ಶಬ್ದಲಜ್ಜೆಯೂ ಸೇರಿದಂತೆ ಹಲವಾರು ಬಗೆಯ ಲಜ್ಜೆಗಳ ಅಗತ್ಯ ಈಗ ಹಿಂದೆಂದಿಗಿಂತಲೂ ಹೆಚ್ಚಾಗಿ ಇರುವಂತೆ ಅನ್ನಿಸುತ್ತದೆ. ಮೊನ್ನೆ ನಮ್ಮ ಅಪಾರ್ಟ್ಮೆಂಟಿನ ಸರದಾರನೊಬ್ಬ ಒಂದು AI ವಿಡಿಯೋ ಹಾಕಿ, ‘ನೋಡಿ, ಎಲ್ಲ ಬಗೆಯ ಸುರಕ್ಷೆ ಇರುವ ಫ್ಲಾಟಿಗೆ ಸಹ ಪೂರ್ತಿಯಾಗಿ ಮುಖವಾಡ ತೊಟ್ಟ ಮಂದಿ ನುಗ್ಗಿರುವ ರೀತಿ!’ ಎಂದು ತತ್ತರಬತ್ತರ ಬೇತುಕೊಂಡಿದ್ದು ನೋಡಿ ನಗು ಬಂದಿತ್ತು. ಬೆಚ್ಚಿಬೀಳಲು ಸದಾ ಸಿದ್ಧವಿರುವ ಮಂದಿ. ಇನ್ನೊಬ್ಬರನ್ನು ಬೆಚ್ಚಿಬೀಳಿಸಲು ತೋಳೇರಿಸಿಕೊಂಡು ಹೋಗುವ ಮಂದಿ!
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಮೂವತ್ನಾಲ್ಕನೆಯ ಬರಹ
ನನ್ನ ಸಹೋದ್ಯೋಗಿ ಒಬ್ಬರು ಮೈಕ್ ಸಿಕ್ಕಿದ ತಕ್ಷಣವೇ ಢಣ್ ಢಣಾ ಢಣ್ ಎಂದು ಭಾಷಣ ಮಾಡುತ್ತಿದ್ದಿದ್ದು ನೆನಪಿಗೆ ಬರುತ್ತದೆ. ಕಾರ್ಯಕ್ರಮವನ್ನು ನಿರ್ವಹಿಸುವ ಹೊಣೆಯನ್ನು ಕೊಟ್ಟರಂತೂ ಮುಗಿದೇ ಹೋಯಿತು. ಅವರ ಬಾಯಲ್ಲಿ ಎಲ್ಲರೂ ಪ್ರೊಫೆಸರುಗಳೇ. ಕೊಡುವ ಒಂದೊ ಎರಡೊ ಹೂವು ಹಣ್ಣುಗಳು ಸಹ ‘ಫಲಪುಷ್ಪ ಸಮರ್ಪಣೆ’ ಯೇ. ನಾನಂತೂ ಹಿಂದಿನ ಸಾಲಿನಲ್ಲಿ ಕೂತಿದ್ದು ಸ್ವಲ್ಪ ಹೊತ್ತಿನಲ್ಲಿ ಮುಲಾಜಿಲ್ಲದೆ ಹೊರಕ್ಕೆ ಜಾರಿಕೊಳ್ಳುತ್ತಿದ್ದೆ.
ನನ್ನ ನಿವೃತ್ತಿಯ ಕಾಲಕ್ಕೆ ಬೀಳ್ಕೊಡುಗೆಯ ದಿನ ಈತನದೇ ಭಾಷಣವಿದ್ದರೆ ಏನು ಗತಿ ಎಂದು ಕೆಲವೊಮ್ಮೆ ಯೋಚಿಸಿದ್ದಿದೆ. ಒಮ್ಮೆ ಒಬ್ಬರ ಅಂಥದ್ದೇ ಸಮಾರಂಭದಲ್ಲಿ ಪಕ್ಕದಲ್ಲಿ ಕೂತಿದ್ದ ನನ್ನ ಸಹೋದ್ಯೋಗಿ ಗೆಳತಿಗೆ ‘ನನ್ನ ನಿವೃತ್ತಿಯ ದಿನವೂ ಹೀಗೇ ಆದರೆ ಎರಡರಲ್ಲಿ ಒಂದಂತೂ ಗ್ಯಾರಂಟಿ!’ ಎಂದೆ. ಏನು ಎನ್ನುವಂತೆ ನನ್ನತ್ತ ನೋಡಿದಳು. ‘ಒಂದೋ ಕೊಲೆ, ಇಲ್ಲಾ ಆತ್ಮಹತ್ಯೆ!’ ನಗು ತಡೆಯಲಾಗದೆ ಪುಸ್ತಕವನ್ನು ಮುಖಕ್ಕೆ ಅಡ್ಡ ಹಿಡಿದು ಮನಸಾರೆ ನಕ್ಕಿದ್ದಳು.
ಆತ ನಿವೃತ್ತರಾದ ಮೇಲೆ inspirational speaker ಎಂದು ಎಲ್ಲ ಕಡೆ ಹಿಗ್ಗಾಮುಗ್ಗಾ ಆಮಂತ್ರಿಸುತ್ತಾರೆ ಎಂದು ಕೇಳ್ಪಟ್ಟೆ. ಸದ್ಯ, ಸ್ವಲ್ಪ ಮುಂಚೆಯೇ ಹುಟ್ಟಿ ಇಷ್ಟೊತ್ತಿಗೆ ನಿವೃತ್ತಳಾಗಿ ಬಚಾವಾದೆ ಎಂದು ನಿಟ್ಟುಸಿರು ಬಿಟ್ಟಿದ್ದೇನೆ.
