ನನಗೀಗ ಏನು ಮಾಡಬೇಕೆಂಬುದು ತಿಳಿಯದೆ ಪೂರಾ ಗಾಬರಿಗೊಳಗಾದೆ. ಅಂಥ ಗಾಬರಿಯಲ್ಲೂ ಚಿಕ್ಕವ್ವನ ಜಾರುತ್ತಿದ್ದ ಬಾಲವನ್ನೇ ಆಸರೆಯಾಗಿಸಿಕೊಂಡು ಅವಳ ಬೆನ್ನ ಮೇಲೆ ಕೂತು ಬಚಾವಾಗುವ ಆಸೆಯಿಂದ ಹಿಡಿದಿದ್ದ ಬಾಲವನ್ನೂ ಕೈ ಬಿಟ್ಟು ಮೆಲ್ಲಗೆ ಅವಳ ಮೈಯ್ಯ ಹತ್ತಿರ ಸಾಗಿದೆ. ಅದು ನಾನು ಮಾಡಿಕೊಂಡ ದೊಡ್ಡ ಯಡವಟ್ಟಾಗಿತ್ತು. ಮೊದಲೇ ನೊಣ ಕೂತರೆ ಜಾರುವಷ್ಟು ನುಣುಪಾಗಿದ್ದ ಅವಳ ಮೈ ನೀರಿನೊಳಗಿದ್ದುದರಿಂದ ಅದಕ್ಕೆ ಮತ್ತಷ್ಟು ನುಣುಪು ಬಂದು ಮತ್ತಷ್ಟು ಜಾರುತ್ತಾ ನಾನು ಎಷ್ಟೇ ಪಟ್ಟು ಹಾಕಿದರೂ ಆ ಪಟ್ಟುಗಳೆಲ್ಲಾ ಮಕಾಡೆ ಮಲಗಿದವು.
ಎಸ್. ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”ಯ ಐದನೆಯ ಕಂತು
ಊರಿನಿಂದ ತೆಂಕಣಕ್ಕೆ ಫರ್ಲಾಂಗಿನಷ್ಟು ದೂರದಲ್ಲಿ ಕಲ್ಲು ಹೊಲ ಅಂತ ಕರೆಯುವ ಹೊಲವಿದೆ. ನಾನು ನೋಡುವ ಕಾಲಕ್ಕೆ ಆ ಹೊಲದಲ್ಲಿ ಹಾಗೆ ಕರೆಯಬಹುದಾದಂತಹ ಕಲ್ಲುಗಳಿರಲಿಲ್ಲ. ಹಿಂದೆ ನಮ್ಮ ತಾತನೋ,ಇ ಲ್ಲಾ ಮುತ್ತಾತನೋ ಅದನ್ನು ಸಾಗುಮಾಡುವಾಗ ಅದರಲ್ಲಿ ಅಲ್ಲಲ್ಲಿ ಕಲ್ಲು ದುಂಡಿಗಳಿದ್ದವಂತೆ. ಹಾಗಾಗಿ ಈ ಹೊಲಕ್ಕೆ ಆ ಹೆಸರು ಬಂದಿರಬಹುದು. ಇದರ ಒಂದು ಭಾಗದಲ್ಲಿ ತಗ್ಗಿನ ಭಾಗವೊಂದಿತ್ತು. ಮಳೆಗಾಲದಲ್ಲಿ ಈ ತಗ್ಗಿನಲ್ಲಿ ಮಂಡಿಯುದ್ದದ ನೀರು ನಿಲ್ಲುತ್ತಿತ್ತು. ಅಷ್ಟಗಲವನ್ನು ಬಿಟ್ಟು ಮಿಕ್ಕಿದ್ದಕ್ಕೆ ರಾಗಿ ಬಿತ್ತನೆ ಮಾಡುತ್ತಿದ್ದರು. ಅದರಲ್ಲಿ ನೀರು ಇಂಗಿ ಇನ್ನೂ ತೇವ ಇರುವಾಗಲೇ ಬರಬತ್ತವನ್ನು ಚೆಲ್ಲುತ್ತಿದ್ದರು. ಈ ತಗ್ಗಿನ ತಡಿಗೆ ದೊಡ್ಡದೊಂದು ಬದು ಇತ್ತು. ಅದು ಎಷ್ಟು ದೊಡ್ಡದಾಗಿತ್ತೆಂದರೆ ನಾವು ಹುಡುಗರು ದನಗಳನ್ನೋ, ಎಮ್ಮೆಗಳನ್ನೋ ಮೇಯಿಸಲೆಂದು ಅತ್ತ ಹೋದಾಗ ಎರಡೆರಡು ಹಗ್ಗಗಳನ್ನು ತಲುಪು ಹಾಕಿ ಯಾವುದಾದರೊಂದು ಗಿಡದ ಬುಡಕ್ಕೆ ಕಟ್ಟಿದರೂ ಹೊಲದೊಳಗಿನ ಫಸಲನ್ನು ಅವುಗಳು ನಿಟುಕಿಸಿಕೊಳ್ಳಲಾಗುತ್ತಿರಲಿಲ್ಲ.
ಇಂಥ ಈ ಬದುವಿನಲ್ಲಿ ದನಕರುಗಳಿಗೆ ಬೇಕಾಗುವ ಮೇವಿನೊಂದಿಗೆ ಹೊಂಗೆ, ಬೇವು, ಬ್ಯಾಟೆ, ಕಾರೆ, ಎಕ್ಕ, ತಂಗಡೆ ಮುಂತಾದ ಹತ್ತು ಹಲವು ಗಿಡ ಮರಗಳಿದ್ದವು. ಇವುಗಳ ನಡುವೆ ಯಾವುದೋ ಕಾಲದಲ್ಲಿ ದಪ್ಪ ಕಲ್ಲಿನಲ್ಲಿ ಅರ್ಧಂಬರ್ದ ಕೆತ್ತಿ ಮುಕ್ಕಾಗಿ ಹಂಗೇ ಬಿಟ್ಟಿದ್ದ ಒರಟೊರಟಾದ ಹನುಮಂತನ ವಿಗ್ರಹವೊಂದಿತ್ತು. ಅದು ಅಂಗಾತ ಬಿದ್ದಿತ್ತು. ಮಕ್ಕಳೆಲ್ಲಾ ಹತ್ತಿ ಓಡಾಡುವಷ್ಟು ಉದ್ದಕ್ಕೂ ಇತ್ತು. ರಜೆ ದಿನಗಳಲ್ಲಿ ನಾವು ಹುಡುಗರೆಲ್ಲಾ ಸೇರಿ ಈ ಹನುಮಂತನಿಗೆ ರೋಜಾಲ, ತಂಗಡೆ, ಬ್ಯಾಟೆ ಮುಂತಾದ ಹೂಗಳಿಂದ ಪೂಜೆ ಮಾಡುವ ಆಟ ಆಡುತ್ತಿದ್ದೆವು. ಇಂಥ ಈ ಹನುಮಂತನನ್ನು ಬಿಸಿಲಿನ ಝಳದಿಂದ ಕಾಪಾಡಲಿಕ್ಕೆ ಎಂಬಂತೆ ವಿಗ್ರಹದ ತಲೆಯ ಭಾಗದಲ್ಲಿ ಆಳೆತ್ತರಕ್ಕೆ ಬೆಳೆದಿದ್ದ, ಮೇಲೆ ಛತ್ರಿಯಂತೆ ಹರವಿಕೊಂಡಿದ್ದ ಬ್ಯಾಟೆಯ ಗಿಡವೊಂದಿತ್ತು. ಇದು ಸತೊಂಭತ್ತು ಕಾಲವೂ ಹಸಿರು ಹೊತ್ತು ನಿಂತಿರುತ್ತಿತ್ತು. ಬೇಸಿಗೆ ಬಂತೆಂದರೆ ಆ ಹಸಿರು ಮರೆಯಾಗುವಂತೆ ಮೈತುಂಬಾ ಹಳದಿಯ ಹೂಗಳ ತೇರು ತೇಪಾಡುತ್ತಿತ್ತು. ಸಾಲದ್ದಕ್ಕೆ ಈ ಗಿಡ ಜೀರಿಂಬೆಗಳ ಪರಮಾಪ್ತ ಸಖನಾಗಿತ್ತು. ಅದರಲ್ಲೂ ಕೆಮ್ಮಣ್ಣು ಜೀರಿಂಬೆಗಳ ನೆಚ್ಚಿನ ಸೂರಾಗಿತ್ತು. ಪುಟಾಣಿ ಹಸಿರು ಜೀರಿಂಬೆಗಳಿಗಿಂತ ನನಗೆ ಕೆಮ್ಮಣ್ಣು ಜೀರಿಂಬೆಗಳೆಂದರೆ ಪರಮ ಇಷ್ಟದವುಗಳಾಗಿದ್ದವು. ಇಂಥ ಈ ಪರಮ ಇಷ್ಟದ ಜೀರಿಂಬೆಗಳು ನನಗೆ ಈ ಬ್ಯಾಟೆ ಗಿಡದಲ್ಲಿ ಸಿಕ್ಕುತ್ತಿದ್ದವು. ಹಂಗಾಗಿ ನನಗೆ ಈ ಬ್ಯಾಟೆ ಗಿಡ ಇಷ್ಟದ ಗಿಡವಾಗಿತ್ತು. ಕೊಟ್ಟಿಗೆಯಲ್ಲಿ ದನ ಕರುಗಳು ಮೆತ್ತಗೆ ಮಲಗಲೆಂದು ಹಾಕುತ್ತಿದ್ದ ಮಗ್ಗಲು ಸೊಪ್ಪಿಗಾಗಿ ನನ್ನಂಥ ಹುಡುಗರು ಬ್ಯಾಟೆ ಗಿಡದ ಹಸಿರ ಎಲೆಗಳ ಪುಟ್ಟ ಕೊಂಬೆಗಳು, ತಂಗಡೆ ಗಿಡ ಹಾಗೂ ಚಿಗುರಿದ ಬಂದ್ರೆ ಗಿಡದ ಚಿಗುರು ರೆಕ್ಕೆಗಳು ಎಲ್ಲಿ ಸಿಕ್ಕಿದರೂ ಚಕ್ಕಂಥ ಕತ್ತರಿಸಿ ಹೊರೆ ಕಟ್ಟಿಕೊಳ್ಳುತ್ತಿದ್ದೆವು. ಆದರೂ ನಾನು ಈ ತಗ್ಗಿನಲ್ಲಿ ಬೆಳೆದ ಇತರೆ ಗಿಡಗಳಿಗೆ ಮುಲಾಜಿಲ್ಲದೆ ಕುಡ್ಲು ಹಾಕಿದರೂ ಈ ಗಿಡಕ್ಕೆ ಮಾತ್ರ ತಂಟೆಗೆ ಹೋಗುತ್ತಿರಲಿಲ್ಲ. ಈ ಕಾರಣಕ್ಕೆ ವರ್ಷೊಂಭತ್ತು ಕಾಲವೂ ಈ ಗಿಡದ ಎಲೆಗಳು ಮುಕ್ಕಾಗದಂತೆ ಇರುತ್ತಿದ್ದವು.
ಜೀರಿಂಬೆಗಳ ಕಾಲ ಬಂತೆಂದರೆ ಹಳ್ಳಿಯ ಹುಡುಗರ ಜೇಬುಗಳಲ್ಲಿ ಈ ಜೀರಿಂಬೆಗಳು ಬಂಧಿಯಾಗಿ ವಿಲಗುಡುತ್ತಿದ್ದವು. ನಮ್ಮಿಂದ ಖಾಲಿ ಬೆಂಕಿ ಪೊಟ್ಟಣಗಳೊಳಕ್ಕೆ ಸೇರಲ್ಪಡುತ್ತಿದ್ದ ಅವುಗಳ ಸಾವು ಬದುಕು ನಮ್ಮಗಳ ಕೈಯ್ಯಲ್ಲಿ ಇರುತ್ತಿತ್ತು. ನಾವು ಕೊಡುವ ಹಿಂಸೆಯನ್ನು ಸಹಿಸಿಕೊಳ್ಳಬೇಕಾಗಿತ್ತು. ಜೀರಿಂಬೆಯ ಕೊರಳಿಗೆ ಸರುಗುಣಿಕೆ ಹಾಕಿ ಮಾರುದ್ದದ ದಾರವೊಂದನ್ನು ಕಟ್ಟುತ್ತಿದ್ದೆವು. ಆ ಸರುಗುಣಿಕೆಯ ಲೆಕ್ಕ ತಪ್ಪಿದರೆ ಅದು ಜೀರಿಂಬೆಯ ಪಾಲಿಗೆ ಉರುಳಾಗಿ ಅಸುನೀಗುತ್ತಿತ್ತು. ನಮಗೆ ಇಷ್ಟ ಬಂದಾಗಲೆಲ್ಲಾ ಜೀರಿಂಬೆಗಳನ್ನು ಬೆಂಕಿ ಪೆಟ್ಟಿಗೆಯಿಂದ ಆಚೆ ತೆಗೆದು ಹಾರಾಡಿಸುತ್ತಿದ್ದೆವು. ಹಾರದಿದ್ದರೆ ಅವುಗಳ ಕಡ್ಡಿಯಂಥ ಕಾಲುಗಳನ್ನು ಚಿವುಟಿ ಹಾರುವಂತೆ ಕಾಟ ಕೊಡುತ್ತಿದ್ದೆವು. ನಾವು ಎಷ್ಟು ಚಿವುಟಿದರೂ ಹಾರಲಾರದ ಕೆಲ ಜೀರಿಂಬೆಗಳಿಗೆ ಬಿಡುಗಡೆಯ ಭಾಗ್ಯ ಸಿಗುತ್ತಿತ್ತು. ಆದರೆ ಹೀಗೆ ಬಂಧಿಯಾದ ಬಹುತೇಕ ಜೀರಿಂಬೆಗಳು ನಮ್ಮ ಬೆಂಕಿ ಪೆಟ್ಟಿಗೆಗಳೊಳಗೇ ಪರಂಧಾಮಗೈಯ್ಯುತ್ತಿದ್ದವು. ಹಸಿರು ರೆಕ್ಕೆಗಳ ಪುಟ್ಟ ಪುಟ್ಟ ಜೀರಿಂಬೆಗಳು ಸಾಮಾನ್ಯವಾಗಿ ಜಾಲಿ ಮರಗಳಲ್ಲಿ ಸಿಗುತ್ತಿದ್ದವು. ಆದರೆ ಕೆಮ್ಮಣ್ಣು ಬಣ್ಣದ ದಪ್ಪ ಜೀರಿಂಬೆಗಳು ಮಾತ್ರ ಸಿಗುತ್ತಿದ್ದುದು ಅಪರೂಪವೇ. ಸಿಕ್ಕರಂತೂ ನಮ್ಮ ಆನಂದಕ್ಕೆ ಪಾರವೇ ಇರುತ್ತಿರಲಿಲ್ಲ. ಹಂಗಾಗಿ ಅವುಗಳ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದೆವು. ಅವುಗಳೊಂದಿಗೆ ಅಷ್ಟು ಒರಟಾಟ ಆಡುತ್ತಿರಲಿಲ್ಲ.
