ಆತ್ಮಾರಾಮನ ಸಹಾಯದಿಂದ ರಾಮಣ್ಣನ ಮನೆಯ ಹಿಂಭಾಗದ ಕೋಣೆಯನ್ನು ಬಾಡಿಗೆ ಹಿಡಿದು ಅಲ್ಲಿ ಅಣಬೆ ಕೃಷಿಗೆ ಓನಾಮ ಹಾಡಲಾಯಿತು. ಅದು ಬಿಟ್ಟರೆ ಅನ್ಯಮಾರ್ಗವಿಲ್ಲದೆ ಪಕ್ಕದ ಬೀದಿಯ ಆಫೀಸರನ ಮನೆಗೆ ಹೋಗಬೇಕಾಗಿತ್ತು. ಆದರೆ ಅಲ್ಲಿ ಅವನ ಹೆಂಡತಿಯ ಕಾಟ ಎಂಬುದು ಇವರ ದರ್ದು! ಅಂತೂ ಒಂದು ಶುಭದಿನ ಒಣಹುಲ್ಲಿನ ರಾಶಿ ಬಂದು ಬಿದ್ದು ಅಣಬೆ ಬೆಳೆಗೆ ನಾಂದಿಯಾಯಿತು. ಕೋಣೆಯ ಒಳಗೆ ಒಂದಷ್ಟು ಕಬ್ಬಿಣದ ರ‌್ಯಾಕ್‌ಗಳು ಬಂದವು.
ಮಧುರಾಣಿ ಬರೆಯುವ “ಮಠದ ಕೇರಿ” ಕಥಾನಕ

 

ನಿರುದ್ಯೋಗ ಕೇವಲ ದೇಶದ ಸಮಸ್ಯೆ ಮಾತ್ರ ಆಗಿರಲಿಲ್ಲ. ಮಠದ ಕೇರಿಯಲ್ಲೂ ವ್ಯಾಪಕವಾಗಿ ಮಹಾಮಾರಿಯಂತೆ ಹರಡಿತ್ತು. ಎಲ್ಲಿಯೂ ಸಲ್ಲದ ವಿದ್ಯಾವಂತರ ದೊಡ್ಡ ಗುಂಪೊಂದು ಅಲ್ಲೂ ಸಕ್ರಿಯವಾಗಿ ‘ಮನೆ ಮುದ್ದೆ ಗುಡಿ ನಿದ್ದೆ’ಗೆ ಅಂಟಿಕೊಂಡಿತ್ತು. ಆದರೆ ಅವರು ದೇಶದ ಎಲ್ಲಾ ನಿರುದ್ಯೋಗಿಗಳಂತೆ ಸುಮ್ಮನೆ ಕಾಲಹರಣ ಮಾಡುತ್ತಿರಲಿಲ್ಲ. ಹಗಲು-ರಾತ್ರಿಯೆನ್ನದೆ ಅಂಗಡಿ ಕಟ್ಟೆಗಳ ಮೇಲೆ ಕುಳಿತು ಬೀಡಿ ಸೇದುತ್ತಾ ದೇಶದ ಸ್ಥಿತಿಗತಿಯ ಬಗ್ಗೆ ಚರ್ಚಿಸುತ್ತಿದ್ದರು! ರಾತ್ರಿ ವಾರ್ತೆಗಳು ಪ್ರಸಾರವಾದ ಮೇಲೆ ತಡರಾತ್ರಿಯವರೆಗೂ ದೇಶದ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವವರಂತೆ ಬೀದಿಬೀದಿ ತಿರುಗುತ್ತಿದ್ದರು.

ಮನೆಯಲ್ಲಿ ತರಕಾರಿ ತರಲು ಕೊಟ್ಟ ದುಡ್ಡನ್ನು ಶತಾಯಗತಾಯ ಉಳಿಸಿಕೊಳ್ಳಲು ತರಕಾರಿ ಸಾಬರ ಬಳಿ ಚೌಕಾಶಿ ಮಾಡಿ ಹಣದುಬ್ಬರದ ಬಗೆಗೆ ಹಲಬುತ್ತಿದ್ದರು. ಕೆಲವೊಮ್ಮೆ ಮನೆಯವರು ದೇಶದ ನಿರುದ್ಯೋಗ ಸಮಸ್ಯೆಯನ್ನು ಅರ್ಥಮಾಡಿಕೊಳ್ಳದೇ ನಿರುದ್ಯೋಗಿಗಳನ್ನು ಬೈದಾಗ ತಾವೇ ಸ್ವಯಂ ಘೋಷಿತವಾಗಿ ಗಡಿಪಾರಾಗಿ ಇಡೀ ರಾತ್ರಿ ದೇವಸ್ಥಾನದ ಕಟ್ಟೆಯ ಮೇಲೆ ಕೂತು ಪರಿಹಾರ ಮಾರ್ಗೋಪಾಯಗಳನ್ನು ಚರ್ಚಿಸುತ್ತಿದ್ದರು. ಒಟ್ಟಾರೆ ಈ ಸ್ವಾಭಿಮಾನಿ ದೇಶಪ್ರೇಮಿಗಳ ರಾತ್ರೋರಾತ್ರಿ ಪಹರೆಯಿಂದ ಕೇರಿಯ ಒಳಗೆ ಒಂದು ಹೊಸ ನಾಯಿ ಕೂಡ ಹೆಜ್ಜೆ ಇಡಲು ಅಂಜುತಿತ್ತು.

