1. ಉಪ್ಪು- ನೆಲ್ಲಿಕಾಯಿ
ತೋಟದ ಮೊಗ್ಗುಗಳೆಲ್ಲ ನಿನ್ನ ಕಣ್ಣ ಬೆಳಕಿಗೇ
ಹೂವಾಗಿ ಅರಳಿದ್ದು ಸಣ್ಣ ಮಾತೇನಲ್ಲ
ಎಷ್ಟು ಕಾಲದಿಂದ ಸಾಗಿತ್ತು ದಿನದ ಮೊಗ್ಗುಗಳೆಲ್ಲ
ಅರಳದೇ ಅಳಿದುಹೋಗುವುದು
ಬೆಳಕೇ ಕಾಣದ ಕಾಡೇನಲ್ಲ ನನ್ನ ತೋಟ
ನನ್ನ ಸೂರ್ಯ ಒಡಲು ಸುಟ್ಟುಕೊಂಡು ಕೂಡ
ತನ್ನ ಜನರ ದಿನ ಬೆಳಗಿದಾತ
ತಿರುಗಿ ಬಾರದಂತೆ ಅವನು ಅಸ್ತಂಗತನಾಗಿದ್ದು
ನಿನಗೂ ಖುಷಿಯೇನಲ್ಲ
ತಿಳಿದಿರಲಿಲ್ಲ ಕಾಲಚಕ್ರದಿ ಹೀಗೆ ನೀ ಸೂರ್ಯನಾಗಿ
ಈ ತೋಟದಿ ಆಡಬೇಕಾದೀತೆಂದು
ಬೆಳಕ ನೀಡಬಂದವರೇನು ಒಬ್ಬಿಬ್ಬರಲ್ಲ
ದೀಪ ಬ್ಯಾಟರಿ ಕರೆಂಟು
ಹೇಗೋ ಸಾಗಿತ್ತು ಬದುಕು ಬೆಳಕಿನಲಿ
ಏನು ಮಾಡುವುದು? ಆ ಬೆಳಕಿಗೆ
ಮೊಗ್ಗು ಹೂವಾಗಲಿಲ್ಲ ಹೀಚು ಹಣ್ಣಾಗಲಿಲ್ಲ
ಗಿಡ ಬಳುಕಲಿಲ್ಲ ಘಮ ಮುಗಿಲಿಗೆ ಹಾರಲಿಲ್ಲ
ಎದೆಯ ಹಕ್ಕಿ ಹಾಡಲಿಲ್ಲ
ನನ್ನ ಕಣ್ಣನೋಟದಿ ಹೀರಿದ್ದು
ಅದಾವ ಮಧುರಸವೋ
ತಿರುಗಿ ನಿನ್ನ ಕಣ್ತುಂಬಿ ಹರಿದ ಬೆಳಕಿನ ಹೊಳೆಗೆ
ಹೂವಾಗಿ ಹಣ್ಣಾಗಿ ಗಿಡ ಬಳುಕಿತ್ತು
ಭಾವ ಬಸಿರಾಗಿತ್ತು
ಬೆಳಕಿನಲೆಯಲಿ ತೋಟ ತುಯ್ದಾಡುತ್ತಿತ್ತು
ಸುಡುಬೆಂಕಿಯಂತೆ ನೀ ಕಾದಾಗಲೆಲ್ಲ
ನದಿ ಸಮುದ್ರಗಳ ನೀರಗುಂಟ ಮಳೆಯಾಗಿ
ಮೈಹೆರೆದು ತಂಪಾಗಿಸಿದ್ದೀ
ಮೈ ಮರೆತರೆ ಸಾಕು ಮಳೆಬಿಲ್ಲು
ವಿರಳ ಗುಡುಗು ಸಿಡಿಲು
ಅದಾವ ಕಾಣದ ಬೆರಳು ಮೀಟುತ್ತದೆಯೋ
ಸಂಬಂಧಗಳ ಮಧುರಸ್ವರವ
ಕೊರೆದ ಗೆರೆಗಳೊಳಗೇ ನರಳಾಡುವ
ಲೋಕ ಮಾತ್ರ ಇನ್ನೂ ನಮ್ಮ ಸಂಬಂಧದ
ಹೆಸರಿನ ತನಿಖೆಯಲ್ಲೇ ತೊಳಲಾಡುತಿದೆ
ಬಂಧನಗಳೆಲ್ಲವ ಮೀರಿದ ಬಂಧಕೆ
ಹೆಸರೊಂದು ಬೇಕೇ ?
