ನರ್ಸಪ್ಪಯ್ಯ ಹಳೆಯ ಫೆವರ್ಲೂಬಾ ಅಲಾರಾಮ್ ಗಡಿಯಾರ ನೋಡುತ್ತಾರೆ, ನಾಲ್ಕು ಗಂಟೆ ಹತ್ತು ನಿಮಿಷ ತೋರಿಸುತ್ತಿತ್ತದು. ತಾನು ಎದ್ದಾಗಲೂ ಅದು ಅದೇ ಟೈಮ್ ತೋರಿಸುತ್ತಿದ್ದುದ್ದು ನೆನಪಾಗಿ, ಹಿಂದಣ ದಿನ ಸಂಜೆಯೇ ಅದು ನಿದ್ರಾಪರವಶವಾಗಿದೆ ಎಂದೂ, ತಾನು ಕೀ ಕೊಡಲು ಮರೆತು ಹೋಗಿದ್ದೂ ನೆನಪಾಗಿ ಒಲೆಗಳ ಕಟ್ಟಿಗೆ ಹಿಂದೆ ಮಾಡಿ ಗ್ಯಾಸ್ ಲೈಟ್ ಆರಿಸಿ ತಗಣೆಗಳ ಸೈನ್ಯವಿರುವ ಬೆಂಚಿಗೆ ತನ್ನ ಬೆನ್ನು ಬಲಿಕೊಟ್ಟರು. ಗಣಪು ಗೋಣಿತಟ್ಟಿನ ಹಂಸತೂಲಿಕಾ ತಲ್ಪದಲ್ಲಿ ಪವಡಿಸಿ, ಅಷ್ಟರಲ್ಲೆ ಕಾಳಿಂಗನ ಸ್ತ್ರೀವೇಷ ಮನಸ್ಸಿಗೆ ಬಂದು ಅಮ್ಮನಿಗೆ ಹೇಳಿ ಮೇಳಕ್ಕೆ ಸೇರುವುದೇ ಸರಿ ಎಂದು ನಿರ್ಧರಿಸುವಷ್ಟರಲ್ಲಿ ಆತನಿಗೆ ನಿದ್ದೆ ಬಂದು ಬಿಟ್ಟಿತು.
ಡಾ. ಬಿ. ಜನಾರ್ದನ ಭಟ್ ಸಾದರಪಡಿಸುವ ಓಬಿರಾಯನ ಕಾಲದ ಕಥಾಸರಣಿಯಲ್ಲಿ ವ್ಯಾಸರಾವ್ ನಿಂಜೂರರು ಬರೆದ ಕಥೆ ‘ಗರಡಿ ಮಜಲಿನ ಗಾಂಧಿ’

 

ಒಲೆಯ ಮೇಲಿನ ಚರಿಗೆಯಲ್ಲಿ ನೀರು ಹಬೆಯಾಡುತ್ತಿತ್ತು. ಮಬ್ಬುಗತ್ತಲಲ್ಲೆ ಬೂದಿಯ ನಡುವೆಲ್ಲೋ ಅವಿತುಕೊಂಡ ಪಾವಾಣೆಯ ಪಾವಲಿಯನ್ನು ಚರಿಗೆಗೆ ಹಾಕಿದಾಗ, ನೀರಿನ ಕುದಿತಕ್ಕೆ ಸರಿಯಾಗಿ ಅದು ನರ್ತನ ಮಾಡುತ್ತ ಕಿಣಿಕಿಣಿಸಲಾರಂಭಿಸಿತು. ಮೊನ್ನೆಯೊ ಆಚೆ ಮೊನ್ನೆಯೊ ಬಯಲಾಟದಲ್ಲಿ “ಚಿಕ್ಕ ಪ್ರಾಯದ ಬಾಲೇ ಚದುರೆ….” ಎನ್ನುವ ಎಂಥದ್ದೊ ಭಾಗವತರ ಹಾಡಿಗೆ ಸ್ತ್ರೀವೇಷದ ಕಾಳಿಂಗ ಕೈಗಳನ್ನು ಮಣಿಸುತ್ತ, ಕುಣಿಸುತ್ತ, ಅಂಗೈಯನ್ನು ಹೇಗೆ ಹೇಗೊ ತಿರುಗಿಸುತ್ತ ಮದ್ದಳೆಯ ಬಿಡ್ತಿಗೆಗೆ ಸರಿಯಾಗಿ ಗೆಜ್ಜೆಕಾಲುಗಳನ್ನಿಡುತ್ತ ಕುಣಿಯುತ್ತಿದ್ದುದು ಈಗ ಅವನಿಗೆ ನೆನಪಾಯಿತು. ಸ್ತ್ರೀವೇಷ ಮುಗಿದು ಒಡ್ಡೋಲಗ ಆಗುವಷ್ಟರಲ್ಲೆ ಭಯಂಕರ ನಿದ್ದೆ ಬಂದು ಆತ ಮಲಗಿ ಬಿಟ್ಟಿದ್ದ. ಈ ಪಾವಾಣೆಯ ಕಿಣಿಕಿಣಿಗೆ ಕಾಳಿಂಗ ಹೇಗೆ ಕುಣಿದಾನು ಎಂದು ಯೋಚಿಸುತ್ತ ಕುಳಿತವನಿಗೆ ಕಣ್ಣು ಕೂರಲಾರಂಭಿಸಿತು. ಇನ್ನು ಹೀಗೆ ಕೂತರೆ ಯಾಪಾರ ಕೋಚಾದೀತು ಎಂದು ನೆನೆದವನೆ ಒಲೆಯ ಕಟ್ಟಿಗೆ ಮುಂದೆ ಮಾಡಿ, ಹಸ್ತ ಚಾಚಿ ಅವುಗಳನ್ನು ಬೆಚ್ಚಗೆ ಮಾಡಿಕೊಂಡು ಕಣ್ಣಿಗಿರಿಸಿಕೊಂಡಾಗ `ಅಯ್ಯಬ್ಬ’ ಎನಿಸಿತು.

ಈಗ ಲೈಟು ಹಚ್ಚಬೇಕು. ತಿಂಡಿಯ ನರ್ಸಪ್ಪಯ್ಯ ಚಿಮಣಿ ದೀಪದ ಬೆಳಕಲ್ಲೆ ಅವಲಕ್ಕಿ ಉಪ್ಪುಕರಿ, ಉಪ್ಪಿಟ್ಟು ಮಾಡಿ ಈಗ ಇಡ್ಲಿ ಅಟ್ಟೆ ಇಳಿಸುತ್ತಿರಬೇಕು. ಅವರು ಸೇದುತ್ತಿದ್ದ ಬೀಡಿಯ ಆಪ್ಯಾಯಮಾನವಾದ ಸುಗಂಧ ಇವನ ಮೂಗಿನ ಹೊರಳೆ ಬಿಡಿಸುತ್ತಿದ್ದಂತೆ, ಪೆಟ್ರೊಮ್ಯಾಕ್ಸ್ ಗೆ ಪಂಪ್ ಹೊಡೆಯಲಾರಂಭಿಸಿದ. ಸ್ಪಿರಿಟ್ ನ ಬೆಂಕಿ ಆರಿ, ಚಿಮಣಿ ಎಣ್ಣೆ ಚಿಮ್ಮಿ ಲೈಟ್ ಒಮ್ಮೆಗೇ ಉರಿದು ಮಹಾ ಬೆಂಕಿ ಹತ್ತಿಕೊಂಡಾಗ ಬೆದರಿದವನು ಗಾಳಿ ತೆಗೆದ. `ಎಂಥದಾಯ್ತನ’ ಎಂದು ಒಳಗಿಂದ ಓಡಿ ಬಂದ ನರ್ಸಪ್ಪಯ್ಯ ಮತ್ತೊಮ್ಮೆ ಸ್ಪಿರಿಟ್ ಇಕ್ಕಿ ಗ್ಯಾಸ್ಲೈಟ್ ಹಚ್ಚಿದರು. “ನಿನ್ಗೆ ಅವಸರ, ಸ್ವಲ್ಪ ಬಿಸಿಯಾಗುವ ಮೊದಲೇ ಪಂಪ್ ಹೊಡೆಯುವ ಆತುರ. ಹಡೆ ಎಲ್ಲಾದರೂ” ಎಂದು ಬೈಗುಳ ಧಾಟಿಯಲ್ಲೆ ಗದರಿಕೊಂಡು ಮತ್ತೇನೊ ನೆನೆಸಿಕೊಂಡು ನೆಗಾಡಿದ್ದಕ್ಕೆ ಇವ ಕಕ್ಕಾಬಿಕ್ಕಿಯಾದ.

ಹೊರಗೆ ಬಲೆ ಬಗಲಿಗೇರಿಸಿಕೊಂಡು, ವಸ್ತ್ರದಲ್ಲಿ ಕಟ್ಟಿಕೊಂಡ ಬುತ್ತಿಯನ್ನು ಕೈಯಲ್ಲಾಡಿಸುತ್ತ, ಚಳಿಗಾಗಿ ಹೊದೆದುಕೊಂಡ ಮೇಲುವಸ್ತ್ರ ಸರಿಪಡಿಸಿಕೊಳ್ಳುತ್ತ, ಕೆಲವರು ಕೊಟ್ಟು ಹೊದೆಯುತ್ತ ಕವಳದ ರಸವನ್ನು ಉಗುಳಿ, ಮಾತಿಗೆ ತವಕಿಸುವ, ಬೀಡಿಯ ಹೊಗೆ ನೆತ್ತಿಗೇರಿ ಕೆಮ್ಮುವ, ಕೈ ರಂಪಣಿ ಬಲೆಯ ಕಲಾಸಿಗಳು ಓಣಿಯಲ್ಲೆಲ್ಲೊ ಬರುತ್ತಿರಬೇಕು. ಅದಕ್ಕೇ ಇಂತಹ ಸದ್ದು. ಈಗ ಬಾಗಿಲು ತೆಗೆಯದಿದ್ದರೆ ಬೆಳಗ್ಗಿನ ವ್ಯಾಪಾರ ಪಡ್ಚ ಆದಂತೆಯೇ. ಇನ್ನು ಕಲಾಸಿಗಳಲ್ಲಿ ತುಕ್ರನಿದ್ದರಂತೂ ಬಯಲಾಟದ ಬಣ್ಣದ ವೇಷದಂತೆ ಆರ್ಭಟ ಕೊಡುವವನೆ! “ಏಯ್, ಗಣಪ್ಪ… ನಿನಗೇನಾಯ್ತು ಶನಿ ಹಿಡಿದವನೆ. ಚಳಿಯಲ್ಲಿ ಮರಗಟ್ಟಿ ಹೋದವ ನಾನು. ಒಂದು ಬಿಸಿನೀರು ಬಾಯಿಗೆರೆದುಕೊಳ್ಳುವ ಎಂದರೆ ಬಂದು ಮಾಡಿ ಕೂತಿದ್ದಿಯಲ್ಲ. ನಸ್ರಾಣಿ, ತೆಗೆಯೋ ಬಾಗಿಲು” ಎಂದೆಲ್ಲ ಆತ ಕೂಗಾಟ ನಡೆಸಿದರೆ ಒಡೆಯ ಎದ್ದು ತನಗೆ ತಪರಾಕಿ ಬಿಗಿಯದಿರಲಿಕ್ಕಿಲ್ಲ ಎಂದು ಎಣಿಸಿದವನೇ, ಕೋಳ ಬೀಗದ ಕೀಲಿಕೈಯನ್ನು ಹಿಡಿದುಕೊಂಡು ಹಿಂಬಾಗಿಲ ಮೂಲಕ `ಗಣಪತಿ ವಿಲಾಸ, ಟೀ ಕಾಫಿ ಕ್ಲಬ್’ ಎಂದು ಪಂಚಾಯಿತಿ ಬೋರ್ಡ್ ನವರ ದೀಪಕಂಭದ ಬೆಳಕಿನಲ್ಲಿ ಢಾಳಾಗಿ ರಾರಾಜಿಸುವ ಬೋರ್ಡುಳ್ಳ ಹಲಗೆ ಬಾಗಿಲು ಜಡಿದ ಹೋಟೇಲಿನ ಎದುರು ಬಂದು ಹಲಗೆ ಬಾಗಿಲುಗಳನ್ನೆಲ್ಲ ಸರಳೊಂದರಿಂದ ಬಂಧಿಸಿ ಕೋಳ ಬೀಗ ಹಾಕಿದ್ದನ್ನು ಕೀಲಿಕೈಯಿಂದ ತೆರೆದು ಒಮ್ಮೆ ಬಾಗಿಲುಗಳತ್ತ ದೃಷ್ಟಿ ಹರಿಸಿದ ಗಣಪುವಿಗೆ ಚಡ್ಡಿಯಲ್ಲಿ ಉಚ್ಚೆ ಜಿನುಗುವಷ್ಟು ಹೆದರಿಕೆಯಾಗಿಬಿಟ್ಟಿತು. ದಿಗ್ಭ್ರಾಂತನಾದ ಹುಡುಗ, ಬಾಗಿಲುಗಳ ಮೇಲೆ ಬರೆದ ಅಕ್ಷರಗಳು ಖಂಡಿತ ಮಾಟ ಮಾಡಿದ್ದಕ್ಕೆ ಸಾಕ್ಷಾತ್ ಪುರಾವೆ ಎಂದುಕೊಂಡು, ಒಮ್ಮೆ ನರ್ಸಪ್ಪಯ್ಯನನ್ನು ಕರೆಯಲೆ ಎಂದೆಣಿಸಿದ.

ಈ ವಿಲೇವಾರಿ ಎಲ್ಲ ಧಣಿಗಳಿಗೆ ಹೇಳಬೇಕೆ ಹೊರತು ಈ ದರ್ವೇಶಿ ನರ್ಸಪ್ಪಯ್ಯನಿಗಲ್ಲ ಎಂದು ನಿರ್ಧರಿಸಿದವನು ಕಣ್ಣನ್ನು ತಿಕ್ಕಿಕೊಂಡು ಬಾಗಿಲುಗಳ ಹಲಗೆಗಳ ಮೇಲೆ ಬರೆದ ಅಕ್ಷರಗಳತ್ತ ಪುನಃ ಕಣ್ಣಾಡಿಸಿದ. ಮೂರನೇ ಕ್ಲಾಸಿನಲ್ಲಿ ನಪಾಸಾದ ಆತ ಕಷ್ಟಪಟ್ಟು ಓದಿದಾಗ ಆತನಿಗೆ ಕವಿದ ಹೆದರಿಕೆ ಇನ್ನಷ್ಟು ಹೆಚ್ಚಾಯಿತು. ವ..ಯ…ಸ್ಕ..ರಿ…ಗೆ… ಶಿ…ಕ್ಷ.. ಇಷ್ಟು ಓದಿದವನಿಗೆ ಕೈಕಾಲುಗಳು ದರ್ಶನ ಪಾತ್ರಿಯಂತೆ ಕಂಪಿಸಲಾರಂಭಿಸಿದವು. ಈ ನಡುಕವೂ ಮಾಟದ್ದೆ ಪ್ರಭಾವವೋ ಏನೊ ಎಂದುಕೊಂಡ ಅವ, ಈಗ ಹೂನೀರು ಕೊಟ್ಟಲ್ಲಿ ತನಗೆ ದರ್ಶನ ಬರುವುದು ಖಾತ್ರಿಯಪ್ಪ. ಈಗ ಒಡೆಯರಿಗೆ ತಿಳಿಸದೆ ಬೇರೆ ನಿರ್ವಾಹವಿಲ್ಲ ಎಂದು ವಾಪಾಸು ಹಿಂಬಾಗಿಲಿಗೆ ಓಡಿ, ಅಟ್ಟದ ಮೇಲೆ ಹೋಗಲು ಇರಿಸಿದ್ದ ಏಣಿಯನ್ನು ಏರಿ “ಒಡೆಯಾ, ಒಡೆಯಾ.. ಏಳಿನಿ.. ಕಾಣಿ… ಮ…ಮಾಟ ಕಾಂತ್” ಎಂದು ಮಲಗಿದ ಧಣಿಯನ್ನು ಕರೆಯುವಷ್ಟರಲ್ಲಿ ಆತನ ದೊಂಡೆ ಪಸೆ ಆರಿ ಹೋಗಿತ್ತು. ಈ ಮಧ್ಯೆ ರಂಪಣಿಯ ಕಲಾಸಿಗಳು ಚಾ ಕುಡಿಯದೆ ಹೋಗಿಯೇ ಬಿಟ್ಟರೊ ಏನು ಕಥೆ, ಇವತ್ತು ಯಾರು ಇನ್ನು ಬೋಣಿ ಮಾಡುತ್ತಾರೊ, ದೇವ್ರೆ ನೀನೇ ಕಾಪಾಡಪ್ಪ ಎಂದು ಮಣ ಮಣ ಪ್ರಾರ್ಥಿಸಿಕೊಂಡ.

ಚಳಿಯ ಪೆಟ್ಟು ತಾಳಲಾರದೆ, ಗರ್ಭಸ್ಥ ಶಿಶುವಿನ ಪೋಸಿನಲ್ಲಿ ಮಲಗಿಕೊಂಡು, ನಸುಕು ಹರಿಯುವ ಜಾವ, ಜೋಡು ಜಾವಗಳ ಹಿಂದಿನ ಸವಿನಿದ್ದೆಯ ನಡುವೆ, ಗಣಪ ಹುಡುಗನ ಹೆತ್ತಬ್ಬೆ ಕಲ್ಯಾಣಿಯ ದುತ್ತನೆ ಎದ್ದು ನಿಂತ ದಪ್ಪ ಮೊಲೆಗಳನ್ನೆ ಕನಸಲ್ಲಿ ಕಾಣುತ್ತ, ಹರ್ನಿಯಾ ಹಿಡಿದ ಬೀಜಗಳ ನಡುವಿಂದ ಕುಂಬಳದ ತೊಟ್ಟಿನಂತೆ ಎದ್ದು ನಿಂತುದನ್ನು ತೊಡೆಯೆಡೆಗೆ ಅಮುಕುತ್ತ ಸುಖಿಸುತ್ತಿದ್ದ ಮರ್ತಪ್ಪ ಪ್ರಭುಗಳಿಗೆ, ಗಣಪನ ಕೂಗಿನಿಂದ ಎಲ್ಲಿಲ್ಲದ ಸಿಟ್ಟು ಅರೆನಿದ್ದೆಯಲ್ಲೆ “ಎಂಥದಾ ಒಡು, ಮನ್ಕೊ ಕಾಂಬ” ಎಂದು ಗದರಿಸಿದ್ದೇ, ಹುಡುಗನಿಗೆ ಹೆದರಿಕೆಯಲ್ಲಿ ಜಕಣಿ ಹಿಡಿದಂತಾಗಿ “ಒಡ್ಯಾ, ಅಯ್ಯಾ, ಬಾಗ್ಲಲ್ಲಿ ಮಾಟ ಬರ್ದಿತ್ತ್, ಏಳಿನಿ, ಕಾಣಿನಿ” ಎಂದು ಅಲವತ್ತುಕೊಂಡ.

ಹೊದಿಕೆಯನ್ನು ಕೊಡವಿ, ಅದರ ಧೂಳಿನಿಂದ ಉಂಟಾದ ಮೂಗು ಕೆರೆತಕ್ಕೆ ಘೋರವಾಗಿ ಸೀನು ಸೀನಿದ ಪ್ರಭುಗಳು ಗಣಪುವನ್ನು ಶಪಿಸುತ್ತಲೇ ಎದ್ದವರು ಅರೆ ಅನುಮಾನ, ಅರೆ ಭಯದಿಂದಲೇ ಹುಡುಗನನ್ನು ಹಿಂಬಾಲಿಸುತ್ತ ನಡುವೆ “ಇವನದೆಂಥ ಅವತಾರ ನರ್ಸಪ್ಪಯ್ಯ, ಅವನಿಗೆ ಸ್ವಯ ಇಲ್ಲಾಂತ ಮಾಡುವ. ನಿಮಗೂ ಅಕಲು ಇಲ್ಲವಾ. ಎಂಥದೊ ಮಾಟ ಗೀಟ ಅಂತಾನಲ್ಲ. ನೋಡಬಾರದಿತ್ತೆ. ಒಟ್ಟಾರೆ ನಿಮ್ಮ ಗಲಾಟೆಯಲ್ಲಿ, ನಮಗೊಂದು ನಿದ್ದೆ ಮಾಡುವ ಅದೃಷ್ಟವೂ ಇಲ್ಲ” – ಎಂದು ಗೊಣಗಿಕೊಂಡರು. ನರ್ಸಪ್ಪಯ್ಯ ಏನೋ ಸಬೂಬು ಹೇಳುವಷ್ಟರಲ್ಲಿ, ಇನ್ನೆಲ್ಲಿ ಜನ ಕೆಲಸ ಬಿಟ್ಟು ಹೋಟೆಲನ್ನು ಅನಾಥ ಬಿಡುತ್ತದೊ ಎನ್ನುವ ಭೀತಿಯಲ್ಲಿ “ಆಯ್ತಾಯ್ತು. ನೀವೂ ಬನ್ನಿ. ಬಾಗ್ಲಲ್ಲಿ ಯಾವ ಬೇವರ್ಸಿ, ಎಂಥ ಬರೆದಿದ್ದಾನೆ. ಅವನ ಮನೆ ಹಾಳಾಗ್ಲಿಕ್ಕೆ ನೋಡಿ ಬಿಡುವ” ಎಂದು ನರ್ಸಪ್ಪಯ್ಯನನ್ನೂ ಆಹ್ವಾನಿಸಿದರು. ಇಡ್ಲಿ ಅಟ್ಟೆ ಇರಿಸಿದ ಒಲೆಯ ಬೆಂಕಿಯ ದಾವಿಗೆ ಸೆಲೆಯೊಡೆದ ಕಂಕುಳ ಬೆವರನ್ನು ಕಪ್ಪುಗಟ್ಟಿದ ನೀರು ಕಂಡಿರದ ಬೈರಾಸದಿಂದ ಒರಸಿಕೊಂಡು, ಅದೇ ಬೈರಾಸವನ್ನು ಬಲೆ ಇರುವ ಬನೀನಿನ ಮೇಲೆ ಹೊದ್ದುಕೊಂಡು ನರ್ಸಪ್ಪಯ್ಯನೂ, ಹಿಂಬಾಗಿಲಿಂದ ಧಣಿಯ ಜೊತೆ ಹೊರಟರು. ಗಣಪುವಿಗೀಗ ಧೈರ್ಯ ಸ್ವಲ್ಪ ಬಂದಿತ್ತು. ಮಾಟ-ಗೀಟ ಇದ್ದರೆ ಹಳೆ ಚಪ್ಪಲಿಯಿಂದ ಹೋಗುತ್ತದೆ ಎಂದು ಚಾ ಕುಡಿಯುವಾಗ ಶಂಕ್ರ ಪಾತ್ರಿ ಹೇಳಿದ್ದು ನೆನಪಾಗಿ ಮಡಲಿನ ತಟ್ಟಿಯಲ್ಲಿ ಸಿಕ್ಕಿಸಿದ್ದ ಧಣಿಯ ಜೋಡಿನಿಂದ ಒಂದನ್ನು ತೆಗೆದು ಆಯುಧಸನ್ನದ್ಧನಾದ.

ಹಿಂಬಾಗಿಲಿನಿಂದ ಹೊರಟ ಮರ್ತಪ್ಪ ಪ್ರಭುಗಳ ಕಿರುಸೈನ್ಯ ನಾಲ್ಕು ಹೆಜ್ಜೆ ಕ್ರಮಿಸಿ ಹಲಸಿನ ಮರದ ಕಟ್ಟೆಯವರೆಗೆ ಬಂದಿತ್ತಷ್ಟೆ. ಮರ್ತಪ್ಪಯ್ಯನಿಗೆ ಸ್ವಲ್ಪ ಸ್ವಲ್ಪವೇ ಭಯ ಉಂಟಾಗಲು ಆರಂಭವಾಗಿತ್ತು. ಈ ಗಡೆ ಹೇಳುವುದು ನಿಜವಾಗಿರಬಹುದೆ? ಯಾರು ಮಾಟ ಮಾಡುತ್ತಾರೆ? ಮಾಡಿದರೆ ಕೊರಳಿಗೆ ನೇಣು ಬಿಗಿದು ಸತ್ತ ತನ್ನ ಹೆಂಡತಿಯ ಅಣ್ಣ ಮಾಧವ ಕಿಣಿ, ಇಲ್ಲವಾದರೆ ತನ್ನ ಹೋಟೆಲಿನ ಒಳ್ಳೆ ಯಾಪಾರ ನೋಡಲಿಕ್ಕಾಗದ ಎದುರಂಗಡಿಯ ಶಾಂಭಟ್ಟ. ಮಾಧವ ಕಿಣಿ-ರಂಡೆಪುತು-ಊರಲೆಲ್ಲ ಹೇಳಿ ತಿರುಗುತ್ತಾನೆ. ತನ್ನ ತಂಗಿಯನ್ನು ಕೊಂದಿದ್ದು ಭಾವನೆ, ಅದು ಆತ್ಮಹತ್ಯೆಯಲ್ಲ ಅಂತ. ಇವತ್ತು ಗುರುವಾರ ರಾಯರ ದಿನ, ಇವತ್ತು ಶನಿವಾರ, ಎಣ್ಣೆ ಹಾಕುವ ದಿನ, ಇವತ್ತು ಮಂಗಳವಾರ, ಗಣಪತಿಯ ದಿನ, ಇವತ್ತು ಸೋಮವಾರ ಒಪ್ಪೊತ್ತಿನ ಪವಿತ್ರ ದಿನ, ಅಮಾವಾಸ್ಯೆ, ಸಂಕ್ರಾಂತಿ, ಏಕಾದಶಿ ಎಂದೆಲ್ಲ ಹತ್ತಿರ ಹೋದಾಗ ಹಾಲು ಕರೆಯಲು ಬಿಲ್ಕುಲ್ ಬಿಡದ ಹಡೆ ದನದಂತೆ ಒದೆಯುತ್ತಿದ್ದ ಮಾಲಸಾಳಿಂದಾಗಿಯಲ್ಲವೆ ತನಗೆ ತೊಗಲು ಬೇಟೆಯ ತುರ್ತು ಬಂದದ್ದು. ಯಾವುದೇ ದೇವರು ದಿಂಡರುಗಳು ಕೃಪೆ ಮಾಡದ ದಿನಗಳಾದರೂ ಆಕೆ ಅರಳುವುದುಂಟೆ? ಕೆಂಪಾಗಿ ಬಿಡುತ್ತಿದ್ದಳು ಶನಿ ಮುಂಡೆ. ರೇತಸ್ಸಿನ ಸದುಪಯೋಗವಾಗದಿದ್ದಲ್ಲಿ ಅದು ಸೀದಾ ಶಿರಸ್ಸಿನತ್ತ ನಡೆದು ಅಲ್ಲಿಂದಲೇ ಆವಿಯಾಗುವುದರಿಂದ ಮನುಷ್ಯನಿಗೆ ನಾನಾ ತರದ ಕಾಹಿಲೆ ಕಸಾಲೆಗಳು ಉಂಟಾಗುತ್ತವಂತೆ. ಹುಚ್ಚಾಗುವುದೂ ಉಂಟಂತೆ. ಹಾಗಂತ ಹರಿಕಥೆಯಲ್ಲಿ ಹೇಳಿಲ್ಲವೆ ಬ್ರಹ್ಮಶ್ರೀ ಶ್ರೀನಿವಾಸ ದಾಸರು! ತನಗೆ ಕೆಳಗೆ ಊದಿಕೊಂಡದ್ದೂ ರೇತಸ್ಸು ಮಡುಗಟ್ಟಿದ್ದರಿಂದಲೇ. ಮತ್ತೆ ಒಮ್ಮೆ ಮಾಲಸಾಳ ಮೊಣಕಾಲಿನ ಪೆಟ್ಟು ಬಿದ್ದು ಸತ್ತೇ ಬಿಟ್ಟೆ ಅನ್ನುವಂತಹ ಪ್ರಾಣಾಂತಿಕ ನೋವು ಉಂಟಾದದ್ದು. ಅದಕ್ಕಲ್ಲವೇ ತಾನು ಪರಿಹಾರ ಮಾರ್ಗ ಕಂಡುಕೊಂಡದ್ದು?

ಪರಿಹಾರ ಮಾರ್ಗದ ಯೋಚನೆ ಹೊಳದದ್ದೆ ಮರ್ತಪ್ಪಯ್ಯನಿಗೆ ಫಕ್ಕನೆ ತನ್ನ ಬ್ಯಾಟರಿಯ ನೆನಪು ಬಂತು. ಪಂಚಾಯತಿ ಬೋರ್ಡ್ ನ ಲೈಟ್ ನಲ್ಲಿ, ಹೋಟೆಲಿನ ಒಟ್ಟು ಒಂಭತ್ತು ಹಲಗೆಗಳುಳ್ಳ ಬಾಗಿಲುಗಳು ಸ್ಪಷ್ಟ ಕಾಣುವುದೇನೊ ಹೌದು. ಏನೊ ಬರೆದಿದೆಯಂಥಲ್ಲ. ಅದಕ್ಕೆ ಬ್ಯಾಟರಿ ಇದ್ದರೆ ಮೇಲು ಎಂದೆಣಿಸಿದ ಮರ್ತಪ್ಪಯ್ಯ “ಹೋಗ್ ಗಡೆ, ಬ್ಯಾಟರಿ ಹಿಡ್ಕಂಡ್ ಬಾ” ಎಂದು ಆಣತಿ ಇತ್ತರು.

ಗಣಪುವಿಗೆ ಈಗ ಉಭಯ ಸಂಕಟವಾಗಿ ಬಿಟ್ಟಿತು. ಬೆಳಿಗ್ಗೆ ಮೀನು ಹಿಡಿಯಲು ಹೋಗುವ ಬೆಸ್ತರದ್ದೆ ಮಾತುಕತೆ ತನಗೆ ಕೇಳಿಸಿದ್ದು ನಿಜವಾಗಿದ್ದಲ್ಲಿ ಅವರೀಗ ಓಣಿ ಕಳೆದು ಹೋಟೆಲಿರುವ ರಸ್ತೆ ಬದಿಗೆ ಬರಬೇಕಿತ್ತು. ಇನ್ನೂ ಬಂದಿಲ್ಲ. ಅಂದರೆ ಇದು ಬೆಳಕಿನ ಜಾವ ಅಲ್ಲ. ನಡು ಇರುಳೊ ಎಂಥದೊ. ಆ ಮಾತುಕತೆ ಎಲ್ಲ ಕುಲೆಗಳದ್ದೇ ಇರಬೇಕು. ಪುನಃ ಅವನಿಗೆ ಏಕ್ದಮ್ ಭಯವಾಗಿ “ನಂಗೆಡ್ಯ, ನಂಗ್ ಹೆದರಿಕೆ ಆತ್ತ್”- ಎಂದು ಮಣಮಣಿಸಿಬಿಟ್ಟ. “ಬಾ ಮಾರಾಯಾ, ನಾನು ಬತ್ತೆ, ನೀ ಒಂದು ಗಂಡ್ಸು ಮಾರಾಯ. ಚಡ್ಡಿಯೊಳಗಿಪ್ಪುದು, ಗಂಡಸ್ತನವೊ, ಮುಗುಡೆ ಮೀನೊ” ಎಂದು ತನ್ನ ಬಪ್ಪರಿಗೆ ತಾನೆ ನೆಗಾಡುತ್ತ ಆತನ ಕೈಹಿಡಿದು ಎಳಕೊಂಡು ಹೋದ ನರ್ಸಪ್ಪಯ್ಯ ಬ್ಯಾಟರಿಯೊಂದಿಗೆ ಪ್ರತ್ಯಕ್ಷರಾದರು.

ಈಗ ಮೂವರು ಭಟರ ತಂಡ `ಗಣಪತಿ ವಿಲಾಸ’ದ ಎದುರಿಗೆ ಬರುತ್ತಿದ್ದಂತೆ “ಕುಂಕುಮ ಕೋಲು ನೆಣೆ, ಲಿಂಬೆಹಣ್ಣು, ಬೂದುಕುಂಬಳ ಎಂಥಾದರೂ ಇತ್ತನಾ” – ಎಂದು ಅರೆಭಯದಿಂದಲೇ ಮರ್ತಪ್ಪಯ್ಯ ಗಣಪುವನ್ನು ಪ್ರಶ್ನಿಸಿದ್ದಕ್ಕೆ ಆತ “ನಾ ಕಂಡಿಲ್ಲಪ್ಪ” ಎಂದು ತೊದಲಿದ. “ನೀ ಮತ್ತೆಂಥ ಕಂಡದ್ದು… ಅಬ್ಬೆ…?” ಎಂದು ಅಶ್ಲೀಲವಾಗಿ ಬಯ್ದವರು ಬಾಗಿಲ ಕೆಳಗೆ ಬ್ಯಾಟರಿ ದೀಪ ಹರಿಸಿ ಕುಂಕುಮ ಕೋಲುನೆಣೆ ಇತ್ಯಾದಿ ಇಲ್ಲದ್ದು ಖಚಿತಪಡಿಸಿಕೊಂಡು ಸ್ವಲ್ಪ ಸ್ವಸ್ಥರಾದರು. ಬಾಗಿಲುಗಳ ಮೇಲೆ ಸ್ಪಷ್ಟ ಬರೆದುದನ್ನು ಓದದಷ್ಟು ಅವಿದ್ಯಾವಂತರಲ್ಲ ಪ್ರಭುಗಳು. ದಿನಪತ್ರಿಕೆ ಓದುವಷ್ಟು ವಿದ್ಯಾಪಾರಂಗತರಾದ ಅವರು, “ವಯಸ್ಕರ ಶಿಕ್ಷಣ ಕೊಡಲಾಗುತ್ತದೆ. ಎಲ್ಲರಿಗೆ ಸ್ವಾಗತ. ಗರಡಿಮಜಲು ಶಾಲೆಗೆ ಸಂಜೆ ಬನ್ನಿ” – ಎಂದು ಬರೆದುದನ್ನು ಓದಿದ ಮರ್ತಪ್ಪಯ್ಯ ಈ ಆಸಾಮಿಗೆ ಬೇರೆ ದಂಧೆ ಇಲ್ಲ. ಒಟ್ಟು ಒಂದು ಸುತ್ತು ಕಡಿಮೆ ಎಂದುಕೊಂಡವರು, ಇನ್ನೂ ಅನುಮಾನದಲ್ಲೆ ಬೆಕ್ಕಿನ ಮೀಸೆ ದರ್ಶನಕ್ಕೆ ಬೆದರಿದ ಚಿಕ್ಕಿಲಿಯಂತೆ ಬೋಳೆ ಕಣ್ಣು ಬಿಡಿಸಿ ನೋಡುತ್ತಿದ್ದ ಗಣಪುವಿಗೆ, “ಮಾಟ, ಮಣ್ಣು, ಮಸಣ ಎಂಥದ್ದೂ ಇಲ್ಲ ಮಾರಾಯ. ಇದೆಲ್ಲ ನಮ್ಮ ತೋಡುಬಳಿ ಶಿವರಾಮಯ್ಯನವ್ರ ಕೆಲಸ. ಬನ್ನಿ ಹೋಪ” ಎಂದು ತಮ್ಮ ಭಟ್ಟರ ಜೊತೆ ಹೋಟೆಲಿನ ಒಳ ಹೊಕ್ಕವರು ವಾಚು ನೋಡುತ್ತಾರೆ. ಎರಡು ಗಂಟೆ ಹತ್ತು ನಿಮಿಷ. ಮರ್ತಪ್ಪಯ್ಯನಿಗೆ ಏಕ್ಸಾನ್ ಸಿಟ್ಟು ಬಂದುಬಿಟ್ಟಿತು. ಆದರೆ ಪ್ರಯೋಗಿಸುವಂತಿಲ್ಲ. ತಿಂಡಿಗೂ, ಸಪ್ಲೈ, ಗಲ್ಲಕ್ಕೂ ಸವ್ಯಸಾಚಿಯಾಗಿ ನಿಲ್ಲಬಲ್ಲ ಏಕೈಕ ವೀರಾಗ್ರಣಿ ಈ ನರ್ಸಪ್ಪಯ್ಯ. ಒಂದು ವರ್ಷ ಸರ್ವೀಸಾಗಿತ್ತು ಬೇರೆ. ಸಿಟ್ಟಿನ ಭರದಲ್ಲಿ ಏನಾದರೂ ಅಂದು, ಈ ಕುಳುವಾರಿ ಜಾಗ ಖಾಲಿ ಮಾಡಿದರೆ ತಾನೊಬ್ಬನೆ ವದ್ದಾಡಲಿಕ್ಕಾದೀತೆ? ಎಂದೆಲ್ಲ ಎಣಿಸಿದವರು, “ಟೈಮ್ ನೋಡಲಿಕ್ಕಿಲ್ಲವಾ, ನರ್ಸಪ್ಪಯ್ಯಾ, ನಡುರಾತ್ರಿಗೆದ್ದು ಹೋಟೆಲ್ ತೆರೆಯುವುದ? ಎಂಥ ಕಥೆ ನಿಮ್ಮದು” ಎಂದು ಮೆತ್ತನೆ ಆಕ್ಷೇಪಿಸಿದರು.

ನರ್ಸಪ್ಪಯ್ಯ ಹಳೆಯ ಫೆವರ್ಲೂಬಾ ಅಲಾರಾಮ್ ಗಡಿಯಾರ ನೋಡುತ್ತಾರೆ, ನಾಲ್ಕು ಗಂಟೆ ಹತ್ತು ನಿಮಿಷ ತೋರಿಸುತ್ತಿತ್ತದು. ತಾನು ಎದ್ದಾಗಲೂ ಅದು ಅದೇ ಟೈಮ್ ತೋರಿಸುತ್ತಿದ್ದುದ್ದು ನೆನಪಾಗಿ, ಹಿಂದಣ ದಿನ ಸಂಜೆಯೇ ಅದು ನಿದ್ರಾಪರವಶವಾಗಿದೆ ಎಂದೂ, ತಾನು ಕೀ ಕೊಡಲು ಮರೆತು ಹೋಗಿದ್ದೂ ನೆನಪಾಗಿ ಒಲೆಗಳ ಕಟ್ಟಿಗೆ ಹಿಂದೆ ಮಾಡಿ ಗ್ಯಾಸ್ ಲೈಟ್ ಆರಿಸಿ ತಗಣೆಗಳ ಸೈನ್ಯವಿರುವ ಬೆಂಚಿಗೆ ತನ್ನ ಬೆನ್ನು ಬಲಿಕೊಟ್ಟರು. ಗಣಪು ಗೋಣಿತಟ್ಟಿನ ಹಂಸತೂಲಿಕಾ ತಲ್ಪದಲ್ಲಿ ಪವಡಿಸಿ, ಅಷ್ಟರಲ್ಲೆ ಕಾಳಿಂಗನ ಸ್ತ್ರೀವೇಷ ಮನಸ್ಸಿಗೆ ಬಂದು ಅಮ್ಮನಿಗೆ ಹೇಳಿ ಮೇಳಕ್ಕೆ ಸೇರುವುದೇ ಸರಿ ಎಂದು ನಿರ್ಧರಿಸುವಷ್ಟರಲ್ಲಿ ಆತನಿಗೆ ನಿದ್ದೆ ಬಂದು ಬಿಟ್ಟಿತು. ಮರ್ತಪ್ಪಯ್ಯ ಪ್ರಭುಗಳಿಗೆ ಇನ್ನಿಲ್ಲದ ಕಿರಿಕಿರಿ ಎನಿಸಿ, ಏನು ಮಾಡಬೇಕೆಂದು ತೋಚದೆ ಕೊನೆಗೆ ಅಂಗಿಧರಿಸಿ, ಬ್ಯಾಟರಿ ಸಮೇತ ಸವಾರಿಗೆ ಹೊರಟರು.

ಮಡಲ ತಟ್ಟಿಯೊಂದನ್ನು ತಟ್ಟಿದಾಗ `ಯಾರು’ ಎನ್ನುವ ಹೆಣ್ಣು ದನಿಗೆ `ನಾನು’ ಎಂದು ಕೆಮ್ಮಿದಾಗ “ಹೊತ್ತಿಲ್ಲ, ಗೊತ್ತಿಲ್ಲ. ಒಟ್ಟು ಮೈಸಂದಾಯನ ಹಾಗೆ ಬಂದರೆ ಹ್ಯಾಗೆ? ನಾಕು ಜನದ ಎದುರಿಗೆ ಮರ್ಯಾದೆಯಲ್ಲಿ ಬದುಕುವುದು ಬೇಡವಾ?” ಎನ್ನುವ ಹೆಣ್ಣುದನಿ ತಟ್ಟಿ ತೆರೆಯಿತು. ಇತ್ತ ಮರ್ತಪ್ಪಯ್ಯ, ಒಳ ಹೊಕ್ಕವರೆ ರೇತಸ್ಸು ಸೀದ ಶಿರಸ್ಸಿನತ್ತ ಪ್ರವಹಿಸಿ, ಆವಿಯಾಗದ ಹಾಗೆ ನೋಡಿಕೊಳ್ಳುವ ಕಾಯಕದಲ್ಲಿ ನಿರತರಾಗುತ್ತಿದ್ದಂತೆ, ಇತ್ತ ತಗಣೆಯ ಪೆಟ್ಟು ಸಹಿಸಲಾಗದೆ, ಬಬ್ರುವಾಹನ ಕುಣ್ಚಟ್ನ ಕನಸು ಕಾಣುತ್ತಿದ್ದ ಗಣಪುವಿನ ಗೋಟಿತಟ್ಟಿನಲ್ಲಿ ನರ್ಸಪಯ್ಯ ನುಸುಳಿಕೊಂಡರು.

******

ತೋಡುಬಳಿ ಶಿವರಾಮಯ್ಯ ಅಂದರೆ ಒಂದು ತೀರಾ ವಿಶಿಷ್ಟ ಕುಳ. ತೋಡುಬಳಿ ಎನ್ನುವ ಇವರ ಹೆಸರಿಗೆ ಕಾರಣವಾದ ತೋಡು ಸಾಮಾನ್ಯ ತೋಡೆಂದು ಭಾವಿಸಬೇಡಿ. ಅದನ್ನು ಊರವರೆಲ್ಲ ಕರೆಯುವುದು ಗುಂಡಲ ಸಾಲ ಎಂದೆ. ಮಳೆಗಾಲದಲ್ಲಿ ಇದರ ಉಯಿಲು ಎನ್ನಲಾಗುವ ಸೆಳೆತ ಎಷ್ಟಿರುತ್ತದೆ ಎಂದರೆ ಜರಾಸಂಧನಂತಹ ದೇಹವುಳ್ಳವನ ಹೆಣವನ್ನೂ ಕ್ಷಣಮಾತ್ರದಲ್ಲಿ ಕಡಲು ಮುಟ್ಟಿಸಬಲ್ಲ ತಾಕತ್ತು ಅದಕ್ಕಿತ್ತು. ತಳದಲ್ಲಿನ ಹೊಯ್ಗೆಯಲ್ಲಿ ಕಾಲಿಟ್ಟಾಗ ಅದು ಮುಗ್ಧವಾಗಿ, ಯಾವ ಅಪಾಯ ಕೊಡುವ ಸುಳಿವು ಕಾಣಿಸದಿದ್ದರೂ ಕಣ್ಣುಮುಚ್ಚಿ ತೆರೆಯುವುದರೊಳಗಾಗಿ ಕಾಲಡಿಯ ಮರಳು ಪುಸಕ್ಕನೆ ಜಾರಿ ಯಾರೂ ಧರಾಶಾಯಿ ಅಲ್ಲಲ್ಲ ಜಲಶಾಯಿಯಾಗುವ ಸಂದರ್ಭ ಇರುತ್ತಿತ್ತು. ಇಂತಹ ತೋಡಿಗೆ ತಾಗಿಕೊಂಡೇ ಶಿವರಾಮಯ್ಯನವರ ಮನೆ ಎನ್ನಲು ಒಂದಿಷ್ಟೂ ಲಾಯಖ್ಖೆನಿಸದ ಗುಡಿಸಲು ಇತ್ತು. ಗುಡಿಸಲು ಎನ್ನುವುದಕ್ಕಿಂತಲೂ ಪರ್ಣಕುಟಿ ಎಂದರೇ ಚಂದ. ಯಾಕೆಂದರೆ ಇದಕ್ಕಿರುವ ನಾಲ್ಕು ಗೋಡೆಗಳ ಎತ್ತರ ಕೇವಲ ಸೊಂಟದ ಸುಮಾರಿಗೆ ಬರುವಷ್ಟು. ಅದೂ ಮಣ್ಣಿನದು. ಮೇಲಿಗೆ ಗಾರೆ ಬಳಿದು ಸುಣ್ಣ ಹಾಕಲಾಗಿತ್ತು. ಅಲ್ಲಿಂದ ಮಾಡಿನ ಹಂತದವರೆಗೆ, ಮಡಲು ದರ್ಭೆಹುಲ್ಲು ಮೇಳವಿಸಿ ಮಾಡಿದ ತಟ್ಟಿ, ಈ ತಟ್ಟಿಯಲ್ಲಿ ಎರಡು ಗವಾಕ್ಷಿಗಳು, ಬಿದಿರಿನ ಗಳದ ರೀಪಿನದ್ದೆ ರಚನೆ. ಬಾಗಿಲು ಎಂದರೆ ಬಿದಿರಿನ ಗಳಗಳ ತುಂಡಿಗೆ, ಸೀಮೆಯ ಸಂದು ಒಟ್ಟೊಟ್ಟು ಕೂಡಿಸಿ ಮಾಡಿದ ರಚನೆ. ಅದಕ್ಕೆ ದಾರಂದವಾಗಲೀ, ಹೊಸ್ತಿಲಾಗಲೀ ಇರಲಿಲ್ಲ. ಒಳಗಿನ ನೆಲಮಾತ್ರ ಕಾವಿ ಹಾಕಿ ಅರೆದುದರಿಂದ ಫಳಫಳ ಹೊಳೆಯುತ್ತಿತ್ತು.

