ಕ್ಯಾಪಿಟಲಿಸಂನ ಕೀಲುಗೊಂಬೆಗಳಾಗಿ ಬದುಕುತ್ತಿರುವ ಜನರಿಗೆ ವಿಕಾಸವಾದವನ್ನು ಯೊಚಿಸುವ ವ್ಯವಧಾನವೆಲ್ಲಿದೆ? ತಾವೇ ಕಟ್ಟಿಕೊಂಡ ಸಮಾಜದ ಸರಳುಗಳೊಳಗೆ ಬಂಧಿಯಾಗಿ ಒದ್ದಾಡುತ್ತಿರುವ, ಹುಚ್ಚು ಓಟದೊಳಗೆ ನಮ್ಮನ್ನು ನಾವೇ ಕಳೆದುಕೊಂಡ ನತದೃಷ್ಟ ಪೀಳಿಗೆ ನಮ್ಮದು! ಹಣ ಸಂಪಾದಿಸಲು ಬಂಜೆತನ ತಂದುಕೊಳ್ಳುವುದು, ಕಳೆದುಹೋದ ಫಲವತ್ತತೆಯನ್ನು ಕೊಂಡುಕೊಳ್ಳಲು ಮತ್ತೆ ಅದೇ ಹಣ ಖರ್ಚು ಮಾಡುವುದು! ಎಷ್ಟು ಸೂಕ್ಷ್ಮವಾಗಿ ನಮ್ಮನ್ನು ಈ ಬಂಡವಾಳಶಾಹಿ ವ್ಯವಸ್ಥೆಯು ಯಾವ ಗುರಿಯೂ ಇಲ್ಲದಂತೆ ಓಡುವಂತೆ ಮಾಡುತ್ತದೆ. ತಾವು ಮುಂದೆ ಹೋಗುತ್ತಿರುವ ಭ್ರಮೆಯಲ್ಲಿ ಯಾರಿಗೋಸ್ಕರವೋ ಎಣ್ಣೆ ಉತ್ಪಾದಿಸಲು ಅದೇ ವೃತ್ತದಲ್ಲಿ ಸುತ್ತುತ್ತ ಕಡೆಗೊಮ್ಮೆ ಬಸವಳಿದು ಪ್ರಾಣಬಿಡುವ ಗುಲಾಮ ಎತ್ತುಗಳಂತೆ ಭಾಸವಾಗುತ್ತದೆ!
ಶ್ರೀಹರ್ಷ ಸಾಲೀಮಠ ಬರೆಯುವ ಅಂಕಣ

 

ನಿಮಗೆ ಮಕ್ಕಳಾಗುತ್ತಿಲ್ಲ ಅಂದರೆ ನಿಮ್ಮ ಜೀನ್ಸ್ ಈ ಪ್ರಕೃತಿಯಲ್ಲಿ ಮುಂದುವರೆಯುವ ಯೋಗ್ಯತೆಯನ್ನು ಹೊಂದಿಲ್ಲ ಅಂತ ಅಷ್ಟೇ! ಪ್ರಕೃತಿಯು ತನ್ನ ಉಳಿವಿಗಾಗಿ ನಿಮ್ಮ ಸಂತಾನದ ಬೆಳವಣಿಗೆಯನ್ನು ತಿರಸ್ಕರಿಸಿದೆ ಎಂದರ್ಥ. ಇದು ವಿಕಾಸವಾದದ ನೈಸರ್ಗಿಕ ಆಯ್ಕೆಯ ಒಂದು ವಿಧಾನ. ದುರ್ಬಲವಾದ ಜೀವಿಗಳು ಈ ಭೂಮಿಗೆ ಬರುವುದನ್ನು ಸಾಧ್ಯವಾದಷ್ಟು ಪ್ರಕೃತಿಯು ತಡೆಯುತ್ತದೆ. ಇದು ಪುರುಷರಲ್ಲೂ ಇರಬಹುದು ಮಹಿಳೆಯರಲ್ಲೂ ಇರಬಹುದು. ಇದು ಕೇಳಲು ಕಠೋರ ಮತ್ತು ಕ್ರೂರ ಅನ್ನಿಸಬಹುದು. ಆದರೆ ಮನುಷ್ಯನನ್ನು ಪ್ರಕೃತಿಯ ಒಂದು ಭಾಗ ಎಲ್ಲ ಪ್ರಾಣಿಗಳಂತೆಯೆ ನಿಸರ್ಗವನ್ನು ಅವಲಂಬಿಸಿರುವ ಜೀವಿ ಎಂದು ಪರಿಗಣಿಸಿ ಯೋಚಿಸಬೇಕು.

