ಇದು ಕನ್ನಡದ ಹೊಸ ಕವಿತೆಗಳ ತಾಣ. ಬಿರಿದ ಕುಸುಮಗಳಿಂದ ಕಿಕ್ಕಿರಿದುಹೋಗಿರುವ ಖುಷಿಯ ಟೊಂಗೆಗಳಲ್ಲಿ ಸುಮ್ಮನೇ ಕುಳಿತಿರುವ ಒಂಟಿಹಕ್ಕಿಗಳು ಇಲ್ಲಿರುವ ಈ ಕವಿತೆಗಳು. ಯಾವುದೋ ಒಂದು ಮಾತಿಗೆ ಹೆದರಿ, ನೂರು ನೋಟಕೆ ಬೆದರಿ ಕೈಲಾಗದೇ ಕುಳಿತಿರುವ ಸಾಲುಗಳು ಇವು. ಯಾವಾಗಲೂ ಈ ಜಾಗ ಹೀಗೆಯೇ ಇರುವುದಿಲ್ಲ. ಕೆಲವೊಮ್ಮೆ ಜೋರು ಬಾಯಿಯ ಗಟ್ಟಿ ತೋಳಿನ ಕವಿತೆಗಳೂ ಇಲ್ಲಿರುತ್ತವೆ. ಆದರೆ ಇವೆಲ್ಲವೂ ಕನ್ನಡದ ಕವಿತೆಗಳು. ಒಂದಕ್ಕೊಂದು ಸವತಿಯರಂತೆ ಒಂದೇಕಡೆ ಹೇಗಾದರೂ ಏಗಿಕೊಂಡಿರುತ್ತವೆ. ಒಮ್ಮೊಮ್ಮೆ ಇದೇ ತರಹದ ಜಾಯಮಾನಗಳ ಪರಭಾಷಾ ಕವಿತೆಗಳೂ ಇಲ್ಲಿ ಕನ್ನಡಕ್ಕೆ ಬಂದಿರುತ್ತವೆ.ವ್ಯಾಲಂಟೈನ್ ದಿನವಾದ ಇಂದು ರಜನಿ ಗರುಡಅನಂತಮೂರ್ತಿಯವರಿಗೆ ಬರೆದ ಪ್ರೇಮ ಕವಿತೆ ಇದೆ.

ಅನಂತಮೂರ್ತಿಯವರಿಗೊಂದು ಪ್ರೇಮಪತ್ರ!!!
ವ್ಯಾಲೆಂಟೈನ್ ದಿನ!
ಯಾರಿಗೆ ಕೊಡಲಿ ಹೂ?
ಹುಡುಕಿದೆ,ಕೈಯಲ್ಲಿ ಹೂ ಹಿಡಿದು
ಸುತ್ತಾಡಿದೆ.
ಸಿಗಲಿಲ್ಲ ಯಾರೂ……….
ನೀವು ತುಂಗೆಯ ತಡಿಯಲ್ಲಿ ಬೆಳೆದರೆ,
ನಾನು ಅಘನಾಶಿನಿಯಲ್ಲಿ ಆಡಿದ್ದೇನೆ!
ಮಳೆಯ ನೆರಳಿನ ನಾಡಿನಲ್ಲಿ ನೀವು
ವಿರಾಮದ ದಿನ ಕಳೆಯುತ್ತಿದ್ದರೆ,
ನಾನು ಬೇಂದ್ರೆ ನೆಲದಲ್ಲಿ
ದುಡಿಯುತ್ತಿದ್ದೇನೆ!
ನನ್ನ ಪುಸ್ತಕದ ಸಂಗ್ರಹಗಳಲ್ಲಿ,
ದಿನಪತ್ರಿಕೆಗಳಲಿ, ಸುದ್ದಿ ವಾಹಿನಿಗಳಲಿ,
ಬುದ್ಧಿಜೀವಿಗಳೊಂದಿಗೆ,ಕಥೆಕಾದಂಬರಿಗಳಲಿ,
ನಿಮ್ಮದೇಸುದ್ದಿ!!
ನಟರನ್ನು ಮೀರಿಸುವ ಭಾವಭಂಗಿ
ಯುವಕರು ನಾಚಿಸುವಂತ
ದಿರಿಸು ಧರಿಸಿ,
ಸಮಾಜವಾದದ ಗಡ್ಡವನ್ನು
ಟ್ರಿಮ್ಮಾಗಿಸಿ,
ಭಾಷಣದ ಗತ್ತು ಗೈರತ್ತಿಗೆ ಮರುಳಾದವರೆಷ್ಟು?
ನಿತ್ಯ ಜೀವನ ಪ್ರೇಮಿ!
ಈ ಯುಗದ ಮಾತುಗಾರ!!
ಕನ್ನಡಕ್ಕೆ ಇಂಗ್ಲೀಷನ್ನು ಕಸಿಮಾಡುತ್ತ,
ಗಾಂಧೀ, ಅಂಬೇಡ್ಕರ್, ಮಾರ್ಕ್ಸ್‌ರನ್ನೆಲ್ಲ,
ಸಮಾಜವಾದದ ಕಣ್ಣಲ್ಲೆ ನೋಡುತ್ತ
ಮಠಮಾನ್ಯರನ್ನೆಲ್ಲ ಕೆಣಕುತ್ತ,
ವೈದಿಕರಿಗೆ ಉಗಿಯುತ್ತ, ಉಗಿಸಿಕೊಳ್ಳುತ್ತ,
ನಿತ್ಯ ಸುದ್ದಿಯಲ್ಲಿರುವ ವಿಪ್ರೋತ್ತಮ!!
ಹೆಜ್ಜೆ ಸೋತಾಗ ನಿಮ್ಮ ನೆನೆಯುತ್ತೇನೆ,
ಸೋಲಿಗೊಮ್ಮೆ ದಿಕ್ಕೆಟ್ಟು,
ಗೆಲುವಿಗೊಮ್ಮೆ  ಕ್ಷಣ ಮೈದುಂಬಿಕೊಳ್ಳುವ
ನಾನು, ನನ್ನ ಅರಿಯದೆ ತಡಕುತ್ತೇನೆ-
ಮಿಡುಕುತ್ತೇನೆ.
ಇಟ್ಟ ಹೆಜ್ಜೆಗುರುತು ಮಾಯವಾಗಿ,
ಕ್ರಮಿಸಬೇಕಿರುವ ದೂರದ ದಾರಿ
ಹುಸಿಗುರಿಗೆ ಮುಖಮಾಡಿವೆ.
ನಿಮ್ಮ ಬದುಕ ಸವಿಗೆ
ಮಾರುಹೋಗುತ್ತೇನೆ,
ದಟ್ಟ ಜೀವನಪ್ರೀತಿಗೆ
ಬೆರಗಾಗಿದ್ದೇನೆ!
ಹೇಳಿ,
ನಿಮಗಲ್ಲದೇ ಯಾರಿಗೆ ಕೊಡಲಿ ಹೂ?
ಆಯ್ಕೆ ಇಲ್ಲ ನನಗೆ………….
ಗಂಧ ಒಲ್ಲದ, ಮೋಹಕತೆ ಇಲ್ಲದ,
ಸಹ್ಯಾದ್ರಿಯ ಕಾಡು ಹೂ…