ಆದರೆ ನಿಜವಾದ ಹೊಡೆತ ಬೀಳುವುದು ಆ ಕಪ್ಪು ಹುಡುಗನ ತಾಯಿಯನ್ನು ಅವಳು ಭೇಟಿಯಾದಾಗ. ಕೌಟುಂಬಿಕ ಹಿಂಸೆಯಡಿ ಸಿಕ್ಕಿಬಿದ್ದ ಆ ತಾಯಿಗೆ ಕುಟುಂಬವೂ ಉಳಿಯಬೇಕು, ಮಗನ ಬರ್ಕತ್ತೂ ಆಗಬೇಕು. ಕರಿಯರನ್ನು ಪ್ರಾಣಿಗಳಂತೆ ನಡೆಸಿಕೊಳ್ಳುವ ಸಮಾಜ ಒಂದು ಕಡೆ, ಸ್ಕೂಲಿನಿಂದ ಹೊರಕಳಿಸಿದರೆ ಆ ಎಳೆಯನ ಭವಿಷ್ಯವನ್ನು ಕತ್ತರಿಸಿ ಬಿಸಾಕುವ ಅವನ ಕ್ರೂರಿ ಅಪ್ಪ ಇನ್ನೊಂದು ಕಡೆ, ನಿನಗೆ ಬೇಕಿದ್ದರೆ ಪಾದ್ರಿಯನ್ನು ಹೊರದಬ್ಬು, ನನ್ನ ಮಗನ ವಿದ್ಯಾಭ್ಯಾಸಕ್ಕೆ ಅಡ್ಡಿ ಮಾಡಬೇಡ, ಎಂದು ನಯವಾಗಿ ಆದರೆ ದೃಢವಾಗಿ ಹೇಳುವ ಅವಳ ಧಾರಣಶಕ್ತಿ ಮತ್ತು ಹೇಗೋ ಬದುಕುಳಿದು ತನ್ನವರನ್ನೂ ಬದುಕಿಸಿಕೊಳ್ಳುವ ಅವಳ ತಣ್ಣಗಿನ ಸ್ಥೈರ್ಯ ಈ ಸಿಸ್ಟರಿನಿಯ ಧಾರ್ಮಿಕ ಹುಂಬತನವನ್ನು ಅಲ್ಲಾಡಿಸಿಬಿಡುತ್ತದೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ನಲವತ್ತೊಂದನೆಯ ಬರಹ
ಒಮ್ಮೆ ಒಬ್ಬ ಕನ್ನಡ ಪಂಡಿತರ ಜೊತೆ ಮಾತಾಡುತ್ತಿದ್ದಾಗ ಸಂದೇಹ ಮತ್ತು ಸಂಶಯಗಳ ನಡುವಿನ ವ್ಯತ್ಯಾಸದ ಮಾತು ಬಂತು. ಇಂಗ್ಲೀಷಿನಲ್ಲಿ doubt ಮತ್ತು suspicion ಎಂಬ ಎರಡು ಪರಿಕಲ್ಪನೆಗಳಿವೆ. ಜೆ ಬಿ ಎಸ್ ಹಾಲ್ಡೆನ್ ಎಂಬ ಪ್ರಸಿದ್ಧ ಚಿಂತಕ ಬರೆದ Duty of Doubt ಎಂಬ ಲೇಖನವನ್ನು ನಾನು ಪದವಿ ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕಿತ್ತು. ನಂಬಿಕೆ ಅತಿಯಾದಾಗ ಅರಿವನ್ನು ನೇಣಿಗಟ್ಟಿದಂತೆಯೇ. ಸಂದೇಹ ಎನ್ನುವುದು ಎಲ್ಲರಲ್ಲಿ ಇರಬೇಕಾದ ಒಂದು ಗುಣ ಎಂದು ನಾವೆಲ್ಲ ಶಾಲೆಯಿಂದಲೂ ‘ನಂಬಿದ’ ನೆನಪು. ಪದಕೋಶದಲ್ಲಿ ಎರಡೂ ಒಂದೇ ಎಂಬ ಪದಗಳೇ ಇಲ್ಲ ಎಂದು ಭಾಷಾತಜ್ಞರು ಅಭಿಪ್ರಾಯಿಸುತ್ತಾರೆ. ಸಂದೇಹ ನಮ್ಮನ್ನು ಬೆಳೆಸುತ್ತದೆ. ಸಂಶಯ ಕ್ಯಾನ್ಸರನ್ನು ಬೆಳೆಸಬಹುದು.
ಇರಲಿ, ಹರಿಕಥೆಯ ಮುನ್ನ ಹೀಗೊಂದು ಉಪಕಥೆ. 2008 ರಲ್ಲಿ ತೆರೆ ಕಂಡ Doubt ಎಂಬ ಅಮೆರಿಕನ್ ಚಿತ್ರ ಹಲವಾರು ಪ್ರಶಸ್ತಿಗಳನ್ನು ಗೆದ್ದುಕೊಂಡಿತ್ತು. ಅದೊಂದು ಶ್ರೇಷ್ಠ ಕಲಾವಿದರು ನಟಿಸಿದ್ದ ಚಿತ್ರ. ಚರ್ಚು ಸ್ಕೂಲಿನ ವ್ಯವಸ್ಥೆಯಲ್ಲಿ ಒಬ್ಬ ಸನ್ಯಾಸಿನಿ ಮತ್ತು ಒಬ್ಬ ಆಕೆಗಿಂತ ಎತ್ತರದ ಸ್ಥಾನದಲ್ಲಿರುವ ಪಾದ್ರಿಯ ನಡುವಿನ ತಾತ್ವಿಕ ಸಂಘರ್ಷದ ಸುತ್ತ ಕತೆ ಹೆಣೆಯಲ್ಪಟ್ಟಿತ್ತು.