ಅಕ್ಷರ-ಲಂಪಟತನ ಹೊಸದೇನೂ ಅಲ್ಲ. ಅದು ಹಿಂದೆಯೂ ಇಂದಿಗೂ ಸಾಮಾನ್ಯ ರೂಪದಲ್ಲಿ ‘ಕ್ಲೀಷೆ’ ಎಂಬ ಹೆಸರನ್ನು ಹೊತ್ತು ಮೆರೆಯುತ್ತಲೇ ಇದೆ. ಕ್ಲೀಷೆ ಎನ್ನುವುದು ನಮಗೆ ಇಂಗ್ಲಿಷಿನಿಂದ ಬಂದ ಪದ (cliché). ಮಂದಿಯ ಬಾಯಲ್ಲಿ ಸಾವಿರಾರು ಬಾರಿ ಹೊರಳಾಡಿ, ಸತ್ವವನ್ನೇ ಕಳೆದುಕೊಂಡು ಬಳಲಿ ಬೆಂಡಾಗಿ ಎಕ್-ಹೊರಟುಹೋಗಿರುವ ಭಾಷೆಗೆ ಕ್ಲೀಷೆ ಎಂದು ಕರೆಯಲಾಗುತ್ತದೆ.
ಕನ್ನಡದ ಒಂದು ಅತ್ಯುತ್ತಮ ಮನಸ್ಸಾದ ಏ. ಎನ್. ಮೂರ್ತಿರಾಯರು ಅಂತಹ ಮಂದಿಯನ್ನು ಕ್ಲೀಷಾಲಂಪಟರು ಎಂದು ಕರೆದಿದ್ದರು. ಯಾಕೆಂದರೆ ಭಾಷೆಯನ್ನು ಹಾಗೆ ಯಾಂತ್ರಿಕವಾಗಿ ಬಳಸುವಾಗ ಮತ್ತು ಯೋಚಿಸುವ ಮುಂಚೆಯೇ ಎಗ್ಗಿಲ್ಲದೆ ಪದಗಳನ್ನು ಉರುಳಿಸುವಾಗ ಅಲ್ಲಿ ಯಾವ ರೀತಿಯ ನೈತಿಕ ಹಂಗೂ ಇದ್ದಂತೆ ತೋರುವುದಿಲ್ಲ.
ಆದರೆ ಕ್ಲೀಷೆ ನಮ್ಮ ಒಳಹೊರಗಿನ ದಿನನಿತ್ಯದ ಬದುಕಿನ ಭಾಗವಾಗಿ ಹೋಗಿಬಿಟ್ಟಿದೆ. ಮೂರ್ತಿರಾಯರ ಈ ಮಾತುಗಳನ್ನು ಗಮನಿಸಬಹುದು:
ಕ್ಲೀಷೆ ನಮ್ಮ ಆಪದ್ಬಂದು. ನಮ್ಮ ತಲೆ ಬರಿದಾದಂತೆಲ್ಲ ಅದರ ಸ್ನೇಹ ಮತ್ತಷ್ಟು ಸ್ನಿಗ್ಧವಾಗುತ್ತದೆ. ಆದರೇನು! ನಾವು ಕ್ಲೀಷೆಗೆ ಬಹಿಷ್ಕಾರ ಹಾಕಿ ಗೆಲ್ಲುವಂತಿಲ್ಲ. ಒಂದಲ್ಲ ಒಂದು ಸಮಯದಲ್ಲಿ ಎಲ್ಲರೂ — ಅದಕ್ಕೆ ಬಹಿಷ್ಕಾರ ಹಾಕಬೇಕೆನ್ನುವವರು ಕೂಡ — ಕ್ಲೀಷೆಯನ್ನು ಉಪಯೋಗಿಸದಿರಲಾಗುವುದಿಲ್ಲ. ಅದಿಲ್ಲದಿದ್ದರೆ ಅನೇಕ ವೃತ್ತಪತ್ರಿಕೆಗಳು ದಿವಾಳಿಯೆದ್ದು ಹೋಗಬಹುದು; ಭಾಷಣಕಾರರ ಸ್ವರ ಉಡುಗಿ ಹೋದೀತು; ವಿಮರ್ಶಕರ ಲೇಖನಿ ನಿಂತು ಹೋದೀತು. ಸ್ವತಃ ಯೋಚನೆ ಮಾಡುವ ಶಕ್ತಿಯಿಲ್ಲದವರಿಗೆ, ಶಕ್ತಿಯಿದ್ದರೂ ಆಲಸರಾದವರಿಗೆ, ಯೋಚನೆಗೆ ವ್ಯವಧಾನವಿಲ್ಲದಿದ್ದರೂ ಭಾಷಣ ಮಾಡುವ ಅಥವಾ ಬರೆಯುವ ಚಟವಿರುವವರಿಗೆ, ಇದು ನಿರಾಯಾಸವಾಗಿ ದೊರಕುವ ನಿಧಿ. ಎಂಥ ಉನ್ನತಮಟ್ಟದ ಕವಿಗಳ ಶಕ್ತಿಯುತವಾದ ವಾಕ್ಯಗಳನ್ನಾದರೂ ನಾವು ಬಳಸಿ ಬಳಸಿ ಕ್ಲೀಷೆಗೆ ಪರಿವರ್ತನೆ ಮಾಡಿಕೊಳ್ಳಬಹುದಾದ್ದರಿಂದ ಈ ನಿಧಿ ಕರಗುವಂತಿಲ್ಲ (ಪು. ೧೦೬).
ಪತ್ರಿಕಾ ರಂಗದಲ್ಲಂತೂ ಕ್ಲೀಷೆಯೇ ಪ್ರಧಾನ. ‘ಶ್ರೀಯುತರ ಸಾವು ರಾಷ್ಟ್ರಕ್ಕೆ ತುಂಬಲಾರದ ನಷ್ಟ ಎಂದು ಪ್ರಧಾನಮಂತ್ರಿಗಳು ಕಂಬನಿ ಮಿಡಿದಿದ್ದಾರೆ; ಅವರ ಸಾವು ನಮ್ಮ ನಾಡಿಗೆ ತುಂಬಲಾರದ ನಷ್ಟ ಎಂದು ಗಣ್ಯರು ಕಣ್ಣೀರ್ಗರೆದಿದ್ದಾರೆ. ಹೀಗಾಗಬಾರದಿತ್ತು ಎಂದು ಮಂತ್ರಿಗಳು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ….’ ಹೀಗೇ ಉದಾಹರಣೆಗಳ ಪಟ್ಟಿ ಎಷ್ಟು ಬೇಕಾದರೂ ಬೆಳೆಯಬಹುದು.
