ನಾನು ಹಿಂಗ ನನ್ನ ಬದುಕನ್ನ ನಾನಾ ಕಟ್ಟಿಗ್ಯಂಡು ದುಡ್ಯಾಕತೀನಿ, ಹೆಣಮಕ್ಕಳಂದ್ರ ಬರೀ ಅಂದ ಚಂದ ಮೈ ಬಣ್ಣ ಅನ್ಕೊಂಡಿರೋರ್ನ ಮಿರ್ಚಿನ ಬಿಸಿ ಎಣ್ಯಾಗ ಎದ್ದಿದಂಗ ಎದ್ದಿ ಕಳಸ್ತಿನಿ, ದಾರಿಯೊಳಾಗ ದಿಕ್ಕಿರಲಾರದ ಸಿಕ್ಕ ಈ ರಾಮಪ್ಪಗೂ ನನಗೂ ಕತಿ ಕಟ್ಟತಾರ ಆದ್ರ, ತಲಿ ಸರಿ ಇಲ್ಲದಿರೊ ಆತಗ ಬೇಕಾಗಿರಾದು ಎರಡೊತ್ತಿನ ಊಟ ಅಷ್ಟ! ಎರಡಕ್ಷರ ಗೊತ್ತಿರೊ ನನಗ, ಯಾವ ಜಾತಿ ಜಿಡ್ಡಿನ ಮ್ಯಾಗೂ ನಂಬಿಕಿ ಇಲ್ಲ. ಊರಿನ್ಯಾರು ಅದೆಷ್ಟSS ಕತಿ ಕಟ್ಟಿದರೂನು ನಾನು ನನ್ನ ಕತಿನ ನಾನೇ ಬರಿಯಾಕಿ’ ಅಂತ ಮತ್ತೊಮ್ಮೆ ಜೋರಾಗಿ ನಗತೊಡಗಿದ್ಲು. ಆಕಿ ಮಾತ್ ಕೇಳಿ ಮೈ ಜುಮ್ಮಂದಂಗಾತು.
ಸುವರ್ಣ ಚೆಳ್ಳೂರು ಬರೆಯುವ “ಆಕಿ” ಸರಣಿಯ ಒಂಭತ್ತನೆಯ ಬರಹ
ಅತ್ತಿ ಅವತ್ತು ತಲಿ ಸವರ್ತಾ..
‘ನೋಡ್ ಶಿವು ಇಂತಾ ಅದೆಷ್ಟೋ ಗಟ್ಟಿಗಿತ್ಯಾರದಾರ, ಯಾರಗೂ ಗೊತ್ತಿಲ್ಲ, ಹಂಗ ಅವರ ಬಗ್ಗೆ ಯಾರೂ ಅಷ್ಟು ಮಾತಾಡಂಗಿಲ್ಲ, ಆಕಿ ಎನ್ ಒಬ್ಬಾಕೆ ಇದ್ಲು ಅಂತಾರಷ್ಟ!’
ಅತ್ತಿ ಹೇಳಾದು ಸರಿ ಅನ್ನಿಸ್ತು, ಆಕಿ ಮಕ ನೋಡಿ ಹೇಳಿದೆ ‘ಅತ್ತಿ… ನಾ ನಿಂಗೊಂದು ಗುಟ್ಟು ಹೇಳ್ಲಿ? ನಂಗೂ ಒಬ್ಬಾಕಿ ಗಟ್ಟಿಗಿತ್ತಿ ಕತಿ ಗೊತೈತಿ, ಯಾರು ಅಂತ ಹೇಳ್ಲಾ?’
‘ಹೌದಾ… ಯಾರವ ಆಕಿ?’
‘ಆಕಿ ಯಾರಂದ್ರ….. ನಮ್ಮ್ ಅತ್ತಿ ಲಸಮಮ್ಮ!’ ಅಂತ ಜೋರಾಗಿ ಹೊಲದ ಬಯಲಿಗೆಲ್ಲ ಕೂಗಿ ಹೇಳಿದೆ.
ಅತ್ತಿ ಮತ್ತೆ ನಾನು ಖುಷಿಯಿಂದ ನಕ್ವಿ
ನಕ್ಷತ್ರಗಳು ಮತ್ತಷ್ಟು ಹೊಳದ್ವು!
