ಬಿರ್ಜು ಮಹಾರಾಜರು ಕಥಕ್ ನಿರ್ಧಿಷ್ಟ ಪರಂಪರೆಯಿಂದ ಬಂದವರಾದರೂ ಅವರು ಆ ಕ್ಷೇತ್ರದಲ್ಲಿ ಪ್ರಯೋಗಶೀಲರಾಗಿ ಕೆಲಸ ಮಾಡಿದರು. ಅವರ ವಿಶಿಷ್ಟವಾದ ಶೈಲಿಯಲ್ಲಿ “ಸಮ್” ತೋರಿಸುವ ವಿಧಾನದಲ್ಲಿ ಪರಂಪರೆಗೆ ಹೊಸ ಮಾದರಿ ತಂದರು. ಇದು ಕೆಲವರಲ್ಲಿ ಅಸಮಾಧಾನ ಉಂಟಾದರೂ ತನ್ನ ಬದಲಾವಣೆ ಹೇಗೆ ಕಥಕ್‌ನ ವಿವಿಧ ಕೋನಗಳ ನಿಲುವು ಭಂಗಿಯನ್ನು ಬಳಸಿಕೊಂಡೇ ಆದ ಹೊಸ ಆವಿಷ್ಕಾರ ಎಂದು ಪ್ರತಿಪಾದಿಸಿದಾಗ ವಿರೋಧ ಕರಗಿ ಘರಾಣೆಯ ಹಿರಿಯರಿಂದ ಪ್ರಶಂಸೆ ಬಂತು!
ಇತ್ತೀಚೆಗೆ ನಮ್ಮನ್ನು ಅಗಲಿದ, ಕಥಕ್ ಕ್ಷೇತ್ರದ ಅಪ್ರತಿಮ ಸಾಧಕ ಬಿರ್ಜು ಮಹಾರಾಜ್ ಕುರಿತು ಕೆರೆಮನೆ ಶಿವಾನಂದ ಹೆಗಡೆ ಬರೆದ ಬರಹ ಇಲ್ಲಿದೆ.

 

ಮನಸ್ಸು ಕುಸಿದ ಕ್ಷಣ. ವಿಹ್ವಲತೆ ಆವರಿಸಿದ ಸಂದರ್ಭ ನಿನ್ನೆ (17-01-2022) ನಮ್ಮನ್ನಗಲಿದ ಕಥಕ್ ನಾಟ್ಯ ಪ್ರಕಾರದ ಮಹಾನ್ ಕಲಾವಿದ ಕಥಕ್‌ನ ಮಹರ್ಷಿ ಎಂದು ಕರೆಸಿಕೊಂಡ ಪಂಡಿತ ಬಿರ್ಜು ಮಹಾರಾಜರು ದೆಹಲಿಯಲ್ಲಿ ಅಸ್ತಂಗತರಾದರು. ತನ್ನ ಗುರುಕುಲ “ಕಲಾ ಆಶ್ರಮ” ದಲ್ಲಿರುವಾಗಲೇ ಹೃದಯಾಘಾತವಾಗಿ, ಕೊನೆ ಕ್ಷಣದವರೆಗೂ ಆ ಕಲೆಯೊಂದಿಗೆ ಕಳೆದ ವಿರಳಾತಿ ವಿರಳ ಪುಣ್ಯಾತ್ಮರು. ಕಥಕ್ ಕ್ಷಿತಿಜಕ್ಕೆ ಇನ್ನಾವುದು ನಕ್ಷತ್ರ ಎಂಬ ಪ್ರಶ್ನೆಯನ್ನು ಬಿಟ್ಟು ಕಾಲನಿಗೆ ಕಥಕ್‌ನ ತಾಳ, ಲಯ ಕಲಿಸಲು ನಡೆದರೊ ಎಂಬಂತೆ ತನ್ನ 83 ವಸಂತಗಳನ್ನ ಕಳೆದು ದೇಹಾಂತವಾದರು.

ಒಂದು ಯುಗಕ್ಕೆ ತೆರೆ ಬಿತ್ತು ಎಂದು ಹಲವರು ಮರುಗಿದರು. ಪದ್ಮವಿಭೂಷಣ ಪಂಡಿತ್ ಬಿರ್ಜು ಮಹಾರಾಜರು ಕವಿ, ಚಿತ್ರಕಾರ, ನರ್ತಕ, ಹಾಡುಗಾರ, ಕೊರಿಯೋಗ್ರಾಫರ್‌ ಆಗಿ ಗುರುತಿಸಿಕೊಂಡಿದ್ದು ಮಾತ್ರವಲ್ಲ, ಎಲ್ಲದರಲ್ಲೂ ಅತಿ ಉನ್ನತ ಸ್ತರದ ಸಾಧಕರು. ಬಿರ್ಜು ಮಹಾರಾಜರ ಕುರಿತು ಬರೆಯುವುದೆಂದರೆ ಹಿಮಾಲಯದ ಪರಿಕ್ರಮಣದಂತೆ. ಒಂದು ಕಣ್ಣಿಲ್ಲದವ ಆನೆಯನ್ನು ಮುಟ್ಟಿ ಮುಟ್ಟಿ ನೋಡಿದರೂ ‘ಕಂಡು’ ಹೇಳಿದಂತಲ್ಲ! ಅಸಾಮಾನ್ಯನನ್ನು ಸಾಮಾನ್ಯನೊಬ್ಬ ಹೇಗೆ ನೋಡಿದರೂ ಪೂರ್ಣ ನೋಡುವುದು ಕಷ್ಟ.

