Advertisement
ಹೊಷಾಯ್ ಹೊಸೆದ ಹೊಸ ಕತೆ….: ಶ್ರೀಧರ್‌ ಎಸ್.‌ ಸಿದ್ದಾಪುರ ಬರೆಯುವ ಪ್ರವಾಸ ಸರಣಿ

ಹೊಷಾಯ್ ಹೊಸೆದ ಹೊಸ ಕತೆ….: ಶ್ರೀಧರ್‌ ಎಸ್.‌ ಸಿದ್ದಾಪುರ ಬರೆಯುವ ಪ್ರವಾಸ ಸರಣಿ

ನಿಧಾನಕ್ಕೆ ನಾಲ್ಕಾರು ಬಾರಿ ಹತ್ತಿ ಇಳಿಯುತ್ತಾ ನನ್ನ ಕಾಲಿಗೆ ಬಲ ಬರಲು ಪ್ರಾರಂಭವಾಯಿತು! ನಿಧಾನವಾಗಿ ನನ್ನ ಕಾಲಿನ ಶಕ್ತಿ ಮರಳಿತು. ಮೊದಲಿನಂತಾದೆ. ಕೂಡಿಕೊಂಡ ನರಗಳೆರಡು ನೈಸರ್ಗಿಕ ವಿಧಾನದಲ್ಲೇ ಬೇರ್ಪಟ್ಟವು! ವಾವ್‌ ಅದ್ಭುತ! ಬದುಕಿನ ಆಸೆ ಕಳಕೊಂಡ ನಾನು ಮತ್ತೆ ಬದುಕ ಜೀವಿಸತೊಡಗಿದೆ. ತಾನು  ಹೊಷಾಯ್ ಆದರೂ ಬಾಹುಬಲಿಯ ಸೇವೆಗೆ ನಿಂತೆ! ಬೆಳಿಗ್ಗೆ ಬೇಗ ಬಂದು ಬಾಗಿಲು ತೆಗೆಯುವುದು. ದೇವಾಲಯದ ವಠಾರದ ಸ್ವಚ್ಛತೆ. ಬಂದವರಿಗೆ ಮಾಹಿತಿ ನೀಡುವುದು. ಪೂಜೆಗೆ ಬರುವ ಪುರೋಹಿತರಿಗೆ ಸಹಾಯ ಮಾಡುತ್ತಾ ನನ್ನ ಕೃತಜ್ಞತೆ ಸಲ್ಲಿಸುತ್ತಿದ್ದೇನೆ.
ಶ್ರೀಧರ್ಎಸ್.‌ ಸಿದ್ದಾಪುರ ಬರೆಯುವ “ಸಾಗುತ ದೂರ ದೂರ…” ಪ್ರವಾಸ ಸರಣಿಯಲ್ಲಿ ಕಾರ್ಕಳದ ಗೊಮ್ಮಟಗಿರಿಗೆ ಕೊಟ್ಟ ಭೇಟಿಯ ಕುರಿತ ಬರಹ

ಕಾರ್ಕಳದ ಗೊಮ್ಮಟ ಗಿರಿಯ ಪ್ರತೀ ಮೆಟ್ಟಿಲುಗಳು ಹೊಷಾಯ್ ಕತೆಯನ್ನು ಹೇಳುತ್ತವೆ. ಬದುಕಿನ ಬವಣೆಯ ಸಾರವನ್ನು ತೆರೆದಿಡುತ್ತದೆ. ಆತನ ಆರ್ತತೆ ಪ್ರತೀ ಮೆಟ್ಟಿಲುಗಳ ಮೇಲೆ ಪ್ರತಿಫಲಿಸುತ್ತದೆ.

ಯಾಕಾಗಿ ನಮ್ಮ ಹಿಂದಿನವರು ಬೆಟ್ಟದ ಮೇಲೆ ಇಲ್ಲ ದೊಡ್ಡ ಪೀಠದ ಮೇಲೆಯೇ ದೇವಾಲಯಗಳನ್ನು ನಿರ್ಮಿಸುತ್ತಿದ್ದರು? ಎಂಬ ಸಣ್ಣ ಜಿಜ್ಞಾಸೆ ನನ್ನನ್ನು ಸದಾ ಕಾಡುತ್ತಲೇ ಇತ್ತು. ಇಲ್ಲಿಯವರೆಗೆ ಅದಕ್ಕೊಂದು ಸಮರ್ಪಕವಾದ ಉತ್ತರ ದೊರೆತಿರಲಿಲ್ಲ. ಆದರೆ ಹೊಷಾಯ್‌ನ ಭೇಟಿ ಮಾಡಿ ಬಂದ ನಂತರ ಹೊಸ ಹೊಳಹು ಹೊಳೆಯಿತು. ನಿಮಗೂ ಹೊಳೆದರೆ ಹೇಳಿ.

*****

ಹುಚ್ಚು ಮಳೆ ಅಬ್ಬರ ಮತ್ತು ಕಾಫಿ ಕತೆಗಳು      

ನಾಲ್ಕು ದಿನಗಳಿಂದ ಹೊಡೆಯುತ್ತಿದ್ದ ಮಳೆ ಅಂದೂ ಬಿಡುವು ಕೊಟ್ಟಿರಲಿಲ್ಲ. ಮಳೆ ನೋಟಕ್ಕಾಗಿ ಹಾತೊರೆದು ಹೊರಟೆ. ಮಳೆ ಬಾರದೇ ನಾನು ಹೊರಡದೇ ಇದ್ದಿದ್ದರೆ ಹೊಷಾಯ್ ಆಗಲಿ ಈ ಕತೆಯ ಭೇಟಿಯೇ ಆಗುತ್ತಿರಲಿಲ್ಲ! ಕಾಲ ನಿರ್ಣಯದ ಕಸರತ್ತು.

ಎರಡು ಅಡ್ಡಾಗಳ ನಡುವೆ!

ಹೊತ್ತು ಹುಟ್ಟುವ ಮುಂಚೆ ಹೆಬ್ರಿಯ ಭಟ್ಟರ ಹೋಟೆಲಿನಲ್ಲಿ ಕಾಫಿ ಸಮಾರಾಧನೆ! ಅವರ ಕಷ್ಟ ಸುಖ ವಿಚಾರಿಸಿ ಎರಡೆರಡು ಹಬೆಯಾಡುವ ಕಡಬು ಹೊಡೆದು ಹೊರಟೆವು. ನೀವು ಹೆಬ್ರಿಗೆ ಬಂದರೆ ಅಥೆಂಟಿಕ್ ಆಹಾರಕ್ಕಾಗಿ ಹಪಹಪಿಸುವವರಾದರೆ ಆಗುಂಬೆ ರಸ್ತೆಯಲ್ಲಿನ ಭಟ್ಟರ ಹೋಟೆಲ್ ಬಹಳ ಅನನ್ಯವಾದ ಹೋಟೆಲ್‌. ನಿಮ್ಮ ರುಚಿ ಮೊಗ್ಗುಗಳನ್ನು ಬಡಿದೆಬ್ಬಿಸುವ ಹೋಟೆಲ್. ಇಲ್ಲಿನ ಶ್ಯಾವಿಗೆ, ಕಡಬು ಮುಂತಾದ ದೇಸಿ ತಿನಿಸುಗಳು ಮನತಣಿಸುತ್ತವೆ. ಒಂದು ಕಾಲದಲ್ಲಿ ಬಡ್ಕಿಲಾಯ ಹೋಟೆಲ್ ಎಂಬ ಹೆಸರು ಹೊತ್ತು ಇದೀಗ ಭಟ್ಟರ ಹೋಟೆಲ್ ಆಗಿ ಹೆಸರು ಬದಲಿಸಿ ಕೂತಿದೆ. ಅನನ್ಯ ರುಚಿಯ ಹಬೆಯನ್ನು ಪಸರಿಸಿದ ಬಡ್ಕಿಲಾಯರ ಮುಂದುವರಿಕೆಯತೆ ಭಟ್ಟರ ಹೋಟೆಲ್ ಕಾರ್ಯ ನಿರ್ವಹಿಸುತ್ತಿದೆ. ಭಟ್ಟರು ಪ್ರೀತಿಯಿಂದ ಕೊಟ್ಟ ಹಲಸಿನಕಾಯಿ ತಣ್ಣಗೆ ಕಾರ್‌ ಡಿಕ್ಕಿಯಲ್ಲಿ ಕುಳಿತಿತ್ತು! ಮನೆಗೆ ತಂದು ವಾರ ಕಳೆದರೂ ಹಣ್ಣಾಗಲಿಲ್ಲ! ಚಿಗುರೇ ಕೊಯ್ದಿರಬೇಕು! ಅವರ ಕತೆಗೆ ಕಿವಿಯಾಗುತ್ತಲೇ ಹುಚ್ಚು ಮಳೆ ಅಟಕಾಯಿಸಿಕೊಂಡಿತು.

