Advertisement
ಮುಂಬತ್ತಿ ಮಾತುಕತೆ: ಸುಮಾವೀಣಾ ಅಂಕಣ

ಮುಂಬತ್ತಿ ಮಾತುಕತೆ: ಸುಮಾವೀಣಾ ಅಂಕಣ

ನನ್ನೋರಗೆಯ ಹುಡುಗನೊಬ್ಬ ಆ ಪಟಾಕಿಯನ್ನು ನೆಲದಲ್ಲಿ ಬಚ್ಚಿಟ್ಟಿದ್ದ.  ಪಟಾಕಿ ಹೊಡೆಯುವ   ಸಮಯದಲ್ಲಿ ಎಷ್ಟು ಹುಡುಕಿದರೂ ಸಿಗಲಿಲ್ಲ. ಇಡೀ ಊರಿನವರು ಪಟಾಕಿ ಸಿಡಿಸಿದ ನಂತರ ಸಿಕ್ಕವು. ಅಷ್ಟರಲ್ಲಿ    ಪಟಾಕಿಗಳು ಶೀತ ಹಿಡಿದು ಮೆತ್ತಗಾಗಿದ್ದವು. ಎಷ್ಟು ಹೊತ್ತಿಸಿದರೂ ಟುಸ್ ಆಗುತ್ತಿದ್ದವು. ನನಗೆ ಬೇಜಾರು ಅನ್ನಿಸಿದ್ದು  ಪಟಾಕಿ ಸಿಡಿಯಲಿಲ್ಲ  ಎಂದಲ್ಲ. “ನಮ್ಮಪ್ಪ ತಂದ ಪಟಾಕಿಯನ್ನು  ಇವರು ಹೊಡೆಯುತ್ತಾರಲ್ಲ”   ಎಂಬ  ಆ ಹುಡುಗನ ನಂಜು ತುಂಬಿದ ಮನಸ್ಸು. ಈಗಲೂ ಹಾಗೆ ಅವನ ಮನಸ್ಸು ಅಸಹಿಷ್ಣುವಾಗಿದೆಯ? ಗೊತ್ತಿಲ್ಲ!  ನಾವು ದೂರದಲ್ಲಿದ್ದೇವೆ. ಪ್ರತಿಯೊಬ್ಬರಿಗೂ ಅವರದ್ದೇ ಆದ ಲೆವೆಲ್ ಇದೆ. ಬಹುಶಃ ನಮ್ಮ ಮುಗ್ಧತೆಯನ್ನು ಕಂಡು ದೇವರು ಪರಿಪೂರ್ಣವಾಗಿ ಹರಸಿದ್ದಾನೆ ಎನ್ನುವಲ್ಲಿಗೆ ಆ ಸುತ್ತೂ ಸಂಪನ್ನವಾಯಿತು.
ಸುಮಾವೀಣಾ
ಬರೆಯುವ “ನುಡಿನಲಿವು” ಅಂಕಣದಲ್ಲಿ ಹೊಸ ಬರಹ

ಮುಂಬತ್ತಿಯ ಮಂದ ಬೆಳಕಿನೂಟದ ಸವಿಯ ಸವಿದವರೆಷ್ಟೊ ಗೊತ್ತಿಲ್ಲ! ಆದರೆ ನನಗೆ ಮಾತಿನ ಸವಿಯೂಟ ಮುಂಬತ್ತಿಯ ಮಂದ ಬೆಳಕಿನಲ್ಲಿ ಸಿಕ್ಕಿದ್ದು ಮರೆಯಲಾರದ ಅನುಭೂತಿಯೇ ಸರಿ!.  ಆಗ ನಾನು ಪದವಿ ವಿದ್ಯಾರ್ಥಿನಿ. ನನ್ನ ಸಹೋದರ ಪಿ.ಯು.ಸಿ ವಿದ್ಯಾರ್ಥಿ. ಮನೆಯಲ್ಲಿ ಇಬ್ಬರೆ.. ಎಲ್ಲ ಕೆಲಸಗಳು ಆಗಬೇಕು. ಅದಕ್ಕಾಗಿ ಜಟಾಪಟಿಯೂ ಆಗ್ಗಾಗ್ಗೆ ಇಬ್ಬರ ನಡುವೆ ಜೋರಾಗೆ ನಡೆಯುತ್ತಿತ್ತಾದರೂ ಅದೆಲ್ಲವನ್ನು ಮನ್ನಾ ಮಾಡುತ್ತಿದ್ದುದು ನಮ್ಮ ಮುಂಬತ್ತಿಯ ಮಾತುಕತೆ.  ‘ಮುಂಬತ್ತಿಯ ಮಾತುಕತೆ’ ನಾವೆ ಕಂಡುಕೊಂಡ ನೆನಪಿನ ಸಲ್ಲಾಪ.   ಈ ಸಲ್ಲಾಪ ಯಾವಾಗ ಫಿಕ್ಸ್ ಆಗುತ್ತಿತ್ತು ತಿಳಿಯುತ್ತಿರಲಿಲ್ಲ ಆಕಸ್ಮಿಕವಾಗಿ ಜರುಗುತ್ತಿತ್ತು. ಯಾವುದೇ ವಿಷಯವಿಲ್ಲದೆ  ಪ್ರಾರಂಭವಾಗುತ್ತಿದ್ದ ಇದು ಸಂಬಂಧಗಳಲ್ಲಿ ಆರ್ದ್ರತೆ, ಮಧುರತೆ ಇರಬೇಕು ಎಂಬ ತೀರ್ಮಾನದೊಂದಿಗೆ  ಮುಕ್ತಾಯವಾಗುತ್ತಿತ್ತು.

ಕರೆಂಟು ಇಲ್ಲದ ಒಂದು ಸಂಜೆ ಕಾಲು ದೀಪಗಳ ಸುತ್ತಲೂ ನನಗೆ ಬತ್ತಿ ಹಚ್ಚಬೇಕೆನಿಸಿತು. ಹಚ್ಚಿದೆ. ಅದು ಬಹಳ ಚರ್ಚೆಗೆ ಗ್ರಾಸವಾಗಿತ್ತು. ಮನೆಗೆ ಬೆಂಕಿ  ಹಚ್ಚುವ ಕೆಲಸ ಎಂದು ಬಿಂಬಿಸಲಾಯಿತು. ಅರೆ….. ಅದು ನನ್ನ ಆಸೆ ಅಷ್ಟೆ. ಅದರಲ್ಲಿ ನನ್ನ ತಪ್ಪೇನಿದೆ?  ಎನ್ನುತ್ತಾ ಮೃದು ಆಕ್ರೋಶದಿಂದಲೇ  ಮೊದಲ ಸುತ್ತಿನ ಮಾತಿಗೆ ಮುಂದಡಿ ಇಟ್ಟಿದ್ದೆ ತಡ ನಮ್ಮ ಮಾತಿನ ಸರಣಿ ವೇಗ ಪಡೆಯತೊಡಗಿತು.  ಮಡಿಕೇರಿಯಲ್ಲೊಂದು ಸುತ್ತು, ಅಜ್ಜಿ ಮನೆಗಳಲ್ಲೊಂದೊಂದು ಸುತ್ತು, ಸಂಬಂಧಿಗಳ ಮನೆ ಮನೆಗಳಲ್ಲೊಂದೊಂದು ಸುತ್ತು ಸುತ್ತುತ್ತಲೆ ಇದ್ದೆವು.   ಹಾಗಂದ ಮೇಲೆ   ನಡೆದ ಎಲ್ಲವೂ ನೆನಪಿತ್ತೆ?   ಎಲ್ಲವೂ ಚರ್ಚೆಯಾಗುತ್ತಿದ್ದುವೆ? ಎಂದರೆ ಖಂಡಿತಾ ಇಲ್ಲ! ಮನಸ್ಸಿಗೆ ಘಾಸಿಯನ್ನೂ, ಖುಷಿಯನ್ನೂ ತಂದಿದ್ದ ಘಟನೆಗಳು ಫಿಲ್ಟರ್ ಆಗಿ ಆಗಿ ಚರ್ಚೆಯಾಗುತ್ತಿದ್ದವು. ಅದರಲ್ಲಿ   ನನಗೂ ನನ್ನ ತಮ್ಮ ಇಬ್ಬರಿಗೂ ಸಂಬಂಧಿಸಿದ್ದವು, ಕೆಲವು ಒಬ್ಬೊಬ್ಬರಿಗೆ  ಸಂಬಂಧಿಸಿದ್ದವೂ  ಇರುತ್ತಿದ್ದವು.  