“ಇಲ್ಲಿನ ನದಿಗಳು ಸಿಹಿನೀರಿನ ಸುಂದರ ತಾಣಗಳು. ಇವುಗಳನ್ನು ಬಾಟಲಿಗಳಲ್ಲಿ ತುಂಬಿ ಸ್ಕಾಟ್ಟಿಷ್ ವಾಟರ್ ಎನ್ನುವ ಹೆಸರಿನ ಗರಿಮೆಯಲ್ಲಿಯೇ ಮಾರುತ್ತಾರೆ. ದಕ್ಷಿಣದ ನಗರಗಳು, ಉತ್ತರದ ಸೌಂದರ್ಯ ತಾಣಗಳನ್ನೂ ಮೀರಿ ಮೇಲಕ್ಕೆ ಹೋದರೆ ಬರೀ ಬೆಟ್ಟ ತುಂಬಿದ ಜಾಗಗಳಿವೆ. ಬೆಟ್ಟಕ್ಕೊಂದು ಮನೆ, ನೂರಾರು ಕುರಿಗಳು, ಕಣ್ಣು ಹಾಯ್ದಷ್ಟೂ ದೂರ ಕಾಣಿಸುತ್ತವೆ.ಇಲ್ಲಿಂದ ಮುಂದಿನ ಸಮುದ್ರ ತಟಗಳಿಗೆ ಹೋಗುವುದೆಂದರೆ ನಾಗರಿಕತೆಯಿಂದ ದೂರ ಹೋದ ಅನುಭವವಾಗುತ್ತದೆ. ”
ಡಾ.ಪ್ರೇಮಲತ ಬರೆಯುವ ಬ್ರಿಟನ್ ಬದುಕಿನ ಕಥನ.

ಇತ್ತೀಚೆಗೆ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯು.ಕೆ ಗೆ ಆಗಮಿಸಿದಾಗ ಅವರ ರಾಜಕೀಯ ನೀತಿಗಳನ್ನು ಪ್ರತಿಭಟಿಸಿ ಭಾರೀ ಪ್ರದರ್ಶನಗಳಾದವು. ಇಂಗ್ಲೆಂಡಿಗೆ ಇದೇ ಮೊದಲ ಬಾರಿಗೆ ಬಂದಿದ್ದ ಅವರನ್ನು ಲಂಡನ್ ಮಹಾನಗರದ ಈ ಪ್ರತಿಭಟನೆಗಳಿಂದ ದೂರವಿಡುವ ಎಲ್ಲ ಪ್ರಯತ್ನಗಳನ್ನು ಮಾಡಲಾಯ್ತು. ಇವೆಲ್ಲ ರಾಜಕೀಯ ಗೊಂದಲ, ಭೇಟಿಯ ನಂತರ ತನ್ನದೇ ರಿಸಾರ್ಟ್, ಫೈವ್ ಸ್ಟಾರ್ ಹೋಟೆಲ್ ಮತ್ತು ಗಾಲ್ಫ್ ಕೋರ್ಸ್ ಇರುವ ಸ್ಕಾಟ್ಲ್ಯಾಂಡಿನ ಟರ್ನಬರಿಗೆ ಅವರು ವಿರಮಿಸಲು ಬಂದರೆ, ಅಲ್ಲಿಯೂ  ಭಾರೀ ಪ್ರತಿಭಟನೆಗಳಾದವು.

ಟ್ರಂಪ್ ನ ತಾಯಿ ಸ್ಕಾಟ್ಟಿಷ್ ಮೂಲದವಳು. ಸಣ್ಣದೊಂದು ಸ್ಕಾಟ್ಟಿಷ್ ದ್ವೀಪವಾದ ಐಲ್ ಆಫ್ ಲೆವಿಸ್ ನಲ್ಲಿ ಹುಟ್ಟಿ ಬೆಳೆದು 18 ವರ್ಷದವಳಿರುವಾಗ ಅಮೆರಿಕಾಕ್ಕೆ ವಲಸೆ ಹೋಗಿ ಅಲ್ಲಿ ಮದುವೆಯಾದವಳು. ಹೀಗಾಗಿ ಟ್ರಂಪ್ ಗೆ ಸ್ಕಾಟ್ಲ್ಯಾಂಡಿನ ಜೊತೆ ವಿಶೇಷ ಸಂಬಂಧವಿದೆ. ಅಮೆರಿಕಾದ ಮತ್ತೊಬ್ಬ ಅಧ್ಯಕ್ಷ ಜೆ. ಎಫ್. ಕೆನಡಿಯನ್ನು ಹೆಮ್ಮೆಯಿಂದ ಐರಿಷನೆಂದು ಐರ್ಲ್ಯಾಂಡ್ ಗುರುತಿಸಿಕೊಳ್ಳಲು ಸಾಧ್ಯವಾಯ್ತು. ಆತನ ಪೂರ್ವಜರ ವಸತಿಯನ್ನು ಮ್ಯೂಸಿಯಮ್ಮನ್ನಾಗಿ ಮಾಡಿ ಪ್ರವಾಸೀ ತಾಣವನ್ನಾಗಿಸಿಕೊಂಡಿದ್ದಾರೆ. ಆದರೆ ವಿರೋಧಾಬಾಸಗಳ ಆಗರವಾಗಿರುವ ಇಂದಿನ ಅಮೆರಿಕಾ ಅಧ್ಯಕ್ಷನನ್ನು ಸ್ಕಾಟ್ಲ್ಯಾಂಡ್ ಮಾನಸಿಕವಾಗಿ ಬಹಿಷ್ಕರಿಸಿದೆ. ಅಬರ್ಡೀನ್ ಎಂಬ ಸ್ಕಾಟ್ಲ್ಯಾಂಡಿನ ಒಂದು ಶ್ರೀಮಂತ ನಗರದಲ್ಲಿಯೂ ಟ್ರಂಪ್ ಗೆ ಆಸ್ತಿಗಳಿವೆ. ಇಲ್ಲಿನ ಅಬರ್ಡೀನ್ ವಿಶ್ವ ವಿದ್ಯಾಲಯ ಟ್ರಂಪ್ ಗೆ ಕೊಟ್ಟಿದ್ದ ಗೌರವ ಡಾಕ್ಟರೇಟನ್ನು ಆತನ ಇಮ್ಮಿಗ್ರೇಷನ್ ನೀತಿಯನ್ನು ಖಂಡಿಸಿ ಮರಳಿ ಪಡೆಯಿತು. ಇತ್ತೀಚೆಗೆ ಸ್ಕಾಟ್ಲ್ಯಾಂಡಿಗೆ ಬಂದ ಅಮೆರಿಕಾದ ಅಧ್ಯಕ್ಷನನ್ನು ಇಲ್ಲಿನ ಮೊದಲ ಮಂತ್ರಿ (ಪ್ರಧಾನಿ) ನಿಕೊಲ ಸ್ಟರ್ಜನ್ ಸ್ವಾಗತಿಸದೆ ವಿದೇಶಾಂಗ ಮಂತ್ರಿಯನ್ನು ಮಾತ್ರ ಕಳಿಸಿ ತಾನು ಗ್ಲಾಸ್ಗೋ ನಗರದಲ್ಲಿ ನಡೆದ 8000 ಜನ ಸಲಿಂಗ ಕಾಮಿಗಳ, ಲಿಂಗ ಬದಲಿಸಿಕೊಂಡವರ ಮತ್ತಿತರ ಪ್ರದರ್ಶನದಲ್ಲಿ ನಿರುಮ್ಮಳವಾಗಿ ಭಾಗವಹಿಸಿದ್ದು ಬಹುತೇಕ ಜನರ ಮೆಚ್ಚುಗೆಗೆ ಪಾತ್ರವಾಯ್ತು. ನಾವು ನೈಜ ಸ್ನೇಹಪರತೆಗೆ ಮಾತ್ರ ಬೆಲೆ ಕೊಡುತ್ತೇವೆಂದು ಜಗತ್ತಿಗೆ ಸಾರಿ, ಇಂಗ್ಲೆಂಡಿನ ಬಾಲ ಬಡುಕತನವನ್ನು ಸ್ಕಾಟ್ಲ್ಯಾಂಡ್ ಟೀಕಿಸಿತು.