ಆ ಕತ್ತಲಿನ್ಯಾಗ ಅತ್ತಿ ಹಣೆಗಿಟ್ಟಿದ್ದ ಬೊಟ್ಟು ಮತ್ತಷ್ಟು ಹೊಳದು ಅವಳಿನ್ನೂ ಚೆಂದ ಕಾಣ್ತಿದ್ಲು. ನಾನು ನಗೋದು ನೋಡಿದ ಅತ್ತಿ,
‘ಅಲಲೆ ಶಿವು ಈ ಬೀರಮ್ಮನ ಕತಿಗೆ ಹಿಂಗಾಡ್ತಿ ಇನ್ನಾ ಆ ಬ್ಯಾಟಿ ಬಸಮ್ಮನ ಕತಿ ಹೇಳಿದ್ರ ಹೆಂಗ್ ಮಾಡ್ತಿ ಏನೋ’ ಅಂತ ಅವಳು ನನ್ನ ಕುತೂಹಲ ಹೆಚ್ಚಿಸಿದ್ದೆ ತಡ ‘ಯತಿಬೇ… ಬ್ಯಾಟಿ ಬಸಮ್ಮನ ಕತಿ ಹೇಳಾ ಆಕಿ ಕತಿ ಕೇಳಿ ಮಕ್ಕಂಬುಡ್ತ್ನು’ ಅಂತ ಆಕಿನ ಗಂಟ್ ಬಿದ್ದೆ.
ನನ್ನ ದಿಟ್ಟಿಸಿ ನೋಡ್ತಾ ಅತ್ತಿ
‘ಇದಕಾ ನೋಡವಾ ನಿನಗ ಯಾರ್ ಬಗ್ಗೆನೂ ಹೆಳಂಗಿಲ್ಲ! ಕತಿ ಹೇಳಾ… ಕತಿ ಹೇಳಾ ಅಂತ ಗಂಟ್ ಬುಳ್ತಿ ಸುಬ್ಬಿʼ ಅಂತ ಗಲ್ಲ ಹಿಂಡಿ ಕತಿ ಹೇಳಾಕ ಶುರು ಮಾಡಿದ್ಲು.
‘ಇದು ನಡದದ್ದು ಆ ಕೇರೂರಿನ್ಯಾಗ, ಆ ಊರು ತುಂಬಾ ಸಣ್ಣದಿತ್ತು. ಹಂಗ ಅದರ ಸುತ್ತ ಮುತ್ತ ಯಾವ ಹಳ್ಳಿಗಳೂ ಹತ್ತರದಾಗ ಇರಲಿಲ್ಲ, ಆದ್ರ ಆ ಊರಿನ ಮಧ್ಯಕ್ಕ ದೊಡ್ಡದು ಆಲದ ಮರ ಇತ್ತು, ಊರಿನ ಗಂಡಸರೆಲ್ಲ ಅಲ್ಲೆ ಕುಂತು ಹರಟಿ ಹೊಡಿತಿದ್ರು, ಅದರ ಹತ್ತರದಾಗ ಸಣ್ಣ ಹೋಟೆಲ್ ಇತ್ತು ಅದು ಬ್ಯಾಟಿ ಬಸಮ್ಮನ ಹೋಟೆಲ್ ಅಂತ ಹೆಸರಾಗಿತ್ತು, ಆಕಿ ನೋಡಾಕ ದುಂಡನ ಮುಖ, ಕೆಂಪನ ಮೈ ಬಣ್ಣ ಹಂಗ ಕುತಿಗಿ ಮ್ಯಾಗೊಂದು ಕಪ್ಪಗಿರೊ ನೆರ್ಲಿ ಇತ್ತು, ಊರಾಗಿದ್ದ ಗಂಡಸರೊಳಾಗ ಸ್ವಲ್ಪ ಮಂದಿ ಆಕಿ ಅಂದಚೆಂದ ನೋಡಿ ದಿನಾ ಅಲ್ಲಿ ಮಿರ್ಚಿ ಬಜ್ಜಿ ತಿನ್ನಾಕ ಹೋಕ್ಕಿದ್ರು. ಇದನ್ನೆಲ್ಲಾ ಗಮನಿಸ್ತಿದ್ದ ಊರಾಗಿನ ಮಂದಿಯೆಲ್ಲಾ ಬಾಯಿಗೆ ಬಂದಂಗ ಕತಿ ಕಟ್ಟಿದ್ರು.
