Advertisement
ಮಗುವಿನ ಮೌನ ಹಸಿವಿನಂಥ ಕಾವ್ಯ: ಎಸ್. ಜಯಶ್ರೀನಿವಾಸ ರಾವ್ ಸರಣಿ

ಮಗುವಿನ ಮೌನ ಹಸಿವಿನಂಥ ಕಾವ್ಯ: ಎಸ್. ಜಯಶ್ರೀನಿವಾಸ ರಾವ್ ಸರಣಿ

ಪಾಕ್ ಚೇಯ್ಸಾಮ್ ಅವರ ಕವಿತೆಗಳು ನೇರ ಆಕ್ರಮಣ ಮಾಡುವುದಿಲ್ಲ, ಆದರೆ ವಿಷಯಗಳ ಸುತ್ತ ಸುತ್ತಾಡುತ್ತಾ ಇರುತ್ತವೆ. ಈ ಕಾವ್ಯಾತ್ಮಕ ಸುತ್ತಾಡುವಿಕೆ ಅನಿವಾರ್ಯವಾಗಿ ಅಂತರವನ್ನು ಸೃಷ್ಟಿಸುತ್ತದೆ, ಇದು ಪ್ರಿಯತಮೆಗಾಗಿ ಹಂಬಲದಂತಹ ಅನ್ಯೋನ್ಯ ವಿಷಯದ ಬಗ್ಗೆಯೂ ಸಹ ಕವಿತೆಗಳು ಮಾತನಾಡುವದರಿಂದ ಬೇರ್ಪಡುವಿಕೆಯ ನೋವನ್ನು ಸೂಚಿಸುತ್ತದೆ. ಅವರ ಕವಿತೆಗಳು ಮಾತಿನ ಬದಲು, ಮಾತು ಅಥವಾ ಇತರ ಶಬ್ದದ ಜತೆಗಿರುವ ಮತ್ತು ನಂತರ ಉಳಿದಿರುವ ಮೌನದ ಕಡೆ ಗಮನ ಹರಿಸುತ್ತದೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ದಕ್ಷಿಣ ಕೊರೆಯಾ ದೇಶದ ಹೆಸರಾಂತ ಕವಿ ಪಾಕ್ ಚೇಯ್ಸಾಮ್ -ರವರ (Pak Chaesam, 1933-1997) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

ಪಾಕ್ ಚೇಯ್ಸಾಮ್-ರವರು ದಕ್ಷಿಣ ಕೊರೆಯಾದ (ಮೊದಲು ಅವಿಭಜಿತ ಕೊರೆಯಾ, ನಂತರ ದಕ್ಷಿಣ ಕೊರೆಯಾ) ಸಾಹಿತ್ಯಲೋಕದ ಒಂದು ತರಹದ ಒಳಗಿನವರಾಗಿದ್ದೂ ಹೊರಗಿನವರಾಗಿದ್ದರು. ಅವರು 1933-ರಲ್ಲಿ ಜನಿಸಿದರು ಮತ್ತು ಅವರ ಕುಟುಂಬವು ಕೊರೆಯಾಕ್ಕೆ ಹಿಂತಿರುಗುವವರೆಗೂ ತಮ್ಮ ಜೀವನದ ಮೊದಲ ಮೂರು ವರ್ಷಗಳನ್ನು ಜಪಾನ್‌-ನಲ್ಲಿ ಕಳೆದರು. ಅವರ ಆರೋಗ್ಯ ಯಾವಾಗಲೂ ದುರ್ಬಲವಾಗಿತ್ತು, ಮತ್ತು ಅವರಿಗೆ ಮೂವತ್ತೈದನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಅಧಿಕ ರಕ್ತದೊತ್ತಡ ಕಾಣಿಸಿಕೊಂಡಿತು. ಬಡತನದ ಹಿನ್ನೆಲೆಯಲ್ಲಿಯೇ ಬೆಳೆದ ಅವರು ಜೀವನದ ಬಹುಪಾಲು ಆರ್ಥಿಕವಾಗಿ ಹೆಣಗಾಡಿದ್ದರು, ಹಾಗೂ ಅವರ ಕ್ಷೀಣಿಸುತ್ತಿರುವ ಆರೋಗ್ಯವು ಮಾರಕ ತಿರುವು ಪಡೆದಾಗ, ಅವರ ಸಾಹಿತಿ ಗೆಳೆಯರು ಅವರಿಗೆ ಸಹಾಯ ಮಾಡಲು ಹಣ ಸಂಗ್ರಹಿಸಿದ್ದರು. ಆದರೂ ಅವರು ಮೂತ್ರಪಿಂಡ ವೈಫಲ್ಯದ ತೊಂದರೆಗಳಿಂದಲೇ 1997-ರಲ್ಲಿ ನಿಧನರಾದರು.

ಅವರ ಬರವಣಿಗೆಯ ವೃತ್ತಿಜೀವನದ ಸಮಯದಲ್ಲಿ ಸಾಹಿತ್ಯ ವಲಯಗಳಲ್ಲಿ ಮೆಚ್ಚುಗೆಯಿಂದ ಗುರುತಿಸಲ್ಪಟ್ಟಿದ್ದರೂ ಮತ್ತು ಕೊರೆಯಾದ ಅತ್ಯಂತ ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿಗಳನ್ನು ಪಡೆದಿದ್ದರೂ, ಅವರು ಸಾಹಿತ್ಯಲೋಕದ ಅಂಚಿನಲ್ಲಿಯೇ ಇದ್ದರು. 1970 ಮತ್ತು 1980-ರ ದಶಕಗಳಲ್ಲಿ ಅನೇಕ ಕೊರೆಯನ್ ಬರಹಗಾರರ ಸಾಹಿತ್ಯಿಕ ಗಮನವನ್ನು ಸೆಳೆದ ಸಾಮಾಜಿಕ ಮತ್ತು ರಾಜಕೀಯ ಸಮಸ್ಯೆಗಳೊಂದಿಗೆ ತೊಡಗಿಸಿಕೊಳ್ಳುವ ಬದಲು, ಪಾಕ್ ಅವರ ಕೃತಿಗಳು ಹಠಹಿಡಿದು ರಚಿಸಿದಂತೆ ವಿಷಯದಲ್ಲಿ ಸ್ಥಳೀಯವಾಗಿ ಕಾಣುತ್ತವೆ, ಆದರೆ ಅವರ ಭಾಷೆ ಕ್ರಿಯಾಪದ ರೂಪಗಳೊಂದಿಗೆ ನಾಸ್ಟಾಲ್ಜಿಕ್ ಭಾಷಾವೈಶಿಷ್ಟ್ಯವನ್ನು ಅನುಸರಿಸುತ್ತದೆ, ಉದಾಹರಣೆಗೆ, ಅವರ ಅನೇಕ ಸಮಕಾಲೀನರ ದೃಢವಾದ ರಾಜಕೀಯ ವಾಕ್‌ಚಾತುರ್ಯಕ್ಕಿಂತ ಇವರ ಕಾವ್ಯ ಅಳುಕಿನಿಂದ ಕೂಡಿದ ಚಿಂತನಾತ್ಮಕವಾದ ಹಾಗೂ ಸೂಕ್ಷ್ಮ ಮತ್ತು ಅಲಂಕೃತ ಕಾವ್ಯವಾಗಿತ್ತು ಎನ್ನಿಸುತ್ತದೆ.

