Advertisement
ಮಧು ವೈ.ಎನ್.‌ ಹೊಸ ಕಾದಂಬರಿ “ಇಂತಿ, ಪೂರ್ವಿ”ಯ ಕೆಲವು ಪುಟಗಳು

ಮಧು ವೈ.ಎನ್.‌ ಹೊಸ ಕಾದಂಬರಿ “ಇಂತಿ, ಪೂರ್ವಿ”ಯ ಕೆಲವು ಪುಟಗಳು

ಆ ಪದ ಕಿವಿಗೆ ಬೀಳುತ್ತಿದ್ದಂತೆ ಸೈಫೈ ಸಿನಿಮಾಗಳಲ್ಲಿ ರೋಬೋಗಳು ಬ್ಯಾಟರಿ ಡೌನಾಗಿ ತಾನಾಗೆ ಕುಸಿದಂತೆ ಶರತ್ ಕುಸಿದ. ಅವಳು ಹಂಗೇ, ಹಿಂದೆ ಮುಂದೆ ನೋಡದೇ ಅಂದುಬಿಡ್ತಿದ್ದಳು. ಜ್ಯಾಮಿಟ್ರಿ ಬಾಕ್ಸ್ಮುಚ್ಚಳವನ್ನು ಹಲ್ಲುಗಳನ್ನೆಟ್ಟಿ ತೆಗೆಯುತ್ತಿದ್ದಳು. ಅಸೆಂಬ್ಲಿನಲ್ಲಿ ಆಕಳಿಸುವಾಗ ತುಟಿ ಹರಿಯುವಷ್ಟು ಅಗಲ ಬಾಯಿ ತೆರೆಯುತ್ತಿದ್ದಳು. ಕಿರುನಾಲಗೆಯಿಂದ ಎಂಜಲನ್ನು ಮೋಟಾರಿನಂತೆ ಹಾರಿಸುತ್ತಿದ್ದಳು. ಇಡೀ ಕ್ಲಾಸಿಗೆ ರಾಣಿ, ರೌಡಿ ಎರಡೂ ಆಗಿದ್ದಳು. ಶರತ್‌ಗೆ ಆಳದಲ್ಲಿ ಅವಳೆಂದರೆ ಭಯ. ತಾನು ಸುಮ್ಮನಿದ್ದರೂ ಆಗಿತ್ತು; ಇಂಥಾ ಬಜಾರ್‌ಗಿತ್ತಿಯನ್ನು ಕೆಣಕಿ ʼಕಳ್ಳʼ ಅನ್ನಿಸ್ಕೊಳಂಗಾಯ್ತಲ್ಲ ಎಂದು ಕೈಹಿಸುಕಿಕೊಂಡ.
ಮಧು ವೈ.ಎನ್.‌ ಹೊಸ ಕಾದಂಬರಿ “ಇಂತಿ, ಪೂರ್ವಿ”ಯ ಒಂದು ಅಧ್ಯಾಯ ನಿಮ್ಮ ಓದಿಗೆ

ಶರತ್‌ಗೆ ಪೂರ್ವಿ ಕಂಡರೆ ಆಗ್ತಿರಲಿಲ್ಲ.

ಪೂರ್ವಿಗೂ ಶರತ್‌ನ ಕಂಡರೆ ಆಗ್ತಿರಲಿಲ್ಲ.

ಇಬ್ಬರೂ ಪ್ರತಿದಿನ ಏನಾದರೊಂದು ನೆಪ ಹುಡುಕಿಕೊಂಡು ಜಗಳ ಆಡುತ್ತಿದ್ದರು.

ಅವತ್ತು ಅಚರ್ಜಿ ಮೇಮ್ ಕಂಬೈನ್ಡ್‌ ಕ್ಲಾಸ್‌ ಅಂದಿದ್ದರು. ಅವಳು ಎ ಸೆಕ್ಷನ್ನು. ಅವನು ಬಿ ಸೆಕ್ಷನ್ನು. ಬಿ ಸೆಕ್ಷನ್‌ ಅಂದರೆ, ಸೆಕೆಂಡ್‌ ಕ್ಲಾಸ್‌ ಸಿಟಿಜೆನ್ಸ್‌ ತರಹ. ಅವನಿಗೆ ಈ ಅನ್ಯಾಯ ಅಂದರೆ ಆಗ್ತಿರಲಿಲ್ಲ. ʼಯಾಕೆ ಯಾವಾಗಲೂ ನಾವೇ ಅಲ್ಲಿಗೆ ಹೋಗಬೇಕು? ಅವರೇ ನಮ್ಮ ಕ್ಲಾಸಿಗೆ ಬರಬಹುದಲ್ಲ? ಮತ್ತೆ ನಾವೇ ಯಾಕೆ ಯಾವಾಗಲೂ ಕೆಳಗೆ ಕೂತ್ಕೊಬೇಕು? ಒಂದು ಸತಿ ನಾವು, ಒಂದು ಸತಿ ಅವರು ಕೂತ್ಕೋಬೋದಲ್ಲ?’ ಎಂದೆಲ್ಲಾ ಉಪಾಯವಾಗಿ ಹೇಳಿನೋಡಿದ, ಹಟ ಮಾಡಿದ, ಜಗಳ ಮಾಡಿದ, ನಾವು ಕ್ಲಾಸಿಗೇ ಬರಲ್ಲ ಎಂದು ಬಹಿಷ್ಕಾರ ಹಾಕಿದ. ಯಾವುದೂ ಪ್ರಯೋಜನಕ್ಕೆ ಬಂದಿರಲಿಲ್ಲ.