ಚಿತ್ರದ ಪ್ರಾರಂಭದಲ್ಲಿ ಪಾದ್ರಿ, ಸಂದೇಹ ಮತ್ತು ನಂಬಿಕೆ ಎರಡೂ ಮಂದಿಯನ್ನು ಬೆಸೆಯುವ ಬಂಧಗಳಾಗಬಲ್ಲವು; ನಂಬಿಕೆ ಅತಿಯಾದಾಗ ಉರುಳಾಗಿ ಬಿಡುತ್ತದೆ; ಕೇಳಿದ್ದು, ನೋಡಿದ್ದು ಸುಳ್ಳಾಗಬಹುದು ಎಂಬ ಸಂದೇಹಕ್ಕೆ ಸ್ವಲ್ಪವಾದರೂ ಆಸ್ಪದ ಕೊಟ್ಟರೆ ಜೀವಗಳು ಉಳಿಯುತ್ತವೆ ಎನ್ನುವುದರ ಬಗ್ಗೆ ಚರ್ಚಿನಲ್ಲಿ ಉಪದೇಶ ನೀಡುತ್ತಿದ್ದಾನೆ. ಇಷ್ಟಕ್ಕೂ ಪ್ರೀತಿಯ ನೆಪದಲ್ಲಿ, ಮತ್ತು ನಂಬಿಕೆಯ ಹೆಸರಿನಲ್ಲಿ ನಡೆಯುವ ಹಿಂಸೆ ಯುದ್ಧಹಿಂಸೆಗಿಂತ ಘೋರವಾಗಿರಬಲ್ಲದು ಎಂಬ ಸತ್ಯವಂತೂ ಪರಿಚಿತವೇ. ನಂತರ ಚಿತ್ರದುದ್ದಕ್ಕೂ ಈ ನಂಬಿಕೆ-ಸಂದೇಹಗಳ ನಡುವಿನ ತಾಕಲಾಟವನ್ನು ಚಿತ್ರ ಬಿಚ್ಚಿಡುತ್ತಾ ಹೋಗುತ್ತದೆ.
ಆ ಸನ್ಯಾಸಿನಿ ‘ಸಂಪ್ರದಾಯ’ ಎಂಬ ನೇಣಿಗೆ ತಲೆ ಕೊಡಲು ಹಿಂಜರಿಯದ ಮಹಾ ‘ನಂಬಿಕಸ್ತೆ’. ನಿಂತ ನಿಲುವಿಂದ ಕದಲಲಾರೆ ಎನ್ನುವುದು ಯಾವ ಹಂತದಲ್ಲಿ ಧಾರ್ಮಿಕ, ನೈತಿಕ ಮತ್ತು ಜೀವವಿರೋಧಿ ಷಟತ್ವವಾಗಬಲ್ಲದು ಎನ್ನುವುದು ಒಂದು ಮಹತ್ತರವಾದ ಪ್ರಶ್ನೆಯೇ. ಆಕೆ ಕಲ್ಲಿನಂತವಳು. ಬೇರೆಯವರು ಬೇಕಿದ್ದರೆ ತಲೆ ಜಜ್ಜಿಕೊಳ್ಳಬಹುದು. ಆ ಪಾದ್ರಿ ಮಾತ್ರ ಸಂದೇಹಕ್ಕೆ ಸಲ್ಲಬೇಕಾದ ಸ್ಥಾನವನ್ನು ನೀಡಿ, ಬಾಗಿ, ಬಳುಕಿ ಹರಿಯುತ್ತ ಮಂದಿಯನ್ನು ತನ್ನೊಂದಿಗೆ ಕರೆದೊಯ್ಯಬಲ್ಲ ಜನಪರ ಮತ್ತು ಜೀವಪರ ವ್ಯಕ್ತಿ. ಆತ ಮಕ್ಕಳಿಗೆ ಬಾಸ್ಕೆಟ್ ಬಾಲ್ ಆಡಿಸುತ್ತಾನೆ. ಉಗುರನ್ನು ಸ್ವಲ್ಪ ಉದ್ದ ಬಿಟ್ಟಿದ್ದರೂ ಸಹ ಅವು ಕೊಳಕಾಗಿರಬಾರದು ಎಂದು ಕಿವಿಮಾತು ಹೇಳುತ್ತಾನೆ. ಚಹಾಗೆ ಸಕ್ಕರೆಯನ್ನು ಹಾಕಿಯೇ ಕುಡಿಯುವವ. ಅವಳಿಗೆ ಅದೆಲ್ಲವೂ ನಿಷಿದ್ಧ. ಅವನು ಬಾಲ್ ಪಾಯಿಂಟ್ ಪೆನ್ನಿನಲ್ಲಿ ಬರೆಯುತ್ತಾನೆ ಎಂಬ ವಿಷಯಕ್ಕೂ ಉರಿದು ಬೀಳುವ ಆಕೆಗೆ ಸಾಂಪ್ರದಾಯಿಕ ಶೈಲಿಯ ಇಂಕಿನಲ್ಲಿ ಬರೆಯುವುದು ಮಾತ್ರ ಸೂಕ್ತ. ಚರ್ಚಿನ ಒಂದು ಹಬ್ಬಕ್ಕೆ ಇಂದಿನ ಮತ್ತು ‘ಧಾರ್ಮಿಕ’ವಲ್ಲದ ಹಾಡೊಂದನ್ನು ಸೇರಿಸುವ ಅವನು ಅವಳ ಪ್ರಕಾರ ಒಬ್ಬ ಸಂಪ್ರದಾಯ ‘ಭಂಜಕ’! ಅವನಿಗೆ ರೌರವ ನರಕವೇ ಸೂಕ್ತ ಶಿಕ್ಷೆ!