ಅವರನ್ನು ಏನು ಎಂದು ಕರೆಯುವುದು…. ಮೇರುವಿನ ಬುಡದಲ್ಲಿ ನಿಂತು ಅದರ ಅಗಾಧತೆ ಕಂಡು ಕಂಗೆಟ್ಟವ ನಿಶ್ವಾಸವನ್ನಷ್ಟೇ ಬಿಡಬಹುದು. ಸಾಗರದ ವಿಸ್ತಾರವನ್ನು ಕಣ್ಣಲ್ಲಿ ತುಂಬಿಕೊಳ್ಳುವಷ್ಟು ಮಾತ್ರ! ಅದರ ಗಾತ್ರ ಗುಣ, ಅಪಾರತೆ ಊಹಾತೀತ, ಅಂತಹ ಉಪಮೆಗಳು ನೆನಪಾಗುವುದು.

ಸುಪ್ರಸಿದ್ಧ ಕಲಾವಿದರಾದ ಡಾ. ಸೊನಾಲ್ ಮಾನ್ ಸಿಂಗ್, ಅವರ ಬಹುಮುಖ ವ್ಯಕ್ತಿತ್ವವನ್ನು ವರ್ಣಿಸಲು ಪದಗಳು ಸಾಲದಾಗುತ್ತವೆ… (Words fall short to describe his multi-faceted personality), ಎಂದರೆ, ಡಾ.ಪದ್ಮಾ ಸುಬ್ರಹ್ಮಣ್ಯಮ್ Pandit Birju Maharaj, the chosen son of Laya Devatha has dissolved back into that Cosmic Rhythm ಎಂದು ಬಣ್ಣಿಸಿದ್ದಾರೆ. ಕಲಾಲೋಕದ ದಿಗ್ಗಜರೆಲ್ಲಾ ಇವರ ಸಾಮರ್ಥ್ಯವನ್ನ ವರ್ಣಿಸುವಲ್ಲಿ ಕೈಚೆಲ್ಲಿದ್ದಾರೆ.

ಕಥಕ್ ಎಂಬ ಮಹಾ ನಾಟ್ಯ ಸಂಪ್ರದಾಯದ ಬಹುದೊಡ್ಡ ಘರಾನೆಯಿಂದ ಹುಟ್ಟಿಬಂದ ಬಿರ್ಜು ಮಹಾರಾಜರು ಹುಟ್ಟಿದ್ದು ಲಕ್ನೋದಲ್ಲಿ. ಫೆಬ್ರವರಿ 4, 1938 ಇಸವಿಯಲ್ಲಿ. ಆಗ ಇಟ್ಟ ಹೆಸರು ಬ್ರಿಜ ಮೋಹನ್, ಸಾಧನೆಯಿಂದ ಪ್ರಸಿದ್ಧರಾದದ್ದು ಬಿರ್ಜು ಮಹಾರಾಜ. ಮಹಾರಾಜ ಎಂಬುದು ಇವರ ಮೂಲ ಪುರುಷರ ಬಿರುದು. ಸುಮಾರು ಏಳು ತಲೆಮಾರಿಂದ ಕಥಕ್ ಸಂಪ್ರದಾಯ ಇವರ ಮನೆತನದಲ್ಲಿ ಹರಿದು ಬಂತು. ಇವರ ದೊಡ್ಡಪ್ಪ ಬಿಂದಾದಿನ್ ಅವರು, ಕಥಕ್ ನ ಮಹಾರಾಜ ಎಂದೇ ಕರೆಸಿಕೊಂಡವರು. ಅಲ್ಲಿಂದ ಹೆಸರಿನ ಮುಂದೆ ‘ಮಹಾರಾಜ’ ಸೇರಿಕೊಂಡು ಬಂತು.

ಕಥಕ್ ನ ಜೈಪುರ, ಲಕನೌ, ಬನಾರಸ್ ಈ ಮೂರು ಘರಾಣೆಯಲ್ಲಿ ಲಕನೌ ಘರಾಣೆಗೆ ವಿಶ್ವಮನ್ನಣೆ ತಂದು ಕೊಟ್ಟವರಲ್ಲಿ ಬಿರ್ಜು ಮಹಾರಾಜರ ಪಾಲು ದೊಡ್ಡದು. ನೂರಾರು ವರುಷಗಳಿಂದ ಬಿರ್ಜು ಮಹಾರಾಜರ ಕುಟುಂಬ ತಮ್ಮ ವಿಶಿಷ್ಟ ಶೈಲಿಯ ನಾಟ್ಯ ಪಂಥವನ್ನು ಕಟ್ಟುತ್ತಾ ಬಂದವರು. ಅವತ್ತಿನ ಕೊನೆಯ ನವಾಬ ವಾಜಿದ್ ಅಲಿ ಶಾ ಇವರ ಆಸ್ಥಾನದ ನರ್ತಕರಾಗಿದ್ದ ಪ್ರಾತಃಸ್ಮರಣೀಯ ಬಿಂದಾದಿನ್ ಮತ್ತು ಕಲ್ಕಾ ಪ್ರಸಾದರ ಕೊಡುಗೆ ಅಸಾಮಾನ್ಯ. ಅವರಿಂದಾಗಿಯೇ ಬಿಂದಾದಿನ್- ಕಲ್ಕಾ ಪ್ರಸಾದ ಕಥಕ್ ಘರಾನಾ ಎಂಬುದೇ ಹುಟ್ಟಿಕೊಂಡಿತು. ಆ ಕವಲಿಂದ ಬಂದವರು ಬಿರ್ಜು ಮಹಾರಾಜರು.

