ನಿರ್ದಿಷ್ಟ ಪ್ರದೇಶ ಹಾಗೂ ನಿರ್ದಿಷ್ಟ ಕಾಲಘಟ್ಟದ ಸಂಸ್ಕೃತಿಯನ್ನು ದೃಶ್ಯಾತ್ಮಕವಾಗಿ ಪ್ರಸ್ತುತಪಡಿಸುವ ಸಿನಿಮಾಗಳು ಸಾಂಸ್ಕೃತಿಕ ನಿರ್ದಿಷ್ಟತೆಯನ್ನು ಗುರುತಿಸಿಕೊಳ್ಳಲು ಸಹಕಾರಿಗಳಾಗಿವೆ. ಹೀಗೆ ಸಂಸ್ಕೃತಿಯನ್ನು ಒಳಗೊಂಡು ರೂಪುಗೊಳ್ಳುವ ಸಿನಿಮಾಗಳು ಸಾಮಾಜಿಕ ಪರಿವರ್ತನೆಗಳನ್ನೂ ಉಂಟುಮಾಡುತ್ತವೆ. ಹಾಗೆ ನೋಡಿದರೆ ಸಿನಿಮಾಗಳು ಜನರನ್ನು ಕ್ಷಿಪ್ರವಾಗಿ ಪ್ರಭಾವಿಸಬಲ್ಲವು.  ನಮ್ಮ ನಾಡಿನ ಜನಪರ ಚಳವಳಿಗಳು, ಇತಿಹಾಸ ಮತ್ತು ಸಾಂಸ್ಕೃತಿಕ ವಿಚಾರಗಳು  ಕನ್ನಡ ಸಿನಿಮಾಗಳಲ್ಲಿ ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಿ ಮೂಡಿ ಬಂದಿವೆ ಎಂಬ ವಿಶ್ಲೇಷಣೆಯನ್ನು ವಿಶ್ವನಾಥ ಎನ್. ನೇರಳಕಟ್ಟೆ  ಮಾಡಿದ್ದಾರೆ. 

ಜನರ ಒಟ್ಟು ಜೀವನ ವಿಧಾನವನ್ನು ‘ಸಂಸ್ಕೃತಿ’ ಎಂದು ಗುರುತಿಸಲಾಗುತ್ತದೆ. ‘ಸಂಸ್ಕೃತಿ’ ಎನ್ನುವ ಪರಿಕಲ್ಪನೆಯು ಭಾಷೆ, ನಂಬಿಕೆ, ಆಚರಣೆ, ನೈತಿಕ ಕಟ್ಟುಪಾಡು, ನೈತಿಕ ನಿಯಮಾವಳಿಗಳು, ಉಡುಗೆ- ತೊಡುಗೆ, ಧರ್ಮ, ಕಲೆ, ವಾಸ್ತುಶಿಲ್ಪ ಶೈಲಿ, ಜೀವನಾವರ್ತನಗಳು- ಮೊದಲಾದ ಅಂಶಗಳನ್ನು ಒಳಗೊಂಡಿದೆ. ಸಿನಿಮಾಗಳಲ್ಲಿ ಕಥೆಯ ನಿರಂತರತೆಗೆ ಪೂರಕವಾಗಿ ಈ ಎಲ್ಲಾ ಅಂಶಗಳು ಕಂಡುಬರುತ್ತವೆ. ಆದ್ದರಿಂದ ಸಿನಿಮಾಗಳು ಕೆಲವು ಸಂದರ್ಭಗಳಲ್ಲಿ ಪ್ರಜ್ಞಾಪೂರ್ವಕವಾಗಿ, ಹಲವು ಸಂದರ್ಭಗಳಲ್ಲಿ ಅಪ್ರಜ್ಞಾಪೂರ್ವಕವಾಗಿ ಸಾಂಸ್ಕೃತಿಕ ವಿಚಾರಗಳನ್ನು ಸಮಾಜದ ಮುಂದಿಡುತ್ತವೆ.

“ಸಂಸ್ಕೃತಿಯನ್ನು ಪ್ರತಿಬಿಂಬಿಸುವಲ್ಲಿ ಚಿತ್ರಕಲೆ, ಸಂಗೀತ, ಸಾಹಿತ್ಯಗಳಿಗಿಂತಲೂ ಸಿನಿಮಾ ಹೆಚ್ಚು ಪ್ರಭಾವಶಾಲಿಯಾದ ಸೂಚ್ಯಂಕವಾಗಿದೆ. ಸಮಾಜದ ಸೃಜನಾತ್ಮಕ ಅಭಿವ್ಯಕ್ತಿಯಾಗಿರುವ ಸಿನಿಮಾಗಳು ಜನಜೀವನದ ಸಾಂಸ್ಕೃತಿಕ ವಿಚಾರಗಳನ್ನು ಪರಿಣಾಮಕಾರಿಯಾಗಿ ಪ್ರಚುರಪಡಿಸುತ್ತವೆ. ನಿರ್ದಿಷ್ಟ ಕಾಲಘಟ್ಟದ ಸಾಂಸ್ಕೃತಿಕ ಚಹರೆಗಳನ್ನು ಗುರುತಿಸುವಲ್ಲಿ ಸಿನಿಮಾಗಳ ಪಾತ್ರ ಪ್ರಧಾನವಾಗಿದೆ”- ಎನ್ನುವ ಅಭಿಪ್ರಾಯವನ್ನು ಲೋವಾ ವಿಶ್ವವಿದ್ಯಾಲಯದಲ್ಲಿ ತೌಲನಿಕ ಸಾಹಿತ್ಯ ವಿಭಾಗದ ಪ್ರಾಧ್ಯಾಪಕರಾಗಿರುವ ಪ್ರೊ. ಡ್ಯೂಡ್ಲೇ ಆ್ಯಂಡ್ರ್ಯೂ ಅವರು ವ್ಯಕ್ತಪಡಿಸಿದ್ದಾರೆ. ಸಿನಿಮಾ ಮತ್ತು ಸಂಸ್ಕೃತಿಯ ನಡುವಿನ ಅಂತರ್ಸಂಬಂಧವನ್ನು ಈ ಮಾತು ಮನಗಾಣಿಸುತ್ತದೆ.

ನಿರ್ದಿಷ್ಟ ಪ್ರದೇಶ ಹಾಗೂ ನಿರ್ದಿಷ್ಟ ಕಾಲಘಟ್ಟದ ಸಂಸ್ಕೃತಿಯನ್ನು ದೃಶ್ಯಾತ್ಮಕವಾಗಿ ಮತ್ತು ಸೃಷ್ಟಿಶೀಲವಾಗಿ ಪ್ರಸ್ತುತಪಡಿಸುವ ಸಿನಿಮಾಗಳು ಸಾಂಸ್ಕೃತಿಕ ನಿರ್ದಿಷ್ಟತೆಯನ್ನು ಗುರುತಿಸಿಕೊಳ್ಳಲು ಸಹಕಾರಿಗಳಾಗಿವೆ. ಹೀಗೆ ಸಂಸ್ಕೃತಿಯನ್ನು ಒಳಗೊಂಡು ರೂಪುಗೊಳ್ಳುವ ಸಿನಿಮಾಗಳು ಸಾಮಾಜಿಕ ಪರಿವರ್ತನೆಗಳನ್ನೂ ಉಂಟುಮಾಡುತ್ತವೆ. ಸಾಂಸ್ಕೃತಿಕ ಸಂಚಲನೆಯನ್ನು ಉಂಟುಮಾಡುವಷ್ಟು ಪ್ರಭಾವಶಾಲಿಯಾಗಿರುತ್ತವೆ. ‘ಬಂಗಾರದ ಮನುಷ್ಯ’ ಸಿನಿಮಾವನ್ನು ನೋಡಿದ ಅದೆಷ್ಟೋ ಯುವಜನರು ತಮ್ಮ ತಮ್ಮ ಹಳ್ಳಿಗಳಿಗೆ ಮರಳಿ, ಕೃಷಿ ಸಂಸ್ಕೃತಿಯಲ್ಲಿ ಪಾಲು ಪಡೆಯುವಂತಾದುದು ಸಾಂಸ್ಕೃತಿಕ ಸಂಚಲನೆಯ ದೃಷ್ಟಿಯಿಂದ ನಾವು ಗಮನಿಸಿಕೊಳ್ಳಬಹುದಾದ ಅತ್ಯುತ್ತಮ ಉದಾಹರಣೆಯಾಗಿದೆ. ಜನರನ್ನು ಯಂತ್ರಾಧಾರಿತ ಔದ್ಯೋಗಿಕ ವ್ಯವಸ್ಥೆಯಿಂದ ಶ್ರಮಾಧಾರಿತ ವ್ಯವಸ್ಥೆಯ ಕಡೆಗೆ, ನಗರ ಸಂಸ್ಕೃತಿಯಿಂದ ಗ್ರಾಮೀಣ ಸಂಸ್ಕೃತಿಯ ಕಡೆಗೆ ಆಕರ್ಷಿತರಾಗುವಂತೆ ಮಾಡುವ ಅದ್ಭುತ ಶಕ್ತಿ ಸಿನಿಮಾಗಳಿಗಿದೆ.

