ಇಲ್ಲಿ ಬ್ರಿಟನ್ನಿನಲ್ಲಿ ಪರಿಸ್ಥಿತಿ ಈ ಥರ ಸುಧಾರಿಸುತ್ತಿರಬೇಕಾದರೆ ಅಲ್ಲಿ ತವರೂರು ಭಾರತದಲ್ಲಿ ಎರಡನೇ ಅಲೆ ಇನ್ನೂ ವ್ಯಾಪಿಸುತ್ತಲೇ ಇದೆ. ಅದಕ್ಕೆ ಸ್ಪಂದಿಸಿ ಇಲ್ಲಿ ಬ್ರಿಟನ್ನಿನಲ್ಲಿರುವ ಕನ್ನಡಿಗರು ವಿವಿಧ ಸಂಘಗಳಿಂದ ಧನ ಸಂಗ್ರಹಿಸಿ ಕೊಟ್ಟ ವಿಷಯವನ್ನು ಕಳೆದ ಸಲ ಬರೆದಿದ್ದೆ. ಈಗ ಇನ್ನೊಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಬ್ರಿಟನ್ನಿನಲ್ಲಿರುವ ಸುಮಾರು ನಲವತ್ತು ಕನ್ನಡದ ವೈದ್ಯರು ಮೈಸೂರಿನ ನಗರಪಾಲಿಕೆಯೊಂದಿಗೆ ಕೈಗೂಡಿಸಿದ್ದಾರೆ. ಕೋವಿಡ್ ಕಾಯಿಲೆಗೆ ತುತ್ತಾದ ಮೈಸೂರಿನ ಜನತೆಗೆ ಟೆಲಿ ಕನ್ಸಲ್ಟೇಷನ್ ಅನ್ನು ಉಚಿತವಾಗಿ ಕೊಡುತ್ತಿದ್ದಾರೆ.
ಕೇಶವ ಕುಲಕರ್ಣಿ ಬರೆಯುವ ‘ಇಂಗ್ಲೆಂಡ್‌ ಪತ್ರ’

 

ಇಲ್ಲಿಯವರೆಗೆ ಟೇಕ್-ಅವೇಗಳಿಗೆ ಹೋಮ್‍ ಡೆಲಿವರಿಗೆ ಮಾತ್ರ ಸೀಮಿತವಾಗಿದ್ದ ಬ್ರಿಟಿಷ್, ಇಂಡಿಯನ್, ಚೈನಿಸ್, ಥೈ, ಜಪಾನೀಸ್ ರೆಸ್ಟೋರಂಟುಗಳು ಮತ್ತೆ ಬಾಗಿಲು ತೆರೆದು ನಗುನಗುತ್ತ ಉಪಚಾರ ಮಾಡುತ್ತಿವೆ. ಒಂದು ವರ್ಷದಿಂದ ಸಂಪೂರ್ಣವಾಗಿ ಮುಚ್ಚಿಕೊಂಡಿದ್ದ ಪಬ್ಬುಗಳು ಗೆಳೆಯ ಗೆಳತಿಯರನ್ನೆಲ್ಲ ಒಟ್ಟಿಗೆ ಸೇರಿಸಿ ಉಭಯ ಕುಶಲೋಪರಿ ಮಾಡಿಕೊಂಡು, ಕುಡಿಸಿ, ನಗಿಸಿ, ಮತ್ತೆ ಹರಟುವಂತೆ ಮಾಡುತ್ತಿವೆ. ‘ಮನೆಯಲ್ಲೇ ಟಿವಿಗಳ ಮುಂದೆ ಚಾನಲ್‌ಗಳಲ್ಲಿ ಓಟಿಟಿಗಳಲ್ಲಿ ಸೀರಿಯಲ್ಲು, ಸೀರೀಸ್‍ ಮತ್ತು ಸಿನೆಮಾಗಳನ್ನು ನೋಡಿದ್ದು ಸಾಕು, ಪಾಪ್‌ಕಾರ್ನ್ ಐಸ್‌ಕ್ರೀಮ್ ಖರೀದಿಸಿ ನಿಮ್ಮ ಕುಟುಂಬದೊಡನೆ ಅಥವಾ ಪ್ರೇಮಿಗಳೊಡನೆ ನಮ್ಮೆಡೆಗೆ ಬನ್ನಿ,’ ಎಂದು ಮಲ್ಟಿಪ್ಲೆಕ್ಸ್‌ ಗಳು ದಿನಪತ್ರಿಕೆಗಳಲ್ಲಿ ಜಾಹಿರಾತು ಹಾಕಿ ಕರೆಯುತ್ತಿವೆ.