ಹೀಗಿರಲೊಮ್ಮೆ ಯಾರಲ್ಲೂ ಕೈಚಾಚದೆ ಸ್ವಾಭಿಮಾನದಿಂದ ಸ್ವ-ಉದ್ಯೋಗದಲ್ಲಿ ಸಾವಿರಾರು ರೂಪಾಯಿಗಳನ್ನು ಗಳಿಸಬಲ್ಲ ಯೋಜನೆಯೊಂದು ಕೇರಿಯ ಸ್ವಾಭಿಮಾನಿ ನಿರುದ್ಯೋಗಿಗಳ ಕಣ್ಣಲ್ಲಿ ಮಿಂಚು ತರಿಸಿತು. ಥಟ್ಟನೆ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾದ ಈ ಗುಂಪು ನಿದ್ರಾಹಾರಗಳನ್ನು ತೊರೆದು ಅಂತಹ ಸುದ್ದಿ ತಂದಿದ್ದ ಕರಪತ್ರದ ಹಿಂದೆ ಬಿದ್ದರು. ಎಲ್ಲರೂ ಮಠದ ಕಟ್ಟೆಯ ಮೇಲೆ ಸಭೆ ಸೇರಿ ಒಮ್ಮತದಿಂದ ತೀರ್ಮಾನಿಸಿ ಆಫೀಸು ಹುಡುಕಿ ಹೊರಟೇ ಬಿಟ್ಟರು. ಕಡೆಗೆ ಊರಿನ ಸರ್ಕಾರಿ ಬಸ್ಟ್ಯಾಂಡ್ ಹಿಂದಿದ್ದ ಗುಜರಿ ಅಂಗಡಿಗಳ ಸಾಲಿನಲ್ಲಿ ಒಂದು ಅಂಗಡಿಯ ಮೂರನೇ ಅಂತಸ್ತಿನಲ್ಲಿ ಆ ಕಚೇರಿ ಸಿಕ್ಕೇಬಿಟ್ಟಿತು. ಮತ್ತಿವರು ಚಿನ್ನದ ನಾಣ್ಯಗಳ ಸುರಿಮಳೆಯ ಕನಸು ಕಟ್ಟುತ್ತಾ ಕಛೇರಿಗೆ ಮುತ್ತಿಗೆ ಹಾಕಿದರು.

ಅದೊಂದು ಬೆಳಕು ಕೂಡ ಒಳಬರಲು ಹೆಣಗುವಂತಹ ಕೋಣೆ. ಒಳಗಡೆ ಅದೇನೋ ಒಂಥರಾ ವಾಸನೆ. ಯಾವ ವಾಸನೆಯೆಂದು ನಮಗಂತೂ ತಿಳಿಯಲಿಲ್ಲ! ಯಾಕೆಂದರೆ ನಾವು ಕೊಳೆತ ತರಕಾರಿ ಬಿಟ್ಟು ಬೇರೆ ನಾರುವ ಪದಾರ್ಥವನ್ನೇ ಕಂಡಿರಲಿಲ್ಲ. ಈಗಂತೂ ಮೀನಿನ ವಾಸನೆಯವರೆಗೂ ಎಲ್ಲವನ್ನೂ ಕಂಡುಂಡು ಅನುಭವವಿದೆ. ಈಗ ಗೆಳೆಯರೊಬ್ಬರು ಮೀನನ್ನು ‘ವಾಸನೆ’ ಎಂದರೆ ಜಗಳ ಕಾಯುತ್ತಾರೆ. ಅದನ್ನು ಅವರೆದುರು ಮೂಗು ಮುಚ್ಚಿಯಾದರೂ ‘ಪರಿಮಳ’ ಎಂದೇ ಹೇಳಬೇಕು! ಮುಖ ಹಿಂಡಿಯಾದರೂ ‘ಪರಿಮಳ’ ಎಂದರೆ ಆ ಆಸಾಮಿಗೆ ಸಂತೋಷ!

