ಅದೆಷ್ಟೋ ವರ್ಷಗಳ ನಂತರ ತನ್ನ ವರದಿಯನ್ನು ಈ ಸಮಿತಿ ಅಂದಿನ ಅಧಿಕಾರಸ್ತ ಪ್ರಭುಗಳಿಗೆ ಸಲ್ಲಿಸಿತು. ಕೊನೆಗೂ FFC ವರದಿ ಸರ್ಕಾರಕ್ಕೆ ಸಲ್ಲಿಕೆಯಾದರೂ ಅದನ್ನು ಓದಲು ಟಿಪ್ಪಣಿ ಮಾಡಲು ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ಕಾರಣ ವರದಿ ಐದುನೂರಾ ಅರವತ್ತ ಮೂರು ಕೇಜಿ ಭಾರ ಇದ್ದು ಅದನ್ನು ಮೂರು ಟ್ರಕ್ನಲ್ಲಿ ಸಾಗಿಸಲಾಗಿತ್ತು. ಈ ಸಮಿತಿಗೆ ಖರ್ಚು ಮಾಡಲಾದ ಹಣ ಸರ್ಕಾರಕ್ಕೆ ಲೆಕ್ಕ ಇರಲಿಲ್ಲ ಮತ್ತು ಟೀಕಾಕಾರರು ಮಾತು ಆಡದಿರಲು ಸರ್ಕಾರ ಅದೇ ಸಮಿತಿಗೆ ವರದಿಯನ್ನು ಎರಡು ಪುಟದಲ್ಲಿ ಕೊಡುವಂತೆ ಆದೇಶಿಸಿತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೯೬ನೇ ಬರಹ ನಿಮ್ಮ ಓದಿಗೆ
ಹಿಂದಿನ ಕಂತಿಗೆ ಹೀಗೆ ಮಂಗಳ ಹಾಡಿದ್ದೆ.
ಪ್ರತಿ 1000 ಮತ್ತು 10000ನೇ ಮಹಡಿಯಲ್ಲಿ ಒಂದು ಮ್ಯೂಸಿಯಂ ಇದೆ. ಅದರಲ್ಲಿ ಇಂದಿನ ತರಕಾರಿಗಳಾದ ಟೊಮೆಟೊ, ಬದನೆಕಾಯಿ, ಹೀರೆಕಾಯಿ, ಬೀನ್ಸ್ನ ಬೃಹತ್ ಚಿತ್ರ ಮತ್ತು ವಿವರಣೆ ಇದೆ. ಸುರಂಗದ ಮಕ್ಕಳಿಗೆ ಇದು ಅಳಿದುಹೋದ ಪ್ರಭೇದ. ಅಲ್ಲಿನ ವಾಯ್ಸ್ ಮೆಸೇಜಲ್ಲಿ ಒಬ್ಬ ಹೇಳುತ್ತಾನೆ – ಒಂದು ಕಾಲದಲ್ಲಿ KR Market ನಲ್ಲಿ ಈ ತರಕಾರಿ ರಾಶಿ ಇತ್ತು ಅಂತ.
ನಮ್ಮ ದೇವರು ದೇವಸ್ಥಾನ ಋಷಿಗಳು ದೇವರು ದಿಂಡರು…. ಇವರುಗಳ ಬಗ್ಗೆ ಹೇಳಬೇಕು ಅಂದರೆ ದೇವಸ್ಥಾನಗಳು ಇರುವುದಿಲ್ಲ. ಬದಲಿಗೆ ಕಮ್ಯುನಿಟಿ ಪ್ರೇಯರ್ ಹಾಲ್ ಅಂತ ಇರ್ತವೆ. ಅಲ್ಲಿ ಸರ್ಕಾರದಿಂದ ನೇಮಿತವಾದ ಒಬ್ಬರು ಪುರುಷ ಒಬ್ಬರು ಮಹಿಳೆ ಇರ್ತಾರೆ. ಪ್ರತಿ ಹತ್ತು ನಿಮಿಷಕ್ಕೆ ರೆಕಾರ್ಡೆಡ್ ಪ್ರೇಯರ್ಗಳನ್ನು ಹಾಕುತ್ತಾರೆ. ಒಂದು ಸಿಟಿಂಗ್ ಗೆ ಇಷ್ಟು ದುಡ್ಡು ಅಂತ ಕೊಟ್ಟು ಇಂತಹ ಕಡೆ ಹೋಗಬಹುದು. ಇಂತಹ ಕಡೆ ಬಂದರೆ ಶಾಂತಿ ಸಮಾಧಾನ ಸಿಗುತ್ತೆ ಅಂತ ಸರ್ಕಾರ ಚೆನ್ನಾಗಿ ಪ್ರಚಾರ ಮಾಡುತ್ತೆ. ಭಗ್ನ ಹೃದಯಿಗಳು ಇಂತಹ ಕಡೆ ಹೇರಳವಾಗಿ ಕಾಣುತ್ತಾರೆ!
ಪೇಲು ಮುಖ, ಮೈಯ ತುಂಬಾ ದುಃಖ ತೇಲುತ್ತಿರುವ ಕಣ್ಣುಗಳು… ಯಾರಿಗೇ ಆದರೂ ಅಯ್ಯೋ ಅನಿಸುತ್ತದೆ.
