Advertisement
ವಿಷಮಯ ವಿಶ್ವದ ವಿಷಾದ ಗಾಥೆ: ನಾಗೇಶ್‌ ಹೆಗಡೆ ಕೃತಿಯ ಕುರಿತು ಡಾ. ರಾಜೇಂದ್ರಕುಮಾರ್ ಕೆ.ಮುದ್ನಾಳ್ ಬರಹ

ವಿಷಮಯ ವಿಶ್ವದ ವಿಷಾದ ಗಾಥೆ: ನಾಗೇಶ್‌ ಹೆಗಡೆ ಕೃತಿಯ ಕುರಿತು ಡಾ. ರಾಜೇಂದ್ರಕುಮಾರ್ ಕೆ.ಮುದ್ನಾಳ್ ಬರಹ

ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿ ತನ್ನ ಮಕ್ಕಳಿಗಾಗಿ ಆಸ್ತಿ, ಐಶ್ವರ್ಯ ಸಂಪತ್ತುಗಳನ್ನೆಲ್ಲ ಮಾಡುತ್ತಾನೆ. ಆದರೆ ಪ್ರಕೃತಿ ಮಾನವನಿಗೆ ಕೊಟ್ಟ ನಿಸರ್ಗದತ್ತವಾದ ಸಂಪತ್ತನ್ನೆಲ್ಲ ಲೂಟಿ ಮಾಡುತ್ತಿದ್ದಾನೆ. ನಾವು ಪ್ರಕೃತಿಗೆ ಕೊಡಬೇಕಾದ ಗೌರವವನ್ನು ಕೊಡದೆ ಅವಿಧೇಯತೆಯಿಂದ ನಡೆಸಿಕೊಳ್ಳುತ್ತಾ ಬಂದಿದ್ದೇವೆ. ಪ್ರಕೃತಿಯ ಮುನಿಸನ್ನು ಎದುರಿಸಲು ನಾವು ಸಿದ್ಧರಿದ್ದೇವೆಯೇ, ಅದು ಸಾಧ್ಯವೇ?  ಪ್ರಕೃತಿಯ ವಿರುದ್ಧ ಮನುಷ್ಯ ಗೆದ್ದಿದ್ದೇ ಆದರೆ ಮುಂದೆ ಅವನಿಗೆ ಸೋಲು ಕಟ್ಟಿಟ್ಟ ಬುತ್ತಿ’ ಎಂದು ಚಿಂತಕ ಯೂಜಿನ್ ಶುಮಾಕರ್‌ರ ಮಾತನ್ನು ಲೇಖಕರು ಉಲ್ಲೇಖಿಸುತ್ತಾರೆ.
ನಾಗೇಶ್‌ ಹೆಗಡೆ  ಬರೆದ ‘ಪರಿಸರದ ಮಹಾ ದುರಂತಗಳು’  ಕೃತಿಯ ಕುರಿತು ಡಾ. ರಾಜೇಂದ್ರಕುಮಾರ್ ಕೆ.ಮುದ್ನಾಳ್ ಬರಹ

ಪ್ರಪಂಚವು ಕಂಡ ಪರಿಸರದ ಮಹಾ ದುರಂತಗಳಾದ ಪುಕುಷಿಮಾ, ಎಂಡೋ ಸಲ್ಫಾನ್, ಲವ್ ಕೆನಾಲ್, ಎಕ್ಸನ್ ವಾಲ್ದೆಜ್, ಹಾರ್ಟಿನ್, ಲಂಡನ್ ಹೊಂಜು, ಹಾರ್ಟಿನ್, ಭೂಪಾಲ್ ಅನಿಲ, ಚರ್ನೋಬಿಲ್, ಮೀನಾ ಮಾಟ, ಎಂಚೆಂಗ್ ಬೆಂಕಿ ದುರಂತಗಳು ಕುರಿತಾದ ಹದಿಮೂರು ಲೇಖನಗಳು ಪರಿಸರದ ಮೇಲೆ ಉಂಟು ಮಾಡಿದ ಮಾನವನ ಮಹಾ ಕೃತ್ಯವನ್ನು ತಿಳಿಸುತ್ತವೆ. ‘ವಿಷಮಯ ವಿಶ್ವದ ವಿಷಾದ ಗಾಥೆ ‘ ಎಂದು ಮೊದಲ ಮಾತನ್ನು ಶುರು ಮಾಡುತ್ತಾ ಭವಿಷ್ಯದ ಪೀಳಿಗೆಯನ್ನು ಆತಂಕದಲ್ಲಿ ನೂಕಿದ್ದೇವೆ ಎಂಬ ಅಳಲನ್ನು ನಾಗೇಶ್ ಹೆಗಡೆಯವರು ‘ಪರಿಸರದ ಮಹಾ ದುರಂತಗಳು’ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಈ ಕೃತಿಯಲ್ಲಿನ ಹೆಗಡೆಯವರ ಒಳಪುಟದ ಚಿತ್ರಗಳು ಭಾವ ತೀವ್ರತೆಯನ್ನು ಸೂಚಿಸುವಂತಿವೆ. ಬೆಂಗಳೂರಿನ ಭೂಮಿ ಬುಕ್ಸ್ ಪ್ರಕಟಿಸಿರುವ ಈ ಪುಸ್ತಕ ಪ್ರತಿಯೊಬ್ಬರು ಓದಲೇಬೇಕು. ಏಕೆಂದರೆ ‘ಅವರು ಸಾವಿರಾರು ಮುಗ್ಧ ಸ್ರಮಿಕರ ಸಾವಿಗೆ ಕಾರಣರಾದರು.’