ಸ್ಮಶಾನಮೌನದಲ್ಲಿ ಬಸವಳಿದಿದ್ದ ಅಂಗಡಿಗಳು, ಮಾಲ್‍ಗಳು, ಹೈಸ್ಟ್ರೀಟುಗಳು ಮತ್ತೆ ಜನರ ಕಿಲಿಕಿಲಿಯಿಂದ ನಲಿಯುತ್ತಿವೆ. ಕಳೆದ ಒಂದು ವರ್ಷದಿಂದ ಬರೀ ವಾಟ್ಸ್‌ಆಪ್‌ನಲ್ಲೋ ಝೂಮ್‌ನಲ್ಲೋ ಮುಖದರ್ಶನ ಮಾಡುತ್ತಿದ್ದ ಬಂಧು ಮಿತ್ರರೆಲ್ಲ ಮತ್ತೆ ಮನೆಗೆ ಬಂದು ಹರಟಿ, ಚಹಾ ಕಾಫಿ ಕುಡಿದು, ಊಟ ಮಾಡಿ ಹೋಗುತ್ತಿದ್ದಾರೆ. ಶಾಲೆಗಳು ಆರಂಭವಾಗಿ ಈಗಾಗಲೇ ಕೆಲವು ತಿಂಗಳಾಗಿದ್ದರೂ ವೀಕೆಂಡುಗಳಲ್ಲಿ ಮಕ್ಕಳು ಮತ್ತೆ ಸೇರುವಂತಿರಲಿಲ್ಲ, ಈಗ ಮತ್ತೆ ಮಕ್ಕಳು ತಮ್ಮ ಮಿತ್ರರ ಮನೆಗೆ ಆಡಲು ಹೋಗುತ್ತಿದ್ದಾರೆ. ಮತ್ತೆ ಕ್ರಿಕೆಟ್ ಫುಟ್‌ಬಾಲ್ ತರಬೇತಿಗಳು ಪಂದ್ಯಗಳು ಆರಂಭವಾಗಿವೆ. ಜನರು ಮೊಣಕೈಯಿಂದ ಮೊಣಕೈ ತಾಗಿಸುವುದನ್ನು ಬಿಟ್ಟು ಪರಸ್ಪರ ‘ಹಗ್ʼ ಮಾಡುತ್ತಿದ್ದಾರೆ. ಮೊಮ್ಮಕ್ಕಳನ್ನು ಮತ್ತೆ ಅಜ್ಜ ಅಜ್ಜಿಯರು ತಬ್ಬಿಕೊಂಡು ಮುದ್ದು ಮಾಡುತ್ತಿದ್ದಾರೆ. ಪಾರ್ಕುಗಳಲ್ಲಿ ಶಾಪಿಂಗ್ ಮಾಲುಗಳಲ್ಲಿ ಪ್ರೇಮಿಗಳು ಕೈ ಕೈ ಹಿಡಿದುಕೊಂಡು ನಡೆದಾಡುತ್ತಿದ್ದಾರೆ. ನಡೆಯುತ್ತಿರುವಾಗ ವಿನಾಕಾರಣ ಪ್ರೀತಿ ಮೂಡಿ ತುಟಿಗೆ ತುಟಿಗೆ ತಂದು ಪುಟ್ಟ ಹೂಮುತ್ತುಗಳನ್ನು ಕೊಡುತ್ತಿದ್ದಾರೆ.

