ರಿಚರ್ಡ್ ಡಾಕಿನ್ಸನ ‘ದ ಬ್ಲೈಂಡ್ ವಾಚ್‌ಮೇಕರ್” ಹಿಂದೆ ಓದಿದ್ದೆ. ವಿಕಸನದ ಘಟ್ಟಗಳಲ್ಲಿ ಕಂಡುಬರುವ ಜಾಣ್ಮೆಯನ್ನು ವಿವರಿಸಲು ಯಾವುದೇ ದೈವತ್ವದ ಹಂಗು ಬೇಡ. ಡಾರ್ವಿನನ ವಿಕಾಸವಾದದಲ್ಲೇ ಮತ್ತು ಇತ್ತೀಚಿನ ಹಲವು ವೈಜ್ಞಾನಿಕ ಕಾಣ್ಕೆಗಳಲ್ಲಿ ಅದನ್ನು ವಿವರಿಸಲು ಬರುತ್ತದೆ. ಅಷ್ಟೇ ಅಲ್ಲ ವಿವರಿಸಲು ಬೇಕಾದ ಆಧಾರಗಳೂ ಹೆಚ್ಚುತ್ತಲೇ ಇದೆ ಎಂದು ಸರಳ ನಿರೂಪಣೆಯೊಂದಿಗೆ ವಿವರಿಸುವ ಹೊತ್ತಿಗೆ “ದ ಬ್ಲೈಂಡ್ ವಾಚ್‌ಮೇಕರ್‌”.

“ವ್ಯೂ ಫ್ರಮ್ ಮೌಂಟ್ ಇಂಪ್ರಾಬಲ್” ರಿಚರ್ಡ್ ಡಾಕಿನ್ಸನದೇ “ಕ್ಲೈಂಬಿಂಗ್ ಮೌಂಟ್ ಇಂಪ್ರಾಬಬಲ್” ಎಂಬ ಹೊತ್ತಿಗೆಯ ಸಂಗ್ರಹಿತ ರೂಪ. (Richard Dawkins: View from Mount Improbable/Climbing Mount Improbable) ಡಾರ್ವಿನನ ವಿಕಾಸವಾದವನ್ನು ತುಂಬಾ ನಲ್ಮೆಯಿಂದ ಮತ್ತು ಅತ್ಯಂತ ಆಳವಾಗಿ ಪ್ರತಿಪಾದಿಸುವ ಪುಸ್ತಕ. ಈ ಪುಟ್ಟ ಹೊತ್ತಿಗೆಯನ್ನು ಪ್ರಾಣಿಗಳಲ್ಲಿ ಕಣ್ಣಿನ ಬೆಳವಣಿಗೆಯ ಎಳೆಯನ್ನು ಹಿಡಿದು ಬರೆದಿದ್ದಾನೆ. ವಿಕಾಸವಾದದ ನೆಲೆಯಲ್ಲಿ ಮತ್ತು ಅದರ ಆಧಾರದ ಮೇಲೆ ಹಲವು ಪ್ರಾಣಿ ಸಂಕುಲದ ಕಣ್ಣಿನ ಬೆಳವಣಿಗೆಯನ್ನು ವಿವರಿಸುತ್ತಲೇ ವಿಕಾಸವಾದದ ಗಟ್ಟಿತನ ಮತ್ತು ಆಳವಿಸ್ತಾರದ ಪರಿಚಯವನ್ನು ಮಾಡುತ್ತಾನೆ. “ಡಾರ್ವಿನನ ವಿಕಾಸವಾದದಿಂದ ಪ್ರಾಣಿಲೋಕದ ಎಷ್ಟೋ ಅಂಶಗಳನ್ನು ವಿವರಿಸಲು ಸಾಧ್ಯವಿಲ್ಲ. ಯಾಕೆಂದರೆ ಜೀವ ಸಂಕುಲದ ಹುಟ್ಟಿನ ಹಿಂದೆ, ಈ ವಿಶ್ವದ ಹುಟ್ಟಿನ ಹಿಂದೆ ಒಂದು ವಿಸ್ಮಯ ಶಕ್ತಿ ಕೆಲಸ ಮಾಡುತ್ತಿದೆ. ಅಷ್ಟೇ ಅಲ್ಲ ಅದಕ್ಕೆ ಅರಿವಿದೆ. ಯಾವುದೋ ಮಹಾ ವಿನ್ಯಾಸದ ಮೇಲೆ ಈ ವಿಶ್ವ, ಅದರಲ್ಲಿನ ಜೀವರಾಶಿ ಹುಟ್ಟು ಪಡೆದಿದೆ. ಆ ಶಕ್ತಿ ಅಥವಾ ಅರಿವನ್ನು ದೇವರು ಎನ್ನಿ ಇನ್ನೇನೋ ಎನ್ನಿ ಆದರೆ ಅಂಥದ್ದೊಂದು ಇದೆ” ಎಂದು ಪ್ರತಿಪಾದಿಸುವ ಸೃಷ್ಟಿಕರ್ತ/ಕ್ರಿಯೇಷನಿಸಂನ ಪಂಗಡಗಳ ವಾದದ ಬಗ್ಗೆ ಲೇಖಕನಿಗೆ ಸದಾ ಎಚ್ಚರವಿದೆ. ಅದನ್ನು ತೀಕ್ಷ್ಣವಾಗಿ ವಿರೋಧಿಸುತ್ತಾ, ಕೆಲವೊಮ್ಮೆ ಅಸಹನೆಯಿಂದಲೇ ತನ್ನ ವಾದಗಳನ್ನು ಮಂಡಿಸುತ್ತಾನೆ.

ಪ್ರಾಣಿ ಲೋಕದ ವಿಕಸನ ಮತ್ತು ವಿಚಿತ್ರಗಳನ್ನು ವಿವರಿಸುವ ತನ್ನ ವಿಕಾಸವಾದ ಕಣ್ಣಿನ ರಚನೆಗೂ ಆಧಾರವಾಗಬಲ್ಲದೆ ಎಂಬ ಯೋಚನೆಗೆ ‘ಹೆದರಿಕೆಯಿಂದ ನಡುಗುತ್ತೇನೆ’ ಎಂದಿದ್ದನಂತೆ ಡಾರ್ವಿನ್. ತನ್ನ ವಿಕಾಸವಾದದ ಬಗ್ಗೆಗಿನ ಸಂಶಯಕ್ಕಿಂತ ಕಣ್ಣಿನ ರಚನೆಯ ಸಂಕೀರ್ಣತೆಯ ಬಗ್ಗೆ ಮಾಡಿದ ಟಿಪ್ಪಣಿ ಅದು ಅನಿಸುತ್ತದೆ. ಅದನ್ನೇ ಆಧಾರವಾಗಿಟ್ಟುಕೊಂಡು ಇಲ್ಲಿ ಲೇಖಕನ ವಾದ ಬಿಚ್ಚಿಕೊಳ್ಳುತ್ತದೆ. ಜೀವ ಸಂಕುಲದ ಅತಿ ನಾಜೂಕಾದ, ಅತಿ ಸಂಕೀರ್ಣವಾದ ಮತ್ತು ಉಳಿವಿಗೆ ಅತಿ ಮುಖ್ಯವಾದ ಅಂಶ ನೋಟ ಮತ್ತು ಅದನ್ನು ನಿಭಾಯಿಸಲು ಬೇಕಾದ ಅಂಗ ಕಣ್ಣು. ಅತಿ ಹಳೆಯ, ಅತಿ ಸಣ್ಣ ಜೀವಿಗಳಿಂದ ಹಿಡಿದು ಅತಿ ಸಂಕೀರ್ಣವಾದ ಜೀವಿಗಳವರೆಗೆ ಕಣ್ಣಿನ ರಚನೆಯನ್ನು ಗಮನಿಸಿದರೆ ವಿಸ್ಮಯವಾಗುವುದರಲ್ಲಿ ಸಂಶಯವಿಲ್ಲ. ಅದನ್ನು ವಿವರಿಸಲು ಅಸಾಧ್ಯವೆನ್ನಿಸುವಂತೆ ತೋರುತ್ತದೆ. ನಮ್ಮ ಮುಂದೆ ಅದು ಅಸಾಧ್ಯವಾದ ಬೆಟ್ಟದಂತೆ ಕಾಣುತ್ತದೆ.