‘ಅವರು ಲಕ್ಷಾಂತರ ಪಕ್ಷಿಗಳ ಹಾಗೂ ಪ್ರಾಣಿ ವಂಶಗಳ ನಿರ್ಣಾಮಕ್ಕೆ ಕಾರಣರಾದರು.’

‘ಅವರು ಕಡಲಂಚಿನ ಕೋಟ್ಯಂತರ ಜೀವಿಗಳ ಹತ್ಯೆಗೆ ಕಾರಣರಾದರು. ಅಸಂಖ್ಯಾತ ಅಮಾಯಕ ಮಕ್ಕಳ ಅಂಗವಿಕಲಕ್ಕೆ ಕಾರಣರಾದರು.’

‘ಅವರಿಗೆ ಲಾಭಗಳಿಕೆಯ ಭೂತ ಬಡೆದಿತ್ತು, ಜೀವಲೋಕದ ಬಗ್ಗೆ ಅಸಡ್ಡೆ ಇತ್ತು. ಏನೆಲ್ಲಾ ಆಪತ್ತು ತಂದರೂ ದಕ್ಕಿಸಿಕೊಳ್ಳಬಲ್ಲವೆಂಬ ದಾರ್ಷ್ಟ್ಯವಿತ್ತು, ದಿಮಾಕ್ಕಿತ್ತು.’ ಎಂಬ ಆಲೋಚನೆಗಳು ನಮ್ಮ ಮನಸ್ಸನ್ನು ನಾಟುತ್ತವೆ. ಈ ಕೃತಿಯ ಸಂಕ್ಷಿಪ್ತ ಪರಿಚಯವನ್ನು ಮಾಡಿಕೊಡುವುದು ಈ ಲೇಖನದ ಉದ್ದೇಶ.

ಪ್ರಪಂಚ ಎರಡು ಮಹಾಯುದ್ಧಗಳನ್ನು ಕಂಡಿದೆ. ‘ಎರಡನೆಯ ಮಹಾಯುದ್ಧದಲ್ಲಿ ಎರಡು ಮಹಾಯುದ್ಧಗಳು ನಡೆಯತೊಡಗಿದವು. ಒಂದು ಮನುಷ್ಯರ ಮೇಲೆ ಮನುಷ್ಯರೆ ನಡೆಸಿದ ಮಹಾಯುದ್ಧ, ಇನ್ನೊಂದು ಮನುಷ್ಯರಿಗೆ ವೈರಿಗಳಾಗಿ ಕಂಡ ಸೂಕ್ಷ್ಮ ಜೀವಿಗಳ ಮೇಲೆ, ಕೀಟ ಪ್ರಪಂಚದ ಮೇಲೆ, ಸಸ್ಯ ಪ್ರಪಂಚದ ಮೇಲೆ ಮನುಷ್ಯರು ನಡೆಸಿದ ರಾಸಾಯನಿಕ ಮಹಾಯುದ್ಧ’ ಎಂದು ಲೇಖಕರು ಗ್ರಹಿಸುತ್ತಾರೆ. ನನ್ನ ದೃಷ್ಟಿಯಲ್ಲಿ ಅದು ‘ಅಣು ಬಾಂಬ್’ ಗಳ ಯುದ್ಧವಾದರೆ, ಕೋವಿಡ್ -19 ಎಂಬ ‘ಅಣು’ವಿನ ಮೂರನೇ ಮಹಾಯುದ್ಧವು ಸದ್ದಿಲ್ಲದೆ ನಡೆದುಹೋಯಿತು. ಇಡೀ ಪ್ರಪಂಚವೇ ನಿಸರ್ಗದ ಎದುರು ಮಂಡಿಯೂರಿತ್ತು. ಈ ಯುದ್ಧಗಳ ಭೀಕರತೆಯ ಪರಿಣಾಮವನ್ನು ಇಂದು ನಾವು ಅನುಭವಿಸುತ್ತಿದ್ದೇವೆ ಎಂಬ ಅರಿವು ಕೂಡ ನಮಗಿಲ್ಲ. ಹಾಗಾಗಿ ಪರಿಸರ ಸಾಕ್ಷರತೆ ಇಂದಿನ ತುರ್ತು ಅಗತ್ಯ.

ನಾವು ಪರಿಸರವಾದಿ ಸಾಲುಮರದ ತಿಮ್ಮಕ್ಕನನ್ನು ಕಳೆದುಕೊಂಡೆವು. ಪರಿಸರದ ಅನಾಹುತಗಳ ಬಗ್ಗೆ ಅರಿವಿರದ ಮಹಿಳೆಯೊಬ್ಬಳು ಪರಿಸರ ಕುರಿತಾದ ಕಾಳಜಿಗೆ ನಾಗರಿಕ ಸಮಾಜ ತಲೆತಗ್ಗಿಸಬೇಕು.

