ನಮ್ಮವರಲ್ಲಿ ಹೆಚ್ಚಿನವರು ಅಲ್ಲಿನವರಿಗೆ ತುಂಬಾ ಹೆದರುತ್ತೇವೆ. ಅಮೆರಿಕನ್ನರು ತುಂಬಾ superior ಅಂತ ನಮ್ಮವರು ಭಾವಿಸಿಬಿಡುತ್ತಾರೆ. ಅಲ್ಲಿಗೆ ಹೋದಾಗಲೆ ಅದು ಸುಳ್ಳು ಅಂತ ಗೊತ್ತಾಗುತ್ತದೆ. ಅವರೂ ಕೂಡ ನಮ್ಮಂತೆಯೇ ಮನುಷ್ಯರೇ, ಅವರಿಗೂ ತಮ್ಮ ದೈನಂದಿನ ಆಗುಹೋಗುಗಳ ಬಗ್ಗೆ ಕಳವಳ ಇದೆ, ಅವರಿಗೂ ದುಡ್ಡಿನ ಚಿಂತೆ ಇದೆ, ತಾವು ಒಂದು ವೇಳೆ ಕೆಲಸ ಕಳೆದುಕೊಂಡರೆ ಹೇಗೆ ಎಂಬ ಭಯ ಇದೆ.. ಇತ್ಯಾದಿ.. ಬಹುಶಃ ನಮ್ಮವರ ಕೀಳರಿಮೆಗೆ ಕಾರಣ ಅಲ್ಲಿನವರು ಸ್ಫುಟವಾಗಿ ಮಾತಾಡುವ ಆಂಗ್ಲ ಭಾಷೆಯೂ ಇರಬೇಕು. ಅದು ಅವರ ಮಾತೃ ಭಾಷೆ, ಅದಕ್ಕೇಕೆ ನಾವು ಅಷ್ಟು ಹೆದರಬೇಕು? ಗೊತ್ತಿಲ್ಲ.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಏಳನೆಯ ಬರಹ
ಒಮಾಹಾದಲ್ಲಿ ಕನ್ನಡಕ್ಕೆ ಎಳ್ಳಷ್ಟೂ ಬೆಲೆ ಕೊಡದ ಕನ್ನಡಿಗರೇ ತುಂಬಿರುತ್ತಾರೆ ಎಂಬ ಭಾವನೆ ನನಗಿತ್ತು. ಅಲ್ಲಿ ಅಷ್ಟೋ ಇಷ್ಟೋ ಕನ್ನಡ ಮಾತಾಡೋರು ಸಿಕ್ಕರೆ ಅದೇ ನನ್ನ ಅದೃಷ್ಟ ಅಂತ ಕೂಡ ಅಂದುಕೊಂಡಿದ್ದೆ. ಅವತ್ತಿನ ದಿನ ನನಗೆ ಸಿಕ್ಕ ಹಲವಾರು ಕನ್ನಡಿಗರು ನನ್ನ ಅಭಿಪ್ರಾಯ ತಪ್ಪು ಅಂತ ಸಾಬೀತು ಮಾಡಿದರು. ಅದರಲ್ಲೂ ಶಂಕರ ಅಜ್ಜಂಪುರ ಸರ್ ಅವರ ಭೇಟಿ ತುಂಬಾ ಖುಷಿ ಕೊಟ್ಟಿತ್ತು. ಅವರ ಪಾಂಡಿತ್ಯವನ್ನು ಕಂಡು ಬೆರಗಾದೆ. ಬಹಳ ಓದಿಕೊಂಡಿದ್ದರು. ನವೀನ್ ಅವರ ಬೆಚ್ಚನೆಯ ಮನೆಯಲ್ಲಿ ಕುಳಿತು ಹರಟೆ ಹೊಡೆಯುವಾಗ ಕನ್ನಡದ ಹಲವಾರು ಸಾಹಿತಿಗಳ, ಪುಸ್ತಕಗಳ ವಿಷಯ ಮಾತಾಡಿದೆವು. ನಾವಿಬ್ಬರೂ ನಮ್ಮದೇ ಲೋಕದಲ್ಲಿ ಸಂಪೂರ್ಣವಾಗಿ ಮುಳುಗಿದ್ದೆವು. ಅವರೊಟ್ಟಿಗೆ ಪುಸ್ತಕಗಳ ಬಗ್ಗೆ ಹರಟುವ ಒಬ್ಬ ಪುಣ್ಯಾತ್ಮ ಭಾರತದಿಂದ ಬಂದನಲ್ಲ ಎಂಬ ಒಂದು ಸಂತೃಪ್ತಿ ಅಲ್ಲಿದ್ದ ಎಲ್ಲರ ಮುಖದಲ್ಲೂ ಗಮನಿಸಿದೆ! ಇನ್ನೊಂದಿಷ್ಟು ದಿನಗಳು ಮಗಳ ಮನೆಯಲ್ಲಿ ಇರುತ್ತಾರೆ. ಅವರನ್ನು ಆಗಾಗ ಭೇಟಿ ಮಾಡಿ ಹರಟೆ ಹೊಡೆಯಬಹುದು ಅನಿಸಿತು. ಅಂದಿನ ಕೊರೆಯುವ ಚಳಿಯಲ್ಲಿ ಅಜ್ಜಂಪುರ ಅವರ ಮಡದಿ ಪ್ರೇಮಾ ಮೇಡಂ, ಮಾಡಿ ಬಡಿಸಿದ ಟೊಮೆಟೊ ಸಾರಿನ ಊಟವನ್ನು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ನನ್ನ ಜೀವನದಲ್ಲೇ ಮೊದಲ ಬಾರಿ ಟೊಮೆಟೊ ಸಾರನ್ನು ಅಷ್ಟೊಂದು ಆಸ್ವಾದಿಸಿದ್ದೆ. ಅದು ಅವತ್ತು ಅಷ್ಟು ಆಪ್ತ ಅನುಭವ ನೀಡಿತ್ತು! ಎಲ್ಲೋ ಬಂದುಬಿಟ್ಟೆನೇ ಎಂಬ ಆ ಅನಾಥ ಪ್ರಜ್ಞೆ ಅವತ್ತು ದೂರವಾಗಿತ್ತು!
ಊಟ ಆದ ಬಳಿಕ ನವೀನ್ ತಮ್ಮ ಕಾರ್‌ನಲ್ಲಿ ನಮ್ಮ ಮನೆಗೆ ಬಿಟ್ಟುಕೊಟ್ಟರು. ಮಲಗಲು ರಬ್ಬರ್ ಹಾಸಿಗೆಯನ್ನೂ ನೀಡಿದರು. ಅದರಲ್ಲಿ ಗಾಳಿಯನ್ನು ತುಂಬಬಹುದಿತ್ತು. ಅವತ್ತು ನಮಗೆಲ್ಲ ಸುಖವಾದ ನಿದ್ದೆ.
*****
ಕ್ರಮೇಣ ಅವಶ್ಯಕವಾದ ಸಾಮಾನುಗಳು ಒಂದೊಂದಾಗಿ ಮನೆಗೆ ಬಂದು ಸೇರತೊಡಗಿದವು. ನಾವು ಹಾಗೆ ಕೊಂಡುಕೊಂಡ ವಸ್ತುಗಳೆಲ್ಲ ತುಂಬಾ ಸರಳವಾದ ಹಾಗೂ ಅಷ್ಟೆಲ್ಲಾ ದುಬಾರಿಯಾಗಿ ಅಥವಾ ವೈಭವೋಪೇತವಾಗಿ ಇರಲಿಲ್ಲ. ಒಂದೇ ವರ್ಷ ಮಾತ್ರ ಅಲ್ಲಿ ಇರುವವರಲ್ಲವೇ? ಅಷ್ಟೆಲ್ಲಾ ದುಡ್ಡು ಕೊಟ್ಟು ಖರೀದಿಸಿದರೆ, ಅಂತಹ ವಸ್ತುಗಳ ಮೇಲೆ ತುಂಬಾ ಮೋಹ ಉಂಟಾಗಿ ಅಲ್ಲೇ ಉಳಿದುಬಿಟ್ಟರೆ ಎಂಬ ಭಯವೇ ಅದಕ್ಕೆ ಕಾರಣ! ಆಶಾಳ ಅಡಿಗೆ ಮನೆ ಕೂಡ ಸುಸಜ್ಜಿತವಾಗಿತ್ತು. ಒವೆನ್, ಸ್ಟೌಗಳ ಜೊತೆಗೆ ಅಲ್ಲಿಯೇ ಪಾತ್ರೆ ತೊಳೆಯುವ ಒಂದು Dish washer ಇತ್ತು. ಅದರಲ್ಲಿ ಮುಸುರೆ ಪಾತ್ರೆಗಳನ್ನು ಇಟ್ಟು, ಸೋಪ್ ಹಾಕಿಬಿಟ್ಟರೆ ನಮ್ಮ ಕೆಲಸದವರ ತರಹ ಅಲ್ಲಿ ಇಲ್ಲಿಯ ಸುದ್ದಿ ಮಾತಾಡದೆ ತೆಪ್ಪಗೆ ಪಾತ್ರೆ ತೊಳೆಯುತ್ತಿತ್ತು!
ಆಶಾಳಿಗೆ ಅಡುಗೆ ಮಾಡುವದು ತುಂಬಾ ಇಷ್ಟದ ಕೆಲಸ. ನನಗೆ ತಿನ್ನುವುದು ಹೇಗೆ ಇಷ್ಟದ ಕೆಲಸವೋ ಹಾಗೆ! ಹೀಗಾಗಿ ತರ ತರಹದ ಭಕ್ಷ್ಯಗಳನ್ನು ಅವಳು ಮಾಡುತ್ತಿದ್ದಳು, ನಾನು ಮನಃಪೂರ್ತಿ ತಿಂದು ತೇಗುತ್ತಿದ್ದೆ. ಕೆಲವೊಮ್ಮೆ ಬ್ರೋಕೊಲಿಯಂತಹ ಆರೋಗ್ಯಕಾರವಾದ ತರಕಾರಿ ತಂದು ಸಾರು ಮಾಡಿದಾಗ ಮಾತ್ರ ರೇಗುತ್ತಿದ್ದೆ! ಯಾಕೆಂದರೆ ಅದರಲ್ಲಿ ರಸಕ್ಕಿಂತ ಹೋಳುಗಳೆ ಅಧಿಕವಾಗಿರುತ್ತಿದ್ದವು!
ಕೂಗಳತೆಯಲ್ಲಿಯೇ ಒಂದು Joslyn Elementary School ಎಂಬ ಹೆಸರಿನ ಶಾಲೆ ಇತ್ತು. ಅಲ್ಲಿಯೇ ಮಗಳು ಪರಿಧಿಗೆ ಪ್ರವೇಶವೂ ದೊರೆಯಿತು. ಅದು ಎಷ್ಟು ಹತ್ತಿರವಿತ್ತು ಅಂದರೆ ಅಲ್ಲಿಗೆ ನಡೆದುಕೊಂಡೆ ಹೋಗಬಹುದಿತ್ತು. ಅಲ್ಲಿನ ಶಾಲಾ ವ್ಯವಸ್ಥೆ ಹೇಗಿದೆ ಅಂದರೆ, ಆಯಾ ಪ್ರದೇಶದ (district) ಹತ್ತಿರದ ಶಾಲೆಯಲ್ಲಿ ಆ district ನಲ್ಲಿ ಇರುವವರಿಗೆ ಪ್ರವೇಶ ಕೊಡಲೆಬೇಕು. ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಅಲ್ಲಿ ಉಚಿತ. ಕಡಿಮೆ ಜನಸಂಖ್ಯೆ, ಹೆಚ್ಚು ಸಂಪನ್ಮೂಲಗಳು ಹಾಗೂ ರಾಜಕೀಯ ಇಚ್ಛಾಶಕ್ತಿ ಇದ್ದರೆ ಇಂತಹ ಅನುಕೂಲಗಳನ್ನು ಕೊಡಬಹುದು ಅನಿಸುತ್ತದೆ. ಆದರೆ ಕಾಲೇಜು ಕಲಿಕೆ ಮಾತ್ರ ಸಿಕ್ಕಾಪಟ್ಟೆ ದುಬಾರಿ. ಅಲ್ಲಿದ್ದ ಒಬ್ಬ NRI ಅಂತೂ ಅಮೆರಿಕೆಯಲ್ಲಿ ತನ್ನ ಮಗಳ ಹೆಚ್ಚಿನ ವಿದ್ಯಾಭ್ಯಾಸದ ಖರ್ಚಿಗೆ ಬೇಕಾಗುತ್ತೆ ಅಂತ, ತನಗಾಗಿ ಮುಂದೊಮ್ಮೆ ಭಾರತಕ್ಕೆ ಹೋದರೆ ಇರಲಿ ಎಂದು ಕಟ್ಟಿಸಿದ್ದ ಭವ್ಯವಾದ ಬಂಗಲೆಯನ್ನೇ ಮಾರಿದ್ದ! ಅಲ್ಲಿನ ನೆಬ್ರಾಸ್ಕ ವಿಶ್ವವಿದ್ಯಾಲಯದಲ್ಲಿ ಹಾಗೆ MS ಕಲಿಯಲು ಭಾರತದಿಂದ ಸ್ಟೂಡೆಂಟ್ ವೀಸಾ ಪಡೆದು ಬಂದ ತುಂಬಾ ಹುಡುಗ ಹುಡುಗಿಯರನ್ನು ಕೂಡ ಆಗಾಗ ಭೇಟಿಯಾಗುತ್ತಿದ್ದೆ. ಹಾಗೆ ಬಂದು ಮುಂದೆ ಕೆಲಸ ಗಿಟ್ಟಿಸಿಕೊಂಡು ಅಲ್ಲಿಯೇ ಬೇರು ಬಿಟ್ಟವರೂ ಸಿಕ್ಕರು. ಅಂತಹ ಶಿಕ್ಷಣ ಪಡೆಯಲು, ಭಾರತದಲ್ಲಿ ಎಷ್ಟೋ ಲಕ್ಷ ಗಟ್ಟಲೆ ಸಾಲ ಮಾಡಿ ಅಲ್ಲಿಗೆ ಯಾವ ಪುರುಷಾರ್ಥಕ್ಕಾಗಿ ಕಲಿಯಲು ಹೋಗುತ್ತಾರೆ ಎಂಬುದು ಅರ್ಥವಾಗದ ಸಂಗತಿ ಆಗಿತ್ತು.
“ಅದು ಅವರವರಿಗೆ ಬಿಟ್ಟಿದ್ದು. ಅದನ್ನು ಪ್ರಶ್ನಿಸಲು ನೀನ್ಯಾರು? ಎಂಬ ಅರ್ಥದಲ್ಲಿ ಪದೇ ಪದೇ ಗದರುತ್ತಾ ನಾವು ಅಲ್ಲಿರುವಷ್ಟೂ ದಿನಗಳು ಆಶಾ ನನಗೆ ಎಚ್ಚರಿಸುತ್ತಲೇ ಇರುತ್ತಿದ್ದಳು! ಆದರೂ ನನಗೆ ಅಭ್ಯಾಸ ಬಲ. ಅಲ್ಲಿನವರಿಗೆ ಮುಜುಗರವಾಗುವಂತಹ ಈ ತರಹದ ಮೂರ್ಖ ಪ್ರಶ್ನೆಗಳನ್ನು ಆಗಾಗ ಕೇಳುತ್ತಿದ್ದೆ, ಇವಳ ಬಳಿ ಬೈಸಿಕೊಳ್ಳುತ್ತಿದ್ದೆ.