(ಮಧು ವೈ.ಎನ್.‌)

ಅವತ್ತು ಅಸೆಂಬ್ಲಿ ಬಿಟ್ಟ ತಕ್ಷಣ ಪೂರ್ವಿ ಓಡಿ ಹೋಗಿ ಅಸೈನ್ಮೆಂಟನ್ನು ಟೇಬಲ್‌ ಮೇಲಿಟ್ಟಳು. ಅವನು ತಡವಾಗಿ ಕಾಲೆಳೆದುಕೊಂಡು ಬಂದು ಅವಳ ಅಸೈನ್ಮೆಂಟ್‌ ಮೇಲೆ ತನ್ನ ಅಸೈನ್ಮೆಂಟ್‌ ಇಟ್ಟ. ಅವಳು ಎದ್ದು ಹೋಗಿ ಅವನದನ್ನು ಕೆಳಗೆ ಸರಿಸಿ ತನ್ನದನ್ನು ಮೇಲಿಟ್ಟಳು.

ಸ್ಟೇಜ್ಇಳಿಯುತ್ತ, ‘ಉ ಊ —ʼ ಅಂತ ಮೂತಿ ತಿರುವಿ ಬೆಂಚ್‌ಮೇಟ್ ದೀಪಾಗೆ, ‘ನೋಡೇ ಬೆಣ್ಣೆಮೂಸ ಏನ್ ಪಾಖಂಡಿ ಇದಾನೆ. ಮೇಮ್‌ ಬಂದ ತಕ್ಷಣ ತನ್ದೇ ಫಸ್ಟ್‌ ಕಾಣಿಸ್ಲಿ ಅಂತ ಬೇಕಂತ್ಲೇ ಲೇಟಾಗಿ ಬಂದು ಮೇಲಿಡ್ತಾನೆ,ʼ ಅಂದಳು.

ಅವತ್ತು ಅವನು ತಾಳ್ಮೆ ಕಳೆದುಕೊಂಡ. ಮೊದಲೇ ಕಂಬೈನ್ಡ್ಕ್ಲಾಸಿನ ವಿಷಯವಾಗಿ ಉರಉರ ಅನ್ನುತ್ತಿದ್ದ.

ಇಟ್ಸ್ ನಾಟ್‌ ಫನ್ನಿ.ʼ

ಪೂರ್ವಿ ಸ್ವಲ್ಪವೂ ತಾಗದವಳಂತೆ ಕಿಸಕ್ಕನೆ ನಕ್ಕಳು. ‘ವಾಟೆಲ್ಲ ನಾಟ್‌ ಫನ್ನಿ ಬೆಣ್ಣೆಮೂಸ, ಹಹಹಹʼ ಅಂತ ಆಡಿಕೊಂಡಳು. ಅದು ಅವಳೇ ಅವನಿಗೆ ಇಟ್ಟಿದ್ದ ಅಡ್ಡಹೆಸರು.

ಕಂಬೈನ್ಡ್ಕ್ಲಾಸಲ್ಲಿ ಅಷ್ಟು ಜನರ ಎದುರು ಇವಳು ಹೀಗನ್ನಬಹುದೇ, ಶರತ್‌ ಎದ್ದು ನಿಂತು-

‘ಹೋಗೇ ನಾಯಿ.ʼಎಂದು ಕಿರುಚಿದ.

ಬೆಳ್‌ ಬೆಳಿಗ್ಗೆ ಗಿಜಿಗಿಜಿಗಿಜಿ ಅಂತಿದ್ದ ಕ್ಲಾಸು ಪಿನ್‌ಡ್ರಾಪ್ಸೈಲೆನ್ಸ್ ಆಯಿತು. ಪೂರ್ವಿಯ ಕಡೆ ತಿರುಗಿತು. ಅವಳಿಗೆ ಆಘಾತ. ಹೊಸ ಬಾಣ, ಹಠಾತ್‌ ದಾಳಿ. ರೆಡಿಯಾಗಿರಲಿಲ್ಲ. ತನ್ನ ರೌಡಿತನದ ಬುಡಕ್ಕೇ ಕೊಡಲಿ ಪೆಟ್ಟು.

ತಾನೂ ಎದ್ದು ನಿಂತು ʼನಿಮ್ಮಪ್ಪ ನಾಯಿʼ ಅಂದಳು.

ಸಿಚುವೇಶನ್ನು ಸಡನ್ನಾಗಿ ಎಸ್ಕಲೇಟ್‌ ಆಗಿತ್ತು.

‘ನರಿ ವಂಶದೋಳೇ. ಇಡೀ ಜೀವ್ನ ನರಿ ಬುದ್ದಿಲೇ ಸಾಯ್ತಿರ‍್ತೀರ ಯಾವಾಗ್ಲೂ.ʼ

ನಿಮ್ದು, ನಿಮ್ದು ಹಂದಿ ವಂಶ. ಕೊಚ್ಚೇಲೆ ಉರುಳಾಡ್ತಿರ‍್ತೀರಾ ಯಾವಾಗ್ಲೂ.ʼ

ಹಾಗನ್ನುವಾಗ ಅವಳು ಎರಡು ಕೈಗಳನ್ನು ಉಂಡೆಗಟ್ಟಿ ಒಂದಕ್ಕೊಂದು ಗುದ್ದಿಸಿ ತೋರಿಸಿದಳು.

ಕ್ಲಾಸು ಬ್ಯಾಗಿನ ಹಿಡಿಯನ್ನು ಬಾಯಲ್ಲಿಟ್ಟುಕೊಂಡು ಕೊಳೆಯ ರಸವನ್ನು ಹೀರಿಕೊಳ್ಳುತ್ತ ಪಂದ್ಯಾವಳಿಗೆ ಅಣಿಯಾಗುತ್ತಿತ್ತು. ಅಷ್ಟರಲ್ಲಿ ಅಚರ್ಜಿ ಮೇಮ್ ಬಂದರು. ಶರತ್ ʼಮೇಮ್‌, ಇವತ್ತು ಹುಡುಗೀರ‍್ದು ಕಸ ಗುಡಿಸೋ ಟರ‍್ನು. ನೋಡಿ, ಇಲ್ನೋಡಿ, ಕಸ ಎಲ್ಲ ಹಂಗೇ ಐತೆ,ʼ ಎನ್ನುತ್ತ ಅಂಗೈಯಿಂದ ನೆಲ ಸವರಿ ಮೇಮಿಗೆ ತೋರಿಸಿದ.

ಪೂರ್ವಿ ʼಮ್ಯಾಮ್‌ ನಾವು ಬೆಳಗ್ಗೇನೆ ಬಂದು ಗುಡ್ಸಿ ಹೋಗಿದ್ವಿ ಮೇಮ್.‌ ಈ ಬಾಯ್ಸು ಗಲೀಜಂದ್ರೆ ಗಲೀಜು. ಬಟ್ಟೆ ಒಗ್ಯಲ್ಲ, ಶೂಸ್ತೊಳ್ಯಲ್ಲ. ಬಂದ್ಬುಡ್ತವೆ, ಅಂಗಂಗೆ ಮಣ್ ಮೆತ್ಗೊಂಡು. ಥೂ ವಾಷ್ಣಾ!ʼ ಅಂತ ಡ್ರಮಾಟಿಕ್ಕಾಗಿ ಮೂಗು ಮುಚ್ಚಿಕೊಂಡಳು.

ಮೇಮ್‌ಗೆ ಇಬ್ಬರೂ ಫೇವರಿಟ್ಟು. ಆಯಾ ಸೆಕ್ಷನ್ನಿನ ಗುಡ್‌ಸ್ಟೂಡೆಂಟು. ಯಾರನ್ನು ಬೈಯುವುದು, ಯಾರನ್ನು ಬಿಡುವುದು?

ವಾಟೀಜ್‌ ದಿಸ್‌, ಎರಡೇ ಅಸೈನ್ಮೆಂಟ್‌ ಇದೆ ಟೇಬಲ್‌ ಮೇಲೆ? ಉಳ್ದೋರ‍್ದೆಲ್ಲ ಎಲ್ಲಿ?ʼ ಅನ್ನುತ್ತ ತಾವೂ ಒಂದು ಆಟ ಆಡಿ ಪ್ಲೇಟ್‌ ತಿರುವಿ ಹಾಕಿದರು.

 

ಅದು ಹನ್ನೆರಡನೇ ತರಗತಿಯ ಮಧ್ಯಂತರ. ರೆಸಿಡೆನ್ಷಿಯಲ್‌ ಸ್ಕೂಲು. ಮೇಮು ಮಿಡ್‌ಟರ್ಮ್ಎಗ್ಸಾಮಿನ ಪೇಪರ್ಕಟ್ಟುಗಳನ್ನು ಹಿಡ್ಕೊಂಡು ಬಂದಿದ್ದರು. ಪೂರ್ವಿಗೆ ಜೀವ ಪುಕ ಪುಕ ಅಂತಿತ್ತು. ಪ್ರತಿ ಸಲಾನೂಮೂಸ ಸಮ ಸಮ ಪೈಪೋಟಿ ಕೊಟ್ಟಿರುತ್ತಿದ್ದ. ಇಂಗ್ಲೀಷ್‌ ಮೀಡಿಯಮ್ಮು, ಫಾರಿನ್ಆಥರು ಎಂದು ಸಕ್ಕತ್ ಸ್ಕೋಪ್ತಗೊಳ್ಳುತ್ತಿದ್ದ. ಸ್ಟಾಫ್‌ರೂಮಲ್ಲೆಲ್ಲಾ ಲೆವೆಲ್ಇಟ್ಟಿದ್ದ. ಎಷ್ಟೋ ಸಲ ಪಂದ್ಯ ಟೈ ಆಗಿರುತ್ತಿತ್ತು. ತೆಗೆದಿದ್ದರೆ ಇಬ್ಬರೂ ಔಟಾಫೌಟ್ತೆಗೆದಿರ‍್ತಿದ್ದರು. ಮಿಸ್ಟೇಕ್‌ ಮಾಡಿದ್ದರೆ ಅದೇ ಪ್ರಶ್ನೆಯಲ್ಲಿ ಎಡವಿರುತ್ತಿದ್ದರು.

ಮೇಮು ಈ ಸಲ ಎಲ್ಲರ ಸಮಕ್ಷಮವೇ ತುಟಿ ಕಡಿಯುತ್ತ ಪುನಃ ಪೇಪರ್‌ ತಿರುವಿ ಹಾಕಿ ಅಲ್ಲರ್ಧ ಇಲ್ಲರ್ಧ ಪ್ಲಸ್ಸು ಮೈನಸ್ಸು ಮಾಡಿ ಸೂಪರ್‌ ಓವರ್‌ ಆಡಿ ಕಡೆಯಲ್ಲಿ ಒಂದರ್ಧ ಅಂಕದ ವ್ಯತ್ಯಾಸಕ್ಕೆ ತಂದಿಟ್ಟರು.

ಶರತ್ ಪುನಃ ಫಸ್ಟ್ ಬಂದಿದ್ದ. ಪೂರ್ವಿ ಬೆಂಚಿಗೆ ತಲೆ ಕೊಟ್ಟಳು.

ಶರತ್ ತನ್ನ ಬೆಂಚ್‌ಮೇಟ್ಉಮೇಶ್‌ಗೆ ʼನೋಡೋ, ಪೊಜಿಶನ್ ತಗೊಂತಿದಾಳೆ,ʼ ಅಂದ.

