ನನ್ನ ಕಾರ್‌ನಲ್ಲಿ ಹಿಂದಿನ ಸೀಟು ಖಾಲಿ ಇತ್ತು. ಹಾಗೆಯೇ ಹೋಗುತ್ತಾ ನಾಲ್ಕು ಹುಡುಗರಿಗೆ ಶಾಲೆಯವರೆಗೆ ಲಿಫ್ಟ್ ಕೊಡೋಣ ಅನಿಸಿತು. ಒಂದು ಹುಡುಗರ ಗುಂಪಿನ ಪಕ್ಕ ಗಕ್ಕಂತ ನಿಲ್ಲಿಸಿದೆ. ನಾನು ಏನೋ ಹೇಳುವಷ್ಟರಲ್ಲಿ ಒಬ್ಬ ಹುಡುಗ ಹಿಂದೆ ಓಡಲು ಶುರು ಮಾಡಿದ. ಅವನ ಜೊತೆಗೆ ಉಳಿದ ಹುಡುಗರೂ ಓಡತೊಡಗಿದರು! ಅಯ್ಯೊ ದೇವ್ರೆ ನನ್ನನ್ನ ಕಿಡ್ನ್ಯಾಪರ್‌ ಅಂದುಕೊಂಡರೋ ಏನೋ!? ಉಪಕಾರ ಮಾಡೋದು ಬೇಡವೇ ಬೇಡ ಅಂತ ನಾನು ಮುಂದೆ ಹೊರಟೆ. ನನ್ನ ಮುಖವನ್ನು ಕಾರಿನ ಕನ್ನಡಿಯಲ್ಲಿ ನೋಡಿಕೊಂಡೆ.
ಗುರುಪ್ರಸಾದ್‌ ಕುರ್ತಕೋಟಿ ಬರೆಯುವ ಗ್ರಾಮ ಡ್ರಾಮಾಯಣ ಅಂಕಣದ 16ನೇ ಕಂತು

ಬೆಳ್ಳಂಬೆಳಿಗ್ಗೆ ಬಸ್ಸಿನಿಂದ ಬಂದಿಳಿದಿದ್ದ ಇನ್ನೋರ್ವ ಶಿಷ್ಯ ವಿನೋದರನ್ನು ಹೊಸಕೊಪ್ಪದ ಮನೆಗೆ ಕರೆತಂದೆ. ರಾಮ್ ಕೂಡ ಅವರನ್ನು ಭೇಟಿಯಾಗಿ ಸ್ವಲ್ಪ ಚೇತೋಹಾರಿಯಾಗಿ ಕಂಡ. ಬ್ರೋ ಬ್ರೋ ಅಂತ ಅವರಿಬ್ಬರೂ ಒಬ್ಬರಿಗೊಬ್ಬರು ಸಂಭೋಧಿಸಿ ಮಾತಾಡೋದು ಕೇಳಿ ಖುಷಿಯಾಯ್ತು. ಹೀಗೆಯೇ ನನ್ನ ರೈತರ ಬಳಗ ಬೆಳೆದು ಈ ಎಲ್ಲ ರೈತಾನಂದರು ನನ್ನ ತೋಟದಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡುತ್ತಾ, ಬೆಳೆ ತೆಗೆಯುವ ಸೀನು ಕಣ್ಣ ಮುಂದೆ ಬಂದು ಓಡತೊಡಗಿತು… ಅಷ್ಟರಲ್ಲಿ ನನ್ನನ್ನು ಎಚ್ಚರಿಸುವಂತೆ,
“ಸರ್ರ ಇವನ್ನೆಲ್ಲಿಂದ ಹಿಡ್ಕೊಂಡ್ ಬಂದ್ರಿ? ಭಾರಿ ಅದಾನ್ರ್ಯಲ್ಲ” ಅಂತ ಹೇಳುತ್ತಾ ವಿನೋದ್ ಅವರ typical ನಗೆ ನಕ್ಕರು. ಅವನು ಕೂತು ತದೇಕಚಿತ್ತದಿಂದ ಓದುತ್ತಿದ್ದ ರೀತಿ, ಅವನ ಇನ್ನಿತರ manarism ಗಳು ಮೊದಲೇ ತಮಾಷೆಯ ಸ್ವಭಾವದ ವಿನೋದಗೆ ನಗು ತರಿಸಿದ್ದವೇನೋ. ಅವನು ಹಲ್ಲಿಗೆ ಹೆದರಿದ ವಿಷಯ ತಿಳಿಸಿದೆ. ಹಂಗಾದ್ರ ಇಲ್ಲಿ ಭಾಳ ದಿನ ಇರುದಿಲ್ಲ ತೊಗೋರಿ ಅಂತ ಮತ್ತೆ ನಕ್ಕರು. ನನಗೂ ಈಗಾಗಲೇ ಹಾಗೆ ಅನಿಸಿತ್ತಾದರೂ ಇನ್ನೂ ಆಶಾಭಾವನೆ ಇತ್ತು!

