Advertisement
ಮುದಿರಾಜ್‌ ಬಾಣದ್‌ ಕಾದಂಬರಿ “ಸಿಕ್ಕು” ಕೃತಿಯ ಆಯ್ದ ಭಾಗ

ಮುದಿರಾಜ್‌ ಬಾಣದ್‌ ಕಾದಂಬರಿ “ಸಿಕ್ಕು” ಕೃತಿಯ ಆಯ್ದ ಭಾಗ

ಅಡಿಗೆಮನೆಯಲ್ಲಿ ಇದ್ದ ಕಾಶಿಬಾಯಿ ಒಮ್ಮೆ ಸೂಕ್ಷ್ಮವಾಗಿ ಲಂಕ್ಯಾನನ್ನು ದಿಟ್ಟಿಸಿದಳು. ಆ ನೋಟಕ್ಕೆ ವಶೀಕರಣಗೊಂಡವನಂತೆ ಎದ್ದವನೇ ಮಗ ಹಾಗೂ ಮಗಳನ್ನು ಎಳೆದೆಳೆದು ಸಿಕ್ಕಸಿಕ್ಕಲ್ಲಿ ಮೈಮೇಲೆ ದೆವ್ವ ಬಂದವನಂತೆ ಬಡಿಯತೊಡಗಿದ. ಆ ಇಬ್ಬರೂ ಮಕ್ಕಳು ಬೆನ್ನನ್ನು ಸವರಿಕೊಳ್ಳುತ್ತ ತನ್ನ ತಂದೆ ಯಾಕೆ ಹೊಡೆಯುತ್ತಿದ್ದಾನೆ ಅನ್ನುವ ಅರಿವಿಲ್ಲದೆ ಅಳುತ್ತ ದಿಕ್ಕಿಗೊಂದು ಓಡತೊಡಗಿದರೆ ಹಿಂದೆ ಹಿಂದೆ ಹೋಗಿ ಮನಸ್ಸೋ ಇಚ್ಛೆ ಬೈಯುತ್ತ ಹೊಡೆಯತೊಡಗಿದ. ತಮ್ಮ ಅಜ್ಜಿಯಾಗಲಿ ಇಲ್ಲ ತಮ್ಮ ತಾಯಿಯಾಗಲಿ ಆ ಮಕ್ಕಳ ಸಹಾಯಕ್ಕೆ ಬರದೆ ಸುಮ್ಮನೆ ತಮ್ಮ ಪಾಡಿಗೆ ತಾವಿದ್ದದು, ತಂದೆಯ ಕೈಯಲ್ಲಿ ಅನಾಮತ್ತಾಗಿ ಸಿಕ್ಕಿ ಹೊಡೆಸಿಕೊಂಡಿದ್ದು ನೆನೆಸಿಕೊಂಡು ದುಃಖಿಸುತ್ತ ಮತ್ತಷ್ಟೂ ಅಳತೊಡಗಿದವು.
ಮುದಿರಾಜ್‌ ಬಾಣದ್‌ ಕಾದಂಬರಿ “ಸಿಕ್ಕು” ಕೃತಿಯ ಆಯ್ದ ಭಾಗ ನಿಮ್ಮ ಓದಿಗೆ

ಸಾಯಂಕಾಲದ ಇಳಿಹೊತ್ತು ಲಂಕ್ಯಾನಿಗೆ ಜೋಂಪು ಹತ್ತಿದಂಗಾಗಿ ನಿದ್ದೆ ಬಂತು. ದಡಲ್ಲಂತ ತನ್ನ ಹಣೆ ಮೇಲೆ ಏನೋ ಬಿದ್ದ ಶಬ್ದಕ್ಕೆ ಎಚ್ಚರವಾಗಿ ಕಣ್ಣು ಬಿಟ್ಟ. ತಲೆ ಹಗುರವಾಗಿತ್ತು. ಒಳಮನೆಯಲ್ಲಿದ್ದ ಕಾಶೀಬಾಯಿ ಗಾಬರಿಯಿಂದ ಓಡಿಬಂದು ಗಂಡನ ಹಣೆಮೇಲೆ ಫ್ಯಾನ್ ಬಿದ್ದ ಏಟಿಗೆ ಹಣೆಗೆ ಏಟಾಗಿ ರಕ್ತ ಜಿನುಗುತ್ತಿದ್ದ ಗಾಯವನ್ನು ನೋಡಿ ಏನು ಮಾಡಬೇಕು ತೋಚದೆ ಸುಮ್ಮನೆ ಕುಳಿತಳು. ಲಂಕ್ಯಾ ಅಲುಗಾಡದೆ ಮಲಗಿಕೊಂಡಿದ್ದ. “ರೀ ರೀ” ಅಂತ ಗಾಬರಿಯಿಂದ ಎಬ್ಬಿಸತೊಡಗಿದಳು. ಲಂಕ್ಯಾನಿಗೆ ಹೆಂಡತಿ ಮಾತನಾಡುವುದು ಕೇಳಿಸುತ್ತಿತು. ಆದರೆ ಅವನ ಮಾತು ಆಚೆ ಬರುತ್ತಿರಲಿಲ್ಲ. ಬರಿ ಮೇಲೆ ನೋಡುತ್ತ ಹಾಗೆ ಕಣ್ಣು ಬಿಡುತ್ತಿದ್ದ. ಹೊರಗ್ಹೋಗಿ ಕಟ್ಟೆಗೆ ಕುಂತು ಹರಟೆ ಹೊಡೆಯುತ್ತಿದ್ದ ಅತ್ತೆಯನ್ನು ಕರೆದುಕೊಂಡು ಬಂದಳು. ಸುತ್ತಮುತ್ತಲಿನ ಕೆಲವಷ್ಟು ಜನ ಬಂದು ಲಂಕ್ಯಾನ ಎಬ್ಬಿಸಿ ನೀರು ಕುಡಿಸಿದರು. ಕಾಶಿಬಾಯಿ ಅರಿಶಿಣ ತಂದು ಗಾಯಕ್ಕೆ ಹಚ್ಚಿದಳು. ಮೆಲ್ಲಗೆ ಭುಜ ಮುಟ್ಟಿ “ಬ್ಯಾನ್ಯಾತೇನು” ಅಂತ ಕಣ್ಣು ಸಣ್ಣದು ಮಾಡಿ ಕೇಳಿದಳು. ಲಂಕ್ಯಾನಿಗೆ ಅಣ್ಣತ್ತಿವರೆಗೂ ಉರಿದು ನಾಲಿಗೆ ಕಡಿದು ಕೈ ಮ್ಯಾಕೆತ್ತಿ “ನಿನಗಾ ಕೇಳಕನಾ ಹ್ಯಾಂಗ ಮನಸ್ಸು ಬರ್ತಾದ” ಅಂತ ಸನ್ನೆ ಮಾಡಿದ. ಮರುನಿಮಿಷದಲ್ಲೆ “ಹೋಗಿ ಕನ್ನಡಿ ತಾ” ಅಂತ ಸನ್ನೆ ಮಾಡಿದ. ಇವಳು ಪೆಚ್ಚಾಗಿ ನೋಡುತ್ತ, ‘ಮುಗಿತುʼ ತನ್ನ ಗಂಡನಿಗೆ ಹುಚ್ಚು ಹಿಡಿದಿದೆ ಇಂಥ ದೊಡ್ಡಗಾತ್ರದ ಹಳೆ ಪ್ಯಾನ್ ಹಣೆ ಮೇಲೆ ಬಿದ್ದಿದೆ. ಈತ ನೋಡಿದ್ರೆ ಕನ್ನಡಿ ತಾ ಅಂತನಲ್ಲ!ʼ ಅಂತ ಅನುಮಾನಿಸಿ ಎದ್ದು ಹೋಗಿ ಕನ್ನಡಿ ತಂದು ಮುಂದೆ ಹಿಡಿದಳು. ಹಣೆಗೆ ಬಿದ್ದ ಫ್ಯಾನಿನಿಂದ ತಲೆ ಹೋಳಾಗಿ ಮೆದುಳು ಕಡಿಗೆ ಬಂದಿದೆ ಅಂತ ತಿಳಿದುಕೊಂಡವನು ಕನ್ನಡಿಯಲ್ಲಿ ಕಂಡ ತನ್ನ ತಲೆ ಚೆನ್ನಾಗೆ ಇತ್ತು.

(ಮುದಿರಾಜ್‌ ಬಾಣದ್‌)

ಆದರೆ ಹಣೆಗೆ ಗಾಯವಾಗಿ ರಕ್ತ ಒಸರುತ್ತಿತ್ತು. ಹೆಂಡತಿ ಹಚ್ಚಿದ ಅರಿಶಿಣಕ್ಕೆ ರಕ್ತ ಒಸರುವುದು ನಿಂತಿತ್ತು. ಬಂದ ಜನರು ಸಹ ‘ಏನ್ ಇವನು ದವಾಖಾನೆಗೆ ಹೋಗೋದು ಬಿಟ್ಟು ಕನ್ನಡಿ ನೋಡುತ್ತ ಕುಂತನಲ್ಲ!ʼ ಅಂತ ಮಾತಾಡತೊಡಗಿದರು. ಆದರೆ ಲಂಕ್ಯಾ ಒಳಗೊಳಗೆ ಖುಷಿಯಾಗಿ ತನ್ನ ತಲೆ ಎರಡು ಹೋಳಾಗಿಲ್ಲ, ಪ್ಯಾನ್ ಬಿದ್ದೂ ತನ್ನ ಜೀವ ಉಳೀತಲ್ಲ! ಗಟ್ಟಿ ಪಿಂಡ ತಂದು ಅಂತ ತನ್ನ ಮನಸ್ಸಲ್ಲೆ ಮಾತಾಡುತ್ತ ಖುಷಿಯಾಗಿ ಮುಗುಳುನಕ್ಕ. ಇವಳಿಗೆ ಇಷ್ಟೇ ಸಾಕಾಗಿತ್ತು. “ನಾ ಅವತ್ತೆ ವೈಕೊಂಡೆ, ಆ ಜಂಬಲದಿನ್ನಿ ತಾತಾನಲ್ಲಿ ಹೋಗಿ ಬರಮ್ಮ ಅಂತ ಆದ್ರೆ ಕೇಳಲಿಲ್ಲ ನೀನು. ಈಗ ನೋಡು ಹೆಂಗಾ ಹುಚ್ಚು ಹುಚ್ಚಾಗಿ ಆಡಕ್ಯಾತನ” ಅಂತ ಅತ್ತೆಯನ್ನು ನೋಡುತ್ತ ಅಳತೊಡಗಿದಳು. ಲಂಕ್ಯಾನ ತಾಯಿ ಡಾಕ್ಟರನ್ನು ಕರೆದುಕೊಂಡು ಬಂದಳು. ಡಾಕ್ಟರು ಪರೀಕ್ಷಿಸಿ ಟಿ.ಟಿ ಇಂಜೆಕ್ಷನ್ ಮಾಡಿ ಗುಳಿಗಿ ಬರೆದು “ಅಂಥಹ ಹೆದರಿಕೊಳ್ಳುವಂತಹದು ಏನಾಗಿಲ್ಲ. ದಿನಾ ಬಂದು ಟಿಟಿ ಇಂಜೆಕ್ಷನ್ ಮಾಡಿ ಹೋಗ್ತಿನಿ ಕರೆಕ್ಟ್ ಟೈಮಿಗೆ ಗುಳಿಗೆ ನುಂಗಿ” ಅಂತ ಹೇಳಿ ಹೋದರು. ಇವಳು