ಜೀವನೋಪಾಯಕ್ಕೆ ಇಲ್ಲಿ ಹಲವು ವೇಷ ತೊಟ್ಟವರು ಇಲ್ಲಿ ಕಾಣಸಿಗುತ್ತಾರೆ. ದಾರಿಗುಂಟ ಚಾಟಿಯನು ಮೈಗೆ ನಗುತ ಬಾರಿಸಿಕೊಂಡು ಜೀವನ ನಿರ್ವಹಿಸುವ ನಿರ್ಮೋಹಿ ಅಮಾಯಕರು. ಕಿಲೋಮೀಟರ್ ಆಚೆಗೂ ಕೇಳಿಸುವ ಚಾಟಿ ಶಬ್ದ. ಇವರ ಕುರಿತೊಂದು ಮಹಾ ಮರುಕ ಹುಟ್ಟುವಂತೆ ಮಾಡುತ್ತದೆ. ಬಿಸಿಲ ಜಗುಲಿಗೆ ಕೂತು ಬೇಡುವವರು. ಭಕ್ತಾದಿಗಳಿಗೆ ಉಣ್ಣಲು ಬನ್ನಿ ಎನ್ನುವವರು. ಒಂದೇ ಎರಡೇ. ಎಷ್ಟೇ ಇದ್ದರೂ ಮತ್ತಷ್ಟು ಬೇಕೆನ್ನುವ ನಮ್ಮನ್ನು ಕಂಡರೆ ಅವರಿಗೂ ಹಾಗೇ ಅನಿಸಬಹುದೇ ಗೊತ್ತಿಲ್ಲ. ಅಹೋಬಿಲಂ ಎಂಬ ಮಾಯಾಲೋಕದಲ್ಲಿ ಕಳೆಯುವ ಇನ್ನೆಷ್ಟು ಜನರಿದ್ದಾರೋ ಗೊತ್ತಿಲ್ಲ.
ಶ್ರೀಧರ್ ಎಸ್. ಸಿದ್ದಾಪುರ ಬರೆಯುವ “ಸಾಗುತ ದೂರ ದೂರ…” ಪ್ರವಾಸ ಸರಣಿಯಲ್ಲಿ ಆಂಧ್ರಪ್ರದೇಶದ ಅಹೋಬಲಂನ ಕುರಿತ ಬರಹ
ನಾವು ಮೂವರು ಅಹೋಬಿಲಂಗೆ ಬಂದು ತಲುಪಿದ್ದೆ ಒಂದು ಅಚ್ಚರಿ. ಚೌಕಟ್ಟೇ ಇಲ್ಲದ ಒಂದು ಯೋಜನೆಯೊಳಗೆ ಅದು ಹೇಗೋ ಈ ದೇವಾಲಯ ತೂರಿಕೊಂಡಿತು. ಎಲ್ಲೋ ಓದಿದ ಪೇಪರ್ ತುಣುಕೊಂದರ ಸಹಾಯದಿಂದ ಆಂಧ್ರದ ಮೂಲೆಯೂರಿಗೆ ಪ್ರಯಾಣ ಬೆಳೆಸಿದೆವು.
ಭವನಾಶಿನಿ ನದಿ ತಟದ ಅಹೋಬಿಲಂ
ಭರತ ಖಂಡದ ಯಾವ ಮೂಲೆಗೆ ಹೋದರೂ ನಿಮಗೆ ಒಂದೇ ಊರಿನಲ್ಲಿ 9 ನರಸಿಂಹ ದೇವಾಲಯಗಳು ಸಿಗಲಾರವು. ಅಂತಹ ಮಹಾ ವಿಚಿತ್ರ ಅಹೋಬಿಲಂ! ತೆಲುಗಿನಲ್ಲಿ ಬಿಲಂ ಎಂದರೆ ಗುಹೆ. ನಮ್ಮ ನಿಯಾನ್ ಕಣ್ಣುಗಳಲ್ಲಿ ಮಿಂಚಿದ ಪ್ರಶ್ನೆಗಳು ಹಲವು. ಒಂಭತ್ತು ದೇವಾಲಯಗಳನ್ನು ಒಂದೇ ಊರಿನಲ್ಲಿ ನಿರ್ಮಿಸುವ ಔಚಿತ್ಯವಾದರೂ ಏನು? ಅಚ್ಚರಿಯ ಅಹೋಬಿಲಂನ್ನು ಒಂದೇ ಗುಟುಕಿನಲಿ ನೋಡಿದ ನಮ್ಮ ಪಯಣದ ಮೆಲುಕು ಹಾಕೋಣ ಬನ್ನಿ.