ಸಿನಿಮಾದಲ್ಲಿ ನಾಯಕ ನಟ ಸಿಗರೇಟು ಸೇದುವ ಶೈಲಿಯನ್ನು ಯಥಾವತ್ತಾಗಿ ಅನುಕರಿಸುವವರಿದ್ದಾರೆ. ನಟಿಯ ಉಡುಗೆ- ತೊಡುಗೆಗಳನ್ನು ಗಮನಿಸಿ, ಮಾರುಕಟ್ಟೆಗೆ ಹೋದಾಗ ಅದನ್ನೇ ಕೇಳಿ ಕೊಂಡುಕೊಳ್ಳುವ ಯುವತಿಯರಿದ್ದಾರೆ. ಸಿನಿಮಾದಲ್ಲಿ ನಟನಾಡಿದ ಯಾವುದೋ ಒಂದು ಮಾತು ಜನರ ಒಟ್ಟು ಜೀವನ ವಿಧಾನದಲ್ಲಿ ಗಮನಾರ್ಹ ಬದಲಾವಣೆಯನ್ನು ಉಂಟುಮಾಡಿರುವ ಸಂದರ್ಭಗಳು ಬೇಕಾದಷ್ಟಿವೆ. ನಟರ ನಡಿಗೆ, ಮಾತಿನ ಶೈಲಿ, ಒಟ್ಟು ವ್ಯಕ್ತಿತ್ವ ಜನರ ಮೇಲೆ ಬೀರುವ ಪ್ರಭಾವ ಅಸದೃಶವಾದುದು.

ಮೇಲಿನ ಈ ಎಲ್ಲಾ ವಿಷಯಗಳನ್ನು ಆಧಾರವಾಗಿರಿಸಿಕೊಂಡು ಸಿನಿಮಾ ಮತ್ತು ಸಂಸ್ಕೃತಿಯ ನಡುವಿನ ಸಂಬಂಧವನ್ನು ಪ್ರಮುಖವಾಗಿ ಎರಡು ಆಯಾಮಗಳಲ್ಲಿ ಗುರುತಿಸಿಕೊಳ್ಳಬಹುದು:

1. ಸಮಾಜದ ಒಟ್ಟು ಸಂಸ್ಕೃತಿಯನ್ನು ಸಿನಿಮಾಗಳು ಅಭಿವ್ಯಕ್ತಪಡಿಸುತ್ತವೆ.
2. ಸಿನಿಮಾಗಳಲ್ಲಿ ವ್ಯಕ್ತಗೊಂಡ ಸಾಂಸ್ಕೃತಿಕ ವಿಚಾರಗಳು ಸಾಮಾಜಿಕ ಪರಿವರ್ತನೆಗೆ ಎಡೆಮಾಡಿಕೊಡುತ್ತವೆ.

ಸಮಾಜದಿಂದ ಸಾಂಸ್ಕೃತಿಕ ವಿಚಾರಗಳನ್ನು ಸ್ವೀಕರಿಸುವ ಹಾಗೂ ಸಮಾಜಕ್ಕೆ ಸಾಂಸ್ಕೃತಿಕ ಮಾರ್ಗಸೂಚಿಯನ್ನು ಒದಗಿಸಿಕೊಡುವ ವಿಚಾರಧಾರೆಗಳೆರಡನ್ನೂ ಸಿನಿಮಾ ಒಳಗೊಂಡಿದೆ. ಜನರ ಮನಸ್ಸಿಗೆ ಮುದ ನೀಡುವ ಮಹತ್ತರ ಉದ್ದೇಶವನ್ನು ಇರಿಸಿಕೊಂಡು ರೂಪುಗೊಂಡ ಸಿನಿಮಾಗಳು ಕೇವಲ ಆ ಒಂದು ಉದ್ದೇಶಕ್ಕೆ ಮಾತ್ರವೇ ಸೀಮಿತವಾಗಿರದೆ ಸಾಂಸ್ಕೃತಿಕ ನೆಲೆಗಟ್ಟಿನಿಂದ ಹಲವಾರು ಕಾರ್ಯಯೋಜನೆಗಳನ್ನು ಪೂರೈಸಿಕೊಂಡಿವೆ; ಪೂರೈಸಿಕೊಳ್ಳುತ್ತಿವೆ.

ಕನ್ನಡ ಸಂಸ್ಕೃತಿಯ ಪ್ರತಿನಿಧೀಕರಣವಾಗಿ ನಿರ್ದಿಷ್ಟವಾಗಿ ಕನ್ನಡ ಸಿನಿಮಾಗಳ ವಿಚಾರಕ್ಕೆ ಬಂದಾಗ, ಹಿಂದಿನ ಕಾಲಘಟ್ಟದಿಂದಲೂ ಕೂಡಾ ಕನ್ನಡ ಸಂಸ್ಕೃತಿಯನ್ನು ಉಳಿಸಿ- ಬೆಳೆಸುವ ದೃಷ್ಟಿಯಿಂದ ಕನ್ನಡ ಸಿನಿಮಾಗಳು ಸಕಾರಾತ್ಮಕವಾಗಿ ಸ್ಪಂದಿಸುತ್ತಲೇ ಬಂದಿವೆ. ಕನ್ನಡ ಚಲನಚಿತ್ರ ರಂಗವನ್ನು ಸಾಂಸ್ಕೃತಿಕ ದೃಷ್ಟಿಕೋನದ ಅಧ್ಯಯನದ ಅನುಕೂಲಕ್ಕಾಗಿ ಮೂರು ಹಂತಗಳಲ್ಲಿ ವರ್ಗೀಕರಿಸಿಕೊಳ್ಳಬಹುದಾಗಿದೆ. ಆ ವರ್ಗೀಕರಣಗಳೆಂದರೆ:

1. ಮೊದಲನೆಯ ಕಾಲಘಟ್ಟ (1934ರಿಂದ 1950ನೇ ಇಸವಿಯವರೆಗೆ)
2. ಎರಡನೆಯ ಕಾಲಘಟ್ಟ (1951ರಿಂದ 2000ನೇ ಇಸವಿಯವರೆಗೆ)
3. ಮೂರನೆಯ ಕಾಲಘಟ್ಟ (2001ನೇ ಇಸವಿಯಿಂದ ತೊಡಗಿ ಇತ್ತೀಚಿನ ಸಿನಿಮಾಗಳವರೆಗೆ)

ಮೊದಲನೆಯ ಕಾಲಘಟ್ಟದ ಕನ್ನಡ ಸಿನಿಮಾಗಳನ್ನು ಗಮನಿಸಿಕೊಂಡಾಗ ಅವುಗಳಲ್ಲಿ ವ್ಯಕ್ತಗೊಂಡಿರುವ ಸಾಂಸ್ಕೃತಿಕ ಶ್ರೀಮಂತಿಕೆ ಅಚ್ಚರಿಯನ್ನು ಹುಟ್ಟಿಸುತ್ತದೆ. ಕನ್ನಡ ರಂಗಭೂಮಿಯ ಪ್ರಭಾವಕ್ಕೆ ಒಳಗಾಗಿಯೇ ರೂಪುಗೊಂಡ ಆರಂಭದ ಕನ್ನಡ ಸಿನಿಮಾಗಳ ಅಭಿವ್ಯಕ್ತಿಯ ವಿಧಾನದಲ್ಲಿಯೂ ರಂಗಭೂಮಿಯ ಪ್ರಭಾವವಿತ್ತು. ಈ ಪ್ರಭಾವವನ್ನು ಭಾಷೆಯ ಬಳಕೆ, ಕಥಾವಸ್ತುವಿನ ಆಯ್ಕೆ, ನಿರೂಪಣಾ ಶೈಲಿ, ದೃಶ್ಯಗಳ ನಡುವಿನ ಹೊಂದಾಣಿಕೆ ಈ ಎಲ್ಲವುಗಳಲ್ಲಿಯೂ ಕಾಣಬಹುದು. ಪೌರಾಣಿಕ, ಐತಿಹಾಸಿಕ ಮತ್ತು ಸಾಮಾಜಿಕ ಕಥಾವಸ್ತುಗಳಿಗೆ ಪ್ರಾಮುಖ್ಯತೆಯನ್ನು ನೀಡಲಾಗಿತ್ತು. ಪಾತ್ರಗಳು ಪ್ರತಿನಿಧಿಸುವ ಪ್ರದೇಶ ಮತ್ತು ಕಾಲಘಟ್ಟದ ರೀತಿ ರಿವಾಜುಗಳಿಗನುಗುಣವಾಗಿ ಶಿಷ್ಟ ಕನ್ನಡ ಇಲ್ಲವೇ ಗ್ರಾಮ್ಯ ಕನ್ನಡ ಭಾಷೆಯ ಬಳಕೆಯಿತ್ತು. ಕನ್ನಡ ನಾಡಿನ ಪರಂಪರೆ, ಐತಿಹ್ಯಗಳನ್ನು ಅತ್ಯಂತ ಸಮರ್ಪಕವಾಗಿ ಪ್ರತಿನಿಧಿಸುವ ಕಾರ್ಯವನ್ನು ಆರಂಭದ ಕಾಲಘಟ್ಟದಲ್ಲಿಯೇ ಕನ್ನಡ ಸಿನಿಮಾಗಳು ಯಶಸ್ವಿಯಾಗಿ ನಿರ್ವಹಿಸಿದವು ಎನ್ನುವುದು ಗಮನಾರ್ಹ ಸಂಗತಿಯಾಗಿದೆ.

