”ನಿಜದ ಕಾವ್ಯದ ಓದು ನನ್ನನ್ನು ಅನುಕ್ಷಣ ಕಾಡುವಂಥದ್ದು ಮತ್ತು ನನ್ನನ್ನು ಜೀವಂತವಾಗಿರಿಸಿರುವಂಥದ್ದು. ಪಠ್ಯಪುಸ್ತಕಗಳನ್ನು ಎಂದೂ ಪ್ರಾಮಾಣಿಕವಾಗಿ ಓದದ ನಾನು ಬರೆಯುವುದರ ಮೂಲಕ ಓದಿನ ಸುಖವನ್ನು ಕಂಡುಕೊಂಡವನು ಮತ್ತು ಗಂಭೀರ ಓದಿಗೆ ತೆರೆದುಕೊಂಡವನು. ಓದುತ್ತಾ, ಓದುತ್ತಾ ಕ್ರಮೇಣ ಪುಸ್ತಕಗಳಿಲ್ಲದಿದ್ದರೆ ಹುಚ್ಚು ಹಿಡಿದಂತಾಗುತ್ತದೆ. ಇಂಥಹ ಹುಚ್ಚು ಎಷ್ಟು ಹಿತಕರವಾದದ್ದಲ್ಲವೆ. ಯಾವುದೋ ದುಷ್ಚಟಕ್ಕಿಂತ ಓದುವ, ಬರೆಯುವ ಚಟ ಎಷ್ಟು ಒಳ್ಳೆಯದಲ್ಲವೆ”
ಹೊಸ ತಲೆಮಾರಿನ ವಿಶಿಷ್ಠ ಬರಹಗಾರ ಕೃಷ್ಣ ದೇವಾಂಗಮಠ ಬರೆದ ಓದಿನ ಕುರಿತ ಲಹರಿ.

ಯಾವುದು ನಿರಂತರ ಧ್ಯಾನವಾಗಬಲ್ಲದು? ನಿರಂತರ ಧ್ಯಾನ ಹೇಗೆ ಅನುರಣಿಸಬಲ್ಲದು ? ಓದು , ಹೌದು ಓದು ಬರಿಯ ಧ್ಯಾನವಲ್ಲ, ನಿರಂತರ ಧ್ಯಾನ, ಸದಾ ಅನುರಣಿಸುವ ಧ್ಯಾನ. ಓದು ಮಾತ್ರವೇ ಅಂತಹ ಧ್ಯಾನ ಸ್ದಿತಿಗೆ ಏರಿಸಿ ಯಾರನ್ನಾದರೂ ಸರಿ ಹಿಡಿದು ನಿಲ್ಲಿಸಬಲ್ಲದು.

ಓದುವಿಕೆ ನಮಗೆ ಒಳ್ಳೆಯ ಮತ್ತು ಕೆಟ್ಟ ಬರವಣಿಗೆಯ ನಡುವಿನ ವ್ಯತ್ಯಾಸವನ್ನು ಗುರುತಿಸುವ ಬಹಳ ದೊಡ್ಡ ಶಕ್ತಿಯನ್ನು ಅರಿವಿಗೆ ಬಾರದಂತೆ ನೀಡುತ್ತದೆ. ಎಷ್ಟು ಸಾಧ್ಯವೋ ಅಷ್ಟು ಓದುವ ಪರಿಪಾಠ ಬೆಳೆಸಿಕೊಳ್ಳಬೇಕು. ಇದು ತುಂಬಾ ಒಳ್ಳೆಯ ಅಭ್ಯಾಸ. ಇದನ್ನೆ ಓದಬೇಕು ಅಂತೆನಿಲ್ಲಾ, ಏನಾದರೂ ಓದಬಹುದು. ನಮಗೆ ಬೇಕೆನಿಸಿದ್ದು. ಭಿನ್ನ ಭಿನ್ನ ಶೈಲಿಯ ಲೇಖಕರಿದ್ದಾರೆ. ಮೊದಲು ನಮಗೆ ಸರಿಹೊಂದುವ, ನಮ್ಮ ಜೊತೆಗೆ ಬಹು ಸುಲಭವಾಗಿ ಸಂಪರ್ಕ ಸಾಧಿಸಬಹುದಾದವರ ಕೃತಿಗಳನ್ನು ಓದುವುದು ಒಳಿತು. ಯಾವಾಗ ನಮಗೆ ಸದ್ಯ ಓದುತ್ತಿರುವ ಲೇಖಕರು ಸಪ್ಪೆಯಾಗಿ, ಬೋರ್ ಎನ್ನಿಸಲು ಶುರುವಾಗುತ್ತಾರೊ ಆಗ ನಾವು ಓದುವಿಕೆಯಲ್ಲಿ ಸ್ವಲ್ಪ ಮಾಗಿದ್ದೇವೆ ಎಂದೂ ಮತ್ತು ನಮ್ಮ ಅಭಿರುಚಿಯನ್ನು ಸ್ಪಷ್ಟ ಪಡಿಸಿಕೊಳ್ಳುವ ಹಾದಿಯಲ್ಲೂ ಇದ್ದೇವೆ ಎಂದು ಅಂದುಕೊಳ್ಳಬಹುದು.