ಮೂರ್ತಿರಾಯರ ಲೇಖನದಲ್ಲಿ ಒಬ್ಬ ಕ್ಲೀಷಾಪ್ರವೀಣನ್ನು ಒಂದು ಸಾಹಿತ್ಯ ಸಮಾರಂಭದ ವರದಿಯನ್ನು ಕೊಡುವಂತೆ ಕೇಳಿಕೊಂಡಾಗ ಅವನಿಂದ ‘ಓತಪ್ರೋತವಾಗಿ’ ಹರಿಯುವ ಧಾರೆ ಇದು!
(ಮುಖ್ಯ ಅತಿಥಿಗಳು) ಶ್ರೋತೃವೃಂದವನ್ನು ‘ಕನ್ನಡಮ್ಮನ ಒಲವಿನ ಮಕ್ಕಳೇ, ಕನ್ನಡ ಅಕ್ಕತಂಗಿಯರೇ, ಅಣ್ಣತಮ್ಮಂದಿರೆ’ ಎಂದು ಸಂಭೋಧಿಸಿದರು. ಆನಂತರ ತಾವು ಅಂದು ಪಡೆದ ಗೌರವಕ್ಕೆ ಸರ್ವಥಾ ಅನರ್ಹರೆಂದು, ಅದು ಕನ್ನಡಿಗರ ಹುಟ್ಟುಗುಣವಾದ, ಕನ್ನಡದ ಸಂಸ್ಕೃತಿಗೆ ಸಹಜವಾದ ಅಭಿಮಾನದ ಕುರುಹು ಮಾತ್ರವೆಂದೂ ನುಡಿದರು. ತಾವೇನೋ ಹಲವಾರು ಕೃತಿಗಳನ್ನು ರಚಿಸಿರಬಹುದು; ಕನ್ನಡಿಗರ ಪದತಲದಲ್ಲಿ ಅರ್ಪಿಸಿರಬಹುದು; ಅದನ್ನು ಹಲವಾರು ಜನ ನುರಿತ ವಿಮರ್ಶಕರು, ಸಹೃದಯರು, ಅಮರವಾದ ಕಲಾಕೃತಿಗಳೆಂದು ಹೊಗಳಿಯೂ ಇರಬಹುದು. ಆ ಮಾತನ್ನು ತಾವೇ ಹೇಳಿಕೊಳ್ಳುವುದು ಯುಕ್ತವಲ್ಲ. ನಿಜವಾಗಿ ನೋಡಿದರೆ ಆ ಕೃತಿಗಳೆಂಥವು? ತಾವು ಮೊದಲು ತಾಯ ಹಾಲ ಕುಡಿದು ಲಲ್ಲೆಯಿಂದ ತೊದಲಿದ ನಾಲ್ಕು ಮಾತು! ಕನ್ನಡಮ್ಮನ ಆಡಿದಾವರೆಯಲ್ಲಿ ಅರ್ಚಿಸಿದ ತುಂಬೆಯ ಹೂವು! ಕನ್ನಡಮಾತೆಯೂ ಆಕೆಯ ಅಣುಗರೂ ಆ ಕಾಣಿಕೆಯನ್ನು ಔದಾರ್ಯದಿಂದ ಸ್ವೀಕರಿಸಿದರೆಂದರೆ ತಮಗೆ ಅದೊಂದು ಹೆಮ್ಮೆಯ ವಿಷಯ… (ಪು. ೧೧೧)
ಕ್ಲೀಷೆ ಕೇವಲ ಭಾಷೆಗೆ ಸಂಬಂಧಪಟ್ಟಿದ್ದಲ್ಲ. ನಾವು ಆಡುವ ಮಾತು ನಮ್ಮ ಯೋಚನೆಯ ಕ್ರಮವೂ ಆಗಿಬಿಡುತ್ತದಲ್ಲ! ಬದುಕಿನ ಸಂಕಷ್ಟಗಳ ನಡುವೆ ಸಹ ನಮ್ಮ ಮನಸ್ಸು ಕ್ಲೀಷಾತ್ಮಕ ಸಿದ್ಧಮಾದರಿಯಲ್ಲೇ ಯೋಚಿಸುತ್ತಾ, ಸೂಕ್ಷ್ಮಜ್ಞತೆಗೆ ಮತ್ತು ಪರ್ಯಾಯಗಳಿಗೆ ನಮ್ಮನ್ನು ಕುರುಡಾಗಿಸುತ್ತದೆ.