ಮೈತ್ರಿ ಎಂದರೆ ಸಾಕೆ ?
2.ಹಳ್ಳಿಯಲ್ಲಿ ನಾಲ್ಕು ದಿನ
ಮಾಯವಾದ ಮಣ್ಣ ಮೇಲೆ
ನುಣ್ಣನೆಯ ಟಾರುರಸ್ತೆ
ಗುಡಿಸಲುಗಳಳಿದು ಅರಳಿನಿಂತ
ಅಂದದ ಮನೆಗಳು ಕಣ್ಣಮುಂದೆ
ಮನೆ ಮನೆಯಲೂ ಟಿವಿ ಮೊಬೈಲ್
ಬೆಳೆದಿದೆ ಊರು ಬೆರಳ ತುದೀಲಿ ಜ್ಞಾನ
ಹುಟ್ಟಿಬಾಳಿದ ಹಳ್ಳಿಯಲೀಗ
ಹೊಸ ಜೀವ ಹೊಸ ಭಾವ
ಕಣ್ಣು ಕಿವಿಗಳ ನಂಬಲಾಗುತ್ತಿಲ್ಲ
ಎರಡನೇ ದಿನ
ಹಾಡುಹಗಲೇ ಅನಾಥವಾಗಿ
ಅಳುತ್ತವೆ ಹೊಲಗಳು ಬಿಕ್ಕಿ ಬಿಕ್ಕಿ
ಮುಟ್ಟಲು ಅಸಹ್ಯಪಡುತ್ತಿವೆಯಂತೆ
ಮೊಲೆಯುಂಡು ಬೆಳೆದಿದ್ದ ಮಕ್ಕಳು
ಚಿಕ್ಕಪುಟ್ಟ ಅಕ್ಷರಗಳೂ ಮೈಮರೆಯುತ್ತಿವೆ
ಪಶ್ಚಿಮ ಉತ್ತರಗಳ ನಶೆಯ ಹುಸಿಯಲ್ಲಿ
ಸಂಜೆಯ ನಕ್ಷತ್ರಗಳಿಗಿಂತ ಮೋಹಕವೀಗ
ಐಪಿಎಲ್ ರಂಗು ಮತ್ತದರ ಬೆಟಿಂಗು
ಇಷ್ಟದ ನಟರ ಬರ್ತಡೇ ದಿನ ಕುಡಿದು
ಕುಣಿದಾಡುತ್ತವೆ ದುರಂತ ಪಾತ್ರಗಳು
ಅಂದದ ಮನೆಗಳ ತುಂಬೆಲ್ಲಾ
ರಾತ್ರಿಯೂಟಕೆ ನಿಟ್ಟುಸಿರುಗಳು ಕಾದಿವೆ
ಕೂಲಿಗಳದೋ ಕರುಳ ಕರೆಗೆ ಓಗೊಟ್ಟ ಪ್ರವಾಸ !
ಮೂರನೇ ದಿನ ಕಳೆಯುವುದು ಕಷ್ಟ…
ಸುತ್ತಿಗೆ ಹಿಡಿದು ಕಲ್ಲುಹೊಡೆಯಲು ಹೊರಟ ಮೊಮ್ಮಗನಿಗೆ
ಕುಡುಗೋಲು ಹಿಡಿದು ರಕ್ತಕೆಮ್ಮುತ್ತಾ ಕುಳಿತ ಅಜ್ಜ
ಊರಿಗೆ ಮಾಡಿಸಿ ಹಾಕಿದವರಾರೆಂದು ಗೊತ್ತೆನ್ನುತ್ತಾನೆ
ಕೆಂಪಾದ ಮಣ್ಣ ದಿಟ್ಟಿಸುತ್ತಾ ಕೇಳುತ್ತಾನೆ
ಇಲ್ಲಿ ಹರಿದಾಡುತ್ತಿರುವ ಜ್ಞಾನ ಯಾರದು?