ದೇವರ ಪ್ರತಿಮೆಗಳನ್ನು ಒಂದು ನೂರು ಸಾವಿರ ಅಂತಸ್ತುಗಳ ಕಟ್ಟಡದ ದೊಡ್ಡ ಹಾಲ್ನಲ್ಲಿ ಇರಿಸಿರುತ್ತಾರೆ. ಅವುಗಳನ್ನು ನೋಡಲು ಒಂದು ದರ ಇರುತ್ತೆ. ಅದನ್ನು ತೆತ್ತು ಒಳಹೋಗಬಹುದು. ದೇವರುಗಳನ್ನು ಸಾಲಾಗಿ ಜೋಡಿಸಿರುತ್ತಾರೆ. ಒಂದು ಸಾಲಿನಲ್ಲಿ ಪುರುಷ ದೇವರು, ಎದುರು ಸಾಲಿನಲ್ಲಿ ಮಹಿಳಾ ದೇವರು ಮತ್ತು ಮಧ್ಯದ ಸಾಲಿನಲ್ಲಿ ಶಿಶು ದೇವರುಗಳ ಪ್ರತಿಮೆ ಜೋಡಿಸಿ ಇಟ್ಟಿರುತ್ತಾರೆ. ಪ್ರತಿ ದೇವರಮುಂದೆ ಒಂದು kiosk ಇದ್ದು ಅದರೊಳಗೆ ನೀವು ಕಾಸು ಹಾಕಿದರೆ ದೇವರ ಬಗ್ಗೆ ವಿವರ ರೆಕಾರ್ಡೆಡ್ ಧ್ವನಿ ಕೇಳುತ್ತದೆ. ದೇವರಿಗೆ ಹರಕೆ ಹೊರಬಹುದು ಮತ್ತು ಇದಕ್ಕೆ ವಿಶೇಷ ನಿಗದಿತ ಶುಲ್ಕ. ಬರುವ ಭಕ್ತರು ಹರಕೆ ಹೊರಲು ಬರುತ್ತಾರೆ ಮತ್ತು ಸರ್ಕಾರಕ್ಕೆ ಇದು ಆದಾಯದ ಎರಡನೇ ದೊಡ್ಡ ಮೂಲ!
ಹಳೇ ಬೆಂಗಳೂರು ಕಥೆ ಸಂಗಡ ಮುಂದಿನ ಸಹಸ್ರಮಾನದ ಬೆಂಗಳೂರಿನ ಬಗ್ಗೆ ತುಸು ವಿವರಣೆ ಕೊಟ್ಟಿದ್ದೇನೆ. ಇದರ ಮುಂದುವರೆದ ಕಂತುಗಳು ಮತ್ತು ಪ್ರಸ್ತುತ ಬೆಂಗಳೂರಿನ ದಂಗು ಬಡೆಯುವ ಸಂಗತಿಗಳು ನಿಮ್ಮೆದುರು ಬರ್ತದೆ. ಕತೆಯ ಕೊನೆ ಕೊನೆಗೆ ದಾಪುಗಾಲು ಹಾಕುತ್ತಿದ್ದೇನೆ…!
ಇನ್ನುಮುಂದೆ ಓಡೋಣ. ಓಡುವ ಮೊದಲು ಒಂದು ವಿಷಯ ನಮ್ಮ ಮುಂದಿನ ಪೀಳಿಗೆಯ ಮಕ್ಕಳಿಗೆ. ಈ ಕಂತಿನ ಆರಂಭದಲ್ಲಿ ಬಂದ ಒಂದು ವಾಕ್ಯ ಗಮನಿಸಿ.
ಹಿಂದಿನ ಕಂತಿಗೆ ಹೀಗೆ ಮಂಗಳ ಹಾಡಿದ್ದೆ….. ಅಂತ ಬಂತು ತಾನೇ? ಅರ್ಥ ಆಗಿಲ್ಲ ಅಂದರೆ ಅದನ್ನು ಅರ್ಥ ಮಾಡಿಸಿ ಬಿಡುತ್ತೇನೆ. ಧಾರ್ಮಿಕ ಕ್ರಿಯೆ, ಸಂಗೀತ ಕಚೇರಿ ಇತ್ಯಾದಿಗಳಲ್ಲಿ ಕಾರ್ಯಕ್ರಮ ದ ಅಂಚಿಗೆ ಬಂದಾಗ ಮಂಗಳ ಹಾಡುವುದು ಮಾಡುತ್ತಾರೆ. ಸಂಗೀತ ಹೇಳುವವರು ಮಂಗಳ ಹಾಡಲು ಎಂದೇ ಕೆಲವು ಕೃತಿಗಳನ್ನು ಜೋಪಾನವಾಗಿ ಕಾದು ಇರಿಸಿಕೊಂಡಿರುತ್ತಾರೆ. ಪೂಜೆ ಮಾಡುವವರು ಒಂದು ಮಂತ್ರ ಇಟ್ಟುಕೊಂಡಿರುತ್ತಾರೆ. ಕಾಯೇನ ವಾಚಾ…. ಅಂತ ಶುರು ಆಗುತ್ತೆ. ಮಂತ್ರ ಹೀಗಿದೆ
*ಕಾಯೇನ ವಾಚಾ ಮನಸೇಂದ್ರಿಯೈರ್ವಾ*
*ಬುದ್ಧ್ಯಾತ್ಮನಾ ವಾ ಪ್ರಕೃತೇಃ ಸ್ವಭಾವಾತ್ |*
*ಕರೋಮಿ ಯದ್ಯತ್ ಸಕಲಂ ಪರಸ್ಮೈ*
*ನಾರಾಯಣಾಯೇತಿ ಸಮರ್ಪಯಾಮಿ ||*
ಇದನ್ನು ದೇವರ ಪೂಜೆ ಕೊನೆಯಲ್ಲಿ ಹೇಳುತ್ತಾರೆ.
ದೇಹದಿಂದ, ಮಾತಿನಿಂದ, ಮನಸ್ಸಿನಿಂದ, ಇಂದ್ರಿಯಗಳಿಂದ, ಬುದ್ಧಿಯಿಂದ, ಆತ್ಮದಿಂದ, ಅಥವಾ ಪ್ರಕೃತಿಯ ಸ್ವಭಾವದಿಂದ ನಾನು ಏನೆಲ್ಲಾ ಮಾಡುತ್ತೇನೋ, ಅದನ್ನೆಲ್ಲಾ ಪರಮಾತ್ಮನಾದ ನಾರಾಯಣನಿಗೆ ಸಮರ್ಪಿಸುತ್ತೇನೆ.