ಇದ್ದಕ್ಕಿದ್ದಂತೆ ಬಂಜೆತನ ಹೆಚ್ಚಾಗಲು ಕಾರಣವೂ ಉಂಟು. ವೈದ್ಯಕೀಯ ಕ್ಷೇತ್ರ ಈಗಿನಷ್ಟು ಮುಂದುವರಿದಿಲ್ಲದ ಸಮಯದಲ್ಲಿ ಏಳೆಂಟು ಕೆಲವೊಮ್ಮೆ ಹತ್ತು ಹದಿನೈದು ಮಕ್ಕಳು ಹುಟ್ಟಿ ಐದೋ ಆರೋ ಉಳಿಯುತ್ತಿದ್ದವು. ಅಂದರೆ ಭೂಮಿಗೆ ಬಂದವುಗಳಲ್ಲಿ ಗಟ್ಟಿಯಾದ ಮತ್ತು ಪೀಳಿಗೆಯನ್ನು ಮುಂದುವರಿಸಬೇಕಾದ ಮಕ್ಕಳನ್ನು ಮಾತ್ರ ಪ್ರಕೃತಿ ಬದುಕುಳಿಸಿಕೊಳ್ಳುತ್ತಿತ್ತು. ಆದರೆ ಹೆಜ್ಜೆ ಹೆಜ್ಜೆಗೂ ಪ್ರಕೃತಿಗೆ ಸವಾಲನ್ನೇ ಒಡ್ಡುವ ಮನುಷ್ಯ ಔಷಧಿಗಳನ್ನು ಕಂಡು ಹಿಡಿದು ಮಕ್ಕಳನ್ನು ಉಳಿಸಿಕೊಳ್ಳತೊಡಗಿದ. ಅಂದರೆ ಬಡವಾದ, ಪೀಳಿಗೆಯನ್ನು ಮುಂದುವರಿಸಲಿಕ್ಕೆ ಲಾಯಕ್ಕಿಲ್ಲದ ಸಂತಾನಗಳೂ ಬದುಕುಳಿಯತೊಡಗಿದವು. ಜನಸಂಖ್ಯೆ ಹೆಚ್ಚಾಗಿ ಮಕ್ಕಳ ಹೆರವನ್ನು ನಿಯಂತ್ರಿಸುವ ಅನಿವಾರ್ಯತೆ ಬಂದೊದಗಿದಂತೆ ಮೊದಲನೆಯ ಒಂದೋ ಎರಡೋ ಮುಂದುವರಿಯಲು, ಲಾಯಕ್ಕಿರುವವೋ ಇಲ್ಲವೋ ಅವನ್ನೇ ಇಟ್ಟುಕೊಳ್ಳುವ ಅನಿವಾರ್ಯತೆ ಎದುರಾಯಿತು.

ಹೀಗೆ ಔಷಧಿಯಿಂದ ಬದುಕುಳಿಯಲು ಪ್ರಾರಂಭಿಸಿದ ಪಾಶ್ಚಿಮಾತ್ಯ ದೇಶಗಳಲ್ಲಿ ನಾಲ್ಕನೆಯ ಮತ್ತು ಇಂಡಿಯಾದಲ್ಲಿ ಎರಡನೆಯ ತಲೆಮಾರು ನಮ್ಮದು. ಆಧುನಿಕ ಜೀವನಶೈಲಿಯಿಂದ ಬರುತ್ತಿರುವ ಬಂಜೆತನ ಒಂದಾದರೆ ಪ್ರಾಕೃತಿಕವಾಗಿ ಬರಮಾಡಿಕೊಂಡಿರುವ ಬಂಜೆತನ ಇನ್ನೊಂದು ರೀತಿಯದು. ಈ ರೀತಿ ಮುಂದುವರಿಯಲು ಲಾಯಕ್ಕಿಲ್ಲದಿದ್ದರೂ ಬದುಕುಳಿದು ಬಂದ ಪೀಳಿಗೆಯನ್ನು ಸ್ವೀಕರಿಸಲು ಮತ್ತು ಅವುಗಳ ಸಂತತಿಯನ್ನು ಬೆಳೆಸಲು ನಿಸರ್ಗ ಹಿಂದೇಟು ಹಾಕುತ್ತಿದೆ. ಹಾಗಾಗಿ ಈಗಿನ ಪೀಳಿಗೆಯಲ್ಲಿ ಮೊದಲಿಗಿಂತ ಬಂಜೆತನ ಜಾಸ್ತಿ. ಮುಂದಿನ ಪೀಳಿಗೆಯಲ್ಲಿ ಇದು ಇನ್ನೂ ಹೆಚ್ಚಾಗಲಿದೆ. ಆದರೆ ಕ್ಷುದ್ರ ಕ್ಯಾಪಿಟಲಿಸಂನ ಸೊಕ್ಕಿನಲ್ಲಿ ಹಣದಿಂದ ಎಲ್ಲವನ್ನೂ ಕೊಂಡುಕೊಳ್ಳಬಲ್ಲೆ ಎಂಬ ದುರಹಂಕಾರದಲ್ಲಿರುವ ಮನುಷ್ಯ ಜೀವಿ, ಸಾವನ್ನೂ ಹಣದಿಂದ ದಕ್ಕಿಸಿಕೊಳ್ಳುವ ಹುನ್ನಾರದಲ್ಲಿರುವ ಮನುಷ್ಯ ಜೀವಿ ಬಿಡಬೇಕಲ್ಲ! ಇದಕ್ಕಾಗಿ ನಾನಾ ಸಾಧನಗಳನ್ನು ವಿಧಾನಗಳನ್ನು ಕಂಡುಹಿಡಿದು ದಕ್ಕಿಸಿಕೊಳ್ಳತೊಡಗಿದ.