ಕಾಲಜ್ಞಾನಿಗಳ ಕಾಣದ ಊರುಗಳೀಗ
ಖಾಲಿಜ್ಞಾನಿಗಳಿಂದ ತುಳುಕಾಡುತ್ತಿವೆ
ನಾಲ್ಕನೇ ದಿನ ದಾರುಣ
ಭೂಮಿತಾಯಿಯ ಮಾರಿ ಹೊಸ ವೇಷತೊಟ್ಟವರ
ಮುಖ ಚಿವುಟಿದರೂ ಹನಿ ರಕ್ತವಿಲ್ಲ
ಮೂರು ದಶಕಗಳಾಯಿತು
ಬಾರಲುಗಾಲಿನ ಬಿರುಗಾಳಿಯೊಂದು
ಶಾಪದಂತೆ ಬೀಸಲಾರಂಭಿಸಿ
ಊರಿಗೂರೇ ಬೋರಲು ಬೀಳಬಹುದು
ಬಹುಮುಖದ ರಾಕ್ಷಸರ
ವಿಷ ಕೃಷಿಯಲ್ಲಿ
3.ಒಂದು ನದಿ
ಕವಿತೆಗಳ ಬುತ್ತಿಯ ಹೊತ್ತ ಮೊಬೈಲ್
ಮಗುವಿನ ಕೈಚಳಕದಿಂದ ಅಚಾನಕ್ಕಾಗಿ
ಕಲ್ಲಿಯ ಹೊಕ್ಕಿತ್ತು
ಮಣ್ಣ ಗೋಡೆಯಲಿ ಟಿಸಿಲೊಡೆದ ಗೂಟಕೆ
ಅನಾದಿಕಾಲದಿಂದ ನೇತಾಡುತ್ತಿದ್ದ
ಕುರಿಗಾಯಿ ಅಜ್ಜನ ಕಲ್ಲಿ
ಆದಿ ಸ್ಮೃತಿಗಳಿಂದ ತುಳುಕಾಡುತ್ತಿದ್ದ
ಅದರೊಡಲಲಿ ಬೆಚ್ಚಗೆ ಮಲಗಿತ್ತು
ಸಹಕಾರದಂಗಡಿಯ ಅಪ್ಪನ ಬುಕ್ಕ
ಮುಖ ಕಂಡಿರದ ಕರ್ತೃಗಳು
ತಬ್ಬಿಕೊಂಡಿದ್ದ ಕೃತಿಗಳು
ನನ್ನ ಸಾಧನವನ್ನೇನೋ ಎತ್ತಿ ತಂದೆ
ಬಿಡಲಾರದ್ದೇನನ್ನೋ ಬಿಟ್ಟು ಬಂದೆ
ಆಡು ಕುರಿ ಜೀವಜಂತುಗಳ ಸಲಹಿ
ಮಳೆ ಬೆಳೆ ಬರದಲಿ ನೆರವಾಗಿ
ಭಾವ ಬುದ್ಧಿಯ ಸಸಿಗಳಿಗೆ
ಗೊಬ್ಬರವಿಡುವುದೆಲ್ಲಾ ಜೀವಮತವೇ !
ನಿತ್ಯದ ಕೃತಿಗಳ ಒಳಪದರದಲಿ
ಹಿರೀಕರ ಧ್ವನಿ ಕೇಳಿದಂತಾಗಿ ಒಮ್ಮೆಲೇ
ಚಕಿತನಾಗುತ್ತೇನೆ
ಕಾಲದ ಹರಿವಿನಲಿ ಮೊಳೆಯುವುದು
ಬೆಳೆಯುವುದು ಕೂಡುವುದು ಕಳೆಯುವುದು
ನಡೆಯುತ್ತಲೇ ಇದೆ
ಪೂರ್ವಜರು ಮತ್ತವರ ಕೃತಿಗಳು
ಮನದ ತುಂಬೆಲ್ಲ ಸ್ಮೃತಿಗಳಾಗಿ
ಒಳಗೊಳಗೆ ಹರಿಯುತ್ತಲೇಯಿವೆ
ಅನಿಸುತ್ತಿದೆ ಈಗ
ನಾನು ಅನಾದಿಕಾಲದಿಂದ
ದಿನಕ್ಕೊಂದು ರೂಹು ಪಡೆದು
ಹರಿಯುತ್ತಲೇಯಿರುವ ನದಿ

ಧಾರವಾಡದ ಕರ್ನಾಟಕ ಕಲಾ ಮಹಾವಿದ್ಯಾಲಯಲ್ಲಿ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಸಿ. ಬಿ. ಐನಳ್ಳಿಯವರು ಮೂಲತಃ ಬಳ್ಳಾರಿ ಜಿಲ್ಲೆಯವರು. ಇಂಡಿಯನ್-ಅಮೇರಿಕನ್ ಲೇಖಕಿ ‘ಜುಂಪಾ ಲಾಹಿರಿಯ ಕೃತಿಗಳಲ್ಲಿ ವಸ್ತು ಮತ್ತು ತಂತ್ರಗಳ ಅಧ್ಯಯನ’ಕ್ಕಾಗಿ ಕರ್ನಾಟಕ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ಪಡೆದಿದ್ದಾರೆ.

