ತನ್ನ ಪಯಣದಲ್ಲಿ ನೆಲದ, ಮಣ್ಣಿನ ಜೊತೆ, ತನ್ನ ಸುತ್ತಲೂ ಇದ್ದ ‘ಎಲ್ಲದರ’ ಜೊತೆ ತಾನು ಒಂದಾಗಿ ನಾನು ಎನ್ನುವುದನ್ನ ಮರೆತು ಪ್ರಕೃತಿಯ ಸೌಂದರ್ಯವನ್ನು ಎಲ್ಲಾ ರೂಪಗಳಲ್ಲೂ ನೋಡುತ್ತಾ ಲೀನವಾಗಿ, ಬೆರೆತುಹೋಗುವ ಕ್ಷಣಗಳು ಅವರನ್ನು ಇನ್ನಷ್ಟು ಮತ್ತಷ್ಟು ಬಹಳಷ್ಟು ಪ್ರಭಾವಿಸಿತು. ತನ್ನ ದೇಶದ ಮರುಭೂಮಿಯಲ್ಲಿ ಒಬ್ಬಂಟಿಯಾಗಿ ನಡೆಯಬೇಕು ಎಂಬ ಹುಚ್ಚು ಆಲೋಚನೆಯಿತ್ತು, ಅಷ್ಟೇ.ಹಾಗೆ ನಡೆಯುವಾಗ ಪ್ರತಿಕ್ಷಣವೂ ನಾನು ಎಂಬುದು ಜೀವಂತವಾಗಿರುವುದು, ನಡಿಗೆಯ ಜೊತೆ ಹಾಸುಹೊಕ್ಕಾಗಿದ್ದ ಭಯ, ಆತಂಕ, ಅಪಾಯ, ಉಲ್ಲಾಸ, ಮರುಭೂಮಿಯ ಸೌಂದರ್ಯ, ಅದರ ವಿಭಿನ್ನ ಪದರಗಳು, ಪ್ರಾಣಿಪಕ್ಷಿಗಳು ಎಲ್ಲವನ್ನೂ ಅನುಭವಿಸಿ ನಾನಿದ್ದೀನಿ ಎಂಬ ಸತ್ಯಕ್ಕೆ ಹತ್ತಿರವಾಗುವ ಅನುಭೂತಿ, ಎಲ್ಲವೂ ತನಗೆ ಬೇಕಿತ್ತು, ಅವೆಲ್ಲವೂ ಸಿಕ್ಕಿತು ಎಂದು ರಾಬಿನ್ ಹೇಳಿದ್ದಾರೆ.
ಡಾ. ವಿನತೆ ಶರ್ಮಾ ಬರೆಯುವ ಆಸ್ಟ್ರೇಲಿಯಾ ಅಂಕಣ.

 

ಹುಡುಗಿ ತನ್ನ ನಾಯಿ ಮತ್ತು ನಾಲ್ಕು ಒಂಟೆಗಳ ಜೊತೆ ನಡೆಯುತ್ತಾ ಆಸ್ಟ್ರೇಲಿಯಾ ಮಧ್ಯಭಾಗದಿಂದ ಪಶ್ಚಿಮ ಕಡಲ ಕಿನಾರೆಗೆ ಪಯಣಿಸಿದ ಕತೆಯ ಚಲನಚಿತ್ರವನ್ನು ನೋಡುತ್ತಿದ್ದೆ. ಇವಳಿಗ್ಯಾಕೆ ಅಂಥ ಯೋಚನೆ ಬಂತು ಅಂತನ್ನಿಸಿತು. ನಗು ಬಂತು. ಬೆಟ್ಟ, ಪರ್ವತಗಳನ್ನ ಹತ್ತಿದವರು ಬರೆದದ್ದನ್ನ, ಸಮುದ್ರ ಪಯಣಗಳ ಬಗ್ಗೆ ಬರೆದದ್ದನ್ನ ಮುತುವರ್ಜಿಯಿಂದ ಓದುವ ನನಗೆ ಈ ಪ್ರಶ್ನೆ ಯಾಕೆ ಬಂತು?! ಅದೂ ಅಲ್ಲದೆ ಆಸ್ಟ್ರೇಲಿಯಾದ ಪ್ರಸಿದ್ಧ ಪರ್ವತಾರೋಹಿ, ಸಾಹಸಿ ಜಾನ್ ಮ್ಯೂರ್ ಕತೆ ಚೆನ್ನಾಗಿ ಗೊತ್ತಿತ್ತು. ತನ್ನ ಸಾಮಾನು ಸರಂಜಾಮುಗಳನ್ನ ತಳ್ಳುಗಾಡಿಯಲ್ಲಿ ಇಟ್ಟುಕೊಂಡು ಅದನ್ನು ಎಳೆದುಕೊಂಡು ಯಾವುದೇ, ಯಾರದೇ ಸಹಾಯವಿಲ್ಲದೆ ಒಬ್ಬಂಟಿಯಾಗಿ ಆಸ್ಟ್ರೇಲಿಯಾದ ದಕ್ಷಿಣದಿಂದ ಉತ್ತರಕ್ಕೆ ಪಯಣಿಸಿದ್ದನ್ನ ಅವರ ಬಾಯಿಂದಲೇ ಕೇಳಿದ್ದೆ; ಡಿಸಂಬರ್ ೨೦೦೩ರ ಡಾಕ್ಯುಮೆಂಟರಿ ಬಿಡುಗಡೆಗೂ ಹೋಗಿದ್ದೆ. ಮಧ್ಯದಲ್ಲಿ ಈ ‘ಕ್ಯಾಮೆಲ್ ಲೇಡಿ’ ಪ್ರಸ್ತಾಪ ಬಂದಿದ್ದ ನೆನಪಿದ್ದರೂ ಅವಳ ಕತೆಗಳನ್ನ ಓದಲು ಮರೆತದ್ದಕ್ಕೆ ನನ್ನ ಬಗ್ಗೆ ನಾನೇ ಸ್ವಲ್ಪ ಸಿಡುಕುವಂತಾಯಿತು. ಒಂಟೆಗಳ ಜೊತೆಗಿನ ಒಂಟಿ ಪಯಣಿಗ ಹುಡುಗಿಯ ವಿವರಗಳನ್ನ ಅಂತರ್ಜಾಲದಲ್ಲಿ ಹುಡುಕಿದೆ. ರಾಬಿನ್ ಡೇವಿಡ್ಸನ್ ಹೆಸರಿನ ಹೊಸ ಲೋಕವೊಂದರ ಬಾಗಿಲು ತೆರೆಯಿತು.

