ಅತಿಯಾದ ಓದು ಕೆಲವೊಮ್ಮೆ ಸೃಜನಶೀಲತೆಗೆ ಮಾರಕವಾಗಬಹುದು ಎಂಬ ಮಾತಿನಲ್ಲಿ ಸತ್ಯವಿದೆ. ಯಾಕೆಂದರೆ ನಿರಂತರವಾಗಿ ಇತರರ ಧ್ವನಿಗಳನ್ನು ಮಾತ್ರ ಕೇಳುತ್ತಾ ಹೋದರೆ, ನಮ್ಮ ಒಳಧ್ವನಿ ನಿಧಾನವಾಗಿ ಮೌನವಾಗಬಹುದು. ಅತಿಯಾಗಿ ಓದುವ ಕೆಲ ಲೇಖಕರು ಒಂದು ಹಂತದ ನಂತರ ತಮ್ಮದೇ ಭಾಷೆಯನ್ನು ಕಳೆದುಕೊಳ್ಳುತ್ತಾರೆ. ಅವರ ವಾಕ್ಯಗಳಲ್ಲಿ ತಮ್ಮ ಉಸಿರಿಗಿಂತ ಇತರರ ನೆರಳು ಹೆಚ್ಚು ಕಾಣುತ್ತದೆ. ಅವರು ಬರೆಯುವುದಿಲ್ಲ — ಓದಿದವರ ಪ್ರತಿಧ್ವನಿಯನ್ನು ಮರುಸೃಷ್ಟಿಸುತ್ತಾರೆ. ಆದರೆ ಓದದೇ ಇರುವ ಲೇಖಕನ ಸ್ಥಿತಿಯೂ ಅಪಾಯಕರವೇ. ಓದಿಲ್ಲದ ಬರಹ ಹಲವೊಮ್ಮೆ ಆಳವಿಲ್ಲದ ಭಾವೋದ್ರೇಕವಾಗಿ ಉಳಿಯುತ್ತದೆ. ಅದು ಅನುಭವದ ಕೂಗಿರಬಹುದು. ಆದರೆ ಕಲೆಯಾಗಿ ರೂಪಾಂತರಗೊಳ್ಳುವುದಿಲ್ಲ.
ಓದು-ಬರಹದ ಕುರಿತು ಡಾ. ಲಕ್ಷ್ಮಣ ವಿ.ಎ. ಬರಹ ನಿಮ್ಮ ಓದಿಗೆ
ವರಕವಿ ಬೇಂದ್ರೆಯವರಿಗೆ ಒಬ್ಬ ಹುಡುಗಿ ತಾನು ಕವಿ ಎನಿಸಿಕೊಳ್ಳಲು ಎಷ್ಟು ಕವಿತೆ ಬರೆಯಬೇಕೆಂಬ ಪ್ರಶ್ನೆ ಕೇಳುತ್ತಾರೆ. ಕವಿ ಬೇಂದ್ರೆ ಅಷ್ಟೇ ಮಾರ್ಮಿಕವಾಗಿ ಒಬ್ಬ ಹೆಣ್ಣು ತಾಯಿಯಾಗಲು ಒಂದು ಹೆತ್ತರೂ ಸಾಕು ಎನ್ನುವ ಉತ್ತರ ಕೊಡುತ್ತಾರೆ. ಒಬ್ಬ ಲೇಖಕ ತಾನು ಲೇಖಕನೆನಿಸಿಕೊಳ್ಳಲು ಎಷ್ಟು ಗಂಟೆ ಓದಿ ಎಷ್ಟು ಗಂಟೆ ಬರೆಯಬೇಕೆನ್ನುವ ಪ್ರಶ್ನೆಗಳಿಗೆ ಉತ್ತರ ಹೇಳುವುದು ಬಲು ಕಷ್ಟದ ಕೆಲಸ. ಕುವೆಂಪು ಕಾರಂತರಂತಹ ಮೇರು ಲೇಖಕರು ತುಂಬಾ ಓದುತ್ತಿದ್ದರು, ಆದರೆ ಅವರ ಓದು ಕೇವಲ ಮಾಹಿತಿಗೆ ಮಾತ್ರ ಸೀಮಿತವಾಗದೆ ಓದಿದ್ದನ್ನು ಒಳಗಿಳಿಸಿಕೊಂಡು ಜೀರ್ಣಿಸಿಕೊಳ್ಳುತ್ತಿದ್ದರು.
ಲಿಯೋ ಟಾಲ್ ಸ್ಟಾಯ್ ದಿನಕ್ಕೆ ಐದರಿಂದ ಎಂಟು ಗಂಟೆ ಸಮಯ ಓದು ಬರಹಕ್ಕೆಂದೆ ಮೀಸಲಾಗಿಟ್ಟಿದ್ದರು. ಕಾಫ್ಕಾ ತಮ್ಮ ದಿನದ ಕೆಲಸದ ನಂತರ ರಾತ್ರಿ ಮೂರರಿಂದ ನಾಲ್ಕು ಗಂಟೆ ಓದುತ್ತಿದ್ದರು. ಸ್ವರ್ಗ ಎಂದರೆ ಗ್ರಂಥಾಲಯ ಎಂದ ಜಾರ್ಜ್ ಲೂಯಿಸ್ ಬಾರ್ಜೆಸ್ ದಿನಕ್ಕೆ ಆರು ಗಂಟೆ ಓದುತ್ತಿದ್ದರು. 30,000ಕ್ಕೂ ಹೆಚ್ಚು ಪುಸ್ತಕಗಳ ವೈಯಕ್ತಿಕ ಸಂಗ್ರಹ ಹೊಂದಿದ್ದ ಉಮಬೆರ್ಟೊ ಎಕೊ ದಿನಕ್ಕೆ ಮೂರು ಗಂಟೆ ಮಾತ್ರ ಓದುತ್ತಿದ್ದರು.
ಎಲ್ಲ ದೊಡ್ಡ ಲೇಖಕರ ಓದು ಬರಹ ಒಂದೇ ಬಗೆಯಲ್ಲಿ ನಡೆಯುವುದೂ ಇಲ್ಲ. ಆದರೆ ಪ್ರತಿಯೊಬ್ಬರೂ ತಮ್ಮದೇ ಓದುವ ವಿಧಾನ ಕಂಡುಕೊಂಡಿದ್ದರು. ಲಂಕೇಶರು ಹೆಚ್ಚು ದೇಶ ಸುತ್ತಿದ ಲೇಖಕರಲ್ಲ. ಆದರೆ ಅವರು ಸಮಾಜದ ನಾಡಿಯನ್ನು ಗ್ರಹಿಸುತ್ತಿದ್ದರು. ಪತ್ರಿಕೆ, ರಾಜಕೀಯ, ಹಳ್ಳಿಯ ಮನುಷ್ಯ, ನಗರದ ದ್ವಂದ್ವ, ಮಧ್ಯಮವರ್ಗದ ಪ್ರಾಮಾಣಿಕತೆ ಕಪಟತನ — ಇವೆಲ್ಲ ಅವರ ಕಣ್ಣಿನ ಮುಂದೆ ಜೀವಂತವಾಗಿದ್ದವು. ಅವರ ಬರಹದಲ್ಲಿ ಪ್ರಯಾಣದ ವಿಸ್ತಾರ ಕಡಿಮೆ ಇರಬಹುದು. ಆದರೆ ಮನುಷ್ಯನ ಸ್ವಭಾವದ ಬಗೆಗಿನ ಆಳವಾದ ಒಳನೋಟಗಳಿದ್ದವು. ಅವರು ಹೊರಜಗತ್ತಿಗಿಂತ ಒಳಜಗತ್ತಿನ ವರದಿಗಾರನಂತೆ ಕಾಣುತ್ತಾರೆ. ಅವರಿಗೊಂದು ವಿಶಿಷ್ಟ ಗುಣ ಇತ್ತು — ಸಾಮಾನ್ಯ ಘಟನೆಗಳಲ್ಲೇ ಕಾಲದ ದೊಡ್ಡ ಸತ್ಯಗಳನ್ನು ಹಿಡಿಯುವ ಶಕ್ತಿ.
ಒಂದು ಚಹಾ ಅಂಗಡಿ ಸಂಭಾಷಣೆಯಲ್ಲೂ ಅವರು ಸಮಾಜದ ನಾಡಿ ಹಿಡಿಯುತ್ತಿದ್ದರು.
ಇನ್ನು ತೇಜಸ್ವಿ ಬೇರೆ ರೀತಿಯ ಬರಹದ ಮಾಂತ್ರಿಕ. ಅವರು ಕಾಡಿನೊಳಗೆ ಹೋದದ್ದು ಕೇವಲ ಪ್ರಕೃತಿ ಪ್ರೇಮದಿಂದ ಅಲ್ಲ. ಅವರು ನಾಗರಿಕತೆಯ ಗದ್ದಲದಿಂದ ದೂರ ಸರಿದು ಬದುಕನ್ನು ಮೂಲ ರೂಪದಲ್ಲಿ ಕಾಣಲು ಮಾಡಿದ ಪ್ರಯತ್ನವೂ ಹೌದು.
ತೇಜಸ್ವಿಯವರಿಗೆ ಕಾಡು ಎಂದರೆ ಕೇವಲ ಹಸಿರು ಹೊದ್ದ ಮಲೆನಾಡು ಅಲ್ಲ. ಅದೊಂದು ಜೀವಶಾಸ್ತ್ರ ತತ್ವಶಾಸ್ತ್ರ ಏಕಾಂತ, ಸಾಹಸ. ಮತ್ತು ಮಾನವನ ಅಹಂಕಾರ ಕರಗುವ ಸ್ಥಳ. ಅವರು ಗ್ರಂಥಾಲಯಕ್ಕಿಂತ ಮಳೆಯ ವಾಸನೆ, ಹಕ್ಕಿಗಳ ಹಾರಾಟ, ಕಾಫಿ ತೋಟದ ಕಾರ್ಮಿಕ, ಕತ್ತಲಲ್ಲಿ ಕೇಳುವ ಕಾಡಿನ ಶಬ್ದ — ಇವುಗಳಿಂದ ಹೆಚ್ಚು ಕಲಿತವರಂತೆ ಕಾಣಿಸುತ್ತಿದ್ದರು.
ಅವರ ಬರಹದಲ್ಲಿ ಓದಿನ ಜ್ಞಾನಕ್ಕಿಂತ ಬಾಳಿದ ಜ್ಞಾನ ಹೆಚ್ಚು ಕಾಣುತ್ತಿತ್ತು.
ಇನ್ನು ಎಸ್.ಎಲ್. ಭೈರಪ್ಪನವರದು ಸಂಪೂರ್ಣ ವಿಭಿನ್ನ ಪಥ. ಅವರ ಕಾದಂಬರಿಗಳ ಹಿಂದೆ ಒಬ್ಬ ಸಂಶೋಧಕನ ಶ್ರಮ ಇರುತ್ತಿತ್ತು. ಒಂದು ವಿಷಯ ಹಿಡಿದರೆ ಅದರ ಇತಿಹಾಸ, ತತ್ವಶಾಸ್ತ್ರ, ಸಮಾಜಶಾಸ್ತ್ರ, ಭೌಗೋಳಿಕ ಹಿನ್ನೆಲೆ, ಧಾರ್ಮಿಕ ಆಯಾಮ ಮನೋವಿಜ್ಞಾನ ಇವೆಲ್ಲವನ್ನು ಆಳವಾಗಿ ಅಧ್ಯಯನ ಮಾಡುತ್ತಿದ್ದರು. ಅದಕ್ಕೇ ಅವರ ಕಾದಂಬರಿಗಳನ್ನು ಓದಿದಾಗ ಕೆಲವೊಮ್ಮೆ ಅವು ಕಲ್ಪನೆಗಿಂತ ಸಾಂಸ್ಕೃತಿಕ ದಾಖಲೆಗಳಂತೆ ಭಾಸವಾಗುತ್ತವೆ.
ಲಂಕೇಶ್ ಕ್ಷಣವನ್ನು ಗ್ರಹಿಸಿದರು. ತೇಜಸ್ವಿ ಪ್ರಕೃತಿಯನ್ನು ಓದಿದರು. ಭೈರಪ್ಪ ಇತಿಹಾಸ ಮತ್ತು ತತ್ವಶಾಸ್ತ್ರ ಓದಿದರು. ಮೂರೂ ವಿಭಿನ್ನ ಮಾರ್ಗಗಳು.
ಆದರೆ ಮೂರೂ ಕಡೆ ಒಂದು ಸಾಮಾನ್ಯ ಸಂಗತಿ ಇದೆ. ಅವರು ಕೇವಲ ಪುಸ್ತಕ ಓದಲಿಲ್ಲ
ತಮ್ಮದೇ ರೀತಿಯಲ್ಲಿ ಕಂಡರಿಸಿದರು. ಬಹುಶಃ ಇದೇ ನಿಜವಾದ ಲೇಖಕನ ಲಕ್ಷಣ.
ಯಾರೋ ಗ್ರಂಥಾಲಯದಲ್ಲಿ ತನ್ನ ಧ್ವನಿ ಕಂಡುಕೊಳ್ಳುತ್ತಾನೆ. ಯಾರೋ ಕಾಡಿನಲ್ಲಿ. ಯಾರೋ ಸಮಾಜದ ಗದ್ದಲದಲ್ಲಿ.
ಯಾರೋ ತಮ್ಮ ಮೌನದಲ್ಲಿ. ಒಬ್ಬ ಹಾಡುಗಾರನಿಗೆ ರಿಯಾಜು ಎಷ್ಟು ಅಗತ್ಯವೋ, ಲೇಖಕನಿಗೂ ಬರವಣಿಗೆಯ ರಿಯಾಜು ಅಷ್ಟೇ ಅಗತ್ಯ. ಆದರೆ ಇಲ್ಲಿ ಮುಖ್ಯವಾದದ್ದು ಎಷ್ಟು ಪದ ಬರೆಯಬೇಕು ಎಂಬ ಪ್ರಶ್ನೆಯಷ್ಟೇ ಅಲ್ಲ — ಯಾವ ಮನಸ್ಥಿತಿಯಲ್ಲಿ ಬರೆಯಬೇಕು? ಎಂಬುದೂ ಕೂಡಾ ಅಷ್ಟೇ ಮಹತ್ವದ್ದಾಗುತ್ತದೆ.
ಯಾಕೆಂದರೆ ಸಂಗೀತಗಾರನ ಸ್ವರ ಒಂದು ದಿನ ರಿಯಾಜು ಮಾಡದಿದ್ದರೆ ಇದ್ದಕ್ಕಿದ್ದಂತೆ ಗಂಟಲು ಕೈ ಕೊಡಬಹುದು; ಲೇಖಕನ ಭಾಷೆಯೂ ಹಾಗೆಯೇ. ಪದಗಳ ಜೊತೆಗಿನ ಅವನ ಒಳಗಿನ ಸ್ನಾಯುಗಳು ದಿನವೂ ಚಲಿಸಬೇಕು. ಗಮನ, ಕಲ್ಪನೆ, ವಾಕ್ಯರಚನೆ, ಅನುಭವವನ್ನು ಪದವಾಗಿಸುವ ಶಕ್ತಿ — ಇವೆಲ್ಲವೂ ಅಭ್ಯಾಸದಿಂದಲೇ ತೀಕ್ಷ್ಣವಾಗುತ್ತವೆ.
ಹೀಗಾಗಿ ಒಬ್ಬ ಲೇಖಕ ದಿನಕ್ಕೆ ಎಷ್ಟು ಬರೆಯಬೇಕು? ನಿಖರ ಉತ್ತರ ಯಾರಿಗೂ ಇಲ್ಲ. ಆದರೆ ಕೆಲವು ಸಾಮಾನ್ಯ ಮಾನದಂಡಗಳಿವೆ:

ಕೆಲವರು ದಿನಕ್ಕೆ ಮುನ್ನೂರರಿಂದ ಐನೂರು ಪದ ಸಾಕೆನ್ನುತ್ತಾರೆ. ಇದು ಬರವಣಿಗೆಯ ಉಸಿರಾಟವನ್ನು ಜೀವಂತವಾಗಿಡುತ್ತದೆ. ಗಂಭೀರವಾಗಿ ಕಾದಂಬರಿ ಅಥವಾ ಪ್ರಬಂಧ ಬರೆಯುವವರು ಸಾಮಾನ್ಯವಾಗಿ ಒಂದು ಒಂದೂವರೆ ಸಾವಿರ ಪದಗಳ ಗುರಿ ಇಡುತ್ತಾರೆ. ಆದರೆ ಎಲ್ಲ ದಿನವೂ ಮಹತ್ವದ ಸಾಹಿತ್ಯ ಹುಟ್ಟುವುದಿಲ್ಲ. ಕೆಲ ದಿನ ಬರಹ ಕೇವಲ ಹಲ್ಲು ಮಸೆಯುವ ಇಲಿಯ ಕೆಲಸದಂತಿರುತ್ತದೆ — ತನ್ನ ಭಾಷೆ ಮೊಂಡಾಗದಿರಲು. ಇಲ್ಲಿ ಒಂದು ಮುಖ್ಯ ಸಂಗತಿ ಇದೆ. ಲೇಖಕನ ದಿನದ ಎಲ್ಲಾ ಬರಹವೂ ಪ್ರಕಟಣೆಗೆ ಯೋಗ್ಯವಾಗಿರಬೇಕೆಂದಿಲ್ಲ. ಕೆಲ ಬರಹಗಳು ಕೇವಲ ಒಳಗಿನ ಯಂತ್ರಗಳಿಗೆ ಕಚ್ಚಾ ತೈಲ ಹಾಕುವ ಕೆಲಸ ಮಾಡುತ್ತವೆ.ಹೆಮಿಂಗ್ವೆ ದಿನಕ್ಕೆ ಸುಮಾರು ಐನೂರು ಪದಗಳನ್ನು ಬರೆಯುತ್ತಿದ್ದರೆಂದು ಹೇಳುತ್ತಾರೆ. ಲಿಯೋ ಟಾಲ್ ಸ್ಟಾಯ್ ಅನೇಕ ಬಾರಿ ಬರೆಯುವುದಕ್ಕಿಂತ ಮರುಬರಹದಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದರು. ಅನಂತಮೂರ್ತಿ ಅವರಂತಹವರು ದಿನವಿಡೀ ಯೋಚಿಸಿ ಒಂದು ಪುಟ ಮಾತ್ರ ಬರೆಯುತ್ತಿದ್ದ ದಿನಗಳೂ ಇದ್ದವು. ಹೀಗಾಗಿ ಲೇಖಕನಿಗೆ ಪದಗಳ ಸಂಖ್ಯೆಗಿಂತ ಮುಖ್ಯವಾದದ್ದು ಮೂರು:
ಭಾಷೆಯ ಜೊತೆ ಪ್ರತಿದಿನ ಸಂಪರ್ಕ ಕಡಿದುಹೋಗಬಾರದು. ಲೋಕವನ್ನು ತನ್ನೊಳಗೆ ಇಳಿಸಿಕೊಂಡು ನೋಡಬೇಕು. ಮೊದಲ ಬರೆಹವೇ ಅಂತಿಮವಲ್ಲ. ಕೆಲವೊಮ್ಮೆ ದಿನಕ್ಕೆ ಕೇವಲ ನೂರು ಪದ ಬರೆದರೂ ಅದು ಜೀವಂತ ಸಾಹಿತ್ಯವಾಗಬಹುದು. ಕೆಲವೊಮ್ಮೆ ಎರಡು ಸಾವಿರ ಪದ ಬರೆದರೂ ಅದು ಕೇವಲ ಶುಷ್ಕ ಶಬ್ದಗಳಾಗಿರಬಹುದು.
ಹೀಗಾಗಿ ಒಬ್ಬ ಲೇಖಕ ತನ್ನ ಭಾಷೆ ತನ್ನನ್ನು ಮರೆತುಹೋಗದಿರಲಷ್ಟಾದರೂ ಬರೆಯಬೇಕು
ದೊಡ್ಡ ಲೇಖಕರು ಕೇವಲ ಹೆಚ್ಚು ಓದಿದವರು ಮಾತ್ರವಲ್ಲ. ಅವರು ನಿಧಾನವಾಗಿ ಓದುತ್ತಿದ್ದರು. ತಮಗಿಷ್ಟವಾದ ಪುಸ್ತಕಗಳನ್ನು ಪುನಃ ಪುನಃ ಓದುತ್ತಿದ್ದರು. ಪುಸ್ತಕದ ಹೊರಗಿನ ಬದುಕನ್ನೂ ಓದುತ್ತಿದ್ದರು. ಆರ್ನೆಷ್ಟ್ ಹೆಮಿಂಗ್ವೇ
ಹೇಳಿದಂತೆ ಒಳ್ಳೆಯ ಲೇಖಕನಿಗೆ ಪುಸ್ತಕ ಮಾತ್ರ ಸಾಲದು; ಬದುಕಿನ ಗಾಯಗಳೂ ಬೇಕು.
ಹಾಗೆಯೇ ಜಿಡ್ಡು ಕೃಷ್ಣ ಮೂರ್ತಿ ಈ ಓದುವ ಅತಿರೇಕದ ಬಗ್ಗೆ ಎಚ್ಚರಿಸಿದ್ದರು. ಇತರರ ಚಿಂತನೆಗಳ ಶಬ್ದದಲ್ಲಿ ನಮ್ಮ ಸ್ವಂತ ಧ್ವನಿ ಮಂಕಾಗಬಹುದು. ಅತಿಯಾದ ಓದು ಕೂಡ ಸೃಜನಶೀಲತೆಗೆ ಅಪಾಯವೇ! ಯಾಕೆಂದರೆ —ನಿರಂತರ ಓದು ನಮ್ಮೊಳಗಿನ ಮೂಲ ಧ್ವನಿಯನ್ನು ಮರೆಮಾಚಬಹುದು, ಇನ್ನೊಬ್ಬರ ಶೈಲಿ ನಮಗರಿವಿಲ್ಲದೆಯೇ ನಮ್ಮ ಬರಹದೊಳಗೆ ನುಸುಳಿಕೊಳ್ಳಬಹುದು, ಮಾಹಿತಿ ಕಲ್ಪನೆಗೆ ಜಾಗ ಬಿಡದಿರಬಹುದು.
ಆದರೆ ಓದಿಲ್ಲದೆ ಬರವಣಿಗೆಯೂ ಬೋಸಿಯಾಗಬಹುದು. ಅದಕ್ಕಾಗಿ ಅನೇಕ ಲೇಖಕರು ಒಂದು ಸಮತೋಲನ ಕಂಡುಕೊಂಡಿದ್ದರು: ಓದು – ಮೌನ- ಬದುಕಿನ ಅನುಭವ – ಬರಹದ ಈ ಚಕ್ರ.
ಒಬ್ಬ ಲೇಖಕ ಎಷ್ಟು ಓದಬೇಕು?
ಇದಕ್ಕೆ ನಿಖರ ಗಂಟೆಗಳ ಉತ್ತರಕ್ಕಿಂತ ಒಂದು ಸೂಕ್ಷ್ಮ ಉತ್ತರ ಕಂಡುಕೊಳ್ಳುವುದು ಮುಖ್ಯ. ದಿನಕ್ಕೆ 2 ಗಂಟೆ ಗಾಢ ಓದಿದರೂ ಸಾಕಾಗಬಹುದು. ಆದರೆ ಅದು ಗಮನದ ಓದಾಗಬೇಕು. ಕೆಲ ದಿನ ಪುಸ್ತಕ ಓದದೆ ಬದುಕನ್ನೇ ಗಮನಿಸುವುದೂ ಅಗತ್ಯ. ಕೆಲವೊಮ್ಮೆ ಒಂದು ಉತ್ತಮ ಪುಸ್ತಕವನ್ನು ಹತ್ತು ಬಾರಿ ಓದುವುದು, ಹತ್ತು ಪುಸ್ತಕಗಳನ್ನು ಒಮ್ಮೆ ಓದುವುದಕ್ಕಿಂತ ದೊಡ್ಡದು.
