ಬೇರೆಲ್ಲ ಹಬ್ಬಗಳು ಒಂದು ಎರಡು ದಿನಗಳಲ್ಲಿ ಮುಗಿದುಹೋದರೆ, ದೀಪಾವಳಿ ಮಾತ್ರ ನಾಲ್ಕು ಐದು ದಿನ ಮನೆಗಳಲ್ಲಿ ಸಂಭ್ರಮ ತುಂಬಿಸುತ್ತದೆ. ಕಾರ್ತಿಕ ಮಾಸ ಪೂರ್ತಿ ದೇವಾಲಯಗಳಲ್ಲಿ ಮನೆಗಳಲ್ಲಿ ನಿರಂತರ ದೀಪೋತ್ಸವ ಜರಗುತ್ತದೆ. ದೀಪಾವಳಿ ಹಬ್ಬಕ್ಕೆ ಪೂರ್ವ ಸಿದ್ಧತೆ ಸಾಕಷ್ಟು ಬೇಕು. ಭೂರೆ ತುಂಬಿಸುವುದು ಎಂಬ ಪದ್ಧತಿಯಿಂದ ಶುರುವಾಗುವ ಈ ಹಬ್ಬ ಎಣ್ಣೆ ಸ್ನಾನ, ಗೋಪೂಜೆ ಲಕ್ಷ್ಮೀ ಪೂಜೆ, ನರಕ ಚತುರ್ದಶಿ, ಬಲಿಪಾಡ್ಯಮಿ, ಕರಿ ಎಂಬ ದಿನಗಳನ್ನು ಮುಗಿಸಿ ಹೊಸ ತೊಡಕುವಿನೊಂದಿಗೆ ಬೀಳ್ಕೊಡುತ್ತದೆ.
ಭವ್ಯ ಟಿ.ಎಸ್. ಬರೆಯುವ “ಮಲೆನಾಡಿನ ಹಾಡು-ಪಾಡು” ಸರಣಿ ನಿಮ್ಮ ಓದಿಗೆ
ದೀಪ ಎಂಬ ಪದವೇ ದೇದೀಪ್ಯಮಾನವಾದುದು. ಕಗ್ಗತ್ತಲ ಸೀಳುವ ಮಂದಬೆಳಕನ್ನು ಮನೆಯಲ್ಲಿ ಹರಡುತ ಮನದ ಕೊಳೆಯನ್ನು ತೊಳೆದು ಬೆಳಗುವ ದೀಪ ತ್ಯಾಗದ ಸಂಕೇತವಾಗಿದೆ. ದೀಪ ಉರಿದಷ್ಟು ತನ್ನ ತೈಲವನ್ನು ಕಳೆದುಕೊಳ್ಳುತ್ತದೆ. ಬತ್ತಿ ಕರಕಲಾಗುತ್ತಾ ಹೋಗುತ್ತದೆ. ಆದರೆ ದೀಪ ಮಾತ್ರ ಬೆಳಕ ನೀಡುವ ಕಾಯಕವನ್ನು ಕೊನೆಯ ಕ್ಷಣದವರೆಗೂ ಮುಂದುವರಿಸುತ್ತದೆ. ಇಂತಹ ಸಹಸ್ರಾರು ದೀಪಗಳನ್ನು ಪ್ರತಿ ಮನೆಯಲ್ಲೂ ಬೆಳಗಿಸುವ ಹಬ್ಬವೇ ದೀಪಾವಳಿ… ಅಂದರೆ ದೀಪಗಳ ಸಮೂಹವೆಂದೇ ಅರ್ಥ.
ಬೇರೆಲ್ಲ ಹಬ್ಬಗಳು ಒಂದು ಎರಡು ದಿನಗಳಲ್ಲಿ ಮುಗಿದುಹೋದರೆ, ದೀಪಾವಳಿ ಮಾತ್ರ ನಾಲ್ಕು ಐದು ದಿನ ಮನೆಗಳಲ್ಲಿ ಸಂಭ್ರಮ ತುಂಬಿಸುತ್ತದೆ. ಕಾರ್ತಿಕ ಮಾಸ ಪೂರ್ತಿ ದೇವಾಲಯಗಳಲ್ಲಿ ಮನೆಗಳಲ್ಲಿ ನಿರಂತರ ದೀಪೋತ್ಸವ ಜರಗುತ್ತದೆ. ದೀಪಾವಳಿ ಹಬ್ಬಕ್ಕೆ ಪೂರ್ವ ಸಿದ್ಧತೆ ಸಾಕಷ್ಟು ಬೇಕು. ಭೂರೆ ತುಂಬಿಸುವುದು ಎಂಬ ಪದ್ಧತಿಯಿಂದ ಶುರುವಾಗುವ ಈ ಹಬ್ಬ ಎಣ್ಣೆ ಸ್ನಾನ, ಗೋಪೂಜೆ ಲಕ್ಷ್ಮೀ ಪೂಜೆ, ನರಕ ಚತುರ್ದಶಿ, ಬಲಿಪಾಡ್ಯಮಿ, ಕರಿ ಎಂಬ ದಿನಗಳನ್ನು ಮುಗಿಸಿ ಹೊಸ ತೊಡಕುವಿನೊಂದಿಗೆ ಬೀಳ್ಕೊಡುತ್ತದೆ.