ಮತ್ತೆ ಅದೇನೋ ತಾತಾ ಗೀತಾ ಅಂತ ಬಂದವರ ಮುಂದೆ ನಾಟಕ ಶುರುಮಾಡಿದಳು. ಲಂಕ್ಯಾನಿಗೆ ಮೈಯೆಲ್ಲ ಉರಿದು ಬೈಯ್ಯಬೇಕಂದರೆ ಬಾಯೆ ಬರಲಿಲ್ಲ. ಮಾತು ನಾಲಿಗೆ ಹೊರಗಿಂದ ಬರುವುದಕ್ಕೆ ತಡವರಿಸಿತು. ಒಂದು ಕ್ಷಣ ಇನ್ನೆಂದೂ ಈ ಜನ್ಮದಲ್ಲಿ ಮಾತು ಬರಲ್ಲವೇನೋ ಅಂತ ದುಃಖವಾಗಿ ಅಲ್ಲೆ ಗಾಬರಿಯಿಂದ ನಿಂತಿದ್ದ ಮಕ್ಕಳ ಕಡೆ ನೋಡಿದ. ಪುಟ್ಟ ಕಣ್ಣುಗಳಲ್ಲಿ ಯಮಗಾತ್ರದ ಭಯತುಂಬಿಕೊಂಡು ಒಮ್ಮೆ ಅವರ ತಾಯಿಯನ್ನು, ಮತ್ತೊಮ್ಮೆ ಲಂಕ್ಯಾನನ್ನು, ಇನ್ನೊಮ್ಮೆ ಅಲ್ಲೆ ರೆಕ್ಕೆ ಕಳೆದುಕೊಂಡು ಬಿದ್ದ ಫ್ಯಾನನ್ನು ನೋಡುತ್ತಿದ್ದವು.

*****

ತಲೆಮೇಲೆ ಫ್ಯಾನ್ ಬಿದ್ದು ಮೂರು ವಾರಕ್ಕೆ ಲಂಕ್ಯಾ ಆರಾಮಾಗಿ ಸಣ್ಣ ಮಗಳ ಮೂರನೆ ತರಗತಿ ಕನ್ನಡ ಪುಸ್ತಕ ಹಿಡಿದು ಪದ್ಯ ಓದುತ್ತಿದ್ದ. ಲಂಕ್ಯಾನ ತಾಯಿ ಒಳಮನೆಯಲ್ಲಿ ದೇವರ ಪೂಜೆ ಮಾಡುತ್ತಲೇ ಬೈಯ್ಯತೊಡಗಿದ್ದಳು. ಪದ್ಯ ಓದುತ್ತಿದ್ದ ಲಂಕ್ಯಾನ ಮನದಲ್ಲಿ ಪದ್ಯದ ಸಾಲುಗಳಿಗಿಂತ ಅವರಮ್ಮನ ಬೈಗುಳಗಳೇ ಕಿವಿಯಲ್ಲಿ ಪ್ರತಿಧ್ವನಿಸತೊಡಗಿದವು. ಆಗಿದ್ದಿಷ್ಟೇ ಮುಂಜಾನೆ ಎದ್ದ ಲಂಕ್ಯಾನ ಮಗ ಟಿ.