ಅಂದರೆ ಆಸ್ಟ್ರೇಲಿಯಾದಲ್ಲಿ ಎಲ್ಲರೂ ಸಲ್ಲುತ್ತಾರೆ ಎಂದಾಯಿತು. ಯಾವುದೇ ಭಾಷೆ ಮಾತನಾಡುತ್ತಿರಲಿ, ಯಾವುದೇ ಸಂಸ್ಕೃತಿಯನ್ನು ಆಚರಿಸುತ್ತಿರಲಿ, ಯಾವುದೇ ಧರ್ಮವನ್ನು ಪಾಲಿಸುತ್ತಿರಲಿ, ಎಲ್ಲಾರೂ ಇಲ್ಲಿ ಸಲ್ಲುತ್ತಾರೆ. ಅವರ ಆಹಾರ, ಉಡುಗೆತೊಡುಗೆಗಳ ವೈವಿಧ್ಯತೆ, ಇಂಗ್ಲಿಷ್ ಭಾಷೆಯ ಉಚ್ಚಾರಣೆ ಎಲ್ಲವೂ ಸಹ್ಯ, ಸಲ್ಲುತ್ತದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ
ಪ್ರಿಯ ಓದುಗರೆ,
ಅವನ ಹೆಸರು ನೆಸ್ಟೋರಿ ಇರನ್ಕುಂಡ. ಇದ್ದಕ್ಕಿದ್ದಂತೆ ಈ ಇಪ್ಪತ್ತು ವರ್ಷದ ಯುವಕ ಆಸ್ಟ್ರೇಲಿಯಾದ ಫುಟ್ಬಾಲ್ ಪ್ರಿಯರಿಗೆ ಆಪ್ತನಾಗಿದ್ದಾನೆ. ಆಸ್ಟ್ರೇಲಿಯನ್ನರು ಕಣ್ಣರಳಿಸಿ ಅವನನ್ನು ನೋಡುತ್ತಿದ್ದಾರೆ. ಕಾರಣ, FIFA ವಿಶ್ವ ಫುಟ್ಬಾಲ್ ಕಪ್ ಪಂದ್ಯಗಳ ಸರಣಿಯ ಮೊದಲಿನಲ್ಲೇ ಟರ್ಕಿಯೆ ವಿರುದ್ಧ ಆಸ್ಟ್ರೇಲಿಯಾದ Socceroos ತಂಡವು ಎರಡು ಗೋಲ್ ಗಳಿಸಿ ಗೆದ್ದಿದೆ. ಮೊದಲನೆ ಗೋಲ್ ಹೊಡೆದಿದ್ದು ನೆಸ್ಟೋರಿ ಇರನ್ಕುಂಡ. ಆಸ್ಟ್ರೇಲಿಯನ್ Socceroos ಇತಿಹಾಸದಲ್ಲೀಗ ನೆಸ್ಟೋರಿ ಹೆಸರು ಸೇರಿಕೊಂಡಿದೆ-ಅತ್ಯಂತ ಕಿರಿ ವಯಸ್ಸಿನ ಗೋಲ್ ಸ್ಕೋರರ್ ಎಂದು.
ಅದೆಲ್ಲಾ ತುಂಬಾ ವಿಶೇಷ, ಹೌದು. ಅದಕ್ಕಿಂತಲೂ ವಿಶೇಷವೆಂದರೆ, ನೆಸ್ಟೋರಿ ಇರನ್ಕುಂಡ ಹಿಂದೊಮ್ಮೆ ರೆಫ್ಯೂಜಿ ಆಗಿದ್ದ. ಅವನ ಅಪ್ಪಅಮ್ಮಂದಿರು ಪೂರ್ವ ಆಫ್ರಿಕಾದ ಬುರುಂಡಿ ದೇಶದವರು. ಬುರುಂಡಿಯಲ್ಲಿ ನಡೆಯುತ್ತಿದ್ದ ಆಂತರಿಕ ಗಲಭೆಗಳು, ಯುದ್ಧದ ಕಾರಣದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಹತ್ತಿರದಲ್ಲಿದ್ದ ಟಾಂಝೆನಿಯ ದೇಶಕ್ಕೆ ನಿರಾಶ್ರಿತರಾಗಿ (ರೆಫ್ಯೂಜಿ) ಹೋದರು. ಅಲ್ಲಿನ ಒಂದು ರೆಫ್ಯೂಜಿ ಕ್ಯಾಂಪಿನಲ್ಲಿ ನೆಸ್ಟೋರಿ ಹುಟ್ಟಿದ. ಅವನು ಪುಟ್ಟ ಮಗುವಾಗಿದ್ದಾಗ ಅವರ ಕುಟುಂಬವು ಆಸ್ಟ್ರೇಲಿಯಾಕ್ಕೆ ಬಂತು. ನೆಸ್ಟೋರಿ ಬೆಳೆದಿದ್ದು South Australia ದ ರಾಜಧಾನಿ Adelaide ನಲ್ಲಿ. ಹುಡುಗ ಫುಟ್ಬಾಲ್ ಆಟವನ್ನು ಪ್ರೀತಿಸಿದ.
ಇಲ್ಲಿ ಹೇಳಹೊರಟಿದ್ದು ಬರೀ ನೆಸ್ಟೋರಿ ಇರನ್ಕುಂಡ ಕಥೆಯಷ್ಟೇ ಅಲ್ಲ. ಅವನಂತೆ Socceroos ತಂಡದಲ್ಲಿ ಇನ್ನೂ ಮೂವರು ರೆಫ್ಯೂಜಿ ಮೂಲದವರಿದ್ದಾರೆ. ಒಟ್ಟು ೨೬ ಮಂದಿ ಫುಟ್ಬಾಲ್ ಪಟುಗಳಿರುವ ತಂಡದಲ್ಲಿ ಹದಿನೈದು ಆಟಗಾರರು ಬಹುಸಂಸ್ಕೃತಿಗಳಿಗೆ ಸೇರಿದವರು. ಅವರ ಮನೆಭಾಷೆ ಇಂಗ್ಲಿಷ್ ಅಲ್ಲವೇ ಅಲ್ಲ. ಅವರಲ್ಲಿನ ಮುಕ್ಕಾಲು ಆಟಗಾರರು ಬಾಯಿಬಿಟ್ಟರೆ ನಮಗೆ ಗೊತ್ತಾಗುತ್ತದೆ ಅವರ ವಿವಿಧ ಭಾಷಾ accent. ತಮ್ಮತಮ್ಮ ಮೂಲ ಸಂಸ್ಕೃತಿಗಳ ಬಗ್ಗೆ ಅವರಿಗೆ ಗೌರವವಿದೆ. ಅವರಿಗೆಲ್ಲಾ ಯಾವ್ಯಾವುದೊ ದೇಶದಿಂದ ಆಸ್ಟ್ರೇಲಿಯಾಕ್ಕೆ ವಲಸೆ ಬಂದಿದ್ದು ಚೆನ್ನಾಗಿ ನೆನಪಿದೆ. ತಾವು ವಲಸೆ ಬಂದವರು ಎನ್ನುವುದರ ಬಗ್ಗೆ ಹೆಮ್ಮೆಯಿದೆ. ಇದೆಲ್ಲಾ ಬೆಳಕಿಗೆ ಬಂದಿದ್ದು, ಮನೆಮಾತಾಗಿದ್ದು, ನಾವೆಲ್ಲಾ ಅವರನ್ನು ಮೆಚ್ಚಿದ್ದು ಇದೇ ವಾರ, ಕೆಲ ದಿನಗಳ ಹಿಂದೆ. ಇದರ ಕೇಂದ್ರದಲ್ಲಿರುವುದು ಒಂದು ವಿಡಿಯೋ.
ಟರ್ಕಿಯ ವಿರುದ್ಧ ಆಡುವ ಮುಂಚೆ Socceroos ತಂಡವು ತಮ್ಮ ಪರಿಚಯದ ಒಂದು ವಿಡಿಯೋ ಮಾಡಿದ್ದರು. ಅದರಲ್ಲಿ ಪ್ರತಿಯೊಬ್ಬ ಆಟಗಾರನೂ ತನ್ನೂರು, ತನ್ನ ಮನೆಭಾಷೆ, ಸಂಸ್ಕೃತಿಯ ಬಗ್ಗೆ ಹೇಳಿಕೊಂಡಿದ್ದರು. ಜೊತೆಗೆ ತಾನು ಆಸ್ಟ್ರೇಲಿಯನ್ ಎಂದಿದ್ದರು. ತಾವೆಲ್ಲ ಬದುಕುತ್ತಿರುವ ತಮ್ಮೆಲ್ಲರ ಆಧುನಿಕ ಆಸ್ಟ್ರೇಲಿಯಾವು ಒಂದು ಬಹುಸಂಸ್ಕೃತಿಗಳ ನಾಡು ಎಂದಿದ್ದರು. ‘ನೀವು ಎಲ್ಲಿಂದ ಬಂದಿದ್ದರೂ ಸರಿ, ಇಲ್ಲಿ ಫುಟ್ಬಾಲ್ ಎಲ್ಲರಿಗೂ ಸಲ್ಲುತ್ತದೆ’ ಎಂಬ ಸಂದೇಶವನ್ನು ಹೇಳಿದ್ದರು.
ಅಂದರೆ ಆಸ್ಟ್ರೇಲಿಯಾದಲ್ಲಿ ಎಲ್ಲರೂ ಸಲ್ಲುತ್ತಾರೆ ಎಂದಾಯಿತು. ಯಾವುದೇ ಭಾಷೆ ಮಾತನಾಡುತ್ತಿರಲಿ, ಯಾವುದೇ ಸಂಸ್ಕೃತಿಯನ್ನು ಆಚರಿಸುತ್ತಿರಲಿ, ಯಾವುದೇ ಧರ್ಮವನ್ನು ಪಾಲಿಸುತ್ತಿರಲಿ, ಎಲ್ಲಾರೂ ಇಲ್ಲಿ ಸಲ್ಲುತ್ತಾರೆ. ಅವರ ಆಹಾರ, ಉಡುಗೆತೊಡುಗೆಗಳ ವೈವಿಧ್ಯತೆ, ಇಂಗ್ಲಿಷ್ ಭಾಷೆಯ ಉಚ್ಚಾರಣೆ ಎಲ್ಲವೂ ಸಹ್ಯ, ಸಲ್ಲುತ್ತದೆ.
ಸಲ್ಲಬೇಕು. Socceroos ತಂಡದ ಮತ್ತೊಬ್ಬ ರೆಫ್ಯೂಜಿ-ಮೂಲವುಳ್ಳ ಆವೆರ್ ಮಾಬಿಲ್ ಹೇಳಿದಂತೆ, ಆಸ್ಟ್ರೇಲಿಯಾದ ಬಹುಸಂಸ್ಕೃತಿಗಳ ಸಮಾಜದ ಕಾರಣದಿಂದ ಇದು ಪ್ರಪಂಚಲ್ಲಿನ ಬೆಸ್ಟ್ ಕಂಟ್ರಿ. ಈ ಅಸ್ಮಿತೆಯನ್ನು ಹೇಳುವುದು ಈಗಿನ Socceroos ತಂಡದ ಆಟಗಾರರ ಬಹು ಭಾಷೆಗಳು, ಸಂಸ್ಕೃತಿಗಳ ಹಿನ್ನೆಲೆ. ಅವರೆಲ್ಲಾ ಹೆಮ್ಮೆಯಿಂದ ಧರಿಸುವ Socceroos ಜೆರ್ಸಿ. ಈ ವೈವಿಧ್ಯತೆ ಹೇಳುತ್ತಿರುವುದು ಆಸ್ಟ್ರೇಲಿಯಾದ ಅಸ್ಮಿತೆಯನ್ನು.

(ಪೌಲೀನ್ ಹಾನ್ಸನ್)
ಈ ವಾರವೆಲ್ಲಾ ಅನೇಕರು ಆಸ್ಟ್ರೇಲಿಯಾದ ಬಲವಿರುವುದು ಅದರ ಭಾಷಾ-ಸಂಸ್ಕೃತಿಗಳ ವೈವಿಧ್ಯತೆಯಲ್ಲಿ ಎಂದು ಒತ್ತಿಒತ್ತಿ ಹೇಳುತ್ತಿದ್ದಾರೆ.
ಆದರೆ ಕೆಲವರು ಅದನ್ನು ಅಲ್ಲಗೆಳೆಯುತ್ತಿದ್ದಾರೆ. ಈ ಕೆಲವರನ್ನು ಪ್ರತಿನಿಧಿಸುವ ರಾಜಕೀಯ ಪಕ್ಷ ಒನ್ ನೇಶನ್. ಅದರ ನಾಯಕಿ ಪೌಲೀನ್ ಹಾನ್ಸನ್. ಈಕೆಯ ಮತ್ತು ಒನ್ ನೇಶನ್ ಪಕ್ಷದ ಬಲ ಬೆಳೆಯುತ್ತಿದೆ. ಕೆಲ ದಿನಗಳ ಹಿಂದೆ ಪೌಲೀನ್ ಹಾನ್ಸನ್ ರಾಷ್ಟ್ರೀಯ ಮಟ್ಟದಲ್ಲಿ ಒಂದು ಮಹತ್ವದ ಭಾಷಣವನ್ನು ಕೊಟ್ಟರು. ದೇಶದ ರಾಜಧಾನಿ ಕ್ಯಾನ್ಬೆರ್ರಾದಲ್ಲಿ, ನ್ಯಾಷನಲ್ ಪ್ರೆಸ್ ಕ್ಲಬ್ ಸಭಿಕರ ಮುಂದೆ ನಿಂತರು. ಹಿರಿ-ಕಿರಿ ಮಾಧ್ಯಮಗಳನ್ನು, ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ‘ಆಸ್ಟ್ರೇಲಿಯಾವು ಬಹುಸಂಸ್ಕೃತಿಗಳ ನಾಡಲ್ಲ. ಇಲ್ಲಿ multiculturalism ಸೋತಿದೆ. ನಾವು multiracial, monocultural ಸಮಾಜ ಎನ್ನುವುದನ್ನು ಜಾರಿಗೆ ತರಬೇಕು,’ ಎಂದರು. ಇದು ಅವರ ಮೊದಲನೇ ನ್ಯಾಷನಲ್ ಪ್ರೆಸ್ ಕ್ಲಬ್ ಹೇಳಿಕೆ. ತಮ್ಮ ಪಕ್ಷದ ನಿಲುವುಗಳನ್ನು ಪೌಲೀನ್ ವಿವರಿಸುತ್ತಾ, ‘ವಲಸೆ ಮತ್ತು ವಲಸೆಗಾರರನ್ನು ನಾವು ತಡೆಯುತ್ತೀವಿ. ವಲಸೆಗಾರರ ಕಾರಣದಿಂದ ದೇಶದಲ್ಲಿ ವಸತಿ ಸಮಸ್ಯೆ ಉಂಟಾಗಿದ್ದು. ತನ್ನ ಪಕ್ಷ ಅಧಿಕಾರಕ್ಕೆ ಬಂದರೆ ಪರಮಾಣು ಶಕ್ತಿ ಬಳಕೆಗೆ ಪ್ರೋತ್ಸಾಹ ಕೊಡುತ್ತದೆ.
