ಮಡಿಕೇರಿಯ ಆಕಾಶವಾಣಿಯಿಂದ ಕರೆ ಮಾಡಿ ‘ದೇವರು-ದೈವ’ ಇವುಗಳ ಬಗ್ಗೆ ನಿಮ್ಮ ಅನಿಸಿಕೆ ಹಂಚಿಕೊಳ್ಳಬೇಕು’ ಅಂದರು. ದೇವರ ಬಗ್ಗೆ ಏನು ಹೇಳುವುದು ಎಂದು ಒಂದು ಕ್ಷಣ ತಲೆ ಕೆಡಿಸಿಕೊಂಡೆ. ದೇವರಿಗೆ ತನ್ನನ್ನು ಕಂಡರೆ ಇಷ್ಟ ಎಂದು ಭಾವಿಸುವ ನನ್ನ ಹೆಂಡತಿಯನ್ನು ಕೇಳಿದೆ. ‘ಅದೇ ಹೇಳಿ, ಪುತಿನ ಹೇಳುತ್ತಿದ್ದುದು’ ಅಂದರು. ಪುತಿನ ಮಾತು, ಬೇಂದ್ರೆ ಮಾತು , ರಿಲ್ಕ್, ಪರಮಹಂಸರ ಮಾತುಗಳೆಲ್ಲ ನನಗೆ ಇಷ್ಟ. ಆದರೆ ದೇವರು ಹಳೆಯ ಮಾತಾಗಿರಲು ಸಾಧ್ಯವೇ?

ಈ ಕ್ಷಣ ನಮ್ಮನ್ನು ಆವರಿಸಿಕೊಳ್ಳುವುದಾದರೆ ಅದು ದೇವರು- ಅದನ್ನು ನಾನು ಹೇಗೆ ಆಗಿಸಿಕೊಳ್ಳಬೇಕು ಮತ್ತು ಹೇಳಬೇಕು? ದೇವರು ಏನು ಅನ್ನೋದು ದೇವರಿಗೆ ಗೊತ್ತು! ಎಂದುಕೊಂಡೆ. ಇದು ತಮಾಷೆಯಷ್ಟೆ ಅಲ್ಲ ದೇವರಿಗೇ ಸಲ್ಲುವ ಗೌರವ ಎನಿಸಿತು. ಯಾಕೆಂದರೆ ದೇವರಿಗೆ ಎಲ್ಲವೂ ಗೊತ್ತು, ಹಾಗಾಗಿ ಬೇರೆಯವರಿಗೆ ‘ಗೊತ್ತಿಲ್ಲ’ ದಿರುವುದು ಅವನಿಗಿಷ್ಟ. ಹಾಗಾಗಿ ಅವನು ಅಜ್ಞಾನಪ್ರಿಯ!

ಈಚೆಗೆ ನನಗೆ ಪ್ರಾಮಾಣಿಕವಾಗಿ ಯಾವಾಗ ದೇವರ ಬಗ್ಗೆ ಅನಿಸಿಕೆ ಬಂದಿತ್ತು ನೋಡಿಕೊಂಡೆ. ದೇವರು ಇದ್ದಾನೋ ಇಲ್ಲವೋ ಎಂಬುದು ಅಷ್ಟು ಮುಖ್ಯವಾದ ಪ್ರಶ್ನೆಯೇ ಎಂದು ಈಚೆಗೊಮ್ಮೆ ಅನಿಸಿತ್ತು. ಅವನು ಇದ್ದಾನೆ ಎಂದು ನಂಬುವುದರಿಂದ ಅಥವಾ ಇಲ್ಲ ಎಂದು ನಂಬುವುದರಿಂದ ನಾವು ನಮ್ಮ ಬದುಕನ್ನು ಏನು ಮಾಡಿಕೊಳ್ಳುತ್ತೀವಿ, ಅದಕ್ಕೆ ಯಾವ ಗುಣ ಕೊಟ್ಟುಕೊಳ್ಳುತ್ತೀವಿ ಅನ್ನುವುದು ಮುಖ್ಯ. ಕವಿತೆಯ ರೂಪಕದ ಹಾಗೆ ಅವನು! ‘ಮಿಂಚಿ ಮಾಯವಾಗುತ್ತಿತ್ತು ಒಂದು ಮಂದಹಾಸ’ ಎಂದರೆ ಅದನ್ನು ಎಲ್ಲಿ ಹೇಗೆ ತೋರಿಸುವುದು? ಬೇಕಿದ್ದರೆ ಮಂದಹಾಸವನ್ನು ತೋರಿಸಬಹುದು, ಆದರೆ ಅದು ಮಿಂಚಿ ಮಾಯವಾಗುವುದನ್ನು? ಅದು ಬೇಕೆಂದರೆ ಇರುತ್ತೆ, ಕಾಣಿಸುತ್ತೆ ಮತ್ತು ಮಾತನ್ನು ಕವಿತೆಯಾಗಿಸುತ್ತೆ, ಅಷ್ಟೆ. ಬೇಕೆಂದರೆ!

