ಕಂಚುಕುಟ್ಟಿಗಗಳಿಗೆ ಹಣ್ಣುಗಳೆಂದರೆ ಬಹಳ ಇಷ್ಟ, ಅದರಲ್ಲೂ ನಗರವೇ ಆಗಿರಲಿ, ಗ್ರಾಮಾಂತರ ಪ್ರದೇಶವೇ ಆಗಿರಲಿ, ಯಾವುದೇ ಮರವಿರಬಹುದು, ಅದರಲ್ಲೂ ಅತ್ತಿ, ಆಲ, ಅರಳಿ, ಬಸರಿ ಹಣ್ಣುಗಳೆಂದರೆ, ಗುಂಪಾಗಿ ಬಂದು ಔತಣ ಕೂಟದಲ್ಲಿ ಭಾಗವಹಿಸುತ್ತವೆ; ಅಲ್ಲದೆ ಕೀಟಗಳು, ಸಣ್ಣ ಜೀವಿಗಳು ಮತ್ತು ಹೂ ಮಕರಂದವೂ ಇವುಗಳ ಆಹಾರದ ಪಟ್ಟಿಯಲ್ಲಿ ಸೇರಿವೆ. ಮಹಾ ಬಕಾಸುರ ಕೂಡ! ಇವು ಮಕರಂದವನ್ನು ಹೀರುವಾಗ, ಕೊಕ್ಕಿನ ಬುಡದಲ್ಲಿರುವ ಕೂದಲಿನಲ್ಲಿ ಪರಾಗಗಳು ಅಂಟಿಕೊಳ್ಳುತ್ತವೆ. ಇದರಿಂದ ಕಂಚುಕುಟ್ಟಿಗಗಳು ಪರಾಗಸ್ಪರ್ಶ ಕಾರ್ಯದಲ್ಲಿಯೂ ಭಾಗವಹಿಸುತ್ತವೆ.
ಡಾ. ಎಸ್.ವಿ. ನರಸಿಂಹನ್ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ ಕಂಚುಕುಟಿಗ ಹಕ್ಕಿಗಳ ಕುರಿತ ಬರಹ ಇಲ್ಲಿದೆ
ಓದುಗರೇ ನೀವು ನಿಮ್ಮ ಮನೆಯ ಸುತ್ತಮುತ್ತ ದೊಡ್ಡ ಮರಗಳ ಮೇಲಿನಿಂದ, ಎಂದಾದರೂ ಕಮ್ಮಾರನು ಪಾತ್ರೆ ಕುಟ್ಟುವ ರೀತಿ ಶಬ್ದದಂತೆ, ಟಣ್.ಟಣ್.ಟಣ್. ಎಂಬ ಕೂಗನ್ನು ಕೇಳಿರಬಹುದು. ನಿಸ್ಸಂಶಯವಾಗಿ ಅದು ಕಂಚುಕುಟಿಗ ಹಕ್ಕಿಯದ್ದೇ ಆಗಿರುತ್ತದೆ. ಈವತ್ತು ನಾವು ಕುಟ್ರಹಕ್ಕಿಗಳೂ ಸೇರಿರುವ ಮೆಗಾಲೈಮಿಡೆ (Megalaimidae) ಎಂಬ ಕುಟುಂಬದ ಒಂದು ಪ್ರಭೇದವಾದ ಕಂಚುಕುಟಿಗ ಎಂಬ ಪಕ್ಷಿಯ ಬಗ್ಗೆ ತಿಳಿದುಕೊಳ್ಳೋಣ. ಇಂಗ್ಲೀಷ್ ಭಾಷೆಯಲ್ಲಿ ಈ ಹಕ್ಕಿಯನ್ನು ಕಾಪರ್‌ಸ್ಮಿತ್ ಬಾರ್ಬೆಟ್ (Coppersmith Barbet) ಎಂತಲೂ, ವೈಜ್ಞಾನಿಕ ಪರಿಭಾಷೆಯಲ್ಲಿ ಸಿಲೋಪೋಗೋನ್ ಹೀಮಾಸೆಫಾಲಸ್ (Psilopogon haemacephalus) ಎಂತಲೂ ಕರೆಯುತ್ತಾರೆ. ಇದು ಕೇವಲ ಭಾರತದಲ್ಲಿ ಮತ್ತು ಕೆಲವು ದಕ್ಷಿಣ ಏಷಿಯಾ ಖಂಡದ ಭಾಗಗಳಲ್ಲಿ ಕಂಡುಬರುವ ಹಕ್ಕಿ.
