Advertisement
ಅಂಡಮಾನ್ ಪ್ರವೇಶ ಬಿಂದು ಪೋರ್ಟ್ ಬ್ಲೇರ್ ದ್ವೀಪದಲ್ಲಿ: ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನ

ಅಂಡಮಾನ್ ಪ್ರವೇಶ ಬಿಂದು ಪೋರ್ಟ್ ಬ್ಲೇರ್ ದ್ವೀಪದಲ್ಲಿ: ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನ

ಸಣ್ಣಗೆ ಕುಲುಕಾಡುತ್ತಿರುವ ಸಮುದ್ರ ಆಕಾಶದ ಕೆಳಗೆ ಇನ್ನೊಂದು ಅಂಚಿನಲ್ಲಿ ನಾನು ನಿಂತಿರುವ ಮಟ್ಟಕ್ಕಿಂತ ಎತ್ತರದಲ್ಲಿರುವಂತೆ ತೋರುತ್ತಿತ್ತು. ಕಣ್ಣುಗಳ ತುಂಬಾ ತುಂಬಿಹೋದ ಸಮುದ್ರ ನನ್ನ ದೇಹವನ್ನು ತುಸು ಅಲ್ಲಾಡಿಸಿದಂತಾಗಿ ಸ್ವಲ್ಪ ಪ್ರಜ್ಞೆ ಕಳೆದುಕೊಂಡಂತಾಯಿತು. ಮನುಷ್ಯನ ದೇಹದಲ್ಲಿರುವುದು ಶೇಕಡ 65% ನೀರೆ ತಾನೆ. ಪಕ್ಕದಲ್ಲಿ ನಿಂತಿದ್ದ ಸುಶೀಲ ನನ್ನ ಮುಖವನ್ನು ಪ್ರಶ್ನಾರ್ಥಕವಾಗಿ ನೋಡಿದಳು. ನಾನು ಆಲೋಚನೆಯಿಂದ ಹಿಂದಕ್ಕೆ ಬಂದು ಕಣ್ಣುಗಳನ್ನು ಸಮುದ್ರದಿಂದ ಪಕ್ಕಕ್ಕೆ ತಿರುಗಿಸಿದೆ. ಆದರೆ ಸುತ್ತಲೂ ಸಮುದ್ರವೆ, ಕಣ್ಣುಗಳ ತುಂಬಾ ನೀಲಿ ಸಮುದ್ರವೇ ತುಂಬಿ ತುಳುಕಾಡುತ್ತಿತ್ತು.
ಅಂಡಮಾನ್-ನಿಕೋಬಾರ್‌ ದ್ವೀಪಗಳ ಪ್ರವಾಸದ ಕುರಿತು ಡಾ. ಎಂ. ವೆಂಕಟಸ್ವಾಮಿ ಬರಹದ ಮುಂದುವರಿದ ಭಾಗ

ಅಂಡಮಾನ್ ನಿಕೋಬಾರ್ ದ್ವೀಪಗಳಿಗೆ ಪೋರ್ಟ್ ಬ್ಲೇರ್ ರಾಜಧಾನಿ. 1789ರಲ್ಲಿ ಅಂಡಮಾನ್‌ನ ಚಾಥಮ್ ದ್ವೀಪದಲ್ಲಿ ಬ್ರಿಟಿಷರು ಮೊದಲಿಗೆ ಈಸ್ಟ್ ಇಂಡಿಯಾ ಕಂಪನಿ ವಸಾಹತುವನ್ನು ಸ್ಥಾಪಿಸಿದರು. ಕಂಪನಿಯ ಆರ್ಚಿಬಾಲ್ಡ್ ಬ್ಲೇರ್ ಹೆಸರನ್ನು ಈ ದ್ವೀಪಕ್ಕೆ ಇಡಲಾಯಿತು. ಮಧ್ಯಾಹ್ನ ಊಟ ಮುಗಿಸಿದ ಮೇಲೆ ಹೋಟಲ್ ಚಾಲಕ ಕಾರಿನಲ್ಲಿ ಪೋರ್ಟ್ ಬ್ಲೇರ್ ಸುತ್ತಿಸಿಕೊಂಡು ಬಂದನು. ರಾತ್ರಿ ಊಟ ಮಾಡಿ ಮಲಗಿದ ಮೇಲೆ ಹೋಟಲಿನವರು, ನಾಳೆ ಬೆಳಿಗ್ಗೆ 5:15ಕ್ಕೆ ತಯಾರಾಗಿರಿ ಎಂದು ತಿಳಿಸಿ, ಮೊಬೈಲ್‌ನಲ್ಲಿ 4:45ಕ್ಕೆ ಅಲಾರಂ ಇಟ್ಟುಕೊಂಡು ಮಲಗಿಕೊಂಡೆವು. ಬೆಳಿಗ್ಗೆ ಎದ್ದು ಗಡಿಯಾರ ನೋಡಿದಾಗ 4:40ರ ಸಮಯ. ಎದ್ದು ಸಣ್ಣದಾಗಿ ಸ್ನಾನ ಮಾಡಿ ಬಟ್ಟೆ ಬದಲಾಯಿಸಿಕೊಂಡು ತಯಾರಾದೆವು. ಸರಿಯಾಗಿ 5:10ಕ್ಕೆ ಕೆಳಕ್ಕೆ ಇಳಿದಿದ್ದೆ ವಾಹನ ಬಂದು ನಿಂತಿತು. ಹೋಟಲಿನವರು ತಿಂಡಿಯನ್ನು ಪ್ಯಾಕ್ ಮಾಡಿಕೊಟ್ಟು ಮಧ್ಯಾಹ್ನಕ್ಕೆ ಹೋಟಲಿನಲ್ಲಿ ತಿಂದುಕೊಳ್ಳುವಂತೆ ತಿಳಿಸಿದರು.

ಪೋರ್ಟ್ ಬ್ಲೇರ್ ಹಡಗುದಾಣಕ್ಕೆ ಕರೆದೊಯ್ದ ಚಾಲಕ ನಮಗೆ ಎರಡು ಟೆಕೆಟ್‌ಗಳನ್ನು ಕೊಡಿಸಿ, ಒಂದು ಟೆಕೆಟ್, ಪೋರ್ಟ್ ಬ್ಲೇರ್‌ನಿಂದ ಯಾವ್‌ಲಕ್ ದ್ವೀಪಕ್ಕೆ, ಇನ್ನೊಂದು ಯಾವ್‌ಲಕ್‌ನಿಂದ ಪೋರ್ಟ್ ಬ್ಲೇರ್‌ಗೆ ವಾಪಸ್ ಬರುವುದಕ್ಕೆ. ನಮ್ಮ ಕ್ರೂಸರ್ ಪೋರ್ಟ್ ಬ್ಲೇರ್‌ನ ಹಡಗುದಾಣದಿಂದ ಬೆಳಿಗ್ಗೆ 6:10ಕ್ಕೆ ಹೊರಟಿತು. ಸಮುದ್ರ… ಸಮುದ್ರ… ನೀಲಿ ಸಮುದ್ರ. ಮಧ್ಯೆಮಧ್ಯೆ ಹಸಿರು ಗಿಡಮರಗಳನ್ನು ಬೋಗುಣಿಗಳಲ್ಲಿ ಪೇರಿಸಿಟ್ಟಂತೆ ಕಾಣಿಸುತ್ತಿದ್ದ ಸಣ್ಣಸಣ್ಣ ದ್ವೀಪಗಳು. ದಟ್ಟ ಹಸಿರು ದ್ವೀಪಗಳ ಸುತ್ತಲೂ ಬಿಳಿ ಅಂಚಿನ ಮರಳು ದಂಡೆಗಳು ಕಾಣಿಸುತ್ತಿದ್ದವು. ಸುನಾಮಿ ಬಂದಾಗ ಈ ಹಸಿರು ಬೋಗುಣಿಗಳು ಏನೆಲ್ಲ ತೊಂದರೆಗಳನ್ನು ಅನುಭವಿಸಿರಬಹುದು? ಎನ್ನುವ ಆಲೋಚನೆ ನನ್ನ ತಲೆಯಲ್ಲಿ ತೇಲಿಬಂದಿತು.

ಮೊದಲ ದಿನ ಸಮುದ್ರದ ಕೆಲವು ಅಡಿಗಳ ಮೇಲೆ ಕ್ರೂಸರ್‌ನಲ್ಲಿ ನಿಂತು ಬರೀ ಸಮುದ್ರವನ್ನೇ ನೋಡುತ್ತಿದ್ದಾಗ ನನಗೆ ಸಮುದ್ರದ ಬಗ್ಗೆ ಏನೇನೊ ಆಲೋಚನೆಗಳು ಬಂದು ಹಾಗೇ ನೋಡುತ್ತ ನಿಂತುಬಿಟ್ಟೆ. ಸಣ್ಣಗೆ ಕುಲುಕಾಡುತ್ತಿರುವ ಸಮುದ್ರ ಆಕಾಶದ ಕೆಳಗೆ ಇನ್ನೊಂದು ಅಂಚಿನಲ್ಲಿ ನಾನು ನಿಂತಿರುವ ಮಟ್ಟಕ್ಕಿಂತ ಎತ್ತರದಲ್ಲಿರುವಂತೆ ತೋರುತ್ತಿತ್ತು. ಕಣ್ಣುಗಳ ತುಂಬಾ ತುಂಬಿಹೋದ ಸಮುದ್ರ ನನ್ನ ದೇಹವನ್ನು ತುಸು ಅಲ್ಲಾಡಿಸಿದಂತಾಗಿ ಸ್ವಲ್ಪ ಪ್ರಜ್ಞೆ ಕಳೆದುಕೊಂಡಂತಾಯಿತು. ಮನುಷ್ಯನ ದೇಹದಲ್ಲಿರುವುದು ಶೇಕಡ 65% ನೀರೆ ತಾನೆ. ಪಕ್ಕದಲ್ಲಿ ನಿಂತಿದ್ದ ಸುಶೀಲ ನನ್ನ ಮುಖವನ್ನು ಪ್ರಶ್ನಾರ್ಥಕವಾಗಿ ನೋಡಿದಳು. ನಾನು ಆಲೋಚನೆಯಿಂದ ಹಿಂದಕ್ಕೆ ಬಂದು ಕಣ್ಣುಗಳನ್ನು ಸಮುದ್ರದಿಂದ ಪಕ್ಕಕ್ಕೆ ತಿರುಗಿಸಿದೆ. ಆದರೆ ಸುತ್ತಲೂ ಸಮುದ್ರವೆ, ಕಣ್ಣುಗಳ ತುಂಬಾ ನೀಲಿ ಸಮುದ್ರವೇ ತುಂಬಿ ತುಳುಕಾಡುತ್ತಿತ್ತು. ಕೆಲವು ನೂರು ವರ್ಷಗಳ ಹಿಂದೆ ಸಮುದ್ರಯಾನ ಮಾಡಿದ ಕೊಲಂಬಸ್, ಚಾರ್ಲ್ಸ್ ಲಯಲ್, ಚಾರ್ಲ್ಸ್ ಡಾರ್ವಿನ್ ಇನ್ನೂ ಅನೇಕರು ಸಮುದ್ರದ ಮೇಲೆ ಸುತ್ತುತ್ತಿರುವಾಗ ಏನೆಲ್ಲ ಆಲೋಚನೆಗಳು ಅವರನ್ನು ಕಾಡಿರಬೇಕು? ಎಷ್ಟೆಲ್ಲ ತೊಂದರೆಗಳನ್ನು ಅವರು ಅನುಭವಿಸಿರಬೇಕು ಎಂದುಕೊಂಡೆ.

(ಪೋರ್ಟ್ ಬ್ಲೇರ್ ಕಡಲಲ್ಲಿ ಸುಶೀಲ)

ಭೂಮಿಯನ್ನು ಸುತ್ತುವರಿದಿರುವ ನೀರನ್ನು ಐದು ಸಮುದ್ರಗಳಾಗಿ ವಿಭಾಗಿಸಲಾಗಿದೆ. ಅಟ್ಲಾಂಟಿಕ್, ಪೆಸಿಫಿಕ್, ಇಂಡಿಯನ್, ಆರ್ಕ್ಟಿಕ್ ಮತ್ತು ದಕ್ಷಿಣ ಸಮುದ್ರ (ಅಂಟಾರ್ಕ್ಟಿಕ್). ಕೊನೆ ಎರಡನ್ನು ಮೊದಲಿನ ಮೂರು ಸಮುದ್ರಗಳ ಜೊತೆಗೆ ಸೇರಿಸಲಾಗಿದೆ. ಉಪ್ಪಿನಿಂದ ಕೂಡಿದ ಈ ಸಮುದ್ರಗಳನ್ನು ನೀರುಗೋಳ ಎಂದು ಕರೆಯಲಾಗುತ್ತದೆ. ಭೂಮಿಯ ಶೇಕಡ 71% ಭಾಗವನ್ನು ಆವರಿಸಿಕೊಂಡಿರುವ ಈ ಸಮುದ್ರಗಳು (~3.6 X 10 X 108 ಚದರ ಕಿ.ಮೀ) ಹಲವು ಸಣ್ಣ ಭಾಗಗಳಿಂದಲೂ ಕೂಡಿವೆ. ಸಮುದ್ರದ ಅರ್ಧ ಭಾಗ 3000 ಮೀಟರುಗಳಿಗಿಂತ ಆಳವಿದೆ. ಸಮುದ್ರದ ಸರಾಸರಿ ಉಪ್ಪಿನಾಂಶ 3.5% ಇದ್ದು ಪ್ರಸ್ತುತ ಒಂದು ಲೆಕ್ಕಾಚಾರದಂತೆ ಸಮುದ್ರದಲ್ಲಿ 2,30,000 ಸಮುದ್ರ ಜೀವಿ ಪ್ರಭೇದಗಳಿವೆ. ಕಾಣದಿರುವ ಇನ್ನೂ 10 ಪಟ್ಟು ಜಾಸ್ತಿ ಜೀವಸಂಕುಲ ಇರಬಹುದೆಂದು ಊಹಿಸಲಾಗಿದೆ.

ಭೌಗೋಳಿಕವಾಗಿ ಸಮುದ್ರಗಳು ಭೂಫಲಕಗಳ ಮೇಲೆ ನಿಂತಿವೆ. ಈ ಫಲಕಗಳು ತೆಳುವಾಗಿದ್ದು, ಇವು ಜ್ವಾಲಾಮುಖಿಗಳ ಶಿಲಾರಸ/ಶಿಲಾಪಾಕದಿಂದ ರೂಪುಗೊಂಡ ಗಟ್ಟಿ ಭಾಗಗಳಾಗಿವೆ. ಸಮುದ್ರ, ಜೀವಗೋಳದ ಮೇಲೆ ಭಾರಿ ಪ್ರಭಾವ ಬೀರುತ್ತದೆ. ಸಮುದ್ರದ ನೀರು ಆವಿಯಾಗಿ, ಮೋಡಗಳಾಗಿ ಮೇಲಕ್ಕೆ ಹಾರಿ ಮಳೆ ಸುರಿಸುತ್ತದೆ. ಹಾಗೆ ಸಮುದ್ರದ ತಾಪಮಾನ ವಾತಾವರಣ ಮತ್ತು ಬೀಸುವ ಗಾಳಿಯನ್ನು ನಿಯಂತ್ರಿಸುತ್ತದೆ. ಇದರಿಂದ ಭೂಮಿಯ ಮೇಲಿರುವ ಮನುಷ್ಯ ಮತ್ತು ಪ್ರಾಣಿಸಂಕುಲದ ಮೇಲೆ ಪ್ರತಿಕೂಲ ಪ್ರಭಾವ ಬೀರುತ್ತದೆ. ಭೂಮಿಯ ಮೇಲೆ ಜೀವಿಗಳು ಕಾಣಿಸಿಕೊಳ್ಳುವುದಕ್ಕಿಂತ 300 ಕೋಟಿ ವರ್ಷಗಳ ಮುಂಚೆಯೇ ಸಮುದ್ರಗಳಲ್ಲಿ ಆದಿಜೀವಿಗಳು ಕಾಣಿಸಿಕೊಂಡಿದ್ದವು.

ಆಕಾಶ ನೀಲಿ ಬಣ್ಣ ಇರುವುದರಿಂದ ಸಮುದ್ರ ನೀಲಿಯಾಗಿ ಕಾಣಿಸುತ್ತದೆ ಎಂದು ಮೊದಲಿಗೆ ತಿಳಿಯಲಾಗಿತ್ತು. ದೂರದಿಂದ ಹೆಚ್ಚಿನ ನೀರನ್ನು ನೋಡಿದಾಗ ನೀರಿನ ಬಣ್ಣ ತೆಳು ನೀಲಿಯಾಗಿ ಕಾಣಿಸುತ್ತದೆ. ಆಕಾಶದ ಪ್ರತಿಬಿಂಬ ಸ್ವಲ್ಪ ಮಟ್ಟಿಗೆ ನೀರು ನೀಲಿಯಾಗಿ ಕಾಣಿಸಲು ಕಾರಣವಾಗಿದೆ. ಆದರೆ ಇದು ನಿಜವಲ್ಲ. ನೀರು ನೀಲಿಯಾಗಿ ಕಾಣಲು ಮುಖ್ಯ ಕಾರಣ ಬೆಳಕಿನ ಕಿರಣಗಳಲ್ಲಿರುವ ಕೆಂಪು ಫೋಟಾನುಗಳನ್ನು ನೀರಿನ ಕಣಗಳು ಸೆಳೆದುಕೊಳ್ಳುವುದು. ಹಡಗುಗಳಲ್ಲಿ ಪ್ರಯಾಣಿಸುವವರು ಹೇಳುವುದೇನೆಂದರೆ ಸಮುದ್ರ ಬೆಳಕಿನ ಪ್ರತಿಬಿಂಬವನ್ನು ಪ್ರಜ್ವಲಿಸುತ್ತದೆ ಎಂದು. ರಾತ್ರಿ ವೇಳೆಯಲ್ಲಿ ಹತ್ತಾರು ಕಿ.ಮೀ. ದೂರದವರೆಗೂ ಅದನ್ನು ಕಾಣಬಹುದು.

*****

ಸಮುದ್ರದಲ್ಲಿ ಅತ್ಯಂತ ಆಳದ ಸ್ಥಳ ಎಂದರೆ ಮರೀನಾ ಕಮರಿ. ಇದು ಉತ್ತರ ಮರೀನಾ ದ್ವೀಪಗಳ (ಫಿಲಿಪೈನ್ಸ್) ಪಕ್ಕದಲ್ಲಿದೆ. ಇದರ ಆಳ 10,971 ಮೀಟರುಗಳು. 1951ರಲ್ಲಿ ಬ್ರಿಟಿಷ್ ನೌಕಾ ಹಡಗು ಚಾಲೆಂಜರ್-II ಇಲ್ಲಿ ಸಮೀಕ್ಷೆ ನಡೆಸಿತ್ತು. ನಂತರ 1966ರಲ್ಲಿ ಜಲಾಂತರ್ಗಾಮಿ ನೌಕೆಯಲ್ಲಿ ಇಬ್ಬರು ವಿಜ್ಞಾನಿಗಳು ಸಮುದ್ರದ ಆಳಕ್ಕೆ ಇಳಿದು ಸಮೀಕ್ಷೆ ನಡೆಸಿದ್ದರು. ಸಮುದ್ರದ ಒಳಗಿನ ಬಹಳಷ್ಟು ಪ್ರದೇಶಗಳ ಸಮೀಕ್ಷೆ ಇನ್ನೂ ನಡೆಯಬೇಕಾಗಿದೆ. ಹಾಗೆ ಸಮುದ್ರ ಒಳಗಿರುವ ಸಾವಿರಾರು ಬೆಟ್ಟ ಗುಡ್ಡ ಆಳದ ಕಮರಿಗಳಿಗೆ ಹೆಸರುಗಳನ್ನು ನೀಡಬೇಕಾಗಿದೆ.

ಸುಶೀಲ ಎದುರಿಗೆ ಕುಳಿತಿದ್ದ ಒಬ್ಬರನ್ನು ಮಾತನಾಡಿಸಿ ಆತ, `2004ರಲ್ಲಿ ಬಂದ ಸುನಾಮಿ (ಒಂದು ದ್ವೀಪದ ಹೆಸರು ಹೇಳಿ) ಯಿಂದ 48 ಕಿ.ಮೀ. ಸುತ್ತಳತೆ ಇದ್ದ ದ್ವೀಪದ ದಡವನ್ನು 36 ಕಿ.ಮೀ. ಸುತ್ತಳತೆಗೆ ತಂದುಬಿಟ್ಟಿತು’ ಎಂದ. ಭೂಮಿ ದಿನಕ್ಕೆ ಒಂದು ಸುತ್ತ ತನ್ನ ಸುತ್ತಲೂ ತಾನೇ ಸುತ್ತುತ್ತ ಸೂರ್ಯಮಂಡಲದ ಜೊತೆಗೆ ನೂರಾರು ಕಿ.ಮೀ. ವೇಗದಲ್ಲಿ ಆಕಾಶಗಂಗೆಯ ಒಳಗೆ ಎಲ್ಲಿಗೋ ಧಾವಿಸುತ್ತಿದೆ. ಭೂಮಿ, ಆಕಾಶ ಕಾಯಗಳು, ನಕ್ಷತ್ರಗಳು, ಉಪಗ್ರಹಗಳು, ಧೂಮಕೇತುಗಳು, ಉಲ್ಕಾಶಿಲೆಗಳು ಹೀಗೆ ಇಡೀ ವಿಶ್ವ ಗುರುತ್ವಾಕರ್ಷಣೆಯಿಂದ ಒಂದು ಇನ್ನೊಂದನ್ನು ರಕ್ಷಿಸಿಕೊಳ್ಳುತ್ತ ಜೀವನ ಸಾಗಿಸುತ್ತಿದೆ. ಯಾವ ನಕ್ಷತ್ರ ಯಾವ ಸಮಯದಲ್ಲಿ ಯಾವ ಗ್ರಹವನ್ನು ಕಬಳಿಸಿ ನುಂಗಿಕೊಳ್ಳುತ್ತದೊ ಗೊತ್ತಿಲ್ಲ. ಒಂದು ವಸ್ತುವನ್ನು ಭೂಮಿಯಿಂದ ಮೇಲಕ್ಕೆ ಎಸೆದರೆ ಅದನ್ನು ಹಿಂದಕ್ಕೆ ಸೆಳೆದುಕೊಂಡುಬಿಡುತ್ತದೆ. ಭೂಮಿಯಿಂದ ಯಾವುದೇ ವಸ್ತು ತಪ್ಪಿಸಿಕೊಂಡು ಹೋಗಬೇಕಾದರೆ ಸೆಕೆಂಡಿಗೆ 11 ಕಿ.ಮೀ. ವೇಗದಲ್ಲಿ ಧಾವಿಸಬೇಕು.

ಬೆಳಗ್ಗೆ 6:10ಕ್ಕೆ ಪೋರ್ಟ್ ಬ್ಲೇರ್‌ನಿಂದ ಪ್ರಯಾಣ ಆರಂಭಿಸಿದ ಕ್ರೂಸರ್ ಒಂದೂವರೆ ಗಂಟೆಯಾದ ಮೇಲೆ `ನೀಲ್’ ಎಂಬ ದ್ವೀಪದ ಬಂದರಿನಲ್ಲಿ ನಿಂತುಕೊಂಡಿತು. ಅದೊಂದು ಸುಂದರ ಮತ್ತು ಸಣ್ಣದಾದ ಹಸಿರು ತೇಲುತೆಪ್ಪದಂತೆ ಕಾಣಿಸುತ್ತಿತ್ತು. ದ್ವೀಪದ ಸುತ್ತಲು ದಡದ ಅಂಚಿನಲ್ಲಿ ಪುಟ್ಟಪುಟ್ಟ ಮರಗಳು ಕಡಲ ಅಂಚನ್ನು ಸುತ್ತುವರಿದಿದ್ದವು. ಅದರ ಹಿಂದೆ ದೊಡ್ಡ ಮರಗಳ ಪಟ್ಟಿ, ಅದರ ಹಿಂದೆ ಬಾಹುಗಳನ್ನು ಚಾಚಿ ಬಳಸಿಕೊಂಡು ಎತ್ತರೆತ್ತರಕ್ಕೆ ಬೆಳೆದುನಿಂತಿರುವ ಮರಗಳು. ಮೊದಲ ಸಾಲಿನಲ್ಲಿದ್ದ ಪುಟ್ಟ ಮರಗಳು ತಮ್ಮ ಕಾಲ ಬೆರಳುಗಳನ್ನು ನೀರಿಗೆ ಬಿಟ್ಟು ಆಡಿಕೊಳ್ಳುತ್ತಿರುವಂತೆ ತೋರುತ್ತಿದ್ದವು. ಇದನ್ನು ಮ್ಯಾಂಗ್ರೋವ್ ಕಾಡು ಎಂದು ಕರೆಯಲಾಗುತ್ತದೆ.

ನೀಲ್ ದ್ವೀಪದಲ್ಲಿ ಕೆಲವರು ಇಳಿದುಕೊಂಡು ಇನ್ನೂ ಕೆಲವರು ಹತ್ತಿಕೊಂಡರು. ಕ್ರೂಸರ್ ಮತ್ತೆ ತನ್ನ ಪ್ರಯಾಣವನ್ನು ಮುಂದುವರಿಸಿತು. ಅದೇ ಸಮುದ್ರ, ಅದೇ ದ್ವೀಪಗಳು. 9:30ಕ್ಕೆ ಸರಿಯಾಗಿ ಯಾವ್‌ಲಕ್ ದ್ವೀಪದಲ್ಲಿ ಇಳಿದುಕೊಂಡು ಹೊರಗೆ ಬರುತ್ತಿದ್ದಂತೆ ಅಲ್ಲಿ ಚಾಲಕರು, ಅತಿಥಿಗಳ ಹೆಸರುಗಳಿರುವ ಸಣ್ಣ ಸಣ್ಣ ಪ್ಲೆಕಾರ್ಡ್‌ಗಳನ್ನು ಕೈಯಲ್ಲಿ ಹಿಡಿದುಕೊಂಡು ನಿಂತಿದ್ದರು. ನನ್ನ ಹೆಸರನ್ನು ಹಿಡಿದಿದ್ದ ಯುವಕನನ್ನು ಪಕ್ಕಕ್ಕೆ ಕರೆದುಕೊಂಡೆ. ಸುಶೀಲ ಅವನ ಹೆಸರು ಕೇಳಿ ಆತ `ಅಜಯ್ ರಾಯ್’ ಎಂದ. ಬಂಗಾಳಿ.

ನಾವು ಚಾಲಕನ ಜೊತೆಗೆ ಹೋಗುತ್ತಿದ್ದಂತೆ, ಒಬ್ಬಾತ, `ಏಯ್ ಋಖೋ ಋಖೋ’ ಎಂದು ಹತ್ತಿರಕ್ಕೆ ಬಂದು `ನೋಡಿ ಸರ್ ಪ್ಯಾಕೇಜ್ ಪ್ರಕಾರ ನಿಮಗೆ ರಾಧಾ ಮತ್ತು ಇನ್ನೊಂದು ಬೀಚ್ ಮಾತ್ರ ತೋರಿಸ್ತಾರೆ. ನೀವು ಎಲಿಫೆಂಟ್ ರಾಕ್‌ಗೆ (ದ್ವೀಪ) ಹೋಗಬೇಕಾದರೆ ಅದಕ್ಕೆ ಎಕ್ಸ್ಟ್ರಾ ಚಾರ್ಜ್ ಆಗುತ್ತೆ’ ಎಂದ. `ಎಷ್ಟಾಗುತ್ತೆ?’ `ಅದಕ್ಕೆ ಬೇರೆ ಕ್ರೂಸರ್‌ನಲ್ಲಿ ಹೋಗ್ಬೇಕು. ಇಬ್ಬರಿಗೆ ಎರಡು ಸಾವಿರ ಆಗುತ್ತೆ’ ಎಂದ. `ನಮಗೆ ಬೇಡ. ನೀನು ಮೊದಲು ರಾಧಾ ಬೀಚ್‌ಗೆ ನಡಿ’ ಎಂದೆ ನಮ್ಮ ಚಾಲಕನನ್ನು. ಚಾಲಕ ಹಾವಿನಂತಿರುವ ಹಳ್ಳಕೊಳ್ಳ ಹಸಿರು ತಿರುವುಗಳಲ್ಲಿ ವಾಹನವನ್ನು ಚಲಿಸತೊಡಗಿದ. ಎಲ್ಲೆಲ್ಲೂ ಹಸಿರು ಹೊದಿಕೆ. ಮಧ್ಯೆಮಧ್ಯೆ ಗದ್ದೆ ಬಯಲುಗಳು, ಅಡಿಕೆ ತೋಟಗಳು, ತೆಂಗು, ಹಲಸಿನ ಮರಗಳ ಜೊತೆಗೆ ಎತ್ತರೆತ್ತರಕ್ಕೆ ಬೆಳೆದುನಿಂತಿರುವ ಇತರ ಜಾತಿಯ ಮರಗಳು.

ವಾಹನ ರಾಧಾನಗರ ಬೀಚ್ ಹತ್ತಿರ ಬಂದು ನಿಂತುಕೊಂಡಿತು. ಎಳೆನೀರು ಮಾರುತ್ತಿದ್ದ ಬೆಂಗಾಲಿಗಳು `ದೊಸ್‌ಟಕಾ… ದೊಸ್‌ಟಕಾ…’ ಎಂದು ಕೂಗಿಕೊಳ್ಳುತ್ತಿದ್ದರು. ಎದುರಿಗೆ ನಾಲ್ಕಾರು ಟಿಪಿಕಲ್ ಬೆಂಗಾಲಿ ಧಾಬಾಗಳು, ಒಂದಷ್ಟು ಅಂಗಡಿಗಳು ಇದ್ದವು. ಎಲ್ಲವೂ ಪಶ್ಚಿಮ ಬಂಗಾಳದ ಟಿಪಿಕಲ್ ಹಳ್ಳಿಯ ವಾತಾವರಣ. ಚಾಲಕ `ಸರ್ ಗಾಡಿ ಇಲ್ಲೆ ಇರುತ್ತೆ. ನೀವು ಬೀಚ್ ನೋಡಿಕೊಂಡು ಬನ್ನಿ. ಊಟ ಮಾಡೋದಾದರೆ ಇಲ್ಲಿ ಮೊದಲೇ ಆರ್ಡರ್ ಮಾಡಬೇಕು’ ಎಂದ. ಧಾಬಾದಲ್ಲಿ ಮೂರು ವೆಜ್ ಊಟ ಹೇಳಿ ನಾನು ಸುಶೀಲ ಬೀಚ್ ಕಡೆಗೆ ಹೊರಟುಹೋದೆವು. ಅರ್ಧ ಚಂದ್ರನ ಆಕಾರದ ಬೀಚು. ದೂರದವರೆಗೂ ಕಡು ನೀಲಿ ಬಣ್ಣದ ಕಡಲು ಕಾಣಿಸುತ್ತಿತ್ತು. ಪುಟ್ಟ ಮಕ್ಕಳಿಂದ ಹಿಡಿದು ಮುದುಕರವರೆಗೂ ಬೆಂಗಾಲಿಗಳೆ ಹೆಚ್ಚಾಗಿದ್ದು, ಒಂದಷ್ಟು ತಮಿಳು, ತೆಲುಗು, ಮಲಯಾಳಂ ಜನರೂ ಇದ್ದರು. ಮರಳು ದಂಡೆಯಲ್ಲಿ ಸಮುದ್ರ ಅಲೆಗಳಲ್ಲಿ ನಿಂತು ಹತ್ತಾರು ಫೋಟೋಗಳನ್ನು ಹಿಡಿದುಕೊಂಡು ಹೆಚ್ಚೂಕಡಿಮೆ ಅರ್ಧ ದೇಹದವರೆಗೂ ಸಮುದ್ರ ಅಲೆಗಳನ್ನು ಏರಿಸಿಕೊಂಡು ಬಟ್ಟೆಗಳನ್ನು ಒದ್ದೆ ಮಾಡಿಕೊಂಡು ಎತ್ತರವಾಗಿ ಆಕಾಶದ ಕಡೆಗೆ ತಲೆ ಎತ್ತಿ ನಿಂತಿದ್ದ ಮರಗಳ ಕೆಳಗೆ ಬೂಟು ಮೋಜುಗಳನ್ನು ಒಣಗಲು ಹಾಕಿ ಮರಗಳ ಕೆಳಗೆ ಕುಳಿತುಕೊಂಡೆವು. ಅಲೆಗಳು ರಭಸದಿಂದ ದಡಕ್ಕೆ ಒಂದೊಂದಾಗಿ ಬಂದು ಬಂದು ಅಪ್ಪಳಿಸಿ ಹಿಂದಕ್ಕೆ ಹೋಗುತ್ತಿದ್ದವು.