ಒಂದು ಚಿಟ್ಟೆ , ಹುಲ್ಲುಕಡ್ಡಿ, ಹುಳ, ಮಣ್ಣು ಬದುಕಿನ ಯಾವುದೇ ವಿವರಕ್ಕಾದರೂ ಇರುವ ರೂಪಕವಾಗುವ ಸಾಮರ್ಥ್ಯವೇ ಅವನು- ಇರಬೇಕು.

ಆದರೆ ದೇವರು ಇಂತಲ್ಲಿದ್ದಾನೆ ಎಂದು ನಾವು ಬೆಟ್ಟು ಮಾಡಿ ತೋರಿಸುವಲ್ಲಿ ಅವನು ಕುಗ್ಗಿ, ಕುಂದಿ, ಕಡಿಮೆಯಾಗಿ ನಾಪತ್ತೆಯಾಗಿ ಬಿಟ್ಟಿರುತ್ತಾನೆ. ಮತ್ತು ಅದರ ಸುತ್ತಲ್ಲೆಲ್ಲ ಉಬ್ಬಿಕೊಂಡು, ಹೆಚ್ಚಾಗಿ ತೋರಿಸಿಕೊಳ್ಳುತ್ತಾನೆ. ಅದು ಗಾಳಿಬುರುಡೆಯನ್ನು ಒಂದು ಬೆರಳಿಂದ ಒತ್ತಿದ ಹಾಗೆ. ಯಾಕೆ ಹೀಗೆ ಮಾಡುತ್ತಾನೆ ಎಂದರೆ ಆಟ, ಕಳ್ಳಾಟ ಅವನಿಗಿಷ್ಟವಿರಬೇಕು. ಅವನು ಲೀಲಾವಿನೋದಿ ಎನ್ನುವುದರಲ್ಲಿ ಸಂಶಯವಿಲ್ಲ. ಹಾಗಾಗಿ ನಮ್ಮೆಲ್ಲ ನಮ್ಮ ಪಾತ್ರವನ್ನು ಸರಿಯಾಗಿ ಮಾಡುತ್ತಿದ್ದರೆ, ಬದುಕನ್ನು ಒಂದು ಆಟ ಎಂದು ಆಡುತ್ತಿದ್ದರೆ ಅವನಿಗೆ ಪ್ರಿಯವಾಗುತ್ತೀವಿ, ಬಹುಷಃ.

ದೇವರು ಇದ್ದುಬಿಟ್ಟಿದ್ದಾನೆ ಎನ್ನುವುದಕ್ಕಿಂತ ವಿದ್ಯುತ್‌ನಂತೆ ನಾವು ಅವನನ್ನು ಪ್ರತಿ ಕ್ಷಣ ಉತ್ಪಾದಿಸಿಕೊಳ್ಳುವ ಅಗತ್ಯ ಇದೆ. ಅಥವಾ ಅವನು ನಮ್ಮ ಉಸಿರಿನ ಥರ ಸತತವಾಗಿ ಆಗಿಸಿಕೊಳ್ಳುತ್ತಿರಬೇಕು. ಕೊಠಡಿ ತುಂಬ ಗಾಳಿಯಿರಬಹುದು, ಆದರೆ ಪುಪ್ಪುಸ ಜೀವಂತವಿದ್ದು ಏರಿಳಿದರೆ ಮಾತ್ರ ಗಾಳಿ ನಮ್ಮ ಉಸಿರಾಗುತ್ತದೆ. ಗಾಳಿಯಿದ್ದು ಪುಪ್ಪುಸ ಸ್ತಬ್ಥವಾದರೂ ಕಷ್ಟ, ಪುಪ್ಪಸ ಜೀವಂತವಿದ್ದು ಗಾಳಿ ಬರಿದಾದರೂ ಕಷ್ಟ. ಹೀಗೆಲ್ಲ ಅನಿಸುತ್ತಿರುವಂತೆ ಒಂದು ಕವಿತೆ ಬಂತು:

