Advertisement
ನೇತ್ರಾಣಿಯ ನೆತ್ತಿಯಿಂದ: ಶ್ರೀಧರ್‌ ಎಸ್.‌ ಸಿದ್ದಾಪುರ ಪ್ರವಾಸ ಸರಣಿ

ನೇತ್ರಾಣಿಯ ನೆತ್ತಿಯಿಂದ: ಶ್ರೀಧರ್‌ ಎಸ್.‌ ಸಿದ್ದಾಪುರ ಪ್ರವಾಸ ಸರಣಿ

ಜಟ್ಟಿಗನ ದೇವಾಲಯದ ದಾರಿ ಸುಸೂತ್ರವಾಗೇನೂ ಇರಲಿಲ್ಲ. ದೊಡ್ಡ ಬೃಹತ್ ಬಂಡೆಯ ಚಡಿಗಳಲ್ಲಿ ನುಸುಳಿ ದಾಟಬೇಕಿತ್ತು. ಸ್ವಲ್ಪ ಯಾಮಾರಿದರೂ ಪಾತಳಕ್ಕೆ ಇಲ್ಲ ಸಮುದ್ರ ಪಾಲು. ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಬಂಡೆಗಳ ದಾಟಿದರೆ ಸಿಗುವ ಏರುದಾರಿಯಲ್ಲಿ ಸಾಗಬೇಕು. ಅಲ್ಲಲ್ಲಿ ದಾರಿ ತಪ್ಪಿಸುವ ಹೊರಳು ದಾರಿಗಳು ಹಲವು. ಹಚ್ಚ ಹಸಿರೊಳಗೆ ದಾರಿ ತಪ್ಪದಂತೆ ನಿಧಾನಕ್ಕೆ ಒಬ್ಬರ ಹಿಂದೊಬ್ಬರು ನಡೆದೆವು. ಸುಮಾರು 30 ನಿಮಿಷಗಳ ಹಾದಿ ಸವೆಸಿ ಜಟ್ಟಿಗನ ಮಡಿಲಲ್ಲಿದ್ದೆವು.
ಶ್ರೀಧರ್‌
ಎಸ್.‌ ಸಿದ್ದಾಪುರ ಬರೆಯುವ “ಸಾಗುತ ದೂರ ದೂರ…” ಪ್ರವಾಸ ಸರಣಿಯಲ್ಲಿ ನೇತ್ರಾಣಿ ಪ್ರವಾಸದ ಕುರಿತ ಬರಹ ಇಲ್ಲಿದೆ

ಮುರುಡೇಶ್ವರದ ಸನಿಹದಲ್ಲಿರುವ ಹೃದಯದಾಕಾರದ ಹೃದಯ ಗೆದ್ದ ದ್ವೀಪ. ಇಲ್ಲಿ ಕುರಿ ಕೋಳಿಗಳನ್ನು ಅನಾಥರನ್ನಾಗಿಸಿ ಬಿಟ್ಟು ಬಿಡಲಾಗುತ್ತದೆ! ಅವಷ್ಟಕ್ಕೆ ಅವು ಮೆಂದು ಬದುಕಬೇಕು. ಇಲ್ಲಿನ ದೇವರಿಗೆ ವರ್ಷಕ್ಕೊಮ್ಮೆಯಷ್ಟೇ ಪೂಜೆ. ಮತ್ತೊಂದು ಪೂಜೆಗೆ ಇಲ್ಲಿನ ದೇವರು ವರ್ಷ ಕಾಯಬೇಕು. ಉಳಿದ ದಿನ ಇಲ್ಲಿಗೆ ಪ್ರವೇಶವಿಲ್ಲ. ಇಲ್ಲಿಳಿಯಬೇಕಾದರೆ ಕೋಸ್ಟಲ್‌ ಗಾರ್ಡ ಅವರ ಅನುಮತಿ ಕಡ್ಡಾಯ. ಸಾಮಾನ್ಯ ದಿನಗಳಲ್ಲಿ ಸಾಮಾನ್ಯರಿಗೆ ಇಲ್ಲಿ ಇಳಿಯಲು ಅನುಮತಿ ಇಲ್ಲ. ಹಾಗಾಗಿ ನಾವಿಲ್ಲಿಗೆ ಬರಲು ಈ ವಿಶೇಷ ಪೂಜಾ ದಿನವನ್ನು ಆಯ್ಕೆ ಮಾಡಿಕೊಂಡೆವು.

ಕತೆಗಳಿಗೆ ಕೊಟ್ಟ ಒಗ್ಗರಣೆ!