ಕ್ಯಾಪಿಟಲಿಸಂನ ಕೀಲುಗೊಂಬೆಗಳಾಗಿ ಬದುಕುತ್ತಿರುವ ಜನರಿಗೆ ವಿಕಾಸವಾದವನ್ನು ಯೊಚಿಸುವ ವ್ಯವಧಾನವೆಲ್ಲಿದೆ? ತಾವೇ ಕಟ್ಟಿಕೊಂಡ ಸಮಾಜದ ಸರಳುಗಳೊಳಗೆ ಬಂಧಿಯಾಗಿ ಒದ್ದಾಡುತ್ತಿರುವ, ಹುಚ್ಚು ಓಟದೊಳಗೆ ನಮ್ಮನ್ನು ನಾವೇ ಕಳೆದುಕೊಂಡ ನತದೃಷ್ಟ ಪೀಳಿಗೆ ನಮ್ಮದು! ಹಣ ಸಂಪಾದಿಸಲು ಬಂಜೆತನ ತಂದುಕೊಳ್ಳುವುದು, ಕಳೆದುಹೋದ ಫಲವತ್ತತೆಯನ್ನು ಕೊಂಡುಕೊಳ್ಳಲು ಮತ್ತೆ ಅದೇ ಹಣ ಖರ್ಚು ಮಾಡುವುದು! ಎಷ್ಟು ಸೂಕ್ಷ್ಮವಾಗಿ ನಮ್ಮನ್ನು ಈ ಬಂಡವಾಳಶಾಹಿ ವ್ಯವಸ್ಥೆಯು ಯಾವ ಗುರಿಯೂ ಇಲ್ಲದಂತೆ ಓಡುವಂತೆ ಮಾಡುತ್ತದೆ. ತಾವು ಮುಂದೆ ಹೋಗುತ್ತಿರುವ ಭ್ರಮೆಯಲ್ಲಿ ಯಾರಿಗೋಸ್ಕರವೋ ಎಣ್ಣೆ ಉತ್ಪಾದಿಸಲು ಅದೇ ವೃತ್ತದಲ್ಲಿ ಸುತ್ತುತ್ತ ಕಡೆಗೊಮ್ಮೆ ಬಸವಳಿದು ಪ್ರಾಣಬಿಡುವ ಗುಲಾಮ ಎತ್ತುಗಳಂತೆ ಭಾಸವಾಗುತ್ತದೆ!

ಮಕ್ಕಳನ್ನು ಹುಟ್ಟಿಸುವ ಮಾಫಿಯಾದ ಬಗ್ಗೆ ವಿವರಿಸುವ ಮೊದಲು ಒಂದೆರಡು ಪ್ರಸಂಗಗಳು ನೆನಪಿಗೆ ಬರುತ್ತವೆ. ನಮ್ಮ ಮನೆಯ ಎದುರಿಗಿದ್ದ ಅನ್ನಪೂರ್ಣೇಶ್ವರಿ ಗುಡಿಯಲ್ಲಿ ಒಮ್ಮೆ ಯಾವುದೋ ಹಬ್ಬ ಅಂತ ಹೆಣ್ಣುಮಕ್ಕಳಿಗೆ ಉಡಿ ತುಂಬಿಸಿ ಕಳಿಸುತ್ತಿದ್ದರು. ನನಗೇನೂ ಅಂತ ಕೆಲಸವಿರದಿದ್ದರೂ ಹೊರಗಡೆ ಕಟ್ಟೆಯ ಮೇಲೆ ಕುಳಿತಿದ್ದೆ. ನಮ್ಮಮ್ಮ ಉಡಿ ತುಂಬಿಸಿಕೊಂಡು ಬರುತ್ತಿದ್ದಂತೆ ಹೆಣ್ಣುಮಗಳೊಬ್ಬಳು ಬಂದು “ನಿಮ್ಮ ಉಡಿಯನ್ನು ನನಗೆ ತುಂಬುತ್ತೀರಾ? ನನಗೆ ಮಕ್ಕಳಿಲ್ಲ.” ಅಂತ ದೈನ್ಯದಿಂದ ಕೇಳಿದಳು. ನಮ್ಮಮ್ಮ “ಅಯ್ಯೋ ನಮ್ಮವ್ವಾ.. ಅದರಲ್ಲೇನು ತಗೋ..” ಅಂತ ಗೋಡೆಗೆ ಒರಗಿಸಿ ಕೂಡಿಸಿ ಉಡಕ್ಕಿ ದಾನ ಮಾಡಿದರು. ಆ ಹೆಣ್ಣುಮಗಳ ಮುಖದಲ್ಲಿ ಆರ್ದ್ರತೆ ದೈನ್ಯತೆ ಅಭದ್ರತೆಗಳ ಮಿಶ್ರಣ. ನನ್ನ ತಾಯಿಯ ಮುಖದಲ್ಲಿ ಸ್ವತಃ ಗರ್ಭದಾನ ಮಾಡಿದಷ್ಟು ಸಂತೃಪ್ತಿ!