ಮೂವರೂ ಸೇರಿ ಹೊಲಕ್ಕೆ ಹೋದೆವು. ಈಗಾಗಲೇ ನೆಟ್ಟಿದ್ದ ಐವತ್ತು ಅಡಿಕೆ ಗಿಡಗಳ ನಡು ನಡುವೆ ಬಾಳೆಯ ಸಸಿಗಳನ್ನು ನೆಟ್ಟೆವು. ಮೊದಲೆರಡು ವರ್ಷಗಳು ಅಡಿಕೆಗೆ ಅವಶ್ಯಕವಾದ ನೆರಳು ಕೊಡಲು ಬಾಳೆ ಒಂದು ಒಳ್ಳೆಯ ಬೆಳೆ. ಅದು ವೇಗವಾಗಿ ಬೆಳೆದು ಅಡಿಕೆಗೆ ನೆರಳಾಗುತ್ತದೆ. ಅದೂ ಅಲ್ಲದೆ ರೈತನಿಗೆ ಉತ್ತಮ ವರಮಾನವನ್ನೂ ಕೊಡುತ್ತದೆ. ಅದಕ್ಕೆ ಬೇಕಾದ ಗುದ್ದುಗಳನ್ನು ಈಗಾಗಲೇ ಮಾಡಿ ಇಡಿಸಿದ್ದೆನಾದ್ದರಿಂದ ಕೆಲಸ ಅಷ್ಟೊಂದು ಕಠಿಣವಾಗಲಿಲ್ಲ. ಆದರೆ ನಡುವೆ ಬೆಳೆದ ಕಳೆ ನಮ್ಮ ಬೆಳೆಗಳನ್ನು ಮೀರಿ ಬೆಳೆಯುತ್ತಿದ್ದುದು ಸ್ವಲ್ಪ ಚಿಂತೆಗೆ ಕಾರಣವಾಗಿತ್ತು.

“ಶ್ಯಾಮಗ ಹೇಳಿ ಹುಲ್ಲು ತಗಸೋನ್ ಏನ್ರಿ ಸರ್ರ್?” ಅಂದರು ವಿನೋದ್.

“ಶ್ಯಾಮ ಯಾಕೋ ಮನಸ್ಸ್ ಮಾಡವಲ್ಲ ತಡೀರಿ. ಅದಕ್ಕೊಂದು ಬ್ಯಾರೆ ಉಪಾಯ ಮಾಡೀನಿ ಅಂದೇ.”

“ಅದೇನ್ರಿ ಸರ್ರ?”

“ಹುಲ್ಲು ಕತ್ತರಿಸೋ ಮಷೀನ್, ಬ್ರಷ್ ಕಟ್ಟರ್ ಅಂತಾರ್. ಅದನ್ನ ತಂದು ನಾವ ಕತ್ತರಿಸೋಣ” ಅಂದೆ.

ಅದು ತುಂಬಾ ಉಪಯುಕ್ತ ಯಂತ್ರ. ಹುಲ್ಲು ಕಂಟಿ ಹಾಗೂ ಎಷ್ಟೋ ಸಣ್ಣ ಸಣ್ಣ ಕಳೆಗಳನ್ನು ಅದರಲ್ಲಿ ಆರಾಮವಾಗಿ ಕತ್ತರಿಸಬಹುದು ಅಂತ ಎಲ್ಲೋ ಕೇಳಿದ್ದೆ. ಅದನ್ನು ನಾವೇ ಬಳಸಿಕೊಳ್ಳಬಹುದು. ಆಳಿನ ಅವಶ್ಯಕತೆ ಇಲ್ಲದ ಸ್ವಾವಲಂಬಿ ರೈತನಾಗಬೇಕು ಎಂಬುದು ನನ್ನ ಗುರಿ ಆಗಿತ್ತಲ್ಲ! ಅದಕ್ಕೆ ಪೆಟ್ರೋಲ್ ಹಾಕಿದರಾಯ್ತು. ನಮಗೆ ಬೇಕಾದಾಗ ಕೆಲಸ ಮಾಡಿಕೊಂಡರಾಯ್ತು.

ಅದರ ಬಗ್ಗೆ ಈ ಎಲ್ಲ ವಿವರ ತಿಳಿದುಕೊಂಡು, ಅದು ಇದ್ದರೆ ಒಳ್ಳೆಯದೇ ಅಂತ ಅವರೂ ಹೇಳಿದರು. ಇನ್ನೊಂದು ದಿನ ಇದ್ದು ರವಿವಾರ ರಾತ್ರಿ ಬೆಂಗಳೂರಿಗೆ ಹೋದರು. ಅವರು ಬಂದಿದ್ದರಿಂದ ರಾಮನಿಗೆ ತಾನೊಂದು ಟೀಂ ನಲ್ಲಿ ಇದ್ದೇನೆ ಎಂಬ ಭಾವನೆ ಬಂದೀತು ಅಂತ ನಾನು ಭಾವಿಸಿದೆ. ಆದರೂ ಅವನೊಳಗೆ ಏನು ನಡೆಯುತ್ತಿತ್ತೋ ಆ ರಾಮನೇ ಬಲ್ಲ!

*****

ರಾಮ್ ಬಂದು ಈಗಾಗಲೇ ಒಂದು ವಾರವಾಗಿತ್ತು. ಅವನಿಗಾಗಲೇ ಅನ್ನ ಸಾಂಬಾರು ಮಾಡುವುದಷ್ಟಂತೂ ಕಲಿಸಿದ್ದೆ. ಬೆಳಿಗ್ಗೆ ತಿಂಡಿಗೆ ಉಪ್ಪಿಟ್ಟು ಮಾಡಿಕೊಳ್ಳುವುದೂ ಅವನಿಗೆ ಬರುತ್ತಿತ್ತು. ಅವತ್ತಿನ ದಿನ ಉಪ್ಪಿಟ್ಟು ತಿಂದಾದ ನಂತರ, ನಡಿ ನಿನಗೆ ನಾವಿದ್ದ ಹಳೆಯ ಮನೆ ತೋರಸ್ತೀನಿ ಅಂತ ಶಂಭುಲಿಂಗ ಹೆಗಡೆಯವರ ಮನೆಗೆ ಕರೆದುಕೊಂಡು ಹೊರಟೆ. ಅವತ್ತು ನನಗೆ ಶಿರಸಿಗೂ ಹೋಗಬೇಕಿತ್ತು. ನಡುವೆ ದಾರಿಯಲ್ಲಿ ಮಾವನ ಮನೆ ಬರುತ್ತದೆ. ಹೀಗಾಗಿ ಅಲ್ಲಿಗೆ ಹೊಕ್ಕು ಹೋದರಾಯ್ತು ಎಂಬುದು ನನ್ನ ಯೋಜನೆಯಾಗಿತ್ತು.