ಬಿರ್ಜು ಅವರು ಹುಟ್ಟಿದ ಆಸ್ಪತ್ರೆಯಲ್ಲಿ ಆ ದಿನ ಇವರೊಬ್ಬರನ್ನ ಬಿಟ್ಟು ಉಳಿದವರೆಲ್ಲಾ ಹಡೆದದ್ದು ಹೆಣ್ಣು ಮಗುವಂತೆ! ಹಾಗಾಗಿಯೇ ಕೃಷ್ಣನನ್ನು ನೆನೆಸಿಕೊಂಡು ಅವರಿಗೆ ಬ್ರಿಜ್ ಮೋಹನ್ ಎಂದು ಹೆಸರಿಟ್ಟರು. ಮುಂದೆ ಈ ಹೆಸರು ಬಿರ್ಜು ಎಂದು ಬದಲಾವಣೆಗೊಂಡಿತು. ನಾಲ್ಕನೆಯ ವರುಷದಲ್ಲೇ ಕೈ ಎರಡೂ ಕಡೆ ಮುಟ್ಟದಷ್ಟು ಪುಟ್ಟದಾಗಿದ್ದ ವಯಸ್ಸಿನಲ್ಲಿ ಪಖಾವಜ್ ಭಾರಿಸಲು ಆರಂಭಿಸಿದರು.

ತುಂಬಾ ಎಳೆಯವಯಸ್ಸಿನಲ್ಲೇ ಮನೆಯಲ್ಲಿ ತುಂಬಿತುಳುಕುತ್ತಿದ್ದ ಕಥಕ್ ನಾಟ್ಯ ಪ್ರಕಾರದ ಗಾಢ ಗರಡಿಯಲ್ಲಿ ಮಿಂದೆದ್ದರು. ಸುತ್ತಲೂ ಒಬ್ಬಬ್ಬ ಮಹಾನ್ ನಟರೇ ತುಂಬಿದ್ದ ತಮ್ಮ ಲಕನೌನ ಹಿರಿಯರ ಮನೆ ದ್ಯೋದಿ (Dyodhi) ಯಲ್ಲಿ ಕಳೆದ ಬಾಲ್ಯ ಅವರ ಕಲಾ ಬದುಕನ್ನು ರೂಪಿಸಿತು.

ಬಿಂದಾದಿನ್ ಮಹಾರಾಜರು ಉತ್ತರ ಪ್ರದೇಶದ ರಾಯಗಡದ ಚಕ್ರಬೀರ ಸಿಂಗ್ ಮತ್ತು ಅವಧನ (ರಾಮಪುರದ) ಕೊನೆಯ ನವಾಬ ವಾಜಿದ್ ಅಲಿ ಶಾ ಇವರ ಆಸ್ಥಾನ ನರ್ತಕರು. ಅವರ ಅಭಿನಯ ಮತ್ತು ಕವಿತ್ವ ಶಕ್ತಿಯನ್ನು ಕಂಡು ಬೆರಗಾದ ಆನಂದ ಕುಮಾರ ಸ್ವಾಮಿಯವರು I have never seen nor do I hope to see better acting then I saw in Luknow, when an old man a poet and dancer and a teacher of many ಎಂದು ಉದ್ಗರಿಸಿದ್ದಾರೆ. ಬಿಂದಾದಿನ್ ಮತ್ತು ಕಾಲ್ಕಾ ಪ್ರಸಾದ್ ಅಣ್ಣ ತಮ್ಮಂದಿರು, ಲಕನೌ ಕಥಕ್ ಘರಾಣೆಯನ್ನೆ ಹುಟ್ಟು ಹಾಕಿದವರು. ಈ ಇಬ್ಬರಿಂದಾಗಿಯೇ, ಕಲ್ಕಾ -ಬಿಂದಾದಿನ್ ಕಥಕ್ ಘರಾಣೆಯನ್ನು ಜನ ಗುರುತಿಸತೊಡಗಿದರು.