ಮರುಭೂಮಿಯುದ್ದಕ್ಕೂ ಸಾವಿರಾರು ಕಿಲೊಮೀಟರ್ ದೂರ ಯಾಕೆ ನಡೆಯಬೇಕು ಎಂದು ಕೇಳಿದರೆ ಇಪ್ಪತೈದು ವರ್ಷದ ರಾಬಿನ್ ಡೇವಿಡ್ಸನ್ ಎಂಬ ಅನಾಮಿಕ ಹೆಂಗಸು ಯಾಕಾಗಬಾರದು ಎಂದಿದ್ದರಂತೆ. ಅದು ಇಸವಿ ೧೯೭೫. ರಾಬಿನ್ ಆಗ ತಾನೇ ಆಸ್ಟ್ರೇಲಿಯಾ ಹೃದಯಭಾಗವಾದ ಆಲಿಸ್ ಸ್ಪ್ರಿಂಗ್ ಪಟ್ಟಣಕ್ಕೆ ಬಂದಿದ್ದರು. ಅಲ್ಲಿದ್ದುಕೊಂಡು, ಹಣಸಂಪಾದನೆಯಿರುವ ಕೆಲಸಗಳನ್ನು ಮಾಡುತ್ತಾ ತನ್ನ ಮರುಭೂಮಿ ನಡಿಗೆಗೆ ಸಿದ್ಧವಾಗುವ ಯೋಜನೆ ಇತ್ತು. ತನ್ನ ಪಯಣಕ್ಕೆ ಸೂಕ್ತರೀತಿಯಲ್ಲಿ ತಯಾರಾಗಲು ಆಕೆಗೆ ಎರಡು ವರ್ಷಗಳು ಬೇಕಾದವು. ಸಿದ್ಧತೆ ಅಂದರೆ ನಡಿಗೆಯ ಒಂಭತ್ತು ತಿಂಗಳುಗಳ ಕಾಲ ತನ್ನ ಆಪ್ತ ಸಂಗಾತಿಗಳಾಗುವ ಒಂಟೆಗಳ ತತ್ವಜ್ಞಾನವನ್ನೂ, ಒಗಟುಗಳನ್ನ ರಾಬಿನ್ ಬಿಡಿಸಬೇಕಿತ್ತು. ಇಲ್ಲವೇ ಒಂಟೆಗಳಿಗೆ ತನ್ನ ಬಗ್ಗೆ ಆಳವಾದ ಅರಿವನ್ನ ಮೂಡಿಸಬೇಕಿತ್ತು!! ಎರಡು ವರ್ಷದ ನಂತರ ಮಾಧ್ಯಮದವರು, ಮರುಭೂಮಿಯ ನಾನಾರೀತಿಯ ಸವಾಲುಗಳನ್ನ, ಕಷ್ಟಗಳನ್ನ ಅನುಭವಿಸುತ್ತಾ ೨೭೦೦ ಕಿಲೊಮೀಟರ್ ನಡೆದದ್ದು ಯಾಕೆ ಎಂದು ಆ ಹೆಂಗಸನ್ನ ಕೇಳಿದರೆ ಮತ್ತದೇ ಉತ್ತರ ಬಂತು – ಯಾಕಾಗಬಾರದು!

ಹೊನ್ನಗೂದಲ, ಪೇಲವ ಬಿಳಿಚರ್ಮದ, ಆಳ ನೀಲಿಕಣ್ಣುಗಳ ಸುಂದರಿ ರಾಬಿನ್ ಹುಟ್ಟಿದ್ದು ರಾಣಿರಾಜ್ಯ Queensland ನಲ್ಲಿರುವ ಮೈಲ್ಸ್ ಪಟ್ಟಣದಲ್ಲಿ. ಅಪ್ಪಅಮ್ಮ ಹೈನುಗಾರಿಕೆಯನ್ನು ನೋಡಿಕೊಳ್ಳುತ್ತಾ ತಮ್ಮ ಇಬ್ಬರು ಹೆಣ್ಣುಮಕ್ಕಳನ್ನ ಬೆಳೆಸುತ್ತಿದ್ದರು. ಅಮ್ಮ ಬಲು ಚೈತನ್ಯಶಾಲಿ ಮತ್ತು ಸಂಗೀತಪ್ರಿಯೆ. ಹಾಸ್ಯಕಲೆ ಅವರಿಗೆ ರಕ್ತಗತವಾಗಿತ್ತು. ಆದರೆ ಯಾಕೋ ಏನೋ ಆ ವರ್ಷ ಬರದ ಪರಿಣಾಮ ತೀವ್ರವಾಗಿತ್ತು. ಹಠಾತ್ತಾಗಿ ಹೈನುಗಾರಿಕೆಯ ಬುಡ ಕಳಚಿಬಿದ್ದಿತು. ಕಂಡರಿಯದ ಹಣಕಾಸು ಸಮಸ್ಯೆಗಳು ತಲೆದೋರಿ ಕುಟುಂಬ ಕಂಗೆಟ್ಟಿತು. ತಮ್ಮ ವಿಶಾಲ ಮನೆ, ಅಂಗಳ, ಗ್ರಾಮೀಣ ಜೀವನ, ಮನಸಾರೆ ಅನುಭವಿಸುತ್ತಿದ್ದ ಹೊರಾಂಗಣ ಜೀವನ, ನೆಲ ಅವರಿಗೆ ಕೊಟ್ಟಿದ್ದ ಎಣೆಯಿಲ್ಲದ ನೆಮ್ಮದಿ – ಎಲ್ಲವನ್ನೂ ಬಿಟ್ಟು ಹೊಸ ಜೀವನವನ್ನು ಕಟ್ಟಿಕೊಳ್ಳಲು ಇಡೀ ಕುಟುಂಬ ಬ್ರಿಸ್ಬನ್ ನಗರಕ್ಕೆ ಬಂದಿತು. ರಾಬಿನ್ ಹನ್ನೆರಡನೇ ವರ್ಷಕ್ಕೆ ಕಾಲಿಟ್ಟಿದ್ದಳು. ನಲವತ್ತಾರು ನಡೆಯುತ್ತಿದ್ದ ತಾಯಿ ನೇಣು ಹಾಕಿಕೊಂಡು ಸತ್ತಳು. ಕುಟುಂಬಕ್ಕೆ ಮೌನವೆಂಬ ರೋಗ ಬಡಿಯಿತು. ರಾಬಿನ್ ಳನ್ನ ಅವಳ ಜಿಲಿಯನ್ ಅತ್ತೆ ಮನೆಗೆ ಕಳಿಸಿಬಿಟ್ಟರು. ಅಲ್ಲಿಂದ ಮುಂದೆ ಹುಡುಗಿ ವಸತಿಶಾಲೆಗೆ ಹೋದಳು. ಹೈಸ್ಕೂಲು, ಪಾರ್ಟ್ ಟೈಮ್ ಕೆಲಸಗಳು, ಸಿಡ್ನಿ ನಗರಕ್ಕೆ ಸ್ಥಳಾಂತರ, ಹೊಸ ಸ್ನೇಹಗಳು, ಬದಲಾದ ಜೀವನ ಶೈಲಿ. ಸಂಗೀತವನ್ನು ಅಭ್ಯಸಿಸಲು ಫೆಲೋಶಿಪ್ ಲಭಿಸಿದರೂ ಅದನ್ನು ಎಳೆತರುಣಿ ರಾಬಿನ್ ನಿರಾಕರಿಸುತ್ತಾಳೆ.

ರಾಬಿನ್ ವ್ಯಕ್ತಿತ್ವಕ್ಕೆ ಅದರದೇ ಆದ ಆಯಾಮಗಳಿದ್ದವು. ಅವುಗಳಿಗೆ ಸಾಮಾನ್ಯರು ತೋರಿಸಿದ ಗೂಡುಪೆಟ್ಟಿಗೆಗಳು ಒಪ್ಪುತ್ತಿರಲಿಲ್ಲ. ಅದೇ ಆಯಾಮಗಳೇ ರಾಬಿನ್ ಜೀವನವನ್ನ ರೂಪಿಸಿವೆ, ನಿರ್ದೇಶಿಸಿವೆ, ಕದಲದೆ ಅವರಲ್ಲೇ ನಿಂತುಬಿಟ್ಟಿವೆ. ಪಶ್ಚಿಮ ದೇಶಗಳಲ್ಲಿ ೧೯೭೦ರ ದಶಕ ಹಲವಾರು ಕಾರಣಗಳಿಂದ ಪ್ರಸಿದ್ಧಿ ಪಡೆದಿದೆ. ಆ ದಶಕದ ಯುವಜನಾಂಗವು ಸ್ವಾತಂತ್ರ್ಯ, ಸ್ವೇಚ್ಛೆ, ಅನುಭವಗಳು, ಅನಿರ್ದಿಷ್ಟ ನಡೆಗಳು ಹಿಡಿದ ಭಿನ್ನ ಮಾರ್ಗಗಳನ್ನು ಪೂರ್ತಿಯಾಗಿ ಅನುಭವಿಸಿತು ಎನ್ನುವುದನ್ನು ಅನೇಕ ಪ್ರಸಿದ್ಧರು ಹೇಳಿಕೊಂಡಿದ್ದಾರೆ. ಹೆಸರುವಾಸಿಯಾದ ಹಿಪ್ಪಿ ಸಂಸ್ಕೃತಿಯನ್ನು ಆ ಕಾಲ ಜನರಿಗೆ ಕೊಟ್ಟಿತ್ತು. ಕೆಲವರು ಕೆಟ್ಟು ಅಳಿದರು. ಹಲವರು ಕೆಟ್ಟರೂ ಉಳಿದರು.

ಆ ಕಾಲಘಟ್ಟದ ಪ್ರಭಾವ ತಮ್ಮ ಮೇಲೂ ಆಗಿತ್ತು ಎಂದು ರಾಬಿನ್ ಹೇಳಿಕೊಂಡಿದ್ದಾರೆ. ಸ್ವಭಾವಸಿದ್ಧ ಸ್ವಾತಂತ್ರ್ಯ, ಸ್ವತಂತ್ರ ಮನಃಸ್ಥಿತಿಯನ್ನು ಉಸಿರಾಡುತ್ತಿದ್ದ ರಾಬಿನ್ ವ್ಯಕ್ತಿತ್ವಕ್ಕೆ ನಿರ್ದಿಷ್ಟ ಧ್ಯೇಯಗಳಿಗಿಂತಲೂ ಜೀವನದ ಭಿನ್ನತೆಗಳು ಕೊಡುವ ಅನುಭವ, ಅನುಭೂತಿಗಳು ಮುಖ್ಯವಾಗಿದ್ದವು. ಆಕೆಯಲ್ಲಿದ್ದ ಯೌವನದ ತುಡಿತಕ್ಕೆ ಏನಾದರೂ ಎಂತಾದರೂ ಮಾಡಬೇಕು, ತನ್ನನ್ನೇ ಸವಾಲಾಗಿಸಿಕೊಂಡು ಎಲ್ಲವನ್ನೂ ತೊಡೆದುಕೊಂಡು ಎಲ್ಲಿಗೋ ಹೊರಟುಬಿಡಬೇಕು ಎಂದೆನಿಸಿತ್ತು! ಸರಿ, ಮೊಟ್ಟಮೊದಲ ಪಯಣ ಮರುಭೂಮಿಯುದ್ದಕ್ಕೂ ನಡೆಯುತ್ತಾ ಹೋಗುವುದು.

ತನ್ನ ಪಯಣಕ್ಕೆ ಸೂಕ್ತರೀತಿಯಲ್ಲಿ ತಯಾರಾಗಲು ಆಕೆಗೆ ಎರಡು ವರ್ಷಗಳು ಬೇಕಾದವು. ಸಿದ್ಧತೆ ಅಂದರೆ ನಡಿಗೆಯ ಒಂಭತ್ತು ತಿಂಗಳುಗಳ ಕಾಲ ತನ್ನ ಆಪ್ತ ಸಂಗಾತಿಗಳಾಗುವ ಒಂಟೆಗಳ ತತ್ವಜ್ಞಾನವನ್ನೂ, ಒಗಟುಗಳನ್ನ ರಾಬಿನ್ ಬಿಡಿಸಬೇಕಿತ್ತು. ಇಲ್ಲವೇ ಒಂಟೆಗಳಿಗೆ ತನ್ನ ಬಗ್ಗೆ ಆಳವಾದ ಅರಿವನ್ನ ಮೂಡಿಸಬೇಕಿತ್ತು!!

