ನಾನು ಕನ್ನಡದಲ್ಲಿ ಬರೆಯುತ್ತೇನೆ. ಏಕೆಂದರೆ ಕನ್ನಡ ನನ್ನ ಆತ್ಮದ ಭಾಷೆ. ನನ್ನೊಳಗೆ ನಾನು ಕನ್ನಡದಲ್ಲೇ ಲೆಕ್ಕ ಹಾಕುತ್ತೇನೆ. ಕನ್ನಡದೊಳಗೇ ಮಾತನಾಡಿಕೊಳ್ಳುತ್ತೇನೆ. ನಾನು ಶಾಲೆಗೆ ಸೇರುವ ಮೊದಲೇ ನನ್ನ ತಾಯಿ ನನಗೆ ಎರಡು ಅಕ್ಷರ ಕಲಿಸಿದ್ದಳು. ಒಂದು ಹಳೆಯ ತಗಡಿನ ಪಾಟಿಯ ಮೇಲೆ ದೊಡ್ಡದಾಗಿ ರ ಮತ್ತು ಠ ಅಕ್ಷರಗಳನ್ನು ಬರೆದು ತೋರಿಸಿದ್ದಳು. ಅವಳು ಮೂರನೇ ಅಕ್ಷರ ಕಲಿಸಲಿಲ್ಲ. ಏಕೆಂದರೆ ಅವಳು ಎರಡೇ ಅಕ್ಷರಗಳನ್ನು ಕಲಿತಿದ್ದಳು. ಅವಳು ಎಷ್ಟೊಂದು ಸುಂದರವಾಗಿ, ದುಂಡಾಗಿ ಬರೆದಿದ್ದಳು ಎಂದರೆ ಆ ಅಕ್ಷರಗಳ ರೂಪವನ್ನು ನಾನಿನ್ನೂ ಮರೆತಿಲ್ಲ. ರ ಠ ಅಕ್ಷರಗಳು ನನ್ನಲ್ಲಿ ಶಾಲೆ ಕಲಿಯುವ ತೀವ್ರತೆಯನ್ನು ಹುಟ್ಟುಹಾಕಿದವು.

ನನ್ನ ತಾಯಿಯ ತಂದೆ, ವಿಜಾಪುರದಿಂದ ೧೦ ಕಿಲೊಮೀಟರ್ ದೂರವಿರುವ ಅಲಿಯಾಬಾದ ಗ್ರಾಮದಲ್ಲಿ ಗಾಂವಟಿ ಶಾಲೆಯ ಶಿಕ್ಷಕನಾಗಿದ್ದನಂತೆ. ಇದೆಲ್ಲ ೭೫ ವರ್ಷಗಳಿಗೂ ಹಿಂದಿನ ಮಾತು. ಆ ತವರು ಮನೆಯಲ್ಲಿ ತಂದೆಯಿಂದ ಕಲಿತ ಎರಡೇ ಅಕ್ಷರಗಳನ್ನು ನನ್ನ ತಾಯಿ ಮರೆಯದೇ ತಂದಿದ್ದಳು. ಗಾಂವಟಿ ಶಾಲೆಯ ಶಿಕ್ಷಕರಿಗೆ ಸಂಬಳ ಇದ್ದಿದ್ದಿಲ್ಲ. ಚಾವಡಿಯಲ್ಲಿ ನಡೆಯುವ ಈ ಶಾಲೆಗೆ ಬರುವ ವಿದ್ಯಾರ್ಥಿಗಳಿಗೂ ಶಿಕ್ಷಣ ಇಲಾಖೆಗೂ ಯಾವ ಸಂಬಂಧವೂ ಇರುತ್ತಿರಲಿಲ್ಲ. ಪಠ್ಯಪುಸ್ತಕ ಮತ್ತು ಸರ್ಟಿಫಿಕೆಟ್ ಮಾತಂತೂ ದೂರೇ ಉಳಿಯಿತು. ಹೆಣ್ಣುಮಕ್ಕಳಿಗೆ ಶಿಕ್ಷಣ ವ್ಯರ್ಥ ಎಂದು ಭಾವಿಸುವಷ್ಟು ಹಿಂದುಳಿದ ಪ್ರದೇಶವದು. ‘ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ’ ಎಂಬ ಆಫ್ರಿಕದ ಕರಿಯರ ಘೋಷಣೆ ಎಷ್ಟೊಂದು ಮಾರ್ಮಿಕ. ನಿರಕ್ಷರಿ ತಾಯಿ ಕಲಿಸಿದ ಎರಡು ಅಕ್ಷರಗಳು ನನ್ನ ಬದುಕಿನಲ್ಲಿ ಅಕ್ಷರವಾಗಿ ಉಳಿದು ಬೆಳೆದವು. ನಾನು ಅಕ್ಷರಗಳ ರಾಶಿ ಮಾಡುವಂಥ ಮಟ್ಟವನ್ನು ತಲುಪಿದೆ.

