ಕಲೆಯು ಕಾಲಕ್ಕೆ, ಕಾಲವು ನಟನಿಗೆ ಅನುಗುಣವಾಗಿ ತಿರುವುಗಳನ್ನು ಪಡೆಯುತ್ತದೆ ಎನ್ನುವುದನ್ನು ಮರೆಯಬಾರದು.  “ಕಾವ್ಯದ ರಚನೆ ಎಂದರೆ ಅದು ಭಾವನೆಗಳಲ್ಲಿ ಮುಳುಗಿಹೋಗುವುದಲ್ಲ, ಆದರೆ ಭಾವನೆಗಳಿಂದ ಮುಕ್ತನಾಗುವುದು, ವ್ಯಕ್ತಿತ್ವವನ್ನು ಪ್ರದರ್ಶಿಸುವುದಲ್ಲ ಬದಲಾಗಿ ತನ್ನ ವ್ಯಕ್ತಿತ್ವದಿಂದ ಬಿಡುಗಡೆ ಹೊಂದುವುದು” ಎಂದು ಎಲಿಯಟ್‌ ಹೇಳುತ್ತಾನೆ. ದೇರಾಜೆಯವರ ಸಂದರ್ಭದಲ್ಲಿ ಇದನ್ನು ನಾವು ಚೆನ್ನಾಗಿ ಅನ್ವಯಿಸಬಹುದು. ಆದರೆ ಪ್ರೇಕ್ಷಕರು ಅವರ ಹಾಸ್ಯರಸವನ್ನು ಇಷ್ಟಪಟ್ಟಿದ್ದಾರೆ. ಸಮಗ್ರವಾಗಿ ಅವರ ಕುರಿತಾಗಿ ಹೇಳಬೇಕಾದರೆ ಅವರು ನಿರ್ವಹಿಸಿದ ʻಉತ್ತರಕುಮಾರʼ, ʻಸುಗ್ರೀವʼ, ʻಸೂರ್ಪನಖಿʼಯ ಪಾತ್ರಗಳ ಕುರಿತು ಹೇಳುತ್ತಾರೆ.
ಅರ್ಥದಾರಿಗಳಾಗಿದ್ದ ದೇರಾಜೆ ಸೀತಾರಾಮಯ್ಯನವರ ಕುರಿತು ನಾರಾಯಣ ಯಾಜಿ, ಸಾಲೇಬೈಲು ಬರಹ

ದೇರಾಜೆ ಸೀತಾರಾಮಯ್ಯನವರ ಅರ್ಥಗಾರಿಕೆಯನ್ನು ನನ್ನ ಬಾಲ್ಯದಲ್ಲಿ ಕೇಳಿದ ನೆನಪು ಅಸ್ಪಷ್ಟವಾಗಿದೆ. ಸುಮಾರು ಒಂದೆರಡನ್ನು ತಾಳಮದ್ದಳೆಗೆ ಕಡತೋಕಾವೂ, ಕುಮಟಾವೋ ಎಲ್ಲಿಯೋ ಸರಿಯಾಗಿ ನೆನಪಿಲ್ಲ, ಹೋಗಿದ್ದು ನೆನಪಿದೆ. ಆದರೆ ಅದು ಇಷ್ಟೇ ಚೆನ್ನಾಗಿ ಬಂದಿತ್ತು ಎಂದು ಹೇಳುವಷ್ಟು ನನ್ನ ಪ್ರಾಯವಾಗಿರಲಿಲ್ಲ. ಬಿಳಿಯ ಸಾದಾ ಅಂಗಿಯನ್ನು ತೊಟ್ಟ ಸಣಕಲ ವ್ಯಕ್ತಿಯೊಬ್ಬರು ರಂಗದಮೇಲೆ ಬಂದು ಕುಳಿತಾಗ “ಅವರೇ ನೋಡು ದೇರಾಜೆಯವರು” ಎಂದು ನನ್ನ ಆಯಿ ನನ್ನ ಗಮನ ಸೆಳೆದಿದ್ದರು. ಆದರೆ ಅವರು ಅರ್ಥ ಹೇಳಲು ಕುಳಿತಾಗ ಅದುತನಕವೂ ಇದ್ದ ಸದ್ದು ಸಪ್ಪಳಗಳೆಲ್ಲ ಒಮ್ಮೆಲೆ ನಿಂತುಬಿಟ್ಟಿತ್ತು. ಕುಳಿತ ಅವರನ್ನು ನೋಡಬೇಕೆಂದೆರೆ ನಾನು ಎದ್ದು ನಿಲ್ಲಬೇಕಾಗಿತ್ತು. ಎರಡು ಮಾತುಗಳನ್ನಾಡಿದ್ದೇ ತಡ ಸಭೆಯಲ್ಲೆಲ್ಲಾ ನಗು ಹರಡಿಬಿಟ್ಟಿತ್ತು. ಇಡೀ ಸಭೆಯಲ್ಲಿ ಚಪಾಳೆಯೊ ಚಪ್ಪಾಳೆ. ಇದು ಇಡೀ ತಾಳಮದ್ದಳೆ ಮುಗಿಯುವ ತನಕ ಹಾಗೇ ಇತ್ತು. ನನ್ನ ಆಯಿ ಆ ಪ್ರಸಂಗ ‘ವಾಲಿ ವಧೆ’ ಅದರಲ್ಲಿ ದೇರಾಜೆಯವರದ್ದು ಸುಗ್ರೀವನ ಪಾತ್ರ ಎಂದು ನೆನಪು ಮಾಡಿಕೊಂಡು ಹೇಳಿದ್ದಾರೆ. ಇಂದು ನಾನು ಅದನ್ನೆಲ್ಲ ನೆನಪುಮಾಡಿಕೊಳ್ಳುತ್ತಿರುವಾಗ ನನಗನಿಸಿದ್ದು ಹೀಗೆ ‘ಆ ಸಣ್ಣ ಪ್ರಾಯದಲ್ಲಿ ಪಾತ್ರ ಅರ್ಥವಾಗದಿದ್ದರೂ ಆ ಅಭಿನಯದ ಮೂಲಕ ಯಾವುದೋ ಭಾವವೊಂದು ನಮ್ಮ ಭಿತ್ತಿಯಲ್ಲಿ ಇಳಿದಿರುತ್ತದೆ ಎಂದರೆ ಅದನ್ನು ವಿತರಣೆ ಮಾಡಿದಾತ ತನ್ನ ಅಭಿನಯದಿಂದ ರಸಸೃಷ್ಟಿಯನ್ನು ಯಶಸ್ವಿಯಾಗಿ ಪ್ರೇಕ್ಷಕರಲ್ಲಿ ಇಳಿಸಿದ್ದಾನೆʼ ಎಂದೇ ಅರ್ಥಮಾಡಿಕೊಳ್ಳಬೇಕಾಗಿದೆ.

ಆಮೇಲೆ ಅವರ ʻಉತ್ತರನ ಪೌರುಷʼ ಪ್ರಸಂಗದ ಉತ್ತರನ ಪಾತ್ರದ ಕುರಿತು ನನ್ನ ಆಯಿಯಿಂದ ಕೇಳಿದಾಗ ಅವರು ಒಂದು ಮಾತನ್ನು ಹೇಳಿದರು. “ಅವರ ಉತ್ತರ ಪಾತ್ರ ನಿರ್ವಹಣೆ ನೋಡಿದ್ದೇನೆ. ಅವರ ನಂತರ ಅನೇಕ ಅರ್ಥಧಾರಿಗಳ ಉತ್ತರನ ಪಾತ್ರವನ್ನೂ ರಂಗದ ಮೇಲೆ ನೋಡಿದ್ದೇನೆ, ಆದರೆ ಉತ್ತರ ಕುಮಾರನ ಪಾತ್ರದ ಕುರಿತು ಇನ್ನುಳಿದವರ ಪಾತ್ರಗಳು ಸಂಶಯದ ಪ್ರಶ್ನೆಗಳನ್ನೇ ಹರಿಸುತ್ತವೆ.  ನನಗೆ ಉತ್ತರ ಸಿಕ್ಕಿದ್ದು ದೇರಾಜೆಯವರ ಉತ್ತರನನ್ನು ನೋಡಿದಮೇಲೆ” ಎನ್ನುತ್ತಾರೆ. ಇದಕ್ಕೆ ಕಾರಣವೆಂದರೆ ಅವರು ಹೇಳಿದ್ದು ಹೀಗೆ.

“ದೇರಾಜೆಯವರ ಉತ್ತರನ ಪೀಠಿಕೆಯನ್ನು ಪ್ರಾರಂಭಿಸುವ ರೀತಿಯೇ ಭಿನ್ನವಾಗಿತ್ತಂತೆ. ‘ಇಂದು ಪ್ರಪಂಚದ ತುಂಬೆಲ್ಲಾ ಪ್ರಶ್ನೆಗಳೇ ತುಂಬಿಹೋಗಿವೆ. ಎಲ್ಲರನ್ನೂ ಸಂಶಯ ಭಾಧಿಸುತ್ತಿವೆ, ಅವರೆಲ್ಲರ ಹುಡುಕಾಟದಲ್ಲಿ ವೈವಿಧ್ಯತೆ ಇದ್ದಿರಬಹುದು. ಆದರೆ ಸಮಗ್ರ ಪ್ರಪಂಚ ಅವಕ್ಕೆಲ್ಲಾ ನೋಡುವುದು ಏನನ್ನು ಗೊತ್ತಾ…ʼ ಎಂದವರೇ ಸುಮ್ಮನಾಗಿ ಭಾಗವತರನ್ನು ತಿರುಗಿ ನೋಡುತ್ತಿದ್ದರಂತೆ. ಅವರು ಅದ್ಯಾವದು ಎಂದು ಕೇಳಿದರೆ ಸಾಕು ತನ್ನ ಎದೆಯನ್ನು ಮುಟ್ಟಿಕೊಳ್ಳುತ್ತಾ “ಉತ್ತರ” ಎಂದು ಹೇಳಿ ಮತ್ತೆ ಪಾಸ್ (pause)ಕೊಡುತ್ತಿದ್ದರಂತೆ. ಸುಮಾರು ಹೊತ್ತು ಚಪ್ಪಾಳೆಯ ಮೇಲೆ ಚಪ್ಪಾಳೆಯ ಸದ್ದು ಸಭಾಂಗಣವನ್ನು ತುಂಬಿ ಹೋಗುತ್ತಿತ್ತಂತೆ. ನಂತರ ಪ್ರತೀ ಅರ್ಥವೂ ಇದೇ ರೀತಿ ಸಾಗುತ್ತಾ ʻಉತ್ತರʼನೆಂದರೆ ಅದು ದೇರಾಜೆಯವರದೇ ಸರಿ ಎಂದಾಗುತ್ತಿತ್ತು. ನನ್ನ ಆಯಿ ಶಾರದಾ ರಾಮ ಯಾಜಿ ಅವರ ಅನುಭವ ವಿಫುಲವಾದುದು. ಕೆರಮನೆಯ ನಿಕಟ ಒಡನಾಟದಲ್ಲಿ ಆ ಕಾಲದಲ್ಲಿ ಅಲ್ಲಿಗೆ ಬರುವ ಎಲ್ಲಾ ಕಲಾವಿದರ ಕುರಿತು ಚನ್ನಾದ ಪರಿಚಯ ಇರುವ ಅವರನ್ನು ಅಷ್ಟು ಸುಲಭವವಾಗಿ ಮೆಚ್ಚಿಸಲು ಸಾಧ್ಯವಿಲ್ಲ. ಅದಕ್ಕೆ ಕಾರಣ ಅವರ ಕಾಲದಲ್ಲಿ ನೋಡಿದ ಮಹಾನ್ ಕಲಾವಿದರ ಪರಂಪರೆ. ದೇರಾಜೆಯವರು ತಾಳಮದ್ದಳೆಯ ಅರ್ಥಗಾರಿಕೆಯಲ್ಲಿ ಕಾವ್ಯದ ಸತ್ವವನ್ನು ತುಂಬಿದವರು. ಮಾತಿನಲ್ಲಿ ಮಂಟಪವನ್ನು ಕಟ್ಟಿದ ವ್ಯಕ್ತಿ ಇವರಾಗಿರಲಿಲ್ಲ. ಅವರು ರಂಗದ ಮೇಲೆ ಕಥನವನ್ನು ಸೃಷ್ಟಿಸಿದವರಾಗಿದ್ದರು. ಹಾಗಾಗಿ ಅವರ ಅರ್ಥಗಾರಿಕೆಯಲ್ಲಿ ಕಂಡುಬರುವದು ರಸಗವಳ.

ಬಹುಶಃ ದೇರಾಜೆಯವರು ತಾಳಮದ್ದಳೆಗೆ ಬರುವಾಗ ಅದಾಗಲೇ ಈ ರಂಗ ಒಂದು ಸಶಕ್ತ ಮಾಧ್ಯಮವಾಗಿ ಬೆಳೆದು ಬಂದಿತ್ತು. ತಾಳಮದ್ದಳೆಯ ಕ್ಷೇತ್ರದಲ್ಲಿ ಭಾಷೆ ಮತ್ತು ಕಥಾಭಾಗವನ್ನು ಯಶಸ್ವಿಯಾಗಿ ದುಡಿಸಿಕೊಂಡು ಹೋದ ಅನೇಕ ಮಹಾನುಭಾವರನ್ನು ನಾವು ಹೆಸರಿಸಬಹುದು. ಕವಿಭೂಷಣ ವೆಂಕಪ್ಪ ಶೆಟ್ಟರು, ಕೀರಿಕ್ಕಾಡು ವಿಷ್ಣು ಮಾಸ್ತರರು, ಎಚ್. ಎಫ಼್. ಒಡೆಯರ್, ಎನ್. ಎಸ್. ಕಿಲ್ಲೆಯವರು, ಪೊಳಲಿ ಶಂಕರನಾರಾಯಣ ಶಾಸ್ತ್ರಿಗಳು, ಅರ್ಕುಳ ಸುಬ್ರಾಯಾಚಾರ್ಯರು, ಪೆರ್ಲ ಪಂಡಿತರು ಹಾಗೂ ಶಂಕರನಾರಾಯಣ ಸಾಮಗರೇ ಮೊದಲಾದವರೆಲ್ಲ ಈ ರಂಗದಲ್ಲಿ ತಮ್ಮ ವಿದ್ವತ್ ಪ್ರತಿಭೆಯನ್ನು ಮೆರೆದಿದ್ದರು. ಅದೇ ಹೊತ್ತಿಗೆ ಶೇಣಿಯವರ ಆಗಮನವೂ ಆಗಿ ರಸಭರಿತ ಕಬ್ಬಿನ ತೋಟಕ್ಕೆ ಮದ್ದಾನೆ ಹೊಕ್ಕಂತೆ ತಾಳಮದ್ದಳೆ ವಿಜೃಂಭಿಸತೊಡಗಿತ್ತು. ಈ ಮಹಾನುಭಾವರುಗಳೆಲ್ಲ ಮೂಲ ಕಾವ್ಯವನ್ನು ಅದರ ಸತ್ವದೊಂದಿಗೆ ಮತ್ತು ವೇದೋಪನಿಷತ್ತುಗಳ ಜೊತೆಯೊಂದಿಗೆ ರಂಗದಲ್ಲಿ ಮಾತಿನ ಚಮತ್ಕಾರವನ್ನೇ ಸೃಷ್ಟಿಸಿ ಕೇಳುಗರನ್ನು ವಿಸ್ಮಯರನ್ನಾಗಿಸುತ್ತಿದ್ದರು.

ಈ ತಾಳಮದ್ದಳೆ ಎನ್ನುವುದು ನಾದಕ್ಕೆ ಸಂಬಂಧಿಸಿದ ಹೆಸರು. ಆದರೆ ರಂಗವಿದ್ಯಮಾನವನ್ನು ಗಮನಿಸಿ ಹೇಳುವುದಾದರೆ ಇಲ್ಲಿ ನಿಜವಾಗಿಯೂ ನಡೆಯುವುದು ಚೂಣಿ ಕಾಳಗ ಅಥವಾ ಮಾತಿನ ತಿಕ್ಕಾಟಗಳು. ಮೊದಲು ಬಹುಶಃ ಹಾಡುಗಬ್ಬದ ಮೂಲಕ ತದನಂತರದಲ್ಲಿ ಗಮಕದ ಹಾಗೂ ನಾಟಕದ ಸಂಭಾಷಣೆಯ ಜೊತೆಗೆ ಹರಿಕತೆಯ ಹದವಾದ ಮಿಶ್ರಣದ ಮೂಲಕವಾಗಿ ತನ್ನಿಂದ ತಾನೇ ಉದ್ಭವವಾದ ಒಂದು ಕಲಾಪ್ರಕಾರವಾಗಿ ಈ ಕಲೆ ಬೆಳೆದು ಬಂತು ಎಂದು ಊಹಿಸಲೂ ಬಹುದಾಗಿದೆ. ಏನೇ ಇರಲಿ ಈ ತಾಳಮದ್ದಳೆ ಇಂದು ಪ್ರಪಂಚದ ಕಲಾ ಪ್ರಕಾರದಲ್ಲಿಯೇ ಒಂದು ವಿಶಿಷ್ಟವಾಗಿ ಬೆಳೆದು ಬಂದಿದ್ದನ್ನು ಗುರುತಿಸಬಹುದಾಗಿದೆ. ಊರಿನ ಪಟೇಲರಾಗಿದ್ದ ದೇರಾಜೆಯವರು ಈ ಹೊತ್ತಿನಲ್ಲಿ ರಂಗಕ್ಕೆ ಪ್ರವೇಶ ಮಾಡಿದಾಗ ಅವರ ಮನಸ್ಸಿನಲ್ಲಿ ಇದ್ದದ್ದು ಈ ರಂಗವೆನ್ನುವುದು ಕೇವಲ ಚರ್ಚಾಕೂಟವಾಗಿ ಪರಿವರ್ತಿತವಾಗಬಾರದು ಎನ್ನುವುದಾಗಿತ್ತು.  ಇದನ್ನು ಅವರ ಮುಂದಿನ ದಿನಗಳ ನಡೆಯನ್ನು ಅಭ್ಯಸಿಸುವ ಮೂಲಕ ಗುರುತಿಸಬಹುದಾಗಿದೆ. ಇಲ್ಲಿ ಅವರು ಆಯ್ದುಕೊಂಡ ಹಾದಿ ಪರಂಪರೆಯಲ್ಲಿ ಬಂದ ಕಲಾವಿದರ ಹಾದಿಯಲ್ಲ. ಅವರಿಗೆ ಅರ್ಥಗಾರಿಕೆ ತನ್ನ ವಿದ್ವತ್ ಪ್ರದರ್ಶನದ ವೇದಿಕೆಯಾಗಕೂಡದು ಎನ್ನುವ ಪ್ರಜ್ಞೆ ಸದಾ ಕಾಡುತ್ತಿತ್ತು ಎನ್ನಬಹುದಾಗಿದೆ. ಮೂಲದ ಮಹಾಕಾವ್ಯವೊಂದು ಪ್ರಸಂಗ ಕೃತಿಯಾಗಿ ಬದಲಾದಾಗ ಅದು ಇನ್ನಾವುದೋ ಆಕರವನ್ನು ಆಶ್ರಯಿಸಿರುತ್ತದೆ. ನಮ್ಮ ಪ್ರಸಂಗ ಕೃತಿಗಳೆಲ್ಲ ಮೂಲಕ್ಕಿಂತಲೂ ಜೈಮಿನಿ, ಕುಮಾರವ್ಯಾಸ ಇಲ್ಲವೇ ತೊರವೆ ರಾಮಾಯಣವನ್ನು ಆಧರಿಸಿದ ಹಾಗೆ. ಇಲ್ಲಿಂದ ಅದು ರಂಗದ ಮೇಲೆ ಬರುವಾಗ ಭಾಗವತರು ಮತ್ತು ನಟರುಗಳು ತಮ್ಮದೇ ಆದ ಒಂದು ಚಾಪನ್ನು ಸೃಷ್ಟಿಸಿಬಿಡುತ್ತಾರೆ. ಹಾಗಾಗಿ ಭೀಷ್ಮ ವಿಜಯದಂತಹ ಪ್ರಸಂಗವನ್ನು ಬರೆದ ಹಲಸಿನ ಹಳ್ಳಿ ನರಸಿಂಹ ಶಾಸ್ತ್ರಿಗಳು “ಪರಮ ದುಶ್ಚರಿತೆ ಅಂಬೆಯೆಂಬಳ…” ಎಂದು ವ್ಯಕ್ತಪಡಿಸಿದರೂ ರಂಗದಮೇಲೆ ಇದು ಬರುವಾಗ ಅದು ಅಂಬೋಪಾಖ್ಯಾನವಾಗಿ ಬದಲಾಗಿ ಕವಿಯ ಆಶಯಕ್ಕೆ ವಿರುದ್ಧವಾಗಿ ಅಂಬೆಯ ಜಾಗದಲ್ಲಿ ದುಶ್ಚರಿತನಾಗಿ ಭೀಷ್ಮ ಬಂದು ನಿಲ್ಲುತ್ತಾನೆ.

ಈ ಎಲ್ಲಾ ಕ್ರಿಯೆಯಲ್ಲಿ ರೂಪಾಂತರವೆನ್ನುವದು ಸಹಜವಾದ ಕ್ರಿಯೆ. ಆದರೆ ಇಲ್ಲೆಲ್ಲೂ ಮೂಲ ಸೂತ್ರಕ್ಕೆ ವಿರುದ್ಧವಾಗಿ ಹೋಗಕೂಡದು ಎನ್ನುವುದನ್ನು ಕಾಲ ಕಾಲಕ್ಕೆ ರಂಗದ ಸುಧಾರಣೆಯನ್ನು ಆ ಮೂಲಕ  ಸುಧಾರಣೆಯನ್ನು  ಬಯಸುವ ರಂಗಕರ್ಮಿಗಳು ಹೇಳುತ್ತಲೇ ಬಂದಿದ್ದಾರೆ. ಆನಂದವರ್ಧನನ ‍ ಧ್ವನ್ಯಾಲೋಕದಿಂದ ಹಿಡಿದು ತೀನಂಶ್ರೀಯವರ ಭಾರತೀಯ ಕಾವ್ಯ ಮೀಮಾಂಸೆಯ ತನಕ ಇದನ್ನು ಗಮನಿಸಬಹುದು. ಆದರೆ ತಾಳಮದ್ದಳೆಯೆನ್ನುವುದು ಈ ಎಲ್ಲ ಕಟ್ಟುಪಾಡುಗಳನ್ನು ಮೀರಿ ತನ್ನದೇ ಆದ ಸ್ವಚ್ಛಂದ ಪ್ರಪಂಚದಲ್ಲಿ ವಿಹರಿಸುತ್ತಿತ್ತು ಎಂಬುದೂ ಸಹ ಕಟುವಾದ ಸತ್ಯವೂ ಹೌದು. ತಾಳಮದ್ದಳೆಯ ಯಶಸ್ಸು – ಇದರ ಕಲಾ ಪ್ರಕಾರದ ಮತ್ತು ಈ ರಂಗದ ಸಾಹಿತ್ಯದ ಯಶಸ್ಸು ಎಂದು ಸಾರಲಿಕ್ಕಾಗುವದಿಲ್ಲ.

T. S. Eliot ತನ್ನ ಪ್ರಸಿದ್ಧ ಪ್ರಬಂಧದಲ್ಲಿ Tradition and Individual Talent ಎನ್ನುವಲ್ಲಿ ಇದನ್ನು ಚೆನ್ನಾಗಿ ವಿವರಿಸಿದ್ದಾನೆ. ಮಾಧ್ಯಮ ಮತ್ತು ಪರಿಣಾಮ ಈ ಎರಡೂ ಭಿನ್ನವಾದವುಗಳು. ಪ್ರೇಕ್ಷಕರನ್ನು ಗೆಲ್ಲುವುದು ಪರಿಣಾಮದಲ್ಲಿ ಯಶಸ್ಸನ್ನು ಕಂಡರೂ ಅದು ಆ ಮಾಧ್ಯಮದ ನಿರ್ವಚನವನ್ನು (Etimoligy) ಗಮನಿಸಿದಾಗ ಅಲ್ಲಿ ಸೋಲಬಹುದು. ಈ ದೋಷವನ್ನು ದೇರಾಜೆಯವರು ಈ ರಂಗಕ್ಕೆ ತನ್ನ ಪ್ರವೇಶ ಆಗುವಾಗಿನ ಹೊತ್ತಿನಲ್ಲಿಯೇ ಗಮನಿಸಿದ್ದರು. ಹಾಗಾಗಿಯೇ ಇವರ ಅರ್ಥಗಾರಿಕೆ  ವಾದಭೂಮಿಕೆಯಾಗಿರಲಿಲ್ಲ. ಪದ್ಯಗಳಿಗೆ ಹೊಸ ಅರ್ಥಗಳ ಹುಡುಕಾಟವಾಗಿತ್ತು. ಕವಿಹೃದಯದ ಆರ್ದ್ರತೆಯಲ್ಲಿ ಸೋಸಿದ ಅಮೃತವಾಗಿತ್ತು. ಅರ್ಥಗಾರಿಕೆಯಲ್ಲಿ ಇವರು ಪರಂಪರೆಯ ಭಂಜಕರಾಗಲಿಲ್ಲ, ಹಾಗಂತ ಆ ಆಲದ ಮರಕ್ಕೆ ಜೋತುಬಿದ್ದ ಬೇತಾಳವೂ ಆಗಲಿಲ್ಲ. ಇವರು ಆರಿಸಿಕೊಂಡದ್ದು ರೂಪಾಂತರದ ಹಾದಿಯನ್ನು. ಅದು ಬೀಜ  ಮೊಳಕೆಯೊಡೆಯುವಾಗ, ಮೊಳಕೆಯಿಂದ ಚಿಗುರಾಗುವಾಗ, ಚಿಗುರಿನಿಂದ ಮೊಗ್ಗಾಗಿ ಹೂವಾಗುವಾಗ, ಆ ಹೂವಿನಿಂದ ಫಲ ಮತ್ತು ಫಲದಿಂದ ಮತ್ತೆ ಬೀಜವೇ ಆಗಿ- ಮುಂದಿನ ಸೃಷ್ಟಿಗೆ ಅಂಕುರವಾಗುವಂತೆ ಮೂಲದ ಸೆಲೆಯನ್ನು ಇಟ್ಟುಕೊಂಡು ಕಾವ್ಯಕ್ಕೊಂದು ಹೊಸ ಅರ್ಥವನ್ನು ಅದಕ್ಕೊಂದು ಭಾಷ್ಯವನ್ನು ಬರೆದರು. ಹಾಗಾಗಿ ಇವರ ಶೂರ್ಪನಖಿಯ ಅರ್ಥಗಾರಿಕೆಯಲ್ಲಿನ ಪ್ರಸಿದ್ಧ ಅರ್ಥ “ರಾಮಾ ಬೆಟ್ಟದ ಮೇಲೆ ಲತೆಯನ್ನು ನೋಡಿದ್ದಿಯಲ್ಲಾ, ಲತೆಯ ಮೇಲಿನ ಬೆಟ್ಟವನ್ನು ನೋಡಿದ್ದೀಯಾ” ಎನ್ನುವ ಮಾತು. ಅದೇ ರೀತಿ ಅವರ ಪ್ರಸಿದ್ಧವಾದ ಮತ್ತೊಂದು ಪಾತ್ರ ವಾಲಿ ವಧೆಯ ಸುಗ್ರೀವ.

ಊರಿನ ಪಟೇಲರಾಗಿದ್ದ ದೇರಾಜೆಯವರು ಈ ಹೊತ್ತಿನಲ್ಲಿ ರಂಗಕ್ಕೆ ಪ್ರವೇಶ ಮಾಡಿದಾಗ ಅವರ ಮನಸ್ಸಿನಲ್ಲಿ ಇದ್ದದ್ದು ಈ ರಂಗವು ಕೇವಲ ಚರ್ಚಾಕೂಟವಾಗಿ ಪರಿವರ್ತಿತವಾಗಬಾರದು ಎನ್ನುವದಾಗಿತ್ತು .ಇದನ್ನು ಅವರ ಮುಂದಿನ ದಿನಗಳ ನಡೆಯನ್ನು ಅಭ್ಯಸಿಸುವ ಮೂಲಕ ಗುರುತಿಸಬಹುದಾಗಿದೆ.

ಇಲ್ಲಿ ಅವರು ರಾಮ ದರ್ಶನವಾದ ಮೇಲೆ ಹೇಳುವ “ಮಂಥರೆಗೆ ನಮಸ್ಕಾರ, ಕೈಕೆಯಿಗೆ ನಮಸ್ಕಾರ, ಶೂರ್ಪನಖಿಗೆ ನಮಸ್ಕಾರ” ಎನ್ನುವ ಮಾತನ್ನು ಆಡುತ್ತಿದ್ದರು. ಏಕೆಂದರೆ ಅವರ ಕಾರಣಗಳಿಂದ ತನಗೆ ರಾಮ ದರ್ಶನದ ಭಾಗ್ಯ ಒದಗಿಬಂತು ಎನ್ನುವ ಧ್ವನ್ಯಾರ್ಥ ಅಲ್ಲಿತ್ತು. ವೈರಿಗಳಾಗಲಿ, ಹಿತವರಾಗಲಿ ಎನ್ನುವ ಪದ್ಯಕ್ಕೆ ಅವರು ʻವೈರಿಗಳೇ ಆದರೂ ಅವರನ್ನು ಹಿತವನ್ನಾಗಿಸಿಕೊಂಡು ಬಾʼ ಎಂದು ಹನುಮಂತನಲ್ಲಿ ಹೇಳುವ ಮಾತು ಬಹು ಪ್ರಸಿದ್ಧ. ಸೂರ್ಯನ ಬೆಳಕಿಗೆ ಎದುರಾದ ಎಲ್ಲರಿಗೂ ನೆರಳು ಎನ್ನುವುದೊಂದು ಇರುತ್ತದೆ. ಆದರೆ ಸೂರ್ಯಪುತ್ರನಾದ ತನಗೆ ತನ್ನ ಛಾಯೆಯೇ ಇಲ್ಲವವಲ್ಲ ಎನ್ನುವಾಗ ನಾವೂ ಆ ಸುಗ್ರೀವನ ವಿರಹದ ನೋವಿನಲ್ಲಿ ಸಮ್ಮಿಳಿತಗೊಳ್ಳುತ್ತೇವೆ. ಅದೇ ಶರತ್ಕಾಲದ ಚಂದ್ರ ವಿರಹಿಗಳಿಗೆ ನೋವನ್ನುಂಟುಮಾಡುತ್ತಾನೆ. ತಾನು ಇಲ್ಲಿ ಕಲ್ಲು ಬಂಡೆಯಮೇಲೆ ನೋವನ್ನು ಅನುಭವಿಸುತ್ತ ಆ ಚಂದ್ರನನ್ನು ದಿಟ್ಟಿಸುತ್ತಿರುವ ರೀತಿಯಲ್ಲಿಯೇ ಅಲ್ಲಿ ವಾಲಿಯ ಅರಮನೆಯಲ್ಲಿ ತನ್ನ ಪತ್ನಿ ರುಮೆ ಚಂದ್ರನನ್ನು ನೋಡಿ ನಿಟ್ಟಿಸಿರು ಪಡುತ್ತಿರಬಹುದು. ಅಲ್ಲಿಗೆ ತಮ್ಮಿಬ್ಬರ ದೃಷ್ಠಿಯೂ ಈ ಚಂದ್ರಬಿಂಬದಲ್ಲಿ ಸೇರಿದೆಯಷ್ಟೇ”, ಹೀಗೆ ಇಂತಹ ಸಾವಿರ ಮಾತುಗಳನ್ನು ಅವರು ರಂಗದಮೇಲೆ ಆಡಿಕೊಂಡು ರಸವನ್ನು ಕಟ್ಟಿಕೊಟ್ಟಿದ್ದಾರೆ.

ಕಲೆ ಕಾಲಕ್ಕೆ, ಕಾಲ ನಟನಿಗೆ ಅನುಗುಣವಾಗಿ ತಿರುವುಗಳನ್ನು ಪಡೆಯುತ್ತದೆ ಎನ್ನುವುದನ್ನೂ ಮರೆಯಬಾರದು. ಈಲಿಯಟ್ “ಕಾವ್ಯದ ರಚನೆ ಎಂದರೆ ಭಾವನೆಗಳಲ್ಲಿ ಮುಳುಗಿಹೋಗುವದಲ್ಲ, ಆದರೆ ಭಾವನೆಗಳಿಂದ ಮುಕ್ತನಾಗುವದು, ವ್ಯಕ್ತಿತ್ವವನ್ನು ಪ್ರದರ್ಶಿಸುವದಲ್ಲ, ಬದಲಾಗಿ ತನ್ನ ವ್ಯಕ್ತಿತ್ವದಿಂದ ಬಿಡುಗಡೆ ಹೊಂದುವದು” ಎಂದಿದ್ದಾನೆ. ದೇರಾಜೆಯವರ ಸಂದರ್ಭದಲ್ಲಿ ಇದನ್ನು ನಾವು ಚೆನ್ನಾಗಿ ಅನ್ವಯಿಸಬಹುದು. ಆದರೆ ಪ್ರೇಕ್ಷಕರು ಮಾತ್ರ ಅವರ ಹಾಸ್ಯರಸವನ್ನು ಇಷ್ಟಪಟ್ಟಿದ್ದಾರೆ. ಸಮಗ್ರವಾಗಿ ಅವರ ಕುರಿತಾಗಿ ಹೇಳಬೇಕಾದರೆ ಅವರ ಉತ್ತರಕುಮಾರ, ಸುಗ್ರೀವ, ಸೂರ್ಪನಖಿಯ ಪಾತ್ರಗಳ ಕುರಿತು ಹೇಳುತ್ತಾರೆ. ಆದರೆ ಅವರ ಹತ್ತಿರದ ಬಂಧುಗಳಾದ ಸೇರಾಜೆ ಜಿ. ಕೆ. ಭಟ್ಟರ ಪ್ರಕಾರ ಅವರ ಹಾಸ್ಯಗಳಿಗಿಂತ ಇನ್ನಿತರ ಪಾತ್ರಗಳಾದ ಭರತ, ಶ್ರೀ ರಾಮ ನಿರ್ಯಾಣದ ರಾಮ, ಕರ್ಣ ಇಂತಹ ಕರುಣರಸದ ಪಾತ್ರಗಳನ್ನೂ ಬಹು ಚೆನ್ನಾಗಿ ನಿರ್ವಹಿಸುತ್ತಿದ್ದರು. ಪ್ರಸಿದ್ಧ ಅರ್ಥಧಾರಿ ಉಡುವೆಕೋಡಿ ಸುಬ್ಬಪ್ಪಯ್ಯನವರ ಭರತ ತುಂಬಾ ಪ್ರಸಿದ್ಧವಾದುದು. ಅವರೇ ಒಮ್ಮೆ ಮಾತನಾಡುತ್ತಾ ಹೇಳಿದ ಪ್ರಕಾರ ದೇರಾಜೆಯವರ ಭರತ ಎಂದರೆ ಅದು ವಾಲ್ಮೀಕಿಯ ಕಾವ್ಯದಿಂದ ನೇರವಾಗಿ ಎದ್ದು ಬಂದ ಜೀವಂತ ವ್ಯಕ್ತಿ ಎನ್ನುತ್ತಿದ್ದರು. ಅವರ ಲಭ್ಯವಿರುವ ಅನೇಕ ಧ್ವನಿ ಮುದ್ರಿಕೆಗಳಲ್ಲಿ ಅವರ ಅರ್ಥಗಾರಿಕೆಯನ್ನು ಕೇಳಿದ ಮೇಲೆ ಈ ಅಭಿಪ್ರಾಯಗಳಲ್ಲಿ ಉತ್ಪ್ರೇಕ್ಷೆ ಏನೂ ಇಲ್ಲ ಎಂಬುದು ಗಮನಕ್ಕೆ ಬರುತ್ತದೆ. ಹಾಗಾಗಿ ಅವರ ಅರ್ಥಗಾರಿಕೆಯನ್ನು ಕಥನ ಕಟ್ಟುವಿಕೆ ಎನ್ನುವದಕ್ಕೆ ಹೋಲಿಸಬಹುದು.

ಈ ಕಾವ್ಯಕಟ್ಟುವಿಕೆಯ ಕ್ರಿಯೆಯನ್ನು ಇನ್ನೋರ್ವ ಖ್ಯಾತ ಕವಿ ವರ್ಡ್ಸ್‌ವರ್ತ್‌ (1802) ಹೇಳಿರುವಂತೆ “ಕಾವ್ಯ ಎಂದರೆ ಭಾವನೆಗಳು ಉಕ್ಕೇರಿ ತನ್ನಿಂದ ತಾನೇ ಒಡಮೂಡುವದು; ಕಾವ್ಯದ ಮೂಲ ಇರುವುದೇ ಶಾಂತ ಸ್ಥಿತಿಯಲ್ಲಿರುವ ಮರುಸ್ಮರಣೆಯ ಭಾವನೆಗಳಲ್ಲಿ” ದೇರಾಜೆಯವರ ಅರ್ಥಗಾರಿಕೆಯಲ್ಲಿ ಈಲಿಯಟ್ ಮತ್ತು ವರ್ಡ್ಸ್‌ವರ್ತ್‌ ಇಬ್ಬರನ್ನೂ ಹೋಲಿಕೆ ಮಾಡಬಹುದು. ಏಕೆಂದರೆ ಈ ಇಬ್ಬರು ಕವಿಗಳ ಕಾಲದಲ್ಲಿ ಸುಮಾರು ಒಂದು ಶತಮಾನಗಳ ಅಂತರವಿದೆ. ಅವರಿಬ್ಬರೂ ತಮ್ಮ ಕಾಲದ ಹಳೇ ಬೇರುಗಳನ್ನು ಮರುಸೃಷ್ಟಿ ಮಾಡಿರುವವರು. ದೇರಾಜೆಯವರ ಅಥಗಾರಿಕೆಯಲ್ಲಿನ ವಿಶೇಷವೆಂದರೆ ಆಯಾ ಪಾತ್ರವೇ ಮಾತನಾಡುವುದು. ತಾಳಮದ್ದಳೆಯ ರೂಢಿಗತವಾದ ಪ್ರವಚನ ಶೈಲಿಯನ್ನು ಅವರು ಎಂದೂ ಮೆಚ್ಚಲಿಲ್ಲ. ಹಾಗಾಗಿ ಇವರ ಅರ್ಥಗಾರಿಕೆಗೆ ಪ್ರಕಾಂಡ ಪಂಡಿತರೇ ತುಂಬಿದ್ದ ತಾಳಮದ್ದಳೆಗೆ ಒಂದು ವಾಙ್ಮಯ ಸ್ವರೂಪವನ್ನು ತಂದುಕೊಟ್ಟರೆನ್ನಬಹುದು. ಅರ್ಥಗಾರಿಕೆಯಲ್ಲಿ ಕಥನವನ್ನು ಕಟ್ಟುತ್ತಲೇ ಅವರು ದರ್ಶನವನ್ನು ಮಾಡಿಸುತ್ತಿದ್ದರು, ಪುರಾಣಲೋಕದ ವೈಭವವನ್ನು ತೆರೆದಿಡುತ್ತಿದ್ದರು. ಇವರಿಗೆ ದೊಡ್ಡ ಅರ್ಥಗಾರಿಕೆಯೇ ಬೇಕೆಂದಿರಲಿಲ್ಲ. ಹಂಸಧ್ವಜ, ಮಯೂರಧ್ವಜನಂತಹ ಚಿಕ್ಕ ಪಾತ್ರಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸುತ್ತಿದ್ದರು. ರಂಗದಮೇಲೆ ಗುಬ್ಬಚ್ಚಿಯಂತೆ ಕುಳಿತು ಕಿರಿದಾದ ಧ್ವನಿಯಲ್ಲಿ ಕುಶಲಿಯಾದ ಸಂಗೀತಗಾರ ರಾಗದಲ್ಲಿ ಯಾವುದೋ ಒಂದು ಭಾವವನ್ನು ಹಿಡಿದು ಪ್ರೇಕ್ಷಕರಲ್ಲಿ ವ್ವಾರೇವಾ, ಶಬ್ಬಾಸ್‌ ಎನ್ನುವ ಉದ್ಘಾರ ತೆಗೆಯುವಂತೆ ಅವರ ಅರ್ಥಗಾರಿಕೆಯಿರುತ್ತಿತ್ತು.

ಜನ ಬೇಕು ಬೇಕು ಎನ್ನುವಾಗಲೇ ತನ್ನ ಐವತ್ತಾರನೆಯ ವಯಸ್ಸಿನಲ್ಲಿಯೇ ದೇರಾಜೆಯವರು ತಾಳಮದ್ದಳೆ ಕೂಟದಿಂದ ನಿವೃತ್ತರಾದರು. ಬಹುಶಃ ಅವರಿಗೆ ತಾಳಮದ್ದಳೆಯ ಕೂಟವೆನ್ನುವದು ಹರಟೆಮಲ್ಲರ ಇಲ್ಲವೇ ಪಾಂಡಿತ್ಯ ಪ್ರದರ್ಶನದ ಅಥವಾ ಯಾವುದೋ ಹೇಳಲಾರದ ಅಸಮಾಧಾನವಿದ್ದಿರಬೇಕು ಎನಿಸುತ್ತಿದೆ. ಆದರೆ ಅವರು ಎಡನೀರು ಮಠದಲ್ಲಿ ತದನಂತರದಲ್ಲಿಯೂ ಸಕ್ರಿಯರಾಗಿದ್ದರು. ಎಡನೀರು ಕೇಶವಾನಂದ ಭಾರತಿಸ್ವಾಮೀಜಿಯವರಿಗೆ ದೇರಾಜೆಯವರೆಂದರೆ ಎಲ್ಲವನ್ನು ಬಿಟ್ಟು ಅವರ ಕುರಿತು ಹೇಳುವ ತವಕ. ಅಲ್ಲಿ ನಡೆಯುವ ತಾಳಮದ್ದಳೆಗೆ ಹೋದ ಹೊತ್ತಿನಲ್ಲಿ ಎಲ್ಲ ಮುಗಿದು ನಂತರ ಮಂತ್ರಾಕ್ಷತೆಯ ಹೊತ್ತಿನಲ್ಲಿ ದೇರಾಜೆಯವರ ಜೀವನದ ಅನೇಕ ಸಂಗತಿಗಳನ್ನು ಬಿಡಿಸಿ ಹೇಳುತ್ತಿದ್ದರು. ಅವರ ಅರ್ಥಗಾರಿಕೆಯ ಸಣ್ಣ ಸಣ್ಣ ವಿವರವೂ ಅವರು ಅನುಭವಿಸಿ ಅದನ್ನು ನಮ್ಮೆದುರಿಗೆ ಹೇಳುವಾಗ ದೇರಾಜೆಯವರೇ ಎದುರಿನಲ್ಲಿ ಬಂದಂತೆನಿಸುತ್ತಿತ್ತು. ಮಠದಲ್ಲಿ ನಡೆಯುವ ತಾಳ ಮದ್ದಳೆಗಳಲ್ಲಿ ಪರಂಪರಾಗತವಾದ ಆಟಕ್ಕೆ ಮಾತ್ರ ಇರುವ ಪ್ರಸಂಗಗಳಾದ ಭೂಕೈಲಾಸ, ಲವಕುಶ ಕಾಳಗ, ದಕ್ಷಾಧ್ವರ, ಗಿರಿಜಾ ಕಲ್ಯಾಣ ಮುಂತಾದ ಪ್ರಸಂಗಗಳನ್ನೂ ಸಹ ತಾಳಮದ್ದಳೆಗೆ ತಂದು ಅದಕ್ಕೊಂದು ಹೊಸ ರೂಪವನ್ನು ಕೊಟ್ಟಿದ್ದರಂತೆ.

ಅರ್ಥಗಾರಿಕೆಯೆನ್ನುವುದು ಹೆಕ್ಕಿಕೊಂಡವರ ಸ್ವತ್ತಾಗಿಬಿಟ್ಟಿದೆ. ಈ ಕಾರಣಕ್ಕೆ ದೇರಾಜೆಯವರು ರಂಗದಲ್ಲಿಯೇ ಮುಂದುವರಿದಿದ್ದರೆ ಅವರ ಅರ್ಥಗಾರಿಕೆಯೆಂಬುದು ʻಹೀಗಂತೆʼ ಎನ್ನುವ ಉದಾಹರಣೆಗಳಲ್ಲಿಯೇ ಮುಳುಗಿಹೋಗಿಬಿಡುತ್ತಿತ್ತು. ಅವರು ಸಾರಸ್ವತಲೋಕಕ್ಕೆ ಪುರಾಣ, ಮಹಾಕಾವ್ಯವನ್ನು ಹೊಸ ಭಾವದಿಂದ ರಸತುಂಬಿರುವ ರೀತಿಯಲ್ಲಿ ಬರೆಯಲು ಪ್ರಾರಂಭಿಸಿದರು. ಅರ್ಥಗಾರ ದೇರಾಜೆಯವರಿಗಿಂತ ಬರಹಗಾರ ದೇರಾಜೆ ಇಂದು ಎಲ್ಲರಿಗೂ ದಾರಿದೀಪವಾಗಿದ್ದಾರೆ. ಇವರ ಒಂದೊಂದು ಕೃತಿಗಳೂ ಮಹಾಕಾವ್ಯದೊಳಗಿನ ನವನೀತಗಳು. ರಾಮನನ್ನು ರೂಪಿಸುವಲ್ಲಿ ವಿಶ್ವಾಮಿತ್ರರ ಭಾಗ ತುಂಬಾ ಮುಖ್ಯವೆಂದು ನಮಗೆ ತಿಳಿಯುವದೇ ಅವರ “ರಾಮರಾಜ್ಯದ ರುವಾರಿ” ಕೃತಿಯಿಂದ. ಶ್ರೀರಾಮನನ್ನು ಅಯೋಧ್ಯೆಯಿಂದ ಸಿದ್ಧಾಶ್ರಮಕ್ಕೆ ಕರೆದೊಯ್ಯುವಾಗ ರಾಮನನ್ನು ಹೇಗೆ ಹಂತ ಹಂತವಾಗಿ ಕರ್ತವ್ಯಂ ದೈವ ಮಾಹ್ನಿಕನನ್ನಾಗಿ ಬೆಳೆಸುತ್ತಾರೆ ಎನ್ನುವದನ್ನು ಈ ಕೃತಿಯನ್ನು ಓದಿಯೇ ತಿಳಿಯಬೇಕು.

ರಾಮನಿಗೆ ವಿಶ್ವಾಮಿತ್ರರಿಂದ ಅನುಗ್ರಹಿತವಾದ ಬಲಾ ಅತಿ ಬಲಾ ಅಸ್ತ್ರಗಳ ವಿಷಯಗಳ ವಿವರಣೆ ಅವುಗಳ ಸಂಬಂಧಿಯಾದ ದೇವತೆಗಳು, ಬೃಶಾಶ್ವರೆಂಬ ಮಹರ್ಷಿಯ ಕಥೆ, ಇವೆಲ್ಲವನ್ನು ಸಹಜವಾಗಿ ವಿವರಿಸಿರುವುದನ್ನು ನೋಡಿದಾಗ ಈ ವಾಮನಕಾಯದ ತ್ರಿವಿಕ್ರಮತೆಗೆ ನಾವು ಬೆರಗು ಪಡುತ್ತೇವೆ. ಈ ಕೃತಿಯಲ್ಲಿ ಬರುವ ಅಹಲ್ಯಾ ಗೌತಮರ ಕುರಿತಾದ ವಿವರಣೆ ಓದಿಯೇ ಅನುಭವಿಸಬೇಕು. ಕನ್ನಡದಲ್ಲಿ ಪು.ತೀ.ನರಸಿಂಹಾಚಾರ್ಯರ “ಅಹಲ್ಯೆ” ಒಂದು ಶ್ರೇಷ್ಠ ಕೃತಿ. ಅಹಲ್ಯೆಯ ಒಳತೋಟಿಯನ್ನು ಅವರಷ್ಟು ಚೆನ್ನಾಗಿ ಬಣ್ಣಿಸಿದ ಮತ್ತೊಂದು ಕೃತಿ ನಮಗೆ ಬೇರೆ ಭಾಷೆಯಲ್ಲಿಯೂ ಸಿಗಲಾರದು. ಅದನ್ನು ಬಿಟ್ಟರೆ ನಮ್ಮನ್ನು ಅಲ್ಲಾಡಿಸಬಲ್ಲ ಅಹಲ್ಯೆಯ ಭಾಗವೆಂದರೆ ಅದು “ರಾಮರಾಜ್ಯದ ರೂವಾರಿ”. ಗೌತಮ ಋಷಿಯ ಕುರಿತು “ವೇದಜಡರು” ಎನ್ನುವ ಮಾತಿನಿಂದ ಆತನ ಎಲ್ಲಾ ಗುಣಗಳನ್ನು ಅವನತಗೊಳಿಸುತ್ತಾರೆ. ಗೋ ಎಂದರೆ ವೇದ, ತಮ ಎಂದರೆ ಕತ್ತಲು ಅಂದರೆ ಬೆಳಕಿದ್ದೂ ಕಾಣದವರು, ಓದಿಯೂ ತಿಳುವಳಿಕೆ ಬಾರದವರು ಎಂದು ನೀಡಿರುವ ವಿವರಣೆ ಎಂತವರನ್ನೂ ಚಕಿತಗೊಳಿಸುತ್ತದೆ. ಹಾಗೇ ಮುಂದುವರಿದು ವೇದಜಡರು ವಿದ್ಯಾಜಡರ ಕುರಿತು ಬಹಳಷ್ಟು ತಿಳಿದುಕೊಳ್ಳಬೇಕಾಗಿದೆ ಎನ್ನುವುದರಲ್ಲಿ ಆ ಕಾಲದ ತಾಳಮದ್ದಳೆಯ ನಿಪುಣರ ಕುರಿತೂ ನಮ್ಮ ನೆನಪು ಬೇಡವೆಂದರೂ ಎದುರು ಬಂದುಬಿಡುತ್ತದೆ. ಕಾವ್ಯವೆನ್ನುವದು ಸೃಜನಶೀಲ ಕವಿಯ ಭಾವದ ತುಮುಲ ಎಂದು ಅನಿಸುವದು ಇಂತಹ ಸಂದರ್ಭಗಳಲ್ಲಿಯೇ. “ಗೌತಮನಿಗೆ ಮೇಲೇರುವ ಆಸೆ. ಏರುವುದಕ್ಕೆ ಆಗಲಿಲ್ಲ. ಇಂದ್ರನಿಗೆ ಕೆಳಗಿಳಿಯುವ ಹಂಬಲ, ಇಳಿದ. ಅಹಲ್ಯೆಗೆ ಸತ್ತು ಬಾಳುವದಕ್ಕಿಂತ ಬಿದ್ದು ಸಾಯುವದೇ ಸುಖವೆಂದು ಭ್ರಮೆ. ಸತ್ತಹಾಗಾದಳು ಮಾತ್ರ(ರಾಮರಾಜ್ಯದ ರೂವಾರಿ. ಪು೧೧೩)” ಎನ್ನುವ ಸಾಲಿನಲ್ಲಿ ನೋಡುವ ಎದುರುಬೀಳುವಿಕೆ (ಬಂಡಾಯವಲ್ಲ) ಯನ್ನು ಗಮನಿಸಬಹುದು. ಈ ಭಾಗದಲ್ಲಿ ಬರುವ “ಅಷ್ಟರಲ್ಲಿ ನವಿಲೊಂದು ಬಂದು ಎಲ್ಲರನ್ನು ನೋಡಿ ಗರಿಬಿಚ್ಚಿ ಕುಣಿದು ಕುಪ್ಪಳಿಸುತ್ತಾ ಓಡಿಹೋಯಿತು” (ರಾ.ರು. ಪು. ೧೧೮) ಎನ್ನುವ ಉಪಮೆ ಅನಾದೃಶ್ಯವಾದುದು.

ಇವತ್ತಿಗೂ ದೇರಾಜೆಯವರನ್ನು ತಾಳಮದ್ದಳೆಯ ಕ್ಷೇತ್ರದಿಂದ ವಿಮುಖರಾಗಬಾರದಿತ್ತು ಎಂದುಕೊಳ್ಳುತ್ತೇವೆ. ಆದರೆ ಅವರು ಬರೆದ ಸುಮಾರು ೨೦ಕ್ಕೂ ಮಿಗಿಲಾದ ಸಾಹಿತ್ಯ ಕೃತಿಗಳು ಅದರಲ್ಲೂ ಶ್ರೀರಾಮಚರಿತಾಮೃತಂ, ಶ್ರೀಮನ್ಮಹಾಭಾರತ ಕಥಾಮೃತಂ, ರಾಮರಾಜ್ಯ ಪೂರ್ವ ರಂಗ, ರಾಮರಾಜ್ಯದ ರೂವಾರಿ ಮುಂತಾದ ಕೃತಿಗಳು ಕನ್ನಡ ಸಾಹಿತ್ಯಲೋಕದಲ್ಲಿನ ಅಪರೂಪದ ಗ್ರಂಥಗಳು. ಅವರ ಕೃತಿಗಳಲ್ಲಿ ನಾವು ದೇವಡು ಅವರನ್ನು ನೋಡುತ್ತಿರುವಾಗಲೇ ಅದರೊಳಗೊಬ್ಬ ಜೀ. ಪೀ. ರಾಜರತ್ನಂ, ಪುತೀನ ಕಾಣಸಿಗುತ್ತಾರೆ. ಇಷ್ಟಾಗುವಾಗ ನೇರವಾಗಿ ತುಳಸಿದಾಸರೇ ಎದುರಾಗುತ್ತಾರೆ. ʻಇದ್ಯಾವುದೂ ಅಲ್ಲ ನಾನೇ ಇಲ್ಲಿದ್ದೇನೆʼ ಎಂದು ವಾಲ್ಮೀಕಿ, ವ್ಯಾಸರು ಎದುರು ಬರುತ್ತಾರೆ. ದೇರಾಜೆ ಸೀತಾರಾಮಯ್ಯನವರಿಗೆ ಸಿಹಿ ಎಂದರೆ ತುಂಬಾ ಇಷ್ಟವಾಗಿತ್ತಂತೆ. ಅವರು ಜೇನು ತುಪ್ಪಕ್ಕೂ ಸಕ್ಕರೆಯನ್ನು ಸೇರಿಸಿ ತಿನ್ನುತ್ತಿದ್ದರಂತೆ. ಉತ್ತಮ ಬಾಣಸಿಗರೂ ಆಗಿದ್ದರಂತೆ. ಅದು ಅವರ ವಾಚಿಕದಲ್ಲಿ ಮತ್ತು ಸಾಹಿತ್ಯದಲ್ಲಿ ವ್ಯಕ್ತವಾಗಿವೆ. ಬಹುಶಃ ಯುಗಕ್ಕೊಮ್ಮೆ ಇಂತಹ ಋಷಿಗಳು ಅವತರಿಸುತ್ತಾರೆ ಎನ್ನುವ ನಂಬಿಕೆ ದೇರಾಜೆಯವರನ್ನು ಗಮನಿಸಿದಾಗ ನಿಜವಿರಬಹುದೆನಿಸುತ್ತದೆ.