ಎದುರಾಳಿಗಳಿಲ್ಲದ ಜಗತ್ತಿನಲಿ ಗೆದ್ದೆನೆಂದು ಮೆರೆಯಬೇಡ
ನಿರಾಯಾಸವಾಗಿ ಬಯಸಿದ್ದೆಲ್ಲ ದಕ್ಕಿತೆಂದು ಮೆರೆಯಬೇಡ

ಉರುಳುವುದು ಕಾಲಚಕ್ರ ನಾವಿಬ್ಬರು ಪ್ರೇಮಿಸದೆ ಹೋದರೂ
ನಾಗಾಲೋಟದ ಸಮಯವನ್ನು ಹಿಡಿದಿಡುವೆನೆಂದು ಮೆರೆಯಬೇಡ

ಒಬ್ಬರ ಕೈಗೆ ಇನ್ನೊಬ್ಬರ ಹೆಗಲು ಆಸರೆಯಾಗಲೇ ಬೇಕು
ಯಾರ ಸಹಾಯವನ್ನೂ ಯಾಚಿಸದ ಸದೃಢನೆಂದು ಮೆರೆಯಬೇಡ

ಮುಖ ತಿರುವಿಸಿ ಹೋದರೆ ಪ್ರೀತಿ ಸಾಯುವುದೆಂದು ತಿಳಿದಿರುವೆಯಾ
ಜನ್ಮಜನ್ಮಾಂತರ ಪ್ರೇಮಪಾಶ ಹರಿದೆನೆಂದು ಮೆರೆಯಬೇಡ

ತಪಸ್ಸೆಂದು ಕಣ್ಣು ಮುಚ್ಚಿ ಮಾರ್ಜಾಲ ಸನ್ಯಾಸಿಯಾಯಿತಂತೆ
ನನ್ನ ದೂರ ಸರಿಸಿ ಕಾಮವನ್ನು ಜಯಿಸಿದೆನೆಂದು ಮೆರೆಯಬೇಡ

ಕಣ್ಣೆದುರಿಗಿಲ್ಲದವಳನ್ನು ಮರೆವುದು ಸುಲಭವೆಂದು ತಿಳಿಯದಿರು
ಮಾತು ಬಿಟ್ಟು ವಿರಹದ ಕಿಚ್ಚು ತಣ್ಣಗಾಯಿತೆಂದು ಮೆರೆಯಬೇಡ.

ಅದೋ ಆರ್ಭಟಿಸುವ ಅಲೆಗಳೂ ಸ್ತಬ್ಧವಾಗಿದೆ ಗಾಳಿ ಇಲ್ಲದೆ
ನನ್ನ ತ್ಯಜಿಸಿ ಕಡಲನ್ನೆ ಶಾಂತಗೊಳಿಸಿದೆನೆಂದು ಮೆರೆಯಬೇಡ

ಹಳೆಯ ಬಾಟಲಿಗಳಲ್ಲಿ ಮದಿರೆಯ ಒಂದು ಹನಿಯನೂ ಉಳಿಸಿಲ್ಲ
ಹೊಸಬಾಟಲಿಯ ಎದುರಿಗಿಡದೆ ಚಟ ತಪ್ಪಿದೆಯೆಂದು ಮೆರೆಯಬೇಡ

ಎಷ್ಟೆಂದು ದೂರ ಓಡುವೆ ಹಿಂಬಾಲಿಸುವ ನಿನ್ನದೆ ನೆರಳಿಂದ
ನಿನ್ನಲ್ಲೇ ಇರುವ ಶ್ರೀಯ ಕಡೆಗಣಿಸಿದೆನೆಂದು ಮೆರೆಯಬೇಡ