ಪಾಕ್ ಚೇಯ್ಸಾಮ್ ಅವರು ತಮ್ಮ ಜೀವನದ ಆರಂಭಿಕ ವರ್ಷಗಳನ್ನು ಕೊರೆಯಾದ ದಕ್ಷಿಣ ಕರಾವಳಿಯಲ್ಲಿರುವ ಸಮುದ್ರ ತೀರದ ಪಟ್ಟಣವಾದ ಸ್ಯಾಮ್ಚಿಯೋನ್‌ಪೊ (Samcheonpo) ಬಳಿ ಕಳೆದರು. ಕವಿಯ ಕಾವ್ಯಾತ್ಮಕ ಕಲ್ಪನೆಯು ಆಗಾಗ್ಗೆ ಅಲ್ಲಿಗೆ ಮರಳುತ್ತಿತ್ತು. ಪಾಕ್‌-ರ ಕವಿತೆಗಳಲ್ಲಿ, ಸಮುದ್ರವು ಒಂದೇ ಕಾಲದಲ್ಲಿ ನಷ್ಟ ಮತ್ತು ದಿಗ್ಭ್ರಮೆಗೊಳಿಸುವ ಸಮೃದ್ಧಿಯ ಸ್ಥಳವಾಗಿದೆ, ಏಕೆಂದರೆ ಅದು “ವಿಧವೆಯ ಅರಿವೆಗಳ ಹರಿಯುವ ಮಡಿಕೆಗಳ” ದುಃಖವನ್ನು ನುಂಗಿ ಅದನ್ನು ಮಿನುಗುವ ಅಲೆಗಳೊಂದಿಗೆ ಹಿಂದಿರುಗಿಸುತ್ತದೆ. ದುಃಖವು ಮಿನುಗುವ ಅಲೆಗಳಾಗಿ ಬದಲಾಗುವುದನ್ನು ನೋಡುತ್ತಾ ಬೆಳೆದ ಹುಡುಗನ ವಿಷಣ್ಣತೆಯೊಂದಿಗೆ ಪಾಕ್ ಚೇಯ್ಸಾಮ್ ಎಲ್ಲಾ ಭಾವಗೀತಾತ್ಮತೆಯ ಹಂಬಲದ ಸುತ್ತ ತನ್ನ ಕವಿತೆಗಳನ್ನು ನಿರ್ಮಿಸುತ್ತಾರೆ. ವರ್ಣವೈವಿಧ್ಯದ ಅಲೆಗಳ ಕೆಳಗೆ ಏನೋ ಕಳೆದುಹೋದದ್ದು ಇದೆ, ಮತ್ತು ಪಾಕ್‌ ಅವರ ಕವಿತೆಗಳು ಆ ಅನಿರ್ವಚನೀಯ ವಿಷಯದ ಬಾಹ್ಯರೇಖೆಗಳನ್ನು ಅರಿತುಕೊಳ್ಳುವ ಅಸಾಧ್ಯತೆಯನ್ನು ರೂಪಿಸುತ್ತವೆ. ಕವಿತೆಗಳು ಮಾನವ ಜಗತ್ತಿನಲ್ಲಿ ಇರುವ ಒಂದು ಸ್ಥಳ ಅಥವಾ ಬಿಂದುವಿನಿಂದ ಪ್ರಾರಂಭವಾಗುತ್ತವೆ, ಉದಾಹರಣೆಗೆ, ಅಂಗಳದಲ್ಲಿರುವ ಮರದ ಹೂಬಿಡುವ ಕೊಂಬೆ, ಮತ್ತು ನಂತರ ಅದರಿಂದ ಹೊರಬಂದು ವಿಶಾಲವಾದ ಬ್ರಹ್ಮಾಂಡದ ಬಗ್ಗೆ ಅಲ್ಲ, ಆದರೆ ಅದನ್ನು ಸುತ್ತುವರೆದಿರುವ ಜಾಗದ ಬಗ್ಗೆ ಯೋಚಿಸುತ್ತಾನೆ, “ಅರ್ಧದಷ್ಟು ಶಾಖೆಗಳು ಈ ಜಗತ್ತಿನಲ್ಲಿ, ಉಳಿದವು ಮುಂದಿನದರಲ್ಲಿ.”

ಕೊರೆಯಾ ವಿಶ್ವವಿದ್ಯಾಲಯದಲ್ಲಿ ಕೊರೆಯನ್ ಭಾಷೆ ಮತ್ತು ಸಾಹಿತ್ಯ ವಿಭಾಗದಲ್ಲಿ ವ್ಯಾಸಂಗ ಆರಂಭಿಸಿದ ಪಾಕ್ ಚೇಯ್ಸಾಮ್, ಪದವಿಯನ್ನು ಪಡೆಯದೆನೆ ಹೊರಬಂದರು. 1953 ರಲ್ಲಿ Munye (ಸಾಹಿತ್ಯ ಮತ್ತು ಕಲೆ) ಎಂಬ ಸಾಹಿತ್ಯ ಪತ್ರಿಕೆಯಲ್ಲಿ “In the River” ಹೆಸರಿನ ಕವನ ಮತ್ತು 1955-ರಲ್ಲಿ Hyundae Munhak (ಆಧುನಿಕ ಸಾಹಿತ್ಯ) ಎಂಬ ಸಾಹಿತ್ಯ ಪತ್ರಿಕೆಯಲ್ಲಿ “Providence” ಮತ್ತು “Stillness” ಎಂಬ ಕವನಗಳನ್ನು ಪ್ರಕಟಿಸುವ ಮೂಲಕ ಅವರು ಭರವಸೆಯ ಕವಿಯಾಗಿ ತಮ್ಮನ್ನು ತಾವು ಸ್ಥಾಪಿಸಿಕೊಂಡರು.

ಅವರ ಮೊದಲ ಕವನ ಸಂಕಲನ, The Mind of Chunhyang, 1962-ರಲ್ಲಿ ಪ್ರಕಟವಾಯಿತು. ಅಂದಿನಿಂದ ಅವರು In the Sunshine (1970), A Thousand Year-old Wind (1975), Besides the Young Ones (1976), The Autumn Tree Listening to the Rain (1981), My Love (1985), An Autumn River In Tears Afire (1987), and The Trace of the Sun and the Moon (1990), ಸೇರಿದಂತೆ ಒಟ್ಟು ಹದಿನೈದು ಕವನ ಸಂಕಲನಗಳನ್ನು ಪ್ರಕಟಿಸಿದರು. 1987-ರಲ್ಲಿ The Literature of Peace ಪ್ರಶಸ್ತಿ ಮತ್ತು 1988-ರಲ್ಲಿ Cho Yeon-Hyun ಸಾಹಿತ್ಯ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಅವರು ಪಡೆದಿದ್ದಾರೆ.