ಶಿವರಾಮಯ್ಯ ಏಕಾಕಿ. ಅವರು ಯಾಕೆ ಏಕಾಕಿ ಎನ್ನುವ ವಿಷಯಕ್ಕೆ ಮತ್ತೆ ಬರುವ. ಈ ಶಿವರಾಮಯ್ಯ ಯಾರು, ಎಂಥ ಕಥೆ ಎನ್ನುವುದನ್ನು ಸ್ವಲ್ಪ ನೋಡೋಣ. ಶಿವರಾಮಯ್ಯ ನಮ್ಮೂರಿಗೆ ಬಂದದ್ದು ದೊಡ್ಡ ನೆರೆ ಬಂದ ಕಾಲದ ಸುಮಾರಿಗಂತೆ. ಹಾಗೆ ನನಗೆ ಹೇಳಿದ್ದು ನಮ್ಮ ಅಪ್ಪಯ್ಯ. ಬಂದಾಗ ಅವರು ಹದಿನೆಂಟು ವರ್ಷದ ಪೋರನಂತೆ. ಜೊತೆಗೆ ಒಂದು ಚಂದದ ಹುಡುಗಿಯೂ ಇತ್ತಂತೆ. ತನ್ನ ಹೆಂಡತಿ ಎಂದರಂತೆ ಶಿವರಾಮಯ್ಯ. ನಮ್ಮ ಊರಲ್ಲಿ ಆಗ ತರಲೆ, ತಕರಾರು ಕಮ್ಮಿ- ಇಷ್ಟಾಗಿ ಮಂಗಳ ಗೌರಿಯ ಹಾಗೆ ಮುದ್ದಾಗಿ ಕಾಣುತ್ತಿದ್ದ ಹುಡುಗಿಯ ಕೊರಳಲ್ಲಿ ಮುಂಡಗೆ ನಾರಿನಲ್ಲಿ ಕೋದ ಒಂದು ಕರಿಮಣಿ, ತಾಳಿಯ ಜೊತೆ ಜೋತಾಡುತ್ತಿತ್ತು. ಹಸಿ ಕೈಗಳ ತುಂಬ ಹಸಿರುಬಣ್ಣದ ಬಳೆ, ಹಣೆಯಲ್ಲಿ ಕಾಸಿನಗಲದ ಕುಂಕುಮ. ಕೆನ್ನೆಯಲ್ಲಿ ಬಳಿದ ಅರಿಸಿಣ, ಹೀಗಿರುತ್ತ ಯಾವ ಧೀರ ಇದು ನಿಮ್ಮ ಹೆಂಡತಿಯಲ್ಲ ಎಂದಾನು? ಶಿವರಾಮಯ್ಯನನ್ನ ಯಾರೂ ಪ್ರಶ್ನಿಸಲಿಲ್ಲ. ಬಂದ ದಿನವೇ ತೋಡುಬಳಿಯಲ್ಲಿ ಯಾರಿಗೂ ಸೇರದ ಜಾಗದಲ್ಲಿ, ಗುಂಡಲಸಾಲು ತನ್ನ ಪ್ರವಾಹ ಬದಲಿಸಿ ಈಗ ಸ್ವಲ್ಪ ಏರಾಗಿ ಬಿಟ್ಟಿದ್ದ ತಾವಿನಲ್ಲಿ ತಮ್ಮ ಪರ್ಣಕುಟಿ ಸ್ಥಾಪಿಸಿಬಿಟ್ಟಿತು.

ಶಿವರಾಮಯ್ಯ ಥೇಟ ಆಕಳು ಎಂದವರು ಕೆಲಜನ. ಇನ್ನು ಕೆಲವರಂತೂ ಈತ ತೀರ ಬುರ್ನಾಸು ಎಂದೇ ಲೆಕ್ಕದಿಂದ ತೆಗೆದು ಹಾಕಿದರು. ಇಲ್ಲದಿದ್ದಲ್ಲಿ ಇದ್ದ ಮಾಸ್ತರಿಕೆಯ ಕೆಲಸವನ್ನು ಒದ್ದು ತಕಲಿಯಲ್ಲಿ ನೂಲು ತೆಗೆದು ಅದನ್ನು ಮಾರಿ ಜೀವನ ಸಾಗಿಸುವ ಉಪದ್ವ್ಯಾಪಕ್ಕೆ ಯಾರಾದರೂ ಇಳಿಯುತ್ತಿದ್ದರೆ? ಶಿವರಾಮಯ್ಯನಿಗೆ ಸ್ವಾತಂತ್ರ್ಯದ್ದೇ ಗೀಳು. ಗಾಂಧಿಯೇ ಆತನಿಗೆ ದೇವರು. ನಮ್ಮ ಸಾಕ್ಷಾತ್ ಪಾಂಡವರೇ ರಾತ್ರೋರಾತ್ರಿ ಕಟ್ಟಿ ಮುಗಿಸಿದ ವಡಭಾಂಡೇಶ್ವರ ದೇವಳಕ್ಕೆ ಹರಿಜನರನ್ನು ಒಟ್ಟುಗೂಡಿಸಿ ಕರೆದೊಯ್ದ, ಈ ಮಹಾನುಭಾವ. ಅರ್ಚಕರು ಪೋಕ್ರ, ಕರಿಯ, ರುಕ್ಕ, ಜಯಂತಿ ಇತ್ಯಾದಿ ತನ್ನ ಮನೆಯಲ್ಲೆ ದುಡಿದು ಕೂಳು ಸಂಪಾದಿಸುತ್ತಿದ್ದ ಹರಿಜನ ತಂಡಕ್ಕೆ ಸುತರಾಂ ದೇವಸ್ಥಾನಕ್ಕೆ ಪ್ರವೇಶ ಕೊಡೆ ಎಂದು ತನ್ನ ಡೊಳ್ಳು ಹೊಟ್ಟೆಯ ಥಳಥಳಿಸುವ ಬೊಜ್ಜು ದೇಹದೊಂದಿಗೆ ಮಹಾದ್ವಾರದೆದುರು ಮೈರಾವಣನಂತೆ ನಿಂತಾಗ, ಶಿವರಾಮಯ್ಯ `ಮಹಾತ್ಮಾ ಗಾಂಧೀಕಿ ಜೈ’ `ಭಾರತ ಮಾತಾಕಿ ಜೈ’ ಎಂದು ನಾಲ್ಕಾರು ಕೂಗು ಹಾಕಿ ತನ್ನ ಜನಿವಾರವನ್ನು ಅಲ್ಲೆ ನೆಲಮೂಸುತ್ತ ನಿಂತ ನಾಯಿಯ ಕೊರಳಿಗೆ ಹಾಕಿ, ಬೇಡ ಬೇಡ ಎಂದರೂ ಪ್ರತಿಯೊಬ್ಬ ಹರಿಜನ ಬಂಧುವಿನೊಂದಿಗೂ ಹಸ್ತಲಾಘವ ಮಾಡಿಬಿಟ್ಟರು. ಈತ ಬ್ರಾಹ್ಮಣನೊ ಅಥವಾ ಇನ್ಯಾರೊ – ಯಾರಾದರೂ ತನಗೇನು, ಆದರೂ ಪವಿತ್ರವಾದ ಯಜ್ಞೋಪವೀತಕ್ಕೆ ಈ ಪಾಟಿ ಅವಮಾನ ಮಾಡಿದ್ದಕ್ಕೆ ಕುಪಿತರಾದ ಭಟ್ಟರು ಸಾಕ್ಷಾತ್ ಬಲರಾಮ ದೇವರೆದುರಿಗೆ `ಬೋ….ಮಗ, ಸೂ..ಮಗ’ ಇತ್ಯಾದಿ ಮಂತ್ರಾರ್ಚನೆ ಮಾಡಿ ತಮ್ಮ ಸಿಟ್ಟಿಳಿಸಿಕೊಂಡರು.

ಈ ನಡುಕವೂ ಮಾಟದ್ದೆ ಪ್ರಭಾವವೋ ಏನೊ ಎಂದುಕೊಂಡ ಅವ, ಈಗ ಹೂನೀರು ಕೊಟ್ಟಲ್ಲಿ ತನಗೆ ದರ್ಶನ ಬರುವುದು ಖಾತ್ರಿಯಪ್ಪ. ಈಗ ಒಡೆಯರಿಗೆ ತಿಳಿಸದೆ ಬೇರೆ ನಿರ್ವಾಹವಿಲ್ಲ ಎಂದು ವಾಪಾಸು ಹಿಂಬಾಗಿಲಿಗೆ ಓಡಿ, ಅಟ್ಟದ ಮೇಲೆ ಹೋಗಲು ಇರಿಸಿದ್ದ ಏಣಿಯನ್ನು ಏರಿ “ಒಡೆಯಾ, ಒಡೆಯಾ.. ಏಳಿನಿ.. ಕಾಣಿ… ಮ…ಮಾಟ ಕಾಂತ್” ಎಂದು ಮಲಗಿದ ಧಣಿಯನ್ನು ಕರೆಯುವಷ್ಟರಲ್ಲಿ ಆತನ ದೊಂಡೆ ಪಸೆ ಆರಿ ಹೋಗಿತ್ತು.

ಅಸಲು ಶಿವರಾಮಯ್ಯ ನೀವು ಯಾವ ಜಾತಿ ಎಂದು ಕೇಳಿದರೆ `ಮನುಷ್ಯ ಜಾತಿ’ ಎನ್ನುತ್ತಿದ್ದ ಆ ಕಾಲಕ್ಕೆ ಐಲು ಮನುಷ್ಯ ಎನ್ನಲಾಗುವ ಪೈಕಿ. “ಜನಿವಾರವೊಂದು ಏನು ಮಾರಾಯ್ರೆ. ಯಾವನೂ ಹಾಕಿಕೊಳ್ಳಬಹುದು. ಆದರೆ ನಾಯಿಯ ಕೊರಳಿಗೆ ಹಾಕಿದ್ದು ಮಾತ್ರ ಪಂಚ ಮಹಾಪಾತಕಗೈದಷ್ಟೆ ದೊಡ್ಡ ಅಪರಾಧ. ಈ ಮನುಷ್ಯ ಅನ್ನ ತಿನ್ನುತ್ತದೊ, ಹೇಲು ತಿನ್ನುತ್ತದೊ” ಎನ್ನುತ್ತ ನಾಲ್ಕಾರು ದಿನ ಊರಿನ ಜನ ತಮ್ಮ ನಾಲಗೆ ತುರಿಕೆ ತೀರಿಸಿಕೊಂಡು, ಈ ಶಿವರಾಮಯ್ಯನಿಗೆ ನಿಜವಾಗಿಯೂ ರೂಪಾಯಿಗೆ ಹನ್ನೆರಡಾಣೆ ಎನ್ನುವ ತೀರ್ಮಾನಕ್ಕೆ ಬಂದುಬಿಟ್ಟರು.

ಶಿವರಾಮಯ್ಯ ಒಂಚೂರೂ ಸುಮ್ಮನೆ ಕುಳಿತುಕೊಳ್ಳುವ ಕುಳವಾರಿಯಲ್ಲ. ಅವರಿಗೆ ಬರೇ ಸ್ವಾತಂತ್ರ್ಯದ್ದೇ ಗೀಳು. ಊರಿಡೀ ತಿರುಗಿ, ಬಿಳಿದೊರೆಗಳು ಬಿಟ್ಟುಹೋದಲ್ಲಿ ದೇಶ ಹಾಳಾಗಿ ಯಾಕೂ ಬೇಡದ ಹಾಗಾದೀತು ಎಂದು ದೃಢವಾಗಿ ನಂಬಿದ ಸೂರಪ್ಪಯ್ಯ ಸೆಟ್ಟರಿಂದ ಹಿಡಿದು, ಪ್ರಾಥಮಿಕ ಶಾಲೆಯ ಮಾಸ್ತರರಾದ ಆನಂದರಾಯರವರೆಗೂ ತಮ್ಮ `ವಂದೇ ಮಾತರಂ’ ದೀಕ್ಷೆ ಕೊಡಲು ಅಹರ್ನಿಶಿ ಹೋರಾಡುತ್ತಿದ್ದರು. ತಾನು ದೊರಗಾದ ಖದ್ದರು ಧರಿಸುತ್ತಿದ್ದದ್ದಲ್ಲದೆ, ಹೆಂಡತಿಗೂ ಖಾದಿ ಸೀರೆಯೇ ಧರಿಸತಕ್ಕದ್ದು ಎಂದು ತಾಕೀತು ಮಾಡಿದ್ದರು. ಎಲ್ಲಾದರೂ ಪುರುಸೊತ್ತಾದಲ್ಲಿ, ಹಾಗೂ ರಾತ್ರಿಯಿಡೀ ತಕಲಿಯಲ್ಲಿ ನೂಲು ತೆಗೆಯುತ್ತಿದ್ದರು. ತಕಲಿಯನ್ನು ತಿರುಗಿಸಲು ತೊಡೆ ಬಳಸಿ, ಬಳಸಿ ಅಲ್ಲಿನ ರೋಮಗಳೆಲ್ಲ ಕಿತ್ತು ಹೋಗಿದ್ದವು.