ರೂಪಕ

ರೆಕ್ಕೆ ಬಡಿಯುತ ಚಿಟ್ಟೆ ಹೂದೋಟವಾಗಿದೆ
ಹುಲ್ಲುಕಡ್ಡಿ ತರಗೆಲೆಯೂ ಹಾರಿ
ನಕ್ಷತ್ರಗಳಾಗಿ ಆಕಾಶದ ಹಾದಿಯಲಿ
ನಿನ್ನ ಬಳಿ ಸಾರಲಿವೆ

ಅದೇ ಇರಬೇಕು ನೀನೆಂದರೆ
ಎಲ್ಲವೂ ಕರಗಿರುವ ಗಾಳಿಯನು ಉಸಿರಾಗಿಸಿಕೊಳುವ
ಪುಪ್ಪಸದ ಏರಿಳಿತವಿರಬೇಕು
ಕ್ಷಣ ಕ್ಷಣವು ನಿನ್ನನೂ ಉಸಿರಾಡಿಸಿಕೊಳುವ
****

ಪದ್ಯ ಚೆಂದವಿದೆ ಎಂದು ನನಗೇ ಖುಷಿ ಹತ್ತತೊಡಗಿತು. ಆ ಖುಷಿಯ ನಡುವೆಯೇ ನಾನು ಮೊನ್ನೆ ದೇವರನ್ನು ಕೊಂದಿದ್ದೊಂದು ನೆನಪಿಗೆ ಬಂತು. ಅಡುಗೆ ಮನೆಯೊಳಗೆ ಒಂದು ದೊಡ್ಡ ಜರಿ ಬಂದಾಗ ನನ್ನ ಮಗಳು ಕಿರುಚಿ ಕೂಗಿದ್ದಳು. ನಾನು ಓಡಿ ಹೋಗಿ ನೋಡಿದೆ, ಜರಿ ಚುರುಕಾಗಿ ಹರಿದು ಹೋಗುತ್ತಿತ್ತು. ಬಟ್ಟೆಯಲ್ಲಿ ಹಿಡಿಯಲು ಭಯವಾಗಿ ಆ ಬಟ್ಟೆಯಿಂದಲೇ ರಪ್ಪಂತ ಹೊಡೆದುಬಿಟ್ಟೆ. ಎರಡು ತುಂಡಾಗಿ ಒದ್ದಾಡಹತ್ತಿತು. ಹೊರಗೆ ಬಿಸಾಡಿ ಬಂದ ಮೇಲೆ ನನ್ನ ಮನಸ್ಸಿನ ಒಂದು ಕಣವೇ ಹಾನಿಗೊಂಡಂತೆ ನೋವಾಯ್ತು.

ಅದು ನೆನಪಿಗೆ ಬಂದು ಈಗ ಅನ್ನಿಸಿತು: ಆದರೂ ಆ ಜರಿ ಎಂದಿದ್ದರೂ ಸಾಯುತ್ತಿತ್ತು ಅಂತ. ಸಾವೇ ಇಲ್ಲದ್ದನ್ನು ನಾನು ಕೊಂದದ್ದಲ್ಲ ಎಂಬುದೊಂದು ಸಮಾಧಾನ! ಅದಕ್ಕೆ ನೀನು ಬಿಡುಗಡೆಯನ್ನೇ ಕೊಟ್ಟೆ ಬಿಡು, ಎಂದು ನನ್ನ ಮಗಳು ನಗಾಡತೊಡಗಿದಳು. ಆ ಅಲೆ ನನ್ನನ್ನೂ ಮುಟ್ಟಿ ತಟ್ಟಿ ತೇಲಿಸತೊಡಗಿತು. ನಾನು ಬಲ್ಲ ಅತ್ಯಂತ ಆಧ್ಯಾತ್ಮಿಕ ಅನುಭವವೆಂದರೆ ನಗೆಯೇ. ಆ ಒರತೆ ನಮ್ಮೊಳಗೆ ಬತ್ತದಂತೆ ಇರಿಸಿಕೊಳ್ಳುವುದೇ ದೇವರನ್ನು ರಕ್ಷಿಸಿಕೊಂಡಂತೆ. ದೇವರು ರೂಪಕ, ಕವಿತೆ ಎಂದೆಲ್ಲ ‘ಅಭಿವ್ಯಕ್ತಿ’ಗೂ ಮೊದಲು ಅಕಾರಣ ಖುಷಿಯಾಗಿದ್ದಾನೆ: ಹರ್ಷವೆಂದರೆ ಅದೇ.