ಒಮ್ಮೆ ನನಗೆ ತುಂಬಾ ಚಂದದ ಕೆಮ್ಮಣ್ಣು ಜೀರಿಂಬೆ ಸಿಕ್ಕಿತ್ತು. ಅದನ್ನು ತುಂಬಾ ಜೋಪಾನವಾಗಿ ಸುಮಾರು ಒಂದು ವಾರದವರೆಗೆ ಅದನ್ನು ಕಾಪಾಡಿಕೊಂಡಿದ್ದೆ. ಸೂರ್ಯ ಮಾರ್ಕಿನ ಬೆಂಕಿ ಪೆಟ್ಟಿಗೆಯಲ್ಲಿ ಅದನ್ನು ಕೂಡಾಕಿ ಅದರೊಳಗೆ ಅದಕ್ಕೆ ಆಹಾರವಾಗಿ ಜಾಲಿ ಮರದ ಚಿಗುರು ಎಲೆಗಳನ್ನು ಆಗಾಗ ಹಾಕುತ್ತಿದ್ದೆ. ಅದರ ಕೊರಳಿಗೆ ಗಟ್ಟಿಯಾದ ಬಟ್ಟೆ ಹೊಲಿಯುವ ದಾರವನ್ನು ಕಟ್ಟಿದ್ದೆ. ಸ್ಕೂಲಿಗೆ ಹೋಗುವುದಕ್ಕೆ ಮುಂಚೆ ಸ್ಕೂಲಿನಿಂದ ಬಂದ ಮೇಲೆ ಹಾರಾಡಿಸುತ್ತಿದ್ದೆ. ಅದು ತನ್ನ ಕೆಮ್ಮಣ್ಣು ಬಣ್ಣದ ರೆಕ್ಕೆಗಳನ್ನು ಬಿಚ್ಚಿ ನನ್ನಿಂದ ಒಂದು ಮಾರು ಸುತ್ತಳತೆಯಲ್ಲಿ ಸದ್ದು ಮಾಡುತ್ತಾ ಹಾರಾಡುತ್ತಿತ್ತು. ಹಂಗೆ ಹಾರಾಡಿ ಸುಸ್ತಾದ ಮೇಲೆ ನನ್ನ ಕೈ ಮೇಲೋ ಇಲ್ಲಾ ಭುಜದ ಮೇಲೆ ಬಂದು ವಿರಮಿಸುತ್ತಿತ್ತು. ಆಗ ನಾನದನ್ನು ಮತ್ತೆ ಬೆಂಕಿ ಪೆಟ್ಟಿಗೆಯೊಳಕ್ಕೆ ಕೂಡಾಕಿ ನಡುಮನೆಯ ಬುಡ್ಡಿ ದೀಪದ ಗೂಡಿನಲ್ಲಿ ಜೋಪಾನ ಮಾಡುತ್ತಿದ್ದೆ.

ಅವತ್ತು. ಈ ಕೆಮ್ಮಣ್ಣು ಜೀರಿಂಬೆಯನ್ನು ಅಲ್ಲಿಡಲು ಮನಸ್ಸಾಗದೆ ಚೆಡ್ಡಿ ಜೇಬಿನಲ್ಲಿಟ್ಟುಕೊಂಡು ಸ್ಕೂಲಿಗೆ ಹೋಗಿದ್ದೆ. ಪ್ರೇಯರ್ ಮುಗಿದ ಮೇಲೆ ಅದನ್ನು ಚೆಡ್ಡಿ ಜೇಬಿನಿಂದ ಅಂಗಿ ಜೇಬಿಗೆ ವರ್ಗಾಯಿಸಿಕೊಂಡು ಕ್ಲಾಸಿನಲ್ಲಿ ಕೂತ್ತಿದ್ದೆ. ಅದು ಹಿಂದಿ ಮೇಷ್ಟ್ರ ಕ್ಲಾಸು. ಇನ್ನೇನು ಮೊದಲ ಪೀರಿಯಡ್ ಮುಗಿಯಬೇಕು ಅನ್ನುವಷ್ಟರಲ್ಲಿ ನನ್ನ ಅಂಗಿನ ಜೇಬಿನಲ್ಲಿ ಬೆಂಕಿ ಪೆಟ್ಟಿಗೆಯೊಳಗಿದ್ದ ಕೆಮಣ್ಣು ಜೀರಿಂಬೆ ಅದು ಹೆಂಗೋ ಅದರಿಂದ ಆಚೆ ಬಂದು ಪರ‍್ರಂತ ಹಾರುತ್ತಾ ಕುತ್ತಿಗೆಯಲ್ಲಿದ್ದ ಮಾರುದ್ದದ ದಾರವನ್ನು ಗಾಳಿಯಲ್ಲಿ ತೇಲಿಸಿಕೊಂಡು ಮೇಷ್ಟ್ರ ಭುಜದ ಮೇಲೆ ಕೂತುಬಿಟ್ಟಿತ್ತು. ಅದನ್ನು ಕಂಡಿದ್ದೇ ಇಡೀ ಕ್ಲಾಸು ಗೊಳ್ಳೆಂದು ನಕ್ಕು ಬಿಟ್ಟಿತ್ತು. ಇದರಿಂದ ಕೊಂಚ ಗಲಿಬಿಲಿಗೊಂಡ ಆ ಮೇಷ್ಟ್ರು ಜೀರಿಂಬೆಯ ದಾರವನ್ನು ಹಿಡಿದು ‘ಯಾವನೋ ಇದನ್ನ ಕ್ಲಾಸಿಗೆ ತಂದಿದ್ದೋನು’ ಅನ್ನುತ್ತಾ ಆ ಜೀರಿಂಬೆಯನ್ನು ಭುಜದ ಮೇಲಿಂದ ತೆಗೆದು ಅದರ ನೇತಾಡುತ್ತಿದ್ದ ದರವನ್ನು ಕಿಟಕಿಯ ಕಂಬಿಗೆ ಕಟ್ಟಿದರು. ನಂತರ ಟೇಬಲ್ಲಿನ ಮೇಲಿದ್ದ ಬಿದಿರು ಕೋಲನ್ನಿಡಿದು ಇಡೀ ಕ್ಲಾಸನ್ನು ಒಂದು ಸುತ್ತು ಹಾಕಿದರು. `ಮರ್ಯಾದೆಯಿಂದ ಒಪ್ಪಿಕೊಂಡು ಎದ್ದು ನಿಂತ್ಕಳ್ರಿ. ಇಲ್ಲಾಂದ್ರೆ…’ ಅಂದರು ಮುಖ ಗಂಟಿಕ್ಕಿಕೊಂಡು.
