ನೂರಾರು ಹಕ್ಕಿಗಳು ಒಟ್ಟಿಗೆ ಒಂದೇ ಮರದ ಮೇಲೆ ವಿಶ್ರಾಂತಿ ಪಡೆಯುತ್ತವೆ; ತಿಂಗಳ ಬೆಳಕಿನಲ್ಲಿ ಇದು ನಕ್ಷತ್ರ ಸಮೂಹದಂತೆ ಕಾಣುತ್ತದೆ! ನೀರಿರುವೆಡೆ, ಮರದ ಮೇಲೆ, ಇದೇ ಕುಟುಂಬಕ್ಕೆ ಸೇರಿದ ಬಕ, ನೀರುಕಾಗೆ ಮತ್ತು ವಿವಿಧ ಪ್ರಭೇದದ ಪಕ್ಷಿಗಳು ಒಟ್ಟಿಗೆ ಸೇರಿ, ಕಡ್ಡಿಗಳಿಂದ ತಯಾರಾದ ಅಟ್ಟಣಿಗೆ ಗೂಡುಗಳ ಕಾಲೊನಿ ಕಟ್ಟಿಕೊಳ್ಳುತ್ತವೆ. ಪ್ರಜನನ ಸಮಯದಲ್ಲಿ, ಸಮೂಹ ಗೂಡಿನಲ್ಲಿದ್ದುಕೊಂಡು ‘ರಕ್ ರಕ್’ ಎಂಬ ಶಬ್ದ ಮಾಡುವುದನ್ನು ಹೊರತು ಪಡಿಸಿದರೆ, ಗೋವಕ್ಕಿಗಳು ವರ್ಷದ ಹೆಚ್ಚಿನ ವೇಳೆ ನಿಶ್ಶಬ್ದವಾಗಿಯೇ ಕಾಲ ಕಳೆಯುತ್ತವೆ.
ಡಾ. ಎಸ್.ವಿ. ನರಸಿಂಹನ್ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ “ಗೋವಕ್ಕಿ”ಯ ಕುರಿತ ಬರಹ ಇಲ್ಲಿದೆ
ಇಂದು ನಾವು ತಿಳಿದುಕೊಳ್ಳುವ ಹಕ್ಕಿ ಗೋವಕ್ಕಿ. ಆರ್ಡಿಡೇ ಎಂಬ ಕುಟುಂಬಕ್ಕೆ ಸೇರಿದ ಈ ಪಕ್ಷಿಯನ್ನು ಇಂಗ್ಲೀಷಿನಲ್ಲಿ ಕ್ಯಾಟೆಲ್ ಈಗ್ರೆಟ್ ಮತ್ತು ವೈಜ್ಞಾನಿಕವಾಗಿ ಬುಬುಲ್ಕಸ್ ಐಬಿಸ್ ಎನ್ನುತ್ತಾರೆ.
ಗೋವಕ್ಕಿಗಳು ಗುಂಪಾಗಿ ವಾಸಿಸುವ, ಆಹಾರಕ್ಕೆ ಜಲಚರಗಳನ್ನೇ ನಂಬಿಕೊಂಡಿರುವ ಹಕ್ಕಿಗಳು. ಸಾಮಾನ್ಯವಾಗಿ ಗದ್ದೆ, ಕೆರೆ-ತೊರೆ-ಕಾಲುವೆ, ಜೊಂಡು-ಕೆಸರು ಅಲ್ಲದೆ ಜೌಗು ಪ್ರದೇಶಗಳಲ್ಲಿ ಯಾವಾಗಲೂ ಕಾಣಬಹುದು. ಸುಮಾರು 51 ಸೆಂಟಿಮೀಟರ್ ಗಾತ್ರದ ಗೋವಕ್ಕಿಗೆ ಆ ಹೆಸರು ಬರಲು ಕಾರಣವಿದೆ. ಸಾಮಾನ್ಯವಾಗಿ ಬಯಲು-ಗೋಮಾಳಗಳಲ್ಲಿ ದನ ಮುಂತಾದ ಜಾನುವಾರುಗಳು ಹುಲ್ಲನ್ನು ಮೇಯುತ್ತಿರುವಾಗ, ಅಥವಾ ರೈತರು ಹೊಲ-ಗದ್ದೆಗಳನ್ನು ಉಳುತ್ತಿರುವಾಗ, ನೇಗಿಲಿಗೆ ಸಿಕ್ಕು ಮೇಲೆದ್ದ ಮಣ್ಣಿನಲ್ಲಿರುವ ಹುಳುಗಳು, ಕ್ರಿಮಿ-ಕೀಟಗಳು, ಮೃದ್ವಂಗಿಗಳು, ಕಪ್ಪೆ, ಮಿಡತೆ ಮತ್ತು ಸಣ್ಣ ಸಣ್ಣ ಹಕ್ಕಿಮರಿ, ಸರೀಸೃಪಗಳು ಮುಂತಾದುವುಗಳನ್ನು, ಅದರ ಸುತ್ತುಮುತ್ತಲೇ ಅಡ್ಡಾಡಿಕೊಂಡು ಗೋವಕ್ಕಿಗಳು ಹೊಂಚುಹಾಕುತ್ತಾ ಹಿಡಿದು ತಿನ್ನುತ್ತವೆ. ಅಲ್ಲದೆ ಜಾನುವಾರುಗಳ ಮೈಮೇಲೆ ಇರುವ ಉಣ್ಣಿ-ಚಿಗಟ ಮುಂತಾದ ಕೀಟಗಳನ್ನು ತಿನ್ನುತ್ತವೆ.
ಹಾಗಾಗಿ ಮೈದಾನದ ಪ್ರದೇಶ, ಕೃಷಿಭೂಮಿ ಮತ್ತು ನೀರಿನ ಬದಿಗಳಲ್ಲಿ, ಮೇಯುತ್ತಿರುವ ಹಸು, ಎಮ್ಮೆಗಳ ಮೈಮೇಲೆ, ಉಳುತ್ತಿರುವ ನೇಗಿಲ ಅಕ್ಕಪಕ್ಕದಲ್ಲಿ, ಗೊಬ್ಬರದ ಸುತ್ತಮುತ್ತ, ಹುಳು-ಹುಪ್ಪಟೆ, ಕೀಟ, ಎರೆಹುಳ, ಮಿಡತೆಗಳನ್ನು ಬೇಟೆಯಾಡುತ್ತವೆ.
ಗೋವಕ್ಕಿಗಳು ಅಚ್ಚ ಬಿಳಿ ಬಣ್ಣದ ಪಕ್ಷಿಗಳು. ಸಪೂರವಾದ ದೇಹ, ಉದ್ದವಾದ ಕೊಕ್ಕು, ಕತ್ತು ಮತ್ತು ಕಾಲುಗಳನ್ನು ಹೊಂದಿರುತ್ತವೆ. ನೇರವಾದ, ಖಡ್ಗದಂತೆ ಉದ್ದವಾದ, ಚೂಪಾದ, ಹಳದಿ ಬಣ್ಣದ ಕೊಕ್ಕು; ಅಷ್ಟೇ ಉದ್ದವಾದ, ತೆಳುವಾದ, ಒಳಕ್ಕೆ ಎಳೆದುಕೊಳ್ಳಬಲ್ಲಂತಹ ಕೊರಳು, ಉದ್ದವಾದ ಮಾಸಲು ಹಳದಿ ಕಾಲುಗಳು ಮತ್ತು ಉದ್ದವಾದ ಕಾಲ್ಬೆರಳುಗಳು. ಹೊರ ಕಾಲ್ಬೆರಳುಗಳ ಮಧ್ಯೆ ಜಾಲಪಾದವೂ ಇರುತ್ತದೆ. ಗಂಡು-ಹೆಣ್ಣು ಹಕ್ಕಿಗಳು ನೋಡಲು ವ್ಯತ್ಯಾಸ ಕಾಣುವುದಿಲ್ಲ. ಮತ್ತೊಂದು ವಿಶೇಷವೇನೆಂದರೆ, ಸಂತಾನಋತುವಿನಲ್ಲಿ ಗೋವಕ್ಕಿಗಳ ತಲೆ, ಕತ್ತು, ಬೆನ್ನಿನಲ್ಲಿ ಹೊಂಬಣ್ಣದ ಗರಿಗಳು ಮೂಡುತ್ತವೆ.
ಆಕಾಶದಲ್ಲಿ ಹಾರುವಾಗ ಈ ಕುಟುಂಬಕ್ಕೆ ಸೇರಿದ ಎಲ್ಲ ಹಕ್ಕಿಗಳೂ ತಮ್ಮ ನೀಳವಾದ ಕತ್ತನ್ನು ಒಳಗೆ ಎಳೆದುಕೊಂಡು ಹಾರುವುದರಿಂದ ಗುರುತು ಹಿಡಿಯಲು ಸುಲಭ.
ನೂರಾರು ಹಕ್ಕಿಗಳು ಒಟ್ಟಿಗೆ ಒಂದೇ ಮರದ ಮೇಲೆ ವಿಶ್ರಾಂತಿ ಪಡೆಯುತ್ತವೆ; ತಿಂಗಳ ಬೆಳಕಿನಲ್ಲಿ ಇದು ನಕ್ಷತ್ರ ಸಮೂಹದಂತೆ ಕಾಣುತ್ತದೆ! ನೀರಿರುವೆಡೆ, ಮರದ ಮೇಲೆ, ಇದೇ ಕುಟುಂಬಕ್ಕೆ ಸೇರಿದ ಬಕ, ನೀರುಕಾಗೆ ಮತ್ತು ವಿವಿಧ ಪ್ರಭೇದದ ಪಕ್ಷಿಗಳು ಒಟ್ಟಿಗೆ ಸೇರಿ, ಕಡ್ಡಿಗಳಿಂದ ತಯಾರಾದ ಅಟ್ಟಣಿಗೆ ಗೂಡುಗಳ ಕಾಲೊನಿ ಕಟ್ಟಿಕೊಳ್ಳುತ್ತವೆ.
ಪ್ರಜನನ ಸಮಯದಲ್ಲಿ, ಸಮೂಹ ಗೂಡಿನಲ್ಲಿದ್ದುಕೊಂಡು ‘ರಕ್ ರಕ್’ ಎಂಬ ಶಬ್ದ ಮಾಡುವುದನ್ನು ಹೊರತು ಪಡಿಸಿದರೆ, ಗೋವಕ್ಕಿಗಳು ವರ್ಷದ ಹೆಚ್ಚಿನ ವೇಳೆ ನಿಶ್ಶಬ್ದವಾಗಿಯೇ ಕಾಲ ಕಳೆಯುತ್ತವೆ.
ಮಳೆಗಾಲದ ತಿಂಗಳುಗಳೇ ಇವುಗಳ ಪ್ರಜನನ ಸಮಯ. ಗಂಡುಹಕ್ಕಿ ಗೂಡಿಗೆ ಅವಶ್ಯವಿರುವ ಕಡ್ಡಿಗಳನ್ನು ತಂದು ಕೊಟ್ಟರೆ, ಹೆಣ್ಣುಹಕ್ಕಿ ಅವುಗಳನ್ನು ಜೋಡಿಸಿ ಗೂಡು ಕಟ್ಟುತ್ತದೆ. ಗಂಡು-ಹೆಣ್ಣು ಎರಡೂ ಹಕ್ಕಿಗಳು ಸೇರಿ ಕುಟುಂಬದ
ಜವಾಬ್ದಾರಿಯನ್ನು ಹಂಚಿಕೊಳ್ಳುತ್ತವೆ. ಒಂದು ಬಾರಿಗೆ ಹೆಣ್ಣು ಹಕ್ಕಿಯು 3ರಿಂದ 8 ಮೊಟ್ಟೆಗಳನ್ನಿಡುತ್ತದೆ. ಮರಿಹಕ್ಕಿಗಳು ಹಲವಾರು ವಾರಗಳ ಕಾಲ ಗೂಡಿನಲ್ಲಿಯೇ ತಮ್ಮ ಪೋಷಕರ ಆರೈಕೆಯಲ್ಲಿ ಇರುತ್ತವೆ. ಏಕೆಂದರೆ, ಈ ಮರಿ ಹಕ್ಕಿಗಳ ಆಹಾರ, ರಕ್ಷಣೆ, ಮತ್ತು ಬದುಕುವ ಕೌಶಲ್ಯಗಳನ್ನು ಕಲಿಯಲು ಸಾಕಷ್ಟು ಸಮಯ ಬೇಕಾಗುತ್ತದೆ.
ಹತ್ತು ಹಲವು ಬೇಟೆಯಾಡುವ ಪ್ರಾಣಿಗಳ ಹಾಗೂ ಬೇಟೆ ಹಕ್ಕಿಗಳ ಕಾಟದಿಂದಾಗಿ ಮರಿಹಕ್ಕಿಗಳನ್ನು ಕಾಪಾಡುವುದು ಬಹಳ ಕಷ್ಟದ ಕೆಲಸ. ಅಲ್ಲದೆ ಗೂಡಿನಲ್ಲಿರುವ ಎಲ್ಲ ಮರಿಹಕ್ಕಿಗಳಿಗೂ ಆಹಾರದ ಪೂರೈಕೆ ಮಾಡುವುದು ದುಸ್ಸಾಧ್ಯವಾಗುತ್ತದೆ.

ಗ್ರಾಮಾಂತರ ಪ್ರದೇಶಗಳಲ್ಲಿ ಕೃಷಿ ಕಾರ್ಯಗಳೇ ಕಾಣೆಯಾಗುತ್ತಿರುವ ಇತ್ತೀಚಿನ ದಿನಗಳಲ್ಲಿ ಗೋವಕ್ಕಿಗಳಿಗೆ ಆಹಾರದ ಕೊರತೆ ಎದ್ದು ಕಾಣುತ್ತದೆ. ಮೇಯುವ ಗೋವುಗಳ ಬದಲಿಗೆ ಟ್ರಾಕ್ಟರ್ ಬಳಕೆಯಾಗುತ್ತಿರುವುದರಿಂದ ಗೋವಕ್ಕಿಗಳ ಹೆಸರೂ ಕೂಡ ಅರ್ಥಹೀನವಾಗಿದೆ!

ಡಾ. ಎಸ್.ವಿ. ನರಸಿಂಹನ್ ವೈದ್ಯರು. ಕೊಡಗಿನ ವಿರಾಜಪೇಟೆಯಲ್ಲಿ ನೆಲೆಸಿದ್ದಾರೆ. ಆರೋಗ್ಯ ರಕ್ಷಣೆಯೊಂದಿಗೆ ಪರಿಸರ ರಕ್ಷಣೆಯ ಬಗೆಗೂ ಅಪಾರ ಕಾಳಜಿ ಹೊಂದಿದ್ದಾರೆ. ಕಳೆದ ನಲವತ್ತೊಂದು ವರ್ಷಗಳಿಂದ ಡಾ. ನರಸಿಂಹನ್‌ರವರು ಕೈಯಿಂದ ಕುಂಚಿಸಿದ ಸುಮಾರು ಎಂಭತ್ತೆರಡು ಸಾವಿರ ‘ವನ್ಯಜೀವಿ ಸಂದೇಶ ಪತ್ರ’ಗಳು ಪ್ರಪಂಚದಾದ್ಯಂತ ತಲುಪಿವೆ. ಇದೊಂದು ಲಿಮ್ಕಾ ದಾಖಲೆ. ವಿಜ್ಞಾನ ಬರವಣಿಗೆಯಲ್ಲೂ ಆಸಕ್ತಿ ಹೊಂದಿರುವ ಇವರು, ಕನ್ನಡ ಭಾಷೆ, ಸಂಗೀತ-ಸಾಹಿತ್ಯ, ಖಗೋಳ, ಪರಿಸರ ಮುಂತಾದ ವಿಷಯಗಳಲ್ಲಿ ಶಾಲಾ-ಕಾಲೇಜುಗಳಲ್ಲಿ, ರೇಡಿಯೋ, ಟಿವಿ ಮತ್ತು ಪತ್ರಿಕಾ ಮಾಧ್ಯಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ಆಸಕ್ತಿ ಬೆಳೆಸಿದ್ದಾರೆ. ಕೊಡಗಿನ ಸಂಪೂರ್ಣ ಪಕ್ಷಿಸಂಕುಲದ ನಿಖರ ಮಾಹಿತಿಯುಳ್ಳ ‘ಕೊಡಗಿನ ಖಗರತ್ನಗಳು’ ಪುಸ್ತಕದಲ್ಲಿ ತಾವೇ ಎಲ್ಲ ಹಕ್ಕಿಗಳ ಚಿತ್ರಗಳನ್ನೂ ಬರೆದದ್ದು ಮತ್ತೊಂದು ಲಿಮ್ಕಾ ದಾಖಲೆ. ‘2013ರ ಕೊಡಗಿನ ವರ್ಷದ ವ್ಯಕ್ತಿ’ಪುರಸ್ಕೃತರು


