ಕ್ರಮೇಣ ನಮಗೆ ಊರು ಪರಿಚಯವಾಗತೊಡಗಿತ್ತು. ಅದು ತುಂಬಾ ಮುಖ್ಯ. ಯಾವ ಊರಿನಲ್ಲಿ ನಾವು ಬೆಳೆಯಲು ಬಯಸುತ್ತೇವೋ ಅಲ್ಲಿನ ಜನರ ಜೊತೆಗೆ ಬೆಳೆಯಬೇಕೆ ವಿನಹ ನಮ್ಮಷ್ಟಕ್ಕೆ ನಾವು ಇರಲು ಸಾಧ್ಯವಿಲ್ಲ. ಇದೆ ರೀತಿ ನಾವು ನಮ್ಮ ಹೊಲದ ಬಳಿಯ ಜನರಿಗೂ ಹತ್ತಿರವಾಗಬೇಕಿತ್ತು. ಅದು ಇನ್ನೂ ಸಾಧ್ಯವಾಗಿರಲಿಲ್ಲ. ನಮಗಿನ್ನೂ ಅಲ್ಲೊಂದು ಮನೆ ಸಿಕ್ಕಿರಲಿಲ್ಲ. ಆದರೆ ಅದಕ್ಕಿಂತ ಮೊದಲು ಶಂಭುಲಿಂಗ ಹೆಗಡೆ ಅವರು ನಮಗೆ ಸಿಕ್ಕಿದ್ದು ತುಂಬಾ ಅನುಕೂಲ ಆಗಿತ್ತು. ಅವರು ನಮಗೆ ಬೇಕಾದ ಮೂಲಭೂತ ಸೌಕರ್ಯಗಳನ್ನೆಲ್ಲ ಚಿಟಿಕೆ ಹೊಡೆದಂತೆ ಕೊಡಿಸಿದ್ದರು.
ಗುರುಪ್ರಸಾದ ಕುರ್ತಕೋಟಿ ಬರೆಯುವ ‘ಗ್ರಾಮ ಡ್ರಾಮಾಯಣ’ ಅಂಕಣದಲ್ಲಿ ಹೊಸ ಬರಹ

ಅವತ್ತು ಹೊಲದಲ್ಲಿ ಎರಡು ಸಸಿಗಳನ್ನು ನೆಟ್ಟಿದ್ದು ಅಂತಹ ದೊಡ್ಡ ಕೆಲಸವಲ್ಲವಾದರೂ ನನ್ನ ಮಟ್ಟಿಗೆ ಅದೊಂದು ಮೊದಲ ದೊಡ್ಡ ಹೆಜ್ಜೆ ಆಗಿತ್ತು. ನನ್ನದೇ ಹೊಲ ಆಗಿದ್ದರೂ ಕೂಡ ಅಲ್ಲಿಯವರೆಗೆ ನನ್ನ ಕೈಯಿಂದ ನಾನು ಅಲ್ಲಿ ಏನೂ ಮಾಡಿರಲಿಲ್ಲ. ಹೊಸದಾಗಿ ಏನೋ ಮಾಡುವಾಗ ಉತ್ಸಾಹಕ್ಕಿಂತ ಹೆಚ್ಚಾಗಿ ಅಲ್ಲೊಂದಿಷ್ಟು ಚಟುವಟಿಕೆಗಳು ನಡೆಯಬೇಕು. ಅದು ಇನ್ನೂ ಅವತ್ತಿನ ತನಕ ನಡೆದಿದ್ದಿಲ್ಲ…