ಎರಡನೆಯ ಕಾಲಘಟ್ಟದ ಕನ್ನಡ ಸಿನಿಮಾಗಳು ಸಾಂಸ್ಕೃತಿಕ ದೃಷ್ಟಿಕೋನದಿಂದ ಮತ್ತಷ್ಟು ಪರಿಪಕ್ವತೆಯನ್ನು ಹೊಂದಿದ್ದವು. ಕಾಲ ಬದಲಾದಂತೆ ಸಂಭವಿಸಿದ ತಾಂತ್ರಿಕ ಬೆಳವಣಿಗೆ, ಕಥಾವಸ್ತುವಿನ ಆಯ್ಕೆಯಲ್ಲಿನ ವಿಭಿನ್ನತೆ, ಸಿನಿಮಾ ತಯಾರಿಯಲ್ಲಿನ ಹೊಸತನ ಮೊದಲಾದ ಅಂಶಗಳು ಸಾಂಸ್ಕೃತಿಕ ಅಭಿವ್ಯಕ್ತಿಗೆ ಮತ್ತಷ್ಟು ಪೂರಕವಾಗಿ ಸ್ಪಂದಿಸಿದವು. ಆಧುನಿಕ ಕಾಲಘಟ್ಟದ ವಿಭಿನ್ನ ಪ್ರಕ್ರಿಯೆಗಳು (ಕೈಗಾರಿಕೀಕರಣ, ನಗರೀಕರಣ, ಜಾಗತೀಕರಣ ಮೊದಲಾದವುಗಳು) ಕೌಟುಂಬಿಕವಾಗಿ, ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಉಂಟುಮಾಡಿದ ಪರಿಣಾಮಗಳನ್ನು ಈ ಕಾಲಘಟ್ಟದ ಸಿನಿಮಾಗಳಲ್ಲಿ ಪ್ರಮುಖವಾಗಿ ಕಾಣಬಹುದು. ಸಂಪ್ರದಾಯ- ನಂಬಿಕೆಗಳಲ್ಲಿ ಉಂಟಾದ ಸ್ಥಿತ್ಯಂತರಗಳನ್ನು ಗುರುತಿಸಲು ಕನ್ನಡ ಸಿನಿಮಾಗಳ ಎರಡನೆಯ ಕಾಲಘಟ್ಟವು ಪ್ರಮುಖ ಆಕರವಾಗಿದೆ. ಸಾಂಸ್ಕೃತಿಕ ಸಂಚಲನೆಗಳನ್ನು ಈ ಕಾಲಘಟ್ಟದ ಕಲಾತ್ಮಕ ಸಿನಿಮಾಗಳಲ್ಲಿ ಪ್ರಧಾನ ಭೂಮಿಕೆಯಲ್ಲಿ ಹಾಗೂ ವಾಣಿಜ್ಯಾತ್ಮಕ ಸಿನಿಮಾಗಳಲ್ಲಿ ಆಂಶಿಕ ನೆಲೆಯಲ್ಲಿ ಕಾಣಬಹುದಾಗಿದೆ.

ಮೂರನೆಯ ಕಾಲಘಟ್ಟದ ಸಿನಿಮಾಗಳು ಪ್ರಸ್ತುತ ಸಂದರ್ಭದ ಹಿತಾಸಕ್ತಿಗಳಿಗೆ ಪೂರಕವಾಗಿ ಸ್ಪಂದಿಸುತ್ತಿವೆ. ಸಂಸ್ಕೃತಿಯನ್ನು ಹೊಸ ಬಗೆಯಲ್ಲಿ ಅರ್ಥೈಸಿಕೊಳ್ಳಲು ಪ್ರಯತ್ನಿಸುತ್ತಿರುವ 21ನೇ ಶತಮಾನದಲ್ಲಿ ಸಾಂಸ್ಕೃತಿಕ ವಿಚಾರಧಾರೆಗಳು ಪುನರ್‍ವಿಮರ್ಶೆಗೆ ಒಳಪಡುತ್ತಿವೆ; ಪುನರಾವಲೋಕನಗೊಳ್ಳುತ್ತಿವೆ. ರೂಢಿಗತವಾದ ನಂಬಿಕೆ, ಆಚರಣೆ, ಮೌಲ್ಯ, ಸಿದ್ಧಾಂತಗಳನ್ನು ನಿಕಷಕ್ಕೆ ಒಳಪಡಿಸಿ, ಪ್ರಸ್ತುತ ಕಾಲಘಟ್ಟದ ಮನೋಭೂಮಿಕೆಗೆ ಹೊಂದಿಕೊಳ್ಳಬಲ್ಲವುಗಳನ್ನು ಮಾತ್ರವೇ ಉಳಿಸಿಕೊಳ್ಳಬೇಕಾದ ಸಂಕ್ರಮಣ ಕಾಲಘಟ್ಟದಲ್ಲಿ ನಾವಿದ್ದೇವೆ. ಹೀಗೆ ಬದಲಾವಣೆಗೆ ಒಳಪಡಬೇಕಾದ ಮೌಲ್ಯಗಳನ್ನು ಸಮರ್ಥ ಧಾಟಿಯಲ್ಲಿ ಇಂದಿನ ಚಲನಚಿತ್ರಗಳು ಜನರ ಮುಂದಿಡುತ್ತಿವೆ. ಹೊರನೋಟಕ್ಕೆ ಖಳನಾಯಕನಾಗಿ ಕಾಣಿಸಿಕೊಳ್ಳುವ, ಆಂತರಂಗಿಕವಾಗಿ ಸದ್ವಿಚಾರಗಳನ್ನು ಹೊಂದಿರುವ ವ್ಯಕ್ತಿಯನ್ನು ನಾಯಕನಾಗಿ ಗುರುತಿಸುವ ಪ್ರಮುಖ ಪ್ರಕ್ರಿಯೆಯು ಸಂಸ್ಕೃತಿಯನ್ನು ಪುನರ್ ರೂಪಿಸುವ ಪ್ರಯತ್ನದ ಒಂದು ಭಾಗವಾಗಿದೆ. ಕೆಟ್ಟತನವನ್ನು ಕೆಟ್ಟತನದ ಮೂಲಕವೇ ಎದುರಿಸುವ ಈ ಸೂಕ್ಷ್ಮತೆಯು ಜನರಲ್ಲಿ ಜೀವನ ಶೈಲಿಯ ಕುರಿತಾಗಿ ಹೊಸ ಬಗೆಯ ಪ್ರಜ್ಞೆಯನ್ನು, ಎಚ್ಚರವನ್ನು ಮೂಡಿಸುತ್ತಿದೆ. ಕನ್ನಡ ನಾಡಿನ ಸಂಸ್ಕೃತಿಗೆ ಹೊಸ ದಿಕ್ಕನ್ನು ತೋರಿಸಬಲ್ಲ ಪ್ರಯತ್ನ ಇತ್ತೀಚಿನ ಕನ್ನಡ ಸಿನಿಮಾಗಳ ಮೂಲಕ ಸಾಧ್ಯಗೊಳ್ಳುತ್ತಿದೆ. ಕನ್ನಡ ಸಂಸ್ಕೃತಿಯನ್ನು ಮರುನಿರ್ವಚಿಸಿಕೊಳ್ಳುವ, ಹೊಸದಾಗಿ ಪರಿಭಾವಿಸಿಕೊಳ್ಳುವ ನೆಲೆಯಿಂದ ಪ್ರಸ್ತುತ ಕಾಲಘಟ್ಟದ ಕನ್ನಡ ಸಿನಿಮಾಗಳು ಮುಖ್ಯವಾಗುತ್ತವೆ.

ಕನ್ನಡ ಚಿತ್ರರಂಗವು ಜನಪರವಾದ ಹೋರಾಟಗಳು ನಡೆದಾಗ ಸಮಾಜದ ಜೊತೆಗೆ ಬೆರೆತು ಜನರ ಧ್ವನಿಯನ್ನು ಆಡಳಿತ ವ್ಯವಸ್ಥೆಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ. ಕನ್ನಡ ನಾಡು- ನುಡಿಯ ಉಳಿಕೆಗಾಗಿ ನಡೆದ ಹೋರಾಟ- ಚಳವಳಿಗಳು ಕನ್ನಡ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಪ್ರಯತ್ನಗಳೇ ಆಗಿವೆ. ಇಂತಹ ಪ್ರಯತ್ನಗಳಿಗೆ ಸಿನಿಮಾಗಳ ಮೂಲಕ ಮತ್ತಷ್ಟು ಬೆಂಬಲ ದೊರೆತಿದೆ. 1980ರ ದಶಕದಲ್ಲಿ ನಡೆದ ಗೋಕಾಕ್ ಚಳವಳಿ ಹಾಗೂ ಕಾವೇರಿ ವಿವಾದಕ್ಕೆ ಸಂಬಂಧಿಸಿ ಅನೇಕ ಬಾರಿ ನಡೆದ ಪ್ರತಿಭಟನೆಗಳು ಇದಕ್ಕೆ ಉತ್ತಮ ಉದಾಹರಣೆಗಳಾಗಿವೆ.

ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಪ್ರಥಮ ಪ್ರಾಶಸ್ತ್ಯ ದೊರಕುವಂತಾಗಬೇಕು ಎನ್ನುವ ಉದ್ದೇಶವನ್ನು ಇರಿಸಿಕೊಂಡು ಗೋಕಾಕ್ ಚಳವಳಿ ನಡೆಯಿತು. ಗೋಕಾಕ್ ವರದಿ ಜಾರಿಗಾಗಿ ನಡೆದ ಈ ಚಳವಳಿಯಲ್ಲಿ ಕನ್ನಡ ಸಿನಿಮಾ ರಂಗವು ಭಾಗವಹಿಸಿದ ಬಗೆ ಅತ್ಯಪೂರ್ವವಾದದ್ದು. ಕನ್ನಡದ ಹಿರಿಯ ಕವಿ ವಿ. ಕೃ. ಗೋಕಾಕ್ ಅವರು ತ್ರಿಭಾಷಾ ಸೂತ್ರದಡಿಯಲ್ಲಿ ಸಲ್ಲಿಸಿದ ವರದಿಯ ಕುರಿತಾಗಿ ಟೀಕೆಗಳು ಕೇಳಿಬಂದು, ಕನ್ನಡ ಭಾಷೆಯನ್ನು ಉಳಿಸುವ ಹೋರಾಟದಲ್ಲಿ ಹಿನ್ನಡೆ ಉಂಟಾಗುತ್ತದೆ. ಈ ಸಮಯದಲ್ಲಿ ಸಾಹಿತ್ಯ ವಲಯವು ಕನ್ನಡ ಸಿನಿಮಾ ರಂಗದ ಅದ್ಭುತ ನಟ ಡಾ. ರಾಜ್‍ಕುಮಾರ್ ಅವರ ನಾಯಕತ್ವವನ್ನು ಬಯಸುತ್ತದೆ. ಈ ಮೂಲಕ ಚಳವಳಿಗೆ ಇಡೀ ರಾಜ್ಯವನ್ನು ಒಗ್ಗೂಡಿಸುವುದು ಸಾಹಿತಿಗಳ ಆಶಯವಾಗಿರುತ್ತದೆ. ಆ ಕಾಲದ ಸಾಹಿತಿಗಳೂ ಕೂಡಾ ಕನ್ನಡ ಸಿನಿಮಾ ರಂಗವು ಜನರನ್ನು ಒಂದುಗೂಡಿಸುವ ಬಗೆಯನ್ನು ತಿಳಿದುಕೊಂಡಿದ್ದರು ಎನ್ನುವುದನ್ನು ಇದು ಸ್ಪಷ್ಟಪಡಿಸುತ್ತದೆ.

ಹೀಗೆ ಡಾ.ರಾಜ್‍ಕುಮಾರ್ ಅವರ ನೇತೃತ್ವದಲ್ಲಿ ನಡೆದ ಗೋಕಾಕ್ ಚಳವಳಿಯು ಜಾತಿ- ಮತ- ಪ್ರದೇಶಗಳ ಭೇದವಿಲ್ಲದೆ ಸಮಸ್ತ ಕರ್ನಾಟಕದ ಜನಬೆಂಬಲವನ್ನು ಗಳಿಸಿಕೊಂಡಿತು. ಜನರಲ್ಲಿ ಭಾಷೆಯ ಕುರಿತಾದ ಜಾಗೃತಿಯನ್ನು ಮೂಡಿಸುವ ಸಲುವಾಗಿ ಚಳವಳಿಗಾರರು ಬೆಂಗಳೂರಿನಿಂದ ಬೆಳಗಾವಿಯವರೆಗೆ ಪ್ರಯಾಣಿಸಿದ್ದರು. ಡಾ.ರಾಜ್‍ಕುಮಾರ್ ಅವರು ಭಾಷಣವನ್ನು ಮಾಡುವ ಸಂದರ್ಭದಲ್ಲಿ “ಕನ್ನಡ ನಾಡು ಮತ್ತು ನುಡಿಯ ಸಲುವಾಗಿ ನಾನು ಯಾವುದೇ ರೀತಿಯ ತ್ಯಾಗಕ್ಕೂ ಸಿದ್ಧನಿದ್ದೇನೆ” ಎಂದು ನುಡಿದದ್ದು ಅವರ ವೈಯಕ್ತಿಕ ಅಭಿಪ್ರಾಯ ಮಾತ್ರವಾಗಿರದೆ, ಒಟ್ಟು ಕನ್ನಡ ಚಿತ್ರರಂಗದ ಮನೋಧರ್ಮವೂ ಆಗಿತ್ತು. ತಾವು ಸೆಲೆಬ್ರಿಟಿಗಳು ಎಂಬ ಹಮ್ಮು- ಬಿಮ್ಮುಗಳ ಹಂಗಿಲ್ಲದೆ ಜನಪ್ರಿಯ ಚಲನಚಿತ್ರ ಕಲಾವಿದರೆಲ್ಲರೂ ಈ ಚಳವಳಿಯಲ್ಲಿ ಪಾಲು ಪಡೆದದ್ದೇ ಇದಕ್ಕೆ ಸಾಕ್ಷಿಯಾಗಿದೆ.

‘ಬಂಗಾರದ ಮನುಷ್ಯ’ ಸಿನಿಮಾವನ್ನು ನೋಡಿದ ಅದೆಷ್ಟೋ ಯುವಜನರು ತಮ್ಮ ತಮ್ಮ ಹಳ್ಳಿಗಳಿಗೆ ಮರಳಿ, ಕೃಷಿ ಸಂಸ್ಕೃತಿಯಲ್ಲಿ ಪಾಲು ಪಡೆಯುವಂತಾದುದು ಸಾಂಸ್ಕೃತಿಕ ಸಂಚಲನೆಯ ದೃಷ್ಟಿಯಿಂದ ನಾವು ಗಮನಿಸಿಕೊಳ್ಳಬಹುದಾದ ಅತ್ಯುತ್ತಮ ಉದಾಹರಣೆಯಾಗಿದೆ. ಜನರನ್ನು ಯಂತ್ರಾಧಾರಿತ ಔದ್ಯೋಗಿಕ ವ್ಯವಸ್ಥೆಯಿಂದ ಶ್ರಮಾಧಾರಿತ ವ್ಯವಸ್ಥೆಯ ಕಡೆಗೆ, ನಗರ ಸಂಸ್ಕೃತಿಯಿಂದ ಗ್ರಾಮೀಣ ಸಂಸ್ಕೃತಿಯ ಕಡೆಗೆ ಆಕರ್ಷಿತರಾಗುವಂತೆ ಮಾಡುವ ಅದ್ಭುತ ಶಕ್ತಿ ಸಿನಿಮಾಗಳಿಗಿದೆ.

ಅಪಾರ ಜನಬೆಂಬಲವನ್ನು ಪಡೆದುಕೊಂಡ ಚಳವಳಿಯನ್ನು ಆ ಸಂದರ್ಭದ ರಾಜ್ಯ ಸರ್ಕಾರವು ಧನಾತ್ಮಕವಾಗಿ ಹಾಗೂ ಗಂಭೀರ ನೆಲೆಯಲ್ಲಿ ಪರಿಗಣಿಸಿತು. ಪರಿಣಾಮವಾಗಿ, ವರದಿಯಲ್ಲಿ ಉಲ್ಲೇಖಿಸಿರುವಂತೆಯೇ ಕನ್ನಡ ಭಾಷೆಗೆ ವಿಶೇಷ ಸ್ಥಾನಮಾನಗಳ ಜೊತೆಗೆ ಪ್ರಥಮ ಭಾಷೆಯ ಸ್ಥಾನವನ್ನು ನೀಡಲಾಯಿತು. ಗೋಕಾಕ್ ಚಳವಳಿಯು ಉತ್ತಮ ಫಲಿತಾಂಶವನ್ನು ಕೊಟ್ಟಿರುವುದು ಕನ್ನಡಿಗರ ಯಶಸ್ಸಿನ ಜೊತೆಗೆ ಕನ್ನಡ ಸಿನಿಮಾ ರಂಗದ ಯಶಸ್ಸನ್ನೂ ಸೂಚಿಸುತ್ತದೆ.