ಡೈನಿಂಗ್ ದೃಶ್ಯ ಈ ಎರಡು ಮೌಲ್ಯಗಳ ನಡುವಿನ ವ್ಯತ್ಯಾಸವನ್ನು ಸ್ಪಷ್ಟಪಡಿಸುತ್ತದೆ. ಅಲ್ಲಿ ಗಂಡಸರ ನಡುವೆ ವೈನು, ಮಾತು, ನಗು, ಹಾಸ್ಯ, ಹರಟೆ! ಇತ್ತ ಸಿಸ್ಟರಿನಿ ಮೇಜಿನ ಮುಖ್ಯಭಾಗದಲ್ಲಿ ಮಂಡಿಸಿ, ಉಳಿದವರು ಹೇಗೆ ತಿನ್ನುತ್ತಾರೆ, ಏನು ಮಾತಾಡುತ್ತಾರೆ, ಎಷ್ಟು ಉಸಿರು ಬಿಡುತ್ತಾರೆ ಎನ್ನುವುದನ್ನು ಕಠೋರ ದೃಷ್ಟಿಯಲ್ಲಿ ಗಮನಿಸುತ್ತಿರುವ ಕಿರಾತಕಿ!
ಆ ಸ್ಕೂಲಿನ ವಿದ್ಯಾರ್ಥಿಗಳಲ್ಲಿ ಒಬ್ಬನೇ ಒಬ್ಬ ಕಪ್ಪು ಹುಡುಗ ಇರುತ್ತಾನೆ. ಮಕ್ಕಳ ಅಜ್ಞಾನವೊ, ಮುಗ್ಧತನವೊ, ಅಥವಾ ದೊಡ್ಡವರನ್ನೇ ಅನುಕರಿಸುವ ಹುಂಬತನವೊ, ಒಟ್ಟಿನಲ್ಲಿ ಕರಿ-ಬಿಳಿ ಎಂಬ ಜನಾಂಗೀಯ ತಾರತಮ್ಯ ಸ್ಕೂಲು ಮಕ್ಕಳ ನಡುವೆ ಅತ್ಯಂತ ಹೇಯವಾಗಿ ಹಲ್ಲು ಕಿರಿಯುತ್ತದೆ ಎಂಬ ಸಂಗತಿ ಎಲ್ಲರಿಗೆ ಪರಿಚಿತವೇ. ಪಾದ್ರಿ ಆ ಕಪ್ಪು ಹುಡುಗನ ವಿಷಯದಲ್ಲಿ ಉದಾರವಾಗಿ ವರ್ತಿಸುತ್ತ ಸಂಕಷ್ಟದಿಂದ ಪಾರು ಮಾಡುತ್ತಾನೆ ಎಂಬ ನೆಪ ಸಿಕ್ಕಿದ್ದೇ ಸಿಕ್ಕಿದ್ದು, ಇಲ್ಲೇನೋ ನಡೆಯಬಾರದ್ದು ನಡೆಯುತ್ತಿದೆ ಎಂದೆಲ್ಲ ಗುಲ್ಲೆಬ್ಬಿಸಿ ಆ ಸಿಸ್ಟರಿನಿ ಅವನು ರಾಜೀನಾಮೆ ಕೊಡುವ ತನಕವೂ ಬಿಡದೆ ಬೇತಾಳದಂತೆ ಕಾಡಿ ಹೊರಗೆ ಅಟ್ಟುವುದರಲ್ಲಿ ಯಶಸ್ವಿಯಾಗುತ್ತಾಳೆ.
ತಾನೊಬ್ಬ ಸಲಿಂಗಕಾಮಿ ಮತ್ತು ಧರ್ಮದ್ರೋಹಿ ಎಂಬ ಸಿಸ್ಟರಿನಿಯ ಘೋರ ‘ನಂಬಿಕೆ’ಯ ಜೊತೆ ಇನ್ನಷ್ಟು ಗುದ್ದಾಡಿದರೆ ಆ ಕಪ್ಪು ಹುಡುಗನ ಭವಿಷ್ಯಕ್ಕೆಲ್ಲಿ ಆಪತ್ತೋ ಎಂದು ಪಾದ್ರಿ ರಾಜೀನಾಮೆ ನೀಡಿ ಹೊರಟುಹೋಗುತ್ತಾನೆ. ಈ ಸಿಸ್ಟರಿನಿಯ ಪ್ರಕಾರ ಅವನ ರಾಜೀನಾಮೆಯೇ ಅವನ ತಪ್ಪೊಪ್ಪಿಗೆ. ಇಲ್ಲದಿದ್ದರೆ ಯಾಕೆ ರಾಜೀನಾಮೆ ಕೊಡುತ್ತಿದ್ದ ಎಂಬ ಉಡಾಫೆ! ವ್ಯಂಗ್ಯವೆಂದರೆ ತಾನು ತೊಲಗಿಸಿದ ಆ ಪಾದ್ರಿ ವ್ಯವಸ್ಥೆಯಲ್ಲಿ ಇನ್ನೊಂದು ಕಡೆ ಇನ್ನಷ್ಟು ಎತ್ತರದ ಸ್ಥಾನವನ್ನು ಏರುತ್ತಾನೆ.
ಆದರೆ ನಿಜವಾದ ಹೊಡೆತ ಬೀಳುವುದು ಆ ಕಪ್ಪು ಹುಡುಗನ ತಾಯಿಯನ್ನು ಅವಳು ಭೇಟಿಯಾದಾಗ. ಕೌಟುಂಬಿಕ ಹಿಂಸೆಯಡಿ ಸಿಕ್ಕಿಬಿದ್ದ ಆ ತಾಯಿಗೆ ಕುಟುಂಬವೂ ಉಳಿಯಬೇಕು, ಮಗನ ಬರ್ಕತ್ತೂ ಆಗಬೇಕು. ಕರಿಯರನ್ನು ಪ್ರಾಣಿಗಳಂತೆ ನಡೆಸಿಕೊಳ್ಳುವ ಸಮಾಜ ಒಂದು ಕಡೆ, ಸ್ಕೂಲಿನಿಂದ ಹೊರಕಳಿಸಿದರೆ ಆ ಎಳೆಯನ ಭವಿಷ್ಯವನ್ನು ಕತ್ತರಿಸಿ ಬಿಸಾಕುವ ಅವನ ಕ್ರೂರಿ ಅಪ್ಪ ಇನ್ನೊಂದು ಕಡೆ, ನಿನಗೆ ಬೇಕಿದ್ದರೆ ಪಾದ್ರಿಯನ್ನು ಹೊರದಬ್ಬು, ನನ್ನ ಮಗನ ವಿದ್ಯಾಭ್ಯಾಸಕ್ಕೆ ಅಡ್ಡಿ ಮಾಡಬೇಡ, ಎಂದು ನಯವಾಗಿ ಆದರೆ ದೃಢವಾಗಿ ಹೇಳುವ ಅವಳ ಧಾರಣಶಕ್ತಿ ಮತ್ತು ಹೇಗೋ ಬದುಕುಳಿದು ತನ್ನವರನ್ನೂ ಬದುಕಿಸಿಕೊಳ್ಳುವ ಅವಳ ತಣ್ಣಗಿನ ಸ್ಥೈರ್ಯ ಈ ಸಿಸ್ಟರಿನಿಯ ಧಾರ್ಮಿಕ ಹುಂಬತನವನ್ನು ಅಲ್ಲಾಡಿಸಿಬಿಡುತ್ತದೆ. (ಒಂದೇ ಒಂದು ಬಾರಿ ಕಾಣಿಸಿಕೊಳ್ಳುವ ಆ ತಾಯಿಯ ಅಭಿನಯಕ್ಕೆ ಘನವಿಮರ್ಶಕರ ಚಪ್ಪಾಳೆ ಹೇರಳವಾಗಿ ಬಿದ್ದಿದೆ!)
ಕಡುನಂಬಿಕೆಯ ಉರುಳಿಗೆ ತಲೆ ಕೊಟ್ಟ ಈ ಸನ್ಯಾಸಿನಿ ಕೊನೆಗೆ ‘I have doubts! I have such doubts!’ ಎಂದು ಕಿರಿಯವಳ ಹತ್ತಿರ ಹೇಳಿಕೊಂಡು ಕಣ್ಣೀರಿನಲ್ಲಿ ಕುಸಿದು ಬೀಳುವ ದೃಶ್ಯ ಬದುಕಿನ ಗಹನತೆಗೆ ಸಂದ ಒಂದು ನಮನದಂತೆ ತೋರುತ್ತದೆ.

ನಾನು ಕಾಲೇಜಿನ ದಿನಗಳಲ್ಲಿ ಹಾಸ್ಟೆಲ್-ವಾಸಿಯಾಗಿದ್ದವಳು. ನಮ್ಮ ನಮ್ಮ ನಡುವಿನ ಹರಟೆಯಲ್ಲಿ ಹದಿಹರೆಯದ ಬಾಯಿಗಳಿಗೆ ಸಿಕ್ಕ ಸಿಸ್ಟರಿನಿಯರ ಜನ್ಮ ಜಾಲಾಡಿ ಹೋಗುತ್ತಿತ್ತು.
ಒಮ್ಮೆ ಒಬ್ಬಳು ಕೊಡವತಿ ಒಂದು ‘ಸಖತ್’ ಕತೆಯನ್ನು ಹೊತ್ತು ತಂದಿದ್ದಳು. ಕಾಫಿಶ್ರೀಮಂತ ಮನೆತನದಿಂದ ಬಂದವಳಿಗೆ ಹುಟ್ಟುಹಬ್ಬಕ್ಕೆ ಯಾರೋ ಒಂದು ಇಂಪೋರ್ಟೆಡ್ ದುರ್ಬೀನನ್ನು ಉಡುಗೊರೆಯಾಗಿ ಕೊಟ್ಟಿದ್ದರಂತೆ. ವಾರ್ಡನ್ನಿಗೆ ತಿಳಿಯದಂತೆ ಬಚ್ಚಿಟ್ಟುಕೊಂಡು ಜಾಸೂಸಿ ಮಾಡುತ್ತಿದ್ದಳು.
ಶನಿವಾರ ಡಿನ್ನರ್ ಆದ ಮೇಲೆ ನಮಗೆಲ್ಲ ಸಂಗೀತವನ್ನು ಟ್ಯೂನಿಸಿ ಹಾಸ್ಟೆಲಿನ ಅತ್ಯಂತ ಮೇಲಂತಸ್ತಿನ ಕಾರಿಡಾರಿನಲ್ಲಿ ಡಾನ್ಸ್ ಮಾಡಲು ಅನುಮತಿ ಇತ್ತು. ಅದು ಸಾಕಷ್ಟು ಹರವಾಗಿಲ್ಲ ಎಂಬ ಕಾರಣಕ್ಕೆ ಟೆರೆಸ್ ಮೇಲೆ ಹೋಗಬಹುದು ಎಂಬ ಔದಾರ್ಯದ ಒಪ್ಪಿಗೆ ಸಿಕ್ಕಿತ್ತು.
ಒಮ್ಮೆ ಡಾನ್ಸ್ ಮುಗಿದ ಮೇಲೆ ಉಸ್ತುವಾರಿಣಿ ಬಂದು ಟೆರೆಸಿನ ಬಾಗಿಲಿಗೆ ಬೀಗ ಜಡಿದು ಹೋಗುವುದನ್ನು ಮರೆತುಬಿಟ್ಟಿದ್ದಳು. ನಮ್ಮ ಕೊಡವತಿ ರಾತ್ರಿಯ ಸುಮಾರು ಹನ್ನೊಂದು ಗಂಟೆಯ ಹೊತ್ತಿಗೆ ಅಲ್ಲಿಗೆ ಹತ್ತಿ ಹೋಗಿದಾಳೆ. ಪ್ರೇತಾತ್ಮವೊಂದು ಅಲ್ಲಿ ಬಿಳಿ ಸೀರೆ ಉಟ್ಟು, ಉದ್ದ ಕೂದಲನ್ನು ಬಿಟ್ಟುಕೊಂಡು ಅತ್ತಿಂದಿತ್ತ ಠಳಾಯಿಸುತ್ತಿರುತ್ತದೆ ಎಂಬ ಜನಪ್ರಿಯ ಹಾರರ್ ಕತೆಯೂ ಸಹ ಈ ಕೊಡಗಿನ ಹೆಣ್ಣನ್ನು ಹಿಮ್ಮೆಟ್ಟಿಸಿಲ್ಲ. ದುರ್ಬೀನೀನಲ್ಲಿ ಅತ್ತಿಂದಿತ್ತ ನೋಡುವಾಗ ಕಣ್ಣಿಗೆ ಏನೋ ಬಿದ್ದಿದೆ!
ಏನೂ ಇಲ್ಲ ಮಣ್ಣಾಂಗಟ್ಟಿ! ಸಿಸ್ಟರಿನಿಯರು ತಮ್ಮ ರಾತ್ರಿ ಉಡುಪಿನಲ್ಲಿ ಸಂಗೀತಕ್ಕೆ ಮೆಲ್ಲಗೆ ಹೆಜ್ಜೆ ಹಾಕುತ್ತಾ ನರ್ತಿಸುತ್ತಿದ್ದಾರೆ, ಅಷ್ಟೇ! ಅವರಿದ್ದ ವಾಸದ ಮನೆ ಮಹಾರಾಜರು ದಾನ ಕೊಟ್ಟಿದ್ದ ಒಂದು ಪುಟ್ಟ ಅರಮನೆ. ಹರವಾದ ಕಿಟಕಿಗಳು, ಎತ್ತರದ ಛಾವಣಿ ಇತ್ಯಾದಿಗಳನ್ನು ಹೊಂದಿದ್ದ ಒಂದು ಸೊಬಗಿನ ಕಟ್ಟಡವಾಗಿತ್ತು. ನಮ್ಮ ಹಾಸ್ಟೆಲ್ಲಿನಷ್ಟು ದ್ರಾಬೆಯಾಗಿರಲಿಲ್ಲ.
ಅಯ್ಯೋ, ಅಯ್ಯೋ, ಅಯ್ಯೋ! ಷೋಡಶಿಯರೆಲ್ಲ ಶಾಕ್ ಆದವರಂತೆ ಪಾಠ ಗೀಠ ಎಲ್ಲಾ ಮರೆತು ಗುಸುಗುಸು ಪಿಸಪಿಸಗಳಲ್ಲಿ ಮುಳುಗಿ ಹೋಗಿದ್ದರು. ಸಿಸ್ಟರಿನಿಯರು ಆಗ ತಮ್ಮ ತಲೆಕೂದಲು ಮುಚ್ಚಿರಲಿಲ್ಲವಂತೆ! ನೈಟಿ ತೊಟ್ಟಿದ್ದರಂತೆ! ಏನೋ ಕುಡಿಯುತ್ತಿದ್ದರಂತೆ! ಹಾಗಂತೆ ಹೀಗಂತೆ…!
ಇಷ್ಟಕ್ಕೂ ಆ ಸಂಸ್ಕೃತಿಯಲ್ಲಿ ವೈನ್ ಮತ್ತು ಡಾನ್ಸ್ ನಿಷಿದ್ಧವೇನೂ ಅಲ್ಲ ಎನ್ನುವುದು ನಮ್ಮ ಷೋಡಶಿಯರಿಗೆ ತಿಳಿದಿರಲಿಲ್ಲವೆನೋ. ತಮ್ಮ ಸಂಸ್ಕೃತಿಯಲ್ಲಿ ಇರುವ ಸನ್ಯಾಸದ ಪರಿಕಲ್ಪನೆಯನ್ನು ಸಿಸ್ಟರಿನಿಯರ ಮೇಲೆ ಹೇರಿ ನಾಲಗೆ ಹರಿಯಬಿಟ್ಟಿದ್ದೇ ಬಂತು! ಸನ್ಯಾಸಿನಿಯರು ಮನುಷ್ಯರಲ್ಲವಾ? ಖಾಸಗಿ ನೆಲೆಯಲ್ಲಿ ನಗು ಹರಟೆ ಡಾನ್ಸ್ ಅವರಿಗೆ ಯಾಕೆ ನಿಷೇಧವಾಗಬೇಕು? ಹಾಗಂತ ಆಗಲೂ ಸಹ ನನಗೆ ಅನ್ನಿಸಿತ್ತು. ಸಮರ್ಥಿಸಿಕೊಳ್ಳುವ ಧೈರ್ಯವಿರಲಿಲ್ಲ, ಅಷ್ಟೇ.
ತೊಂಬತ್ತರ ದಶಕದ ಮೊದಲಲ್ಲಿ ಭದ್ರವಾದ ಒಂದು ಕೆಲಸ ಸಿಕ್ಕಿ ಆಹಾ ಬದುಕೇ! ಅಂತ ಮೈಮರೆತಿದ್ದ ವರ್ಷಗಳಲ್ಲಿ ನನ್ನ ಕಿರಿಯ ಸ್ನೇಹಿತೆಯ ಮನೆಗೆ ವಾರಾಂತ್ಯ ಕಳೆಯಲು ಹೋಗುತ್ತಿದ್ದೆ. ಅವಳ ಅಣ್ಣ ಕಿಶನ್ ಒಂದು ಸಂಪ್ರದಾಯನಿಷ್ಠ ಪಾಠಶಾಲೆಯಲ್ಲಿ ಓದಿದ್ದ. ನಂತರ ರಾಜಧಾನಿಯ ಒಂದು ಕಾಲೇಜಿಗೆ ಪದವಿ ಅಧ್ಯಯನಕ್ಕೆಂದು ಹೋದ. ಅವನ ಜೊತೆ ಮಾತಾಡಿದಾಗ ಏನೋ ಸ್ವಲ್ಪ ವಿಚಿತ್ರವಾಗಿದಾನಲ್ಲ ಅಂತ ಹುಬ್ಬೇರಿಸಿದ್ದೆ ಅಷ್ಟೆ. ಒಮ್ಮೊಮ್ಮೆ ಬೇಕಂತಲೇ ಅವನನ್ನು ರೇಗಿಸುವ ಉತ್ತರಗಳನ್ನು ಕೊಟ್ಟಿದ್ದೂ ಉಂಟು. ಇಪ್ಪತ್ತರ ಹರೆಯದಲ್ಲೇ ಲೋಕವೆಲ್ಲ ತನಗೆ ತಿಳಿದಿದೆ ಎನ್ನುವಂತೆ ಅವನು ಮಾತಾಡುತ್ತಿದ್ದರೆ ಡಿವಿಜಿಯವರ ಕಗ್ಗದ ‘ಇದಮಿತ್ಥಂ ಎಲ್ಲಿಹುದು ಮನುಜ ಸ್ವಭಾವದಲಿ?’ ಎಂಬ ಸಾಲು ನೆನಪಾಗುತ್ತಿತ್ತು.
ಈ ಕಿಶನ್ ಒಮ್ಮೊಮ್ಮೆ ನಮ್ಮ ಹರಟೆಗೆ ಸೇರಿಕೊಳ್ಳಲು ಬಂದು ಕೂರುತ್ತಿದ್ದ. ಇಷ್ಟಿಷ್ಟಗಲ ಕಣ್ಣು ಬಿಡುತ್ತಾ ವಿಚಿತ್ರ ಪ್ರಶ್ನೆಗಳನ್ನು ಕೇಳುತ್ತಿದ್ದರೆ ನನಗೆ ಉತ್ತರ ಕೊಡಲು ಸ್ವಲ್ಪ ಕಷ್ಟವಾಗುತ್ತಿತ್ತು. ನಡುವಿನಲ್ಲಿ ನನ್ನ ಗೆಳತಿ ಎದ್ದು ಹೋಗಿ ಅವನನ್ನು ಕರೆಯುವಂತೆ ಅಮ್ಮನಿಗೆ ತಾಕೀತು ಮಾಡಿ ಸಾಗಹಾಕುವುದನ್ನು ನನ್ನ ಕಣ್ಣುಗಳು ಗಮನಿಸಿದ್ದವು. ಅದರ ಬಗ್ಗೆ ಕೆದಕುವುದು ಸೌಜನ್ಯವಲ್ಲ ಎಂದು ಸುಮ್ಮನಾಗುತ್ತಿದ್ದೆ.