ನಮ್ಮ ಮುಂಬತ್ತಿ  ಮಾತಿನಲ್ಲಿ ಮೂರನೆಯವರ ಸುದ್ದಿ ಖಂಡಿತಾ ಇರುತ್ತಿರಲಿಲ್ಲ. ನನಗೆ ಅನ್ನಿಸಿದ್ದು ಮೊದಲು  ಹೇಳಬೇಕು ಮೊದಲು  ಹೇಳಬೇಕು…… ಎನ್ನುವ ಹಠ ಇಬ್ಬರಲ್ಲಿಯೂ ಇರುತ್ತಿತ್ತು. “ನಾನು ಫಸ್ಟ್ ಹೇಳಿ ಮುಗಿಸುವೆ  ಆನಂತರ ಯೂ ಕ್ಯಾನ್’’ ಅನ್ನುವ ಮಾತಿನ ಕಮಾಂಡ್ ಆ ದಿನ  ತಮ್ಮನಿಂದ ಬರಲಿಲ್ಲ ಎಂದೇ  ಇನ್ನೊಂದು ಸುತ್ತು ನಾನೆ ಆರಂಭಿಸಿದೆ. ವಿಷಯ ಪ್ರಮೀಳ ನನ್ನ ಸಹಪಾಠಿ. ಶಾಲೆಗೆ ನೇಲ್ ಪಾಲಿಶ್ ತಂದಿದ್ದಾಗಿತ್ತು. ಸಂಜೆ ಗ್ರೂಪ್ ಸ್ಟಡಿಯಲ್ಲಿ ಎಲ್ಲರೂ ನೇಲ್ ಪಾಲಿಶ್ ಹಚ್ಚಿಕೊಳ್ಳುತ್ತಿದ್ದರು. ನೋಡುತ್ತಿದ್ದ  ನನಗೂ ಹಚ್ಚಿದರು. ಬಹಳ ಖುಷಿ  ಆಯಿತು. ಮನೆಯಲ್ಲಿ ನನ್ನ ಬಣ್ಣ ಹಚ್ಚಿದ ಉಗುರುಗಳೆ ಕಾಣಿಸಬೇಕೆಂದೇನು ನಡೆಯುತ್ತಿರಲಿಲ್ಲ. ಅದೇ ಕಂಡರೆ ನಾನೇನು ಮಾಡಲಾಗುತ್ತದೆ? ಖರ್ಚಿಗೆ  ಬೈಗಳು, ಹೊಡೆತಗಳು ಹಿಗ್ಗಾ ಮುಗ್ಗಾ  ದೊರೆತು ಉಗುರನ್ನೂ, ಬಣ್ಣವನ್ನೂ   ಕೆರೆದು ಹಾಕುವಷ್ಟು  ಸಿಟ್ಟು ತರಿಸಿತ್ತು. ಅದೆ ಆವೇಶ  ಮುಂಬತ್ತಿಯ ಮಾತಿನಲ್ಲೂ ಬಂದು ವ್ಯಂಗ್ಯ ನಗುವಿನೊಂದಿಗೆ  ಮುಕ್ತಾಯವಾಯಿತು. ತಡಮಾಡದೆ ನಾನೆ ಇನ್ನೊಂದು ಸುತ್ತನ್ನು ನಾನೆ ಆರಂಭಿಸಿದೆ. ಬಂಧುಗಳ ಮನೆಗೆ ನವರಾತ್ರಿಗೆ  ತೆರಳಿದ್ದೆವು. ಅವರ ಮನೆಯಲ್ಲೋ ಹೇರಳವಾದ ಪಪ್ಪಾಯ. ನಾವು ಊರಿಗೆ  ಹೊರಟಾಗ ಆ  ಹಣ್ಣುಗಳನ್ನು  ಹಾಕಲು ಮನೆಯೊಡತಿ  ಬ್ಯಾಗೊಂದನ್ನು ತಂದಿದ್ದರು. ನನ್ನಮ್ಮ ಸರಿ! ಸರಿ! ಎನ್ನುತ್ತಿದ್ದುದು ನನಗೆ ಗಾಬರಿಯಾಗಿ  ಆ ಬ್ಯಾಗು  ಅವರ ಮನೆ ಹಿತ್ತಿಲಲ್ಲಿ ಅನಾಥವಾಗಿ ಬಿದ್ದದ್ದನ್ನು   ಹೇಳಿದೆ. ಬ್ಯಾಗಿಗೋಸ್ಕರ ಪಪ್ಪಾಯವನ್ನು ಏನೋ ನೆಪ ಹೇಳಿ ಬಿಟ್ಟು ಬಂದೆವು. ಎಷ್ಟೇ ಹತ್ತಿರದ ಬಂಧುಗಳಾದರು ಸ್ವಾಭಿಮಾನದ ಬಂಧವನ್ನ ಬಿಡಬಾರದೆನ್ನುವ   ಒಕ್ಕೊರಲ ತೀರ್ಮಾನದಿಂದ ಆ ಸುತ್ತೂ ಮುಗಿಯಿತು. ಮುಂದಿನ ಸುತ್ತೂ ನನ್ನದೆ ಎನ್ನುತ್ತಾ ದೀಪಾವಳಿ ಹಬ್ಬಕ್ಕೆಂದು  ಬಂಧುಗಳ ಮನೆಗೆ ತೆರಳಿದ್ದನ್ನೂ ಅಲ್ಲಿ  ನಡೆದದ್ದನ್ನು  ವಿಷಾದದಿಂದಲೇ  ನಿರೂಪಿಸಿದೆ.  ಹಬ್ಬಕ್ಕೆ ಹಿರಿಯರು ಪಟಾಕಿಯನ್ನು  ಖರೀದಿಸಿ ತಂದಿದ್ದರು. ಪಟಾಕಿ ಹೊಡೆಯಬೇಕೆಂಬ ಆಸಕ್ತಿಯೇನು ನನಗಿರಲಿಲ್ಲ. ನನ್ನೋರಗೆಯ ಹುಡುಗನೊಬ್ಬ ಆ ಪಟಾಕಿಯನ್ನು ನೆಲದಲ್ಲಿ ಬಚ್ಚಿಟ್ಟಿದ್ದ.  ಪಟಾಕಿ ಹೊಡೆಯುವ   ಸಮಯದಲ್ಲಿ ಎಷ್ಟು ಹುಡುಕಿದರೂ ಸಿಗಲಿಲ್ಲ. ಇಡೀ ಊರಿನವರು ಪಟಾಕಿ ಸಿಡಿಸಿದ ನಂತರ ಸಿಕ್ಕವು. ಅಷ್ಟರಲ್ಲಿ    ಪಟಾಕಿಗಳು ಶೀತ ಹಿಡಿದು ಮೆತ್ತಗಾಗಿದ್ದವು. ಎಷ್ಟು ಹೊತ್ತಿಸಿದರೂ ಟುಸ್ ಆಗುತ್ತಿದ್ದವು. ನನಗೆ ಬೇಜಾರು ಅನ್ನಿಸಿದ್ದು  ಪಟಾಕಿ ಸಿಡಿಯಲಿಲ್ಲ  ಎಂದಲ್ಲ. “ನಮ್ಮಪ್ಪ ತಂದ ಪಟಾಕಿಯನ್ನು  ಇವರು ಹೊಡೆಯುತ್ತಾರಲ್ಲ”   ಎಂಬ  ಆ ಹುಡುಗನ ನಂಜು ತುಂಬಿದ ಮನಸ್ಸು. ಈಗಲೂ ಹಾಗೆ ಅವನ ಮನಸ್ಸು ಅಸಹಿಷ್ಣುವಾಗಿದೆಯ? ಗೊತ್ತಿಲ್ಲ!  ನಾವು ದೂರದಲ್ಲಿದ್ದೇವೆ. ಪ್ರತಿಯೊಬ್ಬರಿಗೂ ಅವರದ್ದೇ ಆದ ಲೆವೆಲ್ ಇದೆ. ಬಹುಶಃ ನಮ್ಮ ಮುಗ್ಧತೆಯನ್ನು ಕಂಡು ದೇವರು ಪರಿಪೂರ್ಣವಾಗಿ ಹರಸಿದ್ದಾನೆ ಎನ್ನುವಲ್ಲಿಗೆ ಆ ಸುತ್ತೂ ಸಂಪನ್ನವಾಯಿತು.

ನಮ್ಮ ಮುಂಬತ್ತಿಯ ಮಾತಿನ ಕಡೆ ಸುತ್ತಲ್ಲಿ ಚರ್ಚೆಗೊಂಡ ನಮ್ಮಿಬ್ಬರಿಗೂ ಸಂಬಂಧಿಸಿದ ಹೈವೋಲ್ಟೇಜ್ ಟಾಪಿಕ್  ಅದೆ ಸಾವಿನ ಸುದ್ದಿ ತಂದ   ಟೆಲಿಗ್ರಾಮ್.  ನಾನು ಮಧ್ಯಾಹ್ನ 3.30ಕ್ಕೆ  ಕಾಲೇಜು ಮುಗಿಸಿ ಬರುವುದನ್ನೆ ಬಾಣೆಯಲ್ಲಿ ಜಮಾಯಿಸಿದವರು ವಿಚಿತ್ರವಾಗಿ ನೋಡುತ್ತಿದ್ದ ಕಾರಣ ಆಗ ಅರ್ಥವಾಗಿರಲಿಲ್ಲ. ಮನೆಯಲ್ಲಿ  ಅಜ್ಜಿ ಅಳುತ್ತಿದ್ದರು.  ತಮ್ಮ ಅದಾಗಲೆ ಶಾಲೆಯಿಂದ ಬಂದು ಊರಿಗೆ  ಹೊರಡಲು ನನ್ನನ್ನೆ ಕಾಯುತ್ತಿದ್ದ. ಅಜ್ಜಿ, ನಾನು, ತಮ್ಮ ಮೂವರು ಬಸ್ ಹಿಡಿದೆವು. ಅಜ್ಜಿಯ   ಅಳುವಿನಿಂದ  ಪ್ರಯಾಣದುದ್ದಕ್ಕೂ ಬಸ್ಸಿನವರೆಲ್ಲಾ ನಮ್ಮನ್ನೆ ನೋಡುತ್ತಿದ್ದರು. ಕಡೆಗೆ ಎರಡು ಬಸ್ಸು ಇಳಿದು  ಇನ್ಯಾವುದೋ ಟೆಂಪೋ ಹಿಡಿದು  ಸಾವಿನ  ಮನೆಗೆ ಹೋದೆವು. ಅಲ್ಲಿ ಸೂತಕದ ಛಾಯೆಯೇ ಇರಲಿಲ್ಲ. ಮನೆಯಜಮಾನರು ನಗುತ್ತಾ ನಮ್ಮನ್ನು ಸ್ವಾಗತಿಸಿದ್ದು ಆಗ ಅಸಂಬದ್ಧ ಅನ್ನಿಸಿತು ಒಳಹೋದ ಮೇಲೆ ಅಲ್ಲಿದ್ದವರು ನೇರವಾಗಿ “ತೀರಿಕೊಂಡಿದ್ದು ‘ಚಿಕ್ಕಮ್ಮ’ ಅಲ್ಲ ‘ಮಾವ’ ಅವರ ಸಂಸ್ಕಾರವೂ ಮುಗಿಯಿತು” ಎಂದರು.  ಟೆಲಿಗ್ರಾಮ್ ನಮಗೆ ಅರ್ಧ ಸತ್ಯವನ್ನು ಹೇಳಿತ್ತು ಅಂದರೆ ನಮಗೆ ಟೆಲಿಗ್ರಾಮ್ ಸಾವಿನ ಸಂದೇಶ ಕೊಟ್ಟಿದ್ದರೂ ಯಾರು ಎಂಬುದನ್ನು ತಪ್ಪಾಗಿ ಹೇಳಿತ್ತು. ನಾವು  ಮಾವನ ಮನಗೆ  ಹೋಗುವ ಬದಲು ಚಿಕ್ಕಮ್ಮನ ಮನೆಗೆ ಹೋಗಿದ್ದೆವು.  ಸ್ವಲ್ಪ ಸಮಾಧಾನವಾಯಿತು ಮಾವ ಮರಣಿಸಿದ್ದು ಖುಷಿ ಎಂದಲ್ಲ. ಅವರಿಗೆ ಮದುವೆಯಾಗಿರಲಿಲ್ಲ ಅವರನ್ನು ನೆನಪಿಸಿಕೊಂಡು ಅಳುವವರಿರಲಿಲ್ಲ…..  