ರಾತ್ರಿಯೆಲ್ಲಾ ನನ್ನ ಕನಸ್ಸಿನಲ್ಲಿ ಪುಟ್ಟ ಪಾರ್ಕಿನ ತುಂಬಾ ಬಿಳಿಯ ಮಕ್ಕಳು. ಹುಲ್ಲಿನ ಇಳಿಜಾರಿನ ಮೇಲೆಲ್ಲಾ ಚಿಟ್ಟೆಗಳ ಹಾಗೆ ಹಾರುಡುತ್ತಿರುವಂತೆ. ಬಿಸಿಲಿನಲ್ಲಿ ಹೊಳೆಯುತ್ತಾ ಇದ್ದ ಆ ಮಕ್ಕಳು, ಕನಸಿನಿಂದ ನನಗೆ ಎಚ್ಚರವಾದಾಗ ಕೋಣೆಯ ಕತ್ತಲಿನಲ್ಲೂ ಉಳಿದುಬಿಟ್ಟಿದ್ದರು.

ಸಿಡ್ನಿಯ ಒಳಸಬರ್ಬಿನ ಇಕ್ಕಟ್ಟಿಕ್ಕಟ್ಟು ಮನೆ ಬೀದಿಗಳ ಹಿಂದೆ ಬಚ್ಚಿಟ್ಟುಕೊಂಡಂತಿದ್ದ ಆ ಪುಟ್ಟ ಪಾರ್ಕಿನಲ್ಲಾದ ಪಾರ್ಟಿ ಮುಗಿಸಿ ಮನೆಗೆ ಬಂದಾಗ ಕತ್ತಲಾಗಿತ್ತು. ಸಂಜೆಯ ಧೀರ್ಘ ಟ್ವೈಲೈಟಿನಲ್ಲೂ ಮಕ್ಕಳು ನಗುತ್ತಾ ಕೂಗುತ್ತಾ ಕಿರುಚುತ್ತಾ ಕೇಕೆ ಹಾಕುತ್ತಾ ಪುಟ್ಟ ಪುಟ್ಟ ಸೈಕಲ್ಲಿನ ಮೇಲೆ, ತಳ್ಳುಗಾಡಿಗಳ ಮೇಲೆ, ಸ್ಕೇಟಿಂಗ್ ಬೋರ್ಡಿನ ಮೇಲೆ ಪಾರ್ಕಿನಲ್ಲೆಲ್ಲಾ ರಭಸದಿಂದ ತೇಲಾಡುತ್ತಾ ಗಾಳಿಯಲ್ಲಿ ಒಂದಾದವರಂತೆ ಕಾಣುತ್ತಿದ್ದರು.

ಯಾವುದೋ ಕಿರುಚಿತ್ರವೊಂದರ wrap party ಅದು. ಅಲ್ಲಿ ಸಿಕ್ಕ ಎತ್ತರದ ಕಪ್ಪು ಹುಡುಗಿ ಆಲಿಸ್ – ಚಿಟ್ಟೆ, ಗಾಳಿ ಎಲ್ಲ ತ್ಯಜಿಸಿ ಮೋಡದ ಮೇಲೆ ತೇಲುತ್ತಿರವಂತೆ ಇದ್ದಳು. ಅಮೇರಿಕದಿಂದ ಸಿಡ್ನಿಗೆ ಓದಲು ಬಂದವಳು ಈ ಕಿರುಚಿತ್ರದಲ್ಲೂ ತೊಡಗಿಕೊಂಡಿದ್ದಳು. ಒಬಾಮಾ ಗೆದ್ದು ಎರಡು ವಾರವಾಗಿದ್ದರೂ ಅದರ ಅಮಲು ಆಲಿಸ್‌ನಲ್ಲಿ ಇಳಿದೇ ಇರಲಿಲ್ಲ. ಅವಳಿದ್ದ ಆ ಎತ್ತರದಿಂದಲೇ ನಮ್ಮನ್ನು ಹಾಯ್ ಎಂದು ನಗುತ್ತಾ, ಕುಣಿವ ಕಣ್ಣುಗಳಿಂದ ಮಾತಾಡಿಸಿದಳು. ಹೇಗೋ ಒಬಾಮಾ ಸಂಗತಿ ಮಾತಿನಲ್ಲಿ ಬಂದೊಡನೆ ಇಷ್ಟೊತ್ತು ನಗುತ್ತಾ ಇದ್ದದ್ದು ಅದಕ್ಕೆ ಹಾಕಿದ್ದ ಪೀಠಿಕೆಯೆಂಬಂತೆ ಮಾತಿಗೆ ತೊಡಗಿದಳು.

ತನ್ನ ತಂದೆ ತಾಯಿ ಸಿವಿಲ್ ರೈಟ್ಸ್ ಚಳುವಳಿಯಲ್ಲಿ ಮಾರ್ಚ್ ಮಾಡಿದ್ದು. ಅದು ಅವರ ಬದುಕಿನಲ್ಲಿ ಒಂದು ಮೂಲಬಿಂದುವಾಗಿದ್ದು. ಅದರ ಬೆಳಕಲ್ಲಿ ಅವರು ತಮ್ಮ ಬದುಕಿನ ಎಷ್ಟೋ ಸಂಗತಿಗಳನ್ನು ನಿಚ್ಚಳಗೊಳಿಸಿಕೊಂಡದ್ದು ಎಲ್ಲವನ್ನೂ ಹೆಮ್ಮೆಯಿಂದ ಹೇಳಿದ ಆಲಿಸ್ ಪಾರ್ಕು ಬೆಂಚಿನ ಮೇಲೆ ಹತ್ತಲು ಹವಣಿಸುತ್ತಿರುವಂತೆ ಕಂಡಿತು. ತಾನು ಪೊಲಿಟಿಕಲ್ ಜರ್ನಲಿಸ್ಟ್ ಆಗಬೇಕಂತ ಇದ್ದೀನಿ ಅಂದವಳೇ ಇಲ್ಲಿಯವರೆಗೆ ತನ್ನ ತಲೆಮಾರಿನ ಕರಿಯರು “taken for granted” ಆಗಿ ಬದುಕುತ್ತಿದ್ದರು ಎಂದು ಹೇಳಿ ತನ್ನ ತುಂಡು ಟೀ-ಶರ್ಟನ್ನು ಸರಿಮಾಡಿಕೊಂಡಳು. ಒಬಾಮಾನ ವೈಟ್‌ಹೌಸಿನ ಲಗ್ಗೆ ಅದನ್ನೆಲ್ಲಾ ಬದಲಿಸಿದೆ ಎಂದಾಗ ಆಲಿಸ್ ಕಣ್ಣಲ್ಲಿ ಹನಿಗೂಡಿತೆ ಎಂದು ಕುತೂಹಲದಿಂದ ಇಣುಕಿದೆ.