ಕಾಲ್ಕಾ ಪ್ರಸಾದರ ಮೂವರು ಮಕ್ಕಳಲ್ಲಿ ಅಚ್ಚನ್ (ಜಗನ್ನಾಥ ಪ್ರಸಾದ) ಮಹಾರಾಜರು ಬಿರ್ಜು ಮಹಾರಾಜರ ತಂದೆ. ಇವರ ನಡತೆ, ಸೌಜನ್ಯ ಮತ್ತು ಸುಂದರ ನೃತ್ಯಕ್ಕಾಗಿ ಜಗನ್ನಾಥನೆಂಬ ಹೆಸರು ಬದಲಾಗಿ ಅಚ್ಚನ್ ಅಥವಾ ಅಚ್ಚೇ (ಅಂದರೆ ಒಳ್ಳೆಯ) ಮಹಾರಾಜ್ ಎಂದು ಕರೆಸಿಕೊಂಡರು! ಬಿರ್ಜುರವರ ಚಿಕ್ಕಪ್ಪ ಲಕನೌ ಘರಾನದ Grace, Nazakat, Khoohsarati(Beauty) ಗೆ ಹೆಸರಾದವರು. ಹಾಗಾಗಿ ಅವರ ಮೂಲ ಹೆಸರು ವೈದ್ಯನಾಥ ಮಿಶ್ರಾ ಇದ್ದುದ್ದು ಮೃದುತ್ವ, ಕೋಮಲತೆಯ ಸಾಕಾರಕ್ಕೆ ಆಕಾರವಾಗಿ ‘ಲಚ್ಚು’ ಮಹಾರಾಜ ಎನಿಸಿದರು. ಲಚ್ಚು ಅವರ ನಾಟ್ಯ ಕೌಶಲ್ಯಕ್ಕೆ ಮರುಳಾಗದವರು ವಿರಳ. ಅದರಲ್ಲೂ ಶೃಂಗಾರ ಅಭಿನಯವನ್ನ ನೋಡಿ ಸ್ತ್ರೀಯರೇ ನಾಚುವಂತೆ ಮಾಡುತ್ತಿದ್ದರಂತೆ. ಇವರ ದೊಡ್ಡಪ್ಪ ಶಂಭು ಮಹಾರಾಜರು “ಅಭಿನಯ ಚಕ್ರವರ್ತಿ” ಎಂದು ಬಿರುದಾಂಕಿತ ಒಬ್ಬ ಅಪ್ರತಿಮರು.

ಹೀಗೆ ಬಿರ್ಜು ಮಹಾರಾಜರ ತಂದೆಯ ಒಳ್ಳೆಯತನ, ಚಿಕ್ಕಪ್ಪ ಲಚ್ಚನ್ ಮಹಾರಾಜರ ನಯ ನಾಜುಕು ಮೃದುತ್ವದ ಬಾಗು ಬಳುಕಿನ ನಾಟ್ಯಗುಣ, ಶಂಭು ಮಹಾರಾಜರ ಅಭಿನಯ ಕೌಶಲ್ಯ ಈ ಎಲ್ಲಾ ಗುಣಗಳು ಎರಕವಾಗಿ ಮೂಡಿಬಂದ ಮೂರ್ತಿ ಬಿರ್ಜು ಮಹಾರಾಜ ಎಂಬ ಮತ್ತೊಬ್ಬ ಸೂರ್ಯ! ತನ್ನ ತಂದೆಗೆ ನಾಲ್ಕು ಮಕ್ಕಳಲ್ಲಿ ಬಿರ್ಜು ಒಬ್ಬ ಮಗ. ಉಳಿದವರು ಹೆಣ್ಣು ಮಕ್ಕಳು. ಬಹಳ ಬೇಗ ತಂದೆಯನ್ನ ಕಳೆದುಕೊಂಡ ಬಿರ್ಜು ಮಹಾರಾಜರಿಗೆ ತನ್ನ ತಾಯಿಯೇ ಗುರು. ಶಿಷ್ಯರಿಗೆ ಪಾಠ ಮಾಡುವುದನ್ನು ಕೇಳಿ ನೋಡಿ ಅರಗಿಸಿಕೊಂಡಿದ್ದ ಬಿರ್ಜು ಮಹಾರಾಜರ ಅಮ್ಮ, ಅವನ ತಂದೆಯ ಎಲ್ಲಾ ಕಲಾ ಕೌಶಲ್ಯವನ್ನ ಮಗನಿಗೆ ಧಾರೆ ಎರೆದರು. ಚಿಕ್ಕಪ್ಪ ಶಂಭು ಮಹಾರಾಜ, ಲಚ್ಚು ಮಹಾರಾಜರ ಮಾರ್ಗದರ್ಶನ, ಕೂಡಾ ಇವರ ಉಜ್ವಲ ಬದುಕನ್ನು ರೂಪಿಸಿತು.

ಹೀಗೆ ಬೆಳೆದ ಬಿರ್ಜು ಮಹಾರಾಜರು ಲಕನೌನಿಂದ ದೆಹಲಿಗೆ ಬಂದು ಭಾರತೀಯ ಕಲಾ ಕೇಂದ್ರ ಕಥಕ್ ಕೇಂದ್ರ ಮುಂತಾದ ಸಂಸ್ಥೆಗಳ ಕಲಾ ನಿರ್ದೇಶಕರೂ, ಕೋರಿಯೋಗ್ರಫರೂ ಆಗಿ ಗುರುವಾಗಿ ಸಾವಿರಾರು ಶಿಷ್ಯರನ್ನು ರೂಪಿಸಿದರು. ಬಿರ್ಜುರವರ ಅಭಿನಯ ಕೌಶಲ್ಯ, ನೃತ್ಯದಲ್ಲಿದ ಹಿಡಿತ, ಮತ್ತು ಇಡೀ ಕಲಾ ಪ್ರಕಾರದ ಮೇಲೆ ಸಾಧಿಸಿದ ಪ್ರಭುತ್ವ ಅವರ್ಣನೀಯ.

