ಜನಪದ, ಪಠ್ಯ, ದೃಶ್ಯ ಹೀಗೆ ಮಾಧ್ಯಮ ಯಾವುದೇ ಇದ್ದರೂ ವೀರಗಾಥೆ ಎಂಬ ಪ್ರಕಾರ ಸರಾಗವಾಗಿ ಸಾಗುವುದನ್ನು ಬೇಡುತ್ತದೆ. ಚೆನ್ನಮ್ಮನ ಕಥಾನಕ ಸಹ ಅದಕ್ಕೆ ಹೊರತಾಗಿಲ್ಲ. ಎಲ್ಲವನ್ನೂ ಕಳೆದುಕೊಂಡ ಚೆನ್ನಮ್ಮ ಬಂಧನದಲ್ಲಿ ಐದು ವರ್ಷ ಕಳೆದು ಸಾವನ್ನಪ್ಪುತ್ತಾಳೆ. ಕಿತ್ತೂರು ಮತ್ತು ಚೆನ್ನಮ್ಮ ತದನಂತರದಲ್ಲಿ ದೇಶದಲ್ಲೆಲ್ಲಾ ಹಬ್ಬಿದ ಸ್ವಾತಂತ್ರ್ಯ ಹೋರಾಟದ ಮುಂದಾಳುಗಳೆಂದು ಸ್ತುತಿಸಲಾಗಿದೆ. ರಾಷ್ಟ್ರೀಯ ಹೋರಾಟದಲ್ಲಿ ಚೆನ್ನಮ್ಮ ಧ್ರುವತಾರೆಯಂತೆ ಮಿನುಗುತ್ತಿರುತ್ತಾಳೆ ಎಂದು ಹೊಗಳಲಾಗಿದೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಮೂವತ್ತಾರನೆಯ ಬರಹ
ಐತಿಹಾಸಿಕ ಚಿತ್ರದ ಒಬ್ಬ ‘ನಾಯಕಿ’ ಸಮಾಜದಲ್ಲಿರುವ ‘ಹೆಣ್ತನ’ದ ಪರಿಕಲ್ಪನೆಗಳಿಂದ ಎಷ್ಟರ ಮಟ್ಟಿಗೆ ಮುಕ್ತಳಾಗಿರಲು ಸಾಧ್ಯ? ಹ್ಯಾನ್ಸೆನ್ ಎಂಬ ಚಿಂತಕಿ ಹೇಳುವಂತೆ ಅಲ್ಲಿ ಅವಳಿಗೆ ಲೈಂಗಿಕತೆಯ ಹಂಗೇ ಇಲ್ಲ. ಎಡ್ವರ್ಡ್ಸ್ ಅವರ ಪ್ರಕಾರ ಚಾರಿತ್ರಿಕ ನಾಯಕ ಮತ್ತು ನಾಯಕಿಯರನ್ನು ಗ್ರಹಿಸುವ ಮತ್ತು ಅಭಿವ್ಯಕ್ತಿಸುವ ರೀತಿಯಲ್ಲಿ ಈ ಕೆಳಗಿನ ಪ್ರಮುಖ ವ್ಯತ್ಯಾಸಗಳಿವೆ:
ನಾಯಕ ಪಾತ್ರಕ್ಕೆ ತಾನೇ ತಾನಾಗಿ ಇರುವ ಒಂದು ರೀತಿಯ ಪ್ರಾಥಮಿಕತೆ ಇದೆ. ನಾಯಕಿಯದು ಏನೇ ಆದರೂ ನಂತರ ಬರುವ ಪಾತ್ರ. ಅವಳೊಬ್ಬಳೇ ಇದ್ದರೂ ಒಂದು ರೀತಿಯ ದ್ವಿತೀಯತೆಯನ್ನು ಅಂತರ್ಗತವಾಗಿಸಿಕೊಂಡಂತೆ ಇರುವ ಪಾತ್ರ. ಅವನು ಕಥಾನಕದಲ್ಲಿ ಅವಳಿಲ್ಲದೆಯೂ ಹೊಳೆಯಬಲ್ಲ. ಅವಳ ಪಾತ್ರ ಹಾಗಿರುವುದಿಲ್ಲ. ಅವನು ತನ್ನತನವುಳ್ಳ ‘ಬಂಧ’. ಅವಳು ಕೇವಲ ಅನುಬಂಧ. (ಪು. 55-56).
ಈ ತಾತ್ವಿಕ ಚೌಕಟ್ಟಿನ ಹಿನ್ನೆಲೆಯಲ್ಲಿ 1961ರಲ್ಲಿ ತೆರೆಕಂಡ ‘ಕಿತ್ತೂರು ಚೆನ್ನಮ್ಮ’ ಚಿತ್ರವನ್ನು ಅರ್ಥ ಮಾಡಿಕೊಳ್ಳಲು ಇಲ್ಲಿ ಪ್ರಯತ್ನಿಸಲಾಗಿದೆ.
*****
ಕಿತ್ತೂರು ಚೆನ್ನಮ್ಮ ಬದುಕಿದ್ದು 1778-1829 ರಲ್ಲಿ. ಚಲನಚಿತ್ರ 1951ರಲ್ಲಿ ಪ್ರಕಟವಾದ ಅ ನ ಕೃಷ್ಣರಾಯರ ಅದೇ ಶೀರ್ಷಿಕೆಯ ಒಂದು ರೇಡಿಯೋ ನಾಟಕವೂ ಸೇರಿದಂತೆ ಹಲವಾರು ಮೂಲಗಳಿಂದ ತನ್ನ ಕಥೆಯನ್ನು ಪಡೆದುಕೊಂಡಿದೆ. ಸಿನೆಮಾದ ಪ್ರಾರಂಭದಲ್ಲೇ ‘ಕಿತ್ತೂರು ಚೆನ್ನಮ್ಮರಾಣಿಯ ಬಗ್ಗೆ ದೊರೆತ ಇತಿಹಾಸ ಆಧಾರಗಳೊಂದಿಗೆ ಆ ಕಾಲಕ್ಕನುಗುಣವಾಗಿ ಕೆಲವು ಕಾಲ್ಪನಿಕ ಸಂದರ್ಭಗಳನ್ನು ಕಲಾತ್ಮಕವಾಗಿ ಮೂಲಕಥೆಗೆ ಅಳವಡಿಸಿಕೊಂಡಿರುತ್ತೇವೆ’ ಎಂಬ ಹೇಳಿಕೆಯನ್ನು ನೋಡುತ್ತೇವೆ.
ನಂತರ ತೆರೆಯ ಮೇಲೆ ಕಿತ್ತೂರು ಚೆನ್ನಮ್ಮ ಎಂಬ ಶೀರ್ಷಿಕೆ ಮೂಡುವಾಗ ಬಂದೂಕಿನ ಢಮಾರ್ ಢಮಾರ್ ಕೇಳಿಸುತ್ತದೆ. ಹಿನ್ನೆಲೆಯಲ್ಲಿ ‘ಸ್ವಾಮಿದೇವನೆ ಲೋಕಪಾಲನೆʼ ಎಂಬ ಶಾಲಾ ಪ್ರಾರ್ಥನೆಯ ಗೀತೆ ಕೇಳಿಸುತ್ತಾ ವೀಕ್ಷಕರನ್ನು ತರಗತಿಯ ದೃಶ್ಯವೊಂದಕ್ಕೆ ತಯಾರು ಮಾಡುತ್ತದೆ. ಚಿತ್ರ ಚಾರಿತ್ರಿಕ ತಪ್ಪೊಂದನ್ನು ಸರಿ ಮಾಡುವ ಉದ್ದೇಶವನ್ನು ಹೊಂದಿರುವುದರಿಂದ ಶೈಕ್ಷಣೀಯ ದೃಶ್ಯವನ್ನು ಆಯ್ದುಕೊಂಡಿರುವುದು ಸೂಕ್ತವೇ ಅಂತನ್ನಿಸುತ್ತದೆ.
