ಕತ್ತಲೆಯ ಭಯದಲ್ಲಿ ಲಬೋ ಲಬೋ ಬಾಯಿ ಬಡಿಯುವಾಗಲೇ ಕಣ್ಣಿನ ಅಂಚಿನಿಂದ ಬೀದಿ ಬೆಳಕಲ್ಲಿ ಎಳೆ ಎಳೆಯಾಗಿ ಬೀಳುತ್ತಿದ್ದ ಮಳೆ ಕಾಣಿಸಿ ಅಳು ಥಟ್ಟನೆ ನಿಂತೇ ಹೋಗಿತ್ತು. ಹಿಂದೆ ಕತ್ತಲೆಯ ಪರದೆ. ಅದರ ಮೇಲೆ ನೀಳವಾಗಿ ಬೀಳುತ್ತಿದ್ದ ಹೊಳೆವ ಮಳೆಯ ವೈಭವ! ನನ್ನ ಎಳೆಯ ಮನಸ್ಸಿಗೆ ಬೆರಗೋ ಬೆರಗು. ಬುದ್ಧಿ ಬೆಳೆಯುವ ಮುಂಚೆಯೇ ಕತ್ತಲೆ, ಗುಮ್ಮ, ದೆವ್ವ ಇತ್ಯಾದಿಗಳ ಬಗ್ಗೆ ಬೆಚ್ಚಿ ಬೀಳುತ್ತಿದ್ದ ಮನಸ್ಸಿಗೆ ಕತ್ತಲೆಯ ಸೌಂದರ್ಯ ಮತ್ತು ಮಳೆಯ ಲಾಲಿತ್ಯ ತಾಗಿ ಮೌನವಾಗಿ ನಿಂತುಬಿಟ್ಟಿದ್ದೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಮೂವತ್ತೈದನೆಯ ಬರಹ
ಬದುಕು, ಭಕ್ತಿ, ಭಯೋತ್ಪಾದನೆ ಇತ್ಯಾದಿಗಳ ಬಗ್ಗೆ ತಲೆ ಕೆಡಿಸಿಕೊಂಡು ಖಿನ್ನಳಾಗಿದ್ದ ಮೊನ್ನೆಯ ದಿನಗಳಲ್ಲಿ ಅಚಾನಕ್ಕಾಗಿ ಅವಧೂತ ಗುರುವಿನಂತೆ ಜಯಂತನ ಒಂದು ಮೆಸೇಜು ಬಂದಿತ್ತು. ಅದೊಂದು ಪುಟ್ಟ ಬರಹ. ‘ನನ್ನ ಜೀವನ ದೃಷ್ಟಿ’ ಎಂಬ ಶೀರ್ಷಿಕೆಯಡಿ ಅವರ ತಂದೆ ಗೌರೀಶ ಕಾಯ್ಕಿಣಿಯವರ ಹೆಸರಿತ್ತು:
ಸುಖಕ್ಕೆ ಮೂಲ ಮನಃಶ್ಯಾಂತಿ. ಮನಃಶ್ಯಾಂತಿಗೆ ಕಾರಣ ನಮ್ಮಲ್ಲಿಯೇ ಆತ್ಮವಿರೋಧಿಯಾಗದಂಥ ಬದುಕು. ನಮ್ಮ ಮನಸ್ಸಿಗೇ ನಾವು ಹೀನವೆನಿಸದಂತೆ ಬಾಳುವ ಹದವೇ ಜೀವನದಲ್ಲಿ ಪಳಗಿಸಿಕೊಳ್ಳಬಹುದಾದ ಸಮ್ಯಕ್ ದೃಷ್ಟಿ. ತನ್ನಂತೆ ಪರರ ಬಗೆಯುವ ದೃಷ್ಟಿ ಒಂದು. ಪರರ ಕಣ್ಣಿಗೆ ತಾವು ಹೇಗೆ ಕಾಣುತ್ತೇವೆಯೋ ಹಾಗೆ ತಮ್ಮನ್ನು ಕಂಡುಕೊಳ್ಳುವ ದೃಷ್ಟಿ ಇನ್ನೊಂದು. ಇವೆರಡೂ ಕಣ್ಣು ನಮಗೆ ಜೀವನದ ಯಥಾರ್ಥ ದರ್ಶನವನ್ನು ನೀಡುತ್ತವೆ ಎಂದು ನಾನು ನಂಬಿ ನಡೆದಿದ್ದೇನೆ. ಅದಕ್ಕೆ ದೇವರ ದಯೆ, ದೈವದ ಭಯ ಯಾವುದೂ ಬೇಕಿಲ್ಲ.
*****
ನನಗೆ ಭಯ ಗೊತ್ತು, ಬೆರಗು ಗೊತ್ತು, ನಡುವಿನದು ಮಾತ್ರ ಗೊತ್ತಿಲ್ಲ! ಅದ್ಯಾಕೆ ಭಯಭಕ್ತಿ ಎರಡೂ ಸೇರಿಕೊಂಡು ಒಂದೇ ಪದವಾಗಿ ಮಂದಿಯ ಬಾಯಲ್ಲಿ ಕ್ಲೀಷೆಯಾಗಿ ಹೋಗಿದೆಯೋ! ಚಿಕ್ಕಂದಿನಲ್ಲಿ ಒಮ್ಮೆ ವಿಶಾಲಮ್ಮ, ‘ಪ್ರಸಾದನ ಕಣ್ಣಿಗೊತ್ತಿಕೊಂಡು ತಗೊಳಕ್ಕೆ ಗೊತ್ತಿಲ್ವಾ? ಒಂದಿಷ್ಟಾದರೂ ಭಯ ಭಕ್ತಿ ಬೇಡಾ?’ ಅಂತ ಬೈದಿದ್ದರು. ಎರಡೂ ಬೇಡಾ ಎಂದು ಮನಸ್ಸಿನಲ್ಲೇ ಗೊಣಗಿಕೊಂಡ ನೆನಪಿದೆ.
ಮುಸ್ಸಂಜೆಯ ಪೂಜೆಗೆ ಕತ್ತಲಾಗುವ ಮುಂಚೆ ಹಿತ್ತಲಿಂದ ಹೂವೆತ್ತಿಕೊಂಡು ಬಾ ಅಂತ ವಿಶಾಲಮ್ಮ ಹೇಳಿದಾಗೆಲ್ಲ ಎದೆ ಡವಡವನೆ ಹೊಡೆದುಕೊಳ್ಳುತ್ತಿತ್ತು. ಜೊತೆ ಬಾರೆಂದು ಅಕ್ಕನ ಕಡೆಗೆ ದೈನ್ಯದಿಂದ ನೋಡಿದರೆ ಕಂಡೂ ಕಾಣದಂತೆ ಮುಖ ತಿರುಗಿಸಿಕೊಳ್ಳುತ್ತಿದ್ದಳು. ಮನಸ್ಸಿನೊಳಗೆ ಸಣ್ಣಗೆ ನಡುಗುತ್ತಾ ಕೊಟ್ಟಿಗೆ ದಾಟಿ ಗವ್ವೆನ್ನುವ ಹಿತ್ತಲಿಗಿಳಿದರೆ ಕೇಳಿಸುತ್ತಿದ್ದ ವಿಚಿತ್ರ ಶಬ್ದಗಳಿಗೆ ಎದೆ ಬಡಿತವನ್ನೇ ನಿಲ್ಲಿಸುವ ಶಕ್ತಿಯಿತ್ತು.
ಬೆಳಿಗ್ಗೆಯ ತರಹ ಹೂವುಗಳ ಜೊತೆ ಮಾತಾಡುವ ತಾಳ್ಮೆಯೇ ಇಲ್ಲ. ಸರಸರನೆ ಕಿತ್ತು ಬುಟ್ಟಿಗೆ ಹಾಕಿ, ರೊಯ್ಯನೆ ಕೊಟ್ಟಿಗೆ ದಾಟಿಕೊಂಡು ಅಂಗಳದಲ್ಲಿದ್ದ ನಲ್ಲಿಯ ಕೆಳಗೆ ಹೂಗಳ ಸಮೇತ ಬುಟ್ಟಿಯನ್ನು ತೊಳೆದು ಅರೆ ನಿಮಿಷ ಕುಕ್ಕರಿಸುತ್ತಿದ್ದೆ! ಭಯದ ಮಹಾ ದರ್ಶನ! ಹಿತ್ತಲಲ್ಲಿ ದೆವ್ವ ನಿನ್ನ ಮಾತಾಡಿಸಿತಾ ಅಂತ ಅಕ್ಕ ಕಿಚಾಯಿಸುತ್ತಿದ್ದಳು.