ಸುಮಾರು 17 ಸೆಂಟಿಮೀಟರ್ ಉದ್ದದ, ಗುಬ್ಬಚ್ಚಿಗಿಂತ ತುಸು ದೊಡ್ಡ ಗಾತ್ರದ ಕಂಚುಕುಟಿಗಕ್ಕೆ ಎಲೆಹಸಿರು ಬಣ್ಣದ ದೇಹ; ಅದರ ದೇಹಕ್ಕೆ ಹೋಲಿಸಿದರೆ ತುಸು ದೊಡ್ಡದೆನಿಸುವ ತಲೆ. ಕೆಂಪು ಬಣ್ಣದ ಹಣೆ ಮತ್ತು ಎದೆಯ ಭಾಗ; ಕಪ್ಪು ಬಣ್ಣದ ಕೆನ್ನೆ; ಹಳದಿ ಬಣ್ಣದ ಗಲ್ಲ ಮತ್ತು ಕಣ್ಣಿನ ಸುತ್ತ ಹಳದಿ ಬಣ್ಣದ ಉಂಗುರವನ್ನು ಕಾಣಬಹುದು. ಇಡೀ ಹಳದಿ ಬಣ್ಣದ ಕೆಳಮೈ ಮೇಲೆ ಹಸಿರು ಗೀರುಗಳಿರುತ್ತವೆ. ಒಟ್ಟಾರೆ ಎಲೆಗಳ ಮಧ್ಯೆ ಮರೆಮಾಚುವ ಬಣ್ಣ! ದಪ್ಪನಾದ, ತುಸು ಬಾಗಿದ ಕೊಕ್ಕು; ಕೊಕ್ಕಿನ ಬುಡದಲ್ಲಿ ಉದ್ದನಾದ ಮೀಸೆ ಗರಿಗಳು; ಗಟ್ಟಿಮುಟ್ಟಾದ ಸಣ್ಣ ಕಾಲುಗಳು; ಈ ಕಾಲಿನಲ್ಲಿ ಎರಡು ಬೆರಳುಗಳು ಮುಂದೆ, ಮತ್ತೆರಡು ಹಿಂದೆ ಇರುತ್ತದೆ. ಇದು ಕೊಂಬೆಯನ್ನು ಧೃಢವಾಗಿ ಹಿಡಿದುಕೊಳ್ಳಲು ಸಹಕಾರಿ. ಇವಲ್ಲದೆ, ಕಂಚುಕುಟಿಗಗಳಿಗೆ ದುಂಡಾದ ರೆಕ್ಕೆಗಳು; ಚಿಕ್ಕ, ಏಣು ಸವರಿದಂತಹ ಬಾಲವಿರುತ್ತದೆ. ಕಂಚುಕುಟ್ಟಿಗಗಳದ್ದು ನೇರವಾದ, ಪಟಪಟ ರೆಕ್ಕೆಗಳನ್ನು ಬಡಿದುಕೊಂಡು ಹಾರಾಟ. ಗಂಡು ಮತ್ತು ಹೆಣ್ಣು ಕಂಚುಕುಟ್ಟಿಗಗಳು ನೋಡಲು ಒಂದೇ ರೀತಿಯಿರುತ್ತವೆ. ಇವು ರಾತ್ರಿ ಹೊತ್ತು ಮರಗಳ ಪೊಟರೆಗಳೊಳಗೆ ನಿದ್ರಿಸುತ್ತವೆ.