ಭೂರೆ ತುಂಬಿಸುವ ಹಬ್ಬ: ದೀಪಾವಳಿಯ ಆಚರಣೆಯ ಮೊದಲ ದಿನ ಮುಸ್ಸಂಜೆ ಸಮಯದಲ್ಲಿ ಬಾವಿಕಟ್ಟೆಗೆ ಪೂಜೆ ಸಲ್ಲಿಸಿ ಕೊಡದಲ್ಲಿ ನೀರು ತುಂಬಿಸಿ ತಂದು ಮನೆಯಲ್ಲಿ ಸಿಂಗರಿಸಿ ಪೂಜಿಸಲಾದ ಹಂಡೆಗೆ ತುಂಬಿಸಲಾಗುತ್ತದೆ. ರಾತ್ರಿಯೆಲ್ಲಾ ಕನಸು ಕಂಡ ಈ ನೀರು ಮರುದಿನದ ಎಣ್ಣೆ ಸ್ನಾನಕ್ಕೆ ಶ್ರೇಷ್ಠ ಎಂಬ ನಂಬಿಕೆ ಇದೆ.
ಬೆಳಗಿನ ಜಾವ ಮನೆಮಂದಿಯೆಲ್ಲಾ ಕೊಬ್ಬರಿ ಎಣ್ಣೆ, ಹರಳೆಣ್ಣೆ, ಎಳ್ಳೆಣ್ಣೆ ಅರಿಶಿಣ ಮಿಶ್ರಣದ ತೈಲವನ್ನು ಮೈಗೆಲ್ಲಾ ಲೇಪಿಸಿಕೊಂಡು, ಸ್ವಲ್ಪ ಸಮಯದ ನಂತರ ಬಿಸಿ ಬಿಸಿ ನೀರಿನಿಂದ ಭೂರೆ ಸ್ನಾನ ಮಾಡುತ್ತಾರೆ.
ಗೋಪೂಜೆ: ಮನೆಯ ಕೊಟ್ಟಿಗೆ ಸಹ ಶುಭ್ರಗೊಳಿಸಿ, ದನಗಳನ್ನು ಮೈ ತೊಳೆಸುತ್ತಾರೆ. ಗೋ ಪೂಜೆಗಾಗಿ ಮಲೆನಾಡಿನಲ್ಲಿ ಸಿಗುವ ಉಗುಣೆಕಾಯಿಗಳನ್ನು ಸುರಿದು ಮಾಲೆ ಮಾಡುತ್ತಾರೆ. ಹೂಮಾಲೆಯೊಂದಿಗೆ ಉಗುಣೆ ಕಾಯಿ ಮಾಲೆ ಕಟ್ಟುವುದು ಸಂಪ್ರದಾಯ. ಈ ಮಾಲೆಗಳಿಗೆ ಚಪ್ಪೆ ರೊಟ್ಟಿ ಎಂಬ ಸಣ್ಣ ಸಣ್ಣ ರೊಟ್ಟಿಗಳನ್ನು ಮಾಡಿ ಕಟ್ಟುತ್ತಾರೆ. ಗೋ ಪೂಜೆ ದಿನ ಗೋವುಗಳ ಮೈಗೆ ಕೆಂಪು ಮತ್ತು ಬಿಳಿ ಬಣ್ಣದ ಚಿತ್ತಾರ ಮಾಡಿ, ಮಾಲೆಗಳಿಂದ ಸಿಂಗರಿಸಿ ಭಕ್ತಿಯಿಂದ ಪೂಜಿಸುತ್ತಾರೆ.