ಸಿಡ್ನಿಯಿಂದಲೇ ತಾನು ಓಟು ಮಾಡಿದ್ದು, ತನ್ನ ಮನೆಗೆ ಫೋನ್ ಮಾಡಿದಾಗ ಎಲೆಕ್ಷನ್ ದಿನವನ್ನು ಅವರು ಹಬ್ಬದ ಆಚರಣೆಯಂತೆ ಮಾಡಿಕೊಂಡದ್ದನ್ನು ವಿವರಿಸಿದಳು. ಹಲವು ದಿನಗಳಿಂದಲೇ ತಯಾರಿ ಮಾಡಿಕೊಂಡು ಅಂದು ಲಕ್ಷೋಪಲಕ್ಷವಾಗಿ ತೆರಳಿ ಓಟು ಹಾಕಿದ್ದನ್ನು ಎದೆ ಮುಟ್ಟಿಕೊಂಡು ಹೇಳಿ ಕುಣಿದಳು. ಒಬಾಮಾ ಗೆಲ್ಲದೇ ಹೋಗಿದ್ದರೆ ಅಮೇರಿಕಾದ ಅಗಲಕ್ಕೂ riots ಆಗಿಬಿಡುತ್ತಿತ್ತು ಎಂಬುದೇ ತನ್ನ ಹೆದರಿಕೆಯಾಗಿತ್ತು ಅಂದಳು. ಟೀ-ಶರ್ಟುಗಳ ಮೇಲೆ ಚೆ ಗೆವಾರನ ಬದಲು ಈಗ ಒಬಾಮ ರಾರಾಜಿಸುತ್ತಿರುವುದನ್ನು ಗಮನಿಸಿದ ಆಲಿಸ್ ವಿಚಿತ್ರ ತೊಳಲಾಟದಲ್ಲಿದ್ದಂತೆ ಅನಿಸಿತು. ಒಬಾಮಾನನ್ನು ಫ್ಯಾಶನ್ ಸ್ಟೇಟ್‌ಮೆಂಟಾಗಿ ತೊಡುವ ಇಲ್ಲಿಯ ಮಂದಿಯನ್ನು ಗಮನಿಸಿದಿರಾ ಎಂದು ಕೇಳಿದಳು. ಅಮೇರಿಕಾದ ಕರಿಯರಿಗೆ ಒಬಾಮಾನ ನಿಜವಾದ ಅರ್ಥ ಏನು ಮತ್ತು ಆಶಾವಾದ ಹೇಗೆ ಎಂದು ಆಸ್ಟ್ರೇಲಿಯನ್ನರಿಗೆ ಗೊತ್ತೇ ಇಲ್ಲ ಎಂದು ಸಾರಿಬಿಟ್ಟಳು.

ಎಲ್ಲರೂ ಪಾರ್ಕು ಬೆಂಚಿನ ಮೇಲೆ ಹರಡಿದ್ದ ಸ್ನಾಕ್ಸ್ ಮತ್ತು ತಿನಿಸನ್ನು ಚಪ್ಪರಿಸುತ್ತಾ ನೋಡುತ್ತಿದ್ದರು. ತುಸು ತಡೆದು ನಾನು ಅಮೇರಿಕದಲ್ಲಿ riots ಆಗುಬಿಡುತ್ತಿತ್ತು ಅನ್ನುವುದನ್ನು ನಾನು ಒಪ್ಪಲಾರೆ. ಅದು ಮಾಧ್ಯಮದ ನಿರೂಪಣೆಯಷ್ಟೆ. ‘ಹದ್ದುಬಸ್ತಿನಲ್ಲಿರದ ಕರಿಯರು’ ಎಂದು ವಿವರಿಸುವ ಬಿಳಿಯರ ಒಂದು construct ಅಷ್ಟೆ ಅಲ್ಲವಾ ಅದು ಎಂದೆ. ಅದನ್ನು ನಿರೀಕ್ಷಿಸಿರಲಿಲ್ಲ ಎಂಬಂತೆ ಕೊಂಚ ದಿಟ್ಟಿಸಿದಳು. ಹಾಗೆ ಹೇಳುವ ನಿನಗೆ ಒಬಾಮಾನ ಬಗ್ಗೆ ನಮ್ಮಲ್ಲಿ ಹುಟ್ಟಿರುವ ಅತ್ಯಂತ ಭರವಸೆ ಮತ್ತು ನಿರೀಕ್ಷೆ ಅರ್ಥವಾಗಿಲ್ಲ ಅಂದಳು. ಅದರಿಂದ ಉಂಟಾಗ ಬಹುದಾಗಿದ್ದ ನಿರಾಶೆಯ ಆಳ ನಿನಗೆ ಗೊತ್ತಿಲ್ಲ ಅಂದಳು. ತಲೆಮಾರಿಗೊಮ್ಮೆ ಮಾತ್ರ ಸಿಕ್ಕುವ ಅವಿಸ್ಮರಣೀಯ ಇದು ಅಂದಳು. ಇರಬಹುದೇನೋ ಎಂದು ಸುಮ್ಮನಾದೆ.