ಆಲಿಸ್ ಸ್ಪ್ರಿಂಗ್ ನಲ್ಲಿ ತನ್ನ ಪಯಣಕ್ಕೆ ತಯಾರಾಗುತ್ತಾ ರಾಬಿನ್ ನ್ಯಾಷನಲ್ ಜಿಯಗ್ರಾಫಿಕ್ ಪತ್ರಿಕೆಗೆ ಬರೆದು ತನಗೆ ಸಹಾಯ ಮಾಡುವಂತೆ ಕೇಳಿಕೊಂಡಿದ್ದರು. ಪತ್ರಿಕೆ ಸಹಾಯ ಮಾಡಿದ್ದೂ ಅಲ್ಲದೆ ತಮ್ಮದೇ ಆದ ಫೋಟೋಗ್ರಾಫರ್ ನನ್ನೂ ಕಳಿಸಿತು. ಇಪ್ಪತ್ತೆಂಟು ವರ್ಷದ ಅಮೆರಿಕನ್ ಯುವಕ ರಿಕ್ ಸ್ಮೋಲನ್ ಆಸ್ಟ್ರೇಲಿಯಾ ಔಟ್ ಬ್ಯಾಕ್ ಗೆ ಬಂದು, ಆ ಯುವತಿಯನ್ನ ಸಂಧಿಸಿ ಅವಳ ಜೊತೆ ಕೆಲಸ ಮಾಡಬೇಕಿತ್ತು. ಕನಿಷ್ಠ ಮೂರರಿಂದ ಐದು ಬಾರಿ ಮರುಭೂಮಿಯಲ್ಲಿ ತನ್ನ ಪ್ರೀತಿಯ ನಾಯಿ ಡಿಗಿಟಿ ಮತ್ತು ನಾಲ್ಕು ಒಂಟೆಗಳ ಜೊತೆ ರಾಬಿನ್ ನಡೆಯುತ್ತಿದ್ದಾಗ ಅಲ್ಲಿಗೆ ಹೋಗಿ ಛಾಯಾಚಿತ್ರಗಳನ್ನ ತೆಗೆಯಬೇಕಿತ್ತು. ಮೊದಲಲ್ಲಿ ಇಬ್ಬರೂ ಜಗಳವಾಡಿ, ಕೋಪಿಸಿಕೊಂಡು ಬೈದಾಡಿದರೂ ಕ್ರಮೇಣ ಇಬ್ಬರೂ ಒಬ್ಬರಿಗೊಬ್ಬರು ಅರ್ಥವಾಗುತ್ತಾ ಹೋಗುತ್ತಾರೆ. ರಾಬಿನ್ ಆರೋಗ್ಯದ ಬಗ್ಗೆ, ಕ್ಷೇಮ/ಸುರಕ್ಷತೆಯ ಬಗ್ಗೆ ರಿಕ್ ಚಿಂತಿತರಾಗುತ್ತಾರೆ. ರಾಬಿನ್ ನಡೆಯುತ್ತಿದ್ದ ಮಾರ್ಗದ ಕೆಲ ನಿಗದಿತ ಸ್ಥಳಗಳಲ್ಲಿ ಪೂರ್ವಯೋಜನೆಯಂತೆ ಆಕೆಗೆ ನೀರನ್ನೊದಗಿಸುತ್ತಾರೆ. ರಿಕ್ ಜೊತೆ ರಾಬಿನ್ ‘ಈ ಕ್ಷಣದಲ್ಲಿ ಇರುವ’ ಜೀವನ-ಧ್ಯಾನಸ್ಥ ಮನೋಭಾವವನ್ನು ಹಂಚಿಕೊಳ್ಳುತ್ತಾರೆ. ಇದು ಹೀಗೇ ಎಂದು ತೀರ್ಮಾನಕ್ಕೆ ಬಂದು ನಿರ್ಧಾರ ಮಾಡುವ ಸ್ವಭಾವಕ್ಕೆ ವಿರುದ್ಧವಾದ ಜೀವನ್ಮುಖಿ ಮನೋಭಾವವನ್ನು ಹೊಂದಿದ್ದ ರಾಬಿನ್ ಅನೇಕ ಬಾರಿ ‘ರಿಕ್, ನೀನು ಈ ಕ್ಷಣದಲ್ಲಿದ್ದೀಯ, ಇಲ್ಲಿದ್ದೀಯ ಅಥವಾ ಅದೆಲ್ಲೋ ಕಳೆದು ಹೋಗಿದ್ದಿಯೋ, ಏನು?’ ಎಂದು ಕೇಳುತ್ತಾರೆ. ‘ನಿನ್ನ ಕೆಲಸದ ಬಗ್ಗೆ ಅಥವಾ ನನ್ನನ್ನು ಒಂದು ವಸ್ತುವನ್ನಾಗಿ ನೋಡುವ ಯೋಚನೆ ಬಿಟ್ಟು ‘ಇಲ್ಲಿ’ ಜೀವಿಸು,’ ಎಂದು ಎಚ್ಚರಿಸುತ್ತಾರೆ.

ತನ್ನ ಪಯಣದಲ್ಲಿ ನೆಲದ, ಮಣ್ಣಿನ ಜೊತೆ, ತನ್ನ ಸುತ್ತಲೂ ಇದ್ದ ‘ಎಲ್ಲದರ’ ಜೊತೆ ತಾನು ಒಂದಾಗಿ ನಾನು ಎನ್ನುವುದನ್ನ ಮರೆತು ಪ್ರಕೃತಿಯ ಸೌಂದರ್ಯವನ್ನು ಎಲ್ಲಾ ರೂಪಗಳಲ್ಲೂ ನೋಡುತ್ತಾ ಲೀನವಾಗಿ, ಬೆರೆತುಹೋಗುವ ಕ್ಷಣಗಳು ಅವರನ್ನು ಇನ್ನಷ್ಟು ಮತ್ತಷ್ಟು ಬಹಳಷ್ಟು ಪ್ರಭಾವಿಸಿತು. ತನ್ನ ದೇಶದ ಮರುಭೂಮಿಯಲ್ಲಿ ಒಬ್ಬಂಟಿಯಾಗಿ ನಡೆಯಬೇಕು ಎಂಬ ಹುಚ್ಚು ಆಲೋಚನೆಯಿತ್ತು, ಅಷ್ಟೇ. ಹಾಗೆ ನಡೆಯುವಾಗ ಪ್ರತಿಕ್ಷಣವೂ ನಾನು ಎಂಬುದು ಜೀವಂತವಾಗಿರುವುದು, ನಡಿಗೆಯ ಜೊತೆ ಹಾಸುಹೊಕ್ಕಾಗಿದ್ದ ಭಯ, ಆತಂಕ, ಅಪಾಯ, ಉಲ್ಲಾಸ, ಮರುಭೂಮಿಯ ಸೌಂದರ್ಯ, ಅದರ ವಿಭಿನ್ನ ಪದರಗಳು, ಪ್ರಾಣಿಪಕ್ಷಿಗಳು ಎಲ್ಲವನ್ನೂ ಅನುಭವಿಸಿ ನಾನಿದ್ದೀನಿ ಎಂಬ ಸತ್ಯಕ್ಕೆ ಹತ್ತಿರವಾಗುವ ಅನುಭೂತಿ, ಎಲ್ಲವೂ ತನಗೆ ಬೇಕಿತ್ತು, ಅವೆಲ್ಲವೂ ಸಿಕ್ಕಿತು ಎಂದು ರಾಬಿನ್ ಹೇಳಿದ್ದಾರೆ.