(ನಾಗೇಶ್‌ ಹೆಗಡೆ)

ಶುದ್ಧವಾದ ಗಾಳಿ, ನೀರು, ಬೆಳಕು, ವಾತಾವರಣ ಇಂದು ಮರೀಚಿಕೆಯಾಗಿದೆ. ಎಲ್ಲಾ ಮೆಟ್ರೋ ನಗರಗಳು ಕಲುಷಿತಗೊಂಡು ವಾತಾವರಣ ಬಿಸಿಯಾಗುತ್ತಿದೆ. ಕಾಲ ಕಾಲಕ್ಕೆ ಮಳೆ ಬೆಳೆಯಾಗದೆ ರೈತರು ಕಂಗಾಲಾಗಿದ್ದಾರೆ. ರೈತರಿಗೆ ಇಲ್ಲದ ಆಮಿಷಗಳನ್ನು ಒಡ್ಡಿ ಕಂಪನಿಗಳು ಭೂಮಿಗೆ ರಾಸಾಯನಿಕ ಗೊಬ್ಬರಗಳ ವಿಷವನ್ನು ಬಿತ್ತುತ್ತಿವೆ. ಡಿಸೆಂಬರ್ 5 ರಂದು ‘ಮಣ್ಣು ದಿನ’ವೆಂದು ಆಚರಣೆ ಮಾಡಿದೆವು, ಆ ಮಣ್ಣು ಕೂಡ ರಾಸಾಯನಿಕ ವಿಷವಾಗಿ ಪರಿಣಮಿಸಿದೆ. ತಾಯಿಯ ಎದೆ ಹಾಲಿನಲ್ಲಿ ಯುರೇನಿಯಂ ಪ್ರಮಾಣ ಹೇಗೆ ಬಂತು ಎಂಬ ಚರ್ಚೆ ಶುರುವಾಗಿದೆ. ತಾಯಿಯ ಎದೆ ಹಾಲೇ ನಂಜಾಗಿರುವಾಗ ಇನ್ನು ಬದುಕಿನ ಅರ್ಥ ಹುಡುಕುವುದಾದರೂ ಹೇಗೆ? ಇದಕ್ಕೆಲ್ಲ ಕಾರಣ ಮನುಷ್ಯನ ಮಿತಿಮೀರಿದ ದುರಾಸೆ.

ವಿಜ್ಞಾನದ ಪ್ರತಿಯೊಂದು ವಿಸ್ಮಯ ಅಂಶಗಳು ಇಂದು ವಿಷದ ದಾರಿ ಕಡೆ ನಮ್ಮನ್ನು ಕೊಂಡೊಯ್ಯುತ್ತಿವೆ. ಲೇಖಕರೆ ಹೇಳುವಂತೆ, ‘ಇಲ್ಲಿ ಫೋಣಿಸಲಾದ ಕಥೆಗಳೆಲ್ಲ ವಿಜ್ಞಾನದ ವೈಫಲ್ಯದ ಫಲ ಎನ್ನುವಂತಿಲ್ಲ. ವಿಜ್ಞಾನ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವಲ್ಲಿ ನಮ್ಮಲ್ಲಿ ಕಾಣುವ ಸಾಮೂಹಿಕ ಹೊಣೆಗೇಡಿತನ, ನೈತಿಕ ಅಧಃಪತನ, ಭ್ರಷ್ಟಾಚಾರ ಮತ್ತು ಕಾನೂನಿನ ಕಡೆಗಣಿಕೆ ಇವೆಲ್ಲ ಒಟ್ಟಾಗಿ ಅಥವಾ ಒಂದೊಂದಾಗಿ ಹೇಗೆ ನಮ್ಮನ್ನೆಲ್ಲ ಸುತ್ತಿಕೊಳ್ಳುತ್ತದೆ ಎಂಬುದರ ಉದಾರಣೆಗಳು ಇವು’ ಎನ್ನುತ್ತಾರೆ. ನಾವು ಕಾಡನ್ನು, ಮರುಭೂಮಿಯನ್ನು ಸಮುದ್ರವನ್ನು, ಹಿಮಖಂಡಗಳನ್ನು, ಆಕಾಶವನ್ನು ಹೇಗೆ ದೋಚುತ್ತಿದ್ದೇವೆ’ ಎಂದು ಸ್ವವಿಮರ್ಶೆ ಮಾಡಿಕೊಳ್ಳದ ಹೊರತು ಈ ಭೂಮಿಗೆ ಬಿಡುಗಡೆ ಇಲ್ಲ ಎಂಬುದನ್ನು ಸೂಚಿಸುತ್ತಾರೆ.