ಕಾವೇರಿ ನದಿ ನೀರಿನ ಹಂಚಿಕೆಯ ಕುರಿತಾದ ವಿವಾದಗಳು ಏರ್ಪಟ್ಟ ಎಲ್ಲಾ ಸನ್ನಿವೇಶಗಳಲ್ಲಿಯೂ ಕನ್ನಡ ಸಿನಿಮಾ ರಂಗ ರಾಜ್ಯದ ಪರವಾಗಿ ನಿಂತಿದೆ. ವಿಶೇಷವಾಗಿ ತೆರೆಯ ಮೇಲೆ ‘ಕಾವೇರಿ ನದಿಯ ನೀರು ಎಂದೆಂದಿಗೂ ಕರ್ನಾಟಕಕ್ಕೆ ಸೇರಿದ್ದು’ ಎಂದು ವಿರೋಧಿಗಳಿಗೆ ಮನಗಾಣಿಸುವ ಪ್ರಯತ್ನಗಳು ನಡೆದಿವೆ. ಕನ್ನಡದ ಬಹುತೇಕ ಚಲನಚಿತ್ರಗಳಲ್ಲಿ ಆಂಶಿಕವಾಗಿ ಕಾವೇರಿ ವಿವಾದವು ಉಲ್ಲೇಖಗೊಂಡಿದೆ. ಈ ನೆಲೆಯಿಂದ ‘H2O’ ಸಿನಿಮಾ ಬಹುಮುಖ್ಯ ಎನಿಸುತ್ತದೆ. ಈ ಸಿನಿಮಾದಲ್ಲಿ ಕಾವೇರಿ ವಿವಾದವನ್ನು ಮುಖ್ಯ ಭೂಮಿಕೆಯಲ್ಲಿ ತರಲಾಗಿದೆ. ನಾಯಕಿಯನ್ನು ಕಾವೇರಿ ನದಿಗೆ ಸಂಕೇತವಾಗಿರಿಸಿಕೊಂಡು ಕಥಾವಸ್ತುವನ್ನು ರೂಪಿಸಲಾಗಿದೆ. ಸ್ವಾರ್ಥಪರವಾದ ಜನರ ಮನಃಸ್ಥಿತಿ, ಕಾವೇರಿ ವಿವಾದದಲ್ಲಿ ರಾಜಕೀಯದ ಪಾತ್ರ, ಜನರ ನಿರ್ಲಿಪ್ತತೆ ಮೊದಲಾದವುಗಳನ್ನು ಅತ್ಯಂತ ಸೂಕ್ಷ್ಮವಾಗಿ ಮತ್ತು ಸೂಕ್ತವಾಗಿ ವ್ಯಕ್ತಗೊಳಿಸಲಾಗಿದೆ.

ಇತಿಹಾಸ ಆಧರಿಸಿದ ಚಿತ್ರಗಳು

ಕನ್ನಡ ನಾಡಿನ ಇತಿಹಾಸ, ಪರಂಪರೆಗಳ ಕುರಿತಾದ ಎಚ್ಚರವನ್ನು ಜನರಲ್ಲಿ ಮೂಡಿಸುವ ನೆಲೆಯ ಗಂಭೀರ ಪ್ರಯತ್ನ ಕನ್ನಡ ಸಿನಿಮಾಗಳ ಮೂಲಕ ನಡೆದಿದೆ. ಇತಿಹಾಸವನ್ನು ಆಧಾರವಾಗಿರಿಸಿಕೊಂಡು ಹಲವಾರು ಕನ್ನಡ ಸಿನಿಮಾಗಳು ಬಂದಿವೆ. ಅಧ್ಯಯನವೊಂದನ್ನು ಆಧಾರವಾಗಿರಿಸಿಕೊಂಡು ಹೇಳುವುದಾದರೆ, 2016ನೇ ಇಸವಿಯವರೆಗೆ 54 ಐತಿಹಾಸಿಕ ಸಿನಿಮಾಗಳು ಕನ್ನಡ ಭಾಷೆಯಲ್ಲಿ ಮೂಡಿಬಂದಿವೆ. ‘ವೀರ ಕೇಸರಿ’, ‘ಬಭ್ರುವಾಹನ’, ‘ಭಕ್ತ ಕನಕದಾಸ’, ‘ಮಯೂರ’, ‘ಹಾಸ್ಯರತ್ನ ರಾಮಕೃಷ್ಣ’, ‘ಭೂ ಕೈಲಾಸ’, ರಣಧೀರ ಕಂಠೀರವ, ಸಂತ ತುಕಾರಾಂ, ವಾಲ್ಮೀಕಿ, ಅಮರಶಿಲ್ಪಿ ಜಕಣಾಚಾರಿ, ರಾಜದುರ್ಗದ ರಹಸ್ಯ, ಭಕ್ತ ರಾಮದಾಸ, ಭಕ್ತ ಕುಂಬಾರ, ತೆನಾಲಿ ರಾಮಕೃಷ್ಣ, ಜಗಜ್ಯೋತಿ ಬಸವೇಶ್ವರ, ಕಿತ್ತೂರು ಚೆನ್ನಮ್ಮ, ವಿಜಯನಗರದ ವೀರಪುತ್ರ, ವೀರ ಸಂಕಲ್ಪ, ಚಂದ್ರಹಾಸ, ಗಂಡುಗಲಿ ಕುಮಾರರಾಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೊದಲಾದವುಗಳು ಈ ನೆಲೆಯಲ್ಲಿ ಹೆಸರಿಸಬಹುದಾದ ಸಿನಿಮಾಗಳಾಗಿವೆ. ತೀರಾ ಆಧುನಿಕವೆಂದು ಗುರುತಿಸಲಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿಯೂ ಕೂಡಾ ಐತಿಹಾಸಿಕ ವಸ್ತು ವಿಷಯಗಳನ್ನಿರಿಸಿಕೊಂಡು ಚಿತ್ರಗಳನ್ನು ನಿರ್ಮಿಸುವ ಆಸಕ್ತಿ ಚಿತ್ರ ನಿರ್ಮಾಣಕಾರರಲ್ಲಿ ಇದ್ದೇ ಇದೆ.

ಇಂತಹ ಐತಿಹಾಸಿಕ ಸಿನಿಮಾಗಳ ಮೂಲಕ ಅಭಿವ್ಯಕ್ತಿಗೊಳ್ಳುವ ಸಾಂಸ್ಕೃತಿಕ ಆಶಯಗಳ ಕಡೆಗೆ ಗಮನಹರಿಸುವುದು ಸೂಕ್ತ ಎನಿಸುತ್ತದೆ. ಕನ್ನಡ ಸಿನಿಮಾಗಳ ಮೂಲಕ ವ್ಯಕ್ತಗೊಂಡಿರುವ ಕನ್ನಡ ನಾಡಿನ ಇತಿಹಾಸವು ಕನ್ನಡ ಸಂಸ್ಕೃತಿಗೆ ಸಂಬಂಧಪಟ್ಟ ಹೊಸ ಜಾಗೃತಿಯನ್ನು ಇಲ್ಲಿನ ಜನರಲ್ಲಿ ಮೂಡಿಸುತ್ತದೆ. ಐತಿಹಾಸಿಕ ಸಿನಿಮಾಗಳ ಮೂಲಕ ಜನರು ತಾವು ನೇರವಾಗಿ ಕಂಡಿರದ ಕಾಲಘಟ್ಟದ ಸಾಂಸ್ಕೃತಿಕ ವೈವಿಧ್ಯತೆ- ಸಾಂಸ್ಕೃತಿಕ ಅನನ್ಯತೆಗಳನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ತತ್ಪರಿಣಾಮವಾಗಿ ಕನ್ನಡ ನಾಡಿನ ಪರಂಪರೆಯ ಕುರಿತಾದ ಅಭಿಮಾನ, ಹೆಮ್ಮೆ ರೂಪುಗೊಳ್ಳುತ್ತದೆ. ಹೀಗೆ ಐತಿಹಾಸಿಕ ಪ್ರಜ್ಞೆಯ ರೂಪುಗೊಳ್ಳುವಿಕೆಯಿಂದ ವರ್ತಮಾನ ಮತ್ತು ಭವಿಷ್ಯದ ಕಾಲಘಟ್ಟದ ಸಮಾಜ- ಸಂಸ್ಕೃತಿಯನ್ನು ಮತ್ತಷ್ಟು ಸಮರ್ಪಕವಾಗಿ ರೂಪುಗೊಳಿಸಿಕೊಳ್ಳಲು ಸಾಧ್ಯವಾಗುತ್ತದೆ.