ಹತ್ತಿರ ಹತ್ತಿರ ಒಂದು ಕಾಲು ವರ್ಷ ಒಂದಲ್ಲ ಒಂದು ರೀತಿಯಲ್ಲಿ ಲಾಕ್‌ಡೌನ್‌ನಲ್ಲಿ ಬಸವಳಿದಿದ್ದ ಬ್ರಿಟನ್ನಿನಲ್ಲಿ ಬದುಕು ನಿಧಾನಕ್ಕೆ ಮಾಮೂಲಿಗೆ ಮರಳುತ್ತಿದೆ. ಮಾಸ್ಕು ಧರಿಸದೇ ಓಡಾಡುವ ಕಾಲವೂ ಇನ್ನೇನು ದೂರವಿಲ್ಲ ಎನ್ನುವ ಆಶಾವಾದದಲ್ಲಿ ದೇಶ ಮತ್ತೆ ಬಿಜಿ ಆಗುತ್ತಿದೆ. ಮೂರನೇ ಅಲೆ ಬರದಿರಲಿ ಎಂದು ಎಲ್ಲರೂ ಆಶಿಸುತ್ತಿದ್ದಾರೆ. ತಜ್ಞರು ಕೊರೊನಾದ ಭಾರತೀಯ ತಳಿಯ ಮೇಲೆ ಒಂದು ಕಣ್ಣಿಟ್ಟು ಕೂತಿದ್ದಾರೆ.

ಇಲ್ಲಿ ಬ್ರಿಟನ್ನಿನಲ್ಲಿ ಪರಿಸ್ಥಿತಿ ಈ ಥರ ಸುಧಾರಿಸುತ್ತಿರಬೇಕಾದರೆ ಅಲ್ಲಿ ತವರೂರು ಭಾರತದಲ್ಲಿ ಎರಡನೇ ಅಲೆ ಇನ್ನೂ ವ್ಯಾಪಿಸುತ್ತಲೇ ಇದೆ. ಅದಕ್ಕೆ ಸ್ಪಂದಿಸಿ ಇಲ್ಲಿ ಬ್ರಿಟನ್ನಿನಲ್ಲಿರುವ ಕನ್ನಡಿಗರು ವಿವಿಧ ಸಂಘಗಳಿಂದ ಧನ ಸಂಗ್ರಹಿಸಿ ಕೊಟ್ಟ ವಿಷಯವನ್ನು ಕಳೆದ ಸಲ ಬರೆದಿದ್ದೆ. ಈಗ ಇನ್ನೊಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಬ್ರಿಟನ್ನಿನಲ್ಲಿರುವ ಸುಮಾರು ನಲವತ್ತು ಕನ್ನಡದ ವೈದ್ಯರು ಮೈಸೂರಿನ ನಗರಪಾಲಿಕೆಯೊಂದಿಗೆ ಕೈಗೂಡಿಸಿದ್ದಾರೆ. ಕೋವಿಡ್ ಕಾಯಿಲೆಗೆ ತುತ್ತಾದ ಮೈಸೂರಿನ ಜನತೆಗೆ ಟೆಲಿ ಕನ್ಸಲ್ಟೇಷನ್ ಅನ್ನು ಉಚಿತವಾಗಿ ಕೊಡುತ್ತಿದ್ದಾರೆ. ನಿವೃತ್ತರಾದ ವೈದ್ಯರು ಮತ್ತೆ ವೈದ್ಯರಾದ ಉತ್ಸಾಹದಲ್ಲಿ ಖುಷಿಯಿಂದ ಈ ಕೆಲಸವನ್ನು ದಿನವೂ ಮಾಡುತ್ತಿದ್ದಾರೆ. ನನ್ನಂಥ ಫುಲ್‌ಟೈಮ್ ವೈದ್ಯರು ವಾರಕ್ಕೆ ಎರಡರಿಂದ ನಾಲ್ಕು ಗಂಟೆಗಳ ಸಹಾಯ ಮಾಡುತ್ತಿದ್ದೇವೆ. ಧನ ಸಹಾಯ ಮಾಡುವುದಕ್ಕಿಂತ ಹೆಚ್ಚಿನ ಸಂತೃಪ್ತಿಯನ್ನು ಹೊಂದುತ್ತಿದ್ದೇವೆ. ಕೇಸುಗಳು ಸಾವುಗಳು ಕಡಿಮೆಯಾಗದಿದ್ದರೂ, ಕೆಲವು ವಾರಗಳ ಮೊದಲು ಇದ್ದ ಜೀವವಾಯು ಮತ್ತು ಬೆಡ್ ಬರಗಳ ವಿಷಯಗಳು ಕಡಿಮೆ ವರದಿಯಾಗುತ್ತಿರುವುದನ್ನು ನೋಡಿ ಸ್ವಲ್ಪ ಸಮಾಧಾನ ಪಡುತ್ತಿದ್ದೇವೆ.