Monocultural – ಒಂದೇ ಸಾಂಸ್ಕೃತಿಕ ಅಸ್ಮಿತೆ – ಇರುವ ಸಮಾಜವಾಗಲು ತಾನು ಮತ್ತು ತನ್ನ ಪಕ್ಷವು ಕೈಗೊಳ್ಳಲಿರುವ ಕ್ರಮಗಳನ್ನು ಹೇಳಿದರು. ಬಹುಭಾಷೆ, ಬಹುಸಂಸ್ಕೃತಿಗಳನ್ನು ಅನುಮೋದಿಸುವ, ಆಚರಿಸುವ, ಬೆಂಬಲಿಸುವ ಜನರಿಗೆ ಎಚ್ಚರಿಕೆ ಕೊಟ್ಟರು. ಸರಿಯಾಗಿ ಇಂಗ್ಲಿಷ್ ಮಾತನಾಡದಿದ್ದರೆ ನೋಡು, ಹುಷಾರ್ ಎಂದರು. ಸರಿಯಾಗಿ ಆಂಗ್ಲೋ -ಆಸ್ಟ್ರೇಲಿಯನ್ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳದಿದ್ದರೆ, ಆಚರಿಸದಿದ್ದರೆ ನೋಡುತ್ತಿರಿ ಆಪಾಯ ಕಾದಿದೆ, ಹುಷಾರ್ ಎಂದರು. ಖಡಾಖಂಡಿತವಾಗಿ ಮುಸ್ಲಿಮರು ಆಸ್ಟ್ರೇಲಿಯನ್ ಸಂಸ್ಕೃತಿಯನ್ನು ಕಲಿತು ಪಾಲಿಸಬೇಕು ಎಂದು ನಿರ್ದೇಶಿಸಿದರು.
ಬಹುಭಾಷೆಗಳ ಅಸ್ಮಿತೆಯನ್ನು ಪ್ರತಿಪಾದಿಸುವ ರಾಷ್ಟ್ರೀಯ ಟಿವಿ, ರೇಡಿಯೋ ಸಂಸ್ಥೆಗಳನ್ನು ಮುಚ್ಚುತ್ತೀವಿ, ಅಂದರು. ಅಂತಹ ಒಂದು ಚಾನೆಲ್ ಆದ SBS ಪತ್ರಕರ್ತೆಗೆ ಮುಖತಃ, ‘ನಿಮ್ಮ ಸಂಸ್ಥೆಯನ್ನು ಮುಚ್ಚುತ್ತೀವಿ,’ ಎಂದು ಹೆದರಿಸಿದರು. Guardian ಆಸ್ಟ್ರೇಲಿಯಾ ಪತ್ರಕರ್ತೆಗೆ, ಅಮೆರಿಕೆಯ ಟ್ರಂಪಣ್ಣನ ಧಾಟಿಯಲ್ಲಿ, ‘ನಿನ್ನಂತಹ ಕಚಡಾ ಜರ್ನಲಿಸ್ಟ್ ಅನ್ನು ನಾನು ಹಿಂದೆಂದೂ ನೋಡಿರಲಿಲ್ಲ’ ಎಂದು ಹೂಂಕರಿಸಿದರು.
ಒನ್ ನೇಶನ್ ಪಕ್ಷ, ಅದರ ನಾಯಕಿ ಪೌಲೀನ್ ಹಾನ್ಸನ್, ಆಕೆಯ ಪ್ರೆಸ್ ಕ್ಲಬ್ ಭಾಷಣ ಆಸ್ಟ್ರೇಲಿಯಾವನ್ನು ಮತ್ತಷ್ಟು ವಿಭಜಿಸಿದೆ. ಟ್ರಂಪಣ್ಣನ ತಂಗಿ ಈ ಆಸ್ಟ್ರೇಲಿಯನ್ ಪೌಲೀನ್ ಹಾನ್ಸನ್ ಎಂದು ಕೆಲವರ ಕುಹಕ. ಆಕೆಯ ನಡೆ-ನುಡಿಗಳು, ಆಕೆಯ ಪಕ್ಷದ ನಿಲುವು White Australia ಪಾಲಿಸಿಯನ್ನು ಜ್ಞಾಪಕಕ್ಕೆ ತರುತ್ತಿವೆ ಎಂದು ಕೆಲವರ ಆತಂಕ. White Australia ಪಾಲಿಸಿ ಇಪ್ಪತ್ತನೇ ಶತಮಾನದಲ್ಲಿ ಆಸ್ಟ್ರೇಲಿಯಾದಲ್ಲಿ ಕಾನೂನುಬದ್ಧವಾಗಿ ಚಾಲ್ತಿಯಲ್ಲಿತ್ತು. ಆಂಗ್ಲೋ-ಯುರೋಪಿಯನ್ ಮೂಲದ ಬಿಳಿಯರಿಗೆ ಮಾತ್ರ ಆಸ್ಟ್ರೇಲಿಯಾದಲ್ಲಿ ಜಾಗ, ಅಂತಹ ಬಿಳಿಯರಲ್ಲದವರು ಇಲ್ಲಿ ಸೇವೆ ಸಲ್ಲಿಸುವುದಕ್ಕೆ ಮಾತ್ರ ಇರುವುದು ಎಂದಿತ್ತು. ಪೌಲೀನ್ ಹಾನ್ಸನ್ ಬಾಯಿಂದ ಬರುತ್ತಿರುವ ಮಾತುಗಳು ಅದನ್ನೇ ಹೋಲುತ್ತಿದೆ.
ಪೌಲೀನ್ ಹಾನ್ಸನ್ ವೈಟ್ ಆಸ್ಟ್ರೇಲಿಯಾ ಪಾಲಿಸಿಯನ್ನು ಮತ್ತೆ ಜಾರಿಗೆಗೆ ತಂದಿದ್ದಾರೆ ಎಂದು ಹೇಳುತ್ತಿದ್ದಾರೆ ಆಸ್ಟ್ರೇಲಿಯನ್ ಮೂಲಜನರಾದ ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೈಟ್ ದ್ವೀಪವಾಸಿಗಳು. ಅವರು ಆಕೆಯ ನಿಲುವನ್ನು, ಮಾತನ್ನು ಖಂಡಿಸುತ್ತಿದ್ದಾರೆ. ಜೊತೆಗೂಡಿರುವವರು ಹಲವಾರು ಸಂಸ್ಥೆಗಳು. ಉದಾಹರಣೆಗೆ, Federation of Ethnic Communities Council of Australia, Asylum Seekewr Resource Centre. ಇವರೆಲ್ಲಾ multiculturalism ಆಸ್ಟ್ರೇಲಿಯಾದ ದೊಡ್ಡ ಶಕ್ತಿ, ಎನ್ನುತ್ತಿದ್ದಾರೆ.

ಪೌಲೀನ್ ಹಾನ್ಸನ್ ಮತ್ತವರ ಒನ್ ನೇಶನ್ ಪಕ್ಷವು ಆಸ್ಟ್ರೇಲಿಯಾ ಸಮಾಜದ ಬಹುತ್ವವೆಂಬ ಮರವನ್ನು ಕಡಿಯುತ್ತಿದ್ದಾರೆ. ಮರದ ರೆಂಬೆಕೊಂಬೆಗಳಾಗಿರುವ, ಏಟು ಹೊಡೆಸಿಕೊಳ್ಳುತ್ತಿರುವ ನಮ್ಮಂಥಾ ವಲಸೆಗಾರರು ಮುಂದೇನು ಎನ್ನುವ ಆತಂಕದಲ್ಲಿದ್ದೀವಿ.

ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.