‘ಸಾಂಸ್ಕೃತಿಕ ಅಸ್ಮಿತೆ’(Cultural Identity)ಯನ್ನು ಒದಗಿಸಿಕೊಡುವಲ್ಲಿಯೂ ಐತಿಹಾಸಿಕ ಸಿನಿಮಾಗಳ ಪಾತ್ರ ಗಮನಾರ್ಹವಾಗಿದೆ. ಕನ್ನಡ ನಾಡನ್ನು ಆಳಿದ ರಾಜವಂಶಗಳು, ಇಲ್ಲಿನ ಜನರಲ್ಲಿದ್ದ ಧಾರ್ಮಿಕ ಪ್ರಜ್ಞೆ, ವಿವಿಧ ವಿದ್ವಾಂಸರು- ಜ್ಞಾನಿಗಳ ಬೋಧನೆಗಳು, ಆರ್ಥಿಕ ಸ್ಥಿತಿಗತಿ, ಇಲ್ಲಿನ ಜಲ- ನೆಲದ ಉಳಿವಿಗಾಗಿ ನಡೆದ ಹೋರಾಟ, ಸಮಾಜದ ಅತ್ಯಂತ ಕೆಳವರ್ಗದ ವ್ಯಕ್ತಿಯಲ್ಲಿಯೂ ಇದ್ದ ಉದಾತ್ತ ಗುಣಗಳು, ಸಮಾಜೋದ್ಧಾರದ ಪರಿಕಲ್ಪನೆಯಿಂದ ನಡೆದ ಸೈದ್ಧಾಂತಿಕ ಸಂಘರ್ಷ- ಈ ಎಲ್ಲವುಗಳನ್ನು ಇಂತಹ ಸಿನಿಮಾಗಳ ಮೂಲಕ ಜನರು ಅರಿತುಕೊಳ್ಳುವಂತಾಗುತ್ತದೆ. ಈ ಬಗೆಯ ಅರಿವು ಕನ್ನಡ ಸಾಂಸ್ಕೃತಿಗೆ ಗುರುತಿಸುವಿಕೆಯನ್ನು ನೀಡುತ್ತದೆ. ಜೊತೆಗೆ ಕನ್ನಡ ಸಂಸ್ಕೃತಿಯ ಅಸ್ತಿತ್ವವನ್ನು ಮತ್ತಷ್ಟು ಶಕ್ತವಾಗಿಸುತ್ತದೆ.

ವರ್ತಮಾನದ ಅನೇಕ ಸಮಸ್ಯೆಗಳಿಗೆ ಇತಿಹಾಸದಲ್ಲಿ ಉತ್ತರವಿದೆ. ಕನ್ನಡದ ಐತಿಹಾಸಿಕ ಸಿನಿಮಾಗಳ ಮೂಲಕ ಕನ್ನಡ ನಾಡು ಪ್ರಸ್ತುತ ಕಾಲಘಟ್ಟದಲ್ಲಿ ಎದುರಿಸುತ್ತಿರುವ ಅನೇಕ ಬಗೆಯ ಸಾಂಸ್ಕೃತಿಕ ಜಿಜ್ಞಾಸೆಗಳನ್ನು, ಸಾಂಸ್ಕೃತಿಕ ಗೊಂದಲಗಳನ್ನು ನಿವಾರಿಸಿಕೊಳ್ಳಲು ಸಾಧ್ಯವಿದೆ. ಈ ನೆಲೆಯಲ್ಲಿ ಕನ್ನಡ ಸಿನಿಮಾಗಳು ಅತ್ಯುನ್ನತ ರೀತಿಯಲ್ಲಿ ತಮ್ಮ ಕೊಡುಗೆಯನ್ನು ಈಗಾಗಲೇ ನೀಡಿವೆ, ನೀಡುತ್ತಿವೆ. ಸಾಂಸ್ಕೃತಿಕ ಅಸ್ಮಿತೆಯನ್ನು ಕಂಡುಕೊಳ್ಳುವ ಕನ್ನಡ ಸಿನಿಮಾಗಳ ಪ್ರಯತ್ನಕ್ಕೆ ಬಹುತೇಕ ಸಂದರ್ಭಗಳಲ್ಲಿ ಜನರಿಂದ ಉತ್ತಮ ಪ್ರೋತ್ಸಾಹ ದೊರೆತಿದೆ ಎನ್ನುವುದರಲ್ಲಿ ಸಂದೇಹವಿಲ್ಲ. ಹೀಗೆ ಐತಿಹಾಸಿಕ ಪ್ರಜ್ಞೆಯ ಮೂಲಕವೇ ಸಾಂಸ್ಕೃತಿಕ ಅಸ್ಮಿತೆಯನ್ನು ರೂಪುಗೊಳಿಸುವ ಕನ್ನಡ ಸಿನಿಮಾಗಳು ಕನ್ನಡ ಸಂಸ್ಕೃತಿಯ ಉಳಿಕೆಯ ದೃಷ್ಟಿಯಿಂದ ಗಮನಾರ್ಹವಾಗಿವೆ.

ಕನ್ನಡ ಸಿನಿಮಾಗಳಲ್ಲಿ ‘ಸಾಂಸ್ಕೃತಿಕ ಪರಿಕಲ್ಪನೆಗಳು’

ಸಂಸ್ಕೃತಿಯನ್ನು ನಿರ್ವಚಿಸಿಕೊಳ್ಳುವ ಸಂದರ್ಭದಲ್ಲಿ ಅದಕ್ಕೆ ನೇರವಾಗಿ ಸಂಬಂಧಪಟ್ಟ ಕೆಲವಾರು ಪರಿಕಲ್ಪನೆಗಳನ್ನೂ ಗಮನಿಸಿಕೊಳ್ಳಲಾಗುತ್ತದೆ. ‘ಪ್ರಧಾನ ಸಂಸ್ಕೃತಿ’, ‘ಉಪ ಸಂಸ್ಕೃತಿ’ ಹಾಗೂ ‘ಪ್ರತಿ ಸಂಸ್ಕೃತಿ’ ಎನ್ನುವುದು ಈ ಬಗೆಯ ಪರಿಕಲ್ಪನೆಗಳಾಗಿವೆ. ಸಮಾಜದ ಮೇಲ್‌ಸ್ತರದಲ್ಲಿ ಗುರುತಿಸಿಕೊಂಡಿರುವ, ಬಹುಮಟ್ಟಿಗೆ ಅಥವಾ ಸಾರ್ವಕಾಲಿಕ ಮಾನ್ಯತೆಯನ್ನು ಪಡೆದಿರುವ ಸಂಸ್ಕೃತಿಯನ್ನು ‘ಪ್ರಧಾನ ಸಂಸ್ಕೃತಿ’ ಎನ್ನಲಾಗುತ್ತದೆ. ಪ್ರಧಾನ ಸಂಸ್ಕೃತಿಗೆ ಅಧೀನವಾಗಿರುವ, ಪೂರಕವಾಗಿರುವ ಸಂಸ್ಕೃತಿಯು ‘ಉಪ ಸಂಸ್ಕೃತಿ’ ಎಂದೆನಿಸಿಕೊಳ್ಳುತ್ತದೆ. ಪ್ರಧಾನ ಸಂಸ್ಕೃತಿಗೆ ವೈರುಧ್ಯದ ನೆಲೆಯಲ್ಲಿ, ಪ್ರಧಾನ ಸಂಸ್ಕೃತಿಗೆ ಪ್ರತಿರೋಧವನ್ನೊಡ್ಡುವ ಬಗೆಯಲ್ಲಿ ರೂಪುಗೊಂಡಿರುವ ಸಂಸ್ಕೃತಿಯನ್ನು ‘ಪ್ರತಿ ಸಂಸ್ಕೃತಿ’ ಎನ್ನಲಾಗುತ್ತದೆ.

ಸಂಸ್ಕೃತಿಗೆ ಸಂಬಂಧಪಟ್ಟ ಈ ಮೂರೂ ಪರಿಕಲ್ಪನೆಗಳು ಕನ್ನಡ ಸಂಸ್ಕೃತಿಯ ಒಳಗೂ ಕಂಡುಬರುತ್ತವೆ. ಜೊತೆಗೆ ಕನ್ನಡ ಸಿನಿಮಾಗಳಲ್ಲಿಯೂ ಕಂಡುಬರುತ್ತವೆ. ಹಲವಾರು ಸಂದರ್ಭಗಳಲ್ಲಿ ಶಿಷ್ಟ ಸಾಹಿತ್ಯ ಮತ್ತು ಶಿಷ್ಟ ವಿಧಾನದಲ್ಲಿ ರಚನೆಗೊಂಡ ಇತಿಹಾಸಗಳು ಪ್ರಧಾನ ಸಂಸ್ಕೃತಿಯನ್ನು ಮಾತ್ರವೇ ಗಣನೆಗೆ ತೆಗೆದುಕೊಳ್ಳುತ್ತವೆ. ಶ್ರಮಿಕ ವರ್ಗದ ಜನರ ಬದುಕು ಅಲ್ಲಿ ಮುಖ್ಯವಾಗುವುದಿಲ್ಲ. ಆದರೆ ಜನಸಾಮಾನ್ಯರ ಮನರಂಜನೆಯ ಮಾಧ್ಯಮವಾಗಿರುವ ಸಿನಿಮಾಗಳಲ್ಲಿ ದುಡಿಯುವ ವರ್ಗದ ಜನರು ರೂಢಿಸಿಕೊಂಡು ಬಂದಿರುವ ಸಂಸ್ಕೃತಿಯು ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಪ್ರಧಾನ ಸಂಸ್ಕೃತಿಯ ಚಿತ್ರಣ ಬಹುತೇಕ ಕನ್ನಡ ಸಿನಿಮಾಗಳಲ್ಲಿ ಕಂಡುಬಂದಿದೆ. ಕಲಾತ್ಮಕ ಸಿನಿಮಾಗಳಲ್ಲಿ ಉಪ ಸಂಸ್ಕೃತಿ ಹಾಗೂ ಪ್ರತಿ ಸಂಸ್ಕೃತಿಯ ಚಿತ್ರಣವಿದೆ.