ವರಂಗದ ಬಸದಿ ನೋಡಿ ಬರುತ್ತಲೇ ಕಾಫಿ ಹುಚ್ಚು ಅಟಕಾಯಿಸಿಕೊಂಡಿತು!   ಎಂತಹ ಹೊಟ್ಟೆ ಬಾಕನೆಂದು ಕಣ್ಣು ಹಾಕಬೇಡಿ! ಕಡಬು ಹೊಡೆದ ಮೇಲೆ ಕಾಫಿನಾ ಅಂತ ಕಣ್ಣು ಅರಳಿಸಬೇಡಿ. ನಾನಿರುವುದೇ ಹಾಗೆ. ಕಡು ಕಾಫೀ ಮೋಹಿ. ಕಾರ್ಕಳದ ಆನೆ ಕೆರೆಯ ಸನಿಹದ ರಂಗನಾಥ ಕೆಫೆಗೆ ಕಾಲಿಟ್ಟು  ಕಾಫಿಗೆ ಆರ್ಡರಿಸಿ ಕೆರೆ ನೋಡುತ್ತಾ ಕಾಲು ಚಾಚಿದೆ. ಕಾರ್ಕಳದ ಅಥೆಂಟಿಕ್‌ ಆಹಾರದ ಅಡ್ಡಾ ರಂಗನಾಥ ಕೆಫೆ. ಇಲ್ಲಿನ ಶ್ಯಾವಿಗೆ ದಾಲ್‌ ಸವಿದವನೇ ಬಲ್ಲ! ಕ್ಷಮಿಸಿ ಹೆಚ್ಚು ಹೇಳಲಾರೆ ನಾಲಿಗೆ ನೀರೂರಿಸುತ್ತಿದೆ.

ಪರಿಚಾರಕ ತಂದಿಟ್ಟ ಕಾಫಿಯ ಡಿಕಾಕ್ಷನ್ ಹಾಲು ಸೇರದೆ ಹಾಗೆ ಹಾಗೇ ಉಳಿದಿತ್ತು. ಏನು ಮ್ಯಾಜಿಕ್‌ ಮಾಡಿದ್ದನೋ? ಎಷ್ಟು ಕಾದರೂ ಸೇರದೆ ಇದ್ದುದ ನೋಡಿ ಪರಿಚಾರಕನಲ್ಲಿ ಕೇಳಿದಾಗ `ನೀವೇ ತಿರುಗಿಸಬೇಕು’ ಎಂದ! ಅರರೇ ಎನ್ನುತ್ತಾ ಚಮಚ ತಿರುವಿ ಗಂಟಲು ಒದ್ದೆ ಮಾಡಿದೆ. ಅಬ್ಬಾ ಅದ್ಭುತ ರುಚಿ! ರಂಗನಾಥ ಕೆಫೆಯ ಅದ್ಭುತ ರುಚಿಯ ಕಾಫಿಗೆ ಮರುಳಾದೆ!

ಅದೇ ಕಾಫಿಯ ನೆನೆಯುತ್ತಾ ಕಾರು ಹತ್ತಿದೆ. ಗುಡ್ಡವೇರುವಾಗಲೂ ಕಾಫಿ ನೆನಪುಗಳು! ನಾವಾಗಿಯೇ ತಿರುಗಿಸದ ಹೊರತು ಇಲ್ಲಿ ಏನೂ ಆಗದು. ಸ್ವಪ್ರಯತ್ನ ಬೇಕೇ ಬೇಕು! ಎಂಬ ಹೊಸ ಹೊಳಹೊಂದು ನನ್ನೊಡಲ ಸೇರಿತ್ತು. ಜೊತೆಗೆ ಮತ್ತೊಂದು ಅಚ್ಚರಿಯೂ ಜೊತೆಗೆ ಸೇರಬಹುದೆಂಬ ಸಣ್ಣ ಅಂದಾಜು ನನಗಿರಲಿಲ್ಲ.