ಕಂಚುಕುಟ್ಟಿಗಗಳಿಗೆ ಹಣ್ಣುಗಳೆಂದರೆ ಬಹಳ ಇಷ್ಟ, ಅದರಲ್ಲೂ ನಗರವೇ ಆಗಿರಲಿ, ಗ್ರಾಮಾಂತರ ಪ್ರದೇಶವೇ ಆಗಿರಲಿ, ಯಾವುದೇ ಮರವಿರಬಹುದು, ಅದರಲ್ಲೂ ಅತ್ತಿ, ಆಲ, ಅರಳಿ, ಬಸರಿ ಹಣ್ಣುಗಳೆಂದರೆ, ಗುಂಪಾಗಿ ಬಂದು ಔತಣ ಕೂಟದಲ್ಲಿ ಭಾಗವಹಿಸುತ್ತವೆ; ಅಲ್ಲದೆ ಕೀಟಗಳು, ಸಣ್ಣ ಜೀವಿಗಳು ಮತ್ತು ಹೂ ಮಕರಂದವೂ ಇವುಗಳ ಆಹಾರದ ಪಟ್ಟಿಯಲ್ಲಿ ಸೇರಿವೆ. ಮಹಾ ಬಕಾಸುರ ಕೂಡ! ಇವು ಮಕರಂದವನ್ನು ಹೀರುವಾಗ, ಕೊಕ್ಕಿನ ಬುಡದಲ್ಲಿರುವ ಕೂದಲಿನಲ್ಲಿ ಪರಾಗಗಳು ಅಂಟಿಕೊಳ್ಳುತ್ತವೆ. ಇದರಿಂದ ಕಂಚುಕುಟ್ಟಿಗಗಳು ಪರಾಗಸ್ಪರ್ಶ ಕಾರ್ಯದಲ್ಲಿಯೂ ಭಾಗವಹಿಸುತ್ತವೆ. ಅಲ್ಲದೆ ವಿವಿಧ ಮರಗಳ ಬೀಜಪ್ರಸರಣ ಕಾರ್ಯದಲ್ಲೂ ಪ್ರಮುಖ ಪಾತ್ರವನ್ನು ವಹಿಸುತ್ತವೆ.
ಕಂಚುಕುಟ್ಟಿಗಗಳದ್ದು ನಿಧಾನಗತಿಯ, ಅಂದರೆ ನಿಮಿಷಕ್ಕೆ ಸುಮಾರು 60 ಬಾರಿಯ, ಟ್‌ಂಕ್.. ಟ್‌ಂಕ್.. ಎಂಬ ಏಕತಾನದ ಕೂಗು. ಅದೂ ಕೂಡ ಎತ್ತರದ ಮರದ ಮೇಲೆ ಕುಳಿತು, ಅತ್ತಿತ್ತ ತಲೆಯಾಡಿಸುತ್ತಾ, ಕೂಗುವುದರಿಂದ ಆ ಶಬ್ದ ಎಲ್ಲಿಂದ ಬರುತ್ತಿದೆಯೆಂದು ಗುರುತಿಸುವುದೂ ಕಷ್ಟವಾಗುತ್ತದೆ.
ಕಂಚುಕುಟ್ಟಿಗಗಳ ಸಂತಾನವೃದ್ಧಿಯ ಸಮಯ, ಫೆಬ್ರವರಿಯಿಂದ ಏಪ್ರಿಲ್‌ವರೆಗೆ. ಒಣಗಿದ ತೆಂಗಿನ ಮರದಲ್ಲಿ, ಅಥವಾ ಇನ್ನಾವುದೇ ಮೃದುವಾದ ಮರದ ಕೊಂಬೆಯನ್ನು ಕೊರೆದು ಮಾಡಿದ ಪೊಟರೆಗಳೊಳಗೆ ಗೂಡು. ಗೂಡು ಕಟ್ಟುವುದರಿಂದ ಹಿಡಿದು, ಮೊಟ್ಟೆಗಳಿಗೆ ಕಾವು ಕೊಡುವುದು, ಮರಿಗಳಿಗೆ ಗುಟುಕು ನೀಡುವ ಕಾರ್ಯದವರೆಗೆ, ಸರದಿಯಂತೆ ಗಂಡು ಮತ್ತು ಹೆಣ್ಣು ಹಕ್ಕಿಗಳು ಸೇರಿ ನಿಭಾಯಿಸುತ್ತವೆ.