ಸಿಮೆಂಟ್‌ ನೆಲದ ಮೇಲೆ ಒಂದೊಂದೇ ಹನಿ ಉದುರತೊಡಗಿದವು.

ಉಮೇಶ, ‘ಥೋ ಲೇ ಅಳ್ತಾವ್ಳೋʼ

ಬಿಡೊಲೋ, ಅರ್ಧ ಮೂಗಿಂದಾನೇ ಸೋರ್ತಿರುತ್ತೆ. ಬೆಟ್ಸಾ?ʼ

ಅವನು ಹಂಗಂತಿದ್ದಂಗೆ ಹನಿಗಳು ದಪ್ಪ ಆದವು. ಪಟಪಟನೆ ಬೀಳತೊಡಗಿದವು. ಕ್ಲಾಸ್ ಮುಗಿಯುವಷ್ಟರಲ್ಲಿ ಪೂರ್ವಿಯ ಕಣ್ಣು ಇಷ್ಟು ದಪ್ಪ ಊದಿಕೊಂಡು ಮೂಗು ಚೆರ‍್ರಿ, ಕೆನ್ನೆ ಮಾವಿನಹಣ್ಣಾಗಿದ್ದವು. ಮೇಮ್‌ ಹೊರಟರು.

ನೋಡ್ತಿರು, ಕರೆಂಟು ಹೋದ್ರೆ ಮೋಟ್ರು ಇದ್ಕಿದ್ದಂಗೆ ಆಫಾಗುತ್ತಲ್ಲ ಹಂಗೆ ಈಗ ನಲ್ಲಿನೂ ಆಫಾಗುತ್ತೆʼ.

ಯಾಕೆ?ʼ

ಮ್ಯಾಮಿನ ಎದುರು ಅತ್ತರೆ ಅದಕ್ಕೊಂದು ಬೆಲೆ ಗೌರವ ತೂಕ. ಮ್ಯಾಮ್ ಇಲ್ದಾಗ ಅತ್ತರೆ ಏನು ಪ್ರಯೋಜನ? ನಮಗ್ಗೊತ್ತಿಲ್ವೇ ಇವಳ ಮೆತಮೆಟಿಕ್ಸುʼ

ಮ್ಯಾಮ್‌ ಹೋದರು. ಪೂರ್ವಿ ಅವನು ಊಹಿಸಿದಂತೆಯೇ ಮಾಡಿದಳು. ಥಟ್ಟನೆ ಅಳು ನಿಲ್ಲಿಸಿ ಕರ್ಚೀಪಿನಿಂದ ಮೂಗು ಸೀಟಿಕೊಳ್ತಾ ʼಯೆಲ್ಲೋ ಮೊಸ್ಟಲಿ ಕಂಪ್ಯೂಟರ್‌ ಲ್ಯಾಬಿಗೆ ಕನ್ನ ಹಾಕಿ ಕ್ವಶ್ಚನ್ಪೇಪರ್ಎಗರಿಸಿ ಬರ‍್ದಿರ್ತಾನೆ ಕಣೇ, ಎಲ್ಲೋಗುತ್ತೆ ಗಂಡು ಜಾತಿದು ಕಳ್ಬುದ್ದಿ,ʼ ಅಂದಳು.

ಇವನು ಹುಡುಗರ ಕಡೆ ತಿರುಗಿ ದೇಹಾಂಗಗಳನ್ನು ನಾಟಕೀಯವಾಗಿ ಆಡಿಸ್ತಾ, ʼಮಿಸ್‌ ಇಲ್ಲಿ ಅರ್ಧ ಕೊಡಿ, ಅಲ್ಲಿ ಅರ್ಧ ಕೊಡಿ ಅಂತ ಅರ್ಧ ಮಾರ್ಕು, ಕಾಲು ಮಾರ್ಕಿಗೆಲ್ಲಾ ಪೂಸಿ ಹೊಡ್ದು, ಗಳಗಳಾಂತ ಅತ್ತು ಭಿಕ್ಷೆ ಹಾಕಿಸ್ಕೊಳ್ಳೋ ಹೆಣ್‌ ಜಾತಿ ಅಲ್ಲ ನಮ್ದು,ʼ ಅಂದ.

ʼಹೌದೌದು, ಕಂಡಿಲ್ವಾ ಹೋದೊರ್ಷ ಪೇಪರ್‌ ಕದ್ದು ಎಗ್ಸಾಮ್ಬರ‍್ದಿದ್ದು. ಹೋಗೋ ಕಳ್ಳ.ʼ

ಕಳ್ಳ!

ಆ ಪದ ಕಿವಿಗೆ ಬೀಳುತ್ತಿದ್ದಂತೆ ಸೈಫೈ ಸಿನಿಮಾಗಳಲ್ಲಿ ರೋಬೋಗಳು ಬ್ಯಾಟರಿ ಡೌನಾಗಿ ತಾನಾಗೆ ಕುಸಿದಂತೆ ಶರತ್ ಕುಸಿದ. ಅವಳು ಹಂಗೇ, ಹಿಂದೆ ಮುಂದೆ ನೋಡದೇ ಅಂದುಬಿಡ್ತಿದ್ದಳು. ಜ್ಯಾಮಿಟ್ರಿ ಬಾಕ್ಸ್ಮುಚ್ಚಳವನ್ನು ಹಲ್ಲುಗಳನ್ನೆಟ್ಟಿ ತೆಗೆಯುತ್ತಿದ್ದಳು. ಅಸೆಂಬ್ಲಿನಲ್ಲಿ ಆಕಳಿಸುವಾಗ ತುಟಿ ಹರಿಯುವಷ್ಟು ಅಗಲ ಬಾಯಿ ತೆರೆಯುತ್ತಿದ್ದಳು. ಕಿರುನಾಲಗೆಯಿಂದ ಎಂಜಲನ್ನು ಮೋಟಾರಿನಂತೆ ಹಾರಿಸುತ್ತಿದ್ದಳು. ಇಡೀ ಕ್ಲಾಸಿಗೆ ರಾಣಿ, ರೌಡಿ ಎರಡೂ ಆಗಿದ್ದಳು. ಶರತ್‌ಗೆ ಆಳದಲ್ಲಿ ಅವಳೆಂದರೆ ಭಯ. ತಾನು ಸುಮ್ಮನಿದ್ದರೂ ಆಗಿತ್ತು; ಇಂಥಾ ಬಜಾರ್‌ಗಿತ್ತಿಯನ್ನು ಕೆಣಕಿ ʼಕಳ್ಳʼ ಅನ್ನಿಸ್ಕೊಳಂಗಾಯ್ತಲ್ಲ ಎಂದು ಕೈಹಿಸುಕಿಕೊಂಡ.