ಮಿಲಿಯಾಂತರ ವರ್ಷಗಳಿಂದ ಕುಳಿತ ಬಲಿತ ಕಲ್ಲುಗಳ ಬಗೆದು ಕಟ್ಟಿದ ಕತ್ತಲೆ ಬಸದಿ ಹೊಕ್ಕೆವು. ದೇವರನ್ನು ಮಾತಾಡಿಸಿ, ಪ್ರದೀಪ್‌ ಚಂದ್ರನಲ್ಲಿ ಇತಿಹಾಸ ಕೆದಕಿ ಗೊಮ್ಮಟ ಗಿರಿಗೆ ಅಡಿ ಇಟ್ಟೆ.

ಬೆಟ್ಟವ ಪಳಗಿಸಿ ವಿರಾಗಿಯನ್ನು ಕಡೆದು ನಿಲ್ಲಿಸಿದ ಗಿರಿ. ಗಿರಿ ಹಿಂದಿನ ಕಣಿವೆಯಿಂದ ನಿಧಾನಕ್ಕೆ ಎತ್ತಿ ನಿಲ್ಲಿಸಿ ಪ್ರತಿಷ್ಠಾಪಿಸಲಾಗಿದೆ. ಬೆಟ್ಟದ ಬಗಲಿನ ಕಲ್ಲು ಬಳಸಿ ಈ ಬಾಹುಬಲಿಯನ್ನು ಕೆತ್ತಿದ್ದಾರೆ. ಉಳಿದ ತೀರ್ಥಂಕರರ ಚಿಕ್ಕ ಚಿಕ್ಕ ಚಂದದ ಮೂರ್ತಿಗಳನ್ನು ದೊಡ್ಡ ಪಾಗಾರದ ಸುತ್ತ ಮಲ್ಲಿಕಾಫರ್‌ನ ದಾಳಿಯ ಮುನ್ಸೂಚನೆಯವರೆಗೆ ಅವಕ್ಕೆಲ್ಲಾ ಸುಂದರವಾದ ಗೂಡನ್ನು ನಿರ್ಮಿಸಿ ಕಾಫಿಡಲಾಗಿತ್ತು! ತದನಂತರ ದಕ್ಷಿಣ ಭಾರತಕ್ಕೆ ದಾಳಿಯ ಸಮಯದಲ್ಲಿ ಅವನ್ನೆಲ್ಲಾ ಬೆಟ್ಟದ ಸನಿಹ ಹೂತಿಟ್ಟು ಕಾಫಿಟ್ಟರು. ದೇವರನ್ನೇ ಅಕ್ಷರಶಃ ಹೂತಿಟ್ಟರು! ಕಾಫಿಟ್ಟವರು ಅಲ್ಲಿ ಹೂತಿದ್ದೆ ಎಂಬುದನ್ನೇ ಮರೆತು ಬಿಟ್ಟರು. ಶತಮಾನಗಳ ಭವಣೆಯ ನಂತರ ಕಾಲ ಗರ್ಭದಲ್ಲಿ ಅವಿತ ಕೆಲ ತೀರ್ಥಂಕರರ ಮೂರ್ತಿಗಳನ್ನು ಹೊರತೆಗೆದು ಬಾಹುಬಲಿಯ ಮೂರ್ತಿಯ ಹಿಂಬಂದಿಯಲಿ ಜೋಡಿಸಲಾಯಿತು. ನಮ್ಮ ದುರಾದೃಷ್ಟವಶಾತ್ ಎಲ್ಲವೂ ಸಿಕ್ಕಿಲ್ಲ ಕೆಲವಷ್ಟೇ. ಇವನ್ನೆಲ್ಲಾ ನಮಗೆ ಅಚ್ಚು ಕಟ್ಟಾಗಿ ವಿವರಿಸಿದವರು ಹೊಷಾಯ್‌ ಕರುಣಾಕರ ಆಳ್ವ!! ಹೆಸರೇ ವಿಚಿತ್ರವಾಗಿದೆಯೆಲ್ಲ ಎಂದು ಆತನ ವಿಚಾರಿಸಿದಾಗ ಆತ ತನ್ನ ಕರುಣಾಜನಕ ಕತೆಯನ್ನು ಹೇಳಿದ.