ಹೊಸಕೂಪ್ಪದಿಂದ ಸ್ವಲ್ಪ ಮುಂದೆ ರಸ್ತೆಯಲ್ಲಿ ಒಂದೆರಡು ಹಳ್ಳಿಗಳು ಸಿಗುತ್ತವೆ. ದಾಸನಕೊಪ್ಪದಲ್ಲಿ ಒಂದೆರಡು ಸರಕಾರಿ ಶಾಲೆಗಳು ಇವೆ. ಮನೆಗಳಿಂದ ಆ ಶಾಲೆ ಒಂದೆರಡು ಕಿಲೋಮೀಟರು ದೂರ ಇರುವುದರಿಂದ ತುಂಬಾ ಹುಡುಗರು ಒಟ್ಟಿಗೆ ಶಾಲೆಗೆ ನಡೆದುಕೊಂಡು ಹೋಗುತ್ತಿರುತ್ತಾರೆ. ಅವತ್ತೂ ರಸ್ತೆಯಲ್ಲಿ ಹುಡುಗರ ಕಂಡೆ. ನಾವೂ ಒಂದಾನೊಂದು ಕಾಲದಲ್ಲಿ ಹಾಗೆಯೇ ಗುಂಪಾಗಿ ಹೋಗುತ್ತಿದ್ದುದು ನೆನಪಾಯ್ತು. ಮೊದಲೆಲ್ಲ ನಡೆದುಕೊಂಡು ಹೋಗುತ್ತಿದ್ದ ನಾವು ಹೈಸ್ಕೂಲಿಗೆ ಬಂದ ಮೇಲೆ ಸೈಕಲ್ಲಿಗೆ upgrade ಆಗಿದ್ದುದೆ ದೊಡ್ಡ ಸಂಭ್ರಮ ಆಗ!

ನನ್ನ ಕಾರ್‌ನಲ್ಲಿ ಹಿಂದಿನ ಸೀಟು ಖಾಲಿ ಇತ್ತು. ಹಾಗೆಯೇ ಹೋಗುತ್ತಾ ನಾಲ್ಕು ಹುಡುಗರಿಗೆ ಶಾಲೆಯವರೆಗೆ ಲಿಫ್ಟ್ ಕೊಡೋಣ ಅನಿಸಿತು. ಒಂದು ಹುಡುಗರ ಗುಂಪಿನ ಪಕ್ಕ ಗಕ್ಕಂತ ನಿಲ್ಲಿಸಿದೆ. ನಾನು ಹಾಗೆ ನಿಲ್ಲಿಸುತ್ತೇನೆ ಅಂತ ಅವರು ನಿರೀಕ್ಷೆ ಮಾಡಿರಲಿಲ್ಲವೇನೋ. ಅವರೂ ಗಕ್ಕಂತ ನಿಂತರು, ನಮ್ಮನ್ನು ನೋಡಿದರು. ನಾನು ಏನೋ ಹೇಳುವಷ್ಟರಲ್ಲಿ ಒಬ್ಬ ಹುಡುಗ ಹಿಂದೆ ಓಡಲು ಶುರು ಮಾಡಿದ. ಅವನ ಜೊತೆಗೆ ಉಳಿದ ಹುಡುಗರೂ ಓಡತೊಡಗಿದರು! ಅಯ್ಯೊ ದೇವ್ರೆ ನನ್ನನ್ನ ಕಿಡ್ನ್ಯಾಪರ್‌ ಅಂದುಕೊಂಡರೋ ಏನೋ!? ಉಪಕಾರ ಮಾಡೋದು ಬೇಡವೇ ಬೇಡ ಅಂತ ನಾನು ಮುಂದೆ ಹೊರಟೆ. ನನ್ನ ಮುಖವನ್ನು ಕಾರಿನ ಕನ್ನಡಿಯಲ್ಲಿ ನೋಡಿಕೊಂಡೆ. ಹಳ್ಳಿಗೆ ಬಂದ ಮೇಲೆ ಗಡ್ಡ ತೆಗೆದೆ ಇರಲಿಲ್ಲ. ಆದರೂ ನಾನು ಹುಡುಗರ ಕಣ್ಣಿಗೆ ಕಳ್ಳನ ತರಹ ಕಂಡಿರಲಿಕ್ಕಿಲ್ಲ ಅಲ್ವಾ ಅಂತ ರಾಮನಿಗೆ ಕೇಳಿದೆ. ಅವನು ನಕ್ಕನಾದರೂ ಅದರ ಅರ್ಥ ತಿಳಿಯಲಿಲ್ಲ.

ಒಟ್ಟಿನಲ್ಲಿ ನಮ್ಮ ವೇಷ ಭೂಷಣ ನೋಡಿದರೆ ಹಳ್ಳಿಯವರು ಅಂತ ಅನಿಸುತ್ತಿರಲಿಲ್ಲ. ಅದಕ್ಕೆ ಹುಡುಗರು ಹೆದರಿದರೋ ಏನೋ. ಏನೇ ಆದರೂ ಇನ್ನೂ ಮುಂದೆ ಹುಡುಗರಿಗೆ ಲಿಫ್ಟ್ ಕೊಡುವ ಹುಚ್ಚಿಗೆ ಹೋಗೊದು ಬೇಡ ಅಂತ ಅಂದುಕೊಂಡೆ.