ಅಂದು ಪೂರ್ವಿ ಗೆದ್ದಂತೆ ಬೀಗುತ್ತಾ ವಿಜಯದ ನಗೆ ಚೆಲ್ಲುತ್ತಾ ಡಾರ್ಮಿಟರಿಗೆ ಹೋದಳು. ಬೆಡ್‌ ಮೇಲೆ ಉರುಳಿಕೊಂಡಳು. ಗೆಳತಿಯರೆಲ್ಲಾ ಟೀ ಸ್ನ್ಯಾಕ್ಸಿಗೆಂದು ಹೋದರೆ ಇವಳು ಬೆಡ್‌ಶೀಟ್‌ ಗುಬುರು ಹಾಕಿಕೊಂಡು ಕುಂಡಿ ಮೇಲೆತ್ತಿಕೊಂಡು ಮುಖ ದಿಂಬಿಗೆ ಕೊಟ್ಟು ಬಿಕ್ಕಳಿಸಿ ಬಿಕ್ಕಳಿಸಿ ಅತ್ತಳು.

ನನ್ನೇ ನಾಯಿ ಅಂತಾನೆ.

ನಮ್ದು ನರಿವಂಶ ಅಂತೆ.

ಮುಟ್ಟಿ ನೋಡ್ಕೊಬೇಕು, ಹಂಗೆ ಕೊಟ್ಟಿದ್ದೀನಿ ಇವತ್ತು.

ಮೇನ್ಎಗ್ಸಾಮಲ್ಲಿ ಫಸ್ಟ್‌ ಬಂದು ತೋರಿಸ್ಲಿಲ್ಲಾ ಅಂದರೆ ನನ್ನ ಹೆಸ್ರು ʼಪ್ರಿನ್ಸೆಸ್ ಪೂರ್ವಿʼನೇ ಅಲ್ಲಾ ಎಂದು ಶಪಥ ಹಾಕಿಕೊಂಡಳು.

***

ಶರತ್ ಹಾಗೆ ಕುದ್ದು ಮುದುರಿದ್ದಕ್ಕೆ ಬಲವಾದ ಕಾರಣ ಉಂಟು. ಹೋದ ವರುಷ, ಹೆಚ್ಚೂ ಕಮ್ಮಿ ಇದೇ ಸಮಯ.

ಇವರ ಬ್ಯಾಚಿನ ಹುಡುಗರು ಕ್ರಾಂತಿ ಮಾಡ್ತೀವಿ, ಭ್ರಷ್ಟರನ್ನು ಬಯಲಿಗೆಳಿತೀವಿʼ ಎಂದು ಲೈಬ್ರರಿಗೂ ಸ್ಟಾಫ್‌ರೂಮಿಗೂ ಕನ್ನ ಹಾಕಿ ಸಿಕ್ಕಿಹಾಕಿಕೊಂಡಿದ್ದರು. ಆದರೆ ಬಿಟ್ಟಾಕ್ರಾಂತಿಯೊಳಗೆ ನಿಜಕ್ಕೂ ಒಂದು ಕಳ್ಳತನ ಸೇರಿಸ್ಕೊಂಡಿದ್ದ. ಬಿಟ್ಟಾ ಅಂದರೆ ಅವನ ಮೂಲ ಅಡ್ಡಹೆಸರು ರ‍್ಯಾಬಿಟ್ಟ ಅಂತ. ಬೆಳ್ಳಗಿದ್ದ ಅಂತ ಜನ ಹಾಗೆ ಕರೆಯುತ್ತಿದ್ದರು. ಎಷ್ಟೆಂದರೆ ಅವನಿಗೆ ಮುಖದ ಮೇಲೆ ಚಿಗುರುತ್ತಿದ್ದ ಗಡ್ಡ ಮೀಸೆ ಸಹ ಕೆಂಚಗಿರ್ತಿತ್ತು. ಮುಂಜಾನೆ ಮುಖದ ಮೇಲೆ ಎಳೆ ಬಿಸಿಲು ಬಿದ್ದಾಗ ಕೆನ್ನೆ ಮೇಲಿನ ಕೂದಲು ಕೆಂಚಗೆ ಹೊಳೆಯುತ್ತಿತ್ತು. ಹುಡುಗರು ʼಬಿಟ್ಟಾ ಕೆಳಗೂ ಹಂಗೇನೋ?ʼ ಅಂತ ಛೇಡಿಸ್ತಿದ್ದರು. ಅಡ್ಡ ಹೆಸರು ಉದ್ದ ಆಯ್ತು ಅಂತ ರ‍್ಯಾ ಕಳಚಿ ಬಿಟ್ಟಾ ಉಳಿಸಿಕೊಂಡಿದ್ದರು.

ಬಿಟ್ಟಾ ಆ ಕಾಲಕ್ಕೆ, ಅಂದರೆ ಜನ ಇನ್ನು ವಿಂಡೋಸ್ ಡಾಸ್ಕಮ್ಯಾಂಡುಗಳನ್ನು ಓಡಿಸ್ತಿದ್ದ ಕಾಲಕ್ಕೆ ಹ್ಯಾಕರು! ಕಪ್ಪು ಬಿಳುಪು ಹಾಳೆಗಳ ಮೇಲಿನ ತೆಳುಗೆರೆಗಳ ಉಬ್ಬುತಗ್ಗುಗಳಿಗೇ ಉದ್ರೇಕಗೊಳ್ತಿದ್ದ ಹುಡುಗರಿಗೆ ತುಂಬು ದೇಹದ ಬಣ್ಣದ ಚಿತ್ರಗಳನ್ನು ಪರಿಚಯಿಸಿದ ಶ್ರೇಯಸ್ಸು ಈತನಿಗೆ ಸಲ್ಲಬೇಕು.

ಆ ದಿನ ಕ್ರಾಂತಿ ಮುಗಿಸಿಕೊಂಡು ವಾಪಸ್ ಬರುವಾಗ ʼಇಲ್ಲಿವರೆಗೂ ಬಂದಿದ್ದಕ್ಕೂ ಎರಡೊಂದು ಕೆಲಸ ಆಗುತ್ತೆʼ ಅಂತೇಳಿ ಅವನು ಕಂಪ್ಯೂಟರ್‌ ಲ್ಯಾಬಿಗೆ ನುಗ್ಗಿ ಫೋಲ್ಡರೊಳಗಿನ ಫೋಲ್ಡರೊಳಗೆ ಬಚ್ಚಿಟ್ಟಿದ್ದ ವಾರ್ಷಿಕ ಪರೀಕ್ಷೆಯ ಕ್ವಶ್ಚನ್‌ಪೇಪರುಗಳ ಪ್ರಿಂಟ್‌ ತೆಗೆದುಕೊಂಡು ಬಂದಿದ್ದ. ಎಗ್ಸಾಮಲ್ಲಿ ಇಡೀ ಬಾಯ್ಸಿಗೆ ಬಾಯ್ಸೇ, ಲಾಸ್ಟ್‌ ಬೆಂಚಿನ ಲಂಬೂ ಲಂಬೋದರರೂ ಸಹ ಪೂರ್ವಿಗಿಂತ ಚೆನ್ನಾಗಿ ಉತ್ತರ ಬರೆದಿದ್ದರು. ಬಿಟ್ಟಾ ಬಡ್ಕೊಂಡಿದ್ದ, ʼಎಲ್ರೂ ಒಂದೊಂದು ಪ್ರಶ್ನೆಗೆ ತಪ್ಪು ಉತ್ತರ ಬರಿರೋ, ಕೆಟ್ಟ ಹ್ಯಾಂಡ್‌ರೈಟಿಂಗಲ್ಲಿ ತಿದ್ದಿರೋ, ಕುಚ್ಕುಚ್ಹೋತಾ ಹೇ, ಹಮ್‌ ದಿಲ್‌ ದೇ ಚುಕೇ ಸನಮ್‌ಗಳನ್ನು ಸೆರಿಸ್ರೋ,ʼ ಅಂತ. ಜಾಮೂನ್ಕೈಗಿಟ್ಟು ಈಗ ಬೇಡ, ಬೆಳಿಗ್ಗೆ ತಿನ್ನಿ ಅಂದರೆ ಹೆಂಗೆ? ಹುಡುಗರು ಹಿಂದಿನ ರಾತ್ರಿ ಡಾರ್ಮಿಟರಿಯಲ್ಲಿ ವೃತ್ತಾಕಾರದಲ್ಲಿ ಕೂತು ಉತ್ತರಗಳನ್ನು ಪ್ರಿಂಟ್ ಒತ್ತಿ ಕಾಂಪೋಂಡ್‌ ಹಾರಿ ಪಕ್ಕದ ಹಳ್ಳಿ ವುಡ್ಲಾಂಡ್ಸಿಗೆ ಪೇರಿ ಕಿತ್ತಿದ್ದರು.

ಕಾರಣ ಅವತ್ತೇ ಇಂಡಿಯಾ ಅಸ್ಟ್ರೇಲಿಯಾ ವರ್ಲ್ಡ್‌ಕಪ್‌ ಫೈನಲ್ ಮ್ಯಾಚು. ಸೌರವ್ಗಂಗೂಲಿ ವರ್ಸಸ್ರಿಕಿ ಪಾಂಟಿಂಗ್. ಅದೂ ಮಧ್ಯರಾತ್ರಿ ಎರಡು ಗಂಟೆಗೆ!