ಆದರೆ ವಿಕಸನಕ್ಕೆ ಬೇಕಾದುದು ಸಣ್ಣ ಪುಟ್ಟ ಬದಲಾವಣೆ ಹಾಗು ಜಿಗಿತ ಮಾತ್ರ ಎಂದು ಲೇಖಕ ನೆನಪಿಸುತ್ತಾನೆ. ಆ ಸಣ್ಣಪುಟ್ಟ ಬದಲಾವಣೆ ಮತ್ತು ಜಿಗಿತ ವಿಕಸನದ ಬಹು ದೀರ್ಘಾವಧಿಯಲ್ಲಿ ತುಂಬಾ ಸಂಕೀರ್ಣತೆಯನ್ನು ಸಾಧಿಸಬಹುದು. ಕಣ್ಣಿನ ಕೆಲವು ಉದಾಹರಣೆಗಳನ್ನು ಬಳಸಿ ಕಂಪ್ಯೂಟರ್‍ ಮಾಡಲಿಂಗ್‌ನ ಮೂಲಕ ಈಗಾಗಲೇ ವಿವರಿಸಿರುವುದನ್ನು ಲೇಖಕ ಎತ್ತಿಕೊಳ್ಳುತ್ತಾನೆ. ಅತಿ ಸರಳ ಮಾದರಿಯಿಂದ ಸಂಕೀರ್ಣ ರೂಪಗಳಿಗೆ ತಿರುಗುವುದಕ್ಕೆ ಸುಮಾರು ಐನೂರು ಸಾವಿರ ತಲೆಮಾರುಗಳು ಬೇಕಾಗಬಹುದು ಎಂದು ಅಂದಾಜು ಹಾಕಲಾಗಿದೆ. ವಿಕಸನದ ಅಳತೆಗೋಲಿನಲ್ಲಿ ಇದು ತೀರ ಚಿಕ್ಕ ಕಾಲ. ಹಾಗಾಗಿಯೇ ಅತಿ ಹಿಂದಿನ ಕೆಲವು ಸಾಗರ ಪ್ರಾಣಿಗಳಲ್ಲೂ ಬೆಳೆದುನಿಂತ ಕಣ್ಣಿನ ರಚನೆಯನ್ನು ಕಾಣಲು ಸಾಧ್ಯ ಎಂದು ವಿವರಿಸುತ್ತಾನೆ. ಹೀಗೆ ನೋಡಿದಾಗ, ಆ ಅಸಾಧ್ಯವೆನಿಸುವ ಬೆಟ್ಟದ ಹಾದಿ ಸರಳ ಮತ್ತು ಸುಗಮವಾಗಿ ಏರುವ ಹಾದಿಯಾಗುತ್ತದೆ ಎಂದು ವಾದಿಸುತ್ತಾನೆ.