ಪೊಂಗಲ್ ಮುನ್ನುಡಿ!
ಅದೆಲ್ಲಿಂದಲೋ ಕಾರು ಬಾಡಿಗೆಗೆ ಹಿಡಿದು, ಸಿಕ್ಕ ಒಂದು ರೈಲು ಹತ್ತಿ ಆಂಧ್ರದ ನಂದ್ಯಾಲ ಜಿಲ್ಲೆಯ ಅಹೋಬಿಲಂಗೆ ಬೆಳ್ಳಂ ಬೆಳಿಗ್ಗೆ ಹೆಜ್ಜೆ ಇಟ್ಟೆವು. ಮುಸುಕು ಎಳೆದು ಮಲಗಿದ್ದ ಊರನ್ನು ನಮ್ಮ ಬಸ್ಸು ಎಬ್ಬಿಸಿತು. ಜೊತೆಗೆ ಮಹಾ ಧೂಳಿನ ನೆಬ್ಯೂಲಾ ಊರನ್ನು ಮುಚ್ಚಿತು. ನಮ್ಮ ಮೂಗನ್ನೂ.
ಊರಿಗೆ ಕಾಲಿಡುತ್ತಲೆ ಸಣ್ಣ ಲಾಡ್ಜು ಹಿಡಿದು ಪ್ರಾತಃವಿಧಿಗಳನ್ನು ಪೂರೈಸಿ ಬಳ್ಳಾರಿ ಭಟ್ಟರ ಹೋಟೆಲಿಗೆ ಲಗ್ಗೆ ಇಟ್ಟೆವು. ಭಟ್ಟರಿನ್ನು ಬಾಗಿಲು ತೆರೆದಿರಲಿಲ್ಲ. ಹೋಟೆಲ್ ತೆರೆಯುತ್ತಲೇ ಪೊಂಗಲ್ ಬಾರಿಸಿ ಭಟ್ಟರ ಕುಶಲೋಪರಿ ವಿಚಾರಿಸಿ ನರಸಿಂಹ ದೇವಾಲಯ ಭೇಟಿಗೆ ಹೊರಟು ಬಿಟ್ಟೆವು.

ಕನ್ನಡ ನಾಡಿನ ಬಳ್ಳಾರಿಯಿಂದ ಬಂದ ಭಟ್ಟರ ತಂದೆ ಇಲ್ಲೇ ನೆಲೆಯೂರಿದವರು. ಅಂದಿನ ಅವರ ದರ್ದು ಏನಿತ್ತೋ. ಸಣ್ಣದೊಂದು ಕಿರಿಯ ಪ್ರಾಥಮಿಕ ಶಾಲೆ ಬಿಟ್ಟರೇ ಬೇರೆ ಸೌಲಭ್ಯಗಳಿಲ್ಲ. ವ್ಯಾಪಾರವಾಗುತ್ತದೆ ಎಂಬ ಭರವಸೆ ಏನಿಲ್ಲ. ಯಾರೂ ಇಲ್ಲಿ ಉಳಿಯಲು ಮನಸ್ಸು ಮಾಡುವುದಿಲ್ಲ! ಅತ್ತ ಮಲೆನಾಡು ಅಲ್ಲದ ಇತ್ತ ಬಯಲು ಸೀಮೆಯೂ ಅಲ್ಲದ ಕಾಡ ನಡುವಿನ ಊರು. ದೂರದ ಬಾಗಲ ಕೋಟೆಯ ಇಬ್ಬರು ಇಲ್ಲಿ ಸಿಕ್ಕರು.
ಬದುಕಿನ ನಾಗಾಲೋಟಕ್ಕೆ ಬ್ರೇಕ್ ಬೇಕೆನಿಸಿದರೆ ಇಲ್ಲಿಗೆ ಸುಮ್ಮನೆ ಬನ್ನಿ! ಯಾವುದೋ ನಾಟಕದ ಪಾತ್ರಧಾರಿಗಳಂತೆ ಇಲ್ಲಿನವರು ನಿಮಗೆ ಕಾಣುತ್ತಾರೆ. ತಮ್ಮ ಉಬ್ಬಿದ ಹೊಟ್ಟೆ ಹೊತ್ತು ಯಮ ಸದೃಶಃ ಪರ್ವತವನ್ನು ಏರಲಾಗದೇ ಬೆಟ್ಟವೇರುವವರು.