ಕತೆಗಳಿಗೇ ಒಗ್ಗರಣೆಯೇ ಎಂದು ಮೂಗು ಮುರಿಯಬೇಡಿ. ಕೆಲವರು ಹಾಗೆಯೇ ಕತೆಗಳಿಗೇ ಚೆಂದದ ಒಗ್ಗರಣೆ ನೀಡುತ್ತಾರೆ! ನಡುವೆ ಸಾಸಿವೆ, ಮೆಣಸು ಸಿಗುವಂತೆ ಮಾಡಿ ನಮ್ಮನ್ನು ಅಚ್ಚರಿಗೆ ಕೆಡವುತ್ತಾರೆ! ಈ ಒಗ್ಗರಣೆಯಲ್ಲೂ ಒಂದು ರುಚಿ ಇದೆ!

ಪ್ರತಿಬಾರಿಯೂ ಮುರ್ಡೇಶ್ವರ ಹೋದಾಗಲೂ ದೂರದಲ್ಲಿ ಕಾಣಸಿಗುವ ದ್ವೀಪ ಸಮೂಹ ನೋಡಿ ಒಮ್ಮೆಯಾದರೂ ಹೋಗಿ ಬರಬೇಕೆಂದುಕೊಳ್ಳುವುದು. ಈ ದ್ವೀಪ ಸಮೂಹದ ಕುರಿತು ಪ್ರಚಲಿತದಲ್ಲಿರುವ ವಿಚಿತ್ರ ಕತೆಗಳು ದ್ವೀಪದೆಡೆಗೆ ನಮ್ಮನ್ನು ಆಕರ್ಷಿಸುವಂತೆ ಮಾಡಿತ್ತು. ಜೊತೆಗೆ ನಮ್ಮಮ್ಮ ಅಲ್ಲಿಗೆ ಹೋಗಿ ಬಂದು ಸಕತ್ ಒಗ್ಗರಣೆಯೊಂದನ್ನು ಈ ಕತೆಗೆ ಕೊಟ್ಟಿದ್ದಳು!

ಎರಡನೆಯ ಮಹಾಯುದ್ಧದ ಕಾಲದಲ್ಲಿ ಎಸೆದ ಬಾಂಬೊಂದು ದ್ವೀಪದಲ್ಲಿದೆ. ಅದಿನ್ನು ಸ್ಫೋಟಗೊಂಡಿಲ್ಲ ಎಂದು ಸದಾ ನಮ್ಮನ್ನು ಹೆದರಿಸುತ್ತಿದ್ದಳು!! ಹಾಗೆಯೇ ಅಲ್ಲಿನ ದೇವರಿಗೆ ಬಿಟ್ಟ ಕುರಿ ಕೋಳಿಗಳು ತಮ್ಮ ಸಂತತಿ ವೃದ್ಧಿಸಿಕೊಂಡು ಸಾವಿರವಾಗಿವೆ ಎಂಬುದು ಮತ್ತೊಂದು ಬ್ರೇಕಿಂಗ್ ನ್ಯೂಸ್. ಹಾಗೆಯೇ ನಾವು ಬೆಳೀತಾ ಓದುತ್ತಾ ತಿಳಿದುಕೊಂಡ ವಿಚಾರ ಏನೆಂದರೆ ಅಲ್ಲಿ ದೊಡ್ಡದೊಂದು ಖಜಾನೆ ಇದೆ ಎಂಬುದು. ಈ ಎಲ್ಲಾ ವಿಚಾರಗಳಿಗೆ ಪುಷ್ಟಿಕೊಟ್ಟಿದ್ದು ಕೆ. ಗಣೇಶಯ್ಯರ ಬೆಳ್ಳಿ ಕಾಳ ಬಳ್ಳಿ ಕಾದಂಬರಿ.

ಹೀಗೆ ವಿವಿಧ ಕತೆಗಳಿಂದ ಊಹಾಪೋಹಗಳಿಂದ ಆಕರ್ಷಣೆಯ ಕೇಂದ್ರವಾಗಿದ್ದ ನೇತ್ರಾಣಿಗೆ ಹೋಗಿ ಬರಬೇಕು ಎಂಬುದು ಸದಾ ತೀರದ ಬಯಕೆಯಾಗಿತ್ತು. ಕಾಲವೆಂಬ ಅನಂತದಲಿ ಈಡೇರದ ಆಸೆಯಾಗಿ ಉಳಿದಿತ್ತು. ಕೊನೆಗೊಮ್ಮೆ ಹೋಗಿ ಬರಲು ಕಾಲ ಕೂಡಿ ಬಂದಿದ್ದು ಹೀಗೆ.