ಆದರೆ ಈ ಮ್ಯುಕಾರ್ ಮೈಕೋಸಿಸ್ ಎನ್ನುವ ಕಪ್ಪುಶಿಲೀಂಧ್ರದ ಕಾಯಿಲೆಯನ್ನು ನೋಡಿ ದಿಗಿಲುಗೊಂಡಿದ್ದೇವೆ. ಏಕೆಂದರೆ ಈ ಕಾಯಿಲೆ ಇದುವರೆಗೂ ಬ್ರಿಟನ್ನಿನಲ್ಲಿ ಕೋವಿಡ್ ಜೊತೆಗೆ ವರದಿಯಾಗಿಲ್ಲ ಮತ್ತು ರೇಡಿಯಾಲಾಜಿ ವೈದ್ಯನಾಗಿ ನಾನು ಒಂದೇ ಒಂದು ರೋಗಿಯನ್ನೂ ಈ ಕೋವಿಡ್ ಕಾರಣದಿಂದಾಗಿ ನೋಡಿಲ್ಲ. ಸಕ್ಕರೆ ಕಾಯಿಲೆ ಇರುವ ಜನರಿಗೆ ಕೋವಿಡ್ ಬಂದಾಗ ಸ್ಟಿರಾಯ್ಡ್ ಬಳಕೆಯ ಬಗ್ಗೆ ಜಾಗರೂಕತೆ ಇಲ್ಲದಿರುವುದು ಕಾರಣವಾಗಿರಬಹುದು ಎಂದು ತಜ್ಞರ ಅಭಿಪ್ರಾಯ. ಕಳಪೆ ಗುಣಮಟ್ಟದ ಪ್ರಾಣವಾಯುವಿನ ಉಪಯೋಗ ಇದಕ್ಕೆ ಕಾರಣವಾಗಿರಬಹುದು ಎನ್ನುವುದು ಇನ್ನೊಂದು ಊಹೆ. ಭಾರತದಲ್ಲಿರುವ ನನ್ನ ಸಹಪಾಠಿಯೊಬ್ಬ ಕಳೆದ ಒಂದು ತಿಂಗಳಲ್ಲೇ ಈ ಕಪ್ಪುಶಿಲೀಂಧ್ರಕ್ಕೆ ತುತ್ತಾದ ಐವತ್ತು ಜನರಿಗೆ ಚಿಕಿತ್ಸೆ ಮಾಡಿದ್ದನ್ನು ಮೊನ್ನೆ ಹೇಳಿದ. ಅದೇ ಸ್ಪೆಷಾಲಿಟಿಯಲ್ಲಿ ಕೆಲಸ ಮಾಡುವ ಇಲ್ಲಿನ ನನ್ನ ಸಹೋದ್ಯೋಗಿ ತನ್ನ ಇಪ್ಪತ್ತೈದು ವರ್ಷದ ಜೀವಮಾನದಲ್ಲೇ ಈ ಕಪ್ಪುಶಿಲೀಂಧ್ರದ ಐವತ್ತು ಚಿಕಿತ್ಸೆಗಳನ್ನು ಮಾಡಿಲ್ಲ ಎಂದರೆ ಈ ಫಂಗಸ್ ಭಾರತದ ಕೋವಿಡ್ ಸೋಂಕಿತರನ್ನು ಯಾವ ರೀತಿ ಆಘಾತ ಮಾಡುತ್ತಿದೆ ಎನ್ನುವುದನ್ನು ಊಹಿಸಬಹುದು. ಭಾರತದ ತಜ್ಞರು ಅದಷ್ಟು ಬೇಗ ಇದರ ಕಾರಣವನ್ನು ಕಂಡುಹಿಡಿದು ಇದಕ್ಕೊಂದು ಮಾರ್ಗದರ್ಶಿಯನ್ನು ತರಬೇಕು.