ಈ ಫಲವತ್ತತೆಯ ವಿತರಣೆಯ ಆಚರಣೆಗಳು ನನಗೆ ಆಗ ಕೊಂಚ ನಗು ತರಿಸದಿರಲಿಲ್ಲ. ಗಂಡಸಿಗೇನೋ ತನ್ನ ವಂಶವಾಹಿಯನ್ನು ಮುಂದುವರೆಸಲು ಮತ್ತೊಂದು ಮದುವೆಯ ಅವಕಾಶವಿದೆ. ಆದರೆ ಕಟ್ಟಿಕೊಂಡವನ ಜೀನ್ಸ್ ಮುಂದುವರಿಯಲು ಯೋಗ್ಯವಲ್ಲವೆಂದರೆ ಹೆಣ್ಣಿಗೆ ನಮ್ಮ ನೆಲದಲ್ಲಿ ಬೇರೆ ಆಯ್ಕೆಯ ಅವಕಾಶಗಳಿಲ್ಲವಲ್ಲ! ಇತಿಹಾಸದಲ್ಲಿ ಅದೆಷ್ಟು ಬಲವಾದ ಜೀನ್ ಗಳು ಈ ರೀತಿ ಕಳೆದುಹೋಗಿವೆಯೋ. ಬಹುಷಃ ನಮ್ಮಮ್ಮನಿಂದ ಉಡಕ್ಕಿ ದಾನ ಪಡೆದ ಆ ಹೆಣ್ಣು ಮಗಳಿಗೂ ಈ ಅಭದ್ರತೆ ಬಲವಾಗಿ ಕಾಡುತ್ತಿತ್ತೆನಿಸುತ್ತದೆ.

ಕ್ಯಾಪಿಟಲಿಸಂನ ಕೀಲುಗೊಂಬೆಗಳಾಗಿ ಬದುಕುತ್ತಿರುವ ಜನರಿಗೆ ವಿಕಾಸವಾದವನ್ನು ಯೊಚಿಸುವ ವ್ಯವಧಾನವೆಲ್ಲಿದೆ? ತಾವೇ ಕಟ್ಟಿಕೊಂಡ ಸಮಾಜದ ಸರಳುಗಳೊಳಗೆ ಬಂಧಿಯಾಗಿ ಒದ್ದಾಡುತ್ತಿರುವ, ಹುಚ್ಚು ಓಟದೊಳಗೆ ನಮ್ಮನ್ನು ನಾವೇ ಕಳೆದುಕೊಂಡ ನತದೃಷ್ಟ ಪೀಳಿಗೆ ನಮ್ಮದು!

ಸಿಡ್ನಿಯಲ್ಲಿ ನನ್ನ ಗೆಳೆಯನಿಗೂ ಅವನ ಹೆಂಡತಿಗೂ ದೊಡ್ಡ ಜಗಳವಾಯಿತು. ವರ್ಷಗಟ್ಟಲೆ ಮುಂದುವರಿದ ಈ ಜಗಳ ಎಲ್ಲಿಗೆ ಮುಟ್ಟಿತೆಂದರೆ ಇಬ್ಬರೂ ಆಸ್ಟ್ರೇಲಿಯಾ ತೊರೆದು ಮಗುವಿನೊಂದಿಗೆ ವಾಪಸು ಹೋಗಲು ನಿರ್ಧರಿಸಿದರು. ಆ ಮಗು ಇವರಿಬ್ಬರ ಜಗಳದಲ್ಲಿ ಅದೆಷ್ಟು ಬಡವಾಗಿ ಹೋಯಿತೆಂದರೆ ನಮಗೇ ಆ ಮಗುವಿನ ಪರಿಸ್ಥಿತಿ ನೋಡಿ ಕಣ್ಣಲ್ಲಿ ನೀರು ಜಿನುಗುತ್ತಿತ್ತು. ಅವನು ಊರಿಗೆ ಹೊರಡುವ ಹಿಂದಿನ ಆತನನ್ನು ಕಡೆಯ ಬಾರಿಗೆ ಭೇಟಿಯಾಗಲು ನಾನು ಮತ್ತೊಬ್ಬ ವಿಜಯ್ ಎಂಬ ಮರಾಠಿ ಗೆಳೆಯ ಹೋದೆವು.

ನಾನು ಆತನಿಗೆ ವಿದಾಯ ಹೇಳುವ ಮುಂಚೆ “ಏನಲ್ಲದಿದ್ದರೂ ಆ ಮಗುವಿಗೋಸ್ಕರವಾದರೂ ಇನ್ನು ಮುಂದೆ ಜಗಳ ಬಿಟ್ಟು ಸಮಾಧಾನವಾಗಿ ಬದುಕಿ.” ಅಂತ ಬುದ್ದಿ ಹೇಳಿದೆ.