ಆರಂಭ

2023ನೆಯ ಇಸವಿಯಲ್ಲೊಮ್ಮೆ ಮಕ್ಕಳ ಪ್ರವಾಸ ಕೈಗೊಂಡಿದ್ದೆವು. ಭಟ್ಕಳ ಬಂದರು ಕಟ್ಟೆಯನ್ನು ವಿವರಿಸಲು ಅಲ್ಲಿನವರಲ್ಲಿ ಕೇಳಿಕೊಂಡೆವು. ಎಲ್ಲರೂ ನಾ ಒಲ್ಲೆ, ನಾ ಒಲ್ಲೆ ಎಂದಾಗ ಅಜಯ್ ಎಂಬ 24ರ ತರುಣ ಬಂದರುಕಟ್ಟೆ ವ್ಯವಹಾರ, ಆರ್ಥಿಕತೆ, ಜಟ್ಟಿ, ಸಮುದ್ರ, ದ್ವೀಪಸ್ತಂಭಗಳನ್ನೆಲ್ಲಾ ಮಕ್ಕಳಿಗೆ ನಮಗೂ ವಿವರಿಸಿದ. ಹಿಡಿದ ಮೀನುಗಳ ಶೇಖರಣೆ, ಹಿಡಿಯುವ ವಿಧಾನ, ಉಬ್ಬರ, ಇಳಿತ ಜ್ಞಾನ ಹಿಮ್ಮರಳುವಿಕೆಯ ಕುರಿತೆಲ್ಲಾ ವಿವರಿಸಿದ. ಹೀಗೆ ಪರಿಚಿತನಾದ ಅವನಲ್ಲಿ ನೇತ್ರಾಣಿಗೆ ಹೇಗೆ ಹೋಗುವುದು ಮಾರಾಯ ಎಂದು ಕೇಳಿದೆ. “ಅದಕ್ಯಾಕೆ ಕಷ್ಟ ಎಂದು ನಾ ತಿಳಿಸುವ ದಿನ ಬಂದರೆ ನೂರಾರು ಹಡಗುಗಳು ನೇತ್ರಾಣಿಗೆ ಮೆರವಣಿಗೆ ಹೊರಡುತ್ತದೆ” ಎಂದ. ಸರಿ ಎಂದು ಆತನ ಫೋನ್ ಸಂಖ್ಯೆ ಪಡೆದು ಹೊರಬಿದ್ದೆವು. ಮತ್ತೆ ಜನವರಿಯ ಸುಮಾರಿಗೆ ಫೋನ್ ಮಾಡಿ ಈ ಭಾನುವಾರ ಹಡಗುಗಳು ಹೊರಡುತ್ತವೆ ಎಂದು ಜ್ಞಾಪಿಸಿದ. ಸರಿ ಎಂದು ಹಂಚಿಕೆ ಹಾಕಿ ಹೊರಟು ನಿಂತೆವು.

ಕೇವಲ ಪ್ರವಾಸಿ ತಾಣವಾಗಿರದೇ ಮೀನುಗಾರರ, ಹಡಗು ಮಾಲಿಕರ ಶ್ರದ್ಧಾ ಕೇಂದ್ರವಾಗಿದೆ. ಇಲ್ಲಿ ಕಂಡ ಜಟ್ಟಿಗನು ವಿಶೇಷ. ನೂರಾರು ವರ್ಷಗಳ ಇತಿಹಾಸ ಹೊಂದಿರುವ ಶ್ರದ್ಧಾ ಕೇಂದ್ರ. ನೇತ್ರಾಣಿಯ ನೆತ್ತಿ ತಡವಲು ನೂರಾರು ಪುಟಾಣಿ ಹಡಗುಗಳು ಮೆರವಣಿಗೆ ಹೊರಟಿದ್ದವು. ಜನ ತಮ್ಮ ಶ್ರದ್ಧಾ ಭಕ್ತಿ ತೋರಿಸಲು ಕೆಲವರು ನಮ್ಮಂತೆ ಅಲ್ಲಿಗೆ ಪ್ರವಾಸ ಹೊರಟಿದ್ದೆರು. ಹೆಚ್ಚಿನವರು ಹಣ್ಣು, ಕಾಯಿ ಹಿಡಿದಿದ್ದರು. ಸಿಂಗರಿಸಿದ ಹಡಗುಗಳಲ್ಲಿ ಜನ ಹಂಚಿ ಹೋದರು. ಮೊದಲು ಹೊರಡುವ ಹಡಗಿನಲ್ಲಿ ಹತ್ತಿ ಕುಳಿತೆವು. ಕಾಲದ ನೆನಪಿಗೆ ನೀರೆರೆಯುತ್ತಾ ಬಂದ ಇಂತಹ ಆಚರಣೆಗಳ ಕೊನೆಯ ಕೊಂಡಿಗಳಂತೆ ಇವರುಗಳು ಕಾಣುತ್ತಾರೆ.