ಜೀವನೋಪಾಯಕ್ಕೆ ಇಲ್ಲಿ ಹಲವು ವೇಷ ತೊಟ್ಟವರು ಇಲ್ಲಿ ಕಾಣಸಿಗುತ್ತಾರೆ. ದಾರಿಗುಂಟ ಚಾಟಿಯನು ಮೈಗೆ ನಗುತ ಬಾರಿಸಿಕೊಂಡು ಜೀವನ ನಿರ್ವಹಿಸುವ ನಿರ್ಮೋಹಿ ಅಮಾಯಕರು. ಕಿಲೋಮೀಟರ್ ಆಚೆಗೂ ಕೇಳಿಸುವ ಚಾಟಿ ಶಬ್ದ. ಇವರ ಕುರಿತೊಂದು ಮಹಾ ಮರುಕ ಹುಟ್ಟುವಂತೆ ಮಾಡುತ್ತದೆ. ಬಿಸಿಲ ಜಗುಲಿಗೆ ಕೂತು ಬೇಡುವವರು. ಭಕ್ತಾದಿಗಳಿಗೆ ಉಣ್ಣಲು ಬನ್ನಿ ಎನ್ನುವವರು. ಒಂದೇ ಎರಡೇ. ಎಷ್ಟೇ ಇದ್ದರೂ ಮತ್ತಷ್ಟು ಬೇಕೆನ್ನುವ ನಮ್ಮನ್ನು ಕಂಡರೆ ಅವರಿಗೂ ಹಾಗೇ ಅನಿಸಬಹುದೇ ಗೊತ್ತಿಲ್ಲ. ಅಹೋಬಿಲಂ ಎಂಬ ಮಾಯಾಲೋಕದಲ್ಲಿ ಕಳೆಯುವ ಇನ್ನೆಷ್ಟು ಜನರಿದ್ದಾರೋ ಗೊತ್ತಿಲ್ಲ.
ಅಚ್ಚರಿಯ ಅಹೋಬಿಲಂ
ಈ ಒಂಭತ್ತು ದೇವಾಲಯಗಳು ನಲ್ಲಮಾಲಾ ಕಾಡೊಳಗೆ ಅವಿತಿದೆ ಎನ್ನುವುದೇ ಅಚ್ಚರಿ. ಕಾಡೊಳಗೆ ನಿರ್ಮಿಸುವ ದರ್ದು ಏನಿದ್ದಿರಬಹುದು? ಕಾಡ ಕಟ್ಟೆಯಲ್ಲಿ ಕಟ್ಟಿದ ಅಹೋಬಿಲಂನಲ್ಲಿ ಎರಡು ದೇವಾಲಯಗಳು ಕಾಡಿನಂಚಿನಲ್ಲಿವೆ. ಹೆಚ್ಚಿನ ಎಲ್ಲಾ ದೇವಾಲಯ 14 ಮತ್ತು 15 ನೆಯ ಶತಮಾನದ ಅಂಚಿನಲ್ಲಿ ವಿಜಯನಗರದ ಕಾಲದಲಿ ನಿರ್ಮಿಸಿದಂತವು. ನಾಲ್ಕು ದೇವಾಲಯ ಬೆಟ್ಟದ ಬುಡದಲ್ಲೂ ನಾಲ್ಕು ಬೆಟ್ಟದ ಮೇಲೆ ಹಾಗೂ ಒಂದು ಕಾಡೊಳಗೆ ಅವಿತಿದೆ. ಯೋಗಾನಂದ ಚತ್ರವಟ ನರಸಿಂಹ ಕಾಡಂಚಿನಲ್ಲಿದೆ.
ಯೋಗಾನಂದ ನರಸಿಂಹ ಶನಿಯನ್ನು ಆಳುತ್ತಾನೆಂದು ಪ್ರತೀತಿ ಇದೆ. ಇಲ್ಲಿನ ನರಸಿಂಹ ದೇವರನ್ನು ಅಹೋಬಾಲ ಎಂದೂ ಕರೆಯುತ್ತಾರೆ. ಅಂದರೆ ಮಹಾ ಶಕ್ತಿ ಶಾಲಿ ಎಂದು. ಯೋಗಾನಂದ ನರಸಿಂಹ ಯೋಗಾಸನದಲ್ಲಿದ್ದಾನೆ.
