ಹೋದ ಗುರುವಾರ ಪ್ರಧಾನ ಮಂತ್ರಿಗಳ ಗಂಟಲೂ ಕೂಡ ಹಿಡಿದುಕೊಂಡು ಅವರೂ ಸಹ ಕಣ್ಣೀರಿಟ್ಟರು. ದೇಶದ ಮೂಲಜನರಿಗೆ ಸಂಬಂಧಿಸಿದ್ದರೂ 55 ವರ್ಷಗಳ ನಂತರ ಪ್ರತಿಯೊಬ್ಬ ಆಸ್ಟ್ರೇಲಿಯನ್ ವಯಸ್ಕ ಪ್ರಜೆಯೂ ಕಡ್ಡಾಯವಾಗಿ ಮತ ಚಲಾಯಿಸಬೇಕಾದ, ದೇಶದ ಸಂವಿಧಾನಕ್ಕೆ ತಿದ್ದುಪಡಿ ತರಲು ಕೇಳಬೇಕಿದ್ದ ಅತ್ಯಂತ ಮುಖ್ಯವಾದ ಪ್ರಶ್ನೆಯನ್ನು ಅವರು ಅಧಿಕೃತವಾಗಿ ಬಿಡುಗಡೆ ಮಾಡುವವರಿದ್ದರು. ತಮ್ಮ ಬಿಳಿಯ ಜನರಿಗೆ ಸಾರಾಸಾಗಾಟಾಗಿ, ಯಾವುದೇ ಅಡ್ಡಿಗಳಿಲ್ಲದೆ ‘ಸ್ವಾಭಾವಿಕವಾಗಿ’ ಲಭ್ಯವಿರುವ ಸ್ವಯಂ-ನಿರ್ಣಯದ ಹಕ್ಕು ಇದೇ ದೇಶದ ಮೂಲಜನರಿಗೆ ಇಲ್ಲವಾಗಿರುವುದನ್ನು ಅವರು ಎತ್ತಿ ಹಿಡಿದರು. ‘ದೇಶದ ಬದಲಾವಣೆಗಾಗಿ ನಾನಿರುವುದು’ ಎಂದು ಘೋಷಿಸಿದರು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

ಪ್ರಗತಿ ಪಥದಲ್ಲಿ ಸಮತೆಯ ರಥ ಸಾಗಿದೆ.

ಹೋದ ಗುರುವಾರ ಅನೇಕ ಆಸ್ಟ್ರೇಲಿಯನ್ನರು ಸ್ವಲ್ಪ ಉದ್ವೇಗದಿಂದಿದ್ದರು. ಬೆಳಗ್ಗೆ ಎಂಟು ಗಂಟೆಯ ತರಗತಿಗೆ ಹಾಜರಾದ ವಿದ್ಯಾರ್ಥಿಗಳು “ಇನ್ನೇನು ಇವತ್ತು ಹೊರಬೀಳಲಿದೆ. ಕಾಯುತ್ತಿರುವುದು ನಮ್ಮನ್ನು ಚಡಪಡಿಸುವಂತೆ ಮಾಡುತ್ತಿದೆ. ನಿಮಗೆ ಹೇಗನ್ನಿಸುತ್ತಿದೆ?” ಎಂದರು. ನನ್ನ ಅನಿಸಿಕೆಯನ್ನು ಯಾವಾಗಲೂ ಹೇಳುತ್ತಲೇ ಬಂದಿದ್ದೀನಿ. ದೇಶದ ಮೂಲಜನರ ಹಕ್ಕುಗಳ ದನಿಗೆ ನನ್ನ ಬೆಂಬಲವಿದೆ ಎಂದೆ.

ಅಂದು ದೇಶದ ಪ್ರಧಾನಿ ಆಂಟೋನಿ ಆಲ್ಬಾನೀಸಿ ಸರ್ಕಾರದ ವತಿಯಿಂದ ಮಹತ್ವದ ಪ್ರಶ್ನೆಯೊಂದನ್ನು ಬಿಡುಗಡೆ ಮಾಡಲಿದ್ದರು. ಆ ಪ್ರಶ್ನೆಯ ರೂಪ, ಪದಗಳನ್ನು ಆರಿಸಿಕೊಳ್ಳಲು, ರಚಿಸಲು ನೂರಾರು ಜನರು ಬಹಳ ದಿನಗಳಿಂದ ಶ್ರಮಪಟ್ಟಿದ್ದರು. ಒಂದು ಪ್ರಶ್ನೆಯ ಪದ ಆಯ್ಕೆಗೆ ಯಾಕಿಷ್ಟು ತಲೆಬಿಸಿಯಪ್ಪಾ, ಎಂದು ನೀವು ಕೇಳಬಹುದು. ಇದು ಅಂತಿಂಥ ಪ್ರಶ್ನೆಯಲ್ಲ. ಇಂಥದ್ದೊಂದು ಪ್ರಶ್ನೆಯನ್ನು 1967ರಲ್ಲಿ ಅಂದರೆ 55 ವರ್ಷಗಳ ಹಿಂದೆ ಕೇಳಲಾಗಿತ್ತು. ಇಡೀ ದೇಶದ ಜನತೆ ಕಡ್ಡಾಯವಾಗಿ ಇಲ್ಲ / ಹೌದು ಎಂಬ ಉತ್ತರದ ಮತವನ್ನು ನೀಡಬೇಕಿತ್ತು. ಅವರು ‘ಹೌದು’ ಎಂದು ಚಲಾಯಿಸಿದ ಮತದಿಂದ – ಒಮ್ಮತದಿಂದ – ದೇಶದ ಮೂಲಜನರಾದ ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೇಟ್ ದ್ವೀಪವಾಸಿಗಳು ಮೊಟ್ಟಮೊದಲ ಬಾರಿಗೆ ದೇಶದ ಚುನಾವಣೆಗಳಲ್ಲಿ ತಮ್ಮ ಮತ ಚಲಾಯಿಸುವ ಹಕ್ಕು ಅವರಿಗೆ ದೊರೆತಿತ್ತು. ಅವರ ಮತದಾನದ ಹಕ್ಕನ್ನು ಅಂಗೀಕರಿಸಿ ದೇಶದ ಪ್ರಜಾಪ್ರಭುತ್ವದ ಗುರುತಾಗಿರುವ ಸಂವಿಧಾನಕ್ಕೆ ತಿದ್ದುಪಡಿ ತರಲಾಗಿತ್ತು.

1967ರಲ್ಲಿ ನಡೆದ ಸಂವಿಧಾನ ತಿದ್ದುಪಡಿಯ ನಂತರವೂ ಕೂಡ ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೇಟ್ ದ್ವೀಪವಾಸಿಗಳು ತಮ್ಮ ಮಾನವಹಕ್ಕುಗಳಿಗಾಗಿ ಹೋರಾಡುತ್ತಲೇ ಇದ್ದಾರೆ. ಉದಾಹರಣೆಗೆ, ಇಲ್ಲಿಯತನಕವೂ ಅವರುಗಳ ಬಗ್ಗೆ, ಅವರ ಶಿಕ್ಷಣ, ಆರೋಗ್ಯ, ಆರ್ಥಿಕ ಪರಿಸ್ಥಿತಿ ಮುಂದಾದವುಗಳ ಬಗ್ಗೆ ಸರಕಾರಗಳೇ ನಿರ್ಧಾರ ಕೈಗೊಳ್ಳುತ್ತವೆ. ಅಂದರೆ, ತಮ್ಮಗಳ ಜೀವನದ ಬಗ್ಗೆ ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೇಟ್ ದ್ವೀಪವಾಸಿಗಳು ಯಾವುದೇ ಸ್ವಯಂ-ನಿರ್ಧಾರವನ್ನು ಕೈಗೊಳ್ಳುವಂತಿಲ್ಲ. ಇದನ್ನು ಪ್ರಶ್ನಿಸಿ ಅವರು ಕಳೆದ ಎರಡು ಮೂರು ದಶಕಗಳಿಂದಲೂ ಹೋರಾಡುತ್ತಲೇ ಬಂದಿದ್ದಾರೆ.

ಕಳೆದ ವರ್ಷ 2022ರ ಮೇ ತಿಂಗಳಲ್ಲಿ ಅಧಿಕಾರಕ್ಕೆ ಬಂದ ಆಂಟೋನಿ ಆಲ್ಬಾನೀಸಿ ಸರ್ಕಾರವು ದೇಶದ ಸಂವಿಧಾನದಲ್ಲಿ ಅಧಿಕೃತವಾಗಿ ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೇಟ್ ದ್ವೀಪವಾಸಿಗಳ ಪ್ರಾತಿನಿಧಿಕ ಅಂಗವನ್ನು ಸ್ಥಾಪಿಸುವುದಾಗಿ ಹೇಳಿದ್ದರು. ಅವರು ಹಾಗೆ ಹೇಳಿದ್ದರೂ ವಿಷಯ ಅಷ್ಟೊಂದು ಸುಲಭವೂ, ಸರಳವೂ ಅಲ್ಲ. ಹಾಗೆ ಸಂವಿಧಾನಕ್ಕೆ ಸೇರ್ಪಡೆ ಮಾಡಲು ಮೊಟ್ಟಮೊದಲು ದೇಶದ ಜನತೆಯ ಮುಂದೆ ವಿಷಯವನ್ನಿಟ್ಟು ಅವರು ಅದರ ಪರವಾಗಿಯೋ ಅಥವಾ ವಿರೋಧವಾಗಿಯೋ ಮತ ಚಲಾಯಿಸಿದಾಗ ಅದರ ಪ್ರಕಾರ ಸಂವಿಧಾನಕ್ಕೆ ತಿದ್ದುಪಡಿ ತರುವುದು ಅಥವಾ ಅದನ್ನು ಕೈಬಿಡುವುದು ನಿರ್ಧಾರವಾಗುತ್ತದೆ. ಇದು ಪ್ರಜಾಪ್ರಭುತ್ವದ ಗುರುತರ ಚಿಹ್ನೆ.

ಪ್ರಧಾನಿ ಆಲ್ಬಾನೀಸಿ ಅವರು ‘ಇಂಡೀಜಿನಸ್ ವಾಯ್ಸ್ ಟು ಪಾರ್ಲಿಮೆಂಟ್ʼ ವಿಷಯದತ್ತ ತಮಗಿರುವ ಒಲವನ್ನು ಪದೇಪದೇ ಹೇಳಿಕೊಂಡಿದ್ದಾರೆ. ಆದರೆ, ಕಷ್ಟ ಬಂದಿದ್ದು ನಮ್ಮ ಸಂವಿಧಾನದಲ್ಲಿ ಹೇಗೆ ಈ ‘ವಾಯ್ಸ್’ ಎಂಬುದನ್ನು ಸೇರಿಸಬೇಕು? ಅದರ ರೂಪರೇಖೆ ಹೇಗಿರುತ್ತದೆ? ಅದರ ಪ್ರಾತಿನಿಧಿಕ ಅಂಗದ ರಚನೆ, ಸ್ವರೂಪ, ಎಷ್ಟು ಜನ ಪ್ರತಿನಿಧಿಗಳಿರಬೇಕು, ಅವರು ಯಾವ್ಯಾವ ವಿಷಯಗಳಲ್ಲಿ ಕೈಹಾಕಬಹುದು, ಬಾರದು ಎಂದೆಲ್ಲಾ ಚರ್ಚೆಗಳು ಹೋದ ವರ್ಷದಿಂದಲೂ ನಡೆಯುತ್ತಿವೆ. ಆಸ್ಟ್ರೇಲಿಯನ್ ಅಬೊರಿಜಿನಲ್ ಜನರಲ್ಲೇ ಸುಮಾರು 250 ಕ್ಕೂ ಹೆಚ್ಚು ವಿವಿಧ ಪಂಗಡಗಳಿವೆ. ಇವರೆಲ್ಲರನ್ನೂ ಹೇಗೆ ಯಾರು ಪ್ರತಿನಿಧಿಸುತ್ತಾರೆ ಎನ್ನುವುದು ಕ್ಲಿಷ್ಟಕರ ವಿಷಯ.

ಇಲ್ಲಿಯತನಕವೂ ಅವರುಗಳ ಬಗ್ಗೆ, ಅವರ ಶಿಕ್ಷಣ, ಆರೋಗ್ಯ, ಆರ್ಥಿಕ ಪರಿಸ್ಥಿತಿ ಮುಂದಾದವುಗಳ ಬಗ್ಗೆ ಸರಕಾರಗಳೇ ನಿರ್ಧಾರ ಕೈಗೊಳ್ಳುತ್ತವೆ. ಅಂದರೆ, ತಮ್ಮಗಳ ಜೀವನದ ಬಗ್ಗೆ ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೇಟ್ ದ್ವೀಪವಾಸಿಗಳು ಯಾವುದೇ ಸ್ವಯಂ-ನಿರ್ಧಾರವನ್ನು ಕೈಗೊಳ್ಳುವಂತಿಲ್ಲ. ಇದನ್ನು ಪ್ರಶ್ನಿಸಿ ಅವರು ಕಳೆದ ಎರಡು ಮೂರು ದಶಕಗಳಿಂದಲೂ ಹೋರಾಡುತ್ತಲೇ ಬಂದಿದ್ದಾರೆ.

ವಿಷಯ ಇಷ್ಟಕ್ಕೇ ಸೀಮಿತವಾಗಿಲ್ಲ. ‘ಇಂಡೀಜಿನಸ್ ವಾಯ್ಸ್ ಟು ಪಾರ್ಲಿಮೆಂಟ್’ ಎನ್ನುವುದಕ್ಕೆ ಖಚಿತವಾದ ಕವಚ ಸಿಕ್ಕಿದ್ದು 2017 ರಲ್ಲಿ ಲೋಕಸಮರ್ಪಿತವಾದ ‘Uluru Statement from the Heart’ ಎಂದು ಪ್ರಸಿದ್ಧಿಯಾಗಿರುವ ‘ಬನ್ನಿ, ನಾವೆಲ್ಲಾ ಜೊತೆಯಾಗಿ ನಡೆಯೋಣ’ ಎನ್ನುವ ಶಾಂತಿ ಸಂದೇಶದಿಂದ. ನೂರಾರು ಜನಮುಖಂಡರ, ಒಂದಿಡೀ ದಶಕದ ಶ್ರಮದಿಂದ ರಚಿತವಾದ ಈ ಸಂದೇಶದಲ್ಲಿ ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೇಟ್ ದ್ವೀಪವಾಸಿಗಳು ಕೇಳಿದ್ದು ಮಹತ್ವದ ಮೂರು ಬದಲಾವಣೆಗಳನ್ನು. ಮೊದಲನೆಯದ್ದು, ದೇಶದ ಪಾರ್ಲಿಮೆಂಟಿನಲ್ಲಿ ತಮ್ಮ ಜನರದ್ದೇ ಆದ ಪ್ರತ್ಯೇಕ ಅಂಗವನ್ನು ಸ್ಥಾಪಿಸಿ ತಮ್ಮ ಜನರ ಬಗ್ಗೆ ಸ್ವಯಂ-ನಿರ್ಣಯ ತೆಗೆದುಕೊಳ್ಳುವ ಹಕ್ಕು ತಮ್ಮದಾಗಬೇಕು. ಎರಡನೆಯದ್ದು, ತಮ್ಮಗಳ ಮತ್ತು ತಮ್ಮ ನೆಲವನ್ನು ಆಕ್ರಮಿಸಿ ನೆಲೆವೂರಿದ ಬಿಳಿಯರ ನಡುವೆ ಸಂವಿಧಾತ್ಮಕವಾಗಿ ಒಡಂಬಡಿಕೆ ಆಗಬೇಕು. ಇಂತಹ ಒಡಂಬಡಿಕೆಯು ಪಕ್ಕದ ನ್ಯೂಝಿಲ್ಯಾಂಡ್ ದೇಶದಲ್ಲಿ ಮಾನ್ಯತೆ ಪಡೆದಿದೆ. 1830ರ ದಶಕದಲ್ಲಿ ನ್ಯೂಝಿಲ್ಯಾಂಡ್ ದೇಶಕ್ಕೆ ಕಾಲಿಟ್ಟ ಇಂಗ್ಲೀಷರಿಗೆ ಅಲ್ಲಿಯ ಮೂಲ ಮಾಓರಿ (Maori) ಜನರು ಪರಸ್ಪರ ಒಡಂಬಡಿಕೆ ಮಾಡಿಕೊಳ್ಳಲು ಹೇಳಿದ್ದರು. ಅದು ‘Treaty of Waitangi’ ಎಂದು 1840 ರ ಫೆಬ್ರವರಿ 6 ನೇ ತಾರೀಕು ಜಾರಿಗೆ ಬಂದು ಈಗ ಬೇರೆ ದೇಶಗಳಲ್ಲಿ ಮಾದರಿಯಾಗಿ ಬಹಳ ಪ್ರಸಿದ್ಧಿಯಾಗಿದೆ. ಈ ಒಡಂಬಡಿಕೆಯಿಂದ ಅಲ್ಲಿನ ಮಾಓರಿ ಜನರು ಮತ್ತು ಇಂಗ್ಲೀಷರು ಪರಸ್ಪರ ಸೌಹಾರ್ದತೆಯಿಂದ ಬದುಕಲು ಸಾಧ್ಯವಾಗಿದೆ. ಆದರೆ ಇಲ್ಲಿಯತನಕ ಆಸ್ಟ್ರೇಲಿಯಾದಲ್ಲಿ ಅಂತಹುದೊಂದು ಒಡಂಬಡಿಕೆ ಆಗಿಲ್ಲ. ಆದ್ದರಿಂದ ಎರಡನೆಯ ಬದಲಾವಣೆಯಾಗಿ ಅದಾಗಬೇಕು. ಮೂರನೆಯದ್ದು, ವಸಾಹತುಶಾಹಿಗಳಾಗಿ ಬಂದ ಇಂಗ್ಲೀಷರು ನಡೆಸಿದ ಜನಾಂಗೀಯ ನಿರ್ಮೂಲನಾ ಪ್ರಯತ್ನಗಳು, ದಮನ, ಶೋಷಣೆ, ಸಾವು-ನೋವುಗಳಿಗೆ ಅಧಿಕೃತವಾದ ‘‘truth telling’’ ವಿಚಾರಣೆಯಾಗಬೇಕು.

ಮೇಲಿನ ಮೂರೂ ವಿಷಯಗಳು ಆಸ್ಟ್ರೇಲಿಯಾದ ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೇಟ್ ದ್ವೀಪವಾಸಿಗಳಿಗೆ ಬಹು ಮುಖ್ಯವಾದವು. ಆದರೆ ಕೆಲವು ಜನಪಂಗಡಗಳು ‘treaty’’ ಗೆ ಒತ್ತಾಯಿಸಿದರೆ ಮತ್ತೊಂದು ಕೆಲ ಜನಪಂಗಡಗಳು ‘ಇಂಡೀಜಿನಸ್ ವಾಯ್ಸ್ ಟು ದಿ ಪಾರ್ಲಿಮೆಂಟ್’ ಕಡೆಗೇ ಗಮನ ಕೊಡೋಣ ಎಂದು ಆಗ್ರಹಿಸಿದರು. ಏಕೆಂದರೆ, ಅವರಲ್ಲಿ ಇರುವ ಬಹುತ್ವಗಳು, ಜೀವನ ದಾರ್ಶನಿಕತೆ, ಮೌಲ್ಯಗಳು, ಜೀವನ ದೃಷ್ಟಿಗಳಲ್ಲಿ ಅಲ್ಪಸ್ವಲ್ಪ ವ್ಯತ್ಯಾಸಗಳಿವೆ. ಇವುಗಳ ಸ್ವಾಯತ್ತೆಗೆ, ನಮ್ಮ ನೆಲದೊಡನೆ ಇರುವ ನಂಟಿಗೆ ಕುತ್ತು ಬರುತ್ತದೆ ಎನ್ನುವ ಸಂಶಯಗಳಿವೆ.

ಆದರೂ, ಒಟ್ಟಾರೆ ಅಭಿಪ್ರಾಯದಂತೆ ‘ವಾಯ್ಸ್’ ಮೊದಲು ಬರಲಿ, ಸಂವಿಧಾನಕ್ಕೆ ತಿದ್ದುಪಡಿ ಆಗಲಿ, ನಮ್ಮದೇ ಒಂದು ಪ್ರತ್ಯೇಕ ಪ್ರಾತಿನಿಧಿಕ ಅಂಗದ ಸ್ಥಾಪನೆಯಾಗಲಿ, ನಂತರ ‘treaty’ ಮತ್ತು ‘truth telling’ ಆಗುತ್ತದೆ ಎಂದಾಗಿದೆ. ಅಷ್ಟೆಲ್ಲಾ ಹಲವಾರು ಸುತ್ತುಗಳ ಮಾತುಕತೆಗಳಾಗಲು ತಿಂಗಳುಗಳೇ ಹಿಡಿಸಿವೆ. ಕಳೆದುಹೋದ ಸುಮಾರು ಎರಡೂವರೆ ಶತಕಗಳ ಸತತ ನೋವು, ಶೋಕ, ಸಂತಾಪಗಳು ಹೊರಹೊಮ್ಮಿದೆ. ದೂರದರ್ಶನದಲ್ಲಿ, ಮುದ್ರಿತ ಪತ್ರಿಕೆಗಳಲ್ಲಿ, ಬೇರೆಬೇರೆ ಮಾಧ್ಯಮಗಳಲ್ಲಿ ಸಾವಿರಾರು ಜನರು ತಮ್ಮ ದುಃಖ ತೋಡಿಕೊಂಡಿದ್ದಾರೆ. ಕಣ್ಣೀರಿಟ್ಟಿದ್ದಾರೆ.

ಹೋದ ಗುರುವಾರ ಪ್ರಧಾನ ಮಂತ್ರಿಗಳ ಗಂಟಲೂ ಕೂಡ ಹಿಡಿದುಕೊಂಡು ಅವರೂ ಸಹ ಕಣ್ಣೀರಿಟ್ಟರು. ದೇಶದ ಮೂಲಜನರಿಗೆ ಸಂಬಂಧಿಸಿದ್ದರೂ 55 ವರ್ಷಗಳ ನಂತರ ಪ್ರತಿಯೊಬ್ಬ ಆಸ್ಟ್ರೇಲಿಯನ್ ವಯಸ್ಕ ಪ್ರಜೆಯೂ ಕಡ್ಡಾಯವಾಗಿ ಮತ ಚಲಾಯಿಸಬೇಕಾದ, ದೇಶದ ಸಂವಿಧಾನಕ್ಕೆ ತಿದ್ದುಪಡಿ ತರಲು ಕೇಳಬೇಕಿದ್ದ ಅತ್ಯಂತ ಮುಖ್ಯವಾದ ಪ್ರಶ್ನೆಯನ್ನು ಅವರು ಅಧಿಕೃತವಾಗಿ ಬಿಡುಗಡೆ ಮಾಡುವವರಿದ್ದರು. ತಮ್ಮ ಬಿಳಿಯ ಜನರಿಗೆ ಸಾರಾಸಾಗಾಟಾಗಿ, ಯಾವುದೇ ಅಡ್ಡಿಗಳಿಲ್ಲದೆ ‘ಸ್ವಾಭಾವಿಕವಾಗಿ’ ಲಭ್ಯವಿರುವ ಸ್ವಯಂ-ನಿರ್ಣಯದ ಹಕ್ಕು ಇದೇ ದೇಶದ ಮೂಲಜನರಿಗೆ ಇಲ್ಲವಾಗಿರುವುದನ್ನು ಅವರು ಎತ್ತಿ ಹಿಡಿದರು. ‘ದೇಶದ ಬದಲಾವಣೆಗಾಗಿ ನಾನಿರುವುದು’ ಎಂದು ಘೋಷಿಸಿದರು. ‘ನಮ್ಮ ದೇಶದ ಬರ್ತ್ ಸರ್ಟಿಫಿಕೇಟ್ ಇದನ್ನು ಹೆಮ್ಮೆಯಿಂದ ಗುರುತಿಸಬೇಕು’ ಎಂದರು. ಅವರೊಡನೆ ಅವರ ಕೆಲ ಮಂತ್ರಿಗಳೂ, ಮೂಲಜನರ ಜನಮುಖಂಡರು ಕಣ್ಣೊರೆಸಿಕೊಂಡರು. ಐತಿಹಾಸಿಕ ಕ್ಷಣಗಳು ಅವು.