ಪ್ರಾರ್ಥನೆ ಮುಗಿಯುತ್ತದೆ. ಹುಡುಗನೊಬ್ಬ ಅವಸರದಿಂದ ಪ್ರವೇಶಿಸುತ್ತಾನೆ. ಮಕ್ಕಳ ಹಣೆಯ ಮೇಲಿನ ವಿಭೂತಿ ಮತ್ತು ಅವರಾಡುವ ಭಾಷೆ ಉತ್ತರ ಕರ್ನಾಟಕದ ಪ್ರಾಂತ್ಯವನ್ನು ಬಿಂಬಿಸುತ್ತದೆ. ದೃಶ್ಯದ ಸಂಭಾಷಣೆ ಹೀಗಿದೆ:
ಹುಡುಗ: ನಮಸ್ಕಾರ ಮಾಸ್ತರ್ರೇ.
ಮಾಸ್ತರ್: ಏನಪ್ಪಾ ಇಷ್ಟು ಹೊತ್ತಾಗಿ ಬಂದೀ?
ಹು: ನಮ್ಮ ಪಕ್ಕದ ಮನೆಯಾಗೆ ಅದಾನೆ ನೋಡ್ರೀ ಗಂಗೋಜಿ ಅಂತಾ… ಅವಗಾ ನಮ್ಮಣ್ಣಗಾ ಖಂಡಾಪಟ್ಟಿ ಜಗಳ ಆತ್ರೀ…
ಮಾ: ಯಾಕಪ್ಪಾ?
ಹು: ಅದು ಯಾವಾಗ್ಲೂ ಇರೋದೇ ಬಿಡ್ರೀ… ನಮ್ಮ ಅವರ ಮನೆ ಮಧ್ಯದಾಗ ಒಂದು ಗೋಡೆ ಇತ್ರೀ, ಅದು ನಮ್ಮದು ಅಂತಾನವ. ನಾವು ಅದು ನಮ್ಮದಂತೇವೆ, ಇಷ್ಟೇ ನ್ಯಾಯ.
(ಮಾಸ್ತರ್ ಕೆಲವು ಗಳಿಗೆ ಚಿಂತಾಮಗ್ನರಾಗಿದ್ದು ಕೊನೆಗೆ ನಿಟ್ಟುಸಿರು ಬಿಡುತ್ತಾ ಹೇಳುತ್ತಾರೆ)
ಮಾ: ಈ ಅಂತಃಕಲಹ ನಮ್ಮಲ್ಲಿ ತಪ್ಪದ ಹೊರತು ಕನ್ನಡದ ಮಕ್ಕಳು ಸುಖವಾಗಿ ಬಾಳಲ್ಲ. ಕೇಳಿ, ಇದು ನಮ್ಮಲ್ಲಿ ಮಾತ್ರವಲ್ಲ, ಇಡೀ ಪ್ರಪಂಚದಲ್ಲಿ ಆವರಿಸಿರುವ ಅಂಟುಜಾಡ್ಯ. ಇದನ್ನು ತೊಡೆದು ಹಾಕಿ ವಿಶ್ವಪ್ರೇಮದಿಂದ ಭಾರತಕ್ಕೆ ಸ್ವಾತಂತ್ರ್ಯ ಗಳಿಸಿಕೊಡಲು ಪ್ರಯತ್ನಪಟ್ಟವರು ಯಾರು ಹೇಳಿ?
ಮಕ್ಕಳು ಒಕ್ಕೊರಲಿನಲ್ಲಿ: ಗಾಂಧೀಜೀ… ಗಾಂಧೀಜೀ
ಮಾ: ಹೌದು, ಹೌದು. ಆ ಮಹಾತ್ಮನ ದೆಸೆಯಿಂದ ಇಂದು ನಾವೆಲ್ಲರೂ ಸ್ವತಂತ್ರರಾಗಿದ್ದೇವೆ. ಆದರೆ ಈ ಸ್ವಾತಂತ್ರ್ಯವೇ ಸ್ವರ್ಗ ಎನ್ನುವ ಮೂಲಮಂತ್ರನಾ ಭಾರತದಲ್ಲೇ ಮೊಟ್ಟ ಮೊದಲು ಒತ್ತಿ ಹೇಳಿ ಇಂಗ್ಲೀಷರ ಪ್ರಭುತ್ವವನ್ನು ಕೆಚ್ಚೆದೆಯಿಂದ ಎದುರಿಸಿದ ವೀರ ಮಹಿಳೆ ಯಾರು? ಹೇಳಿ ನೋಡೋಣಾ…
(ಮಕ್ಕಳು ಒಟ್ಟಾಗಿ ಎದ್ದು ನಿಂತು ಕೈ ಬೀಸುತ್ತಾ ‘ಝಾನ್ಸಿರಾಣಿ ಲಕ್ಷ್ಮೀಬಾಯಿ…’ ಎಂದು ಕಿರುಚುತ್ತಾರೆ)
ಮಾ: ಅಲ್ಲ, ಅಲ್ಲ. ಅದಕ್ಕೂ ಮೊದಲು ಕರ್ನಾಟಕದ ವೀರರಾಣಿಯೊಬ್ಬಳು ಈ ಸ್ವಾತಂತ್ರ್ಯಕ್ಕಾಗಿಯೇ ತನ್ನ ಬಲಿದಾನ ಮಾಡಿದ್ದಾಳೆ.
(ಹುಡುಗನೊಬ್ಬ ಎದ್ದು ನಿಂತು ಕೇಳುತ್ತಾನೆ)
ಯಾರು ಸಾರ್ ಅದು? ನಾವು ಹಾಗೇನು ಕೇಳೆ ಇಲ್ವಲ್ಲ ಸಾರ್? ಹೇಳಿ ಸಾರ್!
ಮಾ: ಹೇಳ್ತೇನೆ, ಚೆನ್ನಾಗಿ ಕೇಳಿ. ಆಕೆಯೇ ಕಿತ್ತೂರ ವೀರ ರಾಣಿ ಚೆನ್ನಮ್ಮ. ಝಾನ್ಸಿ ರಾಣಿಯ ಮೂವತ್ತ ಮೂರು ವರ್ಷಗಳ ಮೊದಲೇ ಅಂದರೆ 1824ರಲ್ಲಿ ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆಯ ಕಿತ್ತೂರು ಸಂಸ್ಥಾನದಲ್ಲಿ ಈ ಸ್ವಾತಂತ್ರ್ಯ ಪ್ರೇಮದ ವೀರ ಕಹಳೆ ಮೊಳಗಿತು. ಅಂದು ಕಿತ್ತೂರು ಸಂಸ್ಥಾನ ವೈಭವ ವೀರತ್ವಗಳಲ್ಲಿ ವಿಜಯನಗರವನ್ನು ಹೋಲುವಂತಿತ್ತು. 1758ರಲ್ಲಿ ಮಲ್ಲಸರ್ಜರೆಂಬ ದೇಸಾಯರು ಪಟ್ಟಕ್ಕೆ ಬಂದರು. ಅತ ಪಟ್ಟಕ್ಕೆ ಬಂದ ಕೆಲವೇ ದಿನಗಳಲ್ಲಿ ಟಿಪ್ಪು ಸುಲ್ತಾನನು ಆ ಸಂಸ್ಥಾನದ ಮೇಲೆ ದಂಡೆತ್ತಿ ಬಂದು ಮಲ್ಲಸರ್ಜದೊರೆಯನ್ನು ಸೆರೆ ಹಿಡಿದನು. ಅವರನ್ನು ತನ್ನ ರಾಜಧಾನಿಯಾದ ಶ್ರೀರಂಗಪಟ್ಟಣದಲ್ಲಿರುವ ದರಿಯಾ ದೌಲತ್ ಅರಮನೆಗೆ ಸಂಕೋಲೆಗಳಿಂದ ಬಂಧಿಸಿ ಎಳೆ ತರಿಸಿದ. …
ತಕ್ಷಣವೇ ದೃಶ್ಯ ಬದಲಾಗಿ ಮಲ್ಲಸರ್ಜ ಸಂಕೋಲೆಗಳ ಬಂಧನದಲ್ಲೇ ಹುಲಿಯಂತೆ ಹೆಜ್ಜೆ ಇಡುತ್ತಾ ಟಿಪ್ಪುವಿನ ಬಳಿಗೆ ಸಾಗುವುದು ತೆರೆಯ ಮೇಲೆ ಕಾಣಿಸುತ್ತದೆ.