ಚತುರ್ವಾತ ನರಸಿಂಹ ಹಾಹಾ ಮತ್ತು ಹೋ ಹೋ ಎಂಬಿಬ್ಬರು ಗಂಧರ್ವರು ನರಸಿಂಹನಿಗೆ ಸಂಗೀತ ಸೇವೆ ಮಾಡಿ ಖುಷಿ ಪಡಿಸಿದರು. ಆ ಸಲುವಾಗಿಯೇ ಇಲ್ಲಿನ ನರಸಿಂಹನಲ್ಲಿ ಸಂಗೀತ ಮತ್ತು ಕಲೆಯ ಆರಾಧಕರು ಇಲ್ಲಿ ಬೇಡಿಕೊಂಡರೆ ಅವರಿಗೆ ಕಲೆ ಸಿದ್ಧಿಸುತ್ತದೆ ಎಂಬ ಪ್ರತೀತಿಯೂ ಇದೆ.
ಕೆಳಗಿನ ಎರಡು ದೇವಾಲಯ ದರ್ಶಿಸಿ ಮೇಲಿನ ದೇವಾಲಯ ದರ್ಶಿಸುವ ಹೊತ್ತು. ಇದೊಂದು ಅಚ್ಚರಿಯ ಪಯಣ! ಕಾಡು ತನ್ನ ಬಾಹು ಕವಚಿದ ಏಳು ದೇವಾಲಯಗಳ ತೋರಲೊಬ್ಬ ಕನ್ನಡ ಬಲ್ಲ ಗೈಡ್‌ಗಾಗಿ ತಡಕಾಡಿ ಗೆದ್ದೆವು. ಆತನೋ ನಮಗೆ ಮೂರು ಸಾವಿರಕ್ಕೆ ಬೇಡಿಕೆ ಇಟ್ಟ! ಆತನ ಬ್ರಹ್ಮಾಂಡ ಕನ್ನಡ ಪಾಂಡಿತ್ಯಕ್ಕೆ ಮೂರು ಸಾವಿರ ಬಹಳ ಕಡಿಮೆ!! ಹೊಕ್ಕ ದಾರಿ ಅಲ್ಲದೆ ಹೊರ ಬರುವ ಬೇರೊಂದು ದಾರಿ ಇರುವುದರಿಂದ ಈತನನ್ನೇ ಆಯ್ಕೆ ಮಾಡಿ ಕೊಂಡೆವು. ದಾರಿಯಾದರೂ ತೋರು ರಾಘವೇಂದ್ರನೇ ಎನ್ನುತ್ತ ಪುಟ್ಟ ಮಕ್ಕಳಂತೆ ಅವನ ಹಿಂದೆ ಹೆಜ್ಜೆ ಇಟ್ಟೆವು.
ಬೃಹತ್ ಮರಳು ಶಿಲೆಯೊಂದು ನಿಮ್ಮನ್ನು ಕೆಳಗಿನಿಂದಲೇ ಕರೆಯುತ್ತದೆ. ಬಹೃತ್ ಶಿಲೆಯ ಜಟೆಯಿಂದ ಧುಮುಕುವ ನೀರ ಹನಿಗಳ ಪ್ರೋಕ್ಷಣೆಗೈದು ದೇವಾಲಯ ಪ್ರವೇಶಿಸಬೇಕಾಗುವುದು ಇಲ್ಲಿನ ವಿಶೇಷ. ಮೂರು ಜಲಕನ್ನಿಕೆಯರು ನಿಮ್ಮ ಬರುವಿಕೆಗಾಗಿ ಕಾಯುವರು. ಬನ್ನಿ ಹಾಗೆ ಮುಂದೆ ಹೋಗೋಣ.
ಯಗುವಾ ಅಹೋಬಿಲ ನರಸಿಂಹ
ಭವನಾಶಿನಿ ನದಿ ದಡದ ನರಸಿಂಹ ಸ್ವಯಂ ಭೂ. ಅಂದರೆ ಉದ್ಭವ ನರಸಿಂಹ. ಇಲ್ಲಿ ಹತ್ತಾರು ಪೇರಳೆ ನಮ್ಮ ಚೀಲ ಸೇರಿದವು. ಭಕ್ತರು ಬೆಳಗಿದ ನೂರಾರು ಹಣತೆ ದೇವಾಲಯದೆದುರು ಪ್ರಜ್ವಲಿಸುತಲಿತ್ತು. ಯಾರೋ ಮಹಾಶಯನೊಬ್ಬ ನಮ್ಮ ಹಣೆಗೆ ನಾಮವೆಳೆದ ಸುಮ್ಮನಿದ್ದು ಎಳೆಸಿಕೊಂಡೆವು! ಬೆಟ್ಟವೇರಲು ಮೂರನೆ ಕಾಲಾಗಿ ಒಂದು ಕೋಲು ಕೊಟ್ಟರು ಬರೇ ಐದು ರೂಪಾಯಿಗೆ. ಇಸ್ಕೊಂಡೆವು. ಯಾರಿಗೆ ಹೊಡೆಯಲೋ ಗೊತ್ತಿಲ್ಲ.