ಸ್ಕಾಟ್ಲ್ಯಾಂಡಿನ ಜನರು ಪ್ರಪಂಚದಾದ್ಯಂತ ವಲಸೆ ಹೋಗಿ, ಹಂಚಿ ಹರಡಿ ಹೋಗಿದ್ದಾರೆ. ಇಡೀ ಸ್ಕಾಟ್ಲ್ಯಾಂಡಿನ ಜನಸಂಖ್ಯೆ ಕೇವಲ 5.3 ಮಿಲಿಯನ್ ಎಂದು 2011 ರಲ್ಲಿ ದಾಖಲಾಗಿದ್ದರೂ ಪ್ರಪಂಚದಲ್ಲಿರುವ ಸ್ಕಾಟ್ಟಿಷ್ ಮೂಲದ ಜನರ ಸಂಖ್ಯೆ ಜಗತ್ತಿನಲ್ಲಿ 50 ಮಿಲಿಯನ್ನಿಗೂ ಹೆಚ್ಚು ಎನ್ನುವ ಅಂದಾಜಿದೆ! ಹಾಗಂತ ಜನರೇ ಹೆಮ್ಮೆಯಿಂದ ಘೋಷಿಸಿಕೊಂಡಿದ್ದಾರೆ. ಸ್ಕಾಟ್ಲ್ಯಾಂಡ್ ಎಂಬ ಪುಟ್ಟ ದೇಶ ಅಚ್ಚರಿಗಳ ಆಗರ. ಜಗತ್ತಿನ ಅರ್ಧ ಅತಿ ಮುಖ್ಯ ವೈಜ್ಞಾನಿಕ ಆವಿಷ್ಕಾರಗಳೆಲ್ಲ ಈ ದೇಶದಿಂದಲೇ ಬಂದವು ಎನ್ನುವುದು ಈ ಸ್ಕಾಟ್ಲ್ಯಾಂಡಿನ ಜನರ ಬುದ್ದಿ ಮತ್ತೆಗೆ ಹಿಡಿದ ಕನ್ನಡಿ. ಆದರೆ ಇವರನ್ನು ಸಂಸ್ಕೃತಿಯಿಲ್ಲದ ಪ್ರಾಣಿಗಳೆಂದು, ಬಡವರೆಂದು, ಒರಟರೆಂದೂ ಕರೆಯುವ ಹುಚ್ಚು ಉಮೇದು ಇಂಗ್ಲಿಷರದು.

ನಾವಿಂದು ಉಪಯೋಗಿಸುವ ಟೆಲಿಫೋನ್, ರಸ್ತೆಗೆ ಬಳಸುವ ಟಾರು, ತುಳಿಯುವ ಸೈಕಲ್ಲು, ರೈಲ್ವೇ ಸ್ಟೀಮ್ ಇಂಜಿನ್ ಗಳು, ಕ್ಲೋನಿಂಗ್ ತಂತ್ರ, ವೈದ್ಯಕೀಯದಲ್ಲಿ ಬಳಸುವ ಪೆನಿಸಿಲಿನ್ ಎಂಬ ಔಷಧ, ಮಧುಮೇಹ ರೋಗಕ್ಕೆ ಬಳಸುವ ಇನ್ಸುಲಿನ್, ಪ್ರತಿದಿನ ನೋಡುವ ಟೆಲಿವಿಷನ್, ನ್ಯೂಮ್ಯಾಟಿಕ್ ಟೈರ್ ಗಳು, ಓವರ್ ಹೆಡ್ ಎಂಜಿನ್ ಗಳು, ವಿಮಾನಗಳ ರೂಪು ರೇಷೆ, ಹಲವು ಬಗೆಯ ಹಡಗುಗಳ ಎಂಜಿನ್ ಗಳು, ಗಣಿತದ ಆಲ್ ಗ್ಯಾದರಿಂ, ಮಿಲಿಟರಿಯ ಇಂಟೆಲಿಜೆನ್ಸ್, ಕೈಗಾರೀಕರಣಕ್ಕೆ ಆಧಾರವಾದ ಸ್ಟೀಲ್ ಉಪಕರಣಗಳು, ಉಳುಮೆಗೆ ಬೇಕಾದ ಸಾಧನಗಳು, ಮುದ್ರಿಸುವ ಅತ್ಯಾಧುನಿಕ ಪ್ರಿಂಟರ್ ಗಳು, ಟೆಲಿಪ್ರಿಂಟರ್ ಗಳು, ಅಂಚೆ ಚೀಟಿಗಳು, ನಾವು ಕೇಳುವ ರೇಡಿಯೂ, ಬರೆಯುವ ಪೆನ್ನಿನ ನಿಬ್, ಯೂನಿವರ್ಸಲ್ ಟೈಮ್, ರೇಡಾರುಗಳು, ನಾವೆಲ್ಲ ಮೆಚ್ಚುವ, ನಂಬುವ ಬ್ರಿಟಿಷ್ ಬ್ರಾಡ್ ಕ್ಯಾಸ್ಟಿಂಗ್ ಕಾರ್ಪೋರೇಷನ್ (ಬಿ.ಬಿ.ಸಿ), ನಾವು ಬಳಸುವ ಹಣ ಕೊಡುವ ಯಂತ್ರಗಳು, ಅದಕ್ಕೆ ಬಳಸುವ ಪಿನ್ ನಂಬರಿನ ಬಳಕೆ ಎಲ್ಲವೂ ಸ್ಕಾಟ್ಲ್ಯಾಂಡಿನ ಆವಿಷ್ಕಾರಗಳು.