ಬಿಸಿಲು ಏರುತ್ತಿದ್ದಂತೆ ಜನರು ದಡಬಿಟ್ಟು ಗಿಡಮರಗಳು, ಅಂಗಡಿಗಳ ಕಡೆಗೆ ಹೊರಟರು. ನಾವು ಹಿಂದಕ್ಕೆ ಬಂದು ಧಾಬಾದಲ್ಲಿ ಊಟ ಮಾಡಿ ರಾಧಾ ದ್ವೀಪದಿಂದ ಯಾವ್‌ಲಕ್ ದ್ವೀಪಕ್ಕೆ ವಾಹನದಲ್ಲಿ ಬಂದು ಇಳಿದುಕೊಂಡೆವು. ದಾರಿಯಲ್ಲಿ ಇನ್ನೊಂದು ದ್ವೀಪವನ್ನೂ ನೋಡಿಕೊಂಡುಬಂದೆವು. ಬಿಸಿಲು ಜಾಸ್ತಿ ಇದ್ದ ಕಾರಣ ಆ ದ್ವೀಪದಲ್ಲಿ ಹೆಚ್ಚು ಕಾಲ ಇರಲಿಲ್ಲ. ಯಾವ್‌ಲಕ್ ದ್ವೀಪದ ದಡದಲ್ಲಿ ಮರಗಳ ಕೆಳಗೆ ಕುಳಿತುಕೊಂಡು ಸಮುದ್ರದ ಕಡೆಗೆ ನೋಡುತ್ತಿದ್ದೆವು. ಸಮುದ್ರ ಮತ್ತು ಆಕಾಶ ಎರಡೂ ಆರಾಮವಾಗಿ ಹರಟೆಗೆ ಕುಳಿತಂತೆ ತೋರುತ್ತಿದ್ದವು. ನಮಗಿಂತ ಸ್ವಲ್ಪ ವಯಸ್ಸಾಗಿದ್ದ ದಂಪತಿ ಕ್ಯಾಮೆರಾ ಕೈಯಲ್ಲಿ ಹಿಡಿದುಕೊಂಡು ನಮಗಾಗಿಯೇ ಕಾಯುತ್ತಿರುವಂತೆ ಕಾಣುತ್ತಿತ್ತು. ಇನ್ನಷ್ಟು ದೂರದಲ್ಲಿ ಏನೋ ಕೆಲಸ ಮಾಡಿಬಂದ ಕೆಲಸಗಾರರು ಮರಗಳ ಕೆಳಗೆ ವಿಶ್ರಾಂತಿ ಪಡೆಯುತ್ತಿರುವಂತೆ ತೋರುತ್ತಿತ್ತು. `ಯಾರೋ ಇಬ್ಬರು ಜೊತೆ ಸಿಕ್ಕಿದರು’ ಎಂದು ನಾವು ಅವರ ಜೊತೆಗೆ ಮಾತಿಗೆ ಕುಳಿತುಕೊಂಡೆವು.

ಜಯ್‌ಪುರದಿಂದ ಬಂದಿದ್ದು ಆ ದಂಪತಿಯನ್ನು ಪರಿಚಯ ಮಾಡಿಕೊಂಡು ಮಾತಿಗೆ ಇಳಿದೆವು. ಆತ ಬ್ಯಾಂಕ್ ಮ್ಯಾನೇಜರ್ ಆಗಿದ್ದು ಇಬ್ಬರು ಗಂಡು ಮಕ್ಕಳು ಮದುವೆಯಾಗಿ ಅವರು ಪತ್ನಿಯರ ಸಮೇತ ಯುಎಸ್‌ಎ’ನಲ್ಲಿ ಇದ್ದು ಅಮೆರಿಕಾಗೆ ನಾಲ್ಕಾರು ಸಲ ಹೋಗಿಬಂದಿರುವುದಾಗಿ ತಿಳಿಸಿದರು. ಸುಶೀಲ, `ಅದರಿಂದಾನೇ ಈಯಮ್ಮ ಜೀನ್ಸ್ ಪ್ಯಾಂಟ್ ಹಾಕಿಕೊಂಡಿರುವುದು’ ಎಂದಳು. ಮೀನು ಹಿಡಿಯುವ ದೋಣಿಯ ಇಬ್ಬರು ಅರೆನಗ್ನ ಯುವಕರು ಹತ್ತಿರಕ್ಕೆ ಬಂದು `ಎಲಿಫೆಂಟ್ ದ್ವೀಪಕ್ಕೆ ನಾವು ಕರೆದುಕೊಂಡು ಹೋಗ್ತೇವೆ ಬನ್ನಿ ಸರ್’ ಎಂದರು. ಅವರ ಒಡೆದೋದ ಬೋಕಿಯಂತಹ ದೋಣಿ ನೋಡಿದ್ದೆ ಜಯಪುರಿ `ಹೆ ತುಃ ಇದು ಗಂಧಾ (ಗಲೀಜು) ಬೋಟು. ಇದರಲ್ಲಿ ಯಾರ್ ಹೋಗ್ತಾರೆ? ನಡಿ’ ಎಂದರು. `ಸರ್ ಈಗ 12 ಜನರು ಹೋಗುವ ಡೀಸಲ್ ಬೋಟು ಸಿಗುವುದಿಲ್ಲ. ಅದಕ್ಕೆ ಮೊದಲೇ ಬುಕ್ಕಿಂಗ್ ಕಛೇರಿಯಲ್ಲಿ ಟಿಕೆಟ್ ಕಾಯ್ದಿರಿಸಬೇಕು. ಈಗ ಟೈಂ ಆಗಿದೆ’ ಎಂದರು ಯುವಕರು. ಜಯಪುರಿ, `ಏಯ್ ಯಾಕೆ ಮಾಡಲ್ಲ? ಇರು’ ಎಂದಿದ್ದೆ ಬುಕ್ಕಿಂಗ್ ಕಛೇರಿಗೆ ಕೇಳಲು ಎದ್ದು ಹೊರಟುಬಿಟ್ಟರು. ನಾನು ಆ ಯುವಕರನ್ನು ವಿಚಾರಿಸಿ, `ನೋಡಿ ಸರ್, ಈಗ ಎರಡು ಗಂಟೆ. ಹೋಗುವುದಕ್ಕೆ ಅರ್ಧ ಗಂಟೆ. ಬರುವುದಕ್ಕೆ ಅರ್ಧ ಗಂಟೆ. ಅಲ್ಲಿ ಕೋರಲ್ಸ್ ನೋಡುವುದಕ್ಕೆ ಅರ್ಧ ಗಂಟೆ. ನೀವು ಜಾಸ್ತಿ ಹೊತ್ತು ನೋಡಿದರೆ ಜಾಸ್ತಿ ಸಮಯ ಆಗುತ್ತೇ. ಎಷ್ಟು ಬೇಗ ಹೋದರೆ ಅಷ್ಟು ಬೇಗನೆ ಹಿಂದಕ್ಕೆ ಬರ್ತೀವಿ’ ಎಂದರು.