ಬಿರ್ಜು ಮಹಾರಾಜರು ರಂಗಕ್ಕೆ ಬಂದರೆ ಸಾಕು ಮಿಂಚು ಹೊಡೆದಂತೆ. ರಸಿಕರಲ್ಲಿ ವಿದ್ಯುತ್ ಸಂಚಾರ, ರೋಮಾಂಚನಗೊಂಡು ಮೈಮರೆಯುವ ಪ್ರೇಕ್ಷಕರು. ಉತ್ತರ ಭಾರತದಲ್ಲಿ ದರ್ಜಿಯಿಂದ ಹಿಡಿದು ದೊರೆಯ ತನಕ, ಸಾಮಾನ್ಯರಿಂದ ಅಸಾಮಾನ್ಯರವರೆಗೆ ಅವರ ಹೆಸರು ಕೇಳದವರಿಲ್ಲ. ಅವರು ಕೇವಲ ಕಥಕ್ ನರ್ತಕರು ಮಾತ್ರವಲ್ಲ, ಅವರು ಅತ್ಯುತ್ತಮ ಗಾಯಕರು. ಭಜನ್ ಟುಮ್ರಿ, ದಾದ್ರ, ಗಝಲ್, ತರಾನಾ, ಹೋರಿ, ಹೀಗೆ ವಿವಿಧ ರೀತಿಯ ಪ್ರಕಾರಗಳನ್ನು ಕರಾರುವಾಕ್ಕಾಗಿ ಹಾಡಬಲ್ಲವರು. ತಬಲಾ ಜುಗಲ್ ಬಂದಿಗೆ ಝಾಕೀರ್ ಹುಸೇನ್ ಸಂಗಡ ನಿಲ್ಲಬಲ್ಲವರು. ಫಕಾವಾಜ್ ಭಾರಿಸಲು ಕೂತರೆ ಅವರು ಅದರಲ್ಲೇ ಮಾಸ್ಟರ್ ಇರಬಹುದು ಎನ್ನುವಂತೆ ನುಡಿಸಬಲ್ಲವರು. ಒಬ್ಬ ಗುರುವಾಗಿ, ನೃತ್ಯ ಸಂಯೋಜಕರಾಗಿ, ಕವಿಯಾಗಿ, ಸಂಗೀತ ಸಂಯೋಜಕರಾಗಿ ಹೀಗೆ ಹಲವು ಆಯಾಮಗಳಲ್ಲಿ ಪರಿಣಿತರಾಗಿದ್ದ ಬಿರ್ಜು ಮಹಾರಾಜರ ವ್ಯಕ್ತಿತ್ವವನ್ನು ಸರಿಗಟ್ಟುವುದು ಶತಮಾನಕ್ಕೂ ಒಬ್ಬರು ದುರ್ಲಭ.

ಪದ್ಮವಿಭೂಷಣ ಪಂಡಿತ್ ಬಿರ್ಜು ಮಹಾರಾಜರು ಕವಿ, ಚಿತ್ರಕಾರ, ನರ್ತಕ, ಹಾಡುಗಾರ, ಕೊರಿಯೋಗ್ರಾಫರ್‌ ಆಗಿ ಗುರುತಿಸಿಕೊಂಡಿದ್ದು ಮಾತ್ರವಲ್ಲ, ಎಲ್ಲದರಲ್ಲೂ ಅತಿ ಉನ್ನತ ಸ್ತರದ ಸಾಧಕರು. ಬಿರ್ಜು ಮಹಾರಾಜರ ಕುರಿತು ಬರೆಯುವುದೆಂದರೆ ಹಿಮಾಲಯದ ಪರಿಕ್ರಮಣದಂತೆ.

ಬಿರ್ಜು ಮಹಾರಾಜರು ಕಥಕ್ ನಿರ್ಧಿಷ್ಟ ಪರಂಪರೆಯಿಂದ ಬಂದವರಾದರೂ ಅವರು ಆ ಕ್ಷೇತ್ರದಲ್ಲಿ ಪ್ರಯೋಗಶೀಲರಾಗಿ ಕೆಲಸ ಮಾಡಿದರು. ಅವರ ವಿಶಿಷ್ಟವಾದ ಶೈಲಿಯಲ್ಲಿ “ಸಮ್” ತೋರಿಸುವ ವಿಧಾನದಲ್ಲಿ ಪರಂಪರೆಗೆ ಹೊಸ ಮಾದರಿ ತಂದರು. ಇದು ಕೆಲವರಲ್ಲಿ ಅಸಮಾಧಾನ ಉಂಟಾದರೂ ತನ್ನ ಬದಲಾವಣೆ ಹೇಗೆ ಕಥಕ್‌ನ ವಿವಿಧ ಕೋನಗಳ ನಿಲುವು ಭಂಗಿಯನ್ನು ಬಳಸಿಕೊಂಡೇ ಆದ ಹೊಸ ಆವಿಷ್ಕಾರ ಎಂದು ಪ್ರತಿಪಾದಿಸಿದಾಗ ವಿರೋಧ ಕರಗಿ ಘರಾಣೆಯ ಹಿರಿಯರಿಂದ ಪ್ರಶಂಸೆ ಬಂತು!