1984 ಡಿಸೆಂಬರ್ 2 ಮಧ್ಯರಾತ್ರಿ ನಡೆದ ಭೂಪಾಲ್ ಅನಿಲ ದುರಂತ ‘ಜಗತ್ತಿನ ಅತಿ ದೊಡ್ಡ ಔದ್ಯಮಿಕ ದುರಂತ’ಕ್ಕೆ ನಾಲ್ಕು ದಶಕಗಳು ಕಳೆದಿವೆ. ಅದರಿಂದಾದ ಅನಾಹುತಗಳನ್ನು ಇಂದು ಕೂಡ ಜೀವ ಜಗತ್ತು ಅನುಭವಿಸುತ್ತಿದೆ. ಇದಕ್ಕೆ ಸಂಬಂಧಿಸಿದ ಕಂಪನಿಗಳಿಗೆ ಯಾವ ಶಿಕ್ಷೆಯನ್ನು ಕೂಡ ಇಲ್ಲಿವರೆಗೂ ನೀಡಲಾಗಿಲ್ಲ. ಪರಿಸರಕ್ಕೆ ಹಾನಿ ಮಾಡುವ ಪ್ರತಿಯೊಬ್ಬ ಮನುಷ್ಯನು ಕೂಡ ಅಪರಾಧಿಯೇ ಎಂಬುದನ್ನು ನಾವು ಪರಿಗಣಿಸಬೇಕು.

ಎಂಡೋ ಸಲ್ಫಾನ್ ಸಿಂಪಡಣೆಯಿಂದ ಆಗುವ ಅನಾಹುತಗಳನ್ನು ಗಮನಿಸಿದಾಗ ನಾವೆಷ್ಟು ಅವಿವೇಕಿಗಳು ಎಂಬುದು ಗೊತ್ತಾಗುತ್ತದೆ. ಗೋಡಂಬಿ ಫಸಲು ಚೆನ್ನಾಗಿ ಬರಬೇಕೆಂಬ ದೃಷ್ಟಿಯಿಂದ ವಿಮಾನದ ಮೂಲಕ ಎಂಡೋಸಲ್ಫಾನ್ ವಿಷ ವಸ್ತುವನ್ನು ಸಿಂಪಡಿಸುತ್ತಿದ್ದರು. ಇದರಿಂದ ಮಂಗಳೂರಿನ ಪಟ್ಟರೆ ಮತ್ತು ಪರ್ಯಾಯ ಊರುಗಳು ಅನೇಕ ಕಾಯಿಲೆಗಳಿಗೆ ತುತ್ತಾಗಬೇಕಾಯಿತು ಎಂದು ಲೇಖಕರು ದಾಖಲಿಸುತ್ತಾರೆ. ಹಾಗೆಯೇ ಕಾಸರಗೋಡಿನ ಮುನ್ಸಿಪಲ್ ನ್ಯಾಯಾಲಯ ನೀಡಿದ ತೀರ್ಪು ಇಲ್ಲಿ ಮಹತ್ವವಾಗಿದೆ. ಅದೇನಂದರೆ ‘ಜನರನ್ನು ಕಷ್ಟಕ್ಕೆ ಸಿಲುಕಿಸಿ ಲಾಭ ಗಳಿಸಬಾರದು. ನಿಸರ್ಗವನ್ನು ನಾಶ ಮಾಡುವ ಶಕ್ತಿ ನಮಗಿದೆ ನಿಜ, ನಿಸರ್ಗವನ್ನು ರಕ್ಷಿಸುವ ವಿವೇಕ ನಮಗಿದೆಯೇ?ʼ ಎಂದು ಆ ತೀರ್ಪಿನಲ್ಲೇ ಹೇಳಲಾಗಿತ್ತೆಂದು ದಾಖಲಿಸುತ್ತಾರೆ.

ನಿಸರ್ಗವನ್ನು ನಾಶ ಮಾಡುವ ಹಕ್ಕು ನಮಗಿಲ್ಲ, ಅದನ್ನು ನಮ್ಮ ಅಭಿವೃದ್ಧಿಗಾಗಿ ಬಳಸಿಕೊಂಡರೂ ಕೂಡ ಕೇಡು ಕಟ್ಟಿಟ್ಟ ಬುತ್ತಿ ಎಂಬುದು ನೆನಪಿರಲಿ.

ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿ ತನ್ನ ಮಕ್ಕಳಿಗಾಗಿ ಆಸ್ತಿ, ಐಶ್ವರ್ಯ ಸಂಪತ್ತುಗಳನ್ನೆಲ್ಲ ಮಾಡುತ್ತಾನೆ. ಆದರೆ ಪ್ರಕೃತಿ ಮಾನವನಿಗೆ ಕೊಟ್ಟ ನಿಸರ್ಗದತ್ತವಾದ ಸಂಪತ್ತನ್ನೆಲ್ಲ ಲೂಟಿ ಮಾಡುತ್ತಿದ್ದಾನೆ. ನಾವು ಪ್ರಕೃತಿಗೆ ಕೊಡಬೇಕಾದ ಗೌರವವನ್ನು ಕೊಡದೆ ಅವಿಧೇಯತೆಯಿಂದ ನಡೆಸಿಕೊಳ್ಳುತ್ತಾ ಬಂದಿದ್ದೇವೆ. ಪ್ರಕೃತಿಯ ಮುನಿಸನ್ನು ಎದುರಿಸಲು ನಾವು ಸಿದ್ಧರಿದ್ದೇವೆಯೇ, ಅದು ಸಾಧ್ಯವೇ?  ಪ್ರಕೃತಿಯ ವಿರುದ್ಧ ಮನುಷ್ಯ ಗೆದ್ದಿದ್ದೇ ಆದರೆ ಮುಂದೆ ಅವನಿಗೆ ಸೋಲು ಕಟ್ಟಿಟ್ಟ ಬುತ್ತಿ’ ಎಂದು ಚಿಂತಕ ಯೂಜಿನ್ ಶುಮಾಕರ್‌ರ ಮಾತನ್ನು ಲೇಖಕರು ಉಲ್ಲೇಖಿಸುತ್ತಾರೆ.