ಹೊಸ ಅನುಭವಕ್ಕೆ ಹಾತೊರೆಯುತ್ತಾ ಕಡು ನೀಲ ಕಡಲನ್ನು ಸೀಳಿ ಹೊರಟಾಗ ಗಂಟೆ 7.30. ಕಡಲ ಕೆಲಸಕ್ಕೆ ರಜೆ ಕೊಟ್ಟು ಹೊಟ್ಟೆ ತುಂಬಿಸಿಕೊಂಡು ಮೆಲ್ಲಗೆ ಭಟ್ಕಳ ಬಂದರನ್ನು ಬಿಟ್ಟೆವು. ನಮಗೆ ದಾರಿ ತೋರಿದ ಅಜಯ್ ಬಂದಿರಲಿಲ್ಲ. ಕಡಲ ಮಕ್ಕಳ ಪೂಜೆ ಕಾಣುವ ಕಾತರ. ಗಾಳಿಯ ತುಯ್ತಕ್ಕೆ ಹಡಗು ಹೊಯ್ದಾಡುತ್ತಿತ್ತು. ಕಡಲ ನೀಲಿಯಿಂದ ಬಿಳಿ ನೊರೆಯ ಬೆಣ್ಣೆ ಉಕ್ಕಿಸುವುದನ್ನೇ ನೋಡುತ್ತಾ ಮಾಲೀಕನಲ್ಲಿ ಹರಟುತ್ತಾ ಹೊರಟೆವು. ನೀಲಿ ಕಡಲನ್ನು ಮೂಕವಾಗಿ ದಿಟ್ಟಿಸುವ ನೂರಾರು ಜನರು. ಟಿಕೆಟಿನ ಹಂಗಿಲ್ಲ ಧೈಯದ ಕಾಟವಿಲ್ಲ! ಭಟ್ಕಳ ಬ್ಯಾಂಕಿನ ನೌಕರರೂ ಸಿಕ್ಕರು. ಇಂತಹ ವಿಶಿಷ್ಟ ಜಾಗಕ್ಕೆ ಮುಪ್ತಿನಲ್ಲಿ ಕರೆದೊಯ್ಯುವ ಮಾಲೀಕರ ಉದಾತ್ತತೆಗೆ ಮೂಕನಾದೆ. ನಿಮಗಿಲ್ಲಿ ಯಾರೂ ನಿಮ್ಮ ಧರ್ಮ ಜಾತಿಗಳ ಲೆಕ್ಕ ಕೇಳುವವರಿಲ್ಲ. ಎಲ್ಲವೂ ಸೇವೆ. ಭಟ್ಕಳವಲ್ಲದೆ ಉಪ್ಪುಂದದ ಮೀನುಗಾರರು ಸಹ ಇಲ್ಲಿನ ಜಟ್ಟಿಗ ಮತ್ತಿತರ ದೇವರಿಗೆ ಪೂಜೆ ಸಲ್ಲಿಸಲು ಹೋಗುತ್ತಾರೆ ಎಂದು ಓದಿದ್ದೆ. ಅದೂ ಪುಟಾಣಿ ದೋಣಿಗಳಲ್ಲಿ ಪ್ರಯಾಣ. ಆ ಪಯಣದ ಭೀಕರತೆಯನ್ನು ನೆನೆದು ಸುಮ್ಮನಾಗಿದ್ದೆ. ಅಚಾನಕ್ ಆಗಿ ಒದಗಿಬಂದ ಈ ಅವಕಾಶದ ಕೈ ಹಿಡಿದೆ.

3-4 ಕೋಟಿ ಬೆಲೆ ಬಾಳುವ ಹಡಗಿದು. ಒಮ್ಮೆ ಕಡಲಿಗಿಳಿದರೆ 4-5 ದಿನದ ನಂತರವೇ ವಾಪಸಾತಿ. ಹಗಲು ರಾತ್ರಿ ಎನದೇ ಹಡಗಿನಲ್ಲೇ ವಾಸ, ಊಟೋಪಚಾರ. ಆಳ ಕಡಲಿನಲ್ಲಿ ಬಲೆ ಬೀಸಿ ಹಿಡಿದ ಮೀನನ್ನು ಹಡಗಿನ ಹೊಟ್ಟೆಯೊಳಗೆ ಐಸ್ ಹಾಕಿ ಅಡಗಿಸಿಡುತ್ತಾರೆ! ಇದರ ಉದರದಿಂದ ಉದಿಸಿದ ತರೇವಾರಿ ಮೀನು ಊಟದ ತಟ್ಟೆ ಸೇರುತ್ತದೆ. ಮಲ್ಪೆ ಬಂದರಿನಲ್ಲಿ ಹಡಗಿನ ಹೊಟ್ಟೆ ಸೀಳಿ ತಂದ ಹೊಸ ಹೊಸ ಜಾತಿ ಮೀನುಗಳು ಬಂದರು ಕಟ್ಟೆಯಲ್ಲಿ ವಿಲೇವಾರಿಯಾಗುತ್ತಿತ್ತು. ಹಾರುವ ಹದ್ದುಗಳು ತಮ್ಮ ಪಾಲು ಪಡೆಯುತ್ತಿದ್ದವು. ವಿಚಿತ್ರ ಮೀನೊಂದನು ಕತ್ತರಿಸುತ್ತಾ ಮಾರಾಟಕ್ಕೆ ಕುಳಿತಿದ್ದ. ಬಾಯಿ ಚಪಲಕ್ಕೆ ಬಲಿಯಾದ ಪಾಪದ ಸಮುದ್ರ ಜೀವಿಗಳು! ಬಾಯಿ ಕಳೆದು ಕುಳಿತಿದ್ದವು.