ನನ್ನ ಬಾಲ್ಯದಲ್ಲಿ ಅಲೆಮಾರಿ ಜನಾಂಗದ ಮಹಿಳೆಯರು ಮನೆ ಮುಂದೆ ಹಾಡುಗಳನ್ನು ಹಾಡುತ್ತ ಒಂದು ರೊಟ್ಟಿ ಇಲ್ಲವೆ ಒಂದು ದುಡ್ಡು ಪಡೆಯುತ್ತಿದ್ದರು. ಅನೇಕ ಸಲ ಅವರ ಬಗಲ ಜೋಳಿಗೆಯಲ್ಲಿ ಮಗು ಇರುತ್ತಿತ್ತು. ಅದು ಕೂಡ ಹಾಡನ್ನು ತದೇಕಚಿತ್ತದಿಂದ ಕೇಳುತ್ತಿತ್ತು. ಗಂಗೆ ಗೌರಿಯರ ಜಗಳ, ಶಿವನ ಅಸಹಾಯಕ ಸ್ಥಿತಿ, ಅಕ್ಕ ಅಣ್ಣನ ಮಧ್ಯೆ ಅತ್ತಿಗೆಯ ಪ್ರವೇಶ. ಹೆಂಡತಿಯಿಂದಾಗಿ ಕೊನೆಗೂ ತಂಗಿಯಿಂದ ದೂರಾಗುವ ಅಣ್ಣ. ಹೀಗೆ ಅವರು ಮಧುರ ಕಂಠದಿಂದ ಹೃದಯಸ್ಪರ್ಶಿ ಹಾಡುಗಳನ್ನು ಹಾಡುವಾಗ, ಅದರ ಪರಿಣಾಮವಾಗುವುದರ ಜೊತೆಗೆ ಆ ಅಸಹಾಯಕ ಬಡವರ ಮುಗ್ಧ ಹಾಗೂ ಹತಾಶ ಮುಖಗಳನ್ನು ನೋಡುತ್ತ ಬಿಕ್ಕುತ್ತಿದ್ದೆ.

ನಾನು ಧಾರವಾಡದಲ್ಲಿ ಇದ್ದಾಗ ಭಿಕ್ಷುಕರು ಷರೀಫರ ಹಾಡುಗಳನ್ನು ಹಾಡುತ್ತ ಕೇಳುಗರನ್ನು ಮಂತ್ರಮುಗ್ಧರನ್ನಾಗಿ ಮಾಡುತ್ತಿದ್ದುದನ್ನು ಮರೆಯುವ ಹಾಗಿಲ್ಲ. ನಮ್ಮ ಜನಪದ ಕವಿಗಳು ಮತ್ತು ತತ್ತ್ವಪದಕಾರರು ಇಂಥ ಹಾಡುಗಾರರ ಮೂಲಕ ಜನಮನವನ್ನು ತುಂಬಿಕೊಳ್ಳುತ್ತಿದ್ದರು. ಸಮಾಜಮುಖಿ ಪದಗಳನ್ನು ಹಾಡುವುದರ ಮೂಲಕ, ವೈದಿಕದ ಮಾನವ ಪ್ರತ್ಯೇಕತಾವಾದಿ ವರ್ಣಶಕ್ತಿಯನ್ನು ಕುಗ್ಗಿಸುತ್ತಿದ್ದ ದಾಸರು ‘ನಿತ್ಯನಾರಕಿ’ಗಳಾದ ಶೂದ್ರರ ಪರವಾಗಿ ಇರುತ್ತಿದ್ದ ಭವ್ಯ ಪರಂಪರೆಯನ್ನು ಕನ್ನಡದ ಸಂಸ್ಕೃತಿ ಹೊಂದಿದೆ. ಹೀಗೆ ನನ್ನ ಕನ್ನಡಕ್ಕೆ ಅನೇಕ ಆಯಾಮಗಳಿವೆ.

ನಾನು ಬಹುಶಃ ಮೂರನೇ ಇಯತ್ತೆಯಲ್ಲಿದ್ದಾಗ ‘ನಮ್ಮ ಊರು’ ಎಂಬ ಪಾಠ ನನ್ನ ಮನಸೂರೆಗೊಂಡಿತ್ತು. ಹಳ್ಳಿಯ ಪ್ರಶಾಂತ ವಾತಾವರಣ, ಅದರ ಪಕ್ಕದಲ್ಲಿ ಹರಿಯುವ ಹಳ್ಳ, ವಿಶಾಲವಾದ ಕಟ್ಟೆಯುಳ್ಳ ಆಲದ ಮರ, ಎಲ್ಲರೂ ಜೊತೆಗೂಡಿ ಹಬ್ಬಗಳನ್ನು ಆಚರಿಸುವುದು… ಹೀಗೆ ಒಂದು ಊರು ಒಂದು ದೇಶದಂತೆ ಇರುವ ಚಿತ್ರಣವದು. ಸುಂದರ ಚಿತ್ರದೊಂದಿಗೆ ಇದ್ದ ಆ ಪಾಠದಲ್ಲಿ ಬಳಸಿದ ಭಾಷೆ ಸರಳ ಮತ್ತು ಆಕರ್ಷಕವಾಗಿ ಇದ್ದುದು ಇನ್ನೂ ನೆನಪಿದೆ. ಮನಸ್ಸಿಗೆ ನಾಟುವಂಥ ಮತ್ತು ಮಕ್ಕಳ ಉಚ್ಚಾರಕ್ಕೆ ದಕ್ಕುವಂಥ ಶಬ್ದಗಳಿಂದ ಕೂಡಿದ ಪುಟ್ಟ ಪುಟ್ಟ ಸಾಲುಗಳು ಆ ಲೇಖನದ ವೈಶಿಷ್ಟವಾಗಿದ್ದವು.