ಅವರಿಬ್ಬರದು ಪ್ರೇಮ ವಿವಾಹವಾದ್ದರಿಂದ ಮತ್ತೊಮ್ಮೆ ಹೊಂದಾಣಿಕೆಗೆ ಸಾಧ್ಯವಾಗಬಹುದು ಅಂತ ನನ್ನ ಅನಿಸಿಕೆಯಾಗಿತ್ತು. ಅದಕ್ಕೆ ಉತ್ತರವಾಗಿ ಅವನು ಕೊಂಚ ದುರಹಂಕಾರದ ಮಾತಾಡಿದ. ಅವನ ದುರಹಂಕಾರದ ಮಾತಿಗೆ ನನ್ನ ಜೊತೆ ಬಂದಿದ್ದ ಇನ್ನೊಬ್ಬ ಗೆಳೆಯ ವಿಜಯ್ ಗೆ ಒಮ್ಮೆಲೆ ರೇಗಿ ಹೋಯಿತು. ಆ ನಟ್ಟಿರುಳಲ್ಲಿ ಆತನ ಮನೆಯ ಬ್ಯಾಕ್ ಯಾರ್ಡ್ ನಲ್ಲಿ ದೊಡ್ಡ ದನಿಯಲ್ಲಿ ಕೂಗಾಡತೊಡಗಿದ.

“ನಿನಗೆ ಕೊಬ್ಬು ಬೋ*ಮಗನೆ, ಯಾಕೆ ಗೊತ್ತಾ? ತುಂಬಾ ಸುಲಭವಾಗಿ ಮಗು ಹುಟ್ಟಿಬಿಡ್ತಲ್ಲ ಅದಕ್ಕೆ. ನಾನು ಮದುವೆ ಆಗಿ ಹದಿನಾಲ್ಕು ವರ್ಷ, ಹದಿನಾಲ್ಕು ವರ್ಷ ಮಕ್ಕಳಾಗಿರಲಿಲ್ಲ. ನಾನು ನನ್ನ ಹೆಂಡತಿ ಪ್ರತೀ ವೀಕೆಂಡು ಏನು ಮಾಡಬೇಕು ಅಂತ ತೋರದೆ ಮನೆ ಮುಂದೆ ಸಾಲಾಗಿ ಮಣ್ಣು ಅಗೆದು ಗಿಡ ನೆಡುತ್ತಿದ್ದೆವು. ನೀರು ಹಾಕುತ್ತಿದ್ದೆವು. ಹದಿನಾಲ್ಕು ವರ್ಷ ಇದೇ ನಮ್ಮ ರುಟೀನ್ ಆಗಿತ್ತು. ನಮಗೆ ಬದುಕಲಿಕ್ಕೆ ಕಾರಣವೇ ಇರಲಿಲ್ಲ. ಸಾಯಬಾರದು ಅನ್ನೋ ಕಾರಣಕ್ಕೆ ಬದುಕಿದ್ದೆವು. ಮೂರು ಐವಿಎಫ್ ಫೇಲ್ ಆಯ್ತು ಗೊತ್ತಾ? ಹೆರಿಗೆ ರೂಮಲ್ಲಿ ಕೂತುಕೊಂಡು ಹಸ್ತಮೈಥುನ ಮಾಡಿಕೊಳ್ಳೋ ಹಿಂಸೆ ಇದೆಯಲ್ಲ ಅದಕ್ಕಿಂತ ಹಿಂಸೆ ಇನ್ನೊಂದಿಲ್ಲ.