ವಿ ಆನ್ ಮಾಡಿ ಸೌಂಡ್ ಜಾಸ್ತಿ ಇಟ್ಟು ಕುಳಿತಿದ್ದ. ಹಾಸಿಗೆಯಲ್ಲಿ ಅದೇ ಆಗತಾನೆ ಎದ್ದು ಕುಳಿತ ಎರಡನೆ ಮಗಳು ಬೆಕ್ಕಿನ ಮರಿಯಂತೆ ಪಿಳಿಪಿಳಿ ಕಣ್ಣು ಬಿಡುತ್ತ ಮಗ ಹಚ್ಚಿದ ಚಿಂಟು ಟಿ.ವಿ ನೋಡುತ್ತ ಹಾಸಿಗೆಯಲ್ಲಿ ಮಲಗಿದ್ದಳು. ದೊಡ್ಡ ಮಗಳು ತನ್ನ ತಾಯಿ ಕಾಶಿಬಾಯಿ ಜೊತೆ ಮೊಬೈಲ್‌ನಲ್ಲಿ ಮುಳುಗಿ ಹೋಗಿದ್ದಳು. ಇದನ್ನೆಲ್ಲ ನೋಡಿದ ಲಂಕ್ಯಾನ ತಾಯಿ “ಹಾಳಾದವು ಮುಂಜು ಮುಂಜಾನೆ ಟಿ.ವಿ, ಫೋನ್ ಹಿಡಿದು ಕುಂತಾವ, ಇವಕಾ ಬಕ್ಕ ಬಾರ್ಲಾ ಬಡಿಲಿ, ಸಾಲಿ ಸೂಟಿ ಕೊಟ್ಟಾಂಗಿನಿಂದ ಒಂದು ಓದಿಲ್ಲ ಬರಿದಿಲ್ಲ ಇವಕ್ಕ ವಿದ್ಯಾ ಹೆಂಗ್ ಹತ್ತತದ,” ಮುಂದುವರೆದು “ದೊಡ್ಡವಕುನೂ ಮುಂಜಾನೆ ಎದ್ದು ಏನ್ ಮಾಡಬೇಕಂತ ಖಬರಿಲ್ಲ ಖಬರಿಗೇಡಿವೂ” ಅಂತ ಬೈಯುತ್ತ ಒಳಮನೆಯಲ್ಲಿ ದೇವರ ಕೋಣೆಯ ಕಟ್ಟೆಯ ಮೂಲೆಗೆ ಊದಿನಕಡ್ಡಿ ಚುಚ್ಚಿ ಕೈ ಮುಗಿಯುತ್ತ ನಿಂತಳು. ಆ ಪುಸ್ತಕ ಮೂಲಿಗೆ ಬಿಸಾಕಿ ಅವರಮ್ಮನ ಬೈದಾಟಕ್ಕೆ ಎಚ್ಚೆತ್ತು, “ಇರ್ಲಿ ಬಿಡಂಗೆ ಆ ಹುಡುಗರಿಗೆ ಯಾಕ್ ಹಚ್ಚಿದ್ದಿ ಕಿರಿಕಿರಿ” ಅಂತ ಅಸಮಾಧಾನದಿಂದ ಹೇಳಿದ. ಯಾವಾಗ ಲಂಕ್ಯಾ ತನ್ನ ಪರ ಮಾತಾಡಲಿಲ್ಲವೋ ಮತ್ತಷ್ಟೂ ಜೋರ್ ಧ್ವನಿಲಿ ದೇವರ ಕೋಣೆಯಿಂದಲೇ ವದರತೊಡಗಿದಳು.