ನಾಲ್ಕನೇ ಇಯತ್ತೆಗೆ ಬಂದಾಗ ನಾವು ನಮ್ಮ ಪಠ್ಯಪುಸ್ತಕಗಳಲ್ಲಿನ ಹಾಡುಗಳನ್ನು ರಾಗಬದ್ಧವಾಗಿ ಹಾಡುತ್ತಿದ್ದೆವು. ‘ಕಾಡಿನ ಕವಿಗಳೆ ಓ ಕಲೆಗಾರರೆ ಆಡಿರಿ ಹಾಡಿರಿ ನರ್ತಿಸಿರಿ. ಬನಶಂಕರಿಯನು ಕೀರ್ತಿಸಿರಿ.’ ಎಂಬ ಹಾಡನ್ನು ಸಾಮೂಹಿಕವಾಗಿ ಹಾಡುವಾಗ ತುಂಬ ಖುಷಿಯಾಗುತ್ತಿತ್ತು. ದುಂಬಿಯ ಹಿಂಡಿನ ಕವನ ಮತ್ತು ಬೇಂದ್ರೆಯವರ ಪಾತರಗಿತ್ತಿ ಕವನ ನಮ್ಮ ಮುಂದೆ ಪ್ರತಿಮೆಗಳಾಗಿ ನಿಲ್ಲುತ್ತಿದ್ದವು. ‘ನಾನು ಪಂಜರ ಪಕ್ಷಿ ನನಗಿನ್ನಾರು ಗತಿ. ಕೇಳಬಯಸುವಿಯೇನು ನನ್ನ ಕಥೆಯಾ’ ಎಂಬ ಹಾಡು ನನ್ನ ಮೇಲೆ ಎಷ್ಟೊಂದು ಪರಿಣಾಮ ಬೀರಿತ್ತೆಂದರೆ ತದನಂತರ ನಾನೆಂದೂ ಪಂಜರದಲ್ಲಿ ಹಕ್ಕಿಯನ್ನು ಸಾಕಲಿಲ್ಲ. ಎರಡನೇ ಇಯತ್ತೆಯಲ್ಲಿದ್ದಾಗ ಪಂಜರದಲ್ಲಿ ಸಾಕಿದ್ದ ಗಿಳಿ ಮೊದಲ ಮತ್ತು ಕೊನೆಯ ಗಿಳಿಯಾಯಿತು.

ಐದನೇ ಇಯತ್ತೆಗೆ ಬರುವ ವೇಳೆಗೆ ನಮಗೆ ಬುದ್ಧ, ಮಹಾವೀರ, ಏಸುಕ್ರಿಸ್ತ, ಪೈಗಂಬರ್, ಬಸವಣ್ಣ ಮತ್ತು ಗಾಂಧೀಜಿಯವರ ಬಗ್ಗೆ ಪ್ರಾಥಮಿಕ ತಿಳಿವಳಿಕೆ ಬಂದಿತ್ತು. ಅಂದಿನ ಕಾಲದಲ್ಲಿ ಪಠ್ಯಪುಸ್ತಕಗಳನ್ನು ನಿರ್ಮಿಸುವವರ ಕಾಳಜಿ, ಉದಾತ್ತ ಮನೋಭಾವ ಮತ್ತು ಮಕ್ಕಳ ಚೆನ್ನಾಗಿ ಓದಲು ಸಾಧ್ಯವಾಗುವಂಥ ಪಠ್ಯವನ್ನು ಆಕರ್ಷಕವಾಗಿ ಸಿದ್ಧಪಡಿಸಬೇಕೆಂಬ ಛಲ ಅನುಪಮವಾದುದು. ಹೀಗೆ ನಮಗೆ ಕನ್ನಡದ ಮೂಲಕ ಬದುಕಿನ ಆವಿಷ್ಕಾರವಾಗತೊಡಗಿತು.

ಬಿ.ಎಸ್. ಪಾಟೀಲ ಅವರಂಥ ಕನ್ನಡ ಶಾಲಾ ಮಾಸ್ತರರು ನಮ್ಮ ಬಾಲ್ಯಜೀವನವನ್ನು ರೂಪಿಸಿದ್ದರು. ಪೂರಕ ವಾಚನಗಳು ನಮ್ಮಲ್ಲಿ ನೈತಿಕತೆಯ ಅರಿವನ್ನು ಮೂಡಿಸಿದ್ದವು. ಏಳನೇ ಇಯತ್ತೆಗೆ ಬಂದಾಗ ಹು.ಹ. ಮೆಳ್ಳಿಗಟ್ಟಿ ಮಾಸ್ತರರು ಕನ್ನಡದ ಬಗ್ಗೆ ನಮ್ಮಲ್ಲಿ ಎಂಥ ಅಭಿಮಾನ ತುಂಬಿದರೆಂದರೆ ನಾವು ವಿದ್ಯಾರ್ಥಿಗಳು ‘ಕನ್ನಡವೇ ನಮ್ಮ ವ್ಯಕ್ತಿತ್ವ’ ಎಂದು ಭಾವಿಸತೊಡಗಿದೆವು. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದವರು ಏರ್ಪಡಿಸುತ್ತಿದ್ದ ಪರೀಕ್ಷೆಗೆ ಕುಳಿತು ಪಾಸಾದ ಮೇಲೆ ಪಡೆದ ಸರ್ಟಿಫಿಕೆಟ್ ಅನ್ನು ಆವೇಶದಲ್ಲಿ ಹರಿದೊಗೆದ ನೆನಪು ಮಾಸಿಲ್ಲ. (ಆದರೆ ಆ ಘಟನೆ ನೆನಪಾದಾಗಲೆಲ್ಲ ನಗು ಬರುತ್ತದೆ)