ಕೆಲವರು ಮುಂಚೆ ಓದುತ್ತಿದ್ದ ಅದೇ ಲೇಖಕರನ್ನು ನೆಚ್ಚಿ ಮುಂದುವರೆಯಲೂ ಬಹುದು. ಅದು ಓದುಗರ ಅಭಿರುಚಿ, ಜ್ಞಾನ, ಬೌದ್ಧಿಕ ಮಟ್ಟದ ಮೇಲೆ ಅನುಗುಣವಾದಂತದ್ದು. ಹೋಗುತ್ತಾ ಹೋಗುತ್ತಾ ಆರಂಭಿಕ ಹಂತದ ಓದನ್ನು ಮೀರುತ್ತಾ, ಓದಿನ ಆಯಾಮಗಳನ್ನು ಅಧ್ಯಯನ ಮಾಡುತ್ತಾ, ಹೆಚ್ಚು ಗ್ರಹಿಸುವಿಕೆಯನ್ನು ಮತ್ತು ಬರಹದ ಸೂಕ್ಷ್ಮಗಳನ್ನೂ ಅರ್ಥ ಮಾಡಿಕೊಳ್ಳಬಲ್ಲವರಾಗುತ್ತಾ ಸಾಗಬೇಕಾಗುತ್ತದೆ. ಕತ್ತೆ – ಕುದುರೆಯಾಗಬೇಕೆ ಹೊರತಾಗಿ ಕುದುರೆ ಕತ್ತೆಯಾಗಬಾರದು ಅಲ್ಲವೆ. ಬೆಳವಣಿಗೆಯ ಹಂತ ಉನ್ನತದತ್ತಲೇ ಇರಬೇಕಾದುದು. ಹಾಗೆಂದ ಮಾತ್ರಕ್ಕೆ ಆಕಾಶ ನೋಡುವುದು ಅಂತಲ್ಲಾ ಭೂಮಿಯ ಮೇಲೆ ಭದ್ರವಾಗಿ ಕಾಲೂರುವುದನ್ನು ತಿಳಿದು ನಂತರ ಮುನ್ನಡೆಯುವುದು ಅಂತ.

ಸುಮ್ಮನೆ ಅಕ್ಷರಗಳನ್ನು ಓದುತ್ತಾ ಹೋಗುವುದಲ್ಲಾ, ಪ್ರಾಮಾಣಿಕ ಮತ್ತು ಪರಿಶ್ರಮದ ಓದು ಬೇಕಾಗುತ್ತದೆ. ಓದುವುದಕ್ಕೆ ಕೂರುವುದಕ್ಕಿಂತ ಮುಂಚೆ ಅದಕ್ಕೆ ಸಿದ್ಧರಾಗಿರಬೇಕು. ತಿಳಿದುಕೊಳ್ಳುವ, ಕಲಿಯುವ ಅಗಾಧ ಹಂಬಲವಿರಬೇಕು. ಓದು ನೇರ ಬದುಕಿನೊಂದಿಗೆ ಸಂವಾದಿಸುವುದನ್ನು ಮನಗಾಣುವ ಅನುಭವ ಪಡೆಯುವವರೆಗೂ ನಿಜದ ಓದು ನಮಗೆ ಸಿದ್ಧಿಸಿಲ್ಲ ಅಂತಲೇ ಅರ್ಥ. ಹಾಗೆಂದು ಸಪ್ಪೆ ಬರಹಗಳಲ್ಲಿ ಎಲ್ಲವನ್ನೂ ಹುಡುಕುವುದೂ ಸಲ್ಲ. ನಾವು ಕಥೆ, ಕಾದಂಬರಿಗಳನ್ನು ಖುಷಿಗಾಗಿ ಓದುತ್ತೇವೆ. ಓದುತ್ತಿರುವ ಯಾವುದೇ ಪುಸ್ತಕವಾಗಲಿ ಅದು ಬದುಕಿನ ಬಹು ಆಯಾಮಗಳನ್ನು ಎಲ್ಲಾ ರೀತಿಯಲ್ಲೂ ತನ್ನಲ್ಲಿ ಅಡಕವಾಗಿಸಿಟ್ಟುಕೊಂಡಿದ್ದಲ್ಲಿ ಮಾತ್ರ ಓದಿನ ಅತ್ಯಂತ ಎತ್ತರದ ಮಟ್ಟದ ಆನಂದವನ್ನು ನೀಡಬಲ್ಲದು. ವರ್ತಮಾನ, ಭೂತ, ಭವಿಷ್ಯವನ್ನು ಮಿಶ್ರಣವಾಗಿಸಿಕೊಂಡ ಯಾವುದೇ ಪುಸ್ತಕ ನಮ್ಮನ್ನು ಒಳಗಿನಿಂದ ಹಿಗ್ಗಿಸಬಲ್ಲದು.

