ಅಗತ್ಯವಿಲ್ಲದಿದ್ದರೂ, ಇಷ್ಟವಿಲ್ಲದಿದ್ದರೂ, ಪಾಲಿಸಲೇಬೇಕು ಎನ್ನುವುದು ಹೇರಿಕೆಯಾದಾಗ ಸಂಪ್ರದಾಯಗಳು ಸಂಕೋಲೆಗಳಾಗಿ ಹಿಂಸಿಸತೊಡಗುತ್ತದೆ. ಈ ಹೇರಿಕೆ ಕೇವಲ ಸಮಾಜದ್ದಲ್ಲ ನಮ್ಮೊಳಗಿನದೂ ಸಹ! ‘ಸಂಪ್ರದಾಯವನ್ನು ಬಿಟ್ಟು ನಡೆದಲ್ಲಿ ಏನಾದರೂ ಅವಘಡ ಸಂಭವಿಸಿದರೆ ಗತಿ ಏನು ಮುಂದೆ?!’ ಎನ್ನುವ ನಮ್ಮೊಳಗಿನ ಭೀತಿಯೇ ಅರ್ಧ ಮನುಷ್ಯರನ್ನು, ‘ಬಿಟ್ಟರೂ ಬಿಡಲಾರದೀ ಮಾಯೆ’ ಎಂದು ತ್ರಿಶಂಕು ಸ್ಥಿತಿಯಲ್ಲಿ ನೇತಾಡುವಂತೆ ಮಾಡುತ್ತದೆ. ಕಾಲಾಂತರದಲ್ಲಿ ಅಕ್ಷರ, ಹಣ, ಸಾರಿಗೆ ಮತ್ತು ಮಾಧ್ಯಮ ಇತ್ಯಾದಿ ಅನುಕೂಲತೆ ಎಲ್ಲರಿಗೂ ಎಟುಕತೊಡಗಿದಂತೆ, ಅಷ್ಟಿಷ್ಟು ಮೌಢ್ಯಗಳು, ಸಂಪ್ರದಾಯದ ಸಂಕೋಲೆಗಳು ಸಡಿಲಗೊಂಡರೂ, ತ್ರಿಶಂಕು ಸ್ಥಿತಿಯಿಂದ ಅಷ್ಟು ಸುಲಭದಲ್ಲಿ ಬಿಡುಗಡೆ ಸಿಗುವುದಿಲ್ಲ.
ಜಯಲಕ್ಷ್ಮಿ ಪಾಟೀಲ್ ಬರೆಯುವ “ಗರ್ದಿ ಗಮ್ಮತ್ತು” ಅಂಕಣದ ಎಂಟನೆಯ ಬರಹ
ಎಮ್ಮೆಗೊಂದು ಚಿಂತೆ ಸಮ್ಮಗಾರಗೊಂದು ಚಿಂತೆ
ಧರ್ಮಿಗೊಂದು ಚಿಂತೆ ಕರ್ಮಿಗೊಂದು ಚಿಂತೆ
ಎನಗೆ ಎನ್ನ ಚಿಂತೆ, ತನಗೆ ತನ್ನ ಕಾಮದ ಚಿಂತೆ
ಒಲ್ಲೆ ಹೋಗು, ಸೆರಗ ಬಿಡು ಮರುಳೆ
ಎನಗೆ ಚೆನ್ನಮಲ್ಲಿಕಾರ್ಜುನದೇವರು ಒಲಿವರೊ ಒಲಿಯರೊ ಎಂಬ ಚಿಂತೆ!
ಹೀಗೆ ಕೌಶಿಕ ಮಹಾರಾಜನಿಗೆ ಹೇಳಿದ ಮಹಾದೇವಿ ಸೆರಗಿನೊಂದಿಗೆ ಮೈಮೇಲಿನ ವಸ್ತ್ರವನ್ನೇ ಬಿಸುಟು ಎದ್ದು ಚೆನ್ನಮಲ್ಲಿಕಾರ್ಜುನನ್ನು ಅರಿಸುತ್ತಾ ನಡೆದಳು. ಮನುಷ್ಯ ಪ್ರಪಂಚವಿದು. ಲೋಕ ಆರಂಭದಲ್ಲಿ ಅವಳ ದಿಗಂಬರತೆಯ ಧೃಡತೆಯನ್ನು ಪರಿಪರಿಯಾಗಿ ಕೆಣಕಿ ಅವಳನ್ನು ಪೀಡಿಸಿರುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗುವುದಿಲ್ಲ. ಅವುಗಳನ್ನು ದಿಟ್ಟತನದಿಂದಲೇ ಎದುರಿಸಿ ತನ್ನ ನಿಲುವಿಗೆ ಬದ್ಧಳಾಗಿ ನಡೆದ ಅವಳ ಅಚಲತೆಗೆ ಬೆರಗಾದ ಜಗತ್ತು ಮಹಾದೇವಿಗೆ ಅಕ್ಕ ಎಂಬ ಸೆರಗು ಹೊದೆಸಿ ಸಮ್ಮಾನಿಸಿತು. ಅವಳೋ ಇದಕ್ಕೂ ಸುಮ್ಮಾನಗೊಳ್ಳದೆ ತನ್ನ ಅಲೌಕಿಕ ಗಂಡ ಚೆನ್ನಮಲ್ಲಿಕಾರ್ಜುನನ ಅರಸುತ್ತಾ ಕದಳಿಯೆಡೆ ನಡೆದವಳು.