ಅಡಿಗೆಮನೆಯಲ್ಲಿ ಇದ್ದ ಕಾಶಿಬಾಯಿ ಒಮ್ಮೆ ಸೂಕ್ಷ್ಮವಾಗಿ ಲಂಕ್ಯಾನನ್ನು ದಿಟ್ಟಿಸಿದಳು. ಆ ನೋಟಕ್ಕೆ ವಶೀಕರಣಗೊಂಡವನಂತೆ ಎದ್ದವನೇ ಮಗ ಹಾಗೂ ಮಗಳನ್ನು ಎಳೆದೆಳೆದು ಸಿಕ್ಕಸಿಕ್ಕಲ್ಲಿ ಮೈಮೇಲೆ ದೆವ್ವ ಬಂದವನಂತೆ ಬಡಿಯತೊಡಗಿದ. ಆ ಇಬ್ಬರೂ ಮಕ್ಕಳು ಬೆನ್ನನ್ನು ಸವರಿಕೊಳ್ಳುತ್ತ ತನ್ನ ತಂದೆ ಯಾಕೆ ಹೊಡೆಯುತ್ತಿದ್ದಾನೆ ಅನ್ನುವ ಅರಿವಿಲ್ಲದೆ ಅಳುತ್ತ ದಿಕ್ಕಿಗೊಂದು ಓಡತೊಡಗಿದರೆ ಹಿಂದೆ ಹಿಂದೆ ಹೋಗಿ ಮನಸ್ಸೋ ಇಚ್ಛೆ ಬೈಯುತ್ತ ಹೊಡೆಯತೊಡಗಿದ. ತಮ್ಮ ಅಜ್ಜಿಯಾಗಲಿ ಇಲ್ಲ ತಮ್ಮ ತಾಯಿಯಾಗಲಿ ಆ ಮಕ್ಕಳ ಸಹಾಯಕ್ಕೆ ಬರದೆ ಸುಮ್ಮನೆ ತಮ್ಮ ಪಾಡಿಗೆ ತಾವಿದ್ದದು, ತಂದೆಯ ಕೈಯಲ್ಲಿ ಅನಾಮತ್ತಾಗಿ ಸಿಕ್ಕಿ ಹೊಡೆಸಿಕೊಂಡಿದ್ದು ನೆನೆಸಿಕೊಂಡು ದುಃಖಿಸುತ್ತ ಮತ್ತಷ್ಟೂ ಅಳತೊಡಗಿದವು.

ಮಕ್ಕಳಿಬ್ಬರಿಗೂ ಹೊಡೆದು ಸಿಟ್ಟು ಕಡಿಮೆಯಾದ ನಂತರ “ಗನಾ ಸಮಾಧಾನ ಆಯ್ತ? ಮನೆಗೆ ಬಂದಾಗಿನಿಂದ ಬರೀ ಇದೆ ಕಿರಿಕಿರಿ ನಿಮ್ದು ಅಂತ” ತಾಯಿಯ ಕಡೆ ನೋಡಿ ಶೂನ್ಯವಾಗಿ ದೃಷ್ಟಿಸುತ್ತ ಕುಳಿತ. ಪೂಜೆ ಮುಗಿಸಿ ವಾಟಕಾದಲ್ಲಿ ಚಹಾ ಹಾಕಿಕೊಂಡು ಕುಪ್ಪಸಕ್ಕೆ ಗುಂಡಿನ ಅರ್ಧಮರ್ಧ ಹಾಕಿಕೊಂಡು ಹಸಿ ಕೂದಲನ್ನು ಬಿಸಲಿಗೆ ಒಣಗಲು ಅಡ್ಡಮಾಡಿ ಒಪ್ಪರೆಯಾಗಿ ಗೋಡೆಗೆ ಬೆನ್ನಚ್ಚಿ ಚಹಾ ಕುಡಿಯತೊಡಗಿದ್ದಳು. ಬಾಯಿ ತುಂಬಾ ಸಣ್ಣಸಣ್ಣ ಹುಣಸೆಬೀಜದಂತ ಹಲ್ಲು, ಎಣ್ಣೆಗೆಂಪು ಬಣ್ಣದ ಸಣಕಲು ದೇಹ ಇರುವ ಲಂಕ್ಯಾನ ತಾಯಿಗೆ ಸೊಸೆಯೆಂದರೆ ಅಷ್ಟಕಷ್ಟೆ. ಇಷ್ಟೆಲ್ಲ ಆಗೋವತ್ತಿಗೆ ಕಾಶಿಬಾಯಿ ಪೋನನ್ನು