ಇದನ್ನೆ ಓದಬೇಕು ಅಂತೆನಿಲ್ಲಾ, ಏನಾದರೂ ಓದಬಹುದು. ನಮಗೆ ಬೇಕೆನಿಸಿದ್ದು. ಭಿನ್ನ ಭಿನ್ನ ಶೈಲಿಯ ಲೇಖಕರಿದ್ದಾರೆ. ಮೊದಲು ನಮಗೆ ಸರಿಹೊಂದುವ, ನಮ್ಮ ಜೊತೆಗೆ ಬಹು ಸುಲಭವಾಗಿ ಸಂಪರ್ಕ ಸಾಧಿಸಬಹುದಾದವರ ಕೃತಿಗಳನ್ನು ಓದುವುದು ಒಳಿತು.

ನಿಜದ ಕಾವ್ಯದ ಓದು ನನ್ನನ್ನು ಅನುಕ್ಷಣ ಕಾಡುವಂಥದ್ದು ಮತ್ತು ನನ್ನನ್ನು ಜೀವಂತವಾಗಿರಿಸಿರುವಂಥದ್ದು. ಪಠ್ಯಪುಸ್ತಕಗಳನ್ನು ಎಂದೂ ಪ್ರಾಮಾಣಿಕವಾಗಿ ಓದದ ನಾನು ಬರೆಯುವುದರ ಮೂಲಕ ಓದಿನ ಸುಖವನ್ನು ಕಂಡುಕೊಂಡವನು ಮತ್ತು ಗಂಭೀರ ಓದಿಗೆ ತೆರೆದುಕೊಂಡವನು. ಓದುತ್ತಾ, ಓದುತ್ತಾ ಕ್ರಮೇಣ ಪುಸ್ತಕಗಳಿಲ್ಲದಿದ್ದರೆ ಹುಚ್ಚು ಹಿಡಿದಂತಾಗುತ್ತದೆ. ಇಂಥಹ ಹುಚ್ಚು ಎಷ್ಟು ಹಿತಕರವಾದದ್ದಲ್ಲವೆ. ಯಾವುದೋ ದುಷ್ಚಟಕ್ಕಿಂತ ಓದುವ, ಬರೆಯುವ ಚಟ ಎಷ್ಟು ಒಳ್ಳೆಯದಲ್ಲವೆ. ಕಥೆ , ಕಾದಂಬರಿಗಳನ್ನು ಮತ್ತೆ – ಮತ್ತೆ ಓದುವುದು ತುಂಬಾ ಕಡಿಮೆ. ಲೇಖನಗಳನ್ನು , ಜೀವನ ಚರಿತ್ರೆಗಳನ್ನು ಒಂದಕ್ಕಿಂತ ಹೆಚ್ಚು ಬಾರಿ ಓದಬಹುದು. ಕಾವ್ಯದ ಗುಣ ಹೊಂದಿರುವ ಗದ್ಯ ಸಲಿಸಾಗಿ ಓದಿಸಿಕೊಳ್ಳುತ್ತಾ ಖುಷಿಕೊಡಬಲ್ಲದಲ್ಲದೇ, ಆಗಾಗ ಓದಲು ಪ್ರೇರೆಪಿಸುತ್ತದೆ ಕೂಡ. ಕಾವ್ಯ ಓದುಗರನ್ನು ಸೆಳೆಯುವುದು ತನ್ನ ಶಬ್ದದ ಬೆಡಗಿನಿಂದ, ಭಾಷೆಯ ನವೀನತೆಯಿಂದ, ಸಂಗೀತದ ಬಂಧದಿಂದ, ಸಂಕೀರ್ಣತೆಯಿಂದ, ಮುಗ್ಧತೆಯಿಂದ, ಮುಕ್ತತೆಯಿಂದ, ಸಂಕ್ಷಿಪ್ತತೆಯಿಂದ ಹೀಗೆ ಬಹುವಾಗಿ. ಎಷ್ಟು ಬಾರಿ ಓದಿದರೂ ಎಲ್ಲವನ್ನೂ ಬಿಟ್ಟುಕೊಡದೆ ಪ್ರತಿ ಸಾರಿ ಬೆಲ್ಲದ ತುಂಡೊಂದನ್ನು ಮೆಲ್ಲಲು ನೀಡುತ್ತಲೇ ಇರುತ್ತದೆ. ಕಾವ್ಯ ಮಾತ್ರವೆ ನಮ್ಮೊಳಗೆ ಅನುರಣಿಸುತ್ತಾ ಸದಾ ಓದಬೇಕೆಂಬ ನಶೆಯನ್ನು, ಹುಚ್ಚುತನವನ್ನು, ಹುರುಪನ್ನು ತುಂಬಲು ಸಾಧ್ಯ ಎನ್ನುವುದನ್ನು ನಾನು ಕಂಡುಕೊಂಡಿದ್ದೇನೆ.

ಓದಿದ ಪುಸ್ತಕಗಳಲ್ಲಿ ನಮಗೆ ನೆನಪುಳಿಯುವುದು ಮುಖ್ಯವಾಗಿ ಅದರ ತಿಳಿ ಸಾರಾಂಶ, ನೆನಪಿಟ್ಟುಕೊಳ್ಳಲೇಬೇಕೆಂದು ನೆನಪಿಟ್ಟುಕೊಳ್ಳುವ ಕೆಲವು ಅಂಶಗಳು, ಮತ್ತು ಅದು ಕಾವ್ಯವಾಗಿದ್ದರೆ ಖಂಡಿತ ಸುಮ್ಮನೆ ಮೇಲ್ಮೇಲೆ ಓದಿದ್ದರೂ ಕೂಡಾ ನಮ್ಮನ್ನು ತಾಕಿದ ಸಾಲುಗಳು ಮಾತ್ರ ನಮ್ಮನ್ನು ಅಷ್ಟು ಸಲೀಸಾಗಿ ಬಿಟ್ಟುಹೋಗದೆ ಒಳಗೆ ಹಾಗೆ ಉಳಿದಿರುತ್ತವೆ. ಹಾಗೆ ಒಂದು ಪಕ್ಷ ಉಳಿದಿಲ್ಲ ಎಂದಾದರೆ ಆ ಸಾಲುಗಳು ಮಿದುಳಲ್ಲಿ ಅಳಿಸಿಹೋಗಿದ್ದರೂ ಸುಪ್ತ ಮನಸ್ಸಿನಲ್ಲಿ ಬಲವಾಗಿ ಉಳಿದಿರುತ್ತವೆ. ಈ ಅನುಭವ ಎಲ್ಲ ಕಾವ್ಯದ ಓದುಗರದೂ ಹೌದೆಂದೇ ನನ್ನ ನಂಬಿಕೆ. ನಾವು ಎಷ್ಟು ದೀರ್ಘ ಭಾಷಣ ಮಾಡುತ್ತಿರುವಾಗಲೂ ನಮಗೆ ಗೊತ್ತಿರದಂತೆಯೇ ಅದಕ್ಕೆ ಹೊಂದಿಕೆಯಾಗುವ ಯಾವುದೋ ಎಂದೋ ಓದಿದ, ಕವಿಯ ಹೆಸರೇ ಮರೆತುಹೋದ ಪದ್ಯದ ಎರಡು ಸಾಲುಗಳನ್ನ ಜೊತೆಗೆ ಉಲ್ಲೇಖಿಸಿ ಅದರ ಕುರಿತು ನಾವೇ ಅಚ್ಚರಿಯಾಗುತ್ತೇವೆ. ಮತ್ತು ಕೆಲವೊಮ್ಮೆ ದಿನ ಪೂರ್ತಿ ಉಪದೇಶ ಕೇಳುವ ಪರಿಸ್ಥಿತಿಯಲ್ಲಿ ಸಿಲುಕಿದಾಗ ಇಷ್ಟೆಲ್ಲವನ್ನೂ ಕೇವಲ ಎರಡೇ ಎರಡು ಸಾಲು ಕಾವ್ಯ ಪ್ರತಿನಿಧಿಸುತ್ತದಾದರೆ ವಾಚ್ಯದ ಅವಶ್ಯಕತೆ ಏನು ಎಂದು ಪ್ರಶ್ನಿಸಿಕೊಂಡಿದ್ದೇನೆ. ಎಲ್ಲಾ ಮರೆತು ಆ ಸಾಲುಗಳಲ್ಲೇ ಮಿಂದೆದ್ದಿದ್ದೇನೆ. ಅದರಿಂದ ಬಿಡಿಸಿಕೊಳ್ಳಲಾಗದೆ ವಿಲವಿಲ ಚಡಪಡಿಸಿದ್ದೇನೆ.

ನನ್ನ ಓದಿನ ಕುರಿತು ಹೇಳುವುದಾದರೆ ಕಾವ್ಯದ ಓದಿನ ಆಚೆಗೆ ನಾನೇನು ಅಷ್ಟು ಗಂಭೀರ ಓದುಗನಲ್ಲ ಅನ್ನಿಸುತ್ತದೆ ಕೆಲವೊಮ್ಮೆ. ಈಗಾಗಲೇ ಹೇಳಿದಂತೆ ಶಾಲಾ, ಕಾಲೇಜಿನ ಸಮಯದಲ್ಲಿ ಪಠ್ಯ ಓದುವುದು ಒಂದು ರೀತಿಯ ಹಿಂಸೆಯಂತೆಯೇ ನನಗೆ ಅನ್ನಿಸುತ್ತಿತ್ತು. ಸಣ್ಣ ವಯಸ್ಸಿನಿಂದಲೂ ಓದುತ್ತಿದ್ದೆನಾದರೂ ಒಂದಷ್ಟು ಗಂಭೀರವಾಗಿ ಓದಲು ಶುರುವಿಟ್ಟುಕೊಂಡದ್ದು ದ್ವಿತೀಯ ಪಿಯುಸಿ ಓದುತ್ತಿದ್ದ ಸಂದರ್ಭದಲ್ಲಿ. ಮೊದಲೇ ವಿಜ್ಞಾನದ ವಿದ್ಯಾರ್ಥಿ, ಅದರಲ್ಲೂ ಎಲ್ಲರಂತೆ ನನಗೂ ಗಣಿತ ಅಂದರೆ ಒಂದುರೀತಿಯಲ್ಲಿ ಭಯ ಹುಟ್ಟಿಸಿದ್ದ ವಿಷಯವೇ ಆಗಿತ್ತು. ಗಣಿತದ ತರಗತಿ ಅಂದರೆ ನಾನು ಕಾಲೇಜಿನ ಗ್ರಂಥಾಲಯದಲ್ಲಿ ಕಳೆಯಲು ಪ್ರಾರಂಭಿಸಿದ್ದೆ. ಅಲ್ಲಿ ದಿನಪತ್ರಿಕೆ, ಮಾಸಿಕ, ತ್ರೈಮಾಸಿಕ, ಕಥೆ, ಕಾದಂಬರಿ, ಕಾವ್ಯ ಓದುತ್ತಾ ಓದುತ್ತಾ ಓದು ಹೆಚ್ಚು ರುಚಿಸತೊಡಗಿತು. ಕ್ರಮೇಣ ಓದು ಕಾಲೇಜು ಗ್ರಂಥಾಲಯದಿಂದ ನಗರ ಗ್ರಂಥಾಲಯಕ್ಕೆ ನನ್ನನ್ನು ವರ್ಗಾಯಿಸಿತು. ನಾನು ಅಷ್ಟೊತ್ತಿಗಾಗಲೇ ಕಾಲೇಜು ಪಠ್ಯದಲ್ಲಿ ಸಂಪೂರ್ಣ ಆಸಕ್ತಿ ಕಳೆದುಕೊಂಡಿದ್ದೆ. ಬದುಕು ದೊಡ್ಡದು ಅನ್ನಿಸಲಿಕ್ಕೆ ಶುರುವಾಗಿತ್ತು. ನಾನು ಅನುಭವಿಸಿದ್ದರ ಆಚೆ ಬದುಕನ್ನು, ಜನರನ್ನು, ಬಡತನವನ್ನು, ಹಸಿವನ್ನು ಓದುವುದು ತುಂಬಾ ಪ್ರಿಯವೆನ್ನಿಸುತ್ತಾ ಹೋಯ್ತು. ಇನ್ನೊಬ್ಬರ ನೋವಿಗೆ ಮಿಡಿಯುವುದು ನನಗೆ ಗೊತ್ತಿಲ್ಲದಂತೆಯೇ ನನ್ನನ್ನು ಆವರಿಸಿಕೊಂಡಿತು. ಈಗಲೂ ಒಂದು ಕಾದಂಬರಿ ಹಿಡದು ಕೂತರೆ ಒಂದೇ ಓದಿಗೆ ಓದಲಾರೆ. ಯಾಕೊ ಕಾದಂಬರಿ ನನ್ನನ್ನು ಓದಿನಿಂದ ಆ ಕ್ಷಣ ವಿಮುಖನನ್ನಾಗಿಸುತ್ತದೆ. ಇದುವರೆಗೂ ಎರಡೋ ಮೂರೋ ಕಾದಂಬರಿಗಳನ್ನು ಬಿಡುವಿಲ್ಲದಂತೆ ಹಿಡಿದು ಒಂದೇ ಉಸಿರಿಗೆ ಓದಿರಬಹುದು ಅಷ್ಟೇ. ಹಾಗೆ ನನಗೆ ಬಿಡುವೇ ಕೊಡದೇ ಓದಿಸಿಕೊಳ್ಳಬಲ್ಲವು ಆತ್ಮ ಚರಿತ್ರೆಗಳು ಮತ್ತು ಸಂದರ್ಶನಗಳು ಮಾತ್ರ. ಹಾಗೆ ಓದಲಾಗದ್ದು ಕಾವ್ಯ. ನಿಧಾನವಾಗಿ ಒಳ ತೆಗೆದುಕೊಳ್ಳುವ ಕನಸಿನ ಮಾತ್ರೆಗಳು, ತೊಟ್ಟಿಕ್ಕುವ ವೈನು, ಬದುಕಿನ ಹದವಾದ ರುಚಿ ಬೆರೆತ ಹಿತ ಮಿತ ಆಹಾರ. ವರ್ಷಗಟ್ಟಲೇ ಒಂದೇ ಪುಸ್ತಕವನ್ನು ಮತ್ತೆ ಮತ್ತೆ ಓದಿದ್ದೇನೆ. ಇಂದಿಗೂ ಅಷ್ಟೇ ಆಸ್ಥೆಯಿಂದ, ಪ್ರೀತಿಯಿಂದ ಓದುವ ಹೆಚ್ಚಾಗಿ ಓದಿಸಿಕೊಳ್ಳುವ ಪುಸ್ತಕಗಳಿವೆ.