ಬೃಹತ್ ಪರ್ವತದ ಬುಡದಲ್ಲಿ ದೇವಾಲಯವಿದೆ. ಗಡಿಬಿಡಿಯಲ್ಲಿ ದೇವಾಲಯ ದರ್ಶನಕ್ಕೆ ಹೊರಟು ನಿಂತೆವು. ಸುಖಾಸೀನನಾದ ನರಸಿಂಹ ಹಿರಣ್ಯ ಕಶುಪುವಿನ ಎದೆ ಬಗೆಯುತ್ತಿದ್ದಾನೆ. ಇನ್ನೆರಡು ಕೈಗಳಿಂದ ಹಿರಣ್ಯಕಶುಪುವಿನ ಕಾಲು ತಲೆ ಹಿಡಿದು ಉಗ್ರರೂಪಿಯಾಗಿದ್ದಾನೆ. ಬಲ ತುದಿಯಲಿ ಅಬಲನಾದ ಪ್ರಹ್ಲಾದನು ಕೈ ಮುಗಿಯುವಂತೆ ಚಿತ್ರಿಸಿದ್ದಾನೆ ಶಿಲ್ಪಿ. ಯಗುವಾ ನರಸಿಂಹ ದರ್ಶನ ಮುಗಿಸಿ ಹಲಗೆಯ ಸೇತುವೆಯಲ್ಲಿ ಭವನಾಶಿನಿಯನ್ನು ದಾಟಿ ಹೊಸ ಲೋಕಕ್ಕೆ ಕಾಲಿಟ್ಟೆವು.

ಕಾಡು ನಮ್ಮೊಳಗೋ ನಾವೇ ಕಾಡಿನೊಳಗೋ ಎಂಬಂತೆ ಕಾಡಿಗೆ ಕಾಲಿಟ್ಟೆವು. ಚಿತ್ರ ವಿಚಿತ್ರವಾಗಿ ಪ್ರಕೃತಿಯ ನಮ್ಮೆದುರು ತನ್ನ ಭವ್ಯತೆಯನ್ನು ತೋರುತಲಿತ್ತು. ಮಳೆಗಾಲದಲ್ಲಿ ಮೈದುಂಬಿ ಹರಿವ ಭವನಾಶಿನಿ ಹೊಳೆ ದಾಟಲು ಹಲವು ಕಡೆ ಹಗ್ಗ ಹಾಕಲಾಗಿತ್ತು. ಮಳೆಗಾಲದ ಮೂರು ತಿಂಗಳು ಅಸಾಧ್ಯ ವೇಗದಿಂದ ಹರಿವ ಇವಳನ್ನು ಹರಿಯುವುದು ಅಸಾಧ್ಯ. ಯಗುವಾ ನರಸಿಂಹ ದೇವಾಲಯದ ಸನಿಹವಂತು 6-7 ಅಡಿ ನೀರು ಧುಮ್ಮಿಕ್ಕುತ್ತದೆ. ಅಹೋಬಿಲಂ ಜಲಪಾತ ಮತ್ತು ಉಗ್ರ ಸ್ತಂಭ ಕಾಣಿಸುವ ಬ್ರಿಡ್ಜ್ ಮೇಲೆ ನಿಂತೆವು. ನಾವು ಗುರಿಯ ಸನಿಹವೆಂದು ಕೊಂಡೆವು. ನೀವಿನ್ನೂ 450 ಮೆಟ್ಟಿಲು ಏರುವುದಿದೆ ಎಂದು ಹೇಳಿ ಗೈಡ್ ನಮ್ಮನ್ನು ಗಾಬರಿ ಬೀಳಿಸಿದ. ಉಗ್ರ ಸ್ತಂಭದ ಸನಿಹದಲ್ಲೇ ಜ್ವಾಲಾ ನರಸಿಂಹ ದೇವಾಲಯವಿದೆ. ಇಲ್ಲಿಂದ ಮುಂದೆ ಏರುವುದೇ ಅತಿ ಕಠಿಣ ಹಾದಿ. ಉಗ್ರ ಸ್ತಂಭದ ಬಳಿಯ ಅಹೋ ಬಿಲಂ ಜಲಪಾತ ಅಂದು ತನ್ನ ಉಗ್ರ ರೂಪ ತೊರೆದು ಶಾಂತವಾಗಿತ್ತು.
ನರಸಿಂಹ ಜಯಂತಿ ಮತ್ತು ಸ್ವಾತಿ ನಕ್ಷತ್ರ!
ಸ್ವಾತಿ ನಕ್ಷತ್ರದಂದೇ ನರಸಿಂಹ ಸ್ವಾಮಿಯ ಜನ್ಮ ದಿನ. ಬೆಳಗಾವಿ ಬಾಗಲಕೋಟೆಯ ಹತ್ತಾರು ಭಕ್ತರು ಅಂದು ದರ್ಶನಕ್ಕೆ ಬಂದಿದ್ದರು. ನೀವು ಪುಣ್ಯವಂತರು, ಇಂದು ನವ ನರಸಿಂಹನ ದರ್ಶನ ಮಾಡಿದವರಿಗೆ ಮೋಕ್ಷ ಪ್ರಾಪ್ತಿ ಎಂದ ನಮ್ಮ ಗೈಡ್. ನಿನ್ನೊಂದಿಗೆ ನಡೆಯುವ ಎಲ್ಲರಿಗೂ ಮೋಕ್ಷ ಖಾತರಿ ಮಾರಾಯ ಎಂದು ಅವನನ್ನು ಚೇಡಿಸುತ್ತ ಹೆಜ್ಜೆ ಹಾಕಿದೆವು. ಉಗ್ರ ಸ್ತಂಭದಿಂದ ಧುಮುಕುವ ನೀರಲ್ಲಿ ಅಭಿಷೇಕ ಮಾಡಿಸಿಕೊಂಡು ಬಲ ಭಾಗದ ಕೆಂಪು ಕೊಳವನ್ನು ನೋಡುತ್ತಾ ಜ್ವಾಲಾ ನರಸಿಂಹನ ಸೇರಿಕೊಂಡೆವು.
ಕೆಂಪು ಆಲ್ಗೆ ತುಂಬಿದ ಈ ಕೊಳವನ್ನು ಹಿರಣ್ಯ ಕಶುಪುವಿನ ರಕ್ತ ತೊಳೆದ ಕೊಳವೆಂದು ಜನ ಈಗಲೂ ನಂಬುತ್ತಾರೆ. ಜ್ವಾಲಾ ನರಸಿಂಹ ದೇವಾಲಯದ ಹಿಂದೆ 80 ಡಿಗ್ರಿ ಕೋನದಲ್ಲಿದ್ದ ದಾರಿಯಲ್ಲಿ ಕೇವಲ ಹಗ್ಗದ ಸಹಾದಿಂದ ಏರಬೇಕು. ಕೈ ಕಾಲುಗಳಲ್ಲಿ ಕಸುವಿಲ್ಲದ ಕಾರಣ ಕೈ ಬಿಟ್ಟೆವು.
ಮೈ ತೋಯಿಸಿಕೊಂಡ ನಿಮಗೆ ಇಲ್ಲಿ ಕತೆಗಳು ನಿಮ್ಮ ಮನಸ್ಸು ತೋಯಿಸುವವು. ಪ್ರಕೃತಿ ಮಡಿಲಲ್ಲಿ ಇಂತಹದೊಂದು ಅಚ್ಚರಿಯ ತಾಣವ ಹುಡುಕಿ ತೆಗೆದು ಅದಕೊಂದು ಕತೆಗಳನ್ನು ಜೋಡಿಸಿದ ಮಹಾ ಪುರುಷನಿಗೆ ಶರಣು. ದೇಶ ಕಾಲಾತೀತದಲ್ಲಿ ಹಬ್ಬಿ ಹರಡಿದ ನೂರಾರು ಕತೆಗಳು ನಿಜಕ್ಕೂ ನಿಮ್ಮನ್ನು ಕಾಡುವವು.

ಕಾಡೊಳಗಿನ ಅಚ್ಚರಿ ಮೂಡಿಸುವ ಕಾಡುವ ಕತೆಗಳು….: ಚುಂಚೂ ಬುಡಕಟ್ಟು ಮತ್ತು ನರಸಿಂಹ
ಇಲ್ಲಿನ ಚುಂಚೂ ಆದಿವಾಸಿಗಳು ನರಸಿಂಹನನ್ನು ತಮ್ಮ ಅಳಿಯನ್ನನ್ನಾಗಿಸಿದ ರೀತಿಗೆ ಅಚ್ಚರಿಗೊಂಡೆ. ನರಸಿಂಹನಿಗೆ ಆದಿವಾಸಿ ಲಕ್ಷ್ಮೀಯನ್ನು ಮದುವೆ ಮಾಡಿಸಿ ಇವರು ತಮ್ಮವನನ್ನಾಗಿ ಮಾಡಿಕೊಂಡಿದ್ದಾರೆ. ಹಾಗಾಗಿ ಹೋಗಿ ಬರುವವರಿಗಾಗಿ ಇಲ್ಲಿನ ಬುಡಕಟ್ಟು ಜನರು ದಾರಿ ಸ್ವಚ್ಛಗೊಳಿಸಿ ರಂಗೋಲಿ ಹಾಕಿ ಕಾದು ಕೂರುವುದು ನಮಗಂತೂ ಅಚ್ಚರಿ. ಸಾಕ್ಷಾತ್ ದೈವ ಸಂಭೂತರಾದ ಸರಳ ಜನ! ಇವರ ಚೇತನವೇ ಒಂದು ಒಗಟು. ನಮ್ಮ ದಾರಿಯಲ್ಲೊಬ್ಬಳೂ ನರಸಿಂಹ ಲಕ್ಷೀಗಾಗಿ ರಂಗೋಲಿ ಹಾಕಿ ಕುಳಿತಿದ್ದಳು. ಭಕ್ತರು ನೀಡಿದ ಅಷ್ಟೋ ಇಷ್ಟೋ ಇವರಿಗೆ ಆದಾಯ! ಅಬ್ಬಬ್ಬಾ ಎಂದರೂ ೨೦೦ ದಾಟದ ಸಂಪಾದನೆ. ಮತ್ತು ಮಗದೊಂದು ಯೋಚಿಸದ ಯೋಜಿಸದ ತೃಪ್ತ ಜನ.
ಮಾಲೋಲ ನರಸಿಂಹನೆಡೆಗೆ….
ಅಹೋ ಬಿಲಂನ ಜ್ವಾಲಾ ನರಸಿಂಹನಿಗೆ ಶರಣು ಬಂದು ನಿಧ ನಿಧಾನಕ್ಕೆ ಒಂದೊಂದು ಹೆಜ್ಜೆ ಇಟ್ಟು ನೀರ ಜೋಕಾಲಿಯಲಿ ಮಿಂದು ಕ್ಯಾಮರಕ್ಕೂ ಎರಡು ಹನಿ ಮೀಯಿಸಿ ನಮ್ಮ ಗೈಡ್ ಜೊತೆ ಹೊರಟು ನಿಂತೆವು.
ಕ್ಷೀಣ ಜಲಪಾತವೊಂದು ನನ್ನ ಕಣ್ಣವೆಯಲ್ಲಿ ತುಂಬಿ ಪೂರ್ಣ ಸೃಷ್ಟಿಯ ಸೊಬಗನ್ನು ಹೆಚ್ಚಿಸುವ, ಕತೆಗಳ ಸೃಷ್ಟಿಸುವ ಪರಿಗೆ ಚಕಿತಗೊಂಡಿರುವೆ.
ಇಲ್ಲಿಂದ ಹೊರಟು ಮಾಲೋಲ ನರಸಿಂಹನೆಡೆಗೆ ಹೆಜ್ಜೆ ಹಾಕಿದೆವು. ಹಿರಣ್ಯ ಕಶಪುವಿನ ಸಂಹರಿಸಿ ಕುಪಿತಗೊಂಡ ಆತನನ್ನು ಸಂತೈಸಲು ಆದಿವಾಸಿ ಲಕ್ಷ್ಮೀ ಎಂಬ ಮಹಿಳೆಯನ್ನು ಬ್ರಹ್ಮ ಕಳುಹುತ್ತಾನೆ. ಆಗಲೇ ಶಾಂತ ಸ್ವರೂಪಿಯಾಗಿ ಜ್ವಾಲಾ ನರಸಿಂಹ ಮಾಲೋಲ ಸ್ವರೂಪಿಯಾಗಿ ನೆಲೆ ನಿಲ್ಲುತ್ತಾನೆ. ದೇವರ ಸಿಟ್ಟಿಗೆ ಕತೆಯ ಒಗ್ಗರಣೆ ಅನಿಸಿತು. ಅದೇ ಹಾದಿಯಲಿ ಕೆಳಗಿಳಿಯುತ್ತಾ ಬಂದಾಗ ವರಾಹ ರೂಪಿಯಾಗಿ ನರಸಿಂಹ ನೆಲೆ ನಿಂತಿದ್ದಾನೆ. ಭೂ ಭಾರವನ್ನು ಎತ್ತಿದ್ದಾನೆ. ಕತೆಗಳ ಸಿಕ್ಕು ಬಿಡಿಸಲು ಹೋಗದೇ ಸುಮ್ಮನೆ ದರ್ಶನಗೈದು ಬಂದೆವು.
ಮೇಲೇರುವ ಹಾದಿಯೊಂದು ವಾಪಾಸಾಗುವ ಹಾದಿ ಇನ್ನೊಂದು. ಪ್ರತಿ ಕಲ್ಲಿಗೂ ಇಲ್ಲೊಂದು ಸುಂದರ ಕತೆ ಹೆಣೆಯುವ ಚಾತುರ್ಯ ಇದೆ. ಕತೆಗಳನ್ನು ಕೇಳುತ್ತಾ ಕೇಳುತ್ತಾ ದಾರಿ ಸಾಗಿದ್ದೆ ತಿಳೀಲಿಲ್ಲ.

14 ಕಿಲೋ ಮೀಟರ್ ದೂರದ ಪವನ ನರಸಿಂಹ ದರುಶನಕ್ಕೆ ಅಹೋಬಿಲಂ ವೃತ್ತಕ್ಕೆ ಬಂದು ಜೀಪು ಹತ್ತಿ ಹೊರಟೆವು. ಕಾಡೊಳಗೆ ಜೀಪು ಸರ್ಕಸ್ ಮಾಡುತ್ತಾ ನರಸಿಂಹ ದೇವಾಲಯ ತಲುಪಿತು. ಮುಚ್ಚಿದ ಬಾಗಿಲ ನಡುವೆ ಹಣಕಿ ಹಾಕಿ ದರ್ಶನ ಮುಗಿಸಿ ಹಿಂದಿರುಗಿದೆವು. ಹೀಗೆ ಒಂಭತ್ತು ದೇವಾಲಯ ದರುಶನವಾದರೂ ನೋಡಿದ ಸಂಪೂರ್ಣತೆ ನನಗೆ ದಕ್ಕಲಿಲ್ಲ. ಇನ್ನೂ ನೋಡಬೇಕು ಅಲ್ಲೇ ಇನ್ನೆರಡು ದಿನವಿರಬೇಕೆಂಬ ಹಂಬಲ. ಆದರೆ ಕಾಲ ಪುರುಷನೆದುರು ನಾವು ಮಂಡಿ ಊರಲೇ ಬೇಕಲ್ಲ. ಹೊರಡಲೇ ಬೇಕಾಯಿತು.
ಮೇಲೇರಿದ ಜಾಗದ ಸನಿಹದಲ್ಲೇ ವಿಶಿಷ್ಟ ವನ ಭೋಜನವೊಂದು ನಮಗಾಗಿ ಕಾಯುತಲಿತ್ತು. ಅಣಬೆ ಗಸಿ ಮತ್ತು ಕಡಲೆ ಬೇಳೆ ಪಾಯಸವನ್ನು ಹಿತಮಿತವಾಗಿ ಸೇವಿಸಿ ಗಂಡೀ ಕೋಟದತ್ತ ಹೊರಟು ನಿಂತೆವು.
(ಫೋಟೋಗಳು: ಲೇಖಕರವು)

ಶ್ರೀಧರ್ ಎಸ್. ಸಿದ್ದಾಪುರ ವೃತ್ತಿಯಲ್ಲಿ ಶಿಕ್ಷಕರು. ತಿರುಗಾಟ, ಅನ್ವೇಷಣೆ ಒಂದು ಹುಚ್ಚು. ಬರಹ, ಓದು ಅಚ್ಚುಮೆಚ್ಚು. ಹಕ್ಕಿ, ಜೇಡಗಳಲ್ಲಿ ವಿಶೇಷ ಆಸಕ್ತಿ. “ಅಲೆಮಾರಿಯ ಅಂತರಂಗ” ಇಪ್ಪತ್ತು ವರ್ಷದ ಅಲೆದಾಟ, ಅನುಭವಗಳ ಪ್ರವಾಸ ಕಥನ.