ಅವತ್ತಿನ ದಿನ ಉಪ್ಪಿಟ್ಟು ತಿಂದಾದ ನಂತರ, ನಡಿ ನಿನಗೆ ನಾವಿದ್ದ ಹಳೆಯ ಮನೆ ತೋರಸ್ತೀನಿ ಅಂತ ಶಂಭುಲಿಂಗ ಹೆಗಡೆಯವರ ಮನೆಗೆ ಕರೆದುಕೊಂಡು ಹೊರಟೆ. ಅವತ್ತು ನನಗೆ ಶಿರಸಿಗೂ ಹೋಗಬೇಕಿತ್ತು. ನಡುವೆ ದಾರಿಯಲ್ಲಿ ಮಾವನ ಮನೆ ಬರುತ್ತದೆ. ಹೀಗಾಗಿ ಅಲ್ಲಿಗೆ ಹೊಕ್ಕು ಹೋದರಾಯ್ತು ಎಂಬುದು ನನ್ನ ಯೋಜನೆಯಾಗಿತ್ತು.

ಶಂಭುಲಿಂಗ ಮಾವನ ಮನೆ ಮುಟ್ಟಿದಾಗ ಅವರು ಎಂದಿನಂತೆ ತೋಟದಲ್ಲಿ ಇದ್ದರು. ನಮ್ಮನ್ನು ಕಂಡ ಕೂಡಲೇ ಅವರ ಸಾಕು ನಾಯಿಗಳ ತಂಡ ಬಾಲ ಅಲ್ಲಾಡಿಸುತ್ತಾ ಬಂದವು. ಸಧ್ಯ ಹೆಗಡೇರ ನಾಯಿಗಳಿಗಾದರೂ ನಾವು ಕಳ್ಳರಲ್ಲ ಅಂತ ಗೊತ್ತಾಯ್ತಲ್ಲ ಅಂತ ನಿಟ್ಟುಸಿರು ಬಿಟ್ಟೆ!
ಅಷ್ಟರಲ್ಲಿ “ಏನೋ ಗುರುಪ್ರಸಾದ್ ಭಾರಿ ಅಪರೂಪಲ್ಲೋ ಮಾರಾಯ. ನಮ್ಮ ನಾಯಿಗಳು ಈಗ ನಿನ್ನ ಗುರ್ತು ಹಿಡಿಯೋಕ್ ಶುರುಮಾಡಿದ್ವಲ್ಲೋ ಮಾರಾಯ…” ಅನ್ನುತ್ತಾ ನಮ್ಮ ಹಿಂದಿನಿಂದ ಕೂಗುತ್ತ ಬಂದ ಮಾವನ ಪರಿಚಿತ ದನಿ ಕೇಳಿತು.

ಕಡಿಗೋ… ಅಂತ ರಾಮನಿಗೆ ಮಾತಾಡಿಸಿದರು. ಅವನಿಗೆ ಕನ್ನಡ ಬರೋದಿಲ್ಲ, ಆಂಧ್ರದವನು ಎಂಬ ಸಂಗತಿ ತಿಳಿಸಿದೆ.

“ಏನ್ ಮಾರಾಯ ನಿನ್ನ ಶಿಷ್ಯಂದಿರು ಸಂಖ್ಯೆ ಜಾಸ್ತಿ ಆಗ್ತಾನೆ ಇದೆ. ಒಳ್ಳೇದು ಎಲ್ಲಾ ಸೇರಿ ಏನೋ ಮಾಡಿ” ಅಂದು.. “ಎಲ್ಲಿ ನಿಮ್ಮ ನಾಗಭೂಷಣ ಪತ್ತೇನೆ ಇಲ್ಲೇ… ಒಂದು ಕುಡ್ತೆ ಚಾ ಮಾಡೆ…” ಅಂತ ಮನೆಯ ಒಳಗೆ ಹೋಗ್ತಾ ಅತ್ತೆಗೆ ಹೇಳಿದರು. ರಾಮ, ಅವರ ಕಾಂಕ್ರೀಟ್ ಮನೆಯನ್ನು ಮೇಲಿಂದ ಕೆಳಗೆ ಕೂಲಂಕುಶವಾಗಿ ನೋಡ್ತಾ ಕೇಳಿದ…