ನಮ್ಮ ಒಳಲೋಕವೂ ಕನ್ನಡಮಯವಾಗಿತ್ತು. ಆಗಿನ ನಮ್ಮ ಕನ್ನಡಕ್ಕೆ ಆಡಳಿತ ಕನ್ನಡದ ಸೋಂಕು ತಟ್ಟಿರಲಿಲ್ಲ. ಅದು ಹಿಂದಿ, ಉರ್ದು ಮತ್ತು ಮರಾಠಿ ಭಾಷೆಗಳ ಜೊತೆ ಹಾಸುಹೊಕ್ಕಾಗಿ ಸಮೃದ್ಧವಾಗಿತ್ತು. ನಾವು ಕನ್ನಡದ ಮೂಲಕವೇ ಚಾಚಾ ನೆಹರೂ ಅವರ ಬಗ್ಗೆ ತಿಳಿದುಕೊಂಡಿದ್ದೆವು. ಅವರು ತಮ್ಮ ಮಗಳು ಇಂದಿರಾಪ್ರಿಯದರ್ಶಿನಿಗೆ ಬರೆದ ಪತ್ರಗಳು ನಮ್ಮ ಮೇಲೆ ಪರಿಣಾಮ ಬೀರಿದ್ದವು. ಕಿತ್ತೂರು ಚೆನ್ನಮ್ಮ, ಚಾಂದಬೀಬಿ, ಅಕ್ಬರ್ ಮುಂತಾದವರು ಆಗಲೇ ಪರಿಚಯವಾಗಿದ್ದರು. ಹೀಗೆ ಕನ್ನಡದ ಮೂಲಕ ಜಗತ್ತು ನಮ್ಮ ವಶವಾಗತೊಡಗಿತ್ತು.

ಆಗಿನ ಕಾಲದಲ್ಲಿ ಎಲ್ಲರ ಮನೆಯಲ್ಲೂ ರೇಡಿಯೋ ಇರಲಿಲ್ಲ. ಅದು ಶ್ರೀಮಂತರ ಪ್ರದರ್ಶನದ ವಸ್ತು ಕೂಡ ಆಗಿತ್ತು. ಸಾಯಂಕಾಲದ ಸಮಯ. ನೆಹರೂ ಅವರು ತೀರಿಕೊಂಡ ಸುದ್ದಿ ರೇಡಿಯೊದಲ್ಲಿ ಪ್ರಸಾರವಾಯಿತು ಎಂದು ವಿಜಾಪುರ ನಗರದ ನಮ್ಮ ನಾವಿಗಲ್ಲಿ ಓಣಿಯಲ್ಲಿ ಜನ ಗುಂಪುಗುಂಪಾಗಿ ಮಾತನಾಡತೊಡಗಿದ್ದರು. ನೆಹರೂ ಅವರ ಸಾವಿನ ಸುದ್ದಿಯನ್ನು ತಡೆದುಕೊಳ್ಳುವಷ್ಟು ಶಕ್ತಿ ನನ್ನಲ್ಲಿ ಇರಲಿಲ್ಲ. ಆ ಸಾಯಂಕಾಲ ನಾನು ರೇಡಿಯೋ ಇದ್ದವರ ಮನೆಗಳಿಗೆಲ್ಲ ಓಡಾಡುತ್ತ ಆ ಸುದ್ದಿಯ ಸತ್ಯಾಸತ್ಯತೆಯ ಕುರಿತು ಕೇಳತೊಡಗಿದೆ. ನೆಹರೂ ಸಾಯಬಾರದು ಎಂಬುದು ನನ್ನ ಆಸೆಯಾಗಿತ್ತು. ಯಾರೂ ನನ್ನ ಆಸೆಯನ್ನು ಚಿಗುರಿಸಲಿಲ್ಲ. ನೆಹರೂ ಸಾವು, ನಮ್ಮನ್ನು ಪ್ರೀತಿಸುವ ನಮ್ಮ ಮನೆಯಲ್ಲಿನ ಹಿರಿಯರೊಬ್ಬರ ಸಾವಿನಂತಾಗಿತ್ತು. ನಮ್ಮ ರಾಜಕೀಯ ನಾಯಕರು ನಮ್ಮ ರಕ್ತಸಂಬಂಧಿಕರಂತೆ ಭಾಸವಾಗುತ್ತಿದ್ದ ಕಾಲವೊಂದಿತ್ತು ಎಂದರೆ, ನಮ್ಮ ಮಕ್ಕಳೂ ನಂಬದ ಸ್ಥಿತಿಯಲ್ಲಿ ಇಂದು ನಾವಿದ್ದೇವೆ.