ಅವನ ಪದವಿ ಅಧ್ಯಯನದಲ್ಲಿ ಇಂಗ್ಲಿಷ್ ಸಾಹಿತ್ಯವೂ ಒಂದು ವಿಷಯವಾಗಿತ್ತು. ಏನೇನೋ ಕಾರಣಗಳಿಗೆ ಪದವಿಯನ್ನು ಮುಗಿಸದೆ ಮನೆಯಲ್ಲಿ ಕೂತಿದ್ದ. ಮಾನಸಿಕ ಅಸ್ವಸ್ಥತೆ ಎಂದು ಎಲ್ಲೆಲ್ಲೊ ಕರೆದುಕೊಂಡು ಹೋಗಿ ಏನೇನೋ ಚಿಕಿತ್ಸೆ ಮಾಡಿಸಿದರು. ಏನೂ ಆಗಲಿಲ್ಲ.
ಒಮ್ಮೆ ಧಡಾರನೆ ಕೆಳಗಿಳಿದು ಬಂದ. ‘ಅಲ್ರೀ ಸುಕನ್ಯಾ ಅವರೇ, ನಿಮ್ಮ ಇಷ್ಟವಾದ ಲೇಖಕ ಯಾರು ಅಂತ ಕೇಳಿದ್ರೆ ಡಿ ಎಚ್ ಲಾರೆನ್ಸ್ ಅಂತ ಅಂದುಬಿಟ್ರಲ್ಲ? ಅದೂ Lady Chatterley’s Lover ನಿಮ್ಮ ಮೆಚ್ಚಿನ ಕಾದಂಬರಿ ಅಂತ ಬೇರೆ ಹೇಳಿಬಿಟ್ರಲ್ಲ? ನಿಮ್ಮನ್ನ ಒಳ್ಳೆಯವರು ಅಂತ ಅಂದುಕೊಂಡಿದ್ದೆ. ನೀವು ಹೀಗೆ ಮಾಡಬಹುದಾ? ನೀವು ಹಾಗೆ ಹೇಳಿದಾಗಿಂದ ನಾನು ನಿದ್ದೆನೇ ಮಾಡಿಲ್ಲ. ನಿಮಗೆ ಪಾಠ ಮಾಡೋ ಕೆಲಸ ಯಾರು ಕೊಟ್ಟಿದ್ದು?…’
ನಿಜ ಹೇಳಬೇಕೆಂದರೆ ಅವನು ನಿಮ್ಮ ಅತ್ಯಂತ ಮೆಚ್ಚಿನ ಲೇಖಕ/ಕೃತಿ ಯಾವುದು ಎಂದು ಹಿಂದಿನ ಬಾರಿ ಕೇಳಿದ್ದಾಗ ನಾನು ರೇಗಿಸಲೆಂದೇ ಕೊಟ್ಟ ಉತ್ತರ ಅದು. ನನಗೆ ಈ ‘ಅತ್ಯಂತ’ ಎಂಬ ಪದವೇ ಮಹಾ ಅಲರ್ಜಿ. ಮಕ್ಕಳಿಗೆ ‘ನಿನ್ನ ಬೆಸ್ಟ್ ಫ್ರೆಂಡ್ ಯಾರು? ನಿನ್ನ ಫೇವರಿಟ್ ಟೀಚರ್ ಯಾರು?’ ಎಂಬ ದೊಡ್ಡವರ ಪ್ರಶ್ನೆಗಳು ನನ್ನ ಕಿವಿಗೆ ಅಸಭ್ಯವಾಗಿ ಕೇಳಿಸುತ್ತವೆ. ಲಿಯರ್ ಮಹಾರಾಜ ನಿನ್ನ ಅತ್ಯಂತ ಪ್ರೀತಿಪಾತ್ರರು ಯಾರು ಎಂಬ ಕೇಳಬಾರದ ಪ್ರಶ್ನೆಯನ್ನು ತನ್ನ ಮಗಳಂದಿರಿಗೆ ಕೇಳಿ, ಕೊನೆಯ ಮಗಳು ಕಾರ್ಡೀಲಿಯ ‘ನನ್ನ ಗಂಡನೂ ನಿನ್ನಷ್ಟೇ ಪ್ರೀತಿಪಾತ್ರ’ ಎಂಬ ಪ್ರಾಮಾಣಿಕ ಉತ್ತರ ನೀಡಿ ದುರಂತ ನಾಟಕವೊಂದು ಜನ್ಮ ತಾಳಿತ್ತು.
ಅವನ ಹಠಾತ್ ದಾಳಿಗೆ ನಾನು ಮಿಕಿಮಿಕಿ ಕಣ್ಣು ಬಿಡುತ್ತಿರುವಾಗಲೇ ನನ್ನ ಗೆಳತಿ ಎದ್ದು ಹೋಗಿದ್ದು ಕಂಡಿತ್ತು. ಆ ಇನ್ನೊಂದು ರೂಮಿನ ಕಡೆಯಿಂದ ಅವರ ಅಮ್ಮನ ಗದರಿಸುವ ದನಿ ಕೇಳಿತ್ತು. ‘ಏ ಕಿಶನ್! ಇಲ್ಲಿ ಬಾ. ಇಲ್ಲದಿದ್ರೆ ಬಂದು ಬಾರಿಸ್ತೀನಿ, ನೋಡು!’