ನಾನೂ ಸೇರಿದಂತೆ ಯಾರೊಬ್ಬರೂ ಎದ್ದು ನಿಲ್ಲಲೂ ಇಲ್ಲ. ಒಪ್ಪಿಕೊಳ್ಳಲೂ ಇಲ್ಲ. ಇದರಿಂದ ಮೇಷ್ಟ್ರ ಪಿತ್ಥ ನೆತ್ತಿಗೇರಿತು. ಹುಡುಗರನ್ನೆಲ್ಲಾ ನಿಲ್ಲಿಸಿ ಬ್ಯಾಗು ಮತ್ತು ಜೇಬುಗಳನ್ನು ತಲಾಶ್ ಮಾಡತೊಡಗಿದರು. ನಾನು ಮೂರನೆಯ ಬೆಂಚಿನಲ್ಲಿ ಕೂತಿದ್ದೆ. ನನಗೆ ಎದೆ ಹೊಡೆದುಕೊಳ್ಳತೊಡಗಿತು. ಗೊತ್ತಾದರೆ ಒಂದು ಒದೆ ಬೀಳುತ್ತವೆ. ಎರಡನೆಯದು ಕ್ಲಾಸಿನಲ್ಲಿ ಎಲ್ಲರ ಮುಂದೆ ನಗೆಪಾಟಲಿಗೆ ಈಡಾಗುತ್ತೇನೆ ಅನ್ನುವ ಆತಂಕ ನನ್ನನ್ನು ಹಿಂಡಿತು. ಇದು ಇನ್ನೂ ಹೆಚ್ಚುವಂತೆ ಮೊದಲ ಬೆಂಚಿನಲ್ಲಿ ಕೂತಿದ್ದ ಶಂಕರ ಮತ್ತು ಎರಡನೆಯ ಬೆಂಚಿನಲ್ಲಿ ಕೂತಿದ್ದ ಆಡಿಟ್ಟರ ಜೇಬಿನಲ್ಲಿ ಸಿಕ್ಕ ಬೆಂಕಿ ಪೆಟ್ಟಿಗೆಯೊಳಗೆ ಜೀರಿಂಬೆಗಳು ಸಿಕ್ಕಿ ಬಿಟ್ಟವು. ಆದರೆ ಅವುಗಳೊಳಗೆ ಜೀರಿಂಬೆಗಳು ಇನ್ನೂ ಹಂಗೇ ಇದ್ದವು. ಅವರಿಬ್ಬರ ಬೆಂಕಿಪೆಟ್ಟಿಗೆಗಳನ್ನು ಕಿತ್ತುಕೊಂಡು ಟೇಬಲ್ಲಿನ ಮೇಲೆ ಕುಕ್ಕಿದರು. ಹಂಗೇ ಬಗ್ಗಿಸಿ ಬೆನ್ನ ಮೇಲೆ ಎರಡೆರಡು ಗುದ್ದನ್ನೂ ಕೊಟ್ಟರು. ಅದಾದ ಮೇಲೆ ಇಡೀ ಕ್ಲಾಸನ್ನು ಒಮ್ಮೆ ಕೆಕ್ಕರಿಸಿಕೊಂಡು ನೋಡುತ್ತಾ `ಇನ್ನೂ ಯಾವ್ಯಾವನು ತಂದಿದೀರೋ ನಿಂತ್ಕಳಿ’ ಅಂತ ಗುಡುಗಿದರು. ಇನ್ನು ಉಳಿಗಾಲವಿಲ್ಲ ಎಂದುದನ್ನು ಅರಿತ ಮೂರನೆಯ ಬೆಂಚಿನಲ್ಲಿ ಕೂತಿದ್ದ ನಾನು ಮೆಲ್ಲನೆ ಎದ್ದು ನಿಂತೆ. ` ಓಹೋ ಮಾಡಾದೆಲ್ಲಾ ಮಾಡಿಬಿಟ್ಟು ದಿಮ್ಮನೆ ರಂಗನಂಗೆ ಕೂತಿದೀಯ. ಬಾರಪ್ಪಾ ಬಾ ಮಗ ಇಲ್ಲಿಗೆ’ ಅಂತ ಕರೆದರು. ಅಷ್ಟು ಹೊತ್ತಿಗೆ ಮೇಷ್ಟ್ರು ಗಂಟು ಹಾಕಿಕೊಂಡಿದ್ದ ಮುಖಕ್ಕೆ ಒಂಚೂರು ಪ್ರಸನ್ನ ಭಾವದ ಕರುಣೆಯಾಗಿತ್ತು. ಹಂಗಾಗಿ ಆ ಮೇಷ್ಟ್ರು ನಂಗೆ ಬೆನ್ನಿನ ಮೇಲೆ ಗುದ್ದುವ ಬದಲು` ತಗಾ ಇನ್ನ ಯಾವತ್ತಾರ ಹಿಂಗೆ ಜೀರಿಂಬೇನಾ ಕ್ಲಾಸಿಗೆ ತಂದೆ ಅಂದ್ರೆ, ಆವಾಗ ನೋಡು ಹೆಂಗಿರುತ್ತೆ’ ಅಂತ ಅನ್ನುತ್ತಾ `ಈಗ ಅದನ್ನ ಹಿಡ್ಕಂಡು ಬೆಂಕಿ ಪೆಟ್ಟಿಗೆಯೊಳೀಕೆ ಸೇರುಸ್ಕೋ’ ಅಂದರು. ಆ ಮೇಷ್ಟ್ರು ಹೆಸರು ಲಕ್ಷ್ಮಣಯ್ಯ ಅಂತ.
ಈ ಜೀರಿಂಬೆಗೂ ನನಗೂ ಯಾಕೋ ಆಗಿ ಬರಲ್ಲ ಅನಿಸಿತು. ಇದನ್ನು ಹಿಡಿದು ತರುವಾಗಲೇ ನಾನು ಅಂಥದ್ದೊಂದು ಘಾಸಿಗೆ ಒಳಗಾಗಿದ್ದೆ.
ಅಲ್ಲಿಗೆ ಮೇಸಲೆಂದು ಎಮ್ಮೆಯನ್ನು ಹೊಡೆದುಕೊಂಡು ಬಾಳನಕಟ್ಟೆ ಹೊಲ ಅಂತ ಕರೆಯುತ್ತಿದ್ದ ಹೊಲದ ಹತ್ತಿರ ಹೋಗಿದ್ದೆ. ಅದು ನನ್ನ ಪ್ರೀತಿಯ ಎಮ್ಮೆ. ನಾನದಕ್ಕೆ ಚಿಕ್ಕವ್ವ ಅಂತ ಹೆಸರಿಟ್ಟಿದ್ದೆ. ಆ ಹೆಸರು ಯಾಕೆ ಇಟ್ಟಿದ್ದೆ ಅಂತ ನನಗೆ ನೆನಪಿಲ್ಲ. ಸಣ್ಣ ಕಮಾನುಗಳಂಥ ಕೊಂಬುಗಳು ಅದಕ್ಕಿದ್ದವು. ದಷ್ಟಪುಷ್ಟವಾಗಿದ್ದ ಅದರ ಮೈ ಸದಾ ನುಣುಪಾಗಿರುತ್ತಿತ್ತು. ನಾನದಕ್ಕೆ ಒಂದು ಕೈ ಮೇಲು ಎಂಬಂತೆ ಉಪಚರಿಸುತ್ತಿದ್ದೆ. ಹೋರಿ ಕರುಗಳಿಗೆ ಹಾಕುವ ಮೇವನ್ನು ಅದಕ್ಕೂ ಹಾಕುತ್ತಿದ್ದೆ. ನನಗೆ ಚಿಕ್ಕಂದಿನಿಂದಲೂ ಕುದುರೆ ಸವಾರಿ ಅಂದರೆ ಇನ್ನಿಲ್ಲದ ಆಸೆಯಿತ್ತು. ಆದರೆ ಕುದುರೆ ಸಿಗುವುದು ಅಸಾಧ್ಯವಾಗಿತ್ತು. ಹಂಗಾಗಿ ಮಹಾ ಸಾಧುಪ್ರಾಣಿಯಾಗಿದ್ದ ಚಿಕ್ಕವ್ವನೇ ನನಗೆ ಕುದುರೆಯಾಗಿತ್ತು. ಅದನ್ನು ಮೇಯಿಸಲು ಹೋಗುವಾಗ ಬರುವಾಗ ಅದರ ಮೇಲೆ ಕೂತು ಹೋಗುತ್ತಿದ್ದೆ. ಅದೂ ಅಷ್ಟೇ ಒಂಚೂರೂ ಮಿಸುಕಾಡದೆ ನನ್ನನ್ನು ಕರೆದೊಯ್ಯುತ್ತಿತ್ತು. ಅವತ್ತು ಅಲ್ಲಿ ಹುಡುಕಿ ತಡಕಾಡಿ ಆ ಜೀರಿಂಬೆಯನ್ನು ಹಿಡಿದಿದ್ದೆ. ಇಳಿ ಹೊತ್ತಾಗುತ್ತಾ ಬಂದಿತ್ತು. ಎಂದಿನಂತೆ ನಾನು ಕಲ್ಲುದುಂಡಿಯೊಂದರ ಪಕ್ಕ ಎಮ್ಮೆಯನ್ನು ನಿಲ್ಲಿಸಿಕೊಂಡು ಅದರ ಮೇಲತ್ತಿ ಕೂತು ಹಗ್ಗದಿಂದ ಮೂಗುದಾರವನ್ನು ಹಿಡಿದು ನಡೆಯುವಂತೆ ಎರಡೂ ಕಾಲುಗಳಿಂದ ಎಮ್ಮೆಗೆ ಒದ್ದೆ. ಅದು ಮೆಲ್ಲಗೆ ನಡೆಯಲಾರಭಿಸಿತು. ಹಿಂಗೆ ನಮ್ಮ ಸವಾರಿ ಊರಾಚೆಯ ಬಳಸಾಕಟ್ಟೆಯ ಇಳುಕಲಿನಲ್ಲಿ ಸಾಗುತ್ತಿತ್ತು. ಆ ಕಟ್ಟೆಯೊಳಗೆ ಕೆಲವರು ಎಮ್ಮೆ ದನಗಳನ್ನು ಬಿಟ್ಟುಕೊಂಡಿದ್ದರು. ಹಂಗೆ ಮೇಯುತ್ತಿದ್ದ ಎಮ್ಮೆಗಳ ಪೈಕಿ ಇದ್ದಕ್ಕಿದ್ದಂತೆ ಚಿಣ್ಣಾಟ ಆಡಿಕೊಂಡು ನನ್ನ ಚಿಕ್ಕವ್ವನ ಮುಂದಕ್ಕೆ ಬದೂರನೆ ನುಗ್ಗಿತ್ತು. ಚಿಕ್ಕವ್ವ ಗಾಬರಿ ಬಿದ್ದಳೋ ಇಲ್ಲಾ ಅವಳಿಗೂ ಹಂಗೆ ಚಿನ್ನಾಟ ಆಡಬೇಕು ಅನಿಸಿತೋ ಗೊತ್ತಿಲ್ಲ. ಅಂತೂ ಚಿಕ್ಕವ್ವ ಒಮ್ಮೆಗೇ ಮೈ ಮುರಿದು ಕುಪ್ಪಳಿಸಿದಳು. ಹಂಗೆ ಕುಪ್ಪಳಿಸುತ್ತಲೇ ನಾನು ಆಯತಪ್ಪಿ ದಬುಕ್ಕಂತ ಚಿಕ್ಕವ್ವನ ಕುತ್ತಿಗೆಗೆ ಜಾರಿಬಿಟ್ಟೆ. ಮತ್ತೇನನಿಸಿತೋ ಅವಳಿಗೆ ಕುತ್ತಿಗೆಯನ್ನು ಬಿರುಸಾಗಿ ಕೊಡವುತ್ತಾ ಚಿಣ್ಣಾಟಕ್ಕೆ ಇಕ್ಕಿಕೊಂಡಳು. ಆಗ ನಾನು ಸೀದಾ ಅವಳ ಕೊಂಬಿನ ಬುಡಕ್ಕೇ ಜಾರಿ ಎರಡೂ ಕೈಗಳಿಂದ ಕೊಂಬುಗಳನ್ನು ಬಿಗಿಯಾಗಿ ಅವುಚಿಕೊಂಡು ಭಯದಿಂದ ಜೋರಾಗಿ ಅಳತೊಡಗಿದೆ. ನನ್ನ ಅಳುವಿಗಾಗಲಿ ಅಲ್ಲಿ ದನಗಳನ್ನು ಬಿಟ್ಟುಕೊಂಡಿದ್ದವರ ಕೂಗಿಗಾಗಲಿ ಮೈಂಡ್ ಮಾಡದೆ ಒಂದೇ ಉಸುರಿಗೆ ನನ್ನನ್ನು ಆ ಸ್ಥಿತಿಯಲ್ಲಿ ಹೊತ್ತುಕೊಂಡೇ ಮನೆಯತ್ತ ಓಡತೊಡಗಿತು. ಮತ್ತದು ನಿಂತದ್ದು ನಮ್ಮ ಮನೆಯ ಮುಂದಯೇ. ಅಷ್ಟೊತ್ತಿಗೆ ಕೊಂಬಿನ ಸಂಧಿಗೆ ಸಿಕ್ಕಿಕೊಂಡಿದ್ದ ನನ್ನ ಎರಡೂ ತೊಡೆಗಳು ಪದ ಹೇಳುವಂತಾಗಿದ್ದವು. ಸಧ್ಯ ಜೀವ ಉಳಿಸಿಕೊಂಡಿದ್ದೆ.
ಹಂಗಾಗಿ ಲಕ್ಷ್ಮಣಯ್ಯ ಮೇಷ್ಟ್ರು ಕ್ಲಾಸು ಮುಗಿಸಿ ಹೋಗುತ್ತಲೇ ಆಚೆ ಓಡಿದವನೇ ಆ ಜೀರಿಂಬೆಯನ್ನು ಬೆಂಕಿಪೆಟ್ಟಿಗೆಯಿಂದ ಆಚೆ ತೆಗೆದು ಅದರ ಕೊರಳಿಗೆ ಕಟ್ಟಿದ್ದ ದಾರವನ್ನು ಬಿಚ್ಚಿ ಹಾರಲೆಂದು ಅಂಗೈ ಮೇಲಿಟ್ಟುಕೊಂಡೆ. ಅದು ಒಂದು ಚಣವೂ ತಡಮಾಡದೆ ಹಾರುತ್ತಾ ಕಣ್ಮರೆಯಾಯಿತು.
ಇದೇ ನನ್ನ ಈ ಪ್ರೀತಿಯ ಚಿಕ್ಕವ್ವ ಮತ್ತೊಂದು ಸಾರ್ತಿ ನನ್ನ ಜೀವ ನೀಗೇ ಬಿಟ್ಟಿದ್ದಳು. ನಮ್ಮ ಮನೆಯಲ್ಲಿ ಎಮ್ಮೆ, ದನಕರು, ಕುರಿ ಮೇಕೆ, ನಾಯಿ ಹೀಗೆ ಹಿಂಡು ಹಿಂಡೇ ಸಾಕು ಪ್ರಾಣಿಗಳಿದ್ದವು. ನನಗೆ ಇವುಗಳೆಲ್ಲಾ ಒಂಥರಾ ಆತ್ಮದ ಸಖರಾಗಿದ್ದರು. ಅವುಗಳೂ ಅಷ್ಟೆ ನನ್ನನ್ನು ಕಂಡರೆ ಸಾಕು ಅಕ್ಕರೆ ತೋರಿಸುತ್ತಿದ್ದವು. ದನ ಕರುಗಳ ಎಮ್ಮೆ ಮೈ ಮೇಲಿನ ಉಣ್ಣಿ ಕೀಳುವುದು, ಮೈ ತುರಿಸುವುದು, ಸಪ್ಪೆ ಕಡ್ಡಿ ತಿನ್ನಿಸುವುದು ಮುಂತಾದ ಕೆಲಸಗಳನ್ನು ಮಾಡುತ್ತಿದ್ದರಿಂದ ಅವುಗಳಿಗೂ ನನ್ನ ಸಾಮಿಪ್ಯ ಹಿತವೆನಿಸುತ್ತಿತ್ತು. ರಜಾ ದಿನಗಳು ಬಂದರೆ ಎಮ್ಮೆಯನ್ನು ಮೇಯಿಸುವ, ನೋಡಿಕೊಳ್ಳುವ ಜವಾಬ್ದಾರಿ ನನ್ನ ಮೇಲೆ ಬೀಳುತ್ತಿತ್ತು. ಅದೇ ಈ ಚಿಕ್ಕವ್ವ. ಹೊಲ, ತೋಟದ ಬದುಗಳಲ್ಲಿ ಮೇಯಿಸಲು ಮೇವಿದ್ದರೂ ಮನೆಯವರು ಬೇಡವೆಂದರೂ ನಾನು ಮಾತ್ರ ಹೆಚ್ಚಾಗಿ ಊರಿನಿಂದ ಒಂದೆರಡು ಮೈಲಿಗಳಷ್ಟು ದೂರವಿರುವ `ಈಚೆ ಬಾರೆ’ಗೆ ಹೋಗುತ್ತಿದ್ದೆ. ಅಲ್ಲಿ ಎಮ್ಮೆಯ ಪಾಡಿಗೆ ಎಮ್ಮೆ ಮೇಯ್ದುಕೊಂಡರೆ ನಾನು ಇಂಥದೇ ನೆಪದಲ್ಲಿ ದನಕುರಿಗಳನ್ನ ಮೇಸಲು ಬರುತ್ತಿದ್ದ ಗೆಳೆಯರ ಜತೆ ಈಜು, ಮರಕೋತಿ ಮುಂತಾದ ಆಟಗಳಲ್ಲಿ ಮುಳುಗುತ್ತಿದ್ದೆ. ಕೊಂಚ ದೊಡ್ಡವನಾದ ಮೇಲೆ ಎಮ್ಮೆಯ ಜತೆಗೆ ದನಗಳನ್ನು ಹೊಡೆದುಕೊಂಡು ಹೋಗುವ ಜವಾಬ್ದಾರಿ ಬಿದ್ದಿತ್ತು.