ಎನ್ಸೈಕ್ಲೋಪಿಡಿಯಾ ಬ್ರಿಟಾನಿಕ, ಸರ್ಜರಿಯ ಮೊದಲ ಪುಸ್ತಕ, ಮೊದಲ ಫಾರ್ಮಕಾಲಜಿ ಪುಸ್ತಕ, ಜೊತೆಗೆ ಮೊಟ್ಟ ಮೊದಲ ಇ-ಪುಸ್ತಕ ಪ್ರಪಂಚಕ್ಕೆ ಬಂದಿರುವುದೂ ಈ ನಾಡಿನಿಂದಲೇ. ಎಕಾನಾಮಿಕ್ಸ್, ಸೋಷಿಯಾಲಜಿ, ಹಿಪ್ನಾಟಿಸಂ, ಟ್ರಾಪಿಕಲ್ ಮೆಡಿಸಿನ್, ಜಿಯಾಲಜಿಯ ಪಿತಾಮಹರ ಮೊದಲ ಪುಸ್ತಕಗಳು ಇಲ್ಲಿಂದಲೇ ಶುರುವಾದದ್ದು. ಎಲೆಕ್ಟ್ರೋಮ್ಯಾಗ್ನೆಟಿಸಂ, ಅಲ್ಟ್ರ ಸೌಂಡ್ ಸ್ಕಾನರ್ ಗಳು, ಟೈಫಾಯ್ಡ್ ಖಾಯಿಲೆಗೆ ಮದ್ದು, ಮಲೇರಿಯಾವನ್ನು ಸೊಳ್ಳೆಗಳು ಹರಡುತ್ತವೆ ಎನ್ನುವ ಸಿದ್ಧಾಂತ, ಪ್ರತಿ ಸರ್ಜರಿಗೆ ಬೇಕಾದ ಅರವಳಿಕೆ (ಅನೆಸ್ತೀಸಿಯಾ), ಎಕ್ಸ್ ರೇ ಸಾಧನ, ರೇಡಿಯೇಷನ್ ಕಿರಣಗಳ ಬಳಕೆಯಿಂದ ಕ್ಯಾನ್ಸರಿನಂತ ಖಾಯಿಲೆಗಳ ಚಿಕಿತ್ಸೆ, ಪ್ರಪಂಚದ ಮೊದಲ ಹೆರಿಗೆ ಆಸ್ಪತ್ರೆ, ಮಾನಸಿಕ ಖಾಯಿಲೆಗಳ ಆಸ್ಪತ್ರೆ, ಕಣ್ಣಿನ ವೈದ್ಯ ಶಾಸ್ತ್ರ, ಆಮ್ಲಜನಕದ ಚಿಕಿತ್ಸೆ – ಸ್ಕಾಟ್ಲ್ಯಾಂಡಿನ ಕೊಡುಗೆಗಳು. ಅಷ್ಟೇ ಏಕೆ ನಾವು ಬಳಸುವ ಟೋಸ್ಟರ್ ಗಳು, ರೆಫ್ರಿಜಿರೇಟರ್ ಗಳು, ಆಧುನಿಕ ಫ್ಲಷ್ ಮಾಡುವ ಟಾಯ್ಲೆಟ್ಟುಗಳು, ಲಾನ್ ಮೋವರ್ ಗಳು, ಎಲೆಕ್ಟ್ರಿಕ್ ವಾಚುಗಳು, ಕೆಮಿಕಲ್ ಟೆಲಿಗ್ರಾಫ್, ಮೊಟ್ಟ ಮೊದಲ ಬಣ್ಣದ ಫೋಟೋ ಹೀಗೆ ಒಂದೇ ಎರಡೇ… ಸಾವಿರಾರು ಆವಿಷ್ಕಾರಗಳ ದೇಶವಿದು. ಸ್ಕಾಟ್ಲ್ಯಾಂಡಿನ ಕೊಡುಗೆ ಜಗತ್ತಿಗೆ ಎಷ್ಟಿದೆಯೆನ್ನುವುದನ್ನು ಗೂಗಲ್ ಮಾಡಿ ನೋಡಿದರೆ ನಾನು ನೀಡಿರುವ ಪಟ್ಟಿಯ ಹತ್ತು ಪಟ್ಟು ಆವಿಷ್ಕಾರಗಳು ತೆರೆದುಕೊಳ್ಳುತ್ತವೆ. ಅಂತಹ ದೇಶ ನಮ್ಮದು ಎನ್ನುವ ಹೆಮ್ಮೆ ಈ ದೇಶದ ಜನರಿಗೆ.

ಸ್ಕಾಟ್ಲ್ಯಾಂಡ್ ಎಂಬ ಪುಟ್ಟ ದೇಶ ಅಚ್ಚರಿಗಳ ಆಗರ. ಜಗತ್ತಿನ ಅರ್ಧ ಅತಿ ಮುಖ್ಯ ವೈಜ್ಞಾನಿಕ ಆವಿಷ್ಕಾರಗಳೆಲ್ಲ ಈ ದೇಶದಿಂದಲೇ ಬಂದವು ಎನ್ನುವುದು ಈ ಸ್ಕಾಟ್ಲ್ಯಾಂಡಿನ ಜನರ ಬುದ್ದಿ ಮತ್ತೆಗೆ ಹಿಡಿದ ಕನ್ನಡಿ. ಆದರೆ ಇವರನ್ನು ಸಂಸ್ಕೃತಿಯಿಲ್ಲದ ಪ್ರಾಣಿಗಳೆಂದು, ಬಡವರೆಂದು, ಒರಟರೆಂದೂ ಕರೆಯುವ ಹುಚ್ಚು ಉಮೇದು ಇಂಗ್ಲಿಷರದು.

ಸ್ಕಾಟ್ಲ್ಯಾಂಡಿಗೆ ಸೇರಿದಂತೆ 700 ದ್ವೀಪಗಳಿವೆ. 2000 ದಾಖಲಾದ ಕ್ಯಾಸೆಲ್ಲು (ಅರಮನೆಗಳಿವೆ)ಗಳಿವೆ. 300 ರೈಲ್ವೇ ನಿಲ್ದಾಣಗಳಿವೆ. ಹೀಗಿದ್ದೂ ಅಮೆರಿಕಾದ ಬಹುತೇಕ ಸಾಮಾನ್ಯ ಜನರಿಗೆ ಸ್ಕಾಟ್ಲ್ಯಾಂಡ್ ಎಲ್ಲಿದೆ ಎಂಬುದು ತಿಳಿದಿಲ್ಲ. ಭಾರತೀಯರಲ್ಲೂ ಇದೇ ಬಗೆಯ ಧೋರಣೆಯಿದೆಯೆನ್ನಬಹುದು. ಅಥವಾ ಇಂಗ್ಲೆಂಡಿನ ನೆರಳಲ್ಲಿ ಸ್ಕಾಟ್ಲ್ಯಾಂಡಿಗೆ ತನ್ನದೇ ಗುರುತನ್ನು ಪ್ರಪಂಚ ನಕಾಶೆಯಲ್ಲಿ ದಾಖಲು ಮಾಡಲಾಗಿಲ್ಲ ಎಂಬ ಅರಿವಾಗುತ್ತದೆ. ಉದಾಹರಣೆಗೆ ಈ ಬಾರಿಯ ವರ್ಲ್ಡ್ ಕಪ್ ಗೆದ್ದ ಕ್ರೋಯೇಷಿಯಾ ದೇಶದ ಜನಸಂಖ್ಯೆ ಸ್ಕಾಟ್ಲ್ಯಾಂಡ್ ದೇಶಕ್ಕಿಂತ ಕಡಿಮೆಯಿದ್ದರೂ ಅವರಿಗೆ ತಮ್ಮದೇ ಆದ ಗುರುತಿದೆ. ಆದರೆ ಪಕ್ಕದ ಮನೆಯ ದೊಡ್ಡಕ್ಕನ ನೆರಳಿಂದ ಮತ್ತೆ ಬೇರೆಯಾಗುವ ಆಸೆ ಹೊತ್ತ ಅಪಾರ ಆವಿಷ್ಕಾರಗಳ ಇಂತಹ ಮಹೋನ್ನತ ದೇಶಕ್ಕೆ ತನ್ನದೇ ಗುರುತಿಲ್ಲ. ಈ ವಿಚಾರ ಬಹುತೇಕ ಸ್ಕಾಟರ ಮನದ ಆಳದಲ್ಲಿ ಹುದುಗಿದೆ. ಆದರೆ 311 ವರ್ಷಗಳ ಹಿಂದೆ ನೂರಾರು ವರ್ಷ ಕಾದ ಯುದ್ಧದ ವಿಚಾರಗಳು ಸ್ಕಾಟರನ್ನು ಸುಮ್ಮನಾಗಿಸಿದೆ.