ನೆಹರೂ ನಿಧನರಾದ ರಾತ್ರಿ ನನಗೆ ಬಹಳ ಹೊತ್ತಿನ ವರೆಗೆ ನಿದ್ರೆ ಬರಲಿಲ್ಲ. ಅವರನ್ನು ಬ್ರಿಟಿಷರು ಬಂಧಿಸಿ ನೈನಿತಾಲ ಕಡೆಗೆ ಒಯ್ಯುತ್ತಿದ್ದ ಸಂದರ್ಭವನ್ನು ಸ್ವತಃ ನೆಹರೂ ಅವರೇ ಬರೆದದ್ದರ ಕನ್ನಡ ಅನುವಾದ ಓದಿದ ನೆನಪಾಗಿ ದುಃಖ ಉಮ್ಮಳಿಸಿ ಬರುತ್ತಿತ್ತು. ಈ ದುಃಖವನ್ನು ಶಮನಗೊಳಿಸಲೇ ಬೇಕಿತ್ತು. ಅವರ ಬಗ್ಗೆಯೇ ಯೋಚನೆ ಮಾಡುತ್ತಿದ್ದಾಗ ಅವರ ಮೇಲೆ ಕವನ ಬರೆಯಬೇಕೆನಿಸಿತು. ಆ ರಾತ್ರಿ ಹಾಸಿಗೆಯಿಂದ ಎದ್ದು ನೆಹರೂ ಮೇಲೆ ಕವನ ಬರೆದೆ. ಅದು ನನ್ನ ಮೊದಲ ಕವನವಾಗಿತ್ತು. ಸ್ವಲ್ಪ ದಿನ ಕಳೆದ ಮೇಲೆ ಅಳಕುತ್ತ ಮೆಳ್ಳಿಗಟ್ಟಿ ಸರ್‌ಗೆ ತೋರಿಸಿದೆ. ಇಷ್ಟು ಒಳ್ಳೆಯ ಕವನ ಯಾರು ಬರೆದದ್ದು ಎಂದು ಕೇಳಿದರು. ನಾನು ಕಕ್ಕಾಬಿಕ್ಕಿಯಾಗಿ ನಾನೇ ಬರೆದಿರುವುದಾಗಿ ಹೇಳಿದೆ. ನಾನು ಸುಳ್ಳು ಹೇಳುತ್ತಿದ್ದೇನೆ ಎಂದು ಅವರಿಗೆ ಸಿಟ್ಟು ಬಂದಿತು. ನನಗೆ ಕಪಾಳಮೋಕ್ಷವಾಯಿತು. ಮುಂದೆ ‘ಮಿತ್ರಪೇಮ’ ಎಂಬ ನಾಟಕ ಬರೆದು ಗೆಳಯರ ಜೊತೆ ಆಡಿ ತೋರಿಸಿದಾಗ ಅವರಿಗೆ ಬಹಳ ಆನಂದವಾಯಿತು.

ಏಳನೆಯ ಇಯತ್ತೆ ವಿದ್ಯಾರ್ಥಿಗಳು ಕೈಬರಹ ಪತ್ರಿಕೆ ಮಾಡಬೇಕಿತ್ತು. ಆ ಪತ್ರಿಕೆಗೆ ವಿದ್ಯಾರ್ಥಿಗಳು ಕೊಟ್ಟ ಪುಟ್ಟ ಕಥೆ, ಕವನ, ಹಾಸ್ಯ ಮತ್ತು ಲೇಖನ ಮುಂತಾದ ಸಾಹಿತ್ಯವನ್ನೆಲ್ಲ ಮೆಳ್ಳಿಗಟ್ಟಿ ಸರ್ ನನ್ನ ಕಡೆಯಿಂದಲೇ ಬರೆಸಿ ಕೈ ಬರಹ ಪತ್ರಿಕೆಯನ್ನು ಸಿದ್ಧಪಡಿಸಿದರು. ಕಪ್ಪು ಮಸಿಯಿಂದ ಬರೆದ ಆ ಕೈಬರಹ ಪತ್ರಿಕೆಯ ಅಕ್ಷರಗಳು, ದೂರಿನಿಂದ ನೋಡುವವರಿಗೆ ಪ್ರಿಂಟು ಮಾಡಿದ ಅಕ್ಷರಗಳಂತೆ ಕಾಣುತ್ತಿದ್ದವು. ಕನ್ನಡದಂಥ ಸುಂದರ ಅಕ್ಷರಗಳು ಜಗತ್ತಿನ ಯಾವ ಭಾಷೆಗೂ ಇಲ್ಲ.