ರೈತರು ಬೆಳೆಗಳಿಗೆ ಸಿಂಪಡಿಸುವ ಕೀಟನಾಶಕ ವಿಷಗಳು ಕಂಚುಕುಟ್ಟಿಗಗಳ ಮೇಲೆ ಬೀರುವ ಪರಿಣಾಮದಿಂದ ಇತ್ತೀಚೆಗೆ ಅವುಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಕಂಡುಬರುತ್ತಿದೆ.
(ಕಲಾಕೃತಿ: ಲೇಖಕರದ್ದು)

ಡಾ. ಎಸ್.ವಿ. ನರಸಿಂಹನ್ ವೈದ್ಯರು. ಕೊಡಗಿನ ವಿರಾಜಪೇಟೆಯಲ್ಲಿ ನೆಲೆಸಿದ್ದಾರೆ. ಆರೋಗ್ಯ ರಕ್ಷಣೆಯೊಂದಿಗೆ ಪರಿಸರ ರಕ್ಷಣೆಯ ಬಗೆಗೂ ಅಪಾರ ಕಾಳಜಿ ಹೊಂದಿದ್ದಾರೆ. ಕಳೆದ ನಲವತ್ತೊಂದು ವರ್ಷಗಳಿಂದ ಡಾ. ನರಸಿಂಹನ್‌ರವರು ಕೈಯಿಂದ ಕುಂಚಿಸಿದ ಸುಮಾರು ಎಂಭತ್ತೆರಡು ಸಾವಿರ ‘ವನ್ಯಜೀವಿ ಸಂದೇಶ ಪತ್ರ’ಗಳು ಪ್ರಪಂಚದಾದ್ಯಂತ ತಲುಪಿವೆ. ಇದೊಂದು ಲಿಮ್ಕಾ ದಾಖಲೆ. ವಿಜ್ಞಾನ ಬರವಣಿಗೆಯಲ್ಲೂ ಆಸಕ್ತಿ ಹೊಂದಿರುವ ಇವರು, ಕನ್ನಡ ಭಾಷೆ, ಸಂಗೀತ-ಸಾಹಿತ್ಯ, ಖಗೋಳ, ಪರಿಸರ ಮುಂತಾದ ವಿಷಯಗಳಲ್ಲಿ ಶಾಲಾ-ಕಾಲೇಜುಗಳಲ್ಲಿ, ರೇಡಿಯೋ, ಟಿವಿ ಮತ್ತು ಪತ್ರಿಕಾ ಮಾಧ್ಯಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ಆಸಕ್ತಿ ಬೆಳೆಸಿದ್ದಾರೆ. ಕೊಡಗಿನ ಸಂಪೂರ್ಣ ಪಕ್ಷಿಸಂಕುಲದ ನಿಖರ ಮಾಹಿತಿಯುಳ್ಳ ‘ಕೊಡಗಿನ ಖಗರತ್ನಗಳು’ ಪುಸ್ತಕದಲ್ಲಿ ತಾವೇ ಎಲ್ಲ ಹಕ್ಕಿಗಳ ಚಿತ್ರಗಳನ್ನೂ ಬರೆದದ್ದು ಮತ್ತೊಂದು ಲಿಮ್ಕಾ ದಾಖಲೆ. ‘2013ರ ಕೊಡಗಿನ ವರ್ಷದ ವ್ಯಕ್ತಿ’ಪುರಸ್ಕೃತರು

