ಹೊಸಬರನ್ನು ಮೆಚ್ಚುವ ಜೊತೆಗೆ ಹಳಬರನ್ನು ತುಂಬ ಸಭ್ಯವಾಗಿ ಕ್ರಿಟಿಕಲ್ ಆಗಿ ಚುಚ್ಚುತ್ತಲೂ ಇದ್ದರು. ಹಲವು ಖ್ಯಾತ ಹಿರಿಯ ಕವಿಗಳ ಕವಿತೆಗಳ ಬಗ್ಗೆ ಅವರ ಅನಾಸಕ್ತಿ ಸ್ಪಷ್ಟವಾಗಿ ವ್ಯಕ್ತವಾಗುತ್ತಿತ್ತು. ಆದರೆ ಅದು ಯಾವತ್ತೂ ಅನಾದರ ಆಗಿರಲಿಲ್ಲ. ಒಮ್ಮೆ ಮಾತಿನ ಮಧ್ಯೆ, `ಅವರು ಫೋನ್ ಮಾಡಿದ್ದರು. ಅವರದ್ದು ನೋಡಿ ಜರ್ನಲಿಸ್ಟಿಕ್ ಸಾಹಿತ್ಯ. ಹಾಗೆ ಹೇಳಿದರೆ ಅವರಿಗೆ ಸಿಟ್ಟು ಬರುತ್ತೆ. ಆದರೆ ಸತ್ಯ ಸತ್ಯವೇ ತಾನೆ’ ಎಂದರು. ಯಾವುದೇ ವಿಚಾರದ ಬಗ್ಗೆ ಸ್ಪಷ್ಟವಾದ ನಿಲುವು ಇರುವುದು ತಪ್ಪಲ್ಲ ಎನ್ನುತ್ತಿದ್ದರು. ಮುಲಾಜಿಗೆ ಬಿದ್ದು ಯಾವುದನ್ನೂ ಒಪ್ಪುತ್ತಿರಲಿಲ್ಲ.
ಕೆ.ವಿ. ತಿರುಮಲೇಶರೊಟ್ಟಿಗಿನ ಒಡನಾಟ ಹಾಗೂ ಅವರ ಬರಹಗಳ ಕುರಿತು ಬರೆದಿದ್ದಾರೆ ಕಥೆಗಾರ ವಿಕ್ರಂ‌ ಹತ್ವಾರ್

ಯುವಕವಿಯೊಬ್ಬರು ತಮ್ಮ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಬಹಳ ಉತ್ಸಾಹದಿಂದ, `ತಿರುಮಲೇಶ್ ನಾನು ತುಂಬ ಇಷ್ಟಪಡುವ ಕವಿ. ಎಷ್ಟು ಚೆಂದ ಬರೀತಾರೆ. ನನಗಂತು ಅರ್ಥವೇ ಆಗುವುದಿಲ್ಲ. ಎಷ್ಟು ಚೆನ್ನಾಗಿರುತ್ತೆ. ಅವರು ನನ್ನ ಸಂಕಲನಕ್ಕೆ ಬೆನ್ನುಡಿ ಬರೆದದ್ದು ತುಂಬ ಖುಷಿ’ ಎಂದರು. ತನ್ನ ಕವಿತೆಗಳು ಅರ್ಥವಾಗದವರು ಬರೆದ ಕವಿತೆಗಳನ್ನೂ ತಿರುಮಲೇಶ್ ಮೆಚ್ಚಬಲ್ಲವರಾಗಿದ್ದರು. ಹಾಗೆಂದೇ ಅವರು ಇತ್ತೀಚೆಗೆ ಬರೆಯುತ್ತಿರುವವರನ್ನು ಯಾವುದೇ ಪೂರ್ವಗ್ರಹವಿಲ್ಲದೆ ಓದುತ್ತಿದ್ದರು. ಅನೇಕ ಸಲ ಕೆಲವು ಕವಿಗಳ ಕುರಿತು ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದರು. ಮೆಚ್ಚುಗೆ ಎಂದರೆ – ನೋಡಿ ಅವರು ಚೆನ್ನಾಗಿ ಬರೆಯುತ್ತಾರೆ. ಅವರ ಕವಿತೆಗಳಲ್ಲಿ ಹೊಸತನವಿದೆ ಎನಿಸಿತು. ಇಷ್ಟವಾದವು.. ಹೀಗೆ ಅತಿಸರಳವಾದ ಮಾತುಗಳು. ಆದರೆ ಅದು ತಿರುಮಲೇಶರ ಮಾತುಗಳಾಗಿರುವ ಕಾರಣಕ್ಕೆ, ಆ ಕವಿತೆಗಳು ಎಷ್ಟು ಚೆನ್ನಾಗಿರಬಹುದು ಏನು ಹೊಸತನವಿರಬಹುದು ಅನ್ನುವ ಎಣಿಕೆ ನಮ್ಮ ವಿವೇಕಕ್ಕೆ ಎಟುಕುತ್ತಿತ್ತು. ಇಂಥ ಮಾಪನವು ತಿರುಮಲೇಶರ ಕವಿತೆಗಳ ಗುಣಮಟ್ಟದಿಂದಲೇ ನಮ್ಮೊಳಗೆ ಮೂಡುತ್ತಿತ್ತು. ತಾನು ಎಷ್ಟು ಚೆನ್ನಾಗಿ ಬರೆದಿದ್ದಾನೆ ಎನ್ನುವುದರ ಮೇಲೆ ಆತ ಮತ್ತೊಬ್ಬರ ಕೃತಿ ಚೆನ್ನಾಗಿದೆ ಅಂತ ಹೇಳಿದ್ದು – ಎಷ್ಟು ಚೆನ್ನಾಗಿ ಇರಬಲ್ಲದು – ಎನ್ನುವುದನ್ನು ಸೂಚಿಸುತ್ತದೆ. ಹಾಗಾಗಿ ತಿರುಮಲೇಶರು ಒಮ್ಮೆ ಚೆನ್ನಾಗಿದೆ ಅಂತ ಹೇಳಿದರೆ ಸಾಕೆಂದು ಆಸೆಪಡುವ ತರುಣ ಕವಿಗಳ ಒಂದು ಗುಂಪೇ ಇದೆ.

ತಿರುಮಲೇಶರೊಂದಿಗಿನ ನನ್ನ ಮಾತುಕತೆ ಶುರುವಾಗಿದ್ದು ಕಳೆದ ಹನ್ನೆರೆಡು ವರ್ಷಗಳಿಂದೀಚೆಗೆ. ಮೊದಲ ಸಲ ಅವರನ್ನು ಎಂ.ಎಸ್. ಶ್ರೀರಾಮ್ ಅವರ ಮನೆಯಲ್ಲಿ ಭೇಟಿಯಾದಾಗ ಕೆಲವು ಗಂಟೆಗಳ ಕಾಲ ಹರಟಿದ್ದೆವು. ಎಸ್.ಆರ್. ವಿಜಯಶಂಕರ ಜೊತೆ ಅವರದ್ದೊಂದು ಸಂದರ್ಶನ ಮಾಡುವ ಅವಕಾಶವನ್ನು ವೈಯಕ್ತಿಕ ಕಾರಣದಿಂದ ಕಳೆದುಕೊಂಡಿದ್ದರ ಬಗ್ಗೆ ನನಗೆ ತುಂಬ ಬೇಸರವಿತ್ತು. ಆ ಕುರಿತು ಹೇಳಿದಾಗ, `ಈ ಮಾತುಕತೆಯೂ ಸಂದರ್ಶನವೇ ತಾನೆ’ ಎಂದರು.

ಹೊಸಬರನ್ನು ಮೆಚ್ಚುವ ಜೊತೆಗೆ ಹಳಬರನ್ನು ತುಂಬ ಸಭ್ಯವಾಗಿ ಕ್ರಿಟಿಕಲ್ ಆಗಿ ಚುಚ್ಚುತ್ತಲೂ ಇದ್ದರು. ಹಲವು ಖ್ಯಾತ ಹಿರಿಯ ಕವಿಗಳ ಕವಿತೆಗಳ ಬಗ್ಗೆ ಅವರ ಅನಾಸಕ್ತಿ ಸ್ಪಷ್ಟವಾಗಿ ವ್ಯಕ್ತವಾಗುತ್ತಿತ್ತು. ಆದರೆ ಅದು ಯಾವತ್ತೂ ಅನಾದರ ಆಗಿರಲಿಲ್ಲ. ಒಮ್ಮೆ ಮಾತಿನ ಮಧ್ಯೆ, `ಅವರು ಫೋನ್ ಮಾಡಿದ್ದರು. ಅವರದ್ದು ನೋಡಿ ಜರ್ನಲಿಸ್ಟಿಕ್ ಸಾಹಿತ್ಯ. ಹಾಗೆ ಹೇಳಿದರೆ ಅವರಿಗೆ ಸಿಟ್ಟು ಬರುತ್ತೆ. ಆದರೆ ಸತ್ಯ ಸತ್ಯವೇ ತಾನೆ’ ಎಂದರು. ಯಾವುದೇ ವಿಚಾರದ ಬಗ್ಗೆ ಸ್ಪಷ್ಟವಾದ ನಿಲುವು ಇರುವುದು ತಪ್ಪಲ್ಲ ಎನ್ನುತ್ತಿದ್ದರು. ಮುಲಾಜಿಗೆ ಬಿದ್ದು ಯಾವುದನ್ನೂ ಒಪ್ಪುತ್ತಿರಲಿಲ್ಲ. ಕನ್ನಡದಲ್ಲಿ ಕೆಲವು ಜಾಲತಾಣಗಳು ಹುಟ್ಟಿಕೊಂಡ ಸಂದರ್ಭದಲ್ಲಿ ಕೆಂಡಸಂಪಿಗೆಯೇ ಇರುವುದರಲ್ಲಿ ಬೆಸ್ಟ್ ಎಂದು ಹೇಳುತ್ತಿದ್ದರು. ಆ ಇನ್ನೊಂದು ವೆಬ್‌ಸೈಟ್ ನೋಡಿ. ಅಲ್ಲಿಗೆ ನಿಮ್ಮ ಮೆಡಿಕಲ್ ಪ್ರೆಸ್‌ಕ್ರಿಪ್ಷನ್ ಕಳಿಸಿದರೂ ಹಾಕಿಬಿಡುತ್ತಾರೆ ಎಂದು ನಗುತ್ತಿದ್ದರು. ವರದಿಯೂ ಕವಿತೆಯೇ ಅಂತ ವಾದಿಸುವವರಿಗೆ ಮೆಡಿಕಲ್ ಪ್ರೆಸ್‌ಕ್ರಿಪ್ಷನ್ ಕೂಡ ಕವಿತೆಯೇ ಅಂತ ಹೇಳಬೇಕು ನೋಡಿ ಎಂದೆ. ನಕ್ಕರು. ಆದರೆ ಅವರ ವಿಚಾರಗಳು ಅವರೊಳಗೆ ಕವಿತೆಯಾಗಿ ಮೂಡುತ್ತಿದ್ದ ರೀತಿಯೇ ಒಂದು ವಿಸ್ಮಯ. ಎಸ್. ದಿವಾಕರ್ ಜಗತ್ತಿನ ಸಾಹಿತ್ಯವನ್ನು ಕನ್ನಡಕ್ಕೆ ಒಂದು ಬಗೆಯಲ್ಲಿ ತಂದರೆ, ತಿರುಮಲೇಶ್ ಆ ಸಾಹಿತ್ಯದ ಪಾತ್ರಗಳ ಸನ್ನಿವೇಶಗಳ ಆಂತರ್ಯದ ಒಳನೋಟಗಳನ್ನು ಕವಿತೆಗಳಲ್ಲಿ ದಾಟಿಸುತ್ತಿದ್ದರು. ವಿಮರ್ಶೆ ಎಂಬುದು ಕಾವ್ಯದಲ್ಲಿ ಕರಗಿಹೋದ ಜಾದು ಅವರ ಪದ್ಯಗಳಲ್ಲಿ ಸಂಭವಿಸುತ್ತಿತ್ತು.

ನವ್ಯದ ಕುರಿತು ಮಾತು ಬಂದಾಗ, `ನೋಡಿ, ನವ್ಯ ನಮಗೆಲ್ಲ ಹೊಸದಾರಿಯನ್ನು ತೆರೆಯಿತು. ಒಬ್ಬೊಬ್ಬರು ಒಂದೊಂದು ತೆರನಾಗಿ ನವ್ಯವನ್ನು ಸ್ವೀಕರಿಸಿದರು. ನಾನು ನವ್ಯವನ್ನು ಸ್ವೀಕರಿಸಿದ್ದು ಸಂಪೂರ್ಣ ಸ್ವಾತಂತ್ರ್ಯ ಅಬ್ಸಲ್ಯೂಟ್ ಫ್ರೀಡಮ್ ಎಂದು’. ಅಂಥದ್ದೊಂದು ಅಬ್ಸಲ್ಯೂಟ್ ಫ್ರೀಡಮ್ ಇದೆಯೇ ಅಂತ ಕೇಳಿದರೆ, ನಮ್ಮ ಮನಸ್ಸಿನ ಆಯ್ಕೆಯ ಮಟ್ಟದಲ್ಲಿ ಹೇಳುವುದಾದರೆ ಖಂಡಿತವಾಗಿಯು ಇದೆ ಎಂದರು. ನೋಡಿ ನನಗೀಗ ಎಪ್ಪತ್ತು ದಾಟಿದೆ. ಇಷ್ಟೆಲ್ಲ ನೋಡಿದ ಮೇಲೆ ಸಿನಿಕನಾಗುವುದು ಸುಲಭ. ಆದರೆ ನಾನು ಸಿನಿಕತನವನ್ನು ಯಾವತ್ತೂ ಅವಲಂಬಿಸಿಲ್ಲ. ಅದು ನನ್ನ ಆಯ್ಕೆ ಎಂದರು. ಹಾಗೆಂದೇ ಅಮೀರ್ ಖಾನ್ ನಡೆಸಿಕೊಡುತ್ತಿದ್ದ ಸತ್ಯಮೇವ ಜಯತೆ ಶೋನಲ್ಲಿ ಇನ್ನೂ ಯಾವಯಾವ ಸಮಸ್ಯೆಗಳನ್ನು ಎತ್ತಿಕೊಳ್ಳಬೇಕು ಎನ್ನುವುದನ್ನು ಪಟ್ಟಿ ಮಾಡಿದ್ದರು. ಡಬ್ಬಿಂಗ್ ಪರವಾಗಿ ಚರ್ಚೆಯಲ್ಲಿ ತೊಡಗಿದರು.

ವಿಚಾರಗಳಲ್ಲಿ ಅವರಿಗೆ ಇರುತ್ತಿದ್ದ ಖಾಚಿತ್ಯ ಕವಿತೆಗಳಲ್ಲಿ ಮಾಯವಾಗುತ್ತಿತ್ತು. ಕವಿತೆಗಳ ಒಳಗೂ ವಿಚಾರಗಳ ಖಾಚಿತ್ಯವಿತ್ತು. ಜೊತೆಗೆ ಕವಿತೆಯ ಧ್ವನಿಶಕ್ತಿಯ ಬಗ್ಗೆ ಅಪಾರವಾದ ಶ್ರದ್ಧೆಯಿತ್ತು. ಅದು ಅನುಭವನ್ನು ದಾಟಿಸಬೇಕು. ವಿಚಾರವನ್ನು ಹೇರಬಾರದು. ವಿಚಾರವು ನನ್ನೊಳಗೆ ಯಾವ ಅನುಭವವನ್ನು ಮೂಡಿಸಿದೆ ಅನ್ನುವುದೇ ಮುಖ್ಯ. `ವೈಂಟಿಂಗ್ ಫಾರ್ ದಿ ಗಾಡೋ’ ಅವರ ಇಷ್ಟವಾದ ನಾಟಕಗಳಲ್ಲಿ ಒಂದು. ಮಾತು ತನ್ನ ಅರ್ಥವನ್ನು ಕಳೆದುಕೊಂಡಿರುವುದನ್ನು ಅಸಂಗತಗಳಲ್ಲಿ ನಿರೂಪಿಸುವ ನಾಟಕವು ಅಷ್ಟು ಮಾತ್ರವಲ್ಲದೆ ಅದು ತನ್ನ ಶರೀರದಲ್ಲೇ ಕಾವ್ಯಗುಣವನ್ನು ತುಂಬಿಕೊಂಡಿದೆ ಎನ್ನುತ್ತಿದ್ದರು. ಅದೊಂದು ಅಮೂರ್ತ ಭಾವವನ್ನು ನಮ್ಮೊಳಗೆ ತುಂಬುತ್ತದೆ. ವಿವರಿಸಲಾಗದ ಸಂಗತಿ ನಾಟಕ ಕವಿತೆಗಳಲ್ಲಿ ಪಡಿಮೂಡಬೇಕು. ಕವಿತೆಯಲ್ಲಿ ಸ್ಟೇಟ್‌ಮೆಂಟ್ ಇರಬಾರದು ಎನ್ನುತ್ತಿದ್ದರು. ಇದೇ ವಿಚಾರವಾಗಿ ಒಮ್ಮೆ ಅವರ ಪ್ರಸಿದ್ಧವಾದ ‘ಮುಖಾಮುಖಿ’ ಪದ್ಯದ ಬಗ್ಗೆ ಒಂದು ಮಾತು ಬಂತು. ಬೆಕ್ಕಿನ ಮುಖಾಮುಖಿಯನ್ನು ಕಟ್ಟಿಕೊಡುವ ಕವಿತೆ ಕೊನೆಯಲ್ಲಿ, `ಗೆದ್ದರೆ ಗೆಲ್ಲಬೇಕು ಬಾಹುಬಲಿಯಂತೆ ಬಿಟ್ಟುಕೊಡುವುದರ ಮೂಲಕ’ ಎಂದು ಮುಗಿಯುತ್ತದೆ. `ಸರ್, ಅಲ್ಲಿವರೆಗೆ ಕವಿತೆಯಾಗಿದ್ದು ಕೊನೆಯಲ್ಲಿ ಸ್ಟೇಟ್‌ಮೆಂಟ್ ಥರ ಘೋಷವಾಕ್ಯದ ರೀತಿಯಲ್ಲಿ ಆಯಿತಲ್ಲ’ ಎಂದೆ. ಅದಕ್ಕವರು ಆಹ್ ಎಂದು ನಕ್ಕು, `ನಿಜ. ಈಗ ಬರೆಯುತ್ತಿದ್ದರೆ ಹಾಗೆ ಬರೆಯುತ್ತಿರಲಿಲ್ಲ ಅನ್ನಿಸುತ್ತೆ’ ಅಂದುಬಿಟ್ಟರು. ನಾನಿದನ್ನು ನಿರೀಕ್ಷಿಸಿರಲಿಲ್ಲ. ಆ ಕವಿತೆಗೆ ಅದು ಹೇಗೆ ಸರಿಹೊಂದುತ್ತೆ ಎನ್ನುವ ಏನಾದರು ಉತ್ತರ ಅವರಿಂದ ಬರಬಹುದು ಎಂದುಕೊಂಡಿದ್ದೆ. ಇಷ್ಟು ಪ್ರಸಿದ್ಧವಾದ ತನ್ನ ಸಾಲುಗಳನ್ನು ಹೀಗೆ ಮರುಮಾತಿಲ್ಲದೆ ಬಿಟ್ಟುಕೊಡುವುದರ ಮೂಲಕ ಗೆದ್ದುಬಿಟ್ಟಿದ್ದರು.

ತೋಳ್ಪಾಡಿಯವರು ಇತ್ತೀಚೆಗೆ ನಮ್ಮ ಮನೆಗೆ ಬಂದಾಗ ಲೈಬ್ರರಿಯಲ್ಲಿ ಮಾತಾಡುತ್ತ ಅಚಾನಕ್ಕಾಗಿ ತಿರುಮಲೇಶರ ಅವ್ಯಯ ಕಾವ್ಯ ಸಂಕಲನ ಅವರ ಕಣ್ಣಿಗೆ ಬಿತ್ತು. ಅದನ್ನು ಎತ್ತಿಕೊಂಡು, ಒಂದು ಪುಟವನ್ನು (ಪುಟದ ಸಂಖ್ಯೆ ನೆನಪಿರುವಂತೆ) ಹುಡುಕಿ ತೆಗೆದರು. ಅರ್ರೆ ನೀವು ಎಲ್ಲ ಗುರುತು ಹಾಕಿದ್ದೀರಲ್ಲ… ನೋಡಿ ಈ ಸಾಲು ಅಂತ ತೋರಿಸಿದರು.

ಓದುಗರು ತೋಳ್ಪಾಡಿಯವರನ್ನು ಸ್ವೀಕರಿಸಿದ ಹಾಗೆ ತನ್ನನ್ನು ಸ್ವೀಕರಿಸುತ್ತಿಲ್ಲ ಎನ್ನುವ ಬಗ್ಗೆ ಅವರಿಗೆ ಅಸಮಾಧಾನವಿತ್ತು. ಅದು ತೋಳ್ಪಾಡಿಯವರ ಬಗೆಗಿನ ಅಸಮಾಧಾನವಲ್ಲ. ಓದುಗರ ಬಗೆಗಿನ ಅಸಮಾಧಾನ. ಆಧ್ಯಾತ್ಮದ ಶೈಲಿಯಲ್ಲಿ ಹೇಳಿದ್ದರ ಕುರಿತು ಸುಲಭವಾಗಿ ವಾಲಿಕೊಳ್ಳುವ ಓದುಗರು ವೈಚಾರಿಕದ ನೆಲೆಯಲ್ಲಿ ಹೇಳಿದಾಗ ಯಾಕೆ ದೂರ ಸರಿಯುತ್ತಾರೆ? ಎಂದು ಕುತೂಹಲದಲ್ಲಿ ಕೇಳುತ್ತಿದ್ದರೆ ವಿನಾ ತನ್ನನ್ನು ಮೆಚ್ಚಲಿಲ್ಲ ಆರಾಧಿಸಲಿಲ್ಲ ಎಂದು ಯಾವತ್ತೂ ಖೇದ ವ್ಯಕ್ತಪಡಿಸಿಲ್ಲ. ಅವರನ್ನು ಕಡೆಗಣಿಸಲಾಗಿದೆ ಎನ್ನುವ ಬಗ್ಗೆ ಅವರಿಗೆ ಬೇಸರವಿದೆ ಕೊರಗಿದೆ ಎಂದು ಕೆಲವರು ಹೇಳಿದ್ದನ್ನು ಕೇಳಿದ್ದೇನೆ. ಆದರೆ ಆಶ್ಚರ್ಯವೆಂದರೆ ನನ್ನ ಬಳಿ ಇದುವರೆಗೆ ಮಾತಾಡಿದ್ದರಲ್ಲಿ ಒಮ್ಮೆಯೂ ಇದರ ಕುರಿತು ಸಣ್ಣ ಸುಳಿವೂ ಸಿಗದ ಹಾಗೆ ಕೇವಲ ವಿಷಯದ ಕುರಿತು ಮಾತಾಡುತ್ತಿದ್ದರು. ಯಾವತ್ತೂ ಅವರಿಗೆ ಇಂಥದೊಂದು ಕೊರಗಿದೆ ಅಂತ ಅನ್ನಿಸಲೇ ಇಲ್ಲ. ಫೋನ್ ಮಾಡುತ್ತಿರಿ… ಖುಷಿ ಆಯಿತು… ಹೀಗೇ ನಮ್ಮ ಮಾತುಕತೆ ಮುಗಿಯುತ್ತಿತ್ತು. ಇನ್ನು ಮಾತುಕತೆ ಏನಿದ್ದರೂ ಅವರ ಕವಿತೆಯೊಂದಿಗಷ್ಟೆ.

ಅಂದಹಾಗೆ, ತೋಳ್ಪಾಡಿಯವರು ತೋರಿಸಿ ಓದಿದ ಅವರ ಅವ್ಯಯ ಕಾವ್ಯದ ಸಾಲುಗಳು ಇವು:

ಅವನ ಜ್ಞಾನ ನಿಷ್
ಪ್ರಯೋಜಕವೆಂದು ಜನ ಅಂದುಕೊಂಡಿದ್ದರು
ಏನು ಮಾಡುತ್ತಾನೆ
ಇಷ್ಟೊಂದು ತಿಳಕೊಂಡು? ಇದೇ ಒಂದು ಭಾರ ಅಲ್ಲವೇ?
ಕಣಗಿಲೆ ಹೂವಿನ ಎಸಳುಗಳ ಎಣಿಸದೆಯು ನಾವು
ಬದುಕಿಕೊಂಡಿದ್ದೇವೆ ಇಷ್ಟರ ತನಕ ಹೀಗೆ
ಎಣಿಸುವುದು ಹೂವಿಗೆ ಅವಮಾನವಲ್ಲವೇ

ಆದರೂ ಜನ ಅವನ ಸಹಿಸುತ್ತಿದ್ದರು ಊರಿಗೊಬ್ಬ
ಬೇಕು ಇಂಥವ ಎಂಬ ರೀತಿಯಲ್ಲಿ

*****

ಈ ಹಿಂದೆ ತಿರುಮಲೇಶರ `ಅರಬ್ಬಿ’ ಕವನ ಸಂಕಲನಕ್ಕೆ ಬರೆದ ವಿಮರ್ಶಾ ಲೇಖನ:

`ಅರಬ್ಬಿ’ ಎಂದ ಕೂಡಲೇ ಕನ್ನಡದ ಆಡುನುಡಿಯಲ್ಲಿ ಅರಬ್ಬಿ ಸಮುದ್ರವೆಂದು, ಅರಬ್ಬಿ ಭಾಷೆಯೆಂದು ಮತ್ತು `ಕನ್ನಡಿಗ’ ಎನ್ನುವ ಹಾಗೆ – ಅರಬ್ ದೇಶದವ – ಎಂದು ವ್ಯಕ್ತಿಸೂಚಕವಾಗಿಯೂ ಧ್ವನಿಗೂಡುತ್ತದೆ. ಕನ್ನಡದ ಜಾಯಮಾನಕ್ಕೆ ಒಗ್ಗಿದ ಪದವೊಂದು ಸಮುದ್ರಕ್ಕೂ ವ್ಯಕ್ತಿಗೂ ಭಾಷೆಗೂ ಏಕಕಾಲಕ್ಕೆ ಅನ್ವಯವಾಗಿದೆ. ಸಮುದ್ರವು ಸಮುದಾಯದ ರೂಪಕವಾದರೆ, ಭಾಷೆಯು ಸಂಸ್ಕೃತಿಯ ವಕ್ತಾರಿಕೆಯಾಗಿದೆ. ಭಾಷೆಯ ಇಂಥ ವಿರಳಾತಿವಿರಳ ಸಂಯೋಜನೆಯು ಕನ್ನಡದ `ಅರಬ್ಬಿ’ ಎಂಬ ಪದದಲ್ಲಿ ಸಂಭವಿಸಿದೆ. ತಿರುಮಲೇಶರ `ಅರಬ್ಬಿ’ ಸಂಕಲನದಲ್ಲಿ ಇನ್ನೂರೈವತ್ತಕ್ಕೂ ಹೆಚ್ಚಿನ ಕವಿತೆಗಳಿವೆ. ಅವುಗಳನ್ನು – ಆಗತ ಕವಿತೆಗಳು, ಯೆಮನ್ ಕಲ್ಯಾಣಿ, ಸನಾ’ದ ಡೈರಿ, ಬೆಳಗಿನ ರಾಣಿ, ಮತ್ತು ಅಸರ್ ಬೆಟ್ಟದ ಕಡೆಗೆ – ಎಂದು ಐದು ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ಇಲ್ಲಿನ ಎಲ್ಲಾ ಪದ್ಯಗಳನ್ನು ಕವಿಯು ಯೆಮನ್ ನಗರದಲ್ಲಿ ವಾಸವಿದ್ದ ಪರಿಸರ ಮತ್ತು ಕಾಲದಲ್ಲಿ ಬರೆದಂಥವು. ಯೆಮನ್ ನಗರದಲ್ಲಿನ ಆಗುಹೋಗುಗಳ ಜೊತೆಜೊತೆಗೇ ತನ್ನೊಳಗಿನ ಆಗುವಿಕೆಯನ್ನೂ ಚಿತ್ರಿಸುವಂಥವು.

ಮನಸ್ಸು, ವಿಚಾರ, ಮತ್ತು ಪ್ರಜ್ಞೆಗಳ ಬಗ್ಗೆ ಮನುಷ್ಯನ ಜಿಜ್ಞಾಸೆ ಬಹಳ ಹಿಂದಿನಿಂದಲೂ ಮುಂದುವರೆಯುತ್ತ ಬಂದಿದೆ. ಮನಸ್ಸನ್ನು ಸಿಗ್ಮಂಡ್ ಫ್ರಾಯ್ಡ್ ಕಾಂಶಿಯಸ್ (ಬಾಹ್ಯ?), ಪ್ರೀ-ಕಾನ್‍ಷಿಯಸ್(ಆಂತರ್ಯ?), ಮತ್ತು ಅನ್‍ಕಾಂಶಿಯಸ್ (ಸುಷುಪ್ತಿ?) ಎಂದು ಮೂರು ವಿವಿಧ ಸ್ತರಗಳಲ್ಲಿ ವಿಂಗಡಿಸಿ ವಿಶ್ಲೇಷಿಸುತ್ತಾನೆ. ಪೌರಾತ್ಯ ಕಲ್ಪನೆಯಲ್ಲಿ ಪ್ರಜ್ಞೆಗೆ ನಾಲ್ಕು ಅವಸ್ಥೆಗಳನ್ನು ಹೇಳಲಾಗಿದೆ. ಯಾವ ಪ್ರಜ್ಞೆ ಜಗತ್ತನ್ನು ಕಾಣುತ್ತಿದೆಯೋ ಜಗತ್ತಿಗೆ ಕಾಣಿಸುವಂತಿದೆಯೋ ಅದು ವಿಶ್ವ, ಕನಸಿನ ಅವಸ್ಥೆಯಲ್ಲಿ ಯಾವುದು ಕಾಣುವುದೋ ಅದು ತೈಜಸ (ಕನಸಿನಲ್ಲಿ ಪ್ರಜ್ವಲಿತ ಮನಸ್ಸು!), ನಿದ್ರಾವಸ್ಥೆಯಲ್ಲಿರುವುದು ಪ್ರಾಜ್ಞ! ಇದು ನಮ್ಮ ವ್ಯವಹಾರಕ್ಕಿಂತ ವಿಭಿನ್ನ. ಎಲ್ಲದರಲ್ಲೂ ತೊಡಗಿರುವುದಲ್ಲ; ಎಲ್ಲವನ್ನೂ ನೋಡುತ್ತಿರುವುದಲ್ಲ; ಸುಮ್ಮನಿರುವುದು ಪ್ರಾಜ್ಞ. ನಮಗೆ ಪರಿಚಿತವಿರುವ ಈ ಮೂರೂ ಅಲ್ಲದ ಮತ್ತೊಂದು ಅವಸ್ಥೆ ತುರೀಯ. ಮನಸ್ಸು, ಬುದ್ಧಿ, ಅಹಂಕಾರ, ಚಿತ್ತ, ಚೇತನ ಎಂದು ಮನಸ್ಸಿನ ಕಾರ್ಯವೈಖರಿಯ ಆಧಾರದ ಮೇಲೆ ವಿಂಗಡಿಸುವುದು ಮತ್ತೊಂದು ವಿಧ. ಈ ಎಲ್ಲವೂ ಮನಸ್ಸನ್ನು ಬೇರೆಬೇರೆ ಖಚಿತ ಸ್ಥರಗಳಲ್ಲಿ ನಿಲ್ಲಿಸಿ ನೋಡುವುದು. ಆದರೆ ಕವಿಗೆ ಮನಸ್ಸಿನ ವಿಂಗಡನೆಯನ್ನು ಶೋಧಿಸುವುದಕ್ಕಿಂತಲೂ ಅದರ ವಿಸ್ತಾರದಲ್ಲಿ ವಿಹರಿಸುವುದು ಮುಖ್ಯ. ಕಾಣದಿರುವುದನ್ನು ಹುಡುಕಿ ನಿರ್ದಿಷ್ಟಗೊಳ್ಳುವುದಕ್ಕಿಂತಲೂ ಕಾಣುತ್ತಿರುವ ಅನಿಶ್ಚಿತತೆಯನ್ನು ನಿರ್ದುಷ್ಟವಾಗಿ ಅನುಭವಿಸುವುದು ಮುಖ್ಯ. ಖಚಿತವಾದುದರಲ್ಲಿ ಕಲ್ಪನೆಗೆ ಆಸ್ಪದವಿಲ್ಲ. ಮತ್ತು ಮನಸ್ಸಿನ ಬೇರೆ ಬೇರೆ ಮುಖಗಳು ಒಂದಕ್ಕೊಂದು ಅಪರಿಚಿತ ಎನ್ನುವ ಹಾಗಿದೆ. ಮನುಷ್ಯ ಇದರ ಒಳಗಿರುವವನೋ ಹೊರಗಿರುವವನೋ ಒಮ್ಮೊಮ್ಮೆ ಇದ್ದಾನೋ ಇಲ್ಲವೋ ಅನ್ನುವುದೂ ತಿಳಿಯದು.

ಈ ನೂಕುನುಗ್ಗಲಲ್ಲಿ ನಾನು ಏನಿದ್ದೇನೆ ಎಂದೇ
ಗೊತ್ತಾಗುವುದಿಲ್ಲ – ಒಂದು ಕ್ಷಣ ಜೊಂಪು
ಒಂದು ಕ್ಷಣ ಎಚ್ಚರ ಒಂದು ಕ್ಷಣ ನಾನೇ ಚಲಿಸಿದಂತೆ
ಒಂದು ಕ್ಷಣ ಚಲಿಸ್ಪಲಟ್ಟಂತೆ
ಸೂರ್ಯ ಪ್ರಕಾಶದ ಹಾಗೇ ಕತ್ತಲು ಕೂಡಾ
ಗೆರೆಯೆಳೆಯುತ್ತದೆ ನನ್ನ ಮೇಲೆ ಕಿಟಕಿಯ ಹಿಂದೆ
(ಕವಿತೆ: ಒಳಹೊರಗು)

ಒಂದು ಕ್ಷಣದೊಳಗೆ ಅನೇಕ ಕ್ಷಣ
ಸದ್ಯತೆಯೊಳಗೆ ಆದ್ಯತೆ ಮತ್ತು ಅನಂತತೆ – ಸದ್ಯತೆಯ ಅನುಭವ
ಮನುಷ್ಯನಿಗೆ

***

ಪಿಟೀಲು ವಾದಕನ ಗಮನ ಹಾಗೂ ಅವನ ಪಿಟೀಲುಕೋಲಿನ ಗಮನ
ಒಂದಾಗುವುದು ಸಾಧ್ಯವೇ – ಅವನ
ದೃಷ್ಟಿ ಯಾವುದರ ಮೇಲೂ ಇಲ್ಲ ಆದರೂ ಅದು ಅಂತರ್ಮುಖಿ
ಎನ್ನುವಂತಿಲ್ಲ ಬಹಿರ್ಮುಖಿ ಎನ್ನುವಂತಿಲ್ಲ
ಮುಂಜಾನೆ ಕ್ಷಣದಲ್ಲಿ ಹನಿ ಕೂಡ ಸ್ಥಬ್ಧ
ಆದರೆ ಧ್ವನಿ ಹಾಗಿರುವುದು ಸಾಧ್ಯವೇ ಅದು ನಿರಂತರ
ಸಂಚಾರಿ ಎಲ್ಲಿಂದ ಹೊರಟು ಎಲ್ಲಿ ತಲುಪುತ್ತದೆ ಎನ್ನುವಂತಿಲ್ಲ

ವಸತಿಗೃಹದ ವಾಚ್‌ಮನ್ ಕೂಡ ಕೂಗುತ್ತಾನೆ ತನ್ನ ಪರಿಚಿತನ
ಕರೆಯಲು
ಆ ಕೂಗು ಅವನಿಗೆ ಕೇಳಿಸುತ್ತದೆ ತಿರುಗಿ ನೋಡುತ್ತಾನೆ ಆದರೆ ಅದು ಅವನ
ಆಚೆಗೂ
ಹಾದುಹೋಗುತ್ತದೆ
(ಕವಿತೆ: ಸದ್ಯತೆ)

ಮನಸ್ಸು, ಶಬ್ದ, ಧ್ವನಿ, ಕಾವ್ಯ, ವಿಚಾರ, ಜಗತ್ತು, ಈ ಎಲ್ಲದರ ಅನಿಶ್ಚಿತ ಚಲನೆ, ಅದರ ಅನೂಹ್ಯತೆ ಮತ್ತು ಮನುಷ್ಯನ ದೈನಂದಿನ ಸ್ಥಿರತೆಯ ಆಚೆಗೂ ಅದು ಹಬ್ಬಿರುವ ಬೆರಗಿನಲ್ಲಿ ಒಳಗಿದ್ದವ ಹೊರಗಿದ್ದವ, ಮರೆಯಲು ಬಿಡು, ರಾತ್ರಿ ಕಂಡ ಕನಸು, ಪರಕಾಯ ಪ್ರವೇಶಿ, ಓ ಇವನೇ ಇವನೇ, ಯೋಚನೆ, ಒಳಹೊರಗು, ಮುಂತಾದ ಕವಿತೆಗಳು ವಿಹರಿಸುತ್ತವೆ.

ಕಾಲಾಂತರದಲ್ಲಿ ಸ್ಮೃತಿ ಜಾರುವ ಚಮತ್ಕಾರ
ಸಡಿಲಾದ ಒಳ ಉಡುಪಿನ ಹಾಗೆ
ಅದು ಇಷ್ಟರ ತನಕ ಇದ್ದುದೇ
ಒಂದು ಸೋಜಿಗ
(ಕವಿತೆ: ಸ್ಮೃತಿ)

ವಾಸ್ತವದಲ್ಲಿ ಪೂರ್ತಿವಿಚಾರಗಳ ಕುರಿತು ಭಯಪಡಬೇಕು
ಅವು ಫಿನಿಶ್ಡ್ ಪ್ರಾಡಕ್ಟುಗಳ ತರ ಕಫನ್‌ಗಳ ಹೊದ್ದಿರುತ್ವೆ
(ಕವಿತೆ: ಅಪೂರ್ಣ ವಿಚಾರಗಳು)

ಇನ್ನಿಲ್ಲಿ ನಿಲ್ಲಲಾರೆ
ಅಗತ್ಯಕ್ಕಿಂತ ಹೆಚ್ಚಿನ ಅರಿವ ನಾ ತಾಳಲಾರೆ
ಯಾಕೆಂದರೆ ಅದು ಕಲ್ಪನೆಯ ಕೊಲೆಗಾರ
(ಕವಿತೆ: ಬೆಟ್ಟ)

ಸ್ಮೃತಿಯಂತೆ ವಿಸ್ಮೃತಿಯೂ ಮನಸ್ಸಿನ ಒಂದು ಗುಣ. ಅದೇ ಈ ಸೃಷ್ಠಿಯ ಅಪೂರ್ವತೆ. ಈ ಅಪೂರ್ವತೆ ಒದಗಿರುವುದು ಅದರ ಅಪೂರ್ಣತೆಯಲ್ಲಿ. ಹಾಗಾಗಿ ಪೂರ್ಣತೆಯ ಪರಿಕಲ್ಪನೆಯನ್ನು ಒಡೆಯಲೇಬೇಕಿದೆ. `ನಮ್ಮ ಈಸ್ಥೆಟಿಕ್ಸ್’ ಕವಿತೆ ಇದೆಲ್ಲವನ್ನೂ ಒಳಗೊಳ್ಳುತ್ತದೆ. ಯುಗವು ಪೂರ್ಣಪ್ರತಿಮೆಗಳಿಂದ ಬೇಸತ್ತುಹೋಗಿದೆ. ಸಮ್ಯಕ್ ದೃಷ್ಟಿ ಇತ್ಯಾದಿ ಮಾತುಗಳಿಂದ ಸುಸ್ತಾಗಿದೆ ಎಂದು ಶುರುವಾಗುವ ಕವಿತೆ:

ದೈವತ್ವಕ್ಕೆ ಏರಿದ ಶಿಲೆ ವಾಪಸು
ಕಲ್ಲಾಗುವುದಕ್ಕೆ ಏನಾಗಬೇಕು
ಒಂದು ಕೈಬೆರಳು ಮುರಿದರೆ ಸಾಕು

***

ಶಿಲಾಮೂರ್ತಿ ಒಡೆದರೂ ಮರಳಿ ಅದು ಪೂರ್ತಿ ಕಲ್ಲಾಗುವುದಿಲ್ಲ
ಭಗ್ನಕಲೆಯಾಗುತ್ತದೆ

ಒಮ್ಮೆ ದೈವತ್ವ ಮುಟ್ಟಿದ್ದು
ಸ್ವಲ್ಪವಾದರೂ ಅದನ್ನು ಉಳಿಸಿಕೊಂಡಿರುತ್ತದೆ-ಸ್ವಲ್ಪ ಉಳಿಸಿಕೊಂಡಾಗಲೇ
ಅದು ನಿಜವಾಗುವುದು-ಪೂರ್ತಿಯಾಗಿರೋದೆಲ್ಲ ಈಗದರ ಅಣಕ

ನೀವು ಚಂದ್ರಮುಖಿಯರ ಹೊಗಳದಿರಿ
ನಮಗೆ ತುಸು ಕೋಲುಮುಖದವರು ಇಷ್ಟ

ನೀವು ಕತೆಗೊಂದು ಕೊನೆ ಬೇಕು ಎಂದಿರಿ
ನಾವು ಕತೆ ಹೇಳುತ್ತ ಅರ್ಧದಲ್ಲೆ ನಿಂತಿವಿ

ನೀವು ನೇಯ್ದುದನ್ನು ನಾವು ಅಲ್ಲಲ್ಲಿ
ಬಿಚ್ಚಿ ಹೊಲೀತೀವಿ ನಮ್ಮ ಡೆನಿಮ್ ಪ್ಯಾಂತುಗಳನ್ನು
ಬೇಕಂತಲೇ ಹರೀತೀವಿ

ಆವರ್ತನದಲ್ಲಿ ಯಾವುದೂ ಮೊದಲಿನಂತಿರೋದಿಲ್ಲ ಎನ್ನುವುದೂ ಗೊತ್ತಿದ್ದರೂ, ಒಡೆದು ಕಟ್ಟುವುದೇ ಈಗಿರುವ ಮಾರ್ಗ. `ಕಟ್ಟುವುದು ಸಹಜ; ಮುರಿಯುವುದು ಮಜ’ ಎನ್ನುತ್ತಾರೆ (ಕಟ್ಟುವುದು). ಮತ್ತು ಅದು ಅನಿವಾರ್ಯವೂ ಹೌದು.

ಇಡೀ ರಾತ್ರಿಯ ನಿರಾಳವನ್ನು ನಾ ಹೇಗೆ ಸಹಿಸುತ್ತೇನೆ
ಧರಿತ್ರಿಯೇ
ಮುಚ್ಚಿರುವುದ ಯಾವುದನ್ನು ನಾನೀಗ
ಒಡೆಯದೇ ತೆಗೆಯುವಂತಿಲ್ಲ
(ಕವಿತೆ: ಅವಾಸ್ತವತೆಯ ಪ್ರಭಾವಳಿ)

ಉತ್ಸವಮೂರ್ತಿಯ ಮಾತ್ರ ನೀರಿಗೆಸೆಯುತ್ತಾರೆ
ಪೂಜಾಮೂರ್ತಿ ಸುರಕ್ಷಿತ ಎಂದುಕೊಳ್ಳುತ್ತೇವೆ
ಅದೂ ತಪ್ಪು-ಮೂರ್ತಿಭಂಜಕರು ನುಗ್ಗದ ಜಾಗವೇ ಇಲ್ಲ

ಹಾಗೂ
ಪ್ರತಿಷ್ಠಾಪಿಸಿದವರೇ ಭಂಜಕರೇ ಆಗುವುದು
ಕಾಲದ ಗುಣ ಅಥವ
ಇತಿಹಾಸಕ್ಕೆ ನಾವು ತೆರಬೇಕಾದ ಋಣ

***

ಎಲ್ಲವೂ ಚಂದ ಇತಿಹಾಸದ ರಾಕ್ ಗಾರ್ಡನ್‍ಗೆ

ಕೆತ್ತಿದಂತೆಯೇ ಕೆಡವಿದ ಚೆಕ್ಕೆಗಳೂ
ಉಪಯೋಗವಾದಾವು ಇನ್ನು ಯಾತಕ್ಕೋ
ಕಲೆಗೆ
(ಕವಿತೆ: ಯಾರಿಗಾದರೂ)

ಪೂರ್ಣವಾಗಿರುವುದು ನ್ಯೂನ್ಯತೆಗೆ ಒಳಗಾಗುವುದಕ್ಕೆ ಸಣ್ಣದೊಂದು ಐಬು ಸಾಕು. ಆ ಪೂರ್ಣತೆಯನ್ನು ಕಾಯ್ದುಕೊಳ್ಳಲು ಹೆಡೆಯೆತ್ತಿ ನಿಂತಿರುವ ಹಾವಿನಂತೆ ಪ್ರತಿಯೊಂದು ಸೂಕ್ಷ್ಮ ಸಂಚಲನಕ್ಕೂ ಸದಾ ಎಚ್ಚರವಾಗಿರುವ ಅನಿವಾರ್ಯತೆ ಇದೆಯೇ? ಈ ಭಯವೇ ಕವಿಯನ್ನು ಪೂರ್ಣತೆಯಿಂದ ದೂರ ನಿಲ್ಲುವಂತೆ ಮಾಡಿದೆಯೇ? ಅಥವ ಅಂಥ ಭಯಗ್ರಸ್ಥ ಸ್ಥಿತಿ ಕವಿಗೆ ಅಸಹಜವೇ? ಎನ್ನುವ ಪ್ರಶ್ನೆಗಳ ಜೊತೆಯಲ್ಲೇ ನಿಜವಾಗಿ ಪೂರ್ಣವಾಗಿರುವುದಕ್ಕೆ ಅಂಥದ್ದೊಂದು ಭಯವಿದೆಯೇ ಎನ್ನುವ ಪ್ರಶ್ನೆಯೂ ಉದ್ಭವಿಸುತ್ತದೆ. ಒಡೆದು ಕಟ್ಟುವ ಚೆಲುವನ್ನು ಕವಿ ಹೇಳುತ್ತಿರುವಾಗಲೇ ಇದೇ ಪೂರ್ಣತೆಯ ಸಹಜ ಸ್ಥಿತಿಯೂ ಆಗಿರಬಹುದಲ್ಲವೇ ಅನ್ನಿಸುತ್ತದೆ. ಅಪೂರ್ಣತೆ ಇರುವುದರಿಂದಲೇ ಪೂರ್ಣತೆಯ ಕಲ್ಪನೆಗೆ ಒಂದು ನೆಲೆ ಸಿಕ್ಕಿದೆ ಎನ್ನುವಂತೆಯೇ ಪೂರ್ಣತೆಯ ಕಲ್ಪನೆಯಿಂದಾಗಿಯೇ ಅಪೂರ್ಣತೆಯ ಗುರುತಿಸುವಿಕೆಗೂ ಒಂದು ಮೌಲ್ಯ ಸಿಕ್ಕಂತಾಗಿದೆ. ಹಾಗಾಗಿ ಅಪೂರ್ಣತೆಯನ್ನು ನಿರಾಳವಾಗಿ ಸ್ವೀಕರಿಸುವ ಕವಿಗೆ ಪೂರ್ಣತೆಗೆ ಹೆದರುವ ಅವಶ್ಯಕತೆಯೂ ಇರದು.

(ವಿಕ್ರಂ ಹತ್ವಾರ್‌, ಕೆ.ವಿ. ತಿರುಮಲೇಶ್‌ ಹಾಗೂ ಎಂ.ಎಸ್. ಶ್ರೀರಾಮ್)

ಹೀಗೆ ಅಪೂರ್ಣತೆ ಮತ್ತು ಅನೂಹ್ಯತೆಗಳಲ್ಲಿ ಬದುಕುತ್ತಿರುವ ಮನುಷ್ಯನಿಗೆ `ಆಯ್ಕೆ’ ಅನ್ನುವಂಥದ್ದು ಇದೆಯೇ ಎನ್ನುವುದನ್ನೂ ತಿರುಮಲೇಶರ ಕವಿತೆಗಳು ಪ್ರಶ್ನಿಸಿಕೊಳ್ಳುತ್ತವೆ. ಸೃಷ್ಟಿಯ ಕೆಲವೊಂದು ಸಂಗತಿಗಳಲ್ಲಿ ಮನುಷ್ಯನಿಗೆ ಆಯ್ಕೆಯ ಸ್ವಾತಂತ್ರ್ಯವಿಲ್ಲ ಎನ್ನುವುದು ತಿಳಿದಿದ್ದರೂ, ಇರುವ ಆಯ್ಕೆಗಳ ಕುರಿತು ಧೃಡವಾದ ನಿಲುವಿದೆ. ಸಭ್ಯ ಸ್ವಸ್ಥ ಸಮಾಜವನ್ನು ರೂಪಿಸಲು ಬೇಕಿರುವ ಕ್ರಾಂತಿಯಲ್ಲಿ ಅಪಾರವಾದ ಒಲವಿದೆ. `ಎಲ್ಲ ಕವಿಗಳೂ ಇಂಥ ಶಿಕ್ಷೆಗೊಳಗಾದವರೇ. ಸಾರ್ವಜನಿಕತೆಯ ಕೊಂದು ರಕ್ತಸಿಕ್ತವಾಗದೆ ಕೈ ಬರೆಯದೇ ಏನನ್ನೂ?’ ಎಂದು ಕೇಳುತ್ತಲೇ,
`ನಾನು ಕೇಳುತ್ತೇನೆ
ಜನನಿಬಿಡ ರಸ್ತೆ ಅಥವ ನಿರ್ಜನ ರಸ್ತೆ
ಎರಡೂ ಕೆಲವು ಸಲ ಒಟ್ಟಿಗೇ
ನನಗೆ ಬೇಕು’
ಎನ್ನುತ್ತ ಜನಾನುರಾಗಿಯಾಗುತ್ತಾರೆ. ಹಾಗಾಗಿ ಸನಾ’ದ ಡೈರಿ ಕವಿತೆಗಳಲ್ಲಿ ಯೆಮನ್ ನಗರದ ರಾಜಕೀಯ ವಿಪ್ಲವ ಮತ್ತು ಸರ್ವಾಧಿಕಾರದ ವಿರುದ್ಧ ಯುವಜನತೆಯ ಸ್ವಾತಂತ್ರ್ಯ ಹೋರಾಟಗಳನ್ನು ಕಾಣಿಸುತ್ತಾರೆ. ಅವು ನೇರ ನಿರೂಪಣೆಗಳಂತಿದ್ದರೂ ಬಡಬಡಿಕೆಯಿಲ್ಲ. ತನ್ನ ಕವಿತೆಗಳಿಂದಲೇ ಕ್ರಾಂತಿ ತಂದುಬಿಡುವೆ ಎನ್ನುವ ಪೊಳ್ಳು ಪೋಸುಗಾರಿಕೆಯಿಲ್ಲ. ಕವಿಯಾದವನು ಘೋಷವಾಕ್ಯಗಳಲ್ಲಿ ಮಾತಾಡುವುದಿಲ್ಲ. ಅವನ ಪ್ರತಿಭಟನೆಯಲ್ಲೂ ಕವಿತ್ವವಿರುತ್ತದೆ.

ಜನಕೂಟದಲ್ಲಿದ್ದೂ ನಾನು ಒಂಟಿಯಾಗಿರಬಹುದು
ಒಂಟಿಯಾಗಿದ್ದೂ ಕಾಲದೇಶಗಳ ಒಳಗೊಂಡಿರಬಹುದು
ಓ ನನ್ನ ಪ್ರಜ್ಞೆಯೇ ಸಾಕ್ಷಿಯಾಗಿರು
ಪ್ರತಿಯೊಂದು ರಕ್ತಬಿಂದುವಿಗೆ (ಮಾರ್ಚ್ 2, 2011)

ನನ್ನ ವಿದ್ಯಾದೇವಿ ಹೊಲದಲ್ಲಿದ್ದಳು ಅವಳಿಗೆ ನಾಲ್ಕು
ಕೈಗಳಿರಲಿಲ್ಲ ಇದ್ದುದು ಎರಡೇ ಕೈಗಳು ಅವೂ
ಕೊಳೆಯಾಗಿದ್ದವು ಹಿಂಗೈಯಿಂದ ಮುಖವೊರೆಸಿ ಆ ಮುಖವೂ
ಕೊಳೆಯಾಗಿತ್ತು ನನಗವಳ ಮಾತೇ ಸಾಕಾಗಿತ್ತು
ಪ್ರತಿಯೊಂದು ಧಿಕ್ಕಾರದಲ್ಲೂ ನನಗದೇ ಕೇಳಿಸುತ್ತದೆ ಮತ್ತು
ಪ್ರತಿಯೊಂದು ಸಾಂತ್ವನದಲ್ಲೂ

ಈಗ ನನಗವಳ ಧ್ವನಿ ಅರೇಬಿಯಾದ ಬೀದಿಗಳಲ್ಲಿ
ಕೇಳಿಸುತ್ತದೆ ನಾನೆಲ್ಲೆ ಹೋದರೂ
ನನಗಿಂತ ಮೊದಲೇ ಅವಳಲ್ಲಿ ಇರುತ್ತಾಳೆ (ಮಾರ್ಚ್ 3, 2011)

ಅನಿಶ್ಚಿತತೆ ಮತ್ತು ಖಾಚಿತ್ಯ, ಆಯ್ಕೆ ಮತ್ತು ಅನಿವಾರ್ಯತೆ, ಏಕಾಂತ ಮತ್ತು ನಿಬಿಡತೆ, ಒಂಟಿತನ ಮತ್ತು ಸಾರ್ವಜನಿಕತೆಗಳ ನಡುವೆ ತುಯ್ಯುತ್ತಲೇ ಇರುವುದರಿಂದ ಇವು ವ್ಯಷ್ಟಿ ಮತ್ತು ಸಮಷ್ಟಿಗಳೆರಡನ್ನೂ ಒಳಗೊಳ್ಳುವುದಕ್ಕೆ ಸಾಧ್ಯವಾಗಿದೆ.

*****

ತಿರುಮಲೇಶರನ್ನು ಪಾಶ್ಚಿಮಾತ್ಯ ಕಲೆಯತ್ತ ಒಲವುಳ್ಳ ಸಾಹಿತಿ ಎನ್ನುವವರಿದ್ದಾರೆ. ಅದಕ್ಕೆ ತಕ್ಕ ಹಾಗೆ ಕಾಫ್ಕ, ಶೇಕ್ಸ್‌ಪಿಯರ್, ನೀತ್ಸೆ, ಡೆರಿಡಾ, ಮುಂತಾದವರ ವಿಚಾರಗಳನ್ನು ಅವರು ತಮ್ಮ ಕವಿತೆಗಳಲ್ಲಿ ತರುತ್ತಲೇ ಇದ್ದಾರೆ. ಬೇರೆ ಬೇರೆ ದೇಶದ ಕಲಾ ಮಾಧ್ಯಮದ ವ್ಯಕ್ತಿತ್ವಗಳನ್ನು ಅವರ ಪಡಿಪಾಟಲನ್ನು ಕವಿತೆಗಳಲ್ಲಿ ಪ್ರಸ್ತಾಪಿಸುವ ಉದ್ದೇಶವಾದರು ಏನು? ಕೆಲವೊಮ್ಮೆ ಬೀಡುಬೀಸಾದ ವಿಚಾರಗಳೇ ಕವಿತೆಗಳಾಗಿ ಮಾರ್ಪಟ್ಟಂತೆಯೂ ಕಾಣುತ್ತವೆ. ಆದರೆ ಇಲ್ಲಿ ತನಗೆ ತಿಳಿದಿರುವ ಸಂಗತಿಗಳನ್ನು ನಿಮ್ಮ ಮುಂದೆ ಪ್ರದರ್ಶಿಸುತ್ತಿದ್ದೇನೆ ಎನ್ನುವ ಬೀಗುವಿಕೆಗಿಂತಲೂ, ಕನ್ನಡದ ಮತಿ ವಿಶ್ವಾದ್ಯಂತ ವಿಸ್ತರಿಸಲಿ ಎನ್ನುವ ಒತ್ತಾಸೆಯಿದೆ. ಇಂಥ ಹಲವಾರು ಆಸಕ್ತಿಕರ ಸಂಗತಿಗಳನ್ನು ಹಂಚಿಕೊಳ್ಳಬೇಕೆಂಬ ಹಂಬಲವಿದೆ. ಜೊತೆಗೆ ಅವರ ಮೇಲಿನ ಎಲ್ಲ ಅಭಿಪ್ರಾಯಗಳಿಗೆ ಮುಖಾಮುಖಿಯಾಗುತ್ತ ತನ್ನತನವನ್ನು ನಿರೂಪಿಸಿಕೊಳ್ಳುವಂತೆ ಜ್ವಾಲಾಮುಖಿ, ಎಡಗೈ ಬರಹ, ಬೇಕಾದರೆ ಸಾಕಿ ಇಲ್ಲದಿದ್ದರೆ ಬಿಸಾಕಿ, ಪ್ರವಾಸಿ, ಗೆರೆ, ಕಳೆದುಹೋದವ, ಒಂಟಿ ಇರುವೆ, ಗೂಡು ಕಳಕೊಂಡ ಜೇನ್ನೊಣ, ಮೈಲಿಗಲ್ಲುಗಳ ಮೌನ, ವಿಳಾಸ ಮುಂತಾದ ಕವಿತೆಗಳಿವೆ. ಇವುಗಳಲ್ಲಿ ಕವಿಯ ಒಂಟಿತನ ಅಲೆಮಾರಿತನವು ಸೇರಿಕೊಂಡಿದ್ದರೂ, ಅವರ ಹುಟ್ಟೂರಿನ ಪ್ರತಿಮೆಗಳೂ ಅವರ ಜೊತೆಯಲ್ಲೇ ಸಾಗಿವೆ.

ಅಲ್ಲದೆ, ಕಲ್ಲಂಗಡಿ ಹಣ್ಣು, ಮಸ್ಕ್ ಮೆಲನ್, ಶಿಲಾ ಪ್ರತಿಮೆಗಳು, ಸಾಲಭಂಜಿಕೆಗಳು, ಬೆಟ್ಟ, ಕಣಿವೆ, ಸಮುದ್ರ, ಗುಹೆ, ಇತ್ಯಾದಿ ರೂಪಕಗಳ ಜೊತೆ, ಈ ಮುಂಚಿನಿಂದಲೂ ತಿರುಮಲೇಶರ ಬ್ರ್ಯಾಂಡೆಡ್ ಪ್ರತಿಮೆಯಾದ `ಬೆಕ್ಕು’ ಈ ಸಂಕಲನದ ಹಲವಾರು ಕವಿತೆಗಳಲ್ಲಿ ಹೊಕ್ಕಿಕೊಂಡಿದೆ. ಪ್ರತಿಯೊಂದು ಕವಿತೆಯಲ್ಲು ಅದು ಬೇರೆ ಬೇರೆ ರೂಪದಿಂದ ಬಂದರೂ ಅದರ ಮೂಲರೂಪ ಏನಿರಬಹುದು ಎನ್ನುವ ಕುತೂಹಲಕ್ಕೆ ಈ ಸಂಕಲನದಲ್ಲಿ ಕೊನೆಗೂ ಒಂದು ಚಿತ್ರ ಸಿಗುತ್ತದೆ:

ಒಂಟಿತನ ಬೆಕ್ಕಿನ ಗುಣ ಅದು ಯಾಕೆ ಒಂಟಿಯಾಯಿತೋ ಗೊತ್ತಿಲ್ಲ
ಕಾಸರಗೋಡಿನ ಊರ ಬೆಕ್ಕುಗಳಲ್ಲಿ ಕಂಡಿದ್ದೇನೆ ಹೈದರಾಬಾದಿನ ಸೀಮೆ ಬೆಕ್ಕುಗಳಲ್ಲು
ಕಂಡಿದ್ದೇನೆ ಸನಾ’ದ
ಅರಬ್ಬೀ ಬೆಕ್ಕುಗಳಂತೂ ಪ್ರಸಿದ್ಧವೇ ಅವೆಲ್ಲ ಕೂಟಕ್ಕೆ ಮತ್ತು ತಾಯ್ತನಕ್ಕೆ ಮಾತ್ರ
ಸೇರುತ್ತವೆ
ಚಳಿಯಲ್ಲಿ ಮರಿಗಳು ಒಂದರ ಮೇಲೊಂದು ಬಿದ್ದು ಮುದ್ದೆಯಾಗುತ್ತವೆ ಬೆಳೆದು
ದೊಡ್ಡದಾದಂತೆಲ್ಲ ಬೇರೆ
ಬೇರೆಯೆ ಆದರೂ ನಾನು
ಕಂಡಿದ್ದೇನೆ ಆಶ್ರಯ ಕೋರುವ ಬೆಕ್ಕುಗಳನ್ನು ಅವು ಬಂದು
ಮುಚ್ಚಿದ ಬಾಗಿಲುಗಳನ್ನು ಪರಚುತ್ತವೆ
ಜನ ಡೆಡ್ ಮ್ಯಾನ್ ವಾಕಿಂಗ್ ನೋಡ್ತ ಇರೋವಾಗ
(ಕವಿತೆ: ತೆರೆ-ಇರುವೆ-ಜೇನ್ನೊಣ)

ಬಾಗಿಲು ಮುಚ್ಚಿರುವವರು ಯಾರು ಎನ್ನುವುದನ್ನು ನಮಗೆ ನಾವೇ ಕೇಳಿಕೊಳ್ಳಬೇಕು. ಕವಿಗೆ ವಯಸ್ಸಿನ ಮಾಪನವಿಲ್ಲ. ಆದರೂ ಹೇಳಬೇಕಾದ ಮಾತೆಂದರೆ, ತಿರುಮಲೇಶರು ಎಪ್ಪತ್ತಾರರಲ್ಲೂ ಯಾವ ಆಡಂಬರವಿಲ್ಲದೆ ಕವಿತೆಗಳ ಬರೆಯುತ್ತಾರೆ, ಅದರ ಬಿಡುಗಡೆ ಸಂಭ್ರಮವನ್ನೂ ಆಚರಿಸದೆ. ಅವರಂತೂ ಇವೆಲ್ಲದರಿಂದ ಬಹಳ ದೂರ ಸಾಗಿರುವಂತೆ ಕಾಣುತ್ತಾರೆ.

ಪತನವಾದಾಗಲೇ ಮನುಷ್ಯ ಪುನರುತ್ಥಾನಗೊಳ್ಳುವುದು ಮತ್ತು
ಚಪ್ಪಾಳೆಗೆ ಕಾಯದಿರುವುದೇ ಮಹತ್ವದ ವಿದಾಯ
ಸದ್ದು ಕೇಳಿಸಿದಾಗ ನೀನು ಬಹುದೂರ ಹೋಗಿರುತ್ತೀ ಅದು ಮೆಚ್ಚುಗೆಯೋ
ಗೇಲಿಯೋ ತಿಳಿಯ ಬಯಸದಿರುವುದೇ ನಿನ್ನ ಶ್ರೇಷ್ಠತೆ ಮತ್ತು ಪ್ರತ್ಯೇಕತೆ
(ಕವಿತೆ: ಶ್ರೇಷ್ಠತೆ)

ವಿದಾಯದ ಮಾತು ಬಂದಾಗ ಈ ಸಂಕಲನದ ಮೊದಲಿಗೇ ಕಾಣಿಸುವ `ಕಾಲದ ಅಗತ್ಯಕ್ಕೆ ಐದು ಪ್ಯಾರಗಳು’ ಎಂಬ ಕವಿತೆ ನೆನಪಾಗುತ್ತದೆ.

ಭಯದ ಭಯವೇ ನಿಜವಾದ ಭಯ.
ಕದ ಬಡಿಯುವುದಕ್ಕಿಂತ
ಅದು ಯಾವಾಗ ಬಡಿಯುತ್ತದೆ ಎಂದು ಕಾಯುವುದು ಭಯ

ಇಲ್ಲಿ ಕಾಲವೆಂದರೆ ಯಾವ ಕಾಲ? ಈಗಿನ ಕಾಲಕ್ಕೆ ತಕ್ಕಂತೆ ಎಂದುಕೊಂಡು ಓದುತ್ತ ಹೋದಂತೆ ಈ ಸಾಲು ಬಂದು, ಅದು ಕಾಲಕ್ಕೆ ಹಠಾತ್ತನೇ ಹೊಸದೇ ಧ್ವನಿಯನ್ನು ಕೊಡುತ್ತದೆ. ಬದುಕಿನ ಅಂಚಿನಲ್ಲಿರುವ ಕಾಲ ಅಥವ ಸಾವು ಎನ್ನುವ ಅರ್ಥವೂ ಬರುತ್ತದೆ. ಆದರೆ ಕವಿತೆ ಯಾವುದನ್ನೂ ಇದು ಹೀಗೇ ಎಂದು ನೇರವಾಗಿ ಹೇಳುವುದಿಲ್ಲ. ಕೂಡಲೇ ಈ ಕವಿತೆ ಉಪಾಯವಾಗಿ ಬೇರೆ ಗೆರೆಗಳತ್ತ ತಿರುಗಿಕೊಳ್ಳುತ್ತ ಸಾಗುತ್ತದೆ:

ಒಮ್ಮೆ ಮುಗಿಯಲಿ ಎಂದು ಕೊರಳೊಡ್ಡಲು
ತಯಾರಿದ್ದೇವೆ
ಬೆಟ್ಟದ ಮೇಲೇರಿ ಆಕಾಶ ಬುಟ್ಟಿ
ಹಾರಿಸುವುದು
ಸಮುದ್ರ ಕಿನಾರೆಯಲಿ ಪಿಯಾನೋ ಇರಿಸಿ
ಬಾರಿಸುವುದು
ಇದೆಲ್ಲವೂ ನಿರಾಕರಿಸುವ ಉಪಾಯ

ಅಲ್ಲ ಇದು ಯಾವುದೂ ಅಲ್ಲ ಮಾತೆಯರ ದಿನ
ಆಚರಿಸದೆ ಇರೋದಕ್ಕೆ
ಅದಕ್ಕೆ ಕಾರಣ ಮಿದುವಾಗುವ ಭಯ
ಮತ್ತೆ ಮಗುವಾದೇವೆನ್ನುವ ಭಯ

ಮನುಷ್ಯನ ಎಲ್ಲ ಭಯಗಳ ಒಳಗೆ ಅಡಗಿರುವುದು ಸಾವಿನ ಭಯ ಎನ್ನುವುದಾದರೆ, ಆ ಭಯದ ಒಳಗೂ ಅಡಗಿರುವುದು ಮತ್ತೆ ಮಗುವಾಗುವ ಭಯ ಎನ್ನುವುದನ್ನು ಈ ಕವಿತೆ ತಣ್ಣಗೆ ಕಾಣಿಸುತ್ತದೆ. ಸಾವಿನ ದಿನ ಮಾತೆಯರ ದಿನವೇ ಆಗಿರಬಹುದು ಎನ್ನುವುದನ್ನು ಧ್ವನಿಸುತ್ತದೆ.

ಹೀಗೆ ಮಾತಿಗೆ ಸಿಗುವ ಅನೇಕ ವಿಚಾರಗಳು ಅವರ ಕವಿತೆಗಳಲ್ಲಿವೆ. ಆದರೆ ಮಾತಿಗೆ ಸಿಗದ, ಧ್ವನಿಶಕ್ತಿಯಲ್ಲಿ ಅವಾಕ್ಕಾಗಿಸುವ ಅನೇಕ ಕವಿತೆಗಳೂ ಈ ಸಂಕಲನದಲ್ಲಿದೆ. ತಿರುಮಲೇಶರ ಕವಿತೆಗಳು ಒಟ್ಟಾರೆಯಾಗಿ ಯಾವ ಅನುಭವವನ್ನು ನೀಡುತ್ತಿವೆ ಎಂದರೆ – ಸಮುದ್ರದ ಅಲೆಗಳು ಒಂದರ ಹಿಂದೊಂದು ಮಗಚುತ್ತ ಬಂದು, ಕಟ್ಟಿರುವ/ಬರೆದಿರುವ ಸಂಗತಿಗಳನ್ನು ಅರೆಬರೆ ಅಳಿಸುತ್ತ, ತೀರವನ್ನು ತೇವದ ಮಂಪರಿಗೆ ನಿರಂತರ ನೂಕುತ್ತಿರುವಂತೆ…. ನಿಜವಾದ ಕಲೆ ಉತ್ಕಟತೆ ತಟಸ್ಥವಾದಂತೆ…. ಕುಣಿವ ನರ್ತಕಿಯ ಹೆಜ್ಜೆ ದಿಗಂತದಾಚೆ…