ಎವ್ಯಾಲುವೇಶನ್‌ ಸಮಯದಲ್ಲಿ ಆನ್ಸರ್ಶೀಟುಗಳನ್ನು ನೋಡಿದ ಟೀಚರ‍್ಸಿಗೆ ಡೌಟ್‌ ಕೂಡ ಪಡಬೇಕಿರಲಿಲ್ಲ. ಎಲ್ಲವೂ ನಿಚ್ಛಳ. ಬಾಯ್ಸು ಟೀಚರ್ಸ್‌ ಕೊಟ್ಟ ಶೀಟುಗಳಲ್ಲಿ ಪ್ರಶ್ನೆಗಳನ್ನೇ ಟ್ರ್ಯಾಕ್ಟರಿನ ಚಕ್ರಗಳ ಗಾತ್ರದಲ್ಲಿ ಪುನರಾವರ್ತಿಸಿ ಅಡಿಶನಲ್ಶೀಟುಗಳಲ್ಲಿ ಮಾತ್ರ ಪ್ರಿಂಟ್‌ ಒತ್ತಿದಂತಹ ಉತ್ತರಗಳನ್ನು ತುಂಬ್ಸಿದ್ದರು. ಸಮಸ್ತ ಟೀಚರ‍್ಸು ಸ್ಟಾಫ್‌ರೂಮಿನಲ್ಲಿ ಗುಪ್ತ ಸಮಾಲೋಚನೆ ನಡೆಸಿ ಮುಖ್ಯಾಪರಾಧಿಗಳನ್ನು ಕಂಡು ಹಿಡಿದು ಡಿಸ್ಮಿಸ್‌ ಮಾಡಿ ಉಳಿದೋರಿಗೆ ಹೊಸ್ದಾಗಿ ಪರೀಕ್ಷೆ ಕೊಡಬೇಕು ಅನ್ನುವ ತೀರ್ಮಾನಕ್ಕೆ ಬಂದಿದ್ದರು. ಆ ಗಳಿಗೆಯಲ್ಲಿ ಕಂಪ್ಯೂಟರ್‌ ಸರ್‌ ಆಪತ್ಬಾಂಧವರಂತೆ ಆಗಮಿಸಿ ʼಇದೆಲ್ಲ ಬ್ಯಾಡ ಬುಡಿ, ತಿರಗ ಎಗ್ಸಾಮಂದ್ರೆ ನಮ್ಗೇ ತಲೆನೋವು, ಇನ್ನಷ್ಟು ಕೆಲಸ. ಮತ್ತಿದೇನು ಬೋರ್ಡ್ಎಗ್ಸಾಮ್ಕೆಟ್ಟೋಯ್ತಾʼ ಎನ್ನುತ್ತ ಹುಡುಗರಿಗೆ ಸಾಮೂಹಿಕವಾಗಿ ಜಸ್ಟ್ ಪಾಸ್‌ ಮಾರ್ಕ್ಸ್ ಸುತ್ತುವ ಉಪಾಯ ಸೂಚಿಸಿದ್ದರು. ಪಾಪ ಅವರಿಗೆ ಅವರದ್ದೇ ಆದ ಚಿಂತೆ. ಎಲ್ಲಿ ಈ ಹುಡುಗರು ಫೋಲ್ಡರೊಳಗಿನ ಫೋಲ್ಡರಿಗೆ ನಂದಿನಿ ಫೈಲ್ಸ್‌ ಅಂತ ಇಟ್ಟಿದ್ದ ಹೆಸರನ್ನು ಬಾಯಿ ಬಿಡುತ್ತಾರೋ ಎಂಬ ದಿಗಿಲು. ನಂದಿನಿ ಅಂದರೆ ಹೊಸದಾಗಿ ಬಂದಿದ್ದ ಮ್ಯೂಜಿಕ್ ಟೀಚರು.

ಹುಡುಗರಿಗೆ ಹೆಂಗೋ ಮ್ಯಾಚೂ ನೋಡ್ದಂಗಾಯ್ತು, ಎಗ್ಸಾಮೂ ಪಾಸಾಯ್ತು, ಮಾರ್ಕ್ಸು ಎಷ್ಟಾದ್ರೂ ಕೊಟ್ಕೊಳ್ಳಲಿ ಅನ್ನೊ ಉದಾಸೀನ. ಇವನಿಗೆ ಮಾತ್ರ ಹೇಳತೀರದ ವೇದನೆ. ಟೀಚರ‍್ಸು ಅವನಿಗೂ ಮೂವತ್ತೈದು ಸುತ್ತಿಟ್ಟಿದ್ದರು. ಬಾಯ್ಸು ಬೇಡ್ವೋ ಹೋಗ್ಬೇಡ್ವೋ ನಮ್ಮ ಹೆಸರು ಹೇಳ್ಬೋಡ್ವೋ ಅಂತ ದಿಗ್ಭಂಧನ ಹಾಕಿದ್ದರು. ʼನಿನಗೆ ಸ್ನೇಹ ಮುಖ್ಯನಾ, ಚಿಲ್ರೆ ಸಾಧನೆ ಮುಖ್ಯನಾ?ʼ ಎಂದು ಬ್ಲಾಕ್‌ಮೇಲ್‌ ಮಾಡಿದ್ದರು.

ಆಗ ತಾನೇ ಪ್ರಾಂಶುಪಾಲ ದರ್ಜೆಗೆ ಏರಿದ್ದ ಶೆರ್ಲಿ ಮೇಮ್‌ ಅವತ್ತು ಸಂಜೆ ವಾಕಿಂಗ್‌ ಹೋಗ್ತಾ ಅವನನ್ನೋಡಿ ಯು ಟೂ?ʼ ಅಂದು ಇನ್ನಷ್ಟು ನರಕಕ್ಕೆ ತಳ್ಳಿದ್ದರು. ಅವನು ತಡ್ಕಳಕ್ಕಾಗದೇ ʼನಾಟ್ಮಿʼ ಎಂದು ಅರ್ಧಸತ್ಯವನ್ನಷ್ಟೇ ನುಡಿದಿದ್ದ. ಮೇಮು ಅಚರ್ಜಿಯವರನ್ನ ಕರೆಸಿ ಉತ್ತರಪತ್ರಿಕೆಗಳನ್ನ ತರಿಸಿಕೊಂಡು ಕೂಲಂಕಷವಾಗಿ ಪರಿಶೀಲಿಸಿದ್ದರು. ವ್ಯತ್ಯಾಸ ಢಾಳಾಗಿತ್ತು. ಅವನದ್ದು ಇಂಟರ್‌ನ್ಯಾಶನಲ್ಆಥರುಗಳ ಉತ್ತರಗಳು. ಉಳಿದವರದ್ದು ಸ್ಥಳೀಯ ಗೈಡ್ಬುಕ್ಕಿನ ಉತ್ತರಗಳು.