ಪ್ರತೀ ಸಾರಿ ಟ್ರೀಟ್ ಮೆಂಟ್ ಗೆ ಅಂತ ಹೋದಾಗ ನಾನು ಹೆರಿಗೆ ಕೋಣೆಯಲ್ಲಿ ಕೂತು ನನ್ನ ಅಂಗವನ್ನ ರಮಿಸಿಕೊಳ್ಳಬೇಕಿತ್ತು. ಅಕ್ಕ ಪಕ್ಕದ ಕೋಣೆಗಳಿಂದ ಹೆರಿಗೆಯಾಗುತ್ತಿರುವ ಹೆಣ್ಣುಮಕ್ಕಳ ಚೀರಾಟ ಕೇಳುತ್ತಿತ್ತು. ಅದರ ನಡುವೆ ನಾನು ಏಕಾಗ್ರತೆ ವಹಿಸಬೇಕಿತ್ತು. ಪ್ರಸವ ವೈರಾಗ್ಯ ಅಂತ ಇರುತ್ತೆ ಗೊತ್ತಾ? ಮಗು ಹುಟ್ಟೋದನ್ನ ನೋಡಿದಾಗ ಉಂಟಾಗುವ ವೈರಾಗ್ಯ. ಆ ವೈರಾಗ್ಯವನ್ನೂ ಮೀರಿ ಅವರು ಕೊಟ್ಟ ಡಬ್ಬಿಯಲ್ಲಿ ನಾನು ಸ್ಖಲಿಸಿಕೊಳ್ಳಬೇಕಿತ್ತು. ಸ್ಖಲಿಸಿಕೊಂಡ ಡಬ್ಬಿಯನ್ನು ತೆಗೆದುಕೊಂಡು ಹೋಗಲು ನರ್ಸ್ ಬಂದಾಗ ನಾನು ಮುಜುಗರದಿಂದ ನೆಲ ನೋಡಿಕೊಳ್ಳುತ್ತಾ ಆಕೆಯ ಕೈಗೆ ಡಬ್ಬಿಯನ್ನು ಕೊಡುತ್ತಿದ್ದೆ. ಹೀಗೆ ಹುಟ್ಟಿದ ಮಗಳಿಗಾಗಿ ಬೇಕಿದ್ದರೆ ನಾನು ದಿನಾ ನನ್ನ ಹೆಂಡತಿಯ ಕಾಲು ತೊಳೆಯಲೂ ಸಿದ್ಧ! ಮಕ್ಕಳು ನಿನಗೆ ಸುಲಭವಾಗಿ ಹುಟ್ಟಿದವಲ್ಲಾ, ಸುಖವಾಗಿ ಬದುಕೋಕೆ ಗಾಂಚಾಲಿ ನಿಮಗೆಲ್ಲಾ!” ಅಂತ ರೇಗಾಡಿದ. ನನಗಾಗಲೀ ನನ್ನ ಗೆಳೆಯನಿಗಾಗಲೀ ಮಾತೇ ಹೊರಡಲಿಲ್ಲ. ಯಾವ ವಿಷಯ ಎಲ್ಲಿಂದ ಎಲ್ಲಿಗೆ ಹೋಯಿತು ಯಾಕೆ ಹೋಯಿತು ಎಂಬುದೇ ಹೊಳೆಯದೇ ದಿಗ್ಮೂಢರಾಗಿ ನಿಂತಿದ್ದೆವು.

ನಿಜವಾಗಿಯೂ ಮಕ್ಕಳನ್ನು ಹೆರುವ ಮಾಫಿಯಾ ಕೆಲಸ ಮಾಡುವುದು ಬಾಡಿಗೆ ತಾಯಿಯನ್ನು ಪಡೆಯುವ ಹಂತದಿಂದ. ಈ ಮಾಫಿಯಾದ ಜಾಲ ಬೆಂಗಳೂರು, ಹೈದರಾಬಾದ್, ಗುಜರಾತ್, ದೆಹಲಿ, ಮುಂಬೈ ಇತ್ಯಾದಿ ಸ್ಥಳಗಳಲ್ಲಿ ಹಬ್ಬಿದೆ. ಇರುವುದರಲ್ಲಿ ಬೆಂಗಳೂರು ಕೊಂಚ ಪ್ರಾಮಾಣಿಕ ಅಂತ ಕೇಳಿಪಟ್ಟೆ. ಮುಂದುವರಿದ ದೇಶಗಳಲ್ಲಿ ಗರ್ಭವನ್ನು ಬಾಡಿಗೆ ಪಡೆಯುವುದು ಅತ್ಯಂತ ಕಷ್ಟ. ಮೊದಲನೆಯದಾಗಿ ಬಾಡಿಗೆ ತಾಯಿಗೆ ಹಣ ಕೊಡುವಂತಿಲ್ಲ. ಅದೊಂದು ಅಪ್ಪಟ ನೈತಿಕ ಒಪ್ಪಂದ. ಬಾಡಿಗೆ ತಾಯಿಯಾಗಲು ಮುಂದೆ ಬರುವವಳಿಗೆ ಮೊದಲು ಸರಕಾರದ ವತಿಯಿಂದ ಕೌನ್ಸೆಲಿಂಗ್ ನೀಡಲಾಗುತ್ತದೆ.

ಕೌನ್ಸೆಲಿಂಗ್ ನಲ್ಲಿ ತಾಯ್ತನದ ಕಷ್ಟಗಳು, ದೈಹಿಕ ಬದಲಾವಣೆಗಳು, ತೆಗೆದುಕೊಳ್ಳಬೇಕಾದ ಔಷಧಿಗಳು ಇತ್ಯಾದಿಗಳನ್ನು ಮನವರಿಕೆ ಮಾಡಿಕೊಡಲಾಗುತ್ತದೆ. ಬಾಡಿಗೆ ತಾಯಿಯಾಗುವವಳನ್ನು ತಾಯ್ತನಕ್ಕೆ ಅಣಿಗೊಳಿಸುವುದೇ ಇದರ ಉದ್ದೇಶವಾದರೂ, ಸಂಪೂರ್ಣ ವಿವರಣೆ ಕೇಳಿದ ನಂತರ ನೂರಕ್ಕೆ ಎಂಬತ್ತರಷ್ಟು ಬಾಡಿಗೆ ತಾಯಿಯಾಗಲು ಬಂದವರು ಹಿಂದೆ ಸರಿದುಬಿಡುತ್ತಾರೆ. ಅಲ್ಲದೇ ತನ್ನ ಗರ್ಭವನ್ನು ಬಾಡಿಗೆ ಕೊಟ್ಟ ತಾಯಿ ಮುಂದೆ ಯಾವುದೇ ಗಳಿಗೆಯಲ್ಲಾದರೂ ವಾಪಸು ಬಂದು ಮಗುವನ್ನು ತನ್ನ ಸುಪರ್ದಿಗೆ ವಹಿಸಲು ಕೇಳಬಹುದು. ಆಗ ಮರುಮಾತಿಲ್ಲದೇ ಸಾಕಿಕೊಂಡಿದ್ದ ಮಗುವನ್ನು ವಾಪಸು ಕೊಡಬೇಕು. ಕಾನೂನೂ ಸಹ ಬಾಡಿಗೆ ತಾಯಿಗೇ ಬೆಂಬಲ ನೀಡುತ್ತದೆ.