ಹೊಲ ಮಾಡಬೇಕು ಎಂಬ ಉಮೇದಿ ಇರುವ ಅನೇಕರ ಕತೆ ವಿಪರೀತ ಉತ್ಸಾಹದಿಂದಲೇ ಶುರುವಾಗುತ್ತದೆ. ಹೊಲವೇನೋ ಖರೀದಿಸುತ್ತಾರೆ. ಅಲ್ಲಿ ಏನು ಮಾಡಬೇಕು ಅಂತ ಅವರಿವರು ಹೇಳಿದ್ದನ್ನು ಪಾಲಿಸುತ್ತಾ ಹೋಗುತ್ತಾರೆ. ಕೊನೆಗೂ ಅಲ್ಲಿ ಎಲ್ಲವೂ ಖಾಲಿ ಖಾಲಿ, ಇವರ ಹಣ ಕೂಡ! ಯಾಕೆಂದರೆ ಅವರಿಗೆ ಮಾಡಲು ಏನೂ ಗೊತ್ತಿರುವುದಿಲ್ಲ. ಅವರು ಅಲ್ಲಿ ಹೋಗಿ ಇರುವುದಕ್ಕೆ ಸಾಧ್ಯವಾಗುವುದಿಲ್ಲ. ಯಾರನ್ನೋ ನಂಬಿಕೊಂಡು ರಿಮೋಟ್ ಕಂಟ್ರೋಲ್ ಮಾಡಲು ಹೋಗಿ ಕೈಯಲ್ಲಿ ಇದ್ದದ್ದನ್ನೆಲ್ಲ ಕಳೆದುಕೊಳ್ಳುತ್ತಾರೆ. ನನ್ನ ಗೆಳೆಯರೊಬ್ಬರಂತೂ ಹೊಲದ ಬೇಲಿಗೆ ಹತ್ತು ಲಕ್ಷ ಖರ್ಚು ಮಾಡಿದ್ದರು. ಎರಡು ಕುಟುಂಬಗಳನ್ನು ತಂದು ಕೆಲಸಕ್ಕೆ ಇಟ್ಟಿದ್ದರು. ಅವರಿಗೆ ವಾಸಕ್ಕೆ ಸುಸಜ್ಜಿತ ಮನೆ, ಒಂದಿಷ್ಟು ದೇಸಿ ಹಸುಗಳು. ಸಿಕ್ಕಾಪಟ್ಟೆ ಲಕ್ಷಗಳನ್ನು ಸುರಿದರು, ಆದರೆ ಕೃಷಿ ಜ್ಞಾನದ ಬಗ್ಗೆ ಅಲಕ್ಷ ತೋರಿದರು. ಆಗಾಗ ಫೋನ್ ಮಾಡಿ ಆಳುಗಳೊಂದಿಗೆ ವಿಚಾರಿಸಿದಾಗಲೆಲ್ಲ “ಕಳೆ ಕೀಳುತ್ತಿದ್ದೇವೆ ಸರ್” ಅಂತಲೇ ಆಳುಗಳು ಹೇಳುತ್ತಿದ್ದರು. ಇವರೂ ನಂಬಿದರು. ಇವರು ಇಲ್ಲಿ ಬೆವರು ಹರಿಸಿ ಗಳಿಸಿದ ದುಡ್ಡನ್ನೆಲ್ಲ ಹೊಲದ ಮೇಲೆ ಮತ್ತೆ ಮತ್ತೆ ಸುರಿದರು. ಆಳುಗಳು ಕಳೆ ಕೀಳುತ್ತಿದ್ದೇವೆ ಅಂತ ಹೇಳುತ್ತಲೇ ಇವರ ದುಡ್ಡು ಕಿತ್ತರು. ಅಲ್ಲಿ ಏನೂ ಬೆಳೆಯಲಿಲ್ಲ. ಕೊನೆಗೆ ಯಾವುದು ಬೇಡ ಅಂತ ಆಳುಗಳನ್ನು ಬಿಡಿಸಿ, ದನಕರುಗಳನ್ನು ಮಾರಿ ಜಮೀನನ್ನು ಯಾರಿಗಾದರೂ ಮಾರುವ ಯೋಚನೆಯಲ್ಲಿದ್ದಾರೆ. ಅಲ್ಲಿ ಸದ್ಯಕ್ಕೆ ಕಳೆ ಬಿಟ್ಟರೆ ಏನೂ ಇಲ್ಲ!

ಆದರೆ ನನ್ನ ಕಾರ್ಯ ವಿಧಾನ ಅವರಿಗಿಂತ ಭಿನ್ನವಾಗಿತ್ತು. ಹೊಲದ ಮೇಲೆ ಬೇಕಾ ಬಿಟ್ಟಿ ದುಡ್ಡು ಸುರಿಯುವುದು ನನಗೆ ಇಷ್ಟ ಇರಲಿಲ್ಲ. ತುಂಬಾ ನಿಧಾನವಾಗಿ ಆದರೆ ಸ್ಪಷ್ಟವಾಗಿ ಗುರಿಯತ್ತ ಸಾಗುವುದು ನನ್ನ ಆದ್ಯತೆಯಾಗಿತ್ತು. ನಾನು ಬೇರೆ ಯಾರಿಗೋ ಸಾಧಿಸಿ ತೋರಿಸಬೇಕು ಎಂಬ ಯಾವುದೇ ಗಡಿಬಿಡಿಯಲ್ಲಿ ಇರಲಿಲ್ಲ. ಇಷ್ಟು ವರ್ಷಗಳು ಸಮಾಜಕ್ಕೆ ತೋರಿಸಲು ಅಂತ ಬದುಕಿದ್ದಾಯ್ತು. ಈಗ ನನಗೆ ನಾನು ಏನಂತ ಸಾಕ್ಷಾತ್ಕಾರ ಮಾಡಿಕೊಳ್ಳಬೇಕಿತ್ತು. ನಾನು ಮಾಡಬೇಕೆಂದು ಹೊರಟಿದ್ದನ್ನ ನಾನು ಸ್ವತಃ ಕಲಿತಿದ್ದೆ. ಈಗಾಗಲೇ ಬೆಂಗಳೂರಿನಲ್ಲಿ ಕುಳಿತುಕೊಂಡೆ ಸಾಕಷ್ಟು ಕೃಷಿ ಅನುಭವವನ್ನೂ ಪಡೆದಿದ್ದೆ. ಕೆಲಸವನ್ನೂ ಬಿಟ್ಟಿದ್ದೆನಾದ್ದರಿಂದ ನನಗೆ ಆ ಬಂಧವೂ ಇರಲಿಲ್ಲ. ಹೀಗಾಗಿ ನನಗೆ ಉತ್ಸಾಹದ ಜೊತೆಗೆ ನಾವು ಮಾಡುತ್ತಿದ್ದುದರ ಮೇಲೆ ನಂಬಿಕೆ ಇತ್ತು. ಹಾಗಂತ ದಿನನಿತ್ಯದ ಖರ್ಚಿಗೆ ಹಣ ಬೇಕಲ್ಲ! ಅದಕ್ಕಂತಲೇ ಬೆಂಗಳೂರಿನಲ್ಲಿ ಮಣ್ಣು ರಹಿತ ಕೃಷಿ ವಿಧಾನದ ಅಳವಡಿಕೆಯ ಬಗ್ಗೆ ತರಬೇತಿ ಕೊಡುತ್ತಿದ್ದೆ. ಈಗಲೂ ಮುಂದುವರಿಸಿದ್ದೇನೆ. ಇದರಿಂದ ಕಲಿಕೆಯ ಜೊತೆಗೆ ಗಳಿಕೆಯೂ ಇತ್ತು. ಆದರೂ ಹಳ್ಳಿಗೆ ಮರಳಿ ರೈತರನ್ನು ಬೆಳೆಸುವ ದೂರದೃಷ್ಟಿತ್ವದಿಂದ ಕೂಡಿದ್ದ ನನ್ನ ಯೋಜನೆಗೆ ಇಷ್ಟು ವರ್ಷಗಳು ಹಿಂಬಡ್ತಿಯಾಗಿತ್ತು. ಅದೊಂಥರಾ ಬಿಸಿ ತುಪ್ಪ. ಕೆಲಸವೇನೋ ಬಿಟ್ಟಿದ್ದೆ. ನನಗೆ ಇಷ್ಟವಾದ ಕಾಯಕದಲ್ಲೇ ಪರ್ಯಾಯ ಗಳಿಕೆಯನ್ನೂ ಗಳಿಸುತ್ತಿದ್ದೆ, ಆದರೂ ಏನೋ ಅಸಮಾಧಾನ. “ಎಲ್ಲಿ ಇರ್ತೀವೋ ಅಲ್ಲೇ ನೆಮ್ಮದಿ ಕಾಣಬೇಕು” ಅಂತ ಆಶಾ ಆಗಾಗ ತಿವಿದು ಎಚ್ಚರಿಸುತ್ತಿದ್ದಳಾದರೂ ಇಷ್ಟು ದಿನಗಳು ಮನಸ್ಸಿಗೆ ಏನೋ ಕಳವಳ.

ಸದ್ಯ ಹಳ್ಳಿಗೆ ಮರಳುವ ನನ್ನ ಕನಸು ನನಸಾಗುವ ಸಂದರ್ಭ ಈಗಲಾದರೂ ಬಂದಿತ್ತು. ಅದೂ ಅಲ್ಲದೆ ನನ್ನ ಯೋಜನೆಗಳಿಗೆ ಯಾವಾಗಲೂ ಪ್ರೋತ್ಸಾಹಿಸುತ್ತಿದ್ದ ಹೆಂಡತಿ ಮತ್ತು ನನ್ನಂತಹದೇ ಹುಚ್ಚಿರುವ ಶಿಷ್ಯ ಜೊತೆಗಿದ್ದರಲ್ಲ! ಮತ್ತೇನು ಬೇಕು?!

*****

ನಾವು ಬೆಳ್ಳನಕೇರಿಯಿಂದ ಬಿಸಲಕೊಪ್ಪದ ಕತ್ರಿಗೆ (cross) ಬಂದಾಗ ರಾತ್ರಿ ೮ ಗಂಟೆಯಾಗಿತ್ತು. ಅಲ್ಲಿ ಭಟ್ಟರ ಅಂಗಡಿಯಲ್ಲಿ ಶಂಭುಲಿಂಗ ಮಾವ ಇನ್ನೂ ಇದ್ದರು. ಪ್ರತಿ ದಿನ ೭ ಗಂಟೆಗೆ ಅವರು ಅಲ್ಲಿಗೆ ಬರುವುದು ವಾಡಿಕೆ. ಭಟ್ಟರ ಅಂಗಡಿಯಲ್ಲಿ ಅವರ ಮಿತ್ರರ ಜೊತೆಗೆ ಕುಳಿತು ಹರಟೆ ಹೊಡೆದು, ಇನ್ನೊಂದೆರಡು ಕವಳ ಜಗಿದು, ಉಗಿದು ಸಂಜೆ ಎಂಟೂವರೆಗೆ ಮನೆಗೆ ಹೋದರೆಂದರೆ ಅವತ್ತಿನ ದಿನ ಮುಗಿದಂತೆ. ನಮಗೂ ಕೂಡ ಅದೊಂದು ಒಳ್ಳೆಯ ಅಡ್ಡಾ ಆಗಿತ್ತು. ಅಲ್ಲಿ ಬರುತ್ತಿದ್ದ ಹೊಸಬರ ಪರಿಚಯವನ್ನೂ ಮಾವ ಮಾಡಿಸುತ್ತಿದ್ದರು.

“ಇವು ಬೆಂಗಳೂರವು. ಇವನ ಹೆಸರು ಗುರುಪ್ರಸಾದ ಅಂತ ಹೇಳಿ. ಇಂವ ಅವನ ಶಿಷ್ಯ. ಅಲ್ಲಿಂದ ಬಂದು ಇಲ್ಲಿ ಕೃಷಿ ಮಾಡ್ತಾ ಇದ್ದ. ನಮ್ಮನೇಲೆ ಬಾಡಿಗೆ ಇದ್ದ… ಬೆಂಗಳೂರಲ್ಲೂ ಅದೆಂತದೋ ಮಣ್ಣಿಲ್ಲದೆ ಬೆಳೀತ್ನಡ, ಅದರ ಬಗ್ಗೆ ಟ್ರೇನಿಂಗ ಕೂಡಾ ಕೊಡ್ತಾ ಇದ್ದ… ಏ ಗುರುಪ್ರಸಾದ ನೀನೆ ಹೇಳ ಅದರ ಬಗ್ಗೆಯ…” ಅಂತ ತಾವು ಬಾಯಿಯಲ್ಲಿ ತುಂಬಿಕೊಂಡಿದ್ದ ಕವಳ ಉಗಿಯಲು ಪಕ್ಕಕ್ಕೆ ಹೋಗುತ್ತಿದ್ದರು. ಇದು ಮಾಮೂಲಿಯಾಗಿ ಅವರು ನಮ್ಮನ್ನು ಹೊಸಬರಿಗೆ ಪರಿಚಯಿಸುತ್ತಿದ್ದ ಬಗೆ. ಹೊಸಬರಿಗೂ ನಾವು ಮಾಡುತ್ತಿದ್ದುದರ ಬಗ್ಗೆ ವಿಶೇಷ ಕುತೂಹಲ ಉಕ್ಕುತ್ತಿತ್ತು. “ಹೌದ?” ಅಂತ ಆಶ್ಚರ್ಯದಿಂದ ನಮ್ಮ ಮುಖ ನೋಡಿ ನಮ್ಮ ಪೂರ್ವಾಪರ ವಿಚಾರಿಸುತ್ತಿದ್ದರು. ನಾವು ಮಾಡುತ್ತಿರುವ ಕೃಷಿ ಸಾಹಸದ ಬಗ್ಗೆ ಅಭಿಮಾನ ತೋರುತ್ತಿದ್ದರು. ಹಳ್ಳಿ ಬಿಟ್ಟು ನಗರಕ್ಕೆ ಹೋಗಿದ್ದ ತಮ್ಮ ಮಕ್ಕಳಿಗೂ ಈ ಬುದ್ಧಿ ಬರಲಿ ಅನ್ನುತ್ತಿದ್ದರೇನೊ! ಇನ್ನೂ ಕೆಲವರು ಇವರಿಗೆ ಬುದ್ಧಿ ಇಲ್ಲ, ಇದ್ದ ಕೆಲಸ ಬಿಟ್ಟು ಇದೆಂತಹ ಹುಚ್ಚು ಇವಕ್ಕೆ ಅಂತ ನಗುತ್ತಿದ್ದರೆನೋ!

ಹೊಲದ ಮೇಲೆ ಬೇಕಾ ಬಿಟ್ಟಿ ದುಡ್ಡು ಸುರಿಯುವುದು ನನಗೆ ಇಷ್ಟ ಇರಲಿಲ್ಲ. ತುಂಬಾ ನಿಧಾನವಾಗಿ ಆದರೆ ಸ್ಪಷ್ಟವಾಗಿ ಗುರಿಯತ್ತ ಸಾಗುವುದು ನನ್ನ ಅದ್ಯತೆಯಾಗಿತ್ತು. ನಾನು ಬೇರೆ ಯಾರಿಗೋ ಸಾಧಿಸಿ ತೋರಿಸಬೇಕು ಎಂಬ ಯಾವುದೇ ಗಡಿಬಿಡಿಯಲ್ಲಿ ಇರಲಿಲ್ಲ. ಇಷ್ಟು ವರ್ಷಗಳು ಸಮಾಜಕ್ಕೆ ತೋರಿಸಲು ಅಂತ ಬದುಕಿದ್ದಾಯ್ತು. ಈಗ ನನಗೆ ನಾನು ಏನಂತ ಸಾಕ್ಷಾತ್ಕಾರ ಮಾಡಿಕೊಳ್ಳಬೇಕಿತ್ತು. 