ಪಾಕ್ ಚೇಯ್ಸಾಮ್ ಅವರ ಕವಿತೆಗಳು ನೇರ ಆಕ್ರಮಣ ಮಾಡುವುದಿಲ್ಲ, ಆದರೆ ವಿಷಯಗಳ ಸುತ್ತ ಸುತ್ತಾಡುತ್ತಾ ಇರುತ್ತವೆ. ಈ ಕಾವ್ಯಾತ್ಮಕ ಸುತ್ತಾಡುವಿಕೆ ಅನಿವಾರ್ಯವಾಗಿ ಅಂತರವನ್ನು ಸೃಷ್ಟಿಸುತ್ತದೆ, ಇದು ಪ್ರಿಯತಮೆಗಾಗಿ ಹಂಬಲದಂತಹ ಅನ್ಯೋನ್ಯ ವಿಷಯದ ಬಗ್ಗೆಯೂ ಸಹ ಕವಿತೆಗಳು ಮಾತನಾಡುವದರಿಂದ ಬೇರ್ಪಡುವಿಕೆಯ ನೋವನ್ನು ಸೂಚಿಸುತ್ತದೆ. ಅವರ ಕವಿತೆಗಳು ಮಾತಿನ ಬದಲು, ಮಾತು ಅಥವಾ ಇತರ ಶಬ್ದದ ಜತೆಗಿರುವ ಮತ್ತು ನಂತರ ಉಳಿದಿರುವ ಮೌನದ ಕಡೆ ಗಮನ ಹರಿಸುತ್ತದೆ. ಪದಗಳು, ಶಬ್ದಗಳು ಅಥವಾ ಪ್ರೇಮಿಗಳ ನಡುವಿನ ಮೌನವನ್ನು ಬಿಡಿಸುವ ಅಂತರವು ಪಾಕ್-ರಲ್ಲಿ ಕಾವ್ಯವಾಗುತ್ತದೆ. ಈ ಕಾವ್ಯಾತ್ಮಕ ಅಂತರವು ಪ್ರೇಮಿಯ ಮನೆ “ಇನ್ನೂ ಒಂದು ಬೆಟ್ಟ ದಾಟಿದ ನಂತರ ಕಾಣುತ್ತದೆ” ಎಂಬಂತೆ ಅನಿಸುತ್ತದೆ, ಆದರೆ ಪದಗಳೊಂದಿಗೆ ಆ ದೂರವನ್ನು ದಾಟಲು ಯಾವುದೇ ಪ್ರಯತ್ನವಿಲ್ಲದೆ ಅಲ್ಲಿಯೇ ಉಳಿದಿರುತ್ತೆ.

ಬಡತನ ಮತ್ತು ಅನಾರೋಗ್ಯ ಎರಡೂ ಪಾಕ್ ಚೇಯ್ಸಾಮ್ ಅವರ ಜೀವನ ಮತ್ತು ಅವರ ಕಾವ್ಯಾತ್ಮಕ ಉದ್ದೇಶಗಳ ಸತ್ಯಗಳಾಗಿದ್ದವು. ಅಂಗಳದ ಮೂಲೆಯಲ್ಲಿ ಕುದಿಯುತ್ತಿರುವ ಗಿಡಮೂಲಿಕೆ ಔಷಧದ ಪಾತ್ರೆಯನ್ನು ನೋಡುತ್ತಾ ದೈಹಿಕ ಯಾತನೆಯನ್ನು ಸಹಿಸಿಕೊಳ್ಳುವ ದುಃಖವನ್ನು ಆಶ್ಚರ್ಯಕರವಾಗಿ ಆಹ್ಲಾದಕರವಾದ ಧ್ಯಾನದಂತೆ ಪರಿವರ್ತಿಸಲು ಅವರು ಬರವಣಿಗೆಯನ್ನು ಅವಲಂಬಿಸಿರುವಂತೆ ತೋರುತ್ತಿತ್ತು. ಅಥವಾ ಬಹುಶಃ, “ನನ್ನ ದೇಹದಲ್ಲಿ ಅನಾರೋಗ್ಯವು ದೀರ್ಘಕಾಲ ಉಳಿಯುತ್ತಿದೆ, ಮರುಪಾವತಿಸಬೇಕಾದ ಸಾಲದಂತೆ,” ಎಂಬ ಸಾಲಿನಂತೆ, ಅವರು ದೈಹಿಕ ಯಾತನೆಯನ್ನು ಆರ್ಥಿಕ ಯಾತನೆಯನ್ನಾಗಿ ಪರಿವರ್ತಿಸಿ, ಸಹಿಸಿಕೊಳ್ಳುವಂತೆ ಮಾಡಿದ್ದಾರೆಂದು ತೋರುತ್ತದೆ. ಅವರ ಬಡತನವು ದಂತಕಥೆಯ ಸ್ಥರದ್ದಾಗಿತ್ತು. ಅವರ ತಂದೆ ದಿನಗೂಲಿ ಕಾರ್ಮಿಕರಾಗಿದ್ದರು. ಅವರ ತಾಯಿ ಸಮುದ್ರ ಚಿಪ್ಪುಗಳನ್ನು ಸಂಗ್ರಹಿಸಿ ಸ್ಯಾಮ್ಚಿಯೋನ್‌ಪೊ-ದ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುತ್ತಿದ್ದರು.

ಮೂರು ಸಾವಿರ ‘ವೊನ್’ (won – ಕೊರೆಯಾ ದೇಶದ ಕರೆನ್ಸಿ; ಮೂರು ಸಾವಿರ ‘ವೊನ್’ – ಈಗ ಮೂರು ಡಾಲರ್‌ಗಳಿಗಿಂತಲೂ ಕಡಿಮೆ ಮೌಲ್ಯದ ಮೊತ್ತ) ಶುಲ್ಕವನ್ನು ಅವರ ಕುಟುಂಬವು ಭರಿಸಲಾಗದ ಕಾರಣ ಅವರು ಮಾಧ್ಯಮಿಕ ಶಾಲೆಗೆ ಹೋಗುವುದನ್ನು ಮುಂದೂಡಬೇಕಾಯಿತು. ಬಡತನವೂ, “ನಾನು ‘ಗಿಂಕೊ’ ಎಲೆಗಳನ್ನು ಸಂಗ್ರಹಿಸಿದ ನಂತರ ದಿನದ ಕೊನೆಗೆ ಹಣವನ್ನು ಒಟ್ಟುಗೂಡಿಸುವ” ಮಗುವಿನ ಕನಸಿನಂತೆ ನೋವುಂಟುಮಾಡುತ್ತದೆ. ಆದರೆ ಪಾಕ್‌ ಚೇಯ್ಸಾಮ್-ರವರ ಕವಿತೆಗಳಲ್ಲಿ ಬಡತನವು ಎಂದಿಗೂ ಸಾಮಾಜಿಕವಲ್ಲ, ವಿಕಲಗೊಳಿಸುವ ಅಭಾವ ಅಥವಾ ಸಾಮಾಜಿಕ ಅಥವಾ ರಾಜಕೀಯ ಕಾರಣವೂ ಅಲ್ಲ: ಬದಲಾಗಿ, ಅದು ಭಾವಗೀತಾತ್ಮಕತೆಯನ್ನು ಸಕ್ರಿಯಗೊಳಿಸುತ್ತದೆ. ಅವರ ಕವಿತೆಗಳು ಬಡತನವನ್ನು ಅಲಂಕರಿಸಲು ಉದ್ದೇಶಿಸಿವೆ ಎಂದು ಹೇಳುವುದೂ ಸರಿಯಲ್ಲ. ಕವಿತೆಗಳು ಅಂತಹ ಕೆಲಸವನ್ನು ಮಾಡಲು ಸಾಧ್ಯವಿಲ್ಲ ಎಂದು ಅವರಿಗೆ ಚೆನ್ನಾಗಿ ತಿಳಿದಿತ್ತು; ಅವು ಬಡತನದ ಬದುಕಿನ ನೋವು ಮತ್ತು ಅವಮಾನವನ್ನು ಸ್ವಲ್ಪ ಕಡಿಮೆ ಮಾಡುತ್ತವೆ.