ಆದರೆ ಇಂಡಿಯಾದಂತಹ ಮೂರನೆಯ ಜಗತ್ತಿನ ದೇಶಗಳಲ್ಲಿ ಹಾಗಾಗುವುದಿಲ್ಲ. ಬಹುತೇಕ ಎಲ್ಲಾ ದೇಶಗಳಲ್ಲೂ ಬಾಡಿಗೆ ತಾಯಿಗೆ ಹಣ ನೀಡುವುದು ನಿಷಿದ್ಧ. ಆದರೆ ಹಣ ಕಪ್ಪು ಕಪ್ಪಾಗಿ ಅಡಗಿಕೊಂಡು ಓಡಾಡುತ್ತದಲ್ಲ? ಸಾಕಷ್ಟು ಜನ ಬಡತನಕ್ಕೆ ನೊಂದೋ, ದುಡಿಮೆಯ ಮತ್ತೊಂದು ವಿಧಾನ ಎಂದೋ ಬಸಿರನ್ನು ಬಾಡಿಗೆ ನೀಡುತ್ತಾರೆ. ಮೊದಲು ಬಾಡಿಗೆ ಪಡೆಯಲು ಬಂದ ಗ್ರಾಹಕರಿಗೆ ಬಾಡಿಗೆ ನೀಡಲು ಸಿದ್ಧವಿರುವ ತಾಯಂದಿರ ಫೋಟೋ ಅಲ್ಬಂ ಅನ್ನು ಮುಂದಿಡಲಾಗುತ್ತದೆ. ಪಕ್ಕದಲ್ಲಿ ದರವನ್ನೂ ನಮೂದಿಸಲಾಗಿರುತ್ತದೆ. ಈ ‘ಮೆನು’ವಿನಲ್ಲಿ ದರ ನಿಗದಿಗೆ ಕೆಲವು ಮಾನದಂಡಗಳಿವೆ. ಬಸಿರು ಬಾಡಿಗೆ ಕೊಡಲಿರುವ ಬೆಳ್ಳಗಿದ್ದರೆ, ಚಿಕ್ಕ ವಯಸ್ಸಾಗಿದ್ದರೆ, ಮೇಲ್ಜಾತಿಯಾಗಿದ್ದರೆ ಹೆಚ್ಚು ಬೆಲೆ. ಜೊತೆಗೆ ಜಾತಕವನ್ನು ತರಿಸಿಕೊಡುವ ವ್ಯವಸ್ಥೆಯೂ ಇರುತ್ತದಂತೆ!

ವಯಸ್ಸು, ಬಣ್ಣ, ಜಾತಿಗಳು ವ್ಯತ್ಯಾಸವಾದಂತೆ ದರಗಳಲ್ಲೂ ಏರಿಳಿತ ಕಂಡುಬರುತ್ತದೆ. ಕೆಲವು ಕಡೆ ಒಂದೇ ಸಾರಿ ಅನೇಕ ಮಹಿಳೆಯರಲ್ಲಿ ಗರ್ಭವನ್ನು ಫಲಿಸಿ ಯಾರ ಗರ್ಭದಲ್ಲಿ ಆರೋಗ್ಯವಾಗಿದೆಯೋ ಅದನ್ನು ಮಾತ್ರ ಉಳಿಸಿಕೊಂಡು ಉಳಿದವರಿಗೆ ಗರ್ಭಪಾತ ಮಾಡಿಸಲಾಗುತ್ತದೆ. ಈ ರೀತಿ ಬಾಡಿಗೆ ಗರ್ಭಗಳನ್ನು ತಮ್ಮ ಗುತ್ತಿಗೆಯಲ್ಲಿಟ್ಟುಕೊಂಡು ವ್ಯಾಪಾರ ಮಾಡುವ ಆಸ್ಪತ್ರೆಗಳ ಅತಿ ದೊಡ್ಡ ಗ್ರಾಹಕರು ಅನಿವಾಸಿ ಭಾರತೀಯರು. ಇವರು ಬಾಡಿಗೆ ಪಡೆಯಲು ದೊಡ್ಡ ಮೊತ್ತವನ್ನೇ ಖರ್ಚು ಮಾಡಲು ತಯಾರಾಗಿರುತ್ತಾರೆ. ಈ ಅನೈತಿಕ ದಂಧೆ ದೊಡ್ಡದಾಗಿ ಬೆಳೆಯುತ್ತಿದ್ದಂತೆ ಎಚ್ಚೆತ್ತುಕೊಂಡ ಸರಕಾರ ಅನಿವಾಸಿ ಭಾರತೀಯರು ಬಾಡಿಗೆ ತಾಯಂದಿರ ಮುಖಾಂತರ ಮಗುವನ್ನು ಪಡೆಯುವುದಕ್ಕೆ ಇತ್ತೀಚೆಗೆ ನಿಷೇಧ ಹೇರಿತು.