ನಂತರ ಹೈಸ್ಕೂಲು ಮುಗಿಸಿ ಕಾಲೇಜು ಸೇರಿ ಬಿಎ ದ್ವಿತೀಯ ವರ್ಷಕ್ಕೆ ಬಂದಾಗ, ಕನ್ನಡದ ಶ್ರೇಷ್ಠ ಪ್ರಾಧ್ಯಾಪಕ ಎ.ಎಸ್. ಹಿಪ್ಪರಗಿ ಅವರ ವಿದ್ಯಾರ್ಥಿಯಾಗುವ ಮಹದಾಶೆಯಿಂದ ಕನ್ನಡ ಮೇಜರ್ ಆಗಿ ಮತ್ತು ಹಿಂದಿ ಹಾಗೂ ಸಂಸ್ಕೃತ ಭಾಷೆಗಳನ್ನು ಮೈನರ್ ಆಗಿ ತೆಗೆದುಕೊಂಡೆ. ಇಂಗ್ಲಿಷ್ ಬೇಸಿಕ್ ಆಗಿ ಇತ್ತು. ನನಗೆ ಹಳೆಗನ್ನಡ ಭಾಷೆಯ ಬಗ್ಗೆ ತೀವ್ರ ಆಸಕ್ತಿ ಹುಟ್ಟಿತು. ಕೇಶಿರಾಜನ ಶಬ್ದಮಣಿದರ್ಪಣದ ಮೇಲೆ ಎಷ್ಟೊಂದು ಪ್ರಭುತ್ವ ಬಂದಿತ್ತೆಂದರೆ ನನ್ನ ಸಹಪಾಠಿಗಳಿಗೆ ಮತ್ತು ಕೊಲ್ಹಾಪುರ ವಿಶ್ವವಿದ್ಯಾಲಯದ ಸೋಲಾಪುರ ಪಿ.ಜಿ. ಸೆಂಟರ್‌ನಲ್ಲಿ ಹೊರಗಿನಿಂದ ಕನ್ನಡ ಎಂ.ಎ. ಪರೀಕ್ಷೆಗೆ ಕುಳಿತವರಿಗೆ ಶಬ್ದಮಣಿದರ್ಪಣ ಟ್ಯೂಷನ್ ಹೇಳುತ್ತಿದ್ದೆ. ಪ್ರೊ. ಬಿ.ಬಿ. ನಾಡಗೌಡ ಅವರ ಪ್ರೀತಿ, ಪ್ರೊ. ಹಿಪ್ಪರಗಿ ಅವರ ಕಾಳಜಿ, ಸಂಸ್ಕೃತ ಪ್ರಾಧ್ಯಾಪಕ ಬಿ.ಎಸ್. ಸಾರಂಗಮಠ ಅವರ ಉದಾತ್ತ ಭಾವ ಹಾಗೂ ಹಿಂದಿ ಪ್ರಾಧ್ಯಾಪಕ ಪಿ.ವಿ. ವಜ್ರಮಟ್ಟಿ ಅವರ ಹೋರಾಟದ ಮನೋಭಾವ ನನ್ನ ಕನ್ನಡದ ಮೇಲೆ ಆಳವಾದ ಪರಿಣಾಮ ಬೀರಿದವು.

ಹಿಪ್ಪರಗಿ ಸರ್ ಅವರು ವ್ಯಾಕರಣ, ಕಾವ್ಯಮೀಮಾಂಸೆ, ಛಂದಸ್ಸು, ಅಲಂಕಾರ, ಹಳೆಗನ್ನಡ, ನವೋದಯ, ನವ್ಯ ಹೀಗೆ ಎಲ್ಲದರ ಮೇಲೂ ಪ್ರಭುತ್ವ ಸಾಧಿಸಿದವರಾಗಿದ್ದರು. ಹೀಗಾಗಿ ನಾನು ಎಲ್ಲವನ್ನೂ ಪಡೆಯುತ್ತ ಬೆಳೆದೆ. ಬಿಎ ಮುಗಿದ ನಂತರ ಧಾರವಾಡ ವಿಶ್ವವಿದ್ಯಾಲಯಕ್ಕೆ ಬಂದು ಕನ್ನಡ ಎಂ.ಎ. ಪಠ್ಯಕ್ರಮ ನೋಡಿದಾಗ, ಹಿಪ್ಪರಗಿ ಸರ್ ಕಲಿಸಿದ್ದೇ ಇತ್ತು. ನಾನು ಕನ್ನಡ ಬಿಟ್ಟು ಭಾಷಾವಿಜ್ಞಾನದಲ್ಲಿ ಎಂ.ಎ. ಮಾಡಲು ಇದೊಂದು ಕಾರಣ.

ಪಂಪ ನನ್ನ ಮೇಲೆ ಆಳವಾದ ಪರಿಣಾಮ ಬೀರಿದ. ಇಂಥ ಒಬ್ಬ ಕವಿ ಹುಟ್ಟಲು ಸಾಧ್ಯವೇ ಎಂದು ನನಗೆ ಇಂದಿಗೂ ಅನಿಸುತ್ತದೆ. ಪ್ರೊ. ಹಿಪ್ಪರಗಿ ಅವರು ನನಗೆ ಪಂಪನ ಪ್ರತಿಭೆಯ ದರ್ಶನ ಮಾಡಿಸಿದರು. ಮುಂದೆ ವಚನದ ಮಹತ್ವ ಅರಿತ ಮೇಲಂತೂ ನನ್ನ ಬದುಕಿನ ಮಾರ್ಗವೇ ಬದಲಾಯಿತು. ಪಂಪನನ್ನು ಮತ್ತು ವಚನ ಸಾಹಿತ್ಯವನ್ನು ಅರಿತುಕೊಳ್ಳಲು ನನಗೆ ಮಾರ್ಕ್ಸ್ ವಾದ ಬಹಳಷ್ಟು ಸಹಾಯ ಮಾಡಿತು. ನಾವಿಂದು ಹಳೆಗನ್ನಡವನ್ನು ಮರೆಯುತ್ತಿದ್ದೇವೆ. ಹಳೆಗನ್ನಡ ಭಾಷೆ ಮತ್ತು ವಚನ ಕನ್ನಡದ ಸವಿಯನ್ನು ಉಂಡವರಿಗೆ ಜಗತ್ತಿನಲ್ಲಿ ಬೇರೆ ಏನೇ ಇರದಿದ್ದರೂ ನಡೆಯುತ್ತದೆ ಎಂದು ಅನಿಸುತ್ತದೆ.