*****

“೧೮೯೫ನೆಯ ಇಸವಿ. ತನ್ನಜ್ಜ ಹಿಂದೂ ಧರ್ಮವನ್ನು ತೊರೆದು ಕಾಲದ ಹೊಡೆತಕ್ಕೆ ಸಿಕ್ಕಿ ಮತಾಂತರಗೊಂಡ. ಅವನಿಗಾಗಲೇ ೮ ಮಕ್ಕಳು. ನನ್ನಪ್ಪನೂ ಕ್ರಿಶ್ಚಿಯನ್‌ ಆದ. ಆದರೆ ಅಪ್ಪನ ಹೆಸರು ಕರುಣಾಕರ ನನ್ನೊಂದಿಗೆ ಹಾಗೇ ಪಯಣಿಸಿತು. ನನ್ನ ಜೊತೆಗೂ ಅಂಟಿಕೊಂಡು ಬಂದಿತು! ಹೊಷಾಯ್‌ ಕರುಣಾಕರ ಆಳ್ವ ಆದೆ. ನನ್ನ ಅಜ್ಜನ ತಲ್ಲಣಗಳು  ಏನಿದ್ದವೋ? ಕಲಿತ ಧರ್ಮವನ್ನು ಬಿಟ್ಟು ಹೊಸತನಕ್ಕೆ ಒಗ್ಗಬೇಕಾದ ಅನಿವಾರ್ಯತೆ. ಯಾವ ಧರ್ಮವಾದರೇನು ಬಿಡಿ. ಬದುಕಲು ಧರ್ಮದ ಹಂಗೇಕೆ? ನನಗೆ ಮಕ್ಕಳಾಗುವವರೆಗೂ ಬದುಕು ನಿರಾಯಾಸವಾಗಿ ಸಾಗಿತ್ತು.  ಬದುಕು ಹೀಗೆ ಕಾಲನ ಹೊಡೆತಕ್ಕೆ ಸಿಕ್ಕು ಛಿದ್ರವಾಗುತ್ತದೆ ಎಂದು ನಾನೆಣಿಸಿಯೇ ಇರಲಿಲ್ಲ.”

ಕೇವಲ ಒಂದು ಧರ್ಮದವರ ಕತೆಗಳನ್ನಷ್ಟೇ ಅಲ್ಲದೆ ಒಂದು ಸಮಾಜದ ಪಲ್ಲಟಗಳನ್ನು, ಅಂದಿನ ದುರ್ದಿನಗಳನ್ನು ಬಿಂಬಿಸುವ ಇಂತಹ ಸ್ಥಳ ಪುರಾಣಗಳು ಸೋಜಿಗವನ್ನು ಹಾಗೂ ಇಂದಿನ ಬದುಕಿಗೆ ಹೊಸ ನೋಟಗಳನ್ನು ಒದಗಿಸುತ್ತದೆ. ಇಲ್ಲಿನವರ ಮೇಲಾದ ಅನ್ಯರ ದಾಳಿಯ ವಿವರಗಳನ್ನೆಲ್ಲಾ ಈ ಅನಾಥ ಮೂರ್ತಿಗಳು ಮತ್ತು ಅವರ ಕ್ರೌರ್ಯವನ್ನು ಬಿಂಬಿಸುವುದರ ಜೊತೆ ಜೊತೆಗೆ ನಮ್ಮವರ ಕೈಲಾಗದಿರುವಿಕೆಯನ್ನೂ, ಎಲ್ಲದ್ದಕ್ಕೂ ಹೊಂದಿಕೊಂಡು ಹೋಗುವ, ಬಾಗುವ ನಮ್ಮವರ ಹೇಡಿತನದ ಅಸಲಿಯತ್ತನ್ನು ಅನಾವರಣಗೊಳಿಸುತ್ತಾ, ಹೊಸ ಹೊಳಹಗೆ ನಮ್ಮನ್ನು ತೆರೆದುಕೊಳ್ಳುವಂತೆ ಮಾಡುತ್ತದೆ. ಹೊಸ ಹೊಳಹು ಹುಟ್ಟದೇ ಹೋದರೆ ಬದುಕು ನಿಂತ ನೀರಾಗುತ್ತದಲ್ಲವೇ?