ತುಳಸೀ ಪೂಜೆ ಮತ್ತು ಬಲೀಂದ್ರ ಪೂಜೆ: ನರಕ ಚತುರ್ದಶಿ ದಿನ ಮನೆಯ ತುಳಸಿಯನ್ನು ಪೂಜಿಸುತ್ತಾರೆ. ಮನೆಯ ಕೃಷಿ ಸಲಕರಣೆಗಳನ್ನು ಮೊದಲೇ ಶುಚಿಗೊಳಿಸಿರುತ್ತಾರೆ. ಇವುಗಳನ್ನು ಓರಣವಾಗಿ ಜೋಡಿಸಿಟ್ಟು, ಒಂದು ಮಣ್ಣಿನ ಮಡಿಕೆಯಲ್ಲಿ ನೀರು ತುಂಬಿಸಿಟ್ಟು ಬಲೀಂದ್ರನನ್ನು ಆಹ್ವಾನಿಸಿ ಪೂಜಿಸುತ್ತಾರೆ.
ದೀಪೋಳಿಗೆ… ದೀಪೋಳಿಗೆ…: ಸಂಜೆ ಗದ್ದೆ ಮತ್ತು ತೋಟಗಳಿಗೆ ಹೋಗಿ ಪಂಜಿನ ದೀಪ ಹೊತ್ತಿಸಿ ಇಟ್ಟು ದೀಪೋಳಿಗೆ….. ದೀಪ್…ದೀಪ್.. ದೀಪೋಳಿಗೆ… ಎಂದು ಕೂಗಿ ತಾವು ಬೆಳೆದ ಫಸಲು ಮತ್ತು ಭೂಮಿ ತಾಯಿಗೂ ದೀಪಾವಳಿಯ ಶುಭಾಶಯಗಳನ್ನು ತಿಳಿಸಿ ಮನೆಗೆ ಮರಳುತ್ತಾರೆ.
ರಾತ್ರಿ ಮನೆಯನ್ನು ದೀಪಗಳಿಂದ ಅಲಂಕರಿಸಿ, ತುಳಸಿಯ ಮುಂದೆ ದೀಪಗಳನ್ನು ಹಚ್ಚಿಟ್ಟು, ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ. ಮಕ್ಕಳ ಆನಂದಕ್ಕೆ ಪಾರವೇ ಇಲ್ಲ. ಮಾಡಿದ ಹಬ್ಬದ ಅಡುಗೆಯನ್ನು ಬಾಳೆ ಎಲೆಗಳಲ್ಲಿ ಅಗಲಿದ ಹಿರಿಯರಿಗೆ ಎಡೆ ಮಾಡಿ ಎಲ್ಲರೂ ಧೂಪ ಹಾಕಿ ನಮಸ್ಕರಿಸಿ, ಹೊರಗೆ ಇಟ್ಟು ಬಂದ ಮೇಲೆ ಮನೆಯವರೆಲ್ಲ ಒಟ್ಟಿಗೆ ಕುಳಿತು ಊಟ ಮಾಡುತ್ತಾರೆ.
ಹೊಸತೊಡಕು: ಮಲೆನಾಡಿನ ಮನೆಗಳಲ್ಲಿ ದೀಪಾವಳಿಯ ಕೊನೆಯ ದಿನವನ್ನು ಹೊಸತೊಡಕು ಹಬ್ಬವೆಂದು ಆಚರಿಸುತ್ತಾರೆ. ಗದ್ದೆಯಿಂದ ಹೊಸ ಕದಿರನ್ನು ಮನೆಗೆ ತರಲಾಗುತ್ತದೆ. ವಾಹನಗಳನ್ನು ಪೂಜಿಸುತ್ತಾರೆ. ಮನೆಯಲ್ಲಿ ಸಿಹಿ ತಿಂಡಿಗಳನ್ನು ಮಾಡಿ, ಬಂಧುಗಳೆಲ್ಲಾ ಸೇರಿ ಹಬ್ಬ ಆಚರಿಸುತ್ತಾರೆ. ಇಂದು ಸಹ ಗದ್ದೆಗಳಿಗೆ ಹೋಗಿ ದೀಪ ಹಚ್ಚುತ್ತಾರೆ.