ಅಕ್ಕ ಅಲೌಕಿಕ ಗಂಡನ ಅರಸುತ್ತಾ ಲೌಕಿಕದ ಸೆರಗ ಬಿಡಿಸಿಕೊಂಡು ನಡೆದರೆ, ನೂರಾರು ಗೋಪಿಕೆಯರು ಲೋಕದ ಗಂಡ, ಅತ್ತೆ, ಮಾವರಿಗೆ ಹೆದರಿ, ‘ಸೆರಗ ಬಿಡೋ ರಂಗ ಕರವ ಮುಗಿವೆನೊಮ್ಮೆ…’ ಎಂದು ತುಂಟ ಕೃಷ್ಣನಲ್ಲಿ ಗೋಗರೆಯುವ ದೃಶ್ಯವನ್ನು ಪುರಂದರದಾಸರು ನಮ್ಮ ಕಣ್ಣಿಗೆ ಕಟ್ಟುವಂತೆ ಬರೆಯುತ್ತಾರೆ.
ದುಶ್ಯಾಸನ, ಮುಟ್ಟಾಗಿ ಒಂಟಿ ವಸ್ತ್ರದಲ್ಲಿದ್ದ ದ್ರೌಪದಿಯನ್ನು ತುಂಬಿದ ಸಭೆಗೆ ಎಳೆತಂದು ಅವಳ ಸೆರಗನೆಳೆದು, ಸೀರೆ ಸೆಳೆದು ಅವಳನ್ನು ಮುಜುಗರಕ್ಕೀಡು ಮಾಡಿ ಅವಮಾನಿಸುತ್ತಾ ತಾನೆಂಥಾ ಹೀನಮತಿ, ಕುಬ್ಜ, ದುಷ್ಟ ಎನ್ನುವುದನ್ನು ಜಗಕೆ ಸಾರುತ್ತಾನೆ.
ಅವಳ ಸೆರಗು ಮಗುವಿಗೆ, ಗಂಡನಿಗೆ ಬೆಚ್ಚನೆಯ ಹೊದಿಕೆಯಾಗುತ್ತದೆ.
ಅವಳ ಅರಿವು ಮೀರಿ ಅಕಸ್ಮಾತ್ತಾಗಿ ಎದೆಯ ಮೇಲಿಂದ ಸೆರಗು ತುಸು ಜಾರಿದರೆ, ಜಾರನೊಬ್ಬ ತನ್ನನ್ನು ಸೆಳೆಯಲೆಂದೇ ಹೆಣ್ಣು ಹಾಗೆ ಮಾಡುತ್ತಾಳೆ ಎಂದು ಶರಾ ಬರೆಯುತ್ತಾನೆ.
ತಾಯಿ ತನ್ನ ಮಗುವಿಗೆ ಹಾಲೂಡೂವಾಗ ಮಗುವಿನ ಚಿತ್ತ ಅತ್ತಿತ್ತ ಹರಿದು, ಮಗು ಅರೆಹೊಟ್ಟೆ ಉಂಡು ಬಳಲೀತು ಎಂದು ಅದಕ್ಕೆ ತನ್ನ ಸೆರಗ ಹೊದೆಸುತ್ತಾಳೆ.
ತಾಯಿಯ ಸೆರಗು ಹಿಡಿದು ಪುಟ್ಟಪುಟ್ಟ ಹೆಜ್ಜೆಗಳನಿಡುತ್ತಾ ಮನೆತುಂಬ ಮಗು ಓಡಾಡುತ್ತದೆ.