ಒಳ್ಳೆಯ ಲೇಖಕರು ಕೇವಲ ಪುಸ್ತಕಗಳ ಸಂಗ್ರಾಹಕರು ಆಗಿರಲಿಲ್ಲ. ಅವರು ನಿಧಾನವಾಗಿ ಮನುಷ್ಯನ ಅನುಭವದ ಶ್ರೋತೃಗಳು ಆಗಿದ್ದರು. ಒಬ್ಬ ಮನುಷ್ಯನಿಗೆ ಬದುಕಲು ಎಷ್ಟು ಭೂಮಿ ಬೇಕು? ಎಂದು ಟಾಲ್ ಸ್ಟಾಯ್ ಪ್ರಶ್ನಿಸಿದ್ದರು. ಅದೇ ಪ್ರಶ್ನೆಯನ್ನು ಇಂದು ನಾವು ಹೀಗೆ ತಿರುಗಿಸಿ ಕೇಳಬಹುದು —ಒಬ್ಬ ಲೇಖಕನಿಗೆ ಬದುಕಲು ಎಷ್ಟು ಓದು ಬೇಕು? ಈ ಪ್ರಶ್ನೆಗೆ ನಿಖರ ಉತ್ತರವೇ ಇಲ್ಲ. ಯಾಕೆಂದರೆ ಓದು ಎಂಬುದು ಕೇವಲ ಪುಟಗಳ ಲೆಕ್ಕವಲ್ಲ. ಅದು ಓದು ನಮ್ಮ ಮೇಲೆ ಬೀರುವ ಗಾಢ ಪರಿಣಾಮ ನಮ್ಮೊಳಗಿನ ಪರಿವರ್ತನೆಯ ಅಳತೆಗೋಲಾಗಬೇಕು.
ಒಂದಾನೊಂದು ಕಾಲದಲ್ಲಿ ಪುಸ್ತಕಗಳ ಕೊರತೆ ಇತ್ತು. ಇಂದು ಪುಸ್ತಕಗಳಷ್ಟೇ ಅಲ್ಲ, ಮಾಹಿತಿಯೂ ಅನಂತವಾಗಿದೆ.
ಮೊಬೈಲ್ ತೆರೆದರೆ ಸಾವಿರ ಲೇಖನಗಳು, ನೂರಾರು ಅಭಿಪ್ರಾಯಗಳು, ಲಕ್ಷಾಂತರ ವಾಕ್ಯಗಳು. ಈ ಮಹಾಪೂರದಲ್ಲಿ ಲೇಖಕನ ದೊಡ್ಡ ಸಮಸ್ಯೆ ಯಾವುದನ್ನು ಮೊದಲು ಓದುವುದು?
ಏನು ಓದಬಾರದು ಎನ್ನುವುದೇ.!
ಇಂದು ಒಬ್ಬ ಲೇಖಕನಿಗೆ ಎಲ್ಲವನ್ನೂ ಓದುವುದು ಸಾಧ್ಯವೇ ಇಲ್ಲ. ಪ್ರಪಂಚದ ಎಲ್ಲ ಗ್ರಂಥಾಲಯಗಳ ಪುಸ್ತಕಗಳನ್ನು ಓದಲು ಒಂದು ಜೀವಮಾನ ಸಾಕಾಗುವುದಿಲ್ಲ. ಜಗತ್ತಿನ ಎಲ್ಲಾ ಗ್ರಂಥಾಲಯಗಳೂ ಸೇರಿ ಒಬ್ಬ ಮನುಷ್ಯನ ಆಯುಷ್ಯಕ್ಕಿಂತ ದೊಡ್ಡವು.
ಆದ್ದರಿಂದ ಲೇಖಕನ ಮೊದಲ ಪ್ರಜ್ಞೆ ಆಯ್ಕೆ ಮಾಡಿಕೊಳ್ಳುವುದರಲ್ಲಿ ಇರಬೇಕು. ಒಳ್ಳೆಯ ಓದು ಎಂದರೆ ಹೆಚ್ಚು ಓದುವುದಲ್ಲ.
ಸರಿಯಾದುದನ್ನು ನಿಧಾನವಾಗಿ ಓದುವುದು.ಕೆಲವರು ದಿನಕ್ಕೆ ಒಂದು ಪುಸ್ತಕ ಮುಗಿಸುತ್ತಾರೆ. ಆದರೆ ಕೆಲವು ಪುಸ್ತಕಗಳು ಒಂದಿಡೀ ಜೀವಮಾನವನ್ನೇ ಬಯಸುತ್ತವೆ.