ಈಗ ಮಾತ್ರ ಯಾಕೆ ಏನು ಹೇಗೆ ಅಂತ ನಾನು ಕೇಳಲೇ ಬೇಕಾಯ್ತು. ಸಂಪ್ರದಾಯನಿಷ್ಠ ಪಾಠಶಾಲೆಯ ಸಂಯಮ, ಶಿಸ್ತು, ಹಿಡಿತ ಅವನ ಮೇಲೆ ಅತಿಯಾಗಿ ಪರಿಣಾಮ ಬೀರಿ ನಂತರ ಸೇರಿಕೊಂಡ ಮಿಶ್ರಲಿಂಗಿ ಕಾಲೇಜಿನಲ್ಲಿ ಹಠಾತ್ತನೆ ಸಿಕ್ಕ ಸ್ವಾತಂತ್ರ್ಯ, ಸಹಪಾಠಿಗಳ ಸಹಜ ನಡತೆ, ಎಲ್ಲವೂ ಅವನ ಮನಸ್ಸನ್ನು ಗಜಿಬಿಜಿ ಮಾಡಿ ತಲೆ ದಬಾಕಿಕೊಂಡಿತ್ತು. ನೀತಿ, ನಿಯಮ, ಧರ್ಮ ಇತ್ಯಾದಿಗಳನ್ನೇ ಉರು ಹೊಡೆದ ತಲೆಗೆ ದೇಹ, ಪ್ರಕೃತಿ ಸಹಜ ಲೈಂಗಿಕತೆ, ಹೆಣ್ಣು ಗಂಡು ನಡುವಿನ ಪ್ರೀತಿ ಇತ್ಯಾದಿಗಳನ್ನು ದಾರ್ಶನಿಕ ಸ್ತರದ ಎತ್ತರಕ್ಕೆ ಏರಿಸಿದ್ದ ಡಿ ಎಚ್ ಲಾರೆನ್ಸ್ ಘೋರ ಪಾತಕಿಯಂತೆ ತೋರಿದ್ದ. ಬ್ರಹ್ಮಚರ್ಯವೇ ಜೀವನ, ವೀರ್ಯನಾಶವೇ ಮರಣ ಎಂಬುದಕ್ಕೆ ಜೋತುಬಿದ್ದಿದ್ದ ಅವನ ನಂಬಿಕೆಗೆ ದ್ವಂದ್ವ-ಸಂದೇಹಗಳ ತಲ್ಲಣ ತಾಕಿರಲೇ ಇಲ್ಲ. ನಿರ್ಭಿಡೆಯಿಂದ ನಗುವ ಹೆಣ್ಮಕ್ಕಳನ್ನು ನೋಡಿದಾಗೆಲ್ಲ ವೀರ್ಯನಾಶವಾಗಿ ಮರಣಿಸಿದಂತೆ ಭ್ರಮಿಸುತ್ತಾ ತತ್ತರಬತ್ತರವಾದ. ತವರುಮನೆಯಲ್ಲಿ ಮುಚ್ಚಟೆಯಾಗಿ ಬೆಳೆದು ಗಂಡನ ಮನೆಯ ಕೌಟುಂಬಿಕ ಹಿಂಸೆಗೆ ಜರ್ಜರಿತಳಾಗಿ ಹೋದ ನವವಧುವಿನಂತಾಗಿದ್ದ. ಯಾಕೋ ಏನೋ, ಮತ್ತೆಂದೂ ಸ್ವಾಸ್ಥ್ಯಕ್ಕೆ ಮರಳಲಾರದೆ ಹೋದ.

ವಾರಕ್ಕೊಮ್ಮೆಯಾದರೂ ಸಂಗೀತದ ತಾಳಕ್ಕೆ ಹೆಜ್ಜೆ ಹಾಕುವ ಸ್ವಾತಂತ್ರ್ಯ; ಸಿಕ್ಕಸಿಕ್ಕದ್ದನ್ನೆಲ್ಲ ಓದುವ ಹವ್ಯಾಸ; ಹಾಗೂ ಅವು ತಂದ ತಲ್ಲಣ ತಳಮಳಗಳು ಬೆಳೆಯುತ್ತಿದ್ದ ನನ್ನಂಥವರನ್ನು ಪಾರು ಮಾಡಿದವೋ ಏನೋ. I had escaped growing up in a bubble! ಜೊತೆಗೆ ಘನಘೋರ ಸಂಪ್ರದಾಯದ ಆಚೆಗೆ ನಿಂತು ಇನಿದಾದ ಸಂಗೀತಕ್ಕೆ ಮೆಲ್ಲಗಾದರೂ ಹೆಜ್ಜೆ ಹಾಕಿದ ಸಿಸ್ಟರಿನಿಯರು ನನ್ನ ಎದೆಯಾಳದಲ್ಲಿ ಸಮಾಧಾನವನ್ನು ಮೂಡಿಸಿದ್ದು ನಿಜವೇ.