*****

ಗೋಣು ಮುರಿದ ಹಕ್ಕಿ

ಹೊಷಾಯ್ ಅರುಹಿದ ಕತೆ ಹೀಗಿತ್ತು, “ಒಂದು ದಿನ ವಿಪರೀತ ಬೆನ್ನಿನ ಸೆಳಕು ಪ್ರಾರಂಭವಾಯಿತು. ದಿನ ಕಳೆದಂತೆ ಹೆಚ್ಚುತ್ತಾ ಹೋಯಿತು. ನಿಲ್ಲಲು ನಡೆಯಲು ಕಷ್ಟ ಪಡಬೇಕಾದ ಸ್ಥಿತಿ ಬಂದೊದಗಿತು. ಎಲ್ಲಾ ವೈದ್ಯರು ನಿಮಗಿನ್ನು ನಡೆಯಲು ಸಾಧ್ಯವಾಗಲ್ಲ! ನಿಮ್ಮ ಕಾಯಿಲೆಗೆ ಮದ್ದಿಲ್ಲ. ಉಳಿದ ಬದುಕಿಡಿ ಹೀಗೇ ಕಳೆಯಬೇಕು. ಬೆನ್ನುಹುರಿಯ ನರವೊಂದು ಸಂಪೂರ್ಣವಾಗಿ ಇನ್ನೊಂದರ ಮೇಲೆ ಕೂತಿದೆ. ಅದನ್ನು ಬೇರ್ಪಡಿಸಲು ಸಾಧ್ಯವೇ ಇಲ್ಲ ಎಂದು ಕೈಚಲ್ಲಿದರು. ನಾನೂ ಕೈ ಚೆಲ್ಲಿದೆ. ಹಲವು ತಿಂಗಳು ಮಗನ, ಮಗಳ ಆಶ್ರಯದಲ್ಲಿ ಕಳೆದೆ.

ಕೊನೆಗೊಂದು ದಿನ ಗೊಮ್ಮಟ ಗಿರಿಯ ನೆತ್ತಿ ಹತ್ತುವ ನಿರ್ಧಾರ ಮಾಡಿದೆ.  ನಡೆಯಲು ನಿಲ್ಲಲೂ ಆಗದ ಸ್ಥಿಯಲ್ಲಿ ನಿಧಾನಕ್ಕೆ ಒಂದೊಂದೇ ಮೆಟ್ಟಿಲೇರಿ ಮಗನ ಆಶ್ರಯದಲ್ಲಿ ಇಲ್ಲಿಗೆ ಬಂದೆ! ಮೊದಲ ಬಾರಿಯಂತೂ ವಿಪರೀತ ನೋವು ಪ್ರಾರಂಭವಾಯಿತು. ಮಲಗಿದ ಸ್ಥಿತಿಯಲ್ಲೇ ಹಿಮ್ಮರಳಿದೆ. ಹೀಗೆ ಮೇಲಿಂದ ಮೇಲೆ ಮೂರ್ನಾಲ್ಕು ಬಾರಿ ಬಂದ ನಂತರ ಸುಧಾರಣೆ ಕಾಣತೊಡಗಿತು.