ಹಾಗೆ ಈಗ ಮೊದಲಿನ ಅಮಾಯಕತೆ ಉಳಿಯದೇ ಪ್ರಪಂಚಜ್ಞಾನ ತುಸು ಹೆಚ್ಚಿದೆ. ಆದರೆ ಆಗ ಹಾಗಿರಲಿಲ್ಲ, ಅಷ್ಟು ವಾಸನೆ ಬರುವ ಜಾಗಕ್ಕೆ ನಾವು ಬಂದದ್ದು ಯಾಕೆಂದು ಗರಬಡಿದವರ ಹಾಗೆ ನಿಂತೆವು. ಅಷ್ಟರಲ್ಲಿ ಒಂದಷ್ಟು ಜನ ನಮ್ಮನ್ನು ಎದುರುಗೊಂಡು, ತಲೆಗೊಂದು ಚಹಾ ಕೊಟ್ಟು ಕೋಣೆಯ ಒಂದು ಭಾಗದಲ್ಲಿ ಕೂರಿಸಿದರು. ಆ ವಾಸನೆಯ ನಡುವೆ ವ್ಯಾಕರಿಕೆ ಬಂದು ನಾವು ಚಹಾ ಕುಡಿಯಲಿಲ್ಲ. ಎಲ್ಲರಿಗೂ ಒಂಥರಾ ಅವ್ಯಕ್ತ ಭಯ ಹಾಗೂ ಹಿಂಜರಿಕೆ. ಅಲ್ಲಿದ್ದ ಮೂರ್ನಾಲ್ಕು ಜನರು ಚಂದಗೆ ಐರನ್‌ಡ್ರೆಸ್ ಮಾಡಿ ಟೈ ಕಟ್ಟಿದ್ದರು. ಇದ್ದ ಒಂದೇ ಒಂದು ಹೆಣ್ಣು ಜನ ಒಳ್ಳೇ ಸೀರೆಯುಟ್ಟಿತ್ತು. ಮತ್ತೆ ಅವರೆಲ್ಲ ಮದುವೆ ಮನೆಯಷ್ಟು ತರಾತುರಿಯಲ್ಲಿ ಓಡಾಡುತ್ತಿದ್ದರು. ಆ ಭರಾಟೆಗೆ ಹೆದರಿದ ನಾವೆಲ್ಲರೂ ಗಪ್ಪನೆ ಕೂತು ಪಿಳಿಪಿಳಿ ನೋಡುತ್ತಿದ್ದೆವು. ಸ್ವಲ್ಪ ಹೊತ್ತಿನ ನಂತರ ರಿಜಿಸ್ಟ್ರೇಷನ್ ಫೀ ಎಂದು ಒಂದಷ್ಟು ದುಡ್ಡು ಕಿತ್ತರು. ದುಡ್ಡು ಕೊಟ್ಟ ಮೇಲಂತೂ ನೆರೆದಿದ್ದವರಲ್ಲಿ ಒಂದು ತೂಕದ ಗಾಂಭೀರ್ಯ ಹೆಚ್ಚಿತು.

ಅರ್ಧಗಂಟೆಯ ನಂತರ ಅಲ್ಲಿದ್ದವರ ಪೈಕಿ ಧಡೂತಿಯ ಒಬ್ಬಾತ “ಹಲೋ ಫ್ರೆಂಡ್ಸ್ ಗುಡ್ ಮಾರ್ನಿಂಗ್…” ಎನ್ನುವುದರ ಮುಖಾಂತರ ಮಾತು ಶುರುಮಾಡಿದರು. ಎಷ್ಟು ಆಕರ್ಷಕವಾಗಿ ಮಾತಾಡಿದರೆಂದರೆ ನೆರೆದಿದ್ದವರೆಲ್ಲ ಮೋಡಿಗೊಳಗಾಗಿ ಅವರು ಹೇಳಿದ್ದಕ್ಕೆಲ್ಲ ತಲೆ ಹಾಕುತ್ತ ಹೌದೌದು ಅನ್ನತೊಡಗಿದರು. ಅವರು ಗಂಟಾನುಗಟ್ಟಲೆ ಅದೇನೋ ಹೇಳಿ ಈ ಜಮಾನದಲ್ಲಿ ದುಡ್ಡು ಮಾಡೋದು, ಕೆಲಸ ಸಿಗೋದು, ಎಷ್ಟು ಕಷ್ಟ ಇದಕ್ಕೆ ಏಕೈಕ ಪರಿಹಾರವೆಂಬಂತೆ ತಾವು ಅದೆಂಥ ಬಂಗಾರದಂತಹ ಉಪಾಯ ಕಂಡುಹಿಡಿದಿದ್ದೇವೆ, ಅದೆಂಥ ಚಿದಂಬರ ರಹಸ್ಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ, ಅದಕ್ಕೆ ನೀವೆಲ್ಲಾ ನಮಗೆ ಅದೆಷ್ಟು ಋಣಿಯಾಗಿರಬೇಕು… ಇತ್ಯಾದಿ ಇತ್ಯಾದಿ ಮೀನಿಗೆ ಉಣಿಸುವ ಎರೆಹುಳದಂಥಾ ಮಾತುಗಳನ್ನು ಪುಂಖಾನುಪುಂಖವಾಗಿ ವಗೆದರು.

ಮಾತು ಮುಗಿಯುವಾಗ ಸೇರಿದವರಲ್ಲಿ 90% ಜನತೆ ಇನ್ನು ಇದೇ ವೇದವಾಕ್ಯವೆಂದು ಆ ಕ್ಷಣವೇ ತೀರ್ಮಾನಿಸಿಬಿಟ್ಟಿತ್ತು. ಬಂದ ಜನತೆಯು ಮಾನಸಿಕವಾಗಿ ಈ ಉಚ್ಛ್ರಾಯ ಸ್ಥಿತಿ ತಲುಪುತ್ತಿದ್ದಂತೆ ಆರಡಿ ಆಳ್ತನದ ಆ ವ್ಯಕ್ತಿಯು ಪಕ್ಕಕ್ಕೆ ತಿರುಗಿ ಅದೇನನ್ನೋ ತೋರಿಸುವಂತೆ ಒಬ್ಬ ಟೈ ಹುಡುಗನಿಗೆ ಆದೇಶ ನೀಡಿತು. ನಂತರ ಆ ಟೈ ಹುಡುಗ ಮುಂಭಾಗದ ಗೋಡೆಯ ಮೇಲಿದ್ದ ಸಣ್ಣ ಬಾಗಿಲಿನಂತಹ ಕಿಂಡಿಯನ್ನು ತೆರೆದಿಟ್ಟ. ನಾವು ಕಾಲಿಟ್ಟಾಗ ಬರುತ್ತಿದ್ದ ಗಬ್ಬು ಪರಿಮಳವು ಅದೇ ದ್ವಾರದಿಂದ ಅರ್ಥಾತ್ ಕಿಂಡಿಯಿಂದ ಬರುತ್ತಿತ್ತು ಮತ್ತು ಅದೀಗ ನಮ್ಮನ್ನು ಗಾಢವಾಗಿ ಆವರಿಸಿತು. ತನ್ಮೂಲಕ ಫೀಸು ಕೊಟ್ಟು ಮೆದುಳು ತೊಳೆಸಿಕೊಂಡವರ ಮಟ್ಟಿಗೆ ಚಿನ್ನದ ಖಜಾನೆ ದೋಚುವ ಸ್ವರ್ಗದ ಬಾಗಿಲು ತೆರೆದಂತಾಯಿತು.