*****
ನನ್ನ ಆಫೀಸ್ ಕೂಡ ತುಂಬಾ ಹತ್ತಿರದಲ್ಲೇ ಇತ್ತು. ಅಲ್ಲಿನ ಬಾಸ್ ಹೆಸರು ಕೂಡ ವೆಂಕಟ್ ಅಂತಲೇ ಇತ್ತು. ಅವರು ಭಾರತದಿಂದ ತುಂಬಾ ಹಿಂದೆಯೇ ಬಂದು ಅಲ್ಲಿಯೇ ಬೇರೂರಿದ್ದವರು. ಅವರು ಬೆಂಗಳೂರಿನ ವೆಂಕಟ್ ತರಹ easy going ಇರಲಿಲ್ಲ. ತುಂಬಾ ಕಡಕ್ ವ್ಯಕ್ತಿತ್ವ ಅನಿಸಿತು. ಸಾಫ್ಟವೇರ್ ಪ್ರಾಜೆಕ್ಟ್‌ಗಳನ್ನು ನಿರ್ವಹಿಸುವ ಬಗೆ ಭಾರತದಲ್ಲಿ ಬೇರೆಯೇ ಇರುತ್ತದೆ. ಇಲ್ಲಿ ನೇರವಾಗಿ ಗ್ರಾಹಕರನ್ನು ಎದುರಿಸುವ ಪ್ರಮೇಯ ಕಡಿಮೆ. ಅದೇ ಅಮೆರಿಕೆಯಲ್ಲಿ ಇರುವವರು ಗ್ರಾಹಕರ ಜೊತೆಗೇ ಇರುವ ಕಾರಣ ಅವರ ಮೇಲೆ ಒತ್ತಡ ಹೆಚ್ಚು ಇರುತ್ತದೆ. ಹೀಗಾಗಿ ಅವರು ಯಾವಾಗಲೂ ತಮ್ಮ ಕೆಳಗೆ ಕೆಲಸ ಮಾಡುವವರ ಮೇಲೆ ಕೂಗಾಡುತ್ತಲೇ ಇರುತ್ತಾರೆ. ಭಾರತದಲ್ಲಿ ಇರುವ ನಮ್ಮದೇ ಕಂಪೆನಿಯ ಸಾಫ್ಟವೇರ್ ಡೆವಲಪರ್‌ಗಳ ತಂಡವನ್ನು ನಾನು ಅಲ್ಲಿಂದ ಸಂಭಾಳಿಸಬೇಕಿತ್ತು. ವೆಂಕಟ್ ಹಾಗೂ ನಮ್ಮ ಟೀಮಿನ ನಡುವೆ ನಾನು ಇದ್ದದ್ದರಿಂದ ವೆಂಕಟ್ ನನ್ನ ಮೇಲೆ ಕೂಗಾಡುವ ಸಾಧ್ಯತೆಗಳು ತುಂಬಾ ಇರುತ್ತಿತ್ತು. ಅದಾಗಲೇ ೧೭ ವರ್ಷಗಳು ವೆಂಕಟ್ ನಂತಹ ಎಷ್ಟೋ ಬುಸುಗುಡುವ ಬಾಸ್ ಗಳನ್ನು ನಾನು ನೋಡಿದ್ದೆನಾದ್ದರಿಂದ ನನಗೆ ಅವರ ಬಗ್ಗೆ ಅಷ್ಟೇನೂ ಭಯ ಇರಲಿಲ್ಲ.
ಅಲ್ಲಿದ್ದ ಒಬ್ಬ NRI ಅಂತೂ ಅಮೆರಿಕೆಯಲ್ಲಿ ತನ್ನ ಮಗಳ ಹೆಚ್ಚಿನ ವಿದ್ಯಾಭ್ಯಾಸದ ಖರ್ಚಿಗೆ ಬೇಕಾಗುತ್ತೆ ಅಂತ, ತನಗಾಗಿ ಮುಂದೊಮ್ಮೆ ಭಾರತಕ್ಕೆ ಹೋದರೆ ಇರಲಿ ಎಂದು ಕಟ್ಟಿಸಿದ್ದ ಭವ್ಯವಾದ ಬಂಗಲೆಯನ್ನೇ ಮಾರಿದ್ದ! ಅಲ್ಲಿನ ನೆಬ್ರಾಸ್ಕ ವಿಶ್ವವಿದ್ಯಾಲಯದಲ್ಲಿ ಹಾಗೆ MS ಕಲಿಯಲು ಭಾರತದಿಂದ ಸ್ಟೂಡೆಂಟ್ ವೀಸಾ ಪಡೆದು ಬಂದ ತುಂಬಾ ಹುಡುಗ ಹುಡುಗಿಯರನ್ನು ಕೂಡ ಆಗಾಗ ಭೇಟಿಯಾಗುತ್ತಿದ್ದೆ. ಹಾಗೆ ಬಂದು ಮುಂದೆ ಕೆಲಸ ಗಿಟ್ಟಿಸಿಕೊಂಡು ಅಲ್ಲಿಯೇ ಬೇರು ಬಿಟ್ಟವರೂ ಸಿಕ್ಕರು.