ಸಾಹಿತ್ಯ ಜಗತ್ತಿನ ಅಂಚಿನಲ್ಲಿರುವ ಅವರ ಸ್ಥಾನ, ವಾಕ್‌ಶೈಲಿಯ ಸೂಕ್ಷ್ಮ ನಿಖರತೆ ಮತ್ತು ಪ್ರಸ್ತುತ ಪ್ರಪಂಚ ಮತ್ತು ಅವರ ಕಾವ್ಯದಲ್ಲಿನ ಇತರ ಪ್ರಪಂಚಗಳ ನಡುವಿನ ಸೀಮಿತ ಜಾಗದ ಕಡೆಗೆ ಅವರ ವಿಶಿಷ್ಟ ತಿರುವುಗಳಲ್ಲಿ, ಪಾಕ್ ಅವರು ಇಪ್ಪತ್ತನೇ ಶತಮಾನದ ಉತ್ತರಾರ್ಧದ ಕೊರೆಯಾದಲ್ಲಿ ಕೆಲವು ಉತ್ತಮ ಪ್ರಚಾರ ಪಡೆದ, ವಸಾಹತುಶಾಹಿ ಮತ್ತು ಯುದ್ಧಾನಂತರದ ಕೊರೆಯಾದಲ್ಲಿ ಹಿಂಸೆ ಮತ್ತು ಕ್ರೋಧದ ಬಗ್ಗೆ ಬರೆದ ಅವರ ಸಮಕಾಲೀನರಿಗಿಂತ ಭಿನ್ನರಾಗಿದ್ದರು. ಯುದ್ಧಕ್ಕೆ ಸಂಬಂಧಿಸಿದ ವಿಷಯಗಳಿಂದ ಅವರು ತಮ್ಮ ದೂರವನ್ನು ಕಾಯ್ದುಕೊಂಡಿರುವುದು ವಿಶೇಷವಾಗಿ ಆಶ್ಚರ್ಯಕರವಾಗಿದೆ, ಏಕೆಂದರೆ ಅವರು ಸಾಹಿತ್ಯಲೋಕಕ್ಕೆ ಪಾದಾರ್ಪಣೆ ಮಾಡಿದ್ದು 1953-ರಲ್ಲಿ; ಕೊರೆಯನ್ ಯುದ್ಧದ ಕದನವಿರಾಮಕ್ಕೆ ಸಹಿ ಹಾಕಿದ್ದು ಹಾಗೂ ಉತ್ತರ ಮತ್ತು ದಕ್ಷಿಣ ಕೊರೆಯಾದ ನಡುವಿನ ಗಡಿಯನ್ನು ಮುಚ್ಚಿದದ್ದೂ ಕೂಡ 1953-ರಲ್ಲಿ. ಪಾಕ್‌-ರವರ ಕವಿತೆಗಳಲ್ಲಿ ಯುದ್ಧ-ಹಾನಿಗೊಳಗಾದ ಭೂದೃಶ್ಯವಿಲ್ಲ; ಗಾಳಿಯು ಸಹ ಮಾಮೂಲಾಗಿಯೇ ಬೀಸಿಹೋಗುವ ತಂಗಾಳಿಯುತ ಕಡಲತೀರದ ಪಟ್ಟಣದಲ್ಲಿ ಮಗುವಿನ ಮೌನ ಹಸಿವು ಮಾತ್ರ.

ಕಾವ್ಯದಿಂದ ಬರುವ ತೃಪ್ತಿಯನ್ನು ಲೆಕ್ಕಹಾಕಲು ಸಾಧ್ಯವಿಲ್ಲ; ಅದು ಕೆಲವೊಮ್ಮೆ ತರುವ ಹಣವನ್ನು ಮಾತ್ರ ಲೆಕ್ಕಹಾಕಬಹುದು. ನಾವು ಪಾಕ್ ಚೇಯ್ಸಾಮ್-ರವರ ಪ್ರಕಟಣೆಗಳ ಸಂಖ್ಯೆಯನ್ನು ಖಂಡಿತವಾಗಿಯೂ ಎಣಿಸಬಹುದು. ಅವರು ತಮ್ಮ ಪ್ರೌಢಾವಸ್ಥೆಯ ಉದ್ದಕ್ಕೂ ಕವಿತೆಗಳನ್ನು ಬರೆದರು; ಒಟ್ಟು ಹದಿನೈದು ಕವಿತೆಗಳ ಸಂಗ್ರಹಗಳನ್ನು ಪ್ರಕಟಿಸಿದರು. ಅವರ ಇತರ ಪ್ರಕಟಣೆಗಳಲ್ಲಿ ಹಲವಾರು ಗದ್ಯ ಪ್ರಬಂಧಗಳ ಪುಸ್ತಕಗಳಿವೆ; ಅವುಗಳಲ್ಲಿ ಹಲವು, ಅವರು ತಮ್ಮ ಜೀವನೋಪಾಯಕ್ಕಾಗಿ ಬರೆದರು ಎಂದು ಅವರೇ ಒಪ್ಪಿಕೊಳ್ಳುತ್ತಿದ್ದರೇನೋ. ಆದರೆ ಈ ವಿಷಯದಲ್ಲಿ ಒಂದು ಮಾತು ಹೇಳುವುದಾದರೆ, ವಿಶೇಷವಾಗಿ ಅವರ ಜೀವನದ ಕೊನೆಯ ವರ್ಷಗಳಲ್ಲಿ ಅವರು ಅನುಭವಿಸಿದ ಬಡತನ ಮತ್ತು ಒಂಟಿತನವನ್ನು ಗಮನಿಸಿದರೆ, ಅವರ ಹೆಸರಿನಲ್ಲಿರುವ ಪುಸ್ತಕಗಳ ಸಂಖ್ಯೆಯು ಸುಳ್ಳೆಂದನಿಸುತ್ತದೆ. ಅವರ ನಿಧನದ ಕೆಲವೇ ವಾರಗಳ ಮೊದಲು ಅವರನ್ನು ಸಂದರ್ಶಿಸಲು ಅವಕಾಶ ಪಡೆದ ಮತ್ತು ಸಂದರ್ಶನದ ಬಗ್ಗೆ ಒಂದು ಲೇಖನವನ್ನು ಬರೆದ ಅವರ ಅಭಿಮಾನಿಗಳಲ್ಲಿ ಒಬ್ಬರು, ತನ್ನ ಅತ್ಯಂತ ನಿಷ್ಠಾವಂತ ಮಗುವನ್ನು ನಿರ್ಲಕ್ಷ್ಯದಿಂದ ಬಳಲುವಂತೆ ಮಾಡಿದ ಸಾಹಿತ್ಯ ಜಗತ್ತಿನ ಹೃದಯಹೀನತೆಯ ಬಗ್ಗೆ ವಿಷಾದಿಸಿದರು.