ಆದರೆ ಚಿಕ್ಕಮ್ಮನ ಮಕ್ಕಳು ನಮ್ಮಷ್ಟೆ  ವಯಸ್ಸಿನವರಾಗಿದ್ದರು. ಅವರನ್ನು ಹೇಗೆ ಸಮಾಧಾನಿಸುವುದು? ಮುಂದೇನು? ಎಂಬ ಪ್ರಶ್ನೆಗಳು ಬಹುವಾಗಿ ಕಾಡತೊಡಗಿದ್ದವು. ಬಂದ ಟೆಲಿಗ್ರಾಮ್ ಸಂದೇಶವೇ ಅರ್ಧ ರಾಂಗ್ ಆಗಿದ್ದು ನಮಗೆ ಪವಾಡದಂತೆ ಅನ್ನಿಸಿತು. “ಲಾಂಗ್ ಲಿವ್ ಚಿಕ್ಕಮ್ಮ” ಎಂಬ ಘೋಷಣೆಯೊಂದಿಗೆ ಆ ದಿನದ  ಮುಂಬತ್ತಿ ಮಾತನ್ನು ಸಂಪನ್ನಗೊಳಿಸಿದೆವು.  ಉಪಸಂಹಾರ ಹೇಳಬೇಕಲ್ಲ!  ಹೇಳುವೆ…  ಕರೆಂಟ್ ಹೋದಾಗ  ಅದೊಂದು ದಿನ ಮಾತ್ರ ಕಾಲುದೀಪ ಹೊತ್ತಿಸಿದ್ದು ತಪ್ಪಲ್ಲ! ನಾನೆ ನೇಲ್ ಪಾಲಿಶ್ ಹಚ್ಚಿ ಎಂದಿದ್ದರೆ ತಪ್ಪಾಗುತ್ತಿತ್ತು. ನಾನು ಕೇಳಿರಲಿಲ್ಲ ಅಲ್ಲಿಯೂ ತಪ್ಪಿಲ್ಲ! ಹಿತ್ತಿಲಲ್ಲಿ ಬಿದ್ದಿದ್ದ ಬ್ಯಾಗ್ ನಿರಾಕರಿಸಿದ ಸ್ವಾಭಿಮಾನಕ್ಕೆ ಆಗಲೂ ಖುಷಿ ಈಗಲೂ ಖುಷಿ. ಪಟಾಕಿ ಬಚ್ಚಿಟ್ಟ ಬಾಲಕನ ಈರ್ಷೆ ಈಗ ವೆರಿ ಸಿಲ್ಲಿ ಬಿಡಿ! ಸಂವಹನದೋಷ ಕೆಲವೊಮ್ಮೆ ಅನಾಹುತಗಳನ್ನು ಕೆಲವೊಮ್ಮೆ ಬಾಂಧವ್ಯವನ್ನೂ ವೃದ್ಧಿಸುತ್ತದೆ.  ಹಾಗೆ ನೆನಪಾದ ಘಟನೆಗಳು ಮಂದವಾಗಿಯೇ ಚಲಿಸುತ್ತಿದ್ದವು. ಮಂದಹಾಸದೊಂದಿಗೆ ಅವುಗಳಿಗೆ ತಾತ್ಕಾಲಿಕ ವಿರಾಮ ಇಡಬಯಸಿ ಮುಂಬತ್ತಿ ನಂದಿಸಿ ‘ಮಾತುಕತೆ ಸಶೇಷ’ ಎನ್ನುತ್ತಲೇ ಲೈಟ್ ಹಾಕಿದೆವು.

About The Author

ಸುಮಾವೀಣಾ

ವೃತ್ತಿಯಿಂದ ಉಪನ್ಯಾಸಕಿ. ಹಲವಾರು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ‘ನಲವಿನ ನಾಲಗೆ’ (ಪ್ರಬಂಧ ಸಂಕಲನ) ‘ಶೂರ್ಪನಖಿ ಅಲ್ಲ ಚಂದ್ರನಖಿ’(ನಾಟಕ) ‘ಮನಸ್ಸು ಕನ್ನಡಿ’ , ‘ಲೇಖ ಮಲ್ಲಿಕಾ’, 'ವಿಚಾರ ಸಿಂಧು’  ಸೇರಿ ಇವರ ಒಟ್ಟು ಎಂಟು ಪುಸ್ತಕಗಳು ಪ್ರಕಟವಾಗಿವೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