ಅಲ್ಲಿನ ನಮ್ಮ ಆಫೀಸ್‌ನಲ್ಲಿ ಕೆಲಸ ಮಾಡುತ್ತಿದ್ದ ತುಂಬಾ ಜನ ಅಲ್ಲಿಯವರೆ ಇದ್ದರು. ಅವರಲ್ಲಿ ವಯಸ್ಸಾದವರೆ ಜಾಸ್ತಿ. ಭಾರತೀಯರು ಕೂಡ ಒಂದಿಷ್ಟು ಜನ ಇದ್ದರು. ಚೀನಾದವನು ಒಬ್ಬನಿದ್ದ. ಒಬ್ಬೊಬ್ಬರೆ ಕ್ರಮೇಣ ಪರಿಚಯವಾಗುತ್ತ ಹೋದರು. ಎಷ್ಟೋ ಜನ ಬೆಳಿಗ್ಗೆ ಬೇಗನೆ ಕೆಲಸಕ್ಕೆ ಬಂದು ಸಂಜೆ ನಾಲ್ಕು ಗಂಟೆಗೆಲ್ಲ ಮನೆಗೆ ಹೋಗಿಬಿಡುತ್ತಿದ್ದರು. ಅಲ್ಲಿನವರು ಕುಟುಂಬದವರಿಗೆ ತುಂಬಾ ಸಮಯ ಕೊಡುತ್ತಾರೆ ಅನಿಸಿತು. ಇದು ನೆಬ್ರಾಸ್ಕ ರಾಜ್ಯಕ್ಕೆ ಸೀಮಿತ ಇರಬಹುದು. ತಮ್ಮ ಕೆಲಸದ ಸಮಯ ಆದ ಮೇಲೆ ಮುಲಾಜಿಲ್ಲದೆ ಮನೆಗೆ ಹೋಗುತ್ತಿದ್ದರು. ಅದೇ ಭಾರತದಲ್ಲಿ ನಾವೆಲ್ಲ ಹಗಲು ರಾತ್ರಿ ಕತ್ತೆಗಳಂತೆ ದುಡಿಯುತ್ತಿದ್ದೆವು. ನಮ್ಮ ಈ ನಡುವಳಿಕೆಗೆ ನಾವೇ ಕಾರಣ ಅನಿಸಿತು. ನಮ್ಮವರಲ್ಲಿ ಹೆಚ್ಚಿನವರು ಅಲ್ಲಿನವರಿಗೆ ತುಂಬಾ ಹೆದರುತ್ತೇವೆ. ಅಮೆರಿಕನ್ನರು ತುಂಬಾ superior ಅಂತ ನಮ್ಮವರು ಭಾವಿಸಿಬಿಡುತ್ತಾರೆ. ಅಲ್ಲಿಗೆ ಹೋದಾಗಲೆ ಅದು ಸುಳ್ಳು ಅಂತ ಗೊತ್ತಾಗುತ್ತದೆ. ಅವರೂ ಕೂಡ ನಮ್ಮಂತೆಯೇ ಮನುಷ್ಯರೇ, ಅವರಿಗೂ ತಮ್ಮ ದೈನಂದಿನ ಆಗುಹೋಗುಗಳ ಬಗ್ಗೆ ಕಳವಳ ಇದೆ, ಅವರಿಗೂ ದುಡ್ಡಿನ ಚಿಂತೆ ಇದೆ, ತಾವು ಒಂದು ವೇಳೆ ಕೆಲಸ ಕಳೆದುಕೊಂಡರೆ ಹೇಗೆ ಎಂಬ ಭಯ ಇದೆ.. ಇತ್ಯಾದಿ.. ಬಹುಶಃ ನಮ್ಮವರ ಕೀಳರಿಮೆಗೆ ಕಾರಣ ಅಲ್ಲಿನವರು ಸ್ಫುಟವಾಗಿ ಮಾತಾಡುವ ಆಂಗ್ಲ ಭಾಷೆಯೂ ಇರಬೇಕು. ಅದು ಅವರ ಮಾತೃ ಭಾಷೆ, ಅದಕ್ಕೇಕೆ ನಾವು ಅಷ್ಟು ಹೆದರಬೇಕು? ಗೊತ್ತಿಲ್ಲ. ಹಾಗಂತ ನಮಗಿಂತ ಕೆಟ್ಟದಾಗಿ ಆಂಗ್ಲ ಭಾಷೆ ಮಾತಾಡುವ ಚೀನಾದ ಒಬ್ಬ ವ್ಯಕ್ತಿ ಕೂಡ ನಮ್ಮವರಿಗೆ ಕೀಳರಿಮೆ ಮೂಡಿಸಬಲ್ಲ! ಹಾಗಂತ ಎಲ್ಲ ಭಾರತೀಯರೂ ಹಾಗೆ ಕೀಳರಿಮೆಯಿಂದ ಇರೋದಿಲ್ಲ. ಅಲ್ಲಿನವರ ಜೊತೆಗೆ ನಾನು ಚೆನ್ನಾಗಿಯೇ ವ್ಯವಹರಿಸುತ್ತಿದ್ದೆ. ಇನ್ನೂ ಹಲವು ಭಾರತೀಯ ಮೂಲದ ಮ್ಯಾನೇಜರ್‌ಗಳು ಅಲ್ಲಿನವರ ಜೊತೆಗೆ ಧೈರ್ಯದಿಂದ ಹಾಗೂ ಚೆನ್ನಾಗಿಯೇ ಮಾತಾಡುತ್ತಿದ್ದರು. ನಮ್ಮ ದೇಶದಲ್ಲಿದ್ದುಕೊಂಡೆ ಕೆಲಸ ಮಾಡುವ ಹಲವರು ಹಾಗೆ ಹೆದರುತ್ತಿದ್ದರು. ಅಲ್ಲಿಂದ ಅವರನ್ನು ಹೆದರಿಸಲು ವೆಂಕಟ್ ಇದ್ದರಲ್ಲ!
*****
ಅಲ್ಲಿ ಏನು ಇಲ್ಲದಿದ್ದರೂ ನಡೆದೀತು; ಕಾರ್ ಮಾತ್ರ ಬೇಕೆ ಬೇಕು. ಅದನ್ನೂ ಕೂಡ ಹೊಸದಾಗಿ ಖರಿದಿಸುವ ಮನಸ್ಸು ನನಗಿರಲಿಲ್ಲ. ಇಂತಹ ನಿರ್ಜೀವ ವಸ್ತುಗಳ ಮೇಲೆ ದುಡ್ಡು ಸುರಿಯುವ ಬದಲು ಆ ದೇಶವನ್ನು ಎಷ್ಟು ಸಾಧ್ಯವೋ ಅಷ್ಟು ಸುತ್ತಾಡಿ ನೋಡೋಣ ಎಂಬ ಪ್ರಜ್ಞಾಪೂರ್ವಕ ನಿರ್ಧಾರ ನಮ್ಮದಾಗಿತ್ತು. ಪ್ರಾರಂಭದ ಕೆಲವು ದಿನಗಳು ನಮ್ಮ ಅಪಾರ್ಟ್‌ಮೆಂಟ್ ಹತ್ತಿರವೇ ಇದ್ದ ಕರ್ನಾಟಕದವರೆ ಆದ ನನ್ನ ಸಹೋದ್ಯೋಗಿಯೊಬ್ಬರು ನನ್ನನ್ನು ಆಫೀಸ್‌ಗೆ ಕರೆದುಕೊಂಡು ಹೋಗುತ್ತಿದ್ದರು. ನನಗೆ ಸರಿಯಾದ ಸಮಯಕ್ಕೆ ಹೋಗದಿದ್ದರೆ ಸಮಾಧಾನ ಆಗೋದಿಲ್ಲ. ಆದರೆ ಅವರು ದಿನವೂ ತಡವಾಗಿಯೇ ಬರೋರು. ಅವರಿಗೆ ಏನೂ ಹೇಳುವ ಹಾಗೂ ಇರಲಿಲ್ಲ. ನನ್ನಿಂದಲೇ ಅವರಿಗೆ ತೊಂದರೆ ಆಗುವುದು ಬೇಡ ಅನಿಸಿತು. ಎಲ್ಲಾದರೂ ಪ್ರವಾಸಕ್ಕೆ ಹೋಗಬೇಕೆಂದರೆ ಅಡ್ಡಾಡಲು ಅಲ್ಲಿ ಬಾಡಿಗೆಗೆ ಕಾರ್ ಸಿಗುತ್ತವೆ. ಅದೊಂದು ಅಲ್ಲಿ ನನಗೆ ತುಂಬಾ ಇಷ್ಟವಾದ ಸಂಗತಿ. ನಮಗೆ ಇಷ್ಟದ ಕಾರ್ ಅನ್ನು ಓಡಿಸುವ ಸದವಕಾಶ ಅದು. ಆದರೆ ದಿನವೂ ಆಫೀಸ್‌ಗೆ ಹೋಗಲು ಷಾಪಿಂಗ್ ಮಾಡಲು ನನ್ನದೇ ಸ್ವಂತದ ಒಂದು ಕಾರ್ ಬೇಕೆ ಬೇಕಿತ್ತು. ನಾನೂ ಕೂಡ ಒಂದು ಹಳೆಯ ಕಾರನ್ನು ಹುಡುಕುತ್ತಿದ್ದೆ.