ತಿಂಗಳು ಎರಡು ತಿಂಗಳಿಗೊಮ್ಮೆ ಇವುಗಳಿಗೆ ಸ್ನಾನ ಮಾಡಿಸಬೇಕಾಗಿತ್ತು. ಆಗ ಅಯ್ಯನ ಜತೆ ಹೋಗುತ್ತಿದ್ದೆ. ಊರ ಪಕ್ಕದ ಬಳಸಾ ಅಂತ ಕರೆಯುವ ಪುಟ್ಟ ಕೆರೆಯೇ ಇವುಗಳಿಗೆಲ್ಲಾ ಬಚ್ಚಲು ಮನೆಯಾಗಿತ್ತು. ಹಂಗೆಯೇ ಊರಿನಿಂದ ಬಾರೆಗೆ ಮೇಸಲು ಹೋಗುವಾಗ ತಿರುಗಿ ಬರುವಾಗ ದನಕರುಗಳಿಗೆ ನೀರು ಕುಡಿಸುವ ತಾಣವೂ ಆಗಿತ್ತು. ಕೆಲವು ದನಕರುಗಳನ್ನು ನೀರಿಗೆ ಬಿಡುತ್ತಲೇ ಒಂದು ಸುತ್ತು ಈಜಿಗೆ ಬಿದ್ದುಬಿಡುತ್ತಿದ್ದವು. ಸತೊಂಭತ್ತು ಕಾಲವೂ ಈ ಕೆರೆಯಲ್ಲಿ ನೀರಿರುತ್ತಿತ್ತು. ಮೇಲಿನ ದಿಬ್ಬದ ಕೆಮ್ಮಣ್ಣು ಹೊಲಗಳಿಂದ ಹಾಗೂ ಬಾರೆಯ ಕಡೆಯಿಂದ ಹರಿದು ಬಂದು ತುಂಬಿಕೊಳ್ಳುತ್ತಿದ್ದ ನೀರು ಹೊಸದರಲ್ಲಿ ಅದೇ ಬಣ್ಣಕ್ಕಿರುತ್ತಿತ್ತು. ದಿನ ಕಳೆದಂತೆ ತಿಳಿತುಕೊಂಡು ಮಾಮೂಲಿ ಬಣ್ಣಕ್ಕೆ ತಿರುಗುತ್ತಿತ್ತು. ನನ್ನ ಚಿಕ್ಕವ್ವನಿಗೂ ನೀರು ಕುಡಿಯಲು ಬೀಳುತ್ತಲೇ ನೀರಿಗೆ ಬೀಳುವ ಖಯಾಲಿ ಇತ್ತು. ಮತ್ತೆ ಅವಳನ್ನು ನೀರೊಳಗಿನಿಂದ ಏಳಿಸಿಕೊಂಡು ಬಾರೆಯ ದಾರಿ ಹಿಡಿಯುವ ಹೊತ್ತಿಗೆ ಸಾಕಾಗಿಬಿಡುತ್ತಿತ್ತು. ಅಯ್ಯ ಇತರೆ ದನ ಕರುಗಳ ಮೈ ತೊಳೆದರೆ ನಾನು ಈ ಚಿಕ್ಕವ್ವನ ಮೈ ಮೇಲೆ ನೀರು ಉಗ್ಗಿ ಹಗ್ಗವನ್ನು ಹಿಡಿದುಕೊಂಡೇ ಈಜಿಗೆ ಹೊಡೆಯುತ್ತಿದ್ದೆ. ನಾನು ಮಾತ್ರ ಮಂಡಿಯುದ್ದದ ನೀರನ್ನು ಬಿಟ್ಟು ಮುಂದಕ್ಕೆ ಹೋಗುತ್ತಿರಲಿಲ್ಲ.
ಅವತ್ತು ಶನಿವಾರದ ಮಾರ್ನಿಗ್ ಕ್ಲಾಸನ್ನು ಮುಗಿಸಿಕೊಂಡು ಬಾರೆಗೆ ಹೋಗದೆ ಚಿಕ್ಕವ್ವನನ್ನು ನಮ್ಮ ಹೊಲದ ಬದುವೊಂದರಲ್ಲಿ ಮೇಸಲು ಹೋಗಿದ್ದೆ. ಇಳಿಹೊತ್ತಾಗುತ್ತಲೇ ಚಿಕ್ಕವ್ವನ ಮೇಯುವುದನ್ನು ವಸಿ ಕಡಿಮೆ ಮಾಡಿ ನನ್ನತ್ತಲೇ ನೋಡತೊಡಗಿದಳು. ಬಾಯಾರಿಕೆಯಿಂದ ಹೀಗೆ ಮಾಡುತ್ತಿದ್ದಾಳೆಂದು ನನಗೆ ಗೊತ್ತಾಗಿ ಅವಳ ಮೇಲತ್ತಿ ಕೂತು ಸವಾರಿ ಮಾಡಿಕೊಂಡು ಕಟ್ಟೆಯತ್ತ ಹೊರಟೆ. ನೀರು ಕುಡಿಸಿಕೊಂಡು ಅಲ್ಲೇ ಒಂದು ಸ್ವಲ್ಪ ಹೊತ್ತು ಅಡ್ಡಾಡಿಸಿದರೆ ಆಯ್ತು ಅನ್ನುವದು ನನ್ನ ಮನಸ್ಸಿನಲ್ಲಿತ್ತು. ನೀರನ್ನು ನೋಡುತ್ತಲೇ ಎಮ್ಮೆ ದಾಪುಗಾಲಿನಲ್ಲಿ ನಡೆದು ಕಟ್ಟೆಯನ್ನು ತಲುಪಿತು. ಇಳಿ ಹೊತ್ತಾಗಿದ್ದರೂ ಸೂರ್ಯ ಗಡುಸಾಗಿದ್ದ. ಹೊಟ್ಟೆ ತುಂಬಾ ನೀರು ಕುಡಿದ ಎಮ್ಮೆ ಮೆಲ್ಲಗೆ ನೀರೊಳಕ್ಕೆ ಇಳಿಯುವ ಇರಾದೆ ತೋರಿತು. ಪಾಪ ಬಿಸಿಲು ಸ್ವಲ್ಪ ಮೈ ತಣ್ಣಗೆ ಮಾಡಿಕೊಳ್ಳಲಿ ಅಂತ ನಾನೂ ಪ್ರತಿರೋಧ ತೋರಲಿಲ್ಲ. ಇಷ್ಟೇ ಆಗಿ ಅದರಷ್ಟಕ್ಕೆ ಅದನ್ನು ಬಿಟ್ಟಿದ್ದರೆ ಅದು ಸಾಕಾಗುವವರೆಗೂ ನೀರಿನಲ್ಲಿ ಒದ್ದಾಡಿ ಎದ್ದು ಬರುತ್ತಿತ್ತು. ಯಾವ ಗ್ರಾಚಾರಕ್ಕೋ ಏನೋ ನನಗೆ ಇದ್ದಕ್ಕಿದ್ದಂತೆ ಅದರೊಂದಿಗೆ ಈಜುವ ಉಮೇದು ಹುಟ್ಟಿಕೊಂಡುಬಿಟ್ಟಿತ್ತು. ನನ್ನ ಗೆಳೆಯನೊಬ್ಬ ಕಟ್ಟೆಗೆ ಸ್ನಾನ ಮಾಡಿಸಲೆಂದು ಆಗಾಗ ಹಸುವೊಂದನ್ನು ಹೊಡೆದುಕೊಂಡು ಬರುತ್ತಿದ್ದ. ಅವನಿಗೂ ಸರಿಯಾಗಿ ಈಜು ಬರುತ್ತಿರಲಿಲ್ಲ. ಆದರೂ ಹಸುವನ್ನು ನೀರಿಗೆ ಇಳಿಸಿ ಅದರ ಬಾಲವನ್ನು ಹಿಡಿದು ಕಟ್ಟೆಯ ನಡೂಮಧ್ಯದವರೆಗೂ ಹೋಗಿ ಈಜಿಕೊಂಡು ಬರುತ್ತಿದ್ದ. ನನಗೆ ಆ ಚಣಕ್ಕೆ ಅದು ನೆನಪಾಯ್ತು. ಆಗ ಕಟ್ಟೆಯೊಳಗೆ ಒಂದು ನರಪಿಳ್ಳೆಯೂ ಇರಲಿಲ್ಲ. ನಾನೂ ಯಾಕೆ ಹಂಗೆ ಮಾಡಬಾರದು ಅನಿಸಿ, ಬಟ್ಟೆಗಳನ್ನೆಲ್ಲಾ ಬಿಚ್ಚಿ ದಡದ ಕಲ್ಲು ದುಂಡಿಯೊಂದರ ಮೇಲಿಟ್ಟು ಎಮ್ಮೆಯೊಂದಿಗೆ ನೀರಿಗಿಳಿದೆ.