ದೊಸ್ತೊವಸ್ಕಿ ಕುವೆಂಪು, ಯು.ಆರ್.ಅನಂತಮೂರ್ತಿ, ವರ್ಜೀನಿಯಾ ವುಲ್ಫ್, ಮಾರ್ಕೆಸ್ — ಇವರನ್ನು ಓದುವುದು ಅಂದರೆ ಕೇವಲ ಕಥೆ ತಿಳಿದುಕೊಳ್ಳುವುದಲ್ಲ; ಮನುಷ್ಯನ ಅಂತರಂಗವನ್ನು ಪ್ರವೇಶಿಸುವುದು.
ಅತಿಯಾದ ಓದು ಕೆಲವೊಮ್ಮೆ ಸೃಜನಶೀಲತೆಗೆ ಮಾರಕವಾಗಬಹುದು ಎಂಬ ಮಾತಿನಲ್ಲಿ ಸತ್ಯವಿದೆ. ಯಾಕೆಂದರೆ ನಿರಂತರವಾಗಿ ಇತರರ ಧ್ವನಿಗಳನ್ನು ಮಾತ್ರ ಕೇಳುತ್ತಾ ಹೋದರೆ, ನಮ್ಮ ಒಳಧ್ವನಿ ನಿಧಾನವಾಗಿ ಮೌನವಾಗಬಹುದು. ಅತಿಯಾಗಿ ಓದುವ ಕೆಲ ಲೇಖಕರು ಒಂದು ಹಂತದ ನಂತರ ತಮ್ಮದೇ ಭಾಷೆಯನ್ನು ಕಳೆದುಕೊಳ್ಳುತ್ತಾರೆ. ಅವರ ವಾಕ್ಯಗಳಲ್ಲಿ ತಮ್ಮ ಉಸಿರಿಗಿಂತ ಇತರರ ನೆರಳು ಹೆಚ್ಚು ಕಾಣುತ್ತದೆ. ಅವರು ಬರೆಯುವುದಿಲ್ಲ — ಓದಿದವರ ಪ್ರತಿಧ್ವನಿಯನ್ನು ಮರುಸೃಷ್ಟಿಸುತ್ತಾರೆ. ಆದರೆ ಓದದೇ ಇರುವ ಲೇಖಕನ ಸ್ಥಿತಿಯೂ ಅಪಾಯಕರವೇ. ಓದಿಲ್ಲದ ಬರಹ ಹಲವೊಮ್ಮೆ ಆಳವಿಲ್ಲದ ಭಾವೋದ್ರೇಕವಾಗಿ ಉಳಿಯುತ್ತದೆ. ಅದು ಅನುಭವದ ಕೂಗಿರಬಹುದು. ಆದರೆ ಕಲೆಯಾಗಿ ರೂಪಾಂತರಗೊಳ್ಳುವುದಿಲ್ಲ.
ಹಾಗಾದರೆ ಲೇಖಕ ಎಷ್ಟು ಓದಬೇಕು?
ತನ್ನೊಳಗಿನ ಭಾಷೆ ಜೀವಂತವಾಗಿರುವಷ್ಟು ಓದಬೇಕು. ತನ್ನ ಸಂವೇದನೆ ಕುಗ್ಗದಷ್ಟು ಓದಬೇಕು. ಬರೆಯುವ ಆಸೆ ಸಾಯದಷ್ಟು ಓದಬೇಕು. ಓದಿನ ನಂತರ ಬರೆಯಬೇಕೆನ್ನಿಸದಿದ್ದರೆ, ಆ ಓದು ಬಹುಶಃ ನಮ್ಮದಲ್ಲ. ಓದಿನ ನಂತರ ಬದುಕನ್ನು ಹೊಸದಾಗಿ ನೋಡಬೇಕೆನ್ನಿಸಿದರೆ, ಅದು ಸರಿಯಾದ ಓದು. ಒಬ್ಬ ಲೇಖಕನ ನಿಜವಾದ ಪಾಠಶಾಲೆ ಕೇವಲ ಪುಸ್ತಕಗಳಲ್ಲ.
ಬಸ್ ನಿಲ್ದಾಣದಲ್ಲಿ ಮೌನವಾಗಿ ಕುಳಿತ ವೃದ್ಧನೂ ಒಂದು ಕಾದಂಬರಿ. ರಾತ್ರಿ ಆಸ್ಪತ್ರೆಯ ದಾರಿಯಲ್ಲಿ ಕಣ್ಣೀರು ಒರೆಸಿಕೊಳ್ಳುವ ತಾಯಿಯೂ ಒಂದು ಕವಿತೆ. ತನ್ನ ಮಗನಿಗೆ ಊಟ ಹಾಕಿ ಮಿಕ್ಕುಳಿದ ಅನ್ನವನ್ನಷ್ಟೇ ತಿನ್ನುವ ಅವ್ವ ಕೂಡ ಒಂದು ಮಹಾಕಾವ್ಯ.