ದೆಹಲಿ ಹಾಗೂ ಕರ್ನಾಟಕದಲ್ಲಿ ಏಕಕಾಲಕ್ಕೆ ಅಧಿವೇಶನಗಳು ನಡೆಯುತ್ತಿರುವುದನ್ನು ಗಮನಿಸಿದಾಗ, ಕೇವಲ ಒಣ ಪ್ರತಿಷ್ಠೆಗಾಗಿ ಚರ್ಚೆ ನಡೆದಿದೆ ಹೊರತು ಪರಿಸರದ ಕುರಿತಾಗಿ ಚರ್ಚೆ ನಡೆಯುತ್ತಿಲ್ಲ. ಪರಿಸರದಿಂದ ನಾವು ಕಲಿಯಬೇಕಾದ ಪಾಠ ಏನೆಂಬುದನ್ನು ಮರೆತು ಸ್ವ ಹಿತಕ್ಕಾಗಿ, ಸ್ವ ಪಕ್ಷಕ್ಕಾಗಿಯಷ್ಟೇ ಚರ್ಚೆಗಳು ನಡೆಯುತ್ತಿವೆ. ಪರಿಸರದ ಕಾಳಜಿಯ ಕುರಿತ ಚರ್ಚೆ ಮೂಲೆಗುಂಪಾಗಿ ಕುರ್ಚಿ ಚರ್ಚೆಯ ಮುನ್ನಡೆಗೆ ಬರುತ್ತಿದೆ ಇದರಿಂದ ವಿಕಾಸದ ಸಾಧ್ಯವೇ?

ಕಳೆದ ಇಪ್ಪತ್ತು ವರ್ಷಗಳಲ್ಲಿ ಬಾವಿಗಳು ಕುಡಿಯುವ ನೀರಿನ ಮೂಲವಾಗಿದ್ದವು. ಆಧುನಿಕ ಕೊಳವೆ ಬಾವಿಗಳ ಆಗಮನದಿಂದ ಅಂತರ್ಜಲ ಮಟ್ಟ ಕುಸಿದು ಬಾವಿಗಳು ಕಣ್ಮರೆಯಾದವು. ಶುದ್ಧ ಕುಡಿಯುವ ನೀರಿಗಾಗಿ ಘಟಕಗಳನ್ನು ಸ್ಥಾಪಿಸಿಕೊಂಡು ಇದು ನಮ್ಮ ಸಾಧನೆ ಎಂದು ಹೆಮ್ಮೆ ಪಡುತ್ತಿದ್ದೇವೆ. ನಗರಗಳಲ್ಲಿ ಹಳ್ಳಿಗಳಲ್ಲಿ ಇಂದು ನಿಸರ್ಗ ಮೂಲದ ನೀರು ಹುಡುಕಿದರೂ ಸಿಗುವುದಿಲ್ಲ. ಇದಕ್ಕೆ ಕಾರಣ ಯಾರು ಎಂದು ಹುಡುಕಿದಾಗ ಮತ್ತೆ ಅಪರಾಧಿಯಾಗುವವರು ಮನುಷ್ಯರೇ.

ಗುಲ್ಬರ್ಗ ಜಿಲ್ಲೆಯ ವಾಡಿ -ಸೇಡಂ ಪಟ್ಟಣಗಳಲ್ಲಿರುವ ಸಿಮೆಂಟ್ ಫ್ಯಾಕ್ಟರಿಯಿಂದ ಅಲ್ಲಿನ ಶುದ್ಧ ಗಾಳಿ ಮಲಿನಗೊಂಡಿದೆ. ಪ್ರಾಣಿ, ಪಕ್ಷಿಗಳು ಮನುಷ್ಯರು ಹಲವು ರೋಗಗಳಿಗೆ ಬಲಿಯಾಗುತ್ತಿದ್ದಾರೆ. ರಾಯಚೂರು ಜಿಲ್ಲೆಯ ಶಕ್ತಿನಗರದ ಶಾಕೋತ್ಪನ್ನ ಕೇಂದ್ರದಿಂದ ಬಿಡುವ ತ್ಯಾಜ್ಯವೆಲ್ಲವೂ ಕೃಷ್ಣಾ ನದಿ ಸೇರುತ್ತಿದೆ. ನದಿಯಲ್ಲಿನ ಜೀವಸಂಕುಲವೆಲ್ಲವೂ ವಿನಾಶದ ಹಂತ ತಲುಪಿವೆ. ಯಾದಗಿರಿ ಜಿಲ್ಲೆಯ ಕಡೇಚೂರ್ ಹತ್ತಿರ ನಿರ್ಮಿಸಿರುವ ತ್ಯಾಜ್ಯ ನಿರ್ವಹಣೆಯ ಕಾರ್ಖಾನೆಯಿಂದ ವಾತಾವರಣದ ಶುದ್ಧ ಗಾಳಿ ವಿಷಪೂರಿತವಾಗುತ್ತಿದೆ. ಅಲ್ಲಿನ ಸಮಸ್ಯೆಗಳು ಸಮಸ್ಯೆಗಳೇ ಅಲ್ಲ ಎನ್ನುವ ನಿಟ್ಟಿನಲ್ಲಿ ಸರ್ಕಾರ ತನ್ನ ಜಾಣ ಕುರುಡುತನವನ್ನು ಪ್ರದರ್ಶಿಸುತ್ತಿದೆ. ಕಡೇಚೂರ್ ಫ್ಯಾಕ್ಟರಿಯ ವಿಷ ಅನಿಲದ ದುಷ್ಪರಿಣಾಮಗಳ ಕುರಿತು ಸ್ಥಳೀಯ ಪತ್ರಿಕೆಗಳು, ಕನ್ನಡಪ್ರಭ ಸರಣಿ ವರದಿಗಳನ್ನು ಮಾಡಿದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡಿಲ್ಲವೆಂಬುದೇ ವಿಪರ್ಯಾಸ.

ನಾಗೇಶ್ ಹೆಗಡೆ ಅವರು ಪ್ರತಿಯೊಂದು ಲೇಖನದ ಕೊನೆಯಲ್ಲಿ ಸೂಚಿಸುವ ಅಂಶಗಳು ಆಡಳಿತ ವೈಖರಿಯನ್ನು, ನಾಗರಿಕ ಸಮಾಜದ ಬೇಜವಾಬ್ದಾರಿತನವನ್ನು ಸೂಕ್ಷ್ಮವಾಗಿ ವಿಮರ್ಶೆ ಒಳಪಡಿಸುತ್ತಾರೆ. ಆ ಅಂಶಗಳನು ಹೀಗೆ ಕ್ರೋಢೀಕರಿಸಬಹುದು.