ಚೆನ್ನಮ್ಮಳ ಗಂಡ ಮಲ್ಲಸರ್ಜ 1782ರಿಂದ 1816ರವರೆಗೆ ಕಿತ್ತೂರನ್ನು ಆಳಿದ ಮಾಂಡಲಿಕ. ಸದಾಶಿವ ಒಡೆಯಾರರ ಚಾರಿತ್ರಿಕ ಕಥನದಲ್ಲಿ ಹೇಳಿರುವಂತೆ ಅವನ ಬಗ್ಗೆ ಲಭ್ಯವಿರುವ ಎಲ್ಲ ಚಾರಿತ್ರಿಕ ಮೂಲಗಳು, ಲಾವಣಿಗಳು ಮತ್ತು ಹಾಡುಗಳಿಂದ ಅವನ ಕಾಲ ಸಂಪದ್ಭರಿತವಾಗಿತ್ತು ಎಂದು ತಿಳಿದು ಬರುತ್ತದೆ. ಕಿತ್ತೂರು ಸಂಸ್ಥಾನದ ಮಾಂಡಲಿಕರಲ್ಲಿ ಅವನು ಅತ್ಯಂತ ಹೆಸರುವಾಸಿಯಾದವನು.
ಟಿಪ್ಪು ಆಗಿನ ಕಾಲದ ಪ್ರಬಲ ರಾಜ. ಸೆರೆಯಾದ ಮಲ್ಲಸರ್ಜ ಮತ್ತು ಟಿಪ್ಪುವಿನ ನಡುವೆ ಮಾತಿನ ಚಕಮಕಿ ನಡೆಯುತ್ತದೆ. ಮಲ್ಲಸರ್ಜನ (ರಾಜ್ ಕುಮಾರ್) ವೀರಾವೇಶ ಮಾತುಗಳಲ್ಲಿ ಕನ್ನಡ, ಕನ್ನಡತನ, ಇತ್ಯಾದಿಗಳು ವಿಜೃಂಭಿಸುತ್ತವೆ. ಟಿಪ್ಪು ಏಕವಚನದಲ್ಲಿ ಸಂಭೋಧಿಸಲ್ಪಡುವುದಷ್ಟೇ ಅಲ್ಲ, ಮಹಾ ಹೃದಯಹೀನ ಮುಸ್ಲಿಂ ದೊರೆಯೆಂದು ಜರೆಯಲ್ಪಟ್ಟು ‘ಅನ್ಯ’ವಾಗುತ್ತಾನೆ. ಕಪ್ಪವನ್ನು ಕೊಡಲು ಒಪ್ಪದ ಮಲ್ಲಸರ್ಜನನ ಧಾರ್ಷ್ಟ್ಯ ಟಿಪ್ಪುವಿನಿಂದ ‘ಅದ್ಭುತ ಕನ್ನಡ ಪ್ರೇಮ’ ಎಂಬ ಪ್ರಶಂಸೆಗೆ ಒಳಗಾಗುತ್ತದೆ.
ಆದರೇನು? ‘ವೀರರೆಂದೂ ನನ್ನ ಸ್ನೇಹಿತರು, ಒಂದು ತಾಯಿಯ ಮಕ್ಕಳಂತೆ ಬದುಕೋಣ, ನಿನಗೆ ತಿಳಿದಷ್ಟು ಕಪ್ಪ ಕೊಟ್ಟರೆ ಸಾಕು’ ಎಂದು ಸ್ನೇಹಹಸ್ತ ಚಾಚುವ ಟಿಪ್ಪು ತನ್ನ ಪ್ರಯತ್ನದಲ್ಲಿ ಯಶಸ್ವಿಯಾಗುವುದಿಲ್ಲ. ಬದಲಿಗೆ ‘ಕಾಗೆ ಗಂಗಾ ಸ್ನಾನ ಮಾಡಿದರೆ ಹಂಸವೇ?’ ಎಂಬ ಜರೆತಕ್ಕೆ ಒಳಗಾಗುತ್ತಾನೆ. ಕೊನೆಗೆ ಮಲ್ಲಸರ್ಜ ಸೆರೆಮನೆಗೆ ತಳ್ಳಲ್ಪಡುವುದು ತನ್ನ ಅಪ್ರತಿಮ ಕನ್ನಡ ಪ್ರೇಮಕ್ಕೆ, ಕನ್ನಡಿಗರಿಗೆ ವಿಶಿಷ್ಟವಾದ ಸ್ವಾಭಿಮಾನಕ್ಕೆ ಎಂದು ಸಿನಿಮಾ ಸಾರುತ್ತದೆ.
ಸದಾಶಿವ ಒಡೆಯಾರ್ ಅವರ ರಾಣಿ ಚೆನ್ನಮ್ಮನ ಬದುಕಿನ ಕಥಾನಕದಲ್ಲಿ ಮಲ್ಲಸರ್ಜ ಮತ್ತು ಚೆನ್ನಮ್ಮಳ ಮೊದಲ ಭೇಟಿಯ ಪ್ರಸ್ತಾಪ ಬರುತ್ತದೆ. ಈ ಕಥಾನಕ ಹಲವಾರು ಜಾನಪದ ಹಾಡುಗಳು ಮತ್ತು ಕವನಗಳನ್ನು ಆಧರಿಸಿದ್ದು. ಕಥೆ ಹೀಗೆ ಸಾಗುತ್ತದೆ:
ಚೆನ್ನಮ್ಮನ ತಂದೆ ಧೂಳಪ್ಪಗೌಡ ದೇಸಾಯಿಯನ್ನು ಭೇಟಿ ಮಾಡಿದ ಮಲ್ಲಸರ್ಜ ಬ್ರಿಟಿಷ್, ಪೋರ್ಚುಗಿಸ್, ಮತ್ತು ಫ್ರೆಂಚರ ವಿರೋಧವನ್ನು ಕಟ್ಟಿಕೊಂಡ ದಕ್ಕಣಿ ಪ್ರಾಂತ್ಯದ ಎಲ್ಲ ದೇಸಾಯಿಗಳನ್ನು ಅವರ ಉಳಿವಿಗೋಸ್ಕರವೇ ಒಟ್ಟುಗೂಡಿಸುವ ಅಗತ್ಯದ ಬಗ್ಗೆ ಮಾತಾಡಿದ ನಂತರ ಚೆನ್ನಮ್ಮಳನ್ನು ತಾನು ಅಕಸ್ಮಾತ್ತಾಗಿ ಭೇಟಿ ಮಾಡಿದ್ದಾಗಿಯೂ ತನಗೆ ಅವಳನ್ನು ಮದುವೆಯಾಗುವ ಇಚ್ಛೆ ಇರುವುದಾಗಿಯೂ ಸೂಚಿಸುತ್ತಾನೆ. ನಂತರ ಚೆನ್ನಮ್ಮ ಅವನನ್ನು ಸಂಧಿಸಿದಾಗ ತನಗೆ ಈಗಾಗಲೇ ಒಂದು ಮದುವೆಯಾಗಿರುವ ಬಗ್ಗೆ ಹೇಳುತ್ತಾನೆ. ರುದ್ರಮ್ಮ ಒಬ್ಬ ಪ್ರತಿಭಾವಂತ ಸಾಹಸಿ ಹೆಣ್ಣೆಂದೂ ಹೊಗಳುತ್ತಾನೆ.
ಚೆನ್ನಮ್ಮ ಮದುವೆಯಾಗಲು ಒಪ್ಪುತ್ತಾಳೆ. ಹಿರಿಯ ರಾಣಿ ರುದ್ರಮ್ಮ ತನ್ನ ಅಕ್ಕನಂತೆ. ಅವಳನ್ನು ಯಾವತ್ತಿಗೂ ಅಸಂತೋಷಕ್ಕೆ ಗುರಿ ಮಾಡುವುದಿಲ್ಲ ಎಂದು ಮಾತು ಕೊಡುತ್ತಾಳೆ. ಕಾಗತಿಯಲ್ಲಿ ಸಾಂಗವಾಗಿ ಮದುವೆ ನಡೆದು ಮಲ್ಲಸರ್ಜ ಕಿತ್ತೂರಿಗೆ ಮರಳಿದಾಗ ಜೊತೆಯಲ್ಲಿ ಜಾಣೆ, ಧೀರೆ, ಸುಂದರಿ ಚೆನ್ನಮ್ಮ ಇರುತ್ತಾಳೆ (ಪು. 29).