ಲಂಕೇಶ್ ಪತ್ರಿಕೋದ್ಯೋಮದ ಕ್ಲೀಷೆಯ ಗುಣವನ್ನು ಸಮರ್ಥವಾಗಿ ಮುರಿದಿದ್ದ ಚಿಂತಕ. ಅದಕ್ಕೆ ಅವರ ಕವಿಮನಸ್ಸಿನ ಮತ್ತು ಪ್ರಖರವಾದ ವಿದ್ವತ್ತಿನ ಬಲವಿತ್ತು. ಹಾಗಾಗಿ ಲಂಕೇಶ್ ಪತ್ರಿಕೆ ಕನ್ನಡದ ಇತಿಹಾಸದಲ್ಲಿ ಒಂದು ಪಲ್ಲಟವನ್ನು ಹುಟ್ಟು ಹಾಕಿದ್ದು ಸುಮ್ಮನೇ ಅಲ್ಲ. ಕ್ಯಾರೆ ಎನ್ನದೆ ಬಳಸುವ ಭಾಷೆ (‘ಬಂ (ಬಂಗಾರಪ್ಪ) ಮತ್ತು ಗುಂ (ಗುಂಡೂರಾವ್) ನಡುವೆ ವೈಮನಸ್ಯ’), ಎಂತೆಂಥ ದೊಡ್ಡವರನ್ನೂ ಬೆಚ್ಚಿಬೀಳಿಸುತ್ತಿದ್ದ ನೈತಿಕ ಧೈರ್ಯ, ಸಾಹಿತ್ಯ, ತುಂಟಾಟ ಎಲ್ಲವಕ್ಕೂ ಒಂದು ಕಾವ್ಯಾತ್ಮಕ ಪಾವಿತ್ರ್ಯತೆ ಇತ್ತು. ಎಷ್ಟು ಮಂದಿ ಬರಹಗಾರರನ್ನು ಸೃಷ್ಟಿಸಿದ ಪತ್ರಿಕೆ ಅದು! ಇಂದಿನ ಹೆಚ್ಚುಕಮ್ಮಿ ದೊಡ್ಡವರೆಲ್ಲರೂ (ವೈದೇಹಿ, ಸಾರಾ ಅಬೂಬಕರ್, ಬಾನು ಮುಷ್ತಾಕ್ ಇತ್ಯಾದಿ ಸೇರಿದಂತೆ) ಲಂಕೇಶ್ ಪತ್ರಿಕೆಯ ಮರಿಗಳು!
ಇಂದಿನ ಕನ್ನಡ ಮಾಧ್ಯಮ ಅಲ್ಲಲ್ಲಿ ಲಂಕೇಶ್ ಪರಿಭಾಷೆಯನ್ನು ಬಳಸಿಕೊಳ್ಳುತ್ತದೆ ಅಷ್ಟೆ. ಯಾವುದೋ ಖಾಸಗಿ ರೇಡಿಯೋ ಚಾನೆಲ್ಲಿನ ಬೈಲೈನಾದ ‘ಸಕತ್ ಹಾಟ್ ಮಗಾ!’ ನಮ್ಮ ಕಿವಿಗೆ ಚೀಪಾಗಿ ಕೇಳಿಸಿ ಕಿರಿಕಿರಿ ಮಾತ್ರ ಮಾಡಬಲ್ಲದು. ಅದು ಜನಸಾಮಾನ್ಯರ ಭಾಷೆಯ ಬಗ್ಗೆ ಇರುವ ಪ್ರೀತಿಯಂತೂ ಅಲ್ಲ. ಅದರ ದೃಷ್ಟಿ ಲಾಭದ ಕಡೆಗೆ ಇರುತ್ತದೆಯೇ ಹೊರತು ಸಾಮಾಜಿಕ ವಿಮರ್ಶೆಯಾಗುವ ಯಾವ ಮಣ್ಣಾಂಗಟ್ಟಿ ಶಕ್ತಿಯೂ ಅದಕ್ಕೆ ಇರುವುದಿಲ್ಲ.
ಇನ್ನು ಶುದ್ಧಸುಳ್ಳುಗಳನ್ನೇ ಬಿತ್ತಿ ಬೆಳೆಯುವ ಜಾಹೀರಾತು ಲೋಕದ ಹಲವು ಬಗೆಯ ಹಾದರಕ್ಕೆ ಎಲ್ಲೆಯೇ ಇಲ್ಲ. ಹಾಗೆಯೇ ಸಿನಿಮಾದ ನೆಲೆಯಲ್ಲಿ (ಕೆಲವು ಅಪವಾದಗಳನ್ನು ಹೊರತುಪಡಿಸಿ, ಇಂದಿನ ಕನ್ನಡ ಸಿನೆಮಾವನ್ನು ನಾನು ನೋಡುವ ಗೋಜಿಗೇ ಹೋಗುವುದಿಲ್ಲ) ಕನ್ನಡ ಸಿನಿಮಾದ ಸಭ್ಯನಾಯಕರ ಕಾಲವೆಲ್ಲ ಮುಗಿದು ನಾಯಕಿಯನ್ನು ಅಟ್ಟಿಸಿಕೊಂಡು ಹೋಗಿ ಸೆರಗು ಜಡೆಗಳನ್ನು ಎಳೆಯುವ, ‘ಏನೇ, ಹೋಗೇ, ಬಾರೇ’ ಎಂದು ಒಂದಾನೊಂದು ಕಾಲದಲ್ಲಿ ಕೇಡಿಗಳು ಸಹ ಆಡದ ಭಾಷೆಯಲ್ಲಿ ನಾಯಕರು ತೆರೆಯ ತುಂಬ ಹೊಳೆದರೆ ವಾಕ್-ದೃಶ್ಯ ಹಾದರ ಆಕಾಶದ ಛಾವಣಿಯನ್ನು ತಲುಪಿದೆ ಅಂತ ಆಗಲೇ ಅನ್ನಿಸಿತ್ತು.

ಸಾಮಾನ್ಯ ಮಂದಿಯ ಸೆಲ್ಫಿ ಗೀಳು ಸಹ ಆತ್ಮರತಿಯ ಒಂದು ರೂಪ. ಇಲ್ಲದಿದ್ದರೆ ತಾನೆಲ್ಲಿಗೆ ಹೋಗುತ್ತಿದ್ದೇನೆ, ಯಾರೊಟ್ಟಿಗೆ ಇದ್ದೇನೆ, ಏನು ತಿನ್ನುತ್ತಿದ್ದೇನೆ ಇತ್ಯಾದಿ ಖಾಸಗಿ ವಿವರಗಳೆಲ್ಲವನ್ನೂ ಪಟ ಹೊಡೆದು ಸಾರ್ವಜನಿಕವಾಗಿ ಹರಾಜು ಹಾಕುವ ಅಗತ್ಯವಿರುತ್ತಿತ್ತೆ?