ಗಾಂಧೀಜಿಯವರು ಉಪ್ಪಿನ ಸತ್ಯಾಗ್ರಹಕ್ಕೆ ದಂಡೀ ಯಾತ್ರೆಗೆ ಹೊರಟಾಗ ಅಲ್ಲಿಗೂ ಹೋಗಬೇಕು ಎನ್ನುವ ಆತುರ ಶಿವರಾಮಯ್ಯನಿಗೆ. ಆದರೆ ಪುಟ್ಟ ಕೂಸು ಆಗಷ್ಟೆ ಹುಟ್ಟಿತ್ತು. ಅದಕ್ಕೆ ಲವಣದ ಜ್ಞಾಪಕಾರ್ಥ ಲಾವಣ್ಯ ಎನ್ನುವ ಹೆಸರಿಟ್ಟದ್ದು ಮಾತ್ರವಲ್ಲ, ಸಮುದ್ರದ ನೀರಿನಿಂದ ಮನೆಯಲ್ಲೇ ಉಪ್ಪು ತಯಾರಿಸಿಯೂ ಬಿಟ್ಟಿತು ಮನುಷ್ಯ. ಸೈ, ಪಟೇಲರಿಗೆ ವರ್ತಮಾನ ಹೋಗದಿರುತ್ತದೆಯೇ? ಹದಿನೈದು ದಿನ ಸೆರೆಮನೆಯಲ್ಲಿದ್ದು, `ಭಾರತ ಮಾತಾಕೀ ಜೈ, ವಂದೇ ಮಾತರಂ’ ಎನ್ನುತ್ತ ಬಸ್ಸು ಹತ್ತಿ ಬಿಟ್ಟಿತು. ಕಿವಿಯಲ್ಲಿ ಗಾಳಿ ಹೊಕ್ಕ ಕರುವಿನ ಹಾಗೆ ನಾಲ್ಕು ದಿನ ಅಲೆದಾಡಿದ ಶಿವರಾಮಯ್ಯ ಸೀದಾ ಸಬರ್ಮತಿಯತ್ತ ಪಾದಯಾತ್ರೆ ಮಾಡಿದರು. ಸಬರ್ಮತಿಯಿಂದ ವಾಪಸಾದದ್ದೇ ಒಂದು ಹೆಳೆ. ಊರಿನವರ ಮಟ್ಟಿಗೆ ಶಿವರಾಮಯ್ಯನ ಹುಚ್ಚು ದ್ವಿಗುಣಗೊಂಡಿತ್ತು. ಮೊದಲು ಬರೇ “ಸ್ವಾತಂತ್ರ್ಯ, ಸ್ವಾತಂತ್ರ್ಯ” ಎಂದು ಅಲವತ್ತುಕೊಳ್ಳುತ್ತಿದ್ದ ಮನುಷ್ಯ, ಈಗ ಅದರ ಜೊತೆ ಬ್ರಹ್ಮಚರ್ಯ ಪಾಲನೆ, ಪಾಯಖಾನೆ ಶುಚೀಕರಣ, ಪಾನ ನಿಷೇಧ, ಗ್ರಾಮ ಸ್ವರಾಜ್ಯ ಎಂದೆಲ್ಲ ಊರವರಿಗೆ ಅರ್ಥವಾಗದ ಏನೇನೋ ಮಂತ್ರಗಳನ್ನು ಉದುರಿಸುತ್ತ ಮಾಗಣೆ ಇಡೀ ಸುತ್ತುತ್ತಿದ್ದರು. ಆಗಾಗ್ಗೆ ಬರಿಗಾಲಲ್ಲೆ ನಾಲ್ಕು ಹೊಳೆದಾಟಿ ಮಂಗಳೂರಿಗೆ ಹೋಗಿ ಕಾರ್ನಾಡು ಸದಾಶಿವ ರಾಯರಲ್ಲಿ ಮೀಟಿಂಗ್ ಮಾಡಿ ಬರುತ್ತಿದ್ದರು.

ಒಮ್ಮೆ ಉಡುಪಿಯ ಸರ್ಕಾರಿ ಖಜಾನೆಯಿಂದ ಹಣವನ್ನು ಸಾಗಿಸುತ್ತಿದ್ದ ಜೀಪನ್ನು-ಆಕ್ರಮಿಸಿದವರಲ್ಲಿ, ಮನೆಯಲ್ಲೇ ಇದ್ದ ಇವರ ಹೆಸರೂ ಜಮಾಗೊಂಡಿತು. ಬೆನ್ನ ಚರ್ಮ ಹರಿಯುವವರೆಗೆ ಪೋಲಿಸರಿಂದ ಪೆಟ್ಟು ತಿಂದ ಶಿವರಾಮಯ್ಯನವರನ್ನು ವೆಲ್ಲೂರಿನಲ್ಲೊ, ಯರವಾಡದಲ್ಲೊ ಜೈಲಿಗೆ ಹಾಕಿದರಂತೆ. ಖಟ್ಲೆಯ ವಿಚಾರಣೆ ನಡೆದುದು ಮಂಗಳೂರಿನಲ್ಲಿ. “ಈ ಪಾಪದ ಮನುಷ್ಯ ಯಾವುದೇ ಹಿಂಸೆಯಲ್ಲಿ ಪಾಲುಗೊಳ್ಳುವಂಥವರಲ್ಲಪ್ಪ. ಹಣ ಕೊಳ್ಳೆ ಹೊಡೆಯಲು ಈತನೇನು ಕಳ್ಳನೆ. ಒಟ್ಟು ಪೋಲಿಸರಿಗೂ ತಹಶೀಲ್ದಾರರಿಗೂ ಬುದ್ಧಿ ಇಲ್ಲ” ಎಂದು ತಮ್ಮ ತೈನಾತಿಗಳೆದುರು ಹೇಳುತ್ತ “ನಾನೇ ಖುದ್ದು ಹೋಗಿ ಶಿವರಾಮಯ್ಯ, ಅಪರಾಧ ನಡೆದಾಗ ಮನೆಯಲ್ಲೆ ಇದ್ದರು” ಎಂದು ಸಾಕ್ಷಿ ಹೇಳುತ್ತೇನೆ ಎಂದು ಭರಾಮು ಕೊಚ್ಚುತ್ತಿದ್ದ ನಮ್ಮೂರಿನ ಭಾರೀ ಕುಳ ವೆಂಕಟ್ರಮಣಯ್ಯ ವಿಚಾರಣೆಯ ದಿನ ಮೈ ಸರಿಯಿಲ್ಲ ಎನ್ನುವ ನೆಪ ಹೇಳಿ ಜಾರಿಕೊಂಡಿದ್ದರಿಂದ ಮೊದಲು ಮೆಜಿಸ್ಟ್ರೇಟರು ವಿಧಿಸಿದ್ದ ಆರು ತಿಂಗಳ ಕಠಿಣ ಸಜೆ ಖಾಯಮಾಗಿ ಬಿಟ್ಟಿತು.

ಇಷ್ಟಾದರೂ ಶಿವರಾಮಯ್ಯನವರ ಸ್ವರಾಜ್ಯದ ಗೀಳು ಬಿಟ್ಟಿತು ಅನ್ನುವಿರ? ಊಹ್ಞೂ . ಅಸಹಕಾರ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ, ಸರಕಾರಕ್ಕೆ ತೀರ್ವೆ ಕೊಡಬೇಡಿ ಎಂದು ಜಮೀನಿದ್ದವರಿಗೆಲ್ಲ ಪುಸಲಾಯಿಸಿದರು. ಸರಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳಿಗೆ ವಂದೇ ಮಾತರಂನ ಮಹತ್ವ ಹೇಳಿಕೊಟ್ಟರು. ಶೇಂದಿ ಅಂಗಡಿ ಎದುರು ಧರಣಿ ಕೂತರು. ಮತ್ತೆ ಜೈಲು ಕಂಡು ಮರಳಿದಾಗ ಮನೆ ಬಿಕೋ ಎನ್ನುತ್ತಿತ್ತು.

ಮಂಗಳ ಗೌರಿಯ ಹಾಗಿದ್ದ ಶಿವರಾಮಯ್ಯನ ಹೆಂಡತಿ ಕಡಲಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಳು ಎನ್ನುವ ಪುಕಾರು ಊರಲ್ಲಿ ಕೆಲವರದ್ದಾದರೆ, ಎಲ್ಲು ಭಂಡಾರಿ ಗದ್ದೆಯಲ್ಲಿ ತಳವೂರಿದ್ದ ನಾಟಕ ಕಂಪೆನಿಯವರೇ ಕೆಲಸ ನಿಮಿತ್ತ ಉಡುಪಿಗೆ ಹೋದ ಈ ಹೆಂಗಸನ್ನು ಹಾರಿಸಿಕೊಂಡು ಹೋಗಿದ್ದಲ್ಲದೆ ಮತ್ತೇನಲ್ಲ ಎಂದು ಕೆಲವರ ವಾದ. `ಎಳೆ ಪ್ರಾಯದ ಹುಡುಗಿಯನ್ನು ಬಿಟ್ಟು ಹೋಗಲು ಹೇಗೆ ಆತನಿಗೆ ಮನಸ್ಸು ಬಂತಪ್ಪ’ ಎನ್ನುವ ಬೋಗಾರು ದುಃಖ ಕೆಲವರದ್ದಾದರೆ `ಶಿವರಾಮಯ್ಯನ ಬ್ರಹ್ಮಚರ್ಯ ವ್ರತವೇ ಆಕೆಗೆ ಈ ಗತಿ ತಂದದ್ದು’- ಎಂದೆನ್ನುತ್ತ ಇನ್ನು ಕೆಲವರು ಖುಷಿ ಪಟ್ಟರು. ಅಂತೂ ಮನೆಯಲ್ಲಿ ಭಾಗೀರಥಮ್ಮ ಇರಲಿಲ್ಲ. ಶಿವರಾಮಯ್ಯ ಮತ್ತೆ ಆಕೆಯನ್ನು ಕಂಡದ್ದೂ ಇಲ್ಲ. ಮಗಳು ಲಾವಣ್ಯ ಮಾತ್ರ ನೆರೆಮನೆಯ ಕಮಲಮ್ಮನ ಮನೆಯಲ್ಲಿ ಆಡಿಕೊಂಡಿತ್ತು. ಶಿವರಾಮಯ್ಯ ಒಮ್ಮೆ ನಿಟ್ಟುಸಿರು ಬಿಟ್ಟು ನಿರ್ಲಿಪ್ತರಾದರು.