ಸಿನಿಮಾ ಕಥೆ ಬೇರೆಯೇ. ಮದುವೆಯಾಗುವ ಇಚ್ಛೆಯನ್ನು ಮೊದಲು ತೋರಿಸುವವಳು ಚೆನ್ನಮ್ಮಳೇ. ಮಲ್ಲಸರ್ಜ ಕಿತ್ತೂರು ಸೇರುವ ಹೊತ್ತಿಗೆ ಧೂಳಪ್ಪಗೌಡ ದೇಸಾಯಿಯ ಪತ್ರ ಕಾಯುತ್ತಿರುತ್ತದೆ. ತನ್ನ ಮಗಳು ಮಲ್ಲಸರ್ಜ ದೊರೆಯನ್ನು ಮದುವೆಯಾಗದಿದ್ದರೆ ಬಾಳೆಲ್ಲಾ ಒಂಟಿಯಾಗಿ ಇದ್ದುಕೊಂಡು ಕಿತ್ತೂರು ಸಂಸ್ಥಾನದ ಸೇವೆಯಲ್ಲಿ ಕಳೆಯುವ ಪ್ರತಿಜ್ಞೆ ಮಾಡಿರುವಳೆಂದು ಪತ್ರ ಹೇಳುತ್ತದೆ. ಸಂದಿಗ್ಧವನ್ನು ಸಿನೀಮಯವಾಗಿ ಪರಿಹರಿಸುವುದು ಮೊದಲ ಹೆಂಡತಿ ರುದ್ರಮ್ಮಳ ಮಧ್ಯವರ್ತಿತನ. ‘ಹೆಣ್ಣಿನ ಆಸೆ ಆಕಾಂಕ್ಷೆಗಳ ಆಳ ನೊಂದ ಹೆಣ್ಣಿಗಲ್ಲದೆ ಜಗತ್ತಿನಲ್ಲಿ ಮತ್ತಾರಿಗೂ ಗೊತ್ತಾಗಲಾರದು.’
ಯಾಕೆ ಈ ಬದಲಾವಣೆ? ಅರವತ್ತರ ದಶಕದ ರಾಜ್ ಕುಮಾರ್ ಕನ್ನಡ ಸಮುದಾಯದ ನೈತಿಕತೆಯನ್ನೇ ರೂಪಿಸುತ್ತಿದ್ದಂತಹ ಶಕ್ತಿ. ಅಂತಹ ಶಕ್ತಿ ಹೋದ ಕಡೆಯಲ್ಲಿ ಇನ್ನೊಂದು ಮದುವೆ ಮಾಡಿಕೊಂಡು ಅವಳ ಜೊತೆ ಅರಮನೆಗೆ ಹಿಂತಿರುಗುವ ದಾರ್ಷ್ಟ್ಯ ತೋರಿಸಬಾರದು! ಅದರ ಬದಲು ಹೆಣ್ಣಿಗೇ ಆ ಧೈರ್ಯವನ್ನು ಆರೋಪಿಸುವುದು ಕ್ಷೇಮ. ಆ ಹೆಣ್ಣಿನಲ್ಲಿ ಅಪರೂಪದ ಧೈರ್ಯ, ಈ ಹೆಣ್ಣಿನಲ್ಲಿ ಎಂದಿನ ಕ್ಷಮಾಶೀಲತೆ!
ಒಂದು ವಿಷಯವನ್ನಂತೂ ಇಲ್ಲಿ ಸ್ಪಷ್ಟಪಡಿಸಬೇಕು. ಇದು ಚಲನಚಿತ್ರದಲ್ಲಿ ನಾ ಕಂಡ ತಪ್ಪು ಎಂಬ ಪತ್ತೆದಾರಿಕೆ ಉಡಾಫೆಯಲ್ಲ. ಈ ರೀತಿಯ ಬದಲಾವಣೆಯನ್ನು ಬೇಡುವ ಸಾಮಾಜಿಕ ಸಂದರ್ಭಗಳು ಯಾವ ಬಗೆಯವು ಎಂದು ಅರ್ಥ ಮಾಡಿಕೊಳ್ಳುವ ಪ್ರಯತ್ನ ಅಷ್ಟೆ.
ಒಬ್ಬಳೇ ಮಗಳಾದ ಚೆನ್ನಮ್ಮ ಹೊರಟು ಹೋದರೆ ಕಾಗತಿಯ ಗತಿಯೇನು? ಕಿತ್ತೂರಿಗೆ ಸೇರ್ಪಡೆಯಾಗಬಹುದು. ಚೆನ್ನಮ್ಮಳೇ ಆ ನಿರ್ಧಾರ ಮಾಡಿದ್ದಾದರೆ ಅದರಲ್ಲಿ ವಿಶೇಷ ರಾಜಕೀಯ ದೂರದರ್ಶಿತನದ ಸುಳುವಿತ್ತೆ?
ಆದರೆ ಹೆಣ್ಣು ಮದುವೆಯಾಗದೆ ಗತಿಯಿಲ್ಲ. ಚೆನ್ನಮ್ಮ ಬದುಕಿದ್ದ ಹತ್ತೊಂಬತ್ತನೆಯ ಶತಮಾನದ ಮೊದಲ ಭಾಗದಲ್ಲಿ ಇದ್ದ ಈ ಅನಿವಾರ್ಯ ಇಂದಿಗೂ ಬದಲಾಗಿಲ್ಲ. ಮದುವೆಯೇ ಅವಳ ಬದುಕಿನ ಗುರಿ. ರಾಣಿಯಾದರೇನು? ಅದಕ್ಕೋಸ್ಕರವೇ ಜನಪದ ಗೀತೆಗಳನ್ನು ಇಲ್ಲಿ ಬಳಸಿಕೊಳ್ಳಲಾಗುತ್ತದೆ. ಚೆನ್ನಮ್ಮ ಮದುವೆಯಾಗಿ ತೌರುಮನೆ ತೊರೆಯುವಾಗ ಶೋಕವೇ ಮೂರ್ತಿವೆತ್ತ ಹೆಂಗಸರು ಒಟ್ಟಾಗಿ ಹಾಡುತ್ತಾರೆ:
ಆಲಕ್ಕೆ ಹೂವಿಲ್ಲ ಸಾಲಕ್ಕೆ ಕೊನೆಯಿಲ್ಲ
ಜಾಲಿಯ ಮರವು ನೆರಳಲ್ಲ ಮಗಳೆ
ತಾಯಿಯ ಮನೆಯ ಸ್ಥಿರವಲ್ಲ.
ತಾಯಿಯ ಪಟದ ಮುಂದೆ ನಿಂತ ಚೆನ್ನಮ್ಮನಿಗೆ ಆಕೆಯ ಜೀವಂತ ಧ್ವನಿ ಕೇಳಿಸುತ್ತದೆ:
ನೆರೆಮನೆಯ ಸಿರಿದೇವಿ ನೀನಾಗು ಮಗಳೆ
ಮನಿಯಾಗೆ ಭೇದ ಬಗಿಬ್ಯಾಡ
ತುಂಬಿದ ಮುನಿಯ ಒಡಿಬ್ಯಾಡ.
ಹೊಸ್ತಿಲಾಚೆ ಕಾಲಿಡುವ ಮುನ್ನ ಹೆಂಗಸರು ಮತ್ತೆ ಹಾಡುತ್ತಾರೆ:
ಅತ್ತೆಯ ಮನೆಯಲ್ಲಿ ತೊತ್ತಾಗಿ ಇರಬೇಕು
ಹೊತ್ತಾಗಿ ನೀಡಿದರೂ ಉಣಬೇಕು ಮಗಳೆ
ತೌರಿಗೆ ಹೆಸರಾ ತರಬೇಕು.