ಅದು ಮಳೆಗಾಲ. ನೀರು ತುಂಬಿ ತುಳುಕುತ್ತಿತ್ತು. ಸಣ್ಣ ಪುಟ್ಟ, ಮೊಳಕಾಲುದ್ದದ ನೀರಿನಲ್ಲಿ ಒದ್ದಾಡುವುದನ್ನು ಬಿಟ್ಟರೆ ಆಗಿನ್ನೂ ನನಗೆ ಸುತರಾಂ ಈಜಲು ಬರುತ್ತಿರಲಿಲ್ಲ. ಹಿಂಗೆ ನೀರಿಗೆ ಹೋಗಲು ಬಿಟ್ಟದ್ದು ಖಷಿಯಾಗಿ ಚಿಕ್ಕವ್ವ ಮೆಲ್ಲಗೆ ನಡೆಯತೊಡಗಿದಳು. ಅವಳು ಮುಂದೆ ಹೋದಂತೆ ನೀರು ತೊಡೆ ಸೊಂಟವನ್ನು ಬಿಟ್ಟು ಕುತ್ತಿಗೆಯವರೆಗೆ ಬರುತ್ತಿದ್ದಂತೆಯೇ ಅವಳ ಬಾಲದ ತುದಿಯನ್ನು ಒಂದು ಸುತ್ತು ಮುಷ್ಟಿಗೆ ಸುತ್ತಿಸಿಕೊಂಡು ಗಟ್ಟಿಯಾಗಿ ಹಿಡಿದುಕೊಂಡೆ. ಆದರೂ ಎದೆ ಡವಗುಡುತ್ತಿತ್ತು.
ಮೊದಲೇ ನೀರಿನ ಸುಖಕ್ಕೆ ಪುಳುಕಿತಗೊಂಡಿದ್ದ ಚಿಕ್ಕವ್ವ ಮೆಲ್ಲಗೆ ನೀರನ್ನು ಸೀಳಿಕೊಂಡು ಮುಂದೆ ಸಾಗಿದಳು. ನನಗೆ ನೆಲ ಪೂರಾ ನೆಟಕದಂತಾಯ್ತು. ನೀರಿನಲ್ಲಿ ತೇಲತೊಡಗಿದಂತೆ ಭಯದ ನಡುವೆಯೂ ಒಂಥರಾ ಪುಳಕವಾಗತೊಡಗಿತು. ಅಗಾಇಗಾ ಅನ್ನುವುದರೊಳಗೆ ನಾನು ಮತ್ತು ಚಿಕ್ಕವ್ವ ನಡು ಕೆರೆಯಲ್ಲಿದ್ದೆವು. ಅದುವರೆವಿಗೂ ಒಂದು ಸ್ಪೀಡಿನಲ್ಲಿದ್ದ ಚಿಕ್ಕವ್ವ ಇದ್ದಕ್ಕಿದ್ದಂತೆ ಸ್ಪೀಡನ್ನು ಕಡಿಮೆ ಮಾಡಿಕೊಂಡಳು. ಮೊದಲ ವೇಗಕ್ಕೆ ಹೊಂದಿಕೊಂಡಿದ್ದ ನನಗೆ ಇದ್ದಕ್ಕಿದ್ದಂತೆ ಕಸಿವಿಸಿಯಾಯ್ತು. ಈ ಕಸಿವಿಸಿಯಲ್ಲಿ ಅವಳ ಬಾಲದ ಕುಚ್ಚನ್ನು ಬಿಟ್ಟು ಬಾಲದ ಮಧ್ಯ ಭಾಗವನ್ನು ಹಿಡಿದುಕೊಂಡಿದ್ದೆ. ಅದು ನುಣ್ಣಗೆ ಜಾರುತ್ತಾ ತಪ್ಪಿಸಿಕೊಳ್ಳುತ್ತಿತ್ತು. ನಂತರ ಬರಬರುತ್ತಾ ಚಿಕ್ಕವ್ವನ ವೇಗ ಮತ್ತೂ ಕಡಿಮೆಯಾಯ್ತು. ಹಂಗೆ ಕಡಿಮೆ ಮಾಡಿಕೊಂಡು ಮಾಡಿಕೊಂಡು ಕಡೆಗೆ ಇದ್ದಕ್ಕಿದ್ದಂತೆ ತನ್ನಿಡೀ ಮೈಯ್ಯನ್ನು ನೀರೊಳಗೆ ಮುಳುಗಿಸಿಕೊಂಡು ತನ್ನೆರಡೂ ಮೂಗಿನ ಸೊಳ್ಳೆಗಳನ್ನು ಮಾತ್ರ ಮೇಲೆತ್ತಿಕೊಂಡು ನಿಂತಲ್ಲೇ ನಿಂತುಬಿಟ್ಟಳು.
ನನಗೀಗ ಏನು ಮಾಡಬೇಕೆಂಬುದು ತಿಳಿಯದೆ ಪೂರಾ ಗಾಬರಿಗೊಳಗಾದೆ. ಅಂಥ ಗಾಬರಿಯಲ್ಲೂ ಚಿಕ್ಕವ್ವನ ಜಾರುತ್ತಿದ್ದ ಬಾಲವನ್ನೇ ಆಸರೆಯಾಗಿಸಿಕೊಂಡು ಅವಳ ಬೆನ್ನ ಮೇಲೆ ಕೂತು ಬಚಾವಾಗುವ ಆಸೆಯಿಂದ ಹಿಡಿದಿದ್ದ ಬಾಲವನ್ನೂ ಕೈ ಬಿಟ್ಟು ಮೆಲ್ಲಗೆ ಅವಳ ಮೈಯ್ಯ ಹತ್ತಿರ ಸಾಗಿದೆ. ಅದು ನಾನು ಮಾಡಿಕೊಂಡ ದೊಡ್ಡ ಯಡವಟ್ಟಾಗಿತ್ತು. ಮೊದಲೇ ನೊಣ ಕೂತರೆ ಜಾರುವಷ್ಟು ನುಣುಪಾಗಿದ್ದ ಅವಳ ಮೈ ನೀರಿನೊಳಗಿದ್ದುದರಿಂದ ಅದಕ್ಕೆ ಮತ್ತಷ್ಟು ನುಣುಪು ಬಂದು ಮತ್ತಷ್ಟು ಜಾರುತ್ತಾ ನಾನು ಎಷ್ಟೇ ಪಟ್ಟು ಹಾಕಿದರೂ ಆ ಪಟ್ಟುಗಳೆಲ್ಲಾ ಮಕಾಡೆ ಮಲಗಿದವು.