ಹಾಗೆ ನೋಡಿದರೆ ನನಗೆ ಈ ಮಂತ್ರ ಪೂರ್ತಿ ಬಾಯಿಗೆ ಬರುಲ್ಲ. ಯಾಕೆ ಅಂದರೆ ಅದನ್ನು ನಾನು ಕಲಿತಿಲ್ಲ, sanskrit ಇಲ್ರಿ ಬರಾಕಿಲ್ಲ. ಜತೆಗೆ ಇದನ್ನು ಕಲಿಯುವ ಆಸಕ್ತಿ ಸಹ ಹುಟ್ಟಲಿಲ್ಲ. ನಮ್ಮಲ್ಲಿ ಎಷ್ಟೋ ಜನಕ್ಕೆ ವಂದೇಮಾತರಂ ಹಾಡು ಬರೋದಿಲ್ಲವಲ್ಲ, ಇದೂ ಸಹ ಹಾಗೇ. ಇದೇ ತರಹ ನನಗೆ ಹನುಮಾನ್ ಚಾಲೀಸಾ ಬರೋಲ್ಲ. ಮೊನ್ನೆ ಸ್ಮಿತ್ ಮಚ್ಚಾಕರ್ ಎನ್ನುವ ಪೈಲಟ್ ನೂರಾ ಎಂಬತ್ತು ಜನ ಪ್ರಯಾಣಿಕರನ್ನ ಉಳಿಸಿದ ನೋಡಿ; ಆಗ ಅವನು ಹನುಮಾನ್ ಚಾಲೀಸಾ ಹೇಳಿಕೊಂಡ ಎಂದು ಸುದ್ದಿ. ಆಗಲೇ ನನಗೂ ಅನಿಸಿದ್ದು, ಹನುಮಾನ್ ಚಾಲೀಸಾ ನಾನೂ ಕಲಿಯಬೇಕಿತ್ತು ಅಂತ. ಯು ಟ್ಯೂಬ್ ಹುಡುಕಿ ಅದರ ವಿಡಿಯೋ ಹಾಕಿ ಒಂದೆರೆಡು ಸಾಲು ಕೇಳಿ ಬೈ ಹಾರ್ಟ್ ಮಾಡುತ್ತಿದ್ದೆ. ಯಾರೋ ಅಳುತ್ತಿದ್ದಾರೆ ಅಂದುಕೊಂಡು ನನ್ನಾಕೆ ಒಳಗಡೆಯಿಂದ ಬಂದಳು. ನನ್ನನ್ನ ನೋಡಿದಳು. “ಯಾರೋ ಅಳ್ತಿದಾರೆ ಅಂತ ಬಿಟ್ಟ ಕೆಲಸ ಬಿಟ್ಟುಬಂದರೆ ಏನಿದು ನಿಮ್ಮ ಅವತಾರ? “ಅಂತ ರೇಗಿತು, ಅದು.
“ಹನುಮಾನ್ ಚಾಲೀಸಾ ಕಲೀತಾ ಇದೀನಿ..” ಅಂದೆ.
“ಅದ್ಯಾಕೆ ಇವಾಗ” ಅಂತ ಅದು ಕೇಳಿತು.
ನೂರಾಎಂಬತ್ತು ಜನ ಪ್ರಯಾಣಿಕರ ಪ್ರಾಣ ಕಾಪಾಡಿದ ಪೈಲಟ್ ಮಚ್ಚಾಕರ್ ಕಥೆ ನೆನಪಿಸಿದೆ. “ಈಗ ಕಲಿತರೆ ಮುಂದೆ ಯಾವಾಗಲಾದರೂ ಏರೋ ಪ್ಲೇನ್ ಪ್ರಯಾಣಿಕರ ಪ್ರಾಣ ಉಳಿಸಬಹುದು” ಅಂದೆ.
ಅದು ತಲೆ ಚಚ್ಚಿಕೋಳ್ತು. “ಎಷ್ಟು ನಿಮ್ಮ ಏಜು?”
“ನವಂಬರ್ ಬಂದರೆ…..” ಅಂತ ಲೆಕ್ಕ ಹಾಕಲು ಶುರು ಮಾಡಿದೆ.
“ನನಗೆ ಒಳಗೆ ತಲೆ ಹೋಗೋಷ್ಟು ಕೆಲಸ ಇದೆ. ನಿನ್ನ ಹತ್ತಿರ ಚಕ್ಕಂದ ಹೊಡೆಯೋಕೆ ನನಗೆ ಟೈಮ್ ಇಲ್ಲ. ಬೇಕಿದ್ದರೆ ಹೋಗಿ ಪಾರ್ಕ್ನಲ್ಲಿ ಕೂತ್ಕೊಂಡು ಅಳು…” ಅಂದಿತು. ಅಳು ಅಂದರೆ ಹನುಮಾನ್ ಚಾಲೀಸಾ ಅಭ್ಯಾಸ ಮಾಡು ಅಂತ ಪ್ರಸಕ್ತ ಸನ್ನಿವೇಶದಲ್ಲಿ ಯಾವ ಮುಠ್ಠಾಳನಿಗಾದರೂ ಹೊಳೆಯುತ್ತೆ. ನನಗೆ ಹೊಳೆಯುಲ್ಲವೇ?
ಒಳಗಡೆ ಹೋಗ್ತಾ ಈ ವಯಸ್ಸಲ್ಲಿ ಇದಕ್ಕೆ ಪ್ಲೇನ್ ಓಡಿಸುವ ಕೆಲಸ ಯಾವ ಹುಚ್ಚ ಕೊಡ್ತಾನೋ…. ಅಂತ ಸ್ವಗತ ಮಾಡಿಕೊಂಡಿತು! ಆಗಲೇ ನನಗೆ ಅನಿಸಿದ್ದು ಒಂದು, ನನಗೆ ವಯಸ್ಸಾಗಿರೋ ಮುದುಕನಿಗೆ ಕೆಲಸ ಯಾರೂ ಕೊಡಲ್ಲ ಮತ್ತು ಎರಡು ಹನುಮಾನ್ ಚಾಲೀಸಾ ಕಲಿತರೂ ಇಂಥ ಕೆಲಸಕ್ಕೆ ನನ್ನಿಂದ ಖಂಡಿತ ಅಂದರೆ ಕಡಾ ಖಂಡಿತ ಯಾವುದೂ ನೆರವಾಗದು ಅಂತ. ಆದರೂ ಹನುಮಾನ್ ಚಾಲೀಸಾ ಡೌನ್ ಲೋಡ್ ಮಾಡಿ ಇಟ್ಟುಕೊಂಡೀನಿ, ಮುಂದೆ ಕಲಿಯಲು. ಅದೇ ರೀತಿ ಲಲಿತಾ ಸಹಸ್ರನಾಮ, ವಿಷ್ಣು ಸಹಸ್ರನಾಮ ಕೂಡ ನನ್ನ ಸಂಗ್ರಹದಲ್ಲಿ ಈಚೆಗೆ ಸೇರಿವೆ. ಮುಂದೆ ಯಾರೋ ಇವೆರೆಡು ಮಂತ್ರ ಹೇಳಿಕೊಂಡು ಸಾವಿರಾರು ಜನರ ಪ್ರಾಣ ಉಳಿಸಿದ ಅಂದರೆ ಆಗ ಇವುಗಳನ್ನು ಹುಡುಕುವ ಕೆಲಸ ತಪ್ಪುತ್ತದೆ ನೋಡಿ, ಇದು ನನ್ನ vision ಅಂದರೆ ಮುಂದಾಲೋಚನೆ! ಅಕಸ್ಮಾತ್ ನನಗೆ ಬ್ರಹ್ಮದೇವರು ತೊಂಬತ್ತರವರೆಗೆ ಉಸಿರು ಉಳಿಸಿ ನಾನು ಇನ್ನೂ ಜೀವಂತ ಇದ್ದರೆ ಇವನ್ನೆಲ್ಲಾ ಕಲಿತು ಅಲ್ಲಿಯವರೆಗೆ ಹೇಳಿ ಕೊಳ್ಳುತ್ತಾ ಇರಬೇಕು ಇದು ನನ್ನ ಮುಂದಿನ ಎರಡನೇ ಅಥವಾ ದಶ ವಾರ್ಷಿಕ ಪಂಚವಾರ್ಷಿಕ ಪ್ಲಾನು! ಹಾಗೆ ನೋಡಿದರೆ ನನಗೆ ಯಾವ ಪೂಜಾಮಂತ್ರವೂ ಗೊತ್ತಿಲ್ಲ. ಗಣೇಶನ ಮುಂದೆ ನಿಂತರೆ ಪಿಳ್ಳಂ ಗೋವಿಯ ಚೆಲುವ ಕೃಷ್ಣನ ಹಾಡು ನೆನಪಿಗೆ ಬರುತ್ತೆ. ಅದರಲ್ಲೂ ಸುಂದರಿಯರ ಹಿಂದು ಮುಂದಿನಲಿ… ಅಂತ ಇದೆಯಲ್ಲಾ ಅದು!
ದೇವರಿಂದ ಸುಮಾರು ಯೋಜನೆಗಳಷ್ಟು ಅಂತರ ಸುಮಾರು ಶತಮಾನಗಳಿಂದ ಕಾಪಾಡಿಕೊಂಡಿರುವ ನನಗೆ ಈ ಕಾಯೇನ ವಾಚಾ… ಮಂತ್ರ ಅದು ಹೇಗೆ ತಲೆಯಲ್ಲಿ ಉಳಿದುಕೊಂಡಿದೆ ಅಂದರೆ ಪೂಜೆ ಮುಗಿದ ನಂತರ ಊಟ ಹಾಕುತ್ತಾರೆ ತಾನೇ? ನಾನು ಊಟಕ್ಕೆ ಅಂತ ಹಸಿದುಕೊಂಡು ಹಿರೇಕಾಯಿ ಬೋಂಡದ ಕರಿಯುವ ಘಮ ಘಮ ಆಸ್ವಾದಿಸುತ್ತಾ ಊಟಕ್ಕೆ ಕಾಯುತ್ತಾ ನಿಂತಿರುತ್ತೇನೆ ತಾನೇ? ಹೀಗೆ ಕಾಯುತ್ತಾ ನಿಂತಾಗ ನಿಮ್ಮ ತಲೆಯಲ್ಲಿ ಏನು ಯೋಚನೆ ಬರುತ್ತೋ ನನಗೆ ಗೊತ್ತಿಲ್ಲ. ನನ್ನ ತಲೆಯಲ್ಲಿ ಈ ಪೂಜೆ ಇನ್ನೂ ಎಷ್ಟು ಹೊತ್ತು ನಡೆಯುತ್ತೆ ಎನ್ನುವ ಯಕ್ಷ ಪ್ರಶ್ನೆಗೆ ಉತ್ತರ ಹುಡುಕುತ್ತಾ ಇರುತ್ತೆ ಮತ್ತು ಮಂತ್ರಗಳು ಕಿವಿಗೆ ಸಮುದ್ರದ ಅಲೆಗಳ ಮಾದರಿ ಅಪ್ಪಳಿಸುತ್ತಾ ಇರುತ್ತದೆ. ಅದೇ ವೇಳೆಗೆ ಊಟದಲ್ಲಿ ಏನೇನು ಇರುತ್ತೆ ಎಂದು ಥಿಂಕ್ ಟ್ಯಾಂಕ್ ಕೆಲಸ ಶುರು ಮಾಡಿರುತ್ತೆ.
ಅಭ್ಯಾಸ ಬಲ ನೋಡಿ ಈ ಮಂತ್ರದ ಆರಂಭ ಕಿವಿಗೆ ಬಿದ್ದ ಕೂಡಲೇ ದೇಹದಲ್ಲಿ ಚೈತನ್ಯ ಪುಟಿದು ಏಳುತ್ತದೆ ಮತ್ತು ಊಟದ ಹಜಾರಕ್ಕೆ ಎಳೆದೊಯುತ್ತದೆ, ಊಟ ಹಾಕುವ ಹಾಕಿದ್ದರೆ. ಪ್ರಸಾದ ಕೊಡುವ ಹಾಗಿದ್ದರೆ ಕ್ಯೂ ನ ಮೊದಲ ಹತ್ತರಲ್ಲಿ ನಾನು ಪ್ರತ್ಯಕ್ಷ! ಸುಮಾರು ಸಾವಿರ ಸಾವಿರ ಸಮಾರಂಭಗಳಿಗೆ ಹೋಗಿರುವುದರಿಂದ ನನಗೆ ಇದರ ಅನುಭವ ಯಾರಿಗಾದರೂ ಚಾಲೆಂಜ್ ಮಾಡುವ ಹಾಗೆ ಬೆಳೆದಿದೆ.