ಆಗ ಇಂತಹ ಮಾರ್ಕೆಟಿಂಗ್ ತಂತ್ರ ಹೊಸದಾಗಿ ಶುರುವಾದ ಕಾಲ. ಇದೆಲ್ಲಾ ಇಂದು ಕೇಳಿದರೆ ನಗು ಬರಬಹುದು. ಇಂದು ಹೀಗೆ ದೋಚುವ ಕಂಪನಿಗಳು ಬೀದಿಗೆ ಹಲವಾರಿವೆ. ವ್ಯಾಪಾರದ ವಾಮಮಾರ್ಗಗಳನ್ನೂ ದ್ರೋಹ ಚಿಂತನೆಗಳನ್ನೂ ನಾವು ಇಂದು ಯೂನಿವರ್ಸಿಟಿ ಕೋರ್ಸುಗಳನ್ನಾಗಿ ಮಾರ್ಪಡಿಸಿ ಅವುಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಶಾಸನಬದ್ಧಗೊಳಿಸಿ ಡಿಗ್ರಿಗಳ ಹೆಸರಿನಲ್ಲಿ ಕಡುಬಿಳಿಯದ ಗಂಟಲುಗಳಲ್ಲಿ ತುರುಕುತ್ತಿದ್ದೇವಲ್ಲಾ… ಅಂದು ವ್ಯಾಪಾರ ಮಾಡುತ್ತಿದ್ದವರೆಲ್ಲಾ ಇಂತಹ ತಂತ್ರಗಳನ್ನು ಅವರವರ ಬುದ್ಧಿಶಕ್ತ್ಯಾನುಸಾರ ಉಪಯೋಗಿಸುತ್ತಿದ್ದರು.

ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾದ ಈ ಗುಂಪು ನಿದ್ರಾಹಾರಗಳನ್ನು ತೊರೆದು ಅಂತಹ ಸುದ್ದಿ ತಂದಿದ್ದ ಕರಪತ್ರದ ಹಿಂದೆ ಬಿದ್ದರು. ಎಲ್ಲರೂ ಮಠದ ಕಟ್ಟೆಯ ಮೇಲೆ ಸಭೆ ಸೇರಿ ಒಮ್ಮತದಿಂದ ತೀರ್ಮಾನಿಸಿ ಆಫೀಸು ಹುಡುಕಿ ಹೊರಟೇ ಬಿಟ್ಟರು.

ಇರಲಿ, ಈಗ ಕಥೆಗೆ ಬರೋಣ, ಕಿಟಕಿಯಂತಹ ಬಾಗಿಲು ತೆಗೆದು ಅವರು ಈ ಪರಿಮಳದಲ್ಲಿ ನಮಗೆ ತೋರಿಸಿದ್ದು ಬೇರೇನೂ ಅಲ್ಲ ‘ಅಣಬೆ ಬೆಳೆಯುವುದು ಹೇಗೆ’ ಅನ್ನುವುದನ್ನು..! ಅಣಬೆಯನ್ನು ಬ್ರಾಹ್ಮಣ ಸಮಾಜವು ಮಾಂಸದ ಪರ್ಯಾಯವಾಗಿ ‘ವಿಶ್ವಾಮಿತ್ರ ಸೃಷ್ಟಿ’ ಎಂದೋ ತೀರ್ಮಾನಿಸಿ ಅದನ್ನಾಗಲೇ ವರ್ಜ್ಯ ಮಾಡಿಯಾಗಿತ್ತು. ಇದೊಂದು ತಾಮಸ ಪದಾರ್ಥವೆಂತಲೂ, ತಿಂದವರಿಗೆ ನಾಲಿಗೆ ದಪ್ಪವಾಗಿ ಉಚ್ಚಾರಣೆ ಕಳೆದು ಹೋಗುವುದೆಂತಲೂ, ಮಳೆಗಾಲದಲ್ಲಿ ಆಕರ್ಷಕವಾಗಿ ಕಾಣುತ್ತಿದ್ದ ಅವುಗಳನ್ನು ಮುಟ್ಟಬಾರದೆಂದು ನಮಗೆ ತಾಕೀತಾಗುತ್ತಿತ್ತು.