ಮೂವತ್ತರ ದಶಕದಿಂದ ಅರವತ್ತರ ದಶಕದುದ್ದದ ಕನ್ನಡ ಸಿನೆಮಾದಲ್ಲಿ ಪ್ರಧಾನ ಸ್ತ್ರೀ ಪಾತ್ರಗಳನ್ನು ಸುಧಾರಣಾವಾದಿ ಚಳುವಳಿ ಮತ್ತು ರಾಷ್ಟ್ರೀಯ ಹೋರಾಟಗಳ ಕಾಲದ ‘ಆದರ್ಶ’ಕ್ಕೆ ತಕ್ಕಂತೆ ರೂಪಿಸಲಾಗಿದೆ. Women Writing in India ಸಂಪಾದಕಿಯರಾದ ಥಾರು ಮತ್ತು ಲಲಿತಾ ಗಮನಿಸಿದಂತೆ ಈ ಕಾಲದಲ್ಲಿ ಏಕರೂಪಕ್ಕೊಳಗಾದ ವೈವಿಧ್ಯಮಯ ಭಾರತೀಯ ‘ಸಂಸ್ಕೃತಿ’ (ನವ ಹಿಂದೂಯಿಸಂ) ಹಿಂದೆಂದೂ ಇಲ್ಲದ ಮೇಲ್ಜಾತಿಯ ಬಣ್ಣವನ್ನು ಪಡೆದುಕೊಂಡಿತು. ಹೆಣ್ಣನ್ನು ಈ ಹೊಸ ಭಾರತೀಯ ಸಂಸ್ಕೃತಿಯ ಲಾಂಛನವಾಗಿಸಲಾಯಿತು.

ಅಂತಹಾ ಹೆಣ್ಣು ಹೇಗಿರಬೇಕು? ಶೀಲ, ಲಜ್ಜೆ, ಸಹನೆ, ತ್ಯಾಗ, ಔದಾರ್ಯಗಳೇ ಮೂರ್ತಿವೆತ್ತಂತೆ ಇರಬೇಕು. ಗಂಡನ ಮನಸ್ಸನ್ನು ಅರಿತು ನಡೆಯುವಂತವಳಾಗಿರಬೇಕು. ಕಷ್ಟದ ಸಮಯದಲ್ಲಿ ಅವನಿಗೆ ಆಸರೆಯಾಗಿರಬೇಕು. ಮಕ್ಕಳನ್ನು ಬೆಳೆಸಿ ಸತ್ಪ್ರಜೆಗಳಾಗಿ ಮಾಡುವ ಹೊಣೆ ಅವಳದ್ದು. ಒಟ್ಟಿನಲ್ಲಿ ಅವನು ಅವಳನ್ನು ಪ್ರೀತಿಸಲು ಸಾಧ್ಯವಾಗುವಷ್ಟು ಅರ್ಹಳಾಗಿರಬೇಕು!
ಸಿನೆಮಾದ ಕಿತ್ತೂರಿನ ಚೆನ್ನಮ್ಮನಲ್ಲಿ ಇವೆಲ್ಲವೂ ಇದೆ. ಆಕೆ ಸುಸಂಸ್ಕೃತೆ, ಮಹಾ ಕುಟುಂಬಪ್ರೇಮಿ. ಕತ್ತಿವರಸೆಯಲ್ಲಿ ನಿಪುಣೆ. ಮಾರುವೇಷದಲ್ಲಿ ಗಸ್ತು ತಿರುಗಿ ರಾಜಕೀಯ ಹುನ್ನಾರಗಳನ್ನು ಅರಿಯಬಲ್ಲ ಚಾಣಾಕ್ಷೆ. ರಾಜಕೀಯ ಪಗಡೆಯಲ್ಲೂ ಸಹ ಯಾವ ದಾಳಗಳನ್ನು ಹೇಗೆ ಉರುಳಿಸಬೇಕು ಎನ್ನುವುದನ್ನು ಅರಿತವಳು. ಅಷ್ಟೇ ಅಲ್ಲ, ಹಾಡಲು ಕುಳಿತರೆ ಮಲ್ಲಸರ್ಜ ಮೈಮರೆತು ತಲ್ಲಿನನಾಗಬಲ್ಲ. ಅವಳು ‘ಒಂದು ಕೈಯಲ್ಲಿ ಖಡ್ಗ ಹಿಡಿದ ಚಾಮುಂಡಿ; ಇನ್ನೊಂದು ಕೈಲಿ ವೀಣೆ ಹಿಡಿದ ಸರಸ್ವತಿ’. ಪಾತ್ರಗಳನ್ನು ಅರೆಕ್ಷಣದಲ್ಲಿ ಸಹ ಬದಲಾಯಿಸಬಲ್ಲಳು.
ಆಕೆ ತಾಯಿಯೂ ಹೌದು. ತನ್ನದೇ ಮಗುವನ್ನು ಇನ್ನೂ ಹೆತ್ತಿಲ್ಲದಿದ್ದರೇನು? ರುದ್ರಮ್ಮಳ ಮಗನಿಗೆ ಕತ್ತಿವರಸೆಯನ್ನು ಸಮರ್ಥವಾಗಿ ಕಲಿಸುವ ಗುರು. ಕೊನೆಗೆ ತನ್ನ ಎಳೆಯ ಮಗನನ್ನು ಯುದ್ಧಕ್ಕೆ ಕಳಿಸಿ ಕಳೆದುಕೊಳ್ಳುವ ತ್ಯಾಗಶೀಲೆ, ದುರ್ದೈವಿ ತಾಯಿ.
ಚಿತ್ರದ ಉದ್ದಕ್ಕೂ ಕನ್ನಡ ನಾಡು, ಕನ್ನಡ ಪ್ರಜ್ಞೆ, ಕನ್ನಡಿಗರ ಸಾಹಸ ಇತ್ಯಾದಿ ಉಲ್ಲೇಖಗಳು ಸಾಕಷ್ಟು ಬರುತ್ತವೆ. ಚಲನಚಿತ್ರದ ಮಲ್ಲಸರ್ಜ ಚೆನ್ನಮ್ಮರ ಕಾಳಜಿ ಇರುವುದು ಕೇವಲ ತಮ್ಮ ಸಂಸ್ಥಾನದ ರಕ್ಷಣೆಯಷ್ಟೇ ಅಲ್ಲ. ‘ಭಾರತ’ ‘ರಾಷ್ಟ್ರ’ ಇತ್ಯಾದಿಗಳು ಸಹ ಅಲ್ಲಿ ಅಷ್ಟೇ ಮುಖ್ಯ. ಆ ಕಾಲದಲ್ಲಿ (ಸಿಪಾಯಿ ದಂಗೆಯ ಮೊದಲೇ) ದೇಶ, ರಾಷ್ಟ್ರ ಎಂಬ ಪರಿಕಲ್ಪನೆಗಳು ಅಷ್ಟು ಬಲವಾಗಿದ್ದವೇ ಎಂಬ ವಾಸ್ತವತೆಯ ಬಗೆಗಿನ ಪ್ರಶ್ನೆ ಇಲ್ಲಿ ಅಪ್ರಸ್ತುತ.
ಮತ್ತೊಂದು ಕುತೂಹಲಕರ ಅಂಶವೆಂದರೆ ಈ ಕನ್ನಡ ರಾಷ್ಟ್ರೀಯತೆಯ ಬಗ್ಗೆ ಚೆನ್ನಮ್ಮನ ಹೊರತು ಬೇರಾವ ಸ್ತ್ರೀಪಾತ್ರವೂ ಚಕಾರವೆತ್ತುವುದಿಲ್ಲ. ಚೆನ್ನಮ್ಮ ಮೊಟ್ಟ ಮೊದಲ ಬಾರಿಗೆ ಕನ್ನಡದ ದನಿಯೆತ್ತುವುದು ರುದ್ರಮ್ಮನ ಮಗನಿಗೆ ಕತ್ತಿವರಸೆ ಹೇಳಿಕೊಡುವಾಗ: ‘ಅವನನ್ನು ಕನ್ನಡದ ಕಲಿಯನ್ನಾಗಿ ಮಾಡುತ್ತೇನೆ, ನೋಡುತ್ತಿರಿ.’