  1. ವಾತಾವರಣ ದಿನಕ್ಕೆ ಬಿಸಿಯಾಗುತ್ತಿದೆ ಹಿಮ ಕುಸಿತ, ಮೇಘಸ್ಫೋಟ, ಚಂಡಮಾರುತ, ಕಾಡಿನ ಬೆಂಕಿ, ತೀವ್ರಬರ ಎಲ್ಲವೂ ಹೆಚ್ಚುತ್ತಿದೆ ಆದರೂ ನಮ್ಮಲ್ಲಿ ಬಹು ಕೋಟ್ಯದೀಶ ಉದ್ಯಮಿಗಳು ಹೊಸ ಹೊಸ ಕಲ್ಲಿದ್ದಲ ನಿಕ್ಷೇಪಗಳ ಗಣಿಗಾರಿಕೆಯ ಗುತ್ತಿಗೆ ಪಡೆಯುತ್ತಲೇ ಇದ್ದಾರೆ.
  2. ಪಾದರಸದಿಂದ ಭಾರೀ ವಿಷಕಾರಿ ದ್ರವ್ಯಗಳು ಪರಿಸರಕ್ಕೆ ಸೇರುತ್ತವೆ ಎಂಬ ವಿಷಯ ತಿಳಿದ ತಕ್ಷಣ ಮುಂದುವರಿದ ರಾಷ್ಟ್ರಗಳು ತಮ್ಮ ಕಾರ್ಖಾನೆಗಳನ್ನು ಮುಚ್ಚಿ ಮುಂದುವರೆಯುತ್ತಿರುವ ದೇಶಗಳಿಗೆ ಎತ್ತಗಂಡಿ ಮಾಡಿದವು. ತಮಿಳುನಾಡಿನ ಕೊಡೈಕೆನಲ್ ಎಂಬಲ್ಲಿ ‘ಥರ್ಮಾಮೀಟರ್‌ಳನ್ನು ತಯಾರಿಸುವ ಜಗತ್ತಿನ ಅತಿ ದೊಡ್ಡ ಕಾರ್ಖಾನೆ ನಮ್ಮಲ್ಲಿದೆ ‘ಎಂದು ಹೇಳಿಕೊಳ್ಳುವಂತಹ ಹೆಮ್ಮೆ ನಮ್ಮದಾಯಿತು.
  3. ಕದ್ದು ಮುಚ್ಚಿ ವಿಷದ್ರವ್ಯಗಳನ್ನು ಮತ್ತು ಅಪಾಯಕಾರಿ ಫ್ಯಾಕ್ಟರಿ ತ್ಯಾಜ್ಯಗಳನ್ನು ತಗ್ಗಿದ್ದಲ್ಲಿ ಎಸೆದು ಹೋಗುವ ಪರಿಪಾಠ ಈಗಲೂ ಜಾರಿಯಲ್ಲಿದೆ. ದೇಶದ ಅಸಂಖ್ಯ ಫ್ಯಾಕ್ಟರಿ ಮತ್ತು ಗಣಿ ಕಾರ್ಮಿಕರ ಕುಟುಂಬಗಳಲ್ಲಿ ಮೌನ ಆಕ್ರಂದನ ಹೊಮ್ಮುತ್ತಲೇ ಇದೆ.
  4. ಪರಮಾಣು ಯೋಜನೆಗಳಿಗೆ ಹಲವರು ವಿದ್ವಜ್ಜನರು ಪ್ರತಿರೋಧ ವ್ಯಕ್ತಪಡಿಸಿದರೂ ಕೂಡ ಎಲ್ಲರ ಪ್ರತಿರೋಧದ ಮಧ್ಯೆಯು ತಲೆಯೆತ್ತಿ ನಿಲ್ಲಬಲ್ಲ ತಾಕತ್ತು ಪರಮಾಣು ಶಕ್ತಿಗಿದೆ ಎಂಬುದೂ ಗೊತ್ತಾಯಿತು. ಇದು ಸ್ವತಃ ಲೇಖಕರಿಗೆ ಆದ ಕಹಿ ಅನುಭವಗಳಲ್ಲಿ ಒಂದು.
  5. ಬಾಂಬೆ ತೈಲದ ಜಿಡ್ಡಿನ ದುರಂತ ಕುರಿತು ಯಾರಿಗೂ ಗೊತ್ತಾಗದಿದ್ದರೂ ಕೂಡ ಕೆಲವರಿಗೆ ಗೊತ್ತಾಗಿ ಅದು ಸ್ಥಳಾಂತರಗೊಳ್ಳುವುದು. ದುರಂತದ ದೂರ ಪರಿಣಾಮಗಳನ್ನು ಗುಡಿಸಿ ಮೂಲೆಗೆ ತಳ್ಳುವಲ್ಲಿ ನಮ್ಮವರನ್ನು ಮೀರಿಸಿದವರುಂಟೆ?
  6. ಆರ್ಗ್ಯಾನೋ ಕ್ಲೋರಿನ್ ವಿಷಗಳು ಮುಂದಿನ ಪೀಳಿಗೆಗೂ ದಾಟುತ್ತವೆ. ಪರಿಹಾರ ಕೋರಿ ನ್ಯಾಯಾಲಯಗಳಿಗೆ ಸಲ್ಲಿಸಿದ ಅರ್ಜಿಗಳ ವಿಚಾರಣೆಯ ಗತಿಯೂ ಅದೇ ಆಗುತ್ತದೆ.
  7. ಕತ್ತಲಲ್ಲಿರುವವರ ಕಥೆ ಕತ್ತಲಲ್ಲೇ ಉಳಿಯಿತು. ಮುಂಜಾಗ್ರತವಾಗಿ ಪತ್ರಕರ್ತರು ಸಂಭವಿಸಬಹುದಾದ ಅನಾಹುತಗಳ ಬಗ್ಗೆ ಮಾಹಿತಿ ಕೊಟ್ಟರು ಎಚ್ಚೆತ್ತುಕೊಳ್ಳದ ವ್ಯವಸ್ಥೆ ನಮ್ಮದು.
  8. ಹೊಸ ಪರಮಾಣು ಘಟಕದ ನಿರ್ಮಾಣಕ್ಕಿಂತ ಮುದಿ ಘಟಕದ ನಿರ್ವಾಣ ವೆಚ್ಚ ತುಂಬಾ ಜಾಸ್ತಿ ಇರುತ್ತದೆ. ನಾಳಿನ ಪೀಳಿಗೆಯ ಜನರು ಆ ಸುದಿನಗಳನ್ನು ಅನುಭವಿಸುತ್ತಲೇ ಇಂದಿನ ಈ ಪರಮಾಣು ತ್ಯಾಜ್ಯಗಳ ಮಣಬಾರವನ್ನು ಹೊರಬೇಕಾಗುತ್ತದೆ. ಅಮೆರಿಕದಲ್ಲಿ ಒಂದು ಹೊಸ ಪರಮಾಣು ರಿಯಾಕ್ಟರ್ ಸ್ಥಾಪನೆಯಾಗಿಲ್ಲ ಆದರೆ ಭಾರತದಲ್ಲಿ ‘ಮ್ಯಾಡ್ಯೂಲರ್’ ರಿಯಾಕ್ಟರ್ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ.
  9. ಮತದಾರರಿಗೆ ಕುಕ್ಕರ್, ಟಿ.ವಿ ವಾಷಿಂಗ್ ಮಷೀನ್ ಗಳ ಆಮೀಷ ಬಡುವ ಅಭ್ಯರ್ಥಿಗಳು ಎಲ್ಲಾದರೂ ಊರಿನ ಆಸ್ಪತ್ರೆಗೆ ಕಡೆ ಪಕ್ಷ ಒಂದು ಪ್ರಥಮ ಸಹಾಯದ ಪೆಟ್ಟಿಗೆಯನ್ನಾದರೂ ಒದಗಿಸಿದ ಉದಾಹರಣೆ ಇದೆಯೆ?
  10. ನಮ್ಮ ಕೃಷಿ ಮೇಲ್ವಿಚಾರಣೆ ಹೇಗಿದೆ ಎಂದರೆ ಅದು ರೈತರ ಸಮಸ್ಯೆಯನ್ನು ಕಡಿಮೆ ಮಾಡುವ ಬದಲು ರೈತರ ಸಂಖ್ಯೆಯನ್ನೇ ಕಡಿಮೆ ಮಾಡುತ್ತಿದೆ. ‘ಹತ್ತಿಯ ಹೊಲ ಕಾಯುವ ಬೆರ್ಚಪ್ಪನಿಗೆ ಹರಕು ಬಟ್ಟೆಯೇ ಗತಿ’ ಎಂಬಲ್ಲಿಗೆ ಕಥೆ ಬಂದು ನಿಂತಿದೆ.