ಭಾರತದಲ್ಲಿ ಆದಷ್ಟು ಬೇಗ ಎರಡನೇ ಅಲೆ ಕಡಿಮೆಯಾಗಲಿ. ಮೂರನೇ ಅಲೆ ಬರದಿರಲಿ. ಎಲ್ಲರಿಗೂ ಬೇಗ ಬೇಗ ಒಂದು ಲಸಿಕೆಯಾದರೂ ಸಿಗಲಿ. ಮೊದಲನೇ ಅಲೆಯು ಕಡಿಮೆಯಾದಾಗ ಮಾಡಿದ ತಪ್ಪನ್ನು ತಜ್ಞರು, ಅಧಿಕಾರಿಗಳು, ರಾಜಕಾರಣಿಗಳು ಎರಡನೇ ಅಲೆ ಕಡಿಮೆಯಾಗುವಾಗ ಮಾಡದಿರಲಿ. ಯಾವ ನೆಪವನ್ನೂ ಹೇಳದೇ ಎಲ್ಲರೂ ಮಾಸ್ಕ್ ಧರಿಸಲಿ, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲಿ, ಕೈಗಳನ್ನು ಶುಚಿಗೊಳಿಸುತ್ತಿರಲಿ, ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲಿ ಎಂದು ಬೇಡಿಕೊಳ್ಳುತ್ತೇನೆ.

ಬ್ರಿಟನ್ನಿನಲ್ಲಿರುವ ಸುಮಾರು ನಲವತ್ತು ಕನ್ನಡದ ವೈದ್ಯರು ಮೈಸೂರಿನ ನಗರಪಾಲಿಕೆಯೊಂದಿಗೆ ಕೈಗೂಡಿಸಿದ್ದಾರೆ. ಕೋವಿಡ್ ಕಾಯಿಲೆಗೆ ತುತ್ತಾದ ಮೈಸೂರಿನ ಜನತೆಗೆ ಟೆಲಿ ಕನ್ಸಲ್ಟೇಷನ್ ಅನ್ನು ಉಚಿತವಾಗಿ ಕೊಡುತ್ತಿದ್ದಾರೆ.

ಆನ್‍ಲೈನ್ ವಸಂತೋತ್ಸವ:

