Advertisement
ಸಿ.ಬಿ.ಐನಳ್ಳಿ ಬರೆದ ಎರಡು ಹೊಸ ಕವಿತೆಗಳು

ಸಿ.ಬಿ.ಐನಳ್ಳಿ ಬರೆದ ಎರಡು ಹೊಸ ಕವಿತೆಗಳು

1.ಮರೆವಿನ ಹಾದಿಯ ಹಾಡು

ಎಷ್ಟೊಂದು ಕನಸುಗಳು ಕಣ್ಣಲಿ
ಓಡಿ ಓಡಿ ಓಡಿ ನೆಲದಿಂದ ನೆಗೆದು
ಮೇಲೆ ಮೇಲೆ ಮೇಲೆ ಆಕಾಶದಿ
ಹಾರುತ್ತಾ ತೇಲುತ್ತಿದ್ದೆ
ಅವರಾರೋ ಕೆಳಗೆ ಬೆನ್ನತ್ತಿದವರು
ಗಡಿಗೆರೆಗಳ ಲೆಕ್ಕಿಸದೆ ಹಾರುತ್ತಿದ್ದವನ
ನೋಡಿ ಬೇಸತ್ತು ಸೋತು ಸುಮ್ಮನಾಗುತ್ತಿದ್ದರು
ಎಳೆಮನದ ಅಣುಕಣಗಳಲಿ
ರೆಕ್ಕೆಗಳ ಮೇಲಿನ ಮೋಹ ಅದೆಷ್ಟು
ಉಕ್ಕಿ ಹರಿಯುತ್ತಿತ್ತೋ
ನೀರೊಳಗಣ ನೀರು
ಗಾಳಿಯೊಳಗಣ ಗಾಳಿಯಂತೆ
ನನ್ನೊಳಗೆ ನಾನಿದ್ದೆ
ಇದೆ ಇಲ್ಲವೆಂಬ ಭೇದಗಳಾಚೆ
ತನ್ಮಯನಾಗಿದ್ದೆ

ರೆಕ್ಕೆಗಳಿಗೆ ಅಕ್ಷರ ಅಂಟಿಸುತ್ತಿದ್ದಂತೆ
ಹಾರಾಟವೇ ಮರೆವು
ನಡೆದ ಒಂದೊಂದು ಹೆಜ್ಜೆಯೂ ಮರೆವಿನ
ಹಾದಿಯ ಹಾಡಾಯಿತು
ಕಲಿಸಿದರು ಕಲಿಸಿದರು ಕಲಿಸಿದರು
ಮರೆವನ್ನೇ ಕಲಿಸಿದರು ಹೆಮ್ಮೆಯಿಂದ
ಮರೆತೆ ಮರೆತೆ ಮರೆತೆ
ಮರೆತದ್ದೇನೆಂಬುದನೇ ಮರೆತೆ
ಕೆಸರ ಸಾಗರದಿ ಮೈಮರೆತು ಬೆರೆತೆ

ಎಲ್ಲಿಂದಲೋ ಹರಿದು ಬರುವ ಝರಿಗಳು
ತರುತ್ತವೆ ಒಂದೊಂದೇ ಹನಿ
ಮುಕ್ತಿಯ ರಸ
ಹೀರಲಾಗದು ಮುಗ್ಧನಾಗದೆ
ಕಾದದ್ದೇನು ಸಣ್ಣ ಕಾಲವೇ?
ಅಂತೂ ಮರೆತಿದ್ದೆನೆಂಬುದನರಿತೆ
ರೆಕ್ಕೆಗಳಿಗೀಗ ದಿಕ್ಕುಗಳು ಕಾಣುತಿವೆ
ಮೊದಲಿನ ಮಸುಕಿಲ್ಲ
ಚಿಮ್ಮುತ್ತಾ ಹಾರುತ್ತಾ
ಏರುತ್ತಾ ಮೀರುತ್ತಾ
ಬೆಳಕಿನೊಳಗಣ ಬಿರುಕ ಕಾಣಬೇಕು

2. ಪಾಪಕ್ಕೊಂದು ಪುರಾಣ

ಒಂದು ದಿನದ ಮಾತಲ್ಲ
ಹೂವೊಂದು ಅರಳುತ್ತಿತ್ತು
ದುಂಬಿ ಹಾರಿ ಹಾಡಿ
ನಲಿಯುತ್ತಿತ್ತು
ಹಾಡಿನ ಝೇಂಕಾರದಿ
ಮಿಂದೆದ್ದು ಮೈಮರೆತ ಹೂ
ಮನವ ಕೊಟ್ಟಿತ್ತು
ನಂಬಿ ದುಂಬಿ
ತನುವ ತಾಕಿದಾಗ
ಮನ ಮಾಯವಾಗಿ
ಕಲ್ಲಾಗುತ್ತಿತ್ತು
ನಿಸರ್ಗದ ಕಲೆಯ
ಅವಮಾನಿಸಿದ್ದಕ್ಕಾಗಿ
ಹೂ ತಕ್ಷಣ ಈ ವರ್ಣಮಯ
ನಾಡಲಿ ಮನುಷ್ಯಳಾಗಿ
ಹುಟ್ಟಬೇಕಾಯಿತು

About The Author

ಡಾ. ಸಿ. ಬಿ. ಐನಳ್ಳಿ

ಧಾರವಾಡದ ಕರ್ನಾಟಕ ಕಲಾ ಮಹಾವಿದ್ಯಾಲಯಲ್ಲಿ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಸಿ. ಬಿ. ಐನಳ್ಳಿಯವರು ಮೂಲತಃ ಬಳ್ಳಾರಿ ಜಿಲ್ಲೆಯವರು. ಇಂಡಿಯನ್-ಅಮೇರಿಕನ್ ಲೇಖಕಿ ‘ಜುಂಪಾ ಲಾಹಿರಿಯ ಕೃತಿಗಳಲ್ಲಿ ವಸ್ತು ಮತ್ತು ತಂತ್ರಗಳ ಅಧ್ಯಯನ’ಕ್ಕಾಗಿ ಕರ್ನಾಟಕ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ಪಡೆದಿದ್ದಾರೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