ಆದರೆ ಸಾಯುವ ತನಕವೂ ಕನ್ನಡ ರಾಷ್ಟ್ರೀಯತೆಯ ಬಗ್ಗೆ ವೀರಾವೇಶದಿಂದ ಮಾತಾಡುವುದು ಮಲ್ಲಸರ್ಜರ ಸವಲತ್ತು. ಚಿಂತಕ ಮಾಧವ ಪ್ರಸಾದರನ್ನು ಉಲ್ಲೇಖಿಸುವುದಾದರೆ ಭಾಷೆಯ ಪ್ರತಿನಿಧಿಯಾಗಿ ಮತ್ತು ಭಾಷಾ ಸಮುದಾಯದ ನಾಯಕರಾಗಿ ವಿಜೃಂಭಿಸುವುದು ನಾಯಕರಿಗೆ ಮೀಸಲಾದಂತೆ ನಾಯಕಿಯರಿಗೆ ಆ ಸವಲತ್ತು ಯಾವತ್ತೂ ಇರಲಿಲ್ಲ.
ಸಾಯುವ ಗಳಿಗೆಯಲ್ಲೂ ಮಲ್ಲಸರ್ಜನ ಕಾಳಜಿ ಅದೇ. ‘ನಾನು ಕಿತ್ತೂರಿನ ನಿರಂಕುಶ ಪ್ರಭು’ ಎಂದು ಘೋಷಿಸಿಕೊಂಡ ಮರುಗಳಿಗೆಯಲ್ಲೇ, ‘ಆದರೆ ಒಂದು ಬಾರಿ ನಾನು ಸಾಯುವ ಮೊದಲು ನನ್ನ ಕನ್ನಡಮ್ಮನನ್ನು ಕಣ್ತುಂಬ ಕಾಣಬೇಕೆಂಬ ಆಸೆ. ಕಿತ್ತೂರ ಮಣ್ಣಿನಲ್ಲಿ ಮೈಯನ್ನೆಲ್ಲಾ ಅದ್ದಬೇಕೆಂಬ ಆತುರ; ಆ ನನ್ನ ತಾಯಿಯ ಮಡಿಲಲ್ಲಿ ಕ್ಷಣಕಾಲ ನಿಶ್ಚಿಂತೆಯಿಂದ ನಿದ್ದೆ ಮಾಡಬೇಕೆಂಬ ಹಂಬಲ…’ ಎಂದು ಕಾತರಿಸುತ್ತಾನೆ.
ಚೆನ್ನಮ್ಮ ಸ್ಪಷ್ಟವಾಗಿ ಕನ್ನಡ ರಾಷ್ಟ್ರೀಯತೆಯ ಬಗ್ಗೆ ದನಿಯೆತ್ತಿದರೆ ಅದು ಮಲ್ಲಸರ್ಜನ ಸಾವಿನ ನಂತರವೇ. ಧಾರವಾಡದ ಬ್ರಿಟಿಷ್ ಕಲೆಕ್ಟರ್ ಮತ್ತು ಈಸ್ಟ್ ಇಂಡಿಯಾ ಕಂಪೆನಿಯ ಪ್ರತಿನಿಧಿ ಜಾನ್ ಥ್ಯಾಕರೆ ಕಪ್ಪ ಕೊಡೆಂದು ಕೇಳಲು ಬಂದಾಗ ರಾಣಿಯ ವರ್ತನೆಯನ್ನು ನೋಡಿ ಮಹದಾಶ್ಚರ್ಯವಾಗುತ್ತದೆ. ಗಂಡ ಮಗನನ್ನು ಕಳೆದುಕೊಂಡಿದ್ದರೂ ಈ ರಾಣಿಗೆ ಇಷ್ಟೊಂದು ಕೊಬ್ಬೆ?
‘ಮೋಡ ಮಳೆ ಸುರಿಸುತ್ತದೆ, ಭೂಮಿ ಬೆಳೆ ಬೆಳೆಯುತ್ತದೆ, ನಮ್ಮವರೊಂದಿಗೆ ಉತ್ತಿರಾ? ಬಿತ್ತಿರಾ? ನೀರು ಹಾಯಿಸಿ ನಾಟಿ ಇಟ್ಟಿರಾ? ನಿಮಗೇಕೆ ಕೊಡಬೇಕು ಕಪ್ಪ? … ನೀವೇನು ಅಣ್ಣ ತಮ್ಮಂದಿರೇ , ನೆಂಟರೇ, ಇಷ್ಟರೆ, ದಾಯಾದಿಗಳೇ, ನಿಮಗೇಕೆ ಕೊಡಬೇಕು ಕಪ್ಪ?’ ಎಂದು ಗರ್ಜಿಸುತ್ತಾಳಲ್ಲಾ!
‘ಇಂತಹಾ ಕಷ್ಟದಲ್ಲೂ ಇಷ್ಟೊಂದು ದರ್ಪವೇ?’ ಎಂದು ಅಬ್ಬರಿಸಿದ ಥ್ಯಾಕರೆಗೆ ಚೆನ್ನಮ್ಮ, ‘ಅದು ಕನ್ನಡಿಗರ ಹುಟ್ಟು ಗುಣ,’ ಎಂದು ಉತ್ತರಿಸುತ್ತಾಳೆ. ‘ನಿಮ್ಮ ಕುಂಪಣಿಗೆ ನಮ್ಮ ನಾಡಿನಲ್ಲಿ ನಿಲ್ಲಲು ಭಿಕ್ಷೆ ಕೊಟ್ಟವರು ನಾವು. ಕಟ್ಟಳೆ ಮಾಡುವ ಅಧಿಕಾರ ನಮ್ಮದು … ಎಂಜಲು ನಾಯಿಗಳಿಗೆ ರೊಟ್ಟಿಯನ್ನು ಚೆಲ್ಲಿದರೆ ಅಂಜದೆಯೇ ಮನೆಯೊಳಗೆ ನುಗ್ಗಿ ವಂಚನೆಯಿಂದ ಕೊರಳು ಕೊಯ್ಯುವ ಸ್ವಭಾವ ಕನ್ನಡಿಗರದಲ್ಲ. ಹೋಗು, ನಿನಗೆ ಜೀವದಾನ ಮಾಡಿದ್ದೇನೆ.’
ಮೈಸೂರು ಹೀಗೆಯೇ ಹಾಳಾದದ್ದು ಎಂದು ಥ್ಯಾಕರೆ ಕುಹಕವಾಡಿದಾಗ ಚೆನ್ನಮ್ಮ ಕುಟುಕುತ್ತಾಳೆ. ‘ಅದು ನಿಮ್ಮ ವೀರತ್ವದಿಂದಲ್ಲ, ವಂಚನೆಯಿಂದ. ಮೈಸೂರನ್ನು ಹಾಳುಮಾಡಲು ಮರಾಠರನ್ನು, ಮರಾಠರನ್ನು ಹಾಳುಮಾಡಲು ಇನ್ನೊಬ್ಬರನ್ನು ಎತ್ತಿ ಕಟ್ಟುತ್ತಾ ಇಡೀ ಹಿಂದೂದೇಶವನ್ನು ನಯವಂಚನೆಯಿಂದ ನುಂಗಲು ಕಾಯುತ್ತಿರುವ ನರಿ ಜಾತಿಯವರಲ್ಲವೇ ನೀವು?
ಕಿತ್ತೂರಿನ ಹೆಂಗಸರನ್ನು ‘ಕನ್ನಡದ ವೀರಮಹಿಳೆಯರು’ ಎಂದು ಕರೆದು ಹುರಿದುಂಬಿಸುವ ಚೆನ್ನಮ್ಮ ಲಭ್ಯವಿರುವ ಎಲ್ಲ ಸಂಪನ್ಮೂಲಗಳನ್ನು ಯುದ್ಧಕ್ಕೆ ತಯಾರು ಮಾಡುತ್ತಾಳೆ. ಯುದ್ಧ ಸಂದೇಶವನ್ನು ಹೊತ್ತು ತೆರಳುತ್ತಿರುವವರಿಗೆ, ‘ಸ್ವಾತಂತ್ರ್ಯದ ಕಹಳೆ ಬ್ರಿಟಿಷರನ್ನು ಕಿತ್ತೂರಿನಿಂದ ಮಾತ್ರವಲ್ಲ ಇಡೀ ಭಾರತದಿಂದಲೇ ತೊಲಗಿಸಲು ಪಣ ತೊಟ್ಟು ನಿಂತಿದೆ ಎಂದು ಹೇಳು’ ಎಂದು ಆದೇಶಿಸುತ್ತಾಳೆ. ಯುದ್ಧಕ್ಕೆ ಹೊರಟು ನಿಂತ ಸೈನಿಕರಿಗೆ ‘ಕನ್ನಡಿಗರೆಂತಹ ಸ್ವಾತಂತ್ರ್ಯ ಪ್ರೇಮಿಗಳು ಎಂದು ಇಡಿಯ ದೇಶಕ್ಕೆ ತಿಳಿಯಲಿ,’ ಎಂದು ಉತ್ತೇಜಿಸುತ್ತಾಳೆ.
ಜೀವನಚರಿತ್ರೆ ರೂಪಿಸಲು ಸಾಕಷ್ಟು ದಾಖಲೆಗಳು ಸಿಗದಾಗ ದಂತಕಥೆಗಳು ನೆರವಿಗೆ ಬರುತ್ತವೆ. ಚೆನ್ನಮ್ಮನ ಬದುಕಿನ ಕಥೆ ಹೇಳುವ ಪಠ್ಯ ಮತ್ತು ದೃಶ್ಯ ಮಾಧ್ಯಮಗಳೆರಡೂ ಸರಳವಾದ ರೇಖಾತ್ಮಕ ನಿರೂಪಣೆಗೆ ಆತುಕೊಳ್ಳುವುದು ಸಹಜವೇ. ಪ್ರಾರಂಭದಿಂದಲೂ ಕಥಾನಕ ‘ಸ್ವ’ ಮತ್ತು ‘ಅನ್ಯ’ ಎಂಬ ಎರಡು ಪರಸ್ಪರ ವಿರುದ್ಧಾತ್ಮಕ ನೆಲೆಗಳಲ್ಲಿ ಸಾಗುವುದನ್ನು ಕಾಣಬಹುದು. ಉದಾಹರಣೆಗೆ ಮಲ್ಲಸರ್ಜ ಮತ್ತು ಟಿಪ್ಪು; ಚೆನ್ನಮ್ಮ ಮತ್ತು ಬ್ರಿಟಿಷರು ಇತ್ಯಾದಿ.
ಆದರೆ ‘ದುರ್ಬಲ’ ಅಂತನ್ನಿಸುವ, ಸಹಾಯವನ್ನು ಬೇಡುವ ಗಳಿಗೆಗಳೂ ಇರಲಿಲ್ಲವೇ? ಸದಾಶಿವ ಒಡೆಯಾರರ ಕಥಾನಕದಲ್ಲಿ ಅಂಥದ್ದೊಂದು ಗಳಿಗೆಯ ಉಲ್ಲೇಖವಿದೆ.
ಬ್ರಿಟಿಷ್ ಏಜೆಂಟ್ ಥ್ಯಾಕರೆಯ ಜೊತೆ ಯುದ್ಧ ಮಾಡುವ ಮುನ್ನ ಚೆನ್ನಮ್ಮ ಮತ್ತು ವೀರಮ್ಮ (ರುದ್ರಮ್ಮನ ಮಗನಾದ ಶಿವಲಿಂಗರುದ್ರಸರ್ಜನ ಹೆಂಡತಿ) ಪುಣೆಯಲ್ಲಿದ್ದ ದಖ್ಖಣಿಯ ಕಮಿಷನರ್ ವಿಲಿಯಂ ಚಾಪ್ಲಿನ್ ನಿಗೆ ಅಕ್ಟೋಬರ್ 11, 1824 ರ ದಿನಾಂಕ ಹೊತ್ತ ಒಂದು ಪತ್ರ ಬರೆಯುತ್ತಾರೆ. ಪತ್ರ ಅವರು ಹತಾಶ ಮನಸ್ಥಿತಿಯನ್ನು ಸೂಚಿಸುತ್ತದೆ.
‘ಎಲ್ಲ ಕಷ್ಟಗಳನ್ನು ತಾಳ್ಮೆಯಿಂದ ಸಹಿಸಿ ನಿಮ್ಮ ಅನುಗ್ರಹಕ್ಕೆ ಕಾದಿದ್ದೇವೆ. ಇಡೀ ಸಂಸ್ಥಾನದ ಉಳಿವು ನಿಮ್ಮ ಕೈಲಿದೆ. … ನಮ್ಮ ಸಹಾಯಕ್ಕೆ ಬರಬಲ್ಲವರು ನೀವೊಬ್ಬರೆ. ನಿಮ್ಮಲ್ಲಿ ವಿಶ್ವಾಸವಿಟ್ಟು ಈ ತನಕದ ಅವಮಾನ, ಕಷ್ಟಕಾರ್ಪಣ್ಯಗಳನ್ನು ಸಹನೆಯಿಂದ ಸಹಿಸಿದ್ದೇವೆ…’(ಪು. 55-58)
ಜನಪದ, ಪಠ್ಯ, ದೃಶ್ಯ ಹೀಗೆ ಮಾಧ್ಯಮ ಯಾವುದೇ ಇದ್ದರೂ ವೀರಗಾಥೆ ಎಂಬ ಪ್ರಕಾರ ಸರಾಗವಾಗಿ ಸಾಗುವುದನ್ನು ಬೇಡುತ್ತದೆ. ಚೆನ್ನಮ್ಮನ ಕಥಾನಕ ಸಹ ಅದಕ್ಕೆ ಹೊರತಾಗಿಲ್ಲ. ಎಲ್ಲವನ್ನೂ ಕಳೆದುಕೊಂಡ ಚೆನ್ನಮ್ಮ ಬಂಧನದಲ್ಲಿ ಐದು ವರ್ಷ ಕಳೆದು ಸಾವನ್ನಪ್ಪುತ್ತಾಳೆ. ಕಿತ್ತೂರು ಮತ್ತು ಚೆನ್ನಮ್ಮ ತದನಂತರದಲ್ಲಿ ದೇಶದಲ್ಲೆಲ್ಲಾ ಹಬ್ಬಿದ ಸ್ವಾತಂತ್ರ್ಯ ಹೋರಾಟದ ಮುಂದಾಳುಗಳೆಂದು ಸ್ತುತಿಸಲಾಗಿದೆ. ರಾಷ್ಟ್ರೀಯ ಹೋರಾಟದಲ್ಲಿ ಚೆನ್ನಮ್ಮ ಧ್ರುವತಾರೆಯಂತೆ ಮಿನುಗುತ್ತಿರುತ್ತಾಳೆ ಎಂದು ಹೊಗಳಲಾಗಿದೆ.

ಚಿತ್ರದ ಕೊನೆಯಲ್ಲಿ ಮತ್ತೆ ತರಗತಿಗೆ ಮರಳುತ್ತೇವೆ. ಮಕ್ಕಳ ಕಣ್ಣಲ್ಲಿ ನೀರಿನ ಜೊತೆಗೆ ತಮ್ಮ ಶ್ರೀಮಂತ ಇತಿಹಾಸ ಮತ್ತು ಪರಂಪರೆಗಳ ಬಗ್ಗೆ ಅಭಿಮಾನವೂ ತುಂಬಿರುತ್ತದೆ. ಮಾಸ್ತರರು ಭಾವುಕ ಧ್ವನಿಯಲ್ಲಿ ‘ಅಂದು ಈ ಕಿತ್ತೂರ ವೀರರಾಣಿ ಚೆನ್ನಮ್ಮ ತಾಯಿ ನೆಟ್ಟು ನೀರೆರೆದ ಸ್ವಾತಂತ್ರ್ಯದ ಸಸಿ ಇಂದು ವಿಶಾಲ ವೃಕ್ಷವಾಗಿ ಸ್ವಾತಂತ್ರ್ಯಪ್ರೇಮದ ಅಮೃತಫಲವನ್ನು ಭಾರತದ ಮಕ್ಕಳಿಗೆಲ್ಲಾ ನೀಡುತ್ತಿದೆ. ಆ ಮಹಾತಾಯಿಯ ಆತ್ಮಕ್ಕೆ ಶಾಂತಿಯನ್ನು ಕೋರೋಣ, ’ ಎನ್ನುವಾಗ ತೆರೆಯ ಮೇಲೆ ‘ಸಿರಿಗನ್ನಡಂ ಗೆಲ್ಗೆ’ ಮೂಡುತ್ತದೆ.
ಚೆನ್ನಮ್ಮ ಕಥಾನಾಯಕನ ಕಥೆಗೆ ಕೇವಲ ಅನುಬಂಧವಾಗದೆ ಅದರಾಚೆಗೂ ನಿಲ್ಲಬಲ್ಲಳು. ಆದರೆ ಮಲ್ಲಸರ್ಜನ ವಿಧವೆಯಾಗಿ ಅವನ ನಾಯಕತ್ವದ ಭಾರ ಹೊತ್ತು ನಿಭಾಯಿಸಬೇಕಾದ ಹೊಣೆಗೆ ಬದ್ದಳು. ಕಥಾನಕದ ಕೇಂದ್ರ ಅವಳು ಅಂತ ಅನ್ನಿಸಿದರೂ ಸಹ ಸಾಂಕೇತಿಕವಾಗಿ ಆ ಕೇಂದ್ರಿಯತೆ ಮಲ್ಲಸರ್ಜನದೇ.
ಅದರಲ್ಲೂ ಮಲ್ಲಸರ್ಜನ ಪಾತ್ರವನ್ನು ರಾಜಕುಮಾರ್ ನಿರ್ವಹಿಸುವಾಗ ಆ ಕೇಂದ್ರಿಯತೆ ಅನಿವಾರ್ಯವೂ ಹೌದು. ಅರವತ್ತರ ದಶಕದಲ್ಲಿ ಕನ್ನಡ ರಾಷ್ಟ್ರೀಯ ಅಸ್ಮಿತೆಯನ್ನೂ ಹೊಸೆಯುವ ಮಹತ್ತರ ಕಾಲದಲ್ಲಿ ರಾಜಕುಮಾರರ ಸ್ಥಾನಕ್ಕೆ ಅತ್ಯಂತ ಮಹತ್ವವಿತ್ತು. ರಾಜ ತನ್ನ ಸಾವಿನ ನಂತರವೂ ರಾಜಗಾಥೆಯನ್ನು ಸಮರ್ಥವಾಗಿ ಮುನ್ನಡೆಸುತ್ತಾನೆ. ರಾಣಿ ಅವನ ಪರಂಪರೆಯನ್ನು ಮುಂದುವರೆಸುವ ಶಕ್ತಿಯಾಗಿ ಮಾತ್ರ ಒದಗಿ ಬರುತ್ತಾಳೆ.
ಅಲ್ಲದೆ, ಕನ್ನಡ ಚಿತ್ರಗಳಲ್ಲಿ ಮಾತ್ರ ಅಭಿನಯಿಸುವ ರಾಜಕುಮಾರ್ ಕನ್ನಡ ರಾಷ್ಟ್ರೀಯತೆಯ ಪ್ರತಿಮೆಯಾಗಬಲ್ಲರು. ಚೆನ್ನಮ್ಮನ ಪಾತ್ರದ ಸರೋಜಾದೇವಿ ತಮಿಳು ಮತ್ತು ತೆಲುಗು ಚಿತ್ರಗಳಲ್ಲೂ ಅಭಿನಯಿಸುತ್ತಿದ್ದರು. ಮಾಧವ ಪ್ರಸಾದ್ ಗಮನಿಸುವಂತೆ, ‘ನಾಯಕರು ಭಾಷಾ ರಾಷ್ಟ್ರೀಯತೆಯ ಸಮರ್ಥ ಪ್ರತಿನಿಧಿಯಾಗಬಲ್ಲರು. ಆದರೆ ನಾಯಕಿಯರು ಭಾಷೆಗಳ ನಡುವಿನ ಕೊಳ್ಕೊಡುವ ಸಾಧನಗಳಷ್ಟೇ ಆಗಲು ಸಾಧ್ಯ’(ಪು. 106).
ಹೀಗಾಗಿ ಚಿತ್ರದುದ್ದಕ್ಕೂ ನಾಯಕಿಯರ ಅಸ್ತಿತ್ವ ಇದ್ದರೂ ಸಹ ಕನ್ನಡ ರಾಷ್ಟ್ರೀಯತೆಯ ವಿಜೃಂಭಣೆ ಅವರಿಂದ ಸಾಧ್ಯವಿಲ್ಲ. ಚಿತ್ರದ ಅರ್ಧದಲ್ಲೇ ಇಲ್ಲವಾದರೂ ಸಹ ಮಲ್ಲಸರ್ಜ-ರಾಜಕುಮಾರರು ಉದ್ದಕ್ಕೂ ಉಳಿಯುತ್ತಾರೆ. ಚೆನ್ನಮ್ಮ ಕನ್ನಡ ಎಂದಾಗೆಲ್ಲಾ ಅದು ರಾಜಕುಮಾರರು ಉಳಿಸಿ ಹೋದ ಪರಂಪರೆಯ ಮಾತಾಗುತ್ತದೆ.

ಒಟ್ಟಿನಲ್ಲಿ, ಎಪ್ಪತ್ತರ ದಶಕದಲ್ಲಿ ಹೊಸ ಅಲೆಯ ಚಿತ್ರಗಳು ಬರುವ ತನಕವೂ ಕನ್ನಡ ಸಿನಿಮಾದ ಎಲ್ಲ ಪ್ರಕಾರಗಳು (ಪೌರಾಣಿಕ, ಜನಪದಿಯ, ಐತಿಹಾಸಿಕ, ಸಾಮಾಜಿಕ) ಹೆಣ್ಣಿಗೆ ಸಂಬಂಧಪಟ್ಟಂತೆ ‘ಸನ್ನಡತೆ’ಯನ್ನು ಬೋಧಿಸುವ ಪಠ್ಯಪುಸ್ತಕಗಳಂತೆಯೇ ಕೆಲಸ ನಿರ್ವಹಿಸಿವೆ. ‘ಕಿತ್ತೂರು ಚೆನ್ನಮ್ಮ’ದಂತಹ ವೀರಾಂಗನೆಯ ಚಿತ್ರಣವೂ ಸಹ ಅಂತಹ ಅಪಾಯದಿಂದ ಪಾರಾಗುವುದಿಲ್ಲ. ಅಷ್ಟೇ ಅಲ್ಲ, ಅದು ಜೆಂಡರ್ ಸಿದ್ಧಮಾದರಿಗಳನ್ನು ಇನ್ನಷ್ಟು ಬಲಗೊಳಿಸುತ್ತದೆ.
ಹೆಣ್ಣು ಮಹಾರಾಣಿಯಾದರೇನು? ಸಲ್ಲಬೇಕಾದದ್ದು ‘ಮಹಾಸತಿ’ ಆಗಿಯೇ!
***
ಬೌದ್ಧಿಕ ಋಣ
Kathryn Hansen, ‘The Virangana in North Indian History: Myth and Popular Culture,’ Economic and Political Weekly, 23:18, 1988, pp. 25-33.
Lee R. Edward, ‘The Labors of Psyche: Toward a Theory of Female Heroism’, Critical Inquiry, 6:1, 1979, pp. 33-49.
Sadashiva S. Wodeyar, Rani Chennamma, Delhi: National Book Trust, 1997.
Susie Tharu and K. Lalita (eds). Women Writing in India: From 600 BC to the Present. Vol. II. New York: The Feminist Press. 1991.
-
Madhava Prasad, Cine-Politics: Film Stars and Political Existence in South India, Hyderabad: Orient BlackSwan, 2014.


