ಐರಿಷ್ ಹಸುಗಳ ಜೊತೆ ಒಂದು ಮಧ್ಯಾಹ್ನ

ನಾವು ವಾಸಿಸುತ್ತಿದ್ದ ರಸ್ತೆಯ ಆಚೆ
ಇಡೀ ದಿನ ತಾಕಿನಿಂದ ತಾಕಿಗೆ ಹೆಜ್ಜೆ ಹಾಕುತ್ತ
ಹೊಲವನ್ನು ಆಕ್ರಮಿಸಿಕೊಂಡ ಕೆಲವು ಡಜನ್ ಜನ
ಮೃದುವಾದ ಹುಲ್ಲಿನಲ್ಲಿ ಅವರ ದಪ್ಪ ದಪ್ಪ ತಲೆಗಳ ಹುಗಿಸಿ
ನಾನು ಕೆಲವೊಮ್ಮೆ ಆಗಿಂದಾಗ್ಗೆ ಕಿಟಕಿಯನ್ನು ಹಾದು
ಹೋಗುತ್ತಿದ್ದೆನಾದರೂ ಹೊಲ ಇದ್ದಕ್ಕಿದ್ದಂತೆ
ಖಾಲಿಯಾಗಿರುವುದನ್ನು ನೋಡಿದ್ದೆ
ಅವರು ರೆಕ್ಕೆ ಬೆಳಸಿಕೊಂಡಂತೆ ಬೇರೆಯೇ
ದೇಶಕ್ಕೆ ಹಾರಿದರು ಎಂಬಂತೆ

ಆ ನಂತರ ನಾನು ನೀಲಿ ಬೀದಿಬಾಗಿಲ ತೆರೆದೆ
ಮತ್ತೆ ಆ ಹೊಲದಗಲ ಅವರ ಮಂಚಗಳು
ಅವರು ಅವರ ಬದಿಯ ಕಪ್ಪು-ಬಿಳುಪು ನಕಾಶೆಗಳಲ್ಲಿ
ಇಲ್ಲವಾದರೆ, ಎಲ್ಲಾ ದಿಕ್ಕುಗಳಿಗೂ ಮುಖಮಾಡಿ ಮಲಗಿರುತ್ತಾರೆ
ಮಳೆಗಾಗಿ ಕಾಯುತ್ತ, ಎಷ್ಟು ನಿಗೂಢ, ಎಷ್ಟು ತಾಳ್ಮೆ
ಎಂಥ ಮೂರ್ಖತನ ತುಂಬಿ ಅವರು ಮಧ್ಯಾಹ್ನದ
ದೀರ್ಘ ನೀರವತೆಯಲ್ಲಿ ಕಾಣಿಸಿಕೊಳ್ಳುತ್ತಾರೆ

ಆದರೆ ಆಗೊಮ್ಮೆ ಈಗೊಮ್ಮೆ ಅವರಲ್ಲೊಬ್ಬರು ಎಂಥ
ಅಸಾಧಾರಣ ಧ್ವನಿಯನ್ನು ಹೊರಹಾಕುವರೆಂದರೆ
ನಾನು ಓದುತ್ತಿರುವ ಪೇಪರ್ ಕೆಳಗೆ ಬೀಳಿಸುತ್ತೇನೆ
ಇಲ್ಲವೇ ಸೇಬು ಕತ್ತರಿಸುತ್ತಿದ್ದ ಚಾಕುವನ್ನು
ಹಾಕಿ, ರಸ್ತೆಯ ಉದ್ದಕ್ಕೂ ಕಲ್ಲಿನ ಗೋಡೆಯವರೆಗೆ ನಡೆದು
ಹೋಗುತ್ತೇನೆ ಅವುಗಳಲ್ಲಿ ಯಾವುದಕ್ಕೆ ಕಿಚ್ಚಿಡಲಾಗುತ್ತಿದೆ
ಎಂದು ನೋಡಲು ಇಲ್ಲವೇ ಉದ್ದವಾದ ಈಟಿಯಿಂದ
ಯಾವ ಪಕ್ಕೆಗೆ ಚುಚ್ಚಲಾಗುತ್ತದೆ ಎನ್ನುವುದನ್ನು ಕಾಣಲು

ಹೌದು, ನಾನು ನೋಡುವವರೆಗೂ
ಅದು ನೋವಿನಂತೆಯೇ ಕೇಳಿಸುತ್ತದೆ
ಗದ್ದಲದ ಒಂದು ಜೀವ ನಾಲ್ಕು
ಕಾಲುಗಳ ಮೇಲೆ ನೆಲಕೆ ಲಂಗರು ಹಾಕಿದೆ
ಅವಳ ಗೋಣು ಚಾಚಿದೆ, ಅವಳ ಗೋಳಾಡುವ ತಲೆ
ಅವಳ ದನಿಯದಕ್ಕೆ ಯಾತನೆಯ ಸಾತು
ನೀಡುತ್ತಿರುವಂತೆ ಮೇಲಕ್ಕೆ ಏಳುತ್ತಿದೆ
ಏರುತ್ತಿರುವ, ಪೂರ್ಣ ದೇಹದ ಕೂಗು ಅವಳ ಉದರದ
ಕಡುಗತ್ತಲೆಯಲ್ಲಿ ಪ್ರಾರಂಭವಾಗಿದೆ. ಅವಳ ಬಾಗಿದ ಪಕ್ಕೆಲುಬುಗಳ
ಮೂಲಕ ಅವಳ ಬಾಯಿಗೆ ಬಂದು ಪ್ರತಿಧ್ವನಿಸಿದೆ.