ಒಟ್ಟಿನಲ್ಲಿ ಕ್ರಮೇಣ ನಮಗೆ ಊರು ಪರಿಚಯವಾಗತೊಡಗಿತ್ತು. ಅದು ತುಂಬಾ ಮುಖ್ಯ. ಯಾವ ಊರಿನಲ್ಲಿ ನಾವು ಬೆಳೆಯಲು ಬಯಸುತ್ತೇವೋ ಅಲ್ಲಿನ ಜನರ ಜೊತೆಗೆ ಬೆಳೆಯಬೇಕೆ ವಿನಹ ನಮ್ಮಷ್ಟಕ್ಕೆ ನಾವು ಇರಲು ಸಾಧ್ಯವಿಲ್ಲ. ಇದೆ ರೀತಿ ನಾವು ನಮ್ಮ ಹೊಲದ ಬಳಿಯ ಜನರಿಗೂ ಹತ್ತಿರವಾಗಬೇಕಿತ್ತು. ಅದು ಇನ್ನೂ ಸಾಧ್ಯವಾಗಿರಲಿಲ್ಲ. ನಮಗಿನ್ನೂ ಅಲ್ಲೊಂದು ಮನೆ ಸಿಕ್ಕಿರಲಿಲ್ಲ. ಆದರೆ ಅದಕ್ಕಿಂತ ಮೊದಲು ಶಂಭುಲಿಂಗ ಹೆಗಡೆ ಅವರು ನಮಗೆ ಸಿಕ್ಕಿದ್ದು ತುಂಬಾ ಅನುಕೂಲ ಆಗಿತ್ತು. ಅವರು ನಮಗೆ ಬೇಕಾದ ಮೂಲಭೂತ ಸೌಕರ್ಯಗಳನ್ನೆಲ್ಲ ಚಿಟಿಕೆ ಹೊಡೆದಂತೆ ಕೊಡಿಸಿದ್ದರು. ಅದು ಗ್ಯಾಸ್ ಕನೆಕ್ಷನ್ ಇರಬಹುದು, ಸಹಕಾರಿ ಸಂಘದಲ್ಲಿ ಬೇಕಾದ ಸೌಕರ್ಯಗಳಿರಬಹುದು… ಒಟ್ಟಿನಲ್ಲಿ ಅವರ ಸಂಗ ನಮಗೆ ತುಂಬಾ ಖುಷಿ ಕೊಟ್ಟಿದ್ದು ಹೌದು.

ಅಷ್ಟರಲ್ಲಿ ನಾಗಣ್ಣನಿಗೆ ಅಡುಗೆಗೆ ಕೆಲವು ಸಾಮಗ್ರಿಗಳು ಬೇಕಿದ್ದುದು ನೆನಪಾಯ್ತು. ಅಲ್ಲೇ ಭಟ್ಟರ ಅಂಗಡಿಯಲ್ಲಿ ಅವುಗಳನ್ನು ಕೊಂಡೆವು. ಅವರಿಗೆ ಅಡುಗೆ ಮಾಡುವುದು ತುಂಬಾ ಇಷ್ಟದ ಕೆಲಸ. ವಿಧ ವಿಧದ ತಿಂಡಿ ತಿನಿಸುಗಳನ್ನು ರುಚಿಯಾಗಿ ಮಾಡುತ್ತಿದ್ದರು. ಹೀಗಾಗಿ ಅದಕ್ಕೆ ಏನೇನು ಬೇಕು ಎಲ್ಲವನ್ನೂ ಅವರು ನೆನಪು ಮಾಡಿ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದರು. ಈ ವಿಷಯ ಬಿಟ್ಟರೆ ನಾಗಣ್ಣನ ನೆನಪಿನ ಶಕ್ತಿ ಅಷ್ಟಕ್ಕಷ್ಟೆ! ಅವರು ತುಂಬಾ ದೊಡ್ಡ ಮರೆಗುಳಿ. ಕೀಲಿ ಕೈ ಎಲ್ಲೋ ಇಟ್ಟುಬಿಡುತ್ತಿದ್ದರು, ಮೊಬೈಲು ಮರೆಯುತ್ತಿದ್ದರು. ಅವರು ಅಯ್ಯೋ ರಾಮಾ ಅಂದು ಬಿಟ್ಟರೆಂದರೆ ನನ್ನ ಎದೆ ಹೊಡೆದುಕೊಳ್ಳುತ್ತಿತ್ತು. ಹಾಗೆ ಅವರು ಹೇಳುತ್ತಿದ್ದುದು ಏನಾದರೂ ಅಂತಹ ಭಾನಗಡೆ ನಡೆದಾಗಲೇ. ಅವರ ಬಳಿ ಎಷ್ಟೊಂದು ಟಾರ್ಚುಗಳು ಇದ್ದವು. ಟಾರ್ಚು ಈಗಾಗಲೇ ಇದೆ ಎಂಬುದನ್ನು ಮರೆತು ಪ್ರತಿ ಸಲ ಹೊಸ ಟಾರ್ಚು ತೊಗೊಂಡಿದ್ದಕ್ಕೇನೆ ನಿಮ್ಮ ಬಳಿ ಇಷ್ಟೆಲ್ಲಾ ಟಾರ್ಚುಗಳು ಇವೆ ಅಲ್ವೇ ನಾಗಣ್ಣ? ಅಂತ ನಾನು ತಮಾಷೆ ಮಾಡುತ್ತಿದ್ದೆ.