ಇಬ್ಬರೂ ಮತ್ತೆ ಮತ್ತೆ ನಮ್ಮನ್ನ ಒತ್ತಾಯ ಮಾಡತೊಡಗಿದರು. ನಾನು ಜಯಪುರಿ ಅವರ ಪತ್ನಿಗೆ ಹೇಳಿದೆ. ಅಷ್ಟರಲ್ಲಿ ಹಿಂದಕ್ಕೆ ಬಂದ ಜಯಪುರಿ `ಎಲ್ಲಾ ಟಿಕೆಟ್ಸ್ ಬುಕ್ಕಾಗಿದೆ’ ಎಂದರು. ಕೊನೆಗೆ ಜಯಪುರಿ `ಎಷ್ಟು ಕೊಡಬೇಕು ಹೇಳು?’ ಎಂದರು. ಹುಡುಗರು ಒಟ್ಟಿಗೆ `1500′ ಎಂದರು. `ಹೇ ಹೋಗ್ರೋ’ ಎಂದು ಜೋರಾಗಿ ಗದರಿಬಿಟ್ಟರು. ನಾನು ದಿಢೀರನೆ `1200 ಕೊಡ್ತೀವಿ’ ಎಂದುಬಿಟ್ಟೆ. ಯುವಕರು `ಇಲ್ಲ’ ಎಂದರು. `ಇಲ್ಲ ಅಂದರೆ ಬೇಡ ನಡಿಯಿರಿ’ ಎಂದರು ಜಯಪುರಿ. ಈಗ ಯುವಕರು ತಯಾರಾದರು. ನಾನು ಜಾಸ್ತಿ ಹೇಳಿಬಿಟ್ಟೆನೆ ಎಂದುಕೊಂಡೆ. ಜಯಪುರಿ ಅವರು ನಾಲ್ಕು ಗಂಟೆಗೆ ಯಾವ್‌ಲಕ್ ಜಟ್ಟಿಗೆ ಹಿಂದಿರುಗಬೇಕಾಗಿತ್ತು. ನಮ್ಮ ಕ್ರೂಸರ್ 4:30 ಗಂಟೆಗಿದ್ದು ನಮಗೆ ಹೆಚ್ಚು ಸಮಯ ಇತ್ತು. ಜಯಪುರಿ, `ನಾವು 3:30ಕ್ಕೆ ಇಲ್ಲಿರಬೇಕು. ಇಲ್ಲ ಅಂದರೆ ಬೇಡ’ ಎಂದು ಯುವಕರಿಗೆ ಆಜ್ಞೆ ಮಾಡಿದರು. ಇಬ್ಬರು ಹುಡುಗರು ಅವರು ಹೇಳಿದ್ದೆ ತಡ ತಮ್ಮ ಗುಬ್ಬಚ್ಚಿ ಗೂಡಿನ ತೇಲುತೆಪ್ಪ ಕಡೆಗೆ ದೌಡಾಯಿಸುತ್ತ ನಮ್ಮನ್ನು `ಬನ್ನಿ ಬನ್ನಿ’ ಎಂದು ಓಡಿದರು. ನಾವು ಹಿಂದೆಯೇ ಹೊರಟೆವು.

About The Author

ಡಾ. ಎಂ. ವೆಂಕಟಸ್ವಾಮಿ

ಡಾ.ಎಂ.ವೆಂಕಟಸ್ವಾಮಿ ಮೂಲತಃ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಯವರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ಕೆಲಕಾಲ ಕೆಜಿಎಫ್‍ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್‍ನಲ್ಲಿಯೂ ಕೆಲಸ ಮಾಡಿದ್ದಾರೆ. 3 ಕವನ ಸಂಕಲನಗಳು 3 ಪ್ರವಾಸ ಕಥೆಗಳು 2 ವೈಚಾರಿಕ ಕೃತಿಗಳು 8 ಕಾದಂಬರಿಗಳು, 8 ವಿಜ್ಞಾನ ಕೃತಿಗಳು ಮತ್ತು 2 ಇಂಗ್ಲಿಷ್ ಕೃತಿಗಳು ಸೇರಿದಂತೆ ಇವರ ಒಟ್ಟು 30 ಕೃತಿಗಳು ಪ್ರಕಟಗೊಂಡಿವೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