ಶರತ್ ಫಸ್ಟು ಬಂದ, ಪೂರ್ವಿ ಸೆಕೆಂಡಿಗೆ ಸರುಗಬೇಕಾಯಿತು.

ಸರುಗಿದೋಳು ಸುಮ್ಮನಿರುತ್ತಾಳಾ?

ಆಹಹಹಾ, ಪಕ್ಕದ ಬೆಡ್‌ನಲ್ಲಿ ಫ್ರೆಂಡ್ಸೆಲ್ಲಾ ಜೋರಾಗಿ ಡಿಸ್ಕಶನ್ಮಾಡ್ತಿರುವಾಗ ಇವ್ನು ಶ್ರೀರಾಮಚಂದ್ರನ ಥರ ಫ್ರೀಯಾಗಿ ಕಾಡು ಅಲ್ದಾಡ್ಕೊಂಡು ಬರೋಕೆ ಹೋಗಿದ್ನೇನೋ ಪಾಪʼ ಅಂತ ಎಲ್ಲರ ಎದುರು ವಾದಕ್ಕೆ ಇಳಿದಿದ್ದಳು. ಉತ್ತರಗಳು ಇಂಟರ್‌ನ್ಯಾಶನಲ್ಲೇ ಇರಬಹುದು, ಕ್ವಶ್ಚನ್ಸು ಕಿವಿಗೆ ಬಿದ್ದಿಲ್ದೆ ಇರುತ್ತಾ? ಇದು ಅವಳ ಲಾ ಪಾಯಿಂಟು. ಯಾರಿಗೂ ಅಲ್ಲಗಳೆಯಲು ಆಗುತ್ತಿರಲಿಲ್ಲ. ಇವನು ʼಕಿವಿಯಲ್ಲಿ ಬೆರಳಿಟ್ಕೊಂಡು ಓದ್ತಿದ್ದೆʼ ಅನ್ನುತ್ತಿದ್ದ.. ನಂಬುವ ಮಾತಾ? ಕಿವಿಯಲ್ಲಿ ಬೆರಳು ಇಟ್ಟುಕೊಂಡ ಮಾತ್ರಕ್ಕೆ ಕೇಳಿಸದೇ ಇರುತ್ತಾ? ಮೇಲಾಗಿ ಇವನು ಪತನಗೊಂಡ ಕ್ರಾಂತಿಯ ವಿಚಾರವಾಗಿ ಕ್ರಾಂತಿಕಾರಿಗಳಿಗೆ ಶಿಕ್ಷೆ ಪ್ರಮಾಣ ಕಡಿಮೆಗೊಳಿಸುವಲ್ಲಿ ಮದ್ಯಸ್ಥಿಕೆ ಬೇರೆ ವಹಿಸಿದ್ದನಲ್ಲಾ.

ʼಯಾಕಪ್ಪಾ? ಇವನಿಗೂ ಅದ್ಕೂ ಏನಪ್ಪ ಸಂಬಂಧ? ಇಡೀ ಯೋಜನೆಯ ನೀಲಿ ನಕ್ಷೆ ಇವನ್ದೇ, ಖದೀಮ ಅಮಾಯಕರನ್ನು ದಾಳಿಗೆ ದಬ್ಬಿ ತಾನು ಡಾರ್ಮಿಟರಿಯಲ್ಲಿ ಕೂತು ಹೆಯಿಸ್ಟ್ಮಾನಿಟರ್ಮಾಡಿದಾನೆ, ಸಿಗಾಕ್ಕಕೊಂಡ್ರೆ ಅವರು ಸಿಗಾಕ್ಕೊಳ್ಳಲಿ ಅಂತʼ ಎಂದು ಪೂರ್ವಿ ಹೊಸ ಬಾಂಬನ್ನೇ ಸಿಡಿಸಿದ್ದಳು. ಹುಡುಗರು ʼಹೌದೇನ್ಲೇ?ʼ ಎಂದು ಅವನ ಮೇಲೆ ತಿರುಗಿಬಿದ್ದಿದ್ದರು. ಆ ವರ್ಷವೆಲ್ಲಾ ಅವನಿಗೆ ʼರ‍್ಯಾಂಕ್‌ ಹೋದರೆ ಹೋಗಲಿ ಈ ಕಳಂಕದಿಂದ ಹೊರಗೆ ಬಂದ್ರೆ ಸಾಕಪ್ಪಾʼ ಅನ್ನುವಂತಾಗಿತ್ತು.

ಪೂರ್ವಿ ಬೇಸಿಗೆ ರಜೆ ಕಳೆದು ಮತ್ತೆ ಸ್ಕೂಲ್ಶುರುವಾಗುವವರೆಗೂ ʼಕಳ್ಬುದ್ದಿʼ, ʼಕಳ್ರು ವಂಶʼ ಅಂದ್ಕೊಂಡು ಲಟಿಗೆ ಮುರಿದುಕೊಂಡು ತಿರುಗಿದ್ದಳು. ಕೊನೆಗೆ ಆಡಿಯನ್ಸಿಗೇ ಅದರಲ್ಲಿ ಆಸಕ್ತಿ ಹೋಗಿಬಿಟ್ಟಿತು. ಎಳೆ ಮಗು ಅತ್ತು ಅತ್ತು ಸುಮ್ಮನಾದಂತೆ ಸುಮ್ಮನಾಗಿದ್ದಳು.

(ಕೃತಿ: ಇಂತಿ, ಪೂರ್ವಿ (ಕಾದಂಬರಿ), ಲೇಖಕರು: ಮಧು ವೈ.ಎನ್‌, ಪ್ರಕಾಶಕರು: ನೆಲಮುಗಿಲು ಪ್ರಕಾಶನ, ಬೆಲೆ: 300/-)

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