ಕೊನೆಯದಾಗಿ, ‘ಪರಿಸರವನ್ನು ನಾವು ರಕ್ಷಿಸಿದರೆ, ಪರಿಸರ ನಮ್ಮನ್ನು ರಕ್ಷಿಸುತ್ತದೆ’ ಎಂಬ ಅರಿವು ಆಮೆ ಗತಿಗಿಂತ ನಿಧಾನವಾಗಿದೆ. ಯಾರಾದರೂ ನಮ್ಮ ಹಿತಾಸಕ್ತಿಗೆ ಧಕ್ಕೆ ಮಾಡಿದರೆ ಸದಾ ನಮ್ಮನ್ನು ಕಾಡುತ್ತಿರುತ್ತದೆ. ಆದರೆ ಈ ‘ಕಾಡು’ವಿಕೆ ಪರಿಸರ ಕುರಿತಾಗಿ ‘ಕಾಡು’ವುದಿಲ್ಲ ಏಕೆ? ಕೃತಕ ಬುದ್ಧಿಮತ್ತೆ ಪರಿಸರಕ್ಕೆ ಮಾರಕವಾಗಿದೆಯೋ ಅಥವಾ ಪೂರಕವಾಗಿದೆಯೋ ಎಂಬ ಚರ್ಚೆ ಆದಷ್ಟು ಪರಿಸರ ಕಾಳಜಿ ಕುರಿತು ಚರ್ಚೆ ಆಗುವುದಿಲ್ಲ ಎಂಬುವುದೇ ನಮ್ಮ ಪ್ರಜ್ಞಾಹೀನ ಸ್ಥಿತಿಯ ಅಕ್ಷರಸ್ಥರ, ಜನಪ್ರತಿನಿಧಿಗಳ, ಸರ್ಕಾರದ ಜಡತ್ವ ತೋರಿಸುತ್ತದೆ.

About The Author

ಡಾ. ರಾಜೇಂದ್ರಕುಮಾರ್ ಕೆ ಮುದ್ನಾಳ್

ಡಾ. ರಾಜೇಂದ್ರಕುಮಾರ್ ಕೆ ಮುದ್ನಾಳ್ ಮೂಲತಃ ಯಾದಗಿರಿ ಜಿಲ್ಲೆಯ ಮುದ್ನಾಳ ಗ್ರಾಮದವರು. ಸದ್ಯ ಇವರು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಎಂಟು ವರ್ಷಗಳಿಂದ ಯಾದಗಿರಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಚಂದ್ರಕಾಂತ ಕೂಸನೂರ : ಬಹುಶೀಸ್ತೀಯ ಅಧ್ಯಯನ ( ಕಥನಕ್ರಮ,ನಾಟಕ ಮತ್ತು ಚಿತ್ರಕಲೆಗಳನ್ನು ಅನುಲಕ್ಷಿಸಿ )ವಿಷಯದಡಿ ಸಂಶೋಧನಾ ಪ್ರಬಂಧ ಮಂಡಿಸಿ 2023ರಲ್ಲಿ ಪಿಎಚ್.ಡಿ ಪದವಿ ಪಡೆದಿರುವರು. ನಾಟಕಗಳ ಕುರಿತಾದ ರಂಗ ಪ್ರಯೋಗಗಳ ವಿಮರ್ಶಾ ಬರಹಗಳು ಪುಸ್ತಕ ರೂಪದಲ್ಲಿ ಪ್ರಕಟಣೆಗೆ ಸಿದ್ಧವಾಗಿದೆ.

1 Comment

  1. ಚಂದ್ರಮತಿ ಸೋಂದಾ

    ಲೇಖನದಲ್ಲಿ ಅಕ್ಷರ ಸ್ಖಾಲಿತ್ಯ ತುಂಬಾ ಇದೆ. ಮೂಲದ ಉದ್ಧರಣೆಯಲ್ಲಿಯೂ ಇದು ನುಸುಳಿದೆ.

    Reply

Leave a comment

Your email address will not be published. Required fields are marked *

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