ಕೆಲ್ಲಿಯವರ ಮಗಳು ಹನ್ನೆರಡು ವರ್ಷದ ಮಿಕ್‌ಳೊಂದಿಗೆ ಸಿಂಗರ್‌ನ ಸ್ನೇಹ ಶುರುವಾಗುತ್ತದೆ. ಸಂಗೀತದಲ್ಲಿ ತೀವ್ರ ಆಸಕ್ತಿಯಿರುವ ಮಿಕ್‌ಳಿಗೆ ರೆಕಾರ್ಡ್ ಪ್ಲೇಟುಗಳನ್ನು ಉಡುಗೊರೆಯಾಗಿ ಕೊಡುತ್ತಾನೆ ಸಿಂಗರ್. ಆದರೆ ತನ್ನ ಸುತ್ತಲಿನ ಲೋಕದೊಂದಿಗೆ ಈತನ ಸಂವಹನವೇನಿದ್ದರೂ ಏಕ ಮುಖವಾದುದು. ಇವನ ಮನಸ್ಸು ಉಳಿದವರಿಗೆಲ್ಲ ಮುಚ್ಚಿದ ಬಾಗಿಲು. ಯಾರೇ ಮಾತನಾಡಬೇಕಿದ್ದರೂ, ಅವರ ತುಟಿಯ ಚಲನೆ ನೋಡಿದರೆ ಸಾಕು ಅವರು ಏನನ್ನು ಹೇಳುತ್ತಿದ್ದಾರೆ ಅನ್ನುವುದು ಸಿಂಗರ್‌ನಿಗೆ ತಿಳಿದು ಹೋಗುತ್ತದೆ.
‘ಕಾವ್ಯಾ ಓದಿದ ಹೊತ್ತಿಗೆ’ಯಲ್ಲಿ ಕಾರ್ಸನ್ ಮೆಕಲರ್ಸ್‌ರ ‘ದ ಹಾರ್ಟ್ ಈಸ್ ಅ ಲೋನ್ಲಿ ಹಂಟರ್’ ಕಾದಂಬರಿಯ ಕುರಿತು ಬರೆದಿದ್ದಾರೆ ಕಾವ್ಯಾ ಕಡಮೆ

 

1940ರಲ್ಲಿ ಅವರ ಪ್ರಥಮ ಕಾದಂಬರಿ ‘ದ ಹಾರ್ಟ್ ಈಸ್ ಅ ಲೋನ್ಲಿ ಹಂಟರ್’ ಪ್ರಕಟವಾದಾಗ ಕಾರ್ಸನ್ ಮೆಕಲರ್ಸ್‌ರಿಗೆ ಕೇವಲ ಇಪ್ಪತ್ಮೂರು ವರ್ಷ ವಯಸ್ಸು. ಆಗ ಅವರು ತಮ್ಮ ಪತಿ ರೀವ್ಸ್‌ರೊಂದಿಗೆ ನ್ಯೂಯಾರ್ಕಿನ ಅಪಾರ್ಟ್‌ಮೆಂಟ್ ಒಂದರಲ್ಲಿ ವಾಸಿಸುತ್ತಿದ್ದರು. ನವ ವಿವಾಹಿತರಾದ ಕಾರ್ಸನ್ ಮತ್ತು ರೀವ್ಸ್ ಇಬ್ಬರಿಗೂ ಕಾದಂಬರಿ ಬರೆಯಬೇಕೆಂಬ ಮಹತ್ವಾಕಾಂಕ್ಷೆ. ಆದರೆ ಕಾದಂಬರಿ ಬರವಣಿಗೆಯು ಬೇಡುವ ಏಕಾಂತ ಮತ್ತು ಸ್ವಂತ ಸಮಯದ ಅರಿವೂ ಇಬ್ಬರಿಗೂ ಇತ್ತು. ಹೀಗಾಗಿ ಅವರು ಮಾಡಿಕೊಂಡ ಒಪ್ಪಂದವೆಂದರೆ, ಒಂದು ವರ್ಷ ಒಬ್ಬರು ಮಾತ್ರ ಕೆಲಸಕ್ಕೆ ಹೋಗಿ ಮನೆಯನ್ನು ಆರ್ಥಿಕವಾಗಿ ನಿಭಾಯಿಸುವುದು, ಇನ್ನೊಬ್ಬರು ಕಾದಂಬರಿ ಬರೆಯುವುದು. ಆ ನಂತರದ ವರ್ಷ ಜವಾಬ್ದಾರಿಗಳನ್ನು ಬದಲಾಯಿಸಿಕೊಳ್ಳುವುದು ಅಂದುಕೊಂಡಿದ್ದರಂತೆ. ಕಾರ್ಸನ್ ಆಗಲೇ ಮೊದಲ ಡ್ರಾಫ್ಟನ್ನು ಬರೆಯಲು ಶುರು ಮಾಡಿದ್ದರಿಂದ ಆ ವರ್ಷ ರೀವ್ಸ್ ನೌಕರಿ ಹಿಡಿಯುತ್ತಾರೆ.

ನ್ಯೂಯಾರ್ಕಿನ ಅಪಾರ್ಟ್‌ಮೆಂಟಿನ ಧಗೆ- ಒಂಟಿತನಗಳನ್ನು ತಾಳಲಾರದೇ ಕಾರ್ಸನ್, ಸಮೀಪದ ಗ್ರಂಥಾಲಯವೊಂದಕ್ಕೆ ಹೋಗಿ ಬರವಣಿಗೆಯಲ್ಲಿ ತೊಡಗುತ್ತಿದ್ದುದನ್ನು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಕೆಲಸಗಾರರಿಲ್ಲದೇ ಮನೆಯನ್ನು, ಅಡುಗೆಯನ್ನು ನಿಭಾಯಿಸಿ ಗೊತ್ತಿರದ ಕಾರ್ಸನ್ ಒಮ್ಮೆ ಬರವಣಿಗೆಯ ಗುಂಗಿನಲ್ಲಿ ರೆಕ್ಕೆ ಪುಕ್ಕಗಳನ್ನು ಸ್ವಚ್ಛಗೊಳಿಸದೇ ಕೋಳಿಯನ್ನು ಅವನ್ನಿನಲ್ಲಿ ರೋಸ್ಟ್ ಮಾಡಲು ಇಟ್ಟುಬಿಟ್ಟಿದ್ದರಂತೆ. ರೀವ್ಸ್ ಬಂದು ಏನಿದು ಸುಟ್ಟ ವಾಸನೆ ಅಂತ ಕೇಳಿದಾಗ ಕಾರ್ಸನ್‌ರಿಗೆ ಆ ನೆನಪೂ ಇರಲಿಲ್ಲವಂತೆ. ಇಂಥ ತಳಮಳಗಳ ನಡುವೆಯೇ ಹುಟ್ಟಿದ ಕಾದಂಬರಿ ‘ದ ಹಾರ್ಟ್ ಈಸ್ ಅ ಲೋನ್ಲಿ ಹಂಟರ್.’

ಈ ಕಾದಂಬರಿ ಪ್ರಕಟವಾದ ಮೇಲೆ ಇಪ್ಪತ್ಮೂರು ವರ್ಷದ ಕಾರ್ಸನ್‌ರಿಗೆ ಅಮೆರಿಕನ್ ಮತ್ತು ವಿಶ್ವ ಸಾಹಿತ್ಯದಲ್ಲಿ ಎಷ್ಟು ಹೆಸರು ತಂದುಕೊಟ್ಟಿತೆಂದರೆ, ಅವರು ಇನ್ನೆಂದೂ ಹೊಟ್ಟೆಪಾಡಿಗಾಗಿ ನೌಕರಿ ಹಿಡಿಯಬೇಕಾಗಿ ಬರಲಿಲ್ಲ.

ಹಾರ್ಟ್ ಈಸ್ ಅ ಲೋನ್ಲಿ ಹಂಟರ್ ಕಾದಂಬರಿ ಜೀವ ಪಡೆಯುವುದು ಅಮೆರಿಕದ ದಕ್ಷಿಣ ಭಾಗಕ್ಕಿರುವ ಊರೊಂದರಲ್ಲಿ. ಅಮೆರಿಕನ್ ಸೌಥ್ ರಾಜ್ಯಗಳಿಗೆ ಅವುಗಳದೇ ಇತಿಹಾಸವಿದೆ. 1861 ರಿಂದ 1865 ತನಕ ನಾಲ್ಕು ವರ್ಷಗಳ ಕಾಲ ನಡೆದ ಸಿವಿಲ್ ವಾರ್‌ನಲ್ಲಿ ಗುಲಾಮಗಿರಿಯ ನಿಷೇಧದ ವಿಷಯವಾಗಿ ಉತ್ತರ ಮತ್ತು ದಕ್ಷಿಣದ ರಾಜ್ಯಗಳಿಗೆ ಕಾದಾಟವಾಗಿತ್ತು. 1865 ರಲ್ಲಿ ಸಂವಿಧಾನದ ಹದಿಮೂರನೆಯ ತಿದ್ದುಪಡಿಯ ಪ್ರಕಾರ ದೇಶಾದ್ಯಂತ ಗುಲಾಮಗಿರಿ ನಿಷೇಧವಾದ ನಂತರವೂ ಜನಾಂಗೀಯ ಕರ್ಷಣದ ಪ್ರಕ್ಷುಬ್ಧ ಅಲೆಗಳು ಆಗಾಗ ಈ ರಾಜ್ಯಗಳಲ್ಲಿ ಏಳುತ್ತಲೇ ಇರುತ್ತವೆ.

ಆದರೆ ಈ ಕಾದಂಬರಿಯಲ್ಲಿ ಕಾರ್ಸನ್ ಜನಾಂಗೀಯ ಘರ್ಷಣೆಯನ್ನು ಹಿಂದಕ್ಕೆ ಸರಿಸಿ ಮಾನವೀಯ ಮೌಲ್ಯಗಳ ಕುರಿತು ಹೆಚ್ಚಿನ ಲಕ್ಷ್ಯ ವಹಿಸುತ್ತಾರೆ. ಅದು ಕೆಲವೊಮ್ಮೆ ವಾಸ್ತವಕ್ಕೆ ಹತ್ತಿರವಾಗಿದೆಯೇ ಎಂಬ ಸಂಶಯ ಹುಟ್ಟಿಸಿದರೂ ಆ ಕಾಲದ ಲೇಖಕರಲ್ಲಿ ರೇಸ್-ರಿಲೇಶನ್‌ಗಳ ಕುರಿತು ಮುಕ್ತವಾಗಿ ಬರೆದ ಕೆಲವೇ ಲೇಖಕರಲ್ಲಿ ಕಾರ್ಸನ್ ಮೆಕಲರ್ಸ್ ಕೂಡ ಒಬ್ಬರಾಗಿ ಕಂಡು ವಿಶೇಷವೆನಿಸುತ್ತಾರೆ.

ಕಾದಂಬರಿ ಶುರುವಾಗುವುದು ಸಿಂಗರ್ ಮತ್ತು ಆಂಟನಾಪಲಿಸ್‌ರ ಸ್ನೇಹದ ಮೂಲಕ. ಇವರಿಬ್ಬರಿಗೂ ಹುಟ್ಟಿನಿಂದಲೇ ಕಿವಿ ಕೇಳಿಸುವುದಿಲ್ಲ, ಮಾತು ಬರುವುದಿಲ್ಲ. ಕೈ ಸನ್ನೆಯ ಭಾಷೆಯಿಂದಲೇ ಮಾತನಾಡುವ ಇವರಿಬ್ಬರಲ್ಲಿ ಆತ್ಮೀಯತೆ ಕಾಲಾನುಕ್ರಮದಲ್ಲಿ ಬೆಳೆದಿರುತ್ತದೆ. ಹತ್ತು ವರ್ಷ ಒಂದೇ ಕೋಣೆಯಲ್ಲಿ ವಾಸವಿದ್ದ ನಂತರ ಆಂಟನಾಪಲಿಸ್ ಮಾನಸಿಕ ಸ್ತಿಮಿತ ಕಳೆದುಕೊಂಡು ಚಿಕಿತ್ಸಾಲಯವನ್ನು ಸೇರಬೇಕಾಗುತ್ತದೆ. ಆಗ ಸೂಕ್ಷ್ಮ ಮನಸ್ಸಿನ ಸಿಂಗರ್ ಮಾನಸಿಕ ಒಂಟಿತನದಲ್ಲಿ ಪಡುವ ಪಾಡು ಕಾದಂಬರಿಯುದ್ದಕ್ಕೂ ಹರಡಿಕೊಂಡಿದೆ. ಆಂಟನಾಪಲಿಸ್‍ನ ನೆನಪಿನಲ್ಲಿ ನಿದ್ದೆಯಲ್ಲಿಯೂ ಕೈಸನ್ನೆಯ ಮೂಲಕ ಸಿಂಗರ್ ಮಾತನಾಡಲು ಪ್ರಯತ್ನಿಸುವುದು ಹೃದಯ ಕಲುಕುವಂತಿದೆ. ಆಂಟನಾಪಲಿಸ್ ಬಿಟ್ಟು ಹೋದ ಮೇಲೆ ಸಿಂಗರ್, ಕೆಲ್ಲಿ ಎಂಬುವವರ ಮನೆಯ ಒಂದು ಕೋಣೆಯಲ್ಲಿ ಬಾಡಿಗೆಗೆ ಬರುತ್ತಾನೆ. ಸಮೀಪದ ಆಭರಣದಂಗಡಿಯಲ್ಲಿ ಕೆಲಸ ಮಾಡುತ್ತಲೇ ಆಗಾಗ ತನ್ನ ಸ್ನೇಹಿತ ಆಂಟನಾಪಲಿಸ್‌ನನ್ನು ಭೇಟಿಯಾಗಿ ಬರುತ್ತಾನೆ.

ಕೆಲ್ಲಿಯವರ ಮಗಳು ಹನ್ನೆರಡು ವರ್ಷದ ಮಿಕ್‌ಳೊಂದಿಗೆ ಸಿಂಗರ್‌ನ ಸ್ನೇಹ ಶುರುವಾಗುತ್ತದೆ. ಸಂಗೀತದಲ್ಲಿ ತೀವ್ರ ಆಸಕ್ತಿಯಿರುವ ಮಿಕ್‌ಳಿಗೆ ರೆಕಾರ್ಡ್ ಪ್ಲೇಟುಗಳನ್ನು ಉಡುಗೊರೆಯಾಗಿ ಕೊಡುತ್ತಾನೆ ಸಿಂಗರ್. ಆದರೆ ತನ್ನ ಸುತ್ತಲಿನ ಲೋಕದೊಂದಿಗೆ ಈತನ ಸಂವಹನವೇನಿದ್ದರೂ ಏಕ ಮುಖವಾದುದು. ಇವನ ಮನಸ್ಸು ಉಳಿದವರಿಗೆಲ್ಲ ಮುಚ್ಚಿದ ಬಾಗಿಲು. ಯಾರೇ ಮಾತನಾಡಬೇಕಿದ್ದರೂ, ಅವರ ತುಟಿಯ ಚಲನೆ ನೋಡಿದರೆ ಸಾಕು ಅವರು ಏನನ್ನು ಹೇಳುತ್ತಿದ್ದಾರೆ ಅನ್ನುವುದು ಸಿಂಗರ್‌ನಿಗೆ ತಿಳಿದು ಹೋಗುತ್ತದೆ. ಹೀಗಾಗಿ ತನ್ನ ಸುತ್ತಲಿನವರ ಸೂಕ್ಷ್ಮಾತಿಸೂಕ್ಷ್ಮ ಭಾವನೆಗಳನ್ನೂ ಅವನು ಅರ್ಥ ಮಾಡಿಕೊಳ್ಳಬಲ್ಲ.

ಈ ಕಾದಂಬರಿ ಪ್ರಕಟವಾದ ಮೇಲೆ ಇಪ್ಪತ್ಮೂರು ವರ್ಷದ ಕಾರ್ಸನ್‌ರಿಗೆ ಅಮೆರಿಕನ್ ಮತ್ತು ವಿಶ್ವ ಸಾಹಿತ್ಯದಲ್ಲಿ ಎಷ್ಟು ಹೆಸರು ತಂದುಕೊಟ್ಟಿತೆಂದರೆ, ಅವರು ಇನ್ನೆಂದೂ ಹೊಟ್ಟೆಪಾಡಿಗಾಗಿ ನೌಕರಿ ಹಿಡಿಯಬೇಕಾಗಿ ಬರಲಿಲ್ಲ.

ಮಿಕ್‍ಳಿಗೆ ಸಂಗೀತದಲ್ಲಿ ಎಲ್ಲಿಲ್ಲದ ಆಸಕ್ತಿ. ರಾತ್ರಿ ವಿಹಾರ ಮಾಡುತ್ತ ಸಿರಿವಂತರ ಮನೆಯ ಹಿತ್ತಿಲಲ್ಲಿ ನಿಂತು ಅವರ ರೇಡಿಯೋದಲ್ಲಿ ಬರುವ ಸಂಗೀತವನ್ನು ಮನವಿಟ್ಟು ಕೇಳುತ್ತಾಳೆ, ಅದರಲ್ಲೇ ಕಳೆದುಹೋಗುತ್ತಾಳೆ. ಮೊಜಾರ್ಟ್, ಬಿಥೋವನ್‍ರ ಸಿಂಫನಿಯೆಂದರೆ ಅವಳಿಗೆ ಅಚ್ಚುಮೆಚ್ಚು. ಆಕೆಯೂ ಒಂದು ಖಾಸಗೀ ಡೈರಿಯಲ್ಲಿ ತನ್ನದೇ ಸಂಗೀತದ ನೋಟ್‌ಗಳನ್ನು ಬರೆದಿಟ್ಟಿದ್ದಾಳೆ. ಈ ಕಾದಂಬರಿಯಲ್ಲಿ ಅಲ್ಲಲ್ಲಿ ‘ಇನ್‌ಸೈಡ್ ರೂಮ್’ ಎನ್ನುವ ಪ್ರತಿಮೆ ಬರುತ್ತದೆ. ಮನಸ್ಸಿನ ಒಳಕೋಣೆಗೆ ಮಿಕ್ ಆಗಾಗ ಹೋಗಿ ಬರುತ್ತಾಳೆ. ಅಲ್ಲಿ ಸಂಗೀತ, ತಿರುಗಾಟಗಳಿವೆ, ವಿದೇಶಗಳನ್ನು ಸುತ್ತುವ ಹುಚ್ಚಿದೆ. ಆದರೆ ಅದರಲ್ಲಿ ಫಲಿಸುವುದು ಮಾತ್ರ ಕೆಲವೇ ಕೆಲವು ಎಂಬುದರ ಅರಿವೂ ಆಕೆಗಿದೆ.

ಮಿಕ್‌ಳ ತಮ್ಮ ಬಬ್ಬರ್ ನೆರೆಮನೆಯ ಬೇಬಿ ವಿಲ್ಸನ್‌ಳನ್ನು ಗೊತ್ತಾಗದೇ ಗುಂಡಿಕ್ಕಿ ಘಾಸಿಗೊಳಿಸಿಬಿಡುತ್ತಾನೆ. ಬೇಬಿಯ ತಾಯಿ ಬಂದು ಮಗಳ ಶಸ್ತ್ರಚಿಕಿತ್ಸೆ, ಆರೈಕೆಗಳ ಖರ್ಚನ್ನು ಕೆಲ್ಲಿ ಮನೆಯವರೇ ನೋಡಿಕೊಳ್ಳಬೇಕು ಎಂದು ತಕರಾರು ತೆಗೆದು ಹೋಗುತ್ತಾಳೆ. ಹೀಗಿದ್ದಾಗ ಮಿಕ್‌ಳ ತಂದೆ- ತಾಯಿಗಳಿಗೆ ಆ ಖರ್ಚುಗಳನ್ನೆಲ್ಲ ಸರಿದೂಗಿಸಿಕೊಂಡು ಮನೆಯನ್ನೂ ನಡೆಸುವುದು ಕಷ್ಟವಾಗುತ್ತದೆ. ಹೀಗಾಗಿ ಮಿಕ್ ತನ್ನ ಸಂಗೀತದ ಆಸಕ್ತಿಯನ್ನೆಲ್ಲ ಬದಿಗಿರಿಸಿ ಕೆಲಸಕ್ಕೆ ಹೋಗಲೇ ಬೇಕಾಗುತ್ತದೆ.

ಮಿಕ್‌ಳ ಮನೆಯಲ್ಲಿ ಕೆಲಸಕ್ಕೆ ಬರುವವಳು ಪೋರ್ಶಿಯಾ. ಆಕೆಯ ತಂದೆ ಡಾ. ಕಾಪ್‌ಲ್ಯಾಂಡ್ ಚಿಕ್ಕಂದಿನಲ್ಲೇ ಪೋರ್ಶಿಯಾಳ ತಾಯಿಯನ್ನು ದೂರ ಮಾಡಿರುತ್ತಾರೆ. ಆ ಊರಿನಲ್ಲಿ ಅಪರೂಪಕ್ಕೆ ದೊರಕುವ ಆಫ್ರಿಕನ್- ಅಮೆರಿಕನ್ ಡಾಕ್ಟರ್ ಅವರು. ಮಗನಿಗೆ ಕಾರ್ಲ್ ಮಾರ್ಕ್ಸ್‌ ಅಂತ ಹೆಸರಿಟ್ಟವರು. ಕಾರ್ಮಿಕರ ಹೋರಾಟಗಳಿಗೆ ದನಿಯಾಗುವವರು. ಸಣ್ಣ ಊರಿನಲ್ಲಿ ಮಾರ್ಕ್ಸ್‌ವಾದದ ಕಿಡಿ ಹೊತ್ತಿಸಿದವರು. ಸಿಂಗರ್‌ನ ಜೊತೆಗೂ ಡಾ. ಕಾಪ್‌ಲ್ಯಾಂಡ್‌ರಿಗೆ ಒಳ್ಳೆಯ ಸ್ನೇಹವಿರುತ್ತದೆ.

ಹಾರ್ಟ್ ಈಸ್ ಅ ಲೋನ್ಲಿ ಹಂಟರ್ ಕಾದಂಬರಿಯಲ್ಲಿ ಹೀಗೇ ಬಹು ಪಾತ್ರಗಳ ಚಿತ್ರಣವಿದೆ. ಅದೆಲ್ಲವನ್ನೂ ಹಿಡಿದಿಡುವುದು ಅಮೆರಿಕನ್ ಸೌಥ್ ಎಂಬ ಭೌಗೋಳಿಕ ಆವರಣ. ಛಿದ್ರ ಪ್ರತಿಮೆಗಳನ್ನೆಲ್ಲ ಈ ಅಮೆರಿಕನ್ ಸೌಥ್ ಎಂಬ ಕ್ಯಾನ್ವಾಸಿನಲ್ಲಿಟ್ಟು ನೋಡಿದಾಗ ಹೊಳೆಯುವ ಅರ್ಥವಿಸ್ತಾರಗಳು ಅನನ್ಯವಾದವು.

ಕೊನೆಗೆ ಆಂಟನಾಪಲಿಸ್‌ನನ್ನು ಭೇಟಿಯಾಗಲು ಹೋದಾಗ ಆತ ತೀರಿಕೊಂಡಿರುವುದು ಸಿಂಗರ್‌ನಿಗೆ ಗೊತ್ತಾಗುತ್ತದೆ. ಮನೆಗೆ ಬಂದವನೇ ತನ್ನದೇ ಗನ್ನಿನಿಂದ ಸಾವು ತಂದುಕೊಳ್ಳುತ್ತಾನೆ ಸಿಂಗರ್. ಸ್ನೇಹಿತನ ಸಾವಿನ ಸುದ್ದಿ ತಂದ ಖಿನ್ನತೆಯಿಂದ ಜೀವವನ್ನೇ ಕಳೆದುಕೊಳ್ಳುತ್ತಾನೆ.
ಸಿಂಗರನ ಸಾವು ಕೆಲ್ಲಿ ಮನೆಯವರಿಗೆ ಮತ್ತು ಡಾ ಕಾಪ್‌ಲ್ಯಾಂಡ್‌ರಿಗೆ ಕಡೆಯವರೆಗೂ ನಿಗೂಢವಾಗಿಯೇ ಉಳಿದುಬಿಡುತ್ತದೆ.

ಕಿವುಡ-ಮೂಗನಾಗಿದ್ದರಿಂದಲೇ ಅಪಾರದರ್ಶಕನಾದ ಸಿಂಗರ್ ನಮ್ಮೆಲ್ಲರ ಒಳಮನಸ್ಸಿನ ಪ್ರತೀಕವಾಗಿದ್ದಾನೆಯೇ ಎಂಬ ಸಂಶಯ ಒಮ್ಮೆಲೇ ಕಾಡದೇ ಇರದು. ಪುಟ್ಟ ಹುಡುಗಿಯಾಗಿದ್ದ ಮಿಕ್ ದೊಡ್ಡವರ ಲೋಕದೊಳಗೆ ಪ್ರವೇಶ ಸಾಧಿಸಿ ಅಂಗಡಿಯೊಂದರಲ್ಲಿ ಕೆಲಸಕ್ಕೆ ಹೋಗಲು ಶುರು ಮಾಡುವುದರ ಜೊತೆಗೆ ಕಾದಂಬರಿಯ ಮುಕ್ತಾಯವಾಗುತ್ತದೆ. ತನ್ನ ತುಮುಲಗಳನ್ನು ಅರ್ಥಮಾಡಿಕೊಳ್ಳುತ್ತ ಹಿರಿಯ ಸ್ನೇಹಿತನಂತಿದ್ದ ಸಿಂಗರ್ ತನಗೊಂದು ಸುಳಿವನ್ನೂ ಕೊಡದೇ ತೆರಳಿಬಿಟ್ಟಿದ್ದೇಕೆ ಎಂದು ದಿನವೂ ಯೋಚಿಸುತ್ತ ಹೈರಾಣಾಗುತ್ತಾಳೆ.

ಈ ಕಾದಂಬರಿ ಮಿಕ್‌ಳ ಕತೆ ಮಾತ್ರವಾಗಿದ್ದರೆ ಇದೂ ಸಾಮಾನ್ಯವಾಗಿ ಪ್ರಥಮ ಕಾದಂಬರಿಯಲ್ಲಿ ಕಾಣಬಹುದಾದ ಕಮಿಂಗ್ ಆಫ್ ಏಜ್ ಬರಹಗಳಷ್ಟೇ ರಮ್ಯವಾಗಿರುತ್ತಿತ್ತು. ಪ್ರಪಂಚದೊಂದಿಗೆ ಏಕಮುಖವಾಗಿ ವ್ಯವಹರಿಸುವ ಜಾನ್ ಸಿಂಗರ್‌ನ ಆಯಾಮ, ಡಾ ಕಾಪ್‌ಲ್ಯಾಂಡ್‌ರ ಮಾರ್ಕಿಸ್ಟ್‌ ಧೋರಣೆಯ ಭಾಷಣಗಳು ಮತ್ತು ಕಾದಂಬರಿಯ ಒಟ್ಟೂ ಆವರಣದಲ್ಲಿ ಕಾಣುವ ಒಂದು ಕಾಲದ (ಮತ್ತು ಈಗಿನದೂ ಸಹ) ಅಮೆರಿಕನ್ ಸೌಥ್‌ನಲ್ಲಿ ಕಂಡುಬರುವ ಬೌದ್ಧಿಕ ಒಬ್ಬಂಟಿತನಗಳು ಈ ದೀರ್ಘಬರಹವನ್ನು ವಿಶಿಷ್ಟವಾಗಿಸಿವೆ. ಕಾರಣ, ಈ ಹೃದಯವೆಂಬ ಏಕಾಂಗಿ ಬೇಟೆಗಾರ ಅರಸುವ ಶಿಕಾರಿ ಈ ಲೋಕದ್ದೇ ಆಗಿರಬೇಕಿಲ್ಲವಲ್ಲ!