ಯಾರದೋ ಗಾಯಗೊಂಡ ಬೆರಳಿಗೆ ತನ್ನ ಸೆರಗ ಹರಿದು ಕಟ್ಟಿ ಕಾಳಜಿ ತೋರಿಸುತ್ತಾಳೆ ಆಕೆ.
ಬದುಕಿಗೆ ಬೇಸತ್ತ ಇನ್ನ್ಯಾರದೋ ಪಾಲಿಗೆ ಉರುಳಾಗುತ್ತದೆ ಸೆರಗು.
ಯಾವುದೋ ಅನಿವಾರ್ಯತೆಗೆ ದೇಹಮಾರಿಕೊಂಡು ಬದುಕುವ ಅವಳನ್ನು, ‘ಸೆರಗು ಹಾಸುವವಳು’ ಎನ್ನುವ ಲೋಕ, ಸೆರಗಿನಡಿಯಲ್ಲಿ ಹಾಲು ಕುಡಿದುದ ಮರೆತು ಅವಳನ್ನು, ಸೆರಗನ್ನು ಅವಮಾನಿಸುತ್ತದೆ.
ಹೀಗೆ ಸೆರಗು ಬಗೆಬಗೆಯ ರೂಪಕವಾಗಿ, ಉಪಮೆಯಾಗಿ, ಪ್ರತಿಮೆಯಾಗಿ, ಆಸರೆಯಾಗಿ, ಸಂಪ್ರದಾಯವಾಗಿ ಭಾರತಿಯರ ಬದುಕಿನಲ್ಲಿ ಹಾಸುಹೊಕ್ಕಾಗಿದೆ. ಅದು ದಕ್ಷಿಣ ಭಾರತವೋ, ಉತ್ತರವೋ, ಪೂರ್ವ, ಪಶ್ಚಿಮ, ಈಶಾನ್ಯ ಭಾರತವೋ ಎಲ್ಲೆಡೆ ಸೀರೆಯ ಭಾಗವಾಗಿ, ಸೆಲ್ವಾರ್ ಕಮೀಜ್ ಮೇಲಿನ ದುಪ್ಪಟ್ಟ ಆಗಿ, ಕುಪ್ಪಸದ ಮೇಲಿನ ಶಲ್ಯ ಆಗಿ, ಕೇವಲ ಎದೆಯ ಭಾಗವನ್ನು ಮಾತ್ರವಲ್ಲ, ತಲೆಯ ವಸ್ತ್ರವಾಗಿಯೂ ಬಳಕೆಯಾಗುತ್ತದೆ.
ನಾನು ಚಿಕ್ಕವಳಿದ್ದಾಗ, ನಿಂಬಾಳಕ್ಕೆ ಅಂದರೆ ನಮ್ಮೂರಿಗೆ ರಜೆಗೆ ಹೋದಾಗಲೆಲ್ಲ, ಅಲ್ಲಿನ ಹೆಣ್ಣುಮಕ್ಕಳ ಮಾತುಕತೆಯಲ್ಲಿ ಯಾವಾಗಲೂ ಬಂದುಹೋಗುವ ವಿಷಯವೊಂದಿತ್ತು. ಅದು ಶಾರಾದಾಗಿನ ಹೆಣ್ಣುಮಕ್ಕಳ ಸೆರಗು! (ಶಾರ=ಶಹರ್/ನಗರ/ಪಟ್ಟಣ/ಪ್ಯಾಟಿ) “ಅದೇನ ನಮ್ಮವ್ವಾ, ಈಗಿನ್ ಶಾರದಾಗಿನ ಹುಡಗ್ಯಾರು! ಹಿರ್ಯಾರಂತಿಲ್ಲ, ದೇವ್ರರಂತಿಲ್ಲ, ಮರ್ಯಾದೆಂತಿಲ್ಲ, ತಲಿ ಮ್ಯಾಲೆ ಶೆರಗಾ ಹಾಕ್ಕೊಳ್ಳೂದ ಬಿಟ್ಟಬಿಟ್ಟಾವ! ಹಿರ್ಯಾರ ಮುಂದ ಧೈ ಅಂತ ಎದಿ ಶೆಟಸಿ ನಿಂದರ್ತಾವ ಖೋಡಿಗೊಳು” ಊರಿಗೆ ಹೋದಾಗೊಮ್ಮೆ ಒಬ್ಬಲ್ಲ ಒಬ್ಬ ಹೆಣ್ಣುಮಗಳು ಇಂಥ ಮಾತುಗಳನ್ನು ಆಡದೆ ಇರುತ್ತಿರಲಿಲ್ಲ. ಆಗೆಲ್ಲ ಇಂಥ ಮಾತುಗಳನ್ನು ಮುಂದೆ ಸೀರೆ ಉಡಲಿರುವ ನನ್ನಂಥ ಚಿಲ್ಟುಗಳಿಗೆ ಎಚ್ಚರಿಸಲೆಂದೇ ಹೇಳುತ್ತಿದ್ದಾರೆ ಅನಿಸುತ್ತಿತ್ತು. ಅದನ್ನೂ ಮೀರಿ ಹೀಗೆ ಹೇಳುತ್ತಿದ್ದವರ ಸೆರಗಿನತ್ತ ನನ್ನ ದೃಷ್ಟಿ ಹೊರಳುತ್ತಿತ್ತು. ಅವರೆಲ್ಲರೂ ತಲೆಯ ಮೇಲೆ ಸೆರಗನ್ನು ಹೊದ್ದಿರುತ್ತಿದ್ದರಾದರೂ, ಅವರಲ್ಲಿ ಕೆಲವರ ಸೆರಗು ಎದುರಿನ ಅರ್ಧ ಕುಪ್ಪಸ ಕಾಣುವಂತೆ ಸಡಿಲುಗೊಂಡಿರುತ್ತಿತ್ತು. ಅವರಿಗದರ ಕುರಿತು ಯಾವ ಮುಜುಗರವೂ ಇರುತ್ತಿರಲಿಲ್ಲ. ಇರಬೇಕಾಗಿಲ್ಲ ಬಿಡಿ ಆ ಮಾತು ಬೇರೆ. ಆದರೆ ಮೈತುಂಬಾ ತಲೆ ತುಂಬಾ ಸೆರಗನ್ನು ಹೊದೆಯಬೇಕು ಎನ್ನುವವರನ್ನು ಹೀಗೆ ಕಂಡಾಗ ನನಗೆ ಗೊಂದಲ! (ಅಂದ ಹಾಗೆ ಉತ್ತರ ಕರ್ನಾಟಕದವರ್ಯಾರೂ ದ್ಯಾವ್ರು ಅನ್ನುವುದಿಲ್ಲ. ದೇವ್ರು ಅಂತಾರೆ. ತುಂಬಾ ಜನ ಉತ್ತರ ಕರ್ನಾಟಕದಲ್ಲಿ ದ್ಯಾವ್ರು ಅಂತಾರೆ ಎನ್ನುವ ತಪ್ಪು ಕಲ್ಪನೆಯಲ್ಲಿದ್ದಾರೆ ಆದ್ದರಿಂದ ಇದನ್ನಿಲ್ಲಿ ಹೇಳಲೇಬೇಕು ಅನಿಸಿತು.)
![]()

‘ಮುಕ್ತ ಮುಕ್ತ’ ಧಾರಾವಾಹಿಯಲ್ಲಿ ನಾನು ಮಂಗಳತ್ತೆಯ ಪಾತ್ರ ನಿರ್ವಹಿಸುತ್ತಿದ್ದೆ ಎಂಬುದು ನಿಮಗೆ ಗೊತ್ತು. ಆ ಸಮಯದಲ್ಲಿ ಕಳಸದಲ್ಲೊಂದು ಸಂವಾದ ಕಾರ್ಯಕ್ರಮವನ್ನು ಈ ಟಿವಿ ಅಲ್ಲಿನ ಸ್ಥಳಿಕರ ಒತ್ತಾಸೆ ಮತ್ತು ಸಹಯೋಗದೊಂದಿಗೆ ಆಯೋಜಿಸಿತ್ತು. ಆಗೆಲ್ಲ ಖ್ಯಾತ ನಿರ್ದೇಶಕರಾದ ಟಿ ಎನ್ ಸೀತಾರಾಮ್ ಸರ್ ಅವರ ಧಾರಾವಾಹಿಗಳ ಸಂವಾದಗಳು ಕರ್ನಾಟಕದ ಎಲ್ಲೆಡೆ ನಡೆಯುತ್ತಿದ್ದವು. ಅಂಥಾ ಸಂವಾದಗಳಲ್ಲಿ ಭಾಗವಹಿಸುವುದೊಂದು ಸುಂದರ ಅನುಭವ. ಕಳಸಕ್ಕೆ ಹೋಗುತ್ತಿದ್ದೇವೆ ಎಂದರೆ ಹತ್ತಿರದಲ್ಲಿದ್ದ ಹೊರನಾಡು ಅನ್ನಪೂರ್ಣೆಯ ದರ್ಶನ ಮಾಡದೇ ಬರಲಾದೀತೇ? ಸರಿ, ಕಲಾವಿದರು, ನಿರ್ದೇಶಕರು, ನಿರ್ಮಾಪಕರು ಮತ್ತು ತಂತ್ರಜ್ಞರನ್ನು ಹೊತ್ತ ಎರಡು ಬಸ್ಸುಗಳು ಅನ್ನಪೂರ್ಣೇಶ್ವರಿಯ ಅಂಗಳದಲ್ಲಿ ಮಂಡಿಯೂರಿ ನಿಂತವು. ನಾವೆಲ್ಲ ದರ್ಶನಕ್ಕೆಂದು ಗುಡಿಯ ಒಳಗೆ. ಗರ್ಭಗುಡಿಯ ಅಂಚಲ್ಲಿ ಅಂದರೆ ತುಂಬಾ ಹತ್ತಿರದಲ್ಲಿ ನಿಂತು ಮೂರ್ತಿಯನ್ನು