ಪಕ್ಕದಲ್ಲಿದ್ದವ ರಾಡ್ನಿ ಕಿಂಗ್ ಸಮಯದಲ್ಲಾದ ದೊಂಬಿ ನೆನಪಿಸಿಕೋ ಎಂದು ಪಿಸುಗುಟ್ಟಿದ. ರಾಡ್ನಿ ಕಿಂಗಿಗೆ ಪೋಲೀಸರು ಬಡಿದದ್ದಕ್ಕೂ, ಒಬಾಮಾ ಗೆಲ್ಲದಂತೆ ಎಲೆಕ್ಷನ್ ರಿಗ್ ಆಗುವುದಕ್ಕೂ ದೊಂಬಿಯೇ ಉತ್ತರವಾಗಬಾರದಲ್ಲ ಎಂದು ನಾನೂ ಪಿಸುಗುಟ್ಟಿದೆ.

riots ಅಂದರೆ ಆರ್ಗನೈಸ್ ಆಗಿಲ್ಲದವರ ಅಭಿವ್ಯಕ್ತಿ ಅಂದುಕೊಂಡಿದ್ದ ನನಗೆ ಒಂದು ಪ್ರಶ್ನೆ ಉಳಿದೇ ಬಿಟ್ಟಿತು. ಆರ್ಗನೈಸ್ ಆಗಿಲ್ಲದ ಪಂಗಡಕ್ಕೆ ಒಬಾಮಾ ಬಂದರೂ ಅಷ್ಟೆ, ಇನ್ನಾರೇ ಬಂದರೂ ಅಷ್ಟೆ ಅಲ್ಲವೆ? ಒಳ್ಳೆದಕ್ಕಾಗಲೀ, ಕೆಟ್ಟದ್ದಕ್ಕಾಗಲೀ ಆರ್ಗನೈಸಾಗದೆ ಆಗುತ್ತದೆಯೆ? ಇಂಡಿಯಾದ ಆರ್ಗನೈಸ್ಡ್ ಲಿಂಚಿಂಗ್ ಮತ್ತು ಪೋಗ್ರಾಂಗಳನ್ನು ನಾವು ದೊಂಬಿ, riots ಎಂದು ವಿವರಿಸುವುದೇ ಒಂದು ಮೂಲ ಅನ್ಯಾಯ ಯಾಕೆ ಎಂದು ವಿವರಿಸಬೇಕು ಅನಿಸಿತು. ಆದರೆ ಒಬಾಮಾನ ವಿಜಯದ ಸಂದರ್ಭ ಅದಕ್ಕೆ ಸೂಕ್ತವಲ್ಲ ಅನಿಸಿ ನಾನೂ ನನಗಿಷ್ಟವಾದ್ದ ಕಾರ್ನ್ ಚಿಪ್ಸನ್ನು ಮೆಲ್ಲತೊಡಗಿದೆ.

ಈ ನಮ್ಮ ಮಾತುಕತೆಯಲ್ಲಿ ಯಾವಾಗ ಕತ್ತಲಾಗಿತ್ತೋ, ಯಾವಾಗ ಪಾರ್ಕ್‌ ತುಂಬ ಇದ್ದ ಮಕ್ಕಳನ್ನು ಅವರ ತಂದೆ ತಾಯಂದಿರು ಕಿವಿ ಹಿಡಿದು ಮನೆಗೆ ಎಳಕೊಂಡು ಹೋಗಿದ್ದರೋ ಗೊತ್ತಾಗಲೇ ಇಲ್ಲ. ಆದರೆ ಆ ಶಾಂತ ಹಾಗು ನೀರವ ಪಾರ್ಕು ಮಾತ್ರ ತನ್ನ ತೆಕ್ಕೆಯಲ್ಲಿ ಕುಣಿದು ಕುಪ್ಪಳಿಸಿ ಹಾರಾಡಿದ ಮಕ್ಕಳೆಲ್ಲಾ ಮನೆಗೆ ಹೋದ ಮೇಲೆ ಸುಸ್ತಾದ ತಾಯಿಯಂತೆ ಕಾಣುತ್ತಿತ್ತು.