ಆಮೇಲೆ ತಿಳಿಯಿತು ನನಗವಳು ತನ್ನ ಮಹತ್ತಿನ ಅಕಳಂಕಿತ
ಗೋವುತನವ ಸಾರುತ್ತಾ ಇರುವಳೆಂದು
ತನ್ನ ರೀತಿಯ ಪುರಾತನ ಪ್ರತಿರೋಧವನ್ನು
ಹೊರಸುರಿಯುತ್ತಿರುವಳೆಂದು
ಎಲ್ಲಾ ಹಸಿರು ಹೊಲಗಳಿಗೆ, ಬೂದು ಮೋಡಗಳಿಗೆ
ಸುಣ್ಣಕಲ್ಲು ಬೆಟ್ಟಗಳಿಗೆ, ನೀಲಿ ಕೊಲ್ಲಿಯ ಒಳಹರಿವಿಗೆ
ಮಾಡುತ್ತ ಅವಳು ನನ್ನ ತಲೆಯನ್ನು ಭುಜಗಳನ್ನು ಗಮನಿಸುತ್ತಿದ್ದಳು
ಒಂದು ಪಾಶವೀ, ಆಘಾತಕಾರಿ ಕಣ್ಣಿನಿಂದ… ಗೋಡೆಯ ಮೇಲಿಂದ

***

ಬ್ರೀದರ್

ಭೀಬತ್ಸ ಸಿನಿಮಾಗಳಲ್ಲಿರುವಂತೆ
ದೂರವಾಣಿಯ ಕರೆಯ ಸದ್ದು
ಮನೆಯೊಳಗಿಂದ ಬರುತ್ತಿದೆ
ಎಂದು ಯಾರಾದರೂ ಕಂಡುಕೊಂಡಾಗ
ಹೇಗೋ ಹಾಗೆ

ನಾನೂ ಅರಿತುಕೊಂಡೆ
ನಮ್ಮ ಕೋಮಲ ಆಲಿಂಗನ
ಈಗಾಗಲೇ ನನ್ನೊಳಗೆ ಮಾತ್ರ
ಆಗುತ್ತಲಿದೆ ಎಂದು

ಆ ಎಲ್ಲ ಮಾಧುರ್ಯ, ಪ್ರಣಯ, ಬಯಕೆ-
ಇದು ನನಗೆ ನಾನೇ ಕರೆಮಾಡಿಕೊಳ್ಳುತ್ತಿದ್ದೇನೆ
ನಂತರ ಮತ್ತೊಂದು ಕೋಣೆಗೆ ಕರೆಯನ್ನು ಅನುಸರಿಸಿ
ಹೋಗುತ್ತಿದ್ದೇನೆ

ಅದು ಫೋನಿನ ಆ ಬದಿಯಲ್ಲಿ
ಯಾರೂ ಇಲ್ಲವೆಂಬುದನ್ನು ಅರಿಯಲು,
ಸರಿ, ಕೆಲವೊಮ್ಮೆ ಸ್ವಲ್ಪ ಉಸಿರಾಟದ ದನಿ
ಆದರೆ ಬಹಳ ಸಲ ಅದಕ್ಕೂ ಹೆಚ್ಚಾಗಿ
ಏನೂ ಇಲ್ಲ

ಎಲ್ಲ ಕಾಲದಲ್ಲಿಯೂ ಯೋಚಿಸಲು –
ಯೋಚನೆ ದೋಣಿ ವಿಹಾರಗಳನ್ನು
ವಿಮಾನ ನಿಲ್ದಾಣಲ್ಲಿ ಅಪ್ಪಿಕೊಳ್ಳುವುದನ್ನು,
ಎಲ್ಲ ಪಾನಪೇಯಗಳನ್ನು

ಕೇವಲ ನಾನು ಮತ್ತು ಎರಡು ದೂರವಾಣಿಗಳು ಮಾತ್ರವೇ
ಅಡುಗೆಮನೆಯ ಗೋಡೆಯ ಮೇಲಿರುವುದೊಂದು
ಮೇಲಿನ ಮಹಡಿಯಲ್ಲಿ ಕತ್ತಲೆಯ ಅತಿಥಿ
ಕೋಣೆಯಲ್ಲಿರುವ ಅದರ ವಿಸ್ತರಣೆ