ಈ ಬಾರಿ ಜೈಲಿನಿಂದ ಹೊರಬಂದ ಶಿವರಾಮಯ್ಯನಿಗೆ `ಮೂಲಭೂತ ಶಿಕ್ಷಣ’ದ ಭೂತ ಬಡಿದಿತ್ತು. ಊರ ಅರಳೀ ಮರದ ಕಟ್ಟೆಯ ಸಮೀಪ ಶಿವರಾಮಯ್ಯನ ಶಾಲೆ ಶುರುವಾಯಿತು. ತಕಲಿಯನ್ನು ತಿರುಗಿಸಿ ಅರಳೆಯಿಂದ ನೂಲು ತೆಗೆಯುವುದು, ಕಾಗದಗಳಲ್ಲಿ ಹೂ, ಆಟದ ಸಾಮಾನು ತಯಾರಿಸುವುದು, ಚರಖಾದಿಂದ ನೂಲುವುದು, ಅಲ್ಲಲ್ಲಿ ಫಲ ಪುಷ್ಪಗಳ ಗಿಡಗಳನ್ನು ನೆಟ್ಟು ವನಮಹೋತ್ಸವ ಆಚರಿಸುವುದು, ಸ್ವದೇಶೀ ಸಾಮಾಗ್ರಿಗಳ ಪಟ್ಟಿ ಮಾಡಿ ಅವುಗಳನ್ನು ಹೇಗೆ ಉಪಯುಕ್ತವಾಗಿ ಬಳಸಬಹುದು ಎನ್ನುವುದನ್ನು ಮನದಟ್ಟು ಮಾಡಿಕೊಡುವುದು ಇವೆಲ್ಲ ಶಿವರಾಮಯ್ಯನ ಅಭ್ಯಾಸ ಪಟ್ಟಿಯಲ್ಲಿ ಸೇರಿದ್ದುವು. ಕೆಲವೊಮ್ಮೆ ಹುರಿಹಗ್ಗ, ಗಡಿಗೆ, ಬಟ್ಟೆ ತಯಾರಿಯನ್ನು ಖುದ್ದು ನೋಡುವ ಪ್ರಾತ್ಯಕ್ಷಿಕೆಗಳೂ ನಡೆಯುತ್ತಿದ್ದುವು. ಒಟ್ಟು ನಾಲ್ಕೈದು ಮಕ್ಕಳ ಶಾಲೆ. ಲಾವಣ್ಯ ಒಬ್ಬಳು ಖಾಯಮ್ ವಿದ್ಯಾರ್ಥಿ. ಉಳಿದವರು ಮನಸ್ಸಾದಾಗ ಭೇಟಿ ಮಾಡಿ ಹೋಗುತ್ತಿದ್ದರು.

ಮೊದಮೊದಲು ಹೊಯ್ಗೆಯಲ್ಲೆ ಅಕ್ಷರಾಭ್ಯಾಸ ನಡೆಸಿದ ಮೇಲೆ ಸ್ಲೇಟು, ಕಡ್ಡಿಗಳ ಹಂತಕ್ಕೆ ತೇರ್ಗಡೆ. ಓದುವಷ್ಟು, ಪರಿಣತಿ ಬಂದ ಮೇಲೆ ಪುಸ್ತಕಗಳ ಪರಿಚಯ. ಮಹಾಭಾರತ, ರಾಮಾಯಣದ ಕಥೆಗಳು, ಗಾಂಧಿ, ತಿಲಕ, ವಲ್ಲಭಬಾಯಿ ಪಠೇಲ್, ನೇತಾಜಿ ಸುಭಾಸ್ ಚಂದ್ರ ಬೋಸ್ ಇವರ ಸ್ವರಾಜ್ಯ ಹೋರಾಟದ ನಿರೂಪಣೆ ಇತ್ಯಾದಿ ಪ್ರತಿದಿನ ಕಡ್ಡಾಯವಾಗಿ ನಡೆಯುತ್ತಿತ್ತು. ಸುಮಾರು ವರ್ಷವೊ ಹತ್ತು ತಿಂಗಳೊ ನಡೆದ ಈ ಶಾಲೆಗೆ ಮಗಳೊಬ್ಬಳೇ ವಿದ್ಯಾರ್ಥಿಯಾಗಿ ಉಳಿದ ಮೇಲೆ ಶಿವರಾಮಯ್ಯ ತನ್ನ ಶಾಲೆಯನ್ನು ಮನೆಗೇ ವರ್ಗಾಯಿಸಿ ಬಿಟ್ಟರು. ಅಂದರೆ ಮಗಳಿಗೆ ಶಿಕ್ಷಣ ಮನೆಯಲ್ಲೇ ನಡೆಯುತ್ತಿತ್ತು.

ದೇಶಕ್ಕೆ ಸ್ವಾತಂತ್ರ್ಯ ದೊರೆತಾಗ ಶಿವರಾಮಯ್ಯನವರ ಹಿಗ್ಗು ಹೇಳತೀರದು. ಅವರು ಅಷ್ಟು ಖುಷಿಯಾಗಿದ್ದನ್ನು ಅಷ್ಟರವರೆಗೆ ಯಾರೂ ಕಂಡಿದ್ದಿಲ್ಲ. ತಮ್ಮ ಮನೆ ಎದುರಿನ ಕಂಗಿನ ಮರದ ಮೇಲೆ ತ್ರಿವರ್ಣ ಧ್ವಜ ಹಾರಿಸಿದರು. ದೊಂಡೆ ಗೊರಗೊರ ಆಗುವವರೆಗೆ ಭಾರತಮಾತಾಕೀ ಜೈ ಎಂದು ಸಂತಸದ ಕಣ್ಣೀರಿಳಿಸುತ್ತ ಇಡೀ ದಿನ ಮನೆ ಮನೆ ಎದುರು ಹೋಗಿ ಘೋಷಣೆ ಮಾಡಿದರು. ಶಾಲೆಯ ಮಕ್ಕಳಿಗೆಲ್ಲ, ಪಾವಾಣೆ ನಾಣ್ಯದ ನಡುವೆ ಸರಿಗೆ ಸಿಕ್ಕಿಸಿ ತಾವೇ ತಯಾರಿಸಿದ ತಕಲಿಗಳನ್ನು ಉಡುಗೊರೆಯಾಗಿ ಇತ್ತರು. ತಾವೇ ರಚಿಸಿದ ಗಾಂಧಿ ಕೀರ್ತನೆಯನ್ನು ಹಾಡುತ್ತ ಮಕ್ಕಳ ಹಾಗೆ ಕುಣಿಯುತ್ತಿದ್ದ ಶಿವರಾಮಯ್ಯನನ್ನು ಕಂಡು ಜನ `ಆಸಾಮಿಗೆ ಹುಚ್ಚು ಹಿಡಿದಿದೆ’ ಎಂದು ನಕ್ಕರು.

ತನ್ನ ಬುನಾದಿ ಶಿಕ್ಷಣ ಬರ್ಖಾಸ್ತಾದ್ದರಿಂದ ವಿಚಲಿತರಾಗದ ಶಿವರಾಮಯ್ಯ, ಇದೀಗ ಓದು ಬರಹ ಬರದ ಊರಿನ ವಯಸ್ಕರನ್ನು ವಿದ್ಯಾವಂತರನ್ನಾಗಿ ಮಾಡುವ ಕಾಯಕ ಆರಂಭಿಸಿದರು. ಊರ ಎಲ್ಲ ಮರಮಟ್ಟುಗಳ ಮೇಲೆ, ಅಂಗಡಿ ಬಾಗಿಲುಗಳ ಮೇಲೆ ಸೇಡಿಯಲ್ಲಿ, ಸೀಮೆ ಸುಣ್ಣದಲ್ಲಿ `ವಯಸ್ಕರ ಶಿಕ್ಷಣ ಕೊಡಲಾಗುತ್ತದೆ. ಗರಡಿ ಮಜಲು ಶಾಲೆಯಲ್ಲಿ. ಎಲ್ಲರಿಗೆ ಸ್ವಾಗತ. ಸಂಜೆ ಬನ್ನಿ’ ಎನ್ನುವ ವಾಕ್ಯಗಳನ್ನು ಕೆಲವೊಮ್ಮೆ `ಎಲ್ಲರಿಗೆ ಸ್ವಾಗತ’ ಮೊದಲು ಬರೆದೊ, `ವಯಸ್ಕರ ಶಿಕ್ಷಣ’ ಮೊದಲು ಬರೆದೊ ತಮ್ಮ ಉದ್ದೇಶವನ್ನು ಸಾರಿಬಿಟ್ಟರು.

ಇದು `ಗಣಪತಿ ವಿಲಾಸ’ದಲ್ಲಿ ತಟ್ಟೆ ತೊಳೆಯುತ್ತ, ಇತರ ಬೇಕಾರು ಕೆಲಸಗಳನ್ನು ಮಾಡುತ್ತ ತಂದೆಯನ್ನು ಕಳಕೊಂಡ ಒಂಭತ್ತು ವರ್ಷದ, ಮೂರನೇ ಇಯತ್ತೆ ನಪಾಸಾದ ಗಣಪ ಹುಡುಗನಿಗೆ, ಮಾಟ ಮಾಡಲು ಬರೆದ ಬೀಜಾಕ್ಷರಗಳಂತೆ ಕಂಡು ಇನ್ನಿಲ್ಲದ ಪಜೀತಿಗೆ ಕಾರಣವಾಗಿ ಬಿಟ್ಟಿತು.

******

`ಗಣಪತಿ ವಿಲಾಸ’ದಲ್ಲಿ ಸಂಜೆ ನೆರೆದ ಗಿರಾಕಿಗಳ ಸಮೂಹದಲ್ಲಿ ಮರ್ತಪ್ಪ ಪ್ರಭುಗಳು ಈ ಗಾಂಧಿಯ ಅವತಾರವಾದ ಶಿವರಾಮಯ್ಯ ನಡೆಸುತ್ತಿದ್ದ ಅಧ್ವಾನದ ಕುರಿತು ಫಿರ್ಯಾದು ನೀಡಿದರು. ಈ ಮನುಷ್ಯನನ್ನು ಹೀಗೆಯೇ ಊರಲ್ಲಿರಲು ಬಿಟ್ಟರೆ ತಮಗೆ ಬರ್ಕತ್ತಿಲ್ಲ ಎನ್ನುವ ಸರ್ವಾನುಮತದ ಅಭಿಪ್ರಾಯ ಹೊರಟಾಗ, ಗಣಪುವಿಗೆ ದಿಗಿಲಾಯಿತು. ಶಿವರಾಮಯ್ಯ ತನಗೂ ಇದ್ಯೆ ಮುಂದರಿಸು ಎಂದು ಎಷ್ಟು ಮಂಗಾಟಿಸಿ ಹೇಳಿದ್ದರು. ಅಮ್ಮನನ್ನೂ ಶಾಲೆ ಬಿಡಿಸಬೇಡ ಎಂದು ರಂದಿದ್ದರು. `ಕೂಳು ನೀವು ಕೊಡುತ್ತೀರಾ ಅಯ್ಯ’ ಎಂದು ಅಮ್ಮ ಅವರ ಬಾಯಿ ಮುಚ್ಚಿಸಿದ್ದಳು. ಒಮ್ಮೆ ಮಾತಾಡುತ್ತ “ಇದು ಚಂದವಲ್ಲ. ಬೇರೆ ಮದುವೆ ಆಗುವುದಿದ್ದರೆ ನಾನು ಮಾಡಿಸುತ್ತೇನೆ” ಎಂದೆಲ್ಲ ಹೇಳುವಾಗ ಮರ್ತಪ್ಪರಂತೆಯೇ ಊರಿನ ಒಂದೆರಡು ಕುಳಗಳ ಹೆಸರುಗಳು ಮಾತಿನ ನಡುವೆ ಹಾದಿದ್ದವು. ಅಮ್ಮ, “ನೀವು ಮದುವೆಯಾಗುತ್ತೀರಾ ಹೇಳಿ” ಎಂದಾಗ ಶಿವರಾಮಯ್ಯ “ಏನೋ, ಮಾರಾಯ್ತಿ.
ಒಳ್ಳೆದಕ್ಕೆ ಹೇಳಿದೆ. ವಯಸ್ಸು ಸರಿ ಇದ್ದಲ್ಲಿ ನಾನೇ ಮದುವೆ ಆಗುತ್ತಿದ್ದೆ. ಈಗ ಮದುವೆಯೊ, ಮಸಣವೊ” ಎಂದನ್ನುತ್ತ ಖಿನ್ನರಾಗಿದ್ದುದನ್ನು ಗಣಪ ಕಂಡಿದ್ದ. ಇವರು ಏನು ಮಾತಾಡುತ್ತಾರೆ, ವಿಷಯ ಎಂಥದು ಎನ್ನುವುದರ ಕುರಿತು ಆತನಿಗೆ ತಲೆ ಬುಡ ಅರ್ಥವಾಗಿರಲಿಲ್ಲ.