ಇದರ ನಂತರದ ಹಂತ ಮಗುವನ್ನು ದತ್ತು ಪಡೆಯುವುದು. ಬೇರೆ ಬೇರೆ ದೇಶಗಳು ದತ್ತಕಕ್ಕೆ ತಮ್ಮ ಹಿನ್ನೆಲೆ ಸಾಮಾಜಿಕ ಸ್ಥಿತಿಗತಿಗಳಿಗೆ ತಕ್ಕಂತೆ ನಿಯಮಗಳನ್ನು ರೂಪಿಸಿಕೊಳ್ಳುತ್ತವೆ. ಮುಂದುವರಿದ ದೇಶಗಳಲ್ಲಿ ಕ್ರಿಮಿನಲ್ ಗಳ ಮಕ್ಕಳು, ಮಾದಕವ್ಯಸನಿಗಳ ಮಕ್ಕಳು, ಅಕಾಲ ಮರಣಕ್ಕೆ ತುತ್ತಾದವರ ಮಕ್ಕಳು ಅಥವಾ ಮತ್ತಾವುದೋ ಕಾರಣಕ್ಕಾಗಿ ಮಕ್ಕಳನ್ನು ಸಾಕುವ ಯೋಗ್ಯತೆ ಇಲ್ಲದವರು ಸರಕಾರ ನಿರ್ಧರಿಸಿದವರ ಮಕ್ಕಳು ದತ್ತಕಕ್ಕೆ ದೊರೆಯುತ್ತವೆ. ತಾಯ್ತಂದೆ ಇಲ್ಲದವರ ಮಕ್ಕಳು ಸಿಗುವುದು ಕಷ್ಟ. ಉಳಿದವರ ಮಕ್ಕಳನ್ನು ದತ್ತಕಕ್ಕೆ ತೆಗೆದುಕೊಳ್ಳಬೇಕೆಂದರೆ ಅವರ ತಾಯ್ತಂದೆಯರ ಅನುಮತಿ ಬೇಕು. ಬಿಳಿಯರು ತಮ್ಮ ಮಕ್ಕಳನ್ನು ಬೇರೆ ಬಣ್ಣದವರಿಗೆ ಸಾಕಿಕೊಳ್ಳಲು ಕೊಡುವುದಿಲ್ಲ. ಇಂಡಿಯನ್ನರಿಗೆ ಬಿಳಿಯ ಮತ್ತು ಕಂದು ಬಣ್ಣದ ಮಕ್ಕಳಿಗಾಗಿ ಮಾತ್ರ ಕೇಳುತ್ತಾರೆ. ಅಲ್ಲದೇ ದತ್ತಕಕ್ಕೆ ಕೊಟ್ಟಿರುವವರು ಮತ್ತೆ ಬಂದು ತಮ್ಮ ಮಕ್ಕಳನ್ನು ವಾಪಸು ಕೇಳಿದರೆ ಸುಮ್ಮನೆ ಕೊಟ್ಟುಬಿಡಬೇಕು. ಇದರ ನಡುವೆಯೂ ಮಕ್ಕಳಿಗಾಗಿ ಹಾತೊರೆದು ಕೋಟ್ಯಂತರ ಖರ್ಚು ಮಾಡುವ ಜನರಿದ್ದಾರೆ.

ಐವಿಎಫ್ ಅಥವಾ ಬಾಡಿಗೆ ತಾಯಿಯಿಂದ ಪಡೆದ ಮಕ್ಕಳನ್ನು ಕೈಗೆ ಕೊಡುವಾಗ “ಇದು ತುಂಬಾ ದುಬಾರಿ ಮಗು ಹುಷಾರು!” ಅಂತ ಹೇಳಿ ಕೊಡುತ್ತಾರೆ. ಇಲ್ಲೂ ಜೀವಕ್ಕಿಂತ ಹಣಕ್ಕೇ ಹೆಚ್ಚು ತೂಕ. ಎಲ್ಲಾ ಮಕ್ಕಳೂ ಬೆಲೆಬಾಳುವಂತವೇ! ಆದರೆ ಇವಕ್ಕೆ ಹಣ ಖರ್ಚು ಮಾಡಿರುವುದರಿಂದ ಸಾಮಾಜಿಕ ತೂಕ ಜಾಸ್ತಿ!