ಮಹಾರಾಜರು ಸಾಮಾನ್ಯ ಎತ್ತರದ, ಎದುರು ಬಂದಾಗ ತೀರಾ ಸರಳ ವ್ಯಕ್ತಿಯಾಗಿ ಕಾಣಿಸುವ ಆಕಾರದವರು. ಅವರ ಮುದ್ದುಮುದ್ದಾದ ಮುಖ, ಕಮಲದಂತೆ ಅರಳಿದ ಕಣ್ಣು ಮತ್ತು ಮಾದಕ ನೋಟ ಮಂತ್ರ ಮುಗ್ಧಗೊಳಿಸುವಂತಹದ್ದು ಅವರು ಕೃಷ್ಣನ ಕೊಳಲು ಹಿಡಿಯಲಿ, ಅಥವಾ ಶಿವನ ತ್ರಿಶೂಲ ಹಿಡಿದು ತಾಂಡವದ ಭಂಗಿಯಲ್ಲಿ ನಿಲ್ಲಲ್ಲಿ, ಅದಕ್ಕೆ ಹೊಸ ಆಕರ್ಷಣೆ ತನ್ನಿಂದ ತಾನೇ ಬರುತ್ತಿತ್ತು. ಒಂದು ಮಗ್ಗಲು ತಿರುಗಿದರೆ ಯಶೋದೆಯ ವಾತ್ಸಲ್ಯ, ಇನ್ನೊಂದು ಮಗ್ಗಲು ತಿರುಗಿದರೆ ಕೃಷ್ಣನ ಮೋಹಕ ತುಂಟನಗು, ಬೆಣ್ಣೆಯ ಎಗರಿಸುವ, ಮೊಸರು ಪಾತ್ರೆ ಒಡೆದು ಕುಡಿಯು ಜಾಣ್ಮೆಯಲ್ಲಿ ಮುದ್ದು ಕೃಷ್ಣನಾಗಿ ಬಾಲಕನಂತೆ ಆಗಿಬಿಡುವ ಅವರ ಅಭಿನಯ ನೋಡಿದ ಕಣ್ಣೇ ಪುಣ್ಯ.

ರಾಧೆಯ ಕಾಡುವ ಕೃಷ್ಣ ಒಂದೆಡೆಯಲ್ಲಿ ಅಭಿನಯಿಸುತ್ತಲೇ, ಒಂದು ಕ್ಷಣದಲ್ಲಿ ವಿರಹದ ರಾಧೆ ‘ಗುಂಗಟ್’ನ ಮರೆಯಲ್ಲಿ ಕೃಷ್ಣನನನ್ನು ನೋಡಿ ಕಣ್ಣು ತುಂಬಿಕೊಳ್ಳುವ ಶೃಂಗಾರ, ನಾಚಿ ನೀರಾಗುವ ರಾಧೆಯ ಕೈಹಿಡಿದು ತನ್ನೆಡೆ ಎಳೆದು ಬಳಸುವ ಚೆಲುವ ಕೃಷ್ಣನ ಲಾಲಿತ್ಯ, ಹುಡುಗಾಟಿಕೆ. ಕ್ಷಣಾರ್ಧದಲ್ಲಿ ರಂಗದಲ್ಲಿ ಚೆಲ್ಲಿ ಬಿಡುವ ಅಪಾರ ಅಭಿನಯ ಕೌಶಲ್ಯಕ್ಕೆ ರಸಿಕರು ಮಂತ್ರಮುಗ್ಧರಾಗಿ ತಮ್ಮನ್ನೇ ಮರೆತ ಇಡೀ ಸಭೆ ಸ್ತಬ್ಧವಾಗುತ್ತಿತ್ತು. ಮಹಾರಾಜರ ಅನಾಯಾಸ ನಾಟ್ಯ, ಅಭಿನಯ, ‘ಸಹಜ ಸಹಜ’ ಎಂಬಂತೆ ಇರುತಿತ್ತು. ನೃತ್ತದಲ್ಲಿ ಮಹಾರಾಜರು ಟುಕಡಾ, ಫರನ್, ತತ್ಕಾರ್ ಗತ್ ಭಾವ್, ಚಕ್ಕರ್, ತರಾನಾ, ಮುಂತಾದ ತಾಂತ್ರಿಕ ವಿಷಯಗಳಲ್ಲಿ ಇನ್ನಿಲ್ಲ ಮುನ್ನಿಲ್ಲದ ಬೆರಗನ್ನು ಹುಟ್ಟಿಸುತ್ತಿದ್ದರು. ಸುಮಾರು 150 ಗೆಜ್ಜೆಗಳನ್ನು ಒಂದೊಂದು ಕಾಲಿಗೆ ಕಟ್ಟಿಕೊಳ್ಳುತ್ತಿದ್ದ ಅವರು ತತ್ಕಾರದಲ್ಲಿ ಅದ್ಭುತ ಬೆರಗನ್ನು ಸೃಷ್ಠಿಸುತ್ತಿದ್ದರು. ರಂಗದಲ್ಲಿ ಚೆಂಡಾಟಗಳನ್ನು ಬರಿ ಕಥಕ್ಕಿನ ಬೋಲ್‌ಗಳನ್ನ ಬಳಸಿಕೊಂಡು ಸೃಷ್ಟಿಸುವುದು, ರೈಲು ಬರುವಾಗ ಆಗುವ ಖುಛ್ ಖುಛ್ ಶಬ್ದಗಳು, ಅವರು ಗೆಜ್ಜೆಯಲ್ಲಿಯೇ ತೋರಿಸುವುದು, ಯಾವುದೋ ಒಂದು ಕ್ಷಣದಲ್ಲಿ ಕಿವಿಗೊಟ್ಟು ಆಲಿಸಿದಾಗ ಕಾಲಿಗೆ ಕಟ್ಟಿದ ಮುನ್ನೂರು ಗೆಜ್ಜೆಗಳಲ್ಲಿ ಒಂದೇ ಗೆಜ್ಜೆಯನ್ನು ಮಾತ್ರ ಉರಿಯುವಂತೆ ಮಾಡುತ್ತಿದ್ದ ಕೌಶಲ್ಯಕ್ಕೆ ಬೆರಗಾಗದವರಿಲ್ಲ. ಆಗ ಇಡೀ ಸಭೆ ಪುಂಗಿಯ ನಾದಕ್ಕೆ ವಶವಾದ ಹಾವಿನಂತೆ ತಲೆ ಆಡಿಸುತ್ತದೆ. ಮತ್ತೆ ಮುನ್ನೂರೂ ಗಜ್ಜೆಗಳು ಉಲಿದಾಗ ಅವರೊಂದಿಗೆ ಕರತಾಡನ ಮುಗಿಲು ಮುಟ್ಟುತ್ತದೆ.