ಮತ್ತೊಂದು ಪ್ರಭಾವವೆಂದರೆ ಅಬರಿಜಿನಲ್ ವ್ಯಕ್ತಿ ಮಿಸ್ಟರ್ ಎಡ್ಡಿಯ ಸಾಂಗತ್ಯ. ರಾಬಿನ್ ನಡೆಯುತ್ತಾ ಹೋದಂತೆ ಅಬರಿಜಿನಲ್ ಪವಿತ್ರ ಭೂಮಿ Ngaanyatjarra ಪ್ರದೇಶವನ್ನು ತಲುಪುತ್ತಾರೆ. ಅಲ್ಲಿ ಅವರನ್ನು ಭೇಟಿಯಾದ ಹಿರಿಯರು ತಮ್ಮ ಪವಿತ್ರ ಭೂಮಿಯನ್ನು ಹೊಕ್ಕಲು ರಾಬಿನ್ ಗೆ ಅನುಮತಿಯನ್ನು ಕೊಟ್ಟು, ಅವರಿಗೆ ದಾರಿ ತೋರಿಸಲು ಮಿಸ್ಟರ್ ಎಡ್ಡಿಯನ್ನು ಜೊತೆಮಾಡಿ ಕಳಿಸುತ್ತಾರೆ. ಹಿರಿಯ ಎಡ್ಡಿ ಅವರೊಂದಿಗೆ ಒಂದು ತಿಂಗಳು ಇದ್ದದ್ದು, ನಡೆದದ್ದು ಇಡೀ ಪಯಣಕ್ಕೆ ಹೊಸ ಅರ್ಥವನ್ನೂ, ಬೇರೆಯದೇ ಆಯಾಮವನ್ನೂ ಕಟ್ಟಿಕೊಟ್ಟಿತು. ಅಬರಿಜಿನಲ್ ಹಿರಿಯ ಎಡ್ಡಿ ತಮ್ಮ ನೆಲಸಂಸ್ಕೃತಿ, ಆಸ್ಟ್ರೇಲಿಯಾದ ಒಳಭೂಮಿಯಲ್ಲಿ ಅನೇಕ ಸಾವಿರಾರು ವರ್ಷಗಳು ಬದುಕಿಬಾಳುತ್ತಿರುವ ಬಗೆಗಳನ್ನು ಹೇಳಿಕೊಟ್ಟು ತೋರಿಸುತ್ತಾರೆ. ಅವು ರಾಬಿನ್ ಗೆ ಮತ್ತಷ್ಟು ಮುಖ್ಯ ಜೀವನಪಾಠಗಳಾಗುತ್ತವೆ.

ರಾಬಿನ್ ನಾಲ್ಕು ಒಂಟೆಗಳ ಸಂಗಡ ಒಂಭತ್ತು ತಿಂಗಳು ಕೈಗೊಂಡ ಮರುಭೂಮಿ ನಡಿಗೆಯನ್ನು ಪಶ್ಚಿಮ ತೀರದ ಇಂಡಿಯನ್ ಓಷಿಯನ್ ತೀರವನ್ನು ತಲುಪಿ ಮುಗಿಸುತ್ತಾರೆ. ಕಾದಿದ್ದ ಮಾಧ್ಯಮದವರು ರಾಬಿನ್ ರನ್ನು ಪ್ರಸಿದ್ಧರನ್ನಾಗಿಸುತ್ತಾರೆ. ಇಂಗ್ಲಿಷ್ ಭಾಷಾ ದೇಶಗಳಲ್ಲಿ ಅವರ ಹೆಸರು ಮತ್ತು ಛಾಯಾಚಿತ್ರಗಳು ಮನೆಮಾತಾಗುತ್ತವೆ. ನಿರೀಕ್ಷೆಯಿಲ್ಲದಿದ್ದರೂ ಕೀರ್ತಿ ಅವರನ್ನು ಆವರಿಸುತ್ತದೆ. ಏರುಜವ್ವನೆ, ರೂಪವಂತೆ ‘ಕ್ಯಾಮೆಲ್ ಲೇಡಿ’ ರಾಬಿನ್ ರ ಜೀವನ ಬದಲಾಗುತ್ತದೆ.

ಪಯಣದ ನಂತರ, ಮುಂಚಿನ ಒಪ್ಪಂದದಂತೆ ರಿಕ್ ಜೊತೆ ರಾಬಿನ್ ಸೇರಿ ನ್ಯಾಷನಲ್ ಜಿಯಾಗ್ರಫಿಕ್ ಪತ್ರಿಕೆಗೆ ಲೇಖನವನ್ನ ಬರೆದರು. ತಮ್ಮ ಅನುಭವಗಳ ಬಗ್ಗೆ ಪುಸ್ತಕವನ್ನು ಬರೆಯುವಂತೆ ಅವರನ್ನು ಅನೇಕರು ಉತ್ತೇಜಿಸಿದರು. ಎಲ್ಲ ದಿಕ್ಕಿನಿಂದಲೂ ಸಹಾಯಹಸ್ತ ಚಾಚಿಕೊಂಡು ಬಂತು. ಲಂಡನ್ನಿಗೆ ಹೋಗಿ ಪ್ರಖ್ಯಾತ ಲೇಖಕಿ ಡೋರಿಸ್ ಲೆಸ್ಸಿಂಗ್ ಮನೆಯಲ್ಲಿ ವಾಸಿಸಿ Tracks ಹೆಸರಿನ ಪುಸ್ತಕವನ್ನು ಬರೆದರು.