ಈ ಸಣ್ಣ ಪುಟ್ಟ ಬದಲಾವಣೆಗಳು ಮತ್ತು ಜಿಗಿತ ಆಯಾ ಘಟ್ಟದಲ್ಲಿರುವ ಪ್ರಾಣಿಗೆ ಸಹಾಯಕಾರಿಯಾಗಿ ಇರುವುದನ್ನು ಕೂಡ ಗಮನಿಸುತ್ತಾನೆ. ತನ್ನ ಸುತ್ತಲಿನ ಪರಿಸರ ಮತ್ತು ಒತ್ತಡಗಳಿಗೆ ಪ್ರತಿಕ್ರಿಯಿಸುತ್ತ ಪ್ರಾಣಿಲೋಕದ ಪ್ರತಿಯೊಂದು ರೂಪವೂ ಬದಲಾಗುತ್ತಾ ನಡೆದಿದೆ. ಇದಕ್ಕೆ ಬೆಂಬಲವಾಗಿ ಅತಿ ಪ್ರಾಚೀನ ಪ್ರಾಣಿಗಳಿಂದಲೇ ಬದಲಾಗುತ್ತಾ ಬಂದಿರುವ ಜೀನ್ಸ್‌ಗಳ ಆಧಾರವೂ ಇದೆ. ಇತ್ತೀಚಿನ ಹಲವು ಸಂಶೋಧನೆಗಳಲ್ಲಿ ಈ ಜೀನ್ಸ್‌ಗಳು ಪರಿಸರಕ್ಕೋ ಅಥವಾ ತಟ್ಟನೆ ಒದಗಿಬಂದ ಬದಲಾವಣೆಗೆ ಪ್ರತಿಕ್ರಿಯಿಸುವ ರೀತಿಯನ್ನು ವಿವರಿಸುತ್ತಾನೆ. ಯಾವುದೋ ಪ್ರಾಣಿಯ ರೆಕ್ಕೆಯಲ್ಲಿ ಕಣ್ಣು ಬರುವಂತೆ ಜೀನ್ಸ್‌ಗಳನ್ನು ಏರುಪೇರು ಮಾಡಿದಾಗ ಅದಕ್ಕೆ ಸರಿಯಾಗಿ ಉಳಿದ ಜೀನ್ಸಿನ ಭಾಗಗಳು ತೆರೆದುಕೊಂಡದ್ದು ಕಾಣುತ್ತದೆ. ರೆಕ್ಕೆಯ ಕಣ್ಣು ಪ್ರಯೋಜನವಿಲ್ಲದಿದ್ದರೂ, ಎಲ್ಲ ಕಣ್ಣುಗಳಿಗೆ ಇರುವ ಎಲ್ಲ ಸೌಕರ್ಯ ಸವಲತ್ತು ಅವಕ್ಕೂ ದೊರಕಿಕೊಂಡದ್ದು ಕಾಣುತ್ತದೆ. ಇದನ್ನು ಸೆಲ್ಫಿಶ್ ಜೀನ್ಸ್ ಎಂಬ ಇನ್ನೊಂದು ಹೊತ್ತಿಗೆಯಲ್ಲಿ ವಿವರಿಸಿದ್ದಾನಂತೆ. (ನಾನು ಅದನ್ನು ಓದಿಲ್ಲ).