ಸಂವೇದನಾಶೀಲತೆಯ ಮೂಲ ಸೆಲೆಗಳು ಗ್ರಂಥಾಲಯದಲ್ಲೇ ಹುಟ್ಟಬೇಕೆಂದೇನಿಲ್ಲ. ಅದು ಬದುಕಿನೊಂದಿಗಿರುವ ಪ್ರಾಮಾಣಿಕ ಸಂಬಂಧಗಳಿಂದ ಹುಟ್ಟುತ್ತದೆ. ಬಹಳ ದೊಡ್ಡ ಲೇಖಕರು ತಮ್ಮ ಬರಹದ ರಸವನ್ನು ಜನರಿಂದಲೇ ಪಡೆದವರು.
ಗ್ರಾಮದ ಮಾತು, ಕಾರ್ಮಿಕನ ಬೆವರು, ಹೆಣ್ಣಿನ ಮೌನ, ಮಕ್ಕಳ ನಗು, ಪ್ರೀತಿಯ ವಿಫಲತೆ, ವೃದ್ಧಾಪ್ಯದ ಏಕಾಂತ — ಇವೆಲ್ಲವೇ ಸಾಹಿತ್ಯದ ನಿಜವಾದ ವಿಶ್ವವಿದ್ಯಾಲಯಗಳು. ಒಬ್ಬ ಲೇಖಕ ಎಷ್ಟು ಪಡೆಯಬೇಕು ಎಂಬ ಪ್ರಶ್ನೆಗೆ ಉತ್ತರ —
ತನ್ನ ಹೃದಯ ಕಲ್ಲಾಗದಷ್ಟು. ಯಾಕೆಂದರೆ ಮಾಹಿತಿ ಹೆಚ್ಚಿದಂತೆ ಮನುಷ್ಯ ಕೆಲವೊಮ್ಮೆ ಸಂವೇದನೆಯನ್ನು ಕಳೆದುಕೊಳ್ಳುತ್ತಾನೆ. ಪ್ರತಿ ದಿನ ನೂರಾರು ಸುದ್ದಿಗಳನ್ನು ನೋಡುವ ಮನಸ್ಸು, ಒಂದು ಮನುಷ್ಯನ ನೋವಿನ ಮುಂದೆ ಸಹಜವಾಗಿ ನಿಲ್ಲುವ ಶಕ್ತಿಯನ್ನೇ ಕಳೆದುಕೊಳ್ಳಬಹುದು. ಆದ್ದರಿಂದಲೇ ಒಬ್ಬ ಲೇಖಕನಿಗೆ ಕೆಲವೊಮ್ಮೆ ಓದದಿರುವ ಸಾಮರ್ಥ್ಯವೂ ಬೇಕು. ಸ್ವಲ್ಪ ಮೌನ ಬೇಕು. ಸ್ವಲ್ಪ ಏಕಾಂತ ಬೇಕು. ಸ್ವಲ್ಪ ಜೀವನವನ್ನು ಕೇವಲ ನೋಡುವ ಸಮಯ ಬೇಕು.

ಯಾಕೆಂದರೆ ಉತ್ತಮ ಸಾಹಿತ್ಯವು ಮಾಹಿತಿಯಿಂದ ಹುಟ್ಟುವುದಿಲ್ಲ; ಅದು ನಮ್ಮ ಒಳಗಣ್ಣಿನಿಂದ ಹುಟ್ಟುತ್ತದೆ.ಕೊನೆಗೆ, ಒಬ್ಬ ಲೇಖಕ ತನ್ನ ಜೀವಿತಾವಧಿಯಲ್ಲಿ ಎಷ್ಟು ಓದಬೇಕು ಎಂಬ ಪ್ರಶ್ನೆಗೆ ಬಹುಶಃ ಅತ್ಯಂತ ಸರಿಯಾದ ಉತ್ತರ ಇದೇ ಇರಬಹುದು:
ತನ್ನೊಳಗಿನ ಮನುಷ್ಯ ಸಾಯದಷ್ಟು ಓದಬೇಕು. ಮತ್ತು — ತನ್ನೊಳಗಿನ ಮೌನ ಮಾತಾಡಲು ಆರಂಭಿಸುವಷ್ಟರ ಮಟ್ಟಿಗೆ ಮಾತ್ರ.

ಡಾ. ಲಕ್ಷ್ಮಣ ವಿ.ಎ ಮೂಲತಃ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಮೋಳೆ ಗ್ರಾಮದವರು. ಮಹಾಗಣಪತಿ ಆಯುರ್ವೇದ ಮಹಾವಿದ್ಯಾಲಯದಲ್ಲಿ ವೈದ್ಯಕೀಯ ಪದವಿ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವಿ ಪಡೆದಿದ್ದಾರೆ. ಪ್ರಸ್ತುತ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಖಾಸಗೀ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