ಮುಂದಿನದೆಲ್ಲಾ ಅಸ್ಪಷ್ಟ. ಕೆಮ್ಮಣ್ಣು ನೀರಿನಿನೊಳಗೆ ಕಣ್ಣು ಬಿಟ್ಟುಕೊಂಡು ಕೆಳಗಿಳಿಯುತ್ತಿದ್ದುದಷ್ಟೇ ನನಗೆ ಗೊತ್ತಾಗುತ್ತಿತ್ತು. ಎಚ್ಚರವಾದಾಗ ಕೆರೆಯ ನಾನು ಏರಿಯ ಗರಿಕೆ ಹುಲ್ಲಿನ ಮೇಲಿದ್ದೆ. ನನ್ನನ್ನು ನೀರೊಳಗಿಂದ ಮೇಲೆ ತಂದಿದ್ದ ನಮ್ಮ ಮನೆಯಲ್ಲಿ ಕುರಿ ಕಾಯುವ ಕಾಯಕ ಮಾಡುತ್ತಿದ್ದ ಕೆಂಪ್ಲಿಗಜ್ಜ, ಬುಳ್ಳಗೆ ಮಲಗಿದ್ದ ನನ್ನನ್ನು ಕೆಕ್ಕರಿಸಿಕೊಂಡು ದಿಟ್ಟಿಸುತ್ತಿತ್ತು. ನಾನು ಬಿಚ್ಚಿಟ್ಟಿದ್ದ ಬಟ್ಟೆಗಳು ಕಟ್ಟೆಯ ಅಚೆ ದಡದಲ್ಲಿದ್ದವು. ಅದು ಮೆಲ್ಲಗೆ ನನ್ನ ಅರಿವಿಗೆ ಬರುತ್ತಲೇ ನಾಚುತ್ತಾ ಸುತ್ತಲೂ ಕಣ್ಣಾಡಿಸಿದೆ. ಪುಣ್ಯಕ್ಕೆ ಯಾರೂ ಕಣ್ಣಿಗೆ ಬೀಳಲಿಲ್ಲ. ನನ್ನ ಎದುರಿಗೆ ಲೆಕ್ಕೆ ಗುತ್ತಿಯೊಂದಕ್ಕೆ ಕಟ್ಟಾಕಿದ್ದ ಚಿಕ್ಕವ್ವ ಇದಕ್ಕೂ ನನಗೂ ಸಂಬಂಧವೇ ಇಲ್ಲ ಎನ್ನುವಂತೆ ಆ ಗುತ್ತಿಗೆ ಮೈಯ್ಯುಜ್ಜಿಕೊಳ್ಳುತ್ತಿದ್ದಳು.
*****
ಕೆಲವು ಅರ್ಥಗಳು:
ಕುಡ್ಲು: ಕುಡುಗೋಲು.
ತೊಣಚಿ: ದನ ಕರುಗಳ ಮೈಯ್ಯಲ್ಲಿ ಸೇರಿಕೊಳ್ಳುವ ಒಂದು ಬಗೆಯ ನೊಣ.
ಉಣ್ಣೆ ಅಥವಾ ಉಣ್ಣಿ: ದನಕರು ನಾಯಿಗಳಿಗೆ ಹತ್ತಿಕೊಳ್ಳುವ ಒಂದು ಬಗೆಯ ಕೀಟ.
ಈಚೆಬಾರೆ: ನಮ್ಮೂರಲ್ಲಿ ಸಿದ್ದಪ್ಪನಕೆರೆಯಿಂದ ಈಚೆಗೆ ಇರುವ ದನಕರುಗಳನ್ನು ಮೇಯಿಸುವ ಪುಟ್ಟ ಕಾಡಿಗೆ ಹೀಗೆ ಕರೆಯುತ್ತಾರೆ. ಕೆರಯಿಂದ ಆಚೆ ಇರುವುದಕ್ಕೆ `ಆಚೆಬಾರೆ’ ಅನ್ನುತ್ತಾರೆ.
(ಹಿಂದಿನ ಕಂತು:ಸೇದುವಬಾವಿ, ಮೂಲೆಯ ಮಡಕೆ ಮತ್ತು ಮರದಡಿಯ ಮುದುಕ)

ಎಸ್. ಗಂಗಾಧರಯ್ಯ ಮೂಲತಃ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮಾಕುವಳ್ಳಿಯವರು. ಪ್ರಸ್ತುತ ವಾಸ ತಿಪಟೂರಿನಲ್ಲಿ. ಕಥಾ ಸಂಕಲನ: ನವಿಲ ನೆಲ, ಒಂದು ಉದ್ದನೆಯ ನೆರಳು, ದೇವರ ಕುದುರೆ, ಮಣ್ಣಿನ ಮುಚ್ಚಳ, ಎರೆ ನೆತ್ತಿ -ಈ ತನಕದ ಕಥೆಗಳು, ಕಾದಂಬರಿ: ಗಂಗಪಾಣಿ, ವ್ಯಕ್ತಿಚಿತ್ರ ಸಂಪುಟ: ಬಯಲ ಪರಿಮಳ, ಅನುವಾದ: `ವೈಕಂ ಕಥೆಗಳು’, ಲೋರ್ಕಾ ನಾಟಕ-`ಎರ್ಮಾ’, ಲೋರ್ಕಾಕಾವ್ಯ-`ಚರಮಗೀತೆ’, `ಹಲವು ರೆಕ್ಕೆಯ ಹಕ್ಕಿʼ-ವಿವಿಧ ಲೇಖಕರ ಕಥೆಗಳು, ಟರ್ಜೆನೇವ್‌ರ `ಬೇಟೆಗಾರನ ಚಿತ್ರಗಳು’, ದಾರಿಯೋ ಫೋ ನಾಟಕ-`ಗುಲಾಬಿ ಗರ್ಭ’, ಮಾರ್ಕ್ವೆಜ್ ಸಂದರ್ಶನ-`ಫ್ರೇಗ್ರನ್ಸ್ ಆಫ್ ಗ್ವಾವ’, ಚಿಂಗೀಝ್ ಐತ್ಮತೋವ್‌ನ ಕಾದಂಬರಿ- `ಜಮೀಲಾ’, ಬುನಿನ್ ಕಥೆಗಳು, ಅರ್ನೆಸ್ಟ್ ಹೆಮಿಂಗ್ವೆ -ಇಂಡಿಯನ್‌ಕ್ಯಾಂಪ್ ಮತ್ತು ಇತರ ಕಥೆಗಳು, ಮಾರ್ಕ್ವೆಜ್ ಕಥೆಗಳು, ದಾರಿಯೋ ಫೋ ವಾಚಿಕೆ, ಲೋರ್ಕಾ ನಾಲ್ಕು ನಾಟಕಗಳು, ಇವರ ಪ್ರಕಟಿತ ಕೃತಿಗಳು. ಕರ್ನಾಟಕ ಸಾಹಿತ್ಯಅಕಾಡೆಮಿ ಪುಸ್ತಕ ಬಹುಮಾನ (ಅನುವಾದ – 1996), ಕರ್ನಾಟಕ ಸಾಹಿತ್ಯಅಕಾಡೆಮಿ ಪುಸ್ತಕ ಬಹುಮಾನ (ಕಥೆ – 2018), ಡಾ. ಬೆಸಗರಹಳ್ಳಿ ರಾಮಣ್ಣಕಥಾ ಪ್ರಶಸ್ತಿ(2018), ಶಿವಮೊಗ್ಗ ಕರ್ನಾಟಕ ಸಂಘದ ಡಾ.ಯು.ಆರ್.ಅನಂತಮೂರ್ತಿ ಪ್ರಶಸ್ತಿ.(2018), ತುಮಕೂರಿನ ವೀ.ಚಿ.ಪ್ರತಿಷ್ಠಾನದ ವೀ.ಚಿ.ಪ್ರಶಸ್ತಿ (2018), ಸೇಡಂನ ಅಮ್ಮ ಪ್ರಶಸ್ತಿ(2022), ಶಾ. ಬಾಲೂರಾವ್ ಅನುವಾದ ಪ್ರಶಸ್ತಿ(2023) ಸೇರಿದಂತೆ ಇನ್ನೂ ಹಲವು ಪ್ರಶಸ್ತಿಗಳು ಇವರಿಗೆ ದೊರೆತಿವೆ.