ನಾನು ಇಲ್ಲಿ ಕನ್ನಡಕ್ಕೆ ಅನುವಾದಿಸಿರುವ ಪಾಕ್ ಚೇಯ್ಸಾಮ್-ರ ಎ‌ಲ್ಲಾ ಎಂಟು ಕವನಗಳನ್ನು ಡೇವಿಡ್ ಅರ್. ಮೆಕ್‌ಕ್ಯಾನ್ ಹಾಗೂ ಜಿವೋನ್ ಶಿನ್ ಅವರು (David R. McCann and Jiwon Shin) ಮೂಲ ಕೊರಿಯನ್ ಭಾಷೆಯಿಂದ ಇಂಗ್ಲಿಷ್‌-ಗೆ ಅನುವಾದಿಸಿರುವರು.

(David R. McCann ಮತ್ತು Jiwon Shin ಇಂಗ್ಲಿಷಿಗೆ ಅನುವಾದಿಸಿದ ಪಾಕ್ ಚೇಯ್ಸಾಮ್-ರವರ ಆಯ್ದ ಕವನಗಳ ಸಂಕಲನಕ್ಕೆ ಅವರಿಬ್ಬರು ಬರೆದ “ಇಂಟ್ರೊಡಕ್ಷಣ್”-ನಿಂದ ಆಯ್ದ ಭಾಗಗಳ ಕನ್ನಡ ಅನುವಾದ ಈ ಪರಿಚಯ ಲೇಖನ; Enough to Say It’s Far: Selected Poems of Pak Chaesam [The Lockert Library of Poetry in Translation]; Translated by David R. McCann and Jiwon Shin. Princeton and Oxford: Princeton University Press, 2006)

*****


ನಿಸರ್ಗದೃಶ್ಯಗಳ ಚಿತ್ರಕಾರ
ಮೂಲ: Landscape Painter

ನಿಸರ್ಗದೃಶ್ಯಗಳ ಚಿತ್ರಕಾರನೊಬ್ಬನಿದ್ದ ಒಂದಾನೊಂದು ಕಾಲದಲ್ಲಿ
ಬೇರೇನೂ ಬಿಡಿಸಲಾಗುತ್ತಿರಲಿಲ್ಲ ಅವನಿಂದ
ಮಲೆಗಳ, ಜಲಗಳ ಹೊರತಾಗಿ,
ಹೀಗಾಗಿ, ಹಕ್ಕಿಗಳ ಉಲಿಗಳನ್ನು
ಒಂದೊಂದೇ ಮುತ್ತುಗಳನ್ನಾಗಿ ಪೋಣಿಸಿ
ದೇವತೆಗಳಿಗೆ ಅರ್ಪಿಸಿದ ಅವನು;
ಸೂರ್ಯಪ್ರಕಾಶವನ್ನು, ಗಾಳಿಯನ್ನು ಸಹ
ಅರ್ಪಿಸಿದ ಅವನು.

ಕೊನೆಗೆ ಅವನಲ್ಲಿ ಬೇರೇನೂ ಉಳಿಯಲಿಲ್ಲ
ಕಿವಿಗೊಡದ ಮಲೆಗಳ, ಜಲಗಳ ಎದುರು
ಮುಖತೋರಿಸಿ ನಿಂತಿರುವ
ಮಿನುಗುವ ಬೆಳಕಿನ ಕುಂಚದ ಹೊರತಾಗಿ.


ನಿಸರ್ಗದೃಶ್ಯ
ಮೂಲ: Landscape

ಹುಲ್ಲುಬಯಲಿನ ಮೇಲಿಂದ ಗಾಳಿ ಬೀಸಿ ಬರುತ್ತದೆ;
ದಕ್ಷಿಣದ ಕಡಲನ್ನು ದಾಟಿ
ಸೂರ್ಯನ ಬೆಳಕು ಹಾದು ಹೋಗುತ್ತದೆ.

ತಮ್ಮ ಉದಾಸೀನತೆಯನ್ನು ಕೊನೆಗೊಳಿಸಿ
ಎರಡು ಮೂರು
ಗಲ್ ಹಕ್ಕಿಗಳು ಮೇಲಕ್ಕೆ ಹಾರುತ್ತಿದ್ದಂತೆ,
ಹಾಯಿದೋಣಿಯೊಂದು
ದೂರ, ಬಲು ದೂರ ಹೋಗಿಬಿಟ್ಟಿದೆ,
ಯಾವುದೋ ಮಬ್ಬಾಗಿ ಕಾಣುವ
ದೂರದ ನಾಡಿನೆಡೆಗೆ ಹೊರಟಂತೆ.

ಎಷ್ಟು ಕರುಣಾಜನಕವಿದು,
ಇವು, ಮತ್ತೆ ಈ ಬಿಳಿಯ ವಸ್ತುಗಳು,
ಹೋಗಿವೆ ಇಷ್ಟೇ ದೂರ, ಅಷ್ಟರಲ್ಲೆ ಸುಸ್ತಾಗಿವೆ;
ಸುಸ್ತಾಗಿ, ಮರಳಿ ಬರಲು ತಿರುಗುತ್ತಿವೆ.

ಒಂದು ಕ್ಷಣದ ಮಟ್ಟಿಗೆ
ಉದುರುತ್ತಿರುವ ಹೂವಿನ ನೆರಳಿನಡಿಯಲ್ಲಿ
ಗಾಳಿ ಆಶ‌್ರಯ ಪಡೆಯುತ್ತೆ.
ರೆಕ್ಕೆಯ ಅಡಿಯಲ್ಲಿ,
ಅಥವಾ ಹಾಯಿಯ ಕೆಳಗೆ,
ಒಂದು ಅಲ್ಪ ಕ್ಷಣದ ಮಟ್ಟಿಗೆ
ಬಿಸಿಲು ಆಶ್ರಯ ಪಡೆಯುತ್ತೆ.

ಈ ಜಗತ್ತು ಮತ್ತು ನಂತರದ ಜಗತ್ತು
ಎಲ್ಲಿ ಬೇರ್ಪಡೆಯಾಗುತ್ತದೆಂದು ನಿನಗನಿಸುತ್ತದೆ?

ಗಾಳಿ ಹುಲ್ಲುಬಯಲನ್ನು ದಾಟಿ ಬರುತ್ತದೆ
ಸೂರ್ಯನ ಬೆಳಕು ದಕ್ಷಿಣದ ಕಡಲ
ಮೇಲೆ ಹಾದು ಹೋಗುತ್ತದೆ.