ಒಮ್ಮೆ ಮುಸ್ಸಂಜೆ ದೀಪ ಹಚ್ಚಿದ ಮೇಲೆ ಹರಿಣಿಯಕ್ಕ ಮತ್ತೆ ನಾನು ಇಬ್ಬರೇ ಓದಿಕೊಳ್ಳುತ್ತಾ ರೈಲು ಬೋಗಿಯಂತಹ ಆ ಮನೆಯ ಮುಂದಿನ ರೂಮಿನಲ್ಲಿ ಕೂತಿದ್ದೆವು. ಆಕೆ ಮಹಾ ಅಕ್ಷರ-ನಿರಾಸಕ್ತೆ. ನಾನು ಇದ್ದ ಒಂದೇ ಕನ್ನಡ ಪುಸ್ತಕವನ್ನು ಸಾವಿರಾರು ಬಾರಿ ಓದುತ್ತಿದ್ದೆ. ಮಗ್ಗಿ ಪುಸ್ತಕ ಇರುತ್ತಿತ್ತು. ನನಗೆ ಸಂಖ್ಯೆಗಳ ಬಗ್ಗೆ ಅಷ್ಟು ಪ್ರೀತಿ ಯಾವತ್ತೂ ಇಲ್ಲ.
ಎಂದಿನಂತೆ ಪುಸ್ತಕ ತೆರೆದು ಚಿತ್ರ ನೋಡುತ್ತಾ ಮೈಮರೆತಿದ್ದಾಗ ಎದುರಿಗೆ ಕೂತಿದ್ದ ಅವಳು ಸುಮಾರು ಹೊತ್ತು ಅತ್ತ ಇತ್ತ ನೋಡಿ ಕಾಲ ಕಳೆದ ಮೇಲೆ ಚಿತ್ರದಲ್ಲಿ ಮೈಮರೆತಿದ್ದ ನನ್ನನ್ನು ನೋಡಿ ಹೊಟ್ಟೆಕಿಚ್ಚಾಗಿರಬೇಕು. ಸಮಾಜ ಪುಸ್ತಕವನ್ನು ತೆರೆದು, ‘ತುರ್ಕೀಸ್ತಾನದಿಂದ ಕಾನ್ಸ್ಟಂಟಿನೋಪಲ್ಲಿಗೆ ಹೋಗುವ ಹಾದಿಯಲ್ಲಿ…ʼ ಅಂತೇನೋ ಪಠಿಸಲು ಶುರು ಹಚ್ಚಿಕೊಂಡಳು.
ಅದು ನನ್ನ ಜಗಳಕ್ಕೆ ಕರೆಯುವ ರೀತಿ. ಸುಕೀ, ತುರ್ಕಿ, ಡುಮ್ಮಿಗಳು ನನಗೆಂದೇ ಮೀಸಲಾದ ಪದಗಳು. ಮೂರನೆಯ ಸಲವೂ ಅದನ್ನೇ ಓದಿದಾಗ ಚಾಪೆ ಬಿಟ್ಟು ಎದ್ದು ಬಂದು ಅವಳ ಬೆನ್ನು ಬಗ್ಗಿಸಿಕೊಂಡು ದಬದಬನೆ ಗುದ್ದಹತ್ತಿದ್ದೆ. ಅದೇ ಗಳಿಗೆಗೆ ಸರಿಯಾಗಿ ವಿಶಾಲಮ್ಮ ಹಿಂದಿನಿಂದ ಬಂದಿದ್ದರು ಎನ್ನುವುದು ಕಂಡಿದ್ದರೆ! ಅವಳಿಗೆ ಮಾತ್ರ ಕಂಡಿತ್ತಲ್ಲ? ಅಳು ಹೋ ಎಂದು ತಾರಕಕ್ಕೇರಿತ್ತು.
‘ಅಯ್ಯೋ, ಬಜಾರಿ! ಅಕ್ಕ ಅನ್ನೊ ಭಯ ಸಹ ಇಲ್ಲ! ಅವಳಿಗೇನಾದರೂ ಉಸಿರು ಸಿಕ್ಕಿಕೊಂಡರೆ!’ ಅಂತ ಬೆಚ್ಚಿಬಿದ್ದ ವಿಶಾಲಮ್ಮ ನನ್ನನ್ನು ದರದರನೆ ಎಳೆದುಕೊಂಡು ಹೋಗಿ ಹೊರದಬ್ಬಿ ಬಾಗಿಲು ಹಾಕಿಕೊಂಡಾಗ ಈಗ ಹೋ ಎಂದು ಅಳುವ ಸರದಿ ನನ್ನದು.
ಈ ಸಣಕಲಿ ಅಕ್ಕನ ಕಂಡರೆ ಭಯವಾ? ಸಿಕ್ಕ ಬೋನಸ್ಸಿಗೆ ಖುಷಿಯಾಗಿ ಹರಿಣಿಯಕ್ಕನ ಮುಖ ಅರಳಿತ್ತು. ಇದ್ಯಾವ ನ್ಯಾಯ? ನನ್ನ ಪಾಡಿಗೆ ಓದಿಕೊಳ್ಳುತ್ತಿದ್ದ ನನಗೆ ಶಿಕ್ಷೆ. ಅವಳ ಕಿತಾಪತಿಗೆ ಸನ್ಮಾನ!
ಕತ್ತಲೆಯ ಭಯದಲ್ಲಿ ಲಬೋ ಲಬೋ ಬಾಯಿ ಬಡಿಯುವಾಗಲೇ ಕಣ್ಣಿನ ಅಂಚಿನಿಂದ ಬೀದಿ ಬೆಳಕಲ್ಲಿ ಎಳೆ ಎಳೆಯಾಗಿ ಬೀಳುತ್ತಿದ್ದ ಮಳೆ ಕಾಣಿಸಿ ಅಳು ಥಟ್ಟನೆ ನಿಂತೇ ಹೋಗಿತ್ತು. ಹಿಂದೆ ಕತ್ತಲೆಯ ಪರದೆ. ಅದರ ಮೇಲೆ ನೀಳವಾಗಿ ಬೀಳುತ್ತಿದ್ದ ಹೊಳೆವ ಮಳೆಯ ವೈಭವ!
ನನ್ನ ಎಳೆಯ ಮನಸ್ಸಿಗೆ ಬೆರಗೋ ಬೆರಗು. ಬುದ್ಧಿ ಬೆಳೆಯುವ ಮುಂಚೆಯೇ ಕತ್ತಲೆ, ಗುಮ್ಮ, ದೆವ್ವ ಇತ್ಯಾದಿಗಳ ಬಗ್ಗೆ ಬೆಚ್ಚಿ ಬೀಳುತ್ತಿದ್ದ ಮನಸ್ಸಿಗೆ ಕತ್ತಲೆಯ ಸೌಂದರ್ಯ ಮತ್ತು ಮಳೆಯ ಲಾಲಿತ್ಯ ತಾಗಿ ಮೌನವಾಗಿ ನಿಂತುಬಿಟ್ಟಿದ್ದೆ.
ಯಾಕೆ ಸದ್ದೇ ಇಲ್ಲವಲ್ಲ, ಯಾರಾದರೂ ಬಾಯಿ ಬಿಗಿ ಹಿಡಿದು ಎಳೆದುಕೊಂಡು ಹೋದರಾ ಎಂದು ವಿಶಾಲಮ್ಮ ಬೆದರಿ ಮತ್ತೊಮ್ಮೆ ಓಡಿ ಬಂದಿದ್ದರು. ಪ್ರಜ್ಞೆ ಇಲ್ಲದವಳ ತರ ನಿಂತಿದ್ದೆನಂತೆ. ಅವತ್ತಿನಿಂದ ಆ ಶಿಕ್ಷೆ ರದ್ದಾಗಿದ್ದು ನೋಡಿ ಹರಿಣಿಯಕ್ಕನಿಗೆ ಬಲು ಬೇಜಾರಾಗಿತ್ತು. ನನ್ನ ಮಟ್ಟಿಗೆ ಬೆರಗು ಪ್ರಜ್ಞೆಯ ಭಾಗವಾಗಿ ಹೋಗಿತ್ತು. ಆದರೆ ಭಕ್ತಿ ಮಾತ್ರ ನನ್ನ ಹತ್ತಿರವೇ ಸುಳಿಯಲಿಲ್ಲ!
ಮಂದಿ ಭಕ್ತಿ ಅಂತ ಮಾತಾಡಿದಾಗೆಲ್ಲ ನನಗೆ ತೆಳ್ಳನೆಯ ಹೊಟ್ಟೆಕಿಚ್ಚು. ನಿಜವಾಗಿಯೂ ಅದೇನು? ಸ್ನೇಹ, ಪ್ರೀತಿ, ಪ್ರೇಮ, ವಾತ್ಸಲ್ಯಗಳು ಗೊತ್ತು. ನಾನೇನಾದರೂ ಹಾದಿ ತಪ್ಪಿ ಈ ಲೋಕಕ್ಕೆ ಬಂದೇನಾ?

ಗುರುಮನೆ ಯಾವಾಗ ಹೆಚ್ಚು ಕಮ್ಮಿ ಪೂರ್ತಿಯಾಗಿ ನೀರವವಾಗಿರುತ್ತದೆ ಎಂದು ಹಲವು ವರ್ಷಗಳ ಮೇಲೆ ನಾನು ಕಂಡುಕೊಂಡಂತಿದೆ. ಬೆಳಿಗ್ಗೆ ಏಳರಿಂದ ಏಳೂವರೆ ಮತ್ತು ಮಧ್ಯಾಹ್ನ ಮೂರುವರೆಯಿಂದ ನಾಲ್ಕು. ಎರಡೂ ಹೊತ್ತು ನನಗೆ ಖುಷಿಯೇ. ಬೆಳಿಗ್ಗೆ ನಿದ್ದೆಯಿಂದ ಎದ್ದಂತೆ ಯಾವ ಅಲಂಕಾರವೂ ಇಲ್ಲದೆ ಗುರು ಕೂತಿದ್ದರೆ ಮಧ್ಯಾಹ್ನ ಆಗ ತಾನೇ ಮಾಡಿರುವ ಎಲ್ಲ ಅಲಂಕಾರವನ್ನು ಹೊತ್ತು ಕೂತಿದ್ದರೆ ‘ಎಲ್ಲಿಗೆ ಪಯಣ?’ ಅಂತ ಕೇಳಬೇಕೆನ್ನಿಸುತ್ತದೆ.
ಅವೆರಡೂ ಹೊತ್ತು ಗಡ್ಡಗುರುವಿನ ಜೊತೆ ನನ್ನ ಸಂವಾದ ಒಮ್ಮೊಮ್ಮೆ ನನ್ನ ಮುಖದ ಮೇಲೆ ನಗುವನ್ನು ಸ್ಪಷ್ಟವಾಗಿಯೇ ಮೂಡಿಸುವಷ್ಟು ಆತ್ಮೀಯವಾಗಿ ನಡೆಯುತ್ತದೆ. ಕಣ್ಣು ಬಿಟ್ಟು ನೋಡಿದಾಗೆಲ್ಲ ಸುತ್ತೆಲ್ಲ ಘನವಾಗಿ ದಿವ್ಯವಾಗಿ ಹಬ್ಬಿರುವ ನೀರವತೆಯ ಚೈತನ್ಯ ನನ್ನೊಳಗೂ ಹರಿದಂತೆ ಖುಷಿಯಾಗುತ್ತದೆ. ಜೊತೆಗೆ ಆ ಹೊತ್ತಿನಲ್ಲಿ ಯಾರು ಬಂದರೂ ಸಹ ಸದ್ದಿಲ್ಲದೆ ಸರಿದು ಹೋಗುತ್ತಾರೆ. ಸ್ವಚ್ಛ ಮಾಡಲು, ನಮಿಸಲು ಬರುವ ಗುರುಮಂದಿ ಸಹ. ಗುರು ತಾನೇ ತಾನಾಗಿ ಕಾಣಿಸುವ ಆ ಏಕಾಂತ ನನ್ನ ದಿನದ ಲೋಕಾಂತಕ್ಕೆ ಬೇಕಾದ ಚೈತನ್ಯವನ್ನು ನೀಡಿ ಹರಸುತ್ತದೆ.
ಇವತ್ತು ಕಣ್ಣು ಬಿಟ್ಟರೆ ಯಾರೋ ಗುರುವಿನ ಎದುರಿಗೆ ಹೊಸಿಲಿಗೆ ಅಂಟಿಕೊಂಡಂತೆ ಪಟ್ಟಾಗಿ ಕೂತಿದ್ದು ಕಾಣಿಸಿ ಕಣ್ಣಿಗೆ ಕಿರಿಕಿರಿಯೆನ್ನಿಸಿತು. ತುಂಬ ಸಲ ಹೀಗೆ ನಿಲ್ಲುವ ಕೂರುವ ಹಠಮಾರಿತನದ ಬಗ್ಗೆ ಯೋಚಿಸಿದ್ದೇನೆ. ನಿಜವಾಗಿ ಏನದು? ಸ್ವಲ್ಪ ದೂರದಲ್ಲಿ ತಾವು ಕೂತರೆ ಕಾಣಿಸದಂತಹ ಕುರುಡು ಗುರುವಿಗೆ ಅಂತ ಈ ಮಂದಿ ಭಾವಿಸಿರಬಹುದೇ?
ಚಿಕ್ಕಂದಿನಲ್ಲಿ ಚಂದ್ರಣ್ಣ ಹಣ ಸುರಿದು ಗರ್ಭಗುಡಿಯಲ್ಲಿ ನಿಲ್ಲುವ ಕೂರುವ ಸವಲತ್ತನ್ನು ಪಡೆದು ಹಣವಿರುವ ಜಂಭದಲ್ಲಿ ನಮ್ಮನ್ನೆಲ್ಲ ಬಿಗುಮಾನದಿಂದ ಒಳಕ್ಕೆ ಕರೆದುಕೊಂಡು ಹೋಗುತ್ತಿದ್ದನ್ನು ನನ್ನ ಬಾಲ್ಯದ ಕಣ್ಣುಗಳು ಗಮನಿಸಿದ್ದವು. ಅಲ್ಲಿ ಒಳಗೆ ಕೂತರೂ ನನಗೇನೂ ಭಕ್ತಿ ಉಕ್ಕಿ ಬರುತ್ತಿರಲಿಲ್ಲ. ಅಲಂಕಾರವನ್ನು ನೋಡುತ್ತಾ ಪಿಳಿಪಿಳಿ ಕಣ್ಣು ಬಿಡುತ್ತಿದ್ದೆ ಅಷ್ಟೆ.
ತಿರುಪತಿಯಲ್ಲಿ ದುಡ್ಡು ಕೊಟ್ಟರೆ ವಿಶೇಷ ದರ್ಶನ. ಹೆಚ್ಚಿನ ಲಾಡು. ಅಂತೂ ದೇವರು ಸಹ ಧನಮೋಹಿ ಅಂತಾಯ್ತು. ಹಾಗಲ್ಲ, ಪದ್ಮಾವತಿಯ ಜೊತೆ ಶ್ರೀನಿವಾಸನ ಮದುವೆ ಧಾಮ್ ಧೂಮೆಂದು ನಡೆದು ಕುಬೇರನ ಸಾಲ ಹಾಗೇ ಉಳಿದಿದೆ. ಅದಕ್ಕೆ ಮಂದಿಯೆಲ್ಲ ದುಡ್ಡು ಸುರಿದು ಶ್ರೀನಿವಾಸನನ್ನು ಮುಕ್ತನನ್ನಾಗಿ ಮಾಡಬೇಕು ಎಂದು ಯಾರೋ ಪುರಾಣ ಹೊಡೆದ ನೆನಪು. ಸಾಲ ಮಾಡಿಯಾದರೂ ಧಾಮ್ ಧೂಮ್ ಮದುವೆ ಮಾಡುವ ಕೆಟ್ಟ ಸಂಪ್ರದಾಯವನ್ನು ಹುಟ್ಟು ಹಾಕಿದ್ದು ತಿಮ್ಮಪ್ಪನಲ್ಲ. ಅವನ ಭಕ್ತರೇ. ಮಂದಿಯನ್ನು ಸಾಲದಲ್ಲಿ ಸಿಕ್ಕಿಸುವ ಸಂಚು!
ತಾವು ಭಕ್ತರೆಲ್ಲ ಸೇರಿ ಶ್ರೀನಿವಾಸನನ್ನು ಬಚಾವು ಮಾಡಬೇಕು ಎನ್ನುವ ದುರಹಂಕಾರ ನಮ್ಮಂತ ಮಂದಿಗೆ! ಎದೆಯೊಳಗಿರುವ ಭಗವಂತನನ್ನು ಹೊರಕ್ಕೆ ಬೀದಿಗೆ ದಬ್ಬಿ, ಅಯ್ಯೋ ಆತನಿಗೆ ನಿಲ್ಲಲು ನೆಲೆಯಿಲ್ಲ, ತಾವೊಂದು ಮಂದಿರವನ್ನು ಕಟ್ಟಿ ಆಶ್ರಯವನ್ನು ನೀಡಿ ಕೃತಾರ್ಥರಾಗಬೇಕು ಎಂಬ ದಾರ್ಷ್ಟ್ಯ!
ಹಿಂದೆ ಕೂತವರಿಗೆ ಕ್ಯಾರೆ ಎನ್ನದೆ ಗುರುವಿನೆದುರು ನಿಮಿಷಗಟ್ಟಲೆ ನಿಲ್ಲುವ ಕೂರುವ ಮಂದಿಯ ಪಾಡು ಸಹ ಇದೇ ಅಂತನ್ನಿಸುತ್ತೆ. ಕಣ್ಣೊಳಗೆ, ಏಕಾಂತದಲ್ಲಿ ಮತ್ತು ಎದೆಯಾಳದಲ್ಲಿ ನಾವು ಮೂಡಿಸಿಕೊಳ್ಳದಿರುವ ಗುರುವು ಬಹಿರಂಗದಲ್ಲಿ ಮುಷ್ಕರ ಕೂತಂತೆ ಎದುರು ಕೂತರೆ ಮೂಡುವನೇ?
ಹೀಗೇ ಏನೇನೋ ಯೋಚಿಸುತ್ತಾ ಮನೆಗೆ ಮರಳುವ ಮುನ್ನ ಅಲ್ಲಿರುವ ಗುರುವನ್ನು ಮನಸ್ಸಿನಲ್ಲಿ ತುಂಬಿಕೊಳ್ಳಲು ಕಣ್ಬಿಟ್ಟು ನೋಡಿದರೆ ಅಲ್ಲಿ ಎದುರಿಗೆ ಗೂಟ ಹೊಡೆದಂತೆ ಕೂತಿದ್ದಾಕೆಯ ಹಿಂಭಾಗವೇ ಕಾಣಿಸಿ, ಬೆಳಗಿನ ಕಾಲದಲ್ಲಿ ಬಂದರೂ ಇದೇನು ಕರ್ಮವೋ ಅಂತನ್ನಿಸಿ ತೆಪ್ಪಗೆ ಎದ್ದು ಬಂದೆ.
ನಾವು ಯಾವುದರ ಹಂಗೂ ಇಲ್ಲದ ಮಹಾಮುಕ್ತರು! road manners? mobile manners? ಹೋಗಲಿ, ಕೊನೆಗೆ temple manners?
*****
ಗಿರೀಶ್ ಕಾಸರವಳ್ಳಿಯವರ ಅದ್ಭುತ ಚಿತ್ರ ‘ಘಟಶ್ರಾದ್ಧ’. ಅದು ಅವರು ತಮ್ಮ ಕೇವಲ ಇಪ್ಪತ್ತೇಳನೆಯ ವಯಸ್ಸಿನಲ್ಲಿ ಮಾಡಿದ ಚಿತ್ರ. ಸ್ವರ್ಣಕಮಲವನ್ನು ಗೆದ್ದುಕೊಂಡ ಚಿತ್ರ. ಜಾಗತಿಕ ಸಿನಿಮಾದಲ್ಲಿ ಇಂದಿಗೂ ನೂರು ಅತ್ಯುತ್ತಮ ಚಿತ್ರಗಳಲ್ಲಿ ಒಂದಾದ ದೃಶ್ಯಕಾವ್ಯ!
‘ಘಟಶ್ರಾದ್ಧ’ ದಲ್ಲಿ ಶಾಸ್ತ್ರಿ ಎಂಬ ಗುರುಕುಲದಲ್ಲಿ ಕಲಿಯುತ್ತಿರುವ ಒಬ್ಬ ಹುಡುಗ ಒಮ್ಮೆ ಸಹಪಾಠಿಗಳೊಂದಿಗೆ ಮರದ ಮೇಲೆ ಕೂತು ಹರಟೆ ಹೊಡೆಯುತ್ತಿದ್ದಾಗ ಹೇಳುತ್ತಾನೆ: ‘ಥೂ! ಎಂಥ ದರಿದ್ರ ಊರಪ್ಪ ಇದು! ಅದೇ ಪಾಠ, ಅದೇ ಮಂತ್ರ, ಅದೇ ಗಂಜಿ ಊಟ, ಅದೇ ಬೋಡಮ್ಮಗಳ ಸಹವಾಸ! ದೇವಸ್ಥಾನದ ಬದಿಗೆ ಹೂ ಗಂಧದ ಗುಪ್ಪೆ ನಾರುತ್ತಲ್ಲಾ, ಹಂಗೆ!’
ನನಗೆ ಪ್ರಾಮಾಣಿಕವಾಗಿ ಅನ್ನಿಸುವುದು ಭಕ್ತಿ ಮತ್ತು ಭಯೋತ್ಪಾದನೆಗಳು ಒಟ್ಟೊಟ್ಟಿಗೆ ಹೋಗುತ್ತವೆ ಅಂತ. ರಾಜಕೀಯವಾಗಿ ಅದು ಶತಸ್ಸಿದ್ಧವೇ. ಭಕ್ತಿಯ ನೆಪದಲ್ಲಿ ಹರಿಸುವ ರಕ್ತಪಾತ ಸ್ವಲ್ಪ ಮಟ್ಟಿಗಷ್ಟೇ ಇತಿಹಾಸವನ್ನು ಬಲ್ಲ ಕೆಲವರಿಗಾದರೂ ಅರ್ಥವಾಗುತ್ತದೆ. ಭಕ್ತಿಯ ನೆಪದಲ್ಲಿ ಮಾಡುವ ಸೇವೆ ಗೀಳಾಗಬಾರದು. ಮೊದಲು ಕೇವಲ ಭಕ್ತರಾಗಿರುವವರು ಕ್ರಮೇಣ ಹೆಗ್ಗಣಗಳಾಗುತ್ತಾರೆ. ನಂತರ ಯಾವ ಎಗ್ಗೂ ಇಲ್ಲದೆ ಭಯೋತ್ಪಾದಕರಾಗುತ್ತಾರೆ.

ಭಕ್ತರಿಗೆ ಭಕ್ತಿಯೂ ಒಂದು ಮಾಯೆ, ಸನ್ಯಾಸಿಗಳಿಗೆ ಕಾವಿಯೂ ಒಂದು ಮಾಯೆ ಎಂಬ ಎಚ್ಚರ ಸ್ವಲ್ಪವಾದರೂ ಇಲ್ಲದಿದ್ದರೆ ಹೊರ-ಒಳಗಿನ ವ್ಯತ್ಯಾಸಗಳೇ ಅಳಿಸಿ ಹೋಗುತ್ತವೆ. ದೇವಸ್ಥಾನದ ಬದಿಯಲ್ಲಿ ಇರುವ ಹೂ-ಗಂಧದ ಗುಪ್ಪೆ ನಾರಹತ್ತುತ್ತದೆ!