ಕಣ್ತುಂಬಿಕೊಳ್ಳುವ, ನಮಸ್ಕರಿಸುವ ಅವಕಾಶ. ನಾನು ನಮ್ಮಲ್ಲಿನ ಪದ್ಧತಿಯಂತೆ, ದೇವರೆದುರು ತಲೆತುಂಬಾ ಸೆರಗ ಹೊದ್ದು, ಕೈಮುಗಿದು ನಮಸ್ಕರಿಸುತಲಿದ್ದೆ, ಅಲ್ಲಿನ ಅರ್ಚಕರು, ‘ನಿಮ್ಮೆಜಮಾನರು…’ ಎಂದರು. ಅದಕ್ಕೆ ನಾನು, ‘ಇಲ್ಲ ಅವರು ಬಂದಿಲ್ಲ’ ಎಂದೆ. ಹಿಂದೊಮ್ಮೆ ನಾನು ಹೊರನಾಡಿಗೆ ಹೋಗಿದ್ದಾಗ ಇದೇ ಅರ್ಚಕರು ತಾವಾಗಿಯೇ ನನ್ನನ್ನು ಗುರುತಿಸಿ ಮಾತನಾಡಿಸಿದ್ದರಾದ್ದರಿಂದ ಅವರ ಮಾತಲ್ಲಿ ನನಗ್ಯಾವ ವಿಶೇಷವೂ ಕಾಣಿಸಲಿಲ್ಲ. ಅರ್ಚಕರು ಹಾಗೆ ಹೇಳುತ್ತಿದ್ದಂತೆಯೇ ನನ್ನ ಹಿಂದೆ ನಿಂತಿದ್ದ ಕಲಾವಿದರೊಬ್ಬರಿಂದ (ಗಂಡಸರು), ‘ದೇವರೆದುರು ಹಾಗೆಲ್ಲ ತಲೆಯ ಮೇಲೆ ಸೆರಗ ಹೊದೆಯಬಾರದು, ತೆಗೆಯಿರಿ’ ಎನ್ನುವ ಕಾಳಜಿಪೂರ್ವಕ ಸೂಚನೆ ಬಂತು. ಕಾರಣ ಅರ್ಥವಾಗಲಿಲ್ಲವಾದರೂ, ಬಹುಶಃ ಅದು ಆ ದೇವಸ್ಥಾನದ ನಿಯಮ ಇದ್ದಿರಬಹುದು ಎಂದುಕೊಂಡು ತಲೆಯ ಮೇಲಿನ ಸೆರಗ ಸರಿಸಿದೆ. ಇದೀಗ ಅದನ್ನು ಹೆಗಲ ತುಂಬ ಹೊದ್ದುಕೊಳ್ಳಬೇಕೋ, ಹಾಗೆಯೇ ಮಾಮೂಲಿ ಭುಜ ಮೇಲಿಂದ ಇಳಿಬಿಡಬೇಕೋ ಎನ್ನುವ ಗೊಂದಲ ನನಗೆ. ಆ ಗೊಂದಲದೊಂದಿಗೆನೇ ದರ್ಶನ ಮುಗಿಸಿ ಆಚೆ ಬಂದು, ಯಾಕೆ ಹಾಗೆ? ಎಂದು ಕೇಳಿದೆ ಆ ಕಲಾವಿದರನ್ನು. ಅವರು ಹೇಗೆ ಹೇಳುವುದು ಅನ್ನುವ ಸಂಕೋಚದಲ್ಲಿ, ‘ಇಲ್ಲಿ ಬೇಡ, ಮತ್ತೆಂದಾದರೂ ಹೇಳುತ್ತೇನೆ’ ಎಂದರು. ಅವರು ಹೇಳಲಿಲ್ಲ. ಆದರೆ ಕಾಲಾಂತರದಲ್ಲಿ ಕಲಾವಿದೆ ವಿದ್ಯಾಮೂರ್ತಿ ಅವರಿಂದ ಕಾರಣ ಗೊತ್ತಾಯಿತು. ಬ್ರಾಹ್ಮಣರಲ್ಲಿ ಮಡಿಯಾದವರು ಅಂದರೆ ಗಂಡ ತೀರಿ, ಕೂದಲು ತೆಗೆಸಿಕೊಂಡ ಹೆಣ್ಣುಮಕ್ಕಳು ಮಾತ್ರ ತಲೆಯ ಮೇಲೆ ಸೆರಗು ಹೊದೆಯುತ್ತಾರೆ. ಹೀಗಾಗಿ ಇತರರು ಹಾಗೆ ಹೊದೆಯಬಾರದು ಎಂದು. ಆಗ ಆ ಅರ್ಚಕರ ಮಾತಿನ ಅರ್ಥ ಹೊಳೆಯಿತು. ‘ಅಯ್ಯಾ ನಿಮ್ಮ ತಂದು!’ ಎಂದವರನ್ನು ಮನದಲ್ಲಿ ಬೈದುಕೊಂಡಿದ್ದೂ ಆಯ್ತು.