ಬ್ರಿಟನ್ನಿನಲ್ಲಿ ‘ಕನ್ನಡ ಬಳಗ, ಯು.ಕೆ’ (ಕೆ.ಬಿ.ಯು.ಕೆ), ಅತ್ಯಂತ ಹಳೆಯ ಕನ್ನಡ ಬಳಗ, ಮೂವತ್ತು ವರ್ಷಕ್ಕೂ ಹೆಚ್ಚಿನ ಇತಿಹಾಸವಿದೆ. ‘ಕನ್ನಡಿಗರು ಯು.ಕೆ’ (ಕೆ.ಯು.ಕೆ) ಎನ್ನುವುದು ಇನ್ನೊಂದು ದೊಡ್ಡ ಕನ್ನಡ ಬಳಗ, ಅದಕ್ಕೆ ಹತ್ತು ವರ್ಷಕ್ಕೂ ಹೆಚ್ಚಿನ ಇತಿಹಾಸವಿದೆ. ಮೊದಲನೇಯದು ಡಾಕ್ಟರುಗಳದ್ದು, ಎರಡನೇಯದ್ದು ಇಂಜಿನಿಯರುಗಳದ್ದು ಎಂದು ತಮಾಷೆ ಮಾಡುವುದಿದೆ. ಈ ಸಲ ಯುಗಾದಿಯ ಸಮಯಕ್ಕೆ ಮೊಟ್ಟ ಮೊದಲ ಬಾರಿ ಈ ಎರಡೂ ಕನ್ನಡ ಸಂಘಗಳು ಕೈ ಜೋಡಿಸಿ ಯುಗಾದಿಯನ್ನು ಒಟ್ಟಿಗೇ ಆನ್ ಲೈನ್ ನಲ್ಲಿ ಸರಳವಾಗಿ ಚಿಕ್ಕದಾಗಿ ಚೊಕ್ಕವಾಗಿ ಆಚರಿಸಿದವು. ಕೋವಿಡ್ ಲಾಕ್ ಡೌನ್ ಇಲ್ಲದಿದ್ದರೆ ಈ ಎರಡೂ ಸಂಘಗಳನ್ನು ಒಟ್ಟಿಗೇ ತರುವುದು ಸಾಧ್ಯವಾಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಲಾಕ್ ಡೌನ್ ನೆಪದಿಂದ ಕೈಜೋಡಿಸಿದ ಈ ಸಂಘಗಳು ಮುಂದೆಯೂ ಜೊತೆಜೊತೆಯಾಗಿ ಕಾರ್ಯಕ್ರಮಗಳನ್ನು ನಡೆಸಲಿ ಎನ್ನುವುದು ನನ್ನ ಆಶಯ.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬಂದಿದ್ದ ಮಾಸ್ಟರ್ ಹಿರಣ್ಣಯ್ಯನವರ ಮಗ ಬಾಬು ಹಿರಣ್ಣಯ್ಯನವರು `ಕಷ್ಟ ಕಾಲ ಬಂದಾಗ (ಉದಾ: ಕೊರೊನಾ) ನಮ್ಮ ಹಕ್ಕುಗಳ ಬಗ್ಗೆ ಕಿರುಚಾಡುವ ನಾವು ಪಾಲಿಸಬೇಕಾದ ಕರ್ತವ್ಯಗಳನ್ನು ಮಾತ್ರ ಗಾಳಿಗೆ ತೂರುತ್ತೇವೆ. ಹಕ್ಕು ಬೆಲ್ಲ, ಕರ್ತವ್ಯ ಬೇವು. ಹಕ್ಕಿಗೆ ಹೋರಾಡುತ್ತಲೇ ಕರ್ತವ್ಯವನ್ನು ಪಾಲಿಸಬೇಕು` ಎನ್ನುವ ಅರ್ಥದಲ್ಲಿ ಮಾತಾಡಿದ್ದು ಸಕಾಲಿಕವಾಗಿತ್ತು. ಇನ್ನೊಬ್ಬ ಮುಖ್ಯ ಅತಿಥಿಯಾಗಿ ಬಂದಿದ್ದ ಹಿರಿಯ ಪತ್ರಿಕೋದ್ಯಮಿ, ಸಂಪಾದಕ ಮತ್ತು ಅಂಕಣಕಾರರಾದ ವಿಶ್ವೇಶ್ವರಭಟ್ಟರು ಮಾಧ್ಯಮಗಳ ಜವಾಬ್ದಾರಿ ಮತ್ತು ಸಕಾರಾತ್ಮಕ ಸುದ್ದಿಗಳ ಪ್ರಾಮುಖ್ಯತೆಯ ಬಗ್ಗೆ ದೃಷ್ಟಾಂತಗಳೊಂದಿಗೆ ಮಾತಾಡಿದ್ದು ಮಾರ್ಮಿಕವಾಗಿತ್ತು. ಈ ಸಲ ಹಬ್ಬದ ಆಚರಣೆ ಆನ್‌ಲೈನ್ ನಲ್ಲೇ ಆದ ಕಾರಣ ಸಾಂಸ್ಕೃತಿಕ ಕಾರ್ಯಕ್ರಮಗಳು ಕಡಿಮೆ ಇದ್ದರೂ ಸುಂದರವಾಗಿದ್ದವು. ಇಡೀ ಕಾರ್ಯಕ್ರಮದ ಕೊಂಡಿ ಇಲ್ಲಿದೆ