ಸಾವಿರ ವರುಷಗಳ ಗಾಳಿ
ಮೂಲ: Thousand-Year Wind

ಸಾವಿರ ವರುಷಗಳ ಹಿಂದೆ ತೋರಿಸಿದ
ಚಳಕಗಳನ್ನು ಈಗಲೂ ತೋರಿಸುತ್ತಿದೆ ಈ ಗಾಳಿ.
ನೋಡು, ಅದು ಹೇಗೆ ಮತ್ತೆ ಮತ್ತೆ ಮರಳಿ ಬರುತ್ತದೆ
ದೇವದಾರು ಮರಗಳ ರೆಂಬೆಗಳಿಗೆ ಕಚಗುಳಿ ಇಡಲು.
ನೋಡು, ಸುಮ್ಮನೆ ನೋಡು,
ಅದು ಏನನ್ನು ಮತ್ತೆ ಮತ್ತೆ ಹೇಳುತ್ತಿರುತ್ತೆ
ಸಾವಿರ ವರುಷಗಳ ನಂತರವೂ.

ಎಂದೇ, ಆಯಾಸಪಡಬೇಡ.
ನಿನಗೇ ಹೇಳುತ್ತಿರುವುದು,
ನಿನ್ನ ಹಾತೊರೆಯುವಿಕೆಯಲ್ಲಿ
ವಿಚಿತ್ರ ವಸ್ತುಗಳತ್ತ ಸಹ
ಹೋಗಲು ಹಿಂಜರಿಯದವನೆ;
ನಿನಗೇ ಹೇಳುತ್ತಿರುವುದು.


ಸತ್ತ ಮರದ ಮೇಲೆ ಮಲರಿದ ಹೂವುಗಳು
ಮೂಲ: Flowers on a Dead Tree

ಸತ್ತ ಮರದ ಮೇಲೆ ಹೂವುಗಳು ಏಕೆ ಮಲರುತ್ತವೆ
ಎಂಬ ಗುಟ್ಟನ್ನು ಅರಿಯಲು

ನಾನು ಬಲು ದೂರದಿಂದ ಇಲ್ಲಿಗೆ ಬಂದಿರುವೆನು.
ಆದರೆ ಇವೆಲ್ಲಾ ನಿಜಕ್ಕೂ ನಿಗೂಢವಾದದ್ದು,

ಏಕೆ ಮೋಡವೊಂದು ಅರಳುತ್ತದೆ, ಮತ್ತೆ
ಏಕೆ ಚೂರುಚೂರಾಗಿ ಚದುರಿ ಹೋಗುತ್ತದೆ ಆಕಾಶದಲ್ಲಿ
ಎಂಬ ಗುಟ್ಟಿನಂತೆ.

ಮೊಗ್ಗಿನ ಉಬ್ಬಿದ ಹೃದಯದಿಂದ ಇಂದು
ಮೆಗ್ನೋಲಿಯಾ ಹೂವೊಂದು ನೋವಿನಿಂದ ಅರಳುತ್ತದೆ

ನಿಷ್ಠೆಯಿಂದ ನಾಳೆಗಾಗಿ ಸಿದ್ಧವಾಗುತ್ತಿರುವಾಗ,
ಬೇರೆಯೇ ಒಂದು ರೆಂಬೆಯಲ್ಲಿ ಹೂವೊಂದು ಅರಳುತ್ತದೆ.


ಅರ್ಥವಾಗುತ್ತಿಲ್ಲ, ಎಂದೇ ಕೇಳುತ್ತಿದ್ದೇನೆ
ಮೂಲ: Asking Not Understanding

ನಾನು ಎಷ್ಟೇ ಮನವಿಟ್ಟು ನೋಡಿದರೂ,
ನನಗಂತೂ ತಾರೆಗಳಿಗೆ ಚುಕ್ಕೆಗಳೇ ಇಲ್ಲವೆಂದು
ಕಾಣಿಸುತ್ತದೆ.
ಸರಳವಾಗಿ ಹೇಳುವುದಾದರೆ,
ಅವು ಅತಿಶಯಕ್ಕೂ ಮೀರಿ ಉಜ್ವಲವಾಗಿವೆ.

ನನ್ನೊಲವೇ, ನೀನೂ ಹೀಗೆಯೇ;
ನನ್ನ ಹೃದಯದಲ್ಲಿ ನಿನ್ನನ್ನು
ಯಾವ ರೀತಿಯಲ್ಲಿ ಬಿಡಿಸಲು ಬಯಸಿದರೂ,
ನನ್ನನ್ನು ಯಾವುದು ಸರಾಗವಾಗಿ ತುಂಬುತ್ತದೆ ಎಂಬುದರ
ಸಾರವನ್ನು ನನ್ನಿಂದ ಸೆರೆಹಿಡಿಯಲು ಸಾಧ್ಯವಿಲ್ಲ.

ಇಬ್ಬನಿಯಂತಹ ಬದುಕು ಜೀವಿಸುವುದರಿಂದ
ತಾರೆಗಳನ್ನು ನಾವು ಇಬ್ಬನಿಯಂತೆ ಕಾಣಬೇಕೆ?
ಅಥವಾ, ಹುಲ್ಲಿನಂತಹ ಬದುಕು ಜೀವಿಸುವುದರಿಂದ
ಪ್ರೇಮವನ್ನು ನಾವು ಹುಲ್ಲಿನ ದಳದಂತೆ ಕಾಣಬೇಕೆ?

ನಿಜಕ್ಕೂ ನನಗೆ ಈ ಜಗತ್ತು ಅರ್ಥವಾಗುತ್ತಿಲ್ಲ,
ಎಂದೇ ಕೇಳುತ್ತಿದ್ದೇನೆ:
ಒಂದು ತಾರೆಯು ಯಾವ ಆಕಾರವನ್ನು
ಹೊಂದಿದೆಯೆಂದು ಹೇಳಬಹುದು?
ಪ್ರೇಮವು ಯಾವ ರೂಪವನ್ನು ಪಡೆದುಕೊಳ್ಳುತ್ತದೆ?