ನಿಧಾನಕ್ಕೆ ನಾಲ್ಕಾರು ಬಾರಿ ಹತ್ತಿ ಇಳಿಯುತ್ತಾ ನನ್ನ ಕಾಲಿಗೆ ಬಲ ಬರಲು ಪ್ರಾರಂಭವಾಯಿತು! ನಿಧಾನವಾಗಿ ನನ್ನ ಕಾಲಿನ ಶಕ್ತಿ ಮರಳಿತು. ಮೊದಲಿನಂತಾದೆ. ಕೂಡಿಕೊಂಡ ನರಗಳೆರಡು ನೈಸರ್ಗಿಕ ವಿಧಾನದಲ್ಲೇ ಬೇರ್ಪಟ್ಟವು! ವಾವ್‌ ಅದ್ಭುತ! ಬದುಕಿನ ಆಸೆ ಕಳಕೊಂಡ ನಾನು ಮತ್ತೆ ಬದುಕ ಜೀವಿಸತೊಡಗಿದೆ. ತಾನು  ಹೊಷಾಯ್ ಆದರೂ ಬಾಹುಬಲಿಯ ಸೇವೆಗೆ ನಿಂತೆ! ಬೆಳಿಗ್ಗೆ ಬೇಗ ಬಂದು ಬಾಗಿಲು ತೆಗೆಯುವುದು. ದೇವಾಲಯದ ವಠಾರದ ಸ್ವಚ್ಛತೆ. ಬಂದವರಿಗೆ ಮಾಹಿತಿ ನೀಡುವುದು. ಪೂಜೆಗೆ ಬರುವ ಪುರೋಹಿತರಿಗೆ ಸಹಾಯ ಮಾಡುತ್ತಾ ನನ್ನ ಕೃತಜ್ಞತೆ ಸಲ್ಲಿಸುತ್ತಿದ್ದೇನೆ.

ಈ ಬೆಟ್ಟದ ಬಾಹುಬಲಿ ತನ್ನ ಬದುಕು ಬದಲಿಸಿದ ಪರಿಗೆ ಬೆರಗಾಗಿದ್ದೇನೆ. ಉಸಿರಿರುವ ತನಕ ಇವನ ಸೇವೆ ಮಾಡುತ್ತಾ ಕಳೆಯಬೇಕೆಂದಿರುವೆ!” ಎನ್ನುತ್ತಾ ನನ್ನ ಜೊತೆಗೆ ಫೋಟೋಗೆ ಫೋಸುಕೊಟ್ಟರು. ಅವರ ಆತ್ಮೀಯತೆ ಮಾತಿನ ವೈಖರಿಗೆ ಬೆರಗಾದೆ.

*****

ಒಂಚೂರು ಇತಿಹಾಸ

ಸುರುಳಿ ಕೂದಲು, ಬೊಗಸೆಕಣ್ಣು, ನೀಳಕೈಯ ೮೦ ಟನ್ ತೂಕ. ಈತನ ನೋಡಲು ಕಾತರನಾಗಿ ರಂಗನಾಥ ಕೆಫೆಯಲ್ಲಿ ಕಾಫಿ ಹೀರಿ ಹೊರಟಾಗ ಸಣ್ಣ ಜಿಟಿ ಜಿಟಿ ಜೀರಿಗೆ ಮಳೆ ನೆಲಕ್ಕೆ ಮುತ್ತಿಕ್ಕುತ್ತಿತ್ತು.

ಶ್ರವಣ ಬೆಳಗೊಳದ (೯೮೩) ಬಾಹುಬಲಿಯಿಂದ ಸ್ಫೂರ್ತಿ ಪಡೆದು ೧೪೩೨ ರಲ್ಲಿ ವೀರಪಾಂಡ್ಯ ಬೈರಸ ವಡೆಯರ್ ನಿರ್ಮಿಸಿದ ಬಹೃತ್‌ ಶಿಲ್ಪ. ಆತ ಸಂತಾರಾದ ರಾಜವಂಶದವ. ಏಕಶಿಲೆಯ ೪೨ ಅಡಿ ಬೃಹತ್ ಬಾಹುಬಲಿಯ ಮೂರ್ತಿಯನ್ನು ಅಚ್ಚುಕಟ್ಟಾಗಿ ಕೆತ್ತಿದವನು ಕಲ್ಕುಡಾ. ಮೂರ್ತಿಗೆ ಯಾವುದೇ ಧಕ್ಕೆಯಾಗದಂತೆ ಕೆತ್ತಿ ಬೃಹತ್ ಪರ್ವತದ ಮೇಲೆ ತಂದು ನಿಲ್ಲಿಸಿದ್ದು, ಅಂದಿನ ಕಾಲದ ಇಂಜಿನಿಯರಿಂಗ್‌ ಜ್ಞಾನದ ದ್ಯೋತಕ. ೪೨ ಅಡಿಯ ಬಾಹುಬಲಿ ಎದುರಿಗೆ ಮಾನಸ್ತಂಭ ಮತ್ತು ಯಕ್ಷ. ಸನಿಹದಲ್ಲೇ ಬೃಹತ್‌ ಕೆರೆಯೊಂದಿದೆ.