ನಮ್ಮಲ್ಲಿ ಅಂದರೆ ಉತ್ತರ ಕರ್ನಾಟಕದಲ್ಲಿ ಬ್ರಾಹ್ಮಣರ ಹೊರತಾಗಿ ಉಳಿದ ಜನಾಂಗದವರೆಲ್ಲ ಮೊದಲೆಲ್ಲ ದೇವರು, ಸ್ವಾಮಿಗಳು ಮತ್ತು ಹಿರಿಯರೆದುರಿಗೆ, ನಾವು ಗೌರವಿಸುವ ಯಾರೇ ಆಗಿರಲಿ ಅವರೆದುರು ಹೆಣ್ಣುಮಕ್ಕಳು ತಲೆಯ ಮೇಲೆ ಸೆರಗು ಹೊದ್ದುಕೊಳ್ಳುವುದು ಸಾಮಾನ್ಯವಾಗಿತ್ತು. ನನ್ನ ಜನರೇಶನ್ ಸೀರೆ ಉಡುವುದನ್ನು ಪ್ರಾರಂಭಿಸುವಷ್ಟರಲ್ಲಿ ತಲೆ ಮೇಲೆ ಸೆರಗು ಹೊದೆಯುವುದರ ಉಳಿದ ಕೊಂಡಿಕೊಳು ಕಳಚಿಕೊಂಡು ಅದು ಕೇವಲ ದೇವರೆದುರಿಗೆ ಮಾತ್ರ ಸೀಮಿತವಾಗಿತ್ತು. ಉತ್ತರ ಕರ್ನಾಟಕದಲ್ಲಿ ಈಗಲೂ ನನಗಿಂತ ಹಿಂದಿನ ತಲೆಮಾರಿನ ಹೆಣ್ಣುಮಕ್ಕಳು ತಲೆಯ ಮೇಲೆ ಸೆರಗು ಹೊದೆಯುವುದನ್ನು ನೀವು ಕಾಣಬಹುದು. ಉತ್ತರ ಕರ್ನಾಟಕದಲ್ಲಷ್ಟೇ ಅಲ್ಲ, ಮಹರಾಷ್ಟ್ರ, ಗುಜರಾತ್, ರಾಜಸ್ತಾನ್ ಮತ್ತು ಉತ್ತರ ಭಾರತದ ಅನೇಕ ರಾಜ್ಯಗಳ ಹಳ್ಳಿಗಳಲ್ಲೂ ತಲೆ ಮೇಲೆ ಸೆರಗು, ದುಪ್ಪಟ್ಟಾ ಹೊದೆವ ಸಂಪ್ರದಾಯವಿದೆ.