ಆಡಳಿತ ಕನ್ನಡದಿಂದ ನೈಜ ಕನ್ನಡ ಕಳೆಗುಂದಿತು. ನಮ್ಮ ಕನ್ನಡದ ಉಪಭಾಷೆಗಳು ಮರೆಯಾಗತೊಡಗಿದವು. ಸಿನಿಮಾ ಮತ್ತು ಟಿವಿ ಕನ್ನಡ ನಮ್ಮ ಭಾಷಾವೈವಿಧ್ಯದ ಸೂಕ್ಷ್ಮತೆಗೆ ಧಕ್ಕೆ ತಂದವು. ನಮ್ಮ ಆಡಳಿತ ಭಾಷೆಯಲ್ಲಿ ಬಳಸುವ ಪದಗಳು ಜನರಿಂದ ಎಷ್ಟೊಂದು ದೂರ ಇವೆ ಎಂದರೆ, ಅವುಗಳನ್ನು ಅರ್ಥ ಮಾಡಿಕೊಳ್ಳಲು ಆವರಣದಲ್ಲಿ ಇಂಗ್ಲಿಷ್ ಪದಗಳ ಬಳಕೆ ಮಾಡುವಂಥ ಪರಿಸ್ಥತಿ ಇದೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯನಾಗಿದ್ದಾಗ ಅಲ್ಲಿ ಬಳಸುವ ಪದಗಳ ಬಗ್ಗೆಯೂ ಬೇಸರ ವ್ಯಕ್ತಪಡಿಸಿದ್ದೆ. ‘ದಯವಿಟ್ಟು ನೀವು ಬಳಸುವ ನಿಕಾಯಪಕಾಯ ಶಬ್ದಗಳಿಗೆ ಇಂಗ್ಲಿಷ್ ಶಬ್ದಗಳನ್ನು ಸಹಾಯಕವಾಗಿ ಕೊಡಿ’ ಎಂದು ಹೇಳುತ್ತಿದ್ದೆ. ಅಲ್ಲಿರುವ ಅನೇಕರು ಪದೆಪದೆ ‘ಸಾಂಸ್ಕೃತಿಕ ಮುಖಾಮುಖಿ’, ‘ಪ್ರತಿಸಂಸ್ಕೃತಿ’, ‘ಸಂಕಥನ’, ‘ಪ್ರಕ್ರಿಯಾತ್ಮಕ ಧೋರಣೆ’ ಮುಂತಾದ ಪದಗಳನ್ನು ಮಂತ್ರಗಳಂತೆ ಬಳಸುತ್ತ ಕ್ಲೀಷೆಯಾಗಿಸಿದ್ದಾರೆ. ಕನ್ನಡವನ್ನು ಬೆಳೆಸುವ ನಮ್ಮ ಸರ್ಕಾರದ ಮತ್ತು ವಿಶ್ವವಿದ್ಯಾಲಯದ ಪ್ರಯತ್ನಗಳು, ಕನ್ನಡವನ್ನು ಜನರಿಂದ ದೂರ ಒಯ್ಯುವ ರೀತಿಯಲ್ಲಿವೆ.

ನಾವು ಯಾವ ಭಾಷೆಯನ್ನು ‘ಎಚ್ಚರದಿಂದ’ ಬಳಸುತ್ತೇವೆಯೂ ಅದು ಸಂಪರ್ಕ ಭಾಷೆಯಾಗುವುದೇ ಹೊರತಾಗಿ ನಮ್ಮ ಒಳಗಿನ ಭಾಷೆಯಾಗುವುದಿಲ್ಲ. ಯಾವುದನ್ನು ನಾವು ‘ಸಹಜವಾಗಿ’ ಬಳಸುತ್ತೇವೆಯೋ ಅದು ನಮ್ಮ ಒಳಗಿನ ಭಾಷೆಯಾಗಿರುತ್ತದೆ. ಸೃಜನಶೀಲ ಲೇಖಕರು ತಮ್ಮ ಒಳಗಿನ ಭಾಷೆಯಲ್ಲಿ ಬರೆಯ ಬಯಸುತ್ತಾರೆ. ಒಂದು ಶಬ್ದಕ್ಕೆ ವಿವಿಧಾರ್ಥಗಳ ಆಯಾಮಗಳಿದ್ದು ಆ ಶಬ್ದವನ್ನು ಯಾವ ಸಂದರ್ಭದಲ್ಲಿ ಬಳಸುತ್ತೇವೆಯೋ ಆ ಸಂದರ್ಭಕ್ಕೆ ತಕ್ಕಂಥ ಅರ್ಥವನ್ನು ಅದು ಸ್ಫುರಿಸುತ್ತವೆ. ಹೀಗೆ ನನಗೆ ಕನ್ನಡ ಭಾಷೆ ಎಂಬುದು ನನ್ನ ಒಳಭಾಷೆಯಾಗಿರುವುದರಿಂದ ಅದರಿಂದ ದೂರ ಉಳಿದು ನನಗೆ ಬರೆಯಲು ಮತ್ತು ಬದುಕಲು ಸಾಧ್ಯವೇ ಇಲ್ಲ.