ಇಷ್ಟೆಲ್ಲ ಚರಿತ್ರೆ, ಹೆಗ್ಗಳಿಕೆ ಇದ್ದರೂ ಕೂಡ ಇಡೀ ಯೂರೋಪಿನಲ್ಲೇ ಅತಿ ಹೆಚ್ಚು ಮಾದಕ ದ್ರವ್ಯ ವ್ಯಸನಿಗಳಿರುವ ದೇಶ ಎಂಬ ಪಟ್ಟ ಇತ್ತೀಚೆಗೆ ಸ್ಕಾಟ್ಲ್ಯಾಂಡಿಗೆ ದೊರೆಯಿತು. ಇದೊಂದು ಖೇದಕರ ವಿಚಾರ. ಸ್ಕಾಟ್ಲ್ಯಾಂಡಿನ ಶಾಲೆ-ಕಾಲೇಜುಗಳಲ್ಲಿ ಓದಿ ಪದವಿ ಪಡೆವ ವ್ಯಕ್ತಿಗಳು ಇಂಗ್ಲೆಂಡಿಗೆ ಬಂದರೆ ‘ಸ್ಕಾಟ’ ನೆಂಬ ತಾರತಮ್ಯಕ್ಕೆ ಒಳಗಾಗುತ್ತಾರೆ. ಇದು ಇಂಗ್ಲೆಂಡಿನ ಸಮಾಜದ ಎರಡು ಮುಖಕ್ಕೆ ಹಿಡಿವ ಕನ್ನಡಿ. ಸಹಸ್ರಾರು ವರ್ಷಗಳ ಚಾರಿತ್ರಿಕ ತಾರತಮ್ಯದ ಪ್ರತೀಕ. ಈ ತಾರತಮ್ಯ ಭಾರತದಿಂದ ಬಂದ ನಮ್ಮನ್ನೂ ಬಿಡಲಿಲ್ಲ. 6 ವರ್ಷಗಳ ವೃತ್ತಿಪರ ಅನುಭವವನ್ನು ನಾನು ಸ್ಕಾಟ್ಲ್ಯಾಂಡ್ ದೇಶದಲ್ಲಿ ಪಡೆದು ಇಂಗ್ಲೆಂಡಿಗೆ ಮರಳಿದಾಗ ಇಂಗ್ಲಿಷರು ನನ್ನ ತರಬೇತಿಯನ್ನು ಒಪ್ಪದೆ ತಮ್ಮದೇ ಇಂಗ್ಲಿಷ್ ನಂಬರನ್ನು ನೀಡಿ ಪವಿತ್ರಳನ್ನಾಗಿ ಮಾಡುವ ಮೂಲಕವೇ ಸ್ವೀಕರಿಸಿದ್ದು !

ಸ್ಕಾಟರು ಇಂಗ್ಲೆಂಡು ಬೇಕೆಂದು ಕೇಳಿದ್ದಕ್ಕಿಂತ, ಇಂಗ್ಲಿಷರು ಸ್ಕಾಟ್ಲ್ಯಾಂಡನ್ನು ತಮ್ಮದಾಗಿ ಮಾಡಿಕೊಳ್ಳಬೇಕೆಂದು ಬಯಸಿದ್ದೇ ಹೆಚ್ಚು. ಬರೀ ಕದನ, ಮದುವೆಗಳ ಮೂಲಕವೇ ಅಲ್ಲದೆ ಸ್ಕಾಟರ ರಕ್ತದಲ್ಲಿ ಇಂಗ್ಲಿಷರ ರಕ್ತವನ್ನು ಬೆರೆಸಿ, ಸ್ಕಾಟರ ಸಂತತಿಯನ್ನೇ ನಶಿಸುವ ಪ್ರಯತ್ನಗಳನ್ನೂ ಇಂಗ್ಲಿಷರು ನಡೆಸಿದರು ಎನ್ನುವ ಮಾತುಗಳಿವೆ. ಈ ಪ್ರಕಾರ ‘ಪ್ರೈಮ ನಾಕ್ಟ’ ಎನ್ನುವ ಕಾನೂನನ್ನು ಇಂಗ್ಲಿಷ್ ಅಧಿಕಾರಿಯಾಗಿದ್ದ ಲಾಂಗ್ ಶಾಕ್ಸ್ ಎನ್ನುವವನು ತಂದಿದ್ದನಂತೆ. ಈ ಕಾನೂನಿನ ಪ್ರಕಾರ ಪ್ರತಿ ಕನ್ಯೆಯೂ ತನ್ನ ಮದುವೆಯ ದಿನದ ಮೊದಲ ರಾತ್ರಿಯನ್ನು ಇಂಗ್ಲಿಷನೊಬ್ಬ ಬಯಸಿದಲ್ಲಿ, ಅವನೊಡನೆ ಕಳೆಯಬೇಕಿತ್ತು. ಅವನಿಗೇ ಬಸಿರಾದಲ್ಲಿ ಇಂಗ್ಲಿಷ್ ರಕ್ತದ ಸಂತತಿ ಬೆಳೆಯುತ್ತದೆನ್ನುವುದು ಕಾರಣ. ಜೊತೆಗೆ ಮನರಂಜನೆ ಮತ್ತು ಸ್ಕಾಟರ ಅವಹೇಳನ ಇವರ ಉದ್ದೇಶವಾಗಿತ್ತು ಎನ್ನುವ ನಂಬಿಕೆಗಳಿವೆ. ಚರಿತ್ರೆಯಲ್ಲಿ ಇಂತಹ ಕಾನೂನನ್ನು ಸ್ಕಾಟ್ಲ್ಯಾಂಡ ದೇಶವನ್ನು ಹೊರತು ಪಡಿಸಿಯೂ, ಮಧ್ಯ ಪ್ರಾಚ್ಯ, ಮತ್ತಿತರ ದೇಶದವರೂ ಅನುಸರಿಸಿದ್ದರೆಂಬ ಉಲ್ಲೇಖಗಳಿವೆ.