ಸ್ವತಹ ಒಳ್ಳೆಯ ಚಿತ್ರಕಾರರಾದ ಬಿರ್ಜು ಮಹಾರಾಜರು, ರಂಗದಲ್ಲಿ ಚಿತ್ರಿಸುವ ನಾಟ್ಯ ಭಂಗಿಗಳು ಅತ್ಯಂತ ಆಕಾರ ಬದ್ಧ, ಪ್ರಮಾಣ ಬದ್ಧ! ಅವರ ಮಾತಲ್ಲೇ ಹೇಳುವುದಾದರೆ “ ಲಯಕಾರಿ(ವಿವಿಧ ನೃತ್ಯ ವಿನ್ಯಾಸ) ಎಂದರೆ ಸಮಯದ ಗೋಡೆ (Canvass) ಮೇಲೆ ಬಿಡಿಸಿದ ರಂಗೋಲಿಯಂತೆ: ಸಮಯ ಎನ್ನುವುದು ಕಾಲಿಯಾದ (ಹಾಳೆ) ಸ್ಥಳ, ನೃತ್ಯದ ವಿವಿಧ ಭಂಗಿಗಳಿಂದ ಲಯಕಾರಿಯಿಂದ ಈ ಸಮಯದಗೋಡೆಯನ್ನ (Time and space) ಬಣ್ಣದಿಂದ ರೇಖೆಯಿಂದ ತುಂಬುತ್ತೇನೆ” ಎನ್ನುವುದು ಮೇಲುನೋಟಕ್ಕೆ ನೃತ್ಯ ತಾಂತ್ರಿಕತೆಯ ಸೌಂದರ್ಯ ಮೀಮಾಂಸೆ ಅನಿಸಿದರೂ ಅದರ ಆಳದಲ್ಲಿ ಅವರು ಕಾಣುವುದು ಈ ಕ್ರಿಯೆಯ ಪದರಿನಲ್ಲಿ ಅಂತರ್ಗತವಾದ ತಾತ್ವಿಕ, ಅಧ್ಯಾತ್ಮಿಕ ಅಂಶವನ್ನ. ಸಮಯವೆಂಬ ಹಿಡಿಯಲಾಗದ ವಿಶಿಷ್ಟ ಅನುಭವವನ್ನು ಬದುಕಿನ ಭಾವ, ಬವಣೆ, ಬಂಧನ, ಮುಕ್ತತೆ, ಸಂಕೀರ್ಣತೆಗಳನ್ನ ನೃತ್ಯ ರೇಖೆಗೆ ಭಾವರಸದ ಬಣ್ಣ ಕೊಟ್ಟು ನಮ್ಮನ್ನೇ ನಾವು ನೋಡಿಕೊಳ್ಳುವ ಕನ್ನಡಿಯಂತೆ ನಮ್ಮ ನಾಟ್ಯ ಎಂಬ ಭಾವ. ಆ ಸಮಯದ ಚೌಕಟ್ಟಿಗೆ ಹೊಂದಿಸಿಕೊಳ್ಳುವುದು ಅಲ್ಲಿ ನಿರ್ಮಿಸಿದ ವಿನ್ಯಾಸಗಳು ಬದುಕಿನ, ಬಾಳಿನ ಅನುಭವದ ಗೆರೆಗಳು, ಅನುಭವದ ಚಿತ್ರಗಳು ಎಂಬುದು ಅವರ ನಂಬಿಕೆ.