*****
ಅವತ್ತು ಸಂಜೆ ಚಂದ್ರು ಫೋನ್ ಮಾಡಿದ. ತುಳಸಿಯವರ ಮನೆಯಲ್ಲಿ ಪರಿಚಯ ಆದಾಗಿನಿಂದ ನನಗೆ ಆಗಾಗ ಫೋನ್ ಮಾಡುತಿದ್ದ. ಅದು ಸರಿಯಾಗಿ ಸಂಜೆ ಏಳು ಗಂಟೆಗೆ! ನಾವು ಪರಿಚಯವಾಗಿ ಕೆಲವೇ ದಿನಗಳಾಗಿತ್ತಾದರೂ, ನಮ್ಮಿಬ್ಬರ ಮಧ್ಯೆ ಒಂದು ಆತ್ಮೀಯತೆ ಬೆಳೆದಿತ್ತು. “ಬಾರ ಲೇ ಹೋಗ ಲೇ” ಅಂತ ಮಾತಾಡುವಷ್ಟು. ಇಬ್ಬರೂ ಚಾ ಪ್ರಿಯರು ಹಾಗೂ ಸಮಾನ ವಯಸ್ಕರು ಇದ್ದಿದ್ದಕ್ಕೆ ನಮ್ಮಲ್ಲಿ ಅನ್ಯೋನ್ಯತೆ ಬೆಳೆದಿತ್ತೇನೋ.
“ಚಾ ಕುಡದೇನ ಲಾ..? ನಿನಗ ಕಾರ್ ಸಿಕ್ಕತೊ ಇಲ್ಲೋ?” ಅಂತ ಕೇಳಿದ.
ಸಿಕ್ಕಿಲ್ಲ ಅಂತ ಗೊತ್ತಾದಾಗ, “ನಾಳೆ ಒಂದು ಗರಾಜಿಗೆ ಹೋಗೋಣ ಬಾರಲಾ. ನನಗ ಪರಿಚಯದವ ಒಬ್ಬ Mexican ಆದಾನ. ಅವನ ಹತ್ರ ಒಂದು ಹಳೆ ಟೊಯೋಟ ಕ್ಯಾಮ್ರಿ ಕಾರ್ ಐತಿ.” ಅಂದ. ನಾನೂ ಓಕೆ ಅಂದೆ. ಮರುದಿನ ಶನಿವಾರವೂ ಇತ್ತು. ಈ ವಾರಾಂತ್ಯದ ಎರಡು ದಿನಗಳಲ್ಲಿ ಒಂದು ಕಾರ್ ತಂದರಾಯ್ತು ಅಂತ ಅಂದುಕೊಂಡೆ…
(ಮುಂದುವರಿಯುವುದು..)
ಹಿಂದಿನ ಕಂತು: ವಿದೇಶದಲ್ಲಿ ಸ್ವದೇಶೀ ಘಮಲು…
ಗುರುಪ್ರಸಾದ್ ಕುರ್ತಕೋಟಿ ಇಪ್ಪತ್ತು ವರ್ಷಗಳ ಕಾಲ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿ ಕೃಷಿಗಿಳಿದ ಉತ್ಸಾಹಿರೈತರು. “ಬೆಳೆಸಿರಿ” ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. “ಕೇಶಕ್ಷಾಮ” (ಹಾಸ್ಯ ಬರಹಗಳ ಸಂಕಲನ) ಸೇರಿ ಇವರ ಮೂರು ಕೃತಿಗಳು ಪ್ರಕಟಗೊಂಡಿವೆ.