ಕನ್ನಡ ಸಿನಿಮಾಗಳಲ್ಲಿ ಹೀಗೆ ವ್ಯಕ್ತಗೊಂಡಿರುವ ಸಾಂಸ್ಕೃತಿಕ ಪರಿಕಲ್ಪನೆಗಳನ್ನು ಜನಸಾಮಾನ್ಯರು ಸ್ವೀಕರಿಸುತ್ತಾರೆಯೇ? ಅವುಗಳನ್ನು ತಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆಯೇ? ಎನ್ನುವುದು ಚರ್ಚಾರ್ಹ ವಿಷಯವಾಗಿದೆ. ಇಲ್ಲಿ ಗಮನಿಸಬೇಕಾದ ಅಂಶವಿದೆ. ಜನಸಾಮಾನ್ಯರ ಜೀವನದಲ್ಲಿ ಅಸ್ತಿತ್ವದಲ್ಲಿರುವ ಸಾಂಸ್ಕೃತಿಕ ಪರಿಕಲ್ಪನೆಗಳನ್ನೇ ಕನ್ನಡ ಸಿನಿಮಾಗಳಲ್ಲಿ ಬಳಸಿಕೊಳ್ಳಲಾಗಿದೆ. ಅಂದರೆ, ಸಾಮಾನ್ಯ ಜನರ ಜೀವನ ವಿಧಾನದ ನೇರ ಪ್ರತಿಬಿಂಬಕಗಳಾಗಿ ಈ ಸಾಂಸ್ಕೃತಿಕ ಪರಿಕಲ್ಪನೆಗಳ ಚಿತ್ರಣ ಸಿನಿಮಾಗಳ ಮೂಲಕ ನಡೆಯುತ್ತದೆ. ಜನರಿಂದ ಈಗಾಗಲೇ ಸ್ವೀಕೃತಗೊಂಡಿರುವ ವಿಚಾರಗಳ ಅಭವ್ಯಕ್ತಿಯೇ ಇದಾಗಿರುವುದರಿಂದ ಮತ್ತೆ ಹೊಸದಾಗಿ ಅದನ್ನು ಸ್ವೀಕರಿಸಿ, ಅಳವಡಿಸಿಕೊಳ್ಳುವ ಪ್ರಶ್ನೆ ಉದ್ಭವಿಸಬೇಕಾದ ಅಗತ್ಯವಿಲ್ಲ.

ಕನ್ನಡ ಸಿನಿಮಾಗಳ ‘ಸಾಂಸ್ಕೃತಿಕ ನಮ್ಯತೆ’

ಕಾಲದ ಅಗತ್ಯ, ಬದಲಾವಣೆ, ಆಶಯಗಳಿಗೆ ತಕ್ಕಂತೆ ಸಂಸ್ಕೃತಿಯಲ್ಲಿ ಮಾರ್ಪಾಡಾಗಿ, ಕಾಲಕ್ಕೆ ತಕ್ಕಂತೆ ಹೊಂದಿಕೊಳ್ಳುವುದನ್ನು ‘ಸಾಂಸ್ಕೃತಿಕ ನಮ್ಯತೆ’ (Cultural flexibility)ಎಂದು ಗುರುತಿಸಲಾಗುತ್ತದೆ. ಕಾಲ ಬದಲಾದಂತೆ ಇಂದು ಪ್ರತಿಯೊಂದು ಕ್ಷೇತ್ರವೂ ಪರಿವರ್ತನೆಗೆ ಒಳಗಾಗುತ್ತಿದೆ. ಹಾಗೆಯೇ ಸಿನಿಮಾಗಳೂ ಕೂಡಾ ದಿನದಿಂದ ದಿನಕ್ಕೆ ಹೊಸತನಕ್ಕೆ ತೆರೆದುಕೊಳ್ಳುತ್ತಿವೆ. ಆದರೆ ಈ ಬದಲಾವಣೆಯನ್ನು ಸ್ವೀಕರಿಸದಿರುವ, ಅಂಗೀಕರಿಸದಿರುವ ಜನವರ್ಗವೂ ಇದೆ. ಮುಖ್ಯವಾಗಿ ಸಾಂಸ್ಕೃತಿಕ ಕಾರಣಗಳನ್ನು ಮುಂದಿರಿಸಿಕೊಂಡು ಈ ಮಾರ್ಪಾಡುಗಳನ್ನು ನಿರಾಕರಿಸಲಾಗುತ್ತಿದೆ. “ಇಂದಿನ ಯುವಜನತೆಯನ್ನು ಸಂಸ್ಕೃತಿಹೀನರನ್ನಾಗಿಸುವ ಕೆಲಸ ಇವತ್ತಿನ ಸಿನಿಮಾಗಳ ಮೂಲಕ ನಡೆಯುತ್ತಿದೆ. ಹಿಂದಿನ ಕಾಲದಂತೆ ಈಗಿನ ಸಿನಿಮಾಗಳಿಲ್ಲ. ಮನಸ್ಸನ್ನು ಅರಳಿಸುವ ಬಗೆಯಲ್ಲಿ ಇವತ್ತಿನ ಸಿನಿಮಾಗಳಿಲ್ಲ; ಮನಸ್ಸನ್ನು ಕೆರಳಿಸುವ ರೀತಿಯಲ್ಲಿವೆ” ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸುವವರಿದ್ದಾರೆ.

ಈ ಮಾತು ಎಷ್ಟರಮಟ್ಟಿಗೆ ನಿಜ ಎನ್ನುವುದನ್ನು ತರ್ಕಿಸುವುದಕ್ಕಿಂತಲೂ ಮುಂಚಿತವಾಗಿ ಯಾವೆಲ್ಲಾ ರೀತಿಯಲ್ಲಿ ಕನ್ನಡ ಸಿನಿಮಾಗಳು ಇಂದು ಬದಲಾವಣೆಗೆ ಒಳಗಾಗಿವೆ ಎನ್ನುವುದನ್ನು ಪರಿಶೀಲಿಸಿಕೊಳ್ಳುವುದು ಸೂಕ್ತ. ಇವತ್ತಿನ ಕಾಲಘಟ್ಟದ ಕನ್ನಡ ಸಿನಿಮಾಗಳು ಹಿಂದಿನ ಕಾಲಘಟ್ಟದ ಸಿನಿಮಾಗಳಿಗಿಂತ ಹಲವು ಬಗೆಯಲ್ಲಿ ಬದಲಾವಣೆಗಳಿಗೆ ಒಳಗಾಗಿದೆ ಎನ್ನುವುದು ಸ್ಪಷ್ಟ. ಸಿನಿಮಾ ಸಾಹಿತ್ಯ ಹೊಸ ಬಗೆಯಲ್ಲಿ ರೂಪುಗೊಂಡಿದೆ. ಸಂಭಾಷಣೆ ಹಾಗೂ ಹಾಡಿನಲ್ಲಿ ಬಳಸುವ ಭಾಷೆ ಬದಲಾಗಿದೆ. ಶಿಷ್ಟ ಕನ್ನಡ ಇಲ್ಲವೇ ಗ್ರಾಂಥಿಕ ಕನ್ನಡಕ್ಕೆ ಸೀಮಿತವಾಗಿದ್ದ ಭಾಷೆ ಇಂದು ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವಂತಹ ಭಾಷೆಯಾಗಿ ಬದಲಾಗಿದೆ. ರಾಗ ಸಂಯೋಜನೆಯ ಶೈಲಿ ಮೊದಲಿನಂತಿಲ್ಲ. ವೈವಿಧ್ಯಮಯ ಎನಿಸುವಂತಹ, ಪ್ರಯೋಗಶೀಲವಾದ ಸಂಗೀತ ಸಿನಿಮಾಗಳ ಮೂಲಕ ಸಾಕಾರಗೊಳ್ಳುತ್ತಿದೆ. ಸಿನಿಮಾದ ನೃತ್ಯವೂ ಬದಲಾಗಿದೆ. ಜನರನ್ನೂ ಕುಣಿತಕ್ಕೆ ಉತ್ತೇಜಿಸುವ ರೀತಿಯಲ್ಲಿ ನೃತ್ಯಗಳ ಸಂಯೋಜನೆಯಿದೆ. ಸಿನಿಮಾ ಒಂದು ಮನರಂಜನಾ ಮಾಧ್ಯಮವಾಗಿರುವಂತೆಯೇ ಒಂದು ಸಮ್ಮಿಶ್ರ ಕಲೆಯೂ ಆಗಿದೆ. ಸಾಹಿತ್ಯ, ಸಂಗೀತ, ನೃತ್ಯ, ಅಭಿನಯ, ವಾದ್ಯಗಳು, ಮಾತುಗಾರಿಕೆ ಹೀಗೆ ವಿವಿಧ ಕಲಾ ಪ್ರಕಾರಗಳನ್ನು ಒಳಗೊಂಡಿದೆ. ಕಲೆಗಳು ಸಂಸ್ಕೃತಿಯ ಚೌಕಟ್ಟಿನೊಳಗಡೆಯೇ ಕಾಣಿಸಿಕೊಳ್ಳುವುದರಿಂದ ಕನ್ನಡ ಸಿನಿಮಾಗಳ ಆಗಿರುವ ಬದಲಾವಣೆಗಳು ಸಾಂಸ್ಕೃತಿಕ ನೆಲೆಯ ಮಾರ್ಪಾಡುಗಳೇ ಆಗಿವೆ. ಕಾಲಕ್ಕೆ ತಕ್ಕಂತೆ ಈ ಬದಲಾವಣೆಗಳು ಕಾಣಿಸಿಕೊಂಡಿರುವುದರಿಂದ ಇವುಗಳನ್ನು ಸಾಂಸ್ಕೃತಿಕ ನಮ್ಯತೆಯ ಪರಿಧಿಯೊಳಗಡೆ ಗ್ರಹಿಸಿಕೊಳ್ಳಬಹುದಾಗಿದೆ. ಆದ್ದರಿಂದ ಇವುಗಳ ಕುರಿತಾದ ಟೀಕೆಯನ್ನೂ ಕೂಡಾ ಸಾಂಸ್ಕೃತಿಕ ನೆಲೆಯ ಟೀಕೆಗಳಾಗಿಯೇ ಗಮನಿಸಿಕೊಳ್ಳಬೇಕು.