ಪಶ್ಚಿಮಪ್ರಪಂಚದ ಅರ್ಥಹೀನತೆಯಲ್ಲಿ ಆತ್ಮ ಕಳೆದುಕೊಂಡ ಆದರೆ ಯಾವುದಕ್ಕೋ ಕಾಯುತ್ತಾ ಹಸಿದಿದ್ದ ಜನಾಂಗಕ್ಕೆ, ಸಾಮಾನ್ಯ ಜನರಿಗೆ, ಬುದ್ಧಿಜೀವಿಗಳಿಗೆ, ಸಮಾಜದಲ್ಲಿ ಅಧಿಕಾರ, ಅಂತಸ್ತು, ಹಣವಿದ್ದ ಹೈಸೊಸೈಟಿ ಜನರಿಗೆ, ಎಲ್ಲರಿಗೂ ರಾಬಿನ್ ‘ಪ್ರಾಮಾಣಿಕ’ ಅನುಭವ ಬೇಕಾಗುತ್ತದೆ. Tracks ಪುಸ್ತಕದ ಗುಟ್ಟು ಅಲ್ಲೇ ಇರುವುದು. ಮರುಭೂಮಿಯ ಸಹಜತೆಯಲ್ಲಿ ತನ್ನ ಸಹಜತೆಯನ್ನು ಮೇಳೈಸಿ ಒಗ್ಗೂಡಿಸಿ ರಾಬಿನ್ ತನ್ನ ನಿಯಮಗಳು, ಒಪ್ಪಂದಗಳು, ತನಗಿಷ್ಟವಾದ ಎಲ್ಲೆಗಳ ಪ್ರಕಾರ ತನ್ನನ್ನು ಸೃಷ್ಟಿಸಿಕೊಂಡರು. ಯಾರೊಬ್ಬರ ಪಕ್ಕವೋ ತನ್ನನ್ನು ಇರಿಸಿಕೊಂಡು ಸಮೀಕರಿಸಿಯೋ ಅಥವಾ ತಿರಸ್ಕರಿಸಿಯೋ ತನ್ನನ್ನು ತಾನು ನೋಡಲಿಲ್ಲ. ಪಾಶ್ಚಿಮಾತ್ಯ ಸಮಾಜ ಅದನ್ನು ಸಂಭ್ರಮಿಸಿಬಿಟ್ಟಿತು. ಅವತ್ತಿನಿಂದ ಇವತ್ತಿನವರೆಗೂ, ಅಂದರೆ ೧೯೮೦ರಿಂದ ಇಂದಿನ ೨೦೧೮ ರವರೆಗೂ ಈ ಪುಸ್ತಕ ಇನ್ನೂ ಮರುಮುದ್ರಣಗಳನ್ನು ಕಾಣುತ್ತಿದೆ, ಮಾರಾಟವಾಗುತ್ತಿದೆ, ಮತ್ತಷ್ಟು ಹೆಸರುಗಳಿಸುತ್ತಿದೆ. ಪುಸ್ತಕ ರೂಪವನ್ನು ೨೦೧೩ರಲ್ಲಿ ಚಲನಚಿತ್ರವಾಗಿಸಿದ್ದಾರೆ.

ಅಬರಿಜಿನಲ್ ಹಿರಿಯ ಎಡ್ಡಿ ತಮ್ಮ ನೆಲಸಂಸ್ಕೃತಿ, ಆಸ್ಟ್ರೇಲಿಯಾದ ಒಳಭೂಮಿಯಲ್ಲಿ ಅನೇಕ ಸಾವಿರಾರು ವರ್ಷಗಳು ಬದುಕಿಬಾಳುತ್ತಿರುವ ಬಗೆಗಳನ್ನು ಹೇಳಿಕೊಟ್ಟು ತೋರಿಸುತ್ತಾರೆ. ಅವು ರಾಬಿನ್ ಗೆ ಮತ್ತಷ್ಟು ಮುಖ್ಯ ಜೀವನಪಾಠಗಳಾಗುತ್ತವೆ.