ಯಾವುದೇ ಪ್ರಾಣಿ ರೂಪದ ಉಳಿವಿಗೆ ನೋಟ ಬೇಕೇಬೇಕಾದಾಗ ಕಣ್ಣುಗಳು ರೂಪುಗೊಳ್ಳತೊಡಗಿದ್ದು ಮತ್ತು ಪ್ರಕೃತಿ ಸುಮಾರು ನಲವತ್ತೈವತ್ತಕ್ಕೂ ಬೇರೆ ಬೇರೆ ಬಗೆಯ ಕಣ್ಣುಗಳ ಪ್ರಯೋಗಗಳನ್ನು ಮಾಡಿರುವುದು ಕಾಣುತ್ತದೆ. ಬೇರೆ ಬೇರೆ ಪರಿಸರಕ್ಕೆ ಹೊಂದುವಂಥ, ಬೇರೆ ಬೇರೆ ಒತ್ತಡಗಳಿಗೆ ಪ್ರತಿಕ್ರಯಿಸುವ ಆ ಮಾದರಿಗಳ ವಿವಿಧ ರೂಪಗಳು ಇಂದಿಗೂ ಉಳಿದು ಬಂದಿರುವುದನ್ನು ಎತ್ತಿ ತೋರಿಸುತ್ತಾನೆ. ಒದಗಿಬಂದ ತೊಡಕುಗಳನ್ನು ಹಲವು ರೀತಿಗಳಲ್ಲಿ ನಿವಾರಿಸಿಕೊಂಡದ್ದನ್ನು ತೋರಿಸುತ್ತಾನೆ. ವಿಕಾಸವಾದದಲ್ಲಿ ಒಂದು ದಾರಿಯನ್ನು ಹಿಡಿದು ಹೊರಟ ಪ್ರಾಣಿರೂಪ ಅದೇ ಪ್ರಯೋಗದಲ್ಲಿ ಮುಂದುವರಿಯುವುದು, ಕೆಲವೊಮ್ಮೆ ಅವು ಸೋತರೂ ಬಿಟ್ಟುಕೊಡದೆ ಬದಲಾಗುವುದು ಆ “ಅಸಾಧ್ಯ ಬೆಟ್ಟ”ವನ್ನು ಹತ್ತುವ ವಿಕಸನದ ಒತ್ತಡವನ್ನು ಕಾಣಿಸುತ್ತದೆ. ಹೀಗೇ ಲೆಕ್ಕ ಹಾಕುತ್ತಾ ನೋಡಿದರೆ ವಿಕಸನದ ಆ “ಅಸಾಧ್ಯ ಬೆಟ್ಟಕ್ಕೂ” ಸಣ್ಣ ಪುಟ್ಟ ಹಾದಿಗಳಿರುವುದು, ಜಿಗಿಯಬಹುದಾದ ಪುಟ್ಟ ಬಂಡೆ ಕೊರಕಲಿರುವುದು ಕಾಣುತ್ತದೆ. ಹಾಗೆ ಕಂಡಾಗ ಜೀವರಾಶಿಯ ವಿವರಣೆ ಅಸಾಧ್ಯವಾಗಿ ಉಳಿಯುವುದಿಲ್ಲ ಎಂದು ನೆನಪಿಸುತ್ತಾನೆ.

ಬರೇ ಬೆಳಕು ಇರುವುದನ್ನಷ್ಟೇ ಅರಿಯಬಲ್ಲಂಥ ನರತಂತುಗಳಿಂದ ಶುರುವಾಗಿದ್ದು ಕಣ್ಣಿನ ಕತೆ. ಹೆಚ್ಚು ಬೆಳಕು ಬೇಕು, ಆದರೆ ರೂಪ ಕಾಣಲು ಬೆಳಕು ಕೆಲವು ಕಡೆ ಮಾತ್ರ ಇರಬೇಕು. ಇದಕ್ಕೆ ಕಣ್ಣು ಒಂದು ಚಿಪ್ಪಿನ ರೂಪದಲ್ಲಿ ಬಾಗಿಕೊಂಡಿತು. ಇದಕ್ಕೆ ಪಿನ್-ಹೋಲ್ ಕ್ಯಾಮೆರಾದಂಥ ತೂತುಳ್ಳ ಕಣ್ಣು ರೂಪುಗೊಂಡಿತು. ನಂತರ ಆ ತೂತಿನಿಂದ ಒಳಬರುವ ಬೆಳಕು ಸಾಕಾಗದೆ, ತೂತು ದೊಡ್ಡದಾದರೂ ಒಂದು ಲೆನ್ಸಿನಂಥ ರೂಪ ಬಂದಿದ್ದು. ಇನ್ನು ಕೆಲವು ಕಡೆ ಲೆನ್ಸಿನ ಬದಲು, ಹಲವು ಕೊಳವೆಗಳಂಥ ಪ್ರಯತ್ನ ನಡೆದಿದ್ದು. ನಂತರ ಹಲವು ಕೊಳವೆಗಳು ಒಟ್ಟಾಗಿ ರೂಪವನ್ನು ಕಾಣುವ ಪ್ರಯತ್ನ ನಡೆದಿದ್ದು. ಬೆಳಕನ್ನು ಹಿಡಿಯಬಲ್ಲ ನರತಂತುಗಳು ಹಲವು ದಿಕ್ಕುಗಳಲ್ಲಿ ಮೂಡಿದ್ದು. ಬೆಳಕು ಬಿದ್ದಂಥ ನರತಂತುಗಳನ್ನು ತೂರಿ ಬೆಳಕು ಹೋಗದಂತೆ ಅವುಗಳ ಹಿಂದೆ ಒಂದು ಕಪ್ಪು ಪರದೆ ರೂಪುಗೊಂಡಿದ್ದು. ಸಂಕೀರ್ಣವಾಗುತ್ತಾ ನಡೆದ ಕಣ್ಣು ದೂರಕ್ಕೂ ಹತ್ತಿರಕ್ಕೂ ಫೋಕಸ್ ಮಾಡಬಲ್ಲಂತ ಲೆನ್ಸ್ ಮತ್ತು ಸ್ನಾಯು ಬೆಳೆಸಿಕೊಂಡಿದ್ದು. ಮತ್ತು ಬೆಳಕು ಹೆಚ್ಚು ಕಡಿಮೆಯಾದಾಗ ಸಣ್ಣದೊಡ್ಡದಾಗುವಂಥ ಕಿಂಡಿ ರೂಪುಗೊಂಡಿದ್ದು. ಇವೆಲ್ಲವನ್ನೂ ಪ್ರಾಣಿಜಾತಿಗಳ ಹಲವು ಉದಾಹರಣೆ ಚಿತ್ರಗಳೊಂದಿಗೆ ವಿವರಸುತ್ತಾನೆ. ಈ ಎಲ್ಲ ಬದಲಾವಣೆ ಮತ್ತು ಆವಿಷ್ಕಾರಗಳ ನಡುವೆ ಚಿಕ್ಕ ಚಿಕ್ಕ ಬದಲಾವಣೆಯಷ್ಟೇ ಇರುವುದು ಸೋಜಿಗವಲ್ಲ ಸಹಜ ಎಂದು ಅರಿವಾಗುತವಂತೆ ವಿವರಿಸುತ್ತಾನೆ.

ಲೋಕದ ಹಲವು ಕಡೆ ‘ಕ್ರಿಯೇಷನಿಸಂ’ನ ಪ್ರತಿಪಾದಕರು ಡಾರ್ವಿನನ ವಿಕಾಸವಾದದಲ್ಲಿ ಏನೋ ಐಬಿದೆ ಎಂಬಂತೆ ಅನುಮಾನ ಹುಟ್ಟಿಸುವ ಪ್ರಚಾರ ಮಾಡುವುದು. ಇದರಿಂದ ಹೇಗೋ ದೈವತ್ವದ ಅಗತ್ಯ ಮತ್ತು ಇರವನ್ನು ಪ್ರತಿಪಾದಿಸುವುದು ಹಾಸ್ಯಾಸ್ಪದವಾಗಿ ಕಾಣುತ್ತದೆ. ಸ್ವಂತ ನಂಬಿಕೆಯಾಗಿ ದೈವತ್ವವನ್ನು ಇರಿಸಿಕೊಳ್ಳುವುದು ಒಂದು ತೆರ. ಅದು