ಸ್ಕಾಟ್ಲ್ಯಾಂಡಿನ ರಾಜಧಾನಿ ಎಡಿನ್ಬರೋ ಆದರೂ ಅಲ್ಲಿನ ಅತಿ ದೊಡ್ಡ ನಗರ ಗ್ಲಾಸ್ಗೋ. ಇವೆರಡರ ನಡುವಿನ ‘ಫಾಲ್ಕರ್ಕ್‘ ಎನ್ನುವ ಜಾಗದಲ್ಲಿ ನಮ್ಮದೇ ಆದ ಒಂದು ಪುಟ್ಟ ಮನೆಯನ್ನು ಖರೀದಿಸಿದೆವು. ಚಾರಿತ್ರಿಕ ಸ್ಕಾಟ್ಲ್ಯಾಂಡಿನಲ್ಲಿ ನನ್ನನ್ನು ಬಹುವಾಗಿ ಸೆಳೆದ ನಗರವೆಂದರೆ ಎಡಿನ್ಬರೋ. ಇಲ್ಲಿನ ಎಡಿನ್ಬರೋ ಕ್ಯಾಸಲ್ 700 ಮಿಲಿಯನ್ನು ವರ್ಷಗಳ ಹಳೆಯ ಅಗ್ನಿ ಪರ್ವತದ ಮೇಲೆ ನಿಂತಿದೆ. ಈ ಕ್ಯಾಸಲ್ ನ್ನು ಹನ್ನೆರಡನೇ ಶತಮಾನದಲ್ಲಿ ಕಟ್ಟಲಾಯ್ತಂತೆ. ಕಂಚಿನ ಯುಗದಿಂದಲೂ ಇಲ್ಲಿ ಜನರು ಬದುಕಿದ ದಾಖಲೆಗಳಿವೆ. ಇದರ ಮೇಲಿಂದ ಪ್ರತಿ ದಿನ ಮಧ್ಯಾನ್ಹ ಸರಿಯಾಗಿ ಒಂದು ಗಂಟೆಗೆ ದೊಡ್ಡ ಗನ್ನೊಂದರಿಂದ ಗುಂಡನ್ನು ಹಾರಿಸುವ ಪದ್ಧತಿಯಿದೆ, ಈ ಪದ್ಧತಿ 1861 ನೇ ಇಸವಿಯಿಂದಲೂ ನಡೆದುಬಂದಿದೆ. ಹಿಂದೆ ಇದರಿಂದ ಫಿರ್ತ್ ನದಿಯ ಹಡಗಿನ ಜನರಿಗೆ ತಮ್ಮ ಗಡಿಯಾರಗಳನ್ನು ಸರಿಪಡಿಸಿಕೊಳ್ಳಲು ಅನುಕೂಲವಾಗುತ್ತಿತ್ತಂತೆ. ಇಂದು ಇದನ್ನು ನೋಡಲು ಸಹಸ್ರಾರು ಜನರು ಪ್ರತಿದಿನ ಸೇರುತ್ತಾರೆ. ಪ್ರತಿ ಹೊಸ ವರ್ಷದ ಮೊದಲ ದಿನ, ಕ್ರಿಸ ಮಸ್ ಹಬ್ಬದ ಸಂದರ್ಭಗಳಲ್ಲಿ ಈ ಕ್ಯಾಸೆಲ್ಲಿನ ಮೇಲಿಂದ ಮನೋಹರವಾಗಿ ಪಟಾಕಿಗಳನ್ನು ಹಾರಿಸುತ್ತಾರೆ. ಇನ್ನೂ ಆಸಕ್ತಿದಾಯಕ ವಿಚಾರವೆಂದರೆ, ಈ ಕ್ಯಾಸೆಲ್ಲಿನಲ್ಲಿಯೇ ಖೈದಿಗಳನ್ನು ಇಡುವ ಬಂಧೀಕಾನೆಗಳಿವೆ. ಮೊದಲೆಲ್ಲ ಸೆರೆ ಸಿಕ್ಕ ಶತ್ರುಗಳನ್ನು ಇಲ್ಲಿ ಇರಿಸುತ್ತಿದ್ದರಂತೆ. ಇವರಿಗೆ ಮರಣದಂಡನೆ ವಿಧಿಸುವಾಗ ಇವರ ತಲೆಯ ಮೇಲೆ ದೊಡ್ಡ ಕಲ್ಲುಗಳನ್ನು ಎತ್ತಿಹಾಕಿ ಅವರ ತಲೆಬುರುಡೆಯನ್ನು ಒಡೆಯುತ್ತಿದ್ದರಂತೆ. ಇದಾದ ನಂತರ ಇವರ ಶವಗಳ ಮೇಲೆ ಅಧ್ಯಯನ ನಡೆಸುತ್ತಿದ್ದರಂತೆ.

ಒಂದಾನೊಂದು ಕಾಲದಲ್ಲಿ ಎಡಿನ್ಬರೋ ನಗರ ಅತ್ಯಂತ ಆಧುನಿಕ ಮತ್ತು ಮುಂದುವರೆದ ನಗರಗಳಲ್ಲಿ ಒಂದಾಗಿದ್ದ ಹೆಗ್ಗಳಿಕೆಯಿದೆ. ಇದೀಗ ಪ್ರಾಚೀನ ನಗರಗಳ ಗುಂಪಿಗೆ ಸೇರುತ್ತದೆ. ಆದರೆ ಇವತ್ತಿಗೂ ಸಾಂಪ್ರದಾಯಿಕ ಅರಿಸ್ಟೋಕ್ರಾಟ್ ಸ್ಕಾಟರು ಇಲ್ಲಿಯೇ ಬದುಕುವುದು. ಹೀಗಾಗಿ ಗ್ಲಾಸ್ಗೋ ನಗರ, ವಿದೇಶೀಯರಿಗೆ, ವಲಸಿಗರಿಗೆ ಅಪ್ಯಾಯಮಾನವಾದ ಜಾಗವಾಗಿದೆ. 1824 ರಲ್ಲಿ ಈ ಎಡಿನ್ಬರೋ ನಗರದಲ್ಲಿ ಬೆಂಕಿಯ ದುರಂತವಾಗಿ ಐದು ದಿನಗಳ ಕಾಲ ಹೊತ್ತಿ ಉರಿಯಿತಂತೆ . ಆಗ ತಯಾರಾದ ಫೈರ್ ಬ್ರಿಗೇಡ್ ಪ್ರಪಂಚದ ಮೊದಲ ಫೈರ್ ಬ್ರಿಗೇಡ್. ಮುಂದೆ ಇದೇ ಅಗ್ನಿಶಾಮಕ ದಳದ ಪದ್ಧತಿಯನ್ನು ಇಡೀ ಪ್ರಪಂಚವೇ ಅನುಸರಿಸಿತು. ಇಂಗ್ಲೆಂಡ್ ಮತ್ತು ಲಂಡನ್ ಎರಡೂ ಪದಗಳನ್ನು ಭಾರತೀಯರು ಪರ್ಯಾಯ ಪದಗಳಂತೆ ಬಳಸುವುದನ್ನು ನಾನು ನೋಡಿದ್ದೇನೆ. ಇನ್ನು ಸ್ಕಾಟ್ಲ್ಯಾಂಡಿನ ರಾಜಧಾನಿ ಎಡಿನ್ಬರೋ ಮತ್ತು ಇತರೆ ಜಾಗಗಳ ಬಗ್ಗೆ ಹೆಚ್ಚು ಅರಿವಿರುವುದನ್ನು ಕಾಣೆ. ಆದರೆ ಸ್ಕಾಟರ ಸಿರಿವಂತ ಸಂಸ್ಕೃತಿಯ ಪರಿಚಯವಿರುವ ಚೈನಾ, ಜಪಾನ್ ಮುಂತಾದ ದೇಶದ ಜನರು ಎಡಿನ್ಬರೋ ನೋಡಲು ಬರುವುದು ಬಹಳ ಜಾಸ್ತಿ.