ಒಂದು ವೇಳೆ ಆಸ್ಟ್ರೇಲಿಯನ್ ಜನತೆ ‘ಇಂಡೀಜಿನಸ್ ವಾಯ್ಸ್ ಟು ಪಾರ್ಲಿಮೆಂಟ್’ ಪರವಾಗಿ ಮತ ಚಲಾಯಿಸಿದರೂ ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೇಟ್ ದ್ವೀಪವಾಸಿ ಜನರ ಪ್ರಾತಿನಿಧಿಕ ಅಂಗಗಳು ಮಾತ್ರವಷ್ಟೇ ರಚನೆಯಾಗಿ ಅವು ತಮ್ಮ ಜನರ ಕುರಿತಾಗಿ ಮಾತ್ರ ಸಂಸತ್ ಸದಸ್ಯರಿಗೆ ಸಲಹೆ-ಸೂಚನೆಗಳನ್ನು ಕೊಡುತ್ತವೆ. ಎಲ್ಲಕ್ಕೂ ಮೇಲ್ಪಟ್ಟು ಸಂಸತ್ ತೆಗೆದುಕೊಳ್ಳುವ ನಿರ್ಧಾರಗಳೇ ಅಂತಿಮವಾಗಿರುತ್ತವೆ. ಅಂತಹ ಪ್ರಾತಿನಿಧಿಕ ಅಂಗದಲ್ಲಿ ಜನಪಂಗಡಗಳನ್ನು ಗೌರವಿಸುವ ಸುಮಾರು 24 ಸದಸ್ಯರಿರಬಹುದೇ, ಅದು ಸಮಾಲೋಚನೆ ನಡೆಸುವ ಪಾತ್ರಕ್ಕಷ್ಟೇ ಮೀಸಲಾಗುತ್ತದೆಯೇ ಅಥವಾ ಕ್ರಮೇಣ ಅದರ ಪಾತ್ರ ಮತ್ತು ಜವಾಬ್ದಾರಿ ವಿಸ್ತರಿಸುತ್ತದೆಯೇ, ವಿರೋಧ ಪಕ್ಷಗಳ ಕೆಂಗಣ್ಣಿನ ಪ್ರಕೋಪಕ್ಕೆ ಸಿಲುಕಿ ಅದರ ‘ದನಿ’ ಕ್ಷೀಣಿಸುತ್ತದೆಯೇ – ಇದೆಲ್ಲವನ್ನೂ ನಾವು ಕಾದು ನೋಡಬೇಕು. ಪ್ರಗತಿಯೋ ಪತನವೋ! ಈ ವರ್ಷದ ಕೊನೆಯಲ್ಲಿ ಮತ ಚಲಾವಣೆಯಾಗಿ ಫಲಿತಾಂಶ ಬಂದಾಗ ಆಸ್ಟ್ರೇಲಿಯನ್ನರ ‘ಪ್ರಗತಿ-ಸಮತೆ’ ಯ ‘ಬಣ್ಣಗಳು’ ಬಯಲಾಗುತ್ತವೆ.