ಎರಡು ಗಂಟೆಯ ಏಕಾಂತದ ತೇಲುವಿಕೆಯ ತರುವಾಯ ನೇತ್ರಾಣಿಯ ಸನಿಹದಲ್ಲಿದ್ದೆವು. ನೇತ್ರಾಣಿಯ ಸನಿಹವಿದ್ದ ಮತ್ತೊಂದು ಗುಡ್ಡ ಮುಳುಗಿದ ಕತೆಯನ್ನು ಹೇಳಿದ ಮಾಲೀಕ. ಇನ್ನೊಂದಿಷ್ಟು ವರ್ಷಕ್ಕೆ ನೇತ್ರಾಣಿಯೂ ಇಳಿಯಲಾಗದ ಜಾಗವಾಗಿ ಮಾರ್ಪಾಟಾಗುವುದರಲ್ಲಿ ಅಚ್ಚರಿ ಇಲ್ಲ.

ನೇತ್ರಾಣಿಯ ಇಳಕಲಿನ ಅಡ್ಡನೆಯ ಸಪಾಟು ಕಲ್ಲಿಗಂಟಿದ ಜಾಗದಲ್ಲಿ ನಾಲ್ಕು ಸಣ್ಣ ನಾಡದೋಣಿಗಳು ಕಾಯುತ್ತಿದ್ದವು. ದೊಡ್ಡ ದೊಡ್ಡ ಹಡಗುಗಳಿಂದ ಸ್ವಯಂ ಸೇವಕರು ಧಡೂತಿ ಕಾಯದ ಜನರನ್ನು ನಿಧಾನಕ್ಕೆ ದೋಣಿಗಳಿಗೆ ಗೋಣಿ ಚೀಲಗಳಂತೆ ಇಳಿಸುತ್ತಿದ್ದರು. ನಾವಿಬ್ಬರೂ ಸಣ್ಣ ನಾಡದೋಣಿಗೆ ಮಂಗಗಳಂತೆ ಜಿಗಿದುದರಿಂದ ದೋಣಿ ಮಗುಚುವಂತಾಯಿತು. ಕಡು ನೀಲ ನೀರುನಲಿ ತೇಲಿಸುತ್ತಾ ದಡ ಮುಟ್ಟಿಸಿ ನಮಗೆ ಮಂಗಳಾರತಿ ಮಾಡಿದರು.

ಹರಕೆಯ ಕುರಿ ಮತ್ತು ಕಾಲಾಪಾನಿ ಶಿಕ್ಷೆ

ನಮ್ಮಿಂದ ಮುಂಚೆ ಆಡೊಂದು ದೇವರ ಹರಕೆ ತೀರಿಸಲು ದಡಕ್ಕೆ ಬಂದಿಳಿದಿತ್ತು! ಮಾಲಿಕನಿನ್ನೂ ದಡ ಸೇರಿರಲಿಲ್ಲ ಹಾಗಾಗಿ ಅವನಿಗಾಗಿ ಅರಚುತ್ತಲೇ ಇತ್ತು. ತನ್ನ ಮುಂದಿನ ಅದರ ಗತಿ ಅದಕೆ ಅರ್ಥವಾಗಿರಬೇಕು. ಮನುಜನ ಹುಚ್ಚುತನಕ್ಕೆ ಬಲಿಯಾಗಲು ಹೊರಟ ಮೂಕ ಜೀವಿ. ವಿಶಾಲ ಕಡಲ ನಡುವೆ ಕಳೆಯಲು ಹೊರಟಿದೆ. ಏಕಾ ಏಕಿ ನನಗೆ ಭಾರತೀಯರಿಗೆ ಬ್ರಿಟಿಷರು ವಿಧಿಸಿದ ಕಾಲಾಪಾನಿ ಶಿಕ್ಷೆಯು ನೆನಪಿಗೆ ಬಂತು. ಯಾರೋ ವಿಧಿಸಿದ ಏಕಾಂಗಿತನ ಎಂತಹ ಭಯಾನಕವೆಂದು ನನಗೆ ಅನುಭವಿಸಿ ಗೊತ್ತು.