ವಿಪರ್ಯಾಸವೆಂಬಂತೆ ಈಗ ಕೇರಿಯ ಅರ್ಧದಷ್ಟು ಯುವ ಸಮುದಾಯವು ತಮ್ಮ ಭವಿಷ್ಯ ಬಂಗಾರವಾಗಿಸಲು ಅದೇ ನಾಯಿಕೊಡೆ ಬೆಳೆಗೆ ಮಾರು ಹೋಗಿತ್ತು. ಆದರೇನು!? ದುಡ್ಡು ಕೊಟ್ಟಾಗಿದೆ, ಹೆದರಿ ಹೆಜ್ಜೆ ಹಿಂತೆಗೆಯುವ ಹಾಗಿಲ್ಲ. ಮೆದುಳು ತೊಳೆದ ಫಲವಾಗಿ ಅಣಬೆ ಬೆಳೆದೇ ತೀರಬೇಕೆಂಬ ಛಲ ಹುಟ್ಟಿದೆ. ಆದರೂ ಜೋಳದ ಕಾಳಿಂದ ಬೆಳೆಯುವುದಾಗಿ ಅದೂ ಸಸ್ಯಾಹಾರವೇ ಎಂಬ ವಿತಂಡವಾದಕ್ಕೆ ಬುರುಡೆಗಳು ಸಿದ್ಧವಾದವು. ಅದಾಗಲೇ ಯಾರೋ ಮನೆಯಲ್ಲೇ ಬೆಳೆದು ಪ್ಯಾಕ್ ಮಾಡಿಕೊಟ್ಟಿದ್ದ ತಾಜಾ ಅಣಬೆಗಳ ಅರ್ಧ ಕೆಜಿಯ ನೂರಾರು ಪ್ಯಾಕೆಟ್‌ಗಳು ಕಣ್ಣು ಕುಕ್ಕಿದವು. ಅವರಿಗೆ ಎಷ್ಟು ಲಾಭ ಬಂದಿರಬಹುದೆಂದು ನೆನೆದು ನಮ್ಮವರ ಹೊಟ್ಟೆ ಮಾತ್ಸರ್ಯದಿಂದ ಧಗಧಗ ಉರಿಯಿತು.

ಆತ್ಮಾರಾಮನ ಸಹಾಯದಿಂದ ರಾಮಣ್ಣನ ಮನೆಯ ಹಿಂಭಾಗದ ಕೋಣೆಯನ್ನು ಬಾಡಿಗೆ ಹಿಡಿದು ಅಲ್ಲಿ ಅಣಬೆ ಕೃಷಿಗೆ ಓನಾಮ ಹಾಡಲಾಯಿತು. ಅದು ಬಿಟ್ಟರೆ ಅನ್ಯಮಾರ್ಗವಿಲ್ಲದೆ ಪಕ್ಕದ ಬೀದಿಯ ಆಫೀಸರನ ಮನೆಗೆ ಹೋಗಬೇಕಾಗಿತ್ತು. ಆದರೆ ಅಲ್ಲಿ ಅವನ ಹೆಂಡತಿಯ ಕಾಟ ಎಂಬುದು ಇವರ ದರ್ದು! ಅಂತೂ ಒಂದು ಶುಭದಿನ ಒಣಹುಲ್ಲಿನ ರಾಶಿ ಬಂದು ಬಿದ್ದು ಅಣಬೆ ಬೆಳೆಗೆ ನಾಂದಿಯಾಯಿತು. ಕೋಣೆಯ ಒಳಗೆ ಒಂದಷ್ಟು ಕಬ್ಬಿಣದ ರ‌್ಯಾಕ್‌ಗಳು ಬಂದವು. ಒಬ್ಬೊಬ್ಬರದು ಒಂದೊಂದು ಭಾಗ, ಒಟ್ಟಾರೆ ಎಲ್ಲಾ ಸೇರಿ ರೂಮಿನೊಳಗೆ ಬೆಳೆ ತೆಗೆಯುವುದು ಎಂದು ತೀರ್ಮಾನವಾಯಿತು. ರ‌್ಯಾಕಿನ ಒಂದು ಪಟ್ಟಿಯಲ್ಲಿ ಮೂರರಂತೆ ಒಣಹುಲ್ಲಿನ ಸಿಂಬಿ, ಅದರ ಮಧ್ಯದಲ್ಲಿ ಸಂಸ್ಕರಿಸಿದ ಬಿಳಿಜೋಳದ ಮುತ್ತಿನಂತ ಕಾಳುಗಳು, ಬಕೀಟೊಂದರಲ್ಲಿ ಅವರೇ ಕೊಟ್ಟಿದ್ದ ಫಿನಾಯಿಲ್‌ನಂತಹ ರಾಸಾಯನಿಕ ದ್ರಾವಣವನ್ನು ಕದರಿದ ನೀರು. ಕೊಡುವಾಗ ಆ ಧಡೂತಿ ಮನುಷ್ಯ ಹೇಳಿಯೇ ಕೊಟ್ಟಿದ್ದನಲ್ಲಾ.. “ನಾವು ಹೇಳಿದಂತೆ ಮಾಡಬೇಕು, ಸ್ವಲ್ಪವೇ ತಪ್ಪಾದರೂ ಬರುವುದಿಲ್ಲ. ಇನ್ನು ನೀವು ಅಣಬೆಯನ್ನು ಮರೆತುಬಿಡಿ” ಅಂತ, ಹಾಗಾಗಿ ಪ್ರತಿ ಹಂತದಲ್ಲೂ ಕತ್ತಿಯ ಅಲಗಿನ ಮೇಲೆ ಭರತನಾಟ್ಯ ಮಾಡುವ ಹಾಗೆ ಎಲ್ಲವನ್ನು ತಪ್ಪದೆ ಮಾಡಿದೆವು. ನಂತರ ದಿನಕ್ಕೆರಡು ಬಾರಿ ಹೆಣ ತೊಳೆದ ನೀರಿನಂತಹ ಕಟುವಾಸನೆಯ ದ್ರಾವಣದ ಪ್ರೋಕ್ಷಣೆ.