ಇನ್ನು ಸಂಗೀತ ಕಚೇರಿ ಮಂಗಳಗಳು ಅಂದರೆ ಅದು ಒಂದೇ ಅಂತ ಇಲ್ಲ. ಸಾವಿರಾರು ಮಂಗಳದ ಹಾಡುಗಳಿವೆ. ಅದರ ಪರಿಚಯ ನನಗಿಲ್ಲ, ಯಾಕೆ ಅಂದರೆ ನನಗೂ ಸಂಗೀತಕ್ಕೂ ಕತ್ತೆಗೂ ಸುಗಂಧರಾಜಾ ಹೂವಿಗೂ ಅಥವಾ ಕತ್ತೆಗೂ ಕೊಳಲಿಗೂ ಇರಬಹುದಾದ ಸಂಬಂಧ ಅಷ್ಟೇ. ತೀರಾ ಈಚೆಗೆ ನಮ್ಮೂರಲ್ಲಿ ಒಂದು ಸಂಗೀತ ಸಭೆ ಶುರು ಆಗಿದೆ. ಸಂಗೀತ ಕಚೇರಿಗಳಲ್ಲಿ ಕಾರ್ಯಕ್ರಮದ ಇನ್ವಿಟೇಶನ್ ಪ್ರತಿ ದಿವಸ ಬರುತ್ತೆ. ಅದರಲ್ಲಿ ಅವರು ಕಚೇರಿ ನಂತರ ಭೋಜನ ಉಂಟು ಅಂತ ದೊಡ್ಡದಾಗಿ ಪ್ರಿಂಟ್ ಹಾಕಿಸಿರುತ್ತಾರೆ! ಇನ್ನೂ ಅಂತಹ ಕಚೇರಿಗೆ ಅಟೆಂಡೆನ್ಸ್ ಹಾಕಿಲ್ಲ, ನಾನು. ಯಾಕಪ್ಪ ಅಂದರೆ ಇದು ಗುಟ್ಟು ನಿಮ್ಮಲ್ಲೇ ಇರಲಿ, ಚಂದಾ ಕಾಸು ಜ್ಯಾಸ್ತಿ!
ಮಂಗಳದ ಕಥೆ ಹೇಳುತ್ತಿದ್ದೆ ತಾನೇ? ಓದಿಗೆ ಗೋವಿಂದಾ ಅಂದಾಗ ಮಂಗಳ ಹಾಡಿದ ಅನ್ನುತ್ತಾರೆ. ಹಾಗೆ ಹುಡುಗಿಗೆ ಹುಡುಗನಿಗೆ ಸಂಗಾತಿ ಸಿಕ್ಕಾಗ ಹುಡುಕಾಟಕ್ಕೆ ಮಂಗಳ ಹಾಡಿ ಆಯ್ತು ಎಂದು ಖುಷಿ ಪಡುವ ಬಂಧುಗಳನ್ನು ನೋಡಿದ್ದೇನೆ. ಈಗ ಇದು ಹಾಗಿರಲಿ. ಫ್ಯೂಚರ್ ಬೆಂಗಳೂರು ಬಗ್ಗೆ ರೈಲು ಹತ್ತಿದ್ದೆ. ಅದನ್ನು ಮುಂದುವರೆಸಬೇಕು. ಅದಕ್ಕೆ ಬಂದೇ…
ಜ್ಞಾನಪೀಠ, ಅಕಾಡೆಮಿ ಪ್ರಶಸ್ತಿ.. ಈ ರೀತಿ ಸಾವಿರಾರು ಪ್ರಶಸ್ತಿಗಳು ಈಗ ಇದೆಯಲ್ಲಾ ಅವು ನಿಧಾನಕ್ಕೆ ನಶಿಸಿ ಹೋಗುತ್ತವೆ. ಹಂತ ಹಂತವಾಗಿ ಅವು ಹೇಗೆ ಕಣ್ಮರೆ ಆದವು ಎಂದು ಒಬ್ಬ ಆಗಿನ ಹಿಸ್ಟರಿಯನ್ ಮೂಲಕ ತಿಳಿಯೋಣ… ಆತ ದಾಖಲಿಸಿರುವ ಹಾಗೆಯೇ ಇಲ್ಲಿ ಬರೆದಿದ್ದೇನೆ.
ಸನ್ 2000ದ ಸುಮಾರಿಗೆ ಆಗಿನ ಬುದ್ಧಿವಂತ ಜನರು ಸೇರಿಕೊಂಡು ಉತ್ತಮ ಸಾಹಿತ್ಯ ಸಿನೆಮಾ ಮೊದಲಾದವುಗಳಿಗೆ ಬಹುಮಾನ ಕೊಡುವ ವ್ಯವಸ್ಥೆ ಮಾಡಿಕೊಂಡಿದ್ದರು. ಸಾಹಿತ್ಯ ಎಂದರೆ ಜನರ, ಸಮಾಜದ ಆಗುಹೋಗುಗಳನ್ನು ವಿವರಿಸುವ ರೀತಿ. ಇದು ಹಲವಾರು ವಿವಿಧ ಸ್ವರೂಪ ಪಡೆದಿತ್ತು.