“ಸರ್, ನೀವು ಈ ಮನೇಲಾ ಇದ್ದಿದ್ದು! ಈಗಿರುವ ಮನೆಗಿಂತ ಇದು ಚೆನ್ನಾಗಿದೆ. ಇಂತಹ ಮನೆಯಲ್ಲಾದರೆ ಇರಬಹುದು” ಅಂದ.

“ಅಯ್ಯಾ ಇದು ಮಾವ ಅವರಿರುವ ಮನೆ. ನಾವು ಬಾಡಿಗೆ ಇದ್ದ ಮನೆ ನೋಡಿದರೆ ಬಂದ ದಿನವೇ ಓಡಿ ಹೋಗುತ್ತಿದ್ದೆ ನೀನು” ಅಂತ ನಾವು ಮೊದಲಿದ್ದಿದ್ದ ತೋಟದ ಮನೆಯನ್ನು ಕೂಡ ತೋರಿಸಿದೆ. ಅದನ್ನು ಕಂಡು ಅವನು ಗಾಬರಿಯಿಂದ ಮೌನಿಯಾದ…!

ಅಲ್ಲೊಂದಿಷ್ಟು ಬಾಳೆಕಾಯಿ ಚಿಪ್ಸು ತಿಂದು ಚಾ ಕುಡಿದು, ಅತ್ತೆ ಮಾವರ ಜೊತೆಗೆ ಹರಟೆ ಹೊಡೆದು ಶಿರಸಿಗೆ ಹೋದೆವು. ಅಲ್ಲಿ ನನಗೆ ಬ್ರಷ್ cutter ಕೊಳ್ಳಬೇಕಿತ್ತು. ಶಿರಸಿಯ ಒಂದು ಅಂಗಡಿಯಲ್ಲಿ ಒಂಭತ್ತು ಸಾವಿರ ಕೊಟ್ಟು ಒಂದು model ಆರಿಸಿಕೊಂಡೆ. ನನ್ನ ಹಿತೈಷಿ ಶೇಖರ ಭಟ್ ಅದನ್ನು ಈಗಾಗಲೇ ಬಳಸುತ್ತಿದ್ದರು. ಕೊಳ್ಳುವ ಮೊದಲು ಅವರ ಸಲಹೆಯನ್ನೂ ಪಡೆದೆ. ಅದನ್ನು ಹೇಗೆ ಚಲಾಯಿಸಬೇಕು ಅಂತ ಅಂಗಡಿಯವರು ತೋರಿದ್ದರು. ನಾನು ಕೊಂಡ ಮೊತ್ತ ಮೊದಲ ಕೃಷಿ ಸಂಬಂಧಿತ ಯಂತ್ರ ಅದಾಗಿತ್ತು. ಮರುದಿನವೆ ಹೊಲದಲ್ಲಿ ಅದರ ಪ್ರಯೋಗ ಮಾಡಿ ಬಿಡುವ ಅಂತ ರಾಮ್‌ಗೆ ಹೇಳಿದೆ. ಅಡಿಕೆ ಗಿಡಗಳ ಮಧ್ಯೆ ಬೆಳೆದಿದ್ದ ಕಳೆಯನ್ನು ಈ ಯಂತ್ರದಲ್ಲಿ ಕೊಚ್ಚಿ ಅಲ್ಲಿಯೇ ಮುಚ್ಚಿಗೆ ಮಾಡುವ ಯೋಚನೆ ನನ್ನದಾಗಿತ್ತು. ಶಿರಸಿಯಲ್ಲಿ ಒಂದು ಕಡೆ ಊಟ ಮಾಡಿದೆವು. ಹಳ್ಳಿಯಲ್ಲಿ ಉಳಿದು ತತ್ತರಿಸಿಹೋಗಿದ್ದ ರಾಮ ಶಿರಸಿಯನ್ನು ನೋಡಿ ಸ್ವಲ್ಪ ಸಮಾಧಾನವಾದಂತೆ ಕಂಡನಾದರೂ ಯಾಕೋ ಇನ್ನೂ ಅವನಲ್ಲಿ ಅಷ್ಟೊಂದು ಲವಲವಿಕೆ ಇರಲಿಲ್ಲ ಅನಿಸಿತು.

*****

ಮರುದಿನ ಭಾರವಾದ ಆ ಯಂತ್ರವನ್ನು ಹೆಗಲ ಮೇಲೆ ಹೊತ್ತು ಪೂರ್ತಿ ಒದ್ದೆಯಾಗಿದ್ದ ನಮ್ಮ ಹೊಲದ ಹಾದಿಯಲ್ಲಿ ಸಾಗುತ್ತಿದ್ದೆವು. ಹಿಂದಿನ ರಾತ್ರಿ ತುಂಬಾ ಮಳೆ ಬಿದ್ದು ಪೂರ್ತಿ ರಾಡಿಯಾಗಿತ್ತು. ಅಂತಹ ರಸ್ತೆಯಲ್ಲಿ ಸ್ಕೂಟರ್‌ನಲ್ಲಿ ಹೋಗುವ ಸಾಹಸ ಬೇಡ ಅಂತ ನಡೆದೇ ಹೊರಟಿದ್ದೆವು. ಲಕ್ಷಗಟ್ಟಲೆ ಬರುತ್ತಿದ್ದ ಸಂಬಳ ಬಿಟ್ಟು ಈಗ ಇಷ್ಟೆಲ್ಲಾ ಕಷ್ಟ ಪಡುತ್ತಿದ್ದೇನಲ್ಲ, ಇದೆಲ್ಲ ಬೇಕಿತ್ತಾ ಅಂತ ಒಂದು ಕ್ಷಣ ಅನಿಸಿತು. ಆದರೆ ಇಷ್ಟವಿಲ್ಲದ ಕೆಲಸ ಮಾಡಿಕೊಂಡು ನಾನು ನಿಜವಾಗಿಯೂ ಖುಷಿಯಲ್ಲಿ ಇದ್ದೇನಾ ಅನ್ನುವ ಸಮಾಧಾನ ಮಾಡಿಕೊಂಡು ಮತ್ತೆ ಮುನ್ನಡೆದೆ! ಈಜಬೇಕು ಇದ್ದು ಜೈಸಬೇಕು ಅಂತ, ಪುಟ್ಟ ಪುಟ್ಟ ಕೆರೆಗಳಂತೆಯೇ ಕಾಣುತ್ತಿದ್ದ ಹೊಂಡಗಳನ್ನು ಎಚ್ಚರಿಕೆಯಿಂದ ದಾಟುತ್ತ, ಒಮ್ಮೊಮ್ಮೆ ಅವುಗಳಲ್ಲಿಯೇ ನಡೆಯುತ್ತಾ, ಒಂದೊಂದೇ ಹೆಜ್ಜೆ ಮುಂದೆ ಸಾಗಿದೆವು!

ಹೊಲಕ್ಕೆ ಹೋದಾಗ ನನ್ನ ಯಂತ್ರವನ್ನು ಒಂದು ಬದಿಗೆ ಇಟ್ಟು ದಣಿವಾರಿಸಿಕೊಂಡೆ. ಆಮೇಲೆ ಅದಕ್ಕೆ ಚಕ್ರವನ್ನು ಕೂಡಿಸಿ ಅಂಗಡಿಯವನು ಹೇಳಿದಂತೆ ಅದನ್ನು ಚಾಲೂ ಮಾಡಲು ಹೋದರೆ ಅದು ಸದ್ದು ಮಾಡುತ್ತಿತ್ತೆ ವಿನಃ ಚಾಲೂ ಆಗಲೇ ಒಲ್ಲದು! ಅದರ ದಾರ ಎಳೆದು ಎಳೆದು ಸುಸ್ತಾದೆ. ರಾಮ ನಿಂತುಕೊಂಡೆ ಹಾಗೆ ಮಾಡಿ ಹೀಗೆ ಮಾಡಿ ಅನ್ನುತ್ತಿದ್ದ. ಎಷ್ಟೆಂದರೂ ಈಗಿನ ಜನರೇಶನ್ ಅಲ್ವೇ? ನಾವಾಗಿದ್ದರೆ ಇಲ್ಲಿ ಕೊಡಿ ಸರ್ ನಾನು ಮಾಡುತ್ತೇನೆ ಅನ್ನುತ್ತಿದ್ದೆವೇನೋ!