ಯಾಕೆ ತಲೆಯ ಮೇಲೆ ಸೆರಗು ಹೊದೆಯುತ್ತಾರೆ ಇಲ್ಲೆಲ್ಲ? ಬಿಸಿಲಿನಿಂದ, ಚಳಿ, ಗಾಳಿಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು! ಎಲ್ಲೆಲ್ಲಿ ಬಿಸಿಲು ವಿಪರೀತವೋ ಆಯಾ ಪ್ರದೇಶಗಳಲ್ಲಿ ಹೊರಗೆ ಬಯಲಲ್ಲಿ, ಹೊಲ ಗದ್ದೆಗಳಲ್ಲಿ ಕೆಲಸ ಮಾಡುವ ಜನ ತಲೆ ತುಂಬ ಸೆರಗು ಹೊದೆಯುವುದು ಅಲ್ಲಿನ ಸಂಪ್ರದಾಯವಾಗಿದೆ. ಇದೇ ಕಾರಣಕ್ಕೆ ಅಲ್ಲಿನ ಗಂಡಸರು ಟೊಪ್ಪಿಗೆ, ರುಂಬಾಲು, ವಸ್ತ್ರ (ಟವಲ್) ಧರಿಸುತ್ತಾರೆ. ಅರಬ್ ರಾಷ್ಟ್ರಗಳಲ್ಲಿ ಮರಳು ಭೂಮಿಯೇ ಹೆಚ್ಚಾಗಿರುವುದರಿಂದ, ಬಿಸಿ ಗಾಳಿಯಿಂದ, ಮರಳ ಧೂಳಿನಿಂದ, ಚಳಿಯಿಂದ ರಕ್ಷಿಸಿಕೊಳ್ಳಲು ಅಲ್ಲಿನ ಹೆಣ್ಣುಮಕ್ಕಳು ಬುರ್ಖಾ, ಹಿಜಾಬ್ ತೊಡುತ್ತಾರೆ, ಗಂಡಸರು ಗುತ್ರಾ ಅಥವಾ ಶಮಾಗ್ ಎಂದು ಕರೆಯಲ್ಪಡುವ ತಲೆಗೆ ತೊಡುವ ರುಂಬಾಲು ಅಥವಾ ಬಟ್ಟೆ, ಥೋಬ್ (ಉದ್ದನೆಯ ನಿಲುವಂಗಿ) ಧರಿಸುತ್ತಾರೆ.
ರಾಜಸ್ಥಾನ ಮತ್ತು ಮಧ್ಯಪ್ರದೇಶ, ಉತ್ತರಪ್ರದೇಶಗಳಲ್ಲಿ ಹೆಣ್ಣುಮಕ್ಕಳು ಗೂಂಘಟ್ ಅಂದರೆ ತಲೆಯ ಮೇಲಿನ ಸೆರಗನ್ನು ಅರ್ಧ ಮುಖ ಮುಚ್ಚುವಂತೆ ಎಳೆದುಕೊಂಡಿರುತ್ತಾರೆ. ಅಲ್ಲಿನ ಮರಳು, ಬಿಸಿಲು, ಧೂಳಿನಿಂದ ರಕ್ಷಿಸಿಕೊಳ್ಳಬೇಕು ಎನ್ನುವುದು ಇದರ ಹಿಂದಿರುವ ಕಾರಣ. ಆದರೆ ಅದು ಅಲ್ಲಿನ ಎಂಥಾ ಕಠೋರ ಸಂಪ್ರದಾಯವಾಗಿತ್ತು ಒಂದೊಮ್ಮೆ ಎಂದರೆ, ಗೂಂಘಟ್ ಸರಿದ ಹೆಣ್ಣುಮಕ್ಕಳನ್ನು ಶಿಕ್ಷಿಸಲಾಗುತ್ತಿತ್ತು! ಸಮಾಜ ಆಕೆಯನ್ನು ಗೌರವದಿಂದ ನೋಡುತ್ತಿರಲಿಲ್ಲ. ಈಗಲೂ ಅಲ್ಲಿನ ಹಲವು ಹಳ್ಳಿಗಳಲ್ಲಿ ಇದು ಮುಂದುವೆರೆದಿದೆ.