ದೂರದಲ್ಲಿ ಮೊರೆವ ನೀಲ ಕಡಲು ಅಪ್ಪಳಿಸುವ ಅಲೆಗಳು ದಡಕ್ಕೆ ಬಿದ್ದಿದ್ದವರನ್ನು ನೀರಿಗೆಳೆಯುತ್ತಿತ್ತು. ದಡದಂಚಿಗೆ ಬೀಳದಿರಲಿ ಎಂದು ದಂಡೆಯಲಿ ಯಾವುದೋ ಮೃದ್ವಂಗಿ ಬಂಡೆಗಂಟಿ ಬೆಳೆದಿತ್ತು. ಜಾರಿಕೆ ಕಡಿಮೆಯಾಗಿತ್ತು. ಭಯಗೊಂಡ ಹೃದಯ ಸದಾ ಜಾರುತ್ತಲೇ ಇತ್ತು. ಕಲ್ಲಿಗಂಟಿ ಬೆಳೆದು ಬದುಕುವ ಈ ವಿಚಿತ್ರ ಜೀವಿಗಳು, ಹರಕೆಯ ಮೇಕೆ, ಬಾಳೆಗೊನೆ ಹಿಡಿದ ಜನರನ್ನು ನೋಡುತ್ತಾ ಕೆಲಹೊತ್ತು ನಿಂತೆವು. ದೂರದಲ್ಲಿ ಸ್ಕೂಬಾ ಡೈವರ್‌ಗಳು ಮೀನಂಗಿತೊಟ್ಟು ನೀರಿಗಿಳಿಯುತ್ತಿದ್ದರು. ಸುಂದರ ಹವಳಗಳ ದಿಣ್ಣೆಗಳಲ್ಲಿ ಮುಳುಗೇಳುತ್ತಿದ್ದರು. ತನ್ನ ಗತಿಯ ಅರಿವಿಲ್ಲದ ಆಡು ಬಾಳೆಗೊನೆಗೆ ಬಾಯಿ ಹಾಕಲು ಬರುತ್ತಿತ್ತು. ಎಲ್ಲವೂ ಒಂದು ಮಿಥ್ಯಾ ವಾಸ್ತವದಂತೆ ಅರೆ ಕ್ಷಣದಲಿ ಆಗಿ ಏನೂ ಆಗಿಯೇ ಇಲ್ಲವೇನೋ ಎಂಬಂತಹ ಮೌನ ಒಂದು ಅಲ್ಲಿ ಮನೆ ಮಾಡಿತ್ತು.

ಜಟ್ಟಿಗನ ದೇವಾಲಯದ ದಾರಿ ಸುಸೂತ್ರವಾಗೇನೂ ಇರಲಿಲ್ಲ. ದೊಡ್ಡ ಬೃಹತ್ ಬಂಡೆಯ ಚಡಿಗಳಲ್ಲಿ ನುಸುಳಿ ದಾಟಬೇಕಿತ್ತು. ಸ್ವಲ್ಪ ಯಾಮಾರಿದರೂ ಪಾತಳಕ್ಕೆ ಇಲ್ಲ ಸಮುದ್ರ ಪಾಲು. ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಬಂಡೆಗಳ ದಾಟಿದರೆ ಸಿಗುವ ಏರುದಾರಿಯಲ್ಲಿ ಸಾಗಬೇಕು. ಅಲ್ಲಲ್ಲಿ ದಾರಿ ತಪ್ಪಿಸುವ ಹೊರಳು ದಾರಿಗಳು ಹಲವು. ಹಚ್ಚ ಹಸಿರೊಳಗೆ ದಾರಿ ತಪ್ಪದಂತೆ ನಿಧಾನಕ್ಕೆ ಒಬ್ಬರ ಹಿಂದೊಬ್ಬರು ನಡೆದೆವು. ಸುಮಾರು 30 ನಿಮಿಷಗಳ ಹಾದಿ ಸವೆಸಿ ಜಟ್ಟಿಗನ ಮಡಿಲಲ್ಲಿದ್ದೆವು.