ಯಾವುದೇ ಕಲಾ ಪ್ರಕಾರವಾಗಿರಲಿ, ಮಾಧ್ಯಮವಾಗಿರಲಿ ನಮ್ಯತೆಯ ಗುಣವನ್ನು ಹೊಂದಿರಲೇಬೇಕು. ಅದು ಅನಿವಾರ್ಯ. ಕಾಲದ ಅಗತ್ಯಕ್ಕೆ ತಕ್ಕಂತೆ ತನ್ನನ್ನು ಮಾರ್ಪಡಿಸಿಕೊಳ್ಳದ ಕಲೆಯಾಗಲೀ, ಮಾಧ್ಯಮವಾಗಲೀ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ಜನರ ಆಕರ್ಷಣೆಯನ್ನು ಕಳೆದುಕೊಂಡು ಶಾಶ್ವತವಾಗಿ ಮರೆಗೆ ಸರಿಯಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಆದ್ದರಿಂದ ಕನ್ನಡ ಸಿನಿಮಾಗಳು ಇಂದು ಸಾಗುತ್ತಿರುವ ದಾರಿಯನ್ನು ಟೀಕಿಸುವ ಮಂದಿ ಈ ಅಂಶವನ್ನು ಗಮನಿಸಿಕೊಳ್ಳಬೇಕಾಗಿದೆ. ಈ ದೃಷ್ಟಿಯಿಂದ ಗಮನಿಸಿಕೊಂಡರೆ, ಸಿನಿಮಾಗಳು ಪರಿವರ್ತನೆಗೊಳ್ಳುತ್ತಿರುವುದು ಅತ್ಯಂತ ಸಹಜವಾದ ಸಂಗತಿಯಾಗಿದೆ.

ಎಲ್ಲಕ್ಕಿಂತ ಹೆಚ್ಚಾಗಿ, ವಾಸ್ತವವನ್ನು ತೋರಿಸಬೇಕಾದ ಜವಾಬ್ದಾರಿಯನ್ನು ಸಿನಿಮಾಗಳು ಹೊಂದಿರುತ್ತವೆ. ಸೃಜನಶೀಲತೆಯನ್ನು ಪ್ರತಿಬಿಂಬಿಸುವ ಕಾರಣಕ್ಕಾಗಿ ವಾಸ್ತವವನ್ನು ಸಂಪೂರ್ಣವಾಗಿ ಅಲ್ಲಗಳೆದು ಚಿತ್ರಿಸುವುದು ಸರಿಯಲ್ಲ: ಸಾಧ್ಯವೂ ಇಲ್ಲ. ಆದ್ದರಿಂದ ಇಂದಿನ ಸಿನಿಮಾಗಳು ಜನಸಾಮಾನ್ಯರ ಬದುಕಿನ ವಾಸ್ತವ ಚಿತ್ರಣವನ್ನು ಸಮಾಜದ ಮುಂದಿಡುತ್ತಿವೆ. ದಿನನಿತ್ಯದ ಜೀವನದಲ್ಲಿ ಜನಸಾಮಾನ್ಯನೊಬ್ಬ ಬಳಸುವ ಭಾಷೆಯನ್ನೇ ಸಿನಿಮಾದಲ್ಲಿಯೂ ಬಳಸಬೇಕಾಗುತ್ತದೆ. ಜನಸಾಮಾನ್ಯನ ಆಸಕ್ತಿ- ಅಭಿರುಚಿಗಳನ್ನೇ ಸಿನಿಮಾದಲ್ಲಿಯೂ ತರಬೇಕಾಗುತ್ತದೆ. ಉತ್ಸಾಹಶೀಲ ಜನರ ಮನಃಸ್ಥಿತಿಗೆ ಪೂರಕವಾಗಬಲ್ಲ ನೃತ್ಯ- ಸಂಗೀತ ಸಂಯೋಜನೆ ನಡೆಯಬೇಕಾಗುತ್ತದೆ. ಹಾಗಿದ್ದಾಗ ಮಾತ್ರ ಸಿನಿಮಾಗಳು ಪರಿಪೂರ್ಣ ಎಂದೆನಿಸಿಕೊಳ್ಳುತ್ತವೆ; ವಾಸ್ತವ ಎನಿಸಿಕೊಳ್ಳುತ್ತವೆ. ಆದ್ದರಿಂದ ಕನ್ನಡ ಸಿನಿಮಾಗಳ ಸಾಂಸ್ಕೃತಿಕ ನಮ್ಯತೆಯನ್ನು ಪ್ರತಿಯೊಬ್ಬರೂ ಒಪ್ಪಿಕೊಳ್ಳುವುದು ಹೆಚ್ಚು ಸಮಂಜಸವಾಗಿದೆ.

ಹಲವು ತಲೆಮಾರುಗಳನ್ನು ಪ್ರಭಾವಿಸಿರುವ ಕನ್ನಡ ಸಿನಿಮಾಗಳು ಕನ್ನಡ ಸಂಸ್ಕೃತಿಯನ್ನು ಉಳಿಸಿ- ಬೆಳೆಸುವ ದೃಷ್ಟಿಯಿಂದ ಗಮನಾರ್ಹವಾಗಿ ಕಾರ್ಯನಿರ್ವಹಿಸಿವೆ. ಇವತ್ತಿನ ಕನ್ನಡ ಸಿನಿಮಾಗಳೂ ಕೂಡಾ ಸಂಸ್ಕೃತಿಯ ಉಳಿಕೆಯ ದಿಶೆಯಿಂದ ದಿಟ್ಟ ಹೆಜ್ಜೆಗಳನ್ನು ಇರಿಸುತ್ತಿವೆ. ಹಲವಾರು ಸಾಂಸ್ಕೃತಿಕ ವೈಶಿಷ್ಟ್ಯತೆಗಳನ್ನು ಕನ್ನಡ ಸಿನಿಮಾಗಳ ಮೂಲಕ ಜನರು ಗಳಿಸಿಕೊಂಡಿದ್ದಾರೆ. ಆಧುನಿಕ ಕಾಲಘಟ್ಟದಲ್ಲಿ ಸಿನಿಮಾಗಳು ಹಿಂದೆಂದಿಗಿಂತಲೂ ಪ್ರಭಾವಶಾಲಿಯಾಗಿ ರೂಪುಗೊಂಡಿರುವುದರಿಂದ ಜನರ ಮೇಲೆ ಅವುಗಳು ಬೀರುವ ಪ್ರಭಾವ ಊಹೆಗೂ ನಿಲುಕದ್ದಾಗಿದೆ. ಆದ್ದರಿಂದ ಒಳ್ಳೆಯದೆಂದು ಅನ್ನಿಸುವ ವಿಚಾರಗಳನ್ನೇ ಸಿನಿಮಾಗಳ ಮೂಲಕ ಜನರ ಮುಂದಿಡಬೇಕಾದ ಮಹತ್ತರ ಹೊಣೆಗಾರಿಕೆ ಕನ್ನಡ ಸಿನಿಮಾ ಮಂದಿಯ ಮೇಲಿದೆ.