ಅದು ಏಪ್ರಿಲ್ ತಿಂಗಳಾಗಿ ಶಾಲೆ-ಕಾಲೇಜುಗಳಿಲ್ಲದೆ ನಾವು ಅಣಬೆ ಕೋಣೆಯ ಖಾಯಂ ಜವಾನರಾಗಿಬಿಟ್ಟೆವು. ಮುಂದಿನ ಹದಿನೈದು ದಿನ ಉಸಿರಾಟ ತಪ್ಪಿದರೂ ಅಣಬೆಯ ಲಾಲನೆ-ಪಾಲನೆ ತಪ್ಪಲಿಲ್ಲ. ನಮಗಾದರೂ ಈ ಕ್ರಾಂತಿಕಾರಿ ಯುವಕರು ಸಿನೆಮಾದ ಹೀರೋಗಳಂತೆ ಕಾಣುತ್ತಿದ್ದರು. ಅಸಾಧ್ಯವನ್ನು ಸಾಧಿಸುವ, ನಾಳೆ ಬೆಳಗಾದರೆ ಹೊಳೆಯುವ ಕಾರಿನಲ್ಲಿ ಕನ್ನಡಕ ಹಾಕಿಕೊಂಡು ಇಳಿದು ಬರುವ, ದೊಡ್ಡ ಬಂಗಲೆಗಳ ಮಾಲೀಕರಾಗುವವರನ್ನು ನಾವು ಈಗಲೇ ಹತ್ತಿರದಲ್ಲಿ ಒಡನಾಡುವ ಚೇಲಾಗಳಾಗಿ ಕೇರಿಯೊಳಗೆಲ್ಲ ದೊಡ್ಡ ಪೋಸು ಕೊಡತೊಡಗಿದೆವು. ಮನೆಗೆ ಬಂದರೆ ಮಾತ್ರ ಕರ್ಮ ಕಾಡಿರುತ್ತಿತ್ತು. ಅಮ್ಮ ನಮ್ಮನ್ನು ಕೊಳಚೆ ಹೆಗ್ಗಣಗಳಂತೆ ಕಂಡು ಬರುಬರುತ್ತಲೇ ಸ್ನಾನದ ಮನೆಗೆ ತಳ್ಳುತ್ತಿದ್ದರು. ಆದರೂ ಧೃತಿಗೆಡದೆ ಯಾವುದಕ್ಕೂ ಜಗ್ಗದೆ ಬಗ್ಗದೆ, ಅಣಬೆ ಬೆಳೆ ಕೈಂಕರ್ಯ ಸಾಂಗವಾಗಿ ನಡೆಯುತ್ತಿತ್ತು.

ಆದರೆ ಕೇರಿಯ ಒಳಗೆಲ್ಲ ಅಣಬೆ ಬೆಳೆಗಾರರು ಮಾಂಸದಂಗಡಿಯ ಕಟುಕರಂತೇ ಪ್ರಚಾರವಾದರು. ಮಾಡಬಾರದ್ದು ಮಾಡಿದವರಂತೆ ತಾತ್ಕಾಲಿಕ ಗಡಿಪಾರಿಗೆ ಒಳಗಾದರು. ಅವರ ಹೆತ್ತವರಂತೂ ಅವಮಾನದಿಂದ ಕುಗ್ಗಿ ಹೋದರು. ಆದರೂ ಕಣ್ಣೊಳಗೆ ಅರರ್ಧ ಕೆಜಿ ಅಣಬೆ ತುಂಬಿಕೊಂಡ ಯುವಪಡೆ ವಾಂತಿ ಬಂದರೂ ಬಿಡದೆ ಅಣಬೆ ಸಾಕುವುದರಲ್ಲಿ ಮಗ್ನರಾದರು.

ಆರಂಭದ ಕೆಲವು ದಿನ ಆ ದ್ರಾವಣದ ಪರಿಮಳ ಮೂಗೊಳಗೆ ದಟ್ಟವಾಗಿ ಆವರಿಸಿ ಹೊಟ್ಟೆಗೆ ಅನ್ನವೂ ದಕ್ಕದೇ ಬಡವಾಗಿ ಹೋದರು. ಅಷ್ಟಾದರೂ ‘ಬಂಗಾರದ ಮನುಷ್ಯ’ ಸಿನಿಮಾ ನೆನೆಯುತ್ತ ಅಣ್ಣಾವ್ರಂತೆ ಕಷ್ಟಜೀವಿಗಳಾಗಬೇಕೆಂದು ಭಾರೀ ಹೂಗನಸು ಹೊತ್ತು ಚಾಕರಿ ಮಾಡಿದರು. ಇನ್ನೇನು ಇವತ್ತು ನಾಳೆ ಬೆಳ್ಳಿ ಹೂವಿನಂತಹ ಅಣಬೆಗಳು ತಲೆ ಹೊರಗೆ ಹಾಕಿ ನಗುತ್ತವೆಂಬ ಅಕ್ಕರಾಸ್ಥೆಯಿಂದ ಕಾಯತೊಡಗಿದರು. ತಿಂಗಳ ಮೇಲೆ ಒಂದು.. ಎರಡು.. ಮೂರು.. ಎಂದು ದಿನಗಳನ್ನು ಎಣಿಸಿದರೂ ಹೆರಿಗೆಯಾಗದ ಹುಡುಗಿಯಂತೆ ಅಣಬೆ ಒಳಗೇ ಅವಿತು ಕುಳಿತಿತ್ತು.