‘ಈಕಿ ಏನಬೇ! ತಾನೊಬ್ಬಾಕಿನ ಊರಾಗಿಲ್ದಿರೊ ಸುಂದ್ರಿ ಅಂತ ತಿಳ್ಕೊಂಡಾಳ, ಅದೊಂದು ಡಬ್ಬಾ ಅಂಗಡಿ ಇಟಡಂಡು, ಊರ್ ಗಂಡಸರ್ನೆಲ್ಲಾ ಸೇರಿಸಿಗ್ಯಂಡು ಕುಂದ್ರತಾಳ ಕುಂಟಲಗಿತ್ತಿ, ಆಕಿಗೇನ್ ಬಾರದ್ ಬಂದೈತೆನೊ, ನಾಚಿಗಿ ಗಿಚಿಗಿ ಎಲ್ಲಾ ಬುಟ್ಟು ಕುಂತಾಳ ನೋಡವಾ ಆಕಿ! ಊರಾಗಿನ ಗಂಡಸರು ಹಂಗ, ಹಲ್ ಕಿಸಗಂತ ಆಕಿ ಅಂಗಡಿ ಮುಂದ ಕುಂದ್ರತಾವ, ಇವುಕ್ಕರ ಸ್ವಲ್ಪ ಅರುವಿದ್ರ ಹಿಂಗ್ ಮಾಡ್ತಿರಲಿಲ್ಲ’ ಅಂತ ಬಾಯಿಗೆ ಬಂದಂಗ ಅಕಿನ ಬೈತಿದ್ರು. ಆದ್ರ ಆಕಿ ಮಾತ್ರ ದಿನಾ ಬೆಳಿಗ್ಗೆ ಅಂಗಡಿ ತಗದು ಇಡ್ಲಿ ಚಟ್ನಿ ಮಾಡಿ ಗರಿ ಗರಿ ಮಿರ್ಚಿ ಎಣ್ಣಿಯೊಳಾಗ ಹಾಕಿದ್ಲಂದ್ರ ಊರಿಗೆಲ್ಲಾ ಅದರ ಘಮ ಹರಡಿಕ್ಯಂತಿತ್ತು. ಆಕಿ ನೋಡಾಕ ಚಂದಿದ್ದಷ್ಟು ಅಡಗಿನೂ ಚೆಂದ ಮಾಡ್ತಿದ್ಲು. ಆದ್ರ ಊರಮಂದಿಗೆ ಈಕಿನ ಕಂಡ್ರ ಆಗ್ತಿರಲಿಲ್ಲ. ಬೇಕಂತಾನ ಆಕಿ ಅಂಗಡಿ ಮುಂದ ಬಂದು ಕುಂತು ಆಕಿ ಬಗ್ಗೆನೆ ಆಡಿಕೊಳ್ಳೋರು.

‘ಯ್ಯಯ್ಯವ್ಯಾ….. ಬುಡಂಗೆ ನೀನಾ ಖೋಡಿ. ಅದೇನ್ ಕೇಳ್ತಿ ಈಕಿ ಕತಿನಾ.. ಅದ್ಯಾವದಾ ಹೆಸರ್ ಗೊತ್ತಿಲ್ಲದ ಊರಿಂದ ಬಂದಾಕಿ ಅಂತ. ಆ ಊರಿನ್ಯಾಗಿದ್ದ ಬೇರೆ ಜಾತಿ ಗಣಮಗನ ಕೂಡ ಮದುವ್ಯಾಗಿದ್ಲಂತ. ಇಕಿಗೆ ಓದಾಕ ಬರಿಯಾಕೆಲ್ಲ ಬರುತ್ತಂತ. ನಮ್ಮ್ ನಮ್ಮ್ ಜಾತಿಯೊಳಗ ಮದುವ್ಯಾದ್ರನ ಬಾಳೆವು ಸುದ್ದಿರಂಗಿಲ್ಲ, ಈಕಿ ಬ್ಯಾರೆ ಕುಲದಾತನ್ನ ಮದುವ್ಯಾಗ್ಯಾಳ, ಮದುವ್ಯಾದ ವರಸಕ್ಕ ಆತ ಹಳ್ಳದ ಸುಳಿಗೆ ಸಿಕ್ಕು ಸಿಗಲಾರದಂಗ ಸತ್ತೊಗ್ಯಾನ. ಎಲ್ಲಾ ಈಕಿ ಜಾತಿ ಕಾಲ್ಗುಣ. ಇದೆಲ್ಲಾ ಆದಮ್ಯಾಲೂ ಮತ್ಯಾರ್ನೊ ಕರಕಂಡು ಈ ಊರಿಗೆ ಬಂದು ಇಲ್ಲಿ ಗಂಡಸರ್ನೂ ಹದಗೆಡಸಾಕತಾಳೀಕಿ. ದೊಡ್ಡ್ ಓದಿದಾಕಿ ಅಂತ ತೊರಸಾಕ ಹೊಟೇಲ್ ನ್ಯಾಗ ಬುದ್ದ ಬಸವ ಅಂಬೇಡ್ಕರ್ ಅವರ ಫೋಟೊ ಹಾಕಿದಾಳ, ಅದರ ಜೊತಿಗೆ ‘ಕುಲ ಕುಲ ಕುಲವೆಂದು ಹೊಡೆದಾಡದಿರಿ ನೀವು, ಕುಲದ ನೆಲೆಯನೆನಾದರೂ ಬಲ್ಲಿರಾ?’ ಅಂತ ಬರಕಂಡಾಳಂತ. ಅದನ್ ಓದಿ ಬಂದು ನಮ್ಮುಡುಗ ಹೇಳ್ತಿತ್ತು. ಇಂತಾವೆಲ್ಲ ಮಾಡಿ ಊರಿನ್ಯಾರನ್ನ ಹತ್ತರ ಮಾಡಿಕ್ಯಂಡು ರೊಕ್ಕ ಮಾಡಿಕ್ಯನಾಕ ಬಂದಾವಂಗೆ ಇವು’ ಅಂತ ಬಾಯಿಗೆ ಸೆರಗಿಟ್ಟು ಆಕಿ ಬಗ್ಗೆ ಮಾತಾಡೋರು. ಆದ್ರ ಬಸಮ್ಮ ಎಲ್ಲರನ್ನೂ ನಕ್ಕೊಂತ ಮಾತಾಡಸಾಕಿ, ಊರಾಗಿನಾರು ಅದೇನೆ ಕತಿ ಕಟ್ಟಿ ಆಕಿ ಬಗ್ಗೆ ಮಾತಾಡಿದ್ರೂ ಆಕಿ ಮಾತ್ರ ಯಾವಾಗಲೂ ನಕ್ಕೊಂತ ಇರತಿದ್ಲು.
ಹಿಂಗ ನಾವು ಆ ಕೇರೂರಿಗೆ ನೆಲ್ ಬಳ್ಯಾಕ ಹೋಗಿದ್ವಿ, ನೆತ್ತಿ ಮ್ಯಾಗ ಬಿಸಿಲಿನ ಝಳ ಅಂದ್ರ ಝಳ, ನೆತ್ತಿ ಸುಟ್ಟೊಗಂಗಿತ್ತು, ಹೊಲದ ಕೆಲಸ ಜಾಸ್ತಿ ಆಗಿ ಹೊಟ್ಟಿ ಹಸುವಾದಾಗ ಊಟ ಮಾಡಿದ್ವಿ ಆದ್ರ ಕುಡ್ಯಾಕ ನೀರಿದ್ದಿಲ್ಲ ಅವಾಗ ಬ್ಯಾಟಿ ಬಸಮ್ಯಾನ ಎಲ್ಲಾರ್ನೂ ಕರದು ಮಿರ್ಚಿ ಕೊಟ್ಟು ನೀರೂ ಕೊಟ್ಟಿದ್ಲು. ಆಕಿ ಸುತ್ತ ಹೆಣದಿದ್ದ ಕತಿ ಕೇಳಿದ್ದ ನನಿಗೆ, ಎದುರಿಗೆ ಆಕಿ ಬೇರೆನೆ ಅನ್ನಿಸಿದ್ಲು, ನಾನು ಅಕಿನ ಮಾತಾಡಿಸಿ ಈ ಕತಿಗಳ ಬಗ್ಗೆ ಕೇಳೆ ಬಿಟ್ಟೆ, ಅದಕ್ಕ ಆಕಿ ಅದೇ ನಗುವಿನಿಂದ ತನ್ನ ಕತಿ ತಾನೇ ಹೇಳಿದ್ಲು
‘ಲಸಮಮ್ಮಕ್ಕಾ, ನನ್ನ ಸುತ್ತ ನೂರು ಕತಿ ಹೆಣದಾರ. ಆದ್ರ, ನನ್ನೊಳಾಗಿರಾದು ಒಂದSS ಕತಿ! ಗಂಡ ಇರಲಾರದ ಹೆಂಗಸರಂದ್ರ ಬಾಯಿಂದ ಬಾಯಿಗೆ ಕತಿಗಳು ಹುಟ್ಟಿಗ್ಯಂತ ಹೋಗ್ತಾವ. ಈ ಗಂಡು ಮಕ್ಕಳೆನರ ಬ್ಯಾರೆ ಜಾತ್ಯಾಕಿನ ಮದುವ್ಯಾದ್ರ, ಗಣಮಗ ಅದಾನವ ನಡಿತೈತಿ ಅಂತಾರ. ಅದರಂಗ ಹೆಣಮಕ್ಕಳೇನಾದ್ರು ತಮ್ಮ ಜೀವನ ತಾವೇ ಆಯ್ಕೆ ಮಾಡಿಕ್ಯಂದು ಬೇರೆ ಜಾತ್ಯಾರನ್ನ ಮದುವ್ಯಾದ್ರ ಆಕಿ ಹುಟ್ಟಿದ್ದು ತಪ್ಪು, ಅಕಿಗೆ ಅಸ್ತಿತ್ವಾನSS ಇಲ್ಲದಂಗ ಬಾಯಿಗೊಂದು ಮಾತಾಡ್ತಾರ. ಯಾಕ… ನಾವು ಮನುಷ್ಯಾರಲ್ಲೇನು? ಮನುಷಾ ಭೂಮಿಮ್ಯಾಗ ವಿಕಾಸ ಆದಾಗ ಅವನ ಮೈ ಮ್ಯಾಗ ತುಂಡು ಬಟ್ಟಿ ಇರಲಿಲ್ಲ, ಆದ್ರೀಗ ಈ ಜಾತಿ ಅನ್ನೊ ಬಟ್ಟಿ ಅದೆಷ್ಟೊ ಮಂದಿನ ಉಸರುಗಟ್ಟಿಸಿ ಸಾಯಿಸಾಕತೈತಿ,
ಇಲ್ಲಿ ನೋಡು ಈ ಬುದ್ಧ ಬಸವ ಅಂಬೇಡ್ಕರ್ ಎಲ್ಲಾರೂ ಹೇಳಿದ್ದೊಂದ, ಮೊದ್ಲು ಮನುಷ್ಯಾರಾಗ್ರಿ ಅಂತ, ಆದ್ರ ನಾವು ಇವ್ರನ್ನೆಲ್ಲ ಒಂದೊಂದು ಜಾತಿಗೆ ಸೇರಿಸಿ ಭಾಷಣ ಮಾಡಿಕ್ಯಂತ ಅಡ್ಡಾಡಕತೀವಿ, ಹೆಣ್ಮಕ್ಕಳು ಶಿಕ್ಷಣ ಪಡಿಬೊಕು, ಅವರ ಕಾಲಿನ ಮ್ಯಾಲ ಅವರು ನಿಂತು ಬದುಕ್ಬೊಕು, ಅಂತ ಹೇಳ್ಯಾರ. ಆದ್ರ ನಾವಿನ್ನೂ ಹೆಣಮಗಳಂದ್ರ ಮುಸುರಿ ತಿಕ್ಕಾಕ, ಕಸ ಬಳ್ಯಾಕ, ಮನ್ಯಾಗಿರಾರ ಚಾಕರಿ ಮಾಡಾಕ ಹುಟ್ಯಾಳ ಅಂಬಗ ಸಮಾಜ ನಮ್ಮನ್ನೆಲ್ಲ ಒಪ್ಪಿಸಿ ಬಿಟೈತಿ, ನಾವು ಅದರಂಗ ನಡಕಂತೀವಿ, ಅಂಗಳ ದಾಟದಂದ್ರ ಅಪರಾಧ ಅನ್ಕೊತೀವಿ, ಆದ್ರ ಹೊಲದಾಗ ಮೈ ಬಗ್ಗಿಸಿ ದುಡಿತೀವಿ, ನಮಗೂ ಆಸೆಗಳಿರಂಗಿಲ್ಲೇನು? ನಾನು ಹಿಂಗ ನನ್ನ ಬದುಕನ್ನ ನಾನಾ ಕಟ್ಟಿಗ್ಯಂಡು ದುಡ್ಯಾಕತೀನಿ, ಹೆಣಮಕ್ಕಳಂದ್ರ ಬರೀ ಅಂದ ಚಂದ ಮೈ ಬಣ್ಣ ಅನ್ಕೊಂಡಿರೋರ್ನ ಮಿರ್ಚಿನ ಬಿಸಿ ಎಣ್ಯಾಗ ಎದ್ದಿದಂಗ ಎದ್ದಿ ಕಳಸ್ತಿನಿ, ದಾರಿಯೊಳಾಗ ದಿಕ್ಕಿರಲಾರದ ಸಿಕ್ಕ ಈ ರಾಮಪ್ಪಗೂ ನನಗೂ ಕತಿ ಕಟ್ಟತಾರ ಆದ್ರ, ತಲಿ ಸರಿ ಇಲ್ಲದಿರೊ ಆತಗ ಬೇಕಾಗಿರಾದು ಎರಡೊತ್ತಿನ ಊಟ ಅಷ್ಟ! ಎರಡಕ್ಷರ ಗೊತ್ತಿರೊ ನನಗ, ಯಾವ ಜಾತಿ ಜಿಡ್ಡಿನ ಮ್ಯಾಗೂ ನಂಬಿಕಿ ಇಲ್ಲ. ಊರಿನ್ಯಾರು ಅದೆಷ್ಟSS ಕತಿ ಕಟ್ಟಿದರೂನು ನಾನು ನನ್ನ ಕತಿನ ನಾನೇ ಬರಿಯಾಕಿ’ ಅಂತ ಮತ್ತೊಮ್ಮೆ ಜೋರಾಗಿ ನಗತೊಡಗಿದ್ಲು. ಆಕಿ ಮಾತ್ ಕೇಳಿ ಮೈ ಜುಮ್ಮಂದಂಗಾತು.