ಎಲ್ಲ ತರಹದ ನಿರ್ಬಂಧಗಳೂ ಇಲ್ಲದಾಗಿ ಬ್ರಟನ್ನಿನ ಕನ್ನಡಿಗರೆಲ್ಲರೂ ಮತ್ತೆ ಕನ್ನಡ ರಾಜ್ಯೋತ್ಸವ ಅಥವಾ ದೀಪಾವಳಿಯ ಹೆಸರಿನಲ್ಲಿ ಈ ವರ್ಷದ ಅಕ್ಟೋಬರ್ ಅಥವಾ ನವೆಂಬರ್ ಹೊತ್ತಿಗೆ ಒಟ್ಟಿಗೆ ಸೇರುವಂತಾಗಬಹುದೇ? ಭಾರತಕ್ಕೆ ಮತ್ತೆ ವಿಮಾನ ಪ್ರಯಾಣ ಶುರುವಾಗಿ, ಕರ್ನಾಟಕದಿಂದ ಗಣ್ಯ ಸಾಹಿತಿಗಳು ಮತ್ತು ಕಲಾವಿದರು ಬಂದು ನಮ್ಮನ್ನು ರಂಜಿಸಲು ಸಾಧ್ಯವಾಗಬಹುದೇ? ರಂಗುರಂಗಿನ ಬಟ್ಟೆ ಹಾಕಿಕೊಂಡು ಸಭಾಂಗಣದ ತುಂಬೆಲ್ಲ ಓಡಾಡುತ್ತ ಗಲಾಟೆ ಮಾಡುವ ಪುಟ್ಟ ಪುಟಾಣಿಗಳು ತಮ್ಮ ಸಮಯ ಬಂದಾಗ ಅಮ್ಮನ ಕೂಗಿಗೆ ರಂಗಸ್ಥಳವನ್ನೇರಿ ಇಂಗ್ಲೀಷ್ ಎಕ್ಸೆಂಟಿನಲ್ಲಿ ಕನ್ನಡದಲ್ಲಿ ಮಾತಾಡಿ ಹಾಡಿ ಆ ಐದು ನಿಮಿಷ ಕಿತ್ತೂರ ಚೆನ್ನಮ್ಮನೋ ಎಚ್ಚಮನಾಯಕನೋ ಆದಾಗ ಅವರ ಅಮ್ಮಂದಿರ ಕಣ್ಣುಗಳಲ್ಲಿ ಕಾಣುವ ಮಿಂಚು; ಮೈಸೂರ್ ಸಿಲ್ಕ್, ಕಾಂಜೀವರಂ ಸೀರೆ ಹಾಕಿಕೊಂಡು ಮದುವಣಗಿತ್ತಿಯರಂತೆ ಸಿಂಗರಿಸಿಕೊಂಡು ಇತ್ತಿಂದತ್ತ ಅತ್ತಿಂದಿತ್ತ ಓಡಾಡುವ ಹೆಂಗಸರು ಎಲ್ಲಂದರಲ್ಲಿ ನಿಂತು ತೆಗೆದುಕೊಳ್ಳುವ ಸೆಲ್ಫಿಗಳು; ತಮಗೂ ರಂಗಸ್ಥಳಕ್ಕೂ ಯಾವ ಸಂಬಂಧವಿಲ್ಲವೆನ್ನುವಂತೆ ಸಭಾಂಗಣದ ಮೂಲೆಯೊಂದರಲ್ಲಿ ನಿಂತು ಭಾರತದ, ಬ್ರಿಟನ್ನಿನ ಮತ್ತು ಪ್ರಪಂಚದ ರಾಜಕೀಯವನ್ನು ಸರಿಪಡಿಸುತ್ತ ನಿಂತ ಗಂಡಸರು. ಇವುಗಳೆಲ್ಲ ಗತಗಾಲದ ನೆನಪುಗಳಂತೆ ಕಾಣುತ್ತಿದೆ, ಮತ್ತೆ ಇವೆಲ್ಲ ಈ ವರ್ಷವೂ ಸಾಧ್ಯವಿಲ್ಲವೇನೋ ಎಂದು ದಿಗಿಲಾಗುತ್ತದೆ.