ಸಿನಿಮಾ ಎಂದರೆ ಹತ್ತಾರು ಸಾವಿರ ಅಡಿಗಳಷ್ಟು ಫಿಲಂ ಮೂಲಕ ಜನಜೀವನವನ್ನು ದಾಖಲಿಸುವ ವ್ಯವಸ್ಥೆ ಆಗಿದ್ದು ಪ್ರತಿವರ್ಷವೂ ಇದರಲ್ಲಿ ಒಳ್ಳೆಯದನ್ನು ಸಿನಿಮಾ ಮಾಡಿದವರಿಗೆ ಪ್ರಶಸ್ತಿ ಪುರಸ್ಕಾರ ಇತ್ಯಾದಿಗಳು ಸಿಗುತ್ತಿತ್ತು. ಸಿನಿಮಾಗಳಲ್ಲಿ ಪಾತ್ರ ವಹಿಸಲು ಆಗಿನ ಪ್ರಜೆಗಳು ಒದ್ದಾಡುತ್ತಿದ್ದರು ಮತ್ತು ಇಂತಹ ಆಸಕ್ತರಿಗೆ ವೇದಿಕೆಯನ್ನು ಒದಗಿಸುತ್ತಿದ್ದರು. ವೇದಿಕೆ ಒದಗಿಸಿದವರು ಬಡಪಾಯಿಗಳನ್ನು ಆರ್ಥಿಕವಾಗಿ, ಲೈಂಗಿಕವಾಗಿ ಮತ್ತು ಇನ್ನೂ ಬೇರೆ ಬೇರೆ ರೀತಿಯಲ್ಲಿ exploit ಮಾಡುತ್ತಿದ್ದರು. ಇದು ಆಗಾಗ್ಗೆ ಸುದ್ದಿ ಮಾಡುತ್ತಿತ್ತು. ಆದರೂ ಚಲನಚಿತ್ರ ಅಂದರೆ ಸಿನಿಮಾ ಹಾಗೂ ಸಾಹಿತ್ಯ ಕ್ಷೇತ್ರಗಳು ದೇಶದ ಪ್ರಜೆಗಳ ಬೌದ್ಧಿಕ ಉನ್ನತಿಗೆ ಕಾರಣ ಎಂದು ಬಿಂಬಿಸಲಾಗಿತ್ತು. ನಂತರ ಈ ಗುಂಪಿಗೆ ನಾಟಕ ಎನ್ನುವ ಪ್ರಾಕಾರವೂ ಸೇರ್ಪಡೆ ಆಯಿತು. ನಾಟಕ ಎಂದರೆ ನಟನೆ ಎಂದು ವಿವರಿಸಬಹುದು. ಯಾವುದೋ ಒಂದು ನೈಜ ಅಥವಾ ಕಲ್ಪಿತ ಕತೆಯನ್ನು ಕೆಲವು ಜನ ಒಟ್ಟಾಗಿ ಸೇರಿ ರಂಗದ ಮೇಲೆ ಅದನ್ನು ಮಾಡಿತೋರಿಸುವುದೇ ನಾಟಕ. ಇದನ್ನು ತುಂಬಾ ಸಂಕ್ಷಿಪ್ತವಾಗಿ ವಿವರಿಸಲಾಗಿದೆ.
ಸರ್ಕಾರವೂ ಸಹ ಇದಕ್ಕೆ ಅಂದರೆ ಸಾಹಿತ್ಯ, ಸಿನಿಮಾ, ನಾಟಕ ಮೊದಲಾದ ಕಲೆಗಳಿಗೆ ಪ್ರೋತ್ಸಾಹ ಕೊಡುತ್ತಿತ್ತು. ಸುಮಾರು ಐವತ್ತು ಅರವತ್ತು ವರ್ಷ ಈ ವ್ಯವಸ್ಥೆ ಮುಂದುವರೆಯಿತು. ಪ್ರಶಸ್ತಿ ಪುರಸ್ಕಾರ ಪಡೆದವರ ಆಯ್ದ ಚಿತ್ರಗಳು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿತವಾಗುತ್ತಿತ್ತು ಮತ್ತು ಒಂದು ಪುಟ ಬರೆದವರೂ ಸಹ ತಮ್ಮ ಚಿತ್ರ ಅಲ್ಲಿ ಬರುವ ಕನಸು ಕಾಣುತ್ತಿದ್ದರು!
ನಂತರ ಚರಿತ್ರೆಕಾರನೊಬ್ಬ ಒಂದು ವಿಷಯ ಕಂಡು ಹಿಡಿದ. ಅದೇನೆಂದರೆ ಈ ಕಲೆಗಳಲ್ಲಿ ಪ್ರಶಸ್ತಿ ಪುರಸ್ಕಾರಗಳು ಬರೇ ಕೆಲವೇ ಗುಂಪಿನ ಜನರು ವಶೀಲಿಬಾಜಿ ನಡೆಸಿ ಹಂಚಿಕೊಳ್ಳುತ್ತಿದ್ದಾರೆ ಎನ್ನುವ ಆರೋಪ ಹುಟ್ಟಿತು.
ಸರ್ಕಾರ ಒಂದು fact finding committee ಯನ್ನು ಈ ಆರೋಪದ ಬಗ್ಗೆ ತನಿಖೆ ನಡೆಸಿ ವಿವರ ನೀಡಲು ನೇಮಿಸಿತು. ಈ ಸಮಿತಿ ಮುಂದೆ FFC ಎಂದು ಹೆಸರು ಪಡೆಯಿತು. ಈ FFC ಯಲ್ಲಿ ನಾಡಿನ ಹೆಸರಾಂತ ಬುದ್ಧಿವಂತರು, ಕಲಾವಿದರು, ನಾಟಕಕಾರರು… ಹೀಗೆ ಸದಸ್ಯರನ್ನಾಗಿ ಸರ್ಕಾರ ನೇಮಿಸಿತ್ತು.
ಈ ಸಮಿತಿ ಸುಮಾರು ನೂರು ವರುಷ ಹಿಂದೆ ನಡೆದಿದ್ದ ಪ್ರತಿಯೊಂದು ಪ್ರಶಸ್ತಿ ಪುರಸ್ಕಾರಗಳನ್ನು ಕೂಲಂಕುಷವಾಗಿ ಅಧ್ಯಯನ ಮಾಡಿತು. ಸದಸ್ಯರು ಮೃತರಾದಾಗ ಅವರ ಮಕ್ಕಳು ಸದಸ್ಯ ಸ್ಥಾನಕ್ಕೆ ಬರುತ್ತಿದ್ದರು ಮತ್ತು ಅವರು ಅವರ ಪೂರ್ವಜರ ಹಾಗೇ ಯಾವುದೇ ಕ್ಷೇತ್ರದಲ್ಲಿ ಪರಿಣತಿ ಹೊಂದಿರಬೇಕಿರಲಿಲ್ಲ. ಇದಕ್ಕೆ Collegium ಎನ್ನುವ ಹೆಸರನ್ನು ಇವರು ಇಟ್ಟುಕೊಂಡಿದ್ದರು. ಸಮಿತಿ ನೇಮಿಸುವಾಗ ಅಂದಿನ ಮುಖ್ಯಸ್ಥ ತನ್ನ ಆಪ್ತಆಪ್ತ ಗೆಳತಿಗೆ ಸಹಾಯ ಮಾಡುವ ಉದ್ದೇಶದಿಂದ ಇದಕ್ಕೆ ಅಂದರೆ ಸಮಿತಿಗೆ ಸರ್ವ ಸ್ವಾತಂತ್ರ್ಯ ಕೊಟ್ಟಿದ್ದ. ಅವರ ಹಿತರಕ್ಷಣೆಗೆ ಯಾವುದೇ ನೀತಿ ನಿಯಮ ಮಾಡಿಕೊಂಡರೂ ಸರ್ಕಾರದ ಮೇಲೆ ಹಿಡಿತ ಇರಲಿಲ್ಲ ಮತ್ತು ಅವರ ಯಾವುದೇ ನಡೆಯನ್ನು ಯಾರೂ ಕೇಳದಿರುವ ಇಂಮ್ಯೂನಿಟಿ ಸಮಿತಿಗೆ ಇತ್ತು. ಇಂತಹ ಇಮ್ಯೂನಿಟಿ ಹೊಂದಿದ್ದ ಈ ಗುಂಪು ತನಗೆ ವಹಿಸಿದ ಕೆಲಸ ಬಿಟ್ಟು ಮಿಕ್ಕೆಲ್ಲವನ್ನೂ ಮಾಡುತ್ತಿತ್ತು ಮತ್ತು ತನ್ನ ವ್ಯಾಪ್ತಿಗೆ ಮೀರಿದ ಪ್ರತಿಯೊಂದರಲ್ಲೂ ಕೈ ತಲೆ ಮತ್ತು ದೇಹವನ್ನು ತೂರಿಸುತ್ತಿತ್ತು. ಇದರ ಉಪವ್ಯಾಪವನ್ನು ಜನ ತಮ್ಮ ಪಾಲಿನ ಪ್ರಾರಬ್ಧ ಕರ್ಮ ಎನ್ನುವಂತೆ ನಂಬಿದ್ದರು.