ಓದಿದ ಪುಸ್ತಕಗಳಲ್ಲಿ ನಮಗೆ ನೆನಪುಳಿಯುವುದು ಮುಖ್ಯವಾಗಿ ಅದರ ತಿಳಿ ಸಾರಾಂಶ, ನೆನಪಿಟ್ಟುಕೊಳ್ಳಲೇಬೇಕೆಂದು ನೆನಪಿಟ್ಟುಕೊಳ್ಳುವ ಕೆಲವು ಅಂಶಗಳು, ಮತ್ತು ಅದು ಕಾವ್ಯವಾಗಿದ್ದರೆ ಖಂಡಿತ ಸುಮ್ಮನೆ ಮೇಲ್ಮೇಲೆ ಓದಿದ್ದರೂ ಕೂಡಾ ನಮ್ಮನ್ನು ತಾಕಿದ ಸಾಲುಗಳು ಮಾತ್ರ ನಮ್ಮನ್ನು ಅಷ್ಟು ಸಲೀಸಾಗಿ ಬಿಟ್ಟುಹೋಗದೆ ಒಳಗೆ ಹಾಗೆ ಉಳಿದಿರುತ್ತವೆ.

ಓದುಗ ಓದುತ್ತಾ ಓದುತ್ತಾ ಲೇಖಕನ ಜೊತೆ ಸಂವಹನ ಮಾಡುತ್ತಾ ಸಾಗುತ್ತಾನೆ. ಕ್ರಮೇಣ ಅವನಿಗೆ ಲೇಖಕನ ಕುರಿತು ಅವನ ವೈಯಕ್ತಿಕ ಜೀವನದ ಕುರಿತು ಆಸಕ್ತಿ ಹೆಚ್ಚುತ್ತಲೇ ಹೋಗುತ್ತದೆ. ಅವನ ಸಣ್ಣ ಪುಟ್ಟ ವಿಷಯಗಳೂ ಓದುಗನಿಗೆ ಬೇಕು ಅನ್ನಿಸುತ್ತದೆ. ಪತ್ರದ ಮುಖೇನವೋ, ಹುಡುಕಿಕೊಂಡು ಬಂದೋ ಲೇಖಕನ ಜೊತೆ ಮಾತಿಗಿಳಿಯುವುದು ಪ್ರತೀ ಓದುಗನ ಆಸೆಯೂ ಹೌದು. ಹೀಗೆ ಪರಿಚಯ ಗಾಢವಾದಂತೆ ಓದುಗ ತಾನು ಓದುವ ಲೇಖಕ ಉತ್ತಮನೇ ಆಗಿರಬೇಕು ಎಂದು ಬಯಸುವುದು ಎಲ್ಲ ಕಾಲಕ್ಕೂ ಸತ್ಯ ಆದರೆ ಹಾಗಾಗಿರದಿದ್ದಲ್ಲಿ ನಿಧಾನಕ್ಕೆ ಸಂಬಂಧ ಬಿಗಿ ಕಳೆದುಕೊಳ್ಳುತ್ತಾ ಸಾಗಿ ಆ ಲೇಖಕನ ಬರಹದ ಮೇಲಿನ ಒಲವು ಲೇಖಕನಿಂದಲೇ ಓದುಗ ಕಳೆದುಕೊಳ್ಳುತ್ತಾನೆ. ಇದರಾಚೆಗೂ ಓದುಗ ಆ ಲೇಖಕನನ್ನು ಓದುತ್ತಾನೆಂದಾದರೂ ಆ ಬರಹ ಅವನ ಮೇಲೆ ಯಾವುದೇ ಪರಿಣಾಮ ಬೀರಲಾರದು ಎಂದೇ ನನ್ನ ಭಾವನೆ. ನಾನೂ ಒಬ್ಬ ಓದುಗನಾಗಿ ಹಾಗೆಯೇ ಬರಹಗಾರನಾಗಿ ಪ್ರಾಮಾಣಿಕವಾಗಿ ಹೇಳುವುದಾದರೆ ಬದುಕು ಬರಹ ಬೇರೆಯಲ್ಲಾ ಎಂದು ತೀವ್ರವಾಗಿ ಅನ್ನಿಸಿದೆ.