ಸ್ಕಾಟ್ಲ್ಯಾಂಡಿನವರ ಸಾಂಪ್ರದಾಯಿಕ ಆಹಾರ, ಹಾಗ್ಗಿಸ್ ಎನ್ನುವ ಮಾಂಸ ಖಾದ್ಯ. ಇದನ್ನು ಕುರಿಯ ಹೃದಯ, ಪಪ್ಪುಸ ಮತ್ತು ಯಕೃತ್ತುಗಳ ಮಾಂಸಗಳನ್ನು ಅದೇ ಪ್ರಾಣಿಯ ಉದರ ಚೀಲದಲ್ಲಿಟ್ಟು ಕುದಿಸಿ ತಯಾರಿಸಲಾಗುತ್ತದೆ. ಪ್ರಪಂಚಕ್ಕೇ ಇಲ್ಲಿಂದ ಸರಬರಾಜಾಗುವ ‘ವಿಸ್ಕಿ’ ಚೈನಾದ ಆವಿಷ್ಕಾರವಾದರೂ ಸ್ಕಾಟರು ಅದರ ಮೇಲೆ ತಮ್ಮ ಮುದ್ರೆಯನ್ನು ಒತ್ತಿದ್ದಾರೆ. ಇವರು ತಮ್ಮದನ್ನಾಗಿ ಮಾಡಿಕೊಂಡಿರುವ ಕಿಲ್ಟ್ ಲಂಗಗಳು, ಬ್ಯಾಗ್ ಪೈಪರ್ ವಾದ್ಯಗಳು ಬೇರೆಡೆಯಿಂದ ಬಂದವು. ಈ ಸ್ಕಾಟ್ಲ್ಯಾಂಡಿಗರು ನಂಬುವ ಹಲವು ಅದ್ಭುತ ರಮ್ಯ ಕಥೆಗಳಲ್ಲಿ ಯೂನಿಕಾರ್ನ್ ಗಳು ಬರುವ ಕಾರಣ ಇದನ್ನೇ ತಮ್ಮ ರಾಷ್ಟ್ರೀಯ ಪ್ರಾಣಿಯನ್ನಾಗಿಸಿಕೊಂಡಿದ್ದಾರೆ. ಆದರೆ ಉತ್ತರ ಸ್ಕಾಟ್ಲ್ಯಾಂಡಿಗೆ ಹೋದರೆ ನಾವಿಲ್ಲಿ ನೋಡುವ ಸ್ಕಾಟ್ಟಿಷ್ ಬೈಸನ್ನುಗಳೇ ನಮ್ಮನ್ನು ಸೆಳೆಯುವುದು.

ಪ್ರಾಗಿನ ‘ಅಬ್ಸಿಂತೆ’, ಜರ್ಮನಿಯ ‘ಬೀರ್’, ಜಮೈಕಾದ ‘ರಂ’ ಪ್ರಸಿದ್ಧವಾದಂತೆ ಅತ್ಯತ್ತಮ ಗುಣಮಟ್ಟದ ‘ವಿಸ್ಕಿ’ಗೆ ಸ್ಕಾಟ್ಲ್ಯಾಂಡ್ ಪ್ರಸಿದ್ಧ. ಸ್ಕಾಟರ ಗೇಲಿಕ್ ಭಾಷೆಯಲ್ಲಿ ‘ವಿಸ್ಕಿ’ ಎಂದರೆ ‘ವಾಟರ್ ಆಫ್ ಲೈಫ್’ ಎನ್ನುವ ಅರ್ಥವಿದೆ . ಹಾಗಾಗಿ ಎಡಿನ್ಬರೋ ಸೇರಿದಂತೆ ಹಲವೆಡೆ ನಾವು ಈ ಬ್ರೂವರಿಗಳಿಗೆ ಹೋಗಿ ಇದರ ತಯಾರಿಕೆಯನ್ನು ನೋಡಬಹುದು. ಇದರಂತೆಯೇ ಸಿರಿವಂತರ ಆಟವಾದ ಗಾಲ್ಫ್ ಹುಟ್ಟಿದ್ದು ಕೂಡ ಸ್ಕಾಟ್ಲ್ಯಾಂಡ್ ನಲ್ಲಿಯೇ. ಶೆರ್ಲಾಕ್ ಹೋಂ ಕಥೆಗಳನ್ನು ಬರೆದ ಆರ್ಥರ್ ಕಾನನ್ ಡಾಯ್ಲ್ ಕೂಡ ಹೆಮ್ಮೆಯ ಸ್ಕಾಟ.

ಸ್ಕಾಟರು ಇಂಗ್ಲೆಂಡು ಬೇಕೆಂದು ಕೇಳಿದ್ದಕ್ಕಿಂತ, ಇಂಗ್ಲಿಷರು ಸ್ಕಾಟ್ಲ್ಯಾಂಡನ್ನು ತಮ್ಮದಾಗಿ ಮಾಡಿಕೊಳ್ಳಬೇಕೆಂದು ಬಯಸಿದ್ದೇ ಹೆಚ್ಚು. ಬರೀ ಕದನ, ಮದುವೆಗಳ ಮೂಲಕವೇ ಅಲ್ಲದೆ ಸ್ಕಾಟರ ರಕ್ತದಲ್ಲಿ ಇಂಗ್ಲಿಷರ ರಕ್ತವನ್ನು ಬೆರೆಸಿ, ಸ್ಕಾಟರ ಸಂತತಿಯನ್ನೇ ನಶಿಸುವ ಪ್ರಯತ್ನಗಳನ್ನೂ ಇಂಗ್ಲಿಷರು ನಡೆಸಿದರು ಎನ್ನುವ ಮಾತುಗಳಿವೆ.