ಅದೆಷ್ಟೋ ವರ್ಷಗಳ ನಂತರ ತನ್ನ ವರದಿಯನ್ನು ಈ ಸಮಿತಿ ಅಂದಿನ ಅಧಿಕಾರಸ್ತ ಪ್ರಭುಗಳಿಗೆ ಸಲ್ಲಿಸಿತು. ಕೊನೆಗೂ FFC ವರದಿ ಸರ್ಕಾರಕ್ಕೆ ಸಲ್ಲಿಕೆಯಾದರೂ ಅದನ್ನು ಓದಲು ಟಿಪ್ಪಣಿ ಮಾಡಲು ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ಕಾರಣ ವರದಿ ಐದುನೂರಾ ಅರವತ್ತ ಮೂರು ಕೇಜಿ ಭಾರ ಇದ್ದು ಅದನ್ನು ಮೂರು ಟ್ರಕ್ನಲ್ಲಿ ಸಾಗಿಸಲಾಗಿತ್ತು. ಈ ಸಮಿತಿಗೆ ಖರ್ಚು ಮಾಡಲಾದ ಹಣ ಸರ್ಕಾರಕ್ಕೆ ಲೆಕ್ಕ ಇರಲಿಲ್ಲ ಮತ್ತು ಟೀಕಾಕಾರರು ಮಾತು ಆಡದಿರಲು ಸರ್ಕಾರ ಅದೇ ಸಮಿತಿಗೆ ವರದಿಯನ್ನು ಎರಡು ಪುಟದಲ್ಲಿ ಕೊಡುವಂತೆ ಆದೇಶಿಸಿತು.
ಎರಡು ಪುಟದ ಸಾರಾಂಶ ಬಂದಿತು, ಅದೂ ಹಲವು ವರ್ಷಗಳ ನಂತರ. ಅದರಲ್ಲಿ ಪ್ರಮುಖವಾದದ್ದು ಎಂದರೆ ಕೆಳಗಿನ ಕೆಲವು ಸಂಗತಿಗಳು.
“…….ಪ್ರಶಸ್ತಿ ಪರ್ವ ಶುರುವಿನಿಂದ ಈಚಿನವರೆಗೆ ಕೊಟ್ಟ ಎಲ್ಲಾ ಪ್ರಶಸ್ತಿಗಳನ್ನು ನೋಡಿದೆವು. ಪ್ರಶಸ್ತಿ ಪಡೆದವರ ಪಟ್ಟಿ ಮಾಡಿದೆವು. ಅವರ ಮಕ್ಕಳ ಪಟ್ಟಿ ಮಾಡಿದೆವು. ಮೊಮ್ಮಕ್ಕಳ ಪಟ್ಟಿ ಮಾಡಿದೆವು. ಆಶ್ಚರ್ಯ ಎಂದರೆ, ಇಷ್ಟು ವರ್ಷದಲ್ಲಿ 16 ಕುಟುಂಬಗಳು ಮಾತ್ರ 4000000 ಪ್ರಶಸ್ತಿಗಳನ್ನು ಹಂಚಿಕೊಂಡಿವೆ.
ಒಬ್ಬನಿಗೆ ದೇಶದ ಅತ್ಯುನ್ನತ ಪ್ರಶಸ್ತಿ ಬಂದರೆ, ಅವನ ಹೆಂಡತಿಗೆ ಪ್ರಶಸ್ತಿ, ಮಗನಿಗೆ, ಸೊಸೆಗೆ, ಮೊಮ್ಮಗನಿಗೆ….. ಹೀಗೇ ಪೀಳಿಗೆಯ ಎಲ್ಲರಿಗೂ ಯಾವುದಾದರೂ ಒಂದು ಪ್ರಶಸ್ತಿ ಬಂದೇ ಬಂದಿರುತ್ತದೆ. ಇದು ಒಂದು chain system. ಇದನ್ನು ಇವರು Collegium ಎಂದು ಕರೆದುಕೊಂಡಿದ್ದರು.
ಈ Collegium ನ ನಿಯಮ ಸರಳವಾಗಿತ್ತು. ಹೊರಗಿನವರು ಯಾರಾದರೂ ಒಳ್ಳೆಯ ಪುಸ್ತಕ ಬರೆದರೆ, ಅದನ್ನು ಮೊದಲು 12 ಪ್ರತಿಷ್ಟಿತ ಕುಟುಂಬಗಳು ಓದಬೇಕು. ಅವರಿಗೆ ಇಷ್ಟವಾದರೆ, ಆ ಪುಸ್ತಕ ಒಳ್ಳೆಯದು. ಇಷ್ಟವಾಗದಿದ್ದರೆ, ಅದು ಕೋಮುವಾದಿ, ಫ್ಯಾಸಿಸ್ಟ್, ಅಥವಾ ಪ್ರಗತಿ ವಿರೋಧಿ.