Tracks ಬರೆದಾದ ನಂತರ ರಾಬಿನ್ ಆಸ್ಟ್ರೇಲಿಯಾಗೆ ಹಿಂದಿರುಗಿದರು. ೧೯೮೦ ದಶಕದ ಆದಿಯಲ್ಲೇ ತನ್ನ ಗೆಳೆಯರೊಬ್ಬರ ಜೊತೆ ದೇಶ ಸುತ್ತಲು ಬಂದ ವಿಶ್ವವಿಖ್ಯಾತ ಲೇಖಕ ಸಾಲ್ಮನ್ ರಶ್ದಿಯ ಪರಿಚಯವಾಗುತ್ತದೆ. ರಶ್ದಿ-ರಾಬಿನ್ ಪ್ರೇಮಿಗಳಾಗಿ ಕೆಲವರ್ಷಗಳು ಸಂಬಂಧದಲ್ಲಿರುತ್ತಾರೆ. ಸಂಬಂಧ ಮುರಿದ ಹೊಸತರಲ್ಲಿ ಲಂಡನ್ ನಗರದ ಪಾರ್ಟಿಯಲ್ಲಿ ರಾಜಾಸ್ಥಾನದ ಶ್ರೀಮಂತ ನರೇಂದ್ರ ಸಿಂಗ್ ಭಾಟಿಯ ಭೇಟಿಯಾಗುತ್ತದೆ. ರಾಬಿನ್ Tracks ಪುಸ್ತಕ ಬರೆಯಲೆಂದು ಲಂಡನ್ ನಗರಕ್ಕೆ ಹೋಗುವ ಮಾರ್ಗಮಧ್ಯೆ ಭಾರತಕ್ಕೆ ಬಂದಿರುತ್ತಾರೆ. ಕೆಲದಿನಗಳು ಭಾರತವನ್ನು ಸುತ್ತುವ ಸಂದರ್ಭದಲ್ಲಿ ರಾಜಾಸ್ಥಾನದ ಪುಷ್ಕರ್ ಒಂಟೆ ಮೇಳಕ್ಕೆ ಹೋಗುತ್ತಾರೆ. ಒಂಟೆ ಅಲೆಮಾರಿ ರಬಾರಿ ಜನಾಂಗದ ಬಗ್ಗೆ ತೀವ್ರ ಕುತೂಹಲವುಂಟಾಗಿ ರಬಾರಿಗಳೊಡನೆ ವಾಸ ಮಾಡಿ ಅವರ ಜೀವನವನ್ನು ಅಭ್ಯಸಿಸಬೇಕೆಂದು ಆಶಿಸುತ್ತಾರೆ. ಅದೇಕೋ ಆಗ ಅದು ಸಾಧ್ಯವಾಗುವುದಿಲ್ಲ. ನರೇಂದ್ರ ಅದನ್ನು ಜ್ಞಾಪಿಸಿಕೊಂಡು ರಾಬಿನ್ ರಾಜಾಸ್ಥಾನಕ್ಕೆ ಬಂದು ಮತ್ತೊಮ್ಮೆ ಪ್ರಯತ್ನಿಸಬಹುದೆಂದು ಸೂಚಿಸುತ್ತಾರೆ. ರಾಬಿನ್ ಕಾರ್ಯಪ್ರವೃತ್ತರಾಗಿ, ಭಾರತದ ರಾಜಾಸ್ಥಾನಕ್ಕೆ ಬಂದು ಒಂಟೆ ಅಲೆಮಾರಿ ರಬಾರಿ ಜನಾಂಗದೊಡನೆ ಇದ್ದುಕೊಂಡು ಅವರ ಜೀವನವನ್ನು ಅರಿಯುತ್ತಾರೆ. ಅಲ್ಲಿಂದ ಮುಂದೆ ಹಿಮಾಲಯದ ಮತ್ತು ಟಿಬೆಟ್ ಅಲೆಮಾರಿ ಜನಾಂಗಗಳ ಬಗ್ಗೆಯೂ ಅಭ್ಯಸಿಸುತ್ತಾರೆ. “ನೋ ಫಿಕ್ಸೆಡ್ ಅಡ್ರೆಸ್” (೨೦೦೬) ಎಂಬ ಪುಸ್ತಕವನ್ನ ಬರೆದು ಅವರ ಓದುಗರನ್ನು ಮತ್ತಷ್ಟು ಹುಚ್ಚೆಬ್ಬಿಸುತ್ತಾರೆ. ಸಲ್ಮಾನ್ ರಶ್ದಿಯ ಪ್ರೇಮಸಾಂಗತ್ಯವನ್ನು ತೊಡೆದುಕೊಂಡ ನಂತರ ನರೇಂದ್ರ ಅವರ ಪ್ರಿಯಕರನಾಗಿದ್ದು, ೨೦೧೧ರಲ್ಲಿ ನರೇಂದ್ರ ಸಾಯುವವರೆಗೂ ಅವರೊಡನೆ ದೀರ್ಘಕಾಲದ ಸಂಬಂಧವನ್ನು ಇರಿಸಿಕೊಂಡು ನೆಮ್ಮದಿ ಕಾಣುತ್ತಾರೆ. ತಮ್ಮ ಬದುಕಿನ ಬಣ್ಣಗಳನ್ನು ಆಸ್ಟ್ರೇಲಿಯಾ, ಇಂಗ್ಲೆಂಡ್, ಭಾರತ ಎಂಬ ತ್ರಿಕೋನದೊಳಗೆ ಹರಡಿದ್ದಾರೆ. ಮೂರು ದೇಶಗಳಲ್ಲೂ ಮನೆ ಮಾಡಿ, ಅಡ್ರೆಸ್ ಇಟ್ಟುಕೊಂಡೇ ಬದುಕಿ ಬಾಳುತ್ತಿದ್ದಾರೆ. ಅವರ ಜೀವಾನುಭವಗಳು ಪುಸ್ತಕಗಳಾಗಿ, ಲೇಖನಗಳಾಗಿ, ಕಥೆಗಳಾಗಿ, ಪ್ರಬಂಧಗಳಾಗಿ, ಭಾಷಣಗಳಾಗಿ ಹೊರಹೊಮ್ಮಿವೆ.

ಹಾಗೆ ನೋಡಿದರೆ ರಾಬಿನ್ ‘ಎಲ್ಲವನ್ನೂ ಬಿಟ್ಟು’ ವಿರಾಗಿಯಂತೆ ಎಂದೂ ಬದುಕಲಿಲ್ಲ. ಈಗಲೂ, ಅರವತ್ತೆಂಟು ವಯಸ್ಸಿನಲ್ಲೂ, ವಿಕ್ಟೋರಿಯಾ ರಾಜ್ಯದಲ್ಲಿ ವಾಸಿಸುತ್ತಾ ಪುಟಿದೇಳುವ ಜೀವನೋತ್ಸಾಹವನ್ನು ಅನುಭವಿಸುತ್ತಿದ್ದಾರೆ. ತಾಯಿ ಸತ್ತಬಳಿಕ ದಶಕಗಳ ಕಾಲ ತನ್ನ ಜೀವನಪ್ರವಾಹದಲ್ಲಿ ತನ್ನ ರೀತಿರಿವಾಜುಗಳ ಪ್ರಕಾರ ಬದುಕುತ್ತಾ ಬದುಕೆಂಬ ಕಡಲಲ್ಲಿ ತೇಲಿ ಮುಳುಗಿ ಈಜಿ ಸುಖಪಟ್ಟು ಬದುಕನ್ನ ತೀವ್ರವಾಗಿ ಅನುಭವಿಸಿದ ರಾಬಿನ್ ತನ್ನ ತಾಯಿಯ ಬಗ್ಗೆ ಮಾತನಾಡೇ ಇರಲಿಲ್ಲ. ಆದರೆ ತನಗೂ ನಲವತ್ತಾದ ಮೇಲೆ ಆವರಿಸಿದ ಮನೋಖಿನ್ನತೆಯ ವರ್ಷಗಳಲ್ಲಿ ಅವರಮ್ಮ ಅವರಲ್ಲೇ ಉದ್ಭವವಾದಂತೆ ಅವರಿಗೆ ಆಗುತ್ತದೆ. ಅದೇ ನಲವತ್ತರಲ್ಲಿ ಅಮ್ಮ ಸತ್ತಳು; ತಾನು ಏನು ಮಾಡಬೇಕು, ತನ್ನ ಮುನ್ನೆಡೆವ ಹೆಜ್ಜೆ ಎಲ್ಲಿದೆ, ದಾರಿ ಯಾವುದು ಎನ್ನುವುದನ್ನ ಅವರೇ ಕಂಡುಕೊಳ್ಳಬೇಕಿತ್ತು. ಅವರು ಮುಂದೆ ಸಾಗಿದರು ಕೂಡ. ಆದರೆ ಅವರ ತಾಯಿ ಜೀವ ತೆಗೆದುಕೊಳ್ಳಲು ಬರದಿಂದ ಅವರ ಕುಟುಂಬಕ್ಕಾದ ಆಘಾತ ಕೂಡ ಕಾರಣವಾಗಿತ್ತು. ಬದಲಾದ ಕಾಲಘಟ್ಟದಲ್ಲಿ, ರಾಬಿನ್ ತಾನು ಅಂತಾರಾಷ್ಟ್ರೀಯ ಖ್ಯಾತಿ ಹೊಂದಿ, ಶ್ರೀಮಂತರಾಗಿ, ಪ್ರಪಂಚವನ್ನೆಲ್ಲಾ ಸುತ್ತಾಡುತ್ತಾ ಯಾರೊಡನೆಯೂ, ಯಾವುದರ ಜೊತೆಯೂ ರಾಜಿಮಾಡಿಕೊಳ್ಳದೇ ತನ್ನ ನಿಯಮಗಳ ಪ್ರಕಾರವೇ ಬದುಕುವುದು ಅವರ ಅದೃಷ್ಟವೇ ಸರಿ!!