ಎಡಿನ್ಬರೋನಲ್ಲಿ ನಡೆವ ‘ಎಡಿನ್ಬರೋ ಇಂಟರ್ ನ್ಯಾಷನಲ್ ಫೆಸ್ಟಿವಲ್’ ಗೆ ಪ್ರತಿವರ್ಷ ಮೂರು ಲಕ್ಷ ಜನರು ಬಂದು ಸೇರುತ್ತಾರೆ. ಇಡೀ ನಗರವೇ ಹಬ್ಬವನ್ನು ಸಂಭ್ರಮಿಸುವ ಈ ಸಂದರ್ಭದಲ್ಲಿ ಭಾಗಿಗಳಾಗುವ ಅವಕಾಶವೂ ನಮಗೆ ದೊರೆಯಿತು. ಎಡಿನ್ಬರೋದ ಜನಸಂಖ್ಯೆ ಕೇವಲ ಅರ್ಧ ಮಿಲಿಯನ್ ಆದರೂ ಪ್ರತಿವರ್ಷ 13 ಮಿಲಿಯನ್ನು ಟೂರಿಸ್ಟ್ ಗಳು ಈ ನಗರಕ್ಕೆ ಭೇಟಿಕೊಡುತ್ತಾರೆ. ಅಂದರೆ ಪ್ರತಿ ಸ್ಕಾಟನಿಕೆ 26 ಮಂದಿ ಪ್ರವಾಸಿಗರು!! ಎಡಿನ್ಬರೋದ ಆಕರ್ಷಣೆ ಅಂಥಾದ್ದು. ಒಮ್ಮೆ ಹೋದರೆ ಮತ್ತೆ ಮತ್ತೆ ನೋಡಬೇಕೆನ್ನಿಸುವ ತಾಣ. ಅತ್ಯಂತ ಸುಂದರ ನದಿ , ಬೆಟ್ಟ, ಹಸಿರು ಕಣಿವೆಗಳನ್ನು ಹೊಂದಿರುವ ಸ್ಕಾಟ್ಲ್ಯಾಂಡ್ ತನ್ನ ದೇಶ ಪ್ರೇಮದ ಗರಿಮೆಯ ಗರಿಗಳನ್ನು ಮತ್ತೊಮ್ಮೆ ಕೆದರಿ ನಿಂತಿದ್ದು 1995 ರ ಆಸ್ಕರ್ ವಿಜೇತ ಸಿನಿಮಾ ‘ಬ್ರೇವ್ ಹಾರ್ಟ್’ ಬಂದ ನಂತರ. ಈ ಚೆಲುವ ನಾಡು ತದನಂತರ ‘ಹ್ಯಾರಿ ಪಾಟರ್’, ‘ಟ್ರೈನ್ ಸ್ಪಾಟ್ಟಿಂಗ್’, ‘ಡಾವಿಂಚಿ ಕೋಡ್’, ‘ಸ್ಟಾರ್ ಡಸ್ಟ್’, ‘ಸ್ಕೈ ಫಾಲ್’, ‘ದಿ ಡಾರ್ಕ್ ರೈಸರ್’, ‘ಅಂಡರ್ ದಿ ಸ್ಕಿನ್’, ‘ವರ್ಲ್ಡ್ ವಾರ್ ಝಡ್’ ಹೀಗೆ ನಾನಾ ಹಾಲಿವುಡ್ ನ ಚಿತ್ರಗಳಲ್ಲಿಯೂ ಕಾಣಸಿಗುತ್ತದೆ.

ಇಲ್ಲಿನ ನದಿಗಳು ಸಿಹಿನೀರಿನ ಸುಂದರ ತಾಣಗಳು. ಇವುಗಳನ್ನು ಬಾಟಲಿಗಳಲ್ಲಿ ತುಂಬಿ ಸ್ಕಾಟ್ಟಿಷ್ ವಾಟರ್ ಎನ್ನುವ ಹೆಸರಿನ ಗರಿಮೆಯಲ್ಲಿಯೇ ಮಾರುತ್ತಾರೆ. ದಕ್ಷಿಣದ ನಗರಗಳು, ಉತ್ತರದ ಸೌಂದರ್ಯ ತಾಣಗಳನ್ನೂ ಮೀರಿ ಮೇಲಕ್ಕೆ ಹೋದರೆ ಬರೀ ಬೆಟ್ಟ ತುಂಬಿದ ಜಾಗಗಳಿವೆ. ಬೆಟ್ಟಕ್ಕೊಂದು ಮನೆ, ನೂರಾರು ಕುರಿಗಳು, ಕಣ್ಣು ಹಾಯ್ದಷ್ಟೂ ದೂರ ಕಾಣಿಸುತ್ತವೆ. ಇಲ್ಲಿ ಹೋಟಲುಗಳು ಸಿಗುವುದಿಲ್ಲ. ಯಾವುದಾದರೂ ಕುರುಬರೇ ನಡೆಸುವ ಬ್ರೆಡ್ ಅಂಡ್ ಬ್ರೇಕ್ ಫಾಸ್ಟ್ ಸಿಕ್ಕರೆ ಅದೇ ಪುಣ್ಯ. ಇಲ್ಲಿಂದ ಮುಂದಿನ ಸಮುದ್ರ ತಟಗಳಿಗೆ ಹೋಗುವುದೆಂದರೆ ನಾಗರಿಕತೆಯಿಂದ ದೂರ ಹೋದ ಅನುಭವವಾಗುತ್ತದೆ. ನಿಮ್ಮ ಹೊರತಾಗಿ ಮತ್ತೊಬ್ಬ ಮನುಷ್ಯರನ್ನು ಕಾಣುವುದು ವಿರಳವಾಗುತ್ತದೆ. ಈ ರೀತಿಯ ಪ್ರಯಾಣ ಮಾಡಲು ಬೇಸಿಗೆಯಲ್ಲಿ ಮಾತ್ರ ಸಾಧ್ಯ. ಚಳಿಗಾಲದಲ್ಲಿ ಉತ್ತರಭಾಗದ ಈ ಪುಟ್ಟ ಹಳ್ಳಿಗಳ ಸಂಪರ್ಕ ರಸ್ತೆಗಳು ತಿಂಗಳು ಗಟ್ಟಲೆ ಕಡಿದು ಹೋಗುತ್ತವೆ. ಇವನ್ನೂ ಮೀರಿ ಪುಟ್ಟ ಹಡಗುಗಳಲ್ಲಿ ‘ಐಲ್ ಆಫ್ ಅಯೋನ’, ‘ಐಲ್ ಆಫ್ ಮುಲ್’ ಮತ್ತಿತರ ದ್ವೀಪಗಳಿಗೂ ನಾವು ಹೋಗಿದ್ದೇವೆ. ಇವು ಧರ್ಮಾರ್ಥ ಪ್ರಸಿದ್ಧಿ ಪಡೆದ ಕ್ರಿಶ್ಚಿಯನ್ನರ ತಾಣಗಳು. ಅದೇ ರೀತಿ ಶೆಟ್ಲ್ಯಾಂಡ್, ಆರ್ಕ್ನಿ ಇತ್ಯಾದಿ ದ್ವೀಪಗಳಿವೆ. ಎಲ್ಲೆಲ್ಲಿಯೂ ನೈಸರ್ಗಿಕ ಚೆಲುವಿರುವ ತುಂಬು ಸೌಂದರ್ಯದ ನಾಡಿದು. ಇಲ್ಲಿನ ಅತಿ ಎತ್ತರದ ಪರ್ವತ ಬೆನ್ ನೇವಿಸ್ ನ ಶಿಖರದಲ್ಲಿ ವರ್ಷದ ಪ್ರತಿ ದಿನವೂ ಹಿಮ ಮುಕುಟವಿರುತ್ತದೆ.