ಕೋಟಿಸುವ (quote) ಹುಚ್ಚು ಸಹ ಕ್ಲೀಷೆಯ ಒಂದು ರೂಪ ಅಂತನ್ನಿಸುತ್ತದೆ. ಒಮ್ಮೆ ವಿಶಾಲಮ್ಮ ಮತ್ತವರ ಮಗನ ಮಧ್ಯೆ ಏನೋ ವಾದ ಪ್ರಾರಂಭವಾಗಿತ್ತು. ಅದೇನೂ ಗಂಭೀರವಾಗಿರಲಿಲ್ಲ. ಅಲ್ಲಿಗೆ ಬಂದಿದ್ದ ನಮ್ಮ ಬಾಲ್ಯದ ಕನ್ನಡ ಮೇಷ್ಟರು (ಆತ ದೂರದ ನೆಂಟ ಸಹ) ‘ಮಾತೃಶ್ರೀಯವರ ಹತ್ತಿರ ಹಾಗೆಲ್ಲ ಮಾತಾಡಬಾರದು ಗಿರಿಧರ ಅವರೇ. ಮನೆಯೆ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರುವು, ಜನನಿಯಿಂದ ಪಾಠ ಕಲಿತ ಜನರು ಧನ್ಯರು! ಅಂತ ಕವಿವಾಣಿಯೇ ಇದೆಯಲ್ಲ?’ ಅಂತೆಲ್ಲಾ ಪುರಾಣ ಹೊಡೆದು ಈ ಗಿರಿಧರನಿಗೆ ರೊಯ್ಯನೆ ಕೋಪ ಏರಿ ಅವರ ಮೂತಿಯನ್ನು ಜಜ್ಜಲು ತೋಳೇರಿಸಿಕೊಂಡು ಹೋಗಿದ್ದ! ನಾವು ಅಕ್ಕತಂಗಿಯರು ಹಾರಿ ಮಧ್ಯದಲ್ಲಿ ನಿಂತು ಬಚಾವು ಮಾಡಿದ್ದೆವು. ಕೆಲವು ಕೋಟೇಶ್ವರರನ್ನಂತೂ ನಾನು ದೂರದಿಂದ ನೋಡಿಯೇ ಅಡ್ಡರಸ್ತೆಗೆ ಹೊರಳಿಕೊಂಡು ತಪ್ಪಿಸಿಕೊಂಡು ಹೋಗಿದ್ದಿದೆ.
*****
ಟ್ರಾಲ್ (troll) ಮಾಡುವುದು ಇಂದಿನ ಡಿಜಿಟಲ್ ಯುಗದ ಸೋಶಿಯಲ್ ಮೀಡಿಯಾದಲ್ಲಿ ಚಾಲ್ತಿಯಲ್ಲಿರುವ ಅಕ್ಷರ-ಹಾದರದ ವಿಷಮ ರೂಪ. ಇಂಗ್ಲಿಷ್ ರಮ್ಯಕವಿಗಳಲ್ಲಿ ಒಬ್ಬನಾದ ಕೀಟ್ಸ್ ವಿಮರ್ಶಕರ ಭಾಷೆಯ ಹರಿತಕ್ಕೆ ತನ್ನ ಇಪ್ಪತ್ತನಾಲ್ಕನೆಯ ವಯಸ್ಸಿಗೇ ರಕ್ತನಾಳಗಳು ಒಡೆದು ಸತ್ತ ಎಂಬ ಒಂದು ಥಿಯರಿ ಇದೆ. ಆತನ ಸಾವು ನಿಶ್ಚಿತವಾಗಿತ್ತು. ಆದರೆ ವಿಮರ್ಶೆ ಎಂಬ ಪ್ರಹಾರ ಅದನ್ನು ಬೇಗನೆ ಹತ್ತಿರ ತಂದಿತು ಎಂಬ ಇನ್ನೊಂದು ನಿಲುವಿದೆ.
ಇರಲಿ, ಕೀಟ್ಸನ ವಿಮರ್ಶಕರಿಗೆ ತಮ್ಮ ತಮ್ಮ ಹೆಸರಿತ್ತು. ತಮ್ಮ ತಪ್ಪಿಗೆ ಹೊಣೆಯನ್ನು ಹೊರಬೇಕಾದ ಸಾಮಾಜಿಕ ಬದ್ಧತೆ ಇತ್ತು. ಸೋಶಿಯಲ್ ಮೀಡಿಯಾದ ಮಂದಿಗೆ ಅದೇನೂ ಇಲ್ಲ. ಇಂದು ಅದರ ಹಿಂಸೆಗೆ ಬಲಿಯಾಗುವ ಲಕ್ಷ ಲಕ್ಷ ಮಂದಿಯಲ್ಲಿ ಹೆಣ್ಣುಮಕ್ಕಳ ಸಂಖ್ಯೆಯೇ ಹೆಚ್ಚು. ಸೈಬರ್ ಅಪರಾಧ ಎನ್ನುವುದು ರಕ್ತಬೀಜಾಸುರನ ರೂಪವನ್ನು ಹೊತ್ತು ನಿಂತಿದೆ. ಅದರ ಎದುರು ಸೈಬರ್ ಪೊಲೀಸ್ ಎನ್ನುವುದು ಒಂದು ಹಾಸ್ಯಾಸ್ಪದ ಪದವಾಗಿಬಿಟ್ಟಿದೆ. ಜರ್ಮನ್ ಚಿಂತಕ ನೀಷೆ (Frederich Nietzsche) ಪ್ರಕಾರ ‘ಉನ್ಮಾದ ಎನ್ನುವುದು ವ್ಯಕ್ತಿಗತ ನೆಲೆಯಲ್ಲಿ ಅಪರೂಪವೇ ಇರಬಹುದು. ಆದರೆ ಗುಂಪು, ಪಕ್ಷ, ರಾಷ್ಟ್ರ ಮತ್ತು ಯುಗಗಳ ನೆಲೆಯಲ್ಲಿ ಅದೊಂದು ಸಾಮಾನ್ಯ ಗುಣ.’