ಸಮಸ್ಯೆಗಳನ್ನು ಬಿಡಿಸುವುದು ಹೇಗೆ?:

ದಿಲ್ಬರ್ಟ್ ಎನ್ನುವ ಕಾರ್ಟೂನ್ ಬಹಳಷ್ಟು ದಿನಪತ್ರಿಕೆಗಳಲ್ಲಿ ಬರುತ್ತದೆ. ಕಾರ್ಪೋರೇಟ್ ಜಗತ್ತನ್ನು ಸೂಕ್ಷ್ಮವಾಗಿ ಮೂರು ಚಿತ್ರಗಳಲ್ಲಿ ಸಣ್ಣಗೇ ಲೇವಡಿ ಮಾಡುತ್ತವೆ. ಕೆಲವೊಮ್ಮೆ ಬದುಕಿನ ಫಿಲಾಸಾಫಿಯಂತೆಯೂ ಕಾಣುತ್ತವೆ.

ಒಂದು ಉದಾಹರಣೆ:

‘ನೀನು ನಿನಗೆ ಒದಗುವ ಸಮಸ್ಯೆಯನ್ನು ಹೇಗೆ ಬಗೆಹರಿಸುತ್ತೀಯಾ?‘ ಎಂದು ಬಾಸ್ ಕೇಳುತ್ತಾನೆ.

ಅಭ್ಯರ್ಥಿ/ನೌಕರ ಹೇಳುತ್ತಾನೆ, ‘ಒಂದು ವಾರ ಆ ಸಮಸ್ಯೆಯ ಬಗ್ಗೆ ಯೋಚಿಸುವುದಿಲ್ಲ ಮತ್ತು ತಲೆಕೆಡಿಸಿಕೊಳ್ಳುವುದಿಲ್ಲ. ಒಂದು ವಾರದಲ್ಲಿ ಆ ಸಮಸ್ಯೆ ಮುಖ್ಯವಾಗಿರಲಿಲ್ಲ ಎಂದು ಕಂಡುಕೊಳ್ಳುತ್ತೇನೆ, ಹಾಗಾಗಿ ಆ ಸಮಸ್ಯೆಯನ್ನು ಒಂದು ವಾರದ ನಂತರ ಕಸದ ಬುಟ್ಟಿಗೆ ಎಸೆಯುತ್ತೇನೆ.ʼ

ಒಂದು ವಾರದ ನಂತರವೂ ಆ ಸಮಸ್ಯೆ ಮುಖ್ಯವೆನಿದರೆ ಏನು ಮಾಡಬೇಕು ಎನ್ನುವುದನ್ನು ಮಾತ್ರ ದಿಲ್ಬರ್ಟ್ ಹೇಳುವುದಿಲ್ಲ.