ಸೂರ್ಯ ಪ್ರಖರವಾಗಿರದ ಈ ನಾಡಿನ ಜನರಿಗೆ ಸೆಖೆಯನ್ನು ತಡೆಯಲಾಗುವುದಿಲ್ಲ. ಶೇಕಡಾ ನಲವತ್ತು ಜನ ಸ್ಕಾಟರ ಜೀನಿನಲ್ಲಿ ತಲೆಯ ಕೂದಲು ಕೆಂಪಾಗಿ ಹುಟ್ಟುವ ಡಿ.ಎನ್. ಎ. ಇರುವುದು ರುಜುವಾತಾಗಿದೆ. ಸೂರ್ಯನ ಬೆಳಕಿಲ್ಲದಿರುವುದೇ ಇದಕ್ಕೆ ಕಾರಣ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಇಲ್ಲಿ ತಾಪಮಾನ ಕೇವಲ 15 ಡಿಗ್ರಿಯಾದರೆ ತಡೆದುಕೊಳ್ಳಲಾಗದೆ ಕಿಟಕಿ , ಬಾಗಿಲುಗಳನ್ನು ತೆರೆದಿಟ್ಟು, ಎ. ಸಿ. ಹಾಕಿಕೊಂಡು ತಣ್ಣಗಿರಲು ಬಯಸುವ ಈ ಜನರ ನಡುವೆ ಒಂದೇ ಕೋಣೆಯಲ್ಲಿ ಕೆಲಸ ಮಾಡಲು ಹೆಣಗಿದ್ದೂ ಇದೆ. ಕ್ರಿಸ್ ಮಸ್ ಬರುವುದೇ ಚಳಿಗಾಲದಲ್ಲಿ. ಈ ಹಬ್ಬದ ಆಚರಣೆಗೆಂದು ಇವರೊಂದಿಗೆ ಎಲ್ಲಿಗಾದರೂ ಹೋದರೆ ಅಂತಹ ಚಳಿಗಾಲದಲ್ಲಿಯೂ ಮೋಟು ಧಿರಿಸು ಧರಿಸಿ ಆರಾಮಾಗಿರುವ ಇವರ ನಡುವೆ ಕೋಟು-ಮಫ್ಲರುಗಳನ್ನು ಧರಿಸಿಯೂ ಥರ ಥರನೆ ನಡುಗಿ ಚಳಿಗಾಲವನ್ನು ಶಪಿಸಿದ್ದಿದೆ.

ನಾಲ್ಕನೇ ಶತಮಾನದಲ್ಲಿಯೇ ಲ್ಯಾಟಿನ್ ಭಾಷೆಯಲ್ಲಿ ‘ಸ್ಕಾಟ’ ರೆಂಬ ಪದವಿದೆ. ಸ್ಕಾಟರ ಸಾಂಪ್ರದಾಯಿಕ ಕಿಲ್ಟ್ ಲಂಗಗಳು, ಬ್ಯಾಗ್ ಪೈಪರ್ ವಾದನ ಇವೆಲ್ಲ ಸ್ಕಾಟರದಲ್ಲ. ಬದಲು ಐರಿಷ್ ಜನರದ್ದು. ಸ್ಕಾಟರೆಂದರೆ ರೋಮನ್ನರಿಂದ ಆಳಲ್ಪಡುತ್ತಿದ್ದ ಇಂಗ್ಲೆಂಡನ್ನು ಆಳಲು ಐರ್ಲ್ಯಾಂಡಿನಿಂದ ಸಮುದ್ರ ಯಾನ ಮಾಡಿ ಬಂದು ಉತ್ತರಭಾಗದಲ್ಲಿ ನೆಲೆನಿಂತ ಐರಿಷ್ ಜನರೆಂಬ ನಂಬಿಕೆಯಿದ್ದರೂ ಆಗಾಗಲೇ ಸ್ಕಾಟ್ಲ್ಯಾಂಡಿನಲ್ಲಿ ನೆಲೆ ನಿಂತ ಮೂಲ ವಾಸಿಗಳು ಇದ್ದರಂತೆ. ಹೀಗಾಗಿ ಇಲ್ಲಿ ಗೇಲಿಕ್, ಸ್ಕಾಟ್ ಮತ್ತು ಇಂಗ್ಲಿಷ್ ಭಾಷೆಗಳಿವೆ.

2014 ರಲ್ಲಿ ಇಂಗ್ಲೆಂಡಿನಿಂದ ಬೇರೆಯಾಗಲು ಸ್ಕಾಟ್ಟಿಷ್ ನ್ಯಾಷನಲ್ ಪಾರ್ಟಿ ಜನರಿಂದ ಮತ ಕೇಳಿತು. 55.3% ಜನ ಬೇಡವೆಂತಲೂ, 44.7 % ಜನ ಬೇರೆಯಾಗಬೇಕೆಂತಲೂ ಮತ ಚಲಾಯಿಸಿದರು. ಆದರೆ 14.5% ಜನ ಮತ ನೀಡದೆ ಸುಮ್ಮನಿದ್ದರು. ಇದೀಗ ಬ್ರೆಕ್ಸಿಟ್ ನ ಕಾರಣ ತತ್ತರಿಸಿರುವ ಇಂಗ್ಲೆಂಡಿನ ಕತ್ತು ಹಿಡಿದು ನಿಂತಿರುವ ಸ್ಕಾಟ್ಯ್ಯಾಂಡ್ ತನ್ನದೇ ಬ್ರೆಕ್ಸಿಟ್ ದೃಷ್ಟಿಕೋನವನ್ನು ಹೊಂದಿರುವುದು ಮುಳುವಾಗಿದೆ. ಇತ್ತ ಸಮ್ಮಿಶ್ರ ಸರ್ಕಾರಲ್ಲಿ ಏಗುತ್ತಿರುವ ಇಂಗ್ಲೆಂಡಿನ ಪ್ರಧಾನಿಗೆ ಐರ್ಲ್ಯಾಂಡಿನ ತೊಂದರೆಗಳೂ ಸೇರಿಕೊಂಡು ಕಾಲು ಮುರಿದಂತಾಗಿದೆ. ಇದೇ ಕಾರಣಕ್ಕೆ ತನ್ನದೇ ರಾಜಕೀಯ ಮತ್ತು ಆಡಳಿತ ಸಮಸ್ಯೆಗಳಲ್ಲಿ ತೊಳಲುತ್ತಿರುವ ದೇಶವೆಂದು ಟ್ರಂಪ್ ನೇಟೋ ಸಭೆಯಲ್ಲಿ ಯು.ಕೆ. ಯನ್ನು ವರ್ಣಿಸಿದ್ದರಲ್ಲಿ ಅತಿಶಯೋಕ್ತಿಗಳಿಲ್ಲ.

ಸ್ಕಾಟ್ಲ್ಯಾಂಡ್ ಗೆ ಹೋಗಿದ್ದು ಕೆಲಸ ನಿಮಿತ್ತವೇ ಆದರೂ ಅಲ್ಲಿನ ಸಂಪ್ರದಾಯಗಳು, ಸಂಸ್ಕೃತಿ, ಚೆಲುವು ನಮ್ಮನ್ನು ಹಿಡಿದಿಟ್ಟಿದ್ದು ಬಹಳ ನಿಜ. ಅಲ್ಲಿಂದ ಮತ್ತೆ ಇಂಗ್ಲೆಂಡಿಗೆ ಬರುವುದಿಲ್ಲವೆಂದು ಸಂತೋಷವಾಗಿ ಬೇರು ಬಿಟ್ಟ ನಾನು ನನ್ನ ಮೊದಲ ಕೆಲಸವನ್ನು ಮನಸಾ ಶುರುಮಾಡಿದ್ದೆ. ಅವತ್ತಿಗೆ 126 ವರ್ಷ ಹಳೆಯದಾದ ಒಂದು ಆಸ್ಪತ್ರೆಯಲ್ಲಿ ನನ್ನ ಮೊದಲ ಕೆಲಸ ಶುರುವಾದದ್ದು. (ಮುಂದುವರೆಯುವುದು)