ಶೇಖರ ಭಟ್ ಅವರಿಗೆ ವೀಡಿಯೊ ಕಾಲ್ ಮಾಡಿದೆ. ಸಧ್ಯ ಅವರು ಇದರಲ್ಲಿ ಅನುಭವಸ್ಥರಾಗಿದ್ದರಿಂದ ಕೆಲವು ಸೂಚನೆಗಳನ್ನು ಕೊಟ್ಟು, ನಮ್ಮ ಯಂತ್ರವನ್ನು ಶುರು ಆಗುವಂತೆ ಮಾಡಿದರು! ನಾನೂ ಉಮೇದಿಯಲ್ಲಿ ಸುಮಾರು ಬೆಳೆದ ಹುಲ್ಲು ಕಂಟಿಗಳನ್ನು ಕತ್ತರಿಸಿ ಬೀಸಾಕಿದೆ. ನನಗೆ ಇದು ಸಿಕ್ಕಿದ್ದು ತುಂಬಾ ಖುಷಿಯಾಗಿತ್ತು. ನಾನು ಹುಲ್ಲು ಕತ್ತರಿಸುತ್ತಿರುವ ಕೆಲವು video ಗಳನ್ನಾದರೂ ಶೂಟ್ ಮಾಡಯ್ಯ ಅಂತ ಶಿಷ್ಯನಿಗೆ ಕೆಲಸ ಹಚ್ಚಿದೆ. ಕೆಲಸ ಮುಗಿಸಿ ಆರು ಗಂಟೆಗೆ ಮನೆಗೆ ವಾಪಸ್ಸಾಗುವಾಗ ಕೈಯೆಲ್ಲ ನೋಯುತ್ತಿರುವ ಅನುಭವ. ಸಂಜೆ ನಾಗಣ್ಣ ಅವರಿಗೂ ಫೋನ್ ಮಾಡಿ ನಮ್ಮ ಹೊಸ ಯಂತ್ರದ ಕುರಿತು ಹೇಳಿದೆ. ಇನ್ನೊಂದೆರಡು ವಾರದಲ್ಲಿ ಅವರೂ ಹಳ್ಳಿಗೆ ಬರುತ್ತೇನೆ ಅಂತ ಹೇಳಿದರು. ಆದರೆ ನಾನು ಮತ್ತೆ ಬೆಂಗಳೂರಿಗೆ ಹೋಗಬೇಕಿತ್ತು. ರಾಮ ಒಬ್ಬನನ್ನೇ ಹಳ್ಳಿಯಲ್ಲಿ ಬಿಡುವ ಪ್ರಶ್ನೆಯೇ ಇರಲಿಲ್ಲ. ಇನ್ನೆರಡು ದಿನಗಳಲ್ಲಿ ಬೆಂಗಳೂರಿಗೆ ಹೋಗೋಣ. ಅಲ್ಲಿ ನಿನಗೆ ಮಣ್ಣು ರಹಿತ ಕೃಷಿಯ ತರಬೇತಿ ಕೊಡುತ್ತೇನೆ. ನನ್ನ ಟ್ರೇನಿಂಗ್‌ಗಳು ಮುಗಿದ ಮೇಲೆ ಮತ್ತೆ ವಾಪಸ್ಸಾಗುವ ಅಂದೇ. ಅವನು ಹೂಂ ಅಂದು ತನ್ನ ಪುಸ್ತಕದಲ್ಲಿ ಮುಳುಗಿದ. ಅದ್ಯಾವುದೋ ಸ್ಟಾಕ್ಸ್ ಬಗ್ಗೆ ಬರೆದ ಪುಸ್ತಕ ಓದುತ್ತಿದ್ದ. ನನಗಂತೂ ಅಂದು ರಾತ್ರಿ ಘನಘೋರ ನಿದ್ದೆ!

(ಮುಂದುವರಿಯುವುದು…)