ದಿನಗಳು, ತಿಂಗಳುಗಳು
ಮೂಲ: Days and Months

ಪರ್ವತಗಳು ಏನನ್ನೂ ಹೇಳಲ್ಲ, ಎಂದೂ,
ಆದರೆ ನದಿ ವಟವಟ ಮಾತಾಡುತ್ತಾ ಹೋಗುತ್ತಿರುತ್ತೆ,
ಕಣಿವೆಯ ಮಾರ್ಗವಾಗಿ ಕೆಳಗೆ ಹರಿದು ಹೋಗುತ್ತೆ.
ಈ ಎರಡು ಭಿನ್ನ ಶಾಖೆಗಳು,
ತಮ್ಮ ಮುಖಗಳಲ್ಲಿನ ಭಿನ್ನತೆಗಳ ಹೊರತಾಗಿಯೂ,
ಶಾಂತತೆಯನ್ನು ಕಂಡುಕೊಂಡಿವೆ, ಮುನ್ನಡೆಯುತ್ತಿವೆ.
ಕಾಲದ ಆರಂಭದಿಂದಲೂ ಯಾವ ಗೊಣಗಾಟವಿಲ್ಲದೇ
ಇವು ನಿಭಾಯಿಸಿಕೊಂಡು ಹೋಗುತ್ತಿವೆ.
ಈ ಶರತ್ಕಾಲದ ಬಿಸಿಲಿನಲ್ಲಿ,
ಕೆಂಪೆಲೆ ಬಣ್ಣದ ಪರ್ವತದ ಎತ್ತರದ ಹುಬ್ಬಿನಿಂದ
ಬೆಳಕು ಹೊಳೆಯುವಾಗ,
ನದಿಯು ತನ್ನ ಮೈಯನ್ನು ತಿರುಗಿಸುತ್ತಾ,
ಬಾಗಿಸುತ್ತಾ ಹರಿಯುವಾಗ,
ಅವುಗಳ ಮಿರುಗುವ ಪಾತ್ರಗಳು
ಅವುಗಳ ಇರುವಿಕೆಯ ಬಗ್ಗೆ ಹೇಳುತ್ತವೆ.
ಈ ಏಕತಾನತೆಯ,
ದಿನಗಳ ತಿಂಗಳುಗಳ ತೊಟ್ಟಿಲು ರಾಟೆಯ ಚಕ್ರದಲ್ಲಿ,
ನಿರಂತರ ಹೊಸ ಆರಂಭಗಳ ಗುಟ್ಟನ್ನು
ಇಂದಿಗೂ ಹುಡುಕುತ್ತಲೇ ಇದ್ದೇನೆ,
ಹೀಗೆ, ಕೊನೆಗೂ ನಾನು ಐವತ್ತು ವರುಷಗಳನ್ನು ದಾಟಿದೆ.


ಪ್ರಕ್ಷೇಪ ಚಿಹ್ನೆಗಳು
ಮೂಲ: Parenthetical

ಹೂವಾಗಲಿ ಎಲೆಯಾಗಲಿ,
ಎಷ್ಟೇ ಸುಂದರವಾಗಿದ್ದರೂ,
ಹೆಚ್ಚು ಕಾಲ ಅರಳಿರುವುದಿಲ್ಲ, ಮಡಿಯುತ್ತವೆ.
ತಮ್ಮ ಅಳಿವಿನ ಖಚಿತತೆಯ ಅರವಿದ್ದಾಗ್ಯೂ,
ಅವು ಅಚಲವಾಗಿ ಅರಳುತ್ತಲಿರುತ್ತವೆ,
ತಮ್ಮದೇ ಗುಲ್ಲನ್ನೆಬ್ಬಿಸುತ್ತಾ.
ಇದು ಬಲಹೀನವಾಗಿ ಅಥವಾ ವಿಷಾದಕಾರವಾಗಿ ಕಂಡರೂ,
ಎಲ್ಲವೂ ನಿಶ್ಚಿತ ಪರಿಮಿತಿಯೊಳಗೆ ಜರುಗುತ್ತಿರುವುದಾಗ್ಯೂ,
ಇದು ಇಷ್ಟು ವೇದನೆಯೊಂದಿಗೆ,
ಇಷ್ಟು ಅಪಾಯಕರವಾಗಿ ನಡೆಯುತ್ತದೆಂಬ ವಿಷಯ,
ಅಪರಿಮಿತ ಆಶ್ವರ್ಯಕ್ಕೆ ಕಾರಣವಾಗುತ್ತೆ.

ಇನ್ನು ಮತ್ತೆ ಹೇಳುವುದಾದರೆ,
ಮನುಷ್ಯ ಮತ್ತು ಅವನ ವೈಭವ ನೊರೆಯಲ್ಲದೇ ಮತ್ತೇನಿಲ್ಲ:
ಆದಾಗ್ಯೂ ಈ ಗಳಿಗೆಯಲ್ಲಿ ಅವು ಪ್ರಕ್ಷೇಪ ಚಿಹ್ನೆಗಳ ನಡುವೆ ಇರುವ
ಅಪಾರ ಶೂನ್ಯತೆಯಲ್ಲಿ ಹೊಳೆಯುತ್ತಿವೆ.


ಸೂರ್ಯಬೆಳಕನ್ನು ನೋಡುತ್ತಾ
ಮೂಲ: Looking at the Sunlight

ನನ್ನ ಬೀಸುತ್ತಿರುವ ಕೈಗಳ ಹಾದು
ಪ್ರವಹಿಸುತ್ತಿರುವುದು ಅದೇ ಸೂರ್ಯಬೆಳಕಾದರೂ,
ನಾನು ಹಿಂದಕ್ಕೆ ತಿರುಗಿದಾಗ, ಅದು ನಾಚುತ್ತಾ ನನ್ನ
ಹಿಂಗತ್ತಿಗೆ ಕಚಗುಳಿಯಿಡುತ್ತೆ.

ನನಗೆ ಗೊತ್ತಿರದ ನೆಲಗಳಲ್ಲಿ –
ಅರಬ್ಬಿ ನಾಡುಗಳಲ್ಲಿ, ಭೂಮಧ್ಯರೇಖೆಯ ಪ್ರದೇಶಗಳಲ್ಲಿ –
ಅದು ಹಿಂದುಮುಂದು ನೋಡದೇ
ಮುಗ್ಗರಿಸಿ ನುಗ್ಗುತ್ತೆ, ಧಗಧಗಿಸುತ್ತಾ,
ಅಥವಾ ಹಿಮಕವಿದ ಸೈಬೀರಿಯಾದ ವಿಶಾಲ ಬಯಲಿನಲ್ಲಿ,
ನಡುಗುವ ಛಳಿಯಲ್ಲಿ ಅದು ಹೊದೆಯುತ್ತೆ, ರಕ್ಷಿಸುತ್ತೆ.

ಈ ಸೂರ್ಯಬೆಳಕು ಸಮವಾಗಿ ಇಳಿಯುತ್ತದೆ
ಗಾಳಿಯ ಸಂಗಡ, ಜಗದ ಮೇಲೆ ಬೆಳಗುತ್ತಾ.

ಆದರೆ ನಿನ್ನೆ ಪಲಾಯನವಾದ
ಅಥವಾ ನಾಳೆಯ ಉಜ್ವಲ ಸೂರ್ಯನ
ಯಾವ ಸುಳಿವೂ ಇಲ್ಲ;
ಈ ದಿನದ ಪ್ರಜ್ಞೆ ಮಾತ್ರ ಉಳಿದಿದೆ
ಈ ಭಯತುಂಬಿದ ಬರಿದಾದ ಗಳಿಗೆಯಲ್ಲಿ.