*****

ಇತಿಹಾಸಕ್ಕೊಂದು ಕರಿ ಚುಕ್ಕಿ

ಅಂದಿನ ರಾಜ ವೀರ ಪಾಂಡ್ಯ ಬೈರರಸ ಕಲ್ಕುಡಾ ಶಿಲ್ಪಿಯ ಕೈ ಮತ್ತು ಕಾಲು ಕಡಿದು ಹಾಕಿದ್ದು ಕೇಳಿ ನಾನು ನಿಸ್ತೇಜನಾದೆ!! ರಾಜ ಜೈನನಾಗಿದ್ದು ಇಂತಹ ಇನ್ನೊಂದು ಮೂರ್ತಿ ಕೆತ್ತಬಾರದೆಂದು ಕಲ್ಕುಡನ ಕೈ ಕಡಿದಿದ್ದು ಅವಮಾನವೀಯ ಕೃತ್ಯ. ಕಲ್ಕುಡನ ನಿರಂತರ ತಲ್ಲಣಗಳು ಸದಾ ಕಾಡುತ್ತಲೇ ಇರುತ್ತದೆ. ಆತನ ಮನೆಯವರ ತಲ್ಲಣಗಳ ನೆನೆದು ಮನಸ್ಸು ಮರುಗಿತು. ಕಲ್ಕುಡನ ಪ್ರಕರಣ ನನ್ನೆದೆಯ ಕವಾಟಗಳನ್ನು ಕುಟುಕುತ್ತಲೇ ಇದೆ. ಆಡಳಿತದ ಹೆಬ್ಬಾಗಿಲಲಿ ಇವರ ಈ ಕೃತ್ಯ ಕ್ಷಮಾರ್ಹವಲ್ಲ. ತನ್ನ ಅದ್ಭುತ ಪ್ರತಿಭೆಯನ್ನು ಪ್ರದರ್ಶಿಸಿದ್ದೇ ಆತನ ಅಪರಾಧವೇ? ಎಂಬಿತ್ಯಾದಿ ಪ್ರಶ್ನೆಯ ಅಲೆ ತಾಕುತ್ತಲೇ ಇದೆ.

ಇತಿಹಾಸದ ಮಗ್ಗುಲಿಗೆ ಮೆತ್ತಿದ ಹೊಸ ಕತೆಗಳಿಗೆ ಕಿವಿಯಾಗುವ ಆಸೆಯೊಂದಿಗೆ, ಮತ್ತೊಂದು ಅಚ್ಚರಿಗಾಗಿ ಕಾಯುತ್ತಾ ವಿರಾಗಿಗೆ ವಿಶಾದದ ಕೈ ಬೀಸಿದೆ!

About The Author

ಶ್ರೀಧರ್‌ ಎಸ್.‌ ಸಿದ್ದಾಪುರ

ಶ್ರೀಧರ್‌ ಎಸ್.‌ ಸಿದ್ದಾಪುರ ವೃತ್ತಿಯಲ್ಲಿ ಶಿಕ್ಷಕರು. ತಿರುಗಾಟ, ಅನ್ವೇಷಣೆ ಒಂದು ಹುಚ್ಚು. ಬರಹ, ಓದು ಅಚ್ಚುಮೆಚ್ಚು. ಹಕ್ಕಿ, ಜೇಡಗಳಲ್ಲಿ ವಿಶೇಷ ಆಸಕ್ತಿ.  “ಅಲೆಮಾರಿಯ ಅಂತರಂಗ” ಇಪ್ಪತ್ತು ವರ್ಷದ ಅಲೆದಾಟ, ಅನುಭವಗಳ ಪ್ರವಾಸ ಕಥನ.

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