ಸರ್ಕಾರಕ್ಕೆ ಇದು ಅರ್ಥವಾಗಲಿಲ್ಲ. ಯಾಕೆಂದರೆ ಸರ್ಕಾರಕ್ಕೆ ಸಾಹಿತ್ಯ ಅಂದರೆ ಏನು ಅಂತ ಗೊತ್ತಿರಲಿಲ್ಲ. ಸರ್ಕಾರಕ್ಕೆ ಬೇಕಿದ್ದಿದ್ದು ಒಂದು – ಈ ಪ್ರಶಸ್ತಿ ಕೊಡುವವರಿಂದ ಸರ್ಕಾರದ ವಿರುದ್ಧ ಏನೂ ಬರಬಾರದು.
ವರದಿ ಬಂದ ನಂತರ ಸರ್ಕಾರ ಒಂದು ದೊಡ್ಡ ನಿರ್ಧಾರ ಮಾಡಿತು. ಇನ್ನು ಮುಂದೆ ಪ್ರಶಸ್ತಿಗಳನ್ನು ಸರ್ಕಾರವೇ ಕೊಡುವುದಿಲ್ಲ ಅಂತ. ಬದಲಾಗಿ ಪ್ರಶಸ್ತಿಗಳನ್ನು ಖಾಸಗೀಕರಣ ಮಾಡಿತು.
ಕೆಲವು ನಿಯಮಗಳನ್ನು ರೂಪಿಸಿತು. ಅದರಂತೆ ಮುಂದಿನ ಮೂರು ಸಾವಿರ ವರ್ಷಗಳು ಪ್ರಶಸ್ತಿ ಪಡೆದ ಜಾತಿಯವರು ಪ್ರಶಸ್ತಿಗೆ ಅರ್ಹರಲ್ಲ ಎಂಬುದು ವಿಶೇಷ. ಈವರೆಗೆ ಪ್ರಶಸ್ತಿ ಪಡೆಯದಿರುವ ಜಾತಿಗಳಿಗೆ ಅವರ ಸಂಖ್ಯೆ ಬಲದ ಮೇಲೆ ಪ್ರಶಸ್ತಿ ನೀಡುವುದು. ಪ್ರಶಸ್ತಿಗಳನ್ನು ತಮ್ಮತಮ್ಮಲ್ಲೇ ಹಂಚಿಕೊಂಡ ಗುಂಪಿನ ಯಾರ ಚಿತ್ರವೂ ಎಲ್ಲೂ ಪ್ರದರ್ಶಿತ ವಾಗಬಾರದು. ಮುಂದೆ ಪ್ರಶಸ್ತಿ ನೀಡಲು ಇರುವ ಸಮಿತಿಯಲ್ಲೂ ಇವರಿಗೆ ಅವಕಾಶ ಇರಬಾರದು…
ಈ ವ್ಯವಸ್ಥೆ ಸ್ವಲ್ಪ ವರ್ಷ ನಡೆಯಿತು.
ಮೂರು ಸಾವಿರ ವರ್ಷ ಬ್ಯಾನ್ ಆದವರು ಒಗ್ಗೂಡಿದರು. ನಮ್ಮ ಪೂರ್ವಜರು ಮಾಡಿದ ಏನೋ ತಪ್ಪಿಗೆ ನಾವು ಹೇಗೆ ಹೊಣೆ? ತೋಳ ಕುರಿಮರಿ ನ್ಯಾಯ ಇದು ಎಂದು protest ಮಾಡಿದವು. ಮುಂದೇನಾಯಿತು ಎಂದು ವಿವರಿಸಲು ಹೊರಟೆ ತಾನೇ? ಒಂದರ ಮುಂದೆ ಒಂದು ಆಯಪ್ಪ ಅಂದರೆ ಇತಿಹಾಸಕಾರ ದಾಖಲೆ ಮಾಡಿದ ಪತ್ರಗಳು ಒಂದರ ಹಿಂದೆ ಒಂದು ಲಕ್ಷ ಕಿಮೀ ಸ್ಪೀಡ್ನಲ್ಲಿ ಬಂದು ನನ್ನದು ಮೊದಲು ನನ್ನದು ಮೊದಲು ಎಂದು ಸ್ಟ್ರೈಕ್ ಮಾಡುತ್ತಿವೆ. ನಾನು ಇಂತಹ ಇಕ್ಕಟ್ಟಿನ ಸಂದರ್ಭದಲ್ಲಿ ಸಿಕ್ಕಿ ಹಾಕಿ ಕೊಂಡಿದೀನಿ. ಅದನ್ನು SIR ಕೇಸ್ ನಡೆಸುತ್ತಿರುವ ನ್ಯಾಯಾಧೀಶರು ಮಾತ್ರ ಅರ್ಥ ಮಾಡಿಕೊಳ್ಳಬಲ್ಲರು…

ಅದರಿಂದ ಪ್ರಿಯ ಓದುಗ ಮೇಡಂ ಮತ್ತು ಸರ ಕೊಂಚ ಸಮಯ ಕೊಡಿ. ಮೇಲೆಮೇಲೆ ಬಂದು ಬೀಳುತ್ತಿರುವ ಇತಿಹಾಸಕಾರನ ಪುಟಗಳನ್ನು ಜೋಡಿಸಿಕೊಂಡು ನಿಮಗೆ ಒಂದು ಅಷ್ಟು ಕೆಟ್ಟದಲ್ಲದ ಒಂದು ಪರಿಪೂರ್ಣಚಿತ್ರ ಕೊಡಲು ಖಂಡಿತ ಕಾಯವಾಚಾ ಮನಸಾ ಯತ್ನಿಸುತ್ತೇನೆ…
ಮುಂದುವರೆಯುತ್ತದೆ……
ಕತೆಯ ಅಂಚಿಗೆ ಬಂದು ನಿಂತಿದ್ದೇನೆ. ಇಷ್ಟರಲ್ಲಿಯೇ ಕಥೆ ಮುಗಿಸಿ ನಿಮಗೆಲ್ಲಾ ಸಂತೋಷ ಹಂಚಲಿದ್ದೇನೆ…..

ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು.