ವ್ಯಕ್ತಿ – ವ್ಯಕ್ತಿತ್ವ ಲೇಖಕನ ಅಸಲಿಯತ್ತಾಗಿರಬೇಕೆಂದೆ ನಾನು ಕಟುವಾಗಿ ಹೇಳುವುದು. ವಾಚ್ಯವಿಲ್ಲದಂತೆ ಕಾವ್ಯ ಬರೆದು ಅಂತರಂಗ ಕಲಕಿ ಒಳಗಿನಿಂದ ಬದಲಾವಣೆಗೆ ದಾರಿ ಮಾಡುವುದೇ ಒಳ್ಳೆಯ ಮಾರ್ಗ. ಇಲ್ಲವೇ ಕೆಲವೊಮ್ಮೆ ಎಲ್ಲಾ ಬಲ್ಲ ದೊಡ್ಡ ಮೇಧಾವಿಯಂತೆ ಹೀಗೆ ಇರಬೇಕು ಹೀಗೆ ಮಾಡಬೇಕು ಇತ್ಯಾದಿ ಭೋದನೆ ಮಾಡುತ್ತಾ, ತನ್ನ ಬಗ್ಗೆ ತಾನೇ ಹೆಮ್ಮೆ ಪಡುತ್ತಾ, ತಾನು ಮಾತ್ರ ಆ ಹಾದಿಗೆ ವಿಮುಖನಾಗಿ ನಡೆಯುತ್ತಿದ್ದರೆ ಹೇಗೆ? ತಾನೇ ಸರಿಯಿರದೇ ಮತ್ತೊಬ್ಬರತ್ತ ಬೆರಳು ತೋರಿಸುವವರಿಗೆ ಏನೆನ್ನಲಾದೀತು? ಗಾಂಧೀಜಿಯವರ ಕೊಬ್ಬರಿ ಬೆಲ್ಲದ ಪ್ರಸಂಗದಂತೆ ಮೊದಲು ತಾನು ಸರಿಯಿದ್ದು ನಂತರ ಮತ್ತೊಬ್ಬರನ್ನು ಸಾಧ್ಯವಾದರೆ ಎಲ್ಲಾ ಮಾರ್ಗಗಳಿಂದಲೂ ಸರಿಯಾದ ಮಾರ್ಗಕ್ಕೆ ತರಲು ಪ್ರಯತ್ನಿಸಬೇಕು. ಓದುಗನ ಆರಾಧ್ಯ ದೈವವಾಗಿರಲು ಸಾಧ್ಯವಿಲ್ಲದಿದ್ದರೂ , ನಿಷ್ಕಲ್ಮಶ ಮನುಷ್ಯನಾಗಿ ಬಾಳಿ ‘ ನನ್ನ ಜೀವನವೇ ನನ್ನ ಸಂದೇಶ ‘ ಎನ್ನುವಂತಿರಬೇಕು.

ಇನ್ನು ನಮ್ಮ ಓದು ನಮ್ಮ ಸ್ವಂತ ಆಯ್ಕೆಯಾಗಿರುವುದು ಬಹಳ ಮುಖ್ಯ. ಬಹುತೇಕ ಓದುಗರು ಬೇರೆಯವರ ಸಲಹೆಗಳ ಮೇಲೆಯೇ ಪುಸ್ತಕಗಳನ್ನು ಆಯ್ಕೆ ಮಾಡಿಕೊಳ್ಳುವುದು ಹೆಚ್ಚು. ಈ ರೀತಿಯ ಓದು ಕೆಲವೊಮ್ಮೆ ಓದಿನಿಂದ ನಮ್ಮನ್ನು ವಿಮುಖರನ್ನಾಗಿಸುತ್ತದೆ. ನಮ್ಮ ಇಷ್ಟದ , ಕ್ಷೇತ್ರ , ಲೇಖಕ , ಶೈಲಿ, ಭಾವನೆ, ಎಲ್ಲಾ ಒಬ್ಬರಿಂದೊಬ್ಬರಿಗೆ ಬೇರೆಯಾಗಿ ಪ್ರತಿಯೊಬ್ಬರಲ್ಲಿಯೂ ಬದಲಾಗೇ ಇರುತ್ತದೆ. ಹಾಗಾಗಿ ನಮಗೇನು ಬೇಕು ಎನ್ನುವುದನ್ನು ನಾವೇ ತಿಳಿದು ನಮ್ಮ ಆಯ್ಕೆಯನ್ನು ಖಾಸಗಿಯಾಗಿಟ್ಟುಕೊಳ್ಳುವುದು ಉತ್ತಮ. ನಮ್ಮ ಮನೆಗಳಲ್ಲಿನ ಪುಟ್ಟ ಗ್ರಂಥಾಲಯದಲ್ಲಿ ಬಹಳ ಪುಸ್ತಕಗಳಿದ್ದರೂ ನಮ್ಮ ಪ್ರೀತಿ ಪಾತ್ರ ಪುಸ್ತಕಗಳನ್ನೆ ಅಲ್ಲವೇ ನಾವು ಮೊದಲ ಸಾಲಿನಲ್ಲಿ ಜೋಡಿಸಿ ಬೇಕೆಂದಾಗ ಕೈಗೆಟಕುವಂತಿಟ್ಟುಕೊಂಡು ಜೋಪಾನವಾಗಿ ಕಾಯುವುದು.ಹಾಗೆ ಬೇರೆಯವರು ತಿಳಿಸಿದ ಒಳ್ಳೆಯ ಪುಸ್ತಕಗಳನ್ನು ಓದಬಾರದು, ಅದು ತಪ್ಪು, ಮಹಾಅಪರಾಧ, ಅಂತ ನಾನು ಖಂಡಿತ ಹೇಳಲಾರೆ. ನಮ್ಮ ಓದು ನಮ್ಮನ್ನು ಒಳಗಿನಿಂದ ಬೆಳೆಸುವಂತಿರಬೇಕು. ನಮ್ಮಲ್ಲಿ ವಿನಯವನ್ನು ಮೂಡಿಸುವಂತಿರಬೇಕು. ನಮ್ಮನ್ನು ಜ್ಞಾನದಾಹಿಗಳನ್ನಾಗಿಸುವಂತಿರಬೇಕು. ಅದರ ನಶೆ ನಮಗೆ ಬಲವಾಗುವಂತಿರಬೇಕು. ಮಾತು, ಮೌನದ ಬೆಲೆ ಸರಿಯಾಗಿ ತಿಳಿಸಿಕೊಡುವಂತಿರಬೇಕು. ಓದು ನಮ್ಮನ್ನು ಶುದ್ಧ ಮನುಷ್ಯರಾಗಿ ಮಾತ್ರವೇ ಉಳಿಸುವಂತಿರಬೇಕು.