ಅಗತ್ಯವಿಲ್ಲದಿದ್ದರೂ, ಇಷ್ಟವಿಲ್ಲದಿದ್ದರೂ, ಪಾಲಿಸಲೇಬೇಕು ಎನ್ನುವುದು ಹೇರಿಕೆಯಾದಾಗ ಸಂಪ್ರದಾಯಗಳು ಸಂಕೋಲೆಗಳಾಗಿ ಹಿಂಸಿಸತೊಡಗುತ್ತದೆ. ಈ ಹೇರಿಕೆ ಕೇವಲ ಸಮಾಜದ್ದಲ್ಲ ನಮ್ಮೊಳಗಿನದೂ ಸಹ! ‘ಸಂಪ್ರದಾಯವನ್ನು ಬಿಟ್ಟು ನಡೆದಲ್ಲಿ ಏನಾದರೂ ಅವಘಡ ಸಂಭವಿಸಿದರೆ ಗತಿ ಏನು ಮುಂದೆ?!’ ಎನ್ನುವ ನಮ್ಮೊಳಗಿನ ಭೀತಿಯೇ ಅರ್ಧ ಮನುಷ್ಯರನ್ನು, ‘ಬಿಟ್ಟರೂ ಬಿಡಲಾರದೀ ಮಾಯೆ’ ಎಂದು ತ್ರಿಶಂಕು ಸ್ಥಿತಿಯಲ್ಲಿ ನೇತಾಡುವಂತೆ ಮಾಡುತ್ತದೆ. ಕಾಲಾಂತರದಲ್ಲಿ ಅಕ್ಷರ, ಹಣ, ಸಾರಿಗೆ ಮತ್ತು ಮಾಧ್ಯಮ ಇತ್ಯಾದಿ ಅನುಕೂಲತೆ ಎಲ್ಲರಿಗೂ ಎಟುಕತೊಡಗಿದಂತೆ, ಅಷ್ಟಿಷ್ಟು ಮೌಢ್ಯಗಳು, ಸಂಪ್ರದಾಯದ ಸಂಕೋಲೆಗಳು ಸಡಿಲಗೊಂಡರೂ, ತ್ರಿಶಂಕು ಸ್ಥಿತಿಯಿಂದ ಅಷ್ಟು ಸುಲಭದಲ್ಲಿ ಬಿಡುಗಡೆ ಸಿಗುವುದಿಲ್ಲ. ಬಾಲ್ಯದಿಂದಲೂ ಆರ್ಚರಣೆಯ ರೂಪದಲ್ಲಿ ಅವುಗಳನ್ನು ನೋಡುತ್ತಾ, ಕೆಲವೊಮ್ಮೆ ಆಚರಿಸುತ್ತಾ ಬರುವುದರಿಂದ ಹಿಂದಿನ ಸಂಪ್ರದಾಯಗಳ ಮೇಲೆ ಒಂಥರಾ ಪ್ರೀತಿ ಹುಟ್ಟಿಬಿಟ್ಟಿರುತ್ತದೆ. ಅವುಗಳ ಆಚರಣೆಗೆ ಈಗ ಯಾವ ಅರ್ಥ ಉಳಿಯದೇಯಿದ್ದರೂ ಆಚರಣೆಗಳನ್ನ ಉಳಿಸಿಕೊಳ್ಳುತ್ತೇವೆ ಅವುಗಳ ಮೇಲಿನ ಪ್ರೀತಿಯಿಂದಾಗಿ. ಕೆಲವೊಮ್ಮೆ ಅನಗತ್ಯವಾಗಿ. ಅವು ಮೌಢ್ಯಗಳಾಗಿ ನಮ್ಮನ್ನು ಆವರಿಸದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದೆ.

ಲೇಖಕಿ, ರಂಗ ಕಲಾವಿದೆ ಜಯಲಕ್ಷ್ಮಿ ಪಾಟೀಲ್ ಉತ್ತರ ಕರ್ನಾಟಕದ ಬಿಜಾಪುರ ಜಿಲ್ಲೆಯ ನಿಂಬಾಳದವರು. ನೀಲ ಕಡಲ ಭಾನು’ (ಕವನ ಸಂಕಲನ) ‘ಹೇಳತೇವ ಕೇಳ’ (ಮಹಿಳಾ ದೌರ್ಜನ್ಯದ ವಿರುದ್ಧದ ಲೇಖನ ಸಂಗ್ರಹದ ಪುಸ್ತಕದ) ‘ಮುಕ್ಕು ಚಿಕ್ಕಿಯ (ಕಾದಂಬರಿ) ವಿಜಯ್ ತೆಂಡೂಲ್ಕರ್ ಅವರು ಬರೆದ ಮರಾಠಿ ಮೂಲದ ನಾಟಕ ‘ಬೇಬಿ’ (ಅನುವಾದಿತ ನಾಟಕ) ಇವರ ಪ್ರಕಟಿತ ಕೃತಿಗಳು. ‘ಜನದನಿ’ (ಲೈಂಗಿಕ ದೌರ್ಜನ್ಯಗಳ ವಿರುದ್ಧ ಹೋರಾಡುತ್ತಿರುವ ಸಂಸ್ಥೆ) ಸಂಸ್ಥಾಪಕಿ. ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರಗಳಂಥ ಸಾಮಾಜಿಕ ಪಿಡುಗನ್ನು ತೊಲಗಿಸುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿಯನ್ನುಂಟು ಮಾಡುವ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