ಮರುಭೂಮಿಯಲ್ಲಿ ಪಯಣಿಸಿದಾಗಲೂ ಒಂಟೆಗಳ ಮೇಲೆ ಹೇರಿದ್ದ ಮೂಟೆಗಳಲ್ಲಿ ಆಹಾರ, ನೀರು ಮತ್ತಿತರ ಅಗತ್ಯ ಸಾಮಾನುಗಳನ್ನು ಅವರು ಒಯ್ದಿದ್ದರು. ಸಿದ್ಧಪಡಿಸಿದ ಟಿನ್ ಆಹಾರವನ್ನು ತಿನ್ನುತ್ತಿದ್ದರು. ಜನಸಂಪರ್ಕವನ್ನು ಇಟ್ಟುಕೊಂಡಿದ್ದರು. ಒಮ್ಮೆಯಂತೂ ಒಬ್ಬ ರೈತಕುಟುಂಬದ ಜೊತೆ ಒಂದು ವಾರ ಇದ್ದುಕೊಂಡು ವಿಶ್ರಾಂತಿ ಪಡೆದು ಸುಧಾರಿಸಿಕೊಂಡು ನಡಿಗೆಯನ್ನು ಮುಂದುವರೆಸುತ್ತಾರೆ. ಅವರ ಜೀವನವೂ ಕೂಡ ಕೆಲ ವಿರೋಧಾಭಾಸಗಳನ್ನು ಬಿಂಬಿಸುತ್ತದೆ. ಅನೇಕ ವರ್ಷಗಳು ವಿವಿಧ ಅಲೆಮಾರಿ ಜನಾಂಗಗಳನ್ನು ಅಭ್ಯಸಿಸಿದರೂ ತಾವು ಐಷಾರಾಮದ ಜೀವನಶೈಲಿಯನ್ನು ಆಚರಿಸುತ್ತಾರೆ. ಸುಪ್ರಸಿದ್ಧ ವ್ಯಕ್ತಿಗಳ ಜೊತೆ ಗುರ್ತಿಸಿಕೊಳ್ಳುತ್ತಾರೆ. ವ್ಯಕ್ತಿಸ್ವಾತಂತ್ರ್ಯವನ್ನು ಪ್ರೀತಿಸುವ ರಾಬಿನ್ ತನ್ನನ್ನು ‘ವಸ್ತು’ವನ್ನಾಗಿ ನೋಡಬಾರದು ಎಂದು ಕೋಪಿಸಿಕೊಳ್ಳುತ್ತಿದ್ದರು. ಆದರೆ ಅಲೆಮಾರಿ ಜನಾಂಗಗಳನ್ನು ತನ್ನದೇ ಆದ ‘ಸ್ವತಂತ್ರ’ ವ್ಯಾಖ್ಯಾನದಲ್ಲಿ ಅವರನ್ನು ತಮ್ಮದೇ ವಸ್ತುವನ್ನಾಗಿ ಬಳಸಿಕೊಂಡರೇ ಎಂದೆನಿಸುತ್ತದೆ. ಅವರ ‘ಎಲ್ಲವನ್ನೂ ಬಿಟ್ಟು ಈ ಕ್ಷಣದಲ್ಲಿ ಬದುಕುವ’ ಆಶಯವೆಂದರೆ ಏನು? ತನಗೆ ಬೇಕಾದ ಸೂತ್ರದಲ್ಲಿ ಬದುಕುವ ಆಯ್ಕೆಯೇ ಎಂಬ ಪ್ರಶ್ನೆ ಏಳುತ್ತದೆ.

ಅವರು ಬಹಳ ಅದೃಷ್ಟವಂತರು, ಅವರಿಗೆ ಆಯ್ಕೆಗಳನ್ನು ಮಾಡಿಕೊಳ್ಳುವ ಹೇರಳ ಅವಕಾಶಗಳು ಲಭ್ಯವಾದವು. ಅದು ಎಲ್ಲರಿಗೂ ಒದಗಿಬರುವುದಿಲ್ಲ ಎನ್ನಿಸುತ್ತದೆ. ಅಥವಾ, ಅದನ್ನೇ ಅವರು ಹೇಳುತ್ತಾ ಬದುಕುತ್ತಿದ್ದಾರೆಯೇ ಎನ್ನುವ ನಿಗೂಢತೆಯೂ ಎದುರಾಗುತ್ತದೆ. ತಮಗೆ ಬೇಕೆಂಬ ಇಚ್ಚಾಶಕ್ತಿಯಿದ್ದರೆ ಎಲ್ಲರಿಗೂ ಆಯ್ಕೆಗಳು, ಅವಕಾಶಗಳು ಸಿಕ್ಕುತ್ತವೆಯೇ?! ರಾಬಿನ್ ಡೇವಿಡ್ ಸನ್ ಎಂಬ ನೀರಸುಳಿಯ ವ್ಯಕ್ತಿತ್ವ ಹಾಗೇ ಇರಬಹುದೇನೋ.