ಶಿವರಾಮಯ್ಯನವರಿಗೆ ಇನ್ನು ಏನು ಶಿಕ್ಷೆ ಕೊಡುತ್ತಾರೊ, ಊರ ಜನ ಎನ್ನುವ ಕಳವಳದಲ್ಲಿ ಗಿರಾಕಿ ಇಲ್ಲದ ನಡು ಮಧ್ಯಾಹ್ನದ ಹೊತ್ತು ದಬರಿ ನೀರು ಹಿಡಕೊಂಡು ಹೊರಗಡೆ ಹೋಗುವ ನೆಪದಲ್ಲಿ ರಟ್ಟಿದ ಗಣಪು “ನಿಮಗೆಂಥದೊ ಮಾಡ್ತ್ರಂಬ್ರು ಅಯ್ಯ. ಸ್ವಲ್ಪ ಜಾಗ್ರತೆಲಿ ಇರ್ನಿ” ಎಂದು ತಕಲಿಯಲ್ಲಿ ನೂಲು ತೆಗೆಯುತ್ತ ಕೂತ ಶಿವರಾಮಯ್ಯನಿಗೆ ಹೇಳಿದಾಗ ಅವರು ಸುಮ್ಮನೆ ನಕ್ಕದ್ದು ಕಂಡು ಕಕ್ಕಾಬಿಕ್ಕಿಯಾಗಿ ಬಿಟ್ಟ.

“ನಮಗೀಗ ಸ್ವರಾಜ್ಯ ಬಂದಿದೆಯಲ್ಲ ಮಾರಾಯ. ನಮ್ಮ ಜನಗಳದ್ದೆ ರಾಜ್ಯ. ಅವರು ಮಾಡಿದ್ದೇ ಕಾನೂನು. ಅವರು ಕೊಟ್ಟದ್ದೇ ಶಿಕ್ಷೆ. ಅದಕ್ಕೆ ತಲೆ ಒಡ್ಡಬೇಕಾದುದು ನಮ್ಮ ಧರ್ಮ” ಎಂದು ಶಿವರಾಮಯ್ಯ ನುಡಿದಾಗ ಅವರ ಮಾತೂ ಒಂಚೂರೂ ಗಣಪುವಿಗೆ ಅರ್ಥವಾಗಲಿಲ್ಲ.

ಊರಿನಲ್ಲಿ ಇಲ್ಲದ ತಂಟೆ ಮಾಡುತ್ತಿದ್ದ ಶಿವರಾಮಯ್ಯನನ್ನು, ಅವರು ಸುಮಾರು ಮೂರು ನಾಲ್ಕು ದಶಕ ಕಳೆದ ಹಳ್ಳಿಯನ್ನು ಬಿಟ್ಟು ಬೇರೆಲ್ಲಾದರೂ ದೇಶಾಂತರಕ್ಕೆ ಹೋಗುವಂತೆ ಗಡೀಪಾರು ಮಾಡುವುದೇ ಸೂಕ್ತ ಶಿಕ್ಷೆ ಎಂದು ಊರಿನ ಜನ ನಿರ್ಣಯಿಸಿ ಬಿಟ್ಟರು.

ವಿದ್ಯಾಪ್ರಸಾರ, ಸ್ವದೇಶಿ ಪ್ರಚಾರ, ನೈರ್ಮಲ್ಯ ರಕ್ಷಣೆ, ಮೂಲಭೂತ ಶಿಕ್ಷಣ ಇವೆಲ್ಲ ಸ್ವಾತಂತ್ರ್ಯ ನಂತರವೂ ಬೇಕೆಂದರೆ ಅದು ಕಡಿಮೆ ತಂಟೆಯೆ? ಮುದುಕನಿಗೆ ಸುಮ್ಮನೆ ಬಿದ್ದುಕೊಂಡಿರುವ ಸುಬುದ್ಧಿ ಯಾಕಿಲ್ಲ?….

******

ಶಿವರಾಮಯ್ಯನನ್ನು ಕಂಡ ನೆನಪು ನನಗಿದೆ. ಕೋಲು ದೇಹ. ಕೃಶ ಶರೀರ. ಇಡೀ ಮುಖದಲ್ಲಿ ಎದ್ದು ಕಾಣುವುದೆಂದರೆ ಗಾಂಧಿ ಕನ್ನಡಕ ಹಾಗೂ ಉಬ್ಬು ಹಲ್ಲುಗಳು. ನಾನು ಶಿವರಾಮಯ್ಯನವರನ್ನು ಒಂದೆರಡು ಸಲ ಮಾತಾಡಿಸಿದ್ದಿದೆ. ಆಗ ಅವರು ದುಃಖದಿಂದ ಹೇಳುತ್ತಿದ್ದುದು ಈಗಲೂ ನೆನಪಿದೆ. “ಬ್ರಿಟಿಷರ ಬ್ಯೂರೆಕ್ರಸಿ ಚೆನ್ನಾಗಿತ್ತು. ಅವರು ಚೆನ್ನಾಗಿರಲಿಲ್ಲ. ಸ್ವಾತಂತ್ರ್ಯದ ಬಳಿಕ ಡೆಮೊಕ್ರಸಿ, ಬ್ಯೂರೊಕ್ರಸಿ ಎರಡೂ ಕುಲಗೆಡುತ್ತಾ ಬರುತ್ತಿದೆಯಲ್ಲ ಅಪ್ಪೂ”. ಈಗ ಅದು ಪ್ರವಾದಿಯ ನುಡಿಯಂತಾಗಿದೆ. ತಿಳಿದೊ ತಿಳಿಯದೆಯೊ ಶಿವರಾಮಯ್ಯ ತಮ್ಮ ಕಾಲಕ್ಕಿಂತ ಅದೆಷ್ಟೊ ಮುಂದಿನದಕ್ಕೆ ಸನ್ನದ್ಧರಾಗಿದ್ದರು. ತಮ್ಮ ಹಳ್ಳಿಯ ಜನ ಮಾತ್ರ ಅವರನ್ನು ಅರಿತುಕೊಳ್ಳಲಿಲ್ಲ. ಎಲ್ಲಿಯವರೆಗೆ ಶಿವರಾಮಯ್ಯ ನಿರ್ಗತಿಕರಾಗಿ ಬಿಟ್ಟರು ಎಂದರೆ ದೇಶಾಂತರ ಹೋದವರು ಊರಿಗೆ ಮರಳಿದಾಗ ಸ್ವತಃ ಅವರ ಮಗಳೇ ಅಪ್ಪನಿಗೆ ಹುಚ್ಚು ಹಿಡಿದಿದೆ ಎಂದು ತನ್ನ ಗಂಡನಿಗೆ ಹೇಳಿಬಿಟ್ಟಳಂತೆ.

ಈಗ ನಮ್ಮ ಊರಲ್ಲಿ `ಶಿವರಾಮಯ್ಯ ಸ್ಮಾರಕ ಮಾಧ್ಯಮಿಕ ಶಾಲೆ’ ಇದೆ. ಒಂದು ರಸ್ತೆಯ ಹೆಸರೂ ದೇಶಭಕ್ತ ಶಿವರಾಮಯ್ಯ ಮಾರ್ಗ ಎಂದು. ಸ್ವಾತಂತ್ರ್ಯದ ಸುವರ್ಣೋತ್ಸವದಲ್ಲಿ ಹಲವಾರು ಶಿವರಾಮಯ್ಯ-ಸಂಸ್ಮರಣಾ ದತ್ತಿ ಉಪನ್ಯಾಸಗಳು ನಮ್ಮ ತಾಲೂಕಿಡೀ ನಡೆಯಲಿವೆ ಎಂದು ಸುದ್ದಿಯಪ್ಪ. ಇತ್ತೀಚೆಗೆ ಶಿವರಾಮಯ್ಯ ಭವನ ಸ್ಥಾಪನೆಗಾಗಿ ದೇಣಿಗೆ ರಶೀದಿ ಪುಸ್ತಕ ಹಿಡಿದುಕೊಂಡು ಒಂದು ಯುವಕರ ತಂಡ ಖಾಸಗಿ ಟ್ಯಾಕ್ಸಿಯಲ್ಲಿ ಮುಂಬಯಿ ನಗರದರ್ಶನಕ್ಕೆ ಹೋಗುವ ಹುನ್ನಾರು ನಡೆಸಿದೆಯಂತೆ. ಭವನದ ಉದ್ಘಾಟನೆಯಂದು ದಿವಂಗತ ದೇಶಭಕ್ತ ಶಿವರಾಮಯ್ಯನವರಿಗೆ `ಗರಡಿ ಮಜಲಿನ ಗಾಂಧಿ’ ಎನ್ನುವ ಮರಣೋತ್ತರ ಬಿರುದು ಖುದ್ದು ಜಿಲ್ಲಾ ಉಸ್ತುವಾರಿ ಮಂತ್ರಿಗಳೇ ನೀಡಲಿದ್ದಾರಂತೆ. ಜೈ ಶಿವರಾಮಯ್ಯ.

*****

ಡಾ. ವ್ಯಾಸರಾವ್ ನಿಂಜೂರ್: ಉಡುಪಿಯ ಸಮೀಪದ ತೆಂಕನಿಡಿಯೂರು ಗ್ರಾಮದಲ್ಲಿ ಜನಿಸಿದ (1940) ಡಾ| ವ್ಯಾಸರಾವ್ ನಿಂಜೂರು, ಮುಂಬಯಿಯ ಭಾಭಾ ಅಣುಶಕ್ತಿ ಸಂಶೋಧನಾ ಸಂಸ್ಥೆಯ ಆಹಾರ ವಿಜ್ಞಾನ ವಿಭಾಗದ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಇವರು ಸಂದರ್ಶಕ ಪ್ರಾಧ್ಯಾಪಕರಾಗಿ ದೇಶ ವಿದೇಶಗಳ ಹಲವು ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡಿದ್ದಾರೆ. ಆಹಾರ ವಿಜ್ಞಾನದಲ್ಲಿ ಹಲವು ವಿಶಿಷ್ಟ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. ‘Food Irradiation News’ ಎಂಬ ಬುಲೆಟಿನ್ ಮತ್ತು ‘ಗೋಕುಲವಾಣಿ’ ಎಂಬ ಕನ್ನಡ ಇಂಗ್ಲಿಷ್ ಮಾಸಿಕ, ‘ಬೆಳಗು’ ಎಂಬ ವೈಜ್ಞಾನಿಕ ತ್ರೈಮಾಸಿಕಗಳು ಇವರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿವೆ. ಅವರು 2006 ರಲ್ಲಿ ಇನ್ನದಲ್ಲಿ ನಡೆದ ಉಡುಪಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಡಾ| ನಿಂಜೂರರ ಕಥಾಸಂಕಲನಗಳು ‘ಕುಂಕುಮ’ (1961), ‘ಮಂಚ’ (2005), ಮತ್ತು ‘ದೂಜ ಮಾಸ್ತರರ ಮಗಳು ಬಸಿರಾದ ಸುದ್ದಿ’ (2012). ಪ್ರಸ್ತುತ ಕತೆ ‘ಮಂಚ’ ಸಂಕಲನದಲ್ಲಿ ಸೇರಿದೆ. ಅವರ ಇತರ ಕೃತಿಗಳು: ‘ಉಸಿರು’, ‘ಚಾಮುಂಡೇಶ್ವರಿ ಭವನ’ ಮತ್ತು ‘ತೆಂಕನಿಡಿಯೂರಿನ ಕುಳವಾರಿಗಳು’ (ಕಾದಂಬರಿಗಳು), ‘ನಲ್ವತ್ತರ ನಲುಗು’ (ನಾಟಕ) ಮತ್ತು ‘ಹೋಮಿ ಭಾಭಾ’, ‘ನೀರು’, ‘ಆಹಾರ ಸಂಸ್ಕರಣೆ ಮತ್ತು ಸಂರಕ್ಷಣೆ’, ‘ಜೀವನ ಶೈಲಿ ಹಾಗೂ ಸ್ವಾಸ್ಥ್ಯ’, ‘ಲೋಹ ಮತ್ತು ಮಾನವ’ ಇತ್ಯಾದಿ ವೈಜ್ಞಾನಿಕ ಕೃತಿಗಳು.