ತೆಗಿದಿಟ್ಟು ಅಡಿಗೆ ಮನೆಯಲ್ಲಿ ಬೆಳಗಿನ ಅಡಿಗೆಗೆ ತಯಾರಿ ನಡೆಸಿದಳು. ಮೆಲ್ಲನೆ ದೊಡ್ಡ ಮಗಳು ನುಸುಳಿಕೊಂಡು ಆಟ ಆಡುವುದಕ್ಕೆ ಹೊರ ಓಡಿಹೋದಳು. ಹೊರಗಡೆ ಮೈಕಿನಲ್ಲಿ “ಹಳೆ ಪೇಪರ್, ಬಾಟಲಿ, ಕಬ್ಬಣ ಸಾಮಾನು ಇದ್ರೆ ಕೊಡರಮ್ಮ” ಅಂತ ಕೂಗುತ್ತ ಬಂಡಿ ದಬ್ಬುತ್ತ ಒಬ್ಬ ಯಜಮಾನ ಬಂದ. ಲಂಕ್ಯಾ ತನ್ನ ಸಿಟ್ಟಿನಿಂದ ವಾಸ್ತವಕ್ಕೆ ಬಂದು ಮನೆಯಲ್ಲಿ ಇದ್ದ ಅಷ್ಟು ದಿನಪತ್ರಿಕೆನ ತೆಕ್ಕೆಗೆ ಬಡಿದುಕೊಂಡು ಅವನಲ್ಲಿಗೆ ಹೋಗಿ ತೂಕ ಹಾಕಿದ. ಐದು ಕೆ.ಜಿ ಆಯಿತು. ಆತ ಕೊಟ್ಟ ನೋಟನ್ನು ತೆಗೆದುಕೊಂಡು ಮೇಲೆ ಬಂದ. ಸಣ್ಣ ಡಬ್ಬಿಯಲ್ಲಿ ಆ ನೋಟನ್ನು ಹಾಕಿ ಮತ್ತೆ ಕಾದಂಬರಿ ಹಿಡಿದು ಕುಳಿತ. ನಾಲ್ಕು ಪುಟ ಓದಲಿಲ್ಲ, ಅದನ್ನು ಅಲ್ಲಿಗೆ ಬಿಟ್ಟು ಎದ್ದು ನಿಂತ. ಮೆಲ್ಲನೆ ಮನೆ ಒಳಗೆ ಅಣಕಿ ಹಾಕಿದ ಮಕ್ಕಳಿಬ್ಬರು ಟಿ.ವಿ.ಯಲ್ಲಿ ಕಾರ್ಟೂನ್ ನೋಡುತ್ತ ಕುಳಿತಿದ್ದರು. ಇಬ್ಬರನ್ನು ಗಟ್ಟಿಯಾಗಿ ಹಿಡಿದುಕೊಂಡು, ಪಚ್ ಅಂತ ಕೆನ್ನೆಗೆ ಮುದ್ದುಕೊಟ್ಟು ಸ್ವಾರಿ ಕನ್ನಯ್ಯ ಅಂತ ತೆಕ್ಕೆಗೆ ಬಡಿದುಕೊಂಡ. ಅಪ್ಪನ ಸಿಟ್ಟು ಮತ್ತು ಪ್ರೀತಿ ನೋಡಿದ್ದ ಮಕ್ಕಳು ಎಲ್ಲಾ ಮರೆತು ಲಂಕ್ಯಾನ ಬೆನ್ನಿಗೆ ಜೋತು ಬಿದ್ದು ಕಿಲಕಿಲ ನಗತೊಡಗಿದರು. ಲಂಕ್ಯಾನ ಮನಸ್ಸು ಒಂದು ತಹಬದಿಗೆ ಬಂದು, ಮಕ್ಕಳ ಜೊತೆ ಆಡುತ್ತ ಕುಳಿತ.

(ಕೃತಿ: ಸಿಕ್ಕು (ಕಾದಂಬರಿ), ಲೇಖಕರು: ಮುದಿರಾಜ್‌ ಬಾಣದ್‌, ಪ್ರಕಾಶಕರು: ವೈಷ್ಣವಿ ಪ್ರಕಾಶನ, ಬೆಲೆ: 110/-)

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