ನಂತರದ ದಿನಗಳಲ್ಲಿ ಮೆಲ್ಲನೆ ಒಂದು ಅಸಹನೀಯ ದುರ್ವಾಸನೆ ಕೋಣೆಯೆಲ್ಲಾ ಪಸರಿಸತೊಡಗಿ ಹೊಟ್ಟೆ ತೊಳೆಸಿ ಉಮ್ಮಳಿಕೆ ಬರತೊಡಗಿತು. ನಾಲ್ಕು ದಿನ ಕಳೆದು ಅವರಲ್ಲೊಬ್ಬನಾದ ಮೂಲೆ ಮನೆ ಮುರಳೀಧರನಿಗೆ ಅನುಮಾನ ಶುರುವಾಗಿ ಕಡ್ಡಿ ಹಿಡಿದು ಹುಲ್ಲುಮುರಿಗೆ ತಿವಿದು ನೋಡಲು, ಅದು ಅಣಬೆಯ ವಾಸನೆ ಅಲ್ಲವೆಂದೂ ದ್ರಾವಣದಿಂದ ಕೊಳೆತು ನಾರುತ್ತಿರುವ ಹುಲ್ಲಿನ ವಾಸನೆಯೆಂದೂ ತಿಳಿಯಿತು. ಇದನ್ನು ಕಂಡು ಹತಾಶರಾದ ಯುವಪಡೆ ಪೆಟ್ಟುತಿಂದ ಮಂಗಗಳಂತೆ ಮುಖ ಮಾಡಿದರು. ಕೆಲವರಿಗಂತೂ ಇನ್ನೂ ತೀರದ ಆಶಾಭಾವ. “ಏ… ಹುಲ್ಲು ಕೊಳೆತ್ರೇ ಮೊಳಕೆ ಬರೋದು ಕಣೋ ಮಂಕೆ.. ಅವತ್ತು ಆಫೀಸಿನ ರೂಮಿಂದಲೂ ಹಿಂಗೇ ವಾಸನೆ ಬಂದಿರಲಿಲ್ವಾ… ಅದರ ಜೊತೆಗೆ ಬೆಳೆದು ಹೊರಚಾಚಿಕೊಂಡಿದ್ದ ಅಣಬೆ ನೋಡಲಿಲ್ಲವೇನೋ.. ಸೇಮ್ ಛತ್ರಿ ಥರಾ.. ಕಾಯೋಣ ಇರ್ರೋ.. ತೀರಾ ಕೊಳೆತ್ರೆ ಬಿಸಾಡಿದ್ರಾತು..” ಅಂದ ಸಂತಿಯೇ ಪರಮಜಾಣನಂತೆ ಕಂಡು ಎಲ್ಲರೂ ಸೈ ಸೈ ಎಂದು ಸುಮ್ಮನಾದರು.

ಪಾಪ ಆ ಹುಡುಗರು ಇತ್ತ ಪೂರ್ತಿ ಕಲಿತವರಲ್ಲ, ಕೆಲಸ ಇದ್ದವರಲ್ಲ, ಅತ್ತ ವೈದಿಕ ಸಮಾಜದಲ್ಲಿ ಬದುಕಿದವರಲ್ಲ, ಕಡೆಗೆ ಕೃಷಿಯನ್ನಂತೂ ಬಲ್ಲವರಲ್ಲವೇ ಅಲ್ಲ. ಅಗದೀ ಅಮಾಯಕರ ಗಡಂಗು. ವಾರ ಕಳೆದರೂ ಅಲ್ಲೊಂದು ಇಲ್ಲೊಂದು ಹೆಬ್ಬೆಟ್ಟು ಗಾತ್ರದ ಮೊಳಕೆಗಳನ್ನು ಹೊರತುಪಡಿಸಿ ವಾಸನೆ ಹೆಚ್ಚಿತೇ ವಿನಃ ಯಾವ ಫಲವೂ ಕಾಣಲಿಲ್ಲ. ದಿನಗಳೆಯುತ್ತಾ ತೀರಾ ಹೆಣದಂತೆ ವಾಸನೆ ಬರತೊಡಗಿತು‌. ಅಕ್ಕಪಕ್ಕದ ಮನೆಯವರೆಲ್ಲಾ ಅನುಮಾನದಿಂದ ಏನೋ ಸಂತೀ… ಯಾಕೋ ಪಚ್ಚಿ.. ಏನಾಯ್ತೋ ಮುರಳಿ.. ಎಂದು ಕೇಳ ಹತ್ತಿದ ಮೇಲೆ ಇವರಿಗೆ ಬೇರೆ ಮಾರ್ಗವೇ ಇರಲಿಲ್ಲ. ಗುಂಪಿನ ಪೈಕಿ ಕೊಂಚ ಜಾಣ ಮುರಳಿ “ಲೇ.. ಕೇರಿಯವರು ಗಲಾಟೆ ಮಾಡುವ ಮೊದಲು ಏನಾದರೂ ಮಾಡೋಣ ಕಂಡ್ರೋ.. ಸಾಕು ಈ ಹುಚ್ಚಾಟ..” ಎಂದು ಚಡಪಡಿಸತೊಡಗಿದನು.