ಎಂಟು ಕಂಬ ಶಿಲ್ಪಗಳ ನಡುವೆ ವೀರಭದ್ರನಂತಹ ಮೂರ್ತಿಯೊಂದಿತ್ತು. ಸುತ್ತಲೂ ಚಿಕ್ಕ ಚಿಕ್ಕ ಮೂರ್ತಿಗಳ ನಿರ್ಮಿಸಿದ್ದರು. ಕುದುರೆ ಮೇಲೆ ಹತ್ತಿ ಹೊರಟ ಸವಾರ, ಟಗರು, ಕುರಿ, ಆನೆಯ ಸಣ್ಣ ಮೂರ್ತಿಗಳು ಅಲ್ಲಿದ್ದವು ಹಿನ್ನಲೆಯಲ್ಲಿ ಕುರಿ, ಕೋಳಿಗಳ ಕೂಗು. ಪ್ರತೀ ಮೂರ್ತಿಯ ಹಿಂದೊಂದು ಕತೆ ಇರಲೇಬೇಕು. ಯಾವುದಕ್ಕೂ ಇಲ್ಲಿನ ಸ್ಥಳ ಪುರಾಣ ಹೇಳುವ ಯಾವುದೂ ದೊರಕದೆ ಸುಮ್ಮನಾದೆ. ದೂರದ ಉಪ್ಪುಂದದಿಂದಲೂ ಮೀನುಗಾರರು ಇಲ್ಲಿಗೆ ಬರುತ್ತಾರೆ. ನಸುಕಿಗೇ ಬಂದು ಪೂಜೆ ಸಲ್ಲಿಸಿ ಹೋಗುತ್ತಾರೆ. ಆ ಪುಟಾಣಿ ದೋಣಿಗಳನ್ನು ಬಂದರಲ್ಲದ ಜಾಗದಿಂದ ಎಬ್ಬಿಸಿ ಹೊರಡುವ ಅವರ ಸಾಹಸ ಅನನ್ಯ. ಬಲು ಅಪರೂಪದ ಚುಂಬಕದಂತೆ ಸೆಳೆಯುವ ಇಂತಹ ನೂರಾರು ತಾಣಗಳಲ್ಲಿ ಇದೂ ಒಂದು. ಹಿರಿಯರ ಪರಂಪರೆಯ ಅಸ್ಮಿತೆಗೆ ಮೂಕ ವಿಸ್ಮಿತನಾಗುತ್ತಾ ನೀಲ ಕಡಲ ನೋಡುತ್ತಾ ಭಟ್ಕಳದತ್ತ ಪಯಣ ಬೆಳೆಸಿದೆವು.

ನಾವು ಬರುವ ಎಷ್ಟೋ ಮೊದಲು ಪೂಜೆ ಭಟ್ಟರು ಯಾವುದೋ ಮಾಯಕದಲ್ಲಿ ಇಲ್ಲಿಗೆ ಬಂದಿದ್ದರು! ಪೂಜೆಯ ಸಂಪೂರ್ಣ ತಯಾರಿ ನಡೆದಿತ್ತು. ಜಟ್ಟಿಗೇಶ್ವರನ ಪೂಜೆ ನೋಡಿ ದ್ವೀಪದ ಇನ್ನೊಂದು ತುದಿಗೆ ಹೊರಟೆವು.

ನೀಲಿ ಕಡಲು ಬಿಳಿ ನೊರೆಯುಕ್ಕಿಸುತ್ತಾ ಭೋರ್ಗರೆಯುತ್ತಿತ್ತು. ಉತ್ತರದ ಅಂಚು ತೀರ ಕಡಿದಾಗಿ ಯಾವುದೇ ಗಿಡ ಮರಗಳಿಲ್ಲದೇ ಇಳಿಜಾರು ಭೂಮಿ. ನಡುವೆಯೊಂದು ಸಿಹಿ ನೀರ ಬಾವಿ ಇದೆ ಎಂದರು! ಎಷ್ಟು ಹುಡುಕಿದರೂ ಕಾಣಸಿಗಲಿಲ್ಲ. ನೀಲ ಕಡಲನ್ನು ನಿರುಕಿಸುತ್ತಾ ತುಂಬಾ ಹೊತ್ತು ಕೂತಿದ್ದು ಬಂದೆವು. ಹೃದಯಾಕಾರದ ಪಿಜನ್ ದ್ವೀಪ ಎಂದೂ ಕರೆಯಿಸಿಕೊಳ್ಳುವ ಈ ದ್ವೀಪಕ್ಕೆ ಕೋಸ್ಟಲ್ ಗಾರ್ಡ್‌ಗಳು ಸುತ್ತು ಬರುತಲಿದ್ದರು. ನೊರೆಯುಕ್ಕಿಸುತ್ತಾ ಬಿಸಿಲಿಗೆ ಒಣಗುತ್ತಾ ದೋಣಿ ನಡೆಸುತ್ತಿದ್ದರು.