ಅವತ್ತು ರಾತ್ರಿ ಈರುಳ್ಳಿ, ಬಟಾಟಿ, ಮೆಣಸಿನಕಾಯಿ ಹಾಗೂ ಟೊಮೇಟೊ ಹೆಚ್ಚಿ, ಕೆಲವು ಮಾಸಾಲೆ ಪದಾರ್ಥಗಳು, ಬೆಳ್ಳುಳ್ಳಿಯಾದಿಗಳನ್ನು ಸೇರಿಸಿ ನಾಗಣ್ಣ ಮಾಡಿದ್ದ ಮಸಾಲೆ ಅನ್ನವಂತೂ ತುಂಬಾ ರುಚಿಯಾಗಿತ್ತು. ಹೊಲದಲ್ಲಿ ಅಡ್ಡಾಡಿ ದಣಿದಿದ್ದ ಇಬ್ಬರೂ ಸ್ವಲ್ಪ ಜಾಸ್ತಿನೆ ತಿಂದೆವೇನೋ! ಆಶಾಳಿಗೆ ನಾನು ರಾತ್ರಿ ಅಷ್ಟೆಲ್ಲ ಅನ್ನ ತಿಂದು ಮಲಗುವುದು ಸುತರಾಂ ಇಷ್ಟವಿಲ್ಲ. ಅವಳು ನಾನು ಹೀಗೆ ಅನ್ನ ತಿಂದು ಡುಮ್ಮನಾಗುತ್ತೆನೇನೋ ಅಂತ ಹೆದರಿ ಆಮೇಲಾಮೇಲೆ ಬೆಂಗಳೂರಿನಿಂದ ಕಡಕ್ ರೊಟ್ಟಿ ಕೊಟ್ಟು ಕಳಿಸುತ್ತಿದ್ದಳು. ನಾಗಣ್ಣ ಅವರ ಅಡಿಗೆಯಲ್ಲಿ ಅನ್ನದ ಪಾಲು ಜಾಸ್ತಿ ಇರುತ್ತಿತ್ತು. ಹಾಗೂ ಅವರ ಕೈ ಕೂಡ ದೊಡ್ಡದು. ಒಮ್ಮೆ ಅಡಿಗೆ ಮಾಡಿದರೆ ನಾಲ್ಕೈದು ಜನಕ್ಕೆ ಸಾಕಾಗುವಷ್ಟು ಮಾಡುತ್ತಿದ್ದರು. ಹೀಗಾಗಿ ಆಮೇಲಾಮೇಲೆ ಅವರು ಅಡಿಗೆ ಮಾಡುವಾಗ ನಾನೂ ಒಂದು ಕಣ್ಣು ಇಡುತ್ತಿದ್ದೆ. ಅಕ್ಕಿ ಅಷ್ಟೆಲ್ಲ ಬೇಡ ನಾವಿರೋದು ಇಬ್ರೆ ತಾನೇ ಅಂತ ಎಚ್ಚರಿಸುತ್ತಿದ್ದೆ!

*****

ಮರುದಿನ ಎದ್ದಾಗ ಮತ್ತೆ ಬೆಳಗಾಗಿತ್ತು! ಯಾಕೆಂದರೆ ಗಡದ್ದಾಗಿ ತಿಂದು ಮಲಗಿದ್ದ ಇಬ್ಬರೂ ಎದ್ದಿದ್ದೆ ತಡವಾಗಿ. ಹಾಗೆ ಏಳುವುದಕ್ಕೆ ಮತ್ತೊಂದು ಕಾರಣ ಬಿಟ್ಟುಬಿಡದೆ ಹೊಡೆಯುತ್ತಿದ್ದ ಅವತ್ತಿನ ಮಳೆ. ಹೀಗಾಗಿ ಹೊಲಕ್ಕೆ ಹೋಗುವ ಯೋಚನೆ ಅಂತೂ ಇರಲಿಲ್ಲ. ಅಲ್ಲಿಗೆ ಹೋಗಿ ಏನು ಮಾಡಲೂ ಸಾಧ್ಯವಿರಲಿಲ್ಲ. ಮನೆಯ ಹೊರಗೆ ಹೋಗಿ ನಿಂತೆ. ಯಥಾ ಪ್ರಕಾರ ಶಂಭುಲಿಂಗ ಮಾವ ತಮ್ಮ ನಿತ್ಯದ ಕೆಲಸದಲ್ಲಿ ತೊಡಗಿದ್ದರು. ನಾನು ಅವರನ್ನು ಕಾಣಲು ಕೊಟ್ಟಿಗೆಯ ಬಳಿ ಹೋದೆ.

“ಕಡಿಗೋ.. ರಾತ್ರಿ ನಿದ್ದೆ ಸರಿ ಬಂತಾ… ಏನ್ ಮಳೆ ಮಾರಾಯ. ರಾತ್ರಿಯಿಂದ ಹೋಯ್ತಾ ಇದ್ದು ನೋಡು. ಹಿಂಗೆ ಆದ್ರೆ ಅಡಿಕೆ ಕೊಳೆ ಬಂದು ಕೊನೆ ಕೊಯ್ಯೋ ಕೆಲಸಾನೆ ಇಲ್ಲೇ. ಎಲ್ಲಾ ಉದುರಿ ಹೋಗ್ತು” ಅಂದ್ರು. ಅವತ್ತಿನ ಮಳೆ ಅಡ್ಡ ಮಳೆಯಾಗಿತ್ತು.