“ಓದು ಮತ್ತೆ ಮತ್ತೆ ಓದು
ಓದು ಮತ್ತೆ , ಮತ್ತೆ ಓದು
ಓದು, ಮತ್ತೆ , ಮತ್ತೆ , ಓದು
ಮತ್ತು ಉಳಿಸಿಕೊ ಮತ್ತು ಹೆಚ್ಚಿಸಿಕೋ
ಓದು ಸುಮ್ಮನಿರಬೇಡ ”

ಕೆಲವೊಮ್ಮೆ ಸ್ವರ್ಗ ನಿದ್ದೆಯ ಕನಸುಗಳಂತೆ ಎಷ್ಟು ಅಚ್ಚರಿಯ ಕನಸುಗಳನ್ನು ನಾನು ಕಂಡದ್ದಿದೆ. ಹೀಗೊಂದೆರಡು ಕನಸುಗಳಿವೆ ಅವು ನನಗೆ ಇಂದಿಗೂ ಪ್ರಿಯವಾದವು. ನಾನು ಹುಚ್ಚನಂತೆ ಬೀದಿ ಬೀದಿ ತಿರುಗುತ್ತಿದ್ದೆ. ಜನಾ ನಾನಿದ್ದಲ್ಲಿಗೇ ಬಂದು ಪುಸ್ತಕಗಳನ್ನು ನನ್ನ ಪಕ್ಕಕ್ಕೆ ಗುಡ್ಡೆಗಳಂತೆ ರಾಶಿ ಹಾಕುತ್ತಿದ್ದರು. ಇಷ್ಟು ಮೊದಲಾರ್ಧದಂತೆಯೂ ಮತ್ತು ಇನ್ನೆಂದೊ ಒಮ್ಮೆ ಇದೇ ಕನಸು ಮುಂದುವರೆದು ಆ ಎಲ್ಲಾ ಪುಸ್ತಕಗಳನ್ನೂ ನಾನು ಒಂದೆಡೆ ಬಯಲಿನಲ್ಲಿ ಜೊಡಿಸಿಟ್ಟಂತೆಯೂ ಜನರಲ್ಲಾ ಇಡೀ ಬಯಲಿನಲ್ಲಿ ಕುಳಿತು ಪುಸ್ತಕಗಳನ್ನು ಓದುತ್ತಿರುವಂತೆಯೂ ಆಗ ನಾನು ಮಾತ್ರ ಅವುಗಳಲ್ಲಿ ಗೆದ್ದಲು ಹತ್ತಿದ ಕೆಲವನ್ನು ಒಂದೆಡೆ ಸೇರಿಸಿ ಗೆದ್ದಲು ಹುಳುಗಳಿಗೆ ಒಂದೊಂದೇ ಪುಟ ತಿನ್ನುಸುತ್ತಿರುವಂತೆಯೂ ಕನಸು ಕಂಡಿದ್ದೆನೆ. ಹಾಗು ಒಂದಿಡಿ ರಾತ್ರಿಯ ಕನಸಿನ ತುಂಬಾ ನಾನು ಪದ್ಯಗಳನ್ನು ಬರೆದು, ಜೋರಾಗಿ ಓದಿ ಹೇಳುತ್ತಾ ಎಚ್ಚರಗೊಂಡು ಆ ಪದ್ಯಗಳ ಕುರಿತು ಆ ಸಾಲುಗಳ ಕುರಿತು ತುಂಬಾ ಯೋಚಿಸಿದ್ದೇನೆ. ಆದರೆ ಈಗಲೂ ಒಂದೇ ಒಂದು ಸಾಲೂ ಕೂಡ ನನಗೆ ನೆನಪಾಗಿಲ್ಲಾ ಆದರೆ ನೆನಪಿಸಿಕೊಂಡಾಗಲೊಮ್ಮೆ ಆ ಕನಸು ಕಂಡಂತೆಯೇ ಯಥಾವತ್ತಾಗಿ ಮತ್ತೆ ಕಣ್ಮುಂದೆ ರೂಪುಗೊಳ್ಳುತ್ತದೆ. ಓದು ಇದನ್ನೇ ಮಾಡಬೇಕಿರುವುದು. ಗುಂಗು ಹಿಡಿಸುವ ಕೆಲಸ.