ಇದಾದ ನಂತರ ತಡ ಮಾಡದೇ ಹುಲ್ಲು ಮುರಿಯನ್ನು ಎತ್ತಿ ಮಾರ್ಕೆಟಿನ ದೊಡ್ಡ ತಿಪ್ಪೆಗೆ ಎಸೆದು ಬಂದು ಹೆಂಡತಿಯ ಶವಸಂಸ್ಕಾರ ಮಾಡಿ ಬಂದವರಂತೆ ರೂಮಿನಲ್ಲಿ ಒಟ್ಟಾಗಿ ಸುತ್ತುಗಟ್ಟಿ ಕೂತು ಕಣ್ಣೀರಿಟ್ಟರು. ಕೈಲಿದ್ದ ಅಲ್ಪಸ್ವಲ್ಪ ದುಡ್ಡು ಕರಗಿಹೋಗಿತ್ತು. ಇಡೀ ಕೇರಿಯ ದ್ವೇಷ ಕಟ್ಟಿಕೊಂಡಾಗಿತ್ತು. ರಾಮಣ್ಣನಿಗೆ ಎರಡು ತಿಂಗಳ ಬಾಡಿಗೆ ಕೊಡಬೇಕಿತ್ತು. ಎಲ್ಲಾ ಸೇರಿ ಈ ಬ್ರಾಹ್ಮಣ ಯುವಜನತೆಯ ಗುಂಪಿನ ಪಾಲಿಗಂತೂ ನರಕವೇ ಪಕ್ಕೆಲುಬಿಗೆ ಸಿಕ್ಕಿಕೊಂಡಂತಾಗಿತ್ತು.

ಈಗಲೂ ಬ್ರಾಹ್ಮಣ ಜನಾಂಗವನ್ನು ಬುದ್ಧಿವಂತರು ಅನ್ನುವವರಿದ್ದಾರೆ. ಆದರೆ ನನಗೆ ಈ ಬಗೆಗೆ ವಿಸ್ಮಯವಿದೆ, ಕೇವಲ ಬುದ್ಧಿಮತ್ತೆಯಿಂದ ಜನಾಂಗವನ್ನು ಜಾತಿಯನ್ನು ಅಳೆಯಲು ಅದು ಹೇಗೆ ತಾನೇ ಸಾಧ್ಯ? ನಾವಂತೂ ಕೇರಿಯ ಯುವಜನತೆಯಲ್ಲಿ ಶತಮೂರ್ಖರನ್ನು ಕಂಡಿದ್ದೇವೆ. ತಾವು ಕುಳಿತ ಕೊಂಬೆಯನ್ನೇ ಕಡಿದುಕೊಂಡ ಕಾಳಿದಾಸರನ್ನು ನೋಡಿ ನಕ್ಕಿದ್ದೇವೆ.

ಇದೆಲ್ಲಾ ಒಂದು ಸುಖಾಂತ್ಯಕ್ಕೆ ಬಂದಾಗ ಜೂನ್ ಮೊದಲ ವಾರ. ಹುಲ್ಲನ್ನು ತಿಪ್ಪೆಗೆ ಎಸೆದ ಮರುದಿನವೇ ಯುವಜನತೆಯ ದುಃಖ ತೊಳೆಯಲೋ ಎಂಬಂತೆ ಆಕಾಶ ಹರಿದು ಬಿದ್ದಂತೆ ಕುಂಭದ್ರೋಣ ಮಳೆ ಸುರಿಯಿತು. ತಿಪ್ಪೆಗೆ ಬಿದ್ದ ಹುಲ್ಲಿನ ಮೇಲೆ ಮಳೆಹನಿಗೆ ಮುಖವೊಡ್ಡಿದ ಜೋಳ ಮೊಳೆತು ಒಂದೊಂದೇ ಅಣಬೆ ಮೇಲೆದ್ದವು. ಮೂರ್ನಾಲ್ಕು ದಿನದಲ್ಲಿ ತಿಪ್ಪೆಯಿಡೀ ಸಿಂಗರಿಸಿದರಂತೆ ಬಿಳಿ-ಬೂದು ನಾಯಿಕೊಡೆಗಳು ನಾಟ್ಯವಾಡತೊಡಗಿದವು. ಮಳೆಗೆ ಪುಳಕಗೊಂಡಂತೆ ಅವು ಬೆಳೆದು ಮೈತುಂಬಿ ನಳನಳಿಸಿದವು. ಶನಿವಾರದ ಗುಡಿಗೆ ಬಂದವರೆಲ್ಲ ಈ ಸೋಜಿಗ ನೋಡಿ ಖುಷಿಪಟ್ಟರು. ಕೆಲವರು ಮೂಗು ಮುರಿದರು, ಕೆಲವರು ಯುವಜನತೆಗೆ ಆದ ಅನ್ಯಾಯಕ್ಕೆ ಗೋಡೆ ಮೇಲಿನ ಹಲ್ಲಿಗಳಂತೆ ಲೊಚ್ ಲೊಚ್ ಎಂದು ಹೋದರು. ಇದನ್ನೆಲ್ಲಾ ಎದುರಿಸಲಾರದೇ ಈ ಯುವಜನರು ದಿನಗಟ್ಟಲೇ ಮನೆಯಾಚೆ ಬರದಂತೆ ಒಳಗೆ ಬಚ್ಚಿಟ್ಟುಕೊಂಡರು. ಆದರೂ ಮತ್ತೆ ಮಠದ ಕೇರಿಯ ಒಳಗೆ ಮಾಮೂಲಿನಂತೆ ಹಗಲು-ರಾತ್ರಿಗಳು ಬಂದು ಹೋದವು.