ವಾತಾವರಣದಲ್ಲಿ ಆರ್ದ್ರತೆ ಹೆಚ್ಚಾದಾಗ ಹೂವು ಉದ್ರೋದು, ಅಡಿಕೆ ಗೊನೆಗೆ ಕೊಳೆ ಬರೋದು ಸಾಮಾನ್ಯ. ಇದರಿಂದ ಅಡಿಕೆಯ ಉತ್ಪಾದನೆ ಗಣನೀಯವಾಗಿ ಕುಂಟಿತ ಆಗುತ್ತೆ. ಇದಕ್ಕೆ ಕಾರಣ ಒಂತರಹದ ಶಿಲೀಂದ್ರ (Fungus). ಅದನ್ನು ತಡೆಯೋಕೆ ಹಾಗೂ ನಿರ್ಮೂಲನ ಮಾಡೋಕೆ ಮೈಲುತುತ್ತ ಹಾಗೂ ಸುಣ್ಣವನ್ನು ಮಿಶ್ರಣ ಮಾಡಿ ಅಡಿಕೆ ಗೊನೆಗಳಿಗೆ ಸಿಂಪಡನೆ ಮಾಡುತ್ತಾರೆ. ಅದಕ್ಕೆ ಆ ಕಡೆ ಮದ್ದು ಹೊಡೆಯೋದು ಅಂತಾರೆ. ಅಲ್ಲಿನ ರೈತರಿಗೆ ಅದೊಂದು ದೊಡ್ಡ ಆತಂಕದ ಸಮಯ. ಕೊಳೆಗಿಂತಲೂ ಭಯಂಕರ ಸಮಸ್ಯೆಯೆಂದರೆ ಆ ಮದ್ದನ್ನು ಹೊಡೆಯಲು ಆಳುಗಳು ಸಿಗೋದಿಲ್ಲ. ಸಿಕ್ಕರೂ ಅವರದು ತುಂಬಾ ಬೇಡಿಕೆ. ಆ ಸಮಯದಲ್ಲಿ ಆಳುಗಳ ಬುಕಿಂಗ್ ಮಾಡೋದು ಅಂದರೆ ಚಲನಚಿತ್ರದ ಪ್ರಸಿದ್ಧ ನಾಯಕರ ಕಾಲ್ ಶೀಟ್ ತೆಗೆದುಕೊಳ್ಳುವದಕ್ಕೆ ಸಮ! ಈ ಸಮಸ್ಯೆಗಳಿಗೆಲ್ಲ ಕಾರಣ ರಾಸಾಯನಿಕಗಳ ವಿಪರೀತ ಬಳಕೆ ಹಾಗೂ ತೋಟದಲ್ಲಿನ ವೈವಿಧ್ಯತೆಯ ಕೊರತೆ. ಏಕಬೆಳೆ ಬೆಳೆಯುವ ಕಾರಣದಿಂದಲೇ ಹೀಗೆಲ್ಲ ಸಮಸ್ಯೆಗಳು ಉಂಟಾಗುತ್ತಿವೆ. ಅದರ ಜೊತೆಗೆ ಮಳೆಯೂ ಕೂಡ ಸಹಕರಿಸುತ್ತಿಲ್ಲ.

