Advertisement
ಶ್ರೀದೇವಿ ಕೆರೆಮನೆ ಬರೆದ ಗಜಲ್

ಶ್ರೀದೇವಿ ಕೆರೆಮನೆ ಬರೆದ ಗಜಲ್

ಎದುರಾಳಿಗಳಿಲ್ಲದ ಜಗತ್ತಿನಲಿ ಗೆದ್ದೆನೆಂದು ಮೆರೆಯಬೇಡ
ನಿರಾಯಾಸವಾಗಿ ಬಯಸಿದ್ದೆಲ್ಲ ದಕ್ಕಿತೆಂದು ಮೆರೆಯಬೇಡ

ಉರುಳುವುದು ಕಾಲಚಕ್ರ ನಾವಿಬ್ಬರು ಪ್ರೇಮಿಸದೆ ಹೋದರೂ
ನಾಗಾಲೋಟದ ಸಮಯವನ್ನು ಹಿಡಿದಿಡುವೆನೆಂದು ಮೆರೆಯಬೇಡ

ಒಬ್ಬರ ಕೈಗೆ ಇನ್ನೊಬ್ಬರ ಹೆಗಲು ಆಸರೆಯಾಗಲೇ ಬೇಕು
ಯಾರ ಸಹಾಯವನ್ನೂ ಯಾಚಿಸದ ಸದೃಢನೆಂದು ಮೆರೆಯಬೇಡ

ಮುಖ ತಿರುವಿಸಿ ಹೋದರೆ ಪ್ರೀತಿ ಸಾಯುವುದೆಂದು ತಿಳಿದಿರುವೆಯಾ
ಜನ್ಮಜನ್ಮಾಂತರ ಪ್ರೇಮಪಾಶ ಹರಿದೆನೆಂದು ಮೆರೆಯಬೇಡ

ತಪಸ್ಸೆಂದು ಕಣ್ಣು ಮುಚ್ಚಿ ಮಾರ್ಜಾಲ ಸನ್ಯಾಸಿಯಾಯಿತಂತೆ
ನನ್ನ ದೂರ ಸರಿಸಿ ಕಾಮವನ್ನು ಜಯಿಸಿದೆನೆಂದು ಮೆರೆಯಬೇಡ

ಕಣ್ಣೆದುರಿಗಿಲ್ಲದವಳನ್ನು ಮರೆವುದು ಸುಲಭವೆಂದು ತಿಳಿಯದಿರು
ಮಾತು ಬಿಟ್ಟು ವಿರಹದ ಕಿಚ್ಚು ತಣ್ಣಗಾಯಿತೆಂದು ಮೆರೆಯಬೇಡ.

ಅದೋ ಆರ್ಭಟಿಸುವ ಅಲೆಗಳೂ ಸ್ತಬ್ಧವಾಗಿದೆ ಗಾಳಿ ಇಲ್ಲದೆ
ನನ್ನ ತ್ಯಜಿಸಿ ಕಡಲನ್ನೆ ಶಾಂತಗೊಳಿಸಿದೆನೆಂದು ಮೆರೆಯಬೇಡ

ಹಳೆಯ ಬಾಟಲಿಗಳಲ್ಲಿ ಮದಿರೆಯ ಒಂದು ಹನಿಯನೂ ಉಳಿಸಿಲ್ಲ
ಹೊಸಬಾಟಲಿಯ ಎದುರಿಗಿಡದೆ ಚಟ ತಪ್ಪಿದೆಯೆಂದು ಮೆರೆಯಬೇಡ

ಎಷ್ಟೆಂದು ದೂರ ಓಡುವೆ ಹಿಂಬಾಲಿಸುವ ನಿನ್ನದೆ ನೆರಳಿಂದ
ನಿನ್ನಲ್ಲೇ ಇರುವ ಶ್ರೀಯ ಕಡೆಗಣಿಸಿದೆನೆಂದು ಮೆರೆಯಬೇಡ

About The Author

ಶ್ರೀದೇವಿ ಕೆರೆಮನೆ

ಕವಯತ್ರಿ ಶ್ರೀದೇವಿ ಕೆರೆಮನೆ ಕಾರವಾರದ ಚಿತ್ತಾಕುಲ ಸರಕಾರಿ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿ. ಇವರ ಒಟ್ಟೂ ಹದಿಮೂರು ಪುಸ್ತಕಗಳು ಪ್ರಕಟಗೊಂಡಿವೆ. ಬರೆಹ, ಅದಕ್ಕಿಂತ ಓದು ಇವರ ನೆಚ್ಚಿನ ಹವ್ಯಾಸ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