ಪೂಜೆ ಮುಗಿಸಿ ಪ್ರಸಾದ ಪಡೆದು ಹಡಗಿನೆಡೆಗೆ ಸಾಗಿದೆವು. ಬೀಸುವ ಗಾಳಿ ಪುಟಾಣಿ ದೋಣಿಗಳನ್ನು ಏರದಂತೆ ತಡೆಯುತಲಿತ್ತು. ದೇವರಿಗೆ ಬಿಟ್ಟ ಕುರಿಯೊಂದು ಮಾಲೀಕನನ್ನು ಹುಡುಕಿಕೊಂಡು ದಂಡೆಯವರೆಗೆ ಬಂದು ಅರಚುತ್ತಲೇ ಇತ್ತು. ಮಾಣಿ ಡ್ಯಾಂ ಸನಿಹದಲ್ಲೂ ಇಂತಹುದೇ ಊರು ಬಿಟ್ಟ ಪ್ರಾಣಿಗಳ ಸುಂದರ ದ್ವೀಪವಿದೆ. ಅಲ್ಲೇ ಹುಟ್ಟಿ, ಅಲ್ಲೇ ಬೆಳೆದು ಸಾಯುವ ಇವನ್ನು ಕರೆಯುವವರಾಗಲಿ, ಕಾಪಾಡುವವರಾಗಲಿ ಇಲ್ಲ. ಕುರಿಯ ಆರ್ತನಾದ ಸಾಕಿದ ಮಗುವೊಂದನ್ನು ದೂರ ಮಾಡಿದಂತಹ ದುಃಖ ಅಲೆಗಳಂತೆ ಮನೋ ಪಟಲಕ್ಕೆ ತಾಕುವಂತೆ ಮಾಡಿತ್ತು.  ಈ ಅಜ್ಞಾತ ಜಾಗ ಅವುಗಳಿಗೆ ಸುಂದರವಾದ ನಿವಾಸವಾಗಲಿ ಎಂದು ಹಾರೈಸಿದೆ. ತನ್ನ ಸ್ವಾರ್ಥಕ್ಕಾಗಿ ಇವನ್ನು ಬಿಟ್ಟರೂ ಅರಚುತ್ತಲೇ ಯಜಮಾನನ್ನು ಹುಡುಕಿ ಬಂದ ಕುರಿಯ ಆರ್ತನಾದ ಹೃದಯ ಕಲುಕಿತು. ಈ ಪಿಜನ್‌ ದ್ವೀಪ ತನ್ನ ತೆಕ್ಕೆ ಸೇರಿದ ಈ ಪುಟಾಣಿ ಕುರಿಯನ್ನು ರಕ್ಷಿಸಲಿ ಎಂದು ಬೇಡುತ್ತಾ ಹಡಗು ಹತ್ತಿದೆ. ಅಚ್ಚರಿ ಎಂಬಂತೆ ಹಡಗಿನಲ್ಲೇ ಮಾಲೀಕ ಅಡುಗೆ ಮಾಡಿ ರುಚಿಕಟ್ಟಾದ ಊಟ ಬಿಡಿಸಿದ. ಹತ್ತಿಳಿದು ಸುಸ್ತಾದುದರಿಂದ ಹಿಡಿಯಷ್ಟು ಉಂಡು ಸ್ವಲ್ಪ ಖುಷಿ, ಒಂದಿಷ್ಟು ವಿಶಾದದೊಂದಿಗೆ ಊರ ಸೇರಲು ಹಡಗನ್ನೇರಿದೆವು.

(ಫೋಟೋಗಳು: ಲೇಖಕರವು)

About The Author

ಶ್ರೀಧರ್‌ ಎಸ್.‌ ಸಿದ್ದಾಪುರ

ಶ್ರೀಧರ್‌ ಎಸ್.‌ ಸಿದ್ದಾಪುರ ವೃತ್ತಿಯಲ್ಲಿ ಶಿಕ್ಷಕರು. ತಿರುಗಾಟ, ಅನ್ವೇಷಣೆ ಒಂದು ಹುಚ್ಚು. ಬರಹ, ಓದು ಅಚ್ಚುಮೆಚ್ಚು. ಹಕ್ಕಿ, ಜೇಡಗಳಲ್ಲಿ ವಿಶೇಷ ಆಸಕ್ತಿ.  “ಅಲೆಮಾರಿಯ ಅಂತರಂಗ” ಇಪ್ಪತ್ತು ವರ್ಷದ ಅಲೆದಾಟ, ಅನುಭವಗಳ ಪ್ರವಾಸ ಕಥನ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