About The Author

ಎಸ್. ಜಯಶ್ರೀನಿವಾಸ ರಾವ್

ಜಯಶ್ರೀನಿವಾಸ ರಾವ್ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಗದ್ಯ-ಪದ್ಯಗಳ ಅನುವಾದಕರು.  ‘ಚಂದ್ರಮುಖಿಯ ಘಾತವು’ (1900) ಕಾದಂಬರಿಯನ್ನು, ‘ಸ್ಟೀಲ್ ನಿಬ್ಸ್ ಆರ್ ಸ್ಪ್ರೌಟಿಂಗ್: ನ್ಯೂ ದಲಿತ್ ರೈಟಿಂಗ್ ಫ಼್ರಮ್ ಸೌತ್ ಇಂಡಿಯ’ ಸಂಕಲನದಲ್ಲಿ ಕವನಗಳು, ಕತೆಗಳು, ಹಾಗೂ ಪ್ರಬಂಧಗಳನ್ನು, ಹಾಗೂ ಕೇರೂರ ವಾಸುದೇವಾಚಾರ್ಯರ ಸ್ವರಚಿತ ‘ವಿಸ್ಮಯಜನಕವಾದ ಹಿಂಸೆಯ ಕ್ರಮವು’ ಎಂಬ ಶರ್ಲಾಕ್ ಹೋಮ್ಸ್ ಕತೆಯನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ.  “ಸುರಿದಾವೋ ತಾರೆಗಳು: ಅನುವಾದಿತ ಪೋಲಿಷ್ ಕವನಗಳು" (ಪೋಲೀಷ್‌ ಕವಿತೆಗಳ ಕನ್ನಡಾನುವಾದಿತ ಸಂಕಲನ).  ಇವರು ಇಂಗ್ಲಿಷಿಗೆ ಅನುವಾದ ಮಾಡಿದ ಶ್ರೀ ಕೆ. ವಿ. ತಿರುಮಲೇಶರ ಕವನಗಳು ಇಂಗ್ಲಿಷ್ ಸಾಹಿತ್ಯ ಪತ್ರಿಕೆಗಳಾದ ‘ಸೆಷುರೆ’ ಹಾಗೂ ‘ಮ್ಯೂಜ಼್ ಇಂಡಿಯ’ ದಲ್ಲಿ ಪ್ರಕಟವಾಗಿವೆ.  ಹೈದರಾಬಾದಿನ CIEFLನಿಂದ (ಈಗ The EFL University) ‘Translation and Transformation: The Early Days of the Novel in Kannada’ ಶೀರ್ಷಿಕೆಯಡಿಯಲ್ಲಿ ನಡೆಸಿದ ಸಂಶೋಧನೆಗಾಗಿ 2003ರಲ್ಲಿ PhD ಪದವಿ ಪಡೆದಿದ್ದಾರೆ.  ಎಸ್ಟೋನಿಯಾ, ಲ್ಯಾಟ್ವಿಯಾ ಹಾಗೂಲಿಥುವೇನಿಯಾ ದೇಶದ ಕವಿತೆಗಳ ಸಂಕಲನ 'ಬಾಲ್ಟಿಕ್ ಕಡಲ ಗಾಳಿ' ಇತ್ತೀಚೆಗೆ ಪ್ರಕಟವಾಗಿದೆ.

1 Comment

  1. bhagya ch

    ನಮಸ್ತೆ ಸರ್,

    ಚೇಯ್ಸಾಮ್ ಕವನಗಳನ್ನು ನಿಮ್ಮ ಅನುವಾದದ ಮೂಲಕ ಮನಸ್ಸಿಗೆ ಇಳಿಸಿಕೊಂಡು ಬಹಳ ದಿನಗಳೇ ಆದವು. ಚೇಯ್ಸಾಮ್ ಕುರಿತ ನನ್ನ ತಿಳುವಳಿಕೆಯನ್ನು ಸಂಕೋಚದಿಂದಲೇ ಒಂದೆರಡು ಸಾಲುಗಳಲ್ಲಿ ನಿಮ್ಮ ಮುಂದಿಡುವೆ.

    ಚೇಯ್ಸಾಮ್ ಅವರ ಬಡತನ,ಬವಣೆಗಳಿಗೂ ಕವನಗಳಲ್ಲಿ ಕಾಣಸಿಗುವ ಅವರ ಬದುಕಿನ ದರ್ಶನಕ್ಕೂ ಅಜಗಜಾಂತರವಿದೆ. ಈ ಕವನಗಳ ಮೌನದಲ್ಲಿ ಮಾತುಗಳಲ್ಲಿ ಕಾಣಸಿಗದ್ದನ್ನು ಕಂಡರಿಸಬಹುದು.

    ಥಟ್ಟನೆ ಕನ್ನಡದ ಕೆ.ಎಸ್.ನ.ನೆನಪಾದರು.ಅವರ ಇವನ ಹುಟ್ಟಿದ ಹಬ್ಬ ಕವನವು ನನಗೆ ಈ ಕ್ಷಣಕ್ಕೆ ಹೊಳೆದ ಕವನ.ಅವರ ಕವನದಲ್ಲಿ ಬರುವ ಮಾತೊಂದಿದೆ…” ಜಲಜನಕ ಬಾಂಬಿನಿಂದೀಲೋಕದಳಿವೆಂದು ಪತ್ರಿಕೆಯು ನುಡಿದರೂ ಬೆಳಗಾಯಿತು.” ಹಾಗೆಯೇ ಅವರ ತೆರೆದ ಬಾಗಿಲು ಕವನ ಕೂಡಾ.ಬದುಕಿನ ಅಪಸವ್ಯಗಳು, ದುರಂತಗಳಲ್ಲಿಯೇ ನಿಲ್ಲದೆ ಅದನ್ನು ದಾಟುವುದು.ಇಲ್ಲಿ ಎಲ್ಲವೂ ಚೆನ್ನಾಗಿದೆ ಎನ್ನುವ ಅಪ್ರಬುದ್ಧತೆ ಅಲ್ಲ ಇದು.ಪಕ್ವತೆಯ ಹಾದಿಯ ಪಯಣದಲ್ಲಿ ಎದುರಾಗುವ ಎಡರು ತೊಡರುಗಳಲ್ಲಿಯೇ ನಿಂತು ವಿಷಾದದ ನಿಟ್ಟುಸಿರು ಬಿಡದೆ ಅದನ್ನು ಮೆಟ್ಟುವ ಜೀವನ್ಮುಖತೆ ಇದು. ನೀವು ಕನ್ನಡಿಸಿರುವ ಚೇಯ್ಸಾಮ್ ಅವರ ಕವನಗಳಲ್ಲಿ … ಭಯತುಂಬಿದ ಬರಿದಾದ ಗಳಿಗೆಯಲ್ಲಿ … ಒಂದು exception ಅನಿಸುತ್ತದೆ. ಸಾವಿರ ವರುಷಗಳ ಗಾಳಿ ಒಂದು ಅದ್ಭುತ ಕವನ.

    ನನ್ನ ಕೆಲವು observation. ಒಬ್ಬ ಓದುಗಿಯಾಗಿ;ಉದ್ಧಟತನ ಎಂದು ಭಾವಿಸಬೇಡಿ.

    ಸತ್ತ ಮರದ ಮೇಲೆ ಮಲರಿದ ಹೂವುಗಳು..ಬದಲಿಗೆ ಅರಳಿದ ಹೂಗಳು … ಎಂದಿರಬಹುದು.
    ಅಲ್ಪ ಕ್ಷಣ..ಬದಲಿಗೆ ಚಣ ಕಾಲ ಎಂದಿರಬಹುದು.
    ಗಲ್ ಹಕ್ಕಿಗಳು ..ಪದ ಒಂಚೂರು ಹಿಡಿಯತ್ತೆ.

    ಮುಂದಿನ ನಿಮ್ಮ ಅನುವಾದಕ್ಕಾಗಿ ಕಾಯುತ್ತಾ ಇರುವೆ …

    ವಿಶ್ವಾಸದಿಂದ.

    ಭಾಗ್ಯ

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