ಈಕಿನಾ ನೋಡು ಬ್ಯಾಟಿ ಬಸಮ್ಮ… ಅಂದ ಅತ್ತೆ, ನನ್ನನ್ನ ದಿಟ್ಟಿಸಿ ನೋಡ್ತಾ
‘ನೋಡ್ ಶಿವು ಇದಕಾ ನಾವು ನಮ್ಮ ಬದುಕನ್ನ ಮತ್ತ ನಮ್ಮ ಕತಿಗಳನ್ನ ನಾವಾ ಬರೀಬೊಕು ನೋಡವಾ!’ ಅಂತ ಹೇಳಿ ನಿದ್ದಿಗೆ ಜಾರಿದ್ಲು. ಆಕಾಶ ನೋಡ್ತಾ ನೋಡ್ತಾ, ಅತ್ತಿ ಹೇಳಿದ್ದು ಮತ್ತ ಆ ಬ್ಯಾಟಿ ಬಸಮ್ಮನ ಕತಿ ಕೇಳಿದಾಗ ನನಗ ಸಾಲಿಯೊಳಾಗ ಟೀಟರ್ ಹೇಳಿದ್ದು ನೆನಪಾತು.
“One is not born, but rather becomes a woman”.

ಸುವರ್ಣ ಚೆಳ್ಳೂರು ಕೊಪ್ಪಳ ಜಿಲ್ಲೆ ಕಾರಟಗಿ ತಾಲ್ಲೂಕಿನ ಚಳ್ಳೂರಿನವರು. ಈಗ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ವಿಭಾಗದ ಸಂಶೋಧನಾ ವಿದ್ಯಾರ್ಥಿ. ಕಲೆ ಸಾಹಿತ್ಯ ಫೋಟೊಗ್ರಫಿ ಮುಖ್ಯ ಆಸಕ್ತಿಗಳು. ಇವರ ‘ಕಂಬದ ಹಕ್ಕಿ’ ಕಥೆಗೆ ‘ಸಂಗಾತ ಕಥಾ ಪುರಸ್ಕಾರ ‘ (2021), ‘ಕನಕಾಂಬರ’ ಕಥೆಗೆ ಧಾರವಾಡದ ವಿದ್ಯಾವರ್ಧಕ ಸಂಘದಿಂದ ‘ಶ್ರೀಮತಿ ಶಾಂತಾದೇವಿ ಕಣವಿ ಕಥಾ ಪುರಸ್ಕಾರ’ ದೊರಕಿದೆ (2022). ‘ಕನಕಾಂಬರ’ ಹಾಗೂ ‘ಮಾರ್ನಾಮಿ’ ಸಣ್ಣ ಕಥೆಗಳು ToTo Funds the Arts’ India ಅವರು ಕೊಡುವ ಕನ್ನಡ ಸೃಜನಶೀಲ ಬರವಣಿಗೆ (Kannada Creative writing) ವಿಭಾಗದಲ್ಲಿ 2023 ಮತ್ತು 2025 ರಲ್ಲಿ ಅಂತಿಮ ಹಂತಕ್ಕೆ (Short List) ಆಯ್ಕೆ ಆಗಿದೆ. ಇವರ ಬರಹಗಳು ಕೆಲವು ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ.
