದ್ದೇ ಪರಿಣತನ ಅಗತ್ಯವಿತ್ತು. ಆದ್ದರಿಂದ ಆತ ಕರ್ಣನನ್ನು ಸ್ನೇಹಿತನಾಗಿ ಸ್ವೀಕರಿಸಿದ ಎಂಬ ಅಭಿಪ್ರಾಯವಿದೆ. ಕರ್ಣನ ಜನ್ಮರಹಸ್ಯವನ್ನು ಶ್ರೀಕೃಷ್ಣ ಕರ್ಣನಿಗೆ ತಿಳಿಸುವ ಸಂದರ್ಭದಲ್ಲಂತೂ ಇದು ಸ್ಪಷ್ಟವಾಗಿಯೇ ವ್ಯಕ್ತಗೊಂಡಿದೆ. ಸತ್ಯಂತಪ ಋಷಿಗಳಿಂದ ಕರ್ಣನ ಹುಟ್ಟಿನ ಗುಟ್ಟನ್ನು ಅರಿತುಕೊಂಡ ದುರ್ಯೋಧನ ಪಾಂಡವರನ್ನು ನಾಶಮಾಡುವ ಆಯುಧವಾಗಿ ಕರ್ಣನನ್ನು ಬಳಸಿಕೊಳ್ಳಲು ನಿರ್ಧರಿಸಿದ ಎನ್ನುವುದು ಸ್ಪಷ್ಟ. ಆದರೆ ಇದರ ಹೊರತಾಗಿಯೂ ಕರ್ಣನ ಕುರಿತು ಸ್ನೇಹಭಾವ ದುರ್ಯೋಧನನಿಗಿತ್ತು, ಕರ್ಣನ ಬಗೆಗಿನ ಅವನ ಸ್ನೇಹ ನಿಷ್ಕಲ್ಮಶವಾದದ್ದು ಎನ್ನುವುದು ತಿಳಿದುಬರುವುದು ಕರ್ಣನ ಶವವನ್ನು ಕಂಡು ಆತ ರೋಧಿಸಿದಾಗ. ಕರ್ಣನ ಶೌರ್ಯ, ತ್ಯಾಗ, ಸ್ವಾಮಿನಿಷ್ಠೆ, ಸತ್ಯ ಎಲ್ಲವನ್ನೂ ಮನಸಾರೆ ಹೊಗಳುವಲ್ಲಿ ದುರ್ಯೋಧನ ಕರ್ಣನನ್ನು ಉಳಿದೆಲ್ಲರಿಗಿಂತಲೂ ಶ್ರೇಷ್ಠನಾಗಿ ಪರಿಭಾವಿಸಿದ್ದು ವೇದ್ಯವಾಗುತ್ತದೆ. ತನ್ನ ಕಣ್ಣು- ಹೃದಯದಲ್ಲಿ ಕರ್ಣನ ರೂಪ, ತನ್ನ ಕಿವಿಯಲ್ಲಿ ಕರ್ಣನ ಮಾತು ಶಾಶ್ವತವಾಗಿರುವುದರಿಂದ ಆತ ಭೌತಿಕವಾಗಿ ಬದುಕಿಲ್ಲದಿದ್ದರೂ ಮಾನಸಿಕವಾಗಿ ತನ್ನ ಜೊತೆಗಿರುತ್ತಾನೆ ಎನ್ನುವುದನ್ನು ಸ್ಪಷ್ಟಪಡಿಸುತ್ತಾನೆ ದುರ್ಯೋಧನ. ಕರ್ಣ ಜೀವಂತವಿಲ್ಲದಿರುವಾಗ ದುರ್ಯೋಧನ ಆಡುವ ಈ ಮಾತುಗಳು ಕರ್ಣನ ಕುರಿತ ಆತನ ಸ್ನೇಹಭಾವದ ನೈಜತೆಯನ್ನು ಪ್ರಕಟಪಡಿಸಿದೆ.

ಅತೀವ ಸಂತಸ ಮತ್ತು ವಿಪರೀತ ವಿಷಾದ- ಇವೆರಡು ಭಾವಗಳು ಮನುಜನ ಅಂತರಂಗವನ್ನು ತೆರೆದಿಡುವ ಅತೀ ಮಹತ್ವದ ಹಂತಗಳು. ಈ ಎರಡು ಹಂತಗಳಲ್ಲಿ ಹರಿದುಬಂದವರ ವ್ಯಕ್ತಿತ್ವದೊಳಗಿರುವ ಸಕಲ ಸಂಗತಿಗಳೂ ಬಹಿರಂಗಗೊಳ್ಳುತ್ತವೆ. ಈ ಬಗೆಯ ಮನೋಭೂಮಿಕೆಯನ್ನು ಆಧಾರವಾಗಿಟ್ಟುಕೊಂಡು ಹೇಳುವುದಾದರೆ ಯುದ್ಧಾನಂತರದ ಕುರುಕ್ಷೇತ್ರ ಭೂಮಿ ದುರ್ಯೋಧನನ ವ್ಯಕ್ತಿತ್ವದ ಬಹುಮುಖತೆಯನ್ನು ಹೊರಗೆಡಹುವಲ್ಲಿ ಸಫಲವಾಗಿದೆ. ಅಶೃಗದಿಂದಾಗಿ ಬಿಳಿಯ ಬೆಳಕಿನ ಹಲವು ಬಣ್ಣಗಳು ವ್ಯಕ್ತಗೊಂಡಂತೆ, ದುರ್ಯೋಧನನ ಛಲದ ಪರ್ಯಾವಸಾನವನ್ನು ಸಾರುವ ಕುರುಭೂಮಿ ಛಲದ ಹೊರತಾಗಿ ಆತನಲ್ಲಿದ್ದ ಗುಣಸ್ವಭಾವಗಳನ್ನು ಮೂರ್ತಗೊಳಿಸುತ್ತದೆ.

ವಿಶ್ವನಾಥ ನೇರಳಕಟ್ಟೆ ಮೂಲತಃ ದಕ್ಷಿಣ ಕನ್ನಡದ ಬಂಟ್ವಾಳದವರು. ಬಂಟ್ವಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ತೊದಲು (ಕವನ ಸಂಕಲನ), ಕಪ್ಪು-ಬಿಳುಪು (ಕಥಾ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ), ಸಾವಿರದ ಮೇಲೆ (ನಾಟಕ) ಇವರ ಪ್ರಕಟಿತ ಕೃತಿಗಳು. “ಡಾ. ನಾ ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ” ವಿಷಯದಲ್ಲಿ ಪಿಎಚ್.ಡಿ. ಸಂಶೋಧನೆ ಮಾಡಿದ್ದಾರೆ.