ಅವರವರ ಇಷ್ಟ ಮತ್ತು ಮೂಲಭೂತವಾಗಿ ಆಧ್ಯಾತ್ಮಿಕ ವಿಚಾರ. ಅದನ್ನು ವಿಜ್ಙಾನಕ್ಕೆ ಎಳೆತಂದು ಏನನ್ನೋ ಸಾಧಿಸಲು ಹೊರಡುವುದನ್ನು ನೋಡಿದರೆ ಅದು ಗಂಭೀರವಾದ ಹುಡುಕಾಟವೇ ಎಂಬ ಪ್ರಶ್ನೆ ಎತ್ತಬೇಕಾಗುತ್ತದೆ. ಅಂತಹ ಪ್ರಶ್ನೆಯೆತ್ತುವುದಕ್ಕೆ ಬೇಕಾದ ಸಿದ್ಧತೆಗೆ ಇಂತಹ ಹೊತ್ತಿಗೆಗಳ ಓದು ನೆರವಾಗುತ್ತದೆ. ಚಿಕ್ಕ ವಯಸ್ಸಿನಿಂದಲೇ, ಲೋಕದ ಬಗ್ಗೆ ವಿಸ್ಮಯ ಹಸಿಯಾಗಿರುವಾಗಲೇ ಈ ಬಗೆಯ ಚರ್ಚೆ ಹಾಗು ಹುಡುಕಾಟ ನಮ್ಮ ಮನಸ್ಸು ಪ್ರಶ್ನಿಸುವುದಕ್ಕೆ, ಉತ್ತರ ಹುಡುಕಿಕೊಂಡು ಅರಳುವುದಕ್ಕೆ ನೆರವಾಗುತ್ತವೆ.

ಕಡೆಯ ಮಾತು:
ಹಿಂದೊಮ್ಮೆ ಸಿಡ್ನಿಗೆ ಬಂದಿದ್ದ ಚಿನ್ಮಯ ಮಿಷನ್ನಿನ ಸ್ವಾಮಿಯೊಬ್ಬರು ಭಾಷಣಮಾಡುತ್ತಿದ್ದರು. ಅದನ್ನು ಕೇಳುತ್ತಾ ಸಣ್ಣ ಸಣ್ಣ ಮಕ್ಕಳು ಯುವಕರು ಕೂತಿದ್ದರು. ಕ್ರಿಯೇಷನಿಸಂನ್ನು ಸಾರಾ ಸಗಟಾಗಿ ಮಾರುತ್ತಾ ‘ಮಂಗನಿಂದ ಮನುಷ್ಯ ಎನ್ನುವುದು ಎಷ್ಟು ತಮಾಷೆ ನೋಡಿ. ನಿಮ್ಮ ತಂದೆ ತಾಯಂದಿರು ಅಥವಾ ಅಜ್ಜ ಅಜ್ಜಿಯರು ಕೋತಿಗಳ ಹಾಗಿದ್ದಾರ?’ ಎಂದು ನಗಿಸುತ್ತಾ ಹೋದರು. ನನ್ನ ಪಕ್ಕದಲ್ಲಿ ಕೂತಿದ್ದ ಕಾಲೇಜಲ್ಲಿ ಕಲಿಯುತ್ತಿರುವ ಅಪರಿಚಿತ ಹುಡುಗನಿಗೆ ‘ಇದೆಂಥಾ ದಡ್ಡತನ ಅಲ್ಲವಾ?’ ಎಂದು ಕೇಳಿದೆ. ತುಂಬಾ ಹೊತ್ತು ತದೇಕಚಿತ್ತದಿಂದ ಅವನು ನನ್ನನ್ನೇ ನೋಡಿದ. ಅವನ ತಲೆಯಲ್ಲಿ ಏನೇನು ವಿಚಾರವೋ ಗೊಂದಲವೋ. ಏನೂ ಹೇಳದೆ ಕಡೆಗೆ ತಲೆ ಕೆಳಗೆ ಹಾಕಿದ. ನನಗೆ ಈವತ್ತಿಗೂ ಅವನು ತಲೆ ಕೆಳಗ ಹಾಕಿದ್ದು ನೆನೆಸಿಕೊಂಡರೆ ಅಚ್ಚರಿ ಮತ್ತು ಬೇಸರವಾಗುತ್ತದೆ.