ರಾಸಾಯನಿಕಗಳನ್ನು ಬಳಸದೆ ಕೆಲವು ಒಳ್ಳೆಯ ಶಿಲೀಂದ್ರಗಳನ್ನೇ ಬಳಸಿ ರೋಗ ತರುವ ಶಿಲೀಂದ್ರಗಳನ್ನು ನಿಯಂತ್ರಿಸಬಹುದು ಅಂತ ನಾನು ಪ್ರಯೋಗ ಮಾಡಿ ತಿಳಿದಿದ್ದೆ. ಬೆಂಗಳೂರಿನಲ್ಲಿ ತರಕಾರಿ ಬೆಳೆಯುವಾಗ ಕೂಡ ಕೆಲವೊಮ್ಮೆ fungus ಬರುತ್ತಿತ್ತು. ಅದನ್ನು ನಿಯಂತ್ರಿಸಲು ನಾನು ಗಾಂಧಿ ಕೃಷಿ ವಿಜ್ಞಾನ ಕೇಂದ್ರದಿಂದ ಕೆಲವು ಒಳ್ಳೆಯ ಶಿಲೀಂದ್ರಗಳನ್ನು ತಂದು ಸಿಂಪಡಿಸಿ ಯಶಸ್ಸು ಕಂಡಿದ್ದೆ. ಅದೇ ರೀತಿ ನನ್ನ ಬಾವ ಗಣಪತಿ ಹೆಗಡೆ ಅವರ ಅಡಿಕೆ ತೋಟದಲ್ಲಿ ಯಾಕೆ ಇದೆ ರೀತಿ ಪ್ರಯತ್ನಿಸಬಾರದು ಅಂತ ಯೋಚನೆ ಮಾಡಿ GKVK ನಲ್ಲಿ ನನಗೆ ಪರಿಚಯವಿದ್ದ ಪ್ರೊ. ಶಿವಕುಮಾರ್ ಸರ್ ಅನ್ನುವವರನ್ನು ಭೇಟಿಯಾಗಿದ್ದೆ. ಅಡಿಕೆಯ ಸಮಸ್ಯೆಗೂ ಇದೆ ರೀತಿಯ ಪರಿಹಾರ ಇದೆಯೇ ಅಂದಾಗ ಅವರೊಂದು ಅದ್ಭುತ ಮಿಶ್ರಣ ಮಾಡಿಕೊಟ್ಟಿದ್ದರು. ಅದು ಕೆಲವು ಶಿಲೀಂದ್ರಗಳ ಮಿಶ್ರಣ. ಇದು ಹೇಗೆ ಅಂದರೆ ಮುಳ್ಳನ್ನು ಮುಳ್ಳಿನಿಂದ ತೆಗೆಯುವ ವಿಧಾನ. ಈ ಶಿಲೀಂದ್ರಗಳನ್ನು ನೀರಿನಲ್ಲಿ ಒಂದು ಪ್ರಮಾಣದಲ್ಲಿ ಬೆರೆಸಿ ಸಿಂಪಡಿಸಿದಾಗ ಅಡಿಕೆಯ ಗೊನೆಯಲ್ಲಿ ಸುಪ್ತವಾಗಿ ಇರುತ್ತವೆ. ಕೊಳೆ ಸೃಷ್ಟಿಸುವ ಶಿಲೀಂದ್ರ ಬಂದಾಗ ಇವು ಜಾಗೃತವಾಗಿ ಅವುಗಳನ್ನು ಹಿಮ್ಮೆಟ್ಟಿಸುತ್ತವೆ. ಇದು ತುಂಬಾ ನೈಸರ್ಗಿಕವಾದ, ಸುರಕ್ಷಿತವಾದ ವಿಧಾನ. ಇದನ್ನು ಪ್ರಯೋಗಿಸಲು ಶುರು ಮಾಡಿದ ಮೇಲೆ ನನ್ನ ಬಾವನ ತೋಟದಲ್ಲಿ ಅಡಿಕೆ ಉದುರುವುದು ಗಣನೀಯವಾಗಿ ತಗ್ಗಿ ಇಳುವರಿ ಹೆಚ್ಚಾಯ್ತು. ಅವನು ಪ್ರತಿ ವರ್ಷ ಇದನ್ನೇ ಉಪಯೋಗಿಸುತ್ತಿದ್ದಾನೆ. ಅದನ್ನೇ ಶಂಭುಲಿಂಗ ಮಾವನಿಗೂ ಹೇಳಿದೆ. ಆಗವರು ಆಗಲಿ ಅದನ್ನೂ ಒಮ್ಮೆ ಪ್ರಯೋಗಿಸುವಾ ಅಂದರು. ವಿಚಿತ್ರ ಅಂದರೆ ಇಂತಹ ಕೋಟಿಗಟ್ಟಲೆ ಒಳ್ಳೆಯ ಸೂಕ್ಷ್ಮಾಣು ಜೀವಿಗಳು ನಮ್ಮ ದೇಸಿ/ನಾಟಿ ಆಕಳಿನ ಸಗಣಿಯಲ್ಲಿ ಹೇರಳವಾಗಿ ಇರುತ್ತವೆ. ಆದರೆ ಆ ವಿಷಯ ಹಾಗೂ ಅದನ್ನು ಬಳಸುವುದು ಎಷ್ಟೋ ರೈತರಿಗೆ ಗೊತ್ತಿಲ್ಲ. ಗೊತ್ತಿದ್ದವರೂ ಬಳಸುವ ಮನಸ್ಸು ಮಾಡುತ್ತಿಲ್ಲ. ಯಾಕೆಂದರೆ ಸುಲಭವಾಗಿ ರಾಸಾಯನಿಕಗಳು ಸಿಗುತ್ತಿವೆಯಲ್ಲ!

“ಇದರ ಜೊತೆಗೆ ಜೀವಾಮೃತ ಕೂಡ ಹಾಕಿ ಮಾವ. ನಿಮ್ಮ ತೋಟ ಇನ್ನೂ ಚೆನ್ನಾಗಿ ಆಗುತ್ತೆ” ಅಂದೇ.

“ಜೀವಾಮೃತ ಅಂದ್ರೆ ಎಂತದು? ಪೇಟೆ ಬದಿಯವ ಆದರೂ ಏನೇನೋ ಹೊಸ ವಿಷಯ ಹೇಳ್ತಿ ಬಿಡು ಮಾರಾಯ ನೀನು. ಹೇಗೆ ಮಾಡೋದು ಹೇಳು, ಮಾಡ್ತೀನಿ” ಅಂತ ಉತ್ಸಾಹದಿಂದ ಕೇಳಿದರು. ನನಗೂ ಅದೇ ಬೇಕಿತ್ತು ಅವರಿಗೆ ವಿವರಿಸಲು ಶುರು ಮಾಡಿದೆ….

(ಮುಂದುವರಿಯುವುದು)