‘ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು. ಮೆಟ್ಟಿದರೆ ಕನ್ನಡ ನೆಲವ ಮೆಟ್ಟಬೇಕು. ಬದುಕಿದು ಜಟಕಾ ಬಂಡಿ, ವಿಧಿ ಓಡಿಸುವ ಬಂಡಿ’ ಹೀಗೆ ಕನ್ನಡದ ಗತಿ ತರ್ಕಹೀನವಾದರೆ ಅದನ್ನು ಕಾಪಾಡಲಿಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಹುಟ್ಟುವುದು, ಮೆಟ್ಟುವುದು, ಜಟಕಾ ಬಂಡಿ, ವಿಧಿ ಹೀಗೆ ಒಂದಕ್ಕೊಂದು ಸಂಬಂಧವೇ ಇಲ್ಲದಂತೆ ನಮ್ಮ ಸಿನಿಮಾ ಕವಿಗಳು ಬರೆದರೆ ಕನ್ನಡ ಎಲ್ಲಿಗೆ ಹೋಗಬೇಕು?

ಕನ್ನಡವನ್ನು ಉಳಿಸಿ ಬೆಳೆಸುವುದೆಂದರೆ ಅದನ್ನು ಸಂವೇದನಾಶೀಲವಾಗಿ ಬಳಸುವುದು. ಅದರ ಉನ್ನತ ಪರಂಪರೆಯನ್ನು ಕಾಪಾಡಿಕೊಳ್ಳುವುದು. ಕನ್ನಡ ಭಾಷೆಯ ಬಹುಪಾಲು ಕವಿಗಳು ಸಂಸ್ಕೃತದಿಂದ ಭಾಷಾ ಸಮೃದ್ಧಿಯನ್ನು ಹೊಂದಿದರು. ಅದರ ಸಾಹಿತ್ಯ ಮತ್ತು ಪುರಾಣಗಳನ್ನು ಬಳಸಿಕೊಂಡರು. ಆದರೆ ಸಂಸ್ಕೃತದೊಳಗಿನ ವೈದಿಕವನ್ನು ದೂರ ಇಟ್ಟರು. ಪಂಪ ರನ್ನರಿಂದ ಆರಂಭವಾದ ಈ ಪ್ರಕ್ರಿಯೆ ವಚನಕಾರರಲ್ಲಿ ಯಶಸ್ಸಿನ ತುದಿಯನ್ನು ಮುಟ್ಟಿತು. ಶರಣರು ೮೫೦ ವರ್ಷಗಳಷ್ಟು ಹಿಂದೆಯೆ ಜನ ಭಾಷೆಯಾದ ಕನ್ನಡವನ್ನು ಹೋರಾಟದ ಭಾಷೆಯನ್ನಾಗಿ ರೂಪಿಸಿದರು. ಅವರು ಉಪನಿಷತ್ತಿನ ಉದಾತ್ತ ವಿಚಾರಗಳನ್ನು ತಮ್ಮದಾಗಿಸಿಕೊಂಡರು. ಆದರೆ ತಮ್ಮ ವಚನಗಳಲ್ಲಿ ವೈದಿಕ ಸಾಹಿತ್ಯದ ಒಂದಂಶವನ್ನೂ ತರಲಿಲ್ಲ. ಅವರು ಕನ್ನಡವನ್ನು ಅವೈದಿಕ ಧರ್ಮದ ಭಾಷೆಯಾಗಿ ಬೆಳೆಸಿದರು. ಹೀಗಾಗಿ ವಚನಧರ್ಮವು ಧರ್ಮಯುದ್ಧಗಳ ಧರ್ಮವಾಗದೆ ಹೋರಾಟದ ಧರ್ಮವಾಗಿದೆ. ವಚನಧರ್ಮದಂಥ ಹೋರಾಟದ ಧರ್ಮವನ್ನು ಕನ್ನಡ ಭಾಷೆಯಲ್ಲಿ ಮಾತ್ರ ಕಾಣಲು ಸಾಧ್ಯ. ಇಂಥ ಕನ್ನಡದಲ್ಲಿ ನನಗೆ ಬರೆಯಲು ಸಾಧ್ಯವಾಗಿರುವುದೇ ನನ್ನಮಟ್ಟಿಗೆ ಒಂದು ಮಹಾಸಾಧನೆ.

(ಚಿತ್ರಗಳು:ದೇವು)