1985 ರಲ್ಲಿ ದೆಹಲಿಗೆ ಕೋರಿಯೋಗ್ರಫಿ ಮಾಡಲು ನಾನು ಹೋದಾಗ ಕಥಕ್ಕಿನ ಇನ್ನೊರ್ವ ಮೇರು ಸದೃಶರಾದ ಭಾರತೀಯ ಕಲಾ ಪರಂಪರೆಗೆ ಬಹುಗಾತ್ರದ ಕೊಡುಗೆ ನೀಡಿದ ಅವಿಸ್ಮರಣೀಯ ಸವ್ಯಸಾಚಿ ಗುರು ಡಾ. ಮಾಯಾರಾವ್ ಅವರಲ್ಲಿ ನಾನು ಕಥಕ್ ಅಭ್ಯಾಸ ಮಾಡುವ ಭಾಗ್ಯ ದೊರಕಿತ್ತು. ಗುರು ಡಾ.ಮಾಯಾರಾವ್ ಕೂಡಾ ಲಕನೌ ಘರಾಣೆಯವರು. ಬಿರ್ಜು ಮಹಾರಾಜರ ಚಿಕ್ಕಪ್ಪ ಶಂಭು ಮಹಾರಾಜರ ಶಿಷ್ಯೆ. ಅವರ ಅಡಿಯಲ್ಲಿ ಕಥಕ್ ನಾಟ್ಯ ಪ್ರಕಾರದ ನಾಟ್ಯ ಮಗ್ಗಲುಗಳನ್ನು ತಿಳಿಯಲು ನನಗೆ ಅವಕಾಶವಾಯಿತು. ಪೂಜ್ಯ ಪಂ. ಬ್ರಿಜು ಮಹಾರಾಜರ ಪರಿಚಯವೂ ದೀದಿಯವರ ಮೂಲಕವೇ ಆದದ್ದು. ದೆಹಲಿಯಲ್ಲಿದ್ದಾಗ ಮಾಯಾ ರಾವ್ (ದೀದಿ) ನಮ್ಮನ್ನು ಕಥಕ್ ಹಾಗೂ ಅನ್ಯ ಪ್ರಕಾರದ ನಾಟ್ಯ ಕಾರ್ಯಕ್ರಮವನ್ನು ಸ್ವತಃ ಬಂದು ತೋರಿಸುತ್ತಿದ್ದರು. ಈ ಸಂದರ್ಭಗಳಲ್ಲಿ ಬಿರ್ಜು ಮಹಾರಾಜರ ಅನೇಕ ಕಾರ್ಯಕ್ರಮ ನೋಡುವ ಅವಕಾಶ ಸಿಕ್ಕಿತು. ಕಥಕ್ ನ ಒಂದು ಸಂಪ್ರದಾಯದ ಕವಲುಗಳ ಚಿಕ್ಕ ನೋಟವನ್ನಷ್ಟೇ ಕಂಡ ನನಗೆ, ಬಿರ್ಜು ಮಹಾರಾಜರ ಬಗ್ಗೆ ಬರೆಯುವ ಸಾಮರ್ಥ್ಯ ಖಂಡಿತಾ ಇಲ್ಲ. ಆದರೆ ಕಥಕ್ ನೊಂದಿಗೆ ನನಗಿರುವ ಪ್ರೀತಿ ಮತ್ತು ಗುರು ಪೂಜ್ಯ ಡಾ.ಮಾಯಾರಾವ್ ಅವರ ಆಶೀರ್ವಾದ ಈ ಮೇರು ಕಲಾವಿದರ ವಿಷಯದಲ್ಲಿ ತಿಳಿದ ನಾಲ್ಕು ಮಾತು ಬರೆಯಲು ಧೈರ್ಯ ಕೊಟ್ಟಿದೆ.

ಅವರ ಕೊರಿಯೋಗ್ರಫಿಯು ಹಲವಾರು ನೃತ್ಯ ನಾಟಕಗಳು, ಅವರ ವಿದೇಶ ಪ್ರವಾಸ, ಅವರ ಪೇಂಟಿಂಗ್, ಒಬ್ಬ ಗುರುವಾಗಿ ಕಲಿಸುವ ವಿಧಾನ, ರಂಗದಲ್ಲಿ ಪಕ್ಕನೆ ಸೃಜನಾತ್ಮಕವಾಗಿ ಕಟ್ಟುವ ವಿಶಿಷ್ಠ ಲಯಕಾರಿಗಳು ಇದೆಲ್ಲ ವಿವರಿಸುವುದಕ್ಕೆ ಇನ್ನೊಂದು ಸುದೀರ್ಘ ಲೇಖನ ಸಾಕಾಗಲಾರದು.

ಸಾಗರಕ್ಕೆ ಸಾಗರವೇ ಸಾಟಿಯಂತೆ ಬಿರ್ಜು ಮಹಾರಾಜರಿಗೆ ಅವರೇ ಸಾಟಿ. ತೇಲುಗಣ್ಣಿನ ಮೃದುಮನಸ್ಸಿನ ನಿಂತರೆ ನಡೆದರೆ ನಟರಾಜನಂತಿದ್ದ, ಸದಾ ತಾಂಬೂಲ ಪೂರಿತ ಮುಖಾರವಿಂದದ ಮಂದಸ್ಮಿತಿ, ತೀಕ್ಷ್ಣಮತಿಯ ಒಂದಿಲ್ಲೊಂದು ಲಯದಲ್ಲಿ ತೂಗುತ್ತಾ ಬಾಗುತ್ತಾ ದಿನವಿಡೀ ಕಲಾವಿದನೇ ಆಗಿರುತ್ತಿದ್ದ ಮಹಾನುಭಾವನೊಬ್ಬನನ್ನು ಕಳೆದುಕೊಂಡಿದ್ದೇವೆ. ಅವರ ಸಾಮೀಪ್ಯ, ಸಾನಿಧ್ಯ ಸಾರೂಪ್ಯ ಪಡೆದವರು ಅವರ ಪ್ರದರ್ಶನ ಕಂಡವರು ಧನ್ಯರು!