ಆ ಗುಂಪು ಮತ್ತು ಪಕ್ಷಗಳ ಸದಸ್ಯರು ತಮಗೆ ಬೇಡದವರನ್ನು ಟ್ರಾಲ್ ಮಾಡಲೆಂದು ಅವರಿಗೆ ವೇತನವೂ ಉಂಟು. ಒಂದೊಂದು ಕಾಮೆಂಟಿಗೆ ಕೆಲವು ಚಿಲ್ಲರೆ ರೂಪಾಯಿಗಳು ಅಂತ ಕೇಳ್ಪಟ್ಟೆ. ಹುಚ್ಚುಚ್ಚಾದ ಮಾತುಗಳು, ಹಾದಿ ತಪ್ಪಿಸುವ ಸಂದೇಶಗಳು, ಬೆದರಿಕೆಗಳು… ಒಂದೇ ಎರಡೇ? ಯು ಆರ್ ಅನಂತಮೂರ್ತಿಯವರಂಥ ಗಣ್ಯರನ್ನು ಸಹ ಈ ಪದಲಂಪಟರು ಬಿಡುವುದಿಲ್ಲ. ಅಥವಾ ಅವರ ಗಣ್ಯತೆಯೇ ತಮಗೆ ಹೆಚ್ಚಿನ ಕೂಲಿಯನ್ನು ತರುವುದರಿಂದ ಈ ಹದ್ದುಗಳಿಗೆ ಖುಷಿಯೋ ಖುಷಿ.
ನನ್ನ ವಿದ್ಯಾರ್ಥಿಗಳ ಜೊತೆ ಸಂಪರ್ಕವಿರಿಸಿಕೊಳ್ಳುವುದಕ್ಕೆ ಫೇಸ್ ಬುಕ್ಕಿನಲ್ಲಿ ನಾನಿದ್ದ ಕಾಲ. ಗೌರಿ ಲಂಕೇಶ್ ಸಹ ನನ್ನ ಫೇಸ್ ಬುಕ್ ಸ್ನೇಹಿತೆ. ಒಮ್ಮೆ ಈ ಹದ್ದುಗಳು ಆಕೆಯನ್ನು ಹೀನಾಮಾನವಾಗಿ ಬೇಟೆಯಾಡುತ್ತಿದ್ದಾಗ ಸ್ನೇಹಿತೆಯನ್ನು ಸಮರ್ಥಿಸಿಕೊಂಡು ನಾನೇನೋ ಹೇಳಿದ್ದೆ. ಉತ್ತರವಾಗಿ ಬಂದ ನೂರಾರು ಸಂದೇಶಗಳು ನನ್ನನ್ನು ದಿಗ್ಭ್ರಮೆಗೊಳಿಸಿದ್ದವು. ‘Get well soon’, ‘go to pakistan’ ಅದರಲ್ಲಿ ಬೆಚ್ಚಿಬೀಳಿಸುವಷ್ಟು ಕಾಮನ್ ಆಗಿದ್ದವು. ಈ ಪದಲಂಪಟರಿಗೆ ನೆಟ್ಟಗೆ ಭಾಷೆ ಸಹ ಬರುವುದಿಲ್ಲ. ಮಹಾ ವ್ಯಾಕರಣದ್ವೇಷಿಗಳು. ಏನನ್ನೂ ಓದುವುದಂತೂ ದೂರವೇ ಉಳಿಯಿತು. ಅವರನ್ನು ಅಂತಹ ಮೂಢ ಸ್ಥಿತಿಯಲ್ಲಿಯೇ ಇರಿಸಿ ತೆರೆಮರೆಯಿಂದ ತಮ್ಮ ಬೇಳೆ ಬೇಯಿಸಿಕೊಳ್ಳುವ ಪ್ರಭಾವಶಾಲಿ ಗುಂಪುಗಳು ಮತ್ತು ಪಕ್ಷಗಳು! ಇದು ನಮ್ಮ ಇಂದಿನ ಸ್ಥಿತಿ!
ಈ ಡಿಜಿಟಲ್ ನೆಲೆಯಲ್ಲಿ ಉನ್ಮತ್ತರಾಗಿ ಕುಣಿಯುವವರು ಕೇವಲ ಪಡ್ಡೆಗಳಲ್ಲ. ನಿವೃತ್ತರಾಗಿ ವಿಶ್ರಾಂತ ಜೀವನವನ್ನು ನಡೆಸಬೇಕಾದವರು ಸಹ ಧಾಮ್ ಧೂಮನೆ ಇಲ್ಲಿ ಕ್ರಿಯಾಶೀಲರಾಗಿರುತ್ತಾರೆ. ಬಂದ ಸಂದೇಶಗಳೆಲ್ಲವನ್ನೂ ಹಿಂದೆ ಮುಂದೆ ಯೋಚಿಸದೆ ಫಾರ್ವರ್ಡ್ ಮಾಡುವ ಹುಂಬತನ! ಈಗಂತೂ AI ಬಲದಿಂದ ಎಂಥ ದೃಶ್ಯವನ್ನೂ ಸತ್ಯದ ತಲೆಯ ಮೇಲೆ ಹೊಡೆದಂತೆ ಸೃಷ್ಟಿಸಬಹುದಲ್ಲ?
ಶಬ್ದಲಜ್ಜೆಯೂ ಸೇರಿದಂತೆ ಹಲವಾರು ಬಗೆಯ ಲಜ್ಜೆಗಳ ಅಗತ್ಯ ಈಗ ಹಿಂದೆಂದಿಗಿಂತಲೂ ಹೆಚ್ಚಾಗಿ ಇರುವಂತೆ ಅನ್ನಿಸುತ್ತದೆ. ಮೊನ್ನೆ ನಮ್ಮ ಅಪಾರ್ಟ್ಮೆಂಟಿನ ಸರದಾರನೊಬ್ಬ ಒಂದು AI ವಿಡಿಯೋ ಹಾಕಿ, ‘ನೋಡಿ, ಎಲ್ಲ ಬಗೆಯ ಸುರಕ್ಷೆ ಇರುವ ಫ್ಲಾಟಿಗೆ ಸಹ ಪೂರ್ತಿಯಾಗಿ ಮುಖವಾಡ ತೊಟ್ಟ ಮಂದಿ ನುಗ್ಗಿರುವ ರೀತಿ!’ ಎಂದು ತತ್ತರಬತ್ತರ ಬೇತುಕೊಂಡಿದ್ದು ನೋಡಿ ನಗು ಬಂದಿತ್ತು. ಬೆಚ್ಚಿಬೀಳಲು ಸದಾ ಸಿದ್ಧವಿರುವ ಮಂದಿ. ಇನ್ನೊಬ್ಬರನ್ನು ಬೆಚ್ಚಿಬೀಳಿಸಲು ತೋಳೇರಿಸಿಕೊಂಡು ಹೋಗುವ ಮಂದಿ!
ಸ್ವಲ್ಪ ಹಿಂದೆ ನೆಟ್ ಫ್ಲಿಕ್ಸ್‌ನಲ್ಲಿ Sweet Bobby: My Catfish Nightmare ಎಂಬ ಚಿತ್ರವನ್ನು ನೋಡಿದೆ. ಡಿಜಿಟಲ್ ಪರಿಭಾಷೆಯಲ್ಲಿ catfishing ಎನ್ನುವುದು ಒಂದು ವಿಚಿತ್ರ ಪದ. ಸುಳ್ಳು ಅಸ್ಮಿತೆಯನ್ನು ಸೃಷ್ಟಿಸಿ, ಸುಳ್ಳು ಭಾವಚಿತ್ರಗಳು, ವಿಳಾಸ ಇತ್ಯಾದಿಗಳನ್ನು ಹುಟ್ಟುಹಾಕಿ ರೊಮಾನ್ಸ್ ನಡೆಸುವ ಒಂದು ವಿಕೃತಿ. ಈ ಚಿತ್ರದಲ್ಲಿ ಮೂವತ್ತರ ಹರೆಯದ ಯುವತಿಯೊಬ್ಬಳು ಸುಮಾರು ಎಂಟು ವರ್ಷಗಳ ಕಾಲ ಬಾಬಿ ಎನ್ನುವವನೊಂದಿಗೆ ವರ್ಚುಯಲ್ ಪ್ರೇಮಸಂಬಂಧದಲ್ಲಿ ಸಿಕ್ಕಿಬಿದ್ದಿರುತ್ತಾಳೆ. ಅವಳ ಬದುಕಿನ ನಡುಗೂಟವೇ ಈ ತೆರೆ ಮೇಲಿನ ಪ್ರೇಮ ಪ್ರಕರಣವಾಗಿರುತ್ತದೆ. ಅದರ ಕೊನೆ ಮಾತ್ರ ಹಿಂಸೆಯ ರೂಪ ಹೀಗೂ ಇರಬಹುದೇ ಎಂದು ತಲ್ಲಣಿಸುವಂತೆ ಮಾಡುತ್ತದೆ.
*****
ವಾಲ್ಟರ್ ಬೆಂಜಮಿನ್ ಎಂಬ ಮಹತ್ವದ ಚಿಂತಕನೊಬ್ಬನ ಲೇಖನವಿದೆ. A work of art in the age of mechanical production ಅಂತ. ಅದರಲ್ಲಿ ಬೆಂಜಮಿನ್ ಕಲೆ, ಧಾರ್ಮಿಕ ಸಂಪ್ರದಾಯ, ಪ್ರದರ್ಶನ ಕೇಂದ್ರಿತ ಮ್ಯೂಸಿಯಂ ಸಂಸ್ಕೃತಿ ಇತ್ಯಾದಿಗಳ ನೆಲೆಯಲ್ಲಿ ಆಸಕ್ತಿ ಹುಟ್ಟಿಸುವ ವಾದಗಳನ್ನು ಮಂಡಿಸುತ್ತಾನೆ. ಫೋಟಾಗ್ರಫಿ ಮತ್ತು ಸಿನಿಮಾ ಎಂಬ ಬೆಳವಣಿಗೆಗಳು ದೃಶ್ಯಸಂಸ್ಕೃತಿಯ ತಲಗಟ್ಟನ್ನೇ ಅಲ್ಲಾಡಿಸಿಬಿಟ್ಟಿವೆ ಎನ್ನುವುದು ಅದರಲ್ಲಿ ಮುಖ್ಯವಾದದ್ದು.
ಒಂದು ಹಂತದಲ್ಲಿ ಪ್ರತಿಮೆ ಎನ್ನುವುದು ಧಾರ್ಮಿಕ ಪ್ರಭಾವಳಿಯನ್ನು ಸೃಷ್ಟಿಸಿ ಪ್ರವಾಸ, ದೇವಸ್ಥಾನ, ತೀರ್ಥಯಾತ್ರೆ, ಪಾವಿತ್ರ್ಯತೆ ಇತ್ಯಾದಿಗಳಿಗೆ ಬಲವನ್ನು ಒದಗಿಸಿದ್ದವು. ಆ ಪ್ರತಿಮೆಯನ್ನು ತಂತ್ರಜ್ಞಾನದ ಸಹಾಯದಿಂದ ಎಷ್ಟು ಸಂಖ್ಯೆಯಲ್ಲಿ ಬೇಕಾದರೂ ಒದಗಿಸುವ ಸಾಮರ್ಥ್ಯ ಬಂದಾಗ ಆ ಪ್ರಭಾವಳಿ ಒಡೆದದ್ದಷ್ಟೇ ಅಲ್ಲ, ಕಲೆಯ ಉದ್ದೇಶ, ಅದರ ಸಾಮಾಜಿಕ ಅರ್ಥ, ಎಲ್ಲವೂ ಬದಲಾಗಿ ಹೋದವು. ನಿಶ್ಚಿತ ನೆಲೆಯಲ್ಲಿ ತಳವೂರಿ ನಿಂತ ಧಾರ್ಮಿಕ ಪ್ರತಿಮೆಗಳು ಅಲ್ಲಿಲ್ಲಿಯ ಮ್ಯೂಸಿಯಂಗಳಿಗೆ ಪ್ರಯಾಣಿಸಿ ಪ್ರದರ್ಶನಕ್ಕೆ ಒಳಪಟ್ಟಾಗ ಒಂದು ಸಾಮಾಜಿಕ ಪಲ್ಲಟವೇ ನಡೆದಿತ್ತು.
ಅದಕ್ಕಿಂತ ಹೆಚ್ಚಾಗಿ ಆ ಪ್ರಭಾವಳಿಯ ನಷ್ಟವನ್ನು ರಾಜಕೀಯವಾಗಿ ಹೇಗೆ ಬಳಸಿಕೊಳ್ಳಲಾಗುತ್ತದೆ ಎನ್ನುವುದನ್ನು ಬೆಂಜಮಿನ್ ಅತ್ಯಂತ ಕಳಕಳಿಯಲ್ಲಿ ನಿರೂಪಿಸಿದ್ದ. ಫ್ಯಾಸಿಸ್ಟ್ ಶಕ್ತಿಗಳು ಬಡತನದಂತಹ ಆರ್ಥಿಕ ಅಸಮಾನತೆಯ ಪ್ರಶ್ನೆಯನ್ನು ಅತ್ತ ತಳ್ಳಿ ಘೋರವಾದ ವಿದ್ಯಮಾನಗಳಿಗೆ ಸಹ ಒಂದು ಸೌಂದರ್ಯಾತ್ಮಕ ಆಯಾಮವನ್ನು ಕೊಟ್ಟು ಮರುಳು ಮಾಡುವ ಹುನ್ನಾರಕ್ಕೆ ತಂತ್ರಜ್ಞಾನ ಸಹಾಯ ಮಾಡಿತು. ಆಗಬೇಕಾಗಿದ್ದು ಅದಲ್ಲ. ಪ್ರಭಾವಳಿಯನ್ನು ಒಡೆಯುವ ಮೂಲಕ ತಂತ್ರಜ್ಞಾನ ಉಳ್ಳವರ, ಬಲಿಷ್ಠರ, ಮತ್ತು ಕಲೆಯ ರಾಜಕೀಯವನ್ನು ಬಿಚ್ಚಿಡಬೇಕಿತ್ತೆ ಹೊರತು ರಾಜಕೀಯದ ಘೋರವನ್ನು ಕಲೆಯಿಂದ ಮುಚ್ಚಿ ಹಾಕಿ ಮರುಳು ಮಾಡಬಾರದಿತ್ತು.

ಇರಲಿ, ಮಾತು-ಶಬ್ದ-ದೃಶ್ಯ ಇತ್ಯಾದಿ ಹಲವಾರು ಹಾದರಗಳ ಅತಿಯಲ್ಲಿ ಮುಳುಗಿ ಹೋಗಿರುವ ನಮಗೆ ಇಂದಿನ ಯುಗದಲ್ಲಿ ತಂತ್ರಜ್ಞಾನವನ್ನು ರಾಜಕೀಯ ಹೇಗೆ ಬಳಸಿಕೊಳ್ಳುತ್ತಿದೆ ಎಂಬುದಕ್ಕೆ ಬೆಂಜಮಿನ್ ಲೇಖನ ಒಂದು ಸಹಪಠ್ಯ ಅಷ್ಟೇ. ಸಾಮಾನ್ಯ ಮಂದಿಯ ನಡುವೆ ಬಾಂಧವ್ಯ ಬೆಳೆದು ಬದುಕು ಗಟ್ಟಿಯಾಗುವ ಬದಲು ಉಳ್ಳವರ, ಫ್ಯಾಸಿಸ್ಟರ ಕುತಂತ್ರಗಳಿಗೆ ಅದು ಒದಗಿ ಬಂದು ಅನ್ಯಾಯದ ವಿರುದ್ಧ ದನಿಯೆತ್ತುವವರನ್ನು ಇಲ್ಲವಾಗಿಸುವುದು ಒಂದು ಮಹಾವ್ಯಂಗ್ಯವಲ್ಲದೆ ಮತ್ತೇನು? ಕನೆಕ್ಟಿವಿಟಿ ಎಂಬ ಆವಿಷ್ಕಾರ ಯಾರನ್ನು ಕನೆಕ್ಟ್ ಮಾಡಿದೆ? ಈ ಕನೆಕ್ಟಿವಿಟಿಯ ಯುಗದಲ್ಲಿಯೇ ಸಾಮಾಜಿಕ ಒಂಟಿತನ, ಖಿನ್ನತೆಗಳು ಗ್ಲೋಬಿನಾದ್ಯಂತ ಯಾಕೆ ಬೆಚ್ಚಿಬೀಳಿಸುವಷ್ಟು ಪ್ರಮಾಣದಲ್ಲಿ ಬೆಳೆದಿವೆ?
***
ಬೌದ್ಧಿಕ ಋಣ
ಎ. ಎನ್. ಮೂರ್ತಿರಾವ್. ಸಮಗ್ರ ಲಲಿತ ಪ್ರಬಂಧಗಳು. ಬೆಂಗಳೂರು: ಕನ್ನಡ ಸಂಘ, ಕ್ರೈಸ್ಟ್ ಕಾಲೇಜ್. ೧೯೮೮. ‘ಕ್ಲೀಷಾಪ್ರವೀಣರ ಸಾಕ್ಷ್ಯ’. ಪುಟಗಳು, ೧೦೬-೧೧೩.
Walter Benjamin. ‘A Work of Art in the Age of Mechanical Reproduction’. Illuminations: Essays and Reflections. Hannah Arendt (ed). 1968.
https://archive.org/details/illuminations0000benj_p3m7