ದೀಪಾವಳಿ ಎಂದರೆ ಅಂದು ಅಜ್ಜಿ ಮನೆಯಲ್ಲಿ ಆಚರಿಸಲಾಗುತ್ತಿದ್ದ ನಿಯಮಬದ್ಧವಾದ ಹಬ್ಬ. ಹಬ್ಬಕ್ಕೆ ಹತ್ತು ದಿನಗಳ ಮೊದಲೇ ಮನೆಯಲ್ಲಿ ಕರಿ ಗುಡಿಸುವುದು ಎಂದು ಮನೆಯೆಲ್ಲಾ ಶುಭ್ರಗೊಳಿಸಲಾಗುತ್ತಿತ್ತು. ದೊಡ್ಡ ಅಂಗಳಕ್ಕೆ ಸಗಣಿ ಸಾರಿಸುವುದು. ಕೃಷಿ ಸಲಕರಣೆಗಳನ್ನು ಸ್ವಚ್ಛಗೊಳಿಸುವುದು. ಗೋಪೂಜೆ ಮತ್ತು ಬಲೀಂದ್ರ ಪೂಜೆಗೆ ಬೇಕಾದ ಸಾಮಗ್ರಿಗಳನ್ನು ಹುಡುಕಿ ತರುವುದು. ಹೋಳಿಗೆ, ಕಜ್ಜಾಯ ತಯಾರಿಸುವುದು. ಅಬ್ಬಬ್ಬಾ ನಮ್ಮ ಅಜ್ಜಿಯರ ತಾಳ್ಮೆ, ಶ್ರಮಗಳಿಗೆ ಯಾವ ಪ್ರಶಸ್ತಿ ನೀಡಿದರೂ ಕಡಿಮೆಯೇ. ಆದರೆ ಇಂದಿನ ದೀಪಾವಳಿ ಹಲವು ನಿಯಮಗಳನ್ನು ಸಡಿಲಿಸಿಕೊಂಡಿದೆ. ಹಳ್ಳಿಯ ಮನೆಗಳಲ್ಲೂ ಮೊದಲಿನಷ್ಟು ಶ್ರಮವಹಿಸಿ ದೀಪಾವಳಿ ಆಚರಿಸುತ್ತಿಲ್ಲ. ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾವಣೆಗಳನ್ನು ಮಾಡಿಕೊಳ್ಳುತ್ತಾರೆ. ಇನ್ನೂ ನಗರ ಭಾಗಗಳಲ್ಲಿ ಹಬ್ಬದ ನಿಯಮ ಪೂಜೆಗಳಿಗಿಂತ ರಂಗೋಲಿ, ಹೂವಿನ ಅಲಂಕಾರ, ವೈವಿಧ್ಯಮಯ ದೀಪಗಳ ಸಿಂಗಾರ, ಸುಂದರವಾದ ಬಟ್ಟೆಗಳನ್ನು ಧರಿಸುವುದು ಇಂತಹ ಅಂಶಗಳಿಗೆ ಹೆಚ್ಚು ಪ್ರಾಧಾನ್ಯತೆ ನೀಡಲಾಗುತ್ತಿದೆ. ಸಿಹಿ ತಿಂಡಿಗಳು ಸಹ ಅಂಗಡಿಗಳಲ್ಲಿ ಬೇಕಾದಂತೆ ದೊರೆಯುವುದರಿಂದ ಅಡುಗೆಯ ಶ್ರಮವೂ ಕಡಿಮೆಯಾಗಿದೆ.
ಒಟ್ಟಿನಲ್ಲಿ ದೀಪಾವಳಿಯ ಆಚರಣೆಯಲ್ಲಿ ಬದಲಾವಣೆಗಳೆಷ್ಟೇ ಆದರೂ ದೀಪಗಳ ಮಹತ್ವ ಮಾತ್ರ ಕಡಿಮೆಯಾಗಲಿಲ್ಲ. ಮನೆಮನೆಗಳಲ್ಲಿ ರಾತ್ರಿ ದೀಪಗಳನ್ನು ಹೊತ್ತಿಸಿ ಅಂಧಕಾರವನ್ನು ಹೊಡೆದೋಡಿಸುವ ಪದ್ಧತಿ ಎಂದಿಗೂ ಮರೆಯಾಗಲು ಸಾಧ್ಯವಿಲ್ಲ. ಆಕಾಶಬುಟ್ಟಿಯ ಹೊಂಬೆಳಕಿನಲ್ಲಿ ಹೊಸ ದಿನಗಳ ಕನಸು ನೇಯುವುದು ಎಂದಿನಂತೆ ಮುಂದುವರೆದಿದೆ.

ನೋವು, ಹತಾಶೆಗಳ ಕತ್ತಲಿಂದ ಮುಕ್ತಿ ನೀಡೆಂದು ದೇವರಲ್ಲಿ ಪ್ರಾರ್ಥಿಸಿ ದೀಪ ಹಚ್ಚೋಣ… ಬಾಳ ಕತ್ತಲೆಯ ಕಳೆಯಲೆಂದು…. ಆರೋಗ್ಯ, ಆಯುಷ್ಯ, ನೆಮ್ಮದಿಯ ಕರುಣಿಸೆಂದು…. ಈ ದೀಪಾವಳಿ ಪ್ರತಿಯೊಬ್ಬರ ಮನೆಯಲ್ಲಿ ನಗುವಿನ ಹೊನಲನ್ನೇ ಹರಸಲಿ ಎಂದು ಆಶಿಸುವೆ.
ಸರ್ವರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು

