ಅವರೇನೂ ತೆಪ್ಪಗೆ ಅದನ್ನು ಒಪ್ಪಿಕೊಳ್ಳಲಿಲ್ಲ. ತಮ್ಮಲ್ಲಿ ಜಾಗೃತವಾಗಿರುವ ಆಧುನಿಕ ಮಹಿಳಾಪ್ರಜ್ಞೆಗೆ ನೀವು ಅಪಚಾರ ಮಾಡುತ್ತಿದ್ದೀರಿ ಎಂದು ಗಾಂಧೀಜಿಯವರನ್ನು ನೇರವಾಗಿ ತರಾಟೆಗೆ ತೆಗೆದುಕೊಂಡರು. ಯಾವ ಚಳುವಳಿಯೂ ತಾವಿಲ್ಲದೆ ನಡೆಯಕೂಡದು ಎಂದು ಸ್ಪಷ್ಟವಾಗಿ ಹೇಳಿದರು. ದಾದಾಬಾಯಿ ನವರೋಜಿಯವರ ಮೊಮ್ಮಗಳು ಕುರ್ಷೆದ್ ಬೆನ್ ನವರೋಜಿ ಒಂದು ಸಿಟ್ಟಿನ ಪತ್ರವನ್ನು ಸಹ ಬರೆದು ಗಾಂಧಿಗೆ ರವಾನಿಸಿದರು. ‘ಸ್ತ್ರೀಧರ್ಮ’ ಎಂಬ ಪತ್ರಿಕೆಯಲ್ಲಿ ಮಾರ್ಗರೆಟ್ ಕಸಿನ್ಸ್ ಹೀಗೆ ‘ಹೊರಗಿರಿಸುವ’ ಹುನ್ನಾರವನ್ನು ಪ್ರತಿಭಟಿಸಿದರು. ಯಾವುದೇ ಸಮಾವೇಶ, ಸಮಿತಿ, ಸಂಚಲನೆಗಳು ಹೆಣ್ಣಿಲ್ಲದೆ ನಡೆಯಬಾರದೋ, ಹಾಗೆಯೇ ಯಾವುದೇ ಹೋರಾಟ, ಪ್ರತಿಭಟನೆಗಳು ಸಹ ಹೆಣ್ಣಿಲ್ಲದೆ ಅಪೂರ್ಣ ಎಂದು ಎಚ್ಚರಿಸಿದರು
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಮೂವತ್ತೆಂಟನೆಯ ಬರಹ
ಆರು ದಶಕಗಳಲ್ಲಿ ಜಾನಕಿಯಮ್ಮ ಹದಿನೇಳು ಭಾಷೆಗಳಲ್ಲಿ ಸುಮಾರು ಐವತ್ತು ಸಾವಿರಕ್ಕೂ ಮಿಕ್ಕಿ ಹಾಡುಗಳನ್ನು ಹಾಡಿದ್ದಾರೆ. ‘ದಕ್ಷಿಣ ಭಾರತದ ಕೋಗಿಲೆ’ ಎಂಬ ಬಿರುದು ರಾಷ್ಟ್ರೀಯ ಪಕ್ಷಪಾತವೆಂಬ ಹುಣ್ಣಿನತ್ತ ಬೆರಳು ಮಾಡಿ ತೋರಿಸುತ್ತದೆ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಹಿಂದಿಯಲ್ಲಿ ಹಾಡಿದ ಲತಾ ಮಂಗೇಶ್ಕರ್ ಭಾರತದ ರತ್ನವಾದರೆ ಜಾನಕಿಯಮ್ಮ ಕೇವಲ ದಕ್ಷಿಣದ ಕೋಗಿಲೆಯಾಗಿ ಉಳಿಯುತ್ತಾರೆ.
ತಮ್ಮ ಬದುಕಿನ ಐವತ್ತೈದು ವರ್ಷಗಳನ್ನು ಸಂಗೀತದಲ್ಲಿ ಕಳೆದ ಮೇಲೆ ಅವರ ಎಪ್ಪತ್ತೈದು ವರ್ಷ ವಯಸ್ಸಿನಲ್ಲಿ (2013) ರಲ್ಲಿ ‘ಪದ್ಮಭೂಷಣ’ಕ್ಕೆ ರಾಷ್ಟ್ರೀಯ ಸರ್ಕಾರ ಅವರನ್ನು ಆಯ್ಕೆ ಮಾಡಿದಾಗ ಜಾನಕಿಯಮ್ಮ ವಿನಯದಿಂದಲೇ ತಾನು ರತ್ನದ ಸಾಮಗ್ರಿ ಎಂದು ಗುರುತಿಸುವ ಪ್ರಜ್ಞಾವಂತಿಕೆ ಮತ್ತು ವಿವೇಚನೆ ಇಲ್ಲದ ಸರಕಾರಗಳ ಪದ್ಮ-ಗಿದ್ಮ ತನಗೆ ಬೇಕಿಲ್ಲ, ಎಂದು ಹೇಳಿ ಎದೆ ಮುಟ್ಟಿಕೊಂಡು ನೋಡಿಕೊಳ್ಳುವಂತೆ ಮಾಡಿದ್ದರು, ನಿಜ. ಆದರೆ ಹಿಂದಿ ಮಾತ್ರ ರತ್ನಕ್ಕೆ ಯೋಗ್ಯ, ದಕ್ಷಿಣ ಭಾರತೀಯ ಭಾಷೆಗಳಲ್ಲ ಎಂಬ ರಾಷ್ಟ್ರೀಯ ಸರಕಾರದ ಪಕ್ಷಪಾತದಲ್ಲಿ ಬದಲಾವಣೆಯೇನೂ ಆಗಲಿಲ್ಲ.

2014ರ ನಂತರ ಅಂತಹ ನಿಷ್ಪಕ್ಷಪಾತ ವಿವೇಚನೆಯನ್ನು ನಿರೀಕ್ಷಿಸುವುದು ಇನ್ನಷ್ಟು ಮೂರ್ಖತನವೇ. ಒಂದಕ್ಕಿಂತ ಹೆಚ್ಚು ಹಿಂದಿ ರಾಜ್ಯಗಳು ಬದುಕುಳಿಯುವುದು ದಕ್ಷಿಣ ಭಾರತ ಕಟ್ಟುವ ತೆರಿಗೆಯಿಂದಲೇ ಎಂಬ ಆರ್ಥಿಕ ಸತ್ಯ ಗೊತ್ತಿದ್ದವರಿಗೆ ಈ ಸಾಂಸ್ಕೃತಿಕ ಅನ್ಯಾಯ ಇನ್ನಷ್ಟು ಘೋರವಾಗಿ ಕಾಣಿಸಬಲ್ಲುದು. ಬದುಕಿರುವಾಗ ಪ್ರತಿಭೆ-ಸೇವೆಗಳನ್ನು ಗುರುತಿಸದೇ ಮರೆಯಾದ ಮೇಲೆ ಕೊಡುವ ಪ್ರಶಸ್ತಿ ಕೇವಲ ಕಾಗದದ ಚೂರು ಎಂಬ ಸತ್ಯವನ್ನು ಜಾನಕಿಯಮ್ಮ ಸ್ಪಷ್ಟವಾಗಿ ಧ್ವನಿಸಿದ್ದರು.
ಜಾನಕಿಯಮ್ಮ ಪದ್ಮಭೂಷಣ ಪ್ರಶಸ್ತಿಯನ್ನು ಬೇಡ ಎಂದಿದ್ದು ಯಾಕೆ ಸುದ್ದಿಯಾಗಲಿಲ್ಲ? ಪಡೆಯುವ ಮುನ್ನ ವಿನಯದಿಂದಲೇ ಬೇಡ ಎಂದಿದ್ದರು, ಅದಕ್ಕೆ. ಪಡೆದಿದ್ದನ್ನು ಹಿಂತಿರುಗಿಸಿದರೆ ಮಾತ್ರ ವ್ಯವಸ್ಥೆಯ ಅಹಮಿಗೆ ಪೆಟ್ಟು ಬೀಳುತ್ತದೆ. ಕೊಡುವ ಮುನ್ನವೇ ಎಷ್ಟು ಬೇಕಾದರೂ ಬೇಡ ಅನ್ನಿ. ಎದೆ ಮುಟ್ಟಿ ನೋಡಿಕೊಳ್ಳುವುದು ಹೋಗಲಿ, ವ್ಯವಸ್ಥೆ ಅದನ್ನು ಕಿವಿಗೇ ಹಾಕಿಕೊಳ್ಳುವುದಿಲ್ಲ! ಇಲ್ಲದಿದ್ದರೆ ಅದು ನಡೆದ ಹದಿಮೂರು ವರುಷಗಳ ಉದ್ದಕ್ಕೂ ದಕ್ಷಿಣದ ಕೋಗಿಲೆಗೆ ಭಾರತರತ್ನ ಕೊಟ್ಟು ಪುರಸ್ಕರಿಸುವ ಪ್ರಸ್ತಾಪವೇ ಬರಲಿಲ್ಲವೇ!
ಯಾಕೆಂದರೆ ಜಾನಕಿಯಮ್ಮನ ಪ್ರತಿಭಟನೆಗೆ ಕಣ್ಣು ಸೆಳೆಯುವ ದೃಶ್ಯವೈಭವದ ಗುಣವಿರಲಿಲ್ಲ. ಅದೊಂದು ಸಂಖ್ಯಾಬಲವೂ ಇಲ್ಲದೆ ಉಳಿದ ಒಂಟಿದನಿ. ಹಾಗಾಗಿ ಹೆಣ್ಣೊಬ್ಬಳು ಗೊಣಗೊಣವೆಂದು ಅಡಿಗೆಮನೆಯ ಮೂಲೆಯಲ್ಲೆಲ್ಲೋ ಅತ್ತು ಕಣ್ಣೊರೆಸಿಕೊಂಡಂತೆ ತೋರಿ ನಡುಮನೆಯಲ್ಲಿ ಹರಡಿ ಕೂತಿದ್ದ ‘ಯಜಮಾನ’ ಮಂದಿ ತಲೆ ಕೆಡಿಸಿಕೊಳ್ಳಲಿಲ್ಲ.
ನಿಮ್ಮ ದಮನಕ್ಕೆ ನಮ್ಮ ಸತ್ಯಾಗ್ರಹವೇ ಉತ್ತರ!
ಹೊರಗಿರಿಸುವಿಕೆ (exclusion) ಮತ್ತು ಉಸಿರನ್ನು ಅಡಗಿಸಿ ಅಳಿಸಿ ಹಾಕುವಿಕೆ (erasure) ಎಂಬ ಪ್ರಕ್ರಿಯೆಗಳು ವ್ಯವಸ್ಥೆ ಎಂಬ ಶಕ್ತಿ ನಡೆಸುವ ದಮನದ ಎರಡು ಮಾದರಿಗಳು ಎನ್ನುವುದನ್ನು ಗಮನಿಸುವುದು ಅತ್ಯಗತ್ಯ.
2013ರ ಆಗಸ್ಟ್ 20ರಂದು ಪ್ರಗತಿಪರ ಮರಾಠಿ ಲೇಖಕ ನರೇಂದ್ರ ದಾಭೋಲ್ಕರ್ ಬೆಳಗಿನ ವಾಕಿಂಗೆಂದು ಹೋಗಿದ್ದಾಗ ಇಬ್ಬರು ಅಪರಿಚಿತ ಗನ್ನುಮಂದಿ ಎದುರಾಗಿ ಧಾಭೋಲ್ಕರರನ್ನು ಗುಂಡಿಕ್ಕಿ ಸಾಯಿಸಿದ್ದರು. ಯಾಕೆ? ಪ್ರಗತಿಪರ ಲೇಖಕ ದೇಶದಾದ್ಯಂತ ಹಬ್ಬಿದ್ದ ಮೂಢನಂಬಿಕೆಯ ಹುನ್ನಾರವನ್ನು ಖಂಡಿಸುತ್ತಲೇ ಬಂದಿದ್ದರು, ಅದಕ್ಕೆ. ಹಾಗೆಯೇ 2015ರ ಫೆಬ್ರವರಿ 20ರಂದು ಬರಹಗಾರ ಮತ್ತು ರಾಜಕಾರಣಿ ಗೋವಿಂದ್ ಪನ್ಸಾರೆ ಯವರನ್ನು ಅವರ ಪತ್ನಿಯ ಸಮೇತ ಧಾಬೋಲ್ಕರರ ತರವೇ ಗುಂಡಿಕ್ಕಿ ಕೊಲ್ಲಲಾಯಿತು. ಮುಂದುವರಿದು 2015ರ ಆಗಸ್ಟ್ 30ರಂದು ಕನ್ನಡದ ಒಬ್ಬ ಅತ್ಯುತ್ತಮ ಸಂಶೋಧಕ ಮತ್ತು ಚಿಂತಕ ಡಾ. ಎಂ. ಎಂ. ಕಲಬುರ್ಗಿಯವರನ್ನು ಅವರ ಮನೆಗೆ ಹೋಗಿ ರಾಜಾರೋಷವಾಗಿ ಗುಂಡಿಕ್ಕಿ ಕೊಲ್ಲಲಾಯಿತು. ಮೂಢನಂಬಿಕೆಯ ವಿರುದ್ಧ ಸಮರವನ್ನೇ ಸಾರಿದ್ದ ಕಲಬುರ್ಗಿಯವರ ಸಂಶೋಧನೆ ವ್ಯವಸ್ಥೆಗೆ ಬೇಕಿಲ್ಲದ ಕೆಲವು ಕಹಿ ಸತ್ಯಗಳನ್ನು ಅನಾವರಣ ಮಾಡಿತ್ತು.
ಹೀಗೆ ಪ್ರಗತಿಪರ ಚಿಂತಕರ ಬೇಟೆ ಹೀಗೆ ಸಾಗುತ್ತಿದ್ದಾಗ 2015ರ ಸೆಪ್ಟೆಂಬರ್ 4ರಂದು ಪ್ರಶಸ್ತಿಗಳನ್ನು ಹಿಂತಿರುಗಿಸುವ ಮೂಲಕ ಪ್ರತಿಭಟನೆಯನ್ನು ವ್ಯಕ್ತಪಡಿಸುವ ‘ಸತ್ಯಾಗ್ರಹ’ ಪ್ರಾರಂಭವಾಯಿತು. ಮೊಟ್ಟ ಮೊದಲ ಹೆಸರು ಹಿಂದಿ ಲೇಖಕ ಉದಯ್ ಪ್ರಕಾಶ್ ಅವರು. ನಂತರ ಇಂಗ್ಲಿಷ್ ಕಾದಂಬರಿಕಾರ್ತಿ ನಯನತಾರ ಸೆಹಗಲ್ ಹಾಗೂ ಹಿಂದಿ ಕವಿ ಅಶೋಕ್ ವಾಜಪೇಯಿ ಅವರನ್ನು ಹಿಂಬಾಲಿಸಿದ್ದರು.
ನಂತರ 2015ರ ಸೆಪ್ಟೆಂಬರ್ 28ರಂದು ದಾದ್ರಿಯಲ್ಲಿ ದನದ ಮಾಂಸ ತಿಂದನೆಂಬ ಗುಮಾನಿಯ ಮೇಲೆ ವ್ಯಕ್ತಿಯೊಬ್ಬನನ್ನು ಘೋರವಾಗಿ ಥಳಿಸಿ ಕೊಲ್ಲಲಾಯಿತು. ದೇಶದಾದ್ಯಂತ ಹಬ್ಬುತ್ತಿದ್ದ ಭಯಗ್ರಸ್ತ ವಾತಾವರಣದ ಹಿಂದಿರುವ ಶಕ್ತಿಗಳನ್ನು ಖಂಡಿಸಿ ಸಾಹಿತ್ಯವಲಯಕ್ಕೆ ಸೇರಿದ ಹಲವಾರು ಮಂದಿ ತಮ್ಮ ಪ್ರಶಸ್ತಿಗಳನ್ನು ಹಿಂತಿರುಗಿಸುವುದರ ಮೂಲಕ ಪ್ರತಿಭಟನೆಯ ದನಿ ಎತ್ತಿದ್ದರು.
ಇದು ಅಂತಾರಾಷ್ಟ್ರೀಯ ಗಮನವನ್ನು ಸೆಳೆಯಹತ್ತಿದಾಗ ‘ದೇಶಪ್ರೇಮಿ’ಗಳು ಸುಮ್ಮನಿರುತ್ತಾರೆಯೇ? ಅನುಪಮ್ ಖೇರ್ ಎಂಬ ಸಿನಿಮಾ ವ್ಯಕ್ತಿ ಎಲ್ಲ ದೇಶಗಳಲ್ಲಿಯೂ ಸಮಸ್ಯೆಗಳಿರುತ್ತವೆ, ಹಾಗಂತ ಭಾರತ ಸಹನೆ-ಹೀನ ರಾಷ್ಟ್ರ ಎಂದು ಕರೆಯುವುದು ಸರಿಯೇ? ಈ ಪ್ರಶಸ್ತಿ ಹಿಂತಿರುಗಿಸುವ ಚಳುವಳಿಯ ಹಿಂದೆ ರಾಜಕೀಯ ಪ್ರೇರಿತ ದುರುದ್ದೇಶವಿದೆ ಎಂದೆಲ್ಲಾ ಬೊಬ್ಬೆ ಹೊಡೆಯಹತ್ತಿದ್ದು ಸುದ್ದಿಯಾಯಿತು. ಒಬ್ಬರಾದ ಮೇಲೊಬ್ಬರಂತೆ ಗಣ್ಯವ್ಯಕ್ತಿಗಳ ಹತ್ಯೆ ರಾಜಕೀಯ ಬಲವಿಲ್ಲದೆ ಆಗಬಲ್ಲುದೇ? ಅಥವಾ ಆತನ ಬೊಬ್ಬೆಗೆ ರಾಜಕೀಯ ಕುಮ್ಮಕ್ಕು ಇರದಿರಲು ಸಾಧ್ಯವೇ ಎಂಬ ಪ್ರಶ್ನೆಗಳು ಇಲ್ಲಿ ಅಪ್ರಸ್ತುತ.
ಇರಲಿ, ತಣ್ಣಗೆ ಪ್ರಶಸ್ತಿಗಳನ್ನು ಹಿಂತಿರುಗಿಸಿದ ಪ್ರತಿಭಾವಂತರು ಯಾರ್ಯಾರದೋ ನಿದ್ದೆ ಕೆಡಿಸಿದ್ದು ಮಾತ್ರ ಸುಳ್ಳಲ್ಲ. 2010ರಲ್ಲಿ ಎಂ ಎಫ್ ಹುಸೇನರು ದೇಶಭ್ರಷ್ಟರಾಗಬೇಕಾದ ಕಾಲದಲ್ಲಿ ಯಾಕೆ ಪ್ರಶಸ್ತಿಗಳನ್ನು ಹಿಂತಿರುಗಿಸಲಿಲ್ಲ? 1984ರಲ್ಲಿ ಸಿಖ್ ಮಾರಣಹೋಮ ನಡೆದಾಗ ಕಾಂಗ್ರೆಸ್ ವಿರುದ್ಧ ಪ್ರತಿಭಟನೆಯ ದನಿ ಎತ್ತಿ ಪ್ರಶಸ್ತಿಗಳನ್ನು ಯಾಕೆ ಹಿಂತಿರುಗಿಸಲಿಲ್ಲ ಎಂದು ಅಬ್ಬರಿಸಲಾಯಿತು. ಇದು ಅಕ್ಷರಶಃ ಸೇರಿಗೆ ಸವ್ವಾಸೇರು ಎಂಬ ಬೀದಿ ಜಗಳ. ನೀವು ಅದು ಮಾಡಲಿಲ್ಲವಾ? ಇದು ಮಾಡಲಿಲ್ಲವಾ? ಈಗ ನಮ್ಮ ಕಾಲ. ಮಾಡುತ್ತೇವೆ ಬಿಡಿ, ತೆಪ್ಪಗಿರುವುದನ್ನು ಕಲಿಯಿರಿ! ದೇಶಪ್ರೇಮವೆಂದರೆ ಅದೇ!
ಅಂದ ಹಾಗೆ ಬುದ್ಧಿಜೀವಿಗಳ ಪ್ರತಿಭಟನೆಗೆ ಕ್ಯಾರೆ ಎನ್ನದೆ ಸರಣಿಹತ್ಯೆ ಮುಂದುವರಿದು 2017ರ ಸೆಪ್ಟೆಂಬರ್ 5ರಂದು ದಿಟ್ಟ ಪತ್ರಕರ್ತೆ ಗೌರಿ ಲಂಕೇಶರ ಹತ್ಯೆಯಾಗುವುದಂತೂ ತಪ್ಪಲಿಲ್ಲ.
ಇಂದಿನ ನಮ್ಮ ದಿನಗಳಲ್ಲಿ ಒಂದೋ ಹೊರಗಿರಿಸುವ, ಇಲ್ಲಾ ಉಸಿರನ್ನು ಅಡಗಿಸಿ ಅಳಿಸಿ ಹಾಕುವ ಪ್ರಯತ್ನಗಳೆರಡೂ ಬಿಡುವಿಲ್ಲದೆ ನಡೆದಿವೆ ಎನ್ನುವುದಂತೂ ಸ್ಪಷ್ಟ. ಆದ್ರೆ ಲೋರ್ದ್ (Audre Lorde) ಎಂಬ ಆಫ್ರಿಕನ್ ಅಮೆರಿಕನ್ ಬರಹಗಾರ್ತಿಯ ‘some of us were not meant to survive’ ಎಂಬ ಸುಪ್ರಸಿದ್ಧ ಕೃತಿಯಲ್ಲಿ ಅದೇ ವಾಕ್ಯವೂ ಬರುತ್ತದೆ. ಬದುಕುಳಿದು ಕಣ್ಣೆದುರು ಇರುವುದೇ ಒಂದು ಮಹಾ ಪ್ರತಿಭಟನೆ. ಅದರ ಶಕ್ತಿಯ ಅರಿವು ಇರುವುದರಿಂದಲೇ ದಮನ ಶಕ್ತಿಗಳು ಅಕ್ಷರಶಃ ಉಸಿರನ್ನು ಅಡಗಿಸಲು ಹುನ್ನಾರ ನಡೆಸುತ್ತವೆ. ಆದರೆ ಒಂದನ್ನಂತೂ ಮರೆಯಬಾರದು: ಪ್ರಶಸ್ತಿ ಪತ್ರಗಳನ್ನು ಹಿಂತಿರುಗಿಸುವುದು ಸತ್ಯಾಗ್ರಹದ ಒಂದು ಭಾಗವಾದಂತೆ ಪ್ರಶಸ್ತಿಯನ್ನು ನಿರಾಕರಿಸುವುದು ಸಹ ಅದರದ್ದೇ ಇನ್ನೊಂದು ರೂಪ.

ಸತ್ಯಕ್ಕಾಗಿ ಆಗ್ರಹಿಸಿ ಹೊಮ್ಮುವ ಪ್ರತಿಭಟನೆ ಸತ್ಯಾಗ್ರಹ ಎಂದು ಕರೆಯಲ್ಪಡುತ್ತದೆ. ದಕ್ಷಿಣ ಆಫ್ರಿಕಾದಲ್ಲಿ ಹೆಂಗಸರನ್ನು ಒಳಗೊಂಡು ನಡೆಸಿದ ಹೋರಾಟದ ಮೂಲಕ ಗಾಂಧೀಜಿಗೆ ಅತ್ಯಂತ ಸಮರ್ಥ ಸತ್ಯಾಗ್ರಹಿ ಹೆಣ್ಣೇ ಎನ್ನುವುದು ಅನುಭವಕ್ಕೆ ಬಂದಿತ್ತು. ಸರ್ದಾರ್ ವಲ್ಲಭಭಾಯಿ ಪಟೇಲರು ಸಹ ಹೆಣ್ಣಿನ ಆತ್ಮಶಕ್ತಿ ಗಂಡಸಿಗಿಂತಲೂ ಮಿಗಿಲು ಎಂದು ಹೇಳಿದ್ದಿದೆ. ‘ಅಹಿಂಸೆ ಎಂಬ ಗುಣ ಬದುಕಿನ ಮೂಲತತ್ವವಾದಲ್ಲಿ ಭವಿಷ್ಯವೆನ್ನುವುದು ಹೆಣ್ಣಿಗೇ ಸೇರಿದ್ದು’ ಎಂಬ ಗಾಂಧಿನುಡಿ ಈಗ ಪರಿಚಿತವೇ.
ಹೆಣ್ಣಿಗೆ ಚಿನ್ನದ ಮೋಹ ಬಹಳ ಎನ್ನುವ ಮಾತನ್ನು ಸುಳ್ಳು ಮಾಡಿದವರು ತಮ್ಮಲ್ಲಿದ್ದಷ್ಟೂ ಚಿನ್ನವನ್ನು ದಾನಮಾಡಿದ ಹೆಂಗಸರೇ. ಗಾಂಧೀಜಿ ತಮ್ಮ ‘ನವಜೀವನ’ ಪತ್ರಿಕೆಯಲ್ಲಿ ಒಮ್ಮೆ ಹೀಗೆ ದಾಖಲಿಸಿದ್ದರು:
‘ಡಾಕೊರ್ ಊರಿನಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಹಣ ಕೊಡಿರೆಂದು ಮಂದಿಯನ್ನು ಬೇಡಿದೆ. ಸದ್ಯ ಹೆಂಗಸರ ಕಡೆಯಿಂದಲೇ ಶುರು ಮಾಡಿದ್ದೆ. ಅವರಲ್ಲೊಬ್ಬ ಸಹೋದರಿ ಕಂಡವರ ಮನೆಗಳ ಹಿಟ್ಟು ಬೀಸಿ ಮಾಡಿಸಿಕೊಂಡಿದ್ದ ಪುಡಿ ಚಿನ್ನವನ್ನು ದಾನ ಮಾಡಿದಳು. ಆಕೆ ಕಿವಿಯ ವಾಲೆಯನ್ನು ಬಿಚ್ಚಿ ನನ್ನ ಕೈಗಿತ್ತ ಗಳಿಗೆಯಲ್ಲಿ ಭಾರತೀಯ ಹೆಣ್ಮಕ್ಕಳು ಅಹಿಂಸೆ ಮತ್ತು ಅಸಹಕಾರಗಳ ಅರ್ಥವನ್ನು ಆತ್ಮದೊಳಕ್ಕೆ ಇಳಿಸಿಕೊಂಡಿರುವುದು ನನಗೆ ಝಗಝಗನೆ ಹೊಳೆದಿತ್ತು. ಬರಬರುತ್ತಾ ಅದು ಇನ್ನಷ್ಟು ಸ್ಪಷ್ಟವಾಗುತ್ತಾ ಹೋಯಿತು. ಗುಜರಾತಿನಲ್ಲಿ ಹೆಣ್ಮಕ್ಕಳು ಬಳೆ, ವಾಲೆ, ಉಂಗುರ, ಸರ, ಇತ್ಯಾದಿ ಏನೇನಿತ್ತು ಎಲ್ಲವನ್ನೂ ಬಿಚ್ಚಿ ಕೊಟ್ಟರು. ಪೂನಾದಲ್ಲಿ ಆಭರಣಗಳ ಸುರಿಮಳೆಯೇ ನಡೆಯಿತು. ಬೆಳಗಾಂ, ಧಾರವಾಡ ಮತ್ತು ಹುಬ್ಬಳ್ಳಿಗಳಲ್ಲೂ ಸಹ ಅದು ಮುಂದುವರೆಯಿತು. ಪರ್ದಾ ಹಿಂದೆ ಮರೆಯಾಗಿದ್ದ ಮುಸ್ಲಿಂ ಹೆಂಗಸರು ಒಡವೆ ಮತ್ತು ನಗದು ಹಣವನ್ನು ಕೊಡುವುದರಲ್ಲಿ ಹಿಂದೆ ಬೀಳಲಿಲ್ಲ.’
ಇಷ್ಟಾದರೂ ಉಪ್ಪಿನ ಸತ್ಯಾಗ್ರಹದಲ್ಲಿ ಗಾಂಧೀಜಿಯವರೊಂದಿಗೆ ದಂಡಿಯತ್ತ ನಡೆದ ಸತ್ಯಾಗ್ರಹಿಗಳಲ್ಲಿ ಮೊದಮೊದಲು ಒಬ್ಬ ಹೆಣ್ಣೂ ಇರಲಿಲ್ಲ. ಆದರೆ ಅಷ್ಟರಹೊತ್ತಿಗೆ ವಿದೇಶಿ ವಸ್ತ್ರಗಳನ್ನು ಮಾರುವ ಅಂಗಡಿಗಳ ಸುತ್ತ ಪಿಕೆಟಿಂಗ್ ನಡೆಸುವುದು, ಸಾರಾಯಿ ಅಂಗಡಿಗಳ ಮುಂದೆ ನಡೆದ ಪ್ರತಿಭಟನೆ, ಬೀದಿಯಲ್ಲಿ ನಿಂತು ಉಪ್ಪು ಮಾರುವುದು, ಹರತಾಳಗಳನ್ನು ನಿಯೋಜಿಸಿ ಯಶಸ್ವಿಯಾಗಿ ನಡೆಸುವುದು, ಪೊಲೀಸರ ಲಾಠಿ, ಗುಂಡುಗಳನ್ನು ಧೈರ್ಯದಿಂದ ಎದುರಿಸುವುದು, ಕಠಿಣ ಶಿಕ್ಷೆಗೆ ಹೆದರದೆ ಜೈಲುವಾಸ ಅನುಭವಿಸುವುದು ಇತ್ಯಾದಿ ಎಲ್ಲದರಲ್ಲೂ ಹೆಂಗಸರ ಪಾಲಿತ್ತು. ಆದರೂ ಉಪ್ಪಿನ ಸತ್ಯಾಗ್ರಹ ಗಂಡಿಗೆ ಮಾತ್ರ ಮೀಸಲು ಎಂದು ಗಾಂಧೀಜಿ ಭಾವಿಸಿದ್ದರೆ? ಈ ‘ಹೊರಗಿರಿಸುವ’ ವಿದ್ಯಮಾನಕ್ಕೆ ಹೆಂಗಸರು ಹೇಗೆ ಪ್ರತಿಕ್ರಿಯಿಸಿದರು?
ಅವರೇನೂ ತೆಪ್ಪಗೆ ಅದನ್ನು ಒಪ್ಪಿಕೊಳ್ಳಲಿಲ್ಲ. ತಮ್ಮಲ್ಲಿ ಜಾಗೃತವಾಗಿರುವ ಆಧುನಿಕ ಮಹಿಳಾಪ್ರಜ್ಞೆಗೆ ನೀವು ಅಪಚಾರ ಮಾಡುತ್ತಿದ್ದೀರಿ ಎಂದು ಗಾಂಧೀಜಿಯವರನ್ನು ನೇರವಾಗಿ ತರಾಟೆಗೆ ತೆಗೆದುಕೊಂಡರು. ಯಾವ ಚಳುವಳಿಯೂ ತಾವಿಲ್ಲದೆ ನಡೆಯಕೂಡದು ಎಂದು ಸ್ಪಷ್ಟವಾಗಿ ಹೇಳಿದರು. ದಾದಾಬಾಯಿ ನವರೋಜಿಯವರ ಮೊಮ್ಮಗಳು ಕುರ್ಷೆದ್ ಬೆನ್ ನವರೋಜಿ ಒಂದು ಸಿಟ್ಟಿನ ಪತ್ರವನ್ನು ಸಹ ಬರೆದು ಗಾಂಧಿಗೆ ರವಾನಿಸಿದರು. ‘ಸ್ತ್ರೀಧರ್ಮ’ ಎಂಬ ಪತ್ರಿಕೆಯಲ್ಲಿ ಮಾರ್ಗರೆಟ್ ಕಸಿನ್ಸ್ ಹೀಗೆ ‘ಹೊರಗಿರಿಸುವ’ ಹುನ್ನಾರವನ್ನು ಪ್ರತಿಭಟಿಸಿದರು. ಯಾವುದೇ ಸಮಾವೇಶ, ಸಮಿತಿ, ಸಂಚಲನೆಗಳು ಹೆಣ್ಣಿಲ್ಲದೆ ನಡೆಯಬಾರದೋ, ಹಾಗೆಯೇ ಯಾವುದೇ ಹೋರಾಟ, ಪ್ರತಿಭಟನೆಗಳು ಸಹ ಹೆಣ್ಣಿಲ್ಲದೆ ಅಪೂರ್ಣ ಎಂದು ಎಚ್ಚರಿಸಿದರು
ನಮ್ಮ ನಾಡಿನವರೇ ಆದ ಕಮಲಾಬಾಯಿ ಚಟ್ಟೋಪಾಧ್ಯಾಯರು ತಕ್ಷಣ ಸೂರತ್ ಪಟ್ಟಣಕ್ಕೆ ಧಾವಿಸಿ ಗಾಂಧೀಜಿಯವರನ್ನು ಭೇಟಿ ಮಾಡಿ ಹೆಣ್ಣು ಪಿಕೆಟಿಂಗ್, ಹರತಾಳ, ಇತ್ಯಾದಿಗಳಷ್ಟೇ ಅಲ್ಲ, ಆಕೆ ಬ್ರಿಟಿಷ್ ಸಾಮ್ರಾಜ್ಯಕ್ಕೆ ಸೆಡ್ಡು ಹೊಡೆದು ನಿಂತು ಉಪ್ಪು ತಯಾರಿಸುವ ಹೋರಾಟದಲ್ಲಿ ಸಹ ಭಾಗಿಯಾಗಲು ಅಷ್ಟೇ ಶಕ್ತಳು ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದಾಗ ಗಾಂಧೀಜಿ ಒಪ್ಪಿ, ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಲು ಇಚ್ಛೆ ಇರುವ ಪ್ರತಿಯೊಬ್ಬರಿಗೂ ಸ್ವಾಗತ ಎಂಬ ಹೇಳಿಕೆಯನ್ನು ಬರಹದಲ್ಲಿ ನೀಡಿದ್ದರು.
ಅಲ್ಲಿ ‘ಹೊರಗಿರಿಸುವ’ ವಿದ್ಯಮಾನದಲ್ಲಿ ಹೆಣ್ಣು ಗಂಡು ಎಂಬ ಅಂತರಪ್ರಜ್ಞೆ ಕೆಲಸ ಮಾಡಿತ್ತು. ನೂರಾರು ಮೈಲಿಗಳು ನಡೆಯಬೇಕಾದ ಈ ಸತ್ಯಾಗ್ರಹದಲ್ಲಿ ಮನೆಯನ್ನು ನಿಭಾಯಿಸುವ ಹೆಣ್ಣು ಪಾಲ್ಗೊಳ್ಳಬಲ್ಲಳೇ ಎಂಬ ಆತಂಕವಿದ್ದಿರಲು ಸಾಧ್ಯ. ಆದರೆ ಹಿಂದಿಯಲ್ಲಿ ಹಾಡಿದ ಮಾತ್ರಕ್ಕೆ ಸಮಗ್ರ ರಾಷ್ಟ್ರದ ‘ರತ್ನ’ ವಾಗಿಸುವ, ಆದರೆ ಎಷ್ಟೋ ಭಾಷೆಗಳಲ್ಲಿ ಹಾಡಿದ ಜಾನಕಿಯಮ್ಮರನ್ನು ದಕ್ಷಿಣಕ್ಕೆ ಮಾತ್ರ ಸೀಮಿತಗೊಳಿಸುವ ಪೂರ್ವಗ್ರಹದ ಹಿಂದೆ ಯಾವ ರೀತಿಯ ಸಮರ್ಥನೆ ಇರಲು ಸಾಧ್ಯ?

ನಿಮ್ಮ ಪದ್ಮ-ಗಿದ್ಮ ಬೇಡ. ಹಾಗೆಯೇ ಸತ್ತ ಮೇಲೆ ನೀವು ಕೊಡಬಹುದಾದ ಭಾರತರತ್ನವೂ ಬೇಡ ಎಂದು ಸ್ಪಷ್ಟಪಡಿಸಿದ್ದ ಜಾನಕಿಯಮ್ಮನವರ ಸತ್ಯಾಗ್ರಹಕ್ಕೆ ಒಂದು ಸಲಾಂ!
*****
ಬೌದ್ಧಿಕ ಋಣ
Aparna Basu. Women in Satyagraha. New Delhi: Government